ಒಳಿತಿನೆಡೆಗೆ ಬೆಳಕು ತೋರುವ ಬಕ್ರೀದ್ ಸಂದೇಶ | Vartha Bharati- ವಾರ್ತಾ ಭಾರತಿ

ಒಳಿತಿನೆಡೆಗೆ ಬೆಳಕು ತೋರುವ ಬಕ್ರೀದ್ ಸಂದೇಶ

ಸೃಷ್ಟಿಕರ್ತನ ಅನುಗ್ರಹದ ಹಬ್ಬ ಈದುಲ್ ಅಝ್‌ಹಾ ಪುನರಾಗಮಿಸಿದೆ. ಧಾರ್ಮಿಕ ಆಚರಣೆಗಳು ವಿಧಿವತ್ತಾಗಿ ನಿರ್ವಹಿಸಿದ ಸಂತಸವನ್ನು ಪ್ರಕಟಗೊಳಿಸುವ ಮತ್ತು ಜಗದೊಡೆಯನಿಗೆ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವಾಗಿದೆ ಬಕ್ರೀದ್. ಒಂದು ತಿಂಗಳು ಪೂರ್ತಿಯಾಗಿ ವ್ರತ ಪೂರೈಸಿದ ಆನಂದವನ್ನು ಈದುಲ್ ಫಿತ್ರ್ ಮೂಲಕ ಹಂಚಿಕೊಂಡರೆ, ಇಸ್ಲಾಮಿನ ಪಂಚ ಕರ್ಮಗಳಲ್ಲಿ ಕೊನೆಯದಾದ ಪವಿತ್ರ ಹಜ್ ಕರ್ಮವನ್ನು ನಿರ್ವಹಿಸುವ ಮೂಲಕ ಬಕ್ರೀದ್ ಹಬ್ಬವು ಆಚರಿಸಲ್ಪಡುತ್ತದೆ. ಕುರ್‌ಆನ್ ಹೇಳುತ್ತದೆ;

‘‘ಅಲ್ಲಾಹು ನಿಮಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ ಕಾರಣ ನೀವು ಅವನ ಮಹತ್ವವನ್ನು ಕೊಂಡಾಡುವ ಸಲುವಾಗಿಯೂ ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿಯೂ.’’ (2:185)
ಕಠಿಣವಾದ ಪರಿಶ್ರಮ ಮೂಲಕ ಆರಾಧನೆಗಳನ್ನು ಮಾಡುವುದರೊಂದಿಗೆ ಸಂಭ್ರಮಿಸುವುದು ಅಲ್ಲಾಹನು ಕರೆ ಕೊಟ್ಟ ಸಂಗತಿಯಾಗಿದೆ. ಕುರ್‌ಆನ್ ಈ ರೀತಿ ವಿವರಿಸುತ್ತದೆ.
‘‘ಹೇಳಿರಿ: ಇದು ಅಲ್ಲಾಹನ ಅನುಗ್ರಹ ಮತ್ತು ಕಾರುಣ್ಯದಿಂದಾಗಿದೆ. ಅದರಿಂದಾಗಿ ಅವರು ಸಂಭ್ರಮಪಡಲಿ. ಅವರು ಒಟ್ಟುಗೂಡಿಸಿಡುವುದಕ್ಕಿಂತಲೂ ಇದು ಅತ್ಯುತ್ತಮವಾದುದಾಗಿದೆ.’’ (10:58)
 ಹೆಚ್ಚು ಕಮ್ಮಿ ಬಕ್ರೀದ್ ಪ್ರಯುಕ್ತ ದುಲ್ಹಜ್ ತಿಂಗಳ ಆರಂಭದಿಂದಲೇ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲಾಗುತ್ತಿದೆ. ಪ್ರತ್ಯೇಕ ವ್ರತ ಆಚರಣೆಯನ್ನೂ ಮುಸ್ಲಿಮರು ಕೈಗೊಳ್ಳುತ್ತಾರೆ. ತಿಂಗಳ ಒಂಬತ್ತರಂದು ಅರಫಾ ದಿನದ ವಿಶೇಷ ಕರ್ಮದಂತೆ ಒಂದೇ ಮೈದಾನದಲ್ಲಿ ಸೇರುವುದು ಕೂಡಾ ಒಂದು ಆರಾಧನೆಯಾಗಿರುತ್ತದೆ. ಜಗತ್ತಿನ ಮೂಲೆಮೂಲೆಗಳಿಂದ ಬಂದ ಮನುಕುಲದ ಅಸಂಖ್ಯಾತ ವೈವಿಧ್ಯಮಯ ರೀತಿ ರಿವಾಜು, ವೇಷ ಭಾಷೆ, ಆಚಾರ ವಿಚಾರಗಳಲ್ಲಿ ಜೀವನ ಸಾಗಿಸುವ ಮಂದಿ ಬರೀ ತುಂಡು ಬಟ್ಟೆಯಲ್ಲಿ ಒಂದೇ ಮಂತ್ರದೊಂದಿಗೆ ಒಂದೇ ಸ್ಥಳದಲ್ಲಿ ಸೇರಿ ಏಕ ಪ್ರಭುವಿನ ಸ್ಮರಣೆ ನಿರ್ವಹಿಸುವಾಗ ಎಲ್ಲಾ ಬಣ್ಣಗಳು, ಭಾಷೆಗಳು, ದಿಕ್ಕುಗಳು ಒಂದಾಗಿ ಸೇರಿಕೊಳ್ಳುತ್ತದೆ. ಜಗದೊಡೆಯನ ಮುಂದೆ ಎಲ್ಲರೂ ಸಮಾನರೆಂಬ ಸ್ಪಷ್ಟ ಸಂದೇಶ ಆ ಮೂಲಕ ಜಗತ್ತಿಗೆ ಸಾರಲಾಗುತ್ತವೆ. ಆ ಅರಫಾ ಮೈದಾನದಲ್ಲೇ ಇಸ್ಲಾಮಿನ ಸಂಪೂರ್ಣತೆಯ ಘೋಷಣೆ ಮೊಳಗಿದ ಗತಕಾಲದ ನೆನಪು ಜಾಗೃತಗೊಳ್ಳುತ್ತದೆ. ಅಂದು ಅವತರಿಸಲ್ಪಟ್ಟ ಸೂಕ್ತ ಇದಾಗಿದೆ.
‘‘ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.’’
(ಕುರ್‌ಆನ್ 5:3)
ಧರ್ಮವು ದೈವಿಕವಾಗಿ ಅವತರಿಸಲ್ಪಟ್ಟ ಸಂಗತಿಯಾಗಿದೆ. ಮಾನವ ಬದುಕಿನ ಮಧ್ಯೆ ಅನಿವಾರ್ಯವಾಗಿ ಧರ್ಮದ ಚೌಕಟ್ಟನ್ನು ಬಳಸಿಕೊಂಡು ಜೀವನ ಸಾಗಿಸಲೇ ಬೇಕಾಗುತ್ತದೆ. ಮಾನವ ಆಸೆ ಆಕಾಂಕ್ಷೆಗಳನ್ನು ನಿಯಂತ್ರಿಸಲು ಇತಿ ಮಿತಿಗಳು ಅನಿವಾರ್ಯವಾಗಿರುತ್ತದೆ. ಇಲ್ಲವಾದರೆ ಅದು ಭಯಾನಕವೂ ದುರಂತಮಯವೂ ಆಗಬಹುದಾಗಿದೆ. ಧರ್ಮಿಷ್ಟನಾಗಿ ಬದುಕುವುದು ಧರ್ಮದ ಮುಖ್ಯ ಉದ್ದೇಶವಾಗಿದೆ. ಪ್ರವಾದಿ(ಸ) ಹಜ್ ನಿರ್ವಹಿಸುವ ಸಂದರ್ಭದಲ್ಲಿ ಮಾಡಿದ ಭಾಷಣಗಳು ಜಗತ್ತಿನ ಸರ್ವಶ್ರೇಷ್ಠ ಸಂದೇಶಗಳೆಂದು ಪರಿಗಣಿಸಲಾಗಿದೆ. ಸಮಾನತೆ, ಸಹೋದರತೆ, ಮಾನವೀಯತೆಯ ವಿರಾಟ್ ದರ್ಶನವೇ ಅದಾಗಿತ್ತು. ‘‘ಓ ಮನುಜರೇ ನಿಮ್ಮ ರಕ್ತ, ಸೊತ್ತು, ಮಾನ ನಿಮಗೆ ಪರಸ್ಪರ ಪವಿತ್ರವಾಗಿದೆ. ಅದನ್ನು ನಾಶ ಪಡಿಸುವುದು ನಿಷಿದ್ಧ ಸಂಗತಿಯಾಗಿದೆ.’’

ಇಂದು ಹಜ್ ಯಾತ್ರಿಕರು ಮತ್ತು ಹಬ್ಬ ಆಚರಿಸುವವರು ಕರ್ಮಗಳನ್ನು ವಿಧಿವತ್ತಾಗಿ ನಿರ್ವಹಿಸಲು ಉತ್ಸಾಹ ತೋರುತ್ತಾರೆ. ಆದರೆ ಆ ಕರ್ಮಗಳೊಳಗೆ ಅಡಗಿದ ಮರ್ಮಗಳನ್ನು ಮರೆತು ಬಿಡುತ್ತಾರೆ. ಇದು ಸಮಾಜದಲ್ಲಿ ದೊಡ್ಡ ದುಷ್ಪರಿಣಾಮ ಬೀರುತ್ತದೆ. ಹಬ್ಬ ಹರಿದಿನಗಳನ್ನು ಆಚರಿಸುವ ನಾವು ಅನ್ಯರ ಹಕ್ಕುಗಳಿಗೆ ಚ್ಯುತಿ ಎಸಗುವವರಾದರೆ ಅದರಿಂದ ಏನೂ ಪ್ರಯೋಜನ ಆಗದು. ನಮ್ಮ ಧರ್ಮ, ನಮ್ಮ ಹಬ್ಬ ಅನ್ಯರ ಹಕ್ಕುಗಳಿಗೆ ಮನ್ನಣೆಯನ್ನು ಕೊಟ್ಟು ಅವರ ಜೀವ, ಸೊತ್ತು, ಮಾನ ಸಂರಕ್ಷಣೆಯನ್ನೂ ಮಾಡುವಂತಾಗಬೇಕು. ಆಗ ಮಾತ್ರ ನಾವು ಪಾಲಿಸುವ ಕರ್ಮಗಳಿಗೆ ಪ್ರಾಧಾನ್ಯತೆ ಬರುತ್ತದೆ. ಇತ್ತೀಚೆಗೆ ಹೆಚ್ಚುತ್ತಿರುವ ಗುಂಪು ಹಲ್ಲೆಗಳು ಮತ್ತು ಕೊಲೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಸಾಮಾಜಿಕ ಸುರಕ್ಷತೆ ಕಾಪಾಡುವುದು ಮುಖ್ಯ ವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಬದ್ಧ್ದವಾಗಬೇಕೆನ್ನುವುದು ಕೂಡಾ ಪ್ರವಾದಿ ಮುಹಮ್ಮದ್(ಸ) ರವರ ಹಜ್ ಸಂದೇಶವಾಗಿದೆ.
ಹಜ್ಜಾಜಿಗಳು(ಹಜ್‌ಯಾತ್ರಿಕರು) ನಡೆಸುವ ಕಲ್ಲೆಸೆತ ಕೂಡಾ ನಮ್ಮಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ತರುತ್ತದೆ. ಮನುಷ್ಯರಲ್ಲಿರುವ ಪೈಶಾಚಿಕ ಪ್ರೇರಣೆಗಳಿಂದ ಮುಕ್ತವಾಗಬೇಕೆನ್ನುವುದೇ ಈ ಕರ್ಮದ ಉದ್ದೇಶ. ಕಾಮ, ಕ್ರೋಧ, ಅಹಂಕಾರ, ಮದ ಮತ್ಸರಗಳಿಂದಲೂ ಎಲ್ಲಾ ತರದ ಸ್ವಾರ್ಥ, ದುರಾಸೆಗಳಿಂದಲೂ ಪಾರಾಗುವುದು ಅನಿವಾರ್ಯ ವಾಗಿರುತ್ತದೆ.
‘‘ಖಂಡಿತವಾಗಿಯೂ ಸೈತಾನನು ನಿಮ್ಮ ಶತ್ರುವಾಗಿರುವನು. ಆದ್ದರಿಂದ ಅವನನ್ನು ಶತ್ರುವಾಗಿಯೇ ಪರಿಗಣಿಸಿರಿ. ಅವನು ತನ್ನ ಜನರನ್ನು ಆಹ್ವಾನಿಸುತ್ತಿರುವುದು ಅವರು ನರಕವಾಸಿಗಳಲ್ಲಿ ಸೇರಿದವರಾಗಲು ಮಾತ್ರವಾಗಿದೆ.’’
(ಕುರ್‌ಆನ್ 35:6)
  ಬಕ್ರೀದ್ ಅನೇಕ ಮಹೋನ್ನತವಾದ ಸಂದೇಶಗಳನ್ನು ಒಳಗೊಂಡಿದೆ. ಕುರ್‌ಆನ್, ಇಬ್ರಾಹೀಂ ಅಲೈಸ್ಸಲಾಮ್ರನ್ನು ಬರೀ ವ್ಯಕ್ತಿಯಾಗಿ ಪರಿಚಯಿಸದೆ ಹಲವು ಆದರ್ಶಗಳನ್ನು ಒಗ್ಗೂಡಿಸಿದ ಒಂದು ಬೃಹತ್ತಾದ ಸಮೂಹವೆಂದು ಬಣ್ಣಿಸುತ್ತದೆ. ಒಂದು ಸಮೂಹ ಮಾಡಬೇಕಾದ ಎಲ್ಲಾ ಜವಾಬ್ದಾರಿಯನ್ನು ಅವರು ಮಾಡಿ ಮುಗಿಸಿದ್ದಾರೆ. ತ್ಯಾಗದ ಪ್ರತಿರೂಪವಾಗಿ ‘‘ನನ್ನ ಬದುಕಿನ ಅತ್ಯಂತ ಸಂತಸದ ದಿನಗಳು’’ ತಾನು ಬೆಂಕಿಯಲ್ಲಿದ್ದ ಏಳು ದಿನಗಳು ಎಂದು ಇಬ್ರಾಹೀಂ ಅಲೈಸ್ಸಲಾಂ ಹೇಳಿದ್ದರು. ಸಂಕಷ್ಟದ ದಿನಗಳನ್ನು ಸುಖದಾಯಕ ದಿನಗಳನ್ನಾಗಿ ಮಾರ್ಪಡಿಸಲು ಸಾಧ್ಯವಾದರೆ ಬದುಕನ್ನು ಗೆಲ್ಲಬಹುದೆನ್ನುವುದನ್ನು ಈ ಮೂಲಕ ಅವರು ಪ್ರಸ್ತುತ ಪಡಿಸಿದರು.


ಇಬ್ರಾಹೀಂ ಅಲೈಸ್ಸಲಾಮ್‌ರಿಗೆ ತನ್ನ ಮಡದಿ ಮಕ್ಕಳು ತಡೆಯಾಗಲೇ ಇಲ್ಲ. ಮಾತ್ರವಲ್ಲ, ಪತಿಯ ದಾರಿಗೆ ಅಡ್ಡಬಾರದ ಪತ್ನಿ, ತಂದೆಯ ಇರಾದೆಗೆ ವಿಘ್ನ ವಾಗದ ಮಗ ಇದು ಅಪರೂಪದ ಸಂಬಂಧವಾಗಿ ಸ್ಮರಿಸಲ್ಪಡುತ್ತದೆ. ಪರಿವಾರದ ಹಿತವನ್ನು ಕಾಪಾಡಲು ಹೋದ ಕಾರಣ ಬದುಕು ಮೂರಾಬಟ್ಟೆಯಾದ ಅನೇಕ ನಾಯಕರ, ರಾಜಕೀಯ ಧುರೀಣರ ಕಥಾನಕಗಳು ನಮ್ಮ ಮುಂದೆ ತೆರೆದು ಕೊಳ್ಳುತ್ತವೆ.
 ಪತ್ನಿ ಹಾಜಿರಾರನ್ನು ಮತ್ತು ಸುಪುತ್ರ ಇಸ್ಮಾಯೀಲ್ರನ್ನು ಬರಡು ಭೂಮಿಯಲ್ಲಿ ಉಪೇಕ್ಷಿಸುವಾಗ ದೃಢಚಿತ್ತ ಕಾಯ್ದುಕೊಂಡ ಪತಿ ಪತ್ನಿಯರ ನಿಲುವು ಅಸಾಮಾನ್ಯವಾದ ಸಂಗತಿಯಾಗಿದೆ. ‘‘ಮಗನೇ ನಿನ್ನನ್ನು ಬಲಿಕೊಡಬೇಕಾಗಿದೆ! ನಿನ್ನ ಅಭಿಪ್ರಾಯ ಏನು?’’ ಎಂದು ತಂದೆ ಕೇಳಿದಾಗ ಮಗನ ಉತ್ತರ ಇದಾಗಿತ್ತು.

 ‘‘ನಿಮಗೆ ಏನನ್ನು ಆಜ್ಞಾಪಿಸಲಾಗಿದೆಯೋ ಅದನ್ನು ಪಾಲಿಸಿ. ನನ್ನನ್ನು ಅಲ್ಲಾಹನ ಬಯಕೆಯಂತೆ ಸಹನೆಯುಳ್ಳವನಾಗಿ ಕಾಣುವಿರಿ’’ ಸ್ತ್ರೀಯು ಮಗುವಿಗಾಗಿ ತನ್ನ ಸರ್ವವನ್ನು ಕಳಕೊಳ್ಳಲು ಸಿದ್ಧಳಾಗುವುದು ಸಹಜ. ಆದರೆ ದೇವನ ಇಚ್ಛೆಯ ಮುಂದೆ ಅದೆಲ್ಲವೂ ನಗಣ್ಯವೆಂದೂ ಆತನ ಮೇಲಿರುವ ಭರವಸೆ ಅನನ್ಯವೆಂದೂ ಹಾಜಿರಾ ಬೀವಿ ಸಾಬೀತು ಪಡಿಸಿದರು. ಮಗನ ಜೀವವನ್ನೇ ಕಳೆದುಕೊಳ್ಳುವ ಭಯಾನಕತೆಯನ್ನು ನಿರಾಳವಾಗಿ ಕಂಡ ಮಾತೆಯ ಹೃದಯ ಸಂಪೂರ್ಣವಾಗಿ ಅಲ್ಲಾಹನಲ್ಲಿ ಅರ್ಪಿತಗೊಂಡಿತ್ತು. ಜಗತ್ತಿನ ಅಪರಾಧ ಪಟ್ಟಿಗಳನ್ನು ತೆರೆದು ನೋಡಿದರೆ ಅವೆಲ್ಲಾ ಸಂತಾನ ಸ್ನೇಹಕ್ಕಾಗಿಯೋ ಪರಿವಾರ ಹಿತಕ್ಕಾಗಿಯೋ ನಡೆದಿರುತ್ತವೆೆ. ಆದರೆ ಅದ್ಯಾವ ಕೊರತೆಯೂ ಇಬ್ರಾಹೀಂ (ಅ) ಮತ್ತು ಪರಿವಾರದಲ್ಲಿ ಇರಲಿಲ್ಲ.
‘‘ಅವರಿಬ್ಬರೂ ಒಪ್ಪಿಕೊಂಡ ನಂತರ ಮಗನ ಹಣೆಯನ್ನು ನೆಲಕ್ಕೆ ಒರಗಿಸಿ ಹಿಡಿದರು. ಆಗ ನಾವು ಅವರನ್ನು ಕರೆದು ಹೇಳಿದೆವು ಓ ಇಬ್ರಾಹೀಂ ನೀವು ಕನಸನ್ನು ನನಸಾಗಿಸಿದಿರಿ’’
(ಕುರ್‌ಆನ್-37:102,103) 

ಇಬ್ರಾಹೀಂ ಅಲೈಸ್ಸಲಾಮ್ ಎಲ್ಲಾ ನಡೆಯನ್ನು ಅಲ್ಲಾಹನು ಅಂಗೀಕರಿಸಿದ ಸಂಗತಿಯನ್ನು ಅಲ್ಲಾಹನೇ ವಿವರಿಸುತ್ತಾನೆ ಅವರು ಸಂಪೂರ್ಣವಾಗಿ ವಿಧೇಯತೆ ತೋರಿದವರಾಗಿದ್ದರು. ಒಂದು ಆದರ್ಶ ಜನರ ಮುಂದೆ ಮನ್ನಣೆ ಪಡೆಯಬೇಕಾದರೆ ಅದು ಆಕರ್ಷಣೀಯವಾಗಿರಬೇಕು ಮತ್ತು ಸರಳ ಸುಂದರವಾಗಿ ಕಾಣುವಂತಿರಬೇಕು.ಆಗ ಮಾತ್ರ ಜನರೆಡೆಗೆ ಅದು ತಲುಪಲು ಸಾಧ್ಯ. ಆಶಯಗಳು ಕಠಿಣ ಮತ್ತು ಕ್ರೂರವಾಗಿದ್ದರೆ ಜನರು ಅದನ್ನು ಅಪ್ಪಿಕೊಳ್ಳಲು ಮುಂದಾಗಲಾರರು. ಆದರ್ಶ ಪರವಾಗಿ ಆಗ ಸೋಲು ಕಾಣಬೇಕಾಗಬಹುದು.
ಮಹೋನ್ನತ ಗುಣ ಪಾಠವನ್ನು ಕುರ್‌ಆನ್ ಈ ರೀತಿಯಲ್ಲಿ ವಿವರಿಸುತ್ತದೆ.
 ‘‘(ಓ ಪ್ರವಾದಿಯವರೇ!) ತಾವು ಅವರೊಂದಿಗೆ ಸೌಮ್ಯವಾಗಿ ವರ್ತಿಸಿರುವುದು ಅಲ್ಲಾಹುವಿನ ವತಿಯ ದಯೆಯಿಂದಲೇ ಆಗಿದೆ. ತಾವೊಬ್ಬ ಒರಟು ಸ್ವಭಾವ ದವರೋ ಕಠಿಣ ಹೃದಯದವರೋ ಆಗಿರುತ್ತಿದ್ದರೆ ಅವರು ತಮ್ಮ ಸುತ್ತಲಿಂದ ಚದುರಿಹೋಗುತ್ತಿದ್ದರು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು ಅವರಿಗೋಸ್ಕರ ಪಾಪಮುಕ್ತಿಯನ್ನು ಬೇಡಿರಿ. ಕಾರ್ಯನಿರ್ವಹಣೆಯಲ್ಲಿ ಅವರೊಂದಿಗೆ ಸಮಾಲೋಚನೆ ಮಾಡಿರಿ. ತರುವಾಯ ತಾವೊಂದು ನಿರ್ಧಾರವನ್ನು ತಳೆದರೆ ಅಲ್ಲಾಹುವಿನ ಮೇಲೆ ಭರವಸೆಯಿಡಿರಿ. ತನ್ನ ಮೇಲೆ ಭರವಸೆಯಿಡುವವರನ್ನು ಅಲ್ಲಾಹು ಖಂಡಿತವಾಗಿಯೂ ಪ್ರೀತಿಸುವನು.’’(3:159)
 ಕಠಿಣತೆ ತೋರದೆ ಕ್ಷಮೆ ಬೇಡುವ, ಸಮಾಲೋಚಿಸುವ ಮತ್ತು ಅಲ್ಲಾಹನ ಮೇಲೆ ಭರವಸೆ ಇಡುವುದು ಇವೆಲ್ಲವೂ ಜನಹಿತ ಸಂಪಾದಿಸುವ ಮಾರ್ಗವೆಂದು ತಿಳಿದುಕೊಳ್ಳಬೇಕಾಗಿದೆ.
ಜನರು ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವಂತಾದರೆ ನಾವು ಹೇಗೆ ನಮ್ಮ ಧರ್ಮವನ್ನು ಉನ್ನತಿಗೆ ಏರಿಸಲು ಸಾಧ್ಯ?
 ಇಬ್ರಾಹೀಂ ಅಲೈಸ್ಸಲಾಮ್ ಸತ್ಯ ಮಾರ್ಗಕ್ಕಾಗಿ ಮನೆಮಂದಿಯನ್ನೇ ಪ್ರಶ್ನಿಸಿದರು. ಸಮಾಜವನ್ನು ಎದುರು ಹಾಕಿಕೊಂಡರು. ಅಧಿಕಾರಿಗಳನ್ನು ಮತ್ತು ರಾಜರುಗಳನ್ನೂ ಸುಮ್ಮನೇ ಬಿಡಲಿಲ್ಲ. ಕೊನೆಗೆ ಅವರ ಮುಂದೆ ಎಲ್ಲವೂ ತಲೆ ತಗ್ಗಿಸಿದವು.
ಭೌತಿಕವಾದ ಎಲ್ಲಾ ಆಕಾಂಕ್ಷೆಗಳನ್ನು ಮೀರಿ ದೇವ ಮಾರ್ಗವನ್ನು ಅನುಸರಿಸಿ ಒಳಿತನ್ನು ಮಾಡಿ ಸಮಾಜಕ್ಕೆ ಉತ್ತಮ ಸೇವೆ ಮಾಡಬೇಕೆನ್ನುವುದೇ ಬಕ್ರೀದ್ ಸಂದೇಶವಾಗಿರುತ್ತದೆ.
ಇಬ್ರಾಹೀಂ ಅಲೈಸ್ಸಲಾಮ್ರು ಊಟಕ್ಕೆ ಕೂರುವಾಗಲೂ ಕೂಡಾ ಜೊತೆಯಲ್ಲಿ ಕೂತು ಉಣ್ಣುವ ಒಬ್ಬ ವ್ಯಕ್ತಿಗಾಗಿ ಒಂದೆರಡು ಮೈಲು ನಡೆದು ಹುಡುಕುತ್ತಿದ್ದರು. ಆ ಕಾರಣದಿಂದ ಅವರು ‘ಆತಿಥ್ಯ ಪಿತ’ಎಂಬ ಬಿರುದನ್ನು ಪಡೆದಿದ್ದರು.

ಹಬ್ಬ ಹರಿದಿನಗಳನ್ನು ಆಚರಿಸುವ ನಾವು ಅನ್ಯರ ಹಕ್ಕುಗಳಿಗೆ ಚ್ಯುತಿ ಎಸಗುವವರಾದರೆ ಅದರಿಂದ ಏನೂ ಪ್ರಯೋಜನ ಆಗದು. ನಮ್ಮ ಧರ್ಮ ನಮ್ಮ ಹಬ್ಬ ಅನ್ಯರ ಹಕ್ಕುಗಳಿಗೆ ಮನ್ನಣೆಯನ್ನು ಕೊಟ್ಟು ಅವರ ಜೀವ, ಸೊತ್ತು, ಮಾನ ಸಂರಕ್ಷಣೆಯನ್ನೂ ಮಾಡುವಂತಾಗಬೇಕು. ಆಗ ಮಾತ್ರ ನಾವು ಪಾಲಿಸುವ ಕರ್ಮಗಳಿಗೆ ಪ್ರಾಧಾನ್ಯತೆ ಬರುತ್ತದೆ. ಇತ್ತೀಚೆಗೆ ಹೆಚ್ಚುತ್ತಿರುವ ಗುಂಪು ಹಲ್ಲೆಗಳು ಮತ್ತು ಕೊಲೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ಸಾಮಾಜಿಕ ಸುರಕ್ಷತೆ ಕಾಪಾಡುವುದು ಮುಖ್ಯವಾಗಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top