ಹಿಟ್ಲರ್‌ನಿಂದ ಶಾ ವರೆಗೆ: ಮಾತಿನ ಕಥನ-ಮಥನ | Vartha Bharati- ವಾರ್ತಾ ಭಾರತಿ

---

ಹಿಟ್ಲರ್‌ನಿಂದ ಶಾ ವರೆಗೆ: ಮಾತಿನ ಕಥನ-ಮಥನ

ಈಗ ಮಾಧ್ಯಮಗಳ ಮಿತಿ ಮತ್ತು ವ್ಯಾಪ್ತಿ ಹೆಚ್ಚಿದ ಮೇಲೆ ಹಾಗೂ ಎಲ್ಲರೂ ವೇದಿಕೆಯೇರುವ ಅವಕಾಶ ಬಂದಿರುವುದರಿಂದ ಯಾರು ಏನು ಬೇಕಾದರೂ ಹೇಳಬಹುದು ಮತ್ತು ಬರೆಯಬಹುದೆಂಬ ಅಲಿಖಿತ ನ್ಯಾಯ ನಿರ್ಮಾಣಗೊಂಡಿದೆ. ಇದು ಕಾರಣವಾಗಿ ಬಹುತೇಕ ನಾಯಕರು ಅವಿವೇಕವನ್ನೇ ಬಂಡವಾಳವಾಗಿಟ್ಟುಕೊಂಡು ಮಾತನಾಡುತ್ತಾರೆ; ಅರಳಿಸುವ ಬದಲು ಕೆರಳಿಸುತ್ತಾರೆ; ಹುರಿದುಂಬಿಸುವ ಬದಲು ಉರಿತುಂಬಿಸುತ್ತಾರೆ.


ಹಿಟ್ಲರ್ ತನ್ನ ಆತ್ಮ ಚರಿತ್ರೆ ‘ಮೈನ್ ಕಾಂಫ್’ (ನನ್ನ ಹೋರಾಟ) ಕೃತಿಯಲ್ಲಿ ಹೇಳಿದ್ದರಲ್ಲಿ ಬಹುಪಾಲು ಸಾಧಾರಣವಾದವು. ಅವನ ವರ್ಣರಂಜಿತ, ಮದೋನ್ಮತ್ತ ಮತ್ತು ದುರಂತ ಬದುಕಿನಿಂದಾಗಿ ಅವನು ಜನರ ನೆನಪಿನಲ್ಲಿ ಉಳಿದಿದ್ದಾನೆ. ‘ಹಿಟ್ಲರ್‌ನಂತೆ’ ಎಂಬುದು (‘ದುರ್ಯೋಧನನಂತೆ’ ಎಂಬ ಹಾಗೆ) ಒಂದು ನುಡಿಗಟ್ಟಾಗಿದೆ.

ಸಂದರ್ಭೋಚಿತವಾಗಿ ಅವನ ಈ ಮಾತನ್ನು ನೆನಪಿಸಬಹುದು: ‘‘ಪ್ರಚಾರದ ತುರ ಹಾಗೂ ಸತತ ಬಳಕೆಯಿಂದ ಯಾರೇ ಆಗಲಿ, ಜನತೆಯು ಸ್ವರ್ಗವನ್ನು ನರಕವಾಗಿ ಅಥವಾ ಅತೀ ನೀಚ ಬದುಕನ್ನು ಸ್ವರ್ಗವಾಗಿ ಕಾಣುವಂತೆ ಮಾಡಬಹುದು’’ (ಇಂಗಿಷ್‌ನಲ್ಲಿ ಅದು ಹೀಗಿದೆ: ""By the skilful and sustained use of propaganda, one can make a people see even heaven as hell or an extremely wretched life as paradise'').
ಮಾತಿನ ಮೂಲಕ ಯಾವ ಜಾದೂವನ್ನೂ ಸಾಧಿಸಬಹುದು ಎಂಬುದು ಈ ಮಾತಿನ ಸೂಚನೆ. ಮಾತು ಕೂಡಾ ಒಂದು ಆಯುಧ. ಸಜ್ಜನರ ಕೈಯಲ್ಲಿ ಅದು ಲೋಕೋಪಕಾರಕ್ಕೆ ಬಳಸಲ್ಪಟ್ಟರೆ ದುರ್ಜನರ ಕೈಯಲ್ಲಿ ಅದು ಲೋಕವಿನಾಶಕ್ಕೆ ಬಳಸಲ್ಪಡುತ್ತದೆ. ಮಾತನ್ನು ಕೇಳಿದರೆ ಸಾಲದು; ಅದು ಅರ್ಥವಾಗಬೇಕು. ಇಲ್ಲವಾದರೆ ಅದರ ವಾಚ್ಯಾರ್ಥವಷ್ಟೇ ತಲುಪಿ ವೈಪರೀತ್ಯಕ್ಕೆ ದಾರಿ ಮಾಡಿಕೊಡಬಹುದು. ಕೈಲಾಗದವರಿಗೂ ಮಾತೇ ಬಂಡವಾಳವಾಗುವ ನಿದರ್ಶನಗಳಿವೆ: ‘ಮಾತೇ ಜ್ಯೋತಿರ್ಲಿಂಗ ಬೃಹನ್ನಳೆಗೆ’ ಎಂಬ ಕವಿ ಎ.ಕೆ.ರಾಮಾನುಜಂ ಅವರ ಮಾತನ್ನೂ ಇಲ್ಲಿ ನೆನಪಿಸಬಹುದು.

ಮಾತನಾಡಿದವರು ಅದರ ಅನ್ವಯಿಕೆಯನ್ನು ಮೊದಲೇ ಗಮನಿಸಿದರೆ ಉತ್ತಮ. ಇಲ್ಲವಾದರೆ ಮಾತು ವಿಪರೀತಾರ್ಥವನ್ನು ನೀಡಬಹುದು; ಮತ್ತು ದುಷ್ಪರಿಣಾಮವನ್ನು ಮಾಡಬಹುದು. ಅದಕ್ಕೇ ಹಿರಿಯರು ಹೇಳಿದ್ದು: ಮಾತು ಆಡಿದರೆ ಆಯಿತು; ಮುತ್ತು ಒಡೆದರೆ ಹೋಯಿತು. ತಾನಾಡುವ ಮಾತಿನ ಅರ್ಥ, ಸಂಕೇತ, ಪರಿಣಾಮ ಗೊತ್ತಿಲ್ಲದಿದ್ದರೆ ಅಂತಹ ಸಂದರ್ಭದಲ್ಲಿ ಮೌನವಾಗುಳಿಯುವುದು ಒಳಿತು. ಆದ್ದರಿಂದ ಕೆಲವೊಮ್ಮೆ ಮೌನವಾಗಿರುವುದೇ ನಿಜವಾದ ಹೋರಾಟವಾಗಿರುತ್ತದೆ. (ಮಾತು ಮುತ್ತು, ಮೌನ ಬಂಗಾರ ಎಂಬ ಮಾತು ಇದನ್ನೇ ಸಂಕೇತಿಸುತ್ತದೆ ಅಲ್ಲವೇ?) ಅಗಸ ಹೇಳಿದ ಒಂದು ಮಾತಿಗೆ ಶ್ರೀರಾಮನು ಸೀತೆಯನ್ನು ವನಾಂತರಕ್ಕೆ ಕಳುಹಿಸಿದ. ಕೃಷ್ಣನ ಶಂಖಧ್ವನಿ ಧರ್ಮರಾಯನ ಸತ್ಯವಚನವನ್ನೂ ಕೇಳದಂತೆ ಮಾಡಿ ದ್ರೋಣನ ಸಾವಿನಲ್ಲಿ ಪರಿಸಮಾಪ್ತಿಯಾಯಿತು. ಹೀಗೆ ಅನೇಕ ಸಂದರ್ಭಗಳಲ್ಲಿ ಮಾತು ತನ್ನದಲ್ಲದ ತಪ್ಪಿಗೆ ಎರವಾಗುವ ಸಂದರ್ಭವನ್ನು ಮಾತು ಸೃಷ್ಟಿಮಾಡುತ್ತದೆ.

‘ಯೋಚಿಸಿ ಮಾತನಾಡು’ ಎಂಬುದನ್ನು ಇಂದಿನ ಸಂದರ್ಭದಲ್ಲಿ ಜನನಾಯಕರೆನಿಸಿದವರು ‘ಮಾತನಾಡಿ ಯೋಚಿಸು’ ಎಂದು ವಿಲೋಮವಾಗಿ ತಿಳಿದುಕೊಂಡಂತಿದೆ. ಜನಪ್ರತಿನಿಧಿಗಳೆಂಬವರು ಸಂಸತ್ತಿನಲ್ಲಿ ಮತ್ತು ಶಾಸನಸಭೆಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ವೇದಿಕೆಗಳಲ್ಲಿ ಬಹಿರಂಗವಾಗಿ ಹೀಗೆ ಯೋಚನಾರಾಹಿತ್ಯ ದುರ್ನುಡಿಗಳನ್ನಾಡುವುದನ್ನು ಕೇಳುತ್ತೇವೆ. ಮಾತನಾಡಿದ ಮೇಲೂ ಅದರ ದುಷ್ಪರಿಣಾಮಗಳನ್ನು ಕಂಡ ಮೇಲೂ ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುವವರಿದ್ದಾರೆ. ತಾವು ಅಂತಹ ಮಾತನ್ನು ಹೇಳಲೇ ಇಲ್ಲವೆಂಬ ಸುಳ್ಳು ಸಮರ್ಥನೆಯಾದರೂ ಆಗಬಹುದು. ಏಕೆಂದರೆ ಯಾವುದೇ ಮಾತು ಮಾಧ್ಯಮದಲ್ಲಿ ಸರಿಯಾಗಿ ವರದಿಯಾದರೆ ಅದು ಅದೃಷ್ಟ. ಈಚೆಗೆ ಸನ್ಮಾನ್ಯ ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆಯವರು ಆಡಿದ ಮಾತುಗಳನ್ನು ಜೀರ್ಣಿಸಿಕೊಳ್ಳಲು ಅವರ ಪಕ್ಷಕ್ಕೇ ಅಸಾಧ್ಯವಾಯಿತು.

ದೇವರು, ಜಾತಿ, ಧರ್ಮ, ಸಂವಿಧಾನ, ಮುಂತಾದ ಆದರಣೀಯ ಅಥವಾ ಸೂಕ್ಷ್ಮ ಸಂಗತಿಗಳ ಕುರಿತು ಮಾತನಾಡುವಾಗಲೂ ನಮ್ಮ ನಾಯಕರು ವಿಚಾರಿಸುವುದಿಲ್ಲ ಹಾಗೂ ಯೋಚಿಸುವುದಿಲ್ಲ ಎಂದಾದರೆ ಅಂತಹ ವ್ಯಕ್ತಿ ತನ್ನ ಮಾತಿಗೆ ತಾನು ಹೊಣೆಯಲ್ಲವೆಂಬ ಫಲಕವನ್ನು ಎದೆಗೆ ಹಚ್ಚಿಕೊಂಡೇ ಮಾತನಾಡುವುದು ಉಚಿತ. ಮುಖಂಡರು ಬೆಂಕಿಹಚ್ಚುವ ಮಾತುಗಳನ್ನು ಗರಡಿಯಲ್ಲಿ ಪಳಗಿ ಬಂದಂತೆ ಹೇಳುತ್ತಿರುತ್ತಾರೆ. ಅವರಿಗೆ ಶಬ್ದದ ಲಜ್ಜೆಯೇ ಇರುವುದಿಲ್ಲ. ಮತ್ತು ಅನೇಕ ಬಾರಿ ಜನರು ಮೆಚ್ಚುವುದು ಇಂತಹ ಡಾನ್ ಕ್ವಿಕ್ಸೆಟ್‌ಗಳನ್ನೇ. ಹಿಂದೆಲ್ಲ ಮಾಧ್ಯಮಗಳಲ್ಲಿ ವರದಿಯಾಗುತ್ತದೆಂಬ ಭಯ, ಹಿಂಜರಿಕೆಯಿಂದಲಾದರೂ ಮಾತು ಒಂದಷ್ಟು ವಿವೇಕವನ್ನು, ಅರ್ಥವನ್ನು ಸಂಪಾದಿಸುತ್ತಿತ್ತು. ಆದರೆ ಈಗ ಮಾಧ್ಯಮಗಳ ಮಿತಿ ಮತ್ತು ವ್ಯಾಪ್ತಿ ಹೆಚ್ಚಿದ ಮೇಲೆ ಹಾಗೂ ಎಲ್ಲರೂ ವೇದಿಕೆಯೇರುವ ಅವಕಾಶ ಬಂದಿರುವುದರಿಂದ ಯಾರು ಏನು ಬೇಕಾದರೂ ಹೇಳಬಹುದು ಮತ್ತು ಬರೆಯಬಹುದೆಂಬ ಅಲಿಖಿತ ನ್ಯಾಯ ನಿರ್ಮಾಣಗೊಂಡಿದೆ. ಇದು ಕಾರಣವಾಗಿ ಬಹುತೇಕ ನಾಯಕರು ಅವಿವೇಕವನ್ನೇ ಬಂಡವಾಳವಾಗಿಟ್ಟುಕೊಂಡು ಮಾತನಾಡುತ್ತಾರೆ; ಅರಳಿಸುವ ಬದಲು ಕೆರಳಿಸುತ್ತಾರೆ; ಹುರಿದುಂಬಿಸುವ ಬದಲು ಉರಿತುಂಬಿಸುತ್ತಾರೆ. ದಾಸಕೀರ್ತನೆ ‘ನಾಯಕರು’ ಎಂಬ ಪದದ ಮೊದಲು ‘ಡೊಂಕು ಬಾಲದ’ ಎಂಬ ಪ್ರಶಸ್ತಿಯನ್ನು ನೀಡಿದ್ದು ಈ ಕಾರಣಕ್ಕೇ ಇರಬಹುದು.

ನಮ್ಮ ರಾಜಕೀಯ ನಾಯಕರು ಮಾತಿನ ಅವಸರದಲ್ಲಿ ತಮ್ಮ ಪಕ್ಷಕ್ಕೇ ಮತ್ತು ತಮ್ಮ ಮುಖಂಡರುಗಳಿಗೇ ಇರಿಸುಮುರಿಸುಂಟುಮಾಡಿದ್ದು ಈಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ರಣನೀತಿಗನುಸಾರವಾಗಿ ಸಹಜವಾಗಿಯೇ ಎದುರಾಳಿಗಳು ಬಳಸಿಕೊಳ್ಳುತ್ತಾರೆ. ಇಂತಹ ದಿಕ್ಕುದೆಸೆ ತಪ್ಪಿದ ಮಾತುಗಳನ್ನು ಅಚಾತುರ್ಯವೆಂದು ಪರಿಗಣಿಸಬೇಕೇ ವಿನಾ ಅವನ್ನು ಆಧರಿಸಿ ಟೀಕಿಸುವುದೂ ಅಥರ್ಹೀನ. ದೇಶದ ಸದ್ಯದ ರಾಜಕೀಯವನ್ನು ಗಮನಿಸಿದರೆ ಹಿಟ್ಲರ್ ಹೇಳಿದ ನೀತಿಯನ್ನು ಎಲ್ಲರೂ ಕಾಯಾ ವಾಚಾ ಮನಸಾ ಅನುಸರಿಸುತ್ತಿದ್ದಾರೆಂದು ಸ್ಪಷ್ಟವಾಗುತ್ತದೆ. ಬ್ರಾಮ್ ಸ್ಟೋಕರ್ ಎಂಬವನು ಬರೆದ ‘ಡ್ರಾಕುಲಾ’ ಎಂಬ ಸೈತಾನನ ಕಥೆಗಳಲ್ಲಿ ಸೈತಾನನನ್ನು ಆರಾಧಿಸುವ ಒಂದು ಗುಂಪೇ ಇರುತ್ತದೆ. ಅವರಿಗೆ ಸಜ್ಜನರ ನಾಶವೇ ಗುರಿ; ಬಲಿಪಶುಗಳ ರಕ್ತವೇ ತೀರ್ಥ. ಹಿಟ್ಲರ್‌ನನ್ನು ಆರಾಧಿಸುವ, ಅನುಸರಿಸುವ ಗುಂಪೆಂಬುದಿಲ್ಲವಾದರೂ ಪರೋಕ್ಷವಾಗಿ ಅವನ ನೀತಿಯನ್ನು ಕಡಪಡೆದು ವ್ಯವಹರಿಸಿದವರು, ವ್ಯವಹರಿಸುತ್ತಿರುವವರು ಎಲ್ಲೆಡೆ ಇದ್ದಾರೆ. ಇಂತಹ ಮಂದಿ ತಮಗೆ ಬೇಕಾದವರನ್ನು, ಬೇಕಾದದ್ದನ್ನು ಎಲ್ಲಿಂದ ಅಂದರೆ ಅಲ್ಲಿಂದ ಅನಾಮತ್ತಾಗಿ ಎತ್ತಿಕೊಳ್ಳುತ್ತಾರೆ. ಎಡಪಂಥೀಯನಾಗಿ, ನಾಸ್ತಿಕನಾಗಿ ಬದುಕಿದ ಮತ್ತು ಸತ್ತ ಭಗತ್ ಸಿಂಗ್ ಅಗತ್ಯವಾದಾಗ ದೇಶಭಕ್ತನಾಗುತ್ತಾನೆ; ಉಗ್ರ ರಾಷ್ಟ್ರೀಯವಾದಿಯಾಗುತ್ತಾನೆ. ಸ್ವಾಮಿ ವಿವೇಕಾನಂದರು ದರಿದ್ರನಾರಾಯಣನ ಆರಾಧಕರಾಗಿ, ದಲಿತರ ವಿಮೋಚಕರಾಗಿ ಭಾರತೀಯ-ಅದರಲ್ಲೂ ಹಿಂದೂ ಸಮಾಜದ ಹುಳುಕುಗಳನ್ನು ಬಯಲಿಗೆಳೆದರೂ ಅವರನ್ನು ಭಾರತೀಯ ಸಮಾಜದ ಮತ್ತು ಹಿಂದೂ ಧರ್ಮದ ಪವಾಡಪುರುಷರಂತೆ, ರಥವಾಹಕರಂತೆ ಚಿತ್ರಿಸಲಾಗುತ್ತದೆ.

ಈ ಮಟ್ಟವನ್ನು ತಲುಪಲಾಗದವರು ತೀರಾ ಸಾಮಾನ್ಯವಾಗಿ ತರ್ಕಿಸುವುದುಂಟು. ಇದಕ್ಕೆ ಭರ್ಜರಿ ಉದಾಹರಣೆಯೆಂದರೆ ಇತ್ತೀಚೆಗೆ ಎಡಪಂಥ, ಲೆನಿನ್ ಮತ್ತು ಕುವೆಂಪುವನ್ನು ಅರ್ಥೈಸಿದ ಬಗೆ. ತ್ರಿಪುರಾದಲ್ಲಿ ಎರಡು ದಶಕಗಳ ಆನಂತರ ಎಡಪಕ್ಷಗಳನ್ನು ಸೋಲಿಸಿ ಭಾಜಪವು ಅಧಿಕಾರಕ್ಕೆ ಬಂತು. ಅವರು ಅಧಿಕಾರಕ್ಕೆ ಬರಲು ಪೋಣಿಸಿದ ಸೂತ್ರವೆಂದರೆ ಆಗಲೇ ಉಲ್ಲೇಖಿಸಿದ ಹಿಟ್ಲರ್‌ನ ಹೋರಾಟ. ನುಣುಪು ಕುಂಕುಮ ಮಾತು. ಎಡಪಕ್ಷಗಳು ತಮ್ಮ ಬಲವನ್ನು ಸ್ವಲ್ಪ ಹೆಚ್ಚೇ ನಂಬಿಕೊಂಡು ಜನರಿಂದ ದೂರವಾದವು ಎನ್ನುವುದಕ್ಕಿಂತಲೂ ದೇಶಭಕ್ತಿಯ, ರಾಷ್ಟ್ರೀಯತೆಯ ಹೆಸರಿನಲ್ಲಿ ಮಾತು ಮಾಡಬಲ್ಲ ಮರುಳನ್ನು ಗಮನಿಸದಾದರು ಎಂದು ಹೇಳಬೇಕು. ಸೆಮಿನಾರು ಹಾಲುಗಳಲ್ಲಿ ಚರ್ಚಿತವಾಗುವ ಪುಸ್ತಕದ ಬದನೆಕಾಯಿ ಮತದಾರರ ಮಡಕೆಯಲ್ಲಿ ಬೇಯುವುದಿಲ್ಲವೆಂಬುದು ಎಡಪಕ್ಷಗಳಿಗೆ ಈ ಸೋಲಿನಿಂದಲಾದರೂ ಮನದಟ್ಟಾಗಬೇಕು. ಈ ಗೆಲುವಿನ ತಕ್ಷಣದ ಪ್ರತಿಕ್ರಿಯೆಯೆಂಬಂತೆ ಭಾಜಪ ಬೆಂಬಲಿಗರು ಎಡಪಕ್ಷಗಳು ಸ್ಥಾಪಿಸಿದ ಲೆನಿನ್ ಅವರ ಪ್ರತಿಮೆಯನ್ನು ಉರುಳಿಸಿದರು. ಉರುಳಿಸುವುದರಲ್ಲಿ ಅವರು ಎಂದಿಗೂ ನಿಷ್ಣಾತರೇ- ಬಾಬರಿ ಮಸೀದಿಯ ಉರುಳುವಿಕೆ ಒಂದು ಪ್ರಶಸ್ತಿಪತ್ರ.

ಲೆನಿನ್ ಒಬ್ಬ ಜಾಗತಿಕ ಮಟ್ಟದ ಚಾರಿತ್ರಿಕವಾಗಿ ಉಳಿದ, ಉಳಿಯುವ ಅಸಾಮಾನ್ಯ ತಾತ್ವಿಕ ವ್ಯಕ್ತಿ. ಹೇಗೆ ಭಾರತದ ಬುದ್ಧ, ಬಸವಣ್ಣ, ಗಾಂಧಿಗಳ ವಿಗ್ರಹಗಳು, ಮೂರ್ತಿಗಳು ವಿದೇಶದಲ್ಲಿದ್ದರೆ ನಾವು ಹೆಮ್ಮೆ ಪಡುತ್ತೇವೋ ಹಾಗೆಯೇ ಲೆನಿನ್‌ನ ಕುರಿತು ಜಗತ್ತು ಹೆಮ್ಮೆ ಪಡುವಂತೆ ಈ ಮೂರ್ತಿಯಿತ್ತು. ಆದರೆ ಕೆಲವು ಕೊಳಕು ಮನಸ್ಸುಗಳು ಈ ಕೃತ್ಯದಲ್ಲಿ ತೊಡಗಿದವು. ಲೆನಿನ್ ಕುರಿತು ಅಧಿಕಾರಸ್ಥ ರಾಜಕಾರಣಿಗಳು ಆಡಿದ, ಆಡುವ ಮಾತುಗಳು ಈ ಮತಿಭ್ರಮಿತರಿಗೆ ಭಗವದ್ಗೀತೆಯಾಯಿತು. ಅದರ ಸೊಕ್ಕಿಗೆ ಲೆನಿನ್ ಮೂರ್ತಿಯ ಮೂಲಕ ಒಂದು ವೈಚಾರಿಕ ಹಲ್ಲೆ ಯಶಸ್ವಿಯಾಗಿ ಪೂರ್ಣಗೊಂಡಿತು. (ಈ ಕೃತ್ಯವನ್ನು ಖಂಡಿಸಿದ ರಾಮಚಂದ್ರ ಗುಹಾ ಅವರಂತಹ ಚಿಂತಕರೂ ಲೆನಿನ್ ಕುರಿತು ತಪ್ಪುಅಭಿಪ್ರಾಯ ಬರುವಂತಹ ಮತ್ತು ಚರಿತ್ರೆಗೆ ವಿರುದ್ಧವಾದ ಮಾತುಗಳನ್ನಾಡಿದರು- ಆ ವಿಚಾರ ಬೇರೆ.) ಇದನ್ನು ಸರಿಪಡಿಸುವ ಗೋಜಿಗೆ ಭಾಜಪವಾಗಲೀ ರಾಜ್ಯ, ಕೇಂದ್ರ-ಸರಕಾರವಾಗಲೀ ಪ್ರಯತ್ನಿಸಲಿಲ್ಲ. ಪ್ರಾಯಃ ಮತ್ತೆ ಎಡಪಕ್ಷಗಳು ಗೆದ್ದಾಗಬೇಕೇನೋ?
ಇಂತಹ ಲೆನಿನ್ ಅವರ ಪ್ರತಿಮೆಯನ್ನು ತಮ್ಮ ಪಕ್ಷದ ಮೂರ್ಖರೇ ಕೆಡವಿದ್ದನ್ನು ಸಮರ್ಥಿಸಿಕೊಂಡ ಮತ್ತು ಆ ಕುರಿತು ಏನೂ ಮಾಡದ ಆ ಪಕ್ಷಾಧ್ಯಕ್ಷ ಅಮಿತ್ ಶಾ ಮೊನ್ನೆ ಕರ್ನಾಟಕಕ್ಕೆ ಬಂದು ಕುವೆಂಪು ಅವರ ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿಕೊಟ್ಟರು.

ಮತ್ತು ಕುವೆಂಪು ಅವರ ವಿಶ್ವಮಾನವತ್ವದ ಬೆಸುಗೆಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೆನಪಿಸಿ ಎಚ್ಚರಿಸಿದರು. ಭೂತ ಭಗವದ್ಗೀತೆಯನ್ನು ಉದ್ಗರಿಸಿದ ನಿದರ್ಶನವಿದು. ಏಕೆಂದರೆ ಅಮಿತ್ ಶಾ ಕುವೆಂಪು ಅವರ ಅಭಿಮಾನಿಯೇನಲ್ಲ; ಅವರನ್ನು ಗೊತ್ತಿದ್ದಿರಲಿಕ್ಕಿಲ್ಲ. ಒಕ್ಕಲಿಗರನ್ನು ಮೆಚ್ಚಿಸಲು ಅವರನ್ನು ಕರ್ನಾಟಕದ ಧುರೀಣರು ಕುವೆಂಪುವಿನ (ಪ್ರತಿಮೆಯ!) ಪರಿಚಯಿಸಿದರು. ಇರಲಿ; ಇಂತಹ ಮಂದಿ ಕುವೆಂಪು ಅವರ ಲೆನಿನ್ ಕವಿತೆಯನ್ನು ಓದಬೇಕು. ಮಹಾಛಂದಸ್ಸಿನ ಈ ಕವಿತೆ ಹೀಗಿದೆ:
ಧಮನಿಯಲಿ ಬಿಸಿನೆತ್ತರುಕ್ಕದೆ ನೆನೆಯಲಾರೆ
ನಿನ್ನಂ, ಲೆನಿನ್! ನಿನ್ನ ಹೆಸರದು ಸಿಡಿಲ್ ಸದ್ದು
ದೊರೆಗಿವಿಗೆ; ನಿನ್ನ ಸಮತಾಬೋಧೆ ಸಿಡಿಮದ್ದು
ನರನ ಸಂಗ್ರಹ ಬುದ್ಧಿ ಸ್ವಾರ್ಥತೆಯನುರಿದೋರೆ
ದಹಿಸಿ, ನಿಃಸ್ವಾರ್ಥತೆಯ ಬೆಂಕಿಯಿಂ ಹೃತ್ಕುಂಡ
ಸರ್ವದಾ ಪ್ರಜ್ವಲಿಸುವಂತೆಸಗೆ. ಜಮದಗ್ನಿ
ಸುತನಂತೆ ನೀನು ಪಾರ್ಥಿವ ಕುಲಕೆ ಬಡಬಾಗ್ನಿ!
ದುಡಿವ ದೀನರ ದೈವವನ್ಯರ್ಗೆ ಯಮದಂಡ!
ಗೆಯ್ಯುವರ್ಗೇನಿಲ್ಲ, ಕುಳಿತುಂಬರಿಗೆ ಬೆಲ್ಲ;
ಮುಳ್ಳು ನೋವಾಳಿಂಗೆ, ಕಂಪು ಹೂವೊಡೆಯಂಗೆ;
ಗೋಳವಗೆ, ಸೊಂಪಿವಗೆ. ಈ ತರತಮವನೆಲ್ಲ
ಮುರಿಯೆ ಬಹನಲ್ಲಲ್ಲಿ ಕಲ್ಕಿ. ರಕ್ತದ ಗಂಗೆ
ಸಿರಿನಾಲದಿಂ ಮರಳಿ ಬಡತನದೊಣಗು ಮೈಗೆ
ಹರಿದಕ್ಕೆ ದೊರೆಗಳಸಿ ಕೂಲಿರೈತರ ಕೈಗೆ!

 (ಇದನ್ನು ಬಿಡಿಯಾಗಿ ಓದಿದೆ; ಈ ಕವಿತೆ ಯಾವ ಸಂಕಲನದಲ್ಲಿದೆಯೆಂದು ಗೊತ್ತಾಗಿಲ್ಲ.) ಈ ಕವಿತೆಯಲ್ಲಿ ಲೆನಿನ್ ಅವರ ವ್ಯಕ್ತಿತ್ವವನ್ನು ಕುವೆಂಪು ವಿಚಾರಪೂರ್ಣವಾಗಿ, ಭಾವೋನ್ಮಾದವಿಲ್ಲದೆ ನಿರ್ವಿಕಾರವಾಗಿ ಚಿತ್ರಿಸಿದ್ದಾರೆ. ಭಾರತೀಯ ಪುರಾಣಗಳ ಪ್ರತಿಮೆಗಳಿವೆ. ಝಾರ್‌ದೊರೆಗಳನ್ನು ಭಸ್ಮಗೊಳಿಸಿದ ಕೋಪದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸಿ ಬಡವರ ಬಾಳನ್ನು ಬೆಳಗಿಸಿದ ಒಂದು ತತ್ವಚಿಂತನೆಯಿದೆ. ಕುವೆಂಪು ಅವರಿಗೆ ಅಮಿತ್ ಶಾ ಮಾಡಬಹುದಾದ ಒಂದೇ ಒಂದು ಗೌರವವೆಂದರೆ ಕುವೆಂಪು ಎಂಬ ಮಹಾಮಾನವತಾವಾದಿ ದಾರ್ಶನಿಕ ಗೌರವಿಸಿದ ಲೆನಿನ್‌ರನ್ನು ಖಂಡಿಸಿದ ಮಾತನ್ನು ಹಿಂಪಡೆಯುವುದು; ಅವರ ಪ್ರತಿಮೆಯನ್ನು ಮೊದಲಿದ್ದಲ್ಲೇ ನಿಲ್ಲಿಸುವುದು. ಅದು ಎಡ ಪಕ್ಷಗಳ ವಿಜಯವಾಗುವುದಿಲ್ಲ; ಬದಲಾಗಿ ಮೌಲ್ಯಗಳನ್ನು ಗೌರವದಿಂದ ಕಾಣುವ ಧೀರೋದಾತ್ತತೆಯ ಧ್ಯೇಯಕಥನವಾಗುತ್ತದೆ.

ಪತನಗೊಳ್ಳುತ್ತಿರುವ ಮಾತಿನ ಮೌಲ್ಯಗಳ ನಡುವೆ ಪ್ರಾಯಃ ಇದು ಸಾಧ್ಯವಾದರೆ ಅಯೋಧ್ಯೆಯೂ ಸರಿಯಾಗಬಹುದು. ಮಾತು ಸಾಧಿಸಬಹುದಾದ್ದು ಬಹಳವಿದೆ. ಮಾತು ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಶಲಾಕೆಯಂತೆ, ಲಿಂಗ ಅಹುದಹುದೆನ್ನುವಂತಿರದಿದ್ದರೂ ಸರಿಯೆ; ಬೆಂಕಿಯನ್ನು ವಿಷವನ್ನು ಕಾರದಿದ್ದರೆ, ಮಸಿ ಬಳಿಯದಿದ್ದರೆ ಸಾಕು. ಅದೇ ವರ; ಅದೇ ಅನುಗ್ರಹ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top