ಸತ್ಯದ ಕಣ್ಣು | Vartha Bharati- ವಾರ್ತಾ ಭಾರತಿ

ಸತ್ಯದ ಕಣ್ಣು

2018ರ ಜನವರಿ ತಿಂಗಳ ಕೊನೆಯ ವಾರ ಅನೇಕ ಸಂವೇದನಾಪೂರ್ಣ ವಿಚಾರಗಳಿಗೆ ಸಾಕ್ಷಿಯಾಗಿದೆ. ಮಾಮೂಲು ವರದಿಗಳನ್ನೇ ಓದುತ್ತಿದ್ದವರಿಗೂ ಇಲ್ಲೊಂದು ಸಾರ್ಥಕ ಸಪ್ತಾಹ ನಡೆದಿದೆಯೆಂಬುದು ಮನವರಿಕೆಯಾಗಬಹುದು. ಇವನ್ನು ಕರಾರುವಾಕ್ಕಾಗಿ ಪೋಣಿಸಲು ಸಾಧ್ಯವಾಗದಿರಬಹುದು. ಆದರೆ ಇವುಗಳಿಗೊಂದು ಶ್ರುತಿ ಮತ್ತು ಸೂತ್ರಬದ್ಧತೆಯಿರುವುದು ಗೊತ್ತಾಗಬಹುದು. ಆಗಸದಲ್ಲಿ ಸಪ್ತರ್ಷಿಮಂಡಲ ಅಥವಾ ಮೃಗಶಿರಾ-ಮಹಾವ್ಯಾಧ ಹೀಗೆ ನಕ್ಷತ್ರಮಂಡಲಗಳನ್ನು ಒಂದೊಂದು ಆಕಾರದಲ್ಲಿ ಬಣ್ಣಿಸುವಾಗ, ವಿವರಿಸುವಾಗ ಅವುಗಳ ಖಚಿತತೆ ಯನ್ನು ಒಂದಿಷ್ಟು ಬದಿಗೊತ್ತಿ ಕಲ್ಪಿತ ಆಕಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಗಷ್ಟೇ ಅವಕ್ಕೆ ಅರ್ಥಪ್ರಾಪ್ತಿಯಾಗುತ್ತದೆ.

ಹೀಗೆಯೇ ಈ ಘಟನೆಗಳು:

ಜನವರಿ 25ರಂದು ಪದ್ಮಾವತ್ ಸಿನೆಮಾ ಬಿಡುಗಡೆಯಾಯಿತು. ಇದರ ಹಿಂದೆ ಭಾರೀ ಹೆರಿಗೆ ನೋವಿತ್ತು ಎಂಬುದನ್ನು ಇಡೀ ದೇಶವೇ ಬಲ್ಲುದು. ಕರ್ಣಿಸೇನೆ ಎಂಬ ಮೂರ್ಖರ ತಂಡವೊಂದು ಹಿಂದೂ ಬ್ರಿಗೇಡುಗಳ ಬೆಂಬಲದೊಂದಿಗೆ ಚರಿತ್ರಾರ್ಹ ದಾಂಧಲೆಯನ್ನೆಬ್ಬಿಸಿತು. ಇಂದು ದೇಶದ ಸ್ಥಿತಿಯು ಎಷ್ಟು ಶೋಚನೀಯವಾಗಿದೆಯೆಂದರೆ ಚರಿತ್ರೆಯನ್ನು ಅಳೆಯಲು ಚರಿತ್ರೆ ಬಲ್ಲವರಾಗಬೇಕಾಗಿಲ್ಲ. ಒಂದಿಷ್ಟು ಪುಂಡರಿದ್ದರೆ ಸಾಕು; ಅವರನ್ನು ಛೂ ಬಿಟ್ಟರೆ ಚರಿತ್ರೆಯನ್ನು ಬದಲಾಯಿಸಬಹುದು. ಸಿನೆಮಾ ನೋಡದೆ ಸಿನೆಮಾದ ಬಗ್ಗೆ ಟೀಕಿಸುವುದು, ಪುಸ್ತಕವನ್ನೋದದೆ ಪುಸ್ತಕವನ್ನು ಹೀಗಳೆಯುವುದು, ಮಾತ್ರವಲ್ಲ ಅದರ ಕರ್ತೃವನ್ನು ಬೆದರಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು, ನಿಷೇಧಕ್ಕೆ ಕರೆಕೊಡುವುದು ಇವೆಲ್ಲ ಸಂವಿಧಾನಬದ್ಧ ಹಕ್ಕೆಂದು ಕೇಂದ್ರ ಸರಕಾರವೇ ಮಾನ್ಯ ಮಾಡಿದಂತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತೆಯನ್ನು ಉಲ್ಲೇಖಿಸಿದ ಕೇಂದ್ರ ಸರಕಾರವು ತಾನೇ ರೂಪಿಸಿದ ಸೆನ್ಸಾರ್ ಮಂಡಳಿಯು ಅನುಮೋದಿಸಿದ ಸಿನೆಮಾವನ್ನು ರಾಜಸ್ಥಾನ, ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಮುಂತಾದ ಕೇಸರಿ ರಾಜ್ಯ ಸರಕಾರಗಳು ನಿಷೇಧಿಸಿದಾಗ ಸುಮ್ಮನಿದ್ದಿತು. ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದು ನಿಷೇಧಗಳನ್ನು ತಡೆಹಿಡಿಯಿತು. ಮುಖಕ್ಕೆ ಇಷ್ಟು ಭವ್ಯ ದಿವ್ಯ ಮಂಗಳಾರತಿಯಾದರೂ ಕೇಂದ್ರ ಮತ್ತು ಈ ಕೆಲವು ರಾಜ್ಯ ಸರಕಾರಗಳು ಸಿನೆಮಾದ ಪ್ರದರ್ಶನಕ್ಕೆ ಎದುರಾದ ಅಡತಡೆಗಳನ್ನು ನಿವಾರಿಸುವ ಬದಲು ಹಲ್ಲೆಕೋರರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವನ್ನೇ ಮುಂದುವರಿಸಿದೆ.

ಇವೆಲ್ಲದರ ನಡುವೆಯೂ ‘ಪದ್ಮಾವತ್’ ಬಿಡುಗಡೆಯಾದದ್ದು ಮಾತ್ರವಲ್ಲ, ಭರ್ಜರಿ ಯಶಸ್ಸನ್ನು ಕಂಡಿದೆ. ಈಗಾಗಲೇ ನೂರು ಕೋಟಿಗಿಂತಲೂ ಹೆಚ್ಚು ಹಣವನ್ನು ಬಾಚಿ ಗಲ್ಲಾಪಟ್ಟಿಗೆಯನ್ನು ಕೊಳ್ಳೆಹೊಡೆಯುವತ್ತ ದಾಪುಗಾಲಿಟ್ಟಿದೆ. ಸಿನೆಮಾ ಚೆನ್ನಾಗಿದೆಯೋ ಇಲ್ಲವೋ ಬೇರೆ ಮಾತು. (ಈ ಬಗ್ಗೆ ಈಗಾಗಲೇ ಭಿನ್ನ ಅಭಿಪ್ರಾಯಗಳು, ವಿಮರ್ಶೆಗಳು ಬಂದಿವೆ; ನಾನಿನ್ನೂ ಈ ಸಿನೆಮಾವನ್ನು ನೋಡಿಲ್ಲ!) ಆದರೆ ಸಿನೆಮಾ ಪ್ರದರ್ಶನವನ್ನು ತಡೆಯುವ ಮಾತಿನಿಂದಾಗಿ ಜನರಿಗೆ ಅಪೂರ್ವವಾದ ಕುತೂಹಲ ಹುಟ್ಟಿದ್ದೇ ಈ ಯಶಸ್ಸಿಗೆ ಕಾರಣವಿರಬಹುದು. ಇನ್ನೂ ವಿಶೇಷವೆಂದರೆ ಈ ಯಶಸ್ಸು ಮೇಲೆ ಹೇಳಿದ ರಾಜ್ಯಗಳಲ್ಲಿ ಪ್ರದರ್ಶನವನ್ನು ಕಾಣದೆಯೇ ಪಡೆದದ್ದು!

ತಮಾಷೆಯೆಂದರೆ ರಜಪೂತರಿಗೆ ಅವಮಾನವಾಗಿದೆಯೆಂಬ ಕಾರಣ ಹೇಳಿ ಕರ್ಣಿಸೇನೆ ಪ್ರತಿಭಟಿಸಿತು; ಕೇಸರಿ ರಾಜ್ಯಗಳು ಈ ಕಾರಣಕ್ಕೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ತಹಬಂದಿಗೆ ತರಲು ಕಷ್ಟವಾಗಬಹುದೆಂಬ ಪಿಳ್ಳೆನೆವ ಹೂಡಿ ಸಿನೆಮಾ ಪ್ರದರ್ಶನವನ್ನು ನಿಷೇಧಿಸಿದವು. ‘ಅಂಧೇನೈವ ನಿಯಮಾನೋ ಯಥಾಂಧಾ’ ಎಂಬ ಉಕ್ತಿಗೆ ಬೇರೆ ನಿದರ್ಶನ ಬೇಡ.

ಇನ್ನೊಂದೆಡೆ ಮುಸ್ಲಿಮ್ ಬಾಹುಳ್ಯದ ಮಲೇಶ್ಯಾ ದೇಶವು ಈ ಸಿನೆಮಾವು ಮುಸ್ಲಿಮ್ ಸಂವೇದನೆಗೆ ಧಕ್ಕೆ ತರುತ್ತದೆಂಬ ಕಾರಣದ ಮೇಲೆ ತನ್ನ ದೇಶದಲ್ಲಿ ಈ ಸಿನೆಮಾದ ಪ್ರದರ್ಶನಕ್ಕೆ ಅನುಮತಿಯನ್ನು ನಿರಾಕರಿಸಿದೆ. ಇವೆಲ್ಲವುಗಳ ನಡುವೆ ಪಾಕಿಸ್ತಾನವು ‘ಪದ್ಮಾವತ್’ ಪ್ರದರ್ಶನಕ್ಕೆ ಹಸಿರು ನಿಶಾನೆ ತೋರಿದೆ. ಹೀಗಾಗಿ ಮಲೇಶ್ಯಾದ ಜೊತೆಗೆ ಭಾರತದ ಕೆಲವು ರಾಜ್ಯಗಳು ಸಮಾನಶೀಲವನ್ನು ಹೊಂದಿವೆ ಮತ್ತು ಇಂತಹ ವೈರುಧ್ಯಗಳು, ವಿರೋಧಾಭಾಸಗಳು ಭಾರತದ ವೈವಿಧ್ಯವನ್ನು ಮತ್ತೆಮತ್ತೆ ತೋರುತ್ತವೆಯೆನ್ನಬಹುದು. ‘ಪದ್ಮಾವತ್’ ಸಿನೆಮಾ ನಿಷೇಧಿಸಿದ ಕೆಲವು ರಾಜ್ಯಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ನ್ಯಾಯಾಲಯ ನಿಂದನೆಯ ನೋಟಿಸನ್ನು ನೀಡಿದೆ. ಪರಿಣಾಮವೇನಾಗಬಹುದೆಂಬುದು ಮುಂದೆ ಸಂಬಂಧಿಸಿ ದವರ ವಿವೇಕವನ್ನವಲಂಬಿಸಿ ನಿರ್ಧಾರವಾಗಬಹುದು. ನಿಜಕ್ಕೂ ಗಮನಿಸ ಬೇಕಾದ್ದೆಂದರೆ, ‘ಪದ್ಮಾವತ್’ ಯಾರ ಭಾವನೆಗಳನ್ನು ಕೆಣಕಿದೆಯೆಂಬುದು. ಒಂದೇ ಮಾತಿನಲ್ಲಿ ಹೇಳಬಹುದಾದರೆ ಅದು ಕಣ್ಣಿದ್ದೂ ಕುರುಡಾಗಿರುವವರ ಭಾವರಾಹಿತ್ಯವನ್ನು, ಪ್ರಜ್ಞಾಹೀನತೆಯನ್ನು ಕೆಣಕಿದೆ.

*

ದೇಶದ ರಾಜಧಾನಿಯಲ್ಲಿ ನಡೆಯುವ ಪ್ರಜಾಪ್ರಭುತ್ವ ದಿನಾಚರಣೆಗೆ ಈ ಬಾರಿ ಆಸಿಯಾನ್ ದೇಶಗಳ ಎಲ್ಲ ವಲ್ಲಭರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಅಲ್ಲೂ ಕೇಂದ್ರ ಸರಕಾರವು ತಾನೆಷ್ಟು ಅಪಮೌಲ್ಯ ಗೊಂಡಿದ್ದೇನೆಂಬುದನ್ನು ಸಾರಿಹೇಳಿತು. ವಿಷಯವು ತೀರ ಚಿಕ್ಕದೇ: ಕಾಂಗ್ರೆಸ್ ಪಕ್ಷದ ಸರ್ವಾಧ್ಯಕ್ಷರಾದ ರಾಹುಲ್ ಗಾಂಧಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆಯನ್ನು ಮಾಡದೆ ಆರನೇ ಸಾಲಿನಲ್ಲಿ ಮಾಡಲಾಯಿತು. ರಾಹುಲ್ ಗಾಂಧಿ ಭಾಗವಹಿಸಿದ್ದರು ಬಿಡಿ; ಅದು ಅವರ ಧಾರಾಳತನವೋ ಸಣ್ಣತನವೋ ಅವರೇ ಬಲ್ಲರು. ಸ್ವೀಕರಣೆ, ನಿರಾಕರಣೆ ಅವರವರ ಭಾವಕ್ಕೆ ಬಿಟ್ಟದ್ದು. ಸಂಪ್ರದಾಯ, ಪರಂಪರೆ ಹೋಗಲಿ, ಔದಾರ್ಯಕ್ಕಾದರೂ ಅವರಿಗೆ ಇದಕ್ಕಿಂತ ಹೆಚ್ಚಿನ ಗೌರವ ಲಭಿಸಬೇಕಾಗಿತ್ತು ಎಂದು ಸಂಸದೀಯ ಗೌರವದ ಪಾಲಕರಿಗೆ ಅರ್ಥವಾದೀತು. ಮೊದಲ ಸಾಲಿನಲ್ಲಿ ಭಾಜಪ ಅಧ್ಯಕ್ಷರಾದ ಅಮಿತ್ ಶಾ ಮತ್ತು ನಿವೃತ್ತ ಹುಲಿ ಅಡ್ವಾಣಿಯವರು ಶೋಭಿಸಿದರು. ತ್ರಿಶಂಕು, ನಡೆ ಸ್ವರ್ಗಕ್ಕೆ ಎಂದು ಹೇಳುವ ಪ್ರತಿಸೃಷ್ಟಿಯ ವಿಶ್ವಾಮಿತ್ರರು ಅಲ್ಲಿರಲಿಲ್ಲ. ಇದು ಪ್ರಜಾತಂತ್ರಕ್ಕೆ ಶೋಭೆಯಲ್ಲ; ಬರಲಿರುವ ದಿನಗಳಲ್ಲಿ ಇನ್ನೂ ಕೆಳಕ್ಕೆ, ತಳಕ್ಕೆ, ಪಾತಾಳಕ್ಕೆ ಕುಸಿಯುವ ಮೌಲ್ಯಗಳು ಈಗಾಗಲೇ ಸಂಕೇತಿಸಲ್ಪಟ್ಟಿವೆ.

 ಅಹಂಕಾರ ಯಾರಿಗೂ ಸಲ್ಲದು; ಅಧಿಕಾರದ ಗದ್ದುಗೆಯನ್ನೇರಿದವರಿಗಂತೂ ಸೌಜನ್ಯವು ಅಗತ್ಯ. ಜನ್ಮಸಾಫಲ್ಯಕ್ಕಂತೂ ವಿನಯವು ಅನಿವಾರ್ಯ. ಅದಿಲ್ಲದೆ ಯಾವ ಬದುಕೂ ಶೋಭಿಸದು. ಕುಮಾರವ್ಯಾಸನ ಮೂಲಕ ಕನ್ನಡ ಮಹಾಭಾರತದಲ್ಲಿ ಇಂಥದ್ದೊಂದು ಪ್ರಸಂಗವು ವಿವರಿಸಲ್ಪಟ್ಟಿದೆ: ಸಂಧಾನಕ್ಕಾಗಿ ಶ್ರೀ ಕೃಷ್ಣ ಹಸ್ತಿನಾವತಿಗೆ ಬಂದಿದ್ದಾನೆ. ಆತನ ಬರವನ್ನೆದುರು ನೋಡುತ್ತ ಎಲ್ಲರೂ ಕಾಯುತ್ತಿದ್ದಾರೆ. ಆತ ಬಂದಾಗ ಏನಾಯಿತು? ‘‘ಸಮರಸರ್ವಜ್ಞರುಗಳಂಘ್ರಿಗೆ ನಮಿಸಿದರು; ಬಹಳೋಲಗದ ಸಂಭ್ರಮದ ಸಿರಿ ತಲೆವಾಗುತಿರ್ದುದು ನೊಸಲ ಕೈಗಳಲಿ’’; ಎಲ್ಲರೂ ಕೈ ಮುಗಿದರಂತೆ. ಇವೆಲ್ಲವುಗಳ ನಡುವೆ ‘‘ತತ್ಕುಮತಿ ಕೌರವನಿಳಿಯದಿರ್ದನು ಸಿಂಹ ವಿಷ್ಟರವ’’; ಕೃಷ್ಣನಿಗೆ ಅಹಂಕಾರ ಸೇರದು. ಇದೇ ಕಾರಣಕ್ಕೆ ಶಿಶುಪಾಲನನ್ನು, ಮಾಗಧನನ್ನು ಆತ ಕೊಂದದ್ದು; ಇಲ್ಲವೇ ಕೊಲ್ಲಿಸಿದ್ದು. ಸೆಣಸು ಸೇರದ ದೇವನಿದಿರಲಿ ಮಣಿಯದಾತನ (ಕೌರವನ) ಕಾಣುತ(ವೆ) ಶ್ರೀಕೃಷ್ಣ ‘‘ಧಾರುಣಿಯನೊತ್ತಿದನಂಗುಟದ ತುದಿಯಿಂದ (ನಸುನಗುತ); ಆಗೇನಾಯಿತು? ಮಣಿಖಚಿತ ಕಾಂಚನದ ಪೀಠದ ಗೊಣಸು ಮುರಿದುದು; ಮೇಲೆ ಸುರ ಸಂದಣಿಗಳು ‘ಆ’ ಎನೆ ಕವಿದು ಬಿದ್ದನು ಹರಿಯ ಚರಣದಲಿ!’’ ಎನ್ನುತ್ತಾನೆ ಕವಿ. (ಮುಂದೆ ಹರಿಯು ಕೌರವನನ್ನು ತಿಳಿಹಾಸ್ಯದಿಂದ ಕುಟುಕುವುದನ್ನು ಓದುತ್ತೇವೆ.)

ರಾಹುಲ್ ಗಾಂಧಿ ಶ್ರೀಕೃಷ್ಣನಲ್ಲದೇ ಇರಬಹುದು; ಆದರೆ ಅಧಿಕಾರದ ಆರ್ಭಟ ಮತ್ತು ಮದೋನ್ಮತ್ತತೆಯು ಹೇಗೆ ಕೆಲವರ ತಲೆಗಳನ್ನು ತಿರುಗಿಸುತ್ತದೆ ಮತ್ತು ಶಾಶ್ವತವಲ್ಲದ ಸ್ಥಾನದಲ್ಲಿದ್ದು ಇತರರನ್ನು ಅವಹೇಳನ ಮಾಡಲು ಪ್ರೇರೇಪಿಸುತ್ತದೆ; ಬುದ್ಧಿಯನ್ನು ಪ್ರಚೋದಿಸುವ ಬದಲು ಮದವನ್ನು ಹೊರಚೆಲ್ಲುತ್ತದೆ ಎಂಬುದಕ್ಕೆ ಇತಿಹಾಸ ಮತ್ತು ಪುರಾಣಗಳು ಸಾಕಷ್ಟು ಉದಾಹರಣೆಗಳನ್ನು ನೀಡಿವೆ. ನಹುಷನ ಇನ್ನೊಂದು ಉದಾಹರಣೆಯೂ ಮಹಾಭಾರತದಲ್ಲಿದೆ. ಆದ್ದರಿಂದ ದೇಶದ ಹೆಸರನ್ನು ಹೇಳುವಾಗ ತನ್ನ ಹೆಸರು ಆ ದೇಶದ ಒಬ್ಬ ಅಭಿಮಾನಿಯಾಗಿ ಉಳಿಯಬೇಕೆಂದು ಬಯಸಬೇಕೇ ಹೊರತು ಭೂಮಿಯನ್ನು ಹೊತ್ತ ಹಿರಣ್ಯಾಕ್ಷನಂತಲ್ಲ.

*

  ಜನವರಿ 30 ಮಹಾತ್ಮಾ ಗಾಂಧಿಯ ಪುಣ್ಯ ತಿಥಿ. ಮಾಮೂಲಾಗಿ ಎರಡು ನಿಮಿಷಗಳ ಮೌನ ಪ್ರಾರ್ಥನೆ, ವೈಷ್ಣವ ಜನತೋ.., ಗಾಂಧಿಯ ಕುರಿತ ಕೆಲವು ನೆನಪುಗಳು ತಣ್ಣಗೆ ಹರಿದಾಡುತ್ತವೆ. ಆದರೆ ಕರ್ನಾಟಕದಲ್ಲಿ ಮಾತ್ರ ಮತಾಂಧತೆ, ಮತೀಯತೆ ಇವನ್ನು ಮೌನವಾಗಿ ಪ್ರತಿಭಟಿಸುವ ವಿನೂತನ ಕಾರ್ಯಕ್ರಮವು ರಾಜ್ಯ, ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು. ಈ ಯಶಸ್ಸೂ ಸಾಂಕೇತಿಕವೇ. ಏಕೆಂದರೆ ಮೊದಲ ಬಾರಿಗೆ ಸೌಹಾರ್ದದ ಬಹಿರಂಗ (ಪ್ರ)ದರ್ಶನ ನಡೆಯಿತು. ಇದು ಯಾಕೆ ಮುಖ್ಯವಾಯಿತೆಂದರೆ ಯಾವುದೋ ಒಂದು ರಾಜಕೀಯ ಪಕ್ಷ ಇಲ್ಲವೇ ಒಂದು ಸಂಘಟನೆಯು ಇದನ್ನು ಮಾಡಿದ್ದಿದ್ದರೆ ಇದೂ ಇನ್ನೊಂದು ಕಾರ್ಯಕ್ರಮವಾಗಿ, ಸಮಾರಂಭವಾಗಿ ಉಳಿಯುತ್ತಿತ್ತು. ಆದರೆ ಧರ್ಮ-ಜಾತಿಗಳ ಹಾನಿಕಾರಕ ಪರಿಣಾಮಗಳನ್ನು ನೋಡಿದ ಜನರು (ಬೇ)ಸತ್ತು ಮತ್ತೆ ಹುಟ್ಟಿದರು. ದೇಶದೆಲ್ಲೆಡೆ ನಡೆಯಬೇಕಾಗಿದ್ದ ಈ ಕಾರ್ಯಕ್ರಮವು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಕರೆ ಕೊಟ್ಟಿತು. ಹಿಂದಿನ ದಿನವಷ್ಟೇ ಬೆಂಗಳೂರಿನಲ್ಲಿ ಗೌರಿದಿನ ನೆನಪುಳಿಯುವಂತೆ ಆಚರಿಸಲ್ಪಟ್ಟಿತು. ಅದರ ಮುಂದುವರಿಕೆಯಾಗಿ ರಾಜ್ಯದೆಲ್ಲೆಡೆ ಜನರು ಮಾನವ ಸರಪಳಿಯನ್ನು ಸ್ವಯಿಚ್ಛೆಯಿಂದ (ನಮ್ಮ ಬಂದ್‌ಗಳು ನಡೆಯುವ ಬಲಾತ್ಕಾರದ ಸ್ವಯಿಚ್ಛೆಯಲ್ಲ; ಪ್ರಾಮಾಣಿಕವಾದ ಸ್ವಯಿಚ್ಛೆ!) ನಡೆಸಿದರು. ಮನುಷ್ಯ ಹುಟ್ಟುತ್ತ ಸ್ವತಂತ್ರ; ಆದರೆ ಎಲ್ಲೆಡೆ ಆತ ಸರಪಳಿಗೆ ಬಿಗಿದುಕೊಂಡಿದ್ದಾನೆ ಎಂದರು ಮಹಾನುಭಾವರು. ಆದರೆ ನಮ್ಮನ್ನು ನಾವೇ ರೂಪಿಸಿದ ಜೀವನ ಪದ್ಧತಿಗಳು, ಆಚಾರ-ವಿಚಾರಗಳು, ಮನಯೊಳಗಿರಬೇಕಾದ ದೇವರು, ಧರ್ಮ, ಜಾತಿ, ಮತ ಇವುಗಳು ಸಂಪ್ರದಾಯದ, ನಂಬಿಕೆಗಳ ಹೆಸರಿನಲ್ಲಿ ಬಂಧಿಸುವ ಹಂತಕ್ಕೆ ತಲುಪಿದಾಗ ನಾವು ಮಾನವ ಸಂಬಂಧದ ಸರಪಳಿಗೆ ಬಂಧಿತರಾಗುವುದು ಒಳ್ಳೆಯದು. ಸಮಾಜಘಾತಕವಾದ ಸಂಬಂಧಗಳು, ಅಧಿಕಾರದಿಂದ ಹುಟ್ಟಿಕೊಳ್ಳುವ ದರ್ಪಗಳು ನಮ್ಮನ್ನು ಓಡಿಸಿಕೊಂಡು ಬರುವಾಗ ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಇಂತಹ ಬಂಧನಗಳು ಸಹಕಾರಿಯಾಗಬಲ್ಲವು.

ಇಂತಹ ಒಂದು ಚಳವಳಿ ಹೊಸ ದಾರಿಗೆ, ಹೊಸ ಹುಮ್ಮಸ್ಸಿಗೆ ಹೊಸ ಆಯಾಮವನ್ನು ಕಲ್ಪಿಸಿದ್ದಂತೂ ನಿಜ. ಮುಖ್ಯ ವಾಹಿನಿಯೆಂದರೆ ಆಳುವವರು ಹೇಳುವ ಕುರಿಮಂದೆಯೇ ಎಂದು ಭಾವಿಸುತ್ತಿರುವ ಬಹುಮತಾಧಾರಿತ ಸಂಚಾರದ ನಡುವಿನಲ್ಲಿ ನಾವು ಅಂತಹ ಧೋರಣೆಗಳನ್ನು ಧಿಕ್ಕರಿಸಿ ನಿಲ್ಲಬಲ್ಲೆವೆಂದು ಅನೇಕರಿಗೆ ತಿಳಿದಿರಲಿಲ್ಲ. ಅದನ್ನು ಮಾಡುವ ಮೂಲಕ ಜೀವಂತ ಬದುಕಿನ ಒಂದು ಆಸೆಯ ಸೆಲೆಯನ್ನು, ಒರತೆಯನ್ನು ಹುಟ್ಟಿಸಲಾಗಿದೆ. ಇದು ಇನ್ನೂ ಸಾವಿರಾರು ತೊರೆಗಳಾಗಿ ಸಾಗಬೇಕಾಗಿದೆ.

*

ಮತಾಂಧತೆಯನ್ನು ವಿರೋಧಿಸುತ್ತೇನೆ ಎಂದರೆ ತಕ್ಷಣ ಎದುರಾಗುವ ಪ್ರಶ್ನೆಯೆಂದರೆ ಹಾಗಾದರೆ ನೀವು ಭ್ರಷ್ಟಾಚಾರದ ಪರವೋ ಎಂಬುದು. ಇದು ಸಮೀಕರಣವೇ ಅಲ್ಲ. ಈಗಾಗಲೇ ದೇಶವು ಇಳಿಗಾಲವನ್ನೆದುರುನೋಡುತ್ತಿದೆ; ಪುಟ್ಟ ಮಕ್ಕಳೂ ತಮ್ಮ ಜಾತಿ-ಮತಗಳ ಕುರಿತು ಸನ್ನಿಹೊಡೆದವರಂತೆ ವರ್ತಿಸುವುದನ್ನು ಕಂಡಾಗ ಭ್ರಷ್ಟಾಚಾರದ ಮೌಲ್ಯಕ್ಕಿಂತಲೂ ಹೆಚ್ಚು ಹಾನಿಕಾರಕ ವಾದ ಕಳೆಯನ್ನು ಇಲ್ಲಿ ಬಿತ್ತಲು ಒಂದು ದೊಡ್ಡ ಗುಂಪು ಪ್ರಯತ್ನಿಸುತ್ತಿದೆ ಮತ್ತು ಅದನ್ನು ಆದಷ್ಟು ಬೇಗ ಬೇರುಸಹಿತ ಕಿತ್ತುಹಾಕದಿದ್ದರೆ ಉಳಿಗಾಲವಿಲ್ಲ ಎಂದು ಅನ್ನಿಸಬೇಕು. ಭ್ರಷ್ಟಾಚಾರವು ಆರ್ಥಿಕ ಹೊರೆಯಾದರೆ ಮತಾಂಧತೆಯು ತಲೆಮಾರುಗಳನ್ನು ಬಾಧಿಸುವ ಹೊರೆ. ಸಿಂದಬಾದನ ಕಥೆಯ ಹೆಗಲೇರಿದ ಮುದುಕನನ್ನು ನಾವಿಳಿಸದಿದ್ದರೆ ಕೊರಳು ಬಿಗಿಯಲು ಕಾಲ ದೂರವಿಲ್ಲ. ಅದನ್ನು ನಿವಾರಿಸುವ ಹಾದಿಯಲ್ಲಿ ಮಾನವ ಸರಪಳಿಯು ಬಹಳ ನೆರವನ್ನು ನೀಡಬಲ್ಲುದು.

ದೇಶ, ಧರ್ಮ, ಭಾಷೆ, ಜಾತಿ ಅಂತಲ್ಲ, ಯಾವುದೇ ಅಭಿಮಾನವೂ ಸತ್ಯದ ಕಣ್ಣನ್ನು ಮುಚ್ಚಬಾರದು. ಅದು ಮುಚ್ಚಿದರೆ ಬದುಕಿನ ಬಾಗಿಲೇ ಮುಚ್ಚಿದಂತೆ.

ಭ್ರಷ್ಟಾಚಾರವು ಆರ್ಥಿಕ ಹೊರೆಯಾದರೆ ಮತಾಂಧತೆಯು ತಲೆಮಾರುಗಳನ್ನು ಬಾಧಿಸುವ ಹೊರೆ. ಸಿಂದಬಾದನ ಕಥೆಯ ಹೆಗಲೇರಿದ ಮುದುಕನನ್ನು ನಾವಿಳಿಸದಿದ್ದರೆ ಕೊರಳು ಬಿಗಿಯಲು ಕಾಲ ದೂರವಿಲ್ಲ. ಅದನ್ನು ನಿವಾರಿಸುವ ಹಾದಿಯಲ್ಲಿ ಮಾನವ ಸರಪಳಿಯು ಬಹಳ ನೆರವನ್ನು ನೀಡಬಲ್ಲುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top