ನಾಲ್ಕು: ಮುಂದೇನು? | Vartha Bharati- ವಾರ್ತಾ ಭಾರತಿ

ನಾಲ್ಕು: ಮುಂದೇನು?

ಬಾಲ ಸುಬ್ರಹ್ಮಣ್ಯ ಕಂಜರ್ಪಣೆ

ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿದೆ. ಯಾವುದೇ ಸರಕಾರವು ನಾಲ್ಕು ವರುಷಗಳನ್ನು ಪೂರೈಸುವುದು ಇಂದಿನ ರಾಜಕೀಯ ಸಂದರ್ಭದಲ್ಲಿ ಸಣ್ಣ ವಿಚಾರವೇನಲ್ಲ. ಕೆಲವೇ ದಿನಗಳಲ್ಲೂ ಕೇಂದ್ರ ಇಲ್ಲವೇ ರಾಜ್ಯ ಸರಕಾರಗಳು ಪತನಗೊಳ್ಳುವುದನ್ನು ಕಳೆದ ಕೆಲವು ಸಂದರ್ಭಗಳಲ್ಲಿ ದೇಶ ಕಂಡಿದೆ. ಆದ್ದರಿಂದ ಚಲನಚಿತ್ರಗಳಂತೆ ಶತದಿನೋತ್ಸವ, ಇಪ್ಪತ್ತೈದು ವಾರ, ಐವತ್ತು ವಾರ, ಒಂದು ವರುಷ, ನೂರು ವಾರ, ಹೀಗೆ ಸಂಭ್ರಮಗಳನ್ನು ಯಾವುದೇ ಸರಕಾರ ಆಚರಿಸಿಕೊಂಡರೆ ಅದು ಅವರು ದೇಶಕ್ಕೋಸ್ಕರ ಏನು ಮಾಡಿದರು ಎಂಬುದಕ್ಕಿಂತಲೂ ತಮ್ಮ ಅಸ್ತಿತ್ವವನ್ನು ಅಲ್ಲಿಯ ವರೆಗೂ ಉಳಿಸಿಕೊಂಡದ್ದರ ದ್ಯೋತಕವಾಗಿ ಮತ್ತು ಉಳಿದುಕೊಂಡದ್ದೇ ಸಾಧನೆಯಾಗಿ ಉಳಿಯುತ್ತದೆ.

ಎಲ್ಲವೂ ನಿರೀಕ್ಷೆಯಂತೆ, ಕಾಲಾನುಕ್ರಮಣಿಕೆಯಂತೆ ನಡೆದರೆ ಇನ್ನೊಂದು ವರ್ಷದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಈ ನಾಲ್ಕು ವರ್ಷಗಳ ಅಂಕಪಟ್ಟಿಯನ್ನು ಗಮನಿಸಿದರೆ ಭಾರತ ಅಭಿವೃದ್ಧಿ ಹೊಂದಿದೆಯೋ ಇಲ್ಲವೊ ಬೇರೆ ವಿಚಾರ; ಆದರೆ ಈ ದೇಶದ ರಾಜಕೀಯ, ನಾಯಕರ ನಡೆನುಡಿ ಹೊಸ ಪಾತಾಳವನ್ನು ಕಂಡುಕೊಂಡಿದೆ.

ಕಾಂಗ್ರೆಸ್ ಮುಕ್ತ ಭಾರತ ತನ್ನ ಗುರಿ ಎಂದುಕೊಂಡು ಹೊರಟ ಪ್ರಧಾನಿ ಮೋದಿ ತಮ್ಮ ಪಕ್ಷದ ಬಹುತೇಕ ನಾಯಕರಿಗೆ ಮುಕ್ತಿ ಕರುಣಿಸಿದ್ದಾರೆ. ಅಡ್ವಾಣಿ, ಜಸ್ವಂತ್ ಸಿಂಗ್, ಅರುಣ್ ಶೌರಿ, ಯಶವಂತ್ ಸಿನ್ಹ್ಹಾ, ಮುಂತಾದ ಹಿರೀಕರೆಲ್ಲ ನೇಪಥ್ಯಕ್ಕೆ ಸರಿದ ರೀತಿ ಯಾವುದೇ ರಾಜಕೀಯ ಪಕ್ಷಕ್ಕೆ ಅವಮಾನವಾಗುವಂತಿತ್ತು. ಬಹಿರಂಗವಾಗಿಯೇ ಟೀಕಿಸುವ ಶತ್ರುಘ್ನ ಸಿನ್ಹಾ ಅವರಿಗೆ ಇನ್ನೂ ಗೇಟ್ ಪಾಸ್ ಯಾಕೆ ಸಿಕ್ಕಿಲ್ಲ ಎನ್ನುವುದು ಚಿದಂಬರ ರಹಸ್ಯ. ವಿರೋಧ ಪಕ್ಷಗಳು ಒಂದಾದರೆ ಮೋದಿಯ ವರ್ಚಸ್ಸು ಕೆಲಸಮಾಡುವುದಿಲ್ಲವೆಂಬುದನ್ನು ಉತ್ತರ ಪ್ರದೇಶದ ಎರಡು ಸಂಸದೀಯ ಚುನಾವಣೆಗಳು ತೋರಿಸಿಕೊಟ್ಟಿವೆ.

ಇಂದಿರಾ ಗಾಂಧಿ ಕಾಲಕ್ಕಿಂತಲೂ ಹೆಚ್ಚು ರಾಜ್ಯಗಳನ್ನು ತನ್ನದಾಗಿಸಿ ಕೊಂಡಿದೆ ಎಂದು ಹೇಳುವಾಗ ಈ ಅಂಶಗಳನ್ನು ಮರೆಯಬಾರದು: ಬಿಹಾರದಲ್ಲಿ ಮಹಾಘಟಬಂಧನವನ್ನು ಘಟಶ್ರಾದ್ಧಗೊಳಿಸಿ ಭಾಜಪವು ನಿತೀಶ್ ಕುಮಾರ್ ಅವರ ಜನತಾ ದಳ (ಯು) ಪಕ್ಷಕ್ಕೆ ಪಕ್ಕವಾದ್ಯದ ಸಾಥ್ ನೀಡಿತು; ಗುಜರಾತಿನಲ್ಲಿ ಕಷ್ಟಪಟ್ಟು ಭಾಜಪ ಬಹುಮತವನ್ನು ಗಳಿಸಿತು; ಮೇಘಾಲಯ, ಮಣಿಪುರ, ಗೋವಾಗಳಲ್ಲಿ ಸ್ಥಳೀಯ ಅಥವಾ ಪ್ರಾದೇಶಿಕ ಪಕ್ಷಗಳೊಂದಿಗೆ ಸಮ್ಮಿಶ್ರ ಸರಕಾರಗಳನ್ನು ರಚಿಸಿತು. ದಕ್ಷಿಣ ಭಾರತಕ್ಕೆ ಲಗ್ಗೆ ಹಾಕುವ ಭಾಜಪದ ಪ್ರಯತ್ನವು ವಿಫಲವಾಗಿದೆ. ಕರ್ನಾಟಕದ ಚುನಾವಣೆಯು ಮೋದಿಯ ಪ್ರಭಾವ 222ರಲ್ಲಿ 104ರಷ್ಟು ಎಂದು ಸಾಬೀತು ಮಾಡಿ ಮೋದಿ-ಅಮಿತ್‌ಶಾದ್ವಯರನ್ನು ಅನುತ್ತೀರ್ಣಗೊಳಿಸಿದೆ. ಕರ್ನಾಟಕದ ರಾಜಕೀಯ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ಮೋದಿ-ಅಮಿತ್ ಶಾ ಎಂಬ ಯುಗಳರ ಓಟಕ್ಕೆ ಕರ್ನಾಟಕದ ರಾಜಕೀಯವು ಬ್ರೇಕ್ ಹಾಕಿದ್ದಂತೂ ಹೌದು. ಹಿಂದುತ್ವದ ಹೆಸರಿನಲ್ಲಿ ಲಿಂಗಾಯತರನ್ನು ತನ್ನ ಬುಟ್ಟಿಗೆ ಹಾಕಿಕೊಂಡರೂ ಅಧಿಕಾರವೇರಲು ಅದು ಸಾಲದೆಂಬುದನ್ನು ಇವರು ಅರ್ಥಮಾಡಿಕೊಂಡಿಲ್ಲ. ಈ ಇಬ್ಬರು ನೂರು ಶೇಕಡಾ ಅಂಕಗಳನ್ನು ಗಳಿಸಲು ಹೊರಟು ಹಾಗೂ ಹೀಗೂ ಮೂವತ್ತೈದರ ಪಾಸ್ ಮಾರ್ಕಿಗಿಂತ ಕಿಂಚಿದೂನದ ವರೆಗಷ್ಟೇ ತಲುಪಲು ಸಾಧ್ಯವಾಗಿ ಪಕ್ಷಾಂತರದ ಕೃಪಾಂಕಗಳನ್ನು ಗಳಿಸಲು ವಿಫಲರಾಗಿ ಅಧಿಕಾರ ದಕ್ಕದೆ ತಮ್ಮ ಸಮುದಾಯದಲ್ಲಿ ಮೊದಲಿದ್ದ ಸೂಪರ್ ಮ್ಯಾನ್ ಗಾತ್ರದಿಂದ ಕುಗ್ಗಿ ಗಾಳಿ ತೆಗೆದ ಟೈರ್‌ಗಳ ಹಾಗೆ ಅತ್ತಿತ್ತ ಓಲಾಡುತ್ತ ರಸ್ತೆಯ ಹಾದಿಯಲ್ಲುಳಿಯಲು ಯತ್ನಿಸುತ್ತ ಸಂಚರಿಸುತ್ತಿದ್ದಾರೆ.

ಭಾಜಪದ ದುರಂತವೆಂದರೆ ಅದು ಕಾಂಗ್ರೆಸಿನ ಇಂದಿರಾ ಯುಗವನ್ನು ಪ್ರತಿನಿಧಿಸುವುದು. ಸಾಧನಾ ಸಮಾವೇಶಗಳಲ್ಲಿ ಭಾಜಪ ಎಂಬ ಉಲ್ಲೇಖವೇ ಈಗಿಲ್ಲ. ಮೋದಿ ಮತ್ತು ಅಮಿತ್ ಶಾ ಇವರ ಉಲ್ಲೇಖ ಎಷ್ಟಿದೆಯೆಂದರೆ ಅವ್ರನ್ನು ಬಿಟ್ಟು ಇವ್ರನ್ನು ಬಿಟ್ಟು ಇನ್ಯಾರು? ಎಂಬ ಪ್ರಶ್ನೆಗೆ ಸದ್ಯ ಅವರಲ್ಲೇ ಉತ್ತರವಿಲ್ಲ! ನಾಲ್ಕು ವರ್ಷಗಳು ಕಳೆದದ್ದನ್ನು ಸರಕಾರಿ ಮತ್ತು ಸರಕಾರಿ ಕೃಪಾ ಪೋಷಿತ ಸಂಸ್ಥೆಗಳು ಹಾಗೂ ಬಹಳಷ್ಟು ಮಾಧ್ಯಮಗಳು ಮೋದಿಯನ್ನು ಹಾಡಿ ಹೊಗಳುವುದಕ್ಕೆ ಬಳಸಿವೆ. ಎಲ್ಲೂ ಭಾಜಪದ ಪ್ರಸ್ತಾಪವೇ ಇಲ್ಲ. ತನ್ನತನವನ್ನೇ ಕಳೆದುಕೊಂಡಿರುವ ಆಕಾಶವಾಣಿಯು ಕನಿಷ್ಠ ಲಜ್ಜೆಯನ್ನೂ ಬಿಟ್ಟುಕೊಟ್ಟು ಬೆತ್ತಲೆ ನಿಂತಿದೆ; ಕೇಂದ್ರ ಸರಕಾರ ಎಂಬುದನ್ನೂ ಹೇಳದೆ ಮೋದಿ ಸರಕಾರ ಎಂದೇ ತನ್ನ ವಾರ್ತೆಗಳಲ್ಲಿ ಉಲ್ಲೇಖಿಸುವುದನ್ನು ಮತ್ತು ಮೋದಿ ಹೇಳಿದ್ದನ್ನೇ ಒಂದಿಷ್ಟೂ ಪರಿಶೀಲಿಸದೆ ಅಕ್ಷರಶಃ ಪುನರಾವರ್ತಿಸುವುದನ್ನು ಗಮನಿಸಿದರೆ ಆಕಾಶವಾಣಿಯು ಮೋದಿಯವರ ಜಾಹೀರಾತನ್ನೇ ಸುದ್ದಿಯಾಗಿ ಬಿತ್ತರಿಸುತ್ತಿದೆ. ಮಾಧ್ಯಮಗಳ ಪೈಕಿ ಬಹಳಷ್ಟು ಮಂದಿ ‘ಮಾರಾಟಕ್ಕಿವೆ’ ಎಂಬ ಫಲಕವನ್ನು ಬದಲಾಯಿಸಿ ‘ಮಾರಾಟವಾಗಿವೆ’ ಎಂಬುದನ್ನು ಪ್ರದರ್ಶಿಸಿದರೆ ಒಳ್ಳೆಯದು. ಈಗ ಬರುವ ಸರಕಾರಿ ಪ್ರವರ್ತಕ ಸುದ್ದಿಗಳನ್ನು ನೋಡಿದರೆ ‘‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’’ ಎಂದಿದ್ದ 1975ರ ದೇವಕಾಂತಬರುವಾ ಸಂತನಂತೆ ಕಾಣಿಸುತ್ತಾರೆ.

 ಮೋದಿ ಆಡಳಿತದ ಸಾಧನೆಗಳು ಅವರ ಮಿತಿಯನ್ನೂ ಹೇಳಿದೆ. ರಾಜ್ಯಗಳ ಚುನಾವಣೆಯ ಸಂದರ್ಭವನ್ನು ಹೊರತುಪಡಿಸಿದರೆ ಪ್ರಧಾನಿ ವಿದೇಶಿ ನೆಲದಲ್ಲೇ ಇರುತ್ತಾರೆಂಬುದು ಹಾಸ್ಯದ ಮಾತಲ್ಲ. ಸಾಮಾನ್ಯವಾಗಿ ಲಘುವಾಗಿ ಪರಿಗಣಿಸಬೇಕಾದ ವಿಚಾರಗಳೆಲ್ಲ ಮೋದಿಯ ಸಂದರ್ಭದಲ್ಲಿ ಕ್ರೂರ ವಾಸ್ತವವಾಗುತ್ತಿವೆ. ವಿದೇಶಾಂಗ ವ್ಯವಹಾರದ ಸಚಿವೆ ಸುಶ್ಮಾ ಸ್ವರಾಜ್ ವಿದೇಶದಲ್ಲಿ ಸತ್ತ, ಇಲ್ಲವೆ ಗಾಯಗೊಂಡ ಇಲ್ಲವೆ ಕಳೆದುಹೋದವರನ್ನು ಹುಡುಕುವ ಕಾರ್ಯದಲ್ಲಷ್ಟೇ ಸಮಯ ಕಳೆದು ‘ಶ್ಮಶಾನ ಕುರುಕ್ಷೇತ್ರಂ’ ನಾಟಕದ ಲಾಟೀನು ಹಿಡಿದು ಹುಡುಕುವ ತಾಯಿಯಂತೆ ಕಾಣುತ್ತಿದ್ದಾರೆ; ನಮ್ಮೆಲ್ಲರ ಅನುಕಂಪಕ್ಕೆ ಪಾತ್ರರಾಗಿದ್ದಾರೆ. ಉಳಿದ ಮಂತ್ರಿಗಳ ಕತೆ ಬೇಡ. ಅವರಿಗೆ ಸ್ವಕ್ಷೇತ್ರವೂ ಇಲ್ಲ; ದಿಲ್ಲಿಯೂ ಇಲ್ಲ ಎಂಬಂತಾಗಿದೆ. ಬಹುತೇಕ ಮಂತ್ರಿಗಳು ಬಲಾತ್ಕಾರವಾಗಿ ಸಂತಾನಹರಣ ಚಿಕಿತ್ಸೆ ಮಾಡಿಕೊಂಡವರ ಹಾಗೆ ಹಾಶ ಕಳೆಯಲ್ಲಿ ಕಂಗೊಳಿಸುತ್ತಿದ್ದಾರೆ.

ಪ್ರಧಾನಿ ಕಾಂಗ್ರೆಸನ್ನು ಅಪ್ರಸ್ತುತ ಮಾಡಿಯೇ ಬಿಡುತ್ತಾರೇನೋ ಎಂಬಂತಿತ್ತು ಅವರ ಆರಂಭದ ಚಲನೆ. ಆದರೆ ಅವರ ರಾಜಕೀಯ ಕುಟಿಲತೆ ಅವರಿಗೇ ಮುಳ್ಳಾಗಿ ತಿರುಗುವ ವಾತಾವರಣವನ್ನು ಅವರೇ ಸೃಷ್ಟಿಸಿಕೊಂಡರು. ಕಾಂಗ್ರೆಸನ್ನು ಗುಮ್ಮನ ಹಾಗೆ ಜನರೆದುರಿಡುವುದರಿಂದ ಗತಿಸಿಹೋಗುತ್ತಿದ್ದ ಕಾಂಗ್ರೆಸಿಗೆ ಹೊಸ ಜನ್ಮ ನೀಡಿದ ಖ್ಯಾತಿ ಮೋದಿಗೆ. ಕಾಂಗ್ರೆಸಿಗೆ ಮೊದಲಿನ ವರ್ಚಸ್ಸು ಬರುತ್ತದೆಯೋ ಇಲ್ಲವೊ ಗೊತ್ತಿಲ್ಲ; ಆದರೆ ಸದಾ ಕಾಂಗ್ರೆಸಿನ ಬಗ್ಗೆ ಮಾತನಾಡುತ್ತ ಮೋದಿ ಜನರಿಗೆ ಮತ್ತೆ ಕಾಂಗ್ರೆಸನ್ನು ನೆನಪಿಸಿದ್ದಂತೂ ನಿಜ. ಕಂಸನ ಕನಸಿನಲ್ಲಿ ಕೃಷ್ಣ ಬಂದಂತೆ ಮೋದಿಗೆ ರಾಹುಲ್ ಾಂಧಿ ಪರಿಣಮಿಸಿದ್ದಾರೆಂದು ಕಾಣುತ್ತದೆ.

ಮೋದಿಯವರ ಚರಿತ್ರೆಯ ತರ್ಕ ಅರ್ಥವಾಗದ್ದು. ನಾಟಕೀಯವಾಗಿ ಪ್ರಚೋದನಾತ್ಮಕ ಉಗ್ರತೆಯಿಂದ ಮಾತನಾಡುವುದೇ ಆಡಳಿತವೆಂದು ಭಾವಿಸುವ ಮೋದಿ ಹಿಂದಿನ ಆಡಳಿತವನ್ನು ಬೈದರೆ ತನ್ನ ಪ್ರತಿಷ್ಠೆ ಹೆಚ್ಚಾಗುತ್ತದೆಂದು ನಂಬಿದವರು. ಇನ್ನೊಂದು ಅರ್ಥದಲ್ಲಿ ಯಾರಿಗೆ ತನ್ನ ಬಗ್ಗೆ ವಿಶ್ವಾಸವಿಲ್ಲವೊ ಅಥವಾ ತನ್ನ ಬಗ್ಗೆ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲವೋ ಅಂಥವರು ಮಾತ್ರ ಎದುರಾಳಿಯನ್ನು ಸದಾ ನೆನಪಿಸುತ್ತಾರೆ. ಹಿಂದಿನ ಹೆಜ್ಜೆಯನ್ನು ನೆನಪಿಸದೆ ಮುಂದಿನ ಹೆಜ್ಜೆಯನ್ನು ಇಡುವುದು ಸಾಧ್ಯವಿಲ್ಲ. ಆದರೆ ಮೋದಿ ಎರಡೂ ಕಾಲುಗಳನ್ನು ನೆಲದಿಂದ ಮೇಲೆತ್ತಿ ಹುಲ್ಲು ಹುಟ್ಟದ ಹಾಗೆ ಓಡುತ್ತಿದ್ದಾರೆ. ಇದರಿಂದಾಗಿ ಅವರಿಗೆ ವಾಸ್ತವದ ಅರಿವೇ ಆಗುತ್ತಿಲ್ಲ.

ಮೋದಿ ನೆಹರೂವಿನ ಸಹಿತ ಸ್ವಾತಂತ್ರ್ಯೋತ್ತರ ಭಾರತದ ಎಲ್ಲರನ್ನೂ ಹಳಿಯುವ ಅವಸರದಲ್ಲಿ 1977ರಲ್ಲಿ ತಮ್ಮ ಭಾರತೀಯ ಜನತಾ ಪಾರ್ಟಿಯೇ ಒಂದು ಅಂಗವಾಗಿದ್ದ ಜನತಾ ಪಾರ್ಟಿ, 1999ರಿಂದ 2004ರ ವರೆಗಿದ್ದ ಭಾಜಪ ಸರಕಾರ ಇವೆಲ್ಲವನ್ನೂ ಮರೆತು ಮಾತನಾಡುತ್ತಿರುವುದು ಅವರ ಪಕ್ಷದಲ್ಲಿರಬಹುದಾದ ಪ್ರಾಜ್ಞರಿಗೆ ಮುಜುಗರ ತರುವ ವಿಚಾರ. ಎಲ್ಲವೂ 2014ರಲ್ಲಿ ಆರಂಭವಾಯಿತೆಂದು ತಿಳಿಯುವುದು ಅಸಲಿಗೆ ಮೂರ್ಖತನಕ್ಕಿಂತಲೂ ಅಜ್ಞಾನವೇ ಸರಿ. ಇದನ್ನೇ ಸ್ವಲ್ಪಲಘುವಾಗಿ ಹೇಳಬಹುದಾದರೆ ಅದು ಯುವಕನೊಬ್ಬ ತನಗೆ ಕಳೆದ ಹದಿನೆಂಟು ವರ್ಷ ಮೀಸೆ ಬಂದಿರಲಿಲ್ಲವೆಂದೂ ಈ ವರ್ಷ ಮೀಸೆ ಬಂದಿದೆಯೆಂದೂ ಆದ್ದರಿಂದ ಹಿಂದಿನ ವರುಷಗಳೆಲ್ಲ ನಿಷ್ಫಲ ಹಾಗೂ ಅವು ತನ್ನ ಮೀಸೆಯ ಬೆಳವಣಿಗೆಗೆ ಏನೂ ಮಾಡಿಲ್ಲವೆಂದೂ ಹೇಳಿಕೊಂಡ ಹಾಗೆ.

ಮಾತಿನಿಂದಲೇ ಸ್ವರ್ಗಕ್ಕೆ ಏಣಿಯಿಡುವ ಕಾಯಕ ಈ ದೇಶದ ರಾಜಕಾರಣಕ್ಕೆ ಸಹಜ. ಆದರೆ ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿದ ನಟನೆ ಈಗ ನಡೆಯುತ್ತಿದೆ. ಈ ದೇಶದ ಜನರಿಗೆ ಮೋದಿ ತಮ್ಮ ಬಹಳಷ್ಟು ಸಾಧನೆಗಳನ್ನು ದಿನನಿತ್ಯ ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದು ಅವರ ಹಕ್ಕು. ಆದರೆ ಸರಕಾರ ನಡೆಸುವು ದೆಂದರೆ ಸುಳ್ಳು ಹೇಳುವುದು ಮತ್ತು ಜನರ ಅಜ್ಞಾನವನ್ನೂ ಮೌಢ್ಯವನ್ನೂ ಒರೆಗಿಡುವುದು ಎಂಬ ಹಾಗಿರಬಾರದು. ಇದಕ್ಕೂ ಒಂದು ಹಳೆಯ ಚಟಾಕಿಯನ್ನು ನೆನಪಿಸಬಹುದು: ವೈದ್ಯನೊಬ್ಬ ರೋಗಿಯನ್ನು ಪರೀಕ್ಷಿಸಿ ‘‘ಇವನು ಸತ್ತುಹೋಗಿದ್ದಾನೆ’’ ಎಂದರಂತೆ. ಆಗ ಆ ರೋಗಿ ಎದ್ದು ಕುಳಿತು ‘‘ಇಲ್ಲ ಡಾಕ್ಟ್ರೆ, ನಾನಿನ್ನೂ ಬದುಕಿದ್ದೇನೆ’’ ಎಂದನಂತೆ. ಅದಕ್ಕೆ ಅ ವೈದ್ಯರು ‘‘ನಿನಗಿಂತ ಹೆಚ್ಚು ನನಗೆ ಗೊತ್ತಿದೆ, ನೀನು ಸತ್ತಿದ್ದೀ, ಸುಮ್ಮನೆ ಮಲಕ್ಕೋ’’ ಎಂದನಂತೆ. ಹೀಗೆ ಜನರು ಸುಖವಾಗಿದ್ದಾರೆಂದು ಜನರಿಗೆ ಹೇಳಿ ಅವರನ್ನು ನಂಬಿಸುವ ಪ್ರಯತ್ನವನ್ನು ಪ್ರಧಾನಿ ಅನುದಿನವೂ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಸಂಕಟಗ್ರಸ್ತನನ್ನು ಕಚಕುಳಿಯಿಟ್ಟು ನಗಿಸಿದಂತೆ.

ಪ್ರಧಾನಿ ನೀಡುವ ಅಂಕಿ-ಅಂಶಗಳು ಮೇಲ್ನೋಟಕ್ಕೇ ಸುಳ್ಳೆಂದು ತಿಳಿದವರೂ ಅದನ್ನು ಹೇಳಿದರೆ ಎಲ್ಲಿ ತಮ್ಮನ್ನು ದೇಶದ್ರೋಹಿಗಳೆಂದು ಹೇಳುತ್ತಾರೋ ಎಂದು ಹೆದರಿ ಅಹುದಹುದೆನ್ನುತ್ತಾರೆ. ಹಿಂದೆ ಕಾಶಿಯಲ್ಲಿ ಪಿತೃಶ್ರಾದ್ಧ ಮಾಡಲು ಹೋದವರಿಗೆ ಅಲ್ಲಿನ ಪುರೋಹಿತರು ಎಲ್ಲ ಕಾರ್ಯಕರ್ಮಕ್ರಮಗಳನ್ನು ಪೂರೈಸಿ ಗಂಗಾನದಿಯ ಕಣ್ಣುಹಾಯಿಸುವಷ್ಟು ದೂರದತ್ತ ಕೈಚಾಚಿ ‘‘ಅಗೋ ನೋಡಿ... ನಿಮ್ಮ ಪಿತೃಗಳನ್ನು ತೋರಿಸುತ್ತೇನೆ’’ ಎನ್ನುತ್ತಿದ್ದರಂತೆ. ‘‘ಎಲ್ಲಿ ನನಗೆ ಕಾಣುವುದಿಲ್ಲ’’ ಎಂದು ಆ ಕರ್ತೃ ಪ್ರಾಮಾಣಿಕವಾಗಿ ಹೇಳಿದರೆ ಪುರೋಹಿತರು, ‘‘ಹಾಗಾದರೆ ನೀನು ಪಾಪ ಮಾಡಿದ್ದೀಯೆಂದಾಯಿತು; ಇದು ಪರಿಶುದ್ಧಾತ್ಮಗಳಿಗೆ ಮಾತ್ರ ಕಾಣುವುದು’’ ಎಂದು ತಿಳಿಹೇಳುತ್ತಿದ್ದರಂತೆ. ತಕ್ಷಣ ಎಚ್ಚತ್ತುಕೊಂಡ ಆ ಪಾಪಿ ‘‘ಇಲ್ಲ ಇಲ್ಲ, ಈಗ ಕಾಣಿಸುತ್ತದೆ- ಅಪ್ಪಾ, ಅಮ್ಮಾ! ನಿಮ್ಮನ್ನು ನೋಡುವ ಭಾಗ್ಯವಂತ ನಾನು’’ ಎಂದು ಹಲುಬಿ ತನ್ನ ಕಾಶಿಯಾತ್ರೆಯನ್ನೂ ಪಿತೃಶ್ರಾದ್ಧವನ್ನು ಪೂರೈಸುತ್ತಿದ್ದನಂತೆ. ಹೀಗೆ ಎಲ್ಲವೂ ಸರಿಯಿದೆಯೆಂದು ಒಪ್ಪದಿದ್ದರೆ ತಾನು ಈ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದ್ದೇನೆಂದು ಎಲ್ಲಿ ಜನರು ತಿಳಿಯುತ್ತಾರೋ ಎಂಬ ಅಳುಕಿನಿಂದಲೇ ಅನೇಕರು ಈ ಅಂಕಿ-ಅಂಶಗಳನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ.

ಇಂತಹ ಅನೇಕ ಪ್ರಹಸನಗಳು ಸದ್ಯ ಚಾಲ್ತಿಯಲ್ಲಿವೆ. ವಿರೋಧ ಪಕ್ಷಗಳು ಮಾಡಬೇಕಾದ ಕೆಲಸವನ್ನು ಅವರು ಮಾಡದೇ ಇರುವುದ ರಿಂದ ಹಾಗೂ ಸದ್ಯದ ಗದ್ದುಗೆಯನ್ನು ವಿರೋಧಿಸಬಲ್ಲ ಶಕ್ತ ರಾಜಕಾರಣಿಗಳಿಲ್ಲ ದಿರುವುದರಿಂದ ದೇಶಕ್ಕೆ ಪರ್ಯಾಯ ಆಯ್ಕೆಯೇ ಇಲ್ಲವೇನೋ ಎಂದನ್ನಿಸುವುದರಿಂದ ಒಂದಷ್ಟು ಜನರು ಅಂಕಿ-ಅಂಶಗಳನ್ನು ಜನರೆದುರಿರಿಸಿ ವಾಸ್ತವ ಭಾರತವನ್ನು ತೆರೆದಿಡುವ ಯತ್ನವನ್ನು ಮಾಡುತ್ತಿದ್ದಾರೆ. ಎಲ್ಲ ಕಾಲದಲ್ಲೂ ಇಂತಹ ಶ್ರಮ ನಡೆದಿದೆ. ಈ ಪ್ರಯತ್ನವನ್ನು ಪ್ರಜಾತಂತ್ರ ಮರೆಯಬಾರದು; ಕೈಬಿಡಬಾರದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top