ನಮ್ಮ ನಾಗರಿಕ ಪ್ರಜ್ಞೆ | Vartha Bharati- ವಾರ್ತಾ ಭಾರತಿ

---

ನಮ್ಮ ನಾಗರಿಕ ಪ್ರಜ್ಞೆ

ನಮ್ಮನ್ನು ಮತ್ತು ನಮ್ಮ ಸುತ್ತಲ ಜಗತ್ತನ್ನು ಸಮಾಜವನ್ನು ನಾವೀಗ ರಕ್ಷಿಸಿಕೊಳ್ಳಬೇಕಾದ್ದು ಈ ನಾಗರಿಕರಿಂದ. ಹಾಗೆಂದು ಇದು ಅಷ್ಟೇನೂ ಬೇಗ ಅಳಿಯದು. ಕಾಲದೊಂದಿಗೆ ಎಲ್ಲವೂ ಉಳಿದು ಬೆಳೆದು ಅಳಿಯುವಷ್ಟರಲ್ಲಿ ಅನೇಕ ತಲೆಮಾರುಗಳು, ಶತಮಾನಗಳು ಕಳೆದಿರುತ್ತವಲ್ಲ! ವೈಪರೀತ್ಯಕ್ಕೆ ಬೆದರಲಾಗದು; ಗೌರವಪೂರ್ವಕವಾಗಿ ಅದಕ್ಕೆ ಶರಣು ಹೋಗುವುದೇ ಸುಖ.


ಸಾಮಾನ್ಯವಾಗಿ ನಾಗರಿಕತೆಯನ್ನು ವಿದ್ಯೆ, ಉದ್ಯೋಗ ಮತ್ತು ಹಣಕಾಸಿನ ಶಕ್ತತೆಯ ಮೇಲೆ ಅಳೆಯಲಾಗುತ್ತದೆ. ಅನಕ್ಷರಸ್ಥರನ್ನು, ವಿದ್ಯಾಹೀನರನ್ನು, ಮತ್ತು ಬಡತನವೇ ಕಾರಣವಾಗಿ ಕಾರ್ಪಣ್ಯವನ್ನನುಭವಿಸುತ್ತಿರುವವರನ್ನು (ಪ್ರಗತಿಪರತೆ ಅಡ್ಡ ಬರುವುದರಿಂದ) ಅನಾಗರಿಕರೆಂದು ಸ್ಪಷ್ಟವಾಗಿ ಹೇಳದಿದ್ದರೂ ಹಾಗೆಂದು ಸೂಚಿಸಲಾಗುತ್ತದೆ. ಆದರೆ ನಾಗರಿಕತೆಯ ಪೋಷಾಕು ಹಾಕಿದವರು ಅದೆಷ್ಟು ನಾಗರಿಕರು?

ನೀವೆಲ್ಲರೂ ಬಸ್‌ಸ್ಟಾಂಡಿನಲ್ಲಿ, ಶಾಲಾ-ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ನಿಲ್ಲುವ ಒಂದು ನಟರಾಜ ಭಂಗಿಯನ್ನು ಗಮನಿಸಿರಬಹುದು. ಬಹುಪಾಲು ಜನರು ಒಂದು ಕಾಲನ್ನು ಬೂಟು ಸಹಿತ ಗೋಡೆಗಿಟ್ಟು ನಿಂತು ಮಾತನಾಡುತ್ತಾರೆ. ಅವರು ಅಲ್ಲಿಂದ ಹೋದ ಮೇಲೆ ನೀವು ಅವರ ಪಾದಪದ್ಮವು ಊರಿದ ಜಾಗವನ್ನು ಗಮನಿಸಿದರೆ ಅಲ್ಲಿ ಅವರ ಪಾದದಡಿಯ ಹಲಚಕ್ರಾಂಕುಶ ರೇಖಾ ಪದತಳದ ಪುನರುಕ್ತತೆಯನ್ನು ಮುದ್ರೆಯಂತೆ ಕಾಣಬಹುದು. ಹೀಗೆ ಬಹಳಷ್ಟು ಜನರು ತಮ್ಮ ಅಸ್ತಿತ್ವವನ್ನು ಗೋಡೆಗಳ ಮೇಲೆ ಚಿರಸ್ಥಾಯಿಯಾಗಿ ಮಾಡುವ ಪ್ರಯತ್ನವನ್ನು ಮಾಡಿಯೇ ಮಾಡುತ್ತಾರೆ. ಇದೊಂದು ರೀತಿಯ ವಾಮನಾವತಾರ. ಒಂದು ಪಾದ ನೆಲದ ಮೇಲೆ; ಇನ್ನೊಂದನ್ನು ಬಾನಿಗಿಡಲು ಸಾಧ್ಯವಿಲ್ಲ; ಕೊನೆಗೆ ಗೋಡೆಗಾದರೂ ಇಡಬೇಕಲ್ಲ! (ಮೂರನೇ ಹೆಜ್ಜೆಗೆ ಬಲಿಪಶುಗಳು ಬೇಕಷ್ಟಿವೆ.) ಒಂದು ಅನುಕೂಲವೆಂದರೆ ಈ ಮಂದಿಯ ಕಾಲು ಒಂದೆರಡು ಅಡಿಗಿಂತ ಮೇಲೆ ಹೋಗುವುದಿಲ್ಲ. ಸಮುದ್ರತೀರದಲ್ಲಿ ಮರಳಿನ ಮೇಲೆ ಮೂಡಿದ ಪಾದದ ಮುದ್ರೆಯು ಒಂದು ಅಲೆ ಬಂದಾಕ್ಷಣ ಅಳಿಸಿಹೋಗುತ್ತದೆ. ಆದರೆ ಗೋಡೆಯ ಮೇಲೆ ಮೂಡಿದ ಕಲೆಗಳು ಕಲಾತ್ಮಕವಾಗಿಲ್ಲದಿದ್ದರೂ ಇನ್ನೊಮ್ಮೆ ಆ ಗೋಡೆಯು ಸುಣ್ಣಬಣ್ಣ ಕಾಣುವ ವರೆಗೆ ಉಳಿಯುತ್ತದೆ.

ಇದೊಂದು ಬಗೆಯ ಅನಾಯಾಸವಾದ ಪ್ರಜ್ಞೆಯಾದರೆ ಇನ್ನೊಂದು ಬಗೆಯದು ಹೀಗಿರುತ್ತದೆ. ಕೈಯಲ್ಲಿ ಶಾಯಿಯನ್ನೋ ಅಥವಾ ಇನ್ನೇನಾದರೂ ಸುಣ್ಣವನ್ನೋ ಬಣ್ಣವನ್ನೋ ಅಂಟಿಸಿಕೊಂಡಿದ್ದರೆ ಅದನ್ನು ಪಕ್ಕದ ಗೋಡೆಗೆ ಇಲ್ಲವೇ ಕಂಬಕ್ಕೆ ಅಂಟಿಸುವ ಮಂದಿ ಬಹಳ. ಅವರಿಗೆ ತಮ್ಮ ಕೈ ಮಾತ್ರ ಶುದ್ಧವಾಗಿರಬೇಕು; ಸಾರ್ವಜನಿಕ ಸ್ಥಳ ಶುದ್ಧವಾಗಿರಬೇಕಾಗಿಲ್ಲ. ಬದುಕಿನಲ್ಲಿ ಕೈ-ಮೈ ಶುದ್ಧವಿರುವ ಬದಲು ಹೀಗಾದರೂ ಶುದ್ಧವಾಗುವುದು ಒಳ್ಳೆಯದೆಂಬ ತರ್ಕ ಅವರದ್ದು. ವಿದ್ಯೆ ಕಲಿಯಲು ಶಾಲೆಗೆ ಹೋಗುತ್ತೇವಲ್ಲವೇ? ಮನುಷ್ಯನ ವಿಕಾಸವು ಮಂಗನಿಂದಲೇ ಆಗಿದೆಯೆಂದು ನಂಬಬೇಕಾದದ್ದು ಈ ಎಳೆ ಹರೆಯದಲ್ಲೇ. ಮನವೆಂಬ ಮರ್ಕಟ ಎಂಬ ರೂಪಕ ಮನುಷ್ಯನ ಬಾಲ್ಯದಿಂದಲೇ ಆರಂಭ. ಮರ ಹತ್ತುವುದರಿಂದ ಹಿಡಿದು, ಜೋಕಾಲಿ ತೂಗುವುದನ್ನು ದಾಟಿ, ಎಲ್ಲ ಥರದ ಮಂಗನಾಟವನ್ನು ಮನುಷ್ಯ ಬದುಕಿನಲ್ಲಿ ಸಾಧಿಸುತ್ತಾನೆ; ಸಿದ್ಧಿಯೂ ಸುಲಭವೇ. ಈಚೆಗೆ ಕೇಂದ್ರ ಮಂತ್ರಿಯೊಬ್ಬರು ಮಂಗನಿಂದ ಮನುಷ್ಯನ ಉಗಮವೆಂಬ ಡಾರ್ವಿನ್‌ನ ವಿಕಾಸವಾದವನ್ನು ತಳ್ಳಿಹಾಕಿದರು.

ಮತ್ಸ್ಯ-ಕೂರ್ಮ-ವರಾಹ-ನರಸಿಂಹ ಹೀಗೆ ಭಗವಂತನ ಪ್ರಾಣಿರೂಪದ ಅವತಾರಗಳಿದ್ದರೂ ಅವು ವಿಕಾಸದ ವಿವಿಧ ಮಜಲುಗಳೆಂಬ ಪೊಳ್ಳುವಾದ ವನ್ನು ಹೂಡುವ ಬದಲು ಹೀಗೆ ಮಾಡುವ ಮೂಲಕ ಅವರು ಮನುಷ್ಯನು ವಿಕಾಸದ ವಿವಿಧ ಹಂತದ ಮೆಟ್ಟಲುಗಳನ್ನೇರದೆ ನೇರ ಲಿಫ್ಟಿನಲ್ಲೇ ಮೇಲಕ್ಕೆ ಬಂದವನೆಂಬ ಹೊಸ ಆಯಾಮವನ್ನು ಸೃಷ್ಟಿಸಿದರು. ವಿಜ್ಞಾನಿಗಳು ಈ ವಾದವನ್ನು ವಿರೋಧಿಸಿದರೂ, ಖಂಡಿಸಿದರೂ ಭಾರತದ ವರ್ಚಸ್ಸು ಹೀಗಾದರೂ ವಿಶ್ವದಲ್ಲಿ ಹೊಸ ಅವತಾರವನ್ನು ಕಾಣಿಸಿತೆಂದು ದೇಶಭಕ್ತರು ಕೊಂಡಾಡಿರಬಹುದು. ಮಂಗನಿಗೆ ಸುರಾಪಾನವನ್ನು ಮಾಡಿಸಿ ಚೇಳು ಕುಟುಕಿಸಿ ಅಮಾವಾಸ್ಯೆಯ ರಾತ್ರಿ ಭೂತಸಂಚಾರದ ಹೊತ್ತಿನಲ್ಲಿ ಅಲೆಸಿದರೆ ಹೇಗಿದ್ದೀತು? ಅದು ಹಾಗಿರಲಿ, ನಮ್ಮ ವಿದ್ಯಾರ್ಥಿಗಳು ಶಾಲೆಗಳಲ್ಲಿ, ಪ್ರವಾಸಗಳಲ್ಲಿ, ರಸ್ತೆಗಳಲ್ಲಿ, ಬಸ್ ತಂಗುದಾಣಗಳಲ್ಲಿ ವ್ಯವಹರಿಸುವ ರೀತಿಯನ್ನು ಗಮನಿಸಿದರೆ ‘ಮಕ್ಕಳಿವರೇನಮ್ಮ?’ ಅನ್ನಿಸದಿರದು. ಅಲ್ಲಿನ ಗೋಡೆಗಳಲ್ಲಿ ಮೇಜು ಬೆಂಚು ಡೆಸ್ಕುಗಳಲ್ಲಿ ಕೊನೆಗೆ ಮರಗಿಡಕಲ್ಲುಗಳಲ್ಲಿ ತಮ್ಮ ಮತ್ತು ತಮ್ಮ ಶೈಶವದ ನೆನಪುಗಳ, ಗೆಳೆಯ ಗೆಳತಿಯರ ಹೆಸರುಗಳನ್ನು ಉಗುರುಗಳಲ್ಲೋ, ಪೆನ್ನು ಪೆನ್ಸಿಲುಗಳಲ್ಲೋ ಕೆತ್ತಿ ಶಾಶ್ವತಗೊಳಿಸುವ ಪ್ರಯತ್ನಗಳನ್ನು ನೋಡಿದರೆ ಈ ಅದ್ಭುತಗಳನ್ನೆಲ್ಲ ಮಾಡಲಾಗದೆ ಶಹಜಹಾನ್ ತಾಜ್ ಮಹಲ್ ನಿರ್ಮಾಣಕ್ಕೆ ಕೈ ಹಾಕಿರಬಹುದೆಂದು ಅನ್ನಿಸುವುದು. ಬಸ್‌ಗಳಲ್ಲಿ ಸ್ಪಾಂಜ್ ಸೀಟುಗಳನ್ನು ಮೆತ್ತನೆಯ ಸುಖಾಸೀನತೆಯ ಮಧುರ ಅನುಭವಕ್ಕಾಗಿ ಮಾಡಿದರೆಂದು ಯಾರೂ ತಪ್ಪುತಿಳಿಯಕೂಡದು. ಅದಿರುವುದು ಅದನ್ನು ಕಿತ್ತು ಎಸೆಯುವುದಕ್ಕೆ; ಇಲ್ಲವೆ ಅಲ್ಲಿಂದ ಕಿತ್ತು ತಂದು ಮನೆಯಲ್ಲಿ ಸ್ಪಾಂಜ್ ಬಾತ್ ಮಾಡುವುದಕ್ಕೆ. ಪೈಂಟ್ ಹಾಕುವುದೇ ಕಿತ್ತುಹಾಕುವುದಕ್ಕೆ ಎಂಬ ನ್ಯಾಯ ಯಾಕೆ ಎಲ್ಲರಿಗೂ ಅರ್ಥವಾಗುವುದಿಲ್ಲ? ಬಸ್‌ನ ರೂಪ-ಸ್ವರೂಪ ಹಾಳಾದರೇನಂತೆ? ನಮ್ಮ ಕೈಚಳಕ ಅದಕ್ಕಿಂತಲೂ ಮಹತ್ವದ್ದು ತಾನೇ?

ಪ್ರವಾಸ ಹೋಗುವಾಗ ರಸ್ತೆ ರೋಕೋ ಮಾಡುವುದು ಸಾಮಾನ್ಯ. ಹತ್ತಾರು ಜನರು ಒಟ್ಟಾದರೆ- ವಿದ್ಯಾರ್ಥಿಗಳಿರಲಿ, ಅಧ್ಯಾಪಕರಿರಲಿ, ವಯಸ್ಕರೇ ಇರಲಿ, ಒಟ್ಟಾಗಿ ನಿಂತು ಕುಳಿತು ಫೋಟೋ ತೆಗೆಸಿಕೊಳ್ಳುವುದಕ್ಕೆ ಜನರೂ ವಾಹನಗಳೂ ಓಡಾಡುವ, ಅಡ್ಡಾಡುವ ರಸ್ತೆಗಳಿಗಿಂತ ಪ್ರಶಸ್ತ ಜಾಗ ಇನ್ನೆಲ್ಲಿದೆ? ನಾವು ಆ ಊರಿಗೆ ಹೊಸಬರು. ಆದ್ದರಿಂದ ಭಾರತೀಯ ಪರಂಪರೆಯ ‘ಅತಿಥಿ ದೇವೋ ಭವಃ’ ಎಂಬ ತಾರಕ ಮಂತ್ರವನ್ನು ನೆನಪಿಟ್ಟುಕೊಂಡು ನಮ್ಮೆಲ್ಲ ಉಪಟಳವನ್ನು ನೀವು ಸಹಿಸಬೇಕು; ನಾವೆಸೆಯುವ ಪ್ಲಾಸ್ಟಿಕ್ ಬಾಟಲ್‌ಗಳು, ತಿಂಡಿತಿನಿಸುಗಳ ಹೊದಿಕೆಗಳು, ಇತರ ತ್ಯಾಜ್ಯಗಳು ಇವೆಲ್ಲ ನಾವು ನಿಮ್ಮೂರಿಗೆ ಬಂದಿರುವ ಕ್ಷಣಗಳ ಭವ್ಯ-ದಿವ್ಯ ನೆನಪುಗಳು. ಅವು ನಿಮ್ಮನ್ನು ಕಾಡಬೇಕು. ನಾವು ಸದಾ ನಿಮ್ಮ ಎದೆಯಾಳದಲ್ಲಿ ಅಮರರಾಗಿರಬೇಕು. ನೀವು ನಮ್ಮೂರಿಗೆ ಬಂದಾಗ ನೀವೂ ಮಾಡುವುದು ಇದೇ ತಾನೇ? ಹಾಗಿದ್ದ ಮೇಲೆ ಈ ಪರಸ್ಪರ ಭಾವಯಾನದಲ್ಲಿ ಎಲ್ಲರೂ ತೇಲಿ ಮುಳುಗಿ ಜೇನಾಗುವುದೋ ಮೀನಾಗುವುದೋ ಆ ಮೇಲೆ ಯೋಚಿಸೋಣ.

ಈಚೆಗೆ ಸೆಲ್ಫಿಯೆಂಬ ಸಂಪ್ರದಾಯ ಶುರುವಾದ ಮೇಲೆ ಮನುಷ್ಯರು ಜಗತ್ತನ್ನು ನೋಡುವುದನ್ನು ಬಿಟ್ಟೇಬಿಟ್ಟಿದ್ದಾರೆ. ಎಲ್ಲೇ ಹೋಗಲಿ, ಮೊಬೈಲುಗಳನ್ನು ಎದುರಿಸಿ ಮುಖಭಂಗಿಯನ್ನು ಹೃದಯವಿದ್ರಾವಕಗೊಳಿಸಿ ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ ಕಂಡು ಪುನೀತರಾಗಿ ಅವನ್ನು ಬಿಟ್ಟಿಯಾಗಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಮ್‌ಗಳಲ್ಲಿ ಹಂಚಿ ಜನಪ್ರಿಯರಾಗುವ ಯೋಗ ಹಿಂದಿನವರಿಗೆಲ್ಲಿತ್ತು? ದೇವರ ಗರ್ಭಗುಡಿಯೆದುರು ‘‘ಇಲ್ಲಿ ಫೋಟೋ ತೆಗೆಯುವುದು, ವೀಡಿಯೋ ಮಾಡುವುದು ನಿಷಿದ್ಧ’’ ಎಂಬ ಫಲಕವಿದ್ದರೂ ಅದೆಲ್ಲ ದೇವರಿಗೆ ಹೇಳಿದ್ದೇ ವಿನಾ ನಮ್ಮಂಥ ಹುಲುಮಾನವರಿಗಲ್ಲ ಎಂದುಕೊಂಡು ಸೆಲ್ಫಿಗೆ ಶರಣಾಗುವ ಯೋಗ ಭಾಗ್ಯವನ್ನು ಕಾಣುವ ಅದೃಷ್ಟ ಈ ದೇವರಿಗಾಗಲೀ ಕಣ್ಣುಮುಚ್ಚಿ ದೇವರನ್ನು ಸ್ಮರಿಸುವವರಿಗಾಗಲೀ ಎಲ್ಲಿಂದ ಬರಬೇಕು? ಆಲದೆಲೆಯ ಮೇಲಿರ್ಪ ಭೋಗಿಗಳಲ್ಲೂ ಬಗೆಬಗೆಯ ಮೊಬೈಲುಗಳು ಶೋಭಿಸುವಾಗ, ಇನ್ನೊಂದಷ್ಟು ವರ್ಷಗಳಲ್ಲಿ ದೇವರ ಅಸಂಖ್ಯ ಕೈಗಳ ಪೈಕಿ ಒಂದಾದರೂ ಕೈಯಲ್ಲಿ ಶಂಖ ಚಕ್ರ ಗದಾ ಪದ್ಮದಂತೆ ಮೊಬೈಲೂ ಬಂದರೆ ಭಗವಂತನೂ ಒಬ್ಬನೇ ಇರುವಾಗ ಅಥವಾ ತನ್ನ ಸಹಧರ್ಮಿಣಿಯೊಂದಿಗೋ ಗರುಡ-ನಂದಿ-ಮೂಷಿಕ-ಸಿಂಹ-ಹುಲಿ ಹೀಗೆ ಪ್ರಾಣಿವಾಹನದಲ್ಲೋ ಹೋಗುವಾಗ ಸೆಲ್ಫಿಯನ್ನು ತೆಗೆದುಕೊಂಡಾನೆಂದು ಅನ್ನಿಸುತ್ತದೆ. ಈ ಸೆಲ್ಫಿಯೊಂದಿಗೆ ಸಾಮಾಜಿಕ ಪರಿಸರಕ್ಕೇನು ಹಾನಿಯಾಗು ತ್ತದೆಂದು ಯಾರಾದರೂ ಕೇಳಿದರೆ ನನ್ನಲ್ಲಿ ಉತ್ತರವಿಲ್ಲದ್ದರಿಂದ ಇಷ್ಟು ಹೇಳಬೇಕಾಯಿತು.

ವಿದ್ಯಾವಂತರು ಬೀಡಿ ಸೇದುವುದಿಲ್ಲ; ಸಿಗರೇಟು ಸೇದುತ್ತಾರೆ. ಅದರ ಹೊಗೆಯನ್ನು ಆನಂದಭರಿತರಾಗಿ ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಧೂಮಪಾನಿಗಳಿಗಿಂತ ಅವರ/ಅದರ ಪ್ರಭಾವಕ್ಕೆ ಸಿಕ್ಕು ಕ್ಯಾನ್ಸರಿನಿಂದ (ಮತ್ತು ಸಾಹಿತ್ಯದಿಂದ!) ಬಳಲುವವವರೇ ಹೆಚ್ಚೆಂದ ಮೇಲೆ ಅವರ ಧೂಮವಲಯದಿಂದ ಹೊರಗಿರಬೇಕಾದ್ದು ನಮ್ಮ ಕರ್ತವ್ಯ. ಅವರೇನು ಮಾಡಿಯಾರು? ‘ಮಾಡು ಇಲ್ಲವೇ ಮಡಿ’ ಎಂಬುದಕ್ಕೆ ಇದು ಜೊತೆಗಾತಿ. ಬಸ್‌ಗಳಲ್ಲಿ ನಿಮ್ಮ ಪಕ್ಕದಲ್ಲೊಬ್ಬ ಧೂಮಪಾನಿಯಿದ್ದರೆ ನೀವೇನು ಮಾಡಬೇಕು? ಧೂಮಪಾನ ನಿಷೇಧಿಸಲಾಗಿದೆ ಎಂಬ ಫಲಕವು ನೇತುಹಾಕಲ್ಪಟ್ಟರೂ ಅದನ್ನು ಅಣಕಿಸುವಂತೆ ಸಿಗರೇಟಿನ ಹೊಗೆ ವರ್ತುಲಾಕಾರದಲ್ಲಿ ಏರುವಾಗ ಇತರ ಪ್ರಯಾಣಿಕರು ಅಸಹಾಯಕರಂತೆ ನಿಂತರೆ ನೇತು ಹಾಕಲ್ಪಟ್ಟ ಫಲಕವು ‘‘ತಂದೆಯೇ ಇವರನ್ನು ಕ್ಷಮಿಸು, ಇವರು ತಾವೇನು ಮಾಡುತ್ತಿದ್ದೇವೆಂದು ಅರಿಯರು’’ ಎನ್ನಬಹುದಲ್ಲ!

ಈಚೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಕೂಡದು ಎಂಬ ಸಾರ್ವತ್ರಿಕ ಅಭಿಯಾನವು ಸ್ವಲ್ಪಮೇಲುಗೈ ಸಾಧಿಸಿರುವುದರಿಂದ ಇಂತಹ ಧೂಮಪಾನಿಗಳಲ್ಲಿ ಕೆಲವರಾದರೂ ಹೊಗೆಯಿಂದ ಹೊರಗುಳಿದಿರಬಹುದು. ಧೂಮಪಾನದಂತೆ ಮದ್ಯಪಾನದ ಸುಖವನ್ನೂ ಬೆಲ್ಲದ ರುಚಿಯಂತೆ ಬಲ್ಲವರೇ ಬಲ್ಲರು. ನನಗದರ ಅನುಭವವಿಲ್ಲ. ಆದರೆ ಮದ್ಯಪಾನವು ಮನುಷ್ಯನನ್ನು ಎಂತಹ ಅನಿರ್ವಚನೀಯ ಸ್ವರ್ಗಕ್ಕೆ ಕರೆದೊಯ್ಯಬಹುದು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ನಾನು ನನದೆಂಬ ಮಮಕಾರವನ್ನು ಹೋಗಲಾಡಿಸುವ ಮಾಧ್ಯಮ ಇದೊಂದೇ ಎಂದು ಹಲವು ಬಾರಿ ಅನ್ನಿಸಿದೆ. ನನ್ನ ಗೆಳೆಯರೊಬ್ಬರು ಕುಡಿದಾಗ (ಅವರಿಗೆ ಕುಡಿಯುವುದು ಎಂದರೆ ಇದೊಂದೇ ಅರ್ಥ!) ನಿರರ್ಗಳವಾಗಿ ಮಾತನಾಡಬಲ್ಲರು. ಬೇರೆ ಸಂದರ್ಭಗಳಲ್ಲಿ ಅವರು ಮೌನಿ; ಹೆಚ್ಚು ಮಾತನಾಡುವವರಲ್ಲ. ಆದ್ದರಿಂದ ಸುರೆಯನ್ನು ನಾನು ಮಾಧವನಿಗೆ ಹೋಲಿಸಿ ‘‘ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ ಯತ್ ಕೃಪಾ ತಮಹಂ ವಂದೇ ಪರಮಾನಂದಂ ಮದ್ಯಪಾನಂ’’ ಎಂದು ಹೇಳುವುದುಂಟು. ಸ್ಟಿರಾಯ್ಡುಗಳನ್ನು ಸೇವಿಸಿ ಕ್ರೀಡಾಪಟುಗಳು ಅಸಾಧ್ಯವನ್ನು ಸಾಧಿಸುವುದೂ ಇಂತಹ ಭಗವದನುಗ್ರಹದಿಂದಲೇ ಎಂದೂ ಹೇಳುತ್ತಾರೆ.

ಇವೆಲ್ಲ ನಾಗರಿಕರಿಗಲ್ಲದೆ ಪಾಮರರಿಗೆ ಸಾಧ್ಯವಿಲ್ಲ. ಆಧುನಿಕತೆಯ ಭರಾಟೆಯ ಮಾರುಕಟ್ಟೆಯಲ್ಲಿ ನಮ್ಮ ನಡೆನುಡಿಗಳು ಹೀಗೆ ನಿಯಂತ್ರಿತಗೊಂಡಿವೆ. ಇವುಗಳಲ್ಲಿ ಎಷ್ಟು ಶತಾಂಶವು ಪರಾವರ್ತಿತ ಮತ್ತು ಎಷ್ಟು ಸ್ವಯಂಪ್ರಜ್ಞಾಕೃತ ಎಂಬುದನ್ನು ಸಂಶೋಧಿಸಿ ತಿಳಿಯಬೇಕಷ್ಟೇ. ನಾಗರಿಕರು ತಮ್ಮ ವೈಭವೀಕೃತ ವಿಪರೀತ ನಡೆನುಡಿಗಳಿಂದ ಸಾರ್ವಜನಿಕ ವೇದಿಕೆಗಳಲ್ಲಿ ನಗೆಪಾಟಲಿಗೀಡಾಗುವುದನ್ನು ದಿನನಿತ್ಯ ಪತ್ರಿಕೆಗಳಲ್ಲಿ ಮತ್ತಿತರ ಮಾಧ್ಯಮಗಳಲ್ಲಿ ಕಾಣುತ್ತೇವೆ. ಹೀಗೆ ತಮ್ಮ ನಾಗರಿಕತೆಯನ್ನು ಬಹಿರಂಗವಾಗಿ ಪ್ರದರ್ಶಿಸಹೋಗಿ ಸಿಕ್ಕಿಬಿದ್ದವರೂ ಇದ್ದಾರೆ. ಕಾಡು, ಕಾಡುಮೃಗಗಳಿರುವುದೇ ನಮ್ಮ ಬೇಟೆಗೆ ಎಂದು ತಿಳಿದ ಭಾಯೀಜಾನ್ ಸಲ್ಮಾನ್ ಖಾನ್ ಎರಡು ದಿನವಾದರೂ ಪ್ರಾಣಿಗಳಂತೆ ಸೆರೆಪಂಜರದಲ್ಲಿದ್ದನಲ್ಲ ಎಂದು ಯೋಚಿಸಿದಾಗ ‘ಅಡವಿಲಿ ಮನೆಮಾಡಿ ಮರಕೆ ತೊಟ್ಟಿಲ ಕಟ್ಟಿ’ ಎಂದದ್ದು ಮತ್ತು ‘ಯಾರಿಗೆ ಯಾರುಂಟು ಎರವಿನ ಸಂಸಾರ’ ಎಂದು ದಾಸರು ಹೇಳಿದ್ದು ಇಂತಹ ಸಂದರ್ಭಕ್ಕೇ ಇರಬೇಕೆಂದು ಅನ್ನಿಸುತ್ತದೆ. ನಮ್ಮನ್ನು ಮತ್ತು ನಮ್ಮ ಸುತ್ತಲ ಜಗತ್ತನ್ನು ಸಮಾಜವನ್ನು ನಾವೀಗ ರಕ್ಷಿಸಿಕೊಳ್ಳಬೇಕಾದ್ದು ಈ ನಾಗರಿಕರಿಂದ. ಹಾಗೆಂದು ಇದು ಅಷ್ಟೇನೂ ಬೇಗ ಅಳಿಯದು. ಕಾಲದೊಂದಿಗೆ ಎಲ್ಲವೂ ಉಳಿದು ಬೆಳೆದು ಅಳಿಯುವಷ್ಟರಲ್ಲಿ ಅನೇಕ ತಲೆಮಾರುಗಳು, ಶತಮಾನಗಳು ಕಳೆದಿರುತ್ತವಲ್ಲ! ವೈಪರೀತ್ಯಕ್ಕೆ ಬೆದರಲಾಗದು; ಗೌರವಪೂರ್ವಕವಾಗಿ ಅದಕ್ಕೆ ಶರಣು ಹೋಗುವುದೇ ಸುಖ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top