2018ರ ವಿಪ್ಲವ | Vartha Bharati- ವಾರ್ತಾ ಭಾರತಿ

2018ರ ವಿಪ್ಲವ

ಸಂಘ ಸಂಸಾರದ ಗಟ್ಟಿಯಾದ ಕೇಸರಿ ಬೇರುಗಳನ್ನು ಹೊಂದಿದ ಈ ಹೊಸತಳಿಯ ಅಶ್ವತ್ಥವೃಕ್ಷವು ಮುಖ್ಯಮಂತ್ರಿಯಾದದ್ದೇ ತಡ, ಸಕಲಕಲಾವಲ್ಲಭರಂತೆ ಬಲ್ಲವರಾಗಿದ್ದಾರೆ. ದಿನಕ್ಕೊಂದರಂತೆ ಅಣಿಮುತ್ತನ್ನು ಸುರಿಸುತ್ತಿದ್ದಾರೆ. ಎಲ್ಲವನ್ನೂ ನೆನಪು ಮಾಡಿ ಹೇಳಲಾಗದಿದ್ದರೂ ಕೆಲವೊಂದನ್ನು ಮರೆಯಲು ಸಾಧ್ಯವಿಲ್ಲ. ಅವು ಇಡೀ ದಿನ ಮತ್ತು ಮುಂದೆ ಕೆಲವು ದಿನಗಳ ಕಾಲ ಮನಸ್ಸನ್ನು ಆಹ್ಲಾದದಲ್ಲಿರಿಸುತ್ತದೆ.


ತ್ರಿಪುರಾದಲ್ಲಿ ಕಮ್ಯುನಿಸ್ಟ್ ಆಧಿಪತ್ಯ ಮುಗಿದು ಭಾಜಪದ ಜನಹಿತ ಸರಕಾರ ಬಂದು ವಿಪ್ಲವ್ ದೇವ್ (ನಮ್ಮ ಕನ್ನಡದಲ್ಲಿ ಇವರನ್ನು ಅನುಕೂಲಕ್ಕಾಗಿ ವಿಪ್ಲವ ದೇವರೆಂದು ಉಲ್ಲೇಖಿಸೋಣ!) ಎಂಬವರು ಮುಖ್ಯಮಂತ್ರಿ ಯಾದರು. ಸಂಘ ಸಂಸಾರದ ಗಟ್ಟಿಯಾದ ಕೇಸರಿ ಬೇರುಗಳನ್ನು ಹೊಂದಿದ ಈ ಹೊಸತಳಿಯ ಅಶ್ವತ್ಥವೃಕ್ಷವು ಮುಖ್ಯಮಂತ್ರಿಯಾದದ್ದೇ ತಡ, ಸಕಲಕಲಾವಲ್ಲಭರಂತೆ ಬಲ್ಲವರಾಗಿದ್ದಾರೆ. ದಿನಕ್ಕೊಂದರಂತೆ ಅಣಿಮುತ್ತನ್ನು ಸುರಿಸುತ್ತಿದ್ದಾರೆ. ಎಲ್ಲವನ್ನೂ ನೆನಪು ಮಾಡಿ ಹೇಳಲಾಗದಿದ್ದರೂ ಕೆಲವೊಂದನ್ನು ಮರೆಯಲು ಸಾಧ್ಯವಿಲ್ಲ. ಅವು ಇಡೀ ದಿನ ಮತ್ತು ಮುಂದೆ ಕೆಲವು ದಿನಗಳ ಕಾಲ ಮನಸ್ಸನ್ನು ಆಹ್ಲಾದದಲ್ಲಿರಿಸುತ್ತದೆ. ಹಾಸ್ಯ ಸಾಹಿತ್ಯದಲ್ಲಿ ಹೊಸ ವಿಪ್ಲವವನ್ನು ಸೃಷ್ಟಿಸುತ್ತಾರೆಂದೇ ಇವರಿಗೆ ಹೆತ್ತವರು ವಿಪ್ಲವ ಎಂದು ಹೆಸರಿಟ್ಟಿರಬೇಕೆಂದು ಕಿಡಿಗೇಡಿಗಳು ಹೇಳುತ್ತಿರಬಹುದು! ಈಗಾಗಲೇ ಕನ್ನಡದ ಪತ್ರಿಕೆಗಳು ತಮ್ಮ ಬರಲಿರುವ ಹಾಸ್ಯ ಸಂಚಿಕೆಗೆ ವಿಪ್ಲವ ದೇವರಿಂದ ಲೇಖನವನ್ನು ಆಹ್ವಾನಿಸಿರಬಹುದೆಂಬ ಗುಮಾನಿ ಯಿದೆ! ಹಾಗೂ ಗಂಗಾವತಿ ಪ್ರಾಣೇಶ್, ಕೃಷ್ಣೇಗೌಡರು, ರಿಚರ್ಡ್ ಲೂಯಿಸ್, ಹಿರೇಮಗಳೂರು ಕಣ್ಣನ್, ಡುಂಡಿರಾಜ್ ಮುಂತಾದ ಹಾಸ್ಯ ಸಾಹಿತಿಗಳು/ಭಾಷಣಕಾರರು ಸ್ವಯಂನಿವೃತ್ತಿಯನ್ನು ಘೋಷಿಸುತ್ತಾರೆಂಬ ವದಂತಿಗಳೂ ಇವೆ! ಈ ವಿಪ್ಲವ ಮೂರ್ತಿಯ ಸುಭಾಷಿತಗಳಲ್ಲಿ ಕೆಲವನ್ನಾದರೂ ಪಟ್ಟಿ ಮಾಡಬಹುದು: (ಅವುಗಳಿಗೆ ಅಲ್ಲಲ್ಲೇ ನನ್ನ ಅಲ್ಪಮತಿಯ ವ್ಯಾಖ್ಯಾನವನ್ನೂ ಮಾಡಿದ್ದೇನೆ.)

1. ಮಹಾಭಾರತದ ಕಾಲಕ್ಕೆ ಅಂತರ್ಜಾಲ ವ್ಯವಸ್ಥೆಯಿತ್ತೆಂದೂ ಹಾಗಲ್ಲದಿದ್ದರೆ ಸಂಜಯನು ಕುರುಕ್ಷೇತ್ರ ರಣಾಂಗಣಕ್ಕೆ ಹೋಗದೆಯೇ ದೃತರಾಷ್ಟ್ರನಿಗೆ ಕೌರವ-ಪಾಂಡವರ ನಡುವಣ ಯುದ್ಧವನ್ನು ವರ್ಣಿಸಿ ಹೇಳು ವುದು ಹೇಗೆ ಸಾಧ್ಯವೆಂದೂ ಅವರ ತರ್ಕ. ಇದು ದಂತಕತೆಯಲ್ಲವೆಂದು ಭಾರತೀಯ ವೈದ್ಯ ಪದ್ಧತಿಯ ಔಷಧ ತಜ್ಞರು ಈಗಾಗಲೇ ಇನ್ನಷ್ಟು ಊಹಾತ್ಮಕ ಸಂಶೋಧನೆಗಳ ಮೂಲಕ ನಿರೂಪಿಸಿದ್ದಾರೆ. ಇಲ್ಲವಾದರೆ ದೃತರಾಷ್ಟ್ರ ಮಹಾರಾಜರು ತಮ್ಮ ಮಕ್ಕಳೂ ಪಾಂಡವರೂ ರಣರಂಗದಲ್ಲಿ ಏನು ಮಾಡುತ್ತಿದ್ದಾರೆಂದು ಏಕೆ ಕೇಳಬೇಕು? ಯುದ್ಧರಂಗಕ್ಕೆ ಹೋದವರು ಕಳ್ಳೇಕಾಯಿ ತಿಂದುಕೊಂಡು ಕೂತಿರಲಾರರೆಂದು ಅವರಿಗೂ ಗೊತ್ತಿಲ್ಲವೇ? ಇದು ನಿಜವೆಂಬಂತೆ ಒಂದು ಅಚ್ಚ ಭಾರತೀಯ ಉದಾಹರಣೆಯಿದೆ: ಒಬ್ಬ ವಿದೇಶಿ ಇಂಜಿನಿಯರ್ ಭಾರತೀಯ ಇಂಜಿನಿಯರ್‌ನೊಂದಿಗೆ ಹರಟುತ್ತಿದ್ದ. ಆತ ತನ್ನ ದೇಶದ ಇತಿಹಾಸವನ್ನು, ಪರಂಪರೆಯನ್ನು, ಹೊಗಳುತ್ತ ತನ್ನ ದೇಶದಲ್ಲಿ ಮಣ್ಣನ್ನು ಅಗೆಯುವಾಗ ನೂರು ಅಡಿ ಆಳದಲ್ಲಿ ವಿದ್ಯುತ್ ತಂತಿಯ ಮಾದರಿಯ ತಂತಿ ಸಿಕ್ಕಿತೆಂದೂ ಇದರಿಂದ ಹತ್ತು ಸಾವಿರವೋ ಲಕ್ಷವೋ ವರುಷಗಳ ಹಿಂದೆ ತನ್ನ ದೇಶ ವಿದ್ಯುತ್ ಸಂಪರ್ಕವನ್ನು ಹೊಂದಿತ್ತೆಂದು ಹೇಳಿದ.

ಇದಕ್ಕುತ್ತರವಾಗಿ ನಮ್ಮ ಸವ್ಯಸಾಚಿ ಭಾರತೀಯ ಇಂಜಿನಿಯರ್ ಇಸ್ಪೀಟು ಆಟದಲ್ಲಿ ಡಬಲ್ ಎಂದೋ ರಿ-ಡಬಲ್ ಎಂದೋ ಹೇಳಿದಂತೆ ತನ್ನ ದೇಶದಲ್ಲಿ ಇನ್ನೂರು ಅಡಿ ಆಳ ಅಗೆದಾಗ ಏನೂ ಸಿಗಲಿಲ್ಲವೆಂದೂ ಆದ್ದರಿಂದ ಇಪ್ಪತ್ತು ಸಾವಿರ ಅಥವಾ ಲಕ್ಷ ವರ್ಷಗಳ ಹಿಂದೆ ತನ್ನ ದೇಶದಲ್ಲಿ ನಿಸ್ತಂತು (ವಯರ್ ಲೆಸ್) ಸಾಧನಗಳಿದ್ದವೆಂದು ಸಾಬೀತಾಯಿತೆಂದೂ ಹೇಳಿದ. ಆ ಮಹಾಮಹಿಮ ಭಾರತೀಯನೇ ಈಗ ತ್ರಿಪುರಾದ ಮುಖ್ಯಮಂತ್ರಿಯಾಗಿರಬಹುದೆಂಬುದು ನನ್ನ ಊಹೆ.

2. ಡಯಾನಾ ಹೇಡನ್ ಎಂಬವಳಿಗೆ ವಿಶ್ವ ಸುಂದರಿ ಪಟ್ಟ ಹೇಗೆ ಬಂತು? ಆಕೆ ಅದೇನು ಸುಂದರಿಯೋ? ಐಶ್ವರ್ಯರೈಯಾದರೂ ಪರವಾಗಿಲ್ಲ, ಆಕೆ ಚೆನ್ನಾಗಿದ್ದಾಳೆಂಬುದು ವಿಪ್ಲವರ ಬಹಿರಂಗ ಅಭಿಪ್ರಾಯ. ಇದು ಸಾಲದೆಂಬಂತೆ ಸೌಂದರ್ಯ ಸಾಧನಗಳ ಮಾರಾಟಕ್ಕಾಗಿ ವಿಶ್ವ ಸುಂದರಿ ಸ್ಪರ್ಧೆಯೆಂದೂ (ಪ್ರಧಾನಿಗಳ ಪ್ರಭಾವದಿಂದಾಗಿ ಭಾರತದಲ್ಲಿ ಪತಂಜಲಿ ವ್ಯವಹಾರ ಕುದುರಿದೆಯಾದ್ದರಿಂದ?) ಈಗ ಭಾರತೀಯರಿಗೆ ಈ ಪ್ರಶಸ್ತಿ ಬರುವುದಿಲ್ಲವೆಂದೂ ಹೇಳಿದರು. ಮೊನ್ನೆ ಮೊನ್ನೆ 2017ರ ವಿಶ್ವಸುಂದರಿ ಪಟ್ಟ ಭಾರತೀಯ ಸುಂದರಿ ಮಾನುಷಿ ಚಿಲ್ಲರ್ ಎಂಬಾಕೆಗೆ ದಕ್ಕಿರುವುದು ಈ ಯುವೋತ್ಸಾಹಿ ಮುಖ್ಯಮಂತ್ರಿಯ ಗಮನಕ್ಕೆ ಬಂದಿರಲಿಲ್ಲ. ಮೇಕ್ ಇನ್ ಇಂಡಿಯಾವನ್ನು ಶ್ರದ್ಧೆಯಿಂದ ಅನುಸರಿಸುವವರಿಗೆ ವಿದೇಶೀ ಸುದ್ದಿಗಳ ಅಗತ್ಯವಿರುವುದಿಲ್ಲ. ಕೂಪಮಂಡೂಕ ಎಂದು ಜನರು ಲೇವಡಿ ಮಾಡುವ ನಮ್ಮ ಬಾವಿಯ ಶುದ್ಧ ಭಾರತೀಯ ಕಪ್ಪೆಎಂದೂ ಸಮುದ್ರದ ಕುರಿತು ಚಿಂತಿಸಿರಲಾರದು. ಸೌಂದರ್ಯಸಾಧನಗಳ ಮಾರಾಟಕ್ಕಾಗಿಯೇ ಈ ಸ್ಪರ್ಧೆ ಎಂದಿಟ್ಟುಕೊಂಡರೂ ಸ್ಪರ್ಧೆಯಲ್ಲಿ ವಿಜೇತರಾಗುವುದು ಸುಲಭ ಸಾಧ್ಯವಲ್ಲವಲ್ಲ! ಹೇಗಿದ್ದರೂ ಡಯಾನಾ ಹೇಡನ್ ಸೌಂದರ್ಯದ ಕುರಿತು ಈ ಮುಖ್ಯಮಂತ್ರಿ ಯಾವ ಅರ್ಹತೆ ಮೇಲೆ ಮಾತನಾಡುತ್ತ್ತಾರೋ? ಅದು ಗೊತ್ತಾದರೆ ಅವರಿಗೆ ಮುಂದಿನ ಸಾಲಿನ ವಿಶ್ವಸುಂದರಿ ಸ್ಪರ್ಧೆಯ ತೀರ್ಪುಗಾರರ ಮಂಡಳಿಯಲ್ಲಿ ಅವಕಾಶ ಪ್ರಾಪ್ತವಾಗುತ್ತದೆಂದು ಆಶಿಸೋಣ.

3. ಉದ್ಯೋಗಾಕಾಂಕ್ಷಿ ಯುವಕರಿಗೆ ಈ ಮುಖ್ಯಮಂತ್ರಿಯವರ ಉಚಿತ ಸಲಹೆಯಿದೆ. ಕೆಲಸ ಹುಡುಕಿಕೊಂಡು ರಾಜಕಾರಣಿಗಳಿಗೆ ತೊಂದರೆ ಕೊಡುವ ಬದಲಿಗೆ ದನ ಸಾಕಿ ಹಾಲು ಮಾರಾಟ ಮಾಡಿ ಅಥವಾ ಪಾನ್ ಅಂಗಡಿ ತೆರೆದು ಜೀವನ ಮಾಡುವುದೇ ಸೂಕ್ತ; ಹತ್ತು ವರ್ಷಗಳಲ್ಲಿ ಆತ ಹತ್ತು ಲಕ್ಷ ರೂಪಾಯಿ ಸಂಪಾದಿಸಬಲ್ಲ! ದನ ಸಾಕುವ ಸಲಹೆ ಒಳ್ಳೆಯದೇ; ಏಕೆಂದರೆ ಗೋರಕ್ಷಣೆಯ ಹೆಸರಿನಲ್ಲಿ ಯಾರನ್ನೋ ಕೊಲ್ಲುವುದು, ಯಾರನ್ನೋ ಹಿಂಸಿಸುವುದು ಮಾಡುವ ಬದಲು ದನಕಾಯುತ್ತ ಕೌಬಾಯ್‌ಗಳಾಗಿ ಬದುಕುವುದು ಸಾಮಾಜಿಕ ಶಾಂತಿಗೆ ಅನುಕೂಲ.

ಈ ದೃಷ್ಟಿಯಿಂದ ಸದ್ರಿ ಮುಖ್ಯಮಂತ್ರಿಗಳಿಗೆ ಶಾಂತಿಗಾಗಿರುವ ನೊಬೆಲ್ ಪ್ರಶಸ್ತಿಯನ್ನು ನೀಡಬೇಕೆಂದು ಶಿಫಾರಸು ಮಾಡಲು ಪ್ರಧಾನಿಯವರು ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾರೆಂದು ನಂಬೋಣ. ಆದಷ್ಟು ಬೇಗ ಎಂದು ಏಕೆ ಹೇಳಿದೆನೆಂದರೆ ಅದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬ ಶಾಂತಿದೂತನ ಕೈಸೇರುವ ಮೊದಲು ನಾವದನ್ನು ವಿಪ್ಲವ ದೇವರಿಗೆ ಕೊಡಿಸುವುದಕ್ಕೆ ಮುತುವರ್ಜಿ ವಹಿಸಬೇಕು. ಹಾಗೆಯೇ ಪಾನ್ ಎಂಬುದನ್ನು ಆದಾಯಕರ ಸಂಖ್ಯೆಯೆಂದು ಇವರು ಬಗೆದರೋ ತಿಳಿಯದು. ಆದರೆ ಪಾನ್ ಎಂಬ ಪದದ ಹಿಂದೆ ಮುಂದೆ ಮತ್ತು ಸುತ್ತ ಇವರು ಮಾಡಿದ ಅನ್ವೇಷಣೆ ದೊಡ್ಡದು. ಸ್ವಚ್ಛತಾ ಆಂದೋಲನವು ದೊಡ್ಡ ಗತಿಯಲ್ಲಿ ಸಾಗುತ್ತಿರುವುದರಿಂದ ಮೊಬೈಲ್ ಫೋನ್‌ಗಳಂತೆ ಮೊಬೈಲ್ ಬೆಡ್ ಪಾನ್‌ಗಳನ್ನೂ ಯುವಕರು ಸಂಶೊಧಿಸಿದರೆ ಎಲ್ಲ ಬಗೆಯ ಮೇಕ್ ಇನ್ ಇಂಡಿಯಾ ಪಾನ್‌ಗಳು ನಿರ್ಮಾಣಗೊಂಡು ಪಾನ್ ಅಮೆರಿಕ ಬ್ರಾಂಡ್‌ನಂತೆ ಪಾನ್ ಇಂಡಿಯಾ ಎಂಬ ಅಚ್ಚಹೊಸ ಬ್ರಾಂಡ್ ಸೃಷ್ಟಿಯಾಗಿ ಭಾರತವು ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ.

4. ಸಿವಿಲ್ ಸರ್ವಿಸ್ ಸಿವಿಲ್ ಇಂಜಿನಿಯರುಗಳಿಗೆ ಮಾತ್ರ ಇರಬೇಕು; ಮೆಕ್ಯಾನಿಕಲ್ ಇಂಜಿನಿಯರುಗಳು ಸಿವಿಲ್ ಸರ್ವಿಸ್ ಕೈಗೊಳ್ಳಬಾರದು. ದೇಶ ಕಟ್ಟುವ ಕೆಲಸಕ್ಕೆ ಸಿವಿಲ್ ಇಂಜಿನಿಯರುಗಳೇ ಸೂಕ್ತ. ಅದನ್ನು ಇತರರು ಮಾಡಲಾರರು. ‘‘ಕಟ್ಟುವೆವು ನಾವು ಹೊಸ ನಾಡೊಂದನು’’ ಎಂದು ಗೋಪಾಲಕೃಷ್ಣ ಅಡಿಗರು ಬರೆದಾಗ ಅದನ್ನು ಸಿವಿಲ್ ಇಂಜಿನಿಯರುಗಳಿಗೆ ರಾಷ್ಟ್ರಗೀತೆಯಾಗಿ ಬರೆದರೇನೋ? ಸಿವಿಲ್ ಸರ್ವಿಸ್ ಎಂಬುದನ್ನು ವಿಪ್ಲವ ದೇವರಂಥವರು ಹೀಗೆ ವಿವರಿಸುತ್ತಾರೆಂದು ತಿಳಿದೇ ಸ್ವತಂತ್ರ ಭಾರತದ ನಿರ್ಮಾತೃಗಳು ಐಸಿಎಸ್ (ಭಾರತೀಯ ಸಿವಿಲ್ ಸೇವೆ) ನ್ನು ಬದಲಾಯಿಸಿ ಐಎಎಸ್ ಅಥವಾ ಭಾರತೀಯ ಆಡಳಿತ ಸೇವೆ ಎಂದು ನಾಮಕರಣ ಮಾಡಿದರು.

ಆದರೂ ಅದು ಸಿವಿಲ್ ಸರ್ವಿಸ್ ಎಂಬ ಆರೋಪವಂತೂ ತಪ್ಪಿಲ್ಲ. ಆದ್ದರಿಂದ ವಿಪ್ಲವ್ ದೇವ್ ಸರಿಯಾಗಿಯೇ ಗುರುತಿಸಿದಂತೆ ದೇಶ ಕಟ್ಟಲು ಸಿವಿಲ್ ಇಂಜಿನಿಯರ್‌ಗಳೇ ಶಕ್ತರು. ಇದಕ್ಕೆ ಬೇಕಾದ ಸಿಮೆಂಟ್, ಮರಳು ಇವನ್ನು ಅಂಬಾನಿ, ಅದಾನಿ ಮುಂತಾದವರು ಪೂರೈಸಿದರೆ ಕರಸೇವೆಯ ಮುಖಾಂತರ ರಾಮಸೇತುವಿನಂತಹ ಮತ್ತೊಂದು ಸೇತುವೆ ನಿರ್ಮಾಣಗೊಂಡು ವಿಶ್ವಾದ್ಯಂತ ರಸ್ತೆನಿರ್ಮಾಣ ಮಾಡಿ ಹಡಗುಗಳಿಗೆ ನಿವೃತ್ತಿ ಘೋಷಿಸಬಹುದು. ಈ ಮತ್ತು ಇಂತಹ ಅಮೂಲ್ಯ ಸಲಹೆಗಳನ್ನು ನೀಡಿ ತಮ್ಮ ಅದ್ವಿತೀಯ ಮತ್ತು ಅನನ್ಯ ಪ್ರತಿಭೆ ಮತ್ತು ಪಾಂಡಿತ್ಯದ ಕೀವನ್ನು (ಹೀನೋಪಮೆಯಲ್ಲ; ಪರಿಸ್ಥಿತಿಯ ಗಾಂಭೀರ್ಯಕ್ಕೆ ಈ ರೂಪಕ!) ಹೊರಹಾಕಿ ದೇಶದ ಗಮನ ಸೆಳೆದ ಈ ಭಾರತ ಕೇಸರಿಯನ್ನು ಪ್ರಧಾನಿಯವರು ಮತ್ತು ಅಮಿತ್ ಶಾರವರು ದಿಲ್ಲಿಗೆ ಕರೆಸಿದ್ದಾರೆಂದು ಮಾಧ್ಯಮಗಳು ವರದಿಮಾಡಿವೆ. ಮಾಧ್ಯಮಗಳು ಎಂದಿನ ಬೇಜವಾಬ್ದಾರಿಯಿಂದ ಈ ಕರೆಗೆ ತಪ್ಪರ್ಥ ನೀಡಿ ವಿಪ್ಲವ ದೇವರನ್ನು ಛೀಮಾರಿ ಹಾಕಲು ಕರೆಸಿದ್ದಾಗಿ ಊಹಿಸಿವೆ. ಆದರೆ ಈಗಾಗಲೇ ವಿಪ್ಲವ ದೇವರು ಈ ಬಗ್ಗೆ ಸುಸೂತ್ರವಾದ ಸಮರ್ಥನೆಯನ್ನು ನೀಡಿ ತಾನು ಅವರೀರ್ವರಿಗೆ ಔರಸಪುತ್ರನಂತೆಯೆಂದೂ, ಮೋದಿ-ಅಮಿತ ಎಂಬ ಹರಿ-ಹರರಲ್ಲಿ ಭೇದ ಕಲ್ಪಿಸಬಾರದೆಂದೂ ಅವರು ತನ್ನನ್ನು ಮೆಚ್ಚಿಕೊಂಡಿದ್ದಾರೆಯೇ ವಿನಾ ಈ ಭೇಟಿಗೆ ವಿಪರೀತಾರ್ಥ ಕಲ್ಪಿಸಬಾರ ದೆಂದೂ ಸ್ಪಷ್ಟೀಕರಿಸಿದ್ದಾರೆ.

ನಿಜಕ್ಕೂ ಅವರು ಸರಿಯೇ ಇರಬಹುದು: ಡಾರ್ವಿನ್‌ನ ವಿಕಾಸವಾದದ ಸುಳ್ಳನ್ನು ಬಯಲಿಗೆಳೆದ 21ನೇ ಶತಮಾನದ ಭಾರತದಲ್ಲಿ ಹೊಸಬಗೆಯ ಪಂಚ್-ತಂತ್ರವನ್ನು ಬೋಧಿಸಬಲ್ಲ ಉತ್ತರಪ್ರದೇಶೇತರ ಯೋಗಿಯೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ವಿಪ್ಲವ ದೇವರು ಕಲ್ಪನೆಯಿಂದಲೋ ಅಥವಾ ಅವರ ಅನುಭವ ದ್ರವ್ಯದಿಂದಲೋ ತಯಾರಿಸಿದ ಈ ಮಣಿಮೇಖಲೆಯನ್ನು ತಮಗೂ ಸ್ವಲ್ಪ ಮತ್ತು ಕ್ಷಿಪ್ರವಾಗಿ ಹೇಳಿಕೊಟ್ಟರೆ ಅದನ್ನು ಮುಂದೆ ನಡೆಯುವ ಕರ್ನಾಟಕದ ಚುನಾವಣೆಯಲ್ಲಿ ಮತ್ತು 2019ರ ಮಹಾ ಸಮರದಲ್ಲಿ ಪ್ರಯೋಗಿಸಬಹುದೆಂಬ ಅರಿವು ಮತ್ತು ಆಸೆ ಪ್ರಧಾನಿಗಳಿಗೂ ಇದೆ; ಪಕ್ಷಾಧ್ಯಕ್ಷರಿಗೂ ಇದೆ. ಯುವ ಶಕ್ತಿಯೇ ದೇಶದ ಶಕ್ತಿ.

ವಿಪ್ಲವ ದೇವರ ಹಾಗೆ ನೂರಾ ಇಪ್ಪತ್ತೈದು ಕೋಟಿ ಭಾರತೀಯರೂ ಕಾಯಾ-ವಾಚಾ-ಮನಸಾ ಪರಿವರ್ತನೆಯಾದರೆ ದೇಶಕ್ಕೆ ಹೊಸ ಚಿಕಿತ್ಸೆಯ ಅಗತ್ಯವೇ ಇಲ್ಲದೆ ನಮ್ಮ ನಿಮಾನ್ಸ್‌ನಂತಹ ಸಂಸ್ಥೆಗಳನ್ನು ಮುಚ್ಚಿ ಸಂಪತ್ತನ್ನು ಉಳಿಸಬಹುದು; ಪ್ರತಿಯೊಬ್ಬರ ಖಾತೆಗೆ ರೂ.15 ಲಕ್ಷ ಠೇವಣಿಯಿಟ್ಟರೆ ಆಗ ಸ್ವಿಸ್ ಬ್ಯಾಂಕಿನ ಹಣದ ಅಗತ್ಯವೇ ಬೀಳುವುದಿಲ್ಲ ಎಂದೆಲ್ಲ ತರ್ಕವಿರಬಹುದು. ವಿರೋಧ ಪಕ್ಷಗಳು ಎಷ್ಟೇ ಟೀಕಿಸಿದರೂ ಅವರ ಸದ್ದಡಗಿಸುವುದಕ್ಕೆ ಇಂತಹ ಒಂದೊಂದು ಪ್ರತಿಭೆಗಳು ಸಾಕಲ್ಲ! ಈ ಸಲಹೆಗಳು ಹಗುರಾದವೆಂದರೆ ಸ್ವಲ್ಪತೂಕದ ಸಲಹೆಗಳನ್ನು ನೀಡಲು ನಮ್ಮವರೇ ಆದ ಅನಂತಕುಮಾರ ಹೆಗಡೆ ಮತ್ತು ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಸ್ವಲ್ಪಕೆದಕಿದರೆ ಸಾಕು; (ಅಡಿಗರ ಕ್ಷಮೆ ಕೋರಿ) ‘‘ಅಗೆವಾಗ್ಗೆ ಮೊದಲು ಕೋಶಾವಸ್ಥೆ... ಕೊನೆಗೆ ಕಂಡೀತು ಗೆರೆಮಿರಿವ ಕೆಂಡದದಿರು!’’

ಮಂಗನಿಂದ ಮನುಷ್ಯನ ಸೃಷ್ಟಿಯಾಗಲಿಲ್ಲ ಎಂಬ ವಾದವನ್ನು ಹೂಡಿದ ಮೇಧಾವಿಯು ಸರಿಯೆಂದು ಈಗಲಾದರೂ ಒಪ್ಪಲೇ ಬೇಕು. ಏಕೆಂದರೆ ಯಾರೋ ಒಬ್ಬ ಕೇಳಿದಂತೆ ಮಂಗನಿಂದ ಮಾನವನಾದದು ಸತ್ಯವಾದರೆ ಮಂಗಗಳೇಕೆ ಇವೆ? ಅದಕ್ಕೆ ಉತ್ತರ ಈಗ ಸಿಕ್ಕಿದೆ. ಅಂತಹವರು ಮುಖ್ಯ ಮಂತ್ರಿಗಳಾಗುವುದಕ್ಕಾದರೂ ಬೇಕು. ಬವರವಾದರೆ ಹರನ ಹಣೆಯಲಿ ಬೆವರ ತರಿಸುವೆನೆಂಬ ಬಿರುದಿನ ಸಂಗರ ಸಮರ್ಥರು ಪಾಶುಪತವನ್ನು ಸಂಗ್ರಹಿಸಿದಂತೆ ಭಾರತದ ಮೊದಲ ಕೇಸರಿ ವಿಪ್ಲವವು 2018ರಲ್ಲಿ ಆರಂಭವಾಯಿತೆಂದು ಹೇಳಿದರೆ ತಪ್ಪಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top