ಅರಸು ಗರಡಿಯಲ್ಲಿ ಪಳಗಿದ್ದ ಮುತ್ಸದ್ದಿ-ಮೊಹಿದೀನ್

ಮೊಹಿದೀನ್ ಬಿತ್ತಿದ ಶಿಕ್ಷಣದ ಬೀಜ
ತನ್ನ ಸುತ್ತಮುತ್ತ ಅಷ್ಟೇ ಯಾಕೆ, ಸ್ವತಃ ಅಕ್ಕ-ತಂಗಿಯರೇ ಅನಕ್ಷರಸ್ಥರಾಗಿದ್ದುದನ್ನು ಕಂಡ ಬಿ.ಎ. ಮೊಹಿದೀನ್ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಪಣತೊಟ್ಟರು. ಹಾಗೇ ಹಗಲಿಡೀ ಪಾಳುಬೀಳುತ್ತಿದ್ದ ಮದ್ರಸದ ಕಟ್ಟಡದಲ್ಲೇ ಶಿಕ್ಷಣ ನೀಡಲು ಆಸಕ್ತರಾದರು. ಅದಕ್ಕೆ ಧರ್ಮಗುರುಗಳ ವಿರೋಧವಿದ್ದರೂ ಕೂಡ ಅವರ ಮನವೊಲಿಸಿ ಮೊದಲು ತನ್ನ ಹುಟ್ಟೂರು ಬಜ್ಪೆಯ ಮದ್ರಸದಲ್ಲೇ ಶಾಲೆ ತೆರೆದರು. ಆಗಿನ್ನೂ ಆಂಗ್ಲಮಾಧ್ಯಮಕ್ಕೆ ಮಕ್ಕಳ ಹೆತ್ತವರು ಒಲವು ತೋರುತ್ತಿದ್ದ ದಿನಗಳು. ಆಂಗ್ಲಮಾಧ್ಯಮ ಶಿಕ್ಷಣದ ಮಹತ್ವವನ್ನು ಅರಿತಿದ್ದ ಬಿ.ಎ.ಮೊಹಿದೀನ್ ಕನ್ನಡ ಶಾಲೆಗಳನ್ನು ಉಳಿಸುವುದರೊಂದಿಗೆ ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲು ಪ್ರೋತ್ಸಾಹ ನೀಡಿದರು. ಅದರ ಫಲವಾಗಿ ಬಜ್ಪೆಆಸುಪಾಸಿನ ಕಾಟಿಪಳ್ಳ, ಕೃಷ್ಣಾಪುರ, ಸೂರಿಂಜೆ, ಜೋಕಟ್ಟೆ, ಬೈಕಂಪಾಡಿ ಮತ್ತಿತರ ಪ್ರದೇಶದ ಮುಸ್ಲಿಮರು ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆದರು. ಅದರ ಫಲವಾಗಿಯೇ ಮೀಫ್ (ಮುಸ್ಲಿಮ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್) ತಲೆ ಎತ್ತಿತು. ಇಂದು ಕರಾವಳಿ ಕರ್ನಾಟಕದಲ್ಲಿ ಮುಸ್ಲಿಮರು ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಹೆಣ್ಣುಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ದೊಡ್ಡ ಸಂಖ್ಯೆಯ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳು ಬೆಳೆದು ಬಂದಿದ್ದರೆ ಅದರ ಹಿಂದೆ ಮೊಹಿದೀನ್ ಸಾಹೇಬರ ಪರಿಶ್ರಮ ಇದೆ.

ರಾವಳಿಯ ಬ್ಯಾರಿ ಸಮುದಾಯದಿಂದ ಬಂದ ಎರಡು ವಿಭಿನ್ನ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರು ದಿವಂಗತ ಬಿ. ಎಂ. ಇದಿನಬ್ಬ ಅವರಾದರೆ, ಇನ್ನೊಬ್ಬರು, ಮಂಗಳವಾರ ಬೆಳಗ್ಗೆ ನಿಧನರಾದ ಬಿ. ಎ. ಮೊಹಿದೀನ್ ಅವರು. ಬಿ. ಎಂ. ಇದಿನಬ್ಬ ಕನ್ನಡದ ಕಟ್ಟಾಳು ಎಂದೇ ಖ್ಯಾತರಾದರೆ, ಮೊಹಿದೀನ್ ಆಳವಾದ ಒಳನೋಟಗಳುಳ್ಳ ಸಜ್ಜನ ರಾಜಕಾರಣಿಯಾಗಿ ಗುರುತಿಸಲ್ಪಟ್ಟರು. ಬಿ. ಎ. ಮೊಹಿದೀನ್‌ನನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಬಳಸಿಕೊಂಡಿದ್ದಿದ್ದರೆ ಈ ರಾಜ್ಯಕ್ಕೂ, ಕಾಂಗ್ರೆಸ್‌ಗೂ ಬಹಳಷ್ಟು ಒಳಿತುಗಳಾಗುತ್ತಿತ್ತು. ಆದರೆ ರಾಜಕೀಯ ಚದುರಂಗದಾಟಗಳಿಗೆ ಅವರು ಬಲಿಯಾದರು. ಮೊಹಿದೀನ್ ಅವರ ರಾಜಕೀಯ ಮುತ್ಸದ್ದಿತನ, ಒಳನೋಟಗಳ ಕುರಿತಂತೆ ಆತಂಕಹೊಂದಿದ್ದ ಕಾಂಗ್ರೆಸ್‌ನೊಳಗಿನ ನಾಯಕರು ರಾಜಕೀಯವಾಗಿ ಅವರು ಮೇಲೇರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಸಿಕ್ಕಿದ ಅವಕಾಶಗಳನ್ನು ಹೇಗೆ ಯಶಸ್ವಿಯಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ಮೊಹಿದೀನ್ ಅವರು ತೋರಿಸಿಕೊಟ್ಟರು. ಜನತಾದಳದ ಮೂಲಕ ವಿಧಾನಪರಿಷತ್ ಸದಸ್ಯರಾಗಿ ಬಳಿಕ ಸಣ್ಣ ಕೈಗಾರಿಕಾ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸೇವೆಯನ್ನು ನಾಡು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದೆ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಈ ಇಬ್ಬರು ನಾಯಕರ ಗರಡಿಯಲ್ಲಿ ಪಳಗಿದ್ದ ಮೊಹಿದೀನ್ ಅವರಂತಹ ಮತ್ತೊಬ್ಬ ರಾಜಕೀಯ ಮುತ್ಸದ್ದಿ ಕರಾವಳಿ ಬ್ಯಾರಿ ಸಮುದಾಯದಲ್ಲಿ ಹುಟ್ಟಲೇ ಇಲ್ಲ ಎನ್ನುವುದು ಕರಾವಳಿಯ ಇಂದಿನ ದುರಂತ ಬೆಳವಣಿಗೆಗಳಿಗೆ ಪರೋಕ್ಷ ಕಾರಣವಾಗಿದೆ.

ಬಜಪೆ ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಇವರು ಆ ಕಾಲದಲ್ಲಿ ಬಿಎಸ್ಸಿವರೆಗೆ ಓದಿದ್ದೇ ಒಂದು ದೊಡ್ಡ ಸಾಧನೆ. ಮುಸ್ಲಿಮ್ ಸಮುದಾಯ ಇನ್ನೂ ಶಿಕ್ಷಣಕ್ಕೆ ತೆರೆದುಕೊಳ್ಳದ ಕಾಲದಲ್ಲಿ ಇವರು ಹುಟ್ಟೂರಾದ ಬಜಪೆಯಲ್ಲಿ ಐದನೆ ತರಗತಿ ಓದಿ, ಚಿಕ್ಕಮಗಳೂರಿನಲ್ಲಿ ಅವರ ಮುಂದಿನ ಶೈಕ್ಷಣಿಕ ಬದುಕು ಕಳೆಯಿತು. ಅವರನ್ನು ನಿಧಾನಕ್ಕೆ ರಾಜಕೀಯಕ್ಕೆ ಸಿದ್ಧಗೊಳಿಸಿದ್ದು ಕರಾಳಿಯಲ್ಲ, ಬದಲಿಗೆ ಚಿಕ್ಕಮಗಳೂರು.
ವಿಪರ್ಯಾಸವೆಂದರೆ ಕಾಂಗ್ರೆಸ್‌ನೊಳಗಿನ ಎರಡು ಪ್ರಮುಖ ಘಟನೆಗಳೊಂದಿಗೆ ಮೊಹಿದೀನ್ ಅವರ ರಾಜಕೀಯ ಬದುಕಿನ ಏಳು ಬೀಳುಗಳು ತಳಕು ಹಾಕಿಕೊಂಡಿವೆೆ. 1969ರಲ್ಲಿ ಕಾಂಗ್ರೆಸ್‌ನಲ್ಲಿ ನಡೆದ ಸಂಚಲನ ರಾಜಕೀಯ ದಿಕ್ಕು ದೆಸೆಗಳನ್ನೇ ಬದಲಿಸಿತು. ಕಾಂಗ್ರೆಸ್ ಕೇಂದ್ರ ಮಟ್ಟದಲ್ಲಿ ಇಬ್ಭಾಗವಾಯಿತು. ಇಂದಿರಾಕಾಂಗ್ರೆಸ್ ಮುನ್ನೆಲೆಗೆ ಬಂದುದು ಆಗ. ಅದೇ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಮೊಹಿದೀನ್ ರಾಜಕಾರಣಿಯಾಗಿ ಗುರುತಿಸಿಕೊಂಡರು. ಇಂದಿರಾಗಾಂಧಿ ರಾಷ್ಟ್ರಮಟ್ಟದಲ್ಲಿ ‘ತುರ್ತುಪರಿಸ್ಥಿತಿ’ಯ ಕಾರಣಕ್ಕಾಗಿ ಹಿನ್ನಡೆ ಅನುಭವಿಸಿದಾಗ, ರಾಜ್ಯದಲ್ಲಿ ‘ದೇವರಾಜ ಅರಸು’ ಮಿಂಚತೊಡಗಿದರು. ಅರಸು ಅವರ ಅತಿ ಸಮೀಪದಲ್ಲಿ ಕೆಲಸ ಮಾಡುವಂತಹ ಅವಕಾಶ ಮೊಹಿದೀನ್ ಅವರಿಗೆ ದೊರಕಿತು. 1977ರ ಮಹಾ ಚುನಾವಣೆಯಲ್ಲಿ ಇಂದಿರಾಕಾಂಗ್ರೆಸ್ ಧೂಳೀಪಟವಾಯಿತಾದರೂ, ರಾಜ್ಯದಲ್ಲಿ ಗಟ್ಟಿಯಾಗಿ ಬೇರೂರಿ ನಿಂತಿತ್ತು. 1978ರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಮೊಹಿದೀನ್ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಶಾಸಕ ರಾದರು. 1978ರ ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಭರ್ಜರಿ ಜಯ ಗಳಿಸಿದರು. ಅವರ ರಾಜಕೀಯ ಬದುಕಿನ ಪುನರ್ಜನ್ಮ ಅದು. ಈ ಸಂದರ್ಭದ ಸಕಲ ಬೆಳವಣಿಗೆಗಳಿಗೆ ಮೊಹಿದೀನ್ ಸಾಕ್ಷಿಯಾಗಿದ್ದರು. 1972ರಿಂದ 78ರವರೆಗೆ ಮೊಹಿದೀನ್ ದೇವರಾಜ ಅರಸು ಅವರಿಗೆ ನಿಕಟವಾಗಿದ್ದರು. ಆದರೆ ದೇವರಾಜ ಅರಸು ಜೊತೆಗಿನ ಆತ್ಮೀಯ ನಂಟೇ ಕಾಂಗ್ರೆಸ್‌ನೊಳಗೆ ಮೊಹಿದೀನ್ ಅವರಿಗೆ ಮುಳುವಾಯಿತು. ರಾಜ್ಯದಲ್ಲಿ ದೇವರಾಜ ಅರಸು ಇಂದಿರಾಗಾಂಧಿಯ ವಿರುದ್ಧ ಬಂಡೆದ್ದು ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದಾಗ ಮೊಹಿದೀನ್ ಅವರು ಅರಸು ಜೊತೆಗೆ ಗುರುತಿಸಿಕೊಂಡರು. ಅದು ಅವರ ನಿಷ್ಠಾವಂತಿಕೆಗೆ, ಪ್ರಾಮಾಣಿಕತೆಗೆ ಮತ್ತು ಸಜ್ಜನಿಕೆಗೆ ಸಾಕ್ಷಿ. ಆಗ ಇಂದಿರಾ ಗಾಂಧಿಯ ಜೊತೆಗೆ ಮೊಹಿದೀನ್ ಗುರುತಿಸಿಕೊಂಡಿದ್ದರೆ ಇಂದು ಅವರು ರಾಷ್ಟ್ರಮಟ್ಟದಲ್ಲಿ ದೊಡ್ಡ ನಾಯಕರಾಗಿ ಮೂಡಿ ಬರುತ್ತಿದ್ದರೋ ಏನೋ. ದೇವರಾಜ ಅರಸು ರಾಜಕೀಯ ಬದುಕು ದುರಂತ ಕಂಡ ಬಳಿಕ, ಅವರು ಮತ್ತೆ ಇಂದಿರಾ ಕಾಂಗ್ರೆಸ್‌ನ್ನು ಸೇರಿದರು. ಆದರೆ ಮೊಹಿದೀನ್ ಶಕ್ತಿಯ ಕುರಿತಂತೆ ಭಯವಿದ್ದ ಜನಗಳು ಅವರನ್ನು ಮೇಲೆ ಬರಲು ಬಿಡಲಿಲ್ಲ. ರಾಮಕೃಷ್ಣ ಹೆಗಡೆ ಅವರು ಮೊಹಿದೀನ್‌ರನ್ನು ಗುರುತಿಸದೇ ಇದ್ದರೆ ಅವರ ರಾಜಕೀಯ ಬದುಕೇ ಮುಗಿದು ಬಿಡುತ್ತಿತ್ತು. ವಿಪರ್ಯಾಸವೆಂದರೆ ರಾಜ್ಯದಲ್ಲಿ ನಡೆದ ಮತ್ತೊಂದು ರಾಜಕೀಯ ಬೆಳವಣಿಗೆ ಅವರನ್ನು ರಾಜಕೀಯದಿಂದ ಸಂಪೂರ್ಣ ದೂರ ಉಳಿಯುವಂತೆ ಮಾಡಿಸಿತು. ಜೆ. ಎಚ್. ಪಟೇಲ್ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಾಗ ಮೊಹಿದೀನ್ ತಟಸ್ಥರಾದರು. ಜೆಡಿಎಸ್ ಇಬ್ಭಾಗ ವಾದಾಗ ಅವರು ಯಾರೊಂದಿಗೂ ಗುರುತಿಸಲು ಇಷ್ಟ ಪಡಲಿಲ್ಲ.

ಪ್ರಾಧ್ಯಾಪಕರಿಗೆ ವೇತನ ಶ್ರೇಣಿ
 ತನಗೆ ಸಿಕ್ಕಿದ ಅಧಿಕಾರದ ಅಲ್ಪ ಸಮಯದಲ್ಲಿ ಮೊಹಿದೀನ್ ಅವರ ಸಾಧನೆ ಯೇ ಅವರ ಮುತ್ಸದ್ದಿತನಕ್ಕೆ ಕನ್ನಡಿ ಹಿಡಿಯುತ್ತದೆ. ಉನ್ನತ ಶಿಕ್ಷಣ ಸಚಿವರಾಗಿ ಅವರು ಮಾಡಿದ ಕೆಲಸವನ್ನು ಇಂದಿಗೂ ನಾಡಿನ ಎಲ್ಲ ಶಿಕ್ಷಕರು ನೆನೆಯುತ್ತಿದ್ದಾರೆ. ಪ್ರಾಧ್ಯಾಪಕರಿಗೆ ಯುಜಿಸಿ ವೇತನಶ್ರೇಣಿ ಆರಂಭವಾದುದು ಇವರ ಕಾಲದಲ್ಲೇ. ಇಂದು ಅವರು ಕೈ ತುಂಬಾ ವೇತನ ಪಡೆಯುವುದರ ಹಿಂದೆ ಮೊಹಿದೀನ್ ದೂರದೃಷ್ಟಿಯಿದೆ. ಅವರು ರಾಜಕೀಯದಿಂದ ನಿವೃತ್ತರಾದ ಬಳಿಕವೂ, ಹಲವು ಶಿಕ್ಷಕರು ಅವರನ್ನು ಈ ಕಾರಣಕ್ಕಾಗಿಯೇ ಭೇಟಿ ಮಾಡುತ್ತಿದ್ದರು. ಒಬ್ಬರಂತೂ ಅವರ ನಿವಾಸಕ್ಕೆ ಹೂವಿನ ಹಾರ, ಹಣ್ಣು ಹಂಪಲುಗಳ ಜೊತೆಗೆ ಬಂದರಂತೆ. ‘‘ನೀವು ಯುಜಿಸಿ ವೇತನ ಶ್ರೇಣಿ ಕೊಡಿಸಿದ್ದರಿಂದಾಗಿ ಹಳೆಯ ಹೆಚ್ಚುವರಿ ಸಂಬಂಧ ಬಾಬ್ತು ನನಗೆ ಐದುಲಕ್ಷ ರೂಪಾಯಿ ಒಂದೇ ಗಂಟಿನಲ್ಲಿ ಸಿಕ್ಕಿತು. ನನಗೊಬ್ಬಳು ಬೆಳೆದ ಮಗಳಿದ್ದಳು. ಹಣದ ಅಡಚಣೆಯಿಂದಾಗಿ ಅವಳ ಮದುವೆ ಬಾಕಿಯಾಗಿತ್ತು. ನನಗೆ ಸಿಕ್ಕಿದ ಐದು ಲಕ್ಷ ರೂಪಾಯಿಯಲ್ಲಿ ನನ್ನ ಮಗಳ ಮದುವೆ ಮಾಡಿ ಮುಗಿಸಿದ್ದೇನೆ’’ ಎಂದು ಹೇಳಿ ಕಣ್ಣೀರಿಟ್ಟರಂತೆ.
ಸಣ್ಣ ಕೈಗಾರಿಕೆಗಳ ಚೇತರಿಕೆಗೆ ಸಂಬಂಧಪಟ್ಟಂತೆ ಅವರು ತೆಗೆದುಕೊಂಡ ಕ್ರಮಗಳೂ ಗಮನಾರ್ಹ. ಸಣ್ಣ ಕೈಗಾರಿಕೆಗಳಿಗೆ ಕೊಡಬೇಕಾಗಿದ್ದ ನೂರಾರು ಕೋಟಿ ರೂಪಾಯಿ ಸಬ್ಸಿಡಿ ಸಂದಾಯವಾಗಿದ್ದು ಇವರು ಸಚಿವರಾಗಿದ್ದಾಗ. ಸರಕಾರಕ್ಕೆ ಹೊರೆಯಾಗದಂತೆ ಕೆಎಸ್‌ಎಫ್‌ಸಿ ಬಾಂಡ್ ರಿಲೀಸ್ ಮಾಡಿ, ಅದರಿಂದ ಬಂದ ಹಣವನ್ನು ಮೂರೇ ತಿಂಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿಯಾಗಿ ನೀಡಿದರು. ಜಿಟಿಟಿಸಿ ಸ್ಥಾಪನೆಯೂ ಇವರ ಅಧಿಕಾರಾವಧಿಯಲ್ಲೇ ಆಯಿತು. (ಗೌರ್ನ ಮೆಂಟ್ ಟೂಲ್ ರೂಮ್ ಟ್ರೇನಿಂಗ್ ಸೆಂಟರ್) ಇದು ಯುವಕರನ್ನು ವೃತ್ತಿಪರರನ್ನಾಗಿಸುವುದಕ್ಕೆ ನೆರವಾಯಿತು. ಮಂಗಳೂರಿನ ಮೂರು ಶಿಕ್ಷಣ ಸಂಸ್ಥೆಗಳ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ದೊರಕಿದ್ದೂ ಮೊಹಿದೀನ್ ಅವರ ಕಾರಣದಿಂದ. ಒಂದೇ ಸಮಯದಲ್ಲಿ ಒಂದು ಜಿಲ್ಲೆಗೆ ಮೂರು ಮೆಡಿಕಲ್ ಕಾಲೇಜುಗಳು ಮಂಜೂರಾದದ್ದು ಆ ಸಂದರ್ಭದಲ್ಲಿ ಒಂದು ಐತಿಹಾಸಿಕ ದಾಖಲೆಯಾಗಿತ್ತು. ಮಂಗಳೂರಿನ ಪಿಲಿಕುಳ ನಿಸರ್ಗಧಾಮ, ಎಡಿಬಿ ಯೋಜನೆ ಇವೆಲ್ಲವೂ ಇವರ ಕಾಲದಲ್ಲೇ ಆಯಿತು.
ಮುಸ್ಲಿಮ್ ಸಮುದಾಯದೊಳಗೆ ಮೊಹಿದೀನ್‌ರಂತಹ ದೂರದೃಷ್ಟಿಯುಳ್ಳ ಹಲವು ನಾಯಕರಿದ್ದರು. ಇವರಿಗೆ ಪ್ರೋತ್ಸಾಹ ನೀಡಿ ಬೆಳೆಸಿದ್ದಿದ್ದರೆ ಕರಾವಳಿಯೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸ್ವಂತಿಕೆಯಿರುವ, ಸ್ವತಂತ್ರವಾಗಿ ಆಲೋಚನೆ ಮಾಡುವ ಮುಸ್ಲಿಮ್ ನಾಯಕರನ್ನು ಬಗ್ಗು ಬಡಿದು ಆ ಸ್ಥಾನಕ್ಕೆ ದುರ್ಬಲ ಮುಸ್ಲಿಮ್ ಅಭ್ಯರ್ಥಿಗಳನ್ನು ತಂದು ಕೂರಿಸುವ ಚಾಳಿಯೊಂದು ಕಾಂಗ್ರೆಸ್‌ನೊಳಗೆ ಶುರುವಾಯಿತು. ಅದರ ಪರಿಣಾಮವಾಗಿ ಅತ್ಯುತ್ತಮ ನಾಯಕರು ಕರಾವಳಿಯಲ್ಲಿ ಹುಟ್ಟುವುದಕ್ಕೆ ಸಾಧ್ಯವಾಗಲಿಲ್ಲ.
 ಇಂದಿನ ದಿನಗಳಲ್ಲಂತೂ ಹಣವಂತ ಮುಸ್ಲಿಮರಷ್ಟೇ ರಾಜಕಾರಣಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಇವರಿಗೆ ಯಾವುದೇ ರಾಜಕೀಯ ದೂರದೃಷ್ಟಿಗಳಿಲ್ಲ. ವೈಯಕ್ತಿಕವಾಗಿ ರಾಜಕೀಯ ಅನುಭವಗಳೂ ಇಲ್ಲ. ಸ್ವಂತಿಕೆ, ವ್ಯಕ್ತಿತ್ವ ಇಲ್ಲದ ಇಂತಹ ನಾಯಕರ ಹಣವನ್ನು ಬಳಸಿಕೊಂಡು ವಿವಿಧ ಪಕ್ಷಗಳ ಮುಖಂಡರು ಮುಸ್ಲಿಮರನ್ನು ಕಾಲಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಕರಾವಳಿಯಲ್ಲಿ ಮುಸ್ಲಿಮ್‌ರು ರಾಜಕೀಯವಾಗಿ ಪ್ರತ್ಯೇಕವಾಗುತ್ತಿದ್ದಾರೆ. ಇದು ಕರಾವಳಿಯ ಪಾಲಿಗೆ ಮಾತ್ರವಲ್ಲ, ಒಟ್ಟು ರಾಜಕೀಯ ಸಂದರ್ಭಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top