ಕೋಣವೆರಡುಂ ಹೋರೆ... | Vartha Bharati- ವಾರ್ತಾ ಭಾರತಿ

---

ಕೋಣವೆರಡುಂ ಹೋರೆ...

ಹಿತವಾಗಿ ಯಾವುದನ್ನೂ ಗಮನಿಸಲು ಸಾಧ್ಯವಿಲ್ಲದಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಕೃತಕ ಗಡಿರೇಖೆಗಳೇ ಸಹಜ ಪ್ರೀತಿಯನ್ನು ಕಬಳಿಸಿವೆ. ಇದು ಶಾಶ್ವತ ಶಾಂತಿಯನ್ನಾಗಲೀ ನೆಮ್ಮದಿಯನ್ನಾಗಲೀ ಸ್ಥಾಪಿಸುವುದು ಸಾಧ್ಯವಿಲ್ಲವೆಂಬುದು ಗೊತ್ತಿದ್ದಾಗಲೂ, ಇದರಿಂದ ಮುಗ್ಧರು ಅನಗತ್ಯ ಹಾನಿಗೀಡಾಗುತ್ತಾರೆಂದು ತಿಳಿದಾಗಲೂ ಈ ಜೈತ್ರಯಾತ್ರೆಯು ಮುಂದುವರಿಯುತ್ತದೆ.


ನಮ್ಮದಲ್ಲದ ತಪ್ಪಿಗೆ ನಾವು ಅಂದರೆ ಪ್ರಜೆಗಳು ಬಳಲುವುದು ಪ್ರಜಾತಂತ್ರದ ದೊಡ್ಡ ಸಂಚು. ಆಳುವವರು ಮತ್ತು ಆಳಬಯಸುವವರು ತಮ್ಮ ಮೇಲುಗೈತನಕ್ಕೆ ಯಾವುದು ಬೇಕೋ ಅದನ್ನು ವೈಭವೀಕರಿಸುವುದು, ಯಾವುದು ಬೇಡವೊ ಅದನ್ನು ನಿಷ್ಕರುಣೆಯಿಂದ ಚಿವುಟಿಹಾಕುವುದು ಒಂದು ಸಹಜ ಮತ್ತು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದೊಂದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ. ‘ಅತ್ತ ದರಿ ಇತ್ತ ಪುಲಿ’ ಎಂಬ ನಾಟಕವೊಂದು ಕೆಲವು ಸಮಯದ ಹಿಂದೆ ಪ್ರದರ್ಶನವಾಯಿತು. ಈಶಾನ್ಯ ಭಾರತದ ಜನತೆ ಪ್ರತ್ಯೇಕತಾವಾದ ಮತ್ತು ಮಿಲಿಟರಿ ಶಕ್ತಿಯ ಉಗ್ರ ಚಟುವಟಿಕೆಗಳ ನಡುವೆ ಪಡುವ ಹಿಂಸೆಯನ್ನು ಮಾರ್ಮಿಕವಾಗಿ ತೋರಿಸಲಾಯಿತು. ನಾಟಕಗಳು, ಮತ್ತಿತರ ಕಲೆಗಳು ಸಮಾಜದ ಮತ್ತು ಒಟ್ಟಾರೆ ಬದುಕಿನ ಕುರಿತು ಭಾಷೆಯ ಮೂಲಕ, ಅಭಿನಯದ ಮೂಲಕ ಮಾಡುವ ವ್ಯಾಖ್ಯಾನಗಳೆಂದೇ ಒಪ್ಪಿಕೊಂಡರೂ ಅವು ಸಾಮಾಜಿಕ ಬದುಕನ್ನು ಹಸನು ಮಾಡಲು ವಿಫಲವಾಗಿವೆಯೆಂದೇ ಹೇಳಬಹುದು.

ನಮ್ಮ ಬಹುಪಾಲು ಪ್ರೇಕ್ಷಕರು ಮತ್ತು ಚಿಂತಕರು ಈ ಕಲಾ(ಪ್ರ)ದರ್ಶನವನ್ನು ಸವಿಯುತ್ತಾರೆಯೇ ವಿನಾ ಅದನ್ನು ಸಾಮಾಜಿಕ ಹಿತಕ್ಕೆ ಬಳಸುವುದೂ ಇಲ್ಲ; ಅವುಗಳ ನೀತಿಯನ್ನು, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೂ ಇಲ್ಲ; ಒಟ್ಟಿನಲ್ಲಿ ಅವು ಮನರಂಜನೆಯ ಸರಕಾಗಿ ಉಳಿಯುತ್ತವೆ. ಇನ್ನೂ ದುಃಖದ ಸಂಗತಿಯೆಂದರೆ ಅವುಗಳಲ್ಲಿರುವ ಕೆಡುಕಿನ, ದುಡುಕಿನ ವರ್ತನೆಗಳಿದ್ದರೆ ಅವನ್ನಷ್ಟು ತಮ್ಮ ಬದುಕಿನಲ್ಲಿ ಪಳಗಿಸಿಕೊಳ್ಳುವವರು ಬಹಳಷ್ಟು ಮಂದಿಯಿದ್ದಾರೆ. ನಮ್ಮ ಚಲನಚಿತ್ರಗಳ ಹಿಂಸೆ, ಲೈಂಗಿಕತೆ, ದಬ್ಬಾಳಿಕೆ ಇವು ಆರಂಭವಾದಾಗ ಅವು ಬದುಕಿನ ಪ್ರತಿಬಿಂಬವೆಂದೇ ಚಿತ್ರಿಸಲಾರಂಭಿಸಿದರು. ಆದರೆ ಕ್ರಮೇಣ ಅವು ಸಮಾಜವನ್ನು ಪ್ರೇರೇಪಿಸತೊಡಗಿದವು.

ಇಂದು ದೇಶದೆಲ್ಲೆಡೆ ನಡೆಯುವ ಹಿಂಸೆ ಮತ್ತು ಲೈಂಗಿಕತೆಯು ನಮ್ಮ ಕಲೆಗಳ ನೇತ್ಯಾತ್ಮಕವಾದ ಪ್ರಭಾವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಒಳಗಾಗಿವೆ. ಯಾವುದು ಪ್ರಭಾವಿಸಬೇಕಿತ್ತೋ ಅದು ಮನರಂಜನೆಯ ಸರಕಾಗಿ, ಯಾವುದು ಪ್ರಭಾವಿಸಬಾರದೋ ಅದು ದಟ್ಟ ನೆರಳಾಗಿ ಆವರಿಸಿರುವುದು ವರ್ತಮಾನದ ಘೋರ ದುರಂತ. ಬಹುಕಾಲದ ಸಾಹಿತ್ಯದಿಂದ ನಾವೇನು ಕಲಿತೆವು ಎಂದರೆ ಬದುಕನ್ನು ಕಟ್ಟಿಕೊಳ್ಳುವುದರ ಬದಲಾಗಿ ಬದುಕಿನ ಭೌತಿಕ ಸರಕುಗಳನ್ನು ಸಂಗ್ರಹಿಸು ವುದಕ್ಕೆ ಕಲಿತೆವು ಎಂದಷ್ಟೇ ಹೇಳಬಹುದು. ಅನೇಕರಿಗೆ ಸಾಹಿತ್ಯವೇ ತಮ್ಮ ಇತರ ಎಲ್ಲ ಕೊರತೆಗಳನ್ನು, ಹುಳುಕುಗಳನ್ನು ಮುಚ್ಚಿಕೊಳ್ಳುವುದಕ್ಕೆ ಬಂಡವಾಳ. ಇಲ್ಲವಾದರೆ ನಮ್ಮ ಸಾವಿರಕ್ಕೂ ಮಿಕ್ಕಿ ವರ್ಷಗಳ ಸಾಹಿತ್ಯವನ್ನು ಓದಿದವರೆಲ್ಲ ಋಷಿಮುನಿಗಳಾಗಬೇಕಿತ್ತು ಇಲ್ಲವೇ ಕನಿಷ್ಠ ಸಾತ್ವಿಕರಾಗಬೇಕಿತ್ತು. ಇದನ್ನು ಸಾಹಿತ್ಯವೇ ಹೇಳಿದೆಯೆಂಬುದು ಸಮಾಧಾನದ ವಿಚಾರ. ಸಾಹಿತ್ಯದಿಂದ ಏನು ಕಲಿತೆವು ಎಂದರೆ ಸಾಹಿತ್ಯದಿಂದ ಏನೂ ಕಲಿಯಲಾರೆವು ಎಂಬುದನ್ನು ಕಲಿತೆವು ಎಂದು ವ್ಯಂಗ್ಯವಾಗಿ ಹೇಳಬಹುದು.

ಆದರೂ ಇಂತಹ ವ್ಯಾಖ್ಯಾನಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವುದು ನಮ್ಮ ವೈಯಕ್ತಿಕ ಚಿಂತನೆಗಳನ್ನಾದರೂ ಬೆಳೆಸಬಹುದು; ಮತ್ತು ಬೆಳಗಿಸಬಹುದು. ರಾಮಾಯಣದ ಕೊನೆಯ ಭಾಗದಲ್ಲಿ ಶ್ರೀರಾಮನು ಅಗಸನೊಬ್ಬನ ಮಾತಿಗೆ, ತನಗೆ ಲೋಕಾಪವಾದ ಬರಬಾರದೆಂಬ ಕಾರಣಕ್ಕೆ ಸೀತೆಯನ್ನು ಕಾಡಿಗೆ ಅಟ್ಟುತ್ತಾನೆ. ಇಲ್ಲೊಂದು ವಿಚಿತ್ರ ಪ್ರಜಾತಂತ್ರವಿದೆ. ಅಗಸನ ಅಪವಾದವಿದ್ದದ್ದು ರಾಮನ ಮೇಲೆ. ಶಿಕ್ಷೆಗೆ ಗುರಿಯಾದದ್ದು ಸೀತೆ. ಒಂದು ವೇಳೆ ರಾಮನಿಗೆ ತಾನು ಸೀತೆಯೊಂದಿಗೆ ಬಾಳುವುದು ತನ್ನ ವ್ಯಕ್ತಿತ್ವಕ್ಕೆ, ಹಿರಿಮೆಗೆ, ಯೋಗ್ಯತೆಗೆ, ಅರಸೊತ್ತಿಗೆಗೆ ವಿರುದ್ಧವಾದುದೆಂದು ಅನಿಸಿದ್ದರೆ ತಾನೇ ಪಟ್ಟಬಿಟ್ಟು ಹೋಗಬೇಕಾಗಿತ್ತೆಂದು ಅನ್ನಿಸುವುದಿಲ್ಲವೇ? ಇಂತಹದೇ ಸಂದರ್ಭವು ಎದುರಾದಾಗಲೇ ತಾನೇ ರಾಮನು ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೋದದ್ದು? ಆದರೆ ರಾಮನು ವಿಚಾರಣೆಯಿಲ್ಲದೆ ಸೀತೆಯನ್ನು ಶಿಕ್ಷಿಸುತ್ತಾನೆ. ರಾಮನ ಶ್ರೇಷ್ಠತೆಯು ಹೊನ್ನಹೊಳಪನ್ನು ಪಡೆಯಿತೆಂದು ಭಾವಿಸುತ್ತೇವೆ. ವಾದಕ್ಕೆ, ತರ್ಕಕ್ಕೆ ಅವಕಾಶವೇ ಇಲ್ಲದೆ ಪ್ರಜಾಪವಾದವೆಂಬ ಅಲಿಖಿತ ನಿಯಮಕ್ಕೆ ಸೀತೆ ಬಲಿಯಾಗುತ್ತಾಳೆ. ಲೋಕಕ್ಕೆ ನ್ಯಾಯದ ಬೆಳಕನ್ನು ನೀಡುವ ಸೂರ್ಯವಂಶದ ಆದರ್ಶ ಅರಸು ರಾಮನ ಅರಮನೆಯೊಳಗೆ ಅನ್ಯಾಯದ ಕತ್ತಲು ಆವರಿಸಿತೆಂಬ ಅಂಶವು ರಾಮನನ್ನು ಕಾಡಿರಬೇಕಲ್ಲವೇ?

ಇಂತಹದೇ ಅನ್ಯಾಯವನ್ನು ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕವೂ ದರ್ಶಿಸುತ್ತಾನೆ. ಸಾಮಾನ್ಯವಾಗಿ ನಾವು ನೋಡುವ ಸತ್ಯ ಹರಿಶ್ಚಂದ್ರ ಅಪ್ಪಟ ಸಿನೆಮಾ ಹೀರೋ. ಸತ್ಯವಂತ; ಆದರ್ಶವಾದಿ; ಸುಖೀ ಸಂಸಾರಿ; ಭಗವದ್ಭಕ್ತ. ವಸಿಷ್ಠ-ವಿಶ್ವಾಮಿತ್ರರ ಪಂಥಕ್ಕೆ ಬಲಿಯಾದವನು. ಪರಿಸ್ಥಿತಿಯ ಬಲೆಗೆ ಸಿಕ್ಕಿ ರಾಜ್ಯ-ಕೋಶ ಕೊನೆಗೆ ಪತ್ನಿ-ಪುತ್ರ ಮಾತ್ರವಲ್ಲ, ತನ್ನ ಸ್ವಾತಂತ್ರ್ಯವನ್ನೂ ಕಳೆದುಕೊಂಡವನು. ಆದರೆ ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು ಎಂಬ ಧ್ಯೇಯವಾಕ್ಯಕ್ಕೆ ಬದ್ಧನಾದವನು. ಆತನನ್ನು ಪರೀಕ್ಷೆಮಾಡುವುದಕ್ಕೆ ದೇವಾನುದೇವತೆಗಳು ವಿಶ್ವಾಮಿತ್ರ ಋಷಿಯ ಆದೇಶದಂತೆ ವಿವಿಧ ರೂಪ ತಾಳಿ ಭೂಮಿಗೆ ಬರುತ್ತಾರೆ. ಈ ಎಲ್ಲ ಪರೀಕ್ಷೆಗಳಿಗೆ ಹರಿಶ್ಚಂದ್ರನು ತನ್ನನ್ನು ತಾನು ಒಡ್ಡಿಕೊಂಡು ಯಾತನೆಪಡುತ್ತಾನೆ; ಆದರೆ ಅಂತ್ಯದಲ್ಲಿ ಯಶಸ್ವಿಯಾಗುತ್ತಾನೆ. ಕಳೆದುಕೊಂಡದ್ದನ್ನೆಲ್ಲವನ್ನೂ ಮರಳಿ ಪಡೆಯುತ್ತಾನೆ. ಭಗವಂತ ಹರನಿಗೆ ಜೈಕಾರವಾಗುತ್ತದೆ. ಆದರೆ ರಾಘವಾಂಕನಿಗೆ ಹರಿಶ್ಚಂದ್ರ ಇಷ್ಟು ಅಪ್ಪಟನಲ್ಲ; ಸೂರ್ಯವಂಶದವನಾದರೂ (ಶ್ರೀರಾಮನ ಹಿರಿಯ) ಏಕೆಂದರೆ ಅವನ ಹರಿಶ್ಚಂದ್ರನು ತ್ರಿಶಂಕುವಿನ ಮಗ. ತ್ರಿಶಂಕುವಿನ ಬದುಕೇ ವರ್ಣರಂಜಿತ; ರೋಚಕ. ಅವನು ದೇಶಬಾಹಿರನಾದ ಆನಂತರ ಹರಿಶ್ಚಂದ್ರನು ಪಟ್ಟಕ್ಕೆ ಬಂದ. ಮಕ್ಕಳಾಗದಿದ್ದಾಗ ನಾರದರ ಆದೇಶದಂತೆ ವರುಣನನ್ನು ಆರಾಧಿಸಿ ತನಗೆ ಮಗನಾದರೆ ಅವನನ್ನೇ ಪಶುವಾಗಿ ಪ್ರತಿಷ್ಠಾಪಿಸಿ, ಯಾಗದಲ್ಲಿ ಅರ್ಪಿಸುವುದಾಗಿ ಸಂಕಲ್ಪಿಸಿ ರೋಹಿತ (ರೋಹಿತಾಶ್ವ)ನೆಂಬ ಮಗನನ್ನು ಪಡೆದ. ಆಗ ವರುಣನು ಬಂದು ಯಾಗವನ್ನೂ (ಪರೋಕ್ಷವಾಗಿ ಹರಿಶ್ಚಂದ್ರನ ಮಗನನ್ನು) ಅಪೇಕ್ಷಿಸಿದ. ಆದರೆ ಹರಿಶ್ಚಂದ್ರನು ಒಂದಲ್ಲ ಒಂದು ನೆಪಹೂಡಿ ಕಾಲಯಾಪನೆ ಮಾಡಿದ. ಇದನ್ನು ಕೇಳಿದ ರೋಹಿತಾಶ್ವ ಲಾಡಾಡಿಯಾಗಿ ಕೊನೆಗೆ ಶುನಶ್ಶೇಪನನ್ನು ಖರೀದಿಸಿ ತನಗೆ ಪ್ರತಿಯಾಗಿ ಅವನನ್ನು ಯಜ್ಞಪಶುವಾಗಿಸಲು ಕರೆದುಕೊಂಡುಬಂದ. ಇಷ್ಟರಲ್ಲಿ ವಚನಬಾಹಿರನಾದ ಹರಿಶ್ಚಂದ್ರನು ಜಲೋದರರೋಗಗ್ರಸ್ತನಾದ. ರೋಹಿತಾಶ್ವನು ಕರೆತಂದ ಶುನಶ್ಶೇಪನನ್ನು ಯಜ್ಞಪಶುವಾಗಿಸಿ ನರಮೇಧಯಾಗ ಮಾಡಿ ವರುಣನನ್ನು ತೃಪ್ತಿಪಡಿಸಿ ರೋಗಮುಕ್ತನಾದ. ಇಂತಹ ಹರಿಶ್ಚಂದ್ರನು ವಸಿಷ್ಠ-ವಿಶ್ವಾಮಿತ್ರರ ಪಂಥದಲ್ಲಿ ಕಡೆಗೋಲಾಗುವುದು ಈ ಪಾಪದ ಫಲವೇ ಎಂದನ್ನಿಸಿದರೆ ಅದು ಅಸಹಜವೇನಲ್ಲ.

ಶುನಶ್ಶೇಪನೆಂಬ ಅಮಾಯಕನು ರಾಜ ಮತ್ತು ದೇವತೆಯ ಈ ಸಂಧಾನದ ಬಲಿಪಶು. ಅವನನ್ನು ಬಲಿಕೊಟ್ಟು ಹರಿಶ್ಚಂದ್ರನು ವಚನಪಾಲಕನಾಗುವುದಾದರೆ ಅದೆಂತಹ ನಿಯಮ? ಅದು ನಿಯಮವಾದರೆ ಹರಿಶ್ಚಂದ್ರನ ಮುಂದಿನ ಕಥೆಯೂ ಸಹಜ ನಿಯಮ. ಅಂತೂ ಕೊನೆಯಲ್ಲಿ ದೇವ-ದೇವತೆಗಳೇ ಸುಸ್ತಾದರೆಂದು ಕಾಣುತ್ತದೆ. ಕಥೆಗೆ ಮಂಗಳಮಯ ಮಂಗಳ ಹಾಡುತ್ತಾರೆ. ಆದರೆ ರಾಘವಾಂಕನು ಇದನ್ನು ವ್ಯಂಗ್ಯವಾಗಿಯೇ ‘‘ಕೋಣವೆರಡುಂ ಹೋರೆ ಗಿಡಕೆ ಮಿಳ್ತು’’ ಎಂದು ಹೇಳಿ ಸಮಾಧಾನಪಡುತ್ತಾನೆ; ಸಮಾಧಾನಪಡಿಸುತ್ತಾನೆ. ಸುಧರ್ಮ ಸಭೆಯ ಚರ್ಚೆ ಕೋಣಗಳ ಹೋರಾಟವಾಗುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಎಲ್ಲ ಆದರ್ಶಗಳು ರಸಾತಲಕ್ಕೆ ಕುಸಿಯುತ್ತವೆ!

(ಜನ್ನನ ಯಶೋಧರ ಚರಿತೆಯಲ್ಲೂ ಹೀಗೆಯೇ. ತಪ್ಪುಮಾಡುವವಳು ಅಮೃತಮತಿ. ಆದರೆ ಅದರ ಫಲವನ್ನುಣ್ಣುವವರು ಅವಳ ಪತಿ ಯಶೋಧರ ಮತ್ತು ಅವನ ತಾಯಿ!) ಇಂತಹ ವ್ಯತ್ಯಸ್ತತೆಯನ್ನು ನಮ್ಮ ಎಲ್ಲ ಹಳೆಯ ಕಾವ್ಯಗಳಲ್ಲಿ ಕಾಣಬಹುದು. ತರ್ಕಗಳನ್ನು ಮೀರಿದ, ಕೆಲವೊಮ್ಮೆ ಕುತರ್ಕಗಳನ್ನೇ ಬಳಸಿಕೊಂಡ ಕಥನಗಳು ಹಲವಿವೆ. ಇವು ವಿಧಿಲೀಲೆಯೆಂಬ ಸಮರ್ಥನೆಯೊಂದಿಗೆ ನಾವು ಈ ಕಥನ ಶೈಲಿಯನ್ನು ಒಪ್ಪುತ್ತೇವೆ. ಆದರೆ ಇವು ಸಮಾಜದ ಮೇಲೆ ಬೀರುವ ಪ್ರಭಾವವಾದರೂ ಎಂತಹದು? ಹೇಗಾದರೂ ಇರು, ವಿಧಿಯೊಂದಿಗೆ ಒಪ್ಪಂದದಂತೆ ಬದುಕಬೇಕಿದೆ ಎಂಬುದಷ್ಟೇ. ವಾಸ್ತವ ಮತ್ತು ಆದರ್ಶದ ನಡುವೆ ಸದಾ ಅಂತರವಿರುತ್ತದೆ. ಆದರೆ ಅದನ್ನೆ ವೈಭವೀಕರಿಸಿದರೆ ಮತ್ತು ಅದನ್ನೇ ಬದುಕೆಂದು ನಾವು ಸಮಾಜದ ಮುಂದಿಡುವುದಾದರೆ ಒಳಿತಿನ ಕಲ್ಪನೆಯಾದರೂ ಯಾವುದು? ಭಾರತದ ತುಂಬೆಲ್ಲ ಇಂತಹ ಕಥೆಗಳೇ.

ಇಂದೂ ನಡೆಯುವುದು ಹೀಗೆಯೇ. ಕಾನೂನಿನಲ್ಲಿ ಸರಿಯೆಂದು ಕಾಣುವ ಕಥೆಗಳೂ ಈ ರೀತಿಯ ಕೋಣಗಳ ಹೋರಾಟದ ಕಥೆಗಳೇ. ಆಳುವ ಮತ್ತು ಪ್ರತಿಪಕ್ಷಗಳ ನಡುವಣ ನಿಮಗಿಂತ ನಾವು ಸೈ ಎಂಬ ಪಂಥದಲ್ಲಿ ಅನೇಕ ಅಧಿಕಾರಿಗಳು, ಪ್ರಜೆಗಳು, ತತ್ವಸಿದ್ಧಾಂತಗಳು, ಬಲಿಯಾಗುತ್ತವೆ. ಎಷ್ಟೋ ವರ್ಗಾವಣೆಗಳು ಇಂತಹ ಪಂಥದ ಫಲಗಳು. ಕೆಲವೊಮ್ಮೆ-ಬಹುಪಾಲು-ಆಳುವವರು ತಮ್ಮ ವಿರೋಧಿಗಳನ್ನು ಮಟ್ಟಹಾಕುವುದಕ್ಕೆ ವಿಚಿತ್ರ ನಿಯಮಗಳನ್ನು ರೂಪಿಸುತ್ತಾರೆ; ವಿಕಲ್ಪಿತ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅವು ಎಷ್ಟು ಜನರಿಗೆ ಅನುಕೂಲವೆಂದು ನೋಡುವುದೇ ಇಲ್ಲ. ಒಂದೊಂದು ನಿರ್ಧಾರವನ್ನೂ ಒಂದೊಂದು ತಳಹದಿಯ ಮೇಲೆ ರೂಪಿಸುವುದು ಮತ್ತು ಅವಕ್ಕೆ ಆಯಾಯ ಕಾಲ, ಸಂದರ್ಭದ ವಿವರಣೆಯನ್ನು ನೀಡುವುದು ಆಡಳಿತದ ಮತ್ತು ವಿರೋಧದ ವಿಕ್ರಮಗಳಾಗಿವೆ. ಒಂದು ರಾಜಕೀಯ ಉದಾಹರಣೆಯನ್ನು ನೀಡುವುದಾದರೆ ಭಾರತ-ಪಾಕಿಸ್ತಾನದ ನಡುವಣ ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಅನುಕೂಲವಿಲ್ಲದೆ ಮಾತುಕತೆಗಳ ಮೂಲಕ ಪರಿಹರಿಸುವುದು ಎರಡೂ ದೇಶಗಳಿಗೆ ಬೇಡ. ಅವು ಜನಪ್ರಿಯತೆಯ ಮಾನದಂಡಗಳಾಗಿ ವ್ಯವಹರಿಸಲ್ಪಡುತ್ತಿವೆ.

ಅಗ್ಗದ ಜನಪ್ರಿಯತೆಯನ್ನು ಪಡೆಯಬೇಕಾದರೆ ಒಂದೆಡೆ ಜೈಜವಾನ್ ಎನ್ನುತ್ತಲೇ ತಮ್ಮ ಪ್ರತಿಷ್ಠೆಗೆ ದೇಶರಕ್ಷಕರನ್ನು ಎರಡೂ ದೇಶಗಳು ಬಲಿಕೊಡುತ್ತಲೇ ಬಂದಿವೆ. ಹೀಗೆ ಆಗುವ ಪ್ರತಿಯೊಂದು ಸಾವಿನೊಂದಿಗೂ ಎಷ್ಟು ಮತಗಳು ತಮಗೆ ಬರಬಹುದೆಂಬುದೇ ಆಳ್ವಿಕೆಯ ಯಶಸ್ಸಿಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲ, ರಾಜಕೀಯವು ಕ್ರೀಡೆ, ಕಲೆ ಮುಂತಾದವುಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕೆಂಬುದು ಮಾನವೀಯ ನಿಯಮವಾದರೂ ಅದನ್ನೇ ಮನುಷ್ಯ-ಮನುಷ್ಯರ ನಡುವೆ ದಾಳವಾಗಿ ಬಳಸಲಾಗುತ್ತದೆ. ಹೀಗಾಗಿ ಎಂ.ಎಫ್. ಹುಸೇನ್ ಎಂಬ ಅಪ್ಪಟ ಕಲಾಕಾರ ದೇಶಭ್ರಷ್ಟ ಮಾತ್ರವಲ್ಲ, ದೇಶದ್ರೋಹಿಯೂ ಆಗುತ್ತಾರೆ. ಸಂಗೀತಗಾರರಿಗಿನ್ನೂ ಈ ದುರ್ಗತಿ ಬಂದಿಲ್ಲ; ಏಕೆಂದರೆ ಅವರಿನ್ನೂ ವಿವಾದಾತೀತ ಸಿದ್ಧ ಮತ್ತು ಬದ್ಧ ರಚನೆಗಳನ್ನೇ ಹಾಡುತ್ತಿದ್ದಾರೆ. ಕ್ರಿಕೆಟ್ ಐಪಿಎಲ್‌ನಂತಹ ಮಾರಕ ರೋಗದ ಸೃಷ್ಟಿಯ ನಂತರವೂ ಭಾರತ-ಪಾಕಿಸ್ತಾನಗಳನ್ನು ಪರಸ್ಪರ ದೂರವಿಟ್ಟಿದೆ. ಹಿತವಾಗಿ ಯಾವುದನ್ನೂ ಗಮನಿಸಲು ಸಾಧ್ಯವಿಲ್ಲದಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಕೃತಕ ಗಡಿರೇಖೆಗಳೇ ಸಹಜ ಪ್ರೀತಿಯನ್ನು ಕಬಳಿಸಿವೆ.

ಇದು ಶಾಶ್ವತ ಶಾಂತಿಯನ್ನಾಗಲೀ ನೆಮ್ಮದಿಯನ್ನಾಗಲೀ ಸ್ಥಾಪಿಸುವುದು ಸಾಧ್ಯವಿಲ್ಲವೆಂಬುದು ಗೊತ್ತಿದ್ದಾಗಲೂ, ಇದರಿಂದ ಮುಗ್ಧರು ಅನಗತ್ಯ ಹಾನಿಗೀಡಾಗುತ್ತಾರೆಂದು ತಿಳಿದಾಗಲೂ ಈ ಜೈತ್ರಯಾತ್ರೆಯು ಮುಂದುವರಿಯುತ್ತದೆ. ನಕ್ಸಲರರೊಂದಿಗೆ ನಂಟು ಬೆಳೆಸಿದರೆಂಬ ಆರೋಪದಲ್ಲಿ ಜಿ.ಎನ್. ಸಾಯಿಬಾಬಾ ಎಂಬ ಜೆಎನ್‌ಯು ಉಪನ್ಯಾಸಕರೊಬ್ಬರು ಶೇ. 90ಕ್ಕೂ ಹೆಚ್ಚು ದೈಹಿಕ ಅಸಮರ್ಥತೆಯೊಂದಿಗೂ ಜೀವಾವಧಿ ಶಿಕ್ಷೆಗೆ ಗುರಿಯಾಗಿ ನಾಗಪುರದ ಕುಖ್ಯಾತ ಕಾರಾಗೃಹವೊಂದರಲ್ಲಿ ಬಂಧಿಯಾಗಿದ್ದಾರೆ. ಗಾಲಿಕುರ್ಚಿಯಲ್ಲೇ ಚಲಿಸಬೇಕಾದ ಈ ಚಿಂತಕ ತಾನು ಮಾಡದ ತಪ್ಪಿಗೆ- ತಾಂತ್ರಿಕವಾಗಿ ಸರಕಾರವೊಂದು ಹೇರಬಹುದಾದ ಕಡುಕಾನೂನಿಗೆ ಬಲಿಯಾಗಿದ್ದಾರೆ. ಪ್ರಾಯಃ ಜನತೆಯು ಇಂತಹ ಅಸಹಜ ಮಾರ್ಗಗಳನ್ನು ದೂರವಿಡುವುದಕ್ಕೆ ಪಣತೊಡಬೇಕು. ಅದು ನಿಧಾನವಾಗಿಯಾದರೂ ಸಾಧ್ಯವಾಗುತ್ತದೆ, ಈಡೇರುತ್ತದೆಯೆಂದು ಆಶಿಸಬೇಕು. ದೊಡ್ಡವರೆಂಬವರೆಲ್ಲ ದೊಡ್ಡವರಲ್ಲ; ಅವರು ದಡ್ಡರು ಮತ್ತು ಇತರರನ್ನು ಬಳಸಲು ಮತ್ತು ಬಳಸಿ ಬೀಸಿ ಒಗೆಯಲು ಶಕ್ತರು ಎಂಬುದು ಅರ್ಥವಾದರೆ ಜನರಿಗೂ ಒಳಿತು; ಸಮಾಜಕ್ಕೂ ಒಳಿತು; ಭವಿಷ್ಯಕ್ಕೂ ಒಳಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top