---

ಬೇಂದ್ರೆ ಕಂಡ ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳು

ಬೇಂದ್ರೆಯವರ ಸಾಹಿತ್ಯ ವಿಮರ್ಶೆಯ ಲೇಖನಗಳಲ್ಲಿ ಅವರ ಲೇಖನ ಗುಚ್ಛ ‘ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು’ ಮುಖ್ಯವಾದ ಕೃತಿ. ಕರ್ನಾಟಕ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗವು 1966ರ ಡಿಸೆಂಬರ್‌ನಲ್ಲಿ ಈ ಶೀರ್ಷಿಕೆಯಡಿ ಬೇಂದ್ರೆಯವರ ನಾಲ್ಕು ಉಪನ್ಯಾಸಗಳನ್ನು ಏರ್ಪಡಿಸಿತ್ತು. ಈ ನಾಲ್ಕು ಉಪನ್ಯಾಸಗಳ ಲಿಖಿತ ಆಕೃತಿಯೇ ಈ ಕೃತಿ.


ಇಪ್ಪತ್ತನೆಯ ಶತಮಾನದ ನವೋದಯ ಕಾಲದ ಅತ್ಯುತ್ತಮ ಕವಿಗಳಲ್ಲೊಬ್ಬರಾದ ಬೇಂದ್ರೆ ಅಂಬಿಕಾತನಯದತ್ತರೆಂದೇ ಪ್ರಸಿದ್ಧರು. ಪಂಜೆಯವರಿಂದ ಮೊದಲ್ಗೊಂಡು ಕುವೆಂಪು, ಪುತಿನ, ಕೆಎಸ್‌ನ, ಅಡಿಗ ಹೀಗೆ ಪ್ರತಿಷ್ಠೆಗೊಂಡ ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಬೇಂದ್ರೆ ಮತ್ತು ಕುವೆಂಪು ಒಂದರ್ಥದಲ್ಲಿ ಶತಮಾನದ ಕವಿಗಳು; ಕುವೆಂಪು ಅವರಿಗೆ ಬೇಂದ್ರೆಯವರೇ ನೀಡಿದ ಯುಗದ ಕವಿ, ಜಗದ ಕವಿ ಎಂಬ ಬಿರುದುಗಳು ಬೇಂದ್ರೆಯವರಿಗೂ ಸಲ್ಲುತ್ತವೆ. ಬೇಂದ್ರೆಯವರು ಕುವೆಂಪುವಿನ ಅಭಿಮಾನಿಯಾಗಿಯೇ ಉಳಿದಿದ್ದರು. ‘ರಾಮಾಯಣ ದರ್ಶನದಿಂದೆ ಕೈಮುಗಿದ ಕವಿ’ ಎಂಬ ಕವಿತಾ ವಿವರಣೆಯೊಂದಿಗೆ ಬೇಂದ್ರೆಯವರು ಕುವೆಂಪು ಮತ್ತು ಅವರ ಮಹಾಕಾವ್ಯವಾದ ‘ಶ್ರೀ ರಾಮಾಯಣ ದರ್ಶನಂ’ನ್ನು ಚಿರಸ್ಥಾಯಿಯಾಗಿಸಿದರು.

ವಿಮರ್ಶಕರೆಂಬ ಪ್ರಶಸ್ತಿಯಿಲ್ಲದೆಯೂ ತಮ್ಮ ತೀವ್ರ ಒಳನೋಟದಿಂದ, ಚಿಕಿತ್ಸಕ ಬುದ್ಧಿಯಿಂದ, ಸಾಹಿತ್ಯದ ಅಂತರಾಳವನ್ನೂ ಗೂಢಸತ್ಯಗಳನ್ನೂ ಅನ್ವೇಷಿಸಿದವರು ವರಕವಿ ಬೇಂದ್ರೆ. ಅವರ ಕಾವ್ಯ ಅಪರಂಜಿತನದ ವೈಶಿಷ್ಟ್ಯವನ್ನು ಹೊಂದಿ ಅನನ್ಯವಾಗಿ ಕಂಡದ್ದರಿಂದ ಅವರು ಕವಿಗಳೇ ಆಗಿ ಉಳಿದರು. ಅವರ ಗದ್ಯ, ಅದರಲ್ಲೂ ವಿಮರ್ಶೆ, ನಾಟಕ, ಹರಟೆಗಳು ವಿಶೇಷವಾಗಿ ವಿಮರ್ಶಕರ ಗಮನವನ್ನು ಸೆಳೆಯದೆ ಬೇಂದ್ರೆ ಅಂದರೆ ಕಾವ್ಯ ಮಾತ್ರ ಎಂಬ ಹಾಗೆ ಕನ್ನಡ ವಿಮರ್ಶಾ ಜಗತ್ತು ತುಸು ಕಾವ್ಯ ಪಕ್ಷಪಾತದಿಂದಲೇ ವರ್ತಿಸಿತು. ಇದರಿಂದಾಗಿ ವಿದ್ವತ್ ಜಗತ್ತಿನಲ್ಲಿ ಬೇಂದ್ರೆಯವರ ಸಾಹಿತ್ಯವು ಪರಿಚಿತವಾದರೂ ಶ್ರೀಸಾಮಾನ್ಯನ ಪಾಲಿಗೆ ಬೇಂದ್ರೆ ಕವಿಯಾಗಿ ಮಾತ್ರ ಇಳಿದರು; ಉಳಿದರು.

ಬೇಂದ್ರೆಯವರ ಸಾಹಿತ್ಯ ವಿಮರ್ಶೆಯ ಲೇಖನಗಳಲ್ಲಿ ಅವರ ಲೇಖನ ಗುಚ್ಛ ‘ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು’ ಮುಖ್ಯವಾದ ಕೃತಿ. ಕರ್ನಾಟಕ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗವು 1966ರ ಡಿಸೆಂಬರ್‌ನಲ್ಲಿ ಈ ಶೀರ್ಷಿಕೆಯಡಿ ಬೇಂದ್ರೆಯವರ ನಾಲ್ಕು ಉಪನ್ಯಾಸಗಳನ್ನು ಏರ್ಪಡಿಸಿತ್ತು. ಈ ನಾಲ್ಕು ಉಪನ್ಯಾಸಗಳ ಲಿಖಿತ ಆಕೃತಿಯೇ ಈ ಕೃತಿ. ಅದರೊಂದಿಗೆ ಬೇಂದ್ರೆಯವರದೇ ಮುನ್ನುಡಿ ಮತ್ತು ಅನುಬಂಧದ ರೂಪದಲ್ಲಿ ‘ಋಣಾನುಬಂಧ’ ಎಂಬ ಭಾಗವೂ ಇದೆ. ಕೇವಲ 81 ಪುಟಗಳ ಈ ಪುಸ್ತಕವು ನಿಜಕ್ಕೂ ‘ಕಿರಿದರೊಳ್ ಪಿರಿದರ್ಥಮಂ’ ಹೇಳುವ ನಿಧಿ. ಬೇಂದ್ರೆಯವರು ಸಹಜವಾಗಿಯೇ ಶಬ್ದ ಗಾರುಡಿಗ. ಇದು ಅವರ ಪದ್ಯಕ್ಕೆ ಎಷ್ಟು ಅನ್ವಯಿಸುತ್ತದೆಯೋ ಅವರ ಗದ್ಯಕ್ಕೂ ಅಷ್ಟೇ ಅನ್ವಯಿಸುತ್ತದೆ. ಅವರ ವಸ್ತುವಿನ ಆಯ್ಕೆ, ಅವರು ಅದನ್ನು ವಿವರಿಸುವ ಪರಿ, ಕೆಲವೆಡೆ ತೀರ ಬೆಡಗಿನಂತನ್ನಿಸಿದರೂ ‘ಇದು ಬರಿ ಬೆಳಗಲ್ಲೋ ಅಣ್ಣಾ’ ಎಂಬ ಹಾಗೆ ತನ್ನ ಅರ್ಥ ವಿಸ್ತಾರವನ್ನು ಹಿಗ್ಗಿಸುತ್ತಲೇ ಇರುತ್ತದೆ.

ಈ ಕೃತಿಯಲ್ಲಿ (ಅಥವಾ ಉಪನ್ಯಾಸ ಮಾಲಿಕೆಗಾಗಿ) ಬೇಂದ್ರೆಯವರು ಆಯ್ದುಕೊಂಡದ್ದು ಮೇಲ್ನೋಟಕ್ಕೆ ಪರಸ್ಪರ ಹೊಂದಾಣಿಕೆಯಿಲ್ಲದಂತಿರುವ ನಾಲ್ಕು ಕಾವ್ಯಗಳನ್ನು ಮತ್ತು ಅದರೊಳಗಿರುವ ನಾಯಕರನ್ನು. ರತ್ನಾಕರವರ್ಣಿಯ ‘ಭರತೇಶ ವೈಭವ’ದ ಭರತ ಚಕ್ರವರ್ತಿ, ಚಾಮರಸನ ‘ಪ್ರಭುಲಿಂಗಲೀಲೆ’ಯ ಅಲ್ಲಮ, ಲಕ್ಷ್ಮೀಶನ ‘ಜೈಮಿನಿ ಭಾರತ’ದ ಶ್ರೀಕೃಷ್ಣ ಮತ್ತು ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ರಾವಣ. ಇವ(ರ)ನ್ನು ಒಂದೇ ಸೂತ್ರಕ್ಕೆ ಪೋಣಿಸಿದ್ದು ಬೇಂದ್ರೆಯವರ ಪ್ರತಿಭೆ ಮತ್ತು ಪಾಂಡಿತ್ಯ. ಬೇಂದ್ರೆಯವರು ಇವರನ್ನು ‘‘ನನ್ನ ಜಪಮಾಲೆಗೆ ನಾಲ್ಕೆ ಮಣಿ’’ ಎನ್ನುತ್ತಾರೆ. ಅವರಿಗೆ ಈ ಭಾಷಣ ಮಾಲಿಕೆ ‘ವಿಚಾರ ವಿವೇಕ’. ತಾವು ಬರೆಯುವ ಪ್ರತಿಯೊಂದು ಪದವೂ ‘ಲಿಂಗ ಅಹುದಹುದೆನಬೇಕು’ ಎಂಬ ಜಾಗ್ರತೆಯನ್ನು ಬೇಂದ್ರೆಯವರು ಸರ್ವತ್ರ ವಹಿಸುತ್ತಾರೆ. ಜೊತೆಗೆ ತಾವು ಮಾಡುವ ವಿಮರ್ಶೆಯಲ್ಲಿ ವಿಮರ್ಶಾ ಮೀಮಾಂಸೆಯನ್ನೂ ಒಳಗೊಳ್ಳುತ್ತಾರೆ. ‘‘ಹೊತ್ತಿದ ಎಲ್ಲ ಬೆಂಕಿಯೂ ಯಜ್ಞದ್ದಲ್ಲ. ಇಳಿದ ಎಲ್ಲ ಮಳೆ ಸೋಮವರ್ಷಣವಲ್ಲ. ಕ್ರಿಮಿ ಹುಟ್ಟಿಸುವ ನಕ್ಷತ್ರಗಳೂ ಇವೆ. ಮುತ್ತು ಹುಟ್ಟಿಸುವ ನಕ್ಷತ್ರವೂ ಇದೆ.’’ ಎನ್ನುತ್ತಾರೆ. (‘ನಕ್ಷತ್ರಗಳೂ’ ಮತ್ತು ‘ನಕ್ಷತ್ರವೂ’ ಎಂಬ ಬಳಕೆಯನ್ನೇ ಗಮನಿಸಿ.)

ಇದು ಅವರ ಬರಹದ ಬಗ್ಗೆ ಅವರು ವಹಿಸುವ ಜಾಗ್ರತೆ ಮಾತ್ರವಲ್ಲ, ಇತರ ವಿಮರ್ಶಕರನ್ನೂ ಎಚ್ಚರಿಸುವ ಮಾತುಗಳು. ಹೀಗಾಗಿ ಅವರ ಮಾತುಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ. ಇಂದು ವಿಮರ್ಶೆಯ ಹೆಸರಿನಲ್ಲಿ ಬರುವ ಅನೇಕ ಬರಹಗಳನ್ನು ಈ ಮೂಸೆಯಲ್ಲಿ ಓದಿದರೆ ಅವೆಲ್ಲ ಉರಿದು ಬೂದಿಯಾಗುತ್ತವೆ. ತಮ್ಮ ಮುನ್ನುಡಿಯ ಕೊನೆಯ ವಾಕ್ಯವಾಗಿ ಅವರು ‘‘ಕವಿ ಬಾಳಬೇಕೋ? ವಿಮರ್ಶಕ ತಾಳಬೇಕು!’’ ಎನ್ನುತ್ತಾರೆ. ಇಲ್ಲೂ ಮೊದಲ ಮೂರು ಮಹಾಕಾವ್ಯಗಳ ಜೊತೆಗೆ ಕುವೆಂಪು ಅವರನ್ನು ಹೊಂದಿಸಿದ್ದು ಕುವೆಂಪು ಅವರ ಕಾವ್ಯದ ಶ್ರೇಷ್ಠತೆಯನ್ನು ಮತ್ತು ಬೇಂದ್ರೆಯವರಿಗೆ ಕುವೆಂಪು ಅವರ ಮತ್ತು ಅವರ ಕಾವ್ಯದ ಕುರಿತು ಇದ್ದ ಗೌರವವನ್ನು, ಅಭಿಮಾನವನ್ನು ಸೂಚಿಸುತ್ತದೆ. ಇನ್ನೂ ವಿಶೇಷವೆಂದರೆ ಮೊದಲ ಮೂರು ಕಾವ್ಯಗಳ ನಾಯಕರು ಈ ಭಾಷಣಮಾಲಿಕೆಗೆ ನಾಯಕರಾದರೆ, ರಾವಣನು ಕುವೆಂಪು ಮಹಾಕಾವ್ಯದ ಪ್ರತಿನಾಯಕ. ಆದರೆ ಶೇಕ್ಸ್ ಪಿಯರ್ ಮಹಾಕವಿಯ ದುರಂತ ನಾಟಕಗಳ ನಾಯಕರಂತೆ ರಾವಣನೂ ಈ ಕಾವ್ಯದಲ್ಲಿ ದುರಂತ ನಾಯಕನಾಗಿ ಪರಿವರ್ತನೆಯಾಗಿದ್ದಾನೆಂದು ಬೇಂದ್ರೆಯವರು ಚಿತ್ರಿಸುತ್ತಾರೆ.

ಪ್ರಸ್ತಾವನೆಯಲ್ಲೂ ಬೇಂದ್ರೆಯವರು ಈ ಕೃತಿಗಳ ಮತ್ತು ತಾವು ಮಾತನಾಡುವ ವಿಚಾರದ ಮಹತ್ವವನ್ನು ಗೌರವಿಸಿ ಹೇಳುವ ‘‘ಮಹತ್ವದ ವಿಷಯಗಳನ್ನು ಎಷ್ಟು ಸಲ ವಿವರಿಸಿದರೂ ಅದರ ಮಹತ್ವ ತೀರುವುದಿಲ್ಲ’’ ಎಂಬ ಮಾತುಗಳು ಅವರು ಇಲ್ಲಿ ಉಲ್ಲೇಖಿಸುವ ಕಾವ್ಯಗಳಿಗೆ, ಅವುಗಳಲ್ಲಿ ಚರ್ಚಿಸುವ ಪಾತ್ರಗಳಿಗೆ, ಮಾತ್ರವಲ್ಲ ಅಷ್ಟೇ ಮಹತ್ವಪೂರ್ಣವಾದ ಈ ಕೃತಿಗೂ ಅನ್ವಯಿಸುತ್ತದೆ. ‘‘ಉಣ್ಣುವವನಿಗೆ ರುಚಿ ಇರಬೇಕು. ಉಣ್ಣುವ ಪದಾರ್ಥದಲ್ಲಿ ಪಾಕ ಎಂಬ ಗುಣವೂ ಇರಬೇಕು’’ ಎಂಬ ಸೂಚನೆ ಬೇಕಾಬಿಟ್ಟಿ ಅಪಾತ್ರ ಕೃತಿಗಳ ಕುರಿತು ಇಂದು ಜಾಹೀರಾತಿನಂತೆ ಬರುವ ಜನಪ್ರಿಯ ವಿಮರ್ಶೆಗಳಿಗೂ ಅನ್ವಯಿಸುವಂತಿದೆ. ಒಬ್ಬೊಬ್ಬ ನಾಯಕನ ಕುರಿತೂ ಬೇಂದ್ರೆ ತಮ್ಮ ಛಾಪನ್ನು ಒತ್ತಿದ್ದಾರೆ. ಎಲ್ಲ ನಾಯಕರ ಕುರಿತಾದ ಅವರ ಮಾತುಗಳಲ್ಲೂ ಇದು ವಿದಿತವಾಗುತ್ತದೆ. ಇಲ್ಲಿರುವ ಭರತ ಪಂಪನ ಆದಿಪುರಾಣದ ಭರತನಲ್ಲ; ರತ್ನಾಕರವರ್ಣಿಯ ಭರತೇಶ ಅಥವಾ ಭರತ ಚಕ್ರವರ್ತಿ. ಇದನ್ನವರು ಸ್ಪಷ್ಟಪಡಿಸುತ್ತಾರೆ: ‘‘ನಾವು ಈಗ ಕಾಣುವುದು ನಾಟ್ಯಶಾಸ್ತ್ರದ ಮುನಿ ಭರತನನ್ನಲ್ಲ. ದುಷ್ಯಂತನ ಮಗ-ಭರತನಲ್ಲ. ಆದಿ ತೀರ್ಥಂಕರ ಋಷಭದೇವನ ಮಗ ಭರತ ಚಕ್ರವರ್ತಿಯನ್ನು.’’ ರತ್ನಾಕರವರ್ಣಿಯ ಭರತ ಇಲ್ಲಿನ ನಾಯಕ. ಬೇಂದ್ರೆ ಮೊದಲು ಕವಿ-ಕಾವ್ಯವನ್ನು, ಆನಂತರ ಭರತೇಶನನ್ನು ಪರಿಚಯಿಸುತ್ತಾರೆ.

ಪ್ರಾಸಂಗಿಕವಾಗಿ ಅವರು ಭರತೇಶನ ಕುರಿತ ಇತರ ಕಾವ್ಯಗಳನ್ನೂ ಅಲ್ಲಿನ ಸಂದರ್ಭಗಳನ್ನೂ ಉಲ್ಲೇಖಿಸುತ್ತಾರೆ. ರತ್ನಾಕರವರ್ಣಿ ಭರತೇಶನಿಗೆ ಪ್ರಧಾನ ಭೂಮಿಕೆಯನ್ನು ನೀಡಿದ್ದಾನೆಂಬುದು ಸ್ಪಷ್ಟ. ಅದನ್ನು ಬೇಂದ್ರೆ ಸಮರ್ಥಿಸುತ್ತಾರೆ. ಅವರ ದೃಷ್ಟಿಯಲ್ಲಿ ಭರತನು ಅಹಂಕಾರಿಯಲ್ಲ; ಅವನು ರಾಜಯೋಗಿ. ಬಾಹುಬಲಿಗೆ ಬಂದ ವಿರಕ್ತಿ- ಫಲಿತ ಕದಳಿಗೆ ಬಂದ ಪಕ್ವಸ್ಥಿತಿ. ಬೇಂದ್ರೆಯವರಿಗೆ ತಮ್ಮ ನಿಲುವಿನ ಕುರಿತು ಇರುವ ಆತ್ಮವಿಶ್ವಾಸವು ‘‘ರಾಮಾಯಣ, ಭಾರತ, ಆದಿಪುರಾಣ, ಸಾಧ್ಯಮಾಡದ ಸಿದ್ಧಿ ಭರತೇಶ ವೈಭವದ ಕಾಣ್ಕೆ’’ ಎಂಬ ಮಾತಿನಲ್ಲಿ ವ್ಯಕ್ತವಾಗುತ್ತದೆ: ಮುಖ್ಯವಾಗಿ ಅವರು ಪಂಪನ ಕಾವ್ಯವನ್ನು ಪ್ರಸ್ತಾಪಿಸಿ ‘‘ಭರತನು ಬಾಹುಬಲಿಯ ಮೇಲೆ ಚಕ್ರವನ್ನು ಪ್ರಯೋಗಿಸುವಲ್ಲಿ ಮತ್ತು ಇದರಿಂದ ಬಾಹುಬಲಿಗೆ ವಿರಕ್ತಿ ಬರುವಲ್ಲಿ, ಮಾನವೀಯ ದೋಷಗಳೇ ಎದ್ದು ಕಾಣುತ್ತವೆ’’ ಎಂದು ಹೇಳಿ ‘‘ಇದೇ ಸಂದರ್ಭ ರತ್ನಾಕರನ ಕೈಯಲ್ಲಿ ಹೊನ್ನಾಗಿದೆ’’ ಎನ್ನುತ್ತಾರೆ. ‘‘ರತ್ನಾಕರನ ಭರತನು ಸಮ್ಯಕ್ ಸಂಪೂರ್ಣ ಪುರುಷ- ಇಹಕ್ಕೂ ಪರಕ್ಕೂ. ಇದು ಸಾಂಗತ್ಯ, ಸಾಹಿತ್ಯ.’’ ಎಂದು ಮುಗಿಸುತ್ತಾರೆ.

ಪ್ರಭುದೇವ ಅಲ್ಲಮ ಈ ಮಾಲಿಕೆಯ ಏಕೈಕ ಐತಿಹಾಸಿಕ ವ್ಯಕ್ತಿ. ಕವಿಯ ಕೈಯಲ್ಲಿ ಪುರಾಣಕ್ಕೆ ಸಂದವನು; ದೈವಾಂಶಸಂಭೂತನಾದವನು. ವಚನಕಾರ ಅಲ್ಲಮ ವೈರಾಗ್ಯ ಚಕ್ರವರ್ತಿಯೂ ಹೌದು. ಅನುಭವ ಮಂಟಪದ ಗುರು. ಹಿರಿದು ಕಿರಿದೆಂಬ ಶಬ್ದವಡಗಿದರೆ ಆತನೇ ಶರಣ ಎಂಬ ಅನುಭಾವವನ್ನು ಸಾಧಿಸಿದವನು. ಬೇಂದ್ರೆಯವರೇ ‘‘ಉಳಿದವರು ಕಾದಂಬರಿಗಳಲ್ಲಿಯ ನಾಯಕರಂತಿದ್ದಾರೆ’’ ಎನ್ನುತ್ತಾರೆ. ಬೇಂದ್ರೆಯವರು ಗುರುತಿಸಿದಂತೆ ‘‘ಚಾಮರಸ ಕವಿಯು ಪ್ರಭುದೇವನ ನಿರಹಂಕಾರವನ್ನು ಪ್ರಭುಲಿಂಗಲೀಲೆಯಲ್ಲಿ ಚಿತ್ರಿಸಿದ್ದಾನೆ’’ ಮತ್ತು ‘‘ಪರಿತಪಿಸುವವರ ಉದ್ಧಾರ ಮತ್ತು ಅಹಂಕಾರದಿಂದ ಉಬ್ಬಿದವರಿಗೆ ಮಾರ್ಗದರ್ಶನ ಮಾಡುವುದನ್ನು ನಾವು ಅಲ್ಲಮನ ಚರಿತ್ರೆಯಲ್ಲಿ ಕಾಣುತ್ತೇವೆ.’’ ಬೇಂದ್ರೆ ಹರಿಹರನ ಅಲ್ಲಮನನ್ನೂ ಚರ್ಚಿಸುತ್ತಾರೆ. ಬೇಂದ್ರೆಯವರಿಗೆ ಅಲ್ಲಮ ಭರತೇಶನಂತೆ ಧೀರೋದಾತ್ತ ನಾಯಕ. ಬೇಂದ್ರೆಯವರು ಸ್ಪಷ್ಟವಾಗಿ ‘‘ಚಾಮರಸ ಕವಿಯ ಅಲ್ಲಮ ಪ್ರಭುವಿನ ಪಾತ್ರ ಚಿತ್ರಣದಲ್ಲಿ ಶೃಂಗಾರಕ್ಕೆ ಎಡೆ ಇಲ್ಲ’’ ಎನ್ನುತ್ತಾರೆ. ಇದಕ್ಕೆ ಸಮರ್ಥನೆಯಾಗಿ ಅವರು ಹರಿಹರನ ಕಾವ್ಯದಲ್ಲಿ ಅಲ್ಲಮ ಪ್ರಭುದೇವ ಮತ್ತು ಕಾಮಲತೆಯ ಪ್ರಣಯ ಪ್ರಸಂಗದ ವರ್ಣನೆಯಿರುವುದನ್ನು ಮತ್ತು ಅಲ್ಲಮನು ಅವಳಿಗೆ ಮನಸೋತದ್ದನ್ನು ಉದಾಹರಿಸುತ್ತಾರೆ. ಕಾವ್ಯದ ಸುಖಾಶಯವನ್ನು ವಿವರಿಸುತ್ತ ‘‘ಸಾಹಿತಿಯ ಆಶೆಗೆ, ಅಭೀಪ್ಸೆಗೆ ಕೊನೆಯಿಲ್ಲ’’ ಎನ್ನುತ್ತಾರೆ. ಶ್ರೀಕೃಷ್ಣ ಮತ್ತು ಲಂಕೇಶ್ವರ ರಾವಣನನ್ನು ಬೇಂದ್ರೆ ಒಂದೇ ಲೇಖನದಲ್ಲಿ ಸಂದರ್ಭವನ್ನು ಬದಲಾಯಿಸಿಕೊಳ್ಳುತ್ತ ಚರ್ಚಿಸುತ್ತಾರೆ. ಇಲ್ಲೂ ಅವರು ಕವಿ-ಕಾವ್ಯಗಳನ್ನು ಪರಿಚಯಿಸಿಯೇ ಮುಂದುವರಿಯುತ್ತಾರೆ. ಕಾವ್ಯಗಳ ಮುಖ್ಯ ಲಕ್ಷಣಗಳನ್ನು ಅವರು ಹೇಳುವ ಬಗೆ ಹೀಗೆ: ‘‘ಜೈಮಿನಿ ಭಾರತದಲ್ಲಿ ಕ್ಷಾತ್ರ ಮತ್ತು ಭಕ್ತಿ ಇವುಗಳ ಸಮನ್ವಯವಾಗಿದೆ. (ಕುವೆಂಪು) ಅವರಿಗೆ ರಾಮಾಯಣದ ಬಗ್ಗೆ ಒಂದು ದರ್ಶನವಿದೆ. ಆ ದರ್ಶನದ ಹರವೇ ಈ ಬೃಹತ್ ಕಾವ್ಯ.’’
 
‘‘ಕನ್ನಡ ಕಾವ್ಯ ಸಾಹಿತ್ಯದಲ್ಲಿ ಅನೇಕ ಕವಿಗಳ ಮನಸ್ಸನ್ನು ಸೆಳೆದಿದೆ ಶ್ರೀಕೃಷ್ಣ-ನಾಯಕ ಪಾತ್ರ’’ ಎನ್ನುವ ಬೇಂದ್ರೆ ವ್ಯಾಸಭಾರತವನ್ನು ಮಾತ್ರವಲ್ಲ, ರುದ್ರಭಟ್ಟನ ಜಗನ್ನಾಥ ವಿಜಯ, ಕುಮಾರವ್ಯಾಸ ಭಾರತ, ಕನಕದಾಸರ ಮೋಹನ ತರಂಗಿಣಿ ಹೀಗೆ ಇದೇ ವಸ್ತುವಿಗೆ ಸಂಬಂಧಿಸಿದ ಇತರ ಕಾವ್ಯಭಾಗಗಳನ್ನೂ ಚರ್ಚಿಸುತ್ತಾರೆ. ‘ತೇನವಿನಾ ತೃಣಮಪಿ ನ ಚಲತಿ’ ಎಂಬ ಹಾಗೆ ಶ್ರೀಕೃಷ್ಣನ ಹೊರತಾಗಿ ಜೈಮಿನಿ ಭಾರತ ಚಲಿಸದು ಎನ್ನುತ್ತಾರೆ. ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿನ ರಾವಣ ಉತ್ಕಟ ಅಹಂಕಾರಿ. ಈ ಕಾವ್ಯ ರಾವಣ ದರ್ಶನವಲ್ಲವೆಂಬ ಎಚ್ಚರವನ್ನು ಬೇಂದ್ರೆ ಕಾಪಾಡಿಕೊಳ್ಳುತ್ತಾರೆ. ಆದರೆ ರಾವಣನಿಗೆ ತನಗೊದಗಿದ ಭವಿಷ್ಯದ ಅರಿವಿದೆ. ಭವಾಂತರವಾಗದೇ ಭಾವಾಂತರವಾಗದೆನ್ನುತ್ತಾರೆ ಬೇಂದ್ರೆ. ‘‘ರಾವಣನಿಂದಲೇ ರಸೋತ್ಕರ್ಷ ಹೊಂದಿಹುದೋ ರಾಮಾಯಣಾ’’ ಎಂಬ ಕಾವ್ಯಭಾಗವನ್ನುದ್ಧರಿಸುತ್ತಾರೆ.

ಅವರು ಹೇಳುವಂತೆ ‘‘ಮೂಲ ರಾಮಾಯಣದ ಕಲಿ ರಾವಣ ಬೇರೆ, ಜೈನರ ಅಹಂಕಾರಿ ಪ್ರತಿವಾಸುದೇವ ರಾವಣ ಬೇರೆ, ಬಿ.ಎಂ.ಶ್ರೀಯವರ ದುರಂತನಾಯಕ ರಾವಣ ಬೇರೆ ಮತ್ತು ಕುವೆಂಪು ಅವರ ರಾವಣ ಬೇರೆಯೇ’’ ಕುವೆಂಪು ಅವರ ಸ್ವತಂತ್ರ ಪ್ರಜ್ಞೆಯನ್ನು ಬೇಂದ್ರೆ ಮನಸಾರೆ ಮೆಚ್ಚುತ್ತಾರೆ. ಒಟ್ಟಿನಲ್ಲಿ ಅವರು ಈ ನಾಲ್ಕೂ ಪಾತ್ರವೈಭವವನ್ನು ಸಂಕ್ಷಿಪ್ತವಾಗಿ ಹೇಳುವುದು ಹೀಗೆ: ‘‘ಒಬ್ಬನ ಮುಂದೆ ತಲೆಬಾಗುವುದಾಗಲಿ ಅಥವಾ ಮನ್ನಿಸುವುದಾಗಲಿ, ತನ್ನ ಬೆಲೆಯನ್ನು ಕಳೆದುಕೊಂಡಂತಲ್ಲ. ಭರತ, ಅಲ್ಲಮ, ಶ್ರೀಕೃಷ್ಣ, ಇನ್ನೊಬ್ಬರನ್ನು ಮನ್ನಿಸುತ್ತಲೇ ತಮ್ಮ ಬೆಲೆಯನ್ನು ಕಾಯ್ದುಕೊಂಡು ಬೆಳಗಿದ ನಾಯಕ ರತ್ನಗಳು. ನಾಲ್ಕನೆಯ ರತ್ನ ರಾವಣ. ಇವನು ಲಂಕೇಶ್ವರ. ಇವನು ಯಾರಿಗೂ ಶರಣಾಗುವ ಇಚ್ಛೆವುಳ್ಳನಾಗದಿದ್ದವನು ಅಹಂಕಾರಕ್ಕೆ ಶರಣಾಗಿದ್ದಾನೆ. ದೇಹ ಅಹಂಕಾರಕ್ಕೆ ಬಲಿಯಾದವನಿಗೆ ಆತ್ಮಾರ್ಪಣೆಯಲ್ಲದೆ ಬೇರೆ ಮಾರ್ಗವಿಲ್ಲ ಎಂದು ನಮ್ಮ ಕಾವ್ಯವು ತೋರಿಸಿಕೊಟ್ಟಿದೆ.

ಬೇಂದ್ರೆಯವರು ವಿಶಿಷ್ಟವಾಗಿ ಯೋಚಿಸುವ ಬರೆಹಗಾರ. ಅವರಿಗೆ ಸಾಹಿತ್ಯದ ಬಂಧನಗಳು ವರ್ಜ್ಯ. ಸಾಹಿತ್ಯದ ಪಾಶವನ್ನು ಬಂಧ ಮಾಡದೆ ಸಂಬಂಧ ಮಾಡುವುದು ಅವರ ಆದ್ಯತೆ. ಎಲ್ಲ ಶ್ರೇಷ್ಠ ಕನ್ನಡ ಸಾಹಿತ್ಯವೂ ಅವರಿಗೆ ಕನ್ನಡದ ವೈಭವ. ಅವರು ‘‘ಕವಿಗಳ ಕಾವ್ಯವನ್ನು ಮತೀಯ ದೃಷ್ಟಿಯಿಂದ ನೋಡಿ ಜಗ್ಗಾಡದೆ ಅದರಲ್ಲಿ ಕಾವ್ಯರಸದ ಗ್ರಹಣವನ್ನು ಮಾಡಬೇಕು ವಾಚಕರು’’ ಎನ್ನುತ್ತಾರೆ. ಈ ಕೃತಿಯು ಬೇಂದ್ರೆಯವರು ಕನ್ನಡ ಕಾವ್ಯದ ಹೆಜ್ಜೆಗುರುತನ್ನು ಹೊಸದಾಗಿ ಹಿಡಿದ ಬಗೆಯನ್ನು ಅನನ್ಯವಾಗಿ ಉದಾಹರಿಸುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top