---

ದಲಿತರೇನು ಕೈಲಾಗದವರಾಗಿದ್ದರೇ?

ಇಂದಿನ ಕಾಲದಲ್ಲಿ ವಿಚಿತ್ರ ಹಾಗೂ ಪ್ರತಿಗಾಮಿ ವಿಚಾರಗಳ ಪತ್ರಕರ್ತರಾಗಿ ಹಿಂದೂ ಸಮಾಜದಲ್ಲಿ ಸಾಮೂಹಿಕ ಭೋಜನ ಹಾಗೂ ಅಂತರ್ಜಾತೀಯ ವಿವಾಹವನ್ನು ವಿರೋಧಿಸಿ ಹಿಂದೂ ಸಂಘಟನೆ ಹಾಗೂ ಶುದ್ಧೀಕರಣ ಚಳವಳಿಗಳನ್ನು ಪುರಸ್ಕರಿಸಿದ ‘ಭಾಲಾ’ ಕಾರರನ್ನು (ಭಾಲಾ ಪತ್ರಿಕೆಯ ಸಂಪಾದಕರು) ಹೆಸರಿಸಬಹುದು. ಬ್ರಾಹ್ಮಣ ಭೋಜನ, ಗಣೇಶೋತ್ಸವದಲ್ಲಿ ಕೋಲು ಬಾರಿಸುವ ಹುಡುಗರ ಗುಂಪು ಹಾಗೂ ಚಂದದಲ್ಲಿ ಮುಗುಮ್ಮಾಗಿ ಇತರರಿಗಿಂತ ಆಲಿಪ್ತವಾಗಿದ್ದು ತಮ್ಮ ಶ್ರೇಷ್ಠತ್ವವನ್ನು ಮೆರೆಯುವ ಬ್ರಾಹ್ಮಣರ ಕಹಿತನದಿಂದ ಚಿಟಿಕೆ ಹೊಡೆಯುವಷ್ಟರಲ್ಲಿ ಸ್ವಾತಂತ್ರ ಪಡೆಯಬಹುದು ಹಾಗೂ ಹಿಂದೂ ಧರ್ಮದ ಮೇಲಾಗಿರುವ ಅನ್ಯಾಯಕ್ಕೆ ಉತ್ತರಿಸಬಹುದು ಎಂದು ಎದೆ ತಟ್ಟಿ ಹೇಳುವ ಖಾಸಾ ‘ಲೋಕಮಾನ್ಯ ಪಂಥೀಯ’ರಾದ ಭೋಪಟ್‌ಕರ್ (ಭಾಲಾಕಾರರು) ಅವರ ಲೇಖನಿ ಮಹಾಡ್ ಪರಿಷತ್ತಿನ ನಂತರ ಬ್ರಾಹ್ಮಣರು ಮಾಡಿದ ಗೂಂಡಾಗಿರಿ ಪ್ರದರ್ಶನವನ್ನು ಸಮರ್ಥಿಸಲು ಉತ್ಸುಕವಾಗಿದೆ.

ದಲಿತರೆಂದು ಪರಿಗಣಿಸಲಾಗುವ ಜನರಿಗೆ ಶುಷ್ಕ ಸಹಾನುಭೂತಿ ತೋರಿಸಿ ದಲಿತ ಸಮಾಜದ ನಾಯಕರಿಗೆ ಹಾಗೂ ದಲಿತರೆನ್ನಲಾಗುವ ಇತರ ಜಾತಿಗೆ ಪುಕ್ಕಟೆ ಉಪದೇಶ ಕೊಡುವ ಅವಕಾಶ ಅವರು ಪಡೆದುಕೊಂಡಿದ್ದಾರೆ. ‘‘ನಮ್ಮ ಉನ್ನತಿಗಾಗಿ ನಮಗೆ ಉಳಿದೆಲ್ಲ ಜನರ ಸಹಾಯ, ಸಹಾನುಭೂತಿ ಬೇಕಿದೆ, ಆದರೆ ಹಿಂದೂ ಸಮಾಜದ ಗಟ್ಟಿ ಚೌಕಟ್ಟನ್ನು ಹಾಗೇ ಇಟ್ಟು ಉಪಕಾರವೆಂಬಂತೆ ನಮಗೆ ಸವಲತ್ತುಗಳನ್ನು ಕೊಡಲು ನೋಡುವ ಹಾಗೂ ನಮ್ಮ ನೈಸರ್ಗಿಕ ಹಕ್ಕುಗಳಿಗೆ ಮಹತ್ವ ಕೊಡದೇ ಕೇವಲ ತಮ್ಮ ಧರ್ಮದ ವರ್ಚಸ್ಸನ್ನು ತೋರಿಸಲು ನಮ್ಮನ್ನು ಹಿಂದೂ ಸಮಾಜದಲ್ಲಿಡಲು ಹವಣಿಸುವ ಸ್ವಾರ್ಥಿ ಜನರ ಸಹಾನುಭೂತಿ ನಮಗೆ ಬೇಕಿಲ್ಲ’’.

ಇಂತಹ ಜನರೇ ದಲಿತರ ನಿಜವಾದ ಶತ್ರುಗಳು. ಅಜ್ಞಾನದಲ್ಲಿ ತೊಳಲಾಡುತ್ತಿರುವ ಹಿಂದೂ ಸಮಾಜಕ್ಕೆ ಇಂತಹ ಜನರೇ ಮೋಸ ಮಾಡುತ್ತಾರೆ. ಜ್ಞಾನವೇ ಇಲ್ಲದ ಸಮಾಜ ಯಾವ ರೀತಿ ಯೋಚಿಸುತ್ತದೆ ಅನ್ನುವ ಪರಿಜ್ಞಾನ ನಮಗಿದೆ. ಅವಿಚಾರಿ ಕೃತ್ಯ ಹಾಗೂ ಅತ್ಯಾಚಾರಗಳು ಅವರಿಂದಾದರೂ ಅದು ಕೇವಲ ಅಜ್ಞಾನದ ಪರಿಣಾಮ ಅನ್ನುವುದನ್ನು ನಾವು ಬಲ್ಲೆವು. ಇಂದಲ್ಲ ನಾಳೆ ಅವರ ವಿಚಾರಗಳಲ್ಲಿ ಬದಲಾವಣೆಯಾಗಿ ಸಮಾನತೆಯ ವಿಚಾರಗಳ ಜಾಗೃತಿಯಾಗಿ ಸಂಪೂರ್ಣ ಸಮಾಜದಲ್ಲಿ ಒಗ್ಗಟ್ಟು ಬರುತ್ತದೆ ಅನ್ನುವ ಭರವಸೆ ನಮಗಿದೆ. ಆದರೆ ಸುಶಿಕ್ಷಿತ ‘ಶ್ವಾನದ ಬಾಲ’ವನ್ನು ಸರಿಪಡಿಸುವುದು ದೇವರಿಂದಲೂ ಸಾಧ್ಯವಿಲ್ಲ!.

ದಲಿತರ ಗಡಿಬಿಡಿಯ ನಾಯಕರು ಸಾಕಷ್ಟು ಆತುರ ತೋರಿಸುತ್ತಿದ್ದಾರೆ ಅನ್ನುವುದು ‘ಭಾಲಾ’ಕಾರರ ಆರೋಪ, ‘ಕೆಲಸವಿಲ್ಲದ ಗಡಿಬಿಡಿ ಸಮಾಜ ಸುಧಾರಕರು’ ಎಂದು ಭಾಲಾ’ಕಾರರು ಸಂಬೋಧಿಸುವ ಸಮಾಜ ಸುಧಾರಕರು ದಲಿತರಿಗೆ ನೀರಿನ ಸ್ಥಳಗಳನ್ನು ಬಿಟ್ಟುಕೊಡಿ, ಅವರ ಅಸ್ಪಶ್ಯತೆಯನ್ನು ತೊಡೆದು ಹಾಕಿ, ಹಿಂದೂಗಳ ದೇವಸ್ಥಾನದಲ್ಲಿ ಪ್ರವೇಶಿಸಲು ಅನುಮತಿ ಕೊಡಿ ಎಂದು ಕೇಳುವುದೇ ಅಪರಾಧ ಅಲ್ಲವೇ? ಜೋಪಾನವಾಗಿ ಹೆಜ್ಜೆಯನ್ನು ಮುಂದಿಡುವ ದಲಿತ ಸುಧಾರಕರು ಜನರ ಭಾವನೆಗಳಿಗೆ ನೋವುಂಟುಮಾಡದೆ ತಮ್ಮ ಉನ್ನತಿ ಮಾಡಿಕೊಳ್ಳಬೇಕು ಅನ್ನುತ್ತಾರೆ. ಸುಮಾರು ವರ್ಷಗಳು ಕಳೆದರೂ ಒಂದೆಡೆ ಇನ್ನೂ ಅಸ್ಪಶ್ಯತಾ ನಿವಾರಣೆಯ ಕಾಲ ಬಂದಿಲ್ಲ ಅನ್ನುವ ಕಾರಣಗಳನ್ನು ಕೊಡುತ್ತ ಇನ್ನೊಂದೆಡೆ ದಲಿತರ ಬಗ್ಗೆ ಪೊಳ್ಳು ಸಹಾನುಭೂತಿ ತೋರಿಸುವಂತಹ ಕಣ್ಣುಮುಚ್ಚಾಲೆ ಆಟ ಇನ್ನು ಮುಂದೆ ನಡೆಯದು.

ಅಸ್ಪಶ್ಯತೆ ಇಂದು ನಿನ್ನೆಯದಲ್ಲ, ಅದೇನು ಒಂದೇ ವರ್ಷದಲ್ಲಿ ಹುಟ್ಟಿಲ್ಲ, ಆದ್ದರಿಂದ ಅದು ಒಂದೇ ವರ್ಷದಲ್ಲಿ ನಷ್ಟವಾಗದು, ‘‘ಹಾಗಾಗಿ ಕಾಲದ ಮಿತಿ ಯಾವತ್ತಿದ್ದರೂ ಒಂದೇ ಆಗಿರುತ್ತದೆ’’! ಅನ್ನುವಂತಹ ಕುಟಿಲ ನೀತಿಗಳನ್ನು ರಚಿಸುವವರಿಗೆ ನಾವು ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ‘ಆಡಳಿತದ ದೃಷ್ಟಿಯಿಂದ’ ಸ್ವಾತಂತ್ರದ ಆತುರ ತೋರುವಾಗ ಈ ನಿಮ್ಮ ಬುದ್ಧಿ ಎಲ್ಲಿರುತ್ತದೆ? ಸಾವಿರಾರು ವರ್ಷಗಳ ಪರಂಪರೆಯಿರುವ ನಿಮ್ಮ ಗುಲಾಮಗಿರಿಯ ಅಭ್ಯಾಸ ಒಂದೇ ಸಲಕ್ಕೆ ನಾಶವಾಗಲು ಹೇಗೆ ಸಾಧ್ಯ? ಸಾವಿರ, ಸಾವಿರದ ಇನ್ನೂರು ವರ್ಷ ಅನುಭವಿಸುತ್ತಿರುವ ಪಾರತಂತ್ರದಿಂದ ಚಿಟಿಕೆ ಹೊಡೆಯುವಷ್ಟರಲ್ಲಿ ಬಿಡುಗಡೆ ಹೊಂದಲು ಹೇಗೆ ಸಾಧ್ಯ? ಅದರಿಂದ ಬಿಡುಗಡೆ ಸಿಗಲು ಜನ ಜಾಗೃತಿಯ ನಂತರ ಅಷ್ಟೇ ಅಂದರೆ ಸಾವಿರ, ಸಾವಿರದ ಇನ್ನೂರು ವರ್ಷಗಳ ಕಾಲಾವಕಾಶ ಬೇಡವೆ? ಏಕೆಂದರೆ ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ, ‘‘ಕಾಲದ ಮಿತಿ ಯಾವತ್ತಿದ್ದರೂ ಒಂದೇ ತೆರನಾಗಿರುತ್ತದೆ !’’ ನೀವು ಸ್ವಾತಂತ್ರ ಪಡೆಯಲು ಅರ್ಹರಲ್ಲ ಅನ್ನುವುದು ನಿಮ್ಮ ನಿಲುವಿನಿಂದಲೇ ಗೊತ್ತಾಗುತ್ತದೆ.

ನೀವು ಸ್ವಾತಂತ್ರ ಕಳೆದುಕೊಂಡಿರುವ ಕಾರಣಗಳು ಇವತ್ತಿಗೂ ಹಾಗೇ ಇವೆ. ಅಷ್ಟೊಂದು ಹಿಂದೆ ಹೋಗುವ ಅಗತ್ಯವೇ ಇಲ್ಲ. ಮೊನ್ನೆ ಮೊನ್ನೆ ನಡೆದ ಮಹಾಡ್‌ನ ದಂಗೆಗಳಲ್ಲಿ ಸ್ವಾತಂತ್ರದ ವಿಷಯದಲ್ಲಿ ನೀವೆಷ್ಟು ಅನರ್ಹರು ಅನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ನೀವು ಅಲ್ಪಸಂಖ್ಯಾಕರ ನಾಗರಿಕತ್ವವನ್ನು ಒಪ್ಪಲು ಸಿದ್ಧರಿಲ್ಲ, ಬಡವ ಬಲ್ಲಿದರ ಜೊತೆ ನ್ಯಾಯಪೂರ್ವಕವಾಗಿ ವರ್ತಿಸುವ ಇಚ್ಛೆ ನಿಮಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗಿರುವ ಸರ್ವಧರ್ಮ ಸಮಭಾವವಿರುವಂತಹ ರಾಜ್ಯದ ಬದಲು ಬ್ರಾಹ್ಮಣರ ವರ್ಚಸ್ಸಿರುವ ಹಿಂದೂ ರಾಜ್ಯವೇನಾದರೂ ಸ್ಥಾಪಿತವಾಗಿದ್ದರೆ ದಲಿತರ ಮೇಲಂತೂ ತೊಂದರೆಗಳ, ಕಷ್ಟಗಳ ಮಹಾಪೂರವೇ ಹರಿದು ಬರುವ ಸಾಧ್ಯತೆಗಳಿದ್ದವು. ಯೂರೋಪಿಯನ್ ಕಲೆಕ್ಟರ್, ಯೂರೋಪಿಯನ್ ಡೆಪ್ಯುಟಿ ಪೊಲೀಸ್ ಸುಪರಿಂಟೆಂಡೆಂಟ್ ಹಾಗೂ ಮುಸಲ್ಮಾನ ಪೊಲೀಸ್ ಇನ್ಸ್‌ಪೆಕ್ಟರ್ ಇವರೆಲ್ಲಾ ಇರದಿದ್ದರೆ ಹಾಗೂ ಮಹಾಡ್‌ನ ಮುಸಲ್ಮಾನರು ತಮ್ಮ ಮನೆಗಳಲ್ಲಿ ದಲಿತ ಸ್ತ್ರೀ ಪುರುಷರಿಗೆ ಹಾಗೂ ಮಕ್ಕಳಿಗೆ ಆಶ್ರಯ ಕೊಡದೇ ಹೋಗಿದ್ದರೆ ಮೇಲ್ಜಾತಿಯ ಹಿಂದೂಗಳು ಅತ್ಯಾಚಾರದ ಗಡಿ ದಾಟುತ್ತಿದ್ದರು.

ಹೀಗಿದ್ದಾಗ್ಯೂ, ‘‘ಸ್ವಾತಂತ್ರ ನಮ್ಮ ಜನ್ಮಸಿದ್ಧ ಅಧಿಕಾರ’’ (ಈ ವಾಕ್ಯವನ್ನು ತಿಲಕರು ವರಾಡ್‌ನ ಅಕೋಟೆ ಎಂಬಲ್ಲಿಯ ಸ್ವಾತಂತ್ರ ಚಳವಳಿಯಲ್ಲಿ ಉಚ್ಚರಿಸಿದರು. ಮುಂದೇ ಇದೇ ರಾಷ್ಟ್ರ ಮಂತ್ರವಾಗಿ ತಿಲಕರ ಅನುಯಾಯಿಗಳು ತಮ್ಮ ಮನಸ್ಸಿನಲ್ಲದನ್ನು ಜೋಪಾನ ಮಾಡಿದರು, ಗಣವೀರ ಪತ್ರಿಕೆ, ತಿಲಕರ ಸ್ಫುಟ ಲೇಖನ ಪೇಜ್ ನಂ.4) ಅನ್ನಲು ನಿಮಗೆ ನಾಚಿಕೆಯಾಗುವುದಿಲ್ಲವೆ? ಸ್ವಾತಂತ್ರವೇನು ಕೇವಲ ನಿಮ್ಮ ಜನ್ಮ ಸಿದ್ಧ ಹಕ್ಕೇನು? ಹೊಲೆಯರಿಗೆ ಚಮ್ಮಾರರಿಗೆ ಯಾವುದೇ ಹಕ್ಕುಗಳಿಲ್ಲವೇ? ನೀವು ಬಿಸಾಡಿದ ಚೂರು ಪಾರನ್ನೇ ಅಗಿಯುತ್ತ ದಲಿತರು ಸಮಾಧಾನ ಪಡೆಯಬೇಕು ಎಂದಿದ್ದರೆ ನೀವ್ಯಾಕೆ ಸರಕಾರ ಉಪಕಾರ ಮಾಡಿ ನಿಮಗೆ ಕೊಟ್ಟಿರುವಂತಹ ಹಕ್ಕುಗಳನ್ನಿಟ್ಟುಕೊಂಡು ಸುಮ್ಮನಿರುವುದಿಲ್ಲ? ತಾಳ್ಮೆಯ ಉಪದೇಶ ನಿಮ್ಮಂತಹ ಗಡಿಬಿಡಿಯ ರಾಜಕೀಯ ಚಳವಳಿಗೆ ಅನ್ವಯಿಸುವುದಿಲ್ಲವೆ?

ಆತುರಾತುರ ಬೇಡವೆಂದರೆ ಅದು ಎಲ್ಲೂ ಬೇಡ. ರಾಜಕೀಯ ವಿಷಯದಲ್ಲಿ ಅದು ಬೇಕು ಎಂದಾದರೆ ಸಾಮಾಜಿಕ ವಿಷಯದಲ್ಲೂ ಬೇಕು. ರಾಜಕೀಯ ಹಾಗೂ ಆಡಳಿತದ ವಿಷಯದಲ್ಲಾದರೆ ರೇಸಿನ ಕುದುರೆಯಂತೆ ನಾಗಾಲೋಟ ಮಾಡುವುದು ಅದೇ ಸಾಮಾಜಿಕ ಹಾಗೂ ಧಾರ್ಮಿಕ ಸಮಾನತೆಯ ವಿಷಯ ಬಂದಾಗ ಮಾತ್ರ ಬಸವನಹುಳುವಿನಂತೆ ಮೆಲ್ಲನೆ ಹೆಜ್ಜೆಯಿಟ್ಟರೆ ಪ್ರಗತಿಯಾಗುತ್ತದೆ ಎಂದು ಶಿಷ್ಟಾಚಾರವಾಗಿ ಹೇಳುವುದು ಕೇವಲ ಒಂದು ನಾಟಕವಷ್ಟೆ. ಈ ನಿಮ್ಮ ನಾಟಕಕ್ಕೆ ದಲಿತರು ಮರುಳಾಗುವವರಲ್ಲ. ಭಾಲಾ ಪತ್ರಿಕೆಯವರು ದಲಿತರ ಬಗ್ಗೆ ತಮಗೆ ಸಹಾನೂಭೂತಿಯಿದೆ ಎಂದು ತೋರಿಸುತ್ತಾರಷ್ಟೆ. ಆದರೆ, ಆ ಸಹಾನೂಭೂತಿಗೆ ಎಳ್ಳಷ್ಟೂ ಬೆಲೆಯಿಲ್ಲ. ತೋರಿಕೆಗೆ ಅವರು ಸಹಾನುಭೂತಿ ತೋರಿಸಿದರೂ ತಮ್ಮ ಲೇಖನದಲ್ಲಿ ಮಾತ್ರ ಅವರು ತಮ್ಮ ಹೊಟ್ಟೆಯಲ್ಲಿರುವ ವಿಷವನ್ನು ಹೊರಹಾಕಿದ್ದಾರೆ. ಜನರ ಮನಸ್ಸನ್ನು ನೋಯಿಸಬೇಡಿ ಎಂದು ದಲಿತರಿಗೂ ಅವರ ನಾಯಕರಿಗೂ ಉಪದೇಶ ಮಾಡುವ ಈ ಮೋಸಗಾರರಿಗೆ ನಿಮ್ಮ ಹದಿನೆಂಟು ಕೋಟಿ ಜನರಿಗೆ ಮಾತ್ರ ಮನಸ್ಸಿದೆ, ನಮ್ಮ ಏಳು ಕೋಟಿ ಜನರಿಗೆ ಮನಸ್ಸಿಲ್ಲವೆ? ಅನ್ನುವ ಪ್ರಶ್ನೆಯನ್ನು ಕೇಳುತ್ತೇವೆ.

ಮೊದಲು ಜನರ ಮೇಲೆ ಅತ್ಯಾಚಾರ ಮಾಡಿ ಅವರ ಇಹಲೋಕವನ್ನು ನರಕ ಮಾಡಿ ಆಮೇಲೆ ಅವರ ಮೇಲೆ ಹಾಗೆ ಅನ್ಯಾಯ ಮಾಡುವುದು ತಮ್ಮ ಹಕ್ಕು ಎಂದು ಹೇಳಿ ಆ ಹಕ್ಕು ಕಳೆದುಕೊಳ್ಳುವ ಸಮಯ ಬಂದಾಗ ಮಾತ್ರ ನಮ್ಮ ಮನಸ್ಸು ನೊಂದಿತು ಎಂದು ಅಳುವುದು! ನೀವ್ಯಾಕೆ ಬ್ರಿಟಿಷರ ಮನಸ್ಸನ್ನು ನೋಯಿಸುತ್ತಿದ್ದೀರಿ.? ಭಾರತೀಯರು ಕಡೆಯ ತನಕ ಪಾರತಂತ್ರದಲ್ಲೇ ಬದುಕಲು ಯೋಗ್ಯರು ಅನ್ನುವ ಭಾವನೆ ಬ್ರಿಟಿಷರಿಗಿರು ವಾಗ ಹಿಂದೂ ಜನ ದೊಡ್ಡ ದೊಡ್ಡ ಹುದ್ದೆಗಳಲ್ಲಿ ವಿರಾಜಮಾನರಾಗಿ ಬ್ರಿಟಿಷರಿಗೆ ಸರಿಸಮಾನವಾಗಿ ವರ್ತಿಸಲು ಪ್ರಯತ್ನಿಸಿದರೆ ಬ್ರಿಟಿಷರ ಮನಸ್ಸು ನೋಯುವುದು ಸಹಜವಲ್ಲವೆ? ಜನರ ಮನಸ್ಸನ್ನು ನೋಯಿಸಬೇಡಿ ಎಂದು ಪರೋಪದೇಶ ಮಾಡುವ ಈ ‘ದೇಶಭಕ್ತರು’ ಜನರಿಗೆ, ನೀವು ಯೋಚಿಸುವುದು ತಪ್ಪು, ಮನುಷ್ಯತ್ವದ ಹಕ್ಕು ಎಲ್ಲರಿಗೂ ಸಿಗಬೇಕು, ಯಾರನ್ನ್ನೂ ತುಚ್ಛರಾಗಿ ಕಾಣುವ ಹಕ್ಕು ಯಾರಿಗೂ ಇಲ್ಲ, ಇಂದಿನವರೆಗೆ ಅನ್ಯಾಯ ಮಾಡುತ್ತಿದ್ದೀರಿ ಅಂದ ಮಾತ್ರಕ್ಕೆ ಈಗಲೂ ಹಾಗೆಯೇ ಅನ್ಯಾಯ ಮಾಡಿದರೆ ಅದು ನ್ಯಾಯಸಮ್ಮತವಲ್ಲ ಎಂದು ಸ್ಪಷ್ಟವಾಗಿ ತಿಳಿ ಹೇಳಬೇಡವೆ? ಆದರೆ ಹೀಗೆ ಸ್ಪಷ್ಟವಾಗಿ ತಿಳಿ ಹೇಳಿದರೆ ಜನಪ್ರಿಯತೆ ಹೇಗೆ ಸಿಕ್ಕೀತು? ಜಾತಿ ವರ್ಚಸ್ಸನ್ನು ಮರೆಯುವ ಆಸೆ ಹೇಗೆ ಈಡೇರೀತು? ಅಜ್ಞಾನಿಗಳಿಗೆ ಯೋಗ್ಯವಾದ ಶಿಕ್ಷಣ ಕೊಡಬಾರದು ಎಂದಷ್ಟೇ ಅಲ್ಲ.

ಅಜ್ಞಾನಿಗಳ ಹೆಸರು ಹೇಳಿ ತಾವೇ ನ್ಯಾಯ ಹಾಗೂ ಯೋಗ್ಯವಾದ ಚಳವಳಿಗಳಿಗೆ ವಿರೋಧಿಸುವುದು ಮಹಾರಾಷ್ಟ್ರದ ಕಳೆದ ನಲವತ್ತು ವರ್ಷಗಳ ಪರಂಪರೆ. ‘ಭಾಲಾ’ದವರು ಕೂಡಾ ಇದೇ ವಾತಾವರಣ ದಲ್ಲಿ ಬೆಳೆದಿದ್ದಾರೆ. ಆದರೆ, ಇನ್ನು ಮುಂದೆ ಈ ಕಣ್ಣುಮುಚ್ಚಾಲೆ ಆಟ ನಡೆಯದು ಅನ್ನುವುದನ್ನು ಅವರು ಹಾಗೂ ಅವರ ವ್ಯವಸಾಯ ಬಂಧುಗಳು ನೆನಪಿಟ್ಟುಕೊಳ್ಳಲಿ. ಅಪ್ಪನನ್ನು ತೋರಿಸಿ ಇಲ್ಲದಿದ್ದರೆ ಶ್ರಾದ್ಧ ಮಾಡಿ ಎಂದು ಹೇಳುತ್ತಿದ್ದಾರೆ. (ಇದೊಂದು ಮರಾಠಿಯಲ್ಲಿರುವ ಗಾದೆ, ಇದರರ್ಥ ನೀವು ಮಾಡುತ್ತಿರುವುದನ್ನು, ಹೇಳುತ್ತಿರುವುದನ್ನು ಮೊದಲು ಪ್ರಮಾಣಿಸಿ ತೋರಿಸಿ. ಎಂದರ್ಥ) ಅಜ್ಞಾನಿಗಳ ಮನಸ್ಸು ನೋಯಬಾರದು ಎಂದು ನಿಮಗನಿಸುತ್ತಿದ್ದರೆ ಜನ ಯೋಚಿಸುತ್ತಿರುವ ರೀತಿ ತಪ್ಪು ಅನ್ನುವುದನ್ನವರಿಗೆ ತಿಳಿಹೇಳಿ, ಅದು ನಿಮ್ಮ ಕರ್ತವ್ಯ ಕೂಡಾ. ಆದರೆ ಅದನ್ನೆಲ್ಲ ಬಿಟ್ಟು ನೀವು ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದೀರಿ. ಇದರರ್ಥ ನಿಜವಾದ ತಪ್ಪಿತಸ್ಥರು ನೀವೇ. ನೀವು ಅಜ್ಞಾನಿಗಳ ಹಿಂದೆ ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಆದರೆ ನಾವು ನಿಮ್ಮನ್ನು ಹೊರಗೆಳೆಯದೆ ಬಿಡಲಾರೆವು. ‘ಭಾಲಾ’ದ ಸಂಪಾದಕರು ಮಹಾಡ್‌ನ ಪ್ರಕರಣವನ್ನು ಬರೆಯುವಾಗ ದೇವಸ್ಥಾನದ ಬಗ್ಗೆ ಕೆಲವು ಪುರಾಣ ಹೇಳಿದ್ದಾರೆ.

ಆದರೆ ಮೊದಲನೆಯದಾಗಿ ಮಹಾಡ್‌ನ ಪರಿಷತ್ತಿಗಾಗಿ ಸೇರಿದ್ದ ದಲಿತರಿಗೆ ಯಾವುದೇ ದೇವಸ್ಥಾನದಲ್ಲಿ ಕಾಲಿಡುವ ಇಚ್ಛೆಯಿರಲಿಲ್ಲ. ಉಳಿದ ಕಡೆಗಳಲ್ಲೆಲ್ಲ ದಲಿತರಿಗೆ ನೀರಿಗಾಗಿ ಪರದಾಡಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕ ನೀರಿನ ಕೆರೆ ಕೊಳಗಳನ್ನು ನಮಗಾಗಿ ತೆರವು ಮಾಡಿ ಕೊಡಿ ಅನ್ನುವುದು ಅವರ ಬೇಡಿಕೆಯಾಗಿತ್ತು. ಹಾಗೂ 1924ರಲ್ಲಿ ಮಹಾಡ್ ಪಾಲಿಕೆಯು ಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಬೇಕು ಎಂದು ಹೇಳಿದಾಗ ಆ ಕೆರೆಯ ಸಾರ್ವಜನಿಕ ಉಪಯೋಗವನ್ನು ಪರಿಷತ್ತಿನ ನಿಮಿತ್ತ ಅವರಿಗೆ ಮಾಡಲಿಕ್ಕಿತ್ತು. ಹಾಗಾಗಿ ಎಲ್ಲ ಪ್ರತಿನಿಧಿಗಳು ಧೈರ್ಯವಾಗಿ ಕೆರೆಗೆ ಹೋಗಿ ಅಲ್ಲಿಯ ನೀರು ಕುಡಿದು ಬಂದರು. ಆದರೆ ಹೊಲೆಯರು, ಚಮ್ಮಾರರು ಒಟ್ಟಿನಲ್ಲಿ ದಲಿತರು ಬಾಯಾರಿಯೇ ಇರಬೇಕೆಂದು ಬಯಸಿದ್ದ ಜನರಿಗದು ಇಷ್ಟವಾಗಲಿಲ್ಲ. ಅವರು (ಬ್ರಾಹ್ಮಣರು) ಸೇಡು ತೀರಿಸಿಕೊಳ್ಳುವ ಆಸೆಯಿಂದ ಈಗ ಈ ದಲಿತರು ವೀರೇಶ್ವರ ದೇವಸ್ಥಾನದೊಳಗೂ ನುಗ್ಗಲಿದ್ದಾರೆ ಎಂದು ಹುಯ್ಲೆಬ್ಬಿಸಿ ಪಾಪ ಏನೂ ಗೊತ್ತಿರದ ಜನರನ್ನು ಸಿಟ್ಟಿಗೆಬ್ಬಿಸಿದರು.

ಮಹಾಡ್ ಪ್ರಕರಣದಲ್ಲಂತೂ ದೇವಸ್ಥಾನದೊಳಗೆ ನುಗ್ಗುವ ಪ್ರಶ್ನೆಯೇ ಇರಲಿಲ್ಲ. ಆದರೆ ‘ಭಾಲಾ’ದವರು ಬೇಕೆಂದೇ ದೇವಸ್ಥಾನದ ವಿಷಯ ಎತ್ತಿ ಇದೇ ಅವಕಾಶ ಎಂಬಂತೆ ದಲಿತರಿಗೆ ಒಂದು ಭಾಷಣವನ್ನೇ ಬಿಗಿದಿರಬೇಕಾದರೆ ನಾವಾದರೂ ಯಾಕೆ ಸುಮ್ಮನಿರಬೇಕು? ‘‘ಎಲ್ಲಿಯವರೆಗೆ ನಾವು ನಮ್ಮನ್ನು ‘ಬ್ರಾಹ್ಮಣರು’ ಅಂದುಕೊಳ್ಳುತ್ತೇವೆಯೋ ಹಾಗೂ ಎಲ್ಲಿಯವರೆಗೆ ನೀವು ನಮ್ಮನ್ನು ಹಿಂದೂಗಳೆಂದು ತಿಳಿದುಕೊಳ್ಳುತ್ತೀರೋ ಅಲ್ಲಿಯವರೆಗೆ ದೇವಸ್ಥಾನದೊಳಗೆ ಹೋಗಿ ದೇವರ ದರ್ಶನ ಪಡೆಯುವುದು ನಮ್ಮ ಹಕ್ಕು ಎಂದು ನಾವಂದುಕೊಳ್ಳುತ್ತೇವೆ. ನಮಗಾಗಿ ಬೇರೆ ದೇವಸ್ಥಾನಗಳನ್ನು ಕಟ್ಟುವ ಅಗತ್ಯವಿಲ್ಲ. ದೇವಸ್ಥಾನವಿಲ್ಲದೆ ನಾವೇನೂ ಸಾಯುತ್ತಿಲ್ಲ. ದೇವರ ಭಕ್ತಿ ಮಾಡುವವರಿಗೆ ದೇವಸ್ಥಾನವೇ ಬೇಕೆಂದಿಲ್ಲ. ಸಾಮಾಜಿಕ ಉಪಾಸನೆ, ಸಾಮಾಜಿಕ ಐಕ್ಯತೆ ಅಥವಾ ಸಮ್ಮೇಳನಗಳಿಗಾಗಿ ದೇವಸ್ಥಾನದ ಅಗತ್ಯವಿದೆ. ಬೇರೆ ದೇವಸ್ಥಾನಗಳನ್ನು ಕಟ್ಟುವುದಿದ್ದರೆ ದಲಿತರೇ ಅವುಗಳನ್ನು ಕಟ್ಟಿಕೊಳ್ಳಬಲ್ಲರು.

ಅದಕ್ಕಾಗಿ ಇತರರ ಅನುಮತಿ ಬೇಕಿಲ್ಲ. ಇಂದಲ್ಲ ನಾಳೆ ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿದ್ದೇವೆ. ನಮಗೆ ಸಮಾಜದಲ್ಲಿ ಸಮಾನ ಹಕ್ಕು ಬೇಕಿದೆ ಹಾಗೂ ನಾವದನ್ನು ಸಾಧ್ಯವಾದಷ್ಟು ಹಿಂದೂ ಸಮಾಜದಲ್ಲಿದ್ದು, ಸಾಧ್ಯವಾದರೆ ಕವಡೆಯಷ್ಟೆ ಬೆಲೆಯಿರುವ ನಿಮ್ಮ ತತ್ತ್ವಕ್ಕೆ ಒದ್ದು ಪಡೆಯುವವರಿದ್ದೇವೆ. ಅಲ್ಲದೆ ಹಿಂದೂ ತತ್ವವನ್ನು ಬಿಟ್ಟುಬಿಡುವಂತಹ ಪರಿಸ್ಥಿತಿ ಎದುರಾದರೆ ದೇವಸ್ಥಾನದ ಕಡೆ ನಾವು ಕಣ್ಣೆತ್ತಿಯೂ ನೋಡುವವರಲ್ಲ ಎಂದೇನೂ ಬೇರೆ ಹೇಳಬೇಕಿಲ್ಲ. ‘ಭಾಲಾ’ ದವರು ನಮ್ಮ ಜನಕ್ಕೆ ಬೆದರಿಕೆಯೊಡ್ಡಲೂ ಮರೆಯಲಿಲ್ಲ. ಹೋಗಲಿ ನಮಗೇನು ‘ಪಠಾಣಗಿರಿ’ ತೋರಿಸಲಿಕ್ಕಿಲ್ಲ. ನಾವು ಯಾರನ್ನೂ ತುಳಿಯಲಿಚ್ಛಿಸುವುದಿಲ್ಲ. ಆದರೆ ಇಷ್ಟೊಂದು ಶತಕಗಳಿಗಿಂತ ನಮ್ಮ ಮೇಲಾಗುತ್ತಿರುವ ತುಳಿತವನ್ನು ಇನ್ನು ಮುಂದೆ ನಾವು ನಡೆಯಗೊಡುವುದಿಲ್ಲ. ಪಠಾಣರನ್ನು ನೊಡಿ ಭಾಲಾಕಾರರ ಜಾತಿಯವರು ಹಾಗೂ ಕ್ಷತ್ರಿಯ ನನ್ನ ಮಕ್ಕಳು ಯಾವ ರೀತಿ ನಡುಗುತ್ತಾರೆ ಅನ್ನುವುದು ನಮಗೆ ಗೊತ್ತು.

ಪಠಾಣಗಿರಿಯನ್ನೇ ತೋರಿಸುವುದಿದ್ದಿದ್ದರೆ ನಾವು ದಲಿತರು ಅದನ್ನು ಯಾವತ್ತೋ ತೋರಿಸುತ್ತಿದ್ದೆವು. ದೇವಸ್ಥಾನದಲ್ಲಿ ಕಾಲಿಡುವ ಆ ವಿಚಾರ ಮಾಡಿದರೆ ದಲಿತರ ಬೆನ್ನು ಮುರಿದೇವು ಎಂದು ಭಾಲಾ ಭೋಪಟ್‌ಕರ್ ಹೇಳುತ್ತಾರೆ. ಆದರೆ, ಮಹಾಡ್‌ನಲ್ಲಿ ದಲಿತ ನಾಯಕರು ಪರಿಷತ್ತಿನ ಪ್ರತಿನಿಧಿಗಳನ್ನು ತಡೆಯದಿದ್ದಿದ್ದರೆ ಮೂರೂವರೆ ಸಾವಿರ ಪ್ರತಿನಿಧಿಗಳು ಊರಿನಲ್ಲೆಲ್ಲ ಅನರ್ಥ ಮಾಡಿಡುತ್ತಿದ್ದರು ಹಾಗೂ ಪಠಾಣಗಿರಿಯ ತಾಕತ್ತನ್ನು ಅಲ್ಲಿಯ ಹಿಂದೂ ಗೂಂಡಾಗಳಿಗೆ ಉಣಬಡಿಸುತ್ತಿದ್ದರು. ದಲಿತರ ಬೆನ್ನು ಮುರಿದುಹೋಗುವ ಬದಲು ಮೇಲ್ಜಾತಿಯವರ ತಲೆಗಳು ಚೆಂಡಾಡಲ್ಪಡುತ್ತಿದ್ದವು. ಅಲ್ಲದೆ ದಲಿತರ ವಿರುದ್ಧ ತಿಳುವಳಿಕೆಯಿಲ್ಲದ ಜನರನ್ನು ಎತ್ತಿಕಟ್ಟುವವರ ಹೊಟ್ಟೆಯನ್ನಿವರು ಸೀಳಿಬಿಡುತ್ತಿದ್ದರು ಅನ್ನುವುದನ್ನು ಭೋಪಟ್‌ಕರ್ ಹಾಗೂ ಅವರಂತೆ ಸುಳ್ಳು ಬೊಬ್ಬೆ ಹೊಡೆಯುವ ಜನರು ನೆನಪಿಡಲಿ.

ಬೆನ್ನು ಮುರಿಯುವಂತಹ ಭಾಷೆಯನ್ನು ‘ಭಾಲಾ’ಕಾರರು ಮನೆಯಲ್ಲೇ ಕುಳಿತು ಮಾಡಲಿ. ಅದಕ್ಕೆ ಪತ್ರಿಕೆಯ ಸಹಾಯ ಪಡೆಯಬೇಕಿಲ್ಲ. ಭಿಕ್ಷುಕರ ಸಭೆಯಲ್ಲಿ ಕುಳಿತು ‘ವಾಚಿ ವೀರ್ಯ ಸ್ವಿಜಾನಾಮ್’ ಅನ್ನುವುದರ ಸತ್ಯತೆಯನ್ನು ಮನವರಿಕೆ ಮಾಡಿಕೊಡಲಿ. ಆದರೆ ಇನ್ನು ಮುಂದೆ ದಲಿತರ ಬಗ್ಗೆ ಬರೆಯುವಾಗ ಮಾತ್ರ ಎಚ್ಚರಿಕೆಯಿರಲಿ. ಇಂತಹ ವಿದೂಷಕರ ಅಥವಾ ತೋರಿಕೆಯ ದೇಶಭಕ್ತರ ಸಹಾನುಭೂತಿ ನಮಗೆ ಬೇಕಿಲ್ಲ. ನಮಗೆ ನಿಮ್ಮ ಮೇಲೆ ಎಳ್ಳಷ್ಟೂ ನಂಬಿಕೆಯಿಲ್ಲ. ನಿಮ್ಮ ಉಪದೇಶಕ್ಕೆ ನಾವು ಹುಲ್ಲಿನಷ್ಟೂ ಬೆಲೆ ಕೊಡುವುದಿಲ್ಲ. ನಿಮಗೆ ನಮ್ಮ ಹಕ್ಕುಗಳ ಬಗ್ಗೆ ಬೆಲೆಯಿಲ್ಲದಿದ್ದರೆ ಸರಿಯಿರಿ ಪಕ್ಕಕ್ಕೆ, ನಮ್ಮ ದಾರಿಗೆ ಅಡ್ಡ ಬಂದರೆ ಇಲ್ಲವೆ ಪಾಪ ತಿಳುವಳಿಕೆಯೇ ಇಲ್ಲದ ಜನರನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರೆ ನಾವು ನಿಮ್ಮನ್ನು ಬಿಡುವುದಿಲ್ಲ. ನಮ್ಮ ಪಕ್ಷ ನ್ಯಾಯವಾದದ್ದು, ನಾವದಕ್ಕಾಗಿ ಕೊನೆಯತನಕ ಹೋರಾಡಬಲ್ಲೆವು. ದಲಿತರು ಕೈಲಾಗದವರಲ್ಲ, ಅವರೂ ಯುದ್ಧದಲ್ಲಿ ತಮ್ಮ ಶೌರ್ಯವನ್ನು ಮೆರೆದಿದ್ದಾರೆ. ‘ಬಾಲಾ’ಕಾರರಂತೆ ಹೆದರಿಸುವ ಜನ ಮುಸಲ್ಮಾನರನ್ನೋ ಇಲ್ಲ ಯುರೇಪಿಯನ್ನರನ್ನೋ ನೋಡಿ ಹೇಗೆ ಥರಥರ ನಡುಗುತ್ತಾರೆ ಅನ್ನುವುದು ನಮಗೆ ಗೊತ್ತು. ನಮ್ಮ ಬೆನ್ನು ಮುರಿಯುವವರ ತಲೆಯನ್ನು ಒಡೆಯಲು ನಾವು ಹಿಂಜರಿಯಲಾರೆವು, ಮುಂದೆ ಅದೇನೇ ಆಗಲಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top