ಕಿಲುಬು ತೊಳೆಯದೆ ಹಳತು ಹೊಳೆವುದೆಂತು? | Vartha Bharati- ವಾರ್ತಾ ಭಾರತಿ

ಕಿಲುಬು ತೊಳೆಯದೆ ಹಳತು ಹೊಳೆವುದೆಂತು?

ಸಾಹಿತ್ಯ, ಅದರ ಚರಿತ್ರೆ ಮತ್ತು ರಸಗ್ರಹಣ ಇವುಗಳ ಕೊಡುಗೆಯ ಮಹತ್ವದ ದೃಷ್ಟಿಯಿಂದ ಯಾವುದೇ ಕಾಲದ ಸಾಹಿತ್ಯವೂ ಅಧ್ಯಯನಯೋಗ್ಯವೇ ಹೊರತು ಬದಲಾಗುವ ಭಾಷೆಯ ಬಳಕೆಯಲ್ಲಿ, ಸ್ವರೂಪದಲ್ಲಿ ಹಿಂದಣ ಹೆಜ್ಜೆಗೆ ಅಷ್ಟಾಗಿ ಪ್ರಾಶಸ್ತ್ಯವಿಲ್ಲ.


ಈಚೆಗೆ ಹಳಗನ್ನಡ ಸಾಹಿತ್ಯ ಸಮ್ಮೇಳನವೊಂದು ನಡೆಯಿತು. ಅದು ಜೈನಕ್ಷೇತ್ರವೊಂದರಲ್ಲಿ ನಡೆಯಿತು ಎಂಬುದು ಸಾಂಕೇತಿಕವೋ, ಸಾಂದರ್ಭಿಕವೋ ಮತ್ತು ಈ ಸಮ್ಮೇಳನದ ಸದಾಶಯವೇನು ಮತ್ತು ಎಷ್ಟರ ಮಟ್ಟಿಗೆ ಈ ಸಮ್ಮೇಳನವು ಸಾರ್ಥಕವಾಯಿತು, ನಾನರಿಯೆ. ಆದರೆ ಒಂದಷ್ಟು ವಿಚಾರಗಳು ಚರ್ಚೆಯಾದವೆಂದು ಮಾಧ್ಯಮಗಳ ಮೂಲಕ ಸುದ್ದಿಯಾಯಿತು. ಹಳಗನ್ನಡವೆಂಬೊಂದು ವರ್ಗೀಕರಣವು ಕಾಲಾನುಕ್ರಮಣಿಕೆಯದೋ ವಿಷಯಾನುಕ್ರಮಣಿಕೆಯದೋ ಎಂಬ ಬಗ್ಗೆ ನಿಶ್ಚಯವಾದ ಗೊತ್ತುವಳಿಯಿಲ್ಲ. ಕರ್ನಾಟಕ ಕವಿಚರಿತೆಯನ್ನು ರಚಿಸಿದ ಆರ್. ನರಸಿಂಹಾಚಾರ್ಯರ ಅಭಿಪ್ರಾಯದಲ್ಲಿ ಆಗಿರುವ ಸಾಹಿತ್ಯ ವರ್ಗೀಕರಣವು ಜೈನಯುಗ, ವೀರಶೈವಯುಗ ಮತ್ತು ಬ್ರಾಹಣಯುಗವೆಂಬ ಸೀಮಿತ ವಿಭಜನೆಯನ್ನು ಮಾಡಿದೆ. ನರಸಿಂಹಾಚಾರ್ಯರು ಕನ್ನಡ ಸಾಹಿತ್ಯವು ಆರಂಭವಾದಂದಿನಿಂದ ಹನ್ನೆರಡನೆಯ ಶತಮಾನದ ಮಧ್ಯಭಾಗದವರೆಗೆ ಜೈನಯುಗವೆಂದೂ ಅಲ್ಲಿಂದ ಆನಂತರ ಹದಿನೈದನೆಯ ಶತಮಾನದ ಮಧ್ಯಭಾಗದ ವರೆಗೆ ವೀರಶೈವಯುಗವೆಂದೂ ಆನಂತರದ ಕಾಲವನ್ನು ಬ್ರಾಹ್ಮಣಯುಗವೆಂದೂ ಕರೆದರು.

ಅವರ ಕಾಲಕ್ಕೆ ನಾವಿಂದು ಅನುಭವಿಸುವ ಆಧುನಿಕ ಯುಗವು ಇನ್ನೂ ಬೆಳಕು ಕಂಡಿರಲಿಲ್ಲ. ಇಂತಹ ವರ್ಗೀಕರಣವು ಸಮಂಜಸವಲ್ಲವೆಂಬುದು ಸ್ವತಃ ನರಸಿಂಹಾಚಾರ್ಯರಿಗೆ ತಿಳಿದಿತ್ತು. ಆದರೂ ಮತಾಚಾರದನುಸಾರವಾಗಿ ವಿಪುಲವಾದ ಸಾಹಿತ್ಯ ರಚನೆಗೊಂಡ ಪರಂಪರೆಯನ್ನು ಒತ್ತಿಹೇಳಲು ಈ ಮತ್ತು ಇಂತಹ ವರ್ಗೀಕರಣವು ಅನಿವಾರ್ಯವೆಂಬಂತೆ ಅವರು ಸೂಚಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದ ಇ.ಪಿ.ರೈಸ್ ಅವರು ಇದೇ ವರ್ಗೀಕರಣವನ್ನು ಅನುಸರಿಸಿದ್ದರೂ ಇಡೀ ಸಾಹಿತ್ಯ ಚರಿತ್ರೆಯನ್ನು ಎಲ್ಲವನ್ನೂ ಒಳಗೊಳ್ಳುವ ಹೊಳೆಯ ಹರಿವಿಗೆ ಹೋಲಿಸಿದರು. ಅಂದರೆ ಜೈನಯುಗದಲ್ಲಿ ಇತರ ಸಾಹಿತ್ಯ ರಚನಾಕಾರರಿರಲಿಲ್ಲವೆಂದಲ್ಲ, ಹಾಗೆಯೇ ಆನಂತರದ ಯುಗದಲ್ಲಿ ಜೈನರು ಬರೆಯಲಿಲ್ಲವೆಂದಲ್ಲ, ಬದಲಾಗಿ ಎಲ್ಲವು ಪರಸ್ಪರ ಒಳಗೊಂಡಿದ್ದವೆಂದು ಸಮಜಾಯಿಶಿ ನೀಡಿದರು. ಪ್ರಾಯಃ ಅರ್ಥಕೋಶದ ಖ್ಯಾತಿಯ ರೆ.ಫಾ. ಕಿಟೆಲ್ ಅವರು ಸಂಪಾದಿಸಿದ ನಾಗವರ್ಮನ ಛಂದೋಂಬುಧಿಯ ಪ್ರಾಸ್ತಾವಿಕ ಮಾತುಗಳಲ್ಲಿ ಈ ಯುಗಗಳಲ್ಲಿ ಭಾಷೆಯ ಆಯಾಮವನ್ನು ಚರ್ಚಿಸುತ್ತ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬುದಾಗಿ ನಿರೂಪಿಸಿದರು. ಹಾಗೆ ನೋಡಿದರೆ ಹಳಗನ್ನಡಕ್ಕಿಂತಲೂ ಮೊದಲು ಕನ್ನಡದ ಬಳಕೆಯಿತ್ತು. ಅದನ್ನು ಮೂಲಗನ್ನಡವೆಂದು ಕರೆದದ್ದೂ ಇತ್ತು.

ಒಂದು ರೀತಿಯಲ್ಲಿ ಕಿಟೆಲ್ ಅವರ ವರ್ಗೀಕರಣವು ಸಾಹಿತ್ಯವನ್ನು ಜಾತ್ಯತೀತವಾಗಿಸುವ ಯತ್ನದಲ್ಲಿತ್ತು. ಭಾಷೆಯ ಪ್ರಯೋಗ, ಬಳಕೆ ಮತ್ತು ಪ್ರಕೃತಿಗನುಸಾರವಾಗಿ ವರ್ಗೀಕರಣವು ಸಾಹಿತ್ಯದ ಮತೀಯ ವಿಭಜನೆಯ ಬದಲಿಗೆ ಸಾಹಿತ್ಯವು ದಾಟುವ ಬದಲಾವಣೆಗನುಸಾರವಾಗಿ ಸರಿಯಾಗಿತ್ತೆನ್ನಬಹುದು. ಕಳೆದ ಸುಮಾರು ಹದಿನೈದು ಶತಮಾನದಲ್ಲಿ ಕನ್ನಡ ಭಾಷೆಯು ದಾಟಿ ಬಂದ ಪರಂಪರೆಯನ್ನು ಗಮನಿಸಿದರೆ ಈ ಬದಲಾವಣೆಯು ಅನಿವಾರ್ಯವಾಯಿತೆಂದೂ ಅದನ್ನು ಜನರು ಸ್ವೀಕರಿಸಿದರೆಂದೂ ಗೊತ್ತಾಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ರಚಿಸಿದ ರಂ.ಶ್ರೀ. ಮುಗಳಿಯವರು ಈ ವಿಭಾಗ ಕ್ರಮವನ್ನು ಉಲ್ಲೇಖಿಸಿದರೂ ಸ್ವತಂತ್ರವಾಗಿ ಹೊಸ ವಿಭಾಗವನ್ನು ಕೈಗೊಂಡರು. ಅವರು ಪಂಪಪೂರ್ವಯುಗ, ಪಂಪಯುಗ, ಬಸವ ಯುಗ, ಕುಮಾರವ್ಯಾಸಯುಗವೆಂಬ ವರ್ಗೀಕರಣವನ್ನು ಮಾಡಿದರು. ಇದು ಅಂದಾಜು ಮಾಹಿತಿಯನ್ನು ನೀಡಬಹುದೇ ಹೊರತು ಲಾಕ್ಷಣಿಕವಾಗಲಾರದು. ಇಷ್ಟಕ್ಕೂ ಬಸವಣ್ಣನವರನ್ನು ಸಾಹಿತಿಯೆಂದು ಸಮಾಜ ಸ್ವೀಕರಿಸಿದ ಹಾಗಿಲ್ಲ. ಅವರ ಜಗಜ್ಯೋತಿತನದ ಹೊರತಾಗಿಯೂ ಅವರನ್ನು ಯುಗದ್ರಷ್ಟಾರ, ದಾರ್ಶನಿಕ, ಸಮಾಜಪರಿವರ್ತಕ ಎಂದೇ ಚರಿತ್ರೆ ಗುರುತಿಸಿದೆ; ಸಮಾಜ ಆಗಿನಿಂದ ಈಗಿನ ವರೆಗೂ ಹಾಗೆಯೇ ಕಂಡಿದೆ.

ಹಾಗೆ ನೋಡಿದರೆ ವಚನಕಾರರೆಲ್ಲರೂ ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆಗೆ ಮನಗೊಟ್ಟರಲ್ಲದೆ ಸಾಹಿತ್ಯ ರಚನೆಗಲ್ಲ. ವಚನಗಳು ವೇದೋಪನಿಷತ್ತುಗಳ ಹಾಗೆ ಸಾಹಿತ್ಯವಾಗಿ ಪರಿಣಮಿಸಿದವು. ವೇದೋಪನಿಷತ್ತುಗಳು ಸಂಸ್ಕೃತಕಾರಣವಾಗಿ ನಮ್ಮಿಂದ ದೂರವಾಗಿವೆಯೇ ಹೊರತು ಅವುಗಳ ವಿಚಾರ, ಸಿದ್ಧಾಂತ ಮತ್ತು ಅಭಿವ್ಯಕ್ತಿಯ ದೋಷದಿಂದಲ್ಲ. ಅವನ್ನು ಇಂದಿಗೂ ಮತಾತೀತವಾಗಿ ಗುರುತಿಸಬಹುದು. ಹಾಗೆಯೇ ವಚನಗಳೂ ತಮ್ಮ ತತ್ವಸಿದ್ಧಾಂತ-ದರ್ಶನಗಳಿಂದಾಗಿ ನಮ್ಮ ಸಾಹಿತ್ಯವಾಗಿವೆ- ಝೆನ್, ಟಾವೋ, ರೂಮಿಗಳ ಹಾಗೆ. ಆದ್ದರಿಂದ ಮುಗಳಿಯವರು ಮಾಡಿದ ವರ್ಗೀಕರಣವು ಸರ್ವಸ್ವೀಕಾರಾರ್ಹವಲ್ಲ. ಇವೆಲ್ಲ ಅಧ್ಯಯನದ ಒಂದೊಂದು ಮುಖಗಳನ್ನು ಪರಿಚಯಿಸುತ್ತವೆಯೇ ವಿನಃ ಪೂರ್ಣದೃಷ್ಟಿಯ ದರ್ಶನಗಳಲ್ಲ.

ಮುಗಳಿಯವರ ವರ್ಗೀಕರಣವನ್ನು ತ.ಸು. ಶಾಮರಾಯರು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ: ಒಂದು ಸಮೀಕ್ಷೆ’ ಕೃತಿಯಲ್ಲಿ ಚರ್ಚಿಸಿದ್ದಾರೆ. ಅವರು ಎಂ.ಎ. ರಾಮಾನುಜಯ್ಯಂಗಾರರು ಮಾಡಿದ ಮೂಲಗನ್ನಡ ಕಾಲ, ಹಳಗನ್ನಡ ಕಾಲ, ಮಧ್ಯಕನ್ನಡ ಕಾಲ, ಹೊಸಗನ್ನಡ ಕಾಲ ಮತ್ತು ನವಗನ್ನಡ ಕಾಲವೆಂಬ ವಿಂಗಡಣೆಯನ್ನು ಗುರುತಿಸಿದ್ದಾರೆ. ಹಾಗೆಯೇ ತಿ.ತಾ ಶರ್ಮರು ಉಲ್ಲೇಖಿಸಿದ ಕ್ಷಾತ್ರಯುಗ, ಮತಪ್ರಚಾರಕಯುಗ, ಸಾರ್ವಜನಿಕ ಯುಗ ಮತ್ತು ಆಧುನಿಕಯುಗ ಎಂಬ ವಿಂಗಡಣೆಯನ್ನೂ ಕೆ.ವೆಂಕಟರಾಮಪ್ಪನವರು ವಿಭಾಗಿಸಿದ ಆರಂಭಕಾಲ, ಪಂಪನ ಯುಗ, ಸ್ವತಂತ್ರಯುಗ, ಚಿಕ್ಕದೇವರಾಯರ ಕಾಲ ಮತ್ತು ಸಂಧಿಕಾಲ ಇವನ್ನೂ ಪ್ರಸ್ತಾವಿಸಿದ್ದಾರೆ. ಬಿಎಂಶ್ರೀಯವರು ಬಹುಪಾಲು ಆರ್. ನರಸಿಂಹಾಚಾರ್ಯರ ವರ್ಗೀಕರಣವನ್ನು ಅನುಸರಿಸಿದ್ದಾರೆ. (ವರ್ಗೀಕರಣ ಮತ್ತು ವಿಂಗಡಣೆ ಎಂಬ ಪದಗಳ ಅರ್ಥವ್ಯತ್ಯಾಸವನ್ನು ವಿವೇಚಿಸಬಹುದು.) ಲೋಕೋ ಭಿನ್ನರುಚಿ ಎಂಬುದಕ್ಕೆ ಕನ್ನಡ ಸಾಹಿತ್ಯದ ಈ ಪರಿಯ ವಿಭಜನೆ/ವಿಂಗಡಣೆ/ವರ್ಗೀಕರಣವೇ ಸಾಕ್ಷಿ.

ಸಂಸ್ಕೃತದಿಂದ ಕನ್ನಡಕ್ಕೆ ಹೇಗೆ ಜನರ ಭಾಷಾ ಪ್ರಯೋಗವು ಬದಲಾಯಿತೋ ಹಾಗೆಯೇ ಕನ್ನಡದೊಳಗೇ ಈ ಎಲ್ಲ ಬದಲಾವಣೆಯೂ ನಡೆಯಿತೆಂದು ಗೊತ್ತಾಗುತ್ತದೆ. ಇಂದು ಕನ್ನಡದಲ್ಲಿ ಸರಿಸುಮಾರು ಎಪ್ಪತ್ತೈದು ಶೇಕಡಾ ಸಂಸ್ಕೃತ ಪದಗಳು ತುಂಬಿದ್ದು ಅವನ್ನು ನಾವು ಈ ಬದಲಾದ ಮತ್ತು ಬದಲಾಗುತ್ತಿರುವ ಕನ್ನಡದೊಂದಿಗೆ ಯಥಾವತ್ತು ಬದಲಾವಣೆಯೊಂದಿಗೆ (mutatis mutandis) ಬಳಸಲ್ಪಡುತ್ತದೆ. ಹಾಗೆ ನೋಡಿದರೆ ಕಳೆದ ಸಾವಿರ ವರ್ಷಗಳ ಹಿಂದಿನ ಕನ್ನಡವು ಅಪರಿಚಿತವಾದಷ್ಟು ಸಂಸ್ಕೃತ ಭಾಷೆಯಿಂದ ಎರವಲು ಪಡೆದ ಈ ಪದರಾಶಿಗಳು ಅಪರಿಚಿತವಾಗಿಲ್ಲ. ಮುದ್ದಣನ ರಾಮಾಶ್ವಮೇಧದ ಭಾಷೆಯೂ ಈ ದೃಷ್ಟಿಯಿಂದ ಇಂದಿಗೆ ಅಪರಿಚಿತವೇ. ಸಾಹಿತ್ಯ, ಅದರ ಚರಿತ್ರೆ ಮತ್ತು ರಸಗ್ರಹಣ ಇವುಗಳ ಕೊಡುಗೆಯ ಮಹತ್ವದ ದೃಷ್ಟಿಯಿಂದ ಯಾವುದೇ ಕಾಲದ ಸಾಹಿತ್ಯವೂ ಅಧ್ಯಯನಯೋಗ್ಯವೇ ಹೊರತು ಬದಲಾಗುವ ಭಾಷೆಯ ಬಳಕೆಯಲ್ಲಿ, ಸ್ವರೂಪದಲ್ಲಿ ಹಿಂದಣ ಹೆಜ್ಜೆಗೆ ಅಷ್ಟಾಗಿ ಪ್ರಾಶಸ್ತ್ಯವಿಲ್ಲ.

ಎಷ್ಟೇ ಒಳ್ಳೆಯದೆಂದು ಅನ್ನಿಸಿದರೂ ಇಂದಿನ ಕನ್ನಡ ಪಠ್ಯದಲ್ಲಿ ಪಂಪನ ಆದಿಪುರಾಣವಾಗಲೀ ವಿಕ್ರಮಾರ್ಜುನ ವಿಜಯವಾಗಲೀ ಮಾದರಿಗಿಂತ ಹೆಚ್ಚಾಗಿ ಓದಲು ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರೂ ಸಿದ್ಧರಿರಲಿಕ್ಕಿಲ್ಲ. ಹಾಗೊಂದು ವೇಳೆ ಬಲವಂತ ಮಾಡಿದರೂ ಅದು ಭಾಷೆಯ ಹಿಮ್ಮುಖ ಚಲನೆಗೆ ನಾಂದಿಯಾಗಬಹುದೇ ಹೊರತು ವಿಕಾಸಕ್ಕೆ ಹಾದಿಯಾಗಲಾರದು. ಪೇಟಕಟ್ಟಿದ ನಮ್ಮ ಹಳೆಯ ಸಾಹಿತಿಗಳನ್ನು, ಕಿರೀಟ ಧರಿಸಿದ ರಾಜರನ್ನು ಎಷ್ಟೇ ಗೌರವಿಸಿದರೂ ಹಾಗೆ ವೇಷ ಧರಿಸಿ ನಡೆದಾಡುವುದು ಇಂದು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಪ್ರಯೋಗಗಳನ್ನು ಮಾಡಿದರೂ ಅದೊಂದು ನಾಟಕವಾದಿತೇ ಹೊರತು ಸಹಜ ಬದುಕಾಗದು. ಹಳಗನ್ನಡ ಸಾಹಿತ್ಯವನ್ನು ಹೊಸಗನ್ನಡದೊಂದಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇಂದು ನಾವು ಬಳಸುವ ಸಾಹಿತ್ಯ ಮತ್ತು ಭಾಷೆಯೊಂದಿಗೆ ಮಿಶ್ರತಳಿಯಾಗಿ ಬಳಸಬೇಕೇ ಹೊರತು ಅದನ್ನು ಪ್ರತ್ಯೇಕಿಸಿ ಬೆಳೆಯಲಾಗದು. (ನಮ್ಮ ಅನೇಕ ವಿದ್ವಾಂಸರು ವಿಜ್ಞಾನಿಗಳಂತೆ ತಾವು ಮಾಡುವ ಕಾರ್ಯದ ಪ್ರಭಾವ, ಪ್ರಯೋಜನ, ಫಲಿತಾಂಶ ಮತ್ತು ಪರಿಣಾಮವನ್ನು ಊಹಿಸಲಾರರು.

ಅಣುವಿಜ್ಞಾನವನ್ನು ಬೋಧಿಸುವ, ಅಣುಬಾಂಬನ್ನು ತಯಾರಿಸುವ ವಿಜ್ಞಾನಿಗಳು ತಮ್ಮ ವಿದ್ವತ್ತಿನ ಮಾರಕ ಪರಿಣಾಮಗಳನ್ನು ಈಗ ಮನಕರಗುವಂತೆ ವಿವರಿಸುತ್ತಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸಲು ಹೇಳಿದ ವಿಜ್ಞಾನಿಗಳೇ ಈಗ ಅವು ವಿನಾಶಕಾರಿಯೆಂದು ಹೇಳಿ ಸಾವಯವ ಗೊಬ್ಬರಗಳನ್ನು ಬಳಸಲು ಹೇಳುತ್ತಾರೆ; ಪ್ಲಾಸ್ಟಿಕ್ ಸರ್ವರೋಗಗಳ ಸಂಜೀವನಿಯೆಂಬಂತೆ ಪ್ರಚಾರಮಾಡಿದವರೇ ಈಗ ಅದರ ವಿರುದ್ಧ ನೀತಿ ಪಾಠ ಹೇಳುತ್ತಾರೆ. ಅಲೋಪತಿಯ ಅನುಕೂಲಗಳನ್ನು ಹೇಳಿದ ವೈದ್ಯರೇ ತಮ್ಮ ನಿವೃತ್ತಿಯ ಆನಂತರ ಆಯುರ್ವೇದ, ಹೋಮಿಯೋಪತಿ, ನಾಟಿ ಔಷಧಿಗಳ ಪ್ರಯೋಜನವನ್ನು ಹೇಳುತ್ತಾರೆ. ಇಂತಹ ನೂರೆಂಟು ಉದಾಹರಣೆಗಳು ಸಿಗಬಹುದು.) ಹಳಗನ್ನಡದಲ್ಲಿ ಬೇರೆ ಲಿಪಿಯಲ್ಲಿ ಬಳಸುವ ‘ರ’ ಮತ್ತು ‘ಳ’ ಗಳನ್ನು ಇಂದು ಬಳಸಲು ಸಾಧ್ಯವೇ? ನಾವಿಂದು ಕನ್ನಡವೆಂದು ಕರೆಯುವ ಅನೇಕ ಪದಗಳು ಇಂಗ್ಲಿಷ್, ಪಾರ್ಸಿ, ಅರೇಬಿಕ್, ಮತ್ತಿತರ ಭಾಷೆಗಳಿಂದ ಆಮದಾದವುಗಳು. ಅವನ್ನು ಹಳಗನ್ನಡದಂತೆ ಬಳಸಲಾರೆವು ಹಾಗೂ ಅವನ್ನು ಬಳಸಿದರೆ ಅವು ನಾವಿಂದು ಕೇಳುವ, ನೋಡುವ ಸಂಸ್ಕೃತ ವಾರ್ತೆಗಳಂತೆ ಭಾಸವಾಗಬಹುದು. ಅದು ಸೂಟು ತೊಟ್ಟು ಪೇಟವಿಟ್ಟ ಹಾಗೆ ಅಥವಾ ಷರ್ಟಿನ ಮೇಲೆ ಜನಿವಾರ ಹಾಕಿದ ಹಾಗೆ ಅನುಭವವಾಗುತ್ತದೆ.

ಪ್ರಾಯಃ ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಹಳಗನ್ನಡ ಸಾಹಿತ್ಯ ಸಮ್ಮೇಳನವು ಅನೇಕರಿಗೆ ಉತ್ಸಾಹವನ್ನು ವಿವಿಧ ಕಾರಣಗಳಿಗಾಗಿ/ಕಾರಣಗಳಿಂದಾಗಿ ತಂದಿರಬಹುದು. ಈ ಬಗ್ಗೆ ಬಹಿರಂಗ ಟೀಕೆಗಳು ಬಂದಿರಲಾರವು. ಆದರೂ ಅವು ಎಷ್ಟರ ಮಟ್ಟಿಗೆ ಪ್ರಾತಿನಿಧಿಕವಾಗಿದ್ದವು ಮತ್ತು ಎಷ್ಟರ ಮಟ್ಟಿಗೆ ಆರೋಗ್ಯಕಾರಕ ಅಂಶಗಳನ್ನು, ಆಶಯಗಳನ್ನು ಹೊಂದಿದ್ದವು ಎಂಬುದು ಪ್ರಶ್ನಾರ್ಹ. ಜೈನ ಸಾಹಿತ್ಯವು ಅಪಾರವಾಗಿದ್ದರೂ ಅದನ್ನು ಜೈನಕಾಶಿಯಲ್ಲೇ ಮಾಡಬೇಕೆಂದೇನೂ ಇಲ್ಲ. ಹಾಗೆ ಮಾಡಿದ್ದರಿಂದ ಸಾಹಿತ್ಯಕ್ಕೆ ಮತ್ತೆ ಮತೀಯ ರೂಪವನ್ನು ನೀಡಿದಂತಾಗಿದೆ. ಒಂದು ವೇಳೆ ಕ್ಷೇತ್ರದ ಆಯ್ಕೆ ಆಕಸ್ಮಿಕ ಅಥವಾ ಕಾಕತಾಳೀಯವಾದರೂ ಪ್ರಾತಿನಿಧ್ಯವು ಭಾಷೆ ಮತ್ತು ಸಾಹಿತ್ಯಕ್ಕೆ ಪೂರಕವಾಗಬೇಕೇ ಹೊರತು ಮತಕ್ಕಲ್ಲ. ಸಾಹಿತ್ಯದ ಮಸ್ತಕಾಭಿಷೇಕವಾಗಬೇಕೇ ಹೊರತು ಬಾಹುಬಲಿಯದ್ದಲ್ಲ. ಗ್ರಾಮೀಣ ಭಾಗದ ಭಾಷಾ ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ ಹಳೆೆಗನ್ನಡದ ಮೇಲಿರುವಷ್ಟು ಪ್ರಭುತ್ವವು ಹೊಸಗನ್ನಡದ ಅನೇಕ ಸಾಹಿತಿಗಳಿಗಿಲ್ಲ. ಅಂತಹ ಸಂದರ್ಭದಲ್ಲಿ ಈ ಪರಿಯ ಸಮ್ಮೇಳನಗಳು ನಡೆಯಬೇಕಾದರೆ ಪಾರಂಗತರನ್ನು ಅನ್ವೇಷಿಸುವುದು ಅಗತ್ಯವಾಗಿರುತ್ತದೆ.

ಅದಲ್ಲವಾದರೆ ಕೆಲವು ನೀಲಿಗಣ್ಣಿನ ನಡುಹರೆಯದ ಹುಡುಗರನ್ನು ಹುಡುಕಿ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶಕೊಟ್ಟು ಅವರಿಗೂ ನಾಲ್ಕು ಕಾಸು ಪ್ರಯೋಜನವಾಗುತ್ತದೆಯೇ ವಿನಾ ಕನ್ನಡಕ್ಕಲ್ಲ; ಹಳಗನ್ನಡಕ್ಕಂತೂ ಅಲ್ಲವೇ ಅಲ್ಲ. ಶಾಂತಿಯಾಗಲೀ, ಬಾಹುಬಲಿಯಾಗಲೀ ಹಳಗನ್ನಡಕ್ಕೆ ತೆಕ್ಕೆ ಬೀಳುವ ವಿಚಾರಗಳೇ ಅಲ್ಲ. ಆ ಕುರಿತು ಕವಿಗೋಷ್ಠಿಗಳು ನಡೆಯಲು ಹಳಗನ್ನಡ ಸಾಹಿತ್ಯವು ವೇದಿಕೆಯಾಗಲು ಸಾಧ್ಯವಿಲ್ಲ. ಪಾಡಿದರ್, ಮಾಡಿದರ್, ನೋಡಿದರ್, ಆಡಿದರ್, ಕೂಡಿದರ್, ಓಡಿದರ್ ಎಂಬಿತ್ಯಾದಿಗಳಷ್ಟೇ ಹಳಗನ್ನಡಕ್ಕೆ ಪೋಷಕವಾಗಲು ಸಾಧ್ಯವಿಲ್ಲ. ಬಂದ, ಬರುವ ಭಾಷಣಕಾರರೂ ಅಷ್ಟೇ: ತಮ್ಮ ತಮ್ಮ ಶಂಖವನ್ನೂದಿ ಸಂಭಾವನೆಯನ್ನು ಪಡೆದು ಓಡಿ(!) ಹೋದರೇ ಹೊರತು ಒಟ್ಟು ಸಮ್ಮೇಳನದಲ್ಲಿ ಕುಳಿತು ಯೋಚಿಸುವ ವ್ಯವಧಾನವಿದ್ದಂತಿರಲಿಲ್ಲ. (ಇದು ಎಲ್ಲ ಸಮ್ಮೇಳನಗಳ ಹಣೆಬರೆಹ!) ಸಮರೋಪ ಸಮಾರಂಭಕ್ಕಷ್ಟೇ ಬಂದು ಸಮಾರೋಪ ಭಾಷಣ ಮಾಡುವ ಕಾಲ ಯಾವಾಗ ಬಂತೋ ಆಗ ಸಮ್ಮೇಳನಗಳಲ್ಲಿ ಭಾಗವಹಿಸುವ ವಿದ್ವನ್ಮಣಿಗಳು ಆನೆಯನ್ನು ಪರಿಚಯಿಸುವ ಅಂಧರಂತೆ ತಮ್ಮ ಪಾತ್ರ ನಿರ್ವಹಣೆಗಷ್ಟೇ ಭಾಗವಹಿಸಿ ನಾಟಕದ ಸಮಗ್ರ ಸಂಭಾಷಣೆಯ ಪರಿಚಯವಿಲ್ಲದ ಪಾತ್ರಧಾರಿಯಂತಿರುತ್ತಾರೆ. ಸಮ್ಮೇಳನದ ಪೂರ್ಣ ಪಾಠವು ವೀಡಿಯೋ ಮಾಡುವವನಿಗಷ್ಟೇ ಗೊತ್ತಾಗಬೇಕೇ? ಸಾರ್ವಜನಿಕ ಸಂಪತ್ತು ವಿನಿಯೋಗವಾಗುವ ಯಾವುದೇ ವೇದಿಕೆಯಲ್ಲಿ ರವೀಂದ್ರನಾಥ ಠಾಕೂರರ ‘ನಾಡೆಚ್ಚರಿರಲಿ!’ ಪದ ಬಳಕೆಯಾಗಬೇಕು; ಸ್ವಾರ್ಥವಲ್ಲ; ಕೆಲವೇ ಜನರ ಹಿತವಲ್ಲ.

ಹಳಗನ್ನಡವನ್ನು ಹಾಸ್ಯಕ್ಕೆ ಬಳಸುವಂತೆ ಇಂತಹ ಸಮ್ಮೇಳನಗಳು ನಡೆಯಬಹುದೆಂಬ ಅಪಾಯದ ಅರಿವು ಯೋಜಕರಿಗಿರಬೇಕು. ಆಗ ಇಂತಹ ವರ್ಗೀಕೃತ ಸಮ್ಮೇಳನಗಳು ನಡೆಯುವ ಮೊದಲು ಅವುಗಳ ಸಮಗ್ರ ಪರಿಶೀಲನೆ ಅಗತ್ಯವಾಗುತ್ತದೆ. ಈಗಾಗಲೇ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ವೇದಿಕೆಗಳಲ್ಲಿ ಹಳಗನ್ನಡ ಹೋಗಲಿ, ಇಂದಿನ ಕನ್ನಡದ, ಕನ್ನಡ ಸಾಹಿತ್ಯ ಚರ್ಚೆಯ ಸಂದರ್ಭದಲ್ಲಿ ಎಷ್ಟು ಆಸಕ್ತರಿರುತ್ತಾರೆಂಬುದನ್ನು ಗಮನಿಸಿದರೆ ಹಳಗನ್ನಡದ ದುಸ್ಥಿತಿ ಅರಿವಾದೀತು. ಆದ್ದರಿಂದ ಹಳಗನ್ನಡವು ಪ್ರಚಲಿತವಾಗಬೇಕಾದರೆ ಅವನ್ನು ನಿತ್ಯದಡುಗೆಯಂತೆ ಓದುವವರಿರಬೇಕೇ ವಿನಃ ಸಮ್ಮೇಳನಗಳಲ್ಲಿ ಪಾತ್ರವಹಿಸುವವರಂತಲ್ಲ. ಇದಲ್ಲವಾದರೆ ಮುಂದಿನ ಸಮ್ಮೇಳನಕ್ಕೆ ವೀಳ್ಯ ಸ್ವೀಕರಿಸಲು ವೀರಶೈವ ಮಠಗಳು, ಧರ್ಮಾಧಿಕಾರಿಗಳು, ಆಚಾರ್ಯರು ಮುಂದೆ ಬರುವುದು ನಿಶ್ಚಿತ.
ಕಿಲುಬು ತೊಳೆಯದೆ ಹಳತು ಹೊಳೆವುದೆಂತು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top