ಅಜಾತ ಶತ್ರು ಅಟಲ್ | Vartha Bharati- ವಾರ್ತಾ ಭಾರತಿ

ಅಜಾತ ಶತ್ರು ಅಟಲ್

ಎಲ್ಲರಿಗೂ ಸಲ್ಲುವವರು ಅಂದರೆ ವ್ಯಕ್ತಿಗತ ಸಿದ್ಧಾಂತವಿಲ್ಲದಿರುವವರು ಎಂದು ಆಳದ ಅರ್ಥ. ಬುದ್ಧನಿಗೂ ಶತ್ರುಗಳಿದ್ದರು; ಗಾಂಧಿಗೂ ಇದ್ದರು. ಅವರೂ ಅಜಾತಶತ್ರುಗಳಲ್ಲ. ನಾವೆಷ್ಟೇ ಸರಿಯಿದ್ದರೂ ನಮಗೆ ಶತ್ರುಗಳಿರುತ್ತಾರೆ ಮತ್ತು ನಮ್ಮನ್ನು ಮೆಚ್ಚದವರು, ನಮ್ಮನ್ನು ಕಂಡು ಮತ್ಸರ ಪಡುವವರು ಇದ್ದೇ ಇರುತ್ತಾರೆ ಎಂಬ ಅರಿವು ನಮ್ಮಲ್ಲಿದ್ದರೆ ನಾವು ಭವಿಷ್ಯದ ಅಳತೆಗೋಲನ್ನು ಪಡೆದುಕೊಂಡು, ತಾತ್ವಿಕ ನೆಲೆಯೊಂದನ್ನು ಕಂಡುಕೊಂಡು ಅದನ್ನು ರಕ್ಷಿಸುವ ಧೈರ್ಯ ಹೊಂದಿರುತ್ತೇವೆ ಮತ್ತು ಅದಕ್ಕೆ ಬದ್ಧರಾಗಿ ಬದುಕುತ್ತೇವೆ. ನಮ್ಮೆದುರು ಯಾರೇ ಆಗಲಿ ಏನು ಹೇಳುತ್ತಾರೆ ಎಂಬ ಭ್ರಮೆಗಿಂತ ಎಂಬುದಕ್ಕಿಂತಲೂ ಹಿಂದಿನಿಂದ ಹಾಗೂ ನಮ್ಮ ಭೌತಿಕ ಅಸ್ತಿತ್ವವು ಕರಗಿ, ಮರೆಯಾಗಿ ಹೋದ ಮೇಲೆ ಸಮಾಜ ಏನು ಹೇಳುತ್ತದೋ ಎಂಬ ಆತಂಕವಿರುತ್ತದೆ. ಇದನ್ನು ಅನುಸರಿಸಿದವರು ಎಷ್ಟೇ ದುರಂತ ಬದುಕು ಮತ್ತು ಅಂತ್ಯವನ್ನು ಕಂಡರೂ ಅವರು ಒಂದಿಷ್ಟು ಬೆಳಕನ್ನು ಬಿಟ್ಟು ಹೋಗಿರುತ್ತಾರೆ. ಎಲ್ಲರಲ್ಲೂ ಒಳ್ಳೆಯವರೆಂದನ್ನಿಸಿಕೊಳ್ಳಬಲ್ಲ ಅನೇಕರು ವಿವಾದಗಳನ್ನು, ಸಂಶಯಗಳನ್ನು ಬಿತ್ತಿ ಹಗುರಾಗುತ್ತಾರೆಯೇ ವಿನಾ ಸ್ಥಿರವ್ಯಕ್ತಿತ್ವವೆನಿಸಿಕೊಳ್ಳುವುದಿಲ್ಲ. ಎಲ್ಲರೊಳಗೊಂದಾಗುವುದು ಬೇರೆ; ಎಲ್ಲರಲ್ಲೂ ಸಲ್ಲುವುದು ಬೇರೆ. ಹೀಗಾಗಿ ‘ಅಜಾತಶತ್ರು’ ಎಂಬ ಪದಕ್ಕೆ ಗಂಭೀರ ನೆಲೆಯಲ್ಲಿ ಅವಕಾಶವಾದಿ ಎಂದು ಮತ್ತು ಹಗುರ ನೆಲೆಯಲ್ಲಿ ಇಸ್ಪೀಟು ಎಲೆಗಳ ನಡುವೆ ಎಲ್ಲಿ ಬೇಕಾದರಲ್ಲಿ ಹೊಂದಿಸಿಡಬಲ್ಲ ಮತ್ತು ಸ್ವಂತ ಬೆಲೆಯಿಲ್ಲದೆಯೂ ಬೆರೆಯಬಲ್ಲ ಜೋಕರ್ (ಎಂಬ ಎಲೆ) ಎಂಬ ಧ್ವನಿಯಿರುತ್ತದೆ. ಇದೇ ಸಂದರ್ಭದಲ್ಲಿ ನೆನಪಾಗುವ ಇನ್ನೊಂದು ಪದ ಭೀಷ್ಮಾಚಾರ್ಯರು ಅಥವಾ ಭೀಷ್ಮ ಪಿತಾಮಹ. ಬಹಳಷ್ಟು ಹಿರಿಯರನ್ನು ಅವರು ಸಾಹಿತ್ಯ, ರಾಜಕೀಯ, ಕೈಗಾರಿಕೆ, ಕ್ರೀಡೆ ಮತ್ತಿತರ ಕ್ಷೇತ್ರಗಳ ಭೀಷ್ಮಾಚಾರ್ಯರು ಎಂದೋ ಭೀಷ್ಮಪಿತಾಮಹ ಎಂದೋ ಉಲ್ಲೇಖಿಸುತ್ತಾರೆ. ಹೀಗೆ ಉಲ್ಲೇಖಿಸುವಾಗ ಅವರ ಹಿರಿತನ ಮತ್ತು ಸಾಧನೆಗಳಷ್ಟೇ ಗಣನೆಯಲ್ಲಿದ್ದರೂ ಅದನ್ನು ಮೀರಿದ ವ್ಯಂಗ್ಯವೂ ಧ್ವನಿಸುತ್ತದೆ. ಮಹಾಭಾರತದಲ್ಲಿ ಭೀಷ್ಮರು ನಂಬಿಕೊಂಡು ಬಂದ ಆದರ್ಶ ನಿರಪೇಕ್ಷವೂ ಅಲ್ಲ, ನಿಷ್ಪಕ್ಷಪಾತಿಯೂ ಅಲ್ಲ; ಸಮಚಿತ್ತವೂ ಅಲ್ಲ. ಬದಲಾಗಿ ಅನುಕೂಲಕರವೆಂದು ಅನ್ನಿಸುವಂತಿದೆ. ಅಂಬೆಯ ಪ್ರಸಂಗ, ದ್ರೌಪದಿಯ ವಸ್ತ್ರಾಪಹಾರ ಯತ್ನ, ಕುರುಕ್ಷೇತ್ರ, ಈ ಎಲ್ಲ ಸಂದರ್ಭಗಳಲ್ಲಿ ಭೀಷ್ಮರು ನಡೆದುಕೊಂಡ ರೀತಿ ಪ್ರಶ್ನಾರ್ಹ. ವೈಯಕ್ತಿಕವಾಗಿ ಶಿಖರಪ್ರಾಯರಂತಿದ್ದು ಸಮೂಹದಲ್ಲಿ ಕೇವಲ ಕೈಸನ್ನೆಯಲ್ಲಿ ನಿಲ್ಲಿಸಬಹುದಾಗಿದ ಅನ್ಯಾಯಗಳನ್ನು ನಡೆಯಲು ಅವಕಾಶಕೊಟ್ಟು ಸುಮ್ಮನಿದ್ದು ಆನಂತರ ವ್ಯಥೆಪಡುವ ವ್ಯಕ್ತಿತ್ವ ಭೀಷ್ಮರದ್ದು. ವಿದ್ಯೆ, ಅನುಭವ, ವಯಸ್ಸು, ಸಜ್ಜನಿಕೆ, ಔದಾರ್ಯ ಇವ್ಯಾವುದೂ ಮನುಷ್ಯನನ್ನು ನ್ಯಾಯಪರನನ್ನಾಗಿ ವಿಶಾಲಹೃದಯಿಯಾಗಿ ಮಾಡಬೇಕೆಂದೇನಿಲ್ಲವೆಂಬುದಕ್ಕೆ ಈ ಪೌರಾಣಿಕ ವ್ಯಕ್ತಿತ್ವ ಜ್ವಲಂತ ನಿದರ್ಶನ.

ಸ್ವಾತಂತ್ರ್ಯೋತ್ಸವ ಭಾರತದಲ್ಲಿ ನೆಹರೂವಿನ ಹೊರತಾಗಿ ಈ ಬಗೆಯ ಇನ್ನೊಬ್ಬ ನಾಯಕರೆಂದರೆ ಅಟಲ್ ಬಿಹಾರಿ ವಾಜಪೇಯಿ (1924-2018). ಅವರ ಉದಾರ ರಾಜಕೀಯ ಅವರಿಗೆ ಎಷ್ಟು ಒಳ್ಳೆಯ ಹೆಸರನ್ನು ತಂದಿದೆಯೋ ಅಷ್ಟೇ ಕೆಟ್ಟ ಹೆಸರನ್ನೂ ತಂದಿದೆ. ಆದರೂ ಮೂರು ಬಾರಿ ಪ್ರಧಾನಿಯಾಗಿದ್ದ ವಾಜಪೇಯಿ ಒಂದು ವರ್ಣರಂಜಿತ ವ್ಯಕ್ತಿತ್ವ.

ವಾಜಪೇಯಿ ಒಬ್ಬ ಬ್ರಾಹ್ಮಣ. ಆದರೆ ಕರ್ಮಠ ಶೈಲಿಯ ಬದುಕನ್ನು ಅವರೆಂದೂ ಅನುಸರಿಸಿದವರೇ ಅಲ್ಲ. ಸಿನೆಮಾಗಳಲ್ಲಿ ಆಸಕ್ತಿ; ಸ್ವತಃ ಕವಿ. ವಿಸ್ಕಿ ಮತ್ತು ಮಾಂಸಾಹಾರ ಅವರಿಗೆ ಪ್ರಿಯ. ಅವಿವಾಹಿತರು. ರಾಜಕುಮಾರಿ ಕೌಲ್ ಎಂಬ ಅವರ ಕಾಲೇಜು ಕಾಲದ ಗೆಳತಿ (ಆನಂತರ ವಿವಾಹಿತೆ) ಯೊಂದಿಗೆ ದೀರ್ಘಾವಧಿ ಜೀವನ ನಡೆಸಿದರು. ಆಕೆಯ ಮಗಳನ್ನೇ ಸಾಕಿದರು. ಮೊನ್ನೆ ತೀರಿಕೊಂಡಾಗಲೂ ಆ ಸಾಕು ಮಗಳೇ ಅವರ ಕಾಷ್ಟಕ್ಕೆ ಕೊಳ್ಳಿಯಿಟ್ಟದ್ದು. ನೀವು ಬ್ರಹ್ಮಚಾರಿಯೇ ಎಂದು ಪ್ರಶ್ನಿಸಿದರೆ ‘‘ನಾನು ಅವಿವಾಹಿತ’’ ಎಂದು ನಗುತ್ತ ಹೇಳುವ ಪ್ರಾಮಾಣಿಕತೆ. ಸರ್ವಋತು ಬಂದರು. ಪೇಜಾವರ ಶ್ರೀಗಳಿಂದ ಕಮ್ಯುನಿಸ್ಟರವರೆಗೆ ಎಲ್ಲರೂ ಅವರಿಗೆ ಸ್ನೇಹಿತರೇ. ಕಮ್ಯುನಿಸ್ಟ್ ಸ್ನೇಹಿತರನ್ನು ಅವರು ಕಾಮ್ರೇಡ್ ಎಂದೇ ಕರೆಯುತ್ತಿದ್ದರು. ಅಸ್ಖಲಿತ ವಾಗ್ಮಿ. ಅವರನ್ನು ವಿರೋಧಿಸುವವರೂ ಅವರ ಮಾತಿಗೆ ತಲೆದೂಗುತ್ತಿದ್ದರು. 2009ರಿಂದೀಚೆಗೆ ತೀವ್ರವಾಗಿ ಅಸ್ವಸ್ಥರಾಗಿದ್ದ ವಾಜಪೇಯಿ 2014ರಲ್ಲಿ ತಮ್ಮ ಸಂಗಾತಿಯನ್ನು ಕಳೆದುಕೊಂಡರು. ಭಾರತರತ್ನ ಪ್ರಶಸ್ತಿಯಲ್ಲದೆ ವಾಜಪೇಯಿ ‘ಉತ್ತಮ ಪ್ರಭುತ್ವ’ದ ಪ್ರಶಸ್ತಿಯನ್ನೂ ಗಳಿಸಿದವರು.

ಗ್ವಾಲಿಯರ್‌ನಲ್ಲಿ ಆರ್ಯಸಮಾಜದ ಯುವ ನಾಯಕರಾಗಿ ದುಡಿಮೆ ಆರಂಭ. ಜೊತೆಗೇ ಆರೆಸ್ಸೆಸ್‌ನ ಪ್ರಚಾರಕ ಹೊಣೆಯನ್ನೂ ಹೊತ್ತವರು. ಭಾರತೀಯ ಜನಸಂಘ ಸ್ಥಾಪನೆಯಾದಾಗ ಅದರ ಮುಖವಾಣಿಯಾದ ‘ಪಾಂಚಜನ್ಯ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ದುಡಿದವರು; ಆದ್ದರಿಂದ ಪತ್ರಕರ್ತನೂ ಹೌದು. ಭಾರತೀಯ ಜನಸಂಘದ ಸ್ಥಾಪಕಾಧ್ಯಕ್ಷ ಶ್ಯಾಮಪ್ರಸಾದ ಮುಖರ್ಜಿಯವರ ಅನುಯಾಯಿ. ಅವರ ಆನಂತರ ದೀನದಯಾಳ್ ಉಪಾಧ್ಯಾಯರು ಪಕ್ಷದ ಅಧ್ಯಕ್ಷರಾದಾಗ ಅವರ ಸಹಯಾತ್ರಿ; ಅಲ್ಲಿಂದ ರಾಜಕೀಯದ ಪ್ರವೇಶ. 1957ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆ. ಅಲ್ಲಿಂದ 10 ಬಾರಿ ಲೋಕಸಭೆ ಸದಸ್ಯರಾಗಿ ಮತ್ತು 2 ಬಾರಿ ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಪಯಣ. ನೆಹರೂ ಪ್ರಧಾನಿಯಾಗಿದ್ದಾಗ ಅವರಿಂದಲೇ ಉತ್ತಮ ಸಂಸದೀಯನೆಂಬ ಹೊಗಳಿಕೆ. (ಒಂದಲ್ಲ ಒಂದು ದಿನ ಈ ಯುವಕ ಭಾರತದ ಪ್ರಧಾನಿಯಾಗುತ್ತಾರೆಂದು ನೆಹರೂವೇ ಶ್ಲಾಘಿಸಿದ್ದರಂತೆ!)

1968ರಲ್ಲಿ ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ 1972ರ ವರೆಗೂ ಮುಂದುವರಿದರು. 1975ರಲ್ಲಿ ಇಂದಿರಾ ಗಾಂಧಿ ಆಂತರಿಕ ತುರ್ತುಸ್ಥಿತಿ ಘೋಷಿಸಿದಾಗ ಪ್ರತಿಭಟಿಸಿದರು; ಇತರ ಅನೇಕ ವಿರೋಧ ಪಕ್ಷಗಳ ನಾಯಕರೊಂದಿಗೆ ಜೈಲು ಸೇರಿದರು. 1977ರಲ್ಲಿ ತುರ್ತುಸ್ಥಿತಿ ತೆರವಾದಾಗ ಭಾರತೀಯ ಜನಸಂಘವು ವಿಸರ್ಜಿತವಾಗಿ ಜನತಾಪಕ್ಷವೆಂಬ ಹೆಸರಿನಲ್ಲಿ ಕಮ್ಯುನಿಸ್ಟರ ಹೊರತಾಗಿ ಇತರ ವಿರೋಧಪಕ್ಷಗಳೊಂದಿಗೆ ವಿಲೀನವಾಯಿತು. ವಾಜಪೇಯಿ ಸಂಸದರಾಗಿ ಆಯ್ಕೆಯಾದರು. ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾದರು. 1980ರಲ್ಲಿ ಜನತಾ ಪಕ್ಷದ ಸರಕಾರ ಬಿದ್ದು ಇಂದಿರಾ ಮರುಆಯ್ಕೆಯಾದರು. ಜನತಾಪಾರ್ಟಿಯು ಕಳಚಿಕೊಂಡಿತು. ಹಳೆಯ ಜನಸಂಘದ ಬದಲಾಗಿ ಭಾರತೀಯ ಜನತಾ ಪಾರ್ಟಿ ಹುಟ್ಟಿತು. ವಾಜಪೇಯಿ ಅದರ ಅಧ್ಯಕ್ಷರಾದರು. ಬಲಪಂಥೀಯವಾದಿಗಳ ಒತ್ತಡದ ಹೊರತಾಗಿಯೂ ಗಾಂಧಿಪ್ರಣೀತ ಸಮಾಜವಾದಕ್ಕೆ ಒತ್ತುಕೊಟ್ಟರು. ಆದರೆ 1984ರಲ್ಲಿ ಇಂದಿರಾ ಹತ್ಯೆಯ ಆನಂತರ ನಡೆದ ಚುನಾವಣೆಯಲ್ಲಿ ಪಕ್ಷ ಅಪಮಾನಕಾರಿ ಸೋಲನ್ನು ಕಂಡಿತು. ವಾಜಪೇಯಿ ಅವರೇ ಸ್ವತಃ ತಮ್ಮ ಗ್ವಾಲಿಯರ್ ಕ್ಷೇತ್ರದಲ್ಲಿ ಕಾಂಗ್ರೆಸಿನ ಮಾಧವರಾವ್ ಸಿಂಧ್ಯಾ ಅವರ ವಿರುದ್ಧ ಸೋಲು ಕಂಡರು. ಭಾಜಪಕ್ಕೆ 2 ಸ್ಥಾನಗಳಷ್ಟೇ ಲಭಿಸಿದರೂ ವಾಜಪೇಯಿ 1986ರ ವರೆಗೆ ಅಧ್ಯಕ್ಷರಾಗಿ ಮುಂದುವರಿದರು. (ಈ ಸಮಯದಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾದರು.) ಆನಂತರ ಅಡ್ವಾಣಿ ಭಾಜಪದ ಅಧ್ಯಕ್ಷರಾದರು. ಈ ಪಲ್ಲಟದೊಂದಿಗೆ ಭಾಜಪವು ಆವರೆಗೆ ತನ್ನ ಗುಪ್ತಸೂಚಿಯಾಗಿದ್ದ ಹಿಂದುತ್ವವನ್ನು ಬಲಪಡಿಸಿತು. ದಿಲ್ಲಿಗೆ ಅಯೋಧ್ಯೆಯ ಮೂಲಕ ದಾರಿ ಹುಡುಕಿತು. ಪರಿಣಾಮವಾಗಿ 1986ರಲ್ಲಿ 2ರಿಂದ 86 ಸ್ಥಾನಗಳಿಗೆ ಲಗ್ಗೆಹಾಕಿತು. ವಿ.ಪಿ.ಸಿಂಗ್‌ರ ನಾಯಕತ್ವದ ‘ಯುನೈಟೆಡ್ ಫ್ರಂಟ್’ ಸರಕಾರದಲ್ಲಿ ಭಾಗವಹಿಸಿತು. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತಾದರೂ ರಾಜೀವ್‌ಹತ್ಯೆಯ ಕಾರಣದಿಂದ ಪಿ.ವಿ. ನರಸಿಂಹರಾವ್ ಪ್ರಧಾನಿಯಾದರು. 1990ರಲ್ಲಿ ಸಾಂಕೇತಿಕ ಪೂಜೆಗೆ ಅವಕಾಶ ಪಡೆದ ಭಾಜಪ ಪರಿವಾರವು 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿತು. 1995ರಲ್ಲಿ ಅಡ್ವಾಣಿ ಭಾಜಪದ ಅಧ್ಯಕ್ಷಸ್ಥಾನದಿಂದ ವಾಜಪೇಯಿ ತಮ್ಮ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿ 1996ರ ಚುನಾವಣೆಯನ್ನು ಎದುರಿಸಿ ಹೆಚ್ಚು ಸ್ಥಾನಗಳನ್ನು ಗಳಿಸಿತಾದರೂ ಕೇವಲ 13 ದಿನ ಮಾತ್ರ ಅಧಿಕಾರದಲ್ಲಿ ಉಳಿಯಿತು. ವಾಜಪೇಯಿ ರಾಜೀನಾಮೆ ನೀಡಿದರು. ಆನಂತರ ಇತರರು ಅಧಿಕಾರಕ್ಕೆ ಬಂದರೂ ಉಳಿಯದಾದರು. ಇದರಿಂದಾಗಿ 1998ರಲ್ಲಿ ಮತ್ತೆ ಚುನಾವಣೆ ನಡೆದು ಭಾಜಪವೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ವಾಜಪೇಯಿ 2ನೇ ಬಾರಿಗೆ ಪ್ರಧಾನಿಯಾದರು. ಈ ಬಾರಿ ಹಾಗೂ ಹೀಗೂ 13 ತಿಂಗಳು ಅಧಿಕಾರ ನಡೆಸಿ ಜಯಲಲಿತಾ ಬೆಂಬಲ ಹಿಂಪಡೆದ ಪರಿಣಾಮವಾಗಿ ಅಲ್ಪಮತಕ್ಕೆ ಕುಸಿದು ವಾಜಪೇಯಿ ರಾಜೀನಾಮೆ ನೀಡಿದರು. ಆದರೆ ಉಳಿದ ಪಕ್ಷಗಳು ಬಹುಮತ ಸಾಬೀತು ಮಾಡಲು ವಿಫಲವಾಗಿ 1999ರಲ್ಲಿ ಮತ್ತೆ ಚುನಾವಣೆ ನಡೆದಾಗ ವಾಜಪೇಯಿ 3ನೇ ಬಾರಿಗೆ ಪ್ರಧಾನಿಯಾದರು; ಭಾಜಪವು ಎನ್‌ಡಿಎ ಮೈತ್ರಿಕೂಟವನ್ನು ಕಟ್ಟಿ ಪೂರ್ಣಾವಧಿ ಸರಕಾರ ನಡೆಸಿತು. ಆದರೆ 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದು ಭಾಜಪದ ಎನ್‌ಡಿಎಗೆ ಸೋಲಾದಾಗ ವಾಜಪೇಯಿ ಸಕ್ರಿಯ ರಾಜಕಾರಣದಿಂದ ದೂರವಾದರು. ಇವು ಅಂಕಿ ಅಂಶಗಳ ಮಾತಾದರೆ ವಾಜಪೇಯಿ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸ್ವಲ್ಪ ಚೇತರಿಸಿದ್ದು ನಿಜ. 1974ರಲ್ಲಿ ಇಂದಿರಾ ಆರಂಭಿಸಿ ‘ನಗುವ ಬುದ್ಧ’ನನ್ನು ವಾಜಪೇಯಿ ಮುಂದುವರಿಸಿ ನಡೆಸಿದ ‘ಪೋಕ್ರಾನ್-2’ ಅಣುಶಕ್ತಿಯ ಪರಿಚಯವೂ ಜಗತ್ತಿಗಾಯಿತು. ನೆರೆದೇಶಗಳೊಂದಿಗೆ ಸಂಬಂಧ ವೃದ್ಧಿಸಲು ವಾಜಪೇಯಿ ಪ್ರಯತ್ನ ನಡೆಸಿ ಚರಿತ್ರಾರ್ಹ ಲಾಹೋರ್ ಬಸ್‌ಪ್ರಯಾಣ ನಡೆಸಿದರು. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಪ್ರಧಾನಿಯೆನಿಸಿಕೊಂಡರು. ಕಾರ್ಗಿಲ್ ಯುದ್ಧದಲ್ಲಿ ಗೆಲುವು ಕಂಡರು. ಜೊತೆಗೇ ಭಯೋತ್ಪಾದಕರು ಭಾರತೀಯ ವಿಮಾನವನ್ನು ಅಪಹರಿಸಿದಾಗ ಒತ್ತೆಯಾಳಾದ ಪ್ರಯಾಣಿಕರ ಬಿಡುಗಡೆಗಾಗಿ ಮಸೂದ್ ಅಝರ್ ಸೇರಿದಂತೆ ಐವರು ಪಾಕ್ ಭಯೋತ್ಪಾದಕರನ್ನು ಕಂದಹಾರ್‌ಗೆ ಕರೆದೊಯ್ದು ಬಿಟ್ಟುಕೊಟ್ಟರು. 2001ರಲ್ಲಿ ಸಂಸತ್ತಿನ ಮೇಲೆ ಭಯೋತ್ಪಾದಕರ ಆಕ್ರಮಣವಾದದ್ದೂ ವಾಜಪೇಯಿ ಕಾಲದಲ್ಲೇ. ಹೀಗೆ ಅನೇಕ ಕಪ್ಪು-ಬಿಳುಪು ಘಟನೆಗಳು ವಾಜಪೇಯಿ ಆಡಳಿತದಲ್ಲಿ ನಡೆದವು.

ಈ ದೀರ್ಘ ಪ್ರಯಾಣದಲ್ಲಿ ಅವರಿಗೆ ಸಾಥ್ ನೀಡಿದ್ದು ಲಾಲ್ ಕೃಷ್ಣ ಅಡ್ವಾಣಿ. ಅಡ್ವಾಣಿ ಕಠಿನ ಹಿಂದುತ್ವದ ಪ್ರತಿಪಾದಕರಾಗಿದ್ದರೆ ವಾಜಪೇಯಿ ಈ ಹಿಂದುತ್ವದ ಮೃದುಮುಖದಂತೆ ಕಾಣಿಸಿದರು. ಬಲಪಂಥೀಯ ಮೂಲಭೂತ ವಾದದ ಕಡೆಗೆ ವಾಜಪೇಯಿಯವರಿಗೆ ಸ್ವಲ್ಪ ಹಿಂಜರಿಕೆ ಮೊದಲಿನಿಂದಲೂ ಇತ್ತು. ಆದರೆ ಕೊನೆಗೂ ಅವರು ಉಗ್ರ ಹಿಂದುತ್ವಕ್ಕೆ ಮೌನವಾಗಿ ತಲೆಬಾಗಿದರು. ಅಯೋಧ್ಯಾ ಆಂದೋಲನದಲ್ಲಿ ಭಾಜಪವು ಭಾಗವಹಿಸುವ ಬಗ್ಗೆ ವಾಜಪೇಯಿ ಸಂಘಟನೆಯೊಳಗೇ ಭಿನ್ನಮತೀಯರಾಗಿದ್ದರು. ಪ್ರಜಾಪ್ರಭುತ್ವದ ವಿಕೃತ ರೂಪವೆಂದರೆ ಇದೇ. ಬಹುಮತಕ್ಕೆ ಮೂಕರಾಗಿ ಒಪ್ಪುವುದು. ಅಡ್ವಾಣಿಯವರು ತಮ್ಮ ಪಕ್ಷದ ಬಹುಮತದ ಕೊರತೆಯನ್ನು ನೀಗಿಸಿಕೊಂಡು ಇತರ ಪಕ್ಷಗಳ ಬೆಂಬಲವನ್ನು ಪಡೆಯಲು ವಾಜಪೇಯಿಯವರನ್ನು ಬಳಸಿಕೊಂಡಂತೆ ಕಾಣಿಸುತ್ತದೆ. ಏಕೆಂದರೆ ಒಂದು ಗುಂಪು ಅಡ್ವಾಣಿಯವರೇ ಪ್ರಧಾನಿಯಾಗಬೇಕೆಂದು ಹೇಳಿದರೂ ಅವರು ‘‘ಅಂಧೇರೇ ಮೇ ಎಕ್ ಚಿಂಗಾರಿ ಅಟಲ್ ಬಿಹಾರಿ’’ ಎಂಬ ಘೋಷಣೆಯನ್ನು ಪಕ್ಷದ ವೇದಿಕೆಯಲ್ಲಿ ಮಾಡಿ ತಮ್ಮ ಗುಂಪಿನ ಬಾಯಿ ಮುಚ್ಚಿಸಿದರು.

ಪ್ರಾಯಃ ಇಂದಿನ ಭಾರತದ ಬಲಪಂಥೀಯ ಮತ್ತು ಮತೀಯ ರಾಜಕೀಯಕ್ಕೆ ಮುನ್ನುಡಿ ಬರೆದದ್ದು ವಾಜಪೇಯಿಯವರೇ. ದಿಲ್ಲಿಯಲ್ಲಿ ಪಕ್ಷದ ಕಾರ್ಯದರ್ಶಿಯಾಗಿದ್ದ ಮೋದಿಯವರನ್ನು ಗುಜರಾತ್ ರಾಜಕೀಯಕ್ಕೆ ತಳ್ಳಿದವರು ವಾಜಪೇಯಿ. ಆದರೆ 2002ರಲ್ಲಿ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಗೋಧ್ರಾ ನಂತರದ ಹಿಂಸಾಕಾಂಡ ನಡೆದು ಮೋದಿ ಕುರಿತು ಟೀಕೆಗಳು ಬಂದಾಗ ವಾಜಪೇಯಿಯವರು ಬಯಸಿದ್ದರೆ ಮೋದಿಯ ರಾಜೀನಾಮೆ ಪಡೆಯಬಹುದಿತ್ತು. ಆದರೆ ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟರು. ‘‘ರಾಜಧರ್ಮವನ್ನು ಪಾಲಿಸಲಿ’’ ಎಂದಷ್ಟೇ ಹೇಳಿದರು. ಈ ರೂಪಕ ಇಲ್ಲವೇ ಸಂಕೇತಾರ್ಥ ರಾಜಕೀಯಕ್ಕೆ ಸಲ್ಲದೆಂದು ವಾಜಪೇಯಿ ಅರಿಯದವರಾಗಿರಲಿಲ್ಲ. ಗೋವಾದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಗೆ ಹೋಗುವಾಗ ಪ್ರಯಾಣದ ಮಧ್ಯೆ ಜಸ್ವಂತ್ ಸಿಂಗ್ ‘‘ಏನು ನಿಶ್ಚಯಿಸಿದಿರಿ?’’ ಎಂದು ಕೇಳಿದಾಗ ವಾಜಪೇಯಿ ‘‘ಕಮ್ ಸೆ ಕಮ್ ಇಸ್ತೀಫೇ ಆಫರ್ ತೋ ಕರ್ತೆ’’ ಎಂದರು. ಅದರಂತೆಯೇ ಅಡ್ವಾಣಿಯವರ ಸೂಚನೆ ಮೇರೆಗೆ ಮೋದಿ ರಾಜೀನಾಮೆಯ ಪ್ರಸ್ತಾವವನ್ನು ಮುಂದಿಟ್ಟು ಅದನ್ನು ಕಾರ್ಯಕಾರಿಣಿ ತಿರಸ್ಕರಿಸುವಂತೆ ನೋಡಿಕೊಳ್ಳಲಾಯಿತು. ವಾಜಪೇಯಿ ಅಧಿಕಾರಕ್ಕೆ ಬಂದದ್ದು, ನಿರ್ಗಮಿಸಿದ್ದು ದೇಶಕ್ಕೆ ಒಳ್ಳೆಯದೇ ಅಲ್ಲವೇ ಎಂಬುದನ್ನು ಚರಿತ್ರೆ ದಾಖಲಿಸುತ್ತದೆ. ಇಂದಿನ ಪರಿಸ್ಥಿತಿ ನೋಡಿದರೆ ವಾಜಪೇಯಿಯವರೇ ಮುಂದುವರಿಯಬಹುದಿತ್ತು ಎಂದನ್ನಿಸುವುದು ಸಹಜ.

ವಾಜಪೇಯಿಯವರ ಒಂದು ಪದ್ಯದ ಸಾಲುಗಳು ಹೀಗಿವೆ:

ಸತ್ಯ ಕಾ ಸಂಘರ್ಷ್ ಸತ್ತಾ ಸೆ, ನ್ಯಾಯ ಲಡ್ತಾ ಹೈ ನಿರಂಕುಶ್ ಸೆ, ಅಂಧೇರೇ ಮೇ ದಿ ಚುನೌಟಿ ಹೈ, ಕಿರಣ್ ಅಂತಿಮ್ ಅಸ್ತ್ ಹೋತೀ ಹೈ, ದಾನ್ವ್ ಪರ್ ಸಬ್ ಕುಚ್ ಲಗಾ ಹೈ, ರುಕ್ ನಹಿ ಸಕ್ತೆ, ಟೂಟ್ ಸಕ್ತೆ ಹೈ, ಮಗರ್ ಝುಕ್ ನಹಿ ಸಕ್ತೆ

1970ರ ದಿಲ್ಲಿ ಮುನಿಸಿಪಲ್ ಚುನಾವಣೆಯಲ್ಲಿ ಭಾಜಪ ಸರ್ವ ಪ್ರಯತ್ನದ ಹೊರತಾಗಿಯೂ ದಯನೀಯ ಸೋಲು ಕಂಡಾಗ ವಾಜಪೇಯಿ ‘‘ಚಲೋ, ಕೊಯಿ ಸಿನೆಮಾ ದೇಖ್‌ನೆ ಚಲ್ತೆ ಹೈ’’ ಎಂದು ಹೇಳಿ ಅಡ್ವಾಣಿಯವರೊಂದಿಗೆ ಇಂಪೇರಿಯಲ್ ಥಿಯೇಟರ್‌ನಲ್ಲಿ ರಾಜ್ ಕಪೂರ್ ಅವರ ‘ಫಿರ್ ಸುಭಾ ಹೋಗೀ’ ಸಿನೆಮಾವನ್ನು ನೋಡಿದರಂತೆ. ದೇಶದ ಜನರಿಗೆ ಇದೊಂದು ಒಳ್ಳೆಯ ಉದಾಹರಣೆ ಮತ್ತು ಪಾಠ.

ವಾಜಪೇಯಿಯವರನ್ನು ಅಜಾತಶತ್ರುವೆಂದೂ ಮತ್ತು ಭಾಜಪದ ಭೀಷ್ಮನೆಂದೂ ಹೇಳುತ್ತಾರೆ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top