ಹಳ್ಳ ಹಿಡಿಯುತ್ತಿದೆಯೇ ಬದುಕು? | Vartha Bharati- ವಾರ್ತಾ ಭಾರತಿ

ಹಳ್ಳ ಹಿಡಿಯುತ್ತಿದೆಯೇ ಬದುಕು?

ಬದುಕು ಬಹುತೇಕ ಬೆತ್ತಲಾಗಿದ್ದರೂ ಪದಗಳು ಹೊಸ ಅರ್ಥ ಪಡೆಯುತ್ತಿವೆ; ಹೊಸ ವಿಚಾರಗಳು, ವ್ಯಾಖ್ಯಾನಗಳು ಸೃಷ್ಟಿಯಾಗುತ್ತಿವೆ; ಶೀರ್ಷಾಸನದಲ್ಲೇ ನಡೆಯುವ ಕಾಲವೂ ಬಂದೀತು. ಆದ್ದರಿಂದ ಇದೇ ಸರಿ ಎಂದು ಹೇಳುವುದೂ ಮೂರ್ಖತನವಾದೀತು.


ನನ್ನ ಸ್ನೇಹಿತರೊಬ್ಬರು ತಮ್ಮ ಪತ್ನಿಯೊಂದಿಗೆ ಭಾರತದ ಒಂದು ಮಹಾನಗರದಲ್ಲಿದ್ದಾರೆ. ಅವರ ಹಿರಿಯರು ಹಳ್ಳಿಯಲ್ಲಿದ್ದಾರೆ; ಮಕ್ಕಳು ತಮ್ಮ ತಮ್ಮ ಸಂಸಾರದೊಂದಿಗೆ ವಿದೇಶದಲ್ಲಿದ್ದಾರೆ. ಈ ಹಿರಿಯರು ವರುಷಕ್ಕೆ ಒಂದು ಸಲವೋ ಎರಡು ಸಲವೋ ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ನೋಡಿಬರಲು ಹೋಗಿ ಬರುತ್ತಾರೆಂದು ಕೇಳಿದೆ. (ಎಲ್ಲರಿಂದ ಹೀಗೆ ಹೋಗುವುದು ಕಷ್ಟಸಾಧ್ಯ.) ಮಕ್ಕಳು ಇದಕ್ಕಿಂತ ಹೆಚ್ಚು ಅಪರೂಪಕ್ಕೆ ತಮ್ಮ ಹಿರಿಯರನ್ನು ನೋಡಲು ಬರುತ್ತಾರೆ. ಆಗ ಈ ಹಿರಿಯ ದಂಪತಿಗೆ ಎಲ್ಲಿಲ್ಲದ ಸಡಗರ. ಬಂದಾಗ ಕೆಲವು ಕಡೆಗೆ ಭೇಟಿ ಕೊಟ್ಟು ನೆನಪುಗಳನ್ನು ಹೇಳಿ ಮರಳುತ್ತಾರೆ. ಮತ್ತದೇ ತಾಂತ್ರಿಕ ಸಂಪರ್ಕ. ಆದರೆ ಅವರಿಗೆ ಜೀರ್ಣಿಸಿಕೊಳ್ಳಲಾಗದ್ದು ಒಬ್ಬರು ಮಾಡಿದ ಈ ಧನಾತ್ಮಕ ಟೀಕೆ: ‘‘ನಿಮಗೇನು, ಹಾಯಾಗಿದ್ದೀರಿ! ಈ ವಯಸ್ಸಿನಲ್ಲಿ ನವದಂಪತಿಯಂತೆ ಸುಖವಾಗಿರಬಹುದು; ಮಕ್ಕಳು ವಿದೇಶಗಳಲ್ಲಿದ್ದಾರೆ; ಹೆತ್ತವರು ಹಳ್ಳಿಯಲ್ಲಿದ್ದಾರೆೆ; ಆರಾಮ!’’

ಇಂತಹ ಆರಾಮವನ್ನು ಅವರು ಎಂದೂ ಬಯಸಿರಲಿಲ್ಲವೆಂದು ಅವರು ಖಾಸಗಿಯಾಗಿಯೂ ಹೇಳಲಾರರು. ಕಾಣದ ಅಂತರ್ಜಲದಂತೆ ಒಳಗಿನ ದುಃಖಗೀತವನ್ನು ಓದುವವರ್ಯಾರು? ಹಾಡುವವರ್ಯಾರು?

ಹಳ್ಳಿಯಲ್ಲಿರುವ ಹಿರಿಯರದ್ದೂ ಇದೇ ಕಥೆ. ಮಕ್ಕಳು, ಮೊಮ್ಮಕ್ಕಳು ವಿದೇಶಗಳಲ್ಲಿ, ಇಲ್ಲವೇ ಬೆಂಗಳೂರು, ಚೆನ್ನೈ, ಮುಂಬೈ, ದಿಲ್ಲಿ ಹೀಗೆ ಮಹಾನಗರಗಳಲ್ಲಿ. ಯಾವಾಗಲಾದರೂ ಹೋಗಿ ಬರುತ್ತಾರೆ. ಆ ಕಿರಿಯರೂ ಅಷ್ಟೇ: ಯಾವಾಗಲಾದರೂ (ಮಹಾನಗರಗಳಲ್ಲಿರುವವರು ವಿದೇಶಗಳಲ್ಲಿರುವವರಿಗಿಂತ ಸ್ವಲ್ಪಹೆಚ್ಚು ಬಾರಿ) ಊರಿಗೆ ಬರುತ್ತಾರೆ. ಆದರೆ ಬಂದು ಅತಿಥಿಗಳಂತಿದ್ದು ಹೋಗುತ್ತಾರೆ. ಅವರು ಮತ್ತೆ ತಮ್ಮ ಮನೆಯಂತಹ (ಇಂಗ್ಲಿಷಿನಲ್ಲಿ ‘ಹೋಮ್‌ಲಿ’ ಎನ್ನುತ್ತೇವಲ್ಲ, ಅಂತಹ) ಅನುಭವವನ್ನು ಕಂಡುಕೊಳ್ಳಬೇಕಾದರೆ ತಮ್ಮ ಮಹಾನಗರಗಳಿಗೆ ಮರಳಬೇಕು; ಅಲ್ಲಿನ ಯಾಂತ್ರಿಕ ಬದುಕಿಗೆ ಮೈಯೊಡ್ಡಬೇಕು. ವಿಶ್ವದ ಎಲ್ಲಕಡೆ ಹೀಗಿದ್ದೀತು; ನನಗೆ ಗೊತ್ತಿಲ್ಲ. ಆದರೆ ನನ್ನದೇ ಸಮಾಜದಲ್ಲಿ ನಡೆಯುತ್ತಿರುವ ಈ ಪರಿವರ್ತನೆಯನ್ನು ಕಾಣುವಾಗ ಯಾವುದೋ ಆತಂಕ ಬಾಧಿಸುತ್ತದೆ. ವಸುಧೈವ ಕುಟುಂಬಕಂ ಹೋಗಲಿ, ನಮ್ಮದೇ ಕುಟುಂಬಗಳು ಎಂತಹ ಸ್ಥಿತಿಗೆ ಬದುಕನ್ನು ತಳ್ಳಿವೆ; ತಳ್ಳುತ್ತಿವೆಯೆಂಬುದನ್ನು ಗಮನಿಸಿದಾಗ ಇದೊಂದು ವಾಪಸಾಗಲಾರದ ಅತಂತ್ರತೆಗೆ ಹಾದಿ ಮಾಡಿಕೊಡುವುದಿಲ್ಲವೇ ಎಂದನ್ನಿಸುತ್ತದೆ. ದಶರಥನಿಗೆ ಸಾವಿನ ಸಂದರ್ಭದಲ್ಲಿ ಮಾತ್ರ ಮಕ್ಕಳು ಬಳಿಯಿಲ್ಲವೆಂಬ ಕೊರಗು; ಈಗ ಬದುಕಿನುದ್ದಕ್ಕೂ.

ಭಾರತದ ಕುರಿತು ಮಾತನಾಡುವಾಗ ಭೂತ/ಗತ ಇಲ್ಲವೇ ಕಲ್ಪಿತ ಭವಿಷ್ಯವೇ ನಮಗೆ ದಾರಿದೀಪ. ಆಗ ಹಾಗಿತ್ತು; ಹೀಗಿತ್ತು ಎಂದೆಲ್ಲ ಹೇಳಿಕೊಳ್ಳುವುದು ನಮಗೆ ಅನಿವಾರ್ಯ. ಕಳೆದ ತಲೆಮಾರಿನಲ್ಲಿ ಸುಖಿಸಿದವರನ್ನು ಈಗ ಹೇಗಿದ್ದೀರಿ? ಎಂದು ಕೇಳಿ ನೋಡಿ; ಅವರು ತಾರ್ಕಿಕವಲ್ಲದ, ದಾರಿ ತಪ್ಪಿದವರಂತೆ ಮತ್ತು ಸರಿದಾರಿ ಯಾವುದೆಂದು ಗೊತ್ತಿಲ್ಲದವರಂತೆ ಏನೇನೋ ವಿವರಣೆಗಳನ್ನು ನೀಡುತ್ತಾರೆ. ಮಕ್ಕಳೆಲ್ಲ ವಿದೇಶದಲ್ಲಿರುವ ಒಬ್ಬರು ಹಿರಿಯರಲ್ಲಿ ‘‘ಹೇಗಿದ್ದೀರಿ?’’ ಎಂದು ಕೇಳಿದೆ. ‘‘ವೃದ್ಧಾಶ್ರಮದಲ್ಲಿದ್ದೇನೆ’’ ಎಂದರು. ಅಚ್ಚರಿಯಾಯಿತು. ಅವರು ದೊಡ್ಡ ಜಮೀನುದಾರರು. ‘‘ನಿಮ್ಮ ತೋಟ, ಮನೆ?’’ ಎಂದು ಪ್ರಶ್ನಿಸಿದೆ. ಅದಕ್ಕವರು ‘‘ನನ್ನ ಮನೆಯೇ ಈಗ ವೃದ್ಧಾಶ್ರಮ!’’ ಎಂದು ಹೇಳಿ ನಕ್ಕರು. ಆ ನಗುವಿನಲ್ಲಿ ನನಗೆ ನಗು ಕಾಣಿಸಲಿಲ್ಲ.

ಇಂತಹ ಅನಾಥ ಪ್ರಜ್ಞೆ ಹಿರಿಯರಿಗೂ, ಕಿರಿಯರಿಗೂ. ಅದಕ್ಕೆ ಒಬ್ಬರು ಹಾಸ್ಯವೆಂಬಂತೆ ಹೇಳಿದರು: ‘‘ವೃದ್ಧಾಶ್ರಮಗಳೊಂದಿಗೇ ಅನಾಥಾಶ್ರಮಗಳೂ ಇದ್ದರೆ ಒಳ್ಳೆಯದು; ಹಿರಿಯರಿಗೆ ಮಕ್ಕಳೂ ಮಕ್ಕಳಿಗೆ ಹೆತ್ತವರೂ ದಕ್ಕುತ್ತಾರೆ.’’ ಅರಿವಿದ್ದೋ ಅರಿವಿಲ್ಲದೆಯೋ ಅವರು ಒಂದು ಸತ್ಯವನ್ನೇ ಹೇಳಿದ್ದರು! ಭಾರತ ಒಂದು ಕಾಲಕ್ಕೆ ಕೃಷಿ ಪ್ರಧಾನ ಸಮಾಜವಾಗಿತ್ತು. ಆ ಕಾಲದಲ್ಲೂ ವಿದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋದವರಿದ್ದರು. ಆದರೆ ಬಹುಪಾಲು ಜನರು ಭಾರತಕ್ಕೆ ಮರಳಿ ಇಲ್ಲೇ ತಮ್ಮ ಬದುಕನ್ನು ಸವೆಸಿದರು. ಗಾಂಧಿ, ಅರವಿಂದ ಮುಂತಾದವರು ಅಲ್ಲೇ ಉಳಿದಿದ್ದರೆ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕು ಏನಾಗುತ್ತಿತ್ತೋ ಗೊತ್ತಿಲ್ಲ.

ಬ್ರಿಟಿಷರ ಕಾಲದಲ್ಲಿ ಗುಲಾಮರಾಗಿ ಪ್ರಭಾವಕ್ಕೋ ಬಲಾತ್ಕಾರಕ್ಕೋ ತುತ್ತಾಗಿ ಅನ್ಯದೇಶಗಳಲ್ಲಿನ ಜಮೀನು, ತೋಟಗಳಿಗೋ ಮನೆಕೆಲಸಕ್ಕೋ ಹೋಗಿ ಅನಿವಾರ್ಯವಾಗಿ ಅಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ (ಭಾರತೀಯ ಮೂಲದ ಎಂದು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವ) ಸಾಹಿತಿ ವಿ.ಎಸ್.ನೈಪಾಲ್ ಹೀಗೆಯೇ ತಮ್ಮ ಮುತ್ತಾತಂದಿರ ಕಾಲದಲ್ಲಿ ವೆಸ್ಟ್ ಇಂಡೀಸ್ ದ್ವೀಪಗಳಿಗೆ ವಲಸೆಹೋದವರಂತೆ. ಅವರಲ್ಲಿ ಭಾರತೀಯತೆಯನ್ನು ಕಾಣುವುದು ನಮಗೆ ಒಂದು ವ್ಯಾವಹಾರಿಕ ಅಥವಾ ಪ್ರತಿಷ್ಠೆಯ ಸಂಗತಿಯಾಗಿದೆ. ಈ ಮಟ್ಟದಲ್ಲದಿದ್ದರೂ ಇಂತಹ ಅನೇಕರಿದ್ದಾರೆ. ಅವರೆಲ್ಲರೂ ನಮಗೆ ಭಾರತೀಯ ಮೂಲದವರು. ನದಿಮೂಲ, ಋಷಿಮೂಲ, ಸ್ತ್ರೀಮೂಲದಂತೆ ಈ ಮೂಲವನ್ನೂ ನಾವು ಬೇಕೆಂದಾಗ ನಮ್ಮ ಅನುಕೂಲಕ್ಕೆ ತಕ್ಕಂತೆ ಕೆದಕುತ್ತೇವೆ. ಮಹಾಭಾರತದಲ್ಲಿ ಕೌರವ-ಪಾಂಡವರ ಶಸ್ತ್ರವಿದ್ಯಾ ಪರೀಕ್ಷೆಯ ಹೊತ್ತಿಗೆ ಅಲ್ಲಿಗೆ ಬಂದ ಕರ್ಣನೆಂಬ ಅನಾಮಿಕನ ಮೂಲವನ್ನು ಕೆದಕಿ ಅವನನ್ನು ರಾಧೇಯನಾಗಿಸಿದ, ಅನ್ಯನಾಗಿಸಿದ ರಾಜಕೀಯವೇ ಈ ದೇಶಕ್ಕೆ ಮಾದರಿಯಂತಿದೆ.

ಕೃಷಿಮೂಲದ ಸಮಾಜವು ವಿಶ್ವದ ಆಗುಹೋಗುಗಳಿಗೆ ತಕ್ಕಂತೆ ಬದಲಾಗಿದೆ; ನಮ್ಮ ಜೀವನವಿಧಾನವು ಬಹುತೇಕ ಪಲ್ಲಟವಾಗಿದೆ. ಇಂದಿಗೂ ಹಳೆಯ ಸಂಪ್ರದಾಯವನ್ನು ಪರಂಪರೆಯನ್ನು ನೆನಪಿಸುವ ಕೆಲವು ಮಂದಿಯಿದ್ದರೆ ಅವರನ್ನು ಔಟ್‌ಡೇಟೆಡ್ ಎಂಬಂತೆ ಕಾಣಲಾಗುತ್ತದೆ. ಆರ್ಥಿಕ ಅಗತ್ಯಗಳೇ ನಮ್ಮ ಬದುಕನ್ನು, ಸಂಬಂಧಗಳನ್ನು ರೂಪಿಸುತ್ತಿರುವುದು ಇಂದಿನ ವ್ಯಂಗ್ಯಗಳಲ್ಲೊಂದು. ಯಾರೇ ಆಗಲಿ, ಅವರ ಮನೆತನದ ವೃತ್ತಿ, ಉದ್ಯೋಗಗಳನ್ನೇ ಅವಲಂಬಿಸಬೇಕೆಂದು ಬಯಸುವುದು ಈಗ ತಪ್ಪಾಗುತ್ತದೆ. ಏಕೆಂದರೆ ಆರ್ಥಿಕ ಬಲವರ್ಧನೆಗೆ ಯಾವುದು ಬೇಕೋ ಅದೇ ಶ್ರೇಷ್ಠವೆಂಬ ತರ್ಕಕ್ಕೆ ಸಮಾಜ ಮುಖಮಾಡಿದೆ. ಆದ್ದರಿಂದ ಕೃಷಿಯಂತಹ ದೇಹದುಡಿಮೆ ಯಾರಿಗೂ ಬೇಡ. ಹೋಲಿಸಿ ನೋಡಿದರೆ ಕೃಷಿಕನಿಗಿಂತ ಹೆಚ್ಚು ಸಂಪಾದನೆ ಮಾಡುವುದು ಮಹಾನಗರಗಳ ಕೃಷಿಪ್ರಯೋಗಶಾಲೆಗಳಲ್ಲಿ ಕೃಷಿಯ ಕುರಿತು ಸಂಶೋಧನೆ ಮಾಡುವವರು; ಇಷ್ಟೇ ಅಲ್ಲ-ಯಕಶ್ಚಿತ್ ಕೃಷಿಯ ಕುರಿತು ಒಂದಷ್ಟು ಸಾಹಿತ್ಯ ಸೃಷ್ಟಿಸಿದರೆ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಕೃಷಿಚಳವಳಿಗಳಲ್ಲಿ ಭಾಗಿಯಾದರೆ, ಕೃಷಿಕನಿಗಿಂತ ಹೆಚ್ಚು ಹಸನಾದ ಬದುಕಿಗೆ ದಾರಿಯಾಗಬಹುದು. ಇಂತಹ ಸ್ಥಿತಿಯಲ್ಲಿ ಕೃಷಿ ಯಾರಿಗೆ ಬೇಕು?

ಹಿಂದಿನ ತಲೆಮಾರಿನಲ್ಲಿ ಒಬ್ಬ ಪ್ರಾಥಮಿಕ ಶಿಕ್ಷ್ಷಕರಿಗೆ ಸಿಕ್ಕುತ್ತಿದ್ದ ಗೌರವ ಇಂದು ಪಿಎಚ್‌ಡಿ ಪದವಿ ಗಳಿಸಿದರೂ ದಕ್ಕುವುದಿಲ್ಲ. ಕಾರಣವೆಂದರೆ ಆಗ ಶಿಕ್ಷಣವು ಒಂದು ವೃತ್ತಿಯಾಗಿತ್ತು. ಇಂದಿನಂತೆ ಉದ್ಯೋಗಮಾತ್ರವಾಗಿರಲಿಲ್ಲ. ಹೊಟ್ಟೆಪಾಡಿನ ಮಂದಿ ಇನ್ನೊಬ್ಬರಿಗೆ ಹೊಟ್ಟೆಪಾಡನ್ನೇ ಹೇಳಿಕೊಡಬಹುದೇ ಹೊರತು ಬದುಕಿಗೆ ಬೆಳಕಾಗಲಾರರು. ಆದ್ದರಿಂದ ಇಂದಿನ ಶಿಕ್ಷಣವು ಒಂದು ಉದ್ಯೋಗ ಖಾತ್ರಿ ಯೋಜನೆಯಂತಿದೆ. ನಮ್ಮ ಶಿಕ್ಷಣವು ಅಷ್ಟು ಅಪಮೌಲ್ಯಗೊಂಡಿದೆಯಾದರೂ ಪದವಿಗಳ ಮೂಲಕ ಜೀವನದ ಆರ್ಥಿಕತೆಯನ್ನು ಬಲಗೊಳಿಸಬಹುದೆಂಬುದು ಎಲ್ಲರಿಗೂ ತಿಳಿದಿದೆ.
 

ಆದರೂ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ತಕ್ಷಣದಲ್ಲಿ ಸರಕಾರದ ಯೋಜನೆಗಳನ್ನು ಕಾರ್ಯಕ್ರಮಗಳನ್ನು ದೂಷಿಸಲಾಗುತ್ತಿದೆ. ಆದರೆ ನಮ್ಮ ಸಮಾಜವೇ ಆರ್ಥಿಕ ಬುನಾದಿಯ ಮೇಲೆ ತನ್ನ ಮೌಲ್ಯಗಳನ್ನು ನಿರ್ಧರಿಸಲಾರಂಭಿಸಿದಾಗ ಪ್ರತಿಯೊಬ್ಬನೂ ಅಂತಹ ಹಾದಿಯಲ್ಲೇ ಹೋಗುವುದು ಅನಿವಾರ್ಯ. ಇದರಿಂದಾಗಿ ಉದ್ಯೋಗವೆಂದರೆ ಸುಲಭದ ಉದ್ಯೋಗವೆಂಬಂತಾಗಿದೆ. ಇಂದಿನ ಸಾಫ್ಟ್‌ವೇರ್ ಉದ್ಯೋಗಗಳು ಇಷ್ಟೊಂದು ಆಕರ್ಷಕವಾದದ್ದರ ಹಿಂದೆ ಯಾವ ಮೌಲ್ಯಾಧಾರವೂ ಇಲ್ಲ. ತಾನು ನಿವೃತ್ತಿಯ ಹೊತ್ತಿಗೆ ತಲುಪಲಾರದ ವೇತನವೊಂದು ತನ್ನ ಮಗನಿಗೆ ಉದ್ಯೋಗದ ಆರಂಭದಲ್ಲೇ ಸಿಗುತ್ತದೆಯಾದರೆ ಅಂತಹ ಉದ್ಯೋಗದ ಸಾಮಾಜಿಕ ಪ್ರಸ್ತುತತೆ, ಮೌಲ್ಯ ಯಾರಿಗೆ ಬೇಕು? ಬೆಲೆ ಮತ್ತು ಮೌಲ್ಯದ ವ್ಯತ್ಯಾಸವು ಗೋಚರಿಸುವುದೇ ಇಲ್ಲಿ. ನಮ್ಮ ಸ್ನೇಹಿತರೊಬ್ಬರ ಮಗನಿಗೆ ಈಗ ಎರಡು-ಮೂರು ದಶಕಗಳ ಹಿಂದೆಯೇ ತಿಂಗಳೊಂದರ ಎರಡೋ ಮೂರೋ ಸಾವಿರ ಡಾಲರ್ ಸಂಬಳದ ಉದ್ಯೋಗ ಲಭಿಸಿದಾಗ ಹಿರಿಯರೊಬ್ಬರು ‘‘ಅದೆಂತಹ ಉದ್ಯೋಗವೇ ಇರಲಿ, ಆ ವಯಸ್ಸಿಗೆ ಹೆಚ್ಚೇ!’’ ಎಂದು ಉದ್ಗಾರವೆತ್ತಿದ್ದರು. ಆರ್ಥಿಕತೆಯ ಸೂತ್ರಗಳಾದ ಬೇಡಿಕೆ ಮತ್ತು ಪೂರೈಕೆಗಳ ಆಧಾರದಲ್ಲಿ ನಿರ್ಣಯವಾಗುವ ಸಂದರ್ಭದಲ್ಲಿ ಒಂದು ಉದ್ಯೋಗವು ಕೊಡಬಲ್ಲ ನೆಮ್ಮದಿ, ಅಥವಾ ತಲ್ಲಣಗಳ ಕುರಿತು ಯೋಚಿಸಲು ವ್ಯವಧಾನವಿರುವುದಿಲ್ಲ. ಉದ್ಯೋಗ ಅರಸುವ ಮಂದಿಯೂ ಇಷ್ಟೇ: ತಮ್ಮ ಆಸಕ್ತಿಗೆ, ಪ್ರವೃತ್ತಿಗೆ ಈ ಉದ್ಯೋಗ ಸರಿಯೇ ಎಂದು ಗಮನಿಸುವುದೇ ಇಲ್ಲ. ಬಹುತೇಕ ನಮ್ಮ ಉನ್ನತ ಸಂಬಳದ ಚಾಕರಿಯಲ್ಲಿರುವವರ (ಅವರಿರುವ ಸ್ಥಿತಿಯಲ್ಲಿ ‘ಚಾಕರಿ’ ಎನ್ನುವುದಕ್ಕಿಂತ ಬೇರೆ ಪದವು ಸರಿಯಾಗಲಾರದೇನೋ?) ಸ್ಥಿತಿ ಹೇಳಿಕೊಳ್ಳಲಾಗದ ದುಃಖವಾಗಿದೆ (ಇದಕ್ಕೆ ತುಳು ಭಾಷೆಯಲ್ಲಿ ‘ಪಣಾಂತಿ ದುಃಖ’ ಎಂಬ ಸುಂದರ ನುಡಿಗಟ್ಟಿದೆ.) ಇಂದು ಇಂತಹ ಉನ್ನತಪಗಾರಗಳ ಉದ್ಯೋಗಗಳಲ್ಲಿರುವವರ ಸ್ಥಿತಿ ಎಲ್ಲ ಅನುಕೂಲಗಳನ್ನು ನೀಡಬಲ್ಲ ಆದರೆ ಬಿಡುಗಡೆಯಿಲ್ಲದ ‘ಎ’ ದರ್ಜೆಯ ಸೆರೆಮನೆಯಂತಿದೆ. ಒಂದು ಚಿಟ್ಟೆಗಿರುವ ಸ್ವಾತಂತ್ರ್ಯವೂ ಇಲ್ಲದ ಚಿನ್ನದ ಪಂಜರದ ಹಕ್ಕಿಗಳು ನೋಡುವ ಸಾಮಾನ್ಯರಲ್ಲಿ ಮತ್ಸರವನ್ನು, ಮತ್ತು ತಮ್ಮಿಳಗೆ ವಿಷಾದವನ್ನು ತುಂಬಿಕೊಂಡಿವೆ. ಪ್ಲಾಂಟೇಷನ್‌ಗಳ ಅನೇಕ ಯುವಮನಸ್ಸುಗಳು ತಮ್ಮ ಹೆತ್ತವರೇ ತೋಟಗಳಲ್ಲಿ ಇತರರಿಗೆ ಕೊಡುವ ಸಂಬಳಕ್ಕಿಂತ ಕಡಿಮೆ ಸಂಬಳಕ್ಕೆ ಬೆಂಗಳೂರಿನಲ್ಲಿ ದುಡಿಯುವ ಉದಾಹರಣೆಗಳು ಬೇಕಷ್ಟಿವೆ. ಆದರೆ ಈ ದೂರದ ಬೆಟ್ಟಕ್ಕೆ ಮನಸೋಲದವರು ಯಾರಿದ್ದಾರೆ?

ಕೆಲವು ಬಾರಿ ಹೀಗೆ ಮಹಾನಗರಗಳನ್ನೋ ವಿದೇಶಗಳನ್ನೋ ಸೇರುವುದು ಅಗತ್ಯವಾಗುತ್ತದೆ. ಇಂದು ಕಲಿಕೆಯೆಂದರೆ ಒಂದು ಉದ್ಯೋಗವೂ ಹೌದು. ವಿದ್ಯಾರ್ಥಿವೇತನವೆಂಬ ಹೆಸರು ಅತ್ಯಂತ ಆಪ್ಯಾಯಮಾನವಾಗಿದೆ. ಪಡೆದ ಶಿಕ್ಷಣವು ನಿಮಗೆ ಸ್ವಾವಲಂಬನೆಯನ್ನು ಹೇಳಿಕೊಡದೆ ಇನ್ನೊಬ್ಬರಿಗಾಗಿ ದುಡಿಯುವುದೇ ನಿಮ್ಮ ಬದುಕಿನ ಹಣೆಬರಹವೆಂಬ ಪಾಠವನ್ನು ಮನಸ್ಸಿನಲ್ಲಿ ಮೂಡಿಸಿದರೆ ಆಗ ಅಂತಹ ದುಡಿಮೆಯೇ ಪೂರ್ವನಿರ್ಧರಿತ ಗುರಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ. ಉದಾಹರಣೆಗಳಲ್ಲಿ ಈ ಶಿಕ್ಷಣವು ಎಷ್ಟೊಂದು ದೀರ್ಘವಾಗಿರುತ್ತದೆಯೆಂದರೆ ಈತನ ಕಲಿಕೆ ಮುಗಿಯುವ ಮೊದಲೇ ಈತನ ಮಕ್ಕಳು ಉದ್ಯೋಗಕ್ಕೆ ಸೇರುವ ಹಂತಕ್ಕೆ ತಲುಪಿರುತ್ತಾರೆ. ಹೀಗೆ ಹಿಂದಿನವನ ರಿಲೇಕೋಲು ಪಡೆಯದೆಯೇ ಮುಂದಿನವನಿಗೆ ರಿಲೇಕೋಲು ನೀಡುವ ವಿಚಿತ್ರಗಳೂ ಸಂಭವಿಸುತ್ತವೆ. ಬದುಕು ಬಹುತೇಕ ಬೆತ್ತಲಾಗಿದ್ದರೂ ಪದಗಳು ಹೊಸ ಅರ್ಥ ಪಡೆಯುತ್ತಿವೆ; ಹೊಸ ವಿಚಾರಗಳು, ವ್ಯಾಖ್ಯಾನಗಳು ಸೃಷ್ಟಿಯಾಗುತ್ತಿವೆ; ಶೀರ್ಷಾಸನದಲ್ಲೇ ನಡೆಯುವ ಕಾಲವೂ ಬಂದೀತು. ಆದ್ದರಿಂದ ಇದೇ ಸರಿ ಎಂದು ಹೇಳುವುದೂ ಮೂರ್ಖತನವಾದೀತು.
‘‘ಇವೆಲ್ಲ ಯೋಚಿಸುವವರಿಗಲ್ಲ; ಕೊರಗುವವರಿಗೆ ಮರುಗುವವರಿಗೆ’’ ಎಂದು ಟೀಕಿಸುವವರಿದ್ದಾರೆ. ಹೆಂಡತಿ-ಮಗನನ್ನು ಬಿಟ್ಟವರು ಬುದ್ಧರಾಗು ತ್ತಾರೆ; ಹೀಗಿರುವಾಗ ವೈಯಕ್ತಿಕ ವರ್ಚಸ್ಸಿಗಾಗಿ, ಪ್ರತಿಷ್ಠೆಗಾಗಿ, ಎಲ್ಲವನ್ನೂ ಬಿಡುವ ಹೊಸ ಬದುಕಿನಲ್ಲಿ ಮನುಷ್ಯರು ಏನೂ ಆದಾರು. ಹೀಗೆ ಮೇಲೆ ತಲುಪಿದವನೊಬ್ಬನ ಪತ್ನಿ ಆತನ ಪಲ್ಲಕ್ಕಿಯ ಹಿಂದೆ ಓಡುತ್ತ ಬಂದು ನಾನು ನಿಮ್ಮ ಪತ್ನಿ ಕಣ್ರೀ, ನನ್ನನ್ನೂ ಗುರುತು ಸಿಗುವುದಿಲ್ಲವೇ? ಎಂದು ಆರ್ತಳಾಗಿ ಕೇಳಿದಾಗ ಆತ ನನಗೆ ನನ್ನ ಗುರುತೇ ಇಲ್ಲ, ಇನ್ನು ನಿನ್ನನ್ನು ಗುರುತು ಸಿಗುವುದಾದರೂ ಹೇಗೆೆ? ಎಂದನಂತೆ. ಇಂತಹ ಅಭಿಜ್ಞಾನ ಸ್ಥಿತಿ ನಮ್ಮದು.

ಇಂತಹ ಸ್ಥಿತಿಯನ್ನೇ ಕವಿ ನುಡಿದದ್ದು:

ಪಟ್ಟಣದ ಟಾರು ಕಾಂಕ್ರೀಟು ರಸ್ತೆಗಳಲ್ಲಿ ಮನಮನಕ್ಕೂ ಕಟ್ಟೆ ಕಟ್ಟುವಿಕ್ಕಟ್ಟು ಮನೆ ನಡುಗಡ್ಡೆಯೊತ್ತಿನಲಿ
ಯಾವ ಕಾಲವೊ ಋತುವೊ ದೇವತೆಗಳೊ-ಅದನ್ನು ಲೆಕ್ಕಿಸುವ ಮುಕ್ಕರಾರಯ್ಯ?
ಡಾಮರೊಸರುವ ನೆಲದ ಪಾಷಾಣ ಹೃದಯದಲಿ
ಕಾಣಿಸವು ಹಳೆಯ ದೈವಗಳು ದೇವತೆಗಳು.

ಗಡಿಯಾರ ಮುಳ್ಳಿನೂಳಿಗದ ಜನಜಾತ್ರೆಯಲಿ

ಕಾರು ಮೋಟಾರು ಸೈಕಲ್ಲು ದೇವತೆಗಳಿಗೆ

ದಾರಿ ಬಿಟ್ಟಡ್ಡಾಗಿ, ಪಾದಚಾರಿಯ ದಾರಿ ಹುಡುಕಿ ಮುಂದೋಡುವನ ಕಣ್ಣು ಕಂಡೀತೇ ಜಲಪ್ರಳಯ ಚಿಹ್ನಗಳ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top