ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಯುಪಿಎ ಮೈತ್ರಿಕೂಟ: ಸಲೀಂ ಅಹ್ಮದ್

ದೇಶದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೇರದಂತೆ ತಡೆಯಲು ಮತ್ತು ಅವರನ್ನು ಸೋಲಿಸಲು ಸಮಾನ ಮನಸ್ಕಪಕ್ಷಗಳು, ಜಾತ್ಯತೀತ ಪಕ್ಷಗಳು ಹೈಕಮಾಂಡ್ ಮಟ್ಟದಲ್ಲಿ ಒಟ್ಟು ಸೇರಿ ಸಮಾಲೋಚನೆ ನಡೆಸಿವೆ. ಮತ್ತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರ ಪಡೆಯದಂತೆ ತಡೆಯುವುದು ನಮ್ಮ ಗುರಿಯಾಗಿದೆ. ಅದರಲ್ಲಿ ನಾವು ಯಶಸ್ಸುಗಳಿಸುತ್ತೇವೆ ಎನ್ನುವ ವಿಶ್ವಾಸವಿದೆ.

ಖಿಲ ಭಾರತ ಕಾಂಗ್ರೆಸ್ ಸಮಿತಿಯ ( ಎಐಸಿಸಿ) ಕಾರ್ಯದರ್ಶಿ ಮಂಗಳೂರು ಮೂಲದ ಸಲೀಂ ಅಹ್ಮದ್ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಸಕ್ರಿಯ ರಾಜಕಾರಣಕ್ಕಿಳಿದ ಸಲೀಂ ಅಹ್ಮದ್ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ನೆಸ್‌ಯುಐನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿ, ಅಖಿಲ ಭಾರತ ಯುವ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರ ಸರಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನೆಹರೂ ಯುವ ಸಂಘಟನೆಯ ಮಾಜಿ ಮಹಾ ನಿರ್ದೇಶಕರಾಗಿದ್ದರು. ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸಲೀಂ ಅಹ್ಮದ್ ಅಲ್ಲಿ ಸರಕಾರದ ಮುಖ್ಯ ಸಚೇತಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ತೆಲಂಗಾಣದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿದ್ದಾರೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಬಗ್ಗೆ ಅವರು ವಾರ್ತಾ ಭಾರತಿ ಜೊತೆ ಮಾತನಾಡಿದ್ದಾರೆ.

ಪ್ರಶ್ನೆ: ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಹೇಗೆ ತಯಾರಿ ನಡೆಯುತ್ತಿದೆ..?
♦ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸುವ ಕೆಲಸ ಪ್ರಾರಂಭವಾಗಿದೆ. ಪಕ್ಷವನ್ನು ತಳ ಮಟ್ಟದಿಂದ ವ್ಯವಸ್ಥಿತವಾಗಿ ಸಂಘಟಿಸಲು, ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬೆಳೆಸಲು ಮತ್ತು ಕಾಂಗ್ರೆಸ್ ತತ್ವ ಸಿದ್ಧಾಂತಗಳಡಿಯಲ್ಲಿ ಕೇಡರ್ ಬೇಸ್ ಪಕ್ಷವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಆ ಪ್ರಕಾರ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಈ ಹಿಂದಿನ ಕಾಂಗ್ರೆಸ್ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಚುನಾವಣೆಗೆ ಹಲವು ಸಮಿತಿಗಳನ್ನು ರಚಿಸಲಾಗಿದೆ.

ಪ್ರಶ್ನೆ: ಯುವಜನರು ಕಳೆದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ನಿಮ್ಮ ಬಳಿ ಯಾವ ಕಾರ್ಯಕ್ರಮಗಳಿವೆ?
♦ ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೇಶದ ಯುವ ಜನರಿಗೆ ಹಲವಾರು ಭರವಸೆ ನೀಡಿದ್ದಾರೆ. ಈ ಪೈಕಿ ವಿಶೇಷವಾಗಿ ಪ್ರತಿವರ್ಷ ಎರಡು ಕೋಟಿ ಉದ್ಯೋಗಾವಕಾಶ ಸೃಷ್ಟಿಸುತ್ತೇವೆ ಎಂದು ಆಸೆ ಹುಟ್ಟಿಸಿದ್ದಾರೆ. ಯುವಕರು ಅದನ್ನು ನಂಬಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ ಬಿಜೆಪಿ ಅಧಿಕಾರ ವಹಿಸಿ ನಾಲ್ಕು ವರ್ಷ ಕಳೆದಿದೆ. ಎರಡು ಕೋಟಿ ಬಿಡಿ ವರ್ಷಕ್ಕೆ ನಾಲ್ಕು ಲಕ್ಷ ಉದ್ಯೋಗಾವಕಾಶ ಸೃಷ್ಟಿಸಲು ಅವರಿಂದ ಆಗಿಲ್ಲ.ವಿದೇಶದಿಂದ ಕಪ್ಪು ಹಣ ತರುತ್ತೇನೆ ಎಂದರು. ಭ್ರಷ್ಟಾಚಾರ ನಿಯಂತ್ರಿಸುತ್ತೇವೆ ಎಂದರು. ಈ ರಾಷ್ಟ್ರವನ್ನು ಅಭಿವೃದ್ಧಿಯ ಮೂಲಕ ಬಹಳ ಎತ್ತರಕ್ಕೆ ಕೊಂಡು ಹೋಗುತ್ತೇವೆ ಎನ್ನುವ ಭರವಸೆ ನೀಡಿ ಜನತೆಗೆ ಮೋಸ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಜನರನ್ನು ಮೋದಿ ಮೋಡಿಯ ಮಾತುಗಳಿಂದ ದಾರಿ ತಪ್ಪಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ಮತ್ತೆ ರಚನೆಯಾಗಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಹಗರಣಗಳಲ್ಲಿ ಭಾಗಿಯಾಗಿದೆ. ರಫೇಲ್ ಡೀಲ್ ಬಗ್ಗೆ ಮಾತನಾಡಲು ಅವರು ಹಿಂಜರಿಯುತ್ತಾರೆ. ಉತ್ತರ ಕೊಡಲು ಅವರಿಗೆ ಸಾಧ್ಯವಾಗುತ್ತಿಲ್ಲ ನಿಜವಾಗಿ ದೇಶದ ಅಭಿವೃದ್ಧಿಯಾಗಿಲ್ಲ. ಬಿಜೆಪಿ ಜನರ ವಿಶ್ವಾಸವನ್ನು ಕಳೆದು ಕೊಂಡಿದೆ. ಆದುದರಿಂದ ಮುಂದಿನ ಚುನಾವಣೆಯಲ್ಲಿ ಜನ ಮತ್ತೆ ನಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಪಕ್ಷಗಳ ಜೊತೆ, ಜಾತ್ಯತೀತ ಪಕ್ಷಗಳ ಜೊತೆ ಹೊಂದಾಣಿಕೆಯ ಬಗ್ಗೆ ಮಾತುಕತೆ ನಡೆಸಿದ್ದೇವೆ. ಯುವಕರೂ ಸೇರಿದಂತೆ ಎಲ್ಲರಿಗೂ ಅವಕಾಶ ನೀಡುತ್ತೇವೆ.

 ಪ್ರಶ್ನೆ: ಯಾವ ವಿಷಯಗಳನ್ನು ಮುಂದಿಟ್ಟು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ?
♦ ಕಳೆದ ಬಾರಿ ಬಿಜೆಪಿ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿದೆ. ಯುಪಿಎ ಸರಕಾರ ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ಜಾರಿ ಮಾಡಿತ್ತು. ಯುಪಿಎ ಸರಕಾರ ಜಾರಿಗೆ ತಂದ ಕೆಲವು ಕಾರ್ಯಕ್ರಮಗಳನ್ನು ಹೆಸರು ಬದಲಾಯಿಸಿ ಜಾರಿಗೆ ತಂದಿರುವುದನ್ನು ಬಿಟ್ಟರೆ, ಬಿಜೆಪಿ ಯಾವುದೇ ಹೊಸ ಕಾರ್ಯಕ್ರಮವನ್ನು ಜಾರಿ ಮಾಡಿಲ್ಲ. ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆ ಯಾಗುವ ಕೆಲಸವನ್ನು ಕೆಲವು ಸಂಘಟನೆಗಳು ಮಾಡುತ್ತಿವೆ. ಬಿಜೆಪಿ ನೇತೃತ್ವದ ಸರಕಾರ ಅವುಗಳನ್ನು ಹತೋಟಿಗೆ ತರುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಬೆಂಬಲಿಸುತ್ತಿದೆ. ಸಮಾಜದ ಎಲ್ಲಾ ವರ್ಗಗಳ ಹಿತವನ್ನು ಕಾಪಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಇನ್ನೂ ಮುಂದೆಯೂ ಮಾಡುವ ಉದ್ದೇಶವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಸುಭದ್ರ, ಜಾತ್ಯತೀತ ಸರಕಾರವನ್ನು ದೇಶದ ಜನತೆಗೆ ನಾವು ಈ ಹಿಂದೆ ನೀಡಿದ್ದೇವೆ. ಇವೆಲ್ಲವನ್ನೂ ಜನರ ಮುಂದಿಟ್ಟು ಮತ್ತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರಚನೆಗೆ ಬೆಂಬಲ ನೀಡಬೇಕೆಂದು ದೇಶದ ಜನತೆಯಲ್ಲಿ ಮನವಿ ಮಾಡುತ್ತೇವೆ.

ಪ್ರಶ್ನೆ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಕರಾವಳಿಯಲ್ಲೂ ಬಿಜೆಪಿ ಬಲಿಷ್ಠವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
♦ ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕರಾವಳಿಯಲ್ಲಿ ನಡೆದ ಕೆಲವು ಘಟನೆಗಳನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ. ಅವುಗಳ ಬಗ್ಗೆ ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಗಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಕರಾವಳಿಯಲ್ಲಿ ಸಾವಿರಾರು ಕೋಟಿ ರೂ ಯೋಜನೆಯನ್ನು ಜಾರಿಗೊಳಿಸಿದೆ. ಜನರಿಗೆ ನೆರವಾಗಿದೆ. ಆದರೆ ಈ ಬಗ್ಗೆ ಹೆಚ್ಚು ಪ್ರಚಾರ ದೊರೆಯಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬೇರೆ ಅನಗತ್ಯ ವಿಚಾರಗಳನ್ನು, ಘಟನೆಗಳನ್ನು ಜನರ ನಡುವೆ ಹೆಚ್ಚು ಪ್ರಚಾರ ಮಾಡಲಾಯಿತು. ಇದರಿಂದ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ.

ಪ್ರಶ್ನೆ: ರಾಷ್ಟ್ರಮಟ್ಟದಲ್ಲಿ ಚುನಾವಣಾ ಹೊಂದಾಣಿಕೆಯ ಸವಾಲು, ಮೈತ್ರಿಕೂಟದ ನಾಯಕತ್ವದ ಸಮಸ್ಯೆ- ಇವುಗಳನ್ನು ಹೇಗೆ ನಿಭಾಯಿಸುತ್ತೀರಿ?
♦ ದೇಶದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೇರದಂತೆ ತಡೆಯಲು ಮತ್ತು ಅವರನ್ನು ಸೋಲಿಸಲು ಸಮಾನ ಮನಸ್ಕಪಕ್ಷಗಳು, ಜಾತ್ಯತೀತ ಪಕ್ಷಗಳು ಹೈಕಮಾಂಡ್ ಮಟ್ಟದಲ್ಲಿ ಒಟ್ಟು ಸೇರಿ ಸಮಾಲೋಚನೆ ನಡೆಸಿವೆ. ಮತ್ತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರ ಪಡೆಯದಂತೆ ತಡೆಯುವುದು ನಮ್ಮ ಗುರಿಯಾಗಿದೆ. ಅದರಲ್ಲಿ ನಾವು ಯಶಸ್ಸುಗಳಿಸುತ್ತೇವೆ ಎನ್ನುವ ವಿಶ್ವಾಸವಿದೆ.

ಪ್ರಶ್ನೆ: ಕಾಂಗ್ರೆಸ್ ಹಳಬರಿಗೆ ಸದಾ ಮಣೆ ಹಾಕುತ್ತದೆ ಎಂಬ ದೂರಿದೆ. ಪಕ್ಷದಲ್ಲಿ ಯುವ ನಾಯಕತ್ವ ಹೇಗೆ ಬೆಳೆಸುತ್ತೀರಿ?
♦ ಯುವಕರಿಗೆ ಕಾಂಗ್ರೆಸ್ ಹೆಚ್ಚಿನ ಅವಕಾಶ ನೀಡುತ್ತಾ ಬಂದಿದೆ. ವಿಶೇಷವಾಗಿ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದ ಬಳಿಕ ಯುವಕರಿಗೆ ಪಕ್ಷದಲ್ಲಿ ಹಾಗೂ ಪಕ್ಷ ಆಡಳಿತವಿರುವ ಕಡೆಗಳಲ್ಲಿ ಅಧಿಕಾರ ನಿರ್ವಹಿಸುವಲ್ಲೂ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ. ಹಿರಿಯರನ್ನು ಕೂಡಾ ಕಡೆಗಣಿಸುತ್ತಿಲ್ಲ. ಹಿರಿಯರ ಮಾರ್ಗದರ್ಶನ, ಸಲಹೆ ಪಡೆಯುತ್ತೇವೆ. ಹಿರಿಯರು-ಕಿರಿಯರು ಜೊತೆಯಾಗಿ ಸಾಗಬೇಕಾಗಿದೆ. ಚುನಾವಣೆಯ ಸಂದರ್ಭದಲ್ಲೂ ಯುವಕರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ ಎನ್ನುವ ವಿಶ್ವಾಸವಿದೆ.

ಪ್ರಶ್ನೆ: ನಿಮಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಇದೆಯೇ?
♦ ಕಳೆದ ಬಾರಿ ಹಾವೇರಿಯಿಂದ ಸ್ಪರ್ಧಿಸಿದ್ದೆ. ಈ ಬಾರಿ ಹಾವೇರಿಯಿಂದ ಅಥವಾ ಬೆಂಗಳೂರು ಸೆಂಟ್ರಲ್‌ನಿಂದ ಸ್ಪರ್ಧಿಸುವ ಬಗ್ಗೆ ಪರಿಶೀಲನೆಯಲ್ಲಿದೆ. ಅಂತಿಮ ತೀರ್ಮಾನ ಆಗಿಲ್ಲ. ಪಕ್ಷದ ಹೈಕಮಾಂಡ್ ಎಲ್ಲಿಂದ ಸ್ಪರ್ಧಿಸುವ ಬಗ್ಗೆ ನಿರ್ಧರಿಸುತ್ತದೋ ಅಲ್ಲಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top