ಎಚ್ಚರಾಗುವುದು ಯಾವಾಗ? | Vartha Bharati- ವಾರ್ತಾ ಭಾರತಿ

ಎಚ್ಚರಾಗುವುದು ಯಾವಾಗ?

                                                            

ಹಿಂಸೆ ಹಿಂದೆಯೂ ನಡೆಯುತ್ತಿತ್ತು; ಮುಂದೆಯೂ ನಡೆಯಬಹುದು. ಆದರೆ ಪ್ರಕೃತಿಯು ಸಂಸ್ಕೃತಿಗೆ ದಾರಿ ಮಾಡಿಕೊಡುವ ಬದಲು ಅದನ್ನು ದಾಟಿ ವಿಕೃತಿಗೆ ದಾರಿ ಮಾಡಿಕೊಟ್ಟಾಗ ವಿಕೃತಿಯೇ ಸಂಸ್ಕೃತಿಯಾಗುತ್ತದೆ. ಭಾರತದ ಸಂಸ್ಕೃತಿ ಯಾವುದಪ್ಪಾಎಂದರೆ ಬೇರೆ ಆಯ್ಕೆಗಳೇ ಇಲ್ಲದೆ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ ಎಂಬ ಉತ್ತರವೇ ನಿರ್ವಿವಾದವಾದೀತು. 


ಕರ್ನಾಟಕದಲ್ಲಿ ಚುನಾವಣೆಗಳು ಘೋಷಿಸಲ್ಪಟ್ಟಿವೆ. ಇನ್ನೇನಿದ್ದರೂ ಘೋಷಣೆಗಳೂ ಭಾಷಣಗಳೂ. ಸಾಲಗಳನ್ನೂ ಸರ್ವಾಪರಾಧಗಳನ್ನೂ ಮನ್ನಾ ಮಾಡಿ ಬದುಕನ್ನು ಹಸನು ಮಾಡುವ ಭರವಸೆ. ಮತದಾರನಿಗೆ ಆಯ್ಕೆಯ ಅವಸರ. ಮತೀಯರೂ ಭಿನ್ನಮತೀಯರೂ ಪಕ್ಷಭೇದ ಮರೆತು ಹಣಾಹಣಿ. ಇದುವರೆಗೆ ಪಕ್ಷದ ಶಿಸ್ತಿನ ಸಿಪಾಯಿಗಳೆಂಬ, ಪ್ರತಿಫಲಾಕ್ಷೆಯಿಲ್ಲದ ದುಡಿಮೆಗೆ, ನಿಸ್ವಾರ್ಥ ಸೇವೆಗೆ ಬದ್ಧಕಂಕಣರೆಂಬ ಸ್ವಘೋಷಿತರು ಈಗ ಬಿ-ಫಾರಂ ವಂಚಿತರಾಗಿ ಆತ್ಮಸಾಕ್ಷಿಯ ಮಾತನ್ನಾಡುವ ಪ್ರಹಸನ. ಯಾವ ಪಕ್ಷದ ಕೊಠಡಿಗಳು ಖಾಲಿಯಿವೆಂದು ಹುಡುಕಾಟ. ನೀತಿ ಸಂಹಿತೆಯ ಹೆಸರಿನಲ್ಲಿ ಅಧಿಕಾರಶಾಹಿಗಳ ಆಳ್ವಿಕೆ-ಶ್ರೀಸಾಮಾನ್ಯನ ಮೇಲೆ. ಯಾವ ಸರಕಾರಿ ಕಚೇರಿಗೇ ಹೋಗಿ: ಚುನಾವಣಾ ಕರ್ತವ್ಯದ ಮೇರೆಗೆ ಅವರು ಇತರ ಕೆಲಸಗಳನ್ನು ಮಾಡುವುದಿಲ್ಲ- ಸಂಬಳದ, ಪ್ರಯಾಣ ಮತ್ತಿತರ ಭತ್ತೆಗಳ ಬಿಲ್ಲನ್ನು ತಯಾರಿಸುವುದರ ಹೊರತು. ಚುನಾವಣೆಗೆ ಎರಡು ದಿನ ಮೊದಲು ಸಾರ್ವಜನಿಕ ಪ್ರಚಾರ ಸ್ಥಗಿತವಾಗು ತ್ತದೆ. ಬಿರುಗಾಳಿಗೆ ಮೊದಲ ಮೌನ! ಐದು ವರ್ಷಗಳ ಭೋಗ್ಯಕ್ಕೆ ತುತ್ತಾಗಲು ಮತದಾರರಿಗೆ ಎಲ್ಲಿಲ್ಲದ ಉತ್ಸಾಹ. ಇದು ಕರ್ನಾಟಕಕ್ಕೆ ಸೀಮಿತವೆಂದು ಮಹಾನುಭಾವರು ಭಾವಿಸಬಾರದು. ನಮಗೆ ನಾವೇ ಸೆರೆಯಾಗಿರುವ ಈ ದೇಶದ ಪ್ರಜಾತಂತ್ರದಲ್ಲಿ (ಮತ್ತು ಅಮೆರಿಕದಂತಹ ಇನ್ನೂ ಅನೇಕ ಪ್ರಜಾಪ್ರಭುತ್ವವನ್ನು ಸಾರುವ ದೇಶಗಳ ಹುಚ್ಚು ಜಗತ್ತಿನಲ್ಲಿ) ಭಾಷಣ ಮಾಡುವುದೇ ಆಳ್ವಿಕೆಯ ಅರ್ಹತಾ ಪತ್ರ.

ಎಷ್ಟು ಹೆಚ್ಚು ಜನರನ್ನು ನೀವು ನಿಮ್ಮ ವಾಗ್ಝರಿಯಿಂದ ಮರುಳುಮಾಡಬಹುದೋ ಅಷ್ಟೂ ಹೆಚ್ಚು ನಾಯಕತ್ವವನ್ನು ನೀವು ಸಂಪಾದಿಸಬಹುದು. ಈ ಪೈಕಿ ಕೆಲವರು ಸಮಾಜದ ಒಳಿತಿಗೆ ತಮ್ಮ ಮಾತೆಂಬ ಮಾಣಿಕ್ಯದ ಬಂಡವಾಳವನ್ನು ವಿನಿಯೋಗಿಸುತ್ತಾರೆ. ಇನ್ನುಳಿದ ಬಹುಪಾಲು ಮಾತುಗಾರರು ಅದನ್ನು ಜನರನ್ನು ವಿನಾಶದ ಅಂಚಿಗೆ ತಳ್ಳಿಯಾದರೂ ತಾವು ಸಮಾಜದ ಸೂತ್ರಧಾರರಾಗಲು ಬಳಸುತ್ತಾರೆ. ಆಡಳಿತ ತಾತ್ಕಾಲಿಕವಾದರೂ ಅದು ಕೊಡುವ ಅಷ್ಟೇ ಕ್ಷಣಿಕವಾದ ಮನ್ನಣೆ, ಸವಲತ್ತುಗಳು ಬಹು ಆಕರ್ಷಕವಾಗಿರುತ್ತವೆ. ಆದ್ದರಿಂದ ಹೇಗಾದರೂ ಅಧಿಕಾರವನ್ನು ಹಿಡಿಯುವುದೇ ಅತ್ಯಂತ ಸ್ವಾರ್ಥಪರ ಧೋರಣೆಯಾಗುತ್ತದೆ. ಖಳನಾಯಕನೊಂದಿಗೆ ಇತರ ರೌಡಿಗಳು ಜೊತೆಯಾದಂತೆ ಇಂತಹ ಶಕ್ತರೊಂದಿಗೆ ಅನೇಕ ಶಕುನಿಗಳೂ ದುಶ್ಯಾಸನರೂ ಜೊತೆಯಾಗುತ್ತಾರೆ.

ಫ್ರಾನ್ಸ್‌ನಂತಹ ದೇಶದಲ್ಲಿ ನಾಯಕತ್ವಕ್ಕೆ ಗಣಿತಜ್ಞರನ್ನು ಆಯ್ಕೆ ಮಾಡುತ್ತಾರೆಂಬ ವಾಡಿಕೆಯ ಮಾತಿದೆ. ಎಲ್ಲರೂ ಹೀಗೆ ನಾಯಕತ್ವವನ್ನು ಪಡೆದ ನಿದರ್ಶನಗಳಿಲ್ಲ. ಕೊಚ್ಚೆ ರಾಜಕೀಯ ಅಲ್ಲೂ ಇದೆ. ಆದರೆ ಪ್ರತಿಭೆ, ಪಾಂಡಿತ್ಯಗಳು ನಮ್ಮ ದೇಶಕ್ಕಿಂತ ಹೆಚ್ಚು ಗಣ್ಯತೆಯನ್ನು ಅಲ್ಲಿ ಪಡೆಯುತ್ತವೆಂದು ಹೇಳಲಾಗಿದೆ. ಪಾಸ್ಕಲ್ ಎಂಬ ಗಣಿತಜ್ಞ (ವಿಜ್ಞಾನದ ಶ್ರೇಷ್ಠ ಪ್ರಮೇಯಗಳಲ್ಲೊಂದಾದ ‘ಪಾಸ್ಕಲನ ನಿಯಮ’ ನಮ್ಮ ಪಠ್ಯದಲ್ಲೂ ಇದೆ.) ಬಹುಪಾಲು ವಿಜ್ಞಾನಿಗಳು ಒಂದು ಹಂತದ ಆನಂತರ ತಾತ್ವಿಕರಾಗುತ್ತಾರೆ. ಸಾಕ್ರೆಟಿಸ್ ಆಗಲಿ, ಐನ್‌ಸ್ಟೈನ್ ಆಗಲಿ ಇತ್ತೀಚೆಗೆ ನಿಧನರಾದ ಸ್ಟೀಫನ್ ಹಾಕಿಂಗ್ ಆಗಲಿ ಇದಕ್ಕೆ ಹೊರತಲ್ಲ. ಇಂತಹ ಪಾಸ್ಕಲ್ ‘‘ಜನರು ಧರ್ಮಬದ್ಧತೆಯಿಂದ ಮಾಡುವಷ್ಟು ಪರಿಪೂರ್ಣತೆಯಿಂದ ಮತ್ತು ಸಂತೋಷದಿಂದ ಇನ್ಯಾವ ಸಂದರ್ಭದಲ್ಲೂ ಕೇಡುಗಳನ್ನು ಮಾಡುವುದಿಲ್ಲ’’ ((Men never do evil so completely and cheerfully as when they do it from religious conviction) ಎನ್ನುತ್ತಾನೆ. ಭಾರತದ ಸದ್ಯದ ಸ್ಥಿತಿ-ಪರಿಸ್ಥಿತಿ ಹೀಗೆಯೇ ಇದೆ. ಧರ್ಮದ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಕುರಿಗಳಾಗಿರುವ ಜನರನ್ನು ಕುರಿಮರಿಗಳಾಗಿಸುವ ಪ್ರಯತ್ನವು ಎಗ್ಗಿಲ್ಲದೆ ಸಾಗಿದೆ. ಸಾತ್ವಿಕ ಜನರಿಗೆ ಏಳು ಜನ್ಮದಲ್ಲೂ ಮೋಕ್ಷವಿಲ್ಲವೆಂದು ಕಾಣುತ್ತದೆ.

‘ಒರು ಕೈದಿಯಿನ್ ಡೈರಿ’, ‘ಇಂಡಿಯನ್’ ಮುಂತಾದ ಅನೇಕ ಸಿನೆಮಾಗಳಲ್ಲಿ ನಾಯಕನು ತನ್ನ ಪತ್ನಿ, ತಾಯಿ, ಸೋದರಿ, ಮಗಳು ಹೀಗೆ ಯಾರಿಗಾದರೂ ಇಂತಹ ಅನ್ಯಾಯವಾದಾಗ ಪೊಲೀಸರ ಅಥವಾ ಅಧಿಕಾರದ ಭಾಗವಾಗಿರುವ ಪ್ರಭಾವಿಗಳನ್ನು ಮೊರೆ ಹೋಗುತ್ತಾನೆ. ಆದರೆ ಅಲ್ಲಿ ಇನ್ನೂ ಭಯಂಕರವಾದ ಹಿಂಸೆ, ಅತ್ಯಾಚಾರ ನಡೆಯು ತ್ತದೆ. ಯಾರು ಜನರನ್ನು, ಸಮಾಜವನ್ನು ರಕ್ಷಿಸಬೇಕೋ ಅವರೇ ನಿರ್ದಯ ರಾಗಿ ರಾಕ್ಷಸೀಯವಾಗಿ ವರ್ತಿಸುತ್ತಾರೆ. ಹತಾಶನಾದ ನಾಯಕ ಶಿಕ್ಷೆ ಅನುಭವಿಸುತ್ತಾನೆ; ಅದನ್ನು ಮುಗಿಸಿ ಹೊರಬಂದು ತಾನೇ ಕಾನೂನನ್ನು ಕೈಗೆತ್ತಿಕೊಂಡು ಇಂತಹ ಗೂಂಡಾರಾಜ್ಯವನ್ನು ನಿಯಂತ್ರಿಸಹೋಗುತ್ತಾನೆ. ಆತನ ಸೇಡನ್ನು ಪ್ರೇಕ್ಷಕ ವರ್ಗ ಸಿಳ್ಳುಹೊಡೆದು, ಕೈಚಪ್ಪಾಳೆ ತಟ್ಟಿ ಇದನ್ನು ಬೆಂಬಲಿಸುತ್ತಾರೆ. ಇದರರ್ಥವೇನು? ಅನ್ಯಾಯ ಸಹಜ. ಅದಕ್ಕೆ ಪರಿಹಾರದ ಮೊರೆ ಸಿನೆಮಾ ಮುಂತಾದ ಕಾಲ್ಪನಿಕ ಜಗತ್ತಿನಲ್ಲಿ ಮಾತ್ರವೆಂದೋ? ಹದಿನೆಂಟು ರೀಲುಗಳ ಹೊರಗೆ ಜಗತ್ತು ಮತ್ತೆ ತಲ್ಲಣಗಳ, ಸಂಕಟಗಳ, ಆತಂಕಗಳ ಗೂಡೇ-ಸುಡುಗಾಡೇ? ಹೆಣ್ಣು ಮಕ್ಕಳನ್ನು ಮಾತೆಯರೆಂದು ಭಾರತದಲ್ಲಿ ಕರೆಯಲಾಗುತ್ತದೆ. ಪುಟ್ಟ ಕಂದಮ್ಮಗಳನ್ನೂ ‘‘ತಾಯೀ’’ ಎಂದೇ ಮುದ್ದಿನಿಂದ ಮಾತನಾಡಿಸುವುದು ವಾಡಿಕೆ. ಆದರೆ ಭಾರತದ ವರ್ತಮಾನದಲ್ಲಿ ಬಹು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವರ್ತಮಾನವೆಂದರೆ ಹೆಣ್ಣು ಮಕ್ಕಳ ಮಾನಭಂಗ, ಕೊಲೆ ಇತ್ಯಾದಿ.

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ, ಉತ್ತರ ಪ್ರದೇಶದ ಉನ್ನಾವೊದಲ್ಲಿ, ಗುಜರಾತ್‌ನ ಸೂರತ್‌ನಲ್ಲಿ, ಎಲ್ಲೆಂದರಲ್ಲಿ ಮಾತೆಯರಿಗೆ ರಕ್ಷಣೆಯಿಲ್ಲದಾಗಿದೆ. ಒಂದೆಡೆ ‘‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’’ ಎಂದು ಹಾಡುತ್ತಲೇ ಇನ್ನೊಂದೆಡೆ ಭಾರತ ಮಾತೆಯ ರಕ್ಷಣೆಯ, ಧರ್ಮದ ರಕ್ಷಣೆಯ ನೆಪದಲ್ಲಿ ಅಬಲೆಯರನ್ನು ವಿವಿಧ ರೂಪಗಳಲ್ಲಿ ಬಲಿಕೊಡಲಾಗುತ್ತಿದೆ. ಮನುಷ್ಯಧರ್ಮವೊಂದನ್ನು ಹೊರತುಪಡಿಸಿ ಇನ್ನೆಲ್ಲ ಧರ್ಮಗಳ ರಕ್ಷಣೆ ವ್ಯಂಗ್ಯರೂಪದಲ್ಲಿ ನಡೆಯುತ್ತಿದೆ. ಮಹಾಭಾರತದ ದುಶ್ಯಾಸನ ತಾನೀಗ ಇರಬೇಕಿತ್ತೆಂದು ಅಂದುಕೊಂಡರೆ ತಪ್ಪಿಲ್ಲ. ದ್ರೌಪದಿಯೂ ಅಷ್ಟೇ: ದ್ವಾಪರದಲ್ಲಿ ಬದುಕಿದ್ದಕ್ಕೆ ತನ್ನ ಮಾನವುಳಿಯಿತೆಂದುಕೊಳ್ಳಬಹುದು; ಇಂದು ಅಕ್ಷಯಾಂಬರ ಲಭ್ಯವಿಲ್ಲ; ಅಕ್ಷಯಪಾತ್ರೆ ಮೊದಲೇ ಇಲ್ಲ; ಕೃಷ್ಣ ತನ್ನ ಅವತಾರದ ವೇಷ ಕಳಚಿ ಬದುಕಿದರೆ ಬೇಡಿ ತಿಂದೇನು ಎಂದುಕೊಂಡು ಓಡಿಹೋಗಿದ್ದಾನೆ. ತ್ರೇತಾಯುಗದ ಸೀತೆ ರಾವಣನಿಗೆ ಉತ್ತಮ ನಡತೆಯ ದೃಢೀಕರಣಪತ್ರವನ್ನು ನೀಡಿ, ಕಲಿಯುಗದ ರಾವಣ ರಿಗೆ ಹೋಲಿಸಿದರೆ ಆತ ಸಚ್ಚಾರಿತ್ರ್ಯದ ಸಜ್ಜನನೆಂದು ಹೇಳಬಹುದು. ವಯೋಮಾನವನ್ನೂ ಪರಿಗಣಿಸದೆ (ಪರಿಗಣಿಸಿದರೂ ತಪ್ಪುತಪ್ಪೇ; ಅದನ್ನು ರಿಯಾಯಿತಿಯಿಂದ ಕಾಣಬಾರದು) ನಡೆಸುವ ಈ ಅಧರ್ಮದೊಳಗೆ ಒಂದು ಧರ್ಮವಿದೆಯೆಂದು ಯಾರಾದರೂ ಹೇಳಿದರೆ ಅಂತಹ ವ್ಯಾಖ್ಯಾ ನಕ್ಕೆ ವಿವರಣೆ ಬೇಡ. ಜನರನ್ನು ಭಯಾವಹರನ್ನಾಗಿಸಿ ಮೌನಕ್ಕೆ ಶರಣು ಹೊಡೆಸುವುದು ಸರ್ವಾಧಿಕಾರದ ದಕ್ಷತಂತ್ರ.

ಯಾವುದೇ ಸಮಾಜವು ಹಿತಮಿತವಾಗಿ ನಡೆೆಯಬೇಕಾದರೆ ಕಾನೂನಿನ ಲಗಾಮು ಮುಖ್ಯ. ಅದಲ್ಲದೆ ಅಧಿಕಾರದ ನೂಲೇಣಿಗೆ ಹತ್ತಿರವಾದ ಯಾರು ಬೇಕಾದರೂ ತಮ್ಮ ರಾಗದ್ವೇಷಗಳ ನೆಪದಲ್ಲಿ ಕಾನೂನನ್ನು ಮತ್ತು ಅದಕ್ಕೂ ಮುಖ್ಯವಾಗಿ ಸಂವಿಧಾನವನ್ನು ಮೀರಿ ಅಥವಾ ಸಮಾನಾಂತರ ಸಂವಿಧಾನವನ್ನು ರಚಿಸಿಕೊಂಡು ವ್ಯವಸ್ಥೆಯನ್ನು, ಸಮಾಜವನ್ನು ನಿಯಂತ್ರಿಸುವುದು ಭಯಾನಕ ಸತ್ಯ. ಆಳುವವರೇ ಇಂತಹ ಕುರುಡು ರಾಕ್ಷಸರನ್ನು ಸನ್ನೆಯಿಂದ ಬೆಂಬಲಿಸಿ ಉಗುಳಿನ ಮಧ್ಯೆ ಮಂತ್ರದಂತೆ ಇಂತಹ ಘಟನೆಗಳನ್ನು ಸಹಿಸುವುದಿಲ್ಲವೆಂದು ಹೇಳುವ ಹೊತ್ತಿನಲ್ಲಿ ಇಂತಹ ಘಾತುಕ ಶಕ್ತಿಗಳು ನಾಶವಾಗುವುದೆಂದು ಆಶಿಸಿದರೂ ಅದಕ್ಕೆ ತೆರಬೇಕಾದ ಬೆಲೆ ತೀರ ಹೆಚ್ಚು. ವಿವೇಕದ ಬೆಳಗು ಬರುವ ಮುನ್ನ ಈ ಉನ್ಮಾದಕ್ಕೆ, ವಿಕಟಾಟ್ಟಹಾಸಕ್ಕೆ ಇನ್ನೆಷ್ಟು ಹೆಣ್ಣುಮಕ್ಕಳು ಬಲಿಯಾಗಬೇಕೋ? ಮನುಷ್ಯ ಕೊನೆಗೂ ಇಚ್ಛಿಸುವುದು ಸಾತ್ವಿಕ ಮತ್ತು ಶಾಂತ ಬದುಕನ್ನು. ಆದರೆ ಇದು ತೀರ ತಡವಾಗಿ ಅರ್ಥವಾಗುವ ವಿಚಾರ. ಆದ್ದರಿಂದಲೇ ವಿಕೃತಿಗಳು ಪುನರಾವರ್ತಿಸುತ್ತವೆ-ಬಹುಪಾಲು ಸ್ಪರ್ಧಾತ್ಮಕವಾಗಿ. ಭಾವುಕವಾಗಿ, ಭಾವಾವೇಶದಿಂದ ಹೀಗೆ ಅನ್ನಿಸುತ್ತದೆ. ಆದರೆ ವಾಸ್ತವವನ್ನು ಗಮನಿಸಿದರೆ ಇದೊಂದು ವ್ಯವಸ್ಥಿತ ರಾಜಕಾರಣದ ಸಂಚಿನಂತೆ ಅನ್ನಿಸುವುದಿಲ್ಲವೇ?

ಈಚೆಗೆ ನಡೆಯುತ್ತಿರುವ ಹೆಣ್ಣುಮಕ್ಕಳ ಮಾನಭಂಗ-ಕೊಲೆಗಳೆಂಬ ಘಟನೆಗಳನ್ನು ಗಮನಿಸಿದರೆ ತಲ್ಲಣಿಸದಿರು ಕಂಡ್ಯ ತಾಳು ಮನವೇ, ಇದಕೆ (ನಾಯಕಮಣಿಗಳ ಘೋಷಣೆಗಳೂ ಭಾಷಣಗಳೂ ಮುಚ್ಚಿಹಾಕುತ್ತವೆಂಬುದಕ್ಕೆ) ಸಂಶಯವಿಲ್ಲ. ಆದರೆ ಇವಿಷ್ಟೇ ಅಲ್ಲ; ಗಾಬರಿಪಡಬೇಕಾದದ್ದು ಇವನ್ನು ಸಮರ್ಥಿಸುವ ಅಪಾರ ಸಂಖ್ಯೆಯ ಬಹುಮತಗಳಿಗೆ. ವಿಷ್ಣು ನಂದಕುಮಾರ್ ಎಂಬ ಕೇರಳದ ಬ್ಯಾಂಕ್ ಉದ್ಯೋಗಿಯೊಬ್ಬ (ಈತನ ಮಾವ ಕೇರಳದ ಭಾಜಪ ಕಾರ್ಯದರ್ಶಿಯೆಂಬ ಆರೋಪ ಗೌಣ) ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಸುಗೂಸಿನ ಅತ್ಯಾಚಾರ ಮತ್ತು ಕೊಲೆಯನ್ನು ಸಾಮಾಜಿಕ ಅಂತರ್ಜಾಲದಲ್ಲಿ ಸಮರ್ಥಿಸುತ್ತಾನೆ. ಆತನ ಉದ್ಯೋಗ ಹೋಯಿತೆನ್ನಿ. ಆದರೆ ನಮ್ಮ ಸಮಾಜ ಹೇಗಿದೆಯೆಂದರೆ ಅಂತಹವರನ್ನೇ ಉದ್ಯೋಗಕ್ಕೆ ನೇಮಿಸುವ ರಾಜಕಾರಣಿಗಳೂ ಉತ್ಸಾಹಿ ವ್ಯವಹಾರಿಗಳೂ ಇದ್ದಾರೆ. ಆತ ನಾಳೆೆ ಒಬ್ಬ ಪೋಲೀಸ್ ಅಧಿಕಾರಿಯಾದರೂ ಅಚ್ಚರಿಯಿಲ್ಲ. ಖ್ಯಾತ ವಕೀಲೆ ಮತ್ತು ಸಂಸದರಾಗಿರುವ ಮೀನಾಕ್ಷಿ ಲೇಖಿ ಈ ಘಟನೆಗಳಿಗೆ ಪ್ರತಿಕ್ರಿಯಿಸುತ್ತಾ ವಿರೋಧ ಪಕ್ಷಗಳಿಗೆ ಒಮ್ಮೆ ಅಲ್ಪಸಂಖ್ಯಾತರು, ಒಮ್ಮೆ ದಲಿತರು, ಒಮ್ಮೆ ಮಹಿಳೆಯರು ಹೀಗೆ ಎಲ್ಲವೂ ಸರಕಾರವನ್ನು ಅಲ್ಲಾಡಿಸುವ ರಾಜಕೀಯ ದಾಳಗಳು ಎಂದಿದ್ದಾರೆ. ಉಳಿದ ಅರ್ಹತೆ ಒತ್ತಟ್ಟಿಗಿರಲಿ, ಒಬ್ಬ ಮಹಿಳೆಯಾಗಿಯಾದರೂ ಆಕೆ ಮಹಿಳೆಯರ ಕುರಿತು ಈ ಮಾತನ್ನು ಆಡಬಾರದಿತ್ತು.

ವಿಷ್ಣು ನಂದಕುಮಾರ್ ಪ್ರತಿನಿಧಿಸುತ್ತಿರುವುದು ಒಂದು ವ್ಯವಸ್ಥಿತ ಕುತ್ಸಿತ ಬಹುಜನ ಸಮಾಜವನ್ನು ಮತ್ತು ಪ್ರಚೋದನಕಾರಿ ರಾಜಕೀಯ, ಸೈದ್ಧಾಂತಿಕ, ಧಾರ್ಮಿಕ ವಿಚಾರಧಾರೆಯನ್ನು. ಆತ ತೇಲಿಬಿಟ್ಟ ಬೆಂಕಿಯ ಹಿಂದೆ ಸಾವಿರಾರು ಕಿಡಿಗಳಿವೆಯೆಂಬುದನ್ನು ಮರೆಯಬಾರದು. ಅವು ಯಾವಾಗ ಬೇಕಾದರೂ ಉರಿಯಬಹುದು. ಹಿಂಸೆ ಹಿಂದೆಯೂ ನಡೆಯುತ್ತಿತ್ತು; ಮುಂದೆಯೂ ನಡೆಯಬಹುದು. ಆದರೆ ಪ್ರಕೃತಿಯು ಸಂಸ್ಕೃತಿಗೆ ದಾರಿ ಮಾಡಿಕೊಡುವ ಬದಲು ಅದನ್ನು ದಾಟಿ ವಿಕೃತಿಗೆ ದಾರಿ ಮಾಡಿಕೊಟ್ಟಾಗ ವಿಕೃತಿಯೇ ಸಂಸ್ಕೃತಿಯಾಗುತ್ತದೆ. ಭಾರತದ ಸಂಸ್ಕೃತಿ ಯಾವುದಪ್ಪಾ ಎಂದರೆ ಬೇರೆ ಆಯ್ಕೆಗಳೇ ಇಲ್ಲದೆ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ ಎಂಬ ಉತ್ತರವೇ ನಿರ್ವಿವಾದ ವಾದೀತು. ಹಿಂದುಭೂಮಿ ಹೆಣ್ಣುಮಕ್ಕಳ ಮಾರಣಹೋಮದ ಕರ್ಮಭೂಮಿಯಾದೀತು. ದೇಶದ ಪರಮ ವೈಭವವನ್ನು ಕಾಣಬಯಸು ವವರು ಇಂತಹ ಕರ್ಮಕಾಂಡವನ್ನು ಬಯಸಬಾರದು. 12-13ನೇ ಶತಮಾನದ ನಡುವೆ ಬದುಕಿದ ಪಂಜಾಬಿ ಸೂಫಿ ಕವಿ ಶೇಕ್ ಫರೀದ್‌ನ ಒಂದು ಶಲೋಕ್ (ಕನ್ನಡಾನುವಾದ: ಡಿ.ಆರ್.ನಾಗರಾಜ್) ಹೀಗಿದೆ: ಓ ಫರೀದ್ ನದಿಯ ಆ ಕಡೆ ದಂಡೆ ಕಂಡಷ್ಟು ಸ್ಪಷ್ಟವಾಗಿ ಸಾವು ಕಾಣುತ್ತಿದೆ

ಪರಲೋಕದಲ್ಲಿ ಪ್ರಜ್ವಲಿಸುವ ನರಕ ಉಂಟು, ಕಿವಿಗಡಚಿಕ್ಕುವ ಗದ್ದಲದಲ್ಲಿ ಕೆಲವರು ಮಾತ್ರ ಈ ಬಗ್ಗೆ ಎಚ್ಚೆತ್ತರು.
ಪ್ರಜಾವಂತರು ಎಚ್ಚರವಾಗದಿದ್ದರೆ, ಈ ಅಪಾಯದ ಬೇರುಗಳನ್ನು ಹುಡುಕದಿದ್ದರೆ ನಾಳೆ ನಾವೇ ಈ ಅಗ್ನಿಕುಂಡಕ್ಕೆ ಎರವಾದಾಗಲಷ್ಟೇ ಇದರ ಫಲ, ಪರಿಣಾಮ, ಫಲಿತಾಂಶ, ಯಾತನೆ ಅರ್ಥವಾಗಬಹುದು. ಐದು ವರ್ಷಕ್ಕೊಮ್ಮೆ ಎದುರಾಗುವ ಚುನಾವಣೆಗಳಿಗಿಂತಲೂ ಹೆಚ್ಚಾಗಿ ಇವು ನಮ್ಮನ್ನು ಯೋಚನೆಗೆ ಹಚ್ಚಬೇಕು. ಪ್ರಶ್ನೆಯಿಷ್ಟೇ: ಎಚ್ಚರಾಗುವುದು ಯಾವಾಗ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top