ಕರ್ನಾಟಕ: ಸೋತವರು ಮತ್ತು ಗೆದ್ದವರು

ಕರ್ನಾಟಕದ ಆರೂವರೆ ಕೋಟಿ ಜನರು ತಮಗೆ ಆಶೀರ್ವದಿಸಿದ್ದಾರೆಂದು ಮತ್ತು ಕಾಂಗ್ರೆಸನ್ನು ತಿರಸ್ಕರಿಸಿದ್ದಾರೆಂದು ಮತ್ತು ತಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿದ್ದೇವೆಂದು ಯಡಿಯೂರಪ್ಪನವರು ಎಷ್ಟೇ ಹೇಳಿಕೊಂಡರೂ ಮತ್ತು ಭಾಜಪದ ಭಕ್ತರು ಗೆದ್ದ ದೊಡ್ಡಸ್ತಿಕೆಯಿಂದ ಎಷ್ಟೇ ಕುಣಿದಾಡಿದರೂ ವಾಸ್ತವ ಬೇರೆಯೇ ಆಗಿದೆ.


ಕೊನೆಗೂ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿಯಿತು. 224 ಸ್ಥಾನಗಳ ಪೈಕಿ 222 ಸ್ಥಾನಗಳಿಗೆ ಚುನಾವಣೆ ನಡೆದು (ಜಯನಗರದಲ್ಲಿ ಅಭ್ಯರ್ಥಿ ಗತಿಸಿದರೆ, ರಾಜರಾಜೇಶ್ವರಿ ನಗರದ ಚುನಾವಣೆಯು ಮತಚೀಟಿಗಳಲ್ಲಿನ ಅಕ್ರಮಗಳ ಆರೋಪದ ಮೇಲೆ ಮುಂದೂಡಲ್ಪಟ್ಟಿತು. ಧಾರವಾಡದ ಜಗದೀಶ ಶೆಟ್ಟರ್ ಆಯ್ಕೆ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಘೋಷಣೆಯಾಗಿಲ್ಲ.) ಭಾಜಪವು 103 (104), ಕಾಂಗ್ರೆಸ್ 78, ಜೆಡಿ(ಎಸ್) 38 ಹಾಗೂ ಇತರರು 2 ಸ್ಥಾನಗಳನ್ನು ಗಳಿಸಿದರು. ಈ ಇಬ್ಬರು ಇತರರು ಕಾಂಗ್ರೆಸನ್ನು ಬೆಂಬಲಿಸಿದ್ದಾರೆಂದು ವರದಿಯಾಗಿದೆ. ಕಾಂಗ್ರೆಸಿನ ಅನೇಕ ಮಂತ್ರಿಗಳು ಸೋತಿದ್ದಾರೆ. ನಿರೀಕ್ಷೆಗೆ ವಿರುದ್ಧವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಜೆಡಿ(ಎಸ್)ನ ಕುಟುಂಬ ರಾಜಕಾರಣವು ಅರಸೊತ್ತಿಗೆಯ ಹಳೇ ಮೈಸೂರಿನ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಗಣಿರೆಡ್ಡಿಗಳಲ್ಲೂ ಕೆಲವರು ಸೋತಿದ್ದಾರೆ.

‘ಕೊನೆಗೂ’ ಮತ್ತು ‘ಮುಗಿಯಿತು’ ಎಂದು ಹೇಳಿದ್ದೇಕೆಂದರೆ ಈ ಚುನಾವಣೆಯು ಎಲ್ಲರನ್ನೂ-ಪ್ರಧಾನಿ ಮೋದಿಯವರನ್ನೂ- ತುದಿಗಾಲಿನಲ್ಲಿ ನಿಲ್ಲಿಸಿತ್ತು. ದಕ್ಷಿಣ ಭಾರತಕ್ಕೆ ಪ್ರವೇಶ ಪಡೆಯಬೇಕಾದರೆ ಕರ್ನಾಟಕವೇ ಕ್ಷೀಣಕೊಂಡಿಯೆಂದು ಅರ್ಥಮಾಡಿಕೊಂಡಿರುವ ಭಾರತೀಯ ಜನತಾ ಪಾರ್ಟಿಯು ತನ್ನೆಲ್ಲ ಶಕ್ತಿಯನ್ನು ಮತ್ತು ಆಸೆಯನ್ನು ಕನಾಟಕದ ಮೇಲೆ ಹಾಕಿತ್ತು. (ಕಿಷ್ಕಿಂಧೆಯಿರುವುದು ಕರ್ನಾಟಕದಲ್ಲೇ!) ಕನಾಟಕದಲ್ಲಿ ಒಮ್ಮೆ ತಳವೂರಲು ಸಾಧ್ಯವಾದರೆ ದಕ್ಷಿಣದ ಉಳಿದ ರಾಜ್ಯಗಳಲ್ಲಿ ಬೇರುಬಿಡಲು ಅನುಕೂಲವಾಗುತ್ತದೆಂಬ ಸುಸಂಗತವಾದ ನಿಲುವನ್ನೇ ಭಾಜಪ ತಳೆದಿತ್ತು. ಈ ಉದ್ದೇಶದಿಂದಲೇ ಪ್ರಧಾನಿಯವರು ಮತ್ತು ಅವರ ಇಡೀ ತಂಡ ಕನಾಟಕದಲ್ಲಿ ಭಾರೀ ಪ್ರಚಾರ ನಡೆಸಿತ್ತು.

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯೆಂದು ಭಾಜಪವು ಬಿಂಬಿಸಿದ್ದ ಯಡಿಯೂರಪ್ಪ ಮತ್ತು ಅವರ ರಾಜ್ಯ ತಂಡ ಈ ಚುನಾವಣಾ ಪ್ರಚಾರದಲ್ಲಿ ಗೌಣವಾಗಿತ್ತು. ಹಾಗೆ ನೋಡಿದರೆ ಈ ಮಂದಿಗಿಂತ ಹೆಚ್ಚು ಗಮನ ಸೆಳೆದವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ. ಕರ್ನಾಟಕದ ಭಾಜಪ ರಾಜಕಾರಣಿಯೊಬ್ಬ ನೀಡಬೇಕಾಗಿದ್ದ ಆಶ್ವಾಸನೆಯನ್ನು ಅಂದರೆ ಟಿಪ್ಪುಜಯಂತಿಯನ್ನು ನಿಲ್ಲಿಸುವುದಾಗಿ ಅವರು ಆಶ್ವಾಸನೆ ನೀಡಿದ್ದರು. ಚುನಾವಣೆಯ ಕೊನೆಯ ಹೊತ್ತಿನಲ್ಲಿ ಯಡಿಯೂರಪ್ಪನವರು ತಾನು ಯಾವಾಗ ಎಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸಲ್ಲಿಸುತ್ತೇನೆಂಬುದನ್ನೂ ನಿಗದಿ ಪಡಿಸಿದ್ದರು. ಕಾಂಗ್ರೆಸ್‌ಗೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿತ್ತು. ತನ್ನೆಲ್ಲ ಶಕ್ತಿಯನ್ನೂ ಅದು ಹಾಕಿತ್ತು. ಆದರೆ ಅದಕ್ಕೆ ಕೇಂದ್ರ ಸರಕಾರವೆಂಬ ಸ್ಟೀರಾಯ್ಡೆ ಇಲ್ಲದ್ದರಿಂದ ಮತ್ತು ಕಾಡುವ ಭೂತವಿದ್ದದ್ದರಿಂದ ಅದು ತನ್ನ ಮಿತಿಯೊಳಗೇ ತಿಣುಕುತ್ತಿತ್ತು.

ಇಷ್ಟಾದರೂ ಅದರ ಸೇನಾಧಿಪತ್ಯವನ್ನು ವಹಿಸಿದ್ದು ರಾಹುಲ್ ಗಾಂಧಿಯಲ್ಲ; ಸಿದ್ದರಾಮಯ್ಯ. ಸಿದ್ದರಾಮಯ್ಯನವರ ಹೊರತಾಗಿ ಇತರ ಕಾಂಗ್ರೆಸಿಗರು ಪ್ರಚಾರ ರಥವನ್ನು ಎಳೆಯಲು ಉತ್ಸುಕತೆ ತೋರಿಸಿದಂತಿರಲಿಲ್ಲ. ಏಕೆಂದರೆ ಅವರ ಕಾಲ ಕೆಳಗಿನ ಜಮಖಾನವನ್ನು ಭಾಜಪದವರು ಅಥವಾ ಜೆಡಿ(ಎಸ್)ನವರು ಎಲ್ಲಿ ಎಳೆಯುತ್ತಾರೋ ಎಂಬ ಭಯ ಅವರನ್ನು ಕಾಡುತ್ತಿತ್ತು. ಇದರಿಂದಲೇ ಸಿದ್ಧರಾಮಯ್ಯನವರೂ ಆಗಾಗ ತಮ್ಮ ತಲೆಯನ್ನು ಹತ್ತಿದ ಜೆಡಿ(ಎಸ್) ಭೂತವನ್ನು ಕೊಡವಿಕೊಳ್ಳುವುದಕ್ಕಾಗಿಯೆಂಬಂತೆ ಅವರನ್ನು ನಿಂದಿಸುತ್ತಿದ್ದರು. ಆದರೆ ಕಾಂಗ್ರೆಸಿನ ಕೆಲವು ಹುಂಬ ನಿರ್ಧಾರಗಳು ಜೆಡಿ(ಎಸ್)ಗೆ ಸಹಕಾರಿಯಾದವು. ಮೇಲುಕೋಟೆಯಲ್ಲಿ ತನ್ನ ಅಭ್ಯರ್ಥಿಯನ್ನು ಹಾಕದೆ ರೈತಸಂಘಕ್ಕೆ ಬೆಂಬಲ ನೀಡಿ ಅಲ್ಲಿ ತನ್ನ ಅಸ್ತಿತ್ವಕ್ಕೇ ಸಂಚಕಾರ ತಂದುಕೊಂಡು ಅನೇಕ ಕಾರ್ಯಕರ್ತರನ್ನು ಕಳೆದುಕೊಂಡಿತು; ಕೊನೆಗೆ ಜೆಡಿ(ಎಸ್) ಪಕ್ಷಕ್ಕೆ ಒಳಿತಾಯಿತು; ಕಾಂಗ್ರೆಸ್ ವ್ರತ ಕೆಟ್ಟರೂ ಸುಖ ಪಡೆಯಲಿಲ್ಲ ಎಂಬ ಹಾಗೆ ತಾನೂ ಗೆಲ್ಲಲಿಲ್ಲ; ದರ್ಶನ್ ಪುಟ್ಟಣ್ಣಯ್ಯರನ್ನೂ ಗೆಲ್ಲಿಸಲೂ ಶಕ್ತವಾಗಲಿಲ್ಲ. ಒಂದು ರಾಷ್ಟ್ರೀಯ ಪಕ್ಷ ಹಾರಾಕಿರಿ ಮಾಡಬಾರದೆಂಬ ಪ್ರಾಥಮಿಕ ಪಾಠವನ್ನೂ ಅದು ಅಭ್ಯಾಸ ಮಾಡಲಿಲ್ಲ. ಇದೇ ರೀತಿ ಅನೇಕ ಕ್ಷೇತ್ರಗಳಲ್ಲಿ ಅಲ್ಲಿನ ಕಾರ್ಯಕರ್ತರ ನಾಡಿಬಡಿತವನ್ನು ಹಿಡಿಯಲಾರದೆ ಸ್ಥಾನಗಳನ್ನು ಕಳೆದುಕೊಂಡಿತು. ಮೂಡುಬಿದಿರೆ ಇದಕ್ಕೊಂದು ಉದಾಹರಣೆ.

ಜೆಡಿ(ಎಸ್) ತಾನು ಸರಳ ಬಹುಮತವನ್ನೂ ಪಡೆಯಲಾರನೆಂದು ಗೊತ್ತಿದ್ದೂ ‘ಕಿಂಗ್ ಮೇಕರ್’ ಆಗಲು ಬೇಕಾದಷ್ಟು ಸ್ಥಾನಗಳನ್ನು ಪಡೆಯ ಬೇಕೆಂಬ ಹಠದಿಂದ ಚುನಾವಣೆಯನ್ನು ಎದುರಿಸಿತು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತನ್ನ ಅಸ್ತಿತ್ವವನ್ನು ಯಶಸ್ವಿಯಾಗಿ ಪ್ರದರ್ಶಿಸಿತು. ದೇವೇಗೌಡರ ಭವಿಷ್ಯ ನಿಜವಾಯಿತು. ಕಡಿಮೆ ಸ್ಥಾನಗಳನ್ನು ಪಡೆದರೂ ಕಾಂಗ್ರೆಸ್-ಭಾಜಪ ಮೇಲಾಟದಲ್ಲಿ ತಾನೇ ಸೂತ್ರಧಾರನೆಂಬುದನ್ನು ಸಾಬೀತುಪಡಿಸಿತು. ಪ್ರಚಾರದ ಗುಣಮಟ್ಟದ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಹಾಗೆ ನೋಡಿದರೆ ಭಾಜಪದ ಸಾಧನೆಯು ಕಳಪೆಯೇ. ಕರ್ನಾಟಕದ ಆರೂವರೆ ಕೋಟಿ ಜನರು ತಮಗೆ ಆಶೀರ್ವದಿಸಿದ್ದಾರೆಂದು ಮತ್ತು ಕಾಂಗ್ರೆಸನ್ನು ತಿರಸ್ಕರಿಸಿದ್ದಾರೆಂದು ಮತ್ತು ತಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿದ್ದೇವೆಂದು ಯಡಿಯೂರಪ್ಪನವರು ಎಷ್ಟೇ ಹೇಳಿಕೊಂಡರೂ ಮತ್ತು ಭಾಜಪದ ಭಕ್ತರು ಗೆದ್ದ ದೊಡ್ಡಸ್ತಿಕೆಯಿಂದ ಎಷ್ಟೇ ಕುಣಿದಾಡಿದರೂ ವಾಸ್ತವ ಬೇರೆಯೇ ಆಗಿದೆ. ಈ ಕುರಿತ ಅಂಕಿ-ಅಂಶಗಳನ್ನು ಗಮನಿಸಬಹುದು:
ಕರ್ನಾಟಕದಲ್ಲಿ ಮೋದಿರಹಿತ ಮತ್ತು ಮೋದಿಸಹಿತ ಚುನಾವಣೆಗಳ ಫಲಿತಾಂಶ ಮತ್ತು ಮತಗಳಿಕೆಯ ಶೇಕಡಾವಾರು ಹೀಗಿದೆ:

2004ರಲ್ಲಿ ಭಾಜಪವು ಶೇ. 28.33 ಮತಗಳಿಸಿ 79 ಸ್ಥಾನಗಳನ್ನು ಗಳಿಸಿದರೆ, 2008ರಲ್ಲಿ ಶೇ. 33.86 ಮತಗಳೊಂದಿಗೆ 110 ಸ್ಥಾನಗಳನ್ನು, 2013ರಲ್ಲಿ ಶೇ.19.9 ಮತಗಳೊಂದಿಗೆ 40 ಸ್ಥಾನಗಳನ್ನು ಮತ್ತು ಈ ಬಾರಿ ಶೇ. 36.2 ಮತಗಳೊಂದಿಗೆ 103 (104) ಸ್ಥಾನಗಳನ್ನು ಪಡೆದಿದೆ. ಇದಕ್ಕೆದುರಾಗಿ ಕಾಂಗ್ರೆಸ್ 2004ರಲ್ಲಿ ಶೇ. 35.27 ಮತಗಳೊಂದಿಗೆೆ 65 ಸ್ಥಾನಗಳನ್ನು, 2008ರಲ್ಲಿ ಶೇ. 35.13 ಮತಗಳೊಂದಿಗೆ 80 ಸ್ಥಾನಗಳನ್ನು, 2013ರಲ್ಲಿ ಶೇ. 36.6 ಮತಗಳೊಂದಿಗೆ 122 ಸ್ಥಾನಗಳನ್ನು ಮತ್ತು ಈ ಬಾರಿ ಶೇ. 38 ಮತಗಳೊಂದಿಗೆ 78 ಸ್ಥಾನಗಳನ್ನು ಪಡೆದಿದೆ.

 ಜೆಡಿ(ಎಸ್) ಹಿಂದೆ ಬಿದ್ದಿಲ್ಲ: ಅದು 2004ರಲ್ಲಿ ಶೇ. 20.77 ಮತಗಳೊಂದಿಗೆ 58 ಸ್ಥಾನಗಳನ್ನು, 2008ರಲ್ಲಿ ಶೇ. 19.44 ಮತಗಳೊಂದಿಗೆ 28 ಸ್ಥಾನಗಳನ್ನು, 2013ರಲ್ಲಿ ಶೇ. 20.25 ಮತಗಳೊಂದಿಗೆ 40 ಸ್ಥಾನಗಳನ್ನು ಮತ್ತು ಈ ಬಾರಿ ಶೇ. 18.4 ಮತಗಳೊಂದಿಗೆ 38 ಸ್ಥಾನಗಳನ್ನು ಪಡೆದಿದೆ.
 
ಇವನ್ನು ಗಮನಿಸಿದರೆ ಮತಗಳಿಕೆಯ ಪ್ರಮಾಣಕ್ಕೂ ಸ್ಥಾನಗಳಿಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ ಸತತ ರಾಜ್ಯದ ಅತೀ ಹೆಚ್ಚು ಮತದಾರರ ಬೆಂಬಲವನ್ನು ಪಡೆದಿದೆ. ‘ಮುಕ್ತ’ದ ಸಮರ್ಥಕರು ಈ ಅಂಶವನ್ನು ಅರ್ಥಮಾಡಿಕೊಂಡಿಲ್ಲವೋ ಅಥವಾ ಇದನ್ನು ಹೇಳಿದರೆ ತಮ್ಮ ಮಾತುಗಳಲ್ಲಿ ಹುರುಳಿಲ್ಲವೆಂದು ಜನತೆಗೆ ಗೊತ್ತಾಗುತ್ತದೆಂದು ತಪ್ಪು ಮಾಹಿತಿ ನೀಡುತ್ತಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಪ್ರಜಾತಂತ್ರವು ಜನಪ್ರತಿನಿಧಿಗಳ ಸಂಖ್ಯೆಗನುಗುಣವಾಗಿ ನಡೆಯುತ್ತದೆಯೇ ವಿನಾ ಜನರ ಆಶೋತ್ತರಗಳಿಗನುಗುಣವಾಗಿ ಅಲ್ಲ. ಎಲ್ಲ ಪಕ್ಷಗಳಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ಸೂತ್ರ ಅನುಕೂಲವಾಗಿದೆಯೆಂದೇ ಇದನ್ನು ಉಳಿಸಿಕೊಳ್ಳಲಾಗಿದೆ. ಜೈಲಿನಲ್ಲಿರುವವನಿಗೆ ಮತದಾನದ ಅವಕಾಶವಿಲ್ಲದಿದ್ದರೂ ಆತ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿದ ನಮ್ಮ ಸಂವಿಧಾನ ಮತ್ತು ಜನಪ್ರತಿನಿಧಿ ಕಾಯ್ದೆ ಇಂತಹ ಜನಹಿತ ಸುಧಾರಣೆಯನ್ನು ತರುತ್ತದೆಯೆಂದು ಬಯಸುವುದು ಮೂರ್ಖತನ.

ಅದೇನಿದ್ದರೂ ಕಳೆದ ಸುಮಾರು ಒಂದೂವರೆ ದಶಕದಿಂದ ಕಾಂಗ್ರೆಸ್ ಕಾಪಾಡಿಕೊಂಡು ಬಂದ ಈ ಮತಗಳಿಕೆಯನ್ನು ನಿರ್ಲಕ್ಷಿಸಿ ಅದಕ್ಕೆ ಮುಕ್ತಿಕೊಡುತ್ತೇವೆಂದು ಎಂದೂ ಅದರಷ್ಟು ಮತಗಳಿಸದ ಭಾಜಪ ಹೇಳುತ್ತಿರುವುದು ಪ್ರಜಾತಂತ್ರದ ಕಾನೂನಾಗಬಹುದೇ ಹೊರತು ನ್ಯಾಯವಾಗಲಾರದು. ಚುನಾವಣಾ ಫಲಿತಾಂಶದ ಆನಂತರದ ಅಧಿಕಾರ ಹಿಡಿಯುವ ಕಸರತ್ತಿನ ಕುರಿತು ಭಾರೀ ಭಿನ್ನಾಭಿಪ್ರಾಯವಿದೆ. ಚುನಾವಣಾ ಸಮೀಕ್ಷೆಗಳು ಹೊರಬರುತ್ತಿರುವಾಗಲೇ ಕಾಂಗ್ರೆಸ್ ರಕ್ಷಣಾತ್ಮಕ ದಾಳಗಳನ್ನು ಪ್ರಯೋಗಿಸಿತು. ದಲಿತರು ಮುಖ್ಯಮಂತ್ರಿಯಾಗುವುದಾದರೆ ತನ್ನ ಆಕ್ಷೇಪವಿಲ್ಲವೆಂದು ಸಿದ್ದರಾಮಯ್ಯನವರು ಹೇಳಿದರು. ಇದು ಪಕ್ಷದ ಆಂತರಿಕ ವಿಚಾರವೆಂದುಕೊಂಡರೂ ಚುನಾವಣಾ ಫಲಿತಾಂಶಗಳು ಹೊಬರುತ್ತಿರುವಾಗಲೇ ಕಾಂಗ್ರೆಸಿಗೆ ಅತಂತ್ರಸ್ಥಿತಿಯ ಅರಿವಾಗಿತ್ತು. ಕೊನೆಯ ಫಲಿತಾಂಶ ಬರುವ ಮೊದಲೇ ಅದು ತನ್ನ ಎದುರಾಳಿಯಾಗಿದ್ದ ಜೆಡಿ(ಎಸ್)ನ್ನು ಬೇಷರತ್ತಾಗಿ ಅಪ್ಪುವ ನಿರ್ಧಾರ ಕೈಗೊಳ್ಳುವ ಮೂಲಕ ಭಾಜಪವನ್ನು ಅಧಿಕಾರದಿಂದ ದೂರವಿಡಲು ನಿರ್ಧರಿಸಿತು. ಗೋವಾ, ಮೇಘಾಲಯ, ಮಣಿಪುರ ಮುಂತಾದ ರಾಜ್ಯಗಳ ಚುನಾವಣೋತ್ತರ ಪ್ರಕ್ರಿಯೆಗಳನ್ನು ಗಮನಿಸಿ ಅದು ಈ ನಿರ್ಧಾರವನ್ನು ತ್ವರಿತವಾಗಿ ಕೈಗೊಂಡಿದೆಯೆನ್ನಬಹುದು. ಈ ನಿರ್ಧಾರ ಜೆಡಿ (ಎಸ್)ನ ಪಾಲಿಗೆ ಬಯಸದೇ ಬಂದ ಸ್ವರ್ಗವಲ್ಲದಿದ್ದರೂ ತೀರ ನಿರೀಕ್ಷಿತವಾಗಿರಲಿಲ್ಲ. ಇದನ್ನು ಅದು ಸ್ವೀಕರಿಸಿತು. ಪ್ರಜಾತಂತ್ರದ ರಾಜಕಾರಣದಲ್ಲಿ ಇದು ಎಲ್ಲ ಪಕ್ಷಗಳ ರಾಜನೀತಿ.

ಈಗ ಎಚ್ಚೆತ್ತುಕೊಂಡ ಭಾಜಪವು ತಾನು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಮತ್ತು ಕಾಂಗ್ರೆಸ್ ಮತ್ತು ಜೆಡಿ (ಎಸ್) ಚುನಾವಣೆಯ ಆನಂತರ ಅನೈತಿಕ ಮೈತ್ರಿಯನ್ನು ಹೊಂದಿವೆಯೆಂದು ಆರೋಪಿಸಿ (ಭಾಜಪದ ನಿತಿನ್ ಗಡ್ಕರಿ, ಆರ್.ಅಶೋಕ ಮುಂತಾದವರು ದೇವೇಗೌಡರನ್ನು ಸಂಪರ್ಕಿಸಿ ಅವರ ಬೆಂಬಲ ಪಡೆಯಲು ವಿಫಲರಾದದ್ದನ್ನು ಮರೆತು) ತನಗೇ ಮೊದಲ ಆಹ್ವಾನ ಬೇಕೆಂದು ಪ್ರತಿಪಾದಿಸಿದೆ. ಈ ಕುರಿತು ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಣಯದ ಮೇಲೆ ಎಲ್ಲವೂ ನಿಂತಿದೆ. ಸರ್ವೋಚ್ಚ ನ್ಯಾಯಾಲಯವು ಬೊಮ್ಮಾಯಿ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ದೊಡ್ಡ ಪಕ್ಷವನ್ನೇ ಮೊದಲು ಆಹ್ವಾನಿಸಬೇಕು. ರಾಜ್ಯಪಾಲರು ತಲೆ ಲೆಕ್ಕ ಹಾಕುವಂತಿಲ್ಲ. ಬಹುಮತದ ಲೆಕ್ಕವೇನಿದ್ದರೂ ಸದನದಲ್ಲೇ ನಡೆಯಬೇಕು. ಈ ಲೆಕ್ಕಾಚಾರ ಮತ್ತು ರಾಜ್ಯಪಾಲರು ಕೇಂದ್ರ ಸರಕಾರದ ಅಧಿಕೃತ ಮತ್ತು ಕೇಂದ್ರಾಡಳಿತ ಪಕ್ಷದ ಅನಧಿಕೃತ ಏಜಂಟರಾಗಿರುವುದರಿಂದ ಭಾಜಪಕ್ಕೆ ಇದು ಅನುಕೂಲ ತರ್ಕವೇ.

ಆದರೆ ಸರಳ ಲೆಕ್ಕ ಬಲ್ಲವರಾದರೂ 222ರ ಪೈಕಿ 103 (104) ಹೇಗೆ ಬಹುಮತವಾಗುತ್ತದೆ ಮತ್ತು ಆಪರೇಷನ್ ಕಮಲದ ಹೊರತಾಗಿ ಯಾವ ಆಧಾರದಲ್ಲಿ ಬಹುಮತವನ್ನು ನಿರೂಪಿಸುವುದಾಗಿ ಹೇಳುತ್ತೀರೆಂಬ ಪ್ರಶ್ನೆ ಹಾಕಬಹುದು. ಇದು ನನ್ನ ನಿಮ್ಮಂಥ ಮೂರ್ಖರ ವಿವೇಚನೆಗೆ ಸಿಕ್ಕುವ ಲೆಕ್ಕವೇ ವಿನಾ ಘನ ರಾಜ್ಯಪಾಲರಂಥವರ ಕರಕಮಲದಲ್ಲಿ ಈ ಪ್ರಾಥಮಿಕ ಅಂಶ ಗೌಣವಾಗುತ್ತದೆ. ಅವರು ರಾಜಕಾರಣಿಯಾಗಿದ್ದವರೇ! ಕುದುರೆ ಜೂಜು ಅವರಿಗೆ ಅಪರಿಚಿತವಲ್ಲ! ಯಾರಾದರೊಬ್ಬ ತೇರ್ಗಡೆಗೆ ಬೇಕಾದ ಕನಿಷ್ಠ ಶೇ. 35 ಅಂಕಗಳನ್ನು ಪಡೆಯದೆ ಫೇಲಾಗಿಯೂ ತನಗೆ ಮೆಡಿಕಲ್‌ನಲ್ಲಿ ಸೀಟು ಕೇಳಿ ಅದಕ್ಕೆ ಸಮರ್ಥನೆಯಾಗಿ ಅಂಕಗಳೇ ಮುಖ್ಯವಲ್ಲ, ಸೀಟು ಕೊಟ್ಟು ನೋಡಿ, ನಾನು ಒಳ್ಳೆಯ ಡಾಕ್ಟರ್ ಆಗಿ ಬಂದು ನಿಮಗೆ ಔಷಧಿ ನೀಡುತ್ತೇನೆ, ಚಿಕಿತ್ಸೆ ಕೊಡುತ್ತೇನೆ ಎಂಬ ಹಾಗೆ ಇದೂ ಅಕ್ರಮವನ್ನು ಸಕ್ರಮ ಮಾಡುವ ಪರಿ. ಒಂದು ವೇಳೆ ಭಾಜಪಕ್ಕೆ ಅವಕಾಶ ಸಿಕ್ಕಿದರೆ ಅವರ ತಂತ್ರವು ‘ಶಕುನಿ’ ತಂತ್ರವಾದಿತೇ ವಿನಾ ‘ಚಾಣಕ್ಯ’ ತಂತ್ರವಾಗಲಾರದು. ಮತ್ತೊಂದು ಆಪರೇಷನ್ ಕಮಲವನ್ನು ಭಾಜಪವು ಹೇಗೆ ನಡೆಸುತ್ತದೆಯೆಂಬುದನ್ನು ಮತ್ತು ಇದರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿ(ಎಸ್) ಹೇಗೆ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳುತ್ತವೆಯೆಂಬುದನ್ನು ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಬಹುದು!
ಯಾವುದಕ್ಕೂ ಕಾದು ನೋಡೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top