ಚುನಾವಣೆಗಳೆಂಬ ಪ್ರಜಾತಂತ್ರದ ಅಣಕ | Vartha Bharati- ವಾರ್ತಾ ಭಾರತಿ

---

ಚುನಾವಣೆಗಳೆಂಬ ಪ್ರಜಾತಂತ್ರದ ಅಣಕ

ಪರಸ್ಪರ ದೂಷಿಸಿಕೊಂಡು ಬೆತ್ತಲೆಯಾಗುವುದನ್ನು ಬಿಟ್ಟರೆ ಚುನಾವಣೆಯ ಹುರಿಯಾಳುಗಳಿಗೆ ಇನ್ನೇನೂ ಉಳಿದಿಲ್ಲ. ಚುನಾವಣಾಪೂರ್ವ ಲಕ್ಷಣಗಳನ್ನು ನೋಡಿದರೆ ದೇಶದ, ರಾಜ್ಯದ ಸಮಸ್ಯೆಗಳಿಗೆ ಗಂಭೀರವಾದ ಯಾವ ಪ್ರಯತ್ನವನ್ನೂ ಈ ರಾಜಕೀಯ ಪಕ್ಷಗಳು ಮಾಡಬಲ್ಲವೆಂಬ ನಂಬಿಕೆಯೇ ಉಳಿಯದಂತಾಗಿದೆ. ನಾವಷ್ಟೇ ದೇಶದ ಮತ್ತು ಪಕ್ಷಗಳ ಕುರಿತು ಚಿಂತಿಸುತ್ತಿದ್ದೇವೆಯೇ ಹೊರತು ಇವುಗಳಿಗೆ ದೇಶದ, ದೇಶವಾಸಿಗಳ ಕುರಿತು ಯಾವ ತಲೆನೋವೂ ಇಲ್ಲವೆಂದು ಕಾಣಿಸುತ್ತದೆ.


ಕಳೆದ ಲೋಕಸಭಾ ಚುನಾವಣೆಯೇ ಸಾಕಷ್ಟು ತಳಮಟ್ಟದಲ್ಲಿತ್ತು. ಜನರನ್ನು ಮತಬ್ಯಾಂಕುಗಳಾಗಿ ಮಾಡುವುದೇ ಹೆಗ್ಗುರಿಯಾಗಿಟ್ಟುಕೊಂಡೇ ಮೋದಿ ಮತ್ತು ಅವರ ತಂಡ ದೇಶದೆಲ್ಲೆಡೆ ಪ್ರಚಾರತಂತ್ರವನ್ನು ರೂಪಿಸಿದ್ದವು. ಕಾಂಗ್ರೆಸ್ ಸರಕಾರದ ದೀರ್ಘಕಾಲೀನ ಭ್ರಷ್ಟಾಚಾರ, ಹಗರಣಗಳು, ವೈಫಲ್ಯ ಹಾಗೂ ವಂಶಪಾರಂಪರ್ಯದ ಕಲೆ ಇವನ್ನು ಭಾಜಪವು ಚೆನ್ನಾಗಿಯೇ ಬಳಸಿಕೊಂಡಿತು ಮತ್ತು ಜನರನ್ನು ತನ್ನ ಪರವಾಗಿ ನಂಬಿಸುವಲ್ಲಿ ಯಶಸ್ವಿಯಾಯಿತು; ಪರಿಣಾಮವಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು.

 ಏನೂ ಮಾಡದೆಯೇ ಎಲ್ಲವನ್ನೂ ಮಾಡಿದಂತೆ ಬಿಂಬಿಸುವಲ್ಲಿ ಕೇಂದ್ರದ ಸರಕಾರ ಇನ್ನೂ ಸಫಲವಾಗಿದೆ. ಅದಲ್ಲದಿದ್ದರೆ ಕಳೆದ 3-4 ವರ್ಷಗಳ ಅವಧಿಯಲ್ಲಿ ನಡೆದ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಶಕ್ಯವಿರಲಿಲ್ಲ. ಗುಮ್ಮನನ್ನು ಕರೆಯುತ್ತೇನೆಂದು ಹೆದರಿಸಿ ಅಮ್ಮ ಮಕ್ಕಳಿಗೆ ಊಟಮಾಡಿಸಿದಂತೆ ಕಾಂಗ್ರೆಸ್‌ನ ಕುರಿತು ಜನರಲ್ಲಿ ಭಯವನ್ನು ಉಳಿಸಿಕೊಂಡುಬಂದದ್ದೇ ಈ ಸರಕಾರ ಮಾಡಿದ ಶ್ರೇಷ್ಠ ಪ್ರಯತ್ನ. ಜೊತೆಗೆ ಧಾರ್ಮಿಕ ಧ್ರುವೀಕರಣ, ಸುಳ್ಳು ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪ್ರಹಸನ ಮುಂತಾದವು ಸೇರಿ ಹಾಗೂ ಹೀಗೂ ನಾಲ್ಕು ವರ್ಷಗಳ ಕಾಲ ಅಧಿಕಾರಕ್ಕೆ ಅಂಟಿಕೊಂಡದ್ದೇ ಭಾಜಪದ ಮಹತ್ಸಾಧನೆ. ಈ ಝಗಮಗಿಸುವ ಬೇಗಡೆಯ ಹೊಳಪಿಗೆ ಚುನಾವಣೆಯ ಸಂದರ್ಭದಲ್ಲಿ ಮೋದಿ ಮತ್ತವರ ಅನುಯಾಯಿಗಳು ಕಾರ್ಯಗತಗೊಳಿಸದ ಭರವಸೆಗಳಾಗಲಿ, ದೊಡ್ಡ ಮೌಲ್ಯದ ನೋಟಿನ ರದ್ದತಿಯಾಗಲಿ, ಬ್ಯಾಂಕುಗಳ ಸಾಲುಸಾಲು ಅಕ್ರಮಗಳಾಗಲಿ, ವಿದೇಶಗಳಲ್ಲಿ ಅಡಗಿರುವ ಮೋದಿ-ಮಲ್ಯಗಳಂತಹ ಲೂಟಿಕೋರರನ್ನು ತರದಿರುವುದಾಗಲಿ, ತೈಲ ಬೆಲೆ ಇಳಿಯದಿದ್ದುದಾಗಲಿ, ಹಣದ ಮೌಲ್ಯವಾಗಲಿ, ಗೋರಕ್ಷಣೆಯ ಹಾಗೂ ಜಾತಿ-ಮತ-ಧರ್ಮದ ಆಧಾರದಲ್ಲಿ, ಹಿಂದುತ್ವದ ರಕ್ಷಣೆಯ ಹೆಸರಿನಲ್ಲಿ ಸರಕಾರವೇ ಪ್ರೋತ್ಸಾಹಿಸಿ ನಡೆಸಿದ ಹಿಂಸೆಯಾಗಲಿ ಜನರಿಗೆ ಕಾಣಿಸಲೇ ಇಲ್ಲ.

ಘೋಷಣೆಗಳಿಂದ ಮತ್ತು ಭಾಷಣಗಳಿಂದಲೇ ಒಂದು ಪಕ್ಷ ಮತ್ತು ಒಬ್ಬ ವ್ಯಕ್ತಿ ಕೋಟಿಕೋಟಿ ಜನರನ್ನು ಹೇಗೆ ಹಾಡಹಗಲೇ ಮತ್ತೆ ಮತ್ತೆ ಮರುಳುಮಾಡಬಲ್ಲರೆಂಬುದಕ್ಕೆ ಕಳೆದ ಮಹಾಚುನಾವಣೆ ಮತ್ತು ಆನಂತರದ ರಾಷ್ಟ್ರ ರಾಜಕೀಯ, ಆರ್ಥಿಕ ನೀತಿ ಸಾಕ್ಷಿಯಾಗಿದೆ. ಇಷ್ಟಕ್ಕೂ ಭ್ರಷ್ಟಾಚಾರದಲ್ಲಿ ಭಾಜಪ ಕಾಂಗ್ರೆಸಿಗೆ ಹೆಚ್ಚು ಬಿಟ್ಟಿಲ್ಲ. ಇವೆರಡೂ ಅಣ್ಣ-ತಮ್ಮ. ಆದರೆ ಕದ್ದ ಕೈಗೆ ಅಂಟಿದ ಜಿಡ್ಡನ್ನು ಇನ್ನೊಬ್ಬರ ಮೈ-ಕೈಗಳಿಗೆ ಒರೆಸಿ ತಾನು ಚೊಕ್ಕಟರಂತೆ ನಟಿಸುವುದರಲ್ಲಿ ಭಾಜಪವು ಕಾಂಗ್ರೆಸನ್ನು ಮೀರಿಸಿದೆ. ಜೊತೆಗೆ ಯಾವ ಆರೋಪಣೆ ಎದುರಾದಾಗಲೂ ಕಾಂಗ್ರೆಸ್ ಹೀಗೆ ಮಾಡಿಲ್ಲವೇ? ಎಂದು ಕೇಳುವ ಮೂಲಕ ಜನರನ್ನು ದಿಕ್ಕುತಪ್ಪಿಸುವ ಹಾದಿಯನ್ನು ಭಾಜಪವು ಕರಗತಮಾಡಿಕೊಂಡಿದೆ. ಇದನ್ನೇ ತಳಮಟ್ಟಕ್ಕೂ ತಲುಪಿಸಿದ್ದರಿಂದ ಅದರ ಪ್ರತಿಯೊಬ್ಬ ಕಾರ್ಯಕರ್ತನೂ ''ಇದೇನು ಮಹಾ? ಕಾಂಗ್ರೆಸ್ ಇದರ ಹತ್ತು ಪಟ್ಟು ಮಾಡಿದೆ'' ಎನ್ನುತ್ತಾರೆ. ಶ್ರೀಸಾಮಾನ್ಯರಲ್ಲಿ ಈ ಬಗ್ಗೆ ಗಹನವಾದ ಚಿಂತನೆ ಮೂಡಿಬರುವಂತೆ ಮಾಡುವ ಪ್ರತಿಕ್ರಿಯೆಗಳು ದೊಡ್ಡಧ್ವನಿ ಮಾಡುತ್ತಿಲ್ಲ. ಯಾರೇ ಅಂತಹ ಸದ್ದು ಮಾಡಿದರೂ ಅಂಥವರನ್ನು ಢೋಂಗಿ ಬುದ್ಧಿಜೀವಿಗಳು ಅಥವಾ ಹಿಂದೂ ವಿರೋಧಿಗಳು ಅಥವಾ ದೇಶದ್ರೋಹಿಗಳು ಎಂಬಿತ್ಯಾದಿಯಾಗಿ ಹಣೆಪಟ್ಟಿ ಹಾಕುವ ಮೂಲಕ ಅವರ ಸದ್ದಡಗಿಸಲಾಗುತ್ತದೆ. ಹೀಗೆ ದೇಶದೆಲ್ಲೆಡೆ ಒಂದೇ ಧ್ವನಿ.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಇತರ ದುರ್ಬಲವರ್ಗದವರು ಯಾವುದೇ ಪ್ರತಿಭಟನೆಗಿಳಿದಾಗಲೂ ಆ ಸಮುದಾಯಗಳ ಒಬ್ಬೊಬ್ಬ ಸ್ಯಾಂಪಲುಗಳನ್ನು ಮುಂದಿರಿಸಿಕೊಂಡು ಅವರಿಂದಲೇ ಅಂತಹ ಹೋರಾಟಗಳನ್ನು ಖಂಡಿಸಲಾಗುತ್ತದೆ. ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತಿತರೆಡೆಗಳಲ್ಲಿ ನಡೆದದ್ದು ಇದೇ. ಮಾಧ್ಯಮಗಳೂ ಸೇರಿದಂತೆ ರಾಜಕೀಯವಾಗಿ ಎದುರಾಳಿಗಳನ್ನು ಮುಗಿಸುವುದಕ್ಕೆ, ಸರಕಾರದ ಎಲ್ಲ ಸಂಸ್ಥೆಗಳನ್ನು ಬಳಸುವುದು ಕಾಂಗ್ರೆಸ್‌ನ ಹಳೆಯ ರೋಗವಾಗಿದ್ದರೆ ಅದನ್ನೇ ಭಾಜಪವು ಅಸ್ತ್ರವಾಗಿ ಬಳಸುತ್ತಿದೆ. ಪ್ರಾಯಃ ಇಂದಿರಾಗಾಂಧಿಯ ಯುಗದ ಆನಂತರ ಅಧಿಕಾರವನ್ನು ಇಷ್ಟು ದುರ್ಬಳಕೆಮಾಡಿಕೊಂಡ ಸರಕಾರ ಇನ್ನೊಂದಿರಲಾರದು. ಆದರೆ ಇದೂ ಜನಮನಕ್ಕೆ ತಲುಪುವುದಿಲ್ಲ; ಏಕೆಂದರೆ ಅವಕಾಶವಾದ, ಸ್ವಾರ್ಥ ಇವುಗಳಿಂದ ದೇಶವೇ ತುಳುಕುತ್ತಿದೆ. ಜೊತೆಗೇ ಬೇಲಿಯಲ್ಲಿ ಕುಳಿತ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ರಾಜಕಾರಣಿಗಳು, ಸಾಹಿತಿ- ಕಲಾವಿದರು, ಚಿಂತಕರು, ನಿವೃತ್ತ ಅಧಿಕಾರಿಗಳು ಮತ್ತಿತರ ಪ್ರಭಾವಿಗಳು ಸಣ್ಣ ಪುಟ್ಟ ಬಿಸ್ಕೆಟುಗಳಿಗೇ ಬಲಿಯಾಗುವ ಕಾರಣದಿಂದ ಅವರನ್ನು ಹೇಗೆ ಬೇಕಾದರೂ ಒಲಿಸಿಕೊಳ್ಳಬಹುದು ಮಾತ್ರವಲ್ಲ ಬಳಸಿಕೊಳ್ಳಬಹುದು.

1975ರ ತುರ್ತುಸ್ಥಿತಿಯ ಕಾಲದಲ್ಲಿ ಆಗಿನ ವಿರೋಧಪಕ್ಷಗಳು ತಮ್ಮ ಗುರುತರ ಭಿನ್ನಾಭಿಪ್ರಾಯಗಳನ್ನೂ ನುಂಗಿಕೊಂಡು ಒಟ್ಟಾಗಿದ್ದವು. ಈ ಪೈಕಿ ಭಾರತೀಯ ಜನಸಂಘವೊಂದೇ ರಾಜಕೀಯ ಭವಿಷ್ಯವನ್ನು ಕಂಡದ್ದು. ಜನತಾ ಸರಕಾರದಲ್ಲಿ ಸೇರಿಕೊಂಡು ಅದು ತನ್ನ ಕೋಮು ಹಣೆಬರಹವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡದ್ದು ಮಾತ್ರವಲ್ಲ, ಜನತಾ ಗುಂಪಿನಿಂದ ಹೊರಬಂದಾಗ ಅಲ್ಲಿಂದ ಒಂದಷ್ಟು ಕಾಂಗ್ರೆಸಿಗರನ್ನು, ಸಮಾಜವಾದಿಗಳನ್ನು ಮತ್ತು ಇತರ ಎಡೆಬಿಡಂಗಿಗಳನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಂಡು ಸೆಳೆಯಿತು. ಅವರೆಲ್ಲ ಈಗ ಭಾಜಪದ ಪ್ರಮುಖರು.

ಆದರೆ ಇಂದು ಅಂತಹ ಭಿನ್ನತೆಯಲ್ಲಿ ಏಕತೆಯ ಪ್ರಸಂಗವಿಲ್ಲ. ಪ್ರತೀ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷವೂ ಯಾರ ಸಂಗಾತದಲ್ಲಿ ತನಗೆ ಅಧಿಕಾರ ಬರುತ್ತದೆ ಇಲ್ಲವೇ ಉಳಿಯುತ್ತದೆ ಎಂಬುದನ್ನಷ್ಟೇ ಗಮನಿಸುತ್ತಿದೆ. ಜಾತೀಯತೆ/ಕೋಮುವಾದವನ್ನು ಮುಖಾಮುಖಿಯಾಗಿಸಬಲ್ಲ ಜಾತ್ಯತೀತ ತತ್ವವನ್ನು ರೂಢಿಮಾಡಬಲ್ಲ ಪಕ್ಷಗಳೇ ಇಲ್ಲವಾಗಿವೆ. ಪ್ರತಿಯೊಂದು ಪಕ್ಷವೂ ಗಡಿಯಾರದ ಪೆಂಡ್ಯುಲಮ್ಮಿನಂತೆ ಅತೀ ಎಡದಿಂದ ಅತೀ ಬಲಕ್ಕೆ ಜೋತಾಡಬಲ್ಲ ಮತ್ತು ಅದನ್ನು ಸಮರ್ಥಿಸಬಲ್ಲ ವಾತಾವರಣವಿದೆ. ಎಡ ಪಕ್ಷಗಳಿಗೆ ಸ್ಪಷ್ಟತೆಯೇ ಇಲ್ಲದೆ ಅವು ಬಹುಪಾಲು ಐಷಾರಾಮಿ ಕೊಠಡಿಗಳಲ್ಲಿ ನಡೆಯುವ ಜನಸಾಮಾನ್ಯರ ಕುರಿತ ಅಕಾಡಮಿಗಳ, ವಿಶ್ವವಿದ್ಯಾನಿಲಯಗಳ ಸಂಕಿರಣಗಳಂತೆ ಏನನ್ನೂ ಸಾಧಿಸದೆ, ಏನನ್ನೂ ಹೇಳದೆ, ಆತ್ಮರತಿಯನ್ನು ಬೆಳೆಸಲು ಮಾತ್ರ ಅನುವು ಮಾಡಿಕೊಡುತ್ತಿವೆ. ಅವು ಒಪ್ಪಲಿ, ಬಿಡಲಿ, ರಾಜಕೀಯ ವಾಸ್ತವತೆಯನ್ನೇ ಕಳೆದುಕೊಂಡಂತೆ ಎಡಪಕ್ಷಗಳ ನಡೆಯಿದೆ. ಅಲ್ಲೂ ವಿರೋಧಾಭಾಸಗಳು ಸಮೃದ್ಧವಾಗಿವೆ. ಯಾರಾದರೂ ಮುಖ್ಯನೆನಿಸಿಕೊಳ್ಳುತ್ತಾನೆಂದರೆ ಸಾಕು, ಆತನ ಜಾತಿಯೋ, ವರ್ಗವೋ ಅಥವಾ ಆತನಿಗೆ ಅಂಟಿಕೊಂಡ ಯಾವುದೋ ಹಳೆಯ ಕಲೆಯೋ ಆತನ ವಿರುದ್ಧ ಟೀಕೆಗೆ, ಖಂಡನೆಗೆ ಬಳಕೆಯಾಗುತ್ತದೆ. ಪ್ರತಿಯೊಬ್ಬನಿಗೂ ಕೊನೆಗೆ ನಾಸ್ತಿಕನಿಗೂ ಈ ದೇಶದಲ್ಲಿ ಮೂರ್ತ-ಅಮೂರ್ತ ಆರಾಧ್ಯದೇವರಿರುವುದು ಭಾರತಕ್ಕೆ ವಿಶೇಷವಾದ ಲಕ್ಷಣ.
ಇಂತಹ ಸಂದರ್ಭದಲ್ಲಿ ಆರೋಗ್ಯಪೂರ್ಣವಾದ ರಾಜಕೀಯ ಚುನಾವಣೆಗಳು ಹೇಗೆ ಸಾಧ್ಯ?
*
ಕರ್ನಾಟಕದಲ್ಲಿ ಈಗ ಘೋಷಣೆಯಾಗಿರುವ ಚುನಾವಣೆಯು ಲೋಕಸಭೆಗೆ ನಡೆದ ಕಳೆದ ಮಹಾ ಚುನಾವಣೆಯ ಪುಟ್ಟ ಕನ್ನಡಿಯಂತಿದೆ. ಯಾವುದೇ ಪಕ್ಷ-ಪ್ರತಿಪಕ್ಷಗಳೂ ಬುದ್ಧಿ ಕಲಿತಂತಿಲ್ಲ. ಭಾಜಪವು ಈಗಾಗಲೇ ಬಳಸಿ ಯಶಸ್ವಿಯಾದ ಮತಾಂಧತೆಯ, ಹಿಂದೂ ಧ್ರುವೀಕರಣದ ತಂತ್ರಗಳನ್ನೇ ಇಲ್ಲೂ ಬಳಸುತ್ತಿದೆ. ಆದರೆ ತಾವು ಇಲ್ಲಿ ಯಾವುದರ ವಿರುದ್ಧ ಹೋರಾಡಬೇಕೆಂಬುದನ್ನು ಕರ್ನಾಟಕದ ಕಾಂಗ್ರೆಸಾಗಲಿ, ಜನತಾ ದಳ(ಎಸ್) ಆಗಲಿ ಲೆಕ್ಕಿಸುತ್ತಿಲ್ಲ. ಅವುಗಳಿಗೆ ಹೇಗಾದರೂ ಅಧಿಕಾರ ಹಿಡಿಯಬೇಕು; ಆಳಲು ಬೇಕಾದ ಶಕ್ತಿ ಬರದಿದ್ದರೆ ಆಳುವವ ರನ್ನು ನಿಯಂತ್ರಿಸಬಲ್ಲಷ್ಟಾದರೂ ಶಕ್ತಿ ಪಡೆಯಬೇಕು; ಇವೇ ಧ್ಯೇಯ. ಮತಾಂಧತೆಯನ್ನು ಭಾಜಪವು ಬಳಸಿದರೆ ಅದಕ್ಕೆ ವಿರುದ್ಧವಾಗಿ ಜಾತ್ಯತೀತತೆಯ ಮೌಲ್ಯಗಳನ್ನು, ನೈತಿಕತೆಯನ್ನು ಬಳಸುವುದರ ಬದಲು ತಾನು ಅದೇ ತಂತ್ರಕ್ಕೆ ಬಲಿಬೀಳುವುದರ ಹಿಂದಿನ ತರ್ಕ ಅರ್ಥವಾಗದು. ಇದರಿಂದಾಗಿ ರಾಜಕಾರಣವು ಕೊಚ್ಚೆಗೆ ಬಿದ್ದಿದೆ. ಅಲ್ಲಿಂದ ಹೊರಬಂದವರು ಇಲ್ಲಿಗೆ, ಇಲ್ಲಿಂದ ಹೊರಹೋದವರು ಅಲ್ಲಿಗೆ ಎಂಬಂತಾಗಿದೆ. ವಂಶ ಪರಂಪರೆಯ ರಾಜಕೀಯವನ್ನು ಟೀಕಿಸುವ ಭಾಜಪವು ರೆಡ್ಡಿ ಗುಂಪಿನ ಆರಕ್ಕೂ ಹೆಚ್ಚು ಮಂದಿಗೆ ಟಿಕೆಟ್ ಕೊಟ್ಟಿದೆ. ತಾವು ಶಾಸಕರಾದರೆ ಸಾಲದು, ತಮ್ಮ ಮಕ್ಕಳೂ ತಮ್ಮ ಜೊತೆ ಇರಬೇಕು ಎಂಬಂತೆ ಎಲ್ಲ ಪಕ್ಷಗಳಲ್ಲೂ ಅಪ್ಪ-ಮಗ, ಅಪ್ಪ-ಮಗಳು, ಅಣ್ಣ-ತಮ್ಮ, ಗಂಡ-ಹೆಂಡತಿ ಹೀಗೆ ಚುನಾವಣೆಗೆ ಅಭ್ಯರ್ಥಿಗಳಾಗಿದ್ದಾರೆ. ಹಣವಿದ್ದರೆ ಯಾರು ಬೇಕಾದರೂ ಪಕ್ಷದ ಟಿಕೆಟ್ ಪಡೆಯಬಹುದು ಎಂಬಂತಾಗಿದೆ. ಇಲ್ಲವಾದರೆ ನೈಸ್ ಖೇಣಿ ಕಾಂಗ್ರೆಸಿನ ಹುರಿಯಾಳಾಗುವುದು, ರೆಡ್ಡಿಗಳು ಮತ್ತೆ ರಾಜಕೀಯದ ಸೂತ್ರಧಾರರಾಗುವುದು, ಕುಮಾರಸ್ವಾಮಿಯವರ ಕುಟುಂಬಕ್ಕೆ ಕುಟುಂಬವೇ ಚುನಾವಣಾ ಅಭ್ಯರ್ಥಿಗಳಾಗುವುದು ಹೇಗೆ ಸಾಧ್ಯ?

ನಿನ್ನೆಯವರೆಗೆ ಒಂದು ಪಕ್ಷದಲ್ಲಿದ್ದವರು ಇಂದು ಮುಂಜಾನೆ ಎದ್ದು ಹೊಸ ದೇವರನ್ನು ಆರಿಸಿಕೊಂಡಂತೆ ಹೊಸಪಕ್ಷವನ್ನು ಆಲಂಗಿಸುವುದನ್ನು ನೋಡಿದರೆ ನಿಜಕ್ಕೂ ಮತಾಂತರದ ಸಮಸ್ಯೆಯಿರುವುದು ರಾಜಕೀಯದಲ್ಲೇ ಹೊರತು ಸಾಮಾಜಿಕ ಮಜಲುಗಳಲ್ಲಿ ಅಲ್ಲವೆನ್ನಿಸುತ್ತಿದೆ. ಕೊನೆಯ ಘಳಿಗೆಯ ವರೆಗೂ ಟಿಕೆಟ್‌ಗಾಗಿ ಜೊಲ್ಲು ಸುರಿಸುತ್ತ ಕುಳಿತು ಅದು ಸಿಕ್ಕದಾಗ ಮೌಲ್ಯದ ಮಹಾ ಪರ್ವತವೇ ತಾನೆಂಬಂತೆ ತನ್ನ ಹಳೆಯ ಪಕ್ಷವನ್ನು ಧಿಕ್ಕರಿಸಿ ತನ್ನನ್ನು ಆಮಂತ್ರಿಸುವ ಹೊಸ ಪಕ್ಷಕ್ಕಾಗಿ ಮತ್ತೆ ಜೊಲ್ಲು ಸುರಿಸುವ ರಾಜಕಾರಣಿಗಳನ್ನು ಏನೆನ್ನಬೇಕು? ಅದನ್ನು ಪುರಂದರದಾಸರು ಎಂದೋ ಹೇಳಿ ಆಗಿದೆ. ಮರೆತಿದ್ದರೆ ನೆನಪಿಸಬಹುದು: ''ಕುರುಡು ನಾಯಿ ತಾ ಸಂತೆಗೆ ಬಂತಂತೆ!'' ಯಾವ ಬೋಧಿವೃಕ್ಷವೂ ಇಲ್ಲದೆ ಜ್ಞಾನೋದಯ ನೀಡಬಲ್ಲ ಟಿಕೆಟೆಂಬ ಬೆಳಕಿಗೆ ನಮಿಸಬೇಕು.

ಜನಸೇವೆ ಮಾಡಲು ಅವಕಾಶ ಬೇಡುವ ಭಿಕನಾಸಿಗಳನ್ನು ಕಂಡಾಗ ವಾಕರಿಕೆ ಬರುತ್ತದೆ. ಅವರ ಚರಿತ್ರೆಯನ್ನು ಗಮನಿಸಿದರೆ, ಅವರ ಹಿಂದಿನ ಮತ್ತು ಈಗಿನ ಸಂಪತ್ತನ್ನು ಅಳೆೆದರೆ, ಅವರಿಗೆ ಜನಸೇವೆ ಮಾಡಲು ಇನ್ನೂ ಅವಕಾಶ ನೀಡಿದರೆ ಅವರು ಇನ್ನಷ್ಟು ಕುಬೇರರಾಗುವುದನ್ನು ಮತ್ತು ಸಮಾಜ ಇನ್ನಷ್ಟು ಬಡವರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಪರಸ್ಪರ ದೂಷಿಸಿಕೊಂಡು ಬೆತ್ತಲೆಯಾಗುವುದನ್ನು ಬಿಟ್ಟರೆ ಚುನಾವಣೆಯ ಹುರಿಯಾಳುಗಳಿಗೆ ಇನ್ನೇನೂ ಉಳಿದಿಲ್ಲ. ಚುನಾವಣಾಪೂರ್ವ ಲಕ್ಷಣಗಳನ್ನು ನೋಡಿದರೆ ದೇಶದ, ರಾಜ್ಯದ ಸಮಸ್ಯೆಗಳಿಗೆ ಗಂಭೀರವಾದ ಯಾವ ಪ್ರಯತ್ನವನ್ನೂ ಈ ರಾಜಕೀಯ ಪಕ್ಷಗಳು ಮಾಡಬಲ್ಲವೆಂಬ ನಂಬಿಕೆಯೇ ಉಳಿಯದಂತಾಗಿದೆ. ನಾವಷ್ಟೇ ದೇಶದ ಮತ್ತು ಪಕ್ಷಗಳ ಕುರಿತು ಚಿಂತಿಸುತ್ತಿದ್ದೇವೆಯೇ ಹೊರತು ಇವುಗಳಿಗೆ ದೇಶದ, ದೇಶವಾಸಿಗಳ ಕುರಿತು ಯಾವ ತಲೆನೋವೂ ಇಲ್ಲವೆಂದು ಕಾಣಿಸುತ್ತದೆ.

ನಮ್ಮ ದುರದೃಷ್ಟಕ್ಕೆ ಯಾವ ಪಕ್ಷವೂ ಒಂದು ಸ್ಯಾಂಪಲ್ ಸೀಟನ್ನಾದರೂ ಮಾದರಿಯಾಗಿ, ಆದರ್ಶವಾಗಿ ರೂಪಿಸಲು ಶಕ್ತವಾಗಿಲ್ಲ. ರಾಜ್ಯವನ್ನು ಕಾಂಗ್ರೆಸ್ ಮುಕ್ತವಾಗಿಸಲು ಭಾಜಪ, ಭಾಜಪ ಮುಕ್ತವಾಗಿಸಲು ಕಾಂಗ್ರೆಸ್ ಮತ್ತು ಇವೆರಡರ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ಜೆಡಿಎಸ್ ಕಾದುಕುಳಿತಿವೆ. ಈಗಷ್ಟೇ ಅಸಭ್ಯ ಭಾಷಣಗಳೂ ಘೋಷಣೆಗಳೂ ಆರಂಭವಾಗಿವೆ. ಸುಳ್ಳು ಸುದ್ದಿಗಳ ಮಾಧ್ಯಮಗಳೇ ಹೆಚ್ಚು ಪ್ರಚಾರ-ಪ್ರಸಾರದಲ್ಲಿವೆ. ಅಂತರ್ಜಾಲವೂ ಬಹಿರ್ಜಾಲವೂ ಅನವರತ ಕೇಡಿನ ಬಲೆಯನ್ನು ವ್ಯಾಪಿಸಿವೆ. (ಈ ತಂತ್ರದಲ್ಲೂ ಭಾಜಪ ಮುನ್ನಡೆಯನ್ನು ಸಾಧಿಸಿದೆಯೆಂಬುದನ್ನು ಗಮನಿಸಿದರೆ ದುರಂತಕ್ಕೆ ಬೇರೆ ಸಾಕ್ಷಿ ಬೇಡ: 12 ವರ್ಷಕ್ಕೆ ಮೀರದ ಮಕ್ಕಳ ರೇಪಿಸ್ಟರಿಗೆ ಮರಣದಂಡನೆಯ ಶಿಕ್ಷೆಯನ್ನು ಜಾರಿಗೆ ತಂದದ್ದು ಚುನಾವಣಾ ಪ್ರಚಾರದ ಜಾಹೀರಾತಿನಲ್ಲಿ ಬಂದಿದೆ!)

ಇವುಗಳ ನಡುವೆ ಸತ್ಯವನ್ನು ಹುಡುಕುವುದು ಬಹು ಕಷ್ಟ. ಆದರೆ ದೇಶದ ಎಲ್ಲೆಡೆ ಹರಡಿರುವ ವಿಷವನ್ನು ಗುರುತಿಸಿ ಅವುಗಳಲ್ಲಿ ಅತ್ಯಂತ ಕಡಿಮೆ ನೋವುಂಟುಮಾಡಬಲ್ಲ ವಿಷವನ್ನು ಔಷಧಿಯೆಂದು ಸ್ವೀಕರಿಸುವುದರ ಹೊರತಾಗಿ ಅನ್ಯ ಮಾರ್ಗವಿಲ್ಲ. ಇದನ್ನೇ ಶ್ರೀಸಾಮಾನ್ಯ ಮತದಾರನಿಗೆ ಮನವರಿಕೆ ಮಾಡಿಕೊಡುವುದು ಇಂದಿನ ಸವಾಲಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top