ಸಾರ್ವಜನಿಕ ದ್ವಿಮುಖಗಳು | Vartha Bharati- ವಾರ್ತಾ ಭಾರತಿ

---

ಸಾರ್ವಜನಿಕ ದ್ವಿಮುಖಗಳು

ನಾವು ವಿಶ್ಲೇಷಿಸುವ ಅನೇಕ ಸುದ್ದಿಗಳು ನಿಜವೆಂಬ ಖಾತ್ರಿ ನಮಗಿರುವುದಿಲ್ಲ. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಎಷ್ಟೊಂದು ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿವೆಯೆಂದರೆ ಅವೀಗ ಬಹುಮತದಲ್ಲಿರುವುದರಿಂದ ಅವನ್ನೇ ಸತ್ಯವೆಂದು ಸ್ವೀಕರಿಸುವ ಅನಿವಾರ್ಯತೆಯಲ್ಲಿ ಸಮಾಜವಿದೆ.

ಮಾಧ್ಯಮಗಳನ್ನು ಟೀಕಿಸುವಾಗಲೂ ಹಂಸಕ್ಷೀರನ್ಯಾಯವನ್ನು ಬಳಸಬೇಕೆಂಬುದು ನ್ಯಾಯ. ಎಲ್ಲ ಸುದ್ದಿಗಳೂ ಕೆಟ್ಟದಾಗಿ ವರದಿಯಾಗಿರುವುದಿಲ್ಲ; ಹಾಗೆಯೇ ಎಲ್ಲ ಸುದ್ದಿಗಳೂ ಸರಿಯಾಗಿ ವರದಿಯಾಗಿರುವುದಿಲ್ಲ. ಸನ್ಯಾಸಿಗಳ ಹಾಗೆ ಪತ್ರಕರ್ತರಿಗೂ ಅವರದ್ದೇ ಆದ ಸಾಂಸಾರಿಕ ಒತ್ತಡಗಳಿರುವುದರಿಂದ ಅವರು ಆಮಿಷಗಳನ್ನು ಮೀರಿ ದುಡಿಯಬೇಕೆಂದು ಅಪೇಕ್ಷಿಸುವುದು ಇಂದಿನ ಉಪಭೋಗತಾ ಸಂದರ್ಭದಲ್ಲಿ ತಪ್ಪಾಗುತ್ತದೆ. ಯಾರಾದರೂ ಇನ್ನೂ ಡಿವಿಜಿಯವರ ಕಾಲದಲ್ಲೇ ಇದ್ದೇವೆಂದುಕೊಂಡು ದುಡಿದರೆ ಅದು ಅವರ ಪ್ರಾರಬ್ಧ; ಸಮಾಜದ ಅದೃಷ್ಟ.

ಇದನ್ನೇಕೆ ಹೇಳಿದೆನೆಂದರೆ ನಾವು ವಿಶ್ಲೇಷಿಸುವ ಅನೇಕ ಸುದ್ದಿಗಳು ನಿಜವೆಂಬ ಖಾತ್ರಿ ನಮಗಿರುವುದಿಲ್ಲ. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಎಷ್ಟೊಂದು ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿವೆಯೆಂದರೆ ಅವೀಗ ಬಹುಮತದಲ್ಲಿರುವುದರಿಂದ ಅವನ್ನೇ ಸತ್ಯವೆಂದು ಸ್ವೀಕರಿಸುವ ಅನಿವಾರ್ಯತೆಯಲ್ಲಿ ಸಮಾಜವಿದೆ. ಗುಣಾವಲೋಕನಕ್ಕೆ ವ್ಯವಧಾನವಿಲ್ಲದಷ್ಟು ವೇಗವಾಗಿ ಜಗತ್ತು ಸಾಗುತ್ತಿರುವುದರಿಂದ ಮುಂದೆಯಿರುವವನು ಹೇಗೆ ಮುಂದೆ ಹೋದ ಎಂಬುದನ್ನು ಯಾರೂ ಚರ್ಚಿಸುವುದಿಲ್ಲ; ಬದಲಾಗಿ ಅದೇ ಸರಿಯಾದ ಹಾದಿಯೆಂಬ ನಿರ್ಣಯದಲ್ಲಿ ತಾವೂ ಕುರಿಮಂದೆಯಂತೆ ಓಡುತ್ತಿರುತ್ತಾರೆ. ಹೀಗಾಗಿ ಸರಿ-ತಪ್ಪುಗಳ ತಾರ್ಕಿಕ ತೀರ್ಪಿಗೆ ಅವಕಾಶವೇ ಇಲ್ಲದಾಗಿದೆ.

ಇವು ಗೊಂದಲವನ್ನು ಸೃಷ್ಟಿಸುವಂತೆ ಅನ್ನಿಸಬಹುದು. ಆದರೆ ಇಂತಹ ಸುದ್ದಿಗಳ ಆಧಾರದಲ್ಲೇ ಅಭಿವ್ಯಕ್ತಿಗೊಳ್ಳುವ ವಿವೇಚನೆಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ಸರಿ, ಯಾವುದು ತಪ್ಪು, ಯಾವುದು ನ್ಯಾಯ, ಯಾವುದು ಅನ್ಯಾಯ ಎಂದು ಹೇಳುವವರು ಯಾರು? ಹೇಳಿದರೂ ಅದಕ್ಕಿರುವ ಮನ್ನಣೆಯೇನು?

ಕರ್ನಾಟಕದ ಉನ್ನತ ಶಿಕ್ಷಣ ಸಚಿವರೊಬ್ಬರು ಸಾರಿಗೆ ನಿಯಮಗಳನ್ನು ಕಠಿನವಾಗಿ ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು ಹೆಲ್ಮೆಟ್-ಹಾಕದಿದ್ದರೆ ಅಲ್ಲ- ಹಾಕದೆ ಸಿಕ್ಕಿಬಿದ್ದರೆ ದಂಡ ವಿಧಿಸಬಾರದೆಂಬ ಹಿತವಚನವನ್ನು ಹೇಳಿದರೆಂದು ವರದಿಯಾಯಿತು. ಈ ಸುದ್ದಿ ಸತ್ಯವೋ ಸುಳ್ಳೋ ಗೊತ್ತಿಲ್ಲ; ಅಂತೂ ಸುದ್ದಿಯಾಯಿತು. ಇದನ್ನು ಬೆಂಬಲಿಸಲೂ ಜನರಿದ್ದಾರೆ; ವಿರೋಧಿಸಲೂ ಜನರಿದ್ದಾರೆ. ಈಗ ಒಂದು ಚಿಕ್ಕ ಪ್ರಶ್ನೆ: ದ್ವಿಚಕ್ರ ವಾಹನವನ್ನು ಕೊಳ್ಳಲು, ಅದಕ್ಕೆ ಪೆಟ್ರೋಲ್ ಹಾಕಿ ಓಡಿಸಲು ಹಣವಿರುವವರಿಗೆ ಅದಕ್ಕೊಂದು ಹೆಲ್ಮೆಟ್ ಕೊಳ್ಳಲು ಹಣವಿರುವುದಿಲ್ಲವೇ ಎಂದು ಕೇಳಬೇಕು. ಹೀಗೆ ಕೇಳುವುದು ಜನಪ್ರಿಯವಲ್ಲದ ಧಾಟಿ. ಆದರೆ ಬಹುತೇಕ ಮಾಧ್ಯಮಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳಿಗೆ ಬಸ್ ಪಾಸಿನ ವಿಚಾರವೊಂದು ಈಗ ಚರ್ಚೆಯಲ್ಲಿದೆ. ಕರ್ನಾಟಕದ ಈಗಿನ ಸರಕಾರ ಎಲ್ಲರಿಗೂ ಬಸ್ ಪಾಸ್ ನೀಡಲು ಸಾಧ್ಯವಿಲ್ಲವೆಂಬ ಜನಪ್ರಿಯವಲ್ಲದ ನಿರ್ದಾರವನ್ನು ಹೇಳಿತು. ತಕ್ಷಣ ಎಲ್ಲ ಸರಸ್ವತಿಪುತ್ರರು ತಮ್ಮ ವಿದ್ಯೆ ನಿಂತಿರುವುದೇ ಈ ಬಸ್‌ಪಾಸಿನ ಮೇಲೆಂಬಂತೆ ಸಂಘಟಿತರಾಗಿ ಈ ಕುರಿತು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಇವುಗಳ ಹಿಂದೆ ಸ್ಥಾಪಿತ ಹಿತಾಸಕ್ತಿಯ ವಿರೋಧ ಪಕ್ಷಗಳು ಮತ್ತವುಗಳ ವಿದ್ಯಾರ್ಥಿ ಸಂಘಟನೆಗಳು ಕೆಲಸಮಾಡುತ್ತಿವೆಯಾದರೂ ಹೆತ್ತವರ ಕಾಳಜಿಯೇನು? ಮುಖ್ಯಮಂತ್ರಿಗಳು ಈ ಕುರಿತು ಖಾಸಗಿ ಶಾಲೆಗಳಿಗೆ ಲಕ್ಷಗಟ್ಟಲೆ ದೇಣಿಗೆ ನೀಡಿ ಇನ್ನೂ ಹತ್ತಾರು ಸವಲತ್ತುಗಳಿಗೆ ಹಣ ನೀಡಿ ಹೋಗುವವರಿಗೆ ಸರಕಾರ ಬಸ್ ಪ್ರಯಾಣದಲ್ಲಷ್ಟೇ ರಿಯಾಯಿತಿಯನ್ನೇಕೆ ನೀಡಬೇಕೆಂದು ಕೇಳಿ, ಸರಕಾರಿ ಶಾಲಾ ವಿದ್ಯಾರ್ಥಿಗಳಿಗಷ್ಟೇ ಈ ವಿನಾಯಿತಿ ಲಭ್ಯವೆಂದರು. ಅವರು ರಾಜಕೀಯವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದರೆಂದು ನಂಬಿದರೂ ಅದರಲ್ಲಿ ಸತ್ಯಾಂಶವಿತ್ತು. ಆದರೆ ನಮ್ಮ ಮಾಧ್ಯಮಗಳು ಇವುಗಳನ್ನು ಬೆಂಬಲಿಸದೆ ಬರೀ ಸುದ್ದಿಯಾಗಿ ಪ್ರಕಟಿಸಿ ಖಾಸಗೀ ಶಾಲಾ ವಿದ್ಯಾರ್ಥಿಗಳ ವಕ್ತಾರರಂತೆ ಮಾತ್ರವಲ್ಲ-ಅವುಗಳ ಮಾಲಕರ ವಕ್ತಾರರಂತೆ ಸರಕಾರವನ್ನು ಟೀಕಿಸುವುದನ್ನು ಗಮನಿಸಿದರೆ ಮಾಧ್ಯಮಗಳ ಉದ್ದೇಶವೇನೆಂದು ಸಂಶಯಪಡಬೇಕು. ಹಜ್ ಯಾತ್ರೆಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದಾಗ ಎಲ್ಲರೂ ಹರ್ಷೋದ್ಗಾರದಿಂದ (ಕೆಲವರು ಸಾರ್ವಜನಿಕ ಅನಿವಾರ್ಯತೆಯಿಂದ) ಸ್ವಾಗತಿಸಿದರು. ಅದರಿಂದ ದೇಶ ದಿವಾಳಿಯಾಗುತ್ತಿತ್ತೆಂದು ಘೋಷಿಸಿದರು. ಅದರ ಆರ್ಥಿಕ ಪರಿಣಾಮಗಳು ನಿಜಾರ್ಥದಲ್ಲಿ ಗೌಣವಾದರೂ ಅದೊಂದು ನೈತಿಕ ಮೌಲ್ಯವನ್ನು ಸಂವರ್ಧಿಸುವ ಪ್ರಯತ್ನವಾಗಿತ್ತು. ಮಾಧ್ಯಮಗಳು ಇದಕ್ಕೆ ಭಾರೀ ಪ್ರಚಾರ ನೀಡಿದವು. (ಸಾಲ ಮಾಡಿ ಹಜ್ ಕೈಗೊಳ್ಳಬಾರದೆಂದು ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು. ಇದನ್ನು ಮಾರ್ಮಿಕವಾಗಿ ‘ಆದಮಿಂಡೆ ಮಗನ್ ಅಬು’ ಎಂಬ ಒಂದು ಮಲೆಯಾಳ ಚಿತ್ರದಲ್ಲಿ ನಿರೂಪಿಸಲಾಗಿತ್ತು!) ಅಡುಗೆ ಅನಿಲದ ಕುರಿತ ಸಬ್ಸಿಡಿಯನ್ನು ಬಿಟ್ಟುಕೊಡಲು ಸರಕಾರ ಭಾರೀ ಜಾಹೀರಾತಿನೊಂದಿಗೆ ಆಹ್ವಾನಿಸಿತು. ಆದರೆ ಇದರ ಆರ್ಥಿಕ ಪರಿಣಾಮ ಬಹಳ ಕಡಿಮೆಯಿತ್ತು. (ಇದನ್ನು ಹುರಿದು ತಿನ್ನುವಂತೆ ಸರಕಾರ ಅಯೋಮಯವಾದ ಅನೇಕ ವೆಚ್ಚಗಳನ್ನು ಮುಖ್ಯವಾಗಿ ವಿದೇಶ ಪ್ರವಾಸಗಳ ಮೂಲಕ ಮಾಡಿದ್ದು ಕಣ್ಣಿಗೆ ರಾಚುವಂತಿದೆ.) ಆದರೂ ಇದೊಂದು ಮೌಲ್ಯಯುತ ಬೆಳವಣಿಗೆಯೆಂದು ಮಾಧ್ಯಮಗಳು ಭಾವಿಸುವುದಕ್ಕೆ ಕಾರಣವಿದ್ದಿತು. ಸಾಲ ಮನ್ನಾದ ಕುರಿತೂ ಅಷ್ಟೇ: ನಿಜಕ್ಕೂ ಸಾಲ ಮನ್ನಾ ಎಂಬುದು ವಾಸ್ತವದಲ್ಲಿ ಸಬ್ಸಿಡಿಯೇ. ಕೇಂದ್ರ ಸರಕಾರವು ಕಾರ್ಪೊರೇಟ್ ಜಗತ್ತಿನ ಲಕ್ಷಾನುಗಟ್ಟಲೆ ಸಾಲವನ್ನು ಮನ್ನಾ ಮಾಡಿದ್ದು ಗುಟ್ಟಾಗಿ ಉಳಿಯುವುದರಲ್ಲಿ ಮಾಧ್ಯಮಗಳ ಪಾತ್ರವಿದೆ. ಅವು ಈ ಬೆಳವಣಿಗೆಯನ್ನು ಗಮನಿಸಲಿಲ್ಲವೆಂದಲ್ಲ. ಆದರೆ ಅವು ಜನರ ಗಮನವನ್ನು ಸೆಳೆಯದ ರೀತಿಯಲ್ಲಿ ಪ್ರಕಟಿಸಿ ಕೈತೊಳೆದುಕೊಂಡವು. ಆದರೆ ಕರ್ನಾಟಕದಲ್ಲಿ ಕೃಷಿಸಾಲ ಮನ್ನಾ ಇಂತಹ ಒಂದು ಸಬ್ಸಿಡಿಯೆಂದೂ ಇದನ್ನು ನಿಲ್ಲಿಸಬೇಕೆಂದು ವಕಾಲತ್ತು ಮಾಡುವವರು ಯಾರೂ ಇಲ್ಲ. ಹಜ್, ಅಡುಗೆ ಅನಿಲ ಮುಂತಾದ ರಿಯಾಯಿತಿಗಳನ್ನು ಹಿಂದಕ್ಕೆ ಪಡೆದಾಗ ಮಾಧ್ಯಮಗಳು ಮಾಡಿದ ಪ್ರಚಾರವನ್ನು ಕೃಷಿಸಾಲ ಮನ್ನಾದ ವಿರುದ್ಧವಾಗಿ ಅಭಿಪ್ರಾಯ ಸಂಗ್ರಹಣೆಗೆ ವಿನಿಯೋಗಿಸುವುದಿಲ್ಲವೇಕೆ? ಅಥವಾ ಒಂದು ವೇಳೆ ಈ ಮನ್ನಾ ಸರಿಯೇ ಆದರೆ ಹಜ್ ಅಥವಾ ಅಡುಗೆ ಅನಿಲದ ಕುರಿತು ಇಂತಹ ವಾದವನ್ನು ಮಂಡಿಸಲಿಲ್ಲವೇಕೆ?

ಇತ್ತೀಚೆಗೆ ಸರಕಾರವು ದೇಶದ ಆರು ಸಂಸ್ಥೆಗಳನ್ನು ಉನ್ನತ ಮೌಲ್ಯದ ಶಿಕ್ಷಣ ಸಂಸ್ಥೆಗಳೆಂದು ಪರಿಗಣಿಸಿ ಅವಕ್ಕೆ ಭಾರೀ ದೇಣಿಗೆಗಳನ್ನು ಘೋಷಿಸಿತು. ಇವುಗಳಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾದದ್ದು ಇನ್ನೂ ಹುಟ್ಟಿರದ ಜಿಯೋ ವಿಶ್ವವಿದ್ಯಾನಿಲಯ. ಅಂಬಾನಿಯವರದೆಂಬ ಕಾರಣಕ್ಕಷ್ಟೇ ಈ ಇನ್ನೂ ಹುಟ್ಟದ ಶಿಶುವಿಗೆ ಹೊಲಿಸಿದ ಕುಲಾವಿಯನ್ನು ಮಾಧ್ಯಮಗಳು ಬಹುತೇಕ ಜನರ ಗಮನಕ್ಕೆ ಬಾರದಂತೆ ಕಾಪಾಡಿದ್ದವು. ಗೊತ್ತಾದವರೂ ಅದನ್ನು ಶ್ರೀಸಾಮಾನ್ಯನಿಗೆ ತಲುಪಿಸಲು ಮಾಧ್ಯಮಗಳು ನೆರವಾಗುತ್ತಿಲ್ಲ. ಇದು ಅನೇಕ ಕಾಲ ಚರ್ಚೆಯಾಗಬೇಕಾದ ವಿಚಾರವಾದರೂ ಈಗಾಗಲೇ ಜನಮನದಿಂದ ಮರೆಯಾಗುವ ಲಕ್ಷಣವಿದೆ. ಇದರಲ್ಲಿ ಮಾಧ್ಯಮಗಳ ಕೊಡುಗೆ ಅಪಾರ.

ಇಂತಹ ನೂರೆಂಟು ಉದಾಹರಣೆಗಳು ಈ ದೇಶದಲ್ಲಿ ಸಿಗುತ್ತವೆ. ಈಚೆಗೆ ಸ್ವಾಮಿ ಅಗ್ನಿವೇಶರ ಮೇಲೆ ಧಾರ್ಮಿಕ ಮೂಲಭೂತವಾದಿಗಳು ಗೂಂಡಾಗಿರಿ ಮಾಡಿದಾಗ ಇದೊಂದು ಮಾಮೂಲು ಕ್ರಿಮಿನಲ್ ಪ್ರಕರಣವೆಂಬಂತೆಯೂ ವರದಿಸದೆ ಒಬ್ಬ ಕುಖ್ಯಾತ ಕ್ರಿಮಿನಲ್‌ನ ಮೇಲೆ ಸಜ್ಜನರು ದಾಳಿ ಮಾಡಿದಂತೆ ವರದಿ ಮಾಡಿದ ಮಾಧ್ಯಮಗಳೂ ಇದ್ದವು. ರಾಜಸ್ಥಾನದಲ್ಲಿ ಗೋರಕ್ಷಣೆಯ ನೆಪದಲ್ಲಿ ನಡೆದ ನರಭಕ್ಷಣೆಯಲ್ಲಿ ಜನರೊಂದಿಗೆ ಪೊಲೀಸರೂ ಶಾಮೀಲಾದದ್ದು ಬೆಚ್ಚಿಬೀಳಿಸುವಂತಿದೆ. (ಇಂತಹ ಘಟನೆಯೊಂದು ಉಡುಪಿಯ ಸಮೀಪ ಕೆಲಸಮಯದ ಹಿಂದೆ ನಡೆದಿತ್ತು!)

ಕೇರಳದಲ್ಲಿ ಲೇಖಕನೊಬ್ಬ ಮೂಲಭೂತವಾದಕ್ಕೆ ಬಲಿಯಾಗುವ ಭಯದಿಂದ ತನ್ನ ಕೃತಿಯೊಂದನ್ನು ಧಾರಾವಾಹಿ ಪ್ರಕಟಣೆಯಿಂದ ಹಿಂದೆಗೆದುಕೊಂಡದ್ದು ಬಹಿರಂಗವಾಗಿದೆ. ಇದಕ್ಕೆ ಬಹಳಷ್ಟು ಜನರು ತವಕ-ತಲ್ಲಣಗಳೊಂದಿಗೆ ಪ್ರತಿಕ್ರಿಯಿಸಿದರೆ ಅನೇಕ ಮಾಧ್ಯಮಗಳು ತಮಗೆ ಇದರಲ್ಲಿ ಯಾವ ಜವಾಬ್ದಾರಿಯೂ ಇಲ್ಲವೇನೋ ಎಂಬಂತೆ ಅವನ್ನು ಮಾಮೂಲು ಸುದ್ದಿಯಂತೆ ವರದಿಮಾಡಿವೆ. (ಕಳೆದ ವರ್ಷ ತಮಿಳು ಲೇಖಕ ಪೆರುಮಾಳ್ ಮುರುಗನ್ ತಮ್ಮ ‘ಮಧೋರುಭಾಗಂ’ ಎಂಬ ಕೃತಿಯನ್ನು ಮೂಲಭೂತವಾದಿ ಮತಾಂಧರ ಬಲವಂತಕ್ಕೆ ಹಿಂದೆ ಪಡೆದ ಘಟನೆ ನಡೆದು ಕೊನೆಗೆ ಉಚ್ಚ ನ್ಯಾಯಾಲಯವೇ ಅವರ ರಕ್ಷಣೆಗೆ ಬರಬೇಕಾಯಿತು!)

ಈಗ ಒಂದೆರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿನ ಅಂತರ್‌ಧರ್ಮೀಯ ವಿವಾಹವೊಂದನ್ನು ಮೂಲಭೂತವಾದಿಗಳು ತಡೆಯಲು ಪ್ರಯತ್ನಿಸಿದಾಗ ಪೊಲೀಸರೂ ಅದರಲ್ಲಿ ಶಾಮೀಲಾದದ್ದು ಬೆಳಕಿಗೆ ಬಂದು ಕರ್ನಾಟಕದ ಉಚ್ಚ ನ್ಯಾಯಾಲಯವೇ ಆ ದಂಪತಿಯ ರಕ್ಷಣೆಗೆ ಬರಬೇಕಾಯಿತು ಮಾತ್ರವಲ್ಲ ಪೊಲೀಸರಿಗೆ ವಿವಾಹದ, ಪ್ರೀತಿಯ ಪಾಠ ಹೇಳಿತು. ಇದು ಎಲ್ಲ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಗಬೇಕಿತ್ತು ಮಾತ್ರವಲ್ಲ ಅದನ್ನೇ ಆಧಾರವಾಗಿಟ್ಟುಕೊಂಡು ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಡೀಕರಿಸುವುದು ಮುಖ್ಯವಾಗಬೇಕಿತ್ತು. ಆದರೆ ನಮ್ಮ ಬಹುತೇಕ ಮಾಧ್ಯಮಗಳು ಎಲ್ಲ ವಿಚಾರಗಳಲ್ಲೂ ಪರ-ವಿರೋಧ ಅಭಿಪ್ರಾಯಗಳಿಗೆ ಸಮಾನ ಅವಕಾಶ ನೀಡುವ ನೀತಿಯನ್ನು ವಿಕೃತ ರೀತಿಯಲ್ಲಿ ವಿಸ್ತರಿಸಿ ಪ್ರಗತಿಪರರಿಗೂ ಮೂಲಭೂತವಾದಿಗಳಿಗೂ ಸಮಾನ ಅವಕಾಶ ನೀಡಿ ಸಾಮಾಜಿಕ ವ್ಯವಸ್ಥೆಯನ್ನು ಹಿನ್ನಡೆಯಲು ನೆರವಾಗುತ್ತವೆ. ದಿನನಿತ್ಯ ನಡೆಯುತ್ತಿರುವ ಇಂತಹ ಅಕ್ರಮಗಳ ವಿರುದ್ಧ ಎಲ್ಲರಿಗಿಂತ ಮೊದಲು ಸಿಡಿದು ಬೀಳಬೇಕಾದವರು ಮಾಧ್ಯಮಗಳು. 1975ರಲ್ಲಿ ತುರ್ತುಸ್ಥಿತಿ ಎದುರಾದಾಗ ಕಪ್ಪು ಖಾಲಿಪುಟಗಳನ್ನು ಪ್ರಕಟಿಸಿ ಜೈಲು ಸೇರಿದ ಪತ್ರಿಕಾ ಸಂಪಾದಕರಿದ್ದರು. ಆದರೆ ಈಗ ಅವೇ ಈ ಅಕ್ರಮಗಳಿಗೆ ಪ್ರೋತ್ಸಾಹ ನೀಡುವವರಂತೆ ವರದಿಸಿದರೆ ಭವಿಷ್ಯ ಹೇಗಿದ್ದೀತು? ತಾವು ಸಂವಿಧಾನದ ನಾಲ್ಕನೇ ಆಧಾರವೆಂಬಂತೆ ಸವಲತ್ತುಗಳನ್ನು ಬೇಡುವ ಮಾಧ್ಯಮಗಳು ಸಂವಿಧಾನದ ಕುಸಿತಕ್ಕೆ ಕಾರಣವಾದರೆ ಅವುಗಳ ಪ್ರಸ್ತುತತೆ ಏನಿದ್ದೀತು? ಬರೀ ವರದಿಸುವುದಾದರೆ ತಾವು ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಿಗೆ ಹರಿಕಾರರಾಗುವ, ಇಲ್ಲವೆ ಬೆಳಕಾಗುವ ಘೋಷಣೆಗಳಿಗೆ ಏನು ಬೆಲೆ ಬಂದೀತು? ನಮ್ಮ ಹಿರಿಯ ರಾಜಕಾರಣಿಯೂ ನಿಷ್ಠುರ ಮಾತುಗಳಿಗೆ ಹೆಸರಾದವರೂ ಆದ ಎ. ಕೆ. ಸುಬ್ಬಯ್ಯನವರು ತಾವೆಂದೂ ನಿಷ್ಪಕ್ಷಪಾತಿಗಳಲ್ಲವೆಂದೂ ತಾವು ಸತ್ಯಪಕ್ಷಪಾತಿಗಳೆಂದೂ ಹೇಳುತ್ತಿದ್ದರು. ಹೀಗೆ ಹೇಳುವ ಧೈರ್ಯ, ನಿಯತ್ತು ಮಾಧ್ಯಮಗಳಿಗೇಕಿಲ್ಲ? ಸಾರ್ವಜನಿಕ ಹಣದ ಸರಕಾರಿ ಜಾಹೀರಾತಿಗೆ ಕೈಯೊಡ್ಡುವ ಮಾಧ್ಯಮಗಳು ತಾವು ಪಡೆಯುವ ಮತ್ತು ಬಳಸುವ ಸಾರ್ವಜನಿಕ ಹಣವನ್ನು ದೇವರ ಹುಂಡಿಯ ದುಡ್ಡಿನಂತೆ ಸತ್ಕಾರ್ಯಗಳಿಗೆ ಮಾತ್ರ ಬಳಸುವುದು ತಮ್ಮ ಕರ್ತವ್ಯವೆಂದು ಬಗೆಯಬೇಕು.

ದುರಂತವೆಂದರೆ ನಮ್ಮ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಪರ-ವಿರುದ್ಧ ಪ್ರತಿಕ್ರಿಯೆಗಳನ್ನು ಪ್ರಕಟಿಸುವಾಗ ಅಥವಾ ಪ್ರಕಟಿಸಲು ಅವಕಾಶ ನೀಡುವಾಗ ಎಳ್ಳಷ್ಟೂ ವಿವೇಚನೆಗೆ ಒಳಗಾಗುವುದಿಲ್ಲ. ಬಹಳಷ್ಟು ಪ್ರಚಾರ ನಡೆಸಿದ ಆನಂತರ ಕೆಲವೊಂದು ಗುಂಪುಗುಳಿತನಗಳಿಗೆ ನಿಯಂತ್ರಣವನ್ನು ಅವು ವಿಧಿಸುತ್ತವೆ. ಅಷ್ಟರಲ್ಲಿ ಸಾಕಷ್ಟು ಹಾನಿಯಾಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಜನರು ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಖಂಡಿಸಬೇಕಾದ್ದು ಮಾಧ್ಯಮಗಳ ಕರ್ತವ್ಯ. ಅವು ಜನಾಭಿಪ್ರಾಯ ಸಂಗ್ರಹಣೆಯ ಮಹತ್ವದ ಕಾರ್ಯವನ್ನು ವಿರೋಧಪಕ್ಷಗಳಂತೆ ಕೈಗೊಳ್ಳಬೇಕು. ಆದರೆ ಅವೂ ಗುಪ್ತ ಕಾರ್ಯಸೂಚಿಗಳನ್ನು ಒಳಗೊಂಡವರಂತೆ ವರ್ತಿಸುತ್ತಿರುವುದನ್ನು ಕಾಣಬಹುದು; ಗುರುತಿಸಬಹುದು. ಇದಕ್ಕೆ ಕಾರಣವಿಲ್ಲದಿಲ್ಲ. ಮಾಧ್ಯಮಗಳ ಒಡೆತನವಿರುವುದು ಕಾರ್ಪೊರೇಟ್ ಜಗತ್ತಿನಲ್ಲಿ. ಅವರಿಷ್ಟಾನಿಷ್ಟಗಳಿಗನುಗುಣವಾಗಿ ವರ್ತಿಸದಿದ್ದರೆ ಅಲ್ಲಿ ದುಡಿಯುವ ಪತ್ರಕರ್ತರ ಬದುಕು ಕತ್ತಲಾಗುತ್ತದೆ. ಇದೇ ನಿಮಿತ್ತವಾಗಿ ಅನೇಕರು ಯಾವುದಾದರೊಂದು ಆಡಳಿತದ ಏಜಂಟರಂತೆ ವರ್ತಿಸುತ್ತಾರೆ. ಅದರಲ್ಲೂ ರಾಜಕೀಯವಾದ ಮಾರ್ಗಸೂಚಿಗಳನ್ನು ಹೊಂದಿದವರು ಎಂತಹ ಮಾತು, ಅಭಿಮತ, ಅಭಿಪ್ರಾಯಗಳು ಬಂದರೂ ಅವನ್ನು ಮಾಧ್ಯಮ ವಿವೇಚನೆಯ ನೆಪದಲ್ಲಿ ತಿರುಚಿ ತಮಗೆ ಬೇಕಾದಂತೆ ಪ್ರಕಟಿಸುವುದು ರಹಸ್ಯವೇನಲ್ಲ. ಮಾಧ್ಯಮಗಳು ಮಧ್ಯಮದರ್ಜೆಯ ಮನಸ್ಸುಗಳ ತಾಣವಾದಾಗ ಅಲ್ಲಿ ಸೃಜನ ಪಕ್ಷಪಾತವಿರುವುದಿಲ್ಲ; ಸ್ವಜನ ಪಕ್ಷಪಾತ ಮಾತ್ರ ನಡೆಯುತ್ತದೆ. ಗಂಡಭೇರುಂಡದ ಸಂಕೇತ ದೃಢತೆಯನ್ನು ನೀಡಬೇಕೇ ಹೊರತು ಎರಡು ತಲೆಗಳ ಹಾವಿನಂತಾಗಬಾರದು. ಈ ತರ್ಕ, ಸ್ವಭಾವ, ವಿವೇಚನೆ, ಬುದ್ಧಿ ಮಾಧ್ಯಮಗಳಿಗಿದ್ದರೆ ಅವು ಮಾರ್ಗದರ್ಶಕರಾಗಬಹುದು; ಸಂವಿಧಾನದಲ್ಲಿ ಸ್ಥಾನಪಡೆಯಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top