ಸ್ವಾರ್ಥಾನುಕೂಲಸಿಂಧು ರಾಜ/ಸಮಾಜ/ಧರ್ಮ-ಕಾರಣ

ಪ್ರಾಯಃ ಲಾರ್ಡ್ ವಿಲಿಯಂ ಬೆಂಟಿಕ್, ರಾಜಾರಾಮ ಮೋಹನ ರಾಯ್ ಅವರಿಲ್ಲದಿದ್ದರೆ, ಇಂದು ಹಿಂದೂ ಮಹಿಳೆಯರು ಸಹಗಮನಕ್ಕೆ ಆಹುತಿಯಾಗ ಬೇಕಿತ್ತು. ಹಾಗೊಂದು ವೇಳೆ ಸುಟ್ಟುಹೋಗದಿದ್ದರೆ ತಲೆ ಬೋಳಿಸಿ ಹಗಲು ಪೂರ್ತಿ ಮಠದ ಹೊರ ಆವರಣದಲ್ಲಿ ಹೂವಿನ ಮಾಲೆಗಳನ್ನು ಕಟ್ಟುತ್ತ, ಉಡುಪಿಯಲ್ಲೋ ಮಥುರೆಯಲ್ಲೋ ಕೃಷ್ಣನ ಕನಸು ಕಟ್ಟುತ್ತ ಬದುಕಿರಬೇಕಾಗಿತ್ತು.


ಮಾಧ್ಯಮಗಳು ಅಗತ್ಯ ಪೀಡೆಯೆನ್ನಬಹುದು. ಅವುಗಳಲ್ಲಿ ಪ್ರಕಟವಾಗುವುದನ್ನೆಲ್ಲ (ನನ್ನ ಅಂಕಣವೂ ಸೇರಿ!) ಜನರು ಗಂಭೀರವಾಗಿ ಸ್ವೀಕರಿಸುತ್ತಾರೆಂದೇನಿಲ್ಲ. ಆದರೆ ಅವಿಲ್ಲದೆ ದಿನಚರಿ ಪೂರ್ಣವಾಗುವುದಿಲ್ಲ. ಒಟ್ಟು ಸಮಾಜದ ಹರಿವಿನ ದಿಕ್ಕು ಎತ್ತ ಎಂಬುದರ ನಾಡಿ ಮಿಡಿತ ಮಾಧ್ಯಮಗಳಲ್ಲಿದೆಯೆಂಬುದಂತೂ ಸತ್ಯ. ಪತ್ರಿಕೆಗಳ ಸುದ್ದಿ, ಜಾಹೀರಾತು ಮತ್ತು ಚಿತ್ರಗಳು, ದೃಶ್ಯಮಾಧ್ಯಮಗಳಲ್ಲಿ ಪ್ರದರ್ಶನಗೊಳ್ಳುವ 24x7 ಸುದ್ದಿ, ಜಾಹೀರಾತು, ಮನರಂಜನಾ ಸರಣಿಗಳು ನಮ್ಮ ಮಾಧ್ಯಮದ ಗುಣಮಟ್ಟವನ್ನಷ್ಟೇ ಪ್ರಸ್ತುತಪಡಿಸುತ್ತದೆಯೆಂದು ತಿಳಿದರೆ ತಪ್ಪು; ಅದು ಸಮಾಜದ ಗುಣಮಟ್ಟವನ್ನೂ ಬೆತ್ತಲೆ ನಿಲ್ಲಿಸಿದೆ. ಜನರು ಇಂದು ಮೌಲ್ಯಯುತ ಕಾಣ್ಕೆಗಳನ್ನು ಬಯಸುತ್ತಿಲ್ಲ; ಬದಲಾಗಿ ಅಗ್ಗದ (ಒಂದು ಕಾಲದಲ್ಲಿ ‘ಅಗ್ಗ’ ಎಂಬ ಪದಕ್ಕೆ ‘ಶ್ರೇಷ್ಠ’ ಎಂಬ ಅರ್ಥವೂ ಇತ್ತು!) ವ್ಯಕ್ತಿ-ವಸ್ತು-ವಿಚಾರಗಳ ಕೀಳು ಅಭಿರುಚಿಯನ್ನೇ ತಿಂದು ಬಾಯಿರುಚಿ ಕೆಟ್ಟಂತಿದೆ. ಒಂದು ಸಂದರ್ಶನ, ಚರ್ಚೆ ಅಥವಾ ಇನ್ನೇನೋ ಮಾತುಕತೆಯಲ್ಲಿ ಭಾಗವಹಿಸುವವರು ತಮ್ಮ ಅಭಿಪ್ರಾಯವನ್ನು ಮಂಡಿಸುವ ರೀತಿಯನ್ನು ಗಮನಿಸಿದರೆ ಇವರು ಇಡೀ ಜಗತ್ತಿನ ಎತ್ತರಕ್ಕೆ ನಿಂತು ಯುಗದರ್ಶನವನ್ನು ನೀಡಲು ತಯಾರಾದವರಂತಿರುತ್ತಾರೆ. ಒಂದಷ್ಟು ಜನರ ಮೆಚ್ಚುಗೆ-ಅದಕ್ಕೆ ಕಾರಣಗಳೇನೇ ಇರಲಿ- ತನ್ನ ಕಾಲದ, ಜಗತ್ತಿನ ಸರ್ವರ ಮೆಚ್ಚುಗೆಯೆಂಬಂತೆ ವರ್ತಿಸುವುದನ್ನು ಗಮನಿಸಿದರೆ ಇಂತಹ ಪ್ರಚಾರಾಸಕ್ತಿಯಿಂದ ಪಾರಾದವರು ನಿಜಕ್ಕೂ ಅದೃಷ್ಟವಂತರು ಅನ್ನಿಸುತ್ತದೆ.
ನನ್ನ ಲೇಖಕ ಮಿತ್ರರೊಬ್ಬರು ಒಂದು ಜೀವಂತ ಮತ್ತು ಸ್ವಂತ (ಅಂದರೆ ನಮ್ಮ ಬಹುಪಾಲು ಲೇಖಕ-ಚಿಂತಕರಂತೆ ಕಡ ತಾರದೆ) ನಿದರ್ಶನವನ್ನು ಹೇಳಿದರು. ಹಾಲು ಒಡೆದರೆ ಅದನ್ನು ಅನಿವಾರ್ಯವಾಗಿ ಪನೀರ್ ಮಾಡಿಕೊಂಡು ಉಣ್ಣುವುದು ಕಾಲೋಚಿತ ಧರ್ಮ. ಆದರೆ ಹಾಲು ಇರೋದೇ ಒಡೆದು ಬಳಸಲು ಎಂದು ಈ ಕಾಲದ ಸಮಾಜ ತಿಳಿದಿದೆ. ಅದಕ್ಕೇ ಅವರು ಈ ಕಾಲದ ಮತ್ತು ಮುಖ್ಯವಾಗಿ ಈ ದೇಶದ ಸಂಸ್ಕೃತಿಯನ್ನು ‘ಪನೀರ್ ಸಂಸ್ಕೃತಿ’ ಎಂದರು. ಅವರು ಹೇಳಿದ್ದು ಒಟ್ಟಾರೆ ಜೀವನಮೌಲ್ಯಗಳ ಕುಸಿತದ ಕುರಿತಾದದ್ದು. ಅದನ್ನು ನನ್ನೊಡನೆ ಅವರು ಹಂಚಿಕೊಂಡರೆಂಬುದೇ ನನಗೆ ಹೆಮ್ಮೆ.
 
ನಮ್ಮ ಸುತ್ತಣ ರಾಜಕಾರಣ, ಧರ್ಮಕಾರಣ, ಕೊನೆಗೆ ಸಮಾಜಕಾರಣವೂ ಹೀಗೆ ಎಲ್ಲ ಕಡೆಯೂ ಸಲ್ಲುವ ಮತ್ತು ಕಾಲಾಂತರದಲ್ಲಿ ಎಲ್ಲಿಯೂ ಸಲ್ಲದ ತರ್ಕಗಳನ್ನು ಒಡ್ಡುತ್ತಿದೆ. ಇದನ್ನು ತಕ್ಷಣ ಒಪ್ಪಿಓಡುವ ದೊಡ್ಡ ಪ್ರಮಾಣದ ಜನರು ನಮ್ಮ ಸಮಾಜದಲ್ಲಿರುತ್ತಾರೆ. ತಾವು ಹೇಳುವ ಮಾತು, ಮಾಡುವ ಕಾರ್ಯ ಇವುಗಳಿಂದ ಭವಿಷ್ಯಕ್ಕೆ, ಭವಿಷ್ಯದ ಜಗತ್ತಿಗೆ (ಜಗತ್ತು ದೊಡ್ಡ ಪದ, ಸಮಾಜ ಎಂದಿರಲಿ) ಎಂತಹ ಪರಿಣಾಮವನ್ನು ಬೀರುತ್ತದೆ ಎಂದು ಯೋಚಿಸುವುದೇ ಇಲ್ಲ. ಕೊನೆಗೆ ತಮ್ಮ ಮಕ್ಕಳೇ ಈ ಪರಿಣಾಮಕ್ಕೆ ಬಲಿಬೀಳಬಹುದು ಎಂಬ ಸ್ವಾರ್ಥದೃಷ್ಟಿಯೂ ಇರುವುದಿಲ್ಲ. ಹಣಸಂಪಾದನೆಗೆ ಮನೆಯ ಆವರಣದಲ್ಲಿ ಗಾಂಜಾಗಿಡ ಬೆಳೆದಂತೆ ಇದು. ಈ ಹವ್ಯಾಸವು ವಿದ್ಯಾವಂತನ್ನಾಗಲಿ, ವೃತ್ತಿಪರರನ್ನಗಲಿ, ಕಲಾವಿದ, ಸಾಹಿತಿ, ಚಿಂತಕರನ್ನಾಗಲಿ, ಕೊನೆಗೆ ಎಲ್ಲ ಬಿಟ್ಟವರಂತಿರಬೇಕಾದ ಸನ್ಯಾಸಿಗಳನ್ನೂ ಬಿಡುವುದಿಲ್ಲ. ಈಚೆಗೆ ನಡೆದ ಸಾಹಿತ್ಯ ಹಬ್ಬದಲ್ಲಿ ಒಬ್ಬ ಚಲನ ಚಿತ್ರ ನಿರ್ಮಾಪಕರು- ಅವರಿಗೆ ಚಿಂತಕರೆಂಬ ಕಿರೀಟ ಬೇರೆ- ಉದಾರವಾದಿಗಳು/ಚಿಂತಕರು ಎಲ್ಲಾ ದೇಶಗಳಲ್ಲಿ ಇದ್ದರೂ ಅವರು ತಮ್ಮ ದೇಶವನ್ನು ಹೀಗಳೆಯುವುದಿಲ್ಲ; ಆದರೆ ಭಾರತದಲ್ಲಿರುವ ಉದಾರವಾದಿಗಳ/ಚಿಂತಕರ ಉದ್ದೇಶವೇ ದೇಶವನ್ನೊಡೆಯುವುದು ಎಂಬರ್ಥದ ಮಾತನ್ನಾಡಿದರು. ಸಾಹಿತ್ಯ ಹಬ್ಬಗಳನ್ನು ಗಂಭೀರವಾಗಿ ಕಾಣುವುದು ತಪ್ಪು. ಅಲ್ಲಿ ಖ್ಯಾತನಾಮರು ಸೇರಿ ಮೋಜಿನ ನಡುವೆ ಒಂದಿಷ್ಟು ವಿಚಾರಗಳನ್ನೂ ಹೇಳುತ್ತಾರೆಂಬ ಕಾರಣಕ್ಕೆ ಮತ್ತು ಅಂತಹ ಉತ್ಸವಗಳಿಗೆ ವೆಚ್ಚಮಾಡುವುದಕ್ಕೆ ಬೇಕಷ್ಟು ಹೊನ್ನು ಸರಕಾರ ಇಲ್ಲವೇ ಕಾರ್ಪೊರೇಟ್ ಜಗತ್ತಿನಲ್ಲಿ ಇದೆಯೆಂಬ ಕಾರಣಕ್ಕೆ ಅವು ಮಾದ್ಯಮಗಳಲ್ಲಿ ವರದಿಯಾಗುತ್ತವೆ. ವೇದಿಕೆ ಸಿಕ್ಕಾಕ್ಷಣ ಹೀಗೆ ಹೇಳುವುದು ಸುಲಭ. ಬಹುಪಾಲು ಇಂತಹ ಹಬ್ಬಗಳಲ್ಲಿ ಪಾಲ್ಗೊಳ್ಳುವವರು ಅವರ ಬಳಗವೇ ಆದ್ದರಿಂದ ಕೈಚಪ್ಪಾಳೆಗಳು ಧಾರಾಳವಾಗಿರುತ್ತವೆ. ಆದರೆ ಇಂತಹ ಮೇಧಾವಿಗಳು ದೇಶ ಮತ್ತು ಸರಕಾರದ ನಡುವಣ ವ್ಯತ್ಯಾಸಗಳನ್ನು ಗಮನಿಸುವುದೇ ಇಲ್ಲ. ಸರಕಾರವನ್ನು ಟೀಕಿಸಿದವರನ್ನು ದೇಶದ್ರೋಹಿಗಳಂತೆ ಕಾಣಲಾಗುತ್ತದೆ! ಈ ದೇಶದ ಮತಾಂಧರಿಗೆ ರಾಮಚಂದ್ರ ಗುಹಾರಂತಹ ಇತಿಹಾಸಕಾರ ದೇಶದ್ರೋಹಿ! ಆದ್ದರಿಂದ ಅವಕಾಶವಾದಿ ಚಿಂತಕರು ತಮಜ್ಮ ವಾದದ ಪೊಳ್ಳುತನವನ್ನು ಅರಿತಿದ್ದರೂ ಗಮನಿಸಿದರೂ ತಮ್ಮ ವ್ಯೆಹರಚನೆಗೆ ಅವು ಅಡ್ಡಿಯಾಗುವುದರಿಂದ ಅವನ್ನು ಬಣ್ಣದ ಬೇಗಡೆಯಿಂದ ಮುಚ್ಚಿ ಅತ್ಯಾಕರ್ಷಕ ಹೊದಿಕೆಯ ಮೂಲಕ ಪ್ರದರ್ಶಿಸುತ್ತಾರೆ. ಸರಕಾರವನ್ನು ಟೀಕಿಸುವವರನ್ನು ಅರ್ಬನ್ ನಕ್ಸಲರೆಂಬ ಹೆಸರಿಟ್ಟು ಲೇವಡಿಮಾಡುವುದು ಇಂದು ಒಂದು ಜನಪ್ರಿಯ ಹವ್ಯಾಸವಾಗಿದೆ. (ಹಿಂದೆ ‘ಢೋಂಗಿ ಜಾತ್ಯತೀತ’ ಎಂಬ ಪದವು ಹೀಗೇ ಸೃಷ್ಟಿಯಾಗಿತ್ತು!) ಗಂಭೀರವಾಗಿ ಯೋಚಿಸುವವರು ಇಂತಹ ಪೊಳ್ಳುತನಕ್ಕೆ ಬೆದರುವುದೂ ಇಲ್ಲ; ಚಿಂತಿಸುವುದೂ ಇಲ್ಲವಾದ್ದರಿಂದ ಇಂತಹ ಅಗ್ಗದ ಟೀಕೆಗಳು ವಿಶೇಷ ಪ್ರತಿರೋಧವಿಲ್ಲದೆ ಮಾರಾಟವಾಗುತ್ತವೆ.)

ಈ ರೋಗ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿದೆಯೆಂಬುದಕ್ಕೆ ಈ ಮುನ್ನುಡಿ. ಉಡುಪಿಯ ಪೇಜಾವರ ಮಠದ ಶ್ರೀಗಳು ಧರ್ಮದ ಕುರಿತು ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು ಎಂದು ಫರ್ಮಾನ್ ಹೊರಡಿಸಿದ್ದಾರೆ. ಸಂದರ್ಭಾನುಸಾರ ನಿಲುವುಗಳನ್ನು ಬದಲಾಯಿಸಿಕೊಳ್ಳುವುದರಲ್ಲಿ ಶ್ರೀಗಳು ಎತ್ತಿದ ಕೈ. ಏಕೆಂದರೆ ನಿಂತಿರುವುದು ಕ್ಯಾಲೆಂಡರಿನ ಲಕ್ಷ್ಮೀದೇವರ ಚಿತ್ರದಂತೆ ಕಮಲದ ಮೇಲೆ! ಇದೇ ಮಾತನ್ನು ಅವರು ಈ ಹಿಂದಿನ ಯಾವ ತೀರ್ಪಿನ ಕಾಲದಲ್ಲೂ ಹೇಳಿದ್ದು ನೆನಪಾಗುವುದಿಲ್ಲ. ಇತರ ಧರ್ಮಗಳ ಕುರಿತು ಬಂದ ತೀರ್ಪುಗಳನ್ನು ಸ್ವಾಗತಿಸುವ ಶ್ರೀಗಳು ಶಬರಿಮಲೆಯ ಕುರಿತಂತೆ ಮುದುಡಿದ್ದಾರೆ. ದೇಶದ ಸಂವಿಧಾನದಡಿ ಕಾರ್ಯ ನಿರ್ವಹಿಸುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಪುನವಿಮರ್ಶೆಗೊಳ್ಳುವವರೆಗಾದರೂ ಅದನ್ನು ಎತ್ತಿಹಿಡಿಯಬೇಕಲ್ಲ! ಸಮಾಜದಲ್ಲಿ ಸಮಾನತೆಯನ್ನು ಹೇಳುವ ಸನ್ಯಾಸಿಗಳು, ಹರಿಜನಕೇರಿಗೆ ಹೋಗುವಂತಹ, ಅವರೇ ಹೇಳುವಂತೆ ‘‘ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿ’’ದ್ದ, ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಳ್ಳುವ ಮಠಾಧಿಪತಿಗಳು ಈಗ ಮಾತೃಸ್ವರೂಪಿ ಮಹಿಳೆಯರು ಶಬರಿಮಲೆಗೆ ಪ್ರವೇಶಿಸುವುದನ್ನು ವಿರೋಧಿಸುತ್ತಾರೆ. ಪ್ರಾಯಃ ಲಾರ್ಡ್ ವಿಲಿಯಂ ಬೆಂಟಿಂಕ್, ರಾಜಾರಾಮ ಮೋಹನ ರಾಯ್ ಅವರಿಲ್ಲದಿದ್ದರೆ, ಇಂದು ಹಿಂದೂ ಮಹಿಳೆಯರು ಸಹಗಮನಕ್ಕೆ ಆಹುತಿಯಾಗುತ್ತ, ಹಾಗೊಂದು ವೇಳೆ ಸುಟ್ಟುಹೋಗದಿದ್ದರೆ ತಲೆ ಬೋಳಿಸಿ ಹಗಲು ಪೂರ್ತಿ ಮಠದ ಹೊರ ಆವರಣದಲ್ಲಿ ಹೂವಿನ ಮಾಲೆಗಳನ್ನು ಕಟ್ಟುತ್ತ, ಉಡುಪಿಯಲ್ಲೋ ಮಥುರೆಯಲ್ಲೋ ಕೃಷ್ಣನ ಕನಸು ಕಟ್ಟುತ್ತ ಬದುಕಿರಬೇಕಾಗಿತ್ತು. ನಮ್ಮ ಯಾವ ಸನ್ಯಾಸಿಗಳೂ ಮಠಾಧೀಶರೂ ಅವರತ್ತ ತಿರುಗಿ ನೋಡುತ್ತಿರಲಿಲ್ಲ! (ತಿರುಗಿ ನೋಡುವುದರಿಂದಲೇ ಮೀ ಟೂ ಹುಟ್ಟಿಕೊಂಡದ್ದು!) ಈ ಬಾರಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸಂಘಪರಿವಾರ ಬಳಸಿಕೊಳ್ಳುತ್ತಿರುವುದು ಮತೀಯ ಕಾರಣಗಳಿಗಾಗಿ ಅಲ್ಲ; ಧಾರ್ಮಿಕ ಕಾರಣಗಳಿಗಾಗಿಯೂ ಅಲ್ಲ; ಸಾಮಾಜಿಕ ಕಾರಣಕ್ಕಂತೂ ಅಲ್ಲವೇ ಅಲ್ಲ. ಅದು ಹೋರಾಡುತ್ತಿರುವುದು ಕೇರಳದಲ್ಲಿರುವ ಎಡಪಂಥೀಯ ಸರಕಾರದ ವಿರುದ್ಧದ ರಾಜಕೀಯ ಕಾರಣಕ್ಕೆ ಎನ್ನುವುದು ಸ್ಪಷ್ಟ. ಕಾಂಗ್ರೆಸ್ ಪಕ್ಷವೂ ತನ್ನ ಪ್ರಸ್ತುತತೆಯನ್ನು ಗಟ್ಟಿಗೊಳಿಸುವ ಬದಲು ಈ ತಪ್ಪು ಹಾದಿಯನ್ನೇ ಹಿಡಿದು ಅಪ್ರಸ್ತುತವಾಗುತ್ತಿದೆ. ರಾಜಕಾರಣ ಹೇಗೂ ಇರಲಿ, ನಾರಾಯಣ ಗುರುವಿನಂತಹ ಮಹಾನುಭಾವರಿಂದ ಸಮಾನತೆಯ ಪಾಠವನ್ನು ಕೇಳಿದ ಹಿಂದೂ ಸಮಾಜವು ಅದನ್ನು ಅನುಷ್ಠಾನಗೊಳಿಸುವತ್ತ ಈ ತೀರ್ಪಿನ ಸಂದರ್ಭವನ್ನು ಬಳಸಿಕೊಳ್ಳಬೇಕಾಗಿತ್ತು. ಆದರೆ ಶಾಶ್ವತ ವಾದ ಭಕ್ತಿ, ನೆಮ್ಮದಿ, ಧಾರ್ಮಿಕತೆಯೇ ಈ ಸಮಾಜಕ್ಕಿಲ್ಲದಿರುವಾಗ ಎಲ್ಲವನ್ನೂ ತೀರ ತಾತ್ಕಾಲಿಕವಾದ ವ್ಯಾವಹಾರಿಕ ದುರುಪಯೋಗಕ್ಕೆ ಬಳಸಿ ಕೊಳ್ಳುವುದು ಭಾರತೀಯ ಸಮಾಜದ ಗುಣಮಟ್ಟಕ್ಕೆ ಕನ್ನಡಿ ಹಿಡಿದಂತಿದೆ.

ಪೇಜಾವರಶ್ರೀಗಳು ಮಹಿಳೆಯರಿಗೆ ತಾಳುವಿಕೆಗಿಂತ ತಪವು ಇಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಇದನ್ನೇ ಅವರು ತಾವು ಪ್ರತಿನಿಧಿಸುವ ಧರ್ಮಸಂಸದಿಗೆ ಹೇಳಿದರೆ ಇಂದು ನಾವು ಅಯ್ಯಪ್ಪನ ಹೆಸರಿನಲ್ಲಿ ಇಷ್ಟೊಂದು ಸಾಮಾಜಿಕ ಪ್ರಕ್ಷುಬ್ದತೆಯನ್ನು ನೋಡಬೇಕಾಗಿರಲಿಲ್ಲ. ಮಹಿಳಾಭಕ್ತರು ಎಂದು ಉಲ್ಲೇಖಿಸುವುದೇ ಅಕ್ಕಮಹಾದೇವಿಗೆ, ಮೀರಾಬಾಯಿಗೆ, ಸತಿಸಕ್ಕೂಬಾಯಿಗೆ ಮಾಡುವ ಅವಮಾನ. ಗಾರ್ಗಿ-ಮೈತ್ರೇಯಿಯಂತಹವರು, ಶಂಕರಾಚಾರ್ಯರೊಂದಿಗೆ ವಾದಿಸಿ ದರೆಂದು ಹೇಳಲಾದ (ಮಂಡನಮಿಶ್ರರ ಪತ್ನಿ) ಭಾರತಿದೇವಿಯಂಥವರು ಗಂಡಸರಿಗೆ ಸಮದಂಡಿಯಾಗಿ ಜ್ಞಾನಪಿಪಾಸುಗಳಾಗಿದ್ದವರು. ಭಗವಂತನನ್ನು ಲಿಂಗಭೇದವಿಲ್ಲದೆ ಕಂಡವರು. ಈಗ ಪೇಜಾವರ ಶ್ರೀಗಳಂತಹ ತಲೆನರೆತ ಸನ್ಯಾಸಿಗಳು ಮಹಿಳೆಯರಿಗೆ ‘ಪ್ರತ್ಯೇಕ ಆಸನ ವ್ಯವಸ್ಥೆ’ (ದಕ್ಷಿಣ ಕನ್ನಡದಲ್ಲಿ ಯಕ್ಷಗಾನ ಮೇಳದವರು ತಮ್ಮ ಕರಪತ್ರದಲ್ಲಿ ಹೀಗೆ ಪ್ರಕಟಿಸುತ್ತಿದ್ದರು!) ಯನ್ನು ಮಾಡುತ್ತಿರುವುದು ವಿಷಾದನೀಯ ವಿಶೇಷ. ಶಬರಿಮಲೆಯ ಘಟನೆ ಹಿಂದೂ ಮಹಿಳೆಯರನ್ನು ಮಧ್ಯಯುಗಕ್ಕೆ ತಳ್ಳಿದೆ ಮಾತ್ರವಲ್ಲ, ಮುಸ್ಲಿಮ್ ಮಹಿಳೆಯರಿಗಿರುವ ಸ್ವಾತಂತ್ರ್ಯವೂ ಇಲ್ಲದಂತೆ ಮಾಡಿದೆ. ಈಗಲೇ ಮಹಿಳೆಯರು ಎಚ್ಚತ್ತುಕೊಳ್ಳದಿದ್ದರೆ ಅಯ್ಯಪ್ಪನ ಹಾದಿಯನ್ನು ನಮ್ಮ ಇತರ ದೇವರುಗಳೂ ಹಿಡಿದರೆ ಅಚ್ಚರಿಯಿಲ್ಲ. ಸಂಪ್ರದಾಯವನ್ನು ಅನುಸರಿಸುವ ಇಂತಹ ಸಮಾಜದ್ರೋಹದ ಕೆಲಸಗಳು ಎಲ್ಲೆಡೆ ನಡೆಯುತ್ತಿವೆ. ಆದರೆ ಅವನ್ನು ಹತ್ತಿಕ್ಕುವಷ್ಟು ಚಿಂತನೆಯನ್ನು ಕಾರ್ಯೋನ್ಮುಖತೆಯನ್ನು ಸಮಾಜವು ಮಾಡಿದೆ. ಈಗಾಗಲೇ ಬಹುತೇಕ ದೇವಾಲಯಗಳಲ್ಲಿ ಬ್ರಾಹ್ಮಣೇತರರು ಅರ್ಚಕರಾಗಿ ಸೇವೆ ಸಲ್ಲಿಸಲು ಸಂವಿಧಾನ ಮತ್ತು ಅದರಡಿಯ ಕಾನೂನು ಅವಕಾಶಮಾಡಿಕೊಟ್ಟಿದೆ. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಪ್ರಗತಿಪಥದಲ್ಲಿ ನಡೆಯದಿದ್ದರೆ ಸಮಾನತೆಯಲ್ಲಿ ಒಳ ಅಸಮಾನತೆಯನ್ನು ಆಚರಿಸುವ ಇಂತಹ ವಿಚಾರಗಳನ್ನು ವರ್ಣಾಶ್ರಮಧರ್ಮವು ಮತ್ತೆ ಆವರಿಸುವ ಸಾಧ್ಯತೆಯಿದೆ. ಶ್ರೇಣೀಕೃತ ಜಾತಿ-ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಮತ್ತೆ ಆಚರಿಸುವ ಅಪಾಯವೂ ಇದೆ. ಮಹಿಳೆಯರಿಗೆ ಪ್ರವೇಶ ಕೂಡದೆಂದು ವಾದಿಸುವ ಬ್ರಾಹ್ಮಣೇತರರು ತಮಗೆ ಬ್ರಾಹ್ಮಣ ಕೇಂದ್ರಿತ ಪೂಜಾಸ್ಥಾನಗಳಲ್ಲಿ ಪ್ರವೇಶ ಬೇಕೆಂದು ವಾದಿಸುವುದಾದರೂ ಹೇಗೆ?

  
ಪೇಜಾವರಶ್ರೀಗಳು ಪ್ರತಿನಿಧಿಸುವ ವರ್ಗ ಅಥವಾ ಸಮುದಾಯವು ‘ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾಗಬೇಕು’ ಎಂಬ ಹಂಬಲ ದಲ್ಲಿದೆ. ಮತ್ತು ಈ ಘಟನೆಯಿಂದ ಕೇರಳದಲ್ಲಿ ಹೇಗಾದರೂ ಎಡಪಂಥದ ಸರಕಾರವನ್ನು ಕೆಳಗಿಳಿಸಬೇಕೆಂಬ ತವಕತೋಟಿಗಳೇ ಮುಖ್ಯವಾಗಿವೆ. ಮುಂದಿನ ತಲೆಮಾರಿನ ಹಿತಕ್ಕಿಂತ ಮುಂದಿನ ಚುನಾವಣೆಯ ಹಿತವೇ ಮುಖ್ಯವೆನ್ನುವಂತೆ ಪ್ರತಿಭಟನೆಯ ಹಾದಿ ಸಾಗಿದೆ. ಕೇರಳದ ಸರಕಾರ ತನ್ನ ಭವಿಷ್ಯವನ್ನು ಒತ್ತೆಯಿಟ್ಟು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸುವ ಮೂಲಕ ಸಾಮಾಜಿಕ ಪ್ರಗತಿಯನ್ನು ಸಾಧಿಸುತ್ತದೆಯೆಂದು ಆಶಿಸುವುದಷ್ಟೇ ಈಗ ಉಳಿದಿರುವುದು. ವಿಷಾದವೆಂದರೆ ಸರ್ವೋಚ್ಚ ನ್ಯಾಯಾಲಯವು ತನ್ನ ಕಾಲಡಿಯಲ್ಲೇ ಬೆಂಕಿ ಕುದಿಯುತ್ತಿರುವುದನ್ನು ಗಮನಿಸಿಯೂ ಸುಮ್ಮನಿರುವುದು. ಅಯೋಧ್ಯೆಯ ಕುರಿತಾಗಿ ವಾದಪ್ರಕ್ರಿಯೆಗೆ (ಇದನ್ನು ಮಾಧ್ಯಮಗಳು ವಿಚಾರಣೆಯೆಂದೇ ವರದಿಮಾಡುತ್ತಿವೆ!) ಅವಸರ ಮಾಡುವುದಿಲ್ಲವೆಂದು ಹೇಳಿದ ಆನಂತರ ವೈರಾಗ್ಯಚಕ್ರವರ್ತಿಗಳೆಲ್ಲ ಮೈಕೊಡವಿ ಧರ್ಮದ ಕುರಿತು ಉಪದೇಶಮಾಡಲು ಆರಂಭಿಸಿದ್ದಾರೆ. ಧರ್ಮದ ಕತ್ತಿ-ಕೊಡಲಿಗಳು ಹರಿತವಾಗುತ್ತಿವೆ. ಮಾಧ್ಯಮಗಳು ಜನಜಾಗೃತಿಯನ್ನು ಮಾಡಬೇಕಾದದ್ದೇ ಇಂತಹ ಸಂದರ್ಭದಲ್ಲಿ. ತೀರಾ ಕಳಪೆ ರಾಜಕೀಯ ಟೀಕೆಗಳನ್ನು ವರದಿ ಮಾಡುವ, ವಂದಿಮಾಗಧರಂತೆ ವರ್ತಿಸುವ ಬದಲಿಗೆ ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕೆಗಳು ತೋರಿಸುತ್ತಿದ್ದ ಧೀಮಂತಿಕೆಯನ್ನು ನಮ್ಮ ಮಾಧ್ಯಮ ಮಿತ್ರರು ತೋರಿಸಬೇಕಾಗಿದೆ. ಆದರೆ ಮತ್ತೆ ಅದೇ ಗುಣಮಟ್ಟದ ಪ್ರಶ್ನೆ ಧುತ್ತೆಂದು ಎದುರಾಗುತ್ತಿದೆ. ಅಡಿಗರು ಹೇಳಿದಂತೆ ‘‘ಆ ಎಲ್ಲವಕ್ಕೂ ದಿಲ್ಲಿಯ ಕಡೆಯೆ ‘ಕೇಶವಂ ಪ್ರತಿ’. ಇಷ್ಟಿಷ್ಟುದ್ದ ಗಡ್ಡ ಕಟ್ಟಿಕೊಂಡರೆ ಋಷಿ; ಹತ್ತಾರು ಹೊತ್ತಗೆಯ ತಿಣಿಕಿದರೆ ಸಾಹಿತ್ಯ; ನಾಲ್ಕಾರು ಭೇತಾಳಗಳ ಬೆನ್ನಲ್ಲಿ ಹೊತ್ತು ಕಂಬಳಗದ್ದೆಗಿಳಿದವನೆ ರಾಜಕಾರಣಿ; ಜೈಲು ದಾಖಲೆ ಮೆರೆವ ಪ್ರತಿಯೊಬ್ಬನೂ ದೇಶಭಕ್ತ; ನಮ್ಮ ನಿಮ್ಮ ಕಿಸೆ ಕತ್ತರಿಸಿ ಖುಷಿಯಾಗಿ ವೇದಿಕೆಯ ಮೇಲೆ ಸಮಾಜವಾದ ರಿಕಾರ್ಡು ಹಚ್ಚಿದರೆ ದೀನದಲಿತೋದ್ಧಾರ; ಕಾಲಕಾಲಕ್ಕೆ ಸರಿಯಾದ ವೇಷ ಮಾತ್ರ ಅಗತ್ಯ.’’
ದೇಶದ ಹಿರಿಮೆ, ಸಂವಿಧಾದ ಹಿರಿಮೆ, ಎಲ್ಲವೂ ಸರಿ; ಆದರೆ ಏನು ಸಾರ್ಥಕ- ಸ್ವಾರ್ಥಸಾಧಕ ರಾಜಕಾರಣ, ಸಮಾಜಕಾರಣ, ಧರ್ಮಕಾರಣ ಇವೇ ಒಡ್ಡೋಲಗದಲ್ಲಿದ್ದರೆ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top