---

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಮಹಾಡ್‌ನ ಧರ್ಮಯುದ್ಧ ಹಾಗೂ ದಲಿತರ ಜವಾಬ್ದಾರಿ

ಭಾಗ-3

ನಾವು ಸೂಚಿಸಿರುವ ಎರಡು ಉಪಾಯಗಳನ್ನು ಕೇಳಿ ಮೇಲ್ಜಾತಿಯ ಜನ ನಮ್ಮನ್ನು ಅವಿಚಾರಿಗಳಂದಾರು ಅನ್ನುವುದನ್ನು ನಾವು ಬಲ್ಲೆವು. ಆದರೆ ದಲಿತರು ಈ ಉಪಾಯಗಳನ್ನು ಬಳಸದೆ ಬೇರೆ ಮಾರ್ಗವಿದೆಯೇ? ಇದಲ್ಲದಿದ್ದರೆ ಅವರೇನು ಮಾಡಬೇಕು? ಅನ್ನುವ ಪ್ರಶ್ನೆಯನ್ನು ನಾವು ಮೇಲ್ಜಾತಿಯ ಜನರನ್ನು ಕೇಳಲಿಚ್ಛಿಸುತ್ತೇವೆ. ಎಲ್ಲ ಜನರಿಗೆ ಒಂದೇ ಕಾಯ್ದೆಗಳಾಗಿ ದಲಿತರು ತಮ್ಮ ಬೇಡಿಕೆಗಳನ್ನು ಮೇಲ್ಜಾತಿಯವರ ಮುಂದಿಡುವುದು ಹಳೆಯ ಅಹಿಂಸಾವಾದಿ ಪದ್ಧತಿ. ಆದರೆ ಈ 20/25 ವರ್ಷಗಳ ಚಳವಳಿಯ ಇತಿಹಾಸದಿಂದ ಬೆಳಕಿಗೆ ಬಂದ ಮಹತ್ವವಾದ ವಿಷಯವೆಂದರೆ ದಲಿತರ ಬೇಡಿಕೆಗಳು ಎಷ್ಟೇ ಯೋಗ್ಯವಾಗಿದ್ದರೂ, ಅವರ ಬೇಡಿಕೆಗಳಿಗೆ ಎಷ್ಟೇ ಆಧಾರವಿದ್ದರೂ, ಅವರ ಬೇಡಿಕೆಗಳು ಎಷ್ಟೇ ನ್ಯಾಯಸಮ್ಮತವಾಗಿದ್ದರೂ, ಅವುಗಳಿಗೆ ಹೆಚ್ಚೆಚ್ಚು ಜನರ ಅನುಮತಿಯಿದ್ದರೂ, ಅವುಗಳನ್ನು ಎಷ್ಟೇ ಶಾಂತ ರೀತಿಯಿಂದ ಮೇಲ್ಜಾತಿಯವರೆದುರು ಮಂಡಿಸಿದರೂ ಅವುಗಳನ್ನು ಗಮನಿಸದೆ ಕೇವಲ ಸತ್ತೆಯ ತಾಕತ್ತಿನ ಮೇಲೆ ದಲಿತರ ಜನಮತಗಳನ್ನು ಕಾಲಡಿ ತುಳಿದು ಮೇಲ್ಜಾತಿಯ ಜನ ತಮ್ಮದೇ ಮಾತನ್ನು ನಡೆಸಿಕೊಡುತ್ತಾರೆ. ಹೀಗಿರುವಾಗ ದಲಿತರಿಗೆ ಪ್ರತೀಕಾರ ಯೋಗ ಅಥವಾ ಬಹಿಷ್ಕಾರ ಯೋಗವನ್ನು ಬಳಸಬೇಡಿ ಎಂದು ಉಪದೇಶಿಸುವವರಿಗೆ ಏನೆಂದು ಹೇಳಬೇಕು ಅನ್ನುವುದೇ ತಿಳಿಯದಾಗಿದೆ. ಅಸ್ಪಶ್ಯತೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದಿನ್ನು ನೂರಾರು ವರ್ಷವಿದ್ದರೂ ಪರವಾಗಿಲ್ಲ ಅನ್ನುವಂತಹ ಉಪದೇಶವನ್ನು ಈ ಜನ ಕೊಡುತ್ತಿರುತ್ತಾರೆ, ಆದರೆ ಅನ್ಯಾಯದ ಪರಂಪರೆಯನ್ನು ಮುಂದುವರಿಸಿಕೊಂಡು ಬರಬೇಕಾಗಿಲ್ಲ.

ಅದು ನಡೆದು ಬಂದಿದೆ ಅಂದ ಮಾತ್ರಕ್ಕೆ ಎಂದೆಂದೂ ಮುಂದುವರಿ ದುಕೊಂಡೇ ಹೋಗಬೇಕು ಅನ್ನುವುದು ಕಾಡು ಮನುಷ್ಯನ ವಿಚಾರಗಳು ಅನ್ನುವುದನ್ನು ನಾವು ಈ ಜನರಿಗೆ ಸ್ಪಷ್ಟವಾಗಿ ಹೇಳಬಯಸುತ್ತೇವೆ. ನಮ್ಮಂತಹ ನ್ಯಾಯಪ್ರಿಯ ಜನರಂತೂ ಇಷ್ಟುದಿನ ನಡೆಯುತ್ತಿದ್ದ ಅನ್ಯಾಯ ಇನ್ನು ಮುಂದೆ ನಡೆಯುವಂತಿಲ್ಲ ಎಂದೇ ಹೇಳುತ್ತಾರೆ. ಅಸ್ಪಶ್ಯತೆ ಎಷ್ಟು ದೊಡ್ಡ ಪಾಪ ಹಾಗೂ ಅನ್ಯಾಯವೆಂದರೆ ಅದನ್ನು ಇಂದೇ ಹಾಗೂ ಇದೇ ಕ್ಷಣದಲ್ಲಿ ಕಿತ್ತೆಸೆಯಬೇಕಾಗಿದೆ ಎಂದು ನಾವು ಯೋಚಿಸುತ್ತೇವೆ. ಇದನ್ನು ಒಪ್ಪಿಕೊಂಡು ಅದಕ್ಕೆ ತಕ್ಕ ಉಪಾಯವನ್ನು ಯಾರಾದರೂ ಸೂಚಿಸಿದರೆ ನಾವದರ ಬಗ್ಗೆ ಸಹಾನುಭೂತಿಪೂರ್ವಕವಾಗಿ ಯೋಚಿಸುತ್ತೇವೆ. ಆದರೆ ಅಸ್ಪಶ್ಯತೆಯನ್ನು ತಡಮಾಡದೆ ಕಿತ್ತೆಸೆಯಬೇಕಿದ್ದರೆ ನಾವು ಸೂಚಿಸಿರುವ ಉಪಾಯಗಳಿಗಿಂತ ಬೇರೆ ಉಪಾಯಗಳು ಸಿಗಲಾರವು ಅನ್ನುವುದು ನಮ್ಮ ನಂಬಿಕೆ.

 ಬಿಟ್ಟಿ ವ್ಯಾಖ್ಯಾನ ಕೊಡುವುದರಿಂದ ಅಥವಾ ದೊಡ್ಡ ದೊಡ್ಡ ಪರಿಷತ್ತುಗಳನ್ನು ಸೇರಿಸಿ ದೊಡ್ಡ ದೊಡ್ಡ ಮಸೂದೆಗಳನ್ನು ಮಂಜೂರು ಮಾಡಿಸಿಕೊಳ್ಳುವುದರಿಂದೇನೂ ಆಗದು. ಈ ಉಪಾಯಗಳನ್ನು ಸ್ವಭಾವತಃ ಲೋಕಮತಾನುವರ್ತಿಯಾಗಿರುವ ಜನರಿಗಾಗಿ ಕೊಡಲಾಗಿದೆ. ಆದರೆ ಒಂದೇ ಪರಂಪರೆಯಡಿಯಲ್ಲಿ ನಡೆಯುವ ಜನರಿಗೆ ಬಿಸಿ ಮುಟ್ಟಿಸಲೇಬೇಕಿದೆ. ಇಲ್ಲದಿದ್ದರೆ ಅವರು ಸರಿದಾರಿಗೆ ಬರಲಾರರು. ಕಾಗದ ಆಟಗಳನ್ನು (ಸರಕಾರಿ ಕೆಲಸ, ಮಸೂದೆಗಳನ್ನು ಮಂಜೂರು ಮಾಡಿ ಕಾಗದಗಳ ಮೇಲೆ ಬರೆದಿಟ್ಟು ಮರೆತುಬಿಡುವುದು, ಅವುಗಳೆಂದೂ ಜಾರಿಗೆ ಬರುವುದಿಲ್ಲ) ಎಷ್ಟೇ ಆಡಿದರೂ ಇವರಿಗೆ ಯಾವತ್ತೂ ಬುದ್ಧಿ ಬರಲಾರದು ಹಾಗೂ ಇವರ ಮೇಲೆ ಯಾವುದೇ ಪರಿಣಾಮವಾಗಲಾರದು. ಅಸ್ಪಶ್ಯತೆಯಿಂದಲೇ ಮೇಲ್ಜಾತಿಯವರ ತಲೆಗಳು ಒಡೆದ ಮೇಲೆಯೇ ಆತ್ಮಯಜ್ಞ ಮಾಡುವಷ್ಟೇ ಪುಣ್ಯ ಅಸ್ಪಶ್ಯತೆಯನ್ನು ಮುಂದು ವರಿಸುವುದರಲ್ಲಿದೆಯೆ ಇಲ್ಲವೇ? ಅನ್ನುವುದರ ಬಗ್ಗೆ ಅವರು ಯೋಚಿಸ ಲಾರಂಭಿಸಿಯಾರು. ಜಾಗೃತಿಯ ಈ ಮಹತ್ವವಾದ ಕೆಲಸ ಪ್ರತೀಕಾರ ಯೋಗವಲ್ಲದೆ ಬೇರೆ ಯಾವುದೇ ಸಣ್ಣಪುಟ್ಟ ಉಪಾಯಗಳಿಂದ ಎಂದೂ ಸಾಧಿಸಲಾಗದು. ನಾವು ಬಹಿಷ್ಕಾರ ಯೋಗವನ್ನು ಸೂಚಿಸಿರುವುದನ್ನು ಕೇಳಿ ಕೆಲವು ಮೇಲ್ಜಾತಿ ಜನರ ಪಿತ್ತ ನೆತ್ತಿಗೇರಿದೆ ಅನ್ನುವುದು ನಮಗೆ ಗೊತ್ತು. ಆದರೆ ನಾವದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ನಮಗೆ ಹಿಂದೂ ಧರ್ಮದಲ್ಲಿ ಬೆಲೆಯಿಲ್ಲ. ಹಿಂದೂ ಧರ್ಮದಲ್ಲಿದ್ದುಕೊಂಡು ನಮಗೆ ಮನುಷ್ಯತ್ವ ಸಿಕ್ಕಿದ್ದರೆ ಹಿಂದೂ ಸಮಾಜದ ಮೇಲೆ ಬಹಿಷ್ಕಾರ ಹಾಕುವಂತಹ ಉಪದೇಶವನ್ನು ನಾವೆಂದೂ ಕೊಡುತ್ತಿರಲಿಲ್ಲ. ಹಿಂದೂ ಧರ್ಮದ ತತ್ವಗಳು ಸಾಕಷ್ಟು ಉದಾತ್ತವಾಗಿವೆ, ಆದರೆ ಉದಾತ್ತ ತತ್ವಗಳ ಮನೋರಾಜ್ಯದಲ್ಲಿ ಮುಳುಗಿ ವ್ಯವಹಾರವನ್ನು ಮರೆಯುವ ಶಾಲೆಯ ಮಕ್ಕಳಂತೆ ನಾವು ಮೂರ್ಖರಲ್ಲ. ಒಂದು ಪಕ್ಷ ಹಿಂದೂ ಸಮಾಜ ನಮ್ಮ ಮನುಷ್ಯತ್ವವನ್ನು ಗುರುತಿಸಿದರೂ ಅದು ಕೇವಲ ಅಪರಿಹಾರ್ಯ ಪರಿಸ್ಥಿತಿಯಿಂದಾಗಿಯೇ ಗುರುತಿಸುತ್ತದೆಯೇ ಹೊರತು ನಮ್ಮ ಸ್ವಯಂಸಿದ್ಧತೆಯಿಂದಲ್ಲ ಅನ್ನುವುದನ್ನು ನಾವು ಚೆನ್ನಾಗಿ ಬಲ್ಲೆವು. ಹಿಂದೂ ಸಮಾಜವಾಗಲಿ, ಇನ್ನಿತರ ಯಾವುದೇ ಸಮಾಜವಾಗಲಿ ಪರಿಸ್ಥಿತಿಯ ದಾಸರಾಗುವುದು ಸ್ವಾಭಾವಿಕವಾಗಿದೆ. ಪರಿಸ್ಥಿತಿಯ ಪ್ರತ್ಯಕ್ಷ ತೊಂದರೆ ಅಥವಾ ತೀವ್ರ ನೋವು ಉಂಟಾಗದೆ ಸಮಾಜ ತನ್ನ ಪರಂಪರಾಗತ ವ್ಯವಹಾರಗಳಲ್ಲಿ ಸುಲಭವಾಗಿ ಬದಲಾವಣೆ ತರುವುದಿಲ್ಲ. ಸಮಾಜದ ಈ ಸಹಜ ಪ್ರವೃತ್ತಿಯನ್ನು ಗುರುತಿಸಿಯೋ ಏನೋ ತಿಲಕರು ‘‘ಸುಧಾರಣೆ ಸುಲಭವಾಗಿ ಆಗುವುದಿಲ್ಲ, ಯಾವ ವಿಷಯ ನಮ್ಮ ಏಳಿಗೆಗೆ ಅಡ್ಡ ಬರುತ್ತಿದೆ ಅನ್ನುವುದು ಸಮಾಜಕ್ಕೆ ಪ್ರತ್ಯಕ್ಷವಾಗಿ ಗೊತ್ತಾಗಬೇಕು. ಆ ಅಡಚಣೆ ತಿಳಿದ ಮೇಲೆ ಸಮಾಜ ತಂತಾನೆ ಆ ಅಡಚಣೆಯನ್ನು ದೂರ ಮಾಡಲು ಸಿದ್ಧವಾಗುತ್ತದೆ’’ ಅನ್ನುತ್ತಾರೆ. ಅಸ್ಪಶ್ಯತೆ ತಮ್ಮ ಏಳಿಗೆಗೆ ಅಡ್ಡ ಬರುತ್ತದೆ ಅನ್ನುವುದನ್ನು ಹಿಂದೂ ಸಮಾಜದ ಗಮನಕ್ಕೆ ತರಲು ಬಹಿಷ್ಕಾರ ಯೋಗದಂತಹ ಬೇರೆ ದಾರಿ ಬಹಿಷ್ಕೃತರಲ್ಲಿಲ್ಲ.

ಇರುವಂತಹ ದಾರಿಯನ್ನೂ ಅವರು ಬಳಸಕೂಡದು ಎಂದರೆ ಮೇಲ್ಜಾತಿಯವರಿಗೆ ರುಚಿಸುವಂತೆಯೇ ಅವರು ಬದುಕಬೇಕೇ? ನಾವು ಸೂಚಿಸಿರುವಂತಹ ಬಹಿಷ್ಕಾರ ಯೋಗದ ಮಾರ್ಗ ತಿಲಕರದ್ದೆ, ವ್ಯತ್ಯಾಸ ಇಷ್ಟೇ: ಅವರದನ್ನು ರಾಜಕಾರಣದಲ್ಲಿ ಬ್ರಿಟಿಷರ ವಿರುದ್ಧ ಉಪಯೋಗಿಸಿದರು: ನಾವಿದನ್ನು ಸಮಾಜಕಾರಣದಲ್ಲಿ ಉಪಯೋಗಿಸಿ ಎಂದು ಹೇಳುತ್ತಿದ್ದೇವೆ. ಹೀಗಿರುವಾಗ ನೂರರಲ್ಲಿ ಯಾರೋ ಒಬ್ಬನಿಗೆ ಸರಕಾರದ ಧಗೆ ಹತ್ತಿದ ಕೂಡಲೇ ಅದನ್ನು ಕಿತ್ತೆಸೆಯಲು ತಿಲಕರು ಆ ಸರಕಾರದ ವಿರುದ್ಧ ಬಹಿಷ್ಕಾರ ಯೋಗವನ್ನು ಸಾರಿದಾಗ ಎಲ್ಲರೂ ಅದಕ್ಕೆ ಸಮ್ಮತಿ ಸೂಚಿಸಬಹುದು, ಆದರೆ ಧಾರ್ಮಿಕ ಸತ್ತೆಯ ಅಗ್ನಿಯಲ್ಲಿ ಪ್ರತಿಯೊಬ್ಬ ದಲಿತನ ಮನುಷ್ಯತ್ವ ಸುಟ್ಟು ಭಸ್ಮವಾಗುವುದರ ವಿರುದ್ಧ ದಲಿತರು ಬಹಿಷ್ಕಾರ ಸಾರಬೇಕು ಎಂದು ನಾವು ಸಲಹೆ ಕೊಟ್ಟರೆ ನಮ್ಮನ್ನು ದೂಷಿಸುವುದು ಯಾವ ನ್ಯಾಯ? ಈ ನಮ್ಮ ಗೆಳೆಯನಿಗೆ ನಾವು ಹೇಳುವುದಿಷ್ಟೆ, ನೀವು ಎಷ್ಟೇ ನಮ್ಮ ಹಿತಚಿಂತಕರಾಗಿದ್ದರೂ ಈ ಪ್ರಕರಣದಲ್ಲಿ ಸನಾತನ ಧರ್ಮಿಗಳಾಗಿ, ಸನಾತನ ಧರ್ಮದ ಆಧಾರವಾಗಿ, ಸನಾತನ ಧರ್ಮದ ಅಧಿಕಾರಿಗಳಾಗಿ ಈ ಕೆಲಸದಲ್ಲಿ ನೀವು ನಮಗೆ ಉಪದೇಶ ಕೊಡಲು ಅಪಾತ್ರರಾಗುವಿರಿ. ಈ ಪ್ರಶ್ನೆ, ಅಧಿಕಾರ, ಜಾತಿ, ಸ್ವಾರ್ಥ ಹಾಗೂ ಮನೋಧರ್ಮದ್ದಾಗಿದೆ. ವಿದ್ಯೆ, ಜ್ಞಾನ ಅಥವಾ ಬುದ್ಧಿಯ ಪ್ರಶ್ನೆ ಇದಲ್ಲ. ನಿಮ್ಮಲ್ಲಿರುವ ಈ ದೋಷ ಪರಿಸ್ಥಿತಿ ಪರಿಣಾಮವಾಗಿ ನಿಮ್ಮಲ್ಲಿ ಸ್ವಾಭಾವಿಕವಾಗಿ ಬೆಳೆದಿದೆ ಅನ್ನುವುದನ್ನರಿತು ನೀವು ನಮಗೆ ಉಪದೇಶ ಮಾಡಲು ಬರಬೇಡಿ. ಹಾಗೇನಾದರೂ ಬಂದರೆ ನಮಗೆ ‘‘ಅಹಿಂಸಾವಾದವನ್ನು ಬಿಡಬೇಡಿ’’ ಎಂದು ಉಪದೇಶಿಸುವುದಕ್ಕಿಂತ ನಿಮ್ಮ ಮೇಲ್ಜಾತಿ ಬಾಂಧವರಿಗೇ ‘‘ದಲಿತರು ಈಗ ಹಠ ಮಾಡುತ್ತಿರುವುದರಿಂದ ನಿಮ್ಮ ಸಹಾನುಭೂತಿ ಕೃತಿಯಲ್ಲಿ ಕಾಣುವಂತಹ ಮಾರ್ಗವನ್ನು ಹಿಡಿಯಿರಿ’’ ಅನ್ನುವ ಉಪದೇಶವನ್ನು ಕೊಡಿ. ಎಲ್ಲಿಯವರೆಗೆ ನೀವು ನಿಮ್ಮವರಿಗೆ ಇಂತಹ ಉಪದೇಶಗಳನ್ನು ಕೊಡುವುದಿಲ್ಲವೋ ಅಲ್ಲಿಯವರೆಗೆ ಅಹಿಂಸಾವಾದದ ಮಾರ್ಗವೇ ಫಲದಾಯಿ ಅನ್ನುವಂತಹ ಸುಳ್ಳು ಆಸೆ ತೋರಿಸಿ ಅಥವಾ ಸುಳ್ಳು ಹೇಳಿ ದಲಿತರ ಪ್ರಗತಿಯ ವೇಗವನ್ನು ಕುಂಠಿತಗೊಳಿಸುವುದು ನಿಮ್ಮಿಂದೀಗ ಸಾಧ್ಯವಿಲ್ಲದ ಮಾತು.

ನಾವು ಬೇಕಾದಂತೆ ಅತ್ತು ಕರೆದು, ಭೂಮ್ಯಾಕಾಶ ಒಂದು ಮಾಡಿದರೂ, ನಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದರೂ ಅತ್ತ ಗಮನಹರಿಸದೆ ಕೇವಲ ಕೈಯಲ್ಲಿ ತಾಕತ್ತಿದೆ ಎಂದು ಇರುವಂತಹ ಪರಿಸ್ಥಿತಿಯೇ ಇನ್ನೂ ಕೆಲವು ವರ್ಷ ಮುಂದುವರಿಯಲಿ ಎಂದು ನಾಚಿಕೆಗೆಟ್ಟವರಂತೆ ನಮ್ಮೆದುರು ಹೇಳುವುದು ಸರಿಯಲ್ಲ. ಯಾರೇನೇ ಹೇಳಲಿ ಈ ಅನ್ಯಾಯವನ್ನು ಇನ್ನು ದಿನವೂ ಸಹಿಸಲು ನಾವು ಸಿದ್ಧರಿಲ್ಲ. ಒಂದೆರಡು ಪೀಳಿಗೆಯ ಮಾತನ್ನಂತೂ ಮರೆತೇಬಿಡಿ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ಅಸ್ಪಶ್ಯತೆಯನ್ನು ಚಿಟಿಕೆಹೊಡೆಯುವಷ್ಟರಲ್ಲಿ ಕಿತ್ತೆಸೆಯಲು ದಲಿತರು ಸಿದ್ಧರಿರುವುದನ್ನು ನೋಡಿ ನಮಗೇನೂ ದುಃಖವಿಲ್ಲ ಬಿಡಿ. ಏಕೆಂದರೆ ನಾವು ಹೇಳಿರುವಂತಹ ಉಪಾಯಗಳು ಎಷ್ಟು ತೀವ್ರವಾಗಿವೆಯೆಂದರೆ ಅದರಿಂದ ಮೇಲ್ಜಾತಿ ಜನರ ಕೇವಲ ಸಂಪತ್ತಷ್ಟೇ ಅಲ್ಲ ಅವರ ಜೀವಕ್ಕೂ ಅಪಾಯವಾಗಲಿದೆ? ಇಂತಹ ತೀವ್ರ ಉಪಾಯದಿಂದ ಯಾರು ತಾನೆ ಶರಣಾಗಲಾರರು? ನಮಗನಿಸುತ್ತದೆ ಎರಡೂ ಯೋಗಗಳ ಡಬಲ್ ಗೋಲಿಬಾರ್ ಮಾಡುವ ಅಗತ್ಯವೇ ಇಲ್ಲ. ಶತ್ರು ಎಷ್ಟು ಬಲಹೀನನಾಗಿದ್ದಾನೆಂದರೆ ಬಹಿಷ್ಕಾರ ಯೋಗವನ್ನು ಪಕ್ಕಕ್ಕಿಟ್ಟು ಮೊದಲಿಗೆ ಪ್ರತೀಕಾರ ಯೋಗವನ್ನು ಆರಂಭಿಸಿದರೂ ಕೆಲಸ ಆಗುವಂತಿದೆ. ಪ್ರತೀಕಾರ ಕೂಡ ಹೆಚ್ಚು ದಿನ ಮಾಡಬೇಕಾಗಲಾರದು. ‘ತಪ್ತೇನ ತಪ್ತಯಸಾ ಘಟಣಾಯ ಯೋಗ್ಯಂ’ (‘ಸರಿಯಾಗಿ ‘ಕಾದು ಕೆಂಪಾದ ಮೇಲೆ ಕಬ್ಬಿಣದ ಎರಡು ತುಂಡುಗಳು ಒಂದಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ’.) ಅಂತೆಯೇ ಚಳವಳಿಗೆ ಪ್ರತಿ-ಚಳವಳಿಗೆ ಸಿಕ್ಕರೆ ಉಭಯ ಪಕ್ಷಗಳು ಒಂದಾದುವೆಂದೇ ತಿಳಿಯಬೇಕು.

 ಈಗ ಒಂದೇ ಒಂದು ಪ್ರಶ್ನೆ ಉಳಿಯುತ್ತದೆ. ನಮ್ಮ ದಲಿತ ಬಾಂಧವರು ಕಠಿಣ ಚಳವಳಿಯನ್ನು ಅದರ ಗುರಿಗೆ ತಲುಪಿಸಬಲ್ಲರೇ? ಅನ್ನುವುದು. ಇಲ್ಲಿ ನಮ್ಮ ದಲಿತ ಬಾಂಧವರಿಗೆ ಒಂದು ವಿಷಯವನ್ನು ನೆನಪಿಸುವುದು ಅಗತ್ಯವಾಗಿದೆ. ವನವಾಸದಲ್ಲಿ ಭೀಮನು ಧರ್ಮರಾಜನನ್ನು ಕುರಿತು, ‘‘ತನ್ನ ರಾಜ್ಯವನ್ನು ಕಳೆದುಕೊಂಡ ಪಕ್ಷದಲ್ಲಿ ಅದನ್ನು ಭಿಕ್ಷೆ ಬೇಡುವುದು ಬ್ರಾಹ್ಮಣರ ಧರ್ಮ, ಕ್ಷತ್ರಿಯರ ಧರ್ಮವಲ್ಲ. ಹಾಗಾಗಿ ಭಿಕ್ಷೆ ಬೇಡುವುದನ್ನು ನಿಲ್ಲಿಸು. ತೇಜಸ್ಸನ್ನು ಆಶ್ರಯಿಸು, ನಿನ್ನ ಗುರಿ ತಲುಪುತ್ತಿ, ಕೇವಲ ಧರ್ಮ ಬುದ್ಧಿಯಿಂದ ಏನೂ ಸಾಧ್ಯವಾಗದು’’. ಎಂದು ಹೇಳುತ್ತಾನೆ. ನನ್ನ ಮಟ್ಟಿಗೆ ಇದೇ ನೀತಿ ದಲಿತವರ್ಗಕ್ಕೂ ತಿಳಿಹೇಳುವ ಸಮಯ ಬಂದಿದೆ. ಅಳುವುದು, ಭಿಕ್ಷೆ ಬೇಡುವುದು ಅಥವಾ ಉಳಿದವರ ಧರ್ಮಬುದ್ಧಿಯನ್ನು ನಂಬಿಕೊಂಡಿರುವುದು ಇವುಗಳಿಂದ ಕಳೆದುಕೊಂಡ ಸ್ವಂತಿಕೆ ಮರಳಿ ಸಿಗುವುದಿಲ್ಲ. ಪ್ರತಿಯೊಬ್ಬರೂ ಅದನ್ನು ತಮ್ಮ ತೇಜಸ್ಸಿನಿಂದಲೇ ಪಡೆಯಬೇಕು. ನಾವು ಹೇಳಿರುವ ಪ್ರತೀಕಾರ ಯೋಗವು ಕಠಿಣವಾಗಿದೆ ಅನ್ನುವುದು ನಿಜ ಹಾಗೂ ಈ ಯೋಗಕ್ಕೆ ಪ್ರತಿಯೋಗವೂ ಆಗುತ್ತದೆ ಅನ್ನುವುದು ನಮಗೆ ಗೊತ್ತು. ಆದರೆ ನಾವು ಪ್ರತೀಕಾರ ಮಾಡಿದರೆ ಮೇಲ್ಜಾತಿಯವರು ಪ್ರತ್ಯುತ್ತರ ಕೊಡಬಹುದು ಎಂದು ದಲಿತ ಬಂಧುಗಳು ಹೆದರುವ ಅಗತ್ಯವಿಲ್ಲ. ಮೇಲ್ಜಾತಿಯವರು ಪ್ರತೀಕಾರ ಮಾಡಿದರೆ ಅದಕ್ಕೆ ಪ್ರತೀಕಾರ ಮಾಡಲು ನೀವೂ ಸಿದ್ಧರಿರಬೇಕು. ಅದಿಲ್ಲದೆ ಅನ್ಯಮಾರ್ಗವಿಲ್ಲ. ನಮ್ಮ ದಲಿತ ಬಂಧುಗಳು ಈ ಕೆಲಸದಲ್ಲಿ ತಮ್ಮ ತೇಜಸ್ಸನ್ನು ಪ್ರಕಟಿಸಬೇಕು. ಇಷ್ಟು ಪಥ್ಯವನ್ನವರು ಪಾಲಿಸಿದರೆ ನಾನು ಕೊಟ್ಟ ಔಷಧಿ ವಿಫಲವಾಗಲಾರದು ಅನ್ನುವುದನ್ನವರು ನಂಬಲಿ. ಮಹಾಡ್ ನೀರಿನ ಪ್ರಕರಣದ ಬಗ್ಗೆ ಬರೆದಿರುವ ಈ ಲೇಖನಮಾಲೆಯನ್ನು ಮುಗಿಸುವ ಮುನ್ನ ನಮ್ಮ ದಲಿತ ಬಾಂಧವರಿಗೆ ಹೇಳುವುದಿಷ್ಟೆ, ಬ್ರಹ್ಮರಾಕ್ಷಸ ಅಟ್ಟಿಸಿಕೊಂಡು ಹೋಗುವುದು ಕೇವಲ ಹೆದರುಪುಕ್ಕಲರನ್ನೇ. ಸರ್ವಶಕ್ತಿಮಾನ್ ದೇವರಿಗೂ ಬಲಿ ಕೊಡಲು ಹುಲಿಯಂತಹ ಹಿಂಸ್ರ ಪಶುವನ್ನು ಆರಿಸದೆ ಪಾಪದ ಕೋಳಿ ಆಡುಕುರಿಗಳನ್ನು ಬಲಿ ಕೊಡಲಾಗುತ್ತದೆ.

ಇಂದಿನ ದಲಿತರು ಕೋಳಿಕುರಿಗಳಂತೆ ಬಲಿಕೊಡಬಲ್ಲಂತಹ ಮೇಷ ರಾಶಿಯವರು ಎಂದು ನಮಗನಿಸುತ್ತಿಲ್ಲ. ಅವರ ಪೂರ್ವಜರು ಸಿಂಹ ರಾಶಿಯವರಾಗಿದ್ದರು ಎಂದು ಇತಿಹಾಸ ಸಾಕ್ಷಿ ನುಡಿಯುತ್ತದೆ. ಹಾಗಿಲ್ಲದಿದ್ದರೆ ನಾಗೇವಾಡಿಯ ಸೆಟಿಬಿನ್ ಮಹಜೂರನಾದ ನಾಗನಾಕ ಹೊಲೆಯನಿಗೆ ಇಷ್ಟೊಂದು ತೇಜಸ್ಸು ಎಲ್ಲಿಂದ ಬರುತ್ತಿತ್ತು? ಆ ತೇಜಸ್ಸಿನಿಂದಲೇ ಆತ ರಾಜಾರಾಮನು ಹೇಳಿದಂತೆ ತನ್ನ ಪಾಟೀಲ ಮನೆತನಕ್ಕಾಗಿ ಧೈರ್ಯ ಮಾಡಿ ಯಾರದ್ದೇ ಸಹಾಯ ಪಡೆಯದೆ ಮೊಘಲರ ಆಡಳಿತದಲ್ಲಿದ್ದ ವೈರಾತಗಡವನ್ನು ಅವನಿಂದ ಗೆದ್ದು ಮತ್ತೆ ಮರಾಠಾ ರಾಜ್ಯಕ್ಕೆ ಸೇರಿಸಿದನು! ಮನೆಯಲ್ಲಿ ಊಟದ ಸರದಿಗಳಲ್ಲಿ ಭೇದಭಾವ ಮಾಡುವಂತೆ ರಣಾಂಗಣದಲ್ಲಿ ಶೂರರ ಸರದಿಯಲ್ಲೂ ಜಾತಿಭೇದವನ್ನು ಪಾಲಿಸಬೇಕು ಅನ್ನುವ ಹಠ ಹಿಡಿದ ಬ್ರಾಹ್ಮಣ ನಿಲುವಿನ ಸರದಾರನು ದಲಿತರ ಗುಂಪನ್ನು ಪಕ್ಕಕ್ಕಿಡಿ ಎಂದು ತಕರಾರೆತ್ತಿದ. ಆದರೆ ಹಿರೋಜಿ ಪಾಟಣಕರ್ ಸರದಾರನಿಂದ ‘ಯಾರ ಕತ್ತಿ ಗಟ್ಟಿಯೊ ಆತನೇ ಹಮ್ಮೀರ’ ಎಂದು ಹೇಳಿಸಿ ತನ್ನ ಗುಂಪನ್ನು ಎಲ್ಲರ ಮಧ್ಯೆ ಇರಿಸುವಂತೆ ಮಾಡಿ ತನ್ನ ತೇಜಸ್ಸನ್ನು ಉಳಿಸಿದ. ಕಡೆಗೆ ಖರ್ಡಿಯ ಯುದ್ಧದಲ್ಲಿ ಪಠಾನರಿಂದ ಪರುಶರಾಮ್ ಭಾವುವಿನ ಪ್ರಾಣ ಉಳಿಸಲು ತನ್ನ ಅಪ್ರತಿಮ ಶೌರ್ಯ ತೋರಿಸಿ ಆತನನ್ನು ಹೊಲೆಯ ಎಂದು ತಿರಸ್ಕರಿಸಿದ ಸರದಾರನನ್ನು ನತಮಸ್ತಕನ್ನಾಗಿಸಿದ ಆ ಶಿದಾನಕ್ ಹೊಲೆಯ ಸಿಂಹ ರಾಶಿಯವನಾಗಿರಲಿಲ್ಲವೆ? ರಾಯಗಡದ ಮೇಲೆ ಮೋರ್ಚಾಬಂದಿ ಮಾಡಿ 15 ದಿನಗಳ ವರೆಗೆ ಬ್ರಿಟಿಷ್ ವೀರರೊಡನೆ ಕಠಿಣ ಯುದ್ಧ ಮಾಡಿ ಕೋಟೆಯ ರಕ್ಷಣೆ ಮಾಡುತ್ತಾ ಜೀವತೆತ್ತ ಆ ರಾಯನಾಕ್ ಹೊಲೆಯನು ಮೇಷರಾಶಿಯವನಾಗಿದ್ದನೇ? ಹಾಗೆಯೇ ಪೇಶ್ವೆಯವರಿಗೆ ಕೊನೆಯ ಮಣ್ಣು ತಿನ್ನಿಸುವಾಗ ಜೀವ ತೆತ್ತ ಅವರ ಪೂರ್ವಜರು ಹಾಗೂ ಕೋರೆಗಾಂವ್‌ನ ವಿಜಯಸ್ತಂಬದ ಮೇಲೆ ಹೆಸರು ಕೆತ್ತಿರುವ ವೀರರ ರಾಶಿ ಸಿಂಹವಲ್ಲದೆ ಮತ್ಯಾವುದಾಗಿರಲು ಸಾಧ್ಯ? ಅಸ್ಪಶ್ಯತೆಯ ದಟ್ಟ ಕವಚವನ್ನು ಭೇದಿಸಿ ತಮ್ಮ ತೇಜಸ್ಸು ಹಾಗೂ ಪರಾಕ್ರಮದಿಂದ ಶತ್ರುಗಳನ್ನು ಹುಟ್ಟಲಿಲ್ಲ ಅನ್ನಿಸಿದವರ ವಂಶದವರಿಗೆ ಸಾಧಾರಣವಾದ ಪ್ರತೀಕಾರ ಯೋಗ ಕಷ್ಟಕರವಾಗಬಹುದೇ? ನಮಗಂತೂ ಹಾಗನ್ನಿಸುವುದಿಲ್ಲ. ಅವರಲ್ಲಿ ತೇಜಸ್ಸಿದೆ ಆದರೆ ಅರಿವಿಲ್ಲ ಅಷ್ಟೆ. ಹಾಗಾಗಿ ತಾವ್ಯಾರು? ತಮ್ಮ ನಿಜವಾದ ಆತ್ಮಸ್ವರೂಪ ಯಾವುದು? ಅನ್ನುವ ಅರಿವು ಈಗಿನ ದಲಿತರಿಗಿದ್ದರೆ ಅವರು ತಮ್ಮ ಕುಲಕ್ಕೆ ಬಳಿಯಲಾಗಿರುವ ಕಪ್ಪು ಮಸಿಯನ್ನು ಅಳಿಸಲು ಈಗಷ್ಟೇ ಆರಂಭವಾಗಿರುವ ಧರ್ಮಯುದ್ಧದಲ್ಲಿ ಭಾಗವಹಿಸಲು ಸಿದ್ಧರಾಗಬೇಕು ಹಾಗೂ ತನ್ನ ಇತರ ಬಾಂಧವರಿಗೆ ಸ್ವಜನ ಉದ್ಧಾರದ, ಮಾನವ ಧರ್ಮ ಉದ್ಧಾರದ ಪಾಠ ಹೇಳಿಕೊಡಬೇಕು.

ಭಲೇ ಕುಲವಂತ ಮ್ಹಣಾವೆ  ತೇಹೀ ವೇಗಿ ಹಜೀರ ವ್ಹಾವೇ.
ಹಜೀರ ನ ಹೋತಾ ಕಷ್ಟಾವೇ  ಲಾಗೆಲ್ ಪುಢೇ.
ಅನ್ನುವುದು ಸ್ವಾಮಿ ಸಮರ್ಥ ರಾಮದಾಸರ ಬೋಧ ವ್ಯಾಕ್ಯ. ಇದರರ್ಥ, ‘ನೀವು ಒಳ್ಳೆಯ ಕುಲದವರಾಗಿದ್ದರೆ ಬೇಗ ಬೇಗ ಕೆಲಸವನ್ನಾರಂಭಿಸಿ. ಇಲ್ಲವಾದರೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದೀತು’ (ಇಲ್ಲಿ ಕೆಲಸ ಅಂದರೆ ಅಸ್ಪಶ್ಯತೆಯನ್ನು ಹೋಗಲಾಡಿಸುವ ಕೆಲಸ.) ಎಂದು ಕಾಲ ಅವರನ್ನು ಶ್ರೀ ಸಮರ್ಥರ ಭಾಷೆಯಲ್ಲಿ ಕೂಗಿ ಹೇಳುತ್ತಿದೆ. ಕಾಲದ ಕೂಗು ವ್ಯರ್ಥವಾಗಲಾರದು ಅನ್ನುವ ಭರವಸೆ ನಮಗಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top