ವ್ಯಕ್ತಿಯೊಬ್ಬನಿಗೆ ಅಗತ್ಯವಿರುವ ಸ್ವಾತಂತ್ರ ಸಿಗದಿದ್ದರೆ...

ಮುಸಲ್ಮಾನರು ರಮಝಾನ್ ತಿಂಗಳಲ್ಲಿ ಉಪವಾಸ ಮಾಡುವುದರಲ್ಲಿ ಕಟ್ಟುನಿಟ್ಟು. ಇವರಲ್ಲಿ ಉಪವಾಸ ಕಾಲದಲ್ಲಿ ನೀರು ಕೂಡ ನಿಷಿದ್ಧವಾಗಿರುತ್ತದೆ. ಅಷ್ಟೇ ಅಲ್ಲ ಉಗುಳು ಕೂಡ ನುಂಗುವಂತಿಲ್ಲ. ಇವರಲ್ಲಿ ಒಬ್ಬ ಮುಸಲ್ಮಾನ ಫಕೀರನ ಕಥೆ ಬಹಳ ಹೆಸರುವಾಸಿಯಾಗಿದೆ. ಈ ಫಕೀರನಿಗೆ ಕಠಿಣ ಉಪವಾಸಗಳು ಸಹಿಸಲಸಾಧ್ಯವಾಗುತ್ತ್ತಿದ್ದವು. ನೀರಿನ ಒಂದು ಗುಟುಕಾದರೂ ಕುಡಿಯಲು ಸಿಗುವಂತಾಗಬೇಕು. ಆದರೆ ಉಳಿದವರಿಗೆ ತಿಳಿಯಕೂಡದು ಅನ್ನುವಂತಹ ಯುಕ್ತಿಯೊಂದನ್ನು ಆತ ಯೋಚಿಸತೊಡಗಿದ.

ದಿನಾಲೂ ಸ್ನಾನಕ್ಕೆಂದು ನದಿಗೆ ಹೋಗಿ ನೀರಿನಲ್ಲಿ ಮುಳುಗಿ ಒಂದು ಗುಟುಕು ನೀರು ಕುಡಿದರೆ ಬಾಯಾರಿಕೆಯೂ ತಣಿಯುವುದಲ್ಲದೆ ಯಾರಿಗೂ ಗೊತ್ತಾಗಲಾರದು ಅನ್ನುವಂತಹ ಒಂದು ಉಪಾಯ ಆತನಿಗೆ ಹೊಳೆಯಿತು. ಈ ಉಪಾಯ ಆತನಿಗೆ ಬಹಳ ಇಷ್ಟವಾಗಿ ಆತ ದಿನಾಲೂ ಸ್ನಾನ ಮಾಡುವ ನೆಪದಲ್ಲಿ ನದಿಗೆ ಹೋಗಿ ಮುಳುಗಿ ಒಂದು ಗುಟುಕು ನೀರು ಕುಡಿದೇ ಹೊರಬರುತ್ತಿದ್ದ. ಹೀಗೆ ಸುಮಾರು ದಿನಗಳವರೆಗೆ ಮಾಡಿದಾಗ ಈ ಗುಟ್ಟು ಯಾರಿಗೂ ಗೊತ್ತೇ ಆಗುವುದಿಲ್ಲ ಅನ್ನುವ ನಂಬಿಕೆ ಅವನಿಗೆ ಬಂದದ್ದರಿಂದ ‘‘ಮೈ ಕರತಾ ಹೂಂ ವಹ್ ಖುದಾ ಭೀ ದೇಖತಾ ನಹಿ’’ ಎಂದು ಜನರಿಗೆ ಹೇಳುತ್ತಾ ಬಂದ. ಆದರೆ ಮಾಡಿದ ಪಾಪ ಯಾವತ್ತೂ ಹೆಚ್ಚು ದಿನ ಗುಟ್ಟಾಗಿರುವುದಿಲ್ಲ. ಒಂದು ದಿನ ಆ ಫಕೀರನು ನೀರು ಕುಡಿಯಲು ನದಿಗಿಳಿದಾಗ ಮುಳ್ಳಿನ ಮೀನೊಂದು ನೀರಿನ ಮೂಲಕ ಆತನ ಬಾಯಿಗೆ ಹೋಯಿತು. ಆತನಿಗೆ ತಿಳಿಯದಂತೆ ಮೀನು ಬಾಯಿಗೆ ಬಂದಿದ್ದರಿಂದ ಮೀನನ್ನು ಆತ ಎಷ್ಟೇ ನುಂಗುವ ಪ್ರಯತ್ನ ಮಾಡಿದರೂ ಅದರ ಮೈಯಲ್ಲಿ ಸಾಕಷ್ಟು ಮುಳ್ಳುಗಳಿದ್ದುದರಿಂದ ಹಾಗೂ ದೊಡ್ಡ ಮೀನಾಗಿದ್ದರಿಂದ ಅವನದನ್ನು ನುಂಗಲೂ ಆಗದೆ ಉಗಳಲೂ ಆಗದೆ ಅವನ ಗಂಟಲಲ್ಲಿ ಸಿಕ್ಕಿಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಆತ ತನ್ನ ಪಾಪದ ಸಾಕ್ಷಿಯನ್ನು ಹೊತ್ತುಕೊಂಡೇ ಊರಿನ ಕಡೆ ಹೋದಾಗ ‘‘ಮೈ ಕರತಾ ಹೂಂ ವಹ್ ಖುದಾ ಭೀ ನಹಿ ದೇಖತಾ’’ ಎಂದು ದಿಮಾಕಿನಲ್ಲಿ ಹೇಳುತ್ತಿದ್ದವನ ಮೋಸ ಬಯಲಾಯಿತು.

ಹರಿಭಕ್ತ ಪರಾಯಣರಾದ ಪಾಂಗಾರಕರ್ ಬುವಾ ಇವರ ಬಗ್ಗೆಯೂ ಇಂತಹುದೇ ಪ್ರಕರಣವಾಗಿದೆ. ಪಾಂಗಾರಕರ್ ಇವರು ಕೆಲವು ದಿನಗಳ ಹಿಂದೆ ಬರೋಡಾಗೆ ಹೋಗಿದ್ದಾಗ ಅಲ್ಲಿ ವಾಸವಾಗಿದ್ದ ಕಾಯಸ್ಥ ಪ್ರಭು ಜಾತಿಯವರಾದ ಶ್ರೀ ವಿನಾಯಕ ವಾಕಸಕರ್ ಅವರು ಅಲ್ಪೋಪಾಹಾರಕ್ಕಾಗಿ ಅವರನ್ನು ಆಮಂತ್ರಿಸಿದರು. ಪಾಂಗಾರ್‌ಕರ್, ವಾಕಸಕರ್‌ರ ಆಮಂತ್ರಣವನ್ನು ಸ್ವೀಕರಿಸಿ ತಾವು ಬ್ರಾಹ್ಮಣರಾಗಿದ್ದರೂ ಕಾಯಸ್ಥರ ಮನೆಗೆ ಹೋಗಿ ಊಟ ಮಾಡಿದರು. (ಈ ಘಟನೆ 9ನೇ ಜೂನ್ 1927 ರಂದು ನಡೆಯಿತು) ಆದರೆ ಈ ವಿಷಯವನ್ನು ಬರೋಡಾ ಕಾಲೇಜಿನ ಪ್ರೊಫೆಸರ್ ಆದ ಶ್ರೀ ಜೋಷಿಯವರು ಪುಣೆಯ ಜ್ಞಾನಪ್ರಕಾಶ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಪಾಂಗಾರ್‌ಕರ್ ಬುವಾ ಅವರು ತೋರಿಸಿದ ಧೈರ್ಯಕ್ಕಾಗಿ ಅವರನ್ನು ಮೆಚ್ಚಲೇಬೇಕು ಹಾಗೂ ಅಭಿನಂದಿಸಲೇ ಬೇಕು.

ಆದರೆ ಈ ಅಭಿನಂದನೆಗಳಿಗೆ ಮಾರುಹೋಗದೆ ಪಾಂಗಾರ್‌ಕರ್ ಅವರು ಪ್ರಾಯಶ್ಚಿತ್ತ ಮಾಡಿಕೊಂಡರು. ಈ ಪ್ರಾಯಶ್ಚಿತ್ತ ಪ್ರಕರಣದಲ್ಲಿ ಪಾಂಗಾರ್‌ಕರ್ ಬುವಾ ಯಾವುದೇ ಕುಟಿಲನೀತಿಗಳನ್ನು ರಚಿಸದೆ ತಮ್ಮ ಕೃತ್ಯವನ್ನು ಸಮರ್ಥಿಸುವ ಸುಳ್ಳು ಧೈರ್ಯ ತೋರಿಸದೆ ಸೀದಾ ಪ್ರಾಯಶ್ಚಿತ್ತ ಮಾಡಿಕೊಂಡು ಸರಳತನವನ್ನು ತೋರಿಸಿದ್ದಾರೆ ಅಂದುಕೊಂಡು ಕೆಲವು ಹಳೇ ವಿಚಾರಗಳ ಜನ ಅವರನ್ನು ಹೊಗಳುತ್ತಿದ್ದಾರೆ. ಆದರೆ ಪಾಂಗಾರ್‌ಕರ್ ಅವರು ಪ್ರಾಯಶ್ಚಿತ್ತ ಕೊಟ್ಟ ಕಾರಣಗಳನ್ನು ಕೇಳಿದಾಗ ಅವರು ಬರೀ ಕಣ್ಣುಮುಚ್ಚಾಲೆ ಆಡುತ್ತಿದ್ದರು ಎಂದೇ ಹೇಳಬಹುದು. ‘‘ವಾಕಸಕರ್ ಅವರೊಡನೆ ಸಲಿಗೆಯಿರುವ ಪ್ರೊ.ಜೋಷಿಯವರು ನಾನವರಲ್ಲಿ ಊಟ ಮಾಡಿದೆ ಎಂದು ಹೇಳುವಾಗ ಅವರು ಹೇಳಿದ್ದೇ ನಿಜ ಅಂದುಕೊಂಡು ನಾನು ಹಳೆ ವಿಚಾರಗಳ ಜನರಿಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೇನೆ’’ ಎಂದು ಪಾಂಗಾರ್‌ಕರ್ ಬರೆಯುತ್ತಾರೆ. ಹಳೇ ಕಾಲದ ಹಳೇ ವಿಚಾರಗಳುಳ್ಳ ಜನರಿಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಇಂದಿನ ಕಾಲದಲ್ಲಿ ನಿಂದನೀಯ ಕೃತ್ಯ ಎಂದು ನಮಗನಿಸುತ್ತದೆ. ಅನೇಕ ಸಮಾಜ ಸುಧಾರಕರು ಜನರ ಹಠಕ್ಕೆ ಮಣಿದು ಪ್ರಾಯಶ್ಚಿತ್ತ ಮಾಡಿಕೊಳ್ಳಲೂ ಯಾವತ್ತೂ ಸಿದ್ಧರಾಗಿಯೇ ಇರುತ್ತಾರೆ. ಅಷ್ಟೇ ಅಲ್ಲದೆ ‘ಪ್ರಾಯಶ್ಚಿತ್ತ ತೆಗೆದುಕೊಂಡಿದ್ದೇವೆ. ಅಂದರೆ ನಾವು ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದಲ್ಲ’ ಎಂದು ಬೇರೆ ಹೇಳುತ್ತಿರುತ್ತಾರೆ.

ಇಂತಹ ಜನ ಸುಧಾರಕರಾಗಿರಲೂ ಬಹುದು. ಆದರೆ ಅವರ ವರ್ತನೆ ಯಾಕೋ ನಮಗೆ ಸರಿ ಬರುತ್ತಿಲ್ಲ. ನಾವು ಮಾಡುತ್ತಿರುವುದು ತಪ್ಪು ಎಂದು ಒಪ್ಪಿಕೊಳ್ಳುವುದೇ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದರ ಹಿಂದಿನ ಅರ್ಥ ಬಿಟ್ಟರೆ ಬೇರೆ ಅರ್ಥವಿರಲಾರದು. ನಿಜವಾದ ಸಮಾಜ ಸುಧಾರಕರು ಹಾಗೂ ನಾನು ಮಾಡಿದ್ದೇ ಸರಿ ಅನ್ನುವ ಮನೋಭಾವವಿರುವವರು ಯಾರದ್ದೋ ಹಠಕ್ಕೆ ಮಣಿದು ಪ್ರಾಯಶ್ಚಿತ್ತ ಮಾಡಿಕೊಂಡರೆ ಅದು ಆತನ ದುರ್ಬಲತೆಯನ್ನು ತೋರಿಸುತ್ತದೆ. ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಮಾಡಿಕೊಂಡವನ ಸ್ವಭಾವದ ದುರ್ಬಲತೆ ಕಾಣುತ್ತದೆ. ಹಾಗೂ ಇದರಿಂದ ಸುಧಾರಣೆ ಮರೀಚಿಕೆಯಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಸುಧಾರಕರು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾ ಹೋದರೆ ಹಳೆಯ ಮತವಾದಿಗಳು ತಮ್ಮ ಆಚಾರವಿಚಾರಗಳಲ್ಲಿ ಯಾವತ್ತೂ ಬದಲಾವಣೆ ಮಾಡಲಾರರು. ಅಲ್ಲದೆ, ಸುಧಾರಕರೇ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಾರೆಂದರೆ ಅವರು ತಮಗೆ ಶರಣಾಗಿದ್ದಾರೆ ಅಂದುಕೊಂಡು ಸುಧಾರಕರನ್ನವರು ತುಚ್ಛವಾಗಿ ಕಾಣಲಾರಂಭಿಸುತ್ತಾರೆ ಹಾಗೂ ನಾವು ಹೇಳಿದ್ದೇ ನಿಜ ಎಂದು ಬೀಗುತ್ತ ಹಳೆಯ ನಂಬಿಕೆಗಳನ್ನೇ ಗಟ್ಟಿಯಾಗಿ ಹಿಡಿದು ಬದುಕುತ್ತಾರೆ. ಪಾಂಗಾರಕರ್ ಸುಧಾರಕರಲ್ಲದಿದ್ದರೂ ಅವರೊಬ್ಬ ಭಾಗವತರು ಹಾಗೂ ಅನೇಕ ಸಂತರ ಚರಿತ್ರೆಗಳನ್ನು ಅವರು ಬರೆದಿದ್ದಾರೆ. ಹಾಗಾಗಿ ಅವರು ಎಂತಹ ಕಟ್ಟರ್ ಭಾಗವತರು ಅನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಭಾಗವತರಲ್ಲಿ ಯಾವುದೇ ಭೇದಭಾವವಿರದ ಕಾರಣ ಸುಧಾರಕರಂತೆ ಭಾಗವತರು ಕೂಡ ಸಹಭೋಜನ ಹಾಗೂ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ನಿಂದನೀಯ. ಕಾಲಾ (ಕಾಲಾ ಅಂದರೆ ಎಲ್ಲ ಅನ್ನ ಪದಾರ್ಥಗಳನ್ನು ಒಟ್ಟು ಮಾಡಿ ತಿನ್ನುವುದು, ದ್ವಾಪರ ಯುಗದಲ್ಲೂ ಕೃಷ್ಣ ತನ್ನೆಲ್ಲ ಸಖರಿಗೆ ಕಾಲಾ ತಿನ್ನಿಸುತ್ತಿದ್ದ, ಎಲ್ಲರೂ ತಂದ ಪದಾರ್ಥಗಳನ್ನು ಒಟ್ಟುಮಾಡಿ ಎಲ್ಲರಿಗೂ ಕೈತುತ್ತು ತಿನ್ನಿಸುತ್ತಿದ್ದ ಎಂಬ ಮಾತಿದೆ.) ಭಾಗವತ ಧರ್ಮದ ಮುಖ್ಯ ಅಂಗ. ವಾಕಸಕರ್‌ರೊಡನೆ ಆದ ಪಾಂಗಾರಕರ್ ಅವರ ಸಹಭೋಜನ ಕೂಡ ಕಾಲಾ ಆಗಿತ್ತು. ಹಾಗಿದ್ದ ಮೇಲೆ ಪಾಂಗಾರಕರರು ಅದಕ್ಕಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುವ ಕಾರಣವೇನು? ಈಗ ಪಾಂಗಾರಕರ್ ಅವರು ಕಟ್ಟಾ ಭಾಗವತರು ಅಂದುಕೊಂಡರೂ ಅವರ ವರ್ತನೆ ಪ್ರಾಮಾಣಿಕವಾಗಿದೆ ಎಂದು ಹೇಳಲಾಗದು. ಯಾಕೆ ಗೊತ್ತೇ? ಅವರು ಹೇಳುವುದೊಂದು ಮಾಡುವುದೊಂದು. ‘‘ಅವರು ಅಲ್ಪೋಪಾಹಾರಕ್ಕೆ ಆಮಂತ್ರಿಸಿದ್ದರಿಂದಲೇ ನಾನು ಹೋಗಿದ್ದು’’ ಎಂದು ಪಾಂಗಾರಕರ್ ಅವರು ಹೇಳುತ್ತಾರೆ. ಅಲ್ಪೋಪಾಹಾರಕ್ಕೆ ಯಾವತ್ತೂ ನೀರಿನಲ್ಲಿ ಬೇಯಿಸದಂತಹ (ಹಣ್ಣು-ಹಂಪಲು) ಪದಾರ್ಥಗಳಿರುತ್ತವೆ ಹಾಗೂ ಪರ ಧರ್ಮೀಯರ ಮನೆಯಲ್ಲಿ ಇಂತಹ ಪದಾರ್ಥಗಳನ್ನು ತಿಂದರೆ ಅಧರ್ಮವಾಗುವುದಿಲ್ಲ ಅನ್ನುವುದು ಪಾಂಗಾರಕರ್ ಅವರ ಅಂಬೋಣ. ಆದರೆ ಅವರ ಈ ಮಾತಿನಲ್ಲಿ ಯಾವುದೇ ಅರ್ಥವಿಲ್ಲ.

ಅಲ್ಪೋಪಾಹಾರದ ಪದಾರ್ಥಗಳನ್ನು ಯಾವಾಗ ಹಾಗೂ ಹೇಗೆ ತಿನ್ನಬೇಕು ಅನ್ನುವುದಕ್ಕೆ ಶಾಸ್ತ್ರಾಧಾರಗಳಿವೆ. ಬ್ರಾಹ್ಮಣ ಗಂಡು ಸ್ನಾನ ಮಾಡದೆ ಊಟ ಮಾಡುವುದು ನಿಷಿದ್ಧವಾಗಿದೆ. ಅದರೆ ಕೆಲವೊಂದು ಕಾರಣಗಳಿಂದ ಸ್ನಾನಾದಿಗಳನ್ನು ಮುಗಿಸಲು ತಡವಾಗುವುದಾದರೆ ಊಟದಲ್ಲೇ ಸುಖ ಕಾಣುವ ಬ್ರಾಹ್ಮಣರು ಸಾಯಬಾರದೆಂದೇ ನೀರಿನಲ್ಲಿ ಬೇಯಿಸದ ಪದಾರ್ಥಗಳನ್ನು ತಿನ್ನುವ ಅನುಮತಿ ಇವರಿಗಿದೆ. ಇದರರ್ಥ ಅಬ್ರಾಹ್ಮಣರ ಮನೆಯಲ್ಲಿ ಅಲ್ಪೋಪಾಹಾರದ ಪದಾರ್ಥಗಳನ್ನು ಯಥೇಚ್ಛವಾಗಿ ತಿನ್ನಬೇಕೆಂದೇನಿಲ್ಲ. ಪರಜಾತೀಯರ ಮನೆಯ ಅಲ್ಪೋಪಾಹಾರದ ಪದಾರ್ಥಗಳನ್ನು ತಿನ್ನಲು ಯಾವುದೇ ಅಡ್ಡಿಯಿಲ್ಲ ಎಂದು ಪಾಂಗಾರಕರ್ ಹೇಳುವುದನ್ನು ನಿಜ ಎಂದು ಒಪ್ಪಿಕೊಂಡರೂ ಅಲ್ಪೋಪಾಹಾರ ಅಂದರೆ ನೀರಿನಲ್ಲಿ ಬೇಯಿಸದ ಪದಾರ್ಥಗಳೇ ಅನ್ನುವುದು ಪಾಂಗಾರಕರಿಗೆ ಹೇಗೆ ಗೊತ್ತಿತ್ತು? ಏಕೆಂದರೆ ಬ್ರಾಹ್ಮಣರಲ್ಲಿ ಸಾಯಂಕಾಲದ ಊಟಕ್ಕೂ ಅಲ್ಪೋಪಾಹಾರ ಅನ್ನುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಹೀಗಿರುವಾಗ ಪಾಂಗಾರಕರರಿಗೆ ಅಲ್ಪೋಪಾಹಾರದ ಒಳಾರ್ಥ ಗೊತ್ತಾಗಲಿಲ್ಲ ಅನ್ನುವುದು ಸಾಧ್ಯವೇ ಇಲ್ಲ. ಈ ಒಳಾರ್ಥವನ್ನವರು ಅರ್ಥಮಾಡಿಕೊಂಡಿದ್ದರೆ ಅವರಿಂದ ಇಂತಹ ತಪ್ಪಾಗುತ್ತಿರಲಿಲ್ಲ. ಇರಲಿ, ಗೊತ್ತಿಲ್ಲದೆ ಮಾಡಿರುವಂತಹ ತಪ್ಪು ಅನ್ನಬಹುದಾದರೂ ಊಟಕ್ಕೆ ಕುಳಿತ ಮೇಲಾದರೂ ತಮ್ಮ ತಟ್ಟೆಯಲ್ಲಿ ಏನನ್ನು ಬಡಿಸಿದ್ದಾರೆ ಅನ್ನುವುದನ್ನು ನೋಡಿ ಆ ಮೇಲೆ ಬಾಯಿಗಿಟ್ಟುಕೊಳ್ಳಬಹುದಿತ್ತು.

ತಟ್ಟ್ಟೆಯಲ್ಲಿ ತೊವ್ವೆ, ಅನ್ನ, ಶ್ರೀಖಂಡ ಪೂರಿಗಳಂತಹ ಪದಾರ್ಥಗಳನ್ನು ಬಡಿಸಿದ್ದರು ಎಂದು ಜೋಶಿ ಬರೆಯುತ್ತಾರೆ. ನಾನು ಮೋಸ ಹೋದೆ ಎಂದು ಹೇಳುವ ಪಾಂಗಾರಕರ್ ಅವರು ತಟ್ಟೆಯಲ್ಲಿರುವಂತಹ ಪದಾರ್ಥಗಳನ್ನು ನೋಡಿ ಅಲ್ಲಿಂದ ಎದ್ದು ಹೋಗಬೇಕಿತ್ತು. ಅವರು ಹಾಗೆ ಮಾಡಿದ್ದರೆ ಪ್ರಾಯಶ್ಚಿತ್ತ ತೆಗೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಹಾಗೂ ಅವರ ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು. ಆದರೆ ಹಾಗೆ ಮಾಡದೆ ಕಾಯಸ್ಥರ ಮನೆಗೆ ಹೋದ ಮೇಲೆ ತೊವ್ವೆ ಅನ್ನ ನೋಡಿದ್ದೆ ಮುಗಿಬಿದ್ದ ಬ್ರಾಹ್ಮಣ ‘‘ಹೀಗೇಕೆ ಮಾಡಿದಿರಿ’’ ಎಂದು ಕೇಳಿದಾಗ ನನಗೆ ಮೋಸವಾಯಿತು ಅನ್ನುವ ಇವರ ಮೋಸಕ್ಕೆ ಕೊನೆಯಿಲ್ಲ. ಮೊದಲನೆಯದಾಗಿ ಪಾಂಗಾರಕರ್‌ಅವರು ವಾಕಸಕರ್ ಅವರಲ್ಲಿಗೆ ಊಟಕ್ಕೆ ಹೋಗಬಾರದಿತ್ತು. ಹೋದ ಮೇಲೆ ಪರಿಸ್ಥಿತಿಯನ್ನು ನಿಭಾಯಿಸಿ ತೋರಿಸಬೇಕಿತ್ತು. ಆದರೆ ನೀತಿಮತ್ತೆಯ ಅಧಿಕಾರ ವಹಿಸಿಕೊಂಡಿರುವ ಬ್ರಾಹ್ಮಣರ ಅಪ್ರಾಮಾಣಿಕ ಯುಕ್ತಿವಾದ ಮಾಡುವ ಕೆಟ್ಟ ಅಭ್ಯಾಸ ಕೆಲವೊಮ್ಮೆ ನನಗೆ ಹೇಸಿಗೆ ತರುತ್ತದೆ. ಇದನ್ನೆಲ್ಲ ನೋಡೊ ನನಗೆ ಏನನಿಸುತ್ತದೆ ಗೊತ್ತೇ? ಬಹುಶಃ ಪಾಂಗಾರಕರ್ ಹಾಗೂ ವಾಕಸಕರ್ ಇವರ ನಡುವೆ ಗೆಳೆತನವಿರಬೇಕು. ಹಾಗಾಗಿ ಪಾಂಗಾರಕರ್ ಅವರು ವಾಕಸಕರ್ ಅವರಲ್ಲಿ ಇದಕ್ಕೆ ಮೊದಲು ಕೂಡ ಹೀಗೆ ಊಟ ಮಾಡಿರಬೇಕು. ಜೋಶಿಯವರು ಈ ಗುಟ್ಟನ್ನು ಬಯಲು ಮಾಡಿರದಿದ್ದರೆ ಪಾಂಗಾರಕರ್ ಮೊದಲಿನಂತೆ ಈಗಲೂ ಕೂಡ ಉಂಡ ಅನ್ನವನ್ನು ಚೆನ್ನಾಗಿ ಅರಗಿಸಿಕೊಳ್ಳುತ್ತಿದ್ದರು ಹಾಗೂ ಪ್ರಾಯಶ್ಚಿತ್ತ ತಪ್ಪುತ್ತಿತ್ತು. ಆದರೆ ಜೋಶಿಯವರು ಪಾಂಗಾರಕರ ಅವರ ಸ್ಥಿತಿಯನ್ನು ರಮಝಾನ್ ಫಕೀರನಂತೆ ಮಾಡಿದಾಗ ‘ಮೈ ಜೋ ಕರತಾ ಹೂ, ವಹ್ ಖುದಾ ಭೀ ದೇಖತಾ ಹೈ’ ಅಂದಾಗ ಇವರಿಗೆ ಸೆಗಣಿ ತಿನುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಹಾಗೆ ನೋಡಿದರೆ ಅವರಿಗೆ ಪ್ರಾಯಶ್ಚಿತ್ತದ ಹೆಚ್ಚು ತೊಂದರೆಯಿದ್ದಿರಲಾರದು.

ಪಾಂಗಾರಕರ್ ಅವರಲ್ಲಿ ಆತ್ಮಬಲ ಹಾಗೂ ಮನೋಧೈರ್ಯವಿರದಿದ್ದರಿಂದಲೇ ಇಂತಹ ಪ್ರಸಂಗವನ್ನವರು ಎದುರಿಸಬೇಕಾಯಿತು. ಕೆಲವೇ ಕೆಲವು ಬ್ರಾಹ್ಮಣರಲ್ಲಿ ಧೈರ್ಯವಿರುತ್ತದೆ. ಹಾಗಾಗಿ ಆ ಧೈರ್ಯ ಪಾಂಗಾರಕರ್ ಅವರಲ್ಲಿ ಇಲ್ಲದಿದ್ದರೆ ಅದರಲ್ಲಿ ಅವರ ತಪ್ಪೇನು ಇಲ್ಲ. ಹಗಾಗಿ ಪುಣೆಯ ಕೆಲವು ಬ್ರಾಹ್ಮಣರು ಸೇರಿ ಹೊಸ ಉಪಾಹಾರಗೃಹವನ್ನು ಆರಂಭಿಸಲು ತೋರಿರುವ ಧೈರ್ಯ ನೋಡಿ ನಮಗೆ ಬಹಳ ಸಂತೋಷವಾಗಿದೆ. ಈ ಉಪಾಹಾರ ಗೃಹದ ಬಗ್ಗೆ ಜೂನ್ 7, 1927ರ ‘ಮುಂಬೈ ಟೈಮ್ಸ್’ನ ಪೂನಾದ ವರದಿಗಾರನು ಸಾಕಷ್ಟು ಮಾಹಿತಿ ಕೊಟ್ಟಿದ್ದಾನೆ. ಈ ಉಪಾಹಾರಗೃಹದಲ್ಲಿ ಕೋಳಿ ಮಾಂಸ, ಕುರಿಮಾಂಸ, ಮೊಟ್ಟೆಯ ಪದಾರ್ಥಗಳು ಸಿಗಲಿವೆಯಂತೆ. ಅನಾರೋಗ್ಯವಿರುವ ಕೆಲವು ಬ್ರಾಹ್ಮಣರಿಗೆ ವೈದ್ಯರು ಕೋಳಿ ಇಲ್ಲವೇ ಕುರಿ ಮಾಂಸ ತಿನ್ನಲು ಹೇಳುವಾಗ ಮನೆಯ ವಾತಾವರಣದಿಂದಾಗಿ ಆ ರೋಗಿಗಳು ಮಾಂಸ ತಿನ್ನಲಾಗದೆ ರೋಗ ಗುಣವಾಗದೆ ಸಾಯುವ ಪರಿಸ್ಥಿತಿಗೆ ತಲುಪುತ್ತಾನೆ. ಇಂತಹವರಿಗಾಗಿಯೇ ಈ ಉಪಾಹಾರಗೃಹವನ್ನು ನಿರ್ಮಿಸಲಾಗುತ್ತಿದೆಯಂತೆ. ಈ ಉಪಾಹಾರ ಗೃಹಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿ ಮುಂದೊಂದು ದಿನ ಉತ್ತಮ ರೀತಿಯ ಹೆಂಡವನ್ನೂ ಪೂರೈಸಲಾಗುವುದು ಎಂದು ಆ ವರದಿಗಾರನು ತಿಳಿಸಿದ್ದಾನೆ. ಇಂತಹ ಯೋಜನೆಯನ್ನು ರೂಪಿಸುವ ಬ್ರಾಹ್ಮಣರ ಜಾಣತನವನ್ನು ಮೆಚ್ಚಲೇಬೇಕು. ಒಂದೋ ಬ್ರಾಹ್ಮಣರು, ಹಿಂದೂ ಧರ್ಮದ ಜೀವನಾಡಿಗಳು, ಅವರಿಗೇನಾದರೂ ರೋಗ ತಗುಲಿ ವೈದ್ಯರು ಮಾಂಸ ತಿನ್ನಿ ಎಂದು ಹೇಳಿದರೆ ಕೋಳಿಯೇನು ಕೋಣವನ್ನು ಕೂಡ ಕೊಂದು ಬ್ರಾಹ್ಮಣ ರೋಗಿಯ ಜೀವ ಕಾಪಾಡಿಯಾರು. ಆದರೆ ಅಬ್ರಾಹ್ಮಣರ ಮನೆಯಲ್ಲಿ ಇವರಿಗೆ ಊಟ ನಿಷಿದ್ಧವಿರುವುದರಿಂದ ಅವರು ಬ್ರಾಹ್ಮಣರ ಸೇವೆ ಪಡೆಯುವ ಅವಕಾಶ ಪಡೆಯಲಾರರು ಅನ್ನುವುದು ಇಬ್ಬರ ದೃಷ್ಟಿಯಿಂದಲೂ ದುಃಖದ ಸಂಗತಿ.

ಆದರೆ ಈಗ ಕೆಲವು ಬ್ರಾಹ್ಮಣರೇ ಮುಂದಾಗಿ ರೋಗ ಹಿಡಿದಿರುವ ಬ್ರಾಹ್ಮಣರಿಗೆ ದೀರ್ಘಾಯುಷ್ಯ ಕೊಡಿಸುವ ಘನಂದಾರಿ ದೇಶಕಾರ್ಯ ಆರಂಭಿಸಿದ್ದಕ್ಕೆ ಸಂಪೂರ್ಣ ಬ್ರಾಹ್ಮಣ ಜಾತಿಯೇ ಅವರಿಗೆ ಋಣಿಯಾಗಿರುತ್ತದೆ. ಇನ್ನೊಂದು ದೃಷ್ಟಿಯಿಂದ ಈ ವ್ಯಾಪಾರ ಹೊಗಳುವಂತಹದು ಎಂದೆನಿಸುತ್ತದೆ, ಸಮಾಜದ ಅಸ್ತಿತ್ವಕ್ಕೆ ಸಮಾಜದ ಬಂಧನಗಳು ಅಗತ್ಯವಾಗಿದ್ದರೂ ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಈ ಬಂಧನಗಳು ಅಡ್ಡಿಯಾಗುತ್ತವೆ. ಸಮಾಜದ ಅನಿಸಿಕೆ ಹಾಗೂ ಆ ಸಮಾಜದಲ್ಲಿರುವ ಜನತೆಯ ಅನಿಸಿಕೆ ಒಂದೇ ಆಗಿರುವವರೆಗೆ ಯಾವುದೇ ತೊಂದರೆ ತಲೆದೋರುವುದಿಲ್ಲ. ಆದರೆ ಅನಿಸಿಕೆಗಳಲ್ಲಿ ವಿಭಿನ್ನತೆ ಕಂಡುಬಂದಾಗ ಮಾತ್ರ ವೈಮನಸ್ಸು ಆರಂಭವಾಗುತ್ತದೆ. ಹಾಗೂ ಜನತೆಗೆ ಅಗತ್ಯವಿರುವ ಸ್ವಾತಂತ್ರ ಸಿಗದಾದಾಗ ಅದರ ನೈತಿಕ ಪರಿಣಾಮ ಇಬ್ಬರಿಗೂ ಅನಿಷ್ಟವಾಗಿರುತ್ತದೆ. ಅದರಲ್ಲೂ ಸಾಮಾಜಿಕ ಬಂಧನಗಳಿಂದ ಮನುಷ್ಯನ ಉಸಿರು ಕಟ್ಟಿದಂತಾಗಿ ತಾನು ಮಾಡಬೇಕೆಂದಿರುವ ಕೆಲಸಗಳಿಗೆ ಸಮಾಜದಿಂದ ಅನುಮತಿ ಸಿಗದಾದಾಗ ಅವನದನ್ನು ಕದ್ದುಮುಚ್ಚಿ ಮಾಡುತ್ತಾನೆ.

ಹೀಗೆ ಕದ್ದುಮುಚ್ಚಿ ಕೆಲಸ ಮಾಡುವ ಅಭ್ಯಾಸವಾದಾಗ ಆತ ಡಾಂಭಿಕನಾಗುತ್ತಾನೆ. ಆತನ ವರ್ತನೆ ಬದಲಾಗುತ್ತದೆ. ಸುಳ್ಳು ಹೇಳುತ್ತಾನೆ ಹಾಗೂ ಒಟ್ಟಿನಲ್ಲಿ ಆತ ಅಪ್ರಾಮಾಣಿಕನಾಗುತ್ತಾನೆ. ಬ್ರಾಹ್ಮಣ ಸಮಾಜದ ಬಂಧನಗಳು ಸಾಕಷ್ಟು ಕಟ್ಟುನಿಟ್ಟಾಗಿರುವುದರಿಂದ ಮೇಲೆ ಹೇಳಿದಂತಹ ಜನರೇ ಇವರಲ್ಲಿ ಹೆಚ್ಚಾಗಿ ಕಾಣಬಹುದು. ಎಲ್ಲರೆದುರು ತರಕಾರಿ, ಹಣ್ಣುಹಂಪಲು ತಿನ್ನುವ ಹಾಗೂ ಕದ್ದು ಮುಚ್ಚಿ ಮಾಂಸ ತಿನ್ನುವ ‘ಪಾಪಿ’ ಜನರೇ ಬ್ರಾಹ್ಮಣರಲ್ಲಿ ಹೆಚ್ಚು. ಈ ಉಪಾಹಾರಗೃಹದಿಂದ ಕದ್ದುಮುಚ್ಚಿ ತಿನ್ನುವ ಜನರ ಸಂಖ್ಯೆ ಕಡಿಮೆಯಾದೀತು. ಹಾಗೆಂದೇ ಇದರ ಮಾಲಕರಿಗೆ ಧನ್ಯವಾದಗಳನ್ನರ್ಪಿಸಬೇಕು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top