ಚನ್ನಪ್ಪ ಉತ್ತಂಗಿಯವರ ‘ಹಿಂದೂ ಸಮಾಜ ಹಿತಚಿಂತಕ’ | Vartha Bharati- ವಾರ್ತಾ ಭಾರತಿ

ಚನ್ನಪ್ಪ ಉತ್ತಂಗಿಯವರ ‘ಹಿಂದೂ ಸಮಾಜ ಹಿತಚಿಂತಕ’

ಆಧುನಿಕ ಕನ್ನಡದ ಬೆಂಕಿಯ ಧಗೆಯ ನಡುವೆ ಕರ್ಪೂರದಂತೆ ಬೆಳಗಿ ಕರಗಿಹೋದ ಜೀವ ಅವರು. ಧಾರ್ಮಿಕ ಮತಾಂಧತೆಯ ಇಂದಿನ ಭಾರತದಲ್ಲಿ ಅವರು ಮತ್ತೆ ಮತ್ತೆ ನೆನಪಾಗಬೇಕಾದವರು. ಪ್ರಾತಃಸ್ಮರಣೀಯರು. ಹೆಚ್ಚು ಪ್ರಚಾರ ಸಿಗದ ಅವರ ಈ ಕೃತಿಯ ಮೂಲಕ ಅವರು ಮುಂದೆ ಭಾರತವೆಂದು ಅಸ್ತಿತ್ವಕ್ಕೆ ಬರುವ ಈ ದೇಶವನ್ನು ಬಾಧಿಸುವ ಹುಳುಕುಗಳನ್ನು ಚರ್ಚಿಸಿದ್ದಾರೆ. ಶತಮಾನದ ಆನಂತರ ಅವನ್ನು ವೀಕ್ಷಿಸಿದಾಗ ಅವರ ಸಹಜ ಮುನ್ನೋಟವನ್ನು ಅಚ್ಚರಿಯಿಂದ ಮೆಚ್ಚಬೇಕಾಗುತ್ತದೆ.


ಚನ್ನಪ್ಪಉತ್ತಂಗಿಯವರು 1920ರಲ್ಲಿ ಬರೆದು 1921ರಲ್ಲಿ ಮಂಗಳೂರಿನ ಕೊಡಿಯಾಲ್‌ಬೈಲ್ ಪ್ರೆಸ್‌ನಲ್ಲಿ ಮುದ್ರಿಸಿ ಪ್ರಕಟಿಸಿದ ‘ಹಿಂದೂ ಸಮಾಜ ಹಿತಚಿಂತಕ’ ಎಂಬ 111 ಪುಟಗಳ ಕೃತಿಯು ಅನೇಕ ಕಾರಣಗಳಿಗೆ ಗಮನ ಸೆಳೆಯುತ್ತದೆ. (ಈ ಮಹತ್ವದ ಕೃತಿಯನ್ನು ನನಗೆ ಒದಗಿಸಿದ ಉಡುಪಿಯ ಗೆಳೆಯ ಯು.ಆರ್. ಜಯವಂತರಿಗೆ ನಾನು ಋಣಿ.)

ಉತ್ತಂಗಿ ಚೆನ್ನಪ್ಪ (1881-1962) ನವರ ಕುರಿತು ಯಾವ ಪರಿಚಯವೂ ಬೇಕಾಗಿಲ್ಲ. 20ನೇ ಶತಮಾನದ ಆರಂಭದಿಂದಲೂ ಸಾಕಷ್ಟು ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾರಸ್ವತಲೋಕದಲ್ಲಿ ಅಪಾರ ಗೌರವವನ್ನು ಗಳಿಸಿದರು. ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಗೌಡ ಮನೆತನದಿಂದ ಮತಾಂತರಗೊಂಡ ಕ್ರೈಸ್ತ ಕುಟುಂಬವಾದರೂ ಧರ್ಮ, ಸಮಾಜದ ಕುರಿತು ಜಾತೀಯ ಕಟ್ಟುಗಳನ್ನು ಮೀರಿ ಯೋಚಿಸಿದ ಪ್ರೌಢಿಮೆ ಅವರದ್ದು. ಒಳ್ಳೆಯದೆಲ್ಲವನ್ನೂ ಎಲ್ಲಿಂದಲೇ ಬರಲಿ ಸ್ವೀಕರಿಸುವ ಶ್ರದ್ಧೆ. ದೇಶ, ಭಾಷೆ, ಸತ್ಯ, ಸ್ವಾತಂತ್ರ್ಯ ಇವುಗಳ ಆರಾಧಕ. ತಪ್ಪುಸಿದ್ಧಾಂತಗಳನ್ನು ಸತ್ಯದ ಒರೆಗೆ ಹಚ್ಚಿ ಪ್ರಶ್ನಿಸುವ ಛಾತಿ. ಇದೇ ಕಾರಣಕ್ಕೆ ಶಾಲೆಯಿಂದ ಹೊರಬಿದ್ದ ವಿದ್ಯಾರ್ಥಿ. ಮುಂದೆ ಮಂಗಳೂರಿನ ದೈವಜ್ಞಾನ ಶಾಲೆಯಲ್ಲಿ ಕಲಿಕೆ. ಚರ್ಚಿನಲ್ಲೇ ಧಾರ್ಮಿಕ ಸ್ವಾತಂತ್ರ್ಯದ ಬೇಡಿಕೆಯಿಟ್ಟು ಹೋರಾಡಿದರು. ಪರಮತ ಸಹಿಷ್ಣುತೆಯ ಹರಿಕಾರರಾದರು. ದಲಿತಕೇರಿಯಲ್ಲಿ ವಾಸಿಸಿ ಅವರ ಉನ್ನತಿಗಾಗಿ ಶ್ರಮಿಸಿದರು. ಕಾವ್ಯ, ಛಂದಸ್ಸು, ಅಲಂಕಾರ ಶಾಸ್ತ್ರ, ವ್ಯಾಕರಣ, ಹೀಗೆ ಭಾಷೆ ಮತ್ತು ಸಾಹಿತ್ಯದ ಅಪಾರ ಅಧ್ಯಯನವನ್ನು ಮಾಡಿದರು. ಆರೋಗ್ಯ ಮತ್ತು ಹಣಕಾಸಿನ ತೀವ್ರ ಸಂಕಟಗಳ ನಡುವೆ ಬದುಕಿದರು. ಸರ್ವಜ್ಞ ವಚನಗಳನ್ನು ಸಂಗ್ರಹಿಸಿದರು; ಸಂಗ್ರಹಿಸಿದ್ದಷ್ಟೇ ಅಲ್ಲ, ಪರಿಷ್ಕರಿಸಿದರು.

‘ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿಯರು’, ‘ಸಿದ್ಧರಾಮ ಸಾಹಿತ್ಯ ಸಂಗ್ರಹ’, ‘ಜಾತೀಯತೆಯ ನಿರ್ಮೂಲನವೂ ರಾಷ್ಟ್ರೀಯ ಭಾವೈಕ್ಯವೂ’, ‘ಆದಯ್ಯನ ವಚನಗಳು’, ‘ಲಿಂಗಾಯತ ಧರ್ಮ ಮತ್ತು ಕ್ರೈಸ್ತ ಧರ್ಮ’ ಮುಂತಾದ ಸುಮಾರು ಹತ್ತಾರು ಕೃತಿಗಳನ್ನು ರಚಿಸಿದರು. ನೈಜ ಜಾತ್ಯತೀತತೆ ಮತ್ತು ಸರ್ವಧರ್ಮ ಸಮಭಾವಕ್ಕೆ ಮಾರ್ಗದರ್ಶಿಯಾದರು. ಆಧುನಿಕ ಕನ್ನಡದ ಬೆಂಕಿಯ ಧಗೆಯ ನಡುವೆ ಕರ್ಪೂರದಂತೆ ಬೆಳಗಿ ಕರಗಿಹೋದ ಜೀವ ಅವರು. ಧಾರ್ಮಿಕ ಮತಾಂಧತೆಯ ಇಂದಿನ ಭಾರತದಲ್ಲಿ ಅವರು ಮತ್ತೆ ಮತ್ತೆ ನೆನಪಾಗಬೇಕಾದವರು. ಪ್ರಾತಃಸ್ಮರಣೀಯರು.

ಹೆಚ್ಚು ಪ್ರಚಾರ ಸಿಗದ ಅವರ ಈ ಕೃತಿಯ ಮೂಲಕ ಅವರು ಮುಂದೆ ಭಾರತವೆಂದು ಅಸ್ತಿತ್ವಕ್ಕೆ ಬರುವ ಈ ದೇಶವನ್ನು ಬಾಧಿಸುವ ಹುಳುಕುಗಳನ್ನು ಚರ್ಚಿಸಿದ್ದಾರೆ. ಶತಮಾನದ ಆನಂತರ ಅವನ್ನು ವೀಕ್ಷಿಸಿದಾಗ ಅವರ ಸಹಜ ಮುನ್ನೋಟವನ್ನು ಅಚ್ಚರಿಯಿಂದ ಮೆಚ್ಚಬೇಕಾಗುತ್ತದೆ.

ಈ ಕೃತಿಯು ಹಿಂದೂ ದೇಶದ/ಧರ್ಮದ ಅವನತಿಯ ಕಾರಣಗಳನ್ನು ಶೋಧಿಸುತ್ತದೆ. ಕೃತಿಗೆ 15 ಪುಟಗಳ ಪ್ರಸ್ತಾವನೆಯಿದೆ. ಪೀಠಿಕೆಯಾಗಿ ಅವರು ಇ.ಪಿ.ರೈಸ್ ಅವರ ‘‘ನಿಷ್ಠಾವಂತ ಪ್ರಜೆಯೊಬ್ಬನ ಸತತ ಕರ್ತವ್ಯವೆಂದರೆ ಸೋದರರನ್ನು ಬೇರ್ಪಡಿಸುವ ವಿಭಜನೆಯ ಗೋಡೆಯನ್ನು ಕೆಡವಿ ಮತ್ತೆ ಕೃತ ಯುಗದ ಸುವರ್ಣ ದಿನಗಳನ್ನು ತರಲು ನೆರವಾಗುವುದು’’ ಎಂಬ, ಹಾಗೂ ರವೀಂದ್ರನಾಥ ಠಾಕೂರರ ಗೀತಾಂಜಲಿಯ ‘‘ಎಲ್ಲಿ ವಿಶ್ವವು ಸಂಕುಚಿತ ಸ್ವಾರ್ಥಪರ ಗೋಡೆಗಳಿಂದಾಗಿ ತುಂಡುತುಂಡಾಗಿದೆಯೋ... ಅಂತಹ ಸ್ವಾತಂತ್ರ್ಯದ ಸ್ವರ್ಗಕ್ಕೆ- ಓ ತಂದೆ, ನನ್ನ ನಾಡೆಚ್ಚರಿರಲಿ!’’ ಎಂಬ ಎರಡು ಉಕ್ತಿಗಳನ್ನು ಉಲ್ಲೇಖಿಸಿದ್ದಾರೆ. ಇಂದು ನಾವು ಕಾಣುವ ಸಾಮಾಜಿಕ ಶೈಥಿಲ್ಯದ ಸಂಕೇತಗಳು ಮತ್ತು ಸವಾಲುಗಳು ಆಗಲೇ ಇದ್ದವು ಎಂಬುದಕ್ಕೆ ಈ ಎಚ್ಚರಿಕೆಯೇ ಸಾಕ್ಷಿ. ಅಲ್ಲದೆ ‘ಆತ್ಮ ಶೋಕ’ ಎಂಬ ಅವರೇ ರಚಿಸಿದ ಕನ್ನಡ ಕವಿತೆಯನ್ನೂ ಸೇರಿಸಿದ್ದಾರೆ. ನಾವು ಪಾರತಂತ್ರ್ಯಕ್ಕೆ ಯಾಕೆ ಬಲಿಯಾದೆವು ಎಂಬುದನ್ನು ಮಾರ್ಮಿಕವಾಗಿ ಈ ಕವಿತೆಯಲ್ಲಿ ಹೇಳಲಾಗಿದೆ: ‘‘ದುರಭಿಮಾನವ ಬಿಡದನಕ ಸ್ವರಾಜ್ಯ ದೊರೆಯದು, ಕಡೆತನಕ!’’ ಎಂಬ ಪಲ್ಲವಿಯೊಂದಿಗೆ ಆರಂಭವಾಗುವ ಈ 26 ಸಾಲುಗಳ ಕವಿತೆಯು ‘‘ಹಣದಾಸೆಗೆ ಬಡಬಗ್ಗರನು ಗಣಿಸದೆ ನಾವು ತುಳಿದಿಹೆವು॥

ಉತ್ತಂಗಿಯವರು ತಮ್ಮ ಪ್ರಸ್ತಾವನೆಯಲ್ಲಿ ದೇಶದ ಆಗಿನ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕೆಲವು ಅಂಶಗಳನ್ನು (ಅವರ ಮಾತುಗಳಲ್ಲೇ) ಗಮನಿಸುವುದಾದರೆ- ಆಗ ಹಿಂದೂ ದೇಶದಲ್ಲಿ ಸುಮಾರು 30 ಕೋಟಿ ಜನರಿದ್ದರು. ಇದರಲ್ಲಿ ಮುಸಲ್ಮಾನ, ಕ್ರಿಸ್ತೀ, ಯುರೋಪಿಯನ್, ಪಾರ್ಸಿ ಮೊದಲಾದವರನ್ನು ಬಿಟ್ಟು ಬರೀ ಹಿಂದೂ ಜನರ ಸಂಖ್ಯೆಯು ಸುಮಾರು 20 ಕೋಟಿ.. ಇವರಲ್ಲಿ ಏನಿಲ್ಲೆಂದರೂ 3,000 ಜಾತಿಗಳಿದ್ದವು. ಜಾತಿಯ ಮೆಟ್ಲು ಮೇಲಕ್ಕೇರಿದಂತೆ ಜಾತ್ಯಾಭಿಮಾನದ ಪ್ರಮಾಣವಾದರೂ ಹೆಚ್ಚುತ್ತ ಹೋಗುವುದು. ಈ ಪೈಕಿ ಸರ್ವೋಚ್ಚ ಜಾತಿಯೆಂದು ಅನ್ನಿಸಿಕೊಂಡ ಬ್ರಾಹ್ಮಣರಲ್ಲಿ 300ಕ್ಕೂ ಹೆಚ್ಚು ಉಪಭೇದವಿದ್ದು ಪ್ರತಿಯೊಂದು ಪಂಥದವರೂ ‘ತಮ್ಮ ಮನೆಗೆ ತಾವೇ ಅರಸ’ರೆಂಬಂತೆ ಇದ್ದು ಇನ್ನೊಂದು ಪಂಥದ ಬ್ರಾಹ್ಮಣರನ್ನು ಕಡೆಗಣ್ಣಿನಿಂದ ನೋಡುತ್ತಿದ್ದರು. ಇವರಲ್ಲಿ ಯಾರು ಹೆಚ್ಚಿನವರು ಎಂದು ನಿರ್ಣಯವಾಗದಿರುವುದರಿಂದ ಪ್ರತಿಯೊಂದು ಉಪಜಾತಿಯೂ ‘ಇದ್ದೂರಲ್ಲಿ ರಂಗ ಪರ ಊರಲ್ಲಿ ಮಂಗ’ ಎಂಬಂತಿದ್ದರು. ವೈಶ್ಯನು ಎಷ್ಟೇ ಕ್ಷಾತ್ರಸಂಪನ್ನನಾದರೂ ಕ್ಷತ್ರಿಯನಾಗನು; ಕ್ಷತ್ರಿಯನು ಎಷ್ಟೇ ವಿದ್ಯಾಗುಣಸಂಪನ್ನನಾದರೂ ಬ್ರಾಹ್ಮಣನಾಗನು. ಇದಕ್ಕೆ ಬದಲಾಗಿ ಬ್ರಾಹ್ಮಣನು ಎಷ್ಟೇ ದುರ್ಗುಣಿಯಾದರೂ ಕೆಳಗೆ ಬರುವ ಭೀತಿಯೇ ಇರಲಿಲ್ಲ. ಆದ್ದರಿಂದ ಗೀತೆಯನುಸಾರ ಗುಣಕರ್ಮಗಳಿಂದ ಮಾತ್ರ ವರ್ಗಭೇದಗಳು ಒಡೆದು ತೋರಬೇಕಾಗಿದ್ದ ಹಿಂದೂ ಸಮಾಜದಲ್ಲಿ ಜನ್ಮವು ಒಂದು ಅಭೇದ್ಯವಾದ ಅಡ್ಡಗೋಡೆಯಂತಿತ್ತು. ಹೀಗಿದ್ದರೂ ಕೆಲವು ಬ್ರಾಹ್ಮಣೇತರರಾದರೂ ವಿದ್ಯೆ, ಬುದ್ಧಿ, ಯೋಗ್ಯತೆಯಲ್ಲಿ ಬ್ರಾಹ್ಮಣರೊಂದಿಗೆ ಸ್ಪರ್ಧೆಗಿಳಿದಿದ್ದರು. ಇದರಿಂದ ಮೊದಲೇ ಐಕ್ಯವಿಲ್ಲದ ದೇಶದಲ್ಲಿ ಮತ್ತಷ್ಟು ಭೇದವು ಬೆಳೆದಿತ್ತು.

1918ರಲ್ಲಿ ನಡೆದ ಕಾಠೇವಾಡದ ಸಮ್ಮೇಳನವೊಂದರಲ್ಲಿ ಸರ್ ನಾರಾಯಣರಾವ್‌ಚಂದಾವರಕರ ಎಂಬವರು ‘‘ಹಿಂದೂ ದೇಶದಲ್ಲಿರುವ ಮೇಲ್ಜಾತಿಯವರು ಇತರ ಜಾತಿಯವರನ್ನು ಹೀನೈಸುತ್ತಿರುವ ವರೆಗೆ ಹಿಂದುಸ್ಥಾನದ ಉದ್ಧಾರವು ಆಗಲಾರದು; ಮತ್ತು ಇವರು ತಮಗಿಂತ ಕಡಿಮೆ ಜಾತಿಯವರನ್ನು ಹೊಲೆಮಾದಿಗರಂತೆ ನಡಿಸಿಕೊಂಡದ್ದರಿಂದ ಭಗವಂತನು ಇವರನ್ನು ಇನ್ನೊಬ್ಬರ ಕಡೆಯಿಂದ ಹೊಲೆ ಮಾದಿಗರಿಗಿಂತಲೂ ಕಡೆ ಮಾಡಿ ನಡಿಸದೆ ಬಿಡನು’’ ಎಂದದ್ದನ್ನು ಉತ್ತಂಗಿಯವರು ಜ್ಞಾಪಿಸಿದ್ದಾರೆ. ಸಮಗ್ರವಾಗಿ ಪರಿಶೀಲಿಸಿ ಅವರು ಹಿಂದೂ ಸಮಾಜದೊಳಗೆ ಆಗ ಇದ್ದ ಜನ್ಮಬಂಧನವೆಂಬದೊಂದು ವಿಲಕ್ಷಣ ನಿಯಮವು ಜಾತಿಯ ದ್ವಾರದಿಂದ ಪ್ರವೇಶಿಸದೆ ಹೋಗಿದ್ದರೆ ನಮ್ಮ ದೇಶವು ಅಂತಹ ಸ್ಥಿತಿಗೆ ಬರುತ್ತಿರಲಿಲ್ಲವೆಂದು ಇತಿಹಾಸ ತೋರಿಸಿದೆಯೆಂದು ಅಭಿಪ್ರಾಯಪಡುತ್ತಾರೆ. ತಮ್ಮ ಕೃತಿಯಲ್ಲಿ ಹಿಂದೂ ಪಂಡಿತರ ಅಭಿಪ್ರಾಯಗಳನ್ನೇ ಕೊಟ್ಟು ಯುರೋಪಿಯನ್ ಪಂಡಿತರ ಅಭಿಪ್ರಾಯಗಳನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಸಮರ್ಥನೆಯಾಗಿ ಅವರು ‘ಅಕ್ಕಸಾಲಿಗರು ಕಿವಿ ಚುಚ್ಚಿದರೆ ನೋವಿಲ್ಲ’ ಎಂಬ ಅನುಭವೋಕ್ತಿಯನ್ನು ಉಲ್ಲೇಖಿಸಿದ್ದಾರೆ. ಭಾರತದ ಆಗಿನ ಮನಸ್ಥಿತಿಯನ್ನು ಅವರು ‘‘ಸ್ವದೋಷಗಳನ್ನು ಚೆನ್ನಾಗಿ ಮರೆತು, ಪರದೋಷಗಳನ್ನು ಹೆಚ್ಚಾಗಿ ಅರಿತು, ಯಾವಾಗಲೂ ಅವುಗಳನ್ನೇ ಕುರಿತು ಆಡಿಕೊಳ್ಳುವುದರಲ್ಲಿ ವಿಶೇಷ ನೈಪುಣ್ಯವನ್ನು ಪಡೆದಿರುವ ನಮ್ಮ ಹಿಂದೂದೇಶಕ್ಕೆ ಅದರ ಏಕರಾಷ್ಟ್ರೀಯ ಕಲ್ಪನೆಯ ಪುಷ್ಟೀಕರಣವಾದದ್ದು ಬ್ರಿಟಿಷರ ಸಾಮ್ರಾಜ್ಯಾಧಿಪತ್ಯದಿಂದ’’ ಎಂಬ ಕಟುಸತ್ಯವನ್ನು ಹೇಳಿದ್ದಾರೆ.

‘‘ಜಾತಿಯೆಂಬುದು ಈ ದೇಶದ ಅರಸ’’ ಎಂದು ಅವರು ವ್ಯಂಗ್ಯವಾಡಿದ್ದಾರೆ. ‘‘ಸ್ವರಾಜ್ಯ ಪ್ರಾಪ್ತಿಗೆ 10 ವರ್ಷಗಳು ಬೇಕಾದರೆ ಜಾತಿಯ ದುರಭಿಮಾನವು ಲೋಪವಾಗುವುದಕ್ಕೆ 100 ವರ್ಷಗಳು ಬೇಕಾಗುತ್ತವೆ’’ಯೆಂದು ಭವಿಷ್ಯ ನುಡಿದಿದ್ದಾರೆ. ರಾಜಕೀಯ ಮತ್ತು ಸಮಾಜದ ಕುರಿತ ಚಿಕಿತ್ಸಕ ಮನೋಧರ್ಮವನ್ನು ತಮ್ಮ ಕೃತಿಯಲ್ಲಿ ಹೇಳಿದ್ದಾಗಿ ಅವರು ಆಡಿಕೊಂಡಿದ್ದಾರೆ. ಜಾತಿ ಆ ಕಾಲಕ್ಕೇ ಎಷ್ಟೊಂದು ವಿಷಕಾರಿಯಾಗಿತ್ತೆಂದರೆ ಅವೆಲ್ಲ ನಾಶವಾಗಿ ಸರ್ವಪಂಥಗಳು ದೇಶೋನ್ನತಿಗಾಗಿ ಐಕ್ಯದಿಂದ ಕೆಲಸ ಮಾಡುವುದನ್ನು ಕಣ್ಣು ತುಂಬಾ ನೋಡಿ ಆನಂದಪಡುವ ಸಮಯವನ್ನು ಈಶ್ವರನು ಬೇಗನೇ ಬರಮಾಡಲೆಂದು ಪ್ರಾರ್ಥಿಸಿದ್ದಾರೆ. ಹಿನ್ನೆಲೆಯಲ್ಲಿ ಸವಿನಯವಾಗಿ ತಮ್ಮ ಕೃತಿಯ ಕುರಿತಾಗಿ ಬರಬಹುದಾದ ಟೀಕೆಗಳನ್ನು ಊಹಿಸಿ ಅದಕ್ಕೆ ಉತ್ತರವನ್ನು ಮೊದಲೇ ನೀಡಿದ್ದಾರೆ. ‘‘ಸರ್ವತ್ರ ಸಮದರ್ಶಿತ್ವದ ಬದಲು ಕುಲಛಲವನ್ನು ಹಿಡಿದು ಕೆಡಬೇಡಿ’’ರೆಂದು ಸಮಾಜಕ್ಕೆ ಕರೆಕೊಟ್ಟಿದ್ದಾರೆ. ಒಬ್ಬರು ನೆಟ್ಟದ್ದನ್ನು ಇನ್ನೊಬ್ಬರು ಕಿತ್ತುಹಾಕುವುದರಲ್ಲಿಯೇ ಕಾಲವು ಕಳೆದುಹೋಗುತ್ತಿರುವುದಕ್ಕೆ ವ್ಯಥೆಪಟ್ಟಿದ್ದಾರೆ. ತಮ್ಮ ಕೃತಿಯು ‘‘ಪುರಾತನ ರತ್ನಮಣಿಗಳ ಮೇಲೆ ದಪ್ಪವಾಗಿ ಕೂತಿರುವ ಹೊಲಸನ್ನು ತಿಕ್ಕಿ ಝಳಝಳ ಮಾಡಿ, ಪಕ್ಷ ಪರಪಕ್ಷವಿಲ್ಲದೆ ಅವುಗಳನ್ನು ಯೋಗ್ಯವಾದ ಸ್ಥಳದಲ್ಲಿರಿಸಿ, ಕೆಳಗೆ ಬಿದ್ದ ಕಸವನ್ನಷ್ಟೇ ಉಡುಗಿ ಸ್ವಚ್ಛಮಾಡಬೇಕೆಂದು ಸರ್ವರ ಪಾದದ ಧೂಳಾಗಿ’’ ಬೇಡಿಕೊಂಡಿದ್ದಾರೆ.

ಕೃತಿಯ ಮೊದಲ ಪಠ್ಯಭಾಗದಲ್ಲಿ ಸಂಕರ ವಿಚಾರವಿದೆ. ಬ್ರಾಹಣರು ಮತ್ತು ಪರ್ಯಾಯವಾಗಿ ಹಿಂದೂಗಳು ತಾವು ಶುದ್ಧ ರಕ್ತದ ತಳಿಗಳೆಂದು ಹೇಳಿಕೊಳ್ಳುವುದರ ಪೊಳ್ಳುತನವನ್ನು ಇಲ್ಲಿ ಅಲ್ಲಗಳೆಯಲಾಗಿದೆ. ಇಲ್ಲಿ ಬ್ರಾಹ್ಮಣ್ಯ ಮತ್ತು ವರ್ಣಾಶ್ರಮ ಧರ್ಮಗಳ ಉಗಮ ಮತ್ತು ಇತಿಹಾಸವನ್ನು ಪುರಾಣಗಳ ಮತ್ತು ಮುಖ್ಯವಾಗಿ ಮಹಾಭಾರತ ಮತ್ತು ಶ್ರುತಿ-ಸ್ಮತಿಗಳ ಮೂಲಕ ಚರ್ಚಿಸಿದ್ದಾರೆ. ಶುಕ್ರನೀತಿ, ಋಗ್ವೇದ, ಮನುಸ್ಮತಿಗಳಿಂದ ಧಾರಾಳವಾಗಿ ಉಲ್ಲೇಖಿಸಿದ್ದಾರೆ. ಉದಾತ್ತ ವಾಕ್ಕುಗಳ ಹೊರತಾಗಿಯೂ ಜಾತಿಯ ಚೌಕಟ್ಟು ಎಷ್ಟು ಗಟ್ಟಿಯಾಗಿ ಬೆಳೆದಿದೆಯೆಂದು ವಿಷಾದಪಟ್ಟಿದ್ದಾರೆ. ‘‘ಇತರ ರಾಷ್ಟ್ರಗಳಲ್ಲಿ ದೇಶಕ್ಕೋಸ್ಕರ ಪ್ರಾಣ ಕೊಡುವ ಜನರು ದೊರಕಿದರೆ ನಮ್ಮ ದೇಶದಲ್ಲಿ ಜಾತಿಗೋಸ್ಕರ ಪ್ರಾಣ ಕೊಡುವವರು ದೊರಕುವರು’’ ಎಂದೂ ‘‘ಶುಭ್ರವಾದ ಸೀನೀರಿನ ಪ್ರವಾಹವು ನಮ್ಮ ಕರ್ನಾಟಕದ ತುಂಗಭದ್ರೆಯಲ್ಲಿ ಧಾರಾಳವಾಗಿ ಹರಿಯುತ್ತಿದ್ದರೂ ಅದರ ದಂಡೆಯಲ್ಲಿರುವ ಪೈರಿನ ಹೊಲಗಳು ನೀರಿಲ್ಲದೆ ಹ್ಯಾಗೆ ಒಣಗುತ್ತಿರುವವೋ, ಹಾಗೆಯೇ ದೇಶದ ತುಂಬ ಅಭಿಮಾನದಿಂದ ತುಂಬಿ ಆರ್ಭಟಿಸುತ್ತಿರುವ ವೀರ ಸ್ತ್ರೀಪುರುಷರು ವಿಪುಲವಾಗಿದ್ದರೂ, ಸಹಾಯಕರಿಲ್ಲದೆ ಬರ, ವ್ಯಾಧಿ, ಬಡತನಗಳಲ್ಲಿ ದೇಶವು ಹುರಿದುಹೋಗುತ್ತಿರುವುದು.’’ ಎಂದಿದ್ದಾರೆ. ಸಪ್ರಮಾಣ ಚರಿತ್ರರೂಪ ಸಿದ್ಧಾಂತಗಳ ಮೂಲಕ ವಿವಿಧ ಜನಾಂಗದವರು ಹಿಂದೂ ಸಮಾಜದಲ್ಲಿ ಸಮಾವೇಶವಾದದ್ದನ್ನು ಎರಡನೆಯ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಯವನರು ಯಾರು ಎಂಬ ವಿವರಣೆಯು ಗ್ರೀಸಿನಿಂದ ವಾಯುಪುರಾಣಕ್ಕೆ ನಮ್ಮನ್ನೊಯ್ಯುತ್ತದೆ. ಬೌದ್ಧ ಧರ್ಮಾನುಯಾಯಿಗಳಾಗಿದ್ದ ಶಕರು, ಅನ್ಯದೇಶಗಳಿಂದ ಬಂದು ಹಿಂದೂಸ್ಥಾನದಲ್ಲಿ ನೆಲಸಿದ ತುರ್ಕ ಅರಸರು, ಹೈಹರು, ಪಾರ್ಸಿ ದೇಶದ ಮಗರು, ಹೂಣರು, ಗುರ್ಜರು, ಪಡಿಹಾರರು, ಪಲ್ಲವರು, ಚಾಲುಕ್ಯರು, ಕದಂಬರು, ಸಿಂಡರು, ಮೈತ್ರಿಕರು, ಮುಂತಾದ ಅನೇಕ ಕುಲಗಳು ಹೇಗೆ ಹಿಂದೂಗಳಾಗಿ ಕೂಡಿಕೊಂಡರೆಂದು ಹೇಳಿದ್ದಾರೆ. ಈ ಎಲ್ಲ ಜನಾಂಗದವರು ಮೂಲನಿವಾಸಿಗಳಾಗಿದ್ದು ಹಿಂದೂ ಜನಾಂಗದ ಅಸ್ತಿವಾರವು ಇಂತಹ ಮೂಲನಿವಾಸಿಗಳಿಂದಲೇ ಆಯಿತೆಂದು ಚನ್ನಂಗಿಯವರು ಸೋದಾಹರಣವಾಗಿ ಸಮರ್ಥಿಸಿದ್ದಾರೆ.

 ಸಂಕ್ಷಿಪ್ತವಾಗಿರುವ ಮೂರನೇ ಅಧ್ಯಾಯದಲ್ಲಿ ಸಪ್ರಮಾಣ ನರವಂಶವಿಜ್ಞಾನಶಾಸ್ತ್ರ ಸಿದ್ಧಾಂತಗಳನ್ನು ಚರ್ಚಿಸಿದ್ದಾರೆ. ಈ ಎಲ್ಲ ಚರ್ಚೆಯಿಂದ ಹಿಂದೂ ಜನರು ತಾವು ಶುದ್ಧರಕ್ತ ಶರೀರಗಳೇ ಎಂದು ಹೇಳುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯವು ಮೂಡುತ್ತದೆ. ಅವರು ಹೇಳುವಂತೆ ‘‘ಈಗಿರುವ ಹಿಂದೂ ಸುಧಾರಣೆಯು ಆರ್ಯ ಅನಾರ್ಯ ಕುಲಗಳಿಂದ ಬಂದ ಮೂರನೆಯದೊಂದು ಹೊಸ ಸುಧಾರಣೆಯಾಗಿರುವುದೇ ಹೊರ್ತು ಒಂದೇ ಕುಲದ ಸುಧಾರಣೆಯು ಎಂದಿಗೂ ಆಗಿರುವುದಿಲ್ಲ.’’ 16-17ನೇ ಶತಮಾನವನ್ನು ಮುಸಲ್ಮಾನರು ಹಿಂದೂಗಳೂ, ಹಿಂದೂಗಳು ಮುಸಲ್ಮಾನರೂ ಆದ ಕಾಲವೆಂದು ಚೈತನ್ಯ, ನಾನಕ, ಕಬೀರ, ತುಕಾರಾಮ, ರಾಜಾತೋಡರಮಲ್ಲ, ತಾನಸೇನ, ರಾಜಾ ಮಾನಸಿಂಗ ಮುಂತಾದವರ ಉದಾಹರಣೆಗಳೊಂದಿಗೆ ಸಾಬೀತು ಮಾಡುತ್ತಾರೆ. ಸಮಚಿತ್ತದಿಂದ ಹಂಸವರ್ಣರಾಗಿರಬೇಕಾದ ಭಾರತೀಯರು ದುರಭಿಮಾನದಿಂದ ಸಂಕರದ ವಿಲಕ್ಷಣ ಶಿಶುಗಳಾಗಿರುವುದನ್ನು ಕಂಡು ಉತ್ತಂಗಿಯವರು ವ್ಯಥೆಪಡುತ್ತಾರೆ. ಒಟ್ಟಿನಲ್ಲಿ ಭಾರತೀಯತೆಯೆಂದು ನಾವು ಕರೆಯುವ ಸಂಸ್ಕೃತಿಯಂತೆ ಭಾರತೀಯರೂ ವೈವಿಧ್ಯದಿಂದ ಐಕ್ಯವನ್ನು ಸಾಧಿಸಿದವರು ಎಂಬ ಸಮಾಧಾನವನ್ನು ಈ ಕೃತಿಯ ಕ್ಷ-ಕಿರಣದ ಮೂಲಕ ಪಡೆಯಬಹುದು. ಗಾತ್ರದ ಮಿತಿಯಿಂದ ಹೆಚ್ಚು ಹೇಳದೆ ಕೃತಿಯ ವಿವರವಾದ ಓದು ಅನೇಕ ಹೊಸ ವ್ಯಾಖ್ಯೆಗಳಿಗೆ, ಚರ್ಚೆಗಳಿಗೆ ಭೂಮಿಕೆಯಾಗಬಹುದೆಂದು ಅಭಿಪ್ರಾಯ ಪಡಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top