ರಾಜಕಾರಣವೂ ಚರಿತ್ರೆಯೂ

ಚುನಾವಣೆಗಳು ರಾಜಕಾರಣದ ಎಲ್ಲ ಮಾಲಿನ್ಯವನ್ನು ಬೀದಿಗೆ ಚೆಲ್ಲುತ್ತವೆ. ಒಳಗಿದ್ದ ಎಲ್ಲ ಬಗೆಯ ಕೀವನ್ನು, ವಿಷವನ್ನು ಹೊರಗೆಡಹಲು ಚುನಾವಣೆಯೆಂಬ ಮಹಾಸಮರವೇ ಸಂದರ್ಭ. ಈ ಕೊಳಕು ರಾಜಕಾರಣ ಧೂಳನ್ನೆಬ್ಬಿಸಿ ಎಂತಹ ಊರಿನ ಲಕ್ಷಣಗಳನ್ನೂ ಹಾಳುಗೆಡವುದರಲ್ಲಿ ನಿಸ್ಸೀಮ. ಮುಧೋಳದ ಚರಿತ್ರೆಯನ್ನೇ ಬಣ್ಣಗೆಡಿಸಿದ ಕೀರ್ತಿ ಈ ದೇಶದ ಪ್ರಧಾನಿಗೆ ಸಂದಿರುವುದು ಒಂದು ಚರಿತ್ರಾರ್ಹ ಘಟನೆ.


ಕಾಲಚಕ್ರದಲ್ಲಿ ಒಂದು ರಾಜ್ಯದ ಚುನಾವಣೆಯು ಬಹಳ ಮುಖ್ಯವಾದದ್ದೇನಲ್ಲ. ಕುವೆಂಪು ಜಯ ಭಾರತ ಜನನಿಯ ತನುಜಾತೆ ಎಂದಿದ್ದರೂ ಆಕೆ ವಧುವಲ್ಲ; ಹಳತಾಗಿ ಕರ್ನಾಟಕ ಮಾತೆಯಾಗಿದ್ದಾಳೆ. ಇಷ್ಟಕ್ಕೂ ಆಕೆಯೊಬ್ಬಳೇ ಮಗಳೆಂದು ಕುವೆಂಪು ಹೇಳಿರಲಿಲ್ಲ. ಆಕೆಯೂ ಒಬ್ಬ ಮಗಳು. ಭಾರತದ ಅಷ್ಟೂ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೂ ಇನ್ನೆರಡು ದಿನಗಳಲ್ಲಿ ಮತದಾನ ನಡೆಯುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನಿಲ್ಲವೆಂಬಷ್ಟು ಅಥವಾ ಈ ತನಕ ನಡೆದೇ ಇಲ್ಲವೇನೋ ಎಂಬಷ್ಟು ಸುದ್ದಿ ಮಾಡುತ್ತಿದೆ. ಮಾಧ್ಯಮಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹೀಗೆ ಸುದ್ದಿ ಮಾಡುವುದು ಸಹಜ. ಉದಾಹರಣೆಗೆ ಕ್ರಿಕೆಟ್ ಸರಣಿಗಳನ್ನು ಗಮನಿಸಿ. ನೂರಾರು ಟೆಸ್ಟ್ ಪಂದ್ಯಗಳು ನಡೆದರೂ ಅವುಗಳ ಒಟ್ಟು ಸಂಖ್ಯೆಗೆ ಒತ್ತು ಕೊಡದೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ ಎಂದು ಆಯಾಯ ಸರಣಿಯ ಸಂಖ್ಯೆಯನ್ನೇ ಹೇಳುವುದು ಮಾಧ್ಯಮ ಸಹಜ ಗುಣ. ಆದ್ದರಿಂದ ಪ್ರತೀ ಸರಣಿಯ ಮೊದಲ, ದ್ವಿತೀಯ ಹೀಗೆ ಆಯಾಯ ಸರಣಿಯ ಪಂದ್ಯಗಳ ಸಂಖ್ಯೆಯೇ ಅವುಗಳನ್ನು ವಿಶೇಷವಾಗಿ ಪರಿಗಣಿಸುವಂತೆ ಮಾಡುತ್ತದೆ. ಹಾಗೆಯೇ ಈ ರಾಜಕೀಯ ಸರಣಿಯ ಮಾಧ್ಯಮ ವರಸೆ.

ಈ ವಿಶೇಷ ಸದ್ದು ಗದ್ದಲಕ್ಕೆ ಇನ್ನೊಂದು ಕಾರಣವೆಂದರೆ ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆ ನಡೆಯುವಾಗ ದೇಶದ ಇತರ ಯಾವ ರಾಜ್ಯಗಳಲ್ಲೂ ಚುನಾವಣೆ ನಡೆಯದಿರುವುದು. ದೇಶದ ಎಲ್ಲೆಡೆ ಚುನಾವಣೆ ಒಟ್ಟಿಗೇ ನಡೆದರೆ ಒಳ್ಳೆಯದೆಂದು ಪ್ರಧಾನಿ ಎಷ್ಟೇ ದೊಡ್ಡ ಸ್ವರದಲ್ಲಿ ಹೇಳಿದರೂ ಅದನ್ನು ಕಾರ್ಯಗತ ಮಾಡಲು ಅವರಿಗೆ ಇಚ್ಛಾಶಕ್ತಿಯಿಲ್ಲ ಎಂಬುದು ಈ ಹಿಂದೆ ನಡೆದ ಹಿಮಾಚಲ ಪ್ರದೇಶ ಮತ್ತು ಗುಜರಾತಿನ ಚುನಾವಣಾ ವೇಳಾಪಟ್ಟಿಯಲ್ಲಿ ಸ್ಪಷ್ಟವಾಗಿದೆ. ನಿಜಕ್ಕೂ ಅಂತಹ ಇಚ್ಛಾಶಕ್ತಿಯಿದ್ದಿದ್ದರೆ ಅವೆರಡನ್ನೂ ಜೊತೆಯಲ್ಲೇ ಮಾಡಬಹುದಿತ್ತು. ಈ ಬಾರಿಯೂ ಅಷ್ಟೇ: ತಮ್ಮದೇ ಸರಕಾರಗಳಿರುವ ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಚುನಾವಣೆಗಳನ್ನು ಹಿಂದೂಡಿ ಕರ್ನಾಟಕದ ಜೊತೆಗೇ ನಡೆಸಬಹುದಿತ್ತು. ಆದರೆ ಪ್ರಧಾನಿಯವರಿಗೆ ಇವೆಲ್ಲ ಪಥ್ಯವಾಗುವುದಿಲ್ಲ. ಅವರಿಗೆ ಅಧಿಕಾರ ಹಿಡಿಯುವುದು ಮುಖ್ಯವೇ ಹೊರತು ಇನ್ನೇನೂ ಅಲ್ಲವೆಂಬುದನ್ನು ಕಳೆದ ನಾಲ್ಕು ವರ್ಷಗಳ ರಾಜಕಾರಣವೂ ಚರಿತ್ರೆಯೂ ತೋರಿಸಿಕೊಟ್ಟಿದೆ. ಈ ಮೂರು ರಾಜ್ಯಗಳ ಚುನಾವಣೆ ಜೊತೆಯಲ್ಲಿ ನಡೆದರೆ ತಮಗೆ ಅನುಕೂಲವೆಂದಿದ್ದರೆ (ಚುನಾವಣಾ ಆಯೋಗ ಅವರ ಕಿಸೆಯಲ್ಲೇ ಇರುವುದರಿಂದ) ಪ್ರಾಯಃ ಅವರು ನಡೆಸುತ್ತಿದ್ದರು. ಆದರೆ ಹವಾಮಾನ ಪ್ರತಿಕೂಲವಿರುವಾಗ ಅವರೆಂದೂ ತಮ್ಮ ಘೋಷಣೆಗಳನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಕನಾಟಕದ ಚುನಾವಣಾ ಫಲಿತಾಂಶವು ಬಿಜೆಪಿಗೆ ಅನುಕೂಲವಾಗಿ ಬಂದರೆ ಲೋಕಸಭೆ ಮತ್ತು ಈ ಮೇಲೆ ಹೇಳಿದ ರಾಜ್ಯಗಳ ಚುನಾವಣೆಯನ್ನು ಒಟ್ಟಾಗಿ ನಡೆಸುವ ಸಾಧ್ಯತೆಯಿದೆ.

ಪ್ರಜಾಪ್ರಭುತ್ವವನ್ನು ಯಾವ ಕಡೆಗೆ ಬೇಕೆಂದರೆ ಅ ಕಡೆಗೆ ಒಯ್ಯುವ ಸಾಮರ್ಥ್ಯವಿರುವ ಪ್ರಧಾನಿಯಿರುವಾಗ ಮತ್ತು ಅವರ ಹಿಂದೆ ಬಹುಮತದ ಸಂಸದರ ಕುರಿಮಂದೆಯೇ ಇರುವಾಗ ಈ ದೇಶದಲ್ಲಿ ಏನೂ ಸಾಧ್ಯವಾಗಬಹುದು. ಕನಾಟಕದ ಚುನಾವಣೆ ಇಷ್ಟೊಂದು ಸುದ್ದಿ ಮಾಡುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಅದು ಪ್ರಧಾನಿಯವರ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುಳ್ಳಾಗಿ ನಿಂತಿರುವುದು. ತನ್ನಲ್ಲಿ ಹತ್ತು ರೂಪಾಯಿಗಳಿದ್ದರೆ ಅಷ್ಟೇ ಇದೆಯೆನ್ನುವ ಯಥಾಸ್ಥಿತಿ ರಾಜಕಾರಣ ಮೋದಿಯವರದ್ದಲ್ಲ. ಅವರು ತನ್ನಲ್ಲಿ ನೂರು, ಸಾವಿರ ರೂಪಾಯಿಗಳಿವೆಯೆಂಬ ರೀತಿಯಲ್ಲಿ ನಟಿಸಿ ಸಂಭ್ರಮಿಸಿ ಜನರನ್ನು ತಪ್ಪುದಾರಿಗೆ ಒಯ್ಯುತ್ತಾರೆ. ಹಾಗೆಯೇ ಇಡೀ ಭಾರತ ಮತ್ತು ಇಲ್ಲಿನ 125ಕ್ಕೂ ಹೆಚ್ಚು ಕೋಟಿ ಭಾರತೀಯರು ತನ್ನನ್ನು ಬೆಂಬಲಿಸುತ್ತಿದ್ದಾರೆಂದು ಮೋದಿ ನಟಿಸುತ್ತಿದ್ದಾರೆ. ವಾಸ್ತವದಲ್ಲಿ ಇಡಿಯ ದಕ್ಷಿಣ ಭಾರತ (ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿ) ಭಾಜಪದ ಹೊರತಾಗಿದೆ; ಒಡಿಶಾ, ಪಶ್ಚಿಮ ಬಂಗಾಳ ಮತ್ತು ದಿಲ್ಲಿ ಭಾಜಪದ ತೆಕ್ಕೆಯಲ್ಲಿಲ್ಲ. ಪಂಜಾಬ್ ಕಾಂಗ್ರೆಸ್ ಆಡಳಿತದಲ್ಲಿದೆ. ಗುಜರಾತಿನಲ್ಲಿ ಅಬ್ಬಬ್ಬ ಎಂದು ಏದುಸಿರಿನಿಂದ ಭಾಜಪ ಅಧಿಕಾರಕ್ಕೆ ಬಂದಿದೆ.

ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ, ಇತ್ತೀಚೆಗೆ ನಡೆದ ಉಪಚುನಾವಣೆಗಳು ಭಾಜಪಕ್ಕೆ ಸೋಲುಣಿಸಿವೆ. ಇಷ್ಟಾದರೂ 2014ರ ಕೋಟು ತೊಟ್ಟು ತಾನಿನ್ನೂ ಕೋಟ್ಯಧಿಪತಿಯೆಂದು ಮೋದಿ ಹೇಳಿಕೊಳ್ಳುವುದು ಹಾಸ್ಯಾಸ್ಪದ ಮಾತ್ರವಲ್ಲ, ದೇಶದ ಜನತೆಗೂ ಪ್ರಜಾಸತ್ತೆಗೂ ಮಾಡುತ್ತಿರುವ ಅಪಮಾನ. ಯಾವ ದೇಶವೂ ಯಾವ ರಾಜ್ಯವೂ ಎಂದೂ ಯಾವುದರಿಂದಲೂ ಮುಕ್ತವಾಗಲು ಸಾಧ್ಯವಿಲ್ಲ. ಬದುಕೆಂದರೆ ಹಾಗೆಯೇ: ಎಲ್ಲವನ್ನೂ ಒಳಗೊಂಡೇ ಬದುಕು. ಇದನ್ನು ಸಾಬೀತುಪಡಿಸುವಂತೆ ಭಾಜಪವು ಪಶ್ಚಿಮ ಬಂಗಾಳದಲ್ಲಿ ತನ್ನ ಕಡುವೈರಿ ಎಡಪಕ್ಷದೊಂದಿಗೆ ಸೇರಿ ತೃಣಮೂಲ ಕಾಂಗ್ರೆಸನ್ನು ಸೋಲಿಸಲು ಹವಣಿಸುತ್ತಿದೆಯೆಂದು ವರದಿಗಳು ಬರುತ್ತಿವೆ. ಹಸಿದವನಿಗೆ ತಿನ್ನಲು ಏನೂ ಸಿಗದಾಗ ಉಪವಾಸದ ನಟನೆ ಮಾಡಬಹುದು; ಆದರೆ ಅದು ಎಷ್ಟು ಹೊತ್ತು? ಕೊನೆಗೆ ವಿಶ್ವಾಮಿತ್ರನು ನಾಯಿ ಮಾಂಸವನ್ನು ತಿಂದನೆಂಬ ಐತಿಹ್ಯದಂತೆ ಯಾವುದೂ, ಯಾರೂ ಆಗಬಹುದು. ಆಗ ಹಸಿವೆಂಬ ಪ್ರಕೃತಿ ಸಂಸ್ಕೃತಿಯನ್ನು ಮರೆತು ವಿಕೃತಿಯನ್ನು ಅಪ್ಪಿಕೊಳ್ಳುತ್ತದೆ. ಈ ಅನೈತಿಕ ಸಖ್ಯದಲ್ಲಿ ತ್ರಿಪುರ ದಹನದಿಂದ ಎಳ್ಳಷ್ಟೂ ಪಾಠ ಕಲಿಯದ ಎಡಪಕ್ಷಗಳೂ ಅಷ್ಟೇ ಘೋರ ಅಪರಾಧಿಗಳು. ಇವನ್ನು ಸಮರ್ಥಿಸಬೇಕಾದರೆ ರಾಜಕಾರಣದಲ್ಲಿ ಯಾರೂ ಅಸ್ಪಶ್ಯರಲ್ಲವೆಂಬ ನೀತಿಯನ್ನು ಒಪ್ಪಿಕೊಳ್ಳಬೇಕು. ಮಹಾಭಾರತದಲ್ಲಿ ಶ್ರೀಕೃಷ್ಣನೇ ‘‘ವೈರಿಗೆ ಆಪತ್ತೆಸಗಿದಾಗಲೇ ಹಗೆಯ ಗೆಲುವುದಿದು ವಸುಮತೀಶರ ನೀತಿ’’ ಎಂದನಲ್ಲವೇ?

ಆದರೆ ಈ ಚುನಾವಣೆ ನಿಜಕ್ಕೂ ಒಂದು ಮೈಲಿಗಲ್ಲು. ಸಿದ್ದರಾಮಯ್ಯ ಸರಕಾರ ಜನರಿಗೆ ಎಷ್ಟು ಹಿತವನ್ನುಂಟುಮಾಡಿದೆಯೆಂಬ ಬಗ್ಗೆ ಪ್ರತ್ಯೇಕ ಚರ್ಚೆ ಮಾಡಬಹುದು. ಆದರೆ ಅವರನ್ನು ಸೋಲಿಸಲು ಪ್ರಧಾನಿಯವರ ನೇತ್ರೃತ್ವದಲ್ಲಿ ದೇಶದ ಸರಕಾರವನ್ನೇ ಒಂದಷ್ಟು ದಿನಗಳಿಂದ ಪಾರ್ಶ್ವವಾಯುವಿಗೆ ನೂಕಿ ಎಲ್ಲವನ್ನೂ ಕರ್ನಾಟಕಕ್ಕಿಳಿಸಿ ಮಂತ್ರಿಗಳ, ರಾಜಕಾರಣಿಗಳ ಭಾರೀ ದಂಡೇ ಆಗಮಿಸಿದ್ದನ್ನು ಗಮನಿಸಿದರೆ ಸಿದ್ದರಾಮಯ್ಯ ನಿಜಕ್ಕೂ ಬಹಳಷ್ಟನ್ನು ಸಾಧಿಸಿದ್ದಾರೆಂದು ಅನ್ನಿಸುತ್ತದೆ. ಈ ಬೆಳವಣಿಗೆ ಹೊಸದಲ್ಲ; ಸಂಸತ್ತಿನಲ್ಲಿ ಪ್ರಧಾನಿ ಕರ್ನಾಟಕದ ಮುಖ್ಯಮಂತ್ರಿಯವರನ್ನು ಉಲ್ಲೇಖಿಸಿದಾಗಲೇ ಇದಕ್ಕೆ ನಿದರ್ಶನ ಸಿಕ್ಕಿತ್ತು; ಒಂದು ಹೊಸ ನಿದರ್ಶನವನ್ನು ಒದಗಿಸುವುದಾದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಸಮಿತಿಯನ್ನು ರಚಿಸಲು ವಿಳಂಬವಾಗಿದೆಯೆಂದು ನ್ಯಾಯಾಲಯವು ಆಕ್ಷೇಪಿಸಿದಾಗ ಕೇಂದ್ರ ಸರಕಾರದ ವಕೀಲರು ಪ್ರಧಾನಿಯವರು ಕರ್ನಾಟಕದ ಚುನಾವಣಾ ನಿಮಿತ್ತ ಬಿಸಿಯಾಗಿದ್ದಾರೆಂದು ಅನುಚಿತ ನೆಪವನ್ನು ಹೇಳಿದರು. 125 ಕೋಟಿ ಜನಸಂಖ್ಯೆಯ ಒಂದು ದೇಶದ ಪ್ರಧಾನಿ ಕೇವಲ ಒಂದು ರಾಜ್ಯದ ಚುನಾವಣೆಯನ್ನು ರಾಷ್ಟ್ರೀಯ ವಿಪತ್ತೆಂಬಂತೆ ಪರಿಗಣಿಸಿದ್ದಾರೆಂಬುದನ್ನು ಗಮನಿಸಿದರೆ ಕರ್ನಾಟಕವು ನಿಜಕ್ಕೂ ಭಾರತ ಜನನಿಯ ಶ್ರೇಷ್ಠ ತನುಜಾತೆಯಾಗಿದ್ದಾಳೆಂದು ಮತ್ತು ಸಿದ್ದರಾಮಯ್ಯನವರು ಪ್ರಧಾನಿಯವರನ್ನು ರಾಜ್ಯಮಟ್ಟದಲ್ಲ್ಲಾದರೂ ಸವಾಲೆಸೆದು ಎದುರಿಸಬಲ್ಲ ಒಬ್ಬ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆಂದು ಹೇಳಬಹುದು.

ಕರ್ನಾಟಕದ ಚುನಾವಣೆ ಕಾಂಗ್ರೆಸಿಗೂ, ಪ್ರಧಾನಿ ಮತ್ತು ಅವರ ಪಕ್ಷಕ್ಕೂ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ವಿದೇಶ, ಅದು ಬಿಟ್ಟರೆ ಕರ್ನಾಟಕ ಎಂಬಂತೆ ಪ್ರಧಾನಿಯವರ ಕಳೆದ ಕೆಲವು ವಾರಗಳ ವೇಳಾಪಟ್ಟಿಯಿದೆ. ಗೆಲ್ಲಬೇಕು, ಆದರೆ ಹೇಗಾದರೂ ಗೆಲ್ಲಬೇಕು ಎಂಬಂತೆ ಪ್ರಧಾನಿ ಮತ್ತು ಅಮಿತ್‌ಶಾ ಪ್ರಯತ್ನಿಸುತ್ತಿರುವುದನ್ನು ನೋಡಿದರೆ ಅವರಿಗೇ ಅವರ ಭವಿಷ್ಯ ಈ ಚುನಾವಣೆಯಲ್ಲಡಗಿದೆಯೆಂಬಂತೆ ತೋರುತ್ತದೆ. ಚುನಾವಣೆಯ ಮತಪ್ರಚಾರದ ವಿಧಾನವನ್ನು ಗಮನಿಸಿದರೆ ಇದು ನಿಜಕ್ಕೂ ‘ವಯಸ್ಕರ’ ಮತದಾನವೇ ಹೊರತು ಸಂಸಾರಸ್ಥರಿಗೆ, ಸಭ್ಯರಿಗೆ ಅಲ್ಲವೆಂದು ತೋರುತ್ತದೆ. ಸೊಂಟದ ಕೆಳಗಿನ ಎಲ್ಲ ತಂತ್ರಗಳನ್ನು ಈ ಚುನಾವಣೆೆ ಕಾಣುತ್ತಿದೆ. ಯಾರೇ ಗೆಲ್ಲಲಿ, ಯಾರೇ ಸೋಲಲಿ, ಚುನಾವಣೆಯ ಘನತೆಯುಳಿಯಬೇಕೆಂಬ ಇರಾದೆ ದೇಶದ ಪ್ರಧಾನಿಗೇ ಇಲ್ಲದಿದ್ದರೆ ಇನ್ನುಳಿದವರಿಗೆ ಹೇಗೆ ಬರಬೇಕು? ವೈಯಕ್ತಿಕ ಟೀಕೆ, ನಿಂದನೆ ಇವು ಗಟಾರದ ಮಟ್ಟಕ್ಕಿಂತಲೂ ಕೆಳಗಿಳಿದಿದೆ. ಜನರನ್ನು ಬಡಿದೆಬ್ಬಿಸಬೇಕಾದ ನೇತಾಜಿಗಳೇ ಜನರನ್ನು ತಪ್ಪುಮಾಡಲು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ವಿದ್ಯಾವಂತರೂ ಸಭ್ಯತೆಯನ್ನು ಕಳೆದುಕೊಂಡು ಈ ಚುನಾವಣೆಯು ಜಗತ್ತಿನ ಹಾಗೂ ತಮ್ಮ ಬದುಕಿನ ಕೊನೆಯ ಚುನಾವಣೆಯೆಂಬಂತೆ ಅವನತಿಯತ್ತ ಮುಖಮಾಡಿದ್ದಾರೆ.

ದುರಂತವೆಂದರೆ ಯಾರು ಜ್ಞಾನ, ವೈರಾಗ್ಯವನ್ನು, ಸಾಮಾಜಿಕ ಹಿತವನ್ನು ಸಾಧಿಸುವ ಅಂಶಗಳನ್ನು ಬೋಧಿಸುತ್ತಾರೆಂದು ತಿಳಿದಿದ್ದೆವೋ ಅಂತಹ ಮಠಮಾನ್ಯಗಳ ಪ್ರಮುಖರೇ ತಮ್ಮ ಕಾವಿಯನ್ನು ಬಿಚ್ಚಿ ಬೆತ್ತಲೆ ನಿಂತಿರುವುದು. ಈ ವಿದ್ಯಮಾನದಲ್ಲಿ ಕ್ರೈಸ್ತ ಮತ್ತು ಇಸ್ಲಾಮಿನ ಧಾರ್ಮಿಕ ಸಂಸ್ಥೆಗಳು ಹೆಚ್ಚು ನೀತಿಯುತವಾಗಿ ವರ್ತಿಸುವುದನ್ನು ಕಾಣಬಹುದು. ಇದಕ್ಕೆ ಪೂರಕವಾಗಿ ಮುಧೋಳದ ಪ್ರಸಂಗವನ್ನು ಉಲ್ಲೇಖಿಸದಿದ್ದರೆ ಈ ಚರ್ಚೆ ಅಪೂರ್ಣವಾಗಬಹುದು. ನನಗೆ ಮುಧೋಳ ಎಂದರೆ ಕವಿಚಕ್ರವರ್ತಿ ರನ್ನ ಮತ್ತು ಆತನ ಎರಡು ಮಹಾಕಾವ್ಯಗಳನ್ನು ಅದರಲ್ಲೂ ಲೌಕಿಕರಾದ ನನ್ನಂಥವರಿಗೆ ಇಷ್ಟವಾಗುವ ಸಾಹಸಭೀಮವಿಜಯದ ಸನ್ನಿವೇಶಗಳು ನೆನಪಾಗುತ್ತವೆ. ಆತನೊಂದಿಗೇ ಆತನ ಮಹಾಕಾವ್ಯಗಳ ನೆನಪಾಗುತ್ತದೆ. ಇದು ನನ್ನ ಪಾಲಿಗೆ ಚರಿತ್ರೆ. ಭೌಗೋಳಿಕವಾಗಿ ಕರ್ನಾಟಕದ ಒಂದು ಭಾಗವಾಗಿರುವ ಮುಧೋಳದ ಅಕ್ಕಪಕ್ಕದ ಊರುಗಳನ್ನು ನೆನಪಿಸುವುದಾದರೆ ಚಾಲುಕ್ಯರ ಇತಿಹಾಸವನ್ನು ನೆನಪಿಸುವ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ ದೇವಾಲಯ ಇತ್ಯಾದಿಗಳನ್ನು ಉಲ್ಲೇಖಿಸಬಹುದು. ನನಗೆ ಈಗ ಮುಧೋಳ ನೆನಪಾಗುತ್ತಿದ್ದರೆ ಅಲ್ಲಿರುವ ಕವಿ, ವಿಮರ್ಶಕ, ವಿದ್ವಾಂಸ ಗೆಳೆಯ ಆನಂದ ಝುಂಜರವಾಡ ಅವರಿಂದಾಗಿ.

ಮುಧೋಳದ ನಾಯಿಗಳ ತಳಿ ಜನಪ್ರಿಯವಾದದ್ದು. ಹತ್ತಾರು ಅಡಿ ಹಾರುತ್ತವೆಂದು, ಅತ್ಯಂತ ನಿಷ್ಠವಾಗಿರುತ್ತವೆಂದು ಪ್ರಸಿದ್ಧ. ಈ ದೇಶದ ಪ್ರಧಾನಿ ರಾಜ್ಯವೊಂದರ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಬರಬಾರದೆಂದೇನೂ ಇಲ್ಲ. ಆದರೆ ಒಂದೆರಡು ಕೇಂದ್ರಗಳಿಗೆ ಹೋಗಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರೋತ್ಸಾಹಿಸಿ ಹೋಗುವುದು ನೆಹರೂ ಕಾಲದ ರಾಜಕಾರಣ. ಆದರೆ ಈ ಪ್ರವೃತ್ತಿ ದೇವೇಗೌಡರ ಕಾಲದ ಆನಂತರ ಬದಲಾಯಿತು. ಅವರು ಹೊಳೆನರಸೀಪುರದ ಸ್ಥಳೀಯ ಚುನಾವಣೆಯ ಪ್ರಚಾರಕ್ಕೂ ಹೋಗುವ ಮಟ್ಟಕ್ಕಿಳಿದಿದ್ದರು. ಆದರೂ ಅವರ ಧೋರಣೆೆಯನ್ನು ತಾಳಿಕೊಳ್ಳಬಹುದು. ಏಕೆಂದರೆ ಅವರೊಬ್ಬ ರಾಷ್ಟ್ರಮಟ್ಟಕ್ಕೇರಿದ ಪ್ರಾದೇಶಿಕ ಪಕ್ಷದ ನಾಯಕ. ಅವರ ಅನ್ನವಿರುವುದು ಕರ್ನಾಟಕದಲ್ಲಿ ಮತ್ತು ಕರ್ನಾಟಕದಲ್ಲಿ ಮಾತ್ರ. ಆದರೆ ಜಗತ್ತಿನ ನಾಯಕನೆಂದು ಬಿಂಬಿಸಿಕೊಳ್ಳುವ ವ್ಯಕ್ತಿಯೊಬ್ಬ ಮುಧೋಳಕ್ಕೆ ಬಂದು ಅಲ್ಲಿನ ನಾಯಿಯ ತಳಿಯನ್ನು ಉದಾಹರಿಸಿ ಕಾಂಗ್ರೆಸನ್ನು ಟೀಕಿಸುತ್ತಾರೆಂದರೆ, ನಿಂದಿಸುತ್ತಾರೆಂದರೆ ಈ ದೇಶದ ರಾಜಕಾರಣವನ್ನು ನೋಡಿ ಮುಧೋಳದ ನಾಯಿಗಳು ನಗಬಹುದು. (ಅವು ಭಾರೀ ದೂರಕ್ಕೆ ಹಾರುತ್ತವಾದರೂ ರಾಜಕಾರಣಿಗಳಂತೆ ಪಕ್ಷದಿಂದ ಪಕ್ಷಕ್ಕೆ ಹಾರುವಂಥವಲ್ಲ!) ಚುನಾವಣೆಗಳು ರಾಜಕಾರಣದ ಎಲ್ಲ ಮಾಲಿನ್ಯವನ್ನು ಬೀದಿಗೆ ಚೆಲ್ಲುತ್ತವೆ. ಒಳಗಿದ್ದ ಎಲ್ಲ ಬಗೆಯ ಕೀವನ್ನು, ವಿಷವನ್ನು ಹೊರಗೆಡಹಲು ಚುನಾವಣೆಯೆಂಬ ಮಹಾಸಮರವೇ ಸಂದರ್ಭ.

ಈ ಕೊಳಕು ರಾಜಕಾರಣ ಧೂಳನ್ನೆಬ್ಬಿಸಿ ಎಂತಹ ಊರಿನ ಲಕ್ಷಣಗಳನ್ನೂ ಹಾಳುಗೆಡವುದರಲ್ಲಿ ನಿಸ್ಸೀಮ. ಮುಧೋಳದ ಚರಿತ್ರೆಯನ್ನೇ ಬಣ್ಣಗೆಡಿಸಿದ ಕೀರ್ತಿ ಈ ದೇಶದ ಪ್ರಧಾನಿಗೆ ಸಂದಿರುವುದು ಒಂದು ಚರಿತ್ರಾರ್ಹ ಘಟನೆ. ಮುಧೋಳದ ಘಟನೆ ಸಮುದ್ರದಿಂದ ತಲೆಯೆತ್ತಿದ ಮಂಜುಗಡ್ಡೆಯಷ್ಟೇ. ಆಳದಲ್ಲಿ ಇನ್ನೇನಿದೆಯೋ? ಈ ಲೇಖನಕ್ಕೆ ಮೋದಿಯೂ ಮುಧೋಳದ ನಾಯಿಯೂ ಎಂಬ ಶೀರ್ಷಿಕೆಯನ್ನಿಡಬೇಕೆಂದು ಮೊದಲಿಗೆ ಅನ್ನಿಸಿತ್ತಾದರೂ ನಾಗರಿಕನೊಬ್ಬ ಪ್ರಧಾನಿ ಮೋದಿಯ ಮಟ್ಟಕ್ಕೆ ಇಳಿಯ ಬಾರದೆಂಬ ಕಾರಣಕ್ಕೆ ತಾತ್ವಿಕ ನೆಲೆಯುಳ್ಳ ರಾಜಕಾರಣವೂ ಚರಿತ್ರೆಯೂ ಎಂಬ ಅಷ್ಟಾಗಿ ಹೊಂದದ ಹೆಸರಿಟ್ಟಿದ್ದೇನೆ. ಓದುಗರು ಕ್ಷಮಿಸಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top