---

ಈಗ ‘ದಲಿತ’ ಅಭಿವ್ಯಕ್ತಿಗೆ ಬಹಿಷ್ಕಾರ

‘ದಲಿತ’ ಪದಕ್ಕೆ ನಿಘಂಟಿನಲ್ಲಿ, ದಮನಕ್ಕೆ ಒಳಗಾದವರು, ಶೋಷಿತಜನ, ಆರ್ಥಿಕವಾಗಿ ಸಾಮಾಜಿಕವಾಗಿ ಕೆಳಮಟ್ಟದವರು, ಒಡೆದವರು, ಮುರಿದವರು, ಚದುರಿದವರು ಇತ್ಯಾದಿ ಅರ್ಥಗಳಿವೆ. ದಲಿತ್ ಪ್ಯಾಂಥರ್ಸ್ ಚಳವಳಿ ದಲಿತ ಪದವನ್ನು ಕ್ರಾಂತಿಕಾರಿ ಎಂಬ ಅರ್ಥದಲ್ಲಿ ಬಳಸಿತು. ದಲಿತ ಪದದಲ್ಲಿ ಅಪಮಾನಕಾರಿಯಾದುದಾಗಲೀ ನಿಂದನಾತ್ಮಕವಾದುದಾಗಲೀ ಏನೂ ಇಲ್ಲ. ಹೀಗಿರುವಾಗ ಈ ಪದಕ್ಕೆ ಬಹಿಷ್ಕಾರ ಹಾಕುವ ಹುನ್ನಾರ ಏಕೋ ತಿಳಿಯದಾಗಿದೆ. ಇಂಥ ಕ್ರಮದಿಂದ ಚರಿತ್ರೆಯಿಂದ ದಲಿತ ಪದವನ್ನು ಅಳಿಸಿಹಾಕಲಾದೀತೆ?


ಹೆಸರಿನಲ್ಲೇನಿದೆ? ಎಂದು ಕೆಲವರು ವಾದಿಸುತ್ತಾರೆ. ಕೆಲವರಿಗೆ ಅದು ಕರೆಯಲೊಂದು ಗುರುತು. ಅಥವಾ ಗುರುತಿಸುವ ಸಾಧನ. ಇನ್ನುಕೆಲವರಿಗೆ ಅದೊಂದು ಅಸ್ಮಿತೆ-ಅನನ್ಯತೆ.ವ್ಯಕ್ತಿಯ ಅಥವಾ ಒಂದು ಸಮುದಾಯದ ಅಸ್ಮಿತೆ ಮತ್ತು ಅನನ್ಯತೆಯನ್ನು ಸೋಚಿಸುವ ಹೆಸರು ಕೇವಲ ಒಂದು ಅಭಿದಾನವಲ್ಲ ಅಥವಾ ಪರಿಭಾಷೆಯಲ್ಲ. ಅದು ಒಂದು ಜನಾಂಗ ಅಥವಾ ಸಮುದಾಯದ ಬದುಕು-ಸಂಸ್ಕೃತಿ-ಇತಿಹಾಸಗಳನ್ನು ಬಿಂಬಿಸುವ ಆತ್ಮಪ್ರತ್ಯಯವೂ ಆಗುತ್ತದೆ. ಆದರೆ ವ್ಯವಸ್ಥೆಯ ಹಲವು ಸ್ತರಗಳಲ್ಲಿ ಇಂಥ ಅತ್ಮಪ್ರತ್ಯವನ್ನು ಅಳಿಸಿಹಾಕುವ, ಅನನ್ಯತೆಯ ದನಿಗಳ ಕೊರಳು ಹಿಚುಕುವ ಪ್ರಯತ್ನಗಳು ನಡೆದಿರುವುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಇದಕ್ಕೊಂದು ಇತ್ತೀಚಿನ ನಿದರ್ಶನ ‘ದಲಿತ’ ಪದಪ್ರಯೋಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ. ಈ ವಿವಾದದ ಮೂಲ ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವ ಶಾಖೆ ಮಾಧ್ಯಮಗಳಿಗೆ ಕಳುಹಿಸಿರುವ ಸಲಹೆ ರೂಪದ ಸುತ್ತೋಲೆ.

ವರದಿ/ಚರ್ಚೆ/ಲೇಖನ ಇತ್ಯಾದಿಗಳಲ್ಲಿ ‘ದಲಿತ’ ಪದವನ್ನು ಬಳಸಬೇಡಿ ಎನ್ನುವ ಕಿವಿಮಾತನ್ನು ಈ ಸುತ್ತೋಲೆ ಹೇಳುತ್ತದೆ. ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಪ್ರಕಟನೆಗಳು ಮತ್ತು ಪ್ರಸಾರಗಳಲ್ಲಿ ದಲಿತ ಪದವನ್ನು ಬಳಸ ಬಾರದು, ಬದಲು ಪರಿಶಿಷ್ಟ ಜಾತಿ ಎಂಬ ಪ್ರಯೋಗವನ್ನು ಬಳಸಬೇಕು ಎನ್ನುತ್ತದೆ ಸರಕಾರದ ನಿರೂಪ. ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯದ ಈ ಸ್ಪಷ್ಟ ಸೂಚನೆಗೆ ಪ್ರೇರಣೆ ಮುಂಬೈ ಹೈಕೋರ್ಟಿನ ನಾಗಪುರ ಪೀಠದ ಇತ್ತೀಚಿನ ಒಂದು ತೀರ್ಪು. ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ದಲಿತ ಪಂಕಜ್ ಮೇಶ್ರಮ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ಸಂಬಂಧವಾಗಿ ಬಾಂಬೆ ಹೈಕೋರ್ಟಿನ ನಾಗಪುರ ಪೀಠ ಜೂನ್ ತಿಂಗಳಿನಲ್ಲಿ ಆದೇಶವೊಂದನ್ನು ನೀಡಿ ‘ದಲಿತ’ ಎಂದು ಸಂಬೋಧಿಸುವ ಬದಲು ಪರಿಶಿಷ್ಟ ಜಾತಿ ಪದ ಬಳಕೆಯನ್ನು ‘ಪರಿಶೀಲಿಸುವಂತೆ’ ತಿಳಿಸಿತ್ತು.

ನಾಗಪುರ ಪೀಠ ತನ್ನ ಆದೇಶದಲ್ಲಿ, ಮಾಧ್ಯಮಗಳಿಗೆ ನಿರ್ದೇಶನ ನೀಡುವ ಪ್ರಶ್ನೆಯನ್ನು ಪರಿಶೀಲಿಸುವಂತೆ ಸ್ಪಷ್ಟವಾಗಿ ತಿಳಿಸಿದೆಯೇ ಹೊರತು ದಲಿತ ಪದದ ಬಳಕೆಯಲ್ಲಿನ ಗುಣದೋಷಗಳನ್ನು ವಿಮರ್ಶಿಸುವ ಗೋಜಿಗೆ ಹೋಗಿಲ್ಲ. ಈ ಆದೇಶಾನ್ವಯ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಜ್ಯ ಸರಕಾರಗಳಿಗೆ ಪತ್ರ ಬರೆದು, ಎಲ್ಲ ಸರಕಾರಿ ಆಡಳಿತ ವ್ಯವಹಾರಗಳಲ್ಲಿ ಮತ್ತು ಜಾತಿ ಪ್ರಮಾಣ ಪತ್ರಗಳಲ್ಲಿ ಸಂವಿಧಾನಾತ್ಮಕ ಪ್ರಯೋಗವಾದ ಪರಿಶಿಷ್ಟ ಜಾತಿ ಪದವನ್ನೇ ಬಳಸತಕ್ಕದ್ದೆಂದು ನಿರ್ದೇಶನ ನೀಡಿತ್ತು. ವಾರ್ತೆ ಮತ್ತು ಪ್ರಸಾರ ಸಚಿವಾಲಯವೂ ಇದರಲ್ಲಿ ಹಿಂದೆ ಬಿದ್ದಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸುವ ಅತ್ಯುತ್ಸಾಹದ ಭರದಲ್ಲಿ, ಮಾಧ್ಯಮಗಳಿಗೆ ಸೂಚನೆ ನೀಡುವ ಬಗ್ಗೆ ‘ಪರಿಶೀಲಿಸಿ’ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎನ್ನುವ ನ್ಯಾಯಾಲಯದ ಮಾತುಗಳು ಅದರ ಗಮನಕ್ಕೆ ಬಂದಂತೆ ಕಾಣುವುದಿಲ್ಲ. ವಾರ್ತೆ ಮತ್ತು ಪ್ರಸಾರ ಸಚಿವಾಲಯ, ಪರಿಶಿಷ್ಟ ಜಾತಿಗಳಿಗೆ ದಲಿತ ಪದ ಬಳಸಬೇಡಿ, ಸಂವಿಧಾನದಲ್ಲಿ ಹೇಳಿರುವಂತೆ ಪರಿಶಿಷ್ಟ ಜಾತಿ ಪದವನ್ನೇ ಬಳಸಿ ಎಂದು ಮಾಧ್ಯಮಗಳಿಗೂ ತಾಕೀತು ಮಾಡಿದೆ. ಸಹಜವಾಗಿಯೇ ಈ ಸಲಹಾ ಸ್ವರೂಪದ ನಿರೂಪಕ್ಕೆ ಮಾಧ್ಯಮಗಳಲ್ಲಿ ಮತ್ತು ದಲಿತ ಸಮುದಾಯಗಳಲ್ಲಿ ವಿರೋಧ ವ್ಯಕ್ತವಾಗಿದೆ.

ಪರಿಶಿಷ್ಟ ಜಾತಿ ಎನ್ನುವುದು ಸಂವಿಧಾನ ಮಾಡಿರುವ ನಾಮಕರಣ. ಆದ್ದರಿಂದ ಅದನ್ನೇ ಬಳಸುವುದು ವಿಹಿತ. ಅಂದರೆ, ಪರಿಶಿಷ್ಟ ಜಾತಿ ಪದಪ್ರಯೋಗ ಸಂವಿಧಾನದಲ್ಲಿರುವುದರಿಂದ, ಅದನ್ನೇ ಬಳಸುವುದು ಯೋಗ್ಯ ಎನ್ನುವ ತರ್ಕ ವಾದದ ಮಟ್ಟಿಗೆ ಸರಿ ಇರಬಹುದು. ಹಾಗೆಂದ ಮಾತ್ರಕ್ಕೆ ದಲಿತ ಪದ ಪ್ರಯೋಗ ಅಸಂವಿಧಾನಾತ್ಮಕವಾಗುವುದಿಲ್ಲ. ದಲಿತ ಪದ ಪ್ರಯೋಗಕ್ಕೆ ಪರಿಶಿಷ್ಟ ಜಾತಿಗಳಲ್ಲೇ ವಿರೋಧ ಇರಬಹುದು. ಹೀಗೆ ವಿರೋಧಿಸುವವರ ಸಂಖ್ಯೆ ಗೌಣ ಎಂಬುದು ಪರವಾಗಿರುವ ಸಮುದಾಯದ ಆಗ್ರಹದಿಂದಲೇ ವೇದ್ಯವಾಗುತ್ತದೆ. ದಲಿತ ಪದ ಶೋಷಿತರ ರಾಜಕೀಯ ಅಧಿಕಾರ ಅಸ್ಮಿತೆ ಮೊದಲಾದ ಹಲವು ಅರ್ಥಗಳನ್ನೊಳಗೊಂಡಿದ್ದು ಈ ಪದ ಪ್ರಯೋಗ ಹೆಚ್ಚು ಜನಮನ್ನಣೆಗೆ ಪಾತ್ರವಾಗಿದೆ. ಹೆಸರಿನಲ್ಲೇನಿದೆ ಎಂದು ಸುಲಭವಾಗಿ ಹುಡಿಹಾರಿಸುವ ಸಂಗತಿಯಲ್ಲ ಇದು. ಹೆಸರು, ಆ ಹೆಸರಿನ ಸಂಬೋಧನೆಯ ಹಿಂದಿನ ಧ್ವನಿ, ಧ್ಯೇಯ ಉದ್ದೇಶಗಳು ಹಲವು ನೆಲೆಗಳಲ್ಲಿ ಕೆಲಸ ಮಾಡುತ್ತವೆ. ಇಂಥ ಅಭಿದಾನಕ್ಕೆ ಪಾತ್ರವಾಗುವ ವ್ಯಕ್ತಿಗಳು ಹಾಗೂ ಸಮುದಾಯದ ಮನಸ್ಸು ಮತ್ತು ಪ್ರಜ್ಞೆಗಳೂ ಮುಖ್ಯವಾಗುತ್ತವೆ. ಹಿಂದೆ ದಲಿತರನ್ನು ಅಸ್ಪಶ್ಯರು ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ತುಳಿತಕ್ಕೊಳಗಾದ ಸಮುದಾಯವನ್ನು ನಿಮ್ನವರ್ಗ ಎಂದು ಗುರುತಿಸಲಾಗಿತ್ತು.

ಗಾಂಧೀಜಿಯವರು ‘ಹರಿಜನ’ ಪದವನ್ನು ರೂಪಿಸಿದ್ದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ‘ಹರಿಜನ’ ಪದವನ್ನು ತೀವ್ರವಾಗಿ ವಿರೋಧಿಸಿದ್ದರು. ಗಾಂಧೀಜಿಯವರ ಸಲಹೆಗೆ ಧಾರ್ಮಿಕ ಸೋಗಿನ, ಆಶ್ರಯಸ್ವರೂಪದ ಆಷಾಢಭೂತಿತನ ಎಂದು ವಿರೋಧ ವ್ಯಕ್ತವಾಗಿದ್ದುಂಟು. ಸ್ವತಂತ್ರ್ಯಾನಂತರ ಕ್ರಮೇಣ ಹರಿಜನ ಪದ ಹಿಂದೆ ಸರಿಯಿತು. ಶೂದ್ರರು, ಅತಿಶೂದ್ರರು ಎನ್ನುವ ಪದಗಳ ಬಳಕೆಯೂ ಹದಿನೆಂಟು ಹತ್ತೊಂಬತ್ತನೆಯ ಶತಮಾನದಿಂದಲೂ ರೂಢಿಯಲ್ಲಿದೆ. ಸಮಾಜ ಸುಧಾರಕ ಜ್ಯೋತಿಬಾ ಫುಲೆಯವರು 1873ರಲ್ಲಿ ಸ್ಥಾಪಿಸಿದ ಸತ್ಯಶೋಧಕ ಸಮಾಜ ತಳಜಾತಿಗಳವರನ್ನು ಶೂದ್ರರು ಎಂದು ಗುರುತಿಸಿದೆ. ಜ್ಯೋತಿಬಾ ಫುಲೆಯವರು ಶೂದ್ರರನ್ನು ‘ದಲಿತರು’ ಎಂದೂ ಕರೆಯುತ್ತಿದ್ದರೆಂದೂ ಹೇಳಲಾಗುತ್ತದೆ. ದಲಿತ ಎನ್ನುವ ಪದ ಮುಖ್ಯವಾಗಿ ಚಲಾವಣೆಗೆ ಬಂದದ್ದು ಶೂದ್ರರ ಹಕ್ಕುಗಳ ಪ್ರತಿಪಾದನೆಯ, ಆತ್ಮವಿಶ್ವಾಸದ ಪ್ರತೀಕ ಪದವಾಗಿ. ಜಾತಿಭೇದ, ತಾರತಮ್ಯಗಳ ವಿರುದ್ಧ, ಅಸ್ಪಶ್ಯತೆ ವಿರುದ್ಧ 1960ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ‘ದಲಿತ್ ಪ್ಯಾಂಥರ್ಸ್’ ಚಳವಳಿ ಮುಖೇನ ದಲಿತ ಪದ ದೇಶಾದ್ಯಂತ ಶೂದ್ರರ ಆತ್ಮಾಭಿವ್ಯಕ್ತಿಯಾಗಿ ಹೆಚ್ಚು ಪ್ರಚಲಿತವಾಯಿತು. ದಲಿತ್ ಪ್ಯಾಂಥರ್ಸ್ ಸಹ ಶೋಷಿತ ನೀಗ್ರೋಗಳ ‘ಬ್ಲ್ಯಾಕ್ ಪ್ಯಾಂಥರ್ಸ್’ನಿಂದ ಪ್ರೇರಿತವಾದದ್ದೇ. ಇದೇ ಅವಧಿಯಲ್ಲಿ ಅಮೆರಿಕದಲ್ಲಿ ನೀಗ್ರೋಗಳ ಹಕ್ಕೊತ್ತಾಯಕ್ಕಾಗಿ ಉಗ್ರಗಾಮಿ ಚಳವಳಿ ನಡೆಸಲು ರೂಪುಗೊಂಡಿದ್ದ ಸಂಘಟನೆ ಬ್ಲ್ಯಾಕ್ ಪ್ಯಾಂಥರ್ಸ್.

‘ದಲಿತ’ ಪದಕ್ಕೆ ನಿಘಂಟಿನಲ್ಲಿ, ದಮನಕ್ಕೆ ಒಳಗಾದವರು, ಶೋಷಿತಜನ, ಆರ್ಥಿಕವಾಗಿ ಸಾಮಾಜಿಕವಾಗಿ ಕೆಳಮಟ್ಟದವರು, ಒಡೆದವರು, ಮುರಿದವರು, ಚದುರಿದವರು ಇತ್ಯಾದಿ ಅರ್ಥಗಳಿವೆ. ದಲಿತ್ ಪ್ಯಾಂಥರ್ಸ್ ಚಳವಳಿ ದಲಿತ ಪದವನ್ನು ಕ್ರಾಂತಿಕಾರಿ ಎಂಬ ಅರ್ಥದಲ್ಲಿ ಬಳಸಿತು. ದಲಿತ ಪದದಲ್ಲಿ ಅಪಮಾನಕಾರಿಯಾದುದಾಗಲೀ ನಿಂದನಾತ್ಮಕವಾದುದಾಗಲೀ ಏನೂ ಇಲ್ಲ. ಹೀಗಿರುವಾಗ ಈ ಪದಕ್ಕೆ ಬಹಿಷ್ಕಾರ ಹಾಕುವ ಹುನ್ನಾರ ಏಕೋ ತಿಳಿಯದಾಗಿದೆ. ಇಂಥ ಕ್ರಮದಿಂದ ಚರಿತ್ರೆಯಿಂದ ದಲಿತ ಪದವನ್ನು ಅಳಿಸಿಹಾಕಲಾದೀತೆ? ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯದ ಈ ಕ್ರಮ ಮಾಧ್ಯಮಗಳಲ್ಲಿ ಹಾಗೂ ದಲಿತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ದಲಿತ ಪದವು ಶೂದ್ರರ, ಶೋಷಿತ ತಳವರ್ಗಗಳ ಆತ್ಮಪ್ರತಿಷ್ಠೆಯೂ ಹೌದು. ಆತ್ಮಪ್ರತ್ಯಯವೂ ಹೌದು. ರಿಪಬ್ಲಿಕನ್ ಪಕ್ಷದ ನಾಯಕರಾದ ಕೇಂದ್ರ ಸಚಿವ ರಾಮದಾಸ್ ಅಠಾವಳೆಯವರು ಹೇಳಿರುವಂತೆ, ದಲಿತ ಪದವು ಈ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ನಡೆಸಿರುವ ಚಳವಳಿಯ ಸಂಕೇತವಾಗಿದೆ, ಶೋಷಿತರ ಹೋರಾಟದ ಒಂದು ರೂಪಕವಾಗಿದೆ. ಬಾಂಬೆ ಹೈಕೋರ್ಟಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮನವಿ ಮಾಡುವುದಾಗಿಯೂ ಅಠಾವಳೆ ತಿಳಿಸಿದ್ದಾರೆ.

‘‘ಪರಿಶಿಷ್ಟ ಜಾತಿ ಎಂದು ಕರೆಯುವುದಕ್ಕೆ ನನ್ನ ಆಕ್ಷೇಪಣೆ ಏನೂ ಇಲ್ಲ, ಆದರೆ ಮಾಧ್ಯಮಗಳಿಗೆ ಮತ್ತು ಸಾಹಿತಿಗಳಿಗೆ ‘ದಲಿತ’ ಪದ ಬಳಸಬೇಡಿ ಎಂದು ಹೇಳುವುದು ನ್ಯಾಯವಲ್ಲ’’ ಎನ್ನುವ ಅಠಾವಳೆಯವರ ಮಾತು ಸಮಂಜಸವಾದದ್ದೇ. ‘‘ದಲಿತ ಪದವೇ ಸ್ವಭಾವತ: ಆಕ್ರಮಣಶೀಲವಾದದ್ದು. ದಲಿತ ಅಥವಾ ಪರಿಶಿಷ್ಟ ಜಾತಿ ಎರಡೂ ತುಳಿತಕ್ಕೊಳಗಾದವರು ಮತ್ತು ಶೋಷಿತರನ್ನು ಸೂಚಿಸುವ ಪದಗಳು. ಶೋಷಣೆಯನ್ನು ಕೊನೆಗೊಳಿಸಿದರೆ ಅಂತಹ ಚರ್ಚೆಗೆ ಆಸ್ಪದವಿರುವುದಿಲ್ಲ’’ಎನ್ನುವುದು ಕೇಂದ್ರದಲ್ಲಿ ದಲಿತರ ಪ್ರತಿನಿಧಿಯಾಗಿರುವ ರಾಮ್‌ವಿಲಾಸ್ ಪಾಸ್ವಾನ್ ಅವರ ಅಂಬೋಣ. ಸುಮಾರು ಒಂದು ದಶಕದಷ್ಟು ಹಿಂದೆಯೇ ಪರಿಶಿಷ್ಟ ಜಾತಿ ಕುರಿತ ರಾಷ್ಟ್ರೀಯ ಆಯೋಗ ದಲಿತ ಪದ ಬಳಕೆಗೆ, ಅದು ಅಸಾಂವಿಧಾನಿಕ ಎಂದು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಸಂವಿಧಾನದ 341ನೇ ವಿಧಿಯನ್ವಯ ರಾಷ್ಟ್ರಪತಿಯವರು ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಜಾತಿಗಳನ್ನು ಪರಿಶಿಷ್ಟ ಜಾತಿಗಳು ಎಂದು ಕರೆಯುವ ಮೂಲಕ ಸಂವಿಧಾನ ಆ ಜಾತಿಗಳಿಗೊಂದು ಕಾಯ್ದೆಬದ್ಧ ಸ್ಥಾನಮಾನ ನೀಡಿದೆ.

ಆದ್ದರಿಂದ ಕೆಳಸ್ತರದ ಜಾತಿಗಳನ್ನು ಪರಿಶಿಷ್ಟಜಾತಿ ಎಂದು ಕರೆಯುವುದೇ ಯೋಗ್ಯ ಎನ್ನುವ ಮಾತು ಸರಕಾರಿ ಕಡತಗಳಿಗೆ ಸಂಬಂಧಿಸಿದಂತೆ ಸರಿ ಇದ್ದೀತು. ಸಂವಿಧಾನದ ಸಿಂಧುತ್ವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸರಕಾರದ ಇಲಾಖೆಗಳಲ್ಲಿ ದಲಿತ ಬದಲು ಪರಿಶಿಷ್ಟ ಜಾತಿ ಎಂದೇ ಬಳಸುವುದು ಸರಿಯಾದ ಕ್ರಮ ಎಂಬ ವಾದವೂ ಸರಕಾರಿ ದಾಖಲೆಗಳ ದೃಷ್ಟಿಯಿಂದ ಸರಿಯಾದುದೇ. ಅಷ್ಟರ ಮಟ್ಟಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, ಎಲ್ಲ ಸರಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಎನ್ನುವ ಪ್ರಯೋಗವನ್ನೇ ಬಳಸಬೇಕೆಂದು ರಾಜ್ಯ ಸರಕಾರಗಳಿಗೆ ನಿರ್ದೇಶಿಸಿರುವುದು ಯುಕ್ತವಾದುದೇ. ಆದರೆ ವಾರ್ತೆ ಮತ್ತು ಪ್ರಸಾರ ಸಚಿವಾಲಯವು ಮಾಧ್ಯಮಗಳು, ಲೇಖಕರು, ಪ್ರಸಾರಕರೂ ದಲಿತ ಪದ ಬಳಸಬಾರದೆಂದು ಸೂಚಿಸಿರುವುದು ಸರಿಯಲ್ಲ. ಹಾಗೆ ನೋಡಿದರೆ ದಲಿತ ಪದದ ವ್ಯಾಪ್ತಿ ಈಗ ಪರಿಶಿಷ್ಟ ಜಾತಿಯವರಿಗೆ ಮಾತ್ರ ಮೀಸಲಾಗಿಲ್ಲ.

ದಲಿತ್ ಪ್ಯಾಂಥರ್ಸ್ ಆಂದೋಲನ ರಾಷ್ಟ್ರಾದ್ಯಂತ ಹರಡಿದ ನಂತರ ಅದರ ವ್ಯಾಪ್ತಿ ವಿಸ್ತಾರಗೊಂಡಿದೆ. ಎಲ್ಲ ಧರ್ಮ-ಜಾತಿಗಳಲ್ಲಿನ ಮಹಿಳೆಯರು, ಹಿಂದುಳಿದವರು, ಶೋಷಿತರೂ ದಲಿತರೇ ಎನ್ನುವವರೆಗೆ ಅದರ ವ್ಯಾಪ್ತಿ ಹಿಗ್ಗಿದೆ. ‘ದಲಿತ’ ಎಂಬ ವಿಶೇಷಣ ಹೊಂದಿರುವ ಹಲವು ಜಾತಿ-ವರ್ಗಗಳನ್ನು ನಾವಿಂದು ದೇಶದ ಉದ್ದಗಲ ಕಾಣುತ್ತಿದ್ದೇವೆ. ದಲಿತ ಚಳವಳಿ ಶೂದ್ರರು ಮೊದಲಾದ ಕೆಳಜಾತಿಗಳ ಅಸ್ಮಿತೆ, ಹಕ್ಕಿನ ಹೋರಾಟಗಳ ಅನನ್ಯತೆಯಾಗಿರುವಂತೆಯೇ ಅವರ ಆತ್ಮಾಭಿವ್ಯಕ್ತಿಯಾಗಿ ದಲಿತ ಸಾಹಿತ್ಯ ಪ್ರಕಟವಾಗುತ್ತಿದೆ. ಅಷ್ಟೇ ಅಲ್ಲದೆ, ದಲಿತ ಸಾಹಿತ್ಯವು ಒಂದು ಸಾಂಸ್ಕೃತಿಕ ಆಂದೋಲನದ ರೂಪವನ್ನು ಪಡೆದುಕೊಂಡಿರುವುದನ್ನು ಕನ್ನಡ, ಮರಾಠಿ, ತೆಲುಗು ಮೊದಲಾದ ಭಾಷೆಗಳಲ್ಲಿ ನಾವು ಕಾಣುತ್ತೇವೆ. ‘ದಲಿತ’ ಬೇಡ ಎಂದಾದಲ್ಲಿ ಮಾಧ್ಯಮಗಳು ದಲಿತ ಸಾಹಿತ್ಯ ಮತ್ತು ಸೃಜನಶೀಲ ಕಲೆಗಳನ್ನು ಏನೆಂದು ಕರೆಯಬೇಕು?

ಹೆಸರುಗಳಿವೆ, ಪದಗಳಿವೆ, ಅವುಗಳಿಗೆ ಅರ್ಥಗಳಿವೆ. ಅವುಗಳನ್ನು ಅಧಿಕಾರಸ್ಥರ ಇಚ್ಛೆಯಂತೆ ಸುಲಭವಾಗಿ ಬದಲಾಯಿಸಲಾಗದು. ದಲಿತ ಪದವನ್ನು ಬಹಿಷ್ಕರಿಸುವ ಮೂಲಕ ದಲಿತರ ಅಸ್ಮಿತೆಯನ್ನೇ, ಆತ್ಮಪ್ರತಿಷ್ಠೆಯನ್ನೇ ಅಳಿಸಿಹಾಕುವ ಪ್ರಯತ್ನವಿದು ಎಂಬ ಅಸಮಾಧಾನ ಅಕಾರಣವಾದುದಲ್ಲ. ಮೋದಿ ಸರಕಾರದ ಈ ಕ್ರಮ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ಮತ್ತೊಂದು ಆಕ್ರಮಣವಾಗಿದೆ. ಮಾಧ್ಯಮಗಳು ಬಳಸುವ ಭಾಷೆಯ ಮೇಲೂ ನಿಯಂತ್ರಣ ಹೇರುವ ಈ ಕ್ರಮ ಹಾಸ್ಯಾಸ್ಪದವಷ್ಟೇ ಅಲ್ಲ ಖಂಡನೀಯವಾದುದು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಶಾಖೆ ವಹಿಸಿಕೊಳ್ಳುವವರಿಗೆ ವಿವೇಚನೆಗಿಂತ ತಮ್ಮ ಧಣಿಗಳನ್ನು(ಪಿಎಂ ಧಣಿಯೋ/ನಾಗಪುರ ಧಣಿಯೋ) ಮೆಚ್ಚಿಸುವ ಉತ್ಸಾಹವೇ ಹೆಚ್ಚಾಗಿರುವಂತೆ ತೋರುತ್ತದೆ. ಇಲ್ಲದಿದ್ದಲ್ಲಿ ಇಂಥ ಅವಸರದ ಆಜ್ಞೆಗಳು ಹೊರಬೀಳುತ್ತಿರಲಿಲ್ಲ. ಸ್ವಲ್ಪಕಾಲದ ಹಿಂದೆ ಸ್ಮತಿ ಇರಾನಿಯವರು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದಾಗ ‘ಸುಳ್ಳು ಸುದ್ದಿ’ ವರದಿ ಮಾಡುವ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವಂತೆ ಆಜ್ಞೆ ಹೊರಡಿಸಿ ಇಂಥದ್ದೇ ಎಡವಟ್ಟು ಮಾಡಿದ್ದರು. ಆಗ ಪ್ರಧಾನ ಮಂತ್ರಿಯವರ ಕಾರ್ಯಾಲಯದ ಮಧ್ಯಪ್ರವೇಶದಿಂದಾಗಿ ಹೊರಡಿಸಿದಷ್ಟೇ ಅವಸರದಲ್ಲಿ ಆ ಆಜ್ಞೆಯನ್ನು ವಾಪಸುತೆಗೆದುಕೊಂಡ ಪ್ರಕರಣವನ್ನು ಜನ ಮರೆತಿರಲಾರರು. ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಸ್ಮತಿ ಇರಾನಿಯವರು ವಾರ್ತಾ ಸಚಿವ ಶಾಖೆಯಿಂದ ನಿರ್ಗಮಿಸಬೇಕಾಯಿತು. ಅವರ ಜಾಗಕ್ಕೆ ಬಂದಿರುವ ರಾಜವರ್ಧನ ಸಿಂಗ್ ರಾಥೋಡ್ ಅವರೂ ಅಂಥದೇ ಎಡವಟ್ಟು ಕೆಲಸವನ್ನು ಈಗ ಮಾಡಿದ್ದಾರೆ. ಸ್ಮತಿ ಇರಾನಿಯವರಿಗಾದ ಗತಿಯನ್ನು ರಾಥೋಡರು ಮರೆಯಬಾರದು. ರಾಥೋಡ್ ಅವರು ಜನರ ವಿರೋಧವನ್ನು ಗಮನಿಸಿ ‘ದಲಿತ’ ಪದಕ್ಕೆ ಹಾಕಿರುವ ಬಹಿಷ್ಕಾರದ ಆಜ್ಞೆಯನ್ನು ಹಿಂದೆಗೆದುಕೊಳ್ಳಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top