ಅರಸು ಏಳು-ಬೀಳುಗಳನ್ನು ತೆರೆದಿಟ್ಟ ‘ನನ್ನೊಳಗಿನ ನಾನು’

‘‘ನಿಮ್ಮ ಅರಸು ಹೀಗೇಕೆ ಮಾಡುತ್ತಿದ್ದಾರೆ? ನಾನೇನು ಮಾಡಿದ್ದೇನೆ ಅವರಿಗೆ?’’ -ಮೊಹಿದೀನ್‌ರನ್ನು ಕೇಳಿದ್ದ ಇಂದಿರಾಗಾಂಧಿ!

 ಮಂಗಳವಾರ ನಿಧನರಾದ ಮಾಜಿ ಸಚಿವ ಬಿ. ಎ. ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು’ ಬೇರೆ ಬೇರೆ ಕಾರಣಗಳಿಗಾಗಿ ಬಿಡುಗಡೆಗೆ ಮುನ್ನವೇ ಸುದ್ದಿಯಾಗುತ್ತಿದೆ. ಮೊಹಿದೀನ್ ಹೇಳಿಕೊಂಡಿರುವ ಹಲವು ರಾಜಕೀಯ ಸಂಗತಿಗಳು ಕೆಲವು ಹಿರಿಯ ರಾಜಕೀಯ ನಾಯಕರಿಗೆ ಇರಿಸು ಮುರಿಸನ್ನೂ ಉಂಟು ಮಾಡಿದೆ. ಈ ಕೃತಿಯ ಅತ್ಯಂತ ಮಹತ್ವದ ಭಾಗ, ಮೊಹಿದೀನ್ ಅವರ ಅರಸು ಜೊತೆಗಿನ ಒಡನಾಟ. ಅರಸುವನ್ನು ಅತ್ಯಂತ ಸಮೀಪದಲ್ಲಿ ಕಂಡವರು, ಅವರ ಜೊತೆಗೆ ಒಡನಾಡಿದವರು ಮೊಹಿದೀನ್. ಅವರ ಏಳಿಗೆಯನ್ನು ನೋಡಿದಂತೆಯೇ ಅವರ ಪತನವನ್ನೂ ಕಂಡವರು. ಅರಸು ಅವರ ಜೊತೆಗೆ ಕೊನೆಯವರೆಗೂ ಗಟ್ಟಿಯಾಗಿ ನಿಂತವರು. ಜುಲೈ 20ರಂದು ಮಂಗಳೂರಿನಲ್ಲಿ ಬಿಡುಗಡೆಯಾಗುವ ‘ನನ್ನೊಳಗಿನ ನಾನು’ ಕೃತಿಯಲ್ಲಿ ಈ ಕುರಿತಂತೆ ಅಪರೂಪದ ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ಇಂದಿರಾಗಾಂಧಿ ಮತ್ತು ದೇವರಾಜ ಅರಸು ನಡುವಿನ ಮುನಿಸು. ಅದರ ಆಯ್ದ ಭಾಗ ಇಲ್ಲಿದೆ.

ದುರಂತಗಳು ಪ್ರಾರಂಭ
  1978ರ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಯಲ್ಲಿ ಇಂದಿರಾಗಾಂಧಿ ಅವರ ಭರ್ಜರಿ ವಿಜಯದ ನಂತರ ದೇವರಾಜ ಅರಸು ಅವರ ದುರಂತದ ದಿನಗಳು ಪ್ರಾರಂಭವಾಯಿತು. ದೇವರಾಜ ಅರಸು ಅವರ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವ ಕೆಲವರು ಕಾಂಗ್ರೆಸ್‌ನಲ್ಲಿದ್ದರು ಮತ್ತು ಅವರು ನಿರಂತರವಾಗಿ ಅರಸು ಅವರ ವಿರುದ್ಧ ಪಿತೂರಿಯನ್ನು ಮಾಡುತ್ತಲೇ ಇದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾಗಾಂಧಿ ಅವರ ಪುತ್ರ ಸಂಜಯ ಗಾಂಧಿ ಅವರಿಗೆ ನಿಕಟವರ್ತಿಗಳಾಗಿದ್ದಂತಹ ಗುಂಡೂರಾವ್, ಎಫ್.ಎಂ. ಖಾನ್, ಸಿ.ಕೆ. ಜಾಫರ್ ಶರೀಫ್ ಅಂತಹವರು ಸಂಜಯ ಗಾಂಧಿಯವರನ್ನು ದೇವರಾಜ ಅರಸು ಅವರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಲೇ ಇದ್ದರು. ಚಿಕ್ಕಮಗಳೂರು ಚುನಾವಣೆಯ ವಿಜಯದ ನಂತರ ಅರಸು ಅವರನ್ನು ಇಡೀ ರಾಷ್ಟ್ರ ಗಮನಿಸಿತ್ತು ಮತ್ತು ಕೆಲವು ಮಾಧ್ಯಮಗಳು ಅರಸು ಅವರನ್ನು ಹೊಗಳಿ ಅಟ್ಟಕ್ಕೇರಿಸಿತ್ತು.
ಹಾಸನ ಜಿಲ್ಲೆಯ ಅರಸೀಕೆರೆ ಬಳಿಯ ಗ್ರಾಮವೊಂದರಲ್ಲಿ ಪುರಾತನ ತಾಳೆಗರಿ ಬರಹ ಓದಿ ಭವಿಷ್ಯ ನುಡಿಯುವ ಸ್ವಾಮೀಜಿಯೊಬ್ಬರು ‘‘ಅರಸು ಅವರಿಗೆ ಭಾರತದ ಪ್ರಧಾನಿ ಆಗುವ ಯೋಗವಿದೆ’’ ಎಂಬ ಭವಿಷ್ಯವಾಣಿ ನುಡಿದಿದ್ದು ಎಲ್ಲಾ ಕಡೆ ಪ್ರಚಾರವಾಯಿತು. ಸಂಜಯ್ ಗಾಂಧಿಗೆ ದೇವರಾಜ ಅರಸು ಅವರು ಬೆಲೆ ಕೊಡುತ್ತಿಲ್ಲ ಎಂಬ ದೂರನ್ನು ಅರಸು ಸಂಪುಟದಲ್ಲಿ ಸಚಿವರಾಗಿದ್ದ ಆರ್. ಗುಂಡೂರಾವ್ ತಮ್ಮ ಆಪ್ತ ಪತ್ರಕರ್ತರಲ್ಲಿ ಹೇಳಿಕೊಂಡದ್ದು ಒಂದು ದೊಡ್ಡ ಸುದ್ದಿಯಾಗಿ ಹಬ್ಬಿತು. ಚಿಕ್ಕಮಗಳೂರು ಚುನಾವಣೆಯಲ್ಲಿ ಅರಸು ಅವರಿಗೆ ಗೌರವ, ಸನ್ಮಾನಗಳು ನಡೆದವು. 1979ರ ಜನವರಿಯಲ್ಲಿ ಗುಜರಾತ್‌ನ ಕ್ಷತ್ರಿಯ ಸಮಾಜದವರು ಅರಸು ಅವರಿಗೆ ಒಂದು ಗೌರವ ಸನ್ಮಾನ ಏರ್ಪಡಿಸಿದ್ದರು. ಈ ಕ್ಷತ್ರಿಯ ಸಮಾಜದವರು ಅಂದು ಅರಸು ಅವರಿಗೆ ಏರ್ಪಡಿಸಿದ ಸನ್ಮಾನ ಪತ್ರದಲ್ಲಿ ದಕ್ಷಿಣ ಭಾರತದ ಈ ಮಹಾ ಕ್ಷತ್ರಿಯನ ಗುಣ ವಿಶೇಷತೆಗಳ ವರ್ಣನೆ ಮಾಡುವುದರೊಂದಿಗೆ ಅರಸು ಅವರಿಗೆ ‘ಪೃಥ್ವಿವಲ್ಲಭ’ ಎಂಬ ಬಿರುದನ್ನು ನೀಡಿದರು. ಈ ಎಲ್ಲ ಬೆಳವಣಿಗೆಗಳು ಇಂದಿರಾಗಾಂಧಿ ಅವರಿಗೆ ಅರಸು ಅವರ ಮೇಲೆ ಅಸಹನೆಯನ್ನು ಹೆಚ್ಚಿಸಲು ಕಾರಣವಾಯಿತು.
1979ರ ಜನವರಿಯಲ್ಲಿ ದಿಲ್ಲಿಯಲ್ಲಿ ಅಖಿಲ ಭಾರತ ಇಂದಿರಾ ಕಾಂಗ್ರೆಸಿನ ಮಹಾಸಭೆಯಲ್ಲಿ ಅರಸು ತಮ್ಮ ಪಕ್ಷ ವಂಶಾಡಳಿತಕ್ಕೆ ಜೋತುಬಿದ್ದ ಜೀತದಾಳುಗಳ ಕೂಟವೆಂಬ ಅಪಖ್ಯಾತಿಯನ್ನು ನಿವಾರಿಸಿಕೊಳ್ಳಬೇಕೆಂದು ಭಾಷಣ ಮಾಡಿದರು. ಅಂದು ಇಂದಿರಾ ಕಾಂಗ್ರೆಸ್‌ನಲ್ಲಿ ಸಂಜಯಗಾಂಧಿ ನಡೆಸಿಕೊಂಡು ಬರುತ್ತಿದ್ದ ಅತಿ ಅಬ್ಬರದ ರಾಜಕೀಯವನ್ನು ಅರಸು ಅವರು ಸ್ವಲ್ಪ ನೇರವಾಗಿಯೇ ಟೀಕಿಸಿದ್ದರು. ಇದರಿಂದ ವಂಶಾಡಳಿತದ ಶಿಶುವಾದ ಸಂಜಯ ಗಾಂಧಿ ಸಿಡಿಮಿಡಿಗೊಂಡರು. ಅರಸು ಅವರನ್ನು ಮುಗಿಸಿಯೇ ಬಿಡುವೆನೆಂದು ಬಹಿರಂಗ ವಾಗಿಯೇ ಮಾತನಾಡಲು ಶುರು ಮಾಡಿದರು. ಅರಸು ಸಂಪುಟದ ಕೆಲವರ ಕುಮ್ಮಕ್ಕಿನಿಂದ ಅರಸು ಅವರು ಮೂಲೆ ಗುಂಪಾಗತೊಡಗಿದರು. ಹೀಗೆ ರಾಜಕೀಯ ಜೀವನದ ದುರಂತ ನಾಯಕರಾಗಿ ಅರಸು ಕಂಡುಬರುತ್ತಾರೆ.
1979 ಮೇ ತಿಂಗಳ ಸಂದರ್ಭದಲ್ಲಿ ಇಂದಿರಾಗಾಂಧಿ ಮತ್ತು ಅರಸು ಅವರ ವಿರಸ ದೊಡ್ಡ ಸುದ್ದಿಯಾಯಿತು. ಇಂದಿರಾಗಾಂಧಿ ಅವರು ಗುಂಡೂರಾವ್, ಸಿ.ಕೆ. ಜಾಫರ್ ಶರೀಫ್, ಎಫ್.ಎಂ. ಖಾನ್ ಇವರನ್ನೆಲ್ಲ ಬಳಸಿಕೊಂಡು ಅರಸು ಅವರ ಕಾಲೆಳೆಯುವ ಕೆಲಸದಲ್ಲಿ ತೊಡಗಿಸಿಕೊಂಡರು. ಅರಸು ಅವರು ಮುಖ್ಯಮಂತ್ರಿಯಾಗಿದ್ದರು ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರು ಸಹ ಆಗಿದ್ದರು. ಅರಸು ಅವರನ್ನು ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ತ್ಯಜಿಸಲು ಸೂಚಿಸಿದರು. ಆದರೆ ಅರಸು ಆ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಆಗ ‘ಸರ್ಪಸುತ್ತು’ ಆಗಿತ್ತು. ‘‘ನಾನೀಗ ಅನಾರೋಗ್ಯದಲ್ಲಿದ್ದೇನೆ. ಚಿಕಿತ್ಸೆ ಮುಗಿಸಿದ ಬಳಿಕ ನಿಮ್ಮನ್ನು ಭೇಟಿಯಾಗುತ್ತೇನೆ. ನಾವು ಕುಳಿತು ಮಾತನಾಡೋಣ’’ ಎಂದು ದೇವರಾಜ ಅರಸು ಅವರು ತಿಳಿಸಿದರೂ ಅದಕ್ಕೆ ಒಪ್ಪದ ಇಂದಿರಾಗಾಂಧಿ 1979ರ ಜೂನ್ ತಿಂಗಳ 20ನೆಯ ತಾರೀಕು ಅವರನ್ನು ಇಂದಿರಾ ಕಾಂಗ್ರೆಸ್‌ನ ಅಧ್ಯಕ್ಷತೆಯಿಂದ ವಜಾಗೊಳಿಸಿದರು.
ಈ ಸಂದರ್ಭದಲ್ಲಿ ಅರಸು ಅವರಿಗೆ ಅತ್ಯಂತ ಆಘಾತವಾದದ್ದೆಂದರೆ ಹಿಂದಿನ ದಿನದ ರಾತ್ರಿಯವರೆಗೂ ಅವರೊಂದಿಗಿದ್ದು ಸದಾ ಅವರ ಜೊತೆಗೇ ಇರುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಂತಹ ಎಸ್. ಬಂಗಾರಪ್ಪ ಅವರು ಮಾರನೆಯ ದಿನ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನ್ನು ವಹಿಸಿಕೊಂಡಿದ್ದು.
ಇಂದಿರಾಗಾಂಧಿ ಅವರು ಬಂಗಾರಪ್ಪ ಅವರನ್ನು ಕರ್ನಾಟಕ ರಾಜ್ಯ ಇಂದಿರಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಅದುವರೆಗೂ ಅರಸು ಅವರಿಗೆ ಅಚಲ ನಿಷ್ಠೆಯನ್ನು ತೋರಿಸುತ್ತಿದ್ದ ಹಿಂದುಳಿದ ವರ್ಗಗಳ ಶಾಸಕರು ಒಬ್ಬೊಬ್ಬರಾಗಿ ಅವರಿಂದ ದೂರ ಸರಿಯತೊಡಗಿದರು. ವೀರಪ್ಪ ಮೊಯ್ಲಿ, ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ, ವೆಂಕಟರಮಣ ಪಿ., ಶ್ರೀಮತಿ ರೇಣುಕಾ ರಾಜೇಂದ್ರ, ಕೆ. ವೆಂಕಟಪ್ಪ, ಬಿ.ರಾಮಯ್ಯ, ವೈ ರಾಮಕೃಷ್ಣ ಇಂತಹ ನಾಯಕರೆಲ್ಲ ಅರಸು ಅವರಿಂದ ದೂರವಾದರು. ರಾಜ್ಯದ ವಿಧಾನಸಭೆಯಲ್ಲಿ ಇಂದಿರಾ ಕಾಂಗ್ರೆಸ್‌ನ ಪ್ರತ್ಯೇಕ ಘಟಕ ರಚನೆಯಾಯಿತು. ಅರಸು ನಾಯಕತ್ವದ ಕಾಂಗ್ರೆಸ್ ಪಕ್ಷದ ಸಂಖ್ಯೆಯ ಬಲ ಕುಸಿಯಿತು ಸುಮಾರು 40ಕ್ಕೂ ಹೆಚ್ಚು ಶಾಸಕರು ಅರಸು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಇಂದಿರಾ ಕಾಂಗ್ರೆಸನ್ನು ಸೇರಿದರು. ಈ ಹೊಸ ವಿದ್ಯಮಾನದಿಂದ ಅರಸು ಅವರಿಗೆ ಜನತಾ ಪಕ್ಷದ ಕೆಲವು ಗಣ್ಯರ ಸಹಾನುಭೂತಿ ದೊರೆಯಿತು. ಜೆ.ಎಚ್. ಪಟೇಲ್, ಜೀವರಾಜ ಆಳ್ವ, ಪ್ರಮೀಳಾ ನೇಸರ್ಗಿ ಮುಂತಾದ 25 ಮಂದಿ ಜನತಾ ಪಕ್ಷದ ಶಾಸಕರು ಅರಸು ಅವರನ್ನು ಬೆಂಬಲಿಸಿದರು. ಇದರಿಂದಾಗಿ ಅರಸು ಅವರ ಸರಕಾರ ಪತನಗೊಳ್ಳುವುದರಿಂದ ರಕ್ಷಿಸಲ್ಪಟ್ಟಿತು. ಅವಿಭಜಿತ ದಕ್ಷಣಕನ್ನಡ ಜಿಲ್ಲೆಯ ಶಾಸಕರಲ್ಲಿ ವೀರಪ್ಪ ಮೊಯ್ಲಿ ಅವರೊಬ್ಬರನ್ನು ಬಿಟ್ಟು ನಾನೂ ಸಹಿತ ಉಳಿದವರೆಲ್ಲರೂ ಅರಸು ಅವರ ಜೊತೆಗೆ ನಿಂತೆವು.
ನಮಗೂ ಇದು ಬಹಳ ಸಂದಿಗ್ಧ ಸಂಕಟದ ಪರಿಸ್ಥಿತಿಯಾಗಿತ್ತು. ಕೆಲವು ದಿನಗಳ ಹಿಂದೆ ಇಂದಿರಾಗಾಂಧಿ ಅವರು ಬೆಂಗಳೂರಿಗೆ ಬಂದಿದ್ದಾಗ ನನ್ನನ್ನು ಮತ್ತು ರಮೇಶ್ ಕುಮಾರ್ ಅವರನ್ನು, ಅವರು ಉಳಿದುಕೊಂಡಿದ್ದ ಅತಿಥಿಗೃಹಕ್ಕೆ ಕರೆಸಿ ಮಾತನಾಡಿದ್ದರು. ‘ನೀವಿಬ್ಬರೂ ನನ್ನ ಜೊತೆಗೆ ಇರಬೇಕು’ ಎಂದು ಕೇಳಿಕೊಂಡಿದ್ದರು.‘ ನಾವು ಇರುತ್ತೇವೆ ಮೇಡಂ’ ಎಂದು ಹೇಳಿ ಅಲ್ಲಿಂದ ಹೊರಬಂದಿದ್ದೆವು. ಆದರೆ ನಾವು ಭೇಟಿಯಾದ ಸುದ್ಧಿ ತಿಳಿದ ಅರಸು ಅವರು ನಮ್ಮಿಬ್ಬರನ್ನು ಕರೆಸಿಕೊಂಡು ‘‘ಏನಪ್ಪಾ, ನೀವೂ ನನ್ನನ್ನು ಬಿಟ್ಟು ಹೋಗ್ತುತೀರಾ?’’ ಎಂದು ಕೇಳಿದಾಗ ನಾವು ಮೂಕರಾಗಿಬಿಟ್ಟಿದ್ದೆವು. ಅರಸು ಅವರು ನಮ್ಮ ಪಾಲಿಗೆ ಎಲ್ಲವೂ ಆಗಿದ್ದರು. ಅವರನ್ನು ಬಿಟ್ಟು ಹೋಗಲು ನಮ್ಮ ಮನಸ್ಸು ಕೇಳಲಿಲ್ಲ. ಾವು ಅವರೊಂದಿಗೆ ಉಳಿದುಕೊಂಡೆವು.
ಖಂಡಿತವಾಗಿಯೂ ಈ ಒಂದು ಬಿರುಕನ್ನು ತಪ್ಪಿಸಬಹುದಿತ್ತು. ಹಿರಿಯ ಸಚಿವರುಗಳಾದಂತಹ ಸುಬ್ಬಯ್ಯ ಶೆಟ್ಟಿ ಹಾಗೂ ಇತರರು ಮನಸ್ಸು ಮಾಡಿದ್ದರೆ ಇಂದಿರಾಗಾಂಧಿ ಮತ್ತು ಅರಸು ಅವರ ಮಧ್ಯೆ ಉಂಟಾಗಿದ್ದಂತಹ ಈ ಸಣ್ಣ ಅನುಮಾನ ಬೀಜವನ್ನು ಮೊಳಕೆಯಲ್ಲೇ ಕಿತ್ತು ಹಾಕಬಹುದಿತ್ತು ಅಥವಾ ಅರಸು ಅವರಿಗೆ ಮನವರಿಕೆ ಮಾಡಿಸಿ ಅವರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳುವಂತೆ ಮಾಡಿಕೊಳ್ಳಬಹುದಿತ್ತು. ಆದರೆ ಇಲ್ಲಿ ಯಾರು ಅರಸು ಅವರಿಗೆ ತಿಳುವಳಿಕೆ ಮಾಡಿಕೊಡಬೇಕಾಗಿತ್ತೋ ಅವರು ಆ ಕೆಲಸ ಮಾಡಲಿಲ್ಲ. ಅರಸು ಅವರಿಗೆ ಒಬ್ಬಳು ಸಾಕುಮಗಳಿದ್ದಳು. ಅವಳು ಐಪಿಎಸ್ ಆಧಿಕಾರಿಯಾಗಿದ್ದಳು. ಅರಸು ಅವರನ್ನು ತಪ್ಪುದಾರಿಗೆಳೆಯುವಲ್ಲಿ ಅವಳ ಪಾತ್ರವೂ ಬಹಳಷ್ಟು ಇತ್ತು.
ಒಂದು ಸಣ್ಣ ಅರ್ಥದಲ್ಲಿ ದೇವರಾಜ ಅರಸು ಸ್ವಾಭಿಮಾನ ಮತ್ತು ಓವರ್ ಕಾನ್ಫಿಡೆನ್ಸ್ ಅವರನ್ನು ಹೀಗೆ ಪ್ರೇರೇಪಿಸಿತು ಎಂದೆನಿಸುತ್ತದೆ. ಕೆಲವು ಕೇಂದ್ರದ ನಾಯಕರು ಸಹ ಅವರಿಗೆ ಕುಮ್ಮಕ್ಕು ನೀಡಿ ರಾಷ್ಟ್ರ ನಾಯಕತ್ವದ ಕನಸನ್ನು ಅವರಲ್ಲಿ ಹುಟ್ಟಿಸಿದ್ದರು ಎಂದು ಕಾಣುತ್ತದೆ.
 ಈ ಸಂದರ್ಭದಲ್ಲಿ ಒಂದು ಘಟನೆ ನನಗೆ ನೆನಪಿಗೆ ಬರುತ್ತಿದೆ. 1978ರ ರಾಜ್ಯಸಭಾ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿತ್ತು. ಕರ್ನಾಟಕದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅದಕ್ಕೆ ಇಂದಿರಾಗಾಂಧಿ ಅವರ ಅನುಮತಿಯನ್ನು ಪಡೆಯಲು ದೇವರಾಜ ಅರಸು ಆ ಪಟ್ಟಿಯನ್ನು ನನ್ನ ಕೈಯಲ್ಲಿ ಕೊಟ್ಟು ದಿಲ್ಲಿಗೆ ಕಳುಹಿಸಿದ್ದರು. ನಾನು ಆ ಪಟ್ಟಿಯನ್ನು ಹಿಡಿದುಕೊಂಡು ದಿಲ್ಲಿಯ ವಿಲ್ಲಿಂಗ್‌ಟನ್ ಅನೆಕ್ಸ್ ಎಂಬಲ್ಲಿಯ ಇಂದಿರಾಗಾಂಧಿ ನಿವಾಸಕ್ಕೆ ಹೋಗಿದ್ದೆ. ಪಡಸಾಲೆಯಲ್ಲಿ ನಾನು ಕುಳಿತು ಅವರಿಗಾಗಿ ಕಾಯುತ್ತಿರುವಾಗ ಖುದ್ದು ಇಂದಿರಾಗಾಂಧಿ ಅವರು ಕೈಯಾರೆ ಒಂದು ಕಪ್ ಕಾಫಿ ಹಿಡಿದುಕೊಂಡು ಬಂದು ನನಗೆ ಕೊಟ್ಟರು, ಎದ್ದು ನಿಂತಿದ್ದ ನನ್ನನ್ನು ಕುಳಿತುಕೊಳ್ಳಲು ಹೇಳಿ ಅವರು ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡರು. ಹೀಗೆ ವಿಷಯ ಮಾತನಾಡುತ್ತಾ ‘‘ನಿಮ್ಮ ಅರಸು ಹೀಗೇಕೆ ಮಾಡುತ್ತಿದ್ದಾರೆ? ನಾನೇನು ಮಾಡಿದ್ದೇನೆ ಅವರಿಗೆ?’’ ಎಂದು ಕೇಳಿದರು.
ನಾನು ‘‘ಅವರೇನು ಮಾಡಿದ್ದಾರೆ ಮೇಡಂ?’’ ಎಂದು ಕೇಳಿದೆ. ‘‘ಅವರೇಕೆ ರಜನಿ ಪಟೇಲರ ಜೊತೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ?.’’ ಇಂದಿರಾಗಾಂಧಿ ಮತ್ತೇನನ್ನೂ ಕೇಳಲಿಲ್ಲ.
ಈ ವಿಷಯ ಇಂದಿರಾಗಾಂಧಿ ನನ್ನ ಬಳಿ ಯಾಕೆ ಕೇಳಿದ್ದು ಗೊತ್ತಾ? ನಾನೇನು ದೊಡ್ಡ ಜನಾಂತ ಏನೂ ಹೇಳಿದ್ದಲ್ಲ. ನನ್ನನ್ನು ಅವರು ಸಂದೇಶವಾಹಕನಾಗಿ ಬಳಸಿಕೊಂಡರು. ಅವರಿಗೆ ಗೊತ್ತು ಈ ವಿಷಯ ನಾನು ಹೋಗಿ ಅರಸು ಅವರಿಗೆ ತಲುಪಿಸುತ್ತೇನೆ ಎಂದು ಬೆಂಗಳೂರಿಗೆ ಹಿಂದಿರುಗಿದ ನಾನು ಅರಸು ಅವರಿಗೆ ಇಂದಿರಾಗಾಂಧಿ ಅವರು ವ್ಯಕ್ತ ಪಡಿಸಿದ ಈ ವಿಷಯವನ್ನು ಮುಟ್ಟಿಸಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅರಸು ‘‘ಅಯ್ಯೋ, ಆ ಅಮ್ಮ ಬಹಳ ಡೌಟು ಮಾಡ್ತಾರೆ ಮಾರಾಯ. ಏಕೆ ಹೀಗೆ ಮಾಡ್ತಾರೆ ಅವರು. ನಾನು ಅಂತಹದ್ದು ಏನೂ ಇಟ್ಟುಕೊಳ್ಳಲಿಲ್ಲ. ನನ್ನ ರಾಜ್ಯವನ್ನೇ ಪಣಕ್ಕಿಟ್ಟು ಆ ಅಮ್ಮನನ್ನು ಕರೆದು ಹೋರಾಡಿ ಅವರನ್ನು ಗೆಲ್ಲಿಸಿ ಕಳುಹಿಸಿದ್ದೇನೆ. ನಾನವರಿಗೆ ಮೋಸ ಮಾಡ್ತೇನಾ? ಎಂದು ವಿಷಾದಿಸಿದರು.
ಅರಸು ಅವರು ಆಡಿದ ಆ ಮಾತಿನ ಒಂದೊಂದು ಪದಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಅರಸು ಮತ್ತು ಇಂದಿರಾ ಮಧ್ಯೆ ಈ ಬಿರುಕನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಜಾಫರ್ ಶರೀಫ್, ಗುಂಡೂರಾವ್, ಎಫ್‌ಎಂ ಖಾನ್ ಮತ್ತು ಬಂಗಾರಪ್ಪ.
ಸುಬ್ಬಯ್ಯ ಶೆಟ್ಟಿ, ರಂಗನಾಥ್ ಇವರೆಲ್ಲ ಮನಸ್ಸು ಮಾಡಿದ್ದರೆ ಖಂಡಿತ ಈ ವಿಭಜನೆಯನ್ನು ತಪ್ಪಿಸಬಹುದಿತ್ತು. ನಾನು ಮತ್ತು ನನ್ನಂತಹ ಕೆಲವರು,‘‘ ನಾವು ಎಲ್ಲವನ್ನೂ ಇಂದಿರಾಗಾಂಧಿ ಹೆಸರಲ್ಲೇ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಕ್ರಮ ಎಲ್ಲಾ ನಿಮ್ಮದೇ ಆಗಿದ್ದಿರಬಹುದು. ಆದರೆ ಜನರಿಗೆ ಗೊತ್ತಿರುವುದು ಇಂದಿರಾಗಾಂಧಿ ಹೆಸರು ಮಾತ್ರ.’’ ಎಂದು ವಾದಿಸಿದೆವು. ಹಿರಿಯ ನಾಯಕರ ಎದುರಿನಲ್ಲಿ ನಮ್ಮ ಈ ವಾದಕ್ಕೆ ಬೆಲೆ ಸಿಗಲಿಲ್ಲ. ಅರಸು ಅವರಿಗೆ ಸರಿಯಾದ ಸಲಹೆ ನೀಡುವುದರಲ್ಲಿ ಹಿರಿಯ ನಾಯಕರು ಮಾಡಿದ ಪ್ರಮಾದದಿಂದಾಗಿ ಪಕ್ಷ ವಿಭಜನೆಯಾಯಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top