ಮರು ನಾಮಕರಣವೆಂಬ ಮಹಾನ್ ಯಜ್ಞ

ಹಿಂದಿನ ಸರಕಾರದ ಅನೇಕ ಯೋಜನೆಗಳು ಎನ್‌ಡಿಎ ಸರಕಾರದ ಮರು ನಾಮಕರಣದ ಸಾಂಕ್ರಾಮಿಕಕ್ಕೆ ತುತ್ತಾಗಿವೆ: ‘ನಿರ್ಮಲ ಭಾರತ ಅಭಿಯಾನ’ವು ಈಗ ‘ಸ್ವಚ್ಛ ಭಾರತ’ವಾಗಿದೆ. ‘ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ’ಯು ‘ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ’ಯಾಗಿದೆ. ‘ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ’ಯು ‘ಅಟಲ್ ನಗರ ಪುನರುತ್ಥಾನ ಮತ್ತು ಪರಿವರ್ತನಾ ಯೋಜನೆ’ಯಾಗಿದೆ. ಹೀಗೆ ಮರು-ನಾಮಕರಣ ಹೊಂದಿದ ಇತರ ಯೋಜನೆಗಳಲ್ಲಿ ‘ಡಿಜಿಟಲ್ ಇಂಡಿಯಾ’, ‘ಪ್ರಧಾನಮಂತ್ರಿ ಕೃಷಿ ನೆರವು ಯೋಜನೆ’ ಮುಂತಾದ ಅನೇಕ ಯೋಜನೆಗಳಿವೆ. ‘ಆಧಾರ್’, ‘ಜನಧನ’, ‘ಜಿಎಸ್‌ಟಿ’ ಇವೂ ಹೊಸ ಮುಖವಾಡಗಳೇ!


ಮರು ನಾಮಕರಣಗಳ ಯುಗ ಇದು. ಅಧಿಕಾರದಲ್ಲಿರುವ ಸ್ವರತಿ ಸಂಪ್ರೀತರು ತಮ್ಮ ವೈಯಕ್ತಿಕ ತೀಟೆಗೆೆ ಎಲ್ಲವನ್ನೂ ಹೊಸ ಹೆಸರಿನಿಂದ ಕರೆಯಲು ಆರಂಭಿಸಿದ್ದಾರೆ. ಸರಕಾರದಿಂದ ನಡೆಸುತ್ತಿರುವ ಯೋಜನೆಗಳಿಂದ ಮೊದಲ್ಗೊಂಡು ನಗರ-ಪಟ್ಟಣಗಳವರೆಗೆ ಈ ಮರು-ನಾಮಕರಣ ಪರ್ವದ ಮೆರವಣಿಗೆ ಸಾಗುತ್ತಿದೆ. ಇನ್ನು ನಮ್ಮ ರಾಜಕಾರಣಿಗಳು ತಮ್ಮ ಹೆಸರುಗಳನ್ನು ಭಗತ್ ಸಿಂಗ್, ಚಂದ್ರಶೇಖರ ಆಝಾದ್, ಮುಂತಾದ ಸ್ವಾತಂತ್ರ್ಯ ಹೋರಾಟಗಾರರಿಂದ ಆರಂಭವಾಗಿ ನಾಥೂರಾಮ್ ಗೋಡ್ಸೆ ಮುಂತಾದ ಅಹಿಂಸಾಹಂತಕರ ವರೆಗೆ ಹೊಸ ಹೆಸರುಗಳಿಗೆ ಯಾವಾಗ ಬದಲಾಯಿಸುತ್ತಾರೋ ಗೊತ್ತಿಲ್ಲ. ಯೋಗಿ ಆದಿತ್ಯನಾಥ್ ಅವರು ಮೋದಿಯವರನ್ನು ಕುರಿತು ‘‘ಈ ಮರುನಾಮಕರಣದ ಹಾದಿಯಲ್ಲಿ ನಿಮ್ಮ ಹೆಸರನ್ನು ವಾಜಪೇಯಿ ಎಂದು ಮರು ನಾಮಕರಣಮಾಡಬೇಕೆನಿಸುತ್ತದೆ’’ ಎಂದು ಹೇಳುವ ಒಂದು ವ್ಯಂಗ್ಯಚಿತ್ರ ಹಿಂದೂ ಪತ್ರಿಕೆಯಲ್ಲಿ (ಉದ್ದೇಶಪೂರ್ವಕವಾಗಿಯೇ ಹಿಂದೂ ಎಂಬ ಪದಕ್ಕೆ ಉದ್ಧರಣಾ ಚಿಹ್ನೆಯನ್ನು ಹಾಕಿಲ್ಲ) ಪ್ರಕಟವಾಗಿತ್ತು. ಮತ್ತು ಭಾರತದಲ್ಲಿ ಸದ್ಯ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಈ ದೇಶವನ್ನು ‘ಅನಾಹುತ ಭಾರತ’ ಎಂದು ಮರು-ನಾಮಕರಣ ಮಾಡಬೇಕೇನೋ ಬಲ್ಲವರೇ ಹೇಳಬೇಕು!

ಅಮೆರಿಕದಲ್ಲಿ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಿರೋಧಿಸುವುದೆಂದರೆ ಅಮೆರಿಕವನ್ನು ವಿರೋಧಿಸಿದಂತೆ ಎಂಬ ಹೊಸ ರಾಷ್ಟ್ರಗೀತೆ ಆರಂಭವಾಗಿದೆ. ಟ್ರಂಪ್ ಅವರಿಗೆ ಹೋಲಿಸಿದರೆ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ಎಷ್ಟೋ ವಾಸಿ. ಅವರೂ ಈ ನೀತಿಯನ್ನು ಅಂತರ್‌ರಾಷ್ಟ್ರೀಯ ಹಂತದಲ್ಲಷ್ಟೇ ಸಾರಿ ‘‘ನೀವು ಒಂದೋ ನಮ್ಮ ಪರ, ಇಲ್ಲವೇ ವಿರೋಧಿಗಳ ಪರ’’ ಎಂದು ಜಗತ್ತಿನ ಎಲ್ಲ ಸಾರ್ವಭೌಮ ರಾಷ್ಟ್ರಗಳಿಗೆ ಕರೆಕೊಟ್ಟಿದ್ದರು. ನಡುವೆ ಯಾರೂ ಸಲ್ಲುವಂತಿರಲಿಲ್ಲ! ಈ ಕುರಿತು ಶಶಿ ತರೂರ್ ಉಲ್ಲೇಖಿಸಿದ ಒಂದು ಘಟನೆ ಹೀಗಿದೆ: ಆಗಿನ ಅಮೆರಿಕದ ಗೃಹ ಕಾರ್ಯದರ್ಶಿ ‘‘ನೀವು ನಮ್ಮ ಜೊತೆಗಿದ್ದೀರೋ ಅಥವಾ ವಿರೋಧಿಯಾಗಿದ್ದೀರೋ? ಎಂದು ಕೇಳಿದಾಗ ದಿವಂಗತ ಪಂಡಿತ್ ನೆಹರೂ ‘ಹೌದು’ ಎಂದು ಉತ್ತರಿಸಿದ್ದರಂತೆ!’’ (ಈ ಬಗೆಯ ಬುದ್ಧಿಮತ್ತೆ ಇಂದಿನ ರಾಜಕಾರಣಿಗಳಿಗಿದ್ದೀತೆಂದು ಅಪೇಕ್ಷಿಸುವುದು ಅಥವಾ ಅವರಿಂದ ಅಂತಹ ಚುಟುಕು ಉತ್ತರವನ್ನು ನಿರೀಕ್ಷಿಸುವುದು ಅಸಾಧ್ಯ!)
 
 ಇದು ಬಹಿರಂಗವಾಗಿಯಲ್ಲದಿದ್ದರೂ ಭಾರತದಲ್ಲಿ ಈಗ ಪ್ರಚಲಿತವಿದೆ. ಹಿಂದಿನ ಸರಕಾರದ ಅನೇಕ ಯೋಜನೆಗಳು ಎನ್‌ಡಿಎ ಸರಕಾರದ ಮರು-ನಾಮಕರಣದ ಸಾಂಕ್ರಾಮಿಕಕ್ಕೆ ತುತ್ತಾಗಿವೆ: ‘ನಿರ್ಮಲ ಭಾರತ ಅಭಿಯಾನ’ವು ಈಗ ‘ಸ್ವಚ್ಛ ಭಾರತ’ವಾಗಿದೆ. ‘ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ’ಯು ‘ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ’ಯಾಗಿದೆ. ‘ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ’ಯು ‘ಅಟಲ್ ನಗರ ಪುನರುತ್ಥಾನ ಮತ್ತು ಪರಿವರ್ತನಾ ಯೋಜನೆ’ಯಾಗಿದೆ. ಹೀಗೆ ಮರು-ನಾಮಕರಣ ಹೊಂದಿದ ಇತರ ಯೋಜನೆಗಳಲ್ಲಿ ‘ಡಿಜಿಟಲ್ ಇಂಡಿಯಾ’, ‘ಪ್ರಧಾನಮಂತ್ರಿ ಕೃಷಿ ನೆರವು ಯೋಜನೆ’ ಮುಂತಾದ ಅನೇಕ ಯೋಜನೆಗಳಿವೆ. ‘ಆಧಾರ್’, ‘ಜನಧನ್’, ‘ಜಿಎಸ್‌ಟಿ’ ಇವೂ ಹೊಸ ಮುಖವಾಡಗಳೇ! ಹನುಮದ್ವಿಕಾಸ ಆತನನ್ನು ದಲಿತನನ್ನಾಗಿಸಿದೆ! ಎಲ್ಲಿಯ ವರೆಗೆ ಜನರು ಇಂತಹ ಭರವಸೆಗಳಿಗೆ ಮತ್ತು ಮುಖವಾಡಗಳಿಗೆ ಮೋಸಹೋಗುತ್ತಾರೋ ಅಲ್ಲಿಯವರೆಗೂ ರಾಜಕಾರಣಿಗಳು ಇದನ್ನೇ ಮಾಡುತ್ತಿರುತ್ತಾರೆ. ಮಲೇಶ್ಯಾದಲ್ಲಿ ಒಂದು ಚುಟುಕು ಪ್ರಚಲಿತವಿದೆ: ಮೃಗಾಲಯವೊಂದರ ಮಂಗಗಳಿಗೆ ಬೆಳಿಗ್ಗೆ ಮೂರು ಮತ್ತು ಸಂಜೆ ಎರಡು ಬಾಳೆಹಣ್ಣುಗಳನ್ನು ನೀಡಲಾಗುತ್ತಿತ್ತು. ಇದಕ್ಕೆ ತೃಪ್ತವಾಗದ ಮಂಗಗಳು ತಮಗೆ ಹೆಚ್ಚು ಬಾಳೆಹಣ್ಣುಗಳನ್ನು ನೀಡಬೇಕೆಂದು ಅಹವಾಲುಮಾಡಿದವು. ಆಗ ಅದರ ವ್ಯವಸ್ಥಾಪಕರು ಅವುಗಳನ್ನು ಕರೆದು ‘‘ಸರಿ, ಸಣ್ಣ ಬದಲಾವಣೆ ಮತ್ತು ಹೊಂದಾಣಿಕೆಗಳಿಗೆ ನೀವು ಒಪ್ಪಿಕೊಂಡರೆ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ’’ ಎಂದನಂತೆ. ಸರಿ, ಮಂಗಗಳು ಒಪ್ಪಿದವು. ಆನಂತರ ಅವಕ್ಕೆ ಸಂಜೆ ಮೂರು ಬಾಳೆಹಣ್ಣುಗಳನ್ನು ಮತ್ತು ಬೆಳಗ್ಗೆ ಎರಡು ಬಾಳೆಹಣ್ಣುಗಳನ್ನು ನೀಡಲು ಆರಂಭಿಸಿದರು. ಮಂಗಗಳು ಹಿರಿಹಿರಿಹಿಗ್ಗಿದವು!

ಇಂತಹ ಪರಿಸ್ಥಿತಿ ಭಾರತದಲ್ಲಿ ಚಾಲ್ತಿಯಲ್ಲಿದೆ. ಶಬರಿಮಲೆಯ ಕುರಿತ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸುವಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸಯಾಮೀ ಅವಳಿಗಳಾಗಿವೆ. ಆದ್ದರಿಂದ ಈಗಿರುವುದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ನಿರೀಕ್ಷಿಸುವುದು ಕಷ್ಟ. ಇಂತಹ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ತಜ್ಞರೂ ಹೋರಾಟಗಾರರೂ ಕಾರಣರೇ. ಒಂದೆರಡು ನಿದರ್ಶನಗಳನ್ನು ಗಮನಿಸಬಹುದು: ಭಾರೀ ಹೋರಾಟಗಾರರೆಂದೇ ಬಿಂಬಿತರಾದ (ನಿಜಕ್ಕೂ ಒಂದು ಹಂತದಲ್ಲಿ ಅವರು ಗಾಂಧಿಯಂತಲ್ಲದಿದ್ದರೂ ಜಯಪ್ರಕಾಶ ನಾರಾಯಣರಂತೆ ದೇಶವನ್ನು ಹೊಸ ಹಾದಿಯತ್ತ ನಡೆಸಬಹುದೆಂಬ ನಿರೀಕ್ಷೆಯೂ ಇತ್ತು) ಅಣ್ಣಾ ಹಝಾರೆ ಒಂದು ಘಟ್ಟದಲ್ಲಿ ತಮ್ಮ ಬಗ್ಗೆ ವಿಪರೀತ (ಅಹಂ)ಭಾವವನ್ನು ಆರೋಪಿಸಿಕೊಂಡರು. ತಮ್ಮ ಸುತ್ತಲಿರುವ ಮಂದಿಗಳೆಲ್ಲ ತಮ್ಮ ಬೆಳಕಿನಲ್ಲೇ ಹೊಳೆಯುತ್ತಿದ್ದಾರೆಂಬ ಗ್ರಹಿಕೆ ಯಲ್ಲಿ ತಮ್ಮ ಚಳವಳಿಯನ್ನು ಅರ್ಧದಲ್ಲಿ ಕೈಬಿಟ್ಟರು. ತಮ್ಮ ಹೊರತಾಗಿ ಇತರರು ನಗಣ್ಯವೆಂದು ಸಾರಿದರು. ಹೀಗಾಗಿ ಅವರ ಜೊತೆಗಿದ್ದ ಕೇಜ್ರಿವಾಲ್, ಕಿರಣ್ ಬೇಡಿ ಮುಂತಾದವರು ಅವರವರ ಬದುಕಿನ ದಾರಿಯನ್ನು ಕಂಡುಕೊಂಡರು.

ಅಣ್ಣಾ ಹಝಾರೆಯ ನೈಜ ಪ್ರಸಿದ್ಧಿ ಬೆಳಕಿಗೆ ಬಂತು; ಬಯಲಾಯಿತು. ಆನಂತರ ಅವರು ಅನೇಕ ಬಾರಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರೂ ಅದು ಕಸದ ಬುಟ್ಟಿಯನ್ನು ಸೇರಿತೇ ಹೊರತು ಜನಬೆಂಬಲವನ್ನು ಪಡೆಯಲು ವಿಫಲವಾಯಿತು. ಆಗಾಗ ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕೆಂದೂ, ಲೋಕಪಾಲರನ್ನು ನೇಮಿಸ ಬೇಕೆಂದೂ ಅವರು ಆಗ್ರಹಿಸುವುದು ನ್ಯಾಯಯುತವೇ ಆದರೂ ಜನರು ಅವರನ್ನು ಈಗ ನಂಬುವ ಸ್ಥಿತಿಯಲ್ಲಿಲ್ಲ. ಹೀಗೆ ಒಂದು ಜನಾಂದೋಲನಕ್ಕೆ ಕಾರಣರಾಗಬಹುದಾಗಿದ್ದವರು ತಮ್ಮ ವಿರೋಧಾಭಾಸಗಳಿಂದಾಗಿ ಹತ್ತರಲ್ಲಿ ಹನ್ನೊಂದಾದರು. ನಮ್ಮ ಕೆಲವು ಉನ್ನತ ಹುದ್ದೆಯಲ್ಲಿರುವವರು, ಪ್ರಸಿದ್ಧರು ಒಂದು ವರ್ಗದ ವಿರೋಧವನ್ನು ಕಟ್ಟಿಕೊಂಡಾದರೂ ಬಹಿರಂಗವಾಗಿ ತಮ್ಮ ನಿಲುವನ್ನು ಹೇಳುತ್ತಿರುತ್ತಾರೆ. ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕತಜ್ಞ ಅಮಾರ್ತ್ಯ ಸೇನ್ ಭಾರತದ ಸದ್ಯದ ಸ್ಥಿತಿಯ ಕುರಿತು ತಮ್ಮ ಅನಾದರವನ್ನು ಸ್ಪಷ್ಟೋಕ್ತಿಯಿಂದ ಹೇಳಿದ್ದಾರೆ. ಪ್ರತಿಷ್ಠಿತ ನಳಂದ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಿಂದ ಅವರು ನಿರ್ಗಮಿಸುವಂತೆ ನಮ್ಮ ಸರಕಾರ ನೋಡಿಕೊಂಡಿತು. ಪ್ರಾಯಃ ಅವರ ನೊಬೆಲ್ ಪ್ರಶಸ್ತಿಯ ಮತ್ತು ಅಂತರ್‌ರಾಷ್ಟ್ರೀಯ ಅವಹೇಳನವನ್ನು ಎದುರಿಸುವ ಭಯದಿಂದಾಗಿ ಕೇಂದ್ರ ಸರಕಾರ ಅವರ ವಿರುದ್ಧ ಯಾವುದೇ ಹಣದುರುಪಯೋಗದ, ಇಲ್ಲವೇ ದೇಶದ್ರೋಹದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಿಲ್ಲ. ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು, ನೋಟುರದ್ದತಿ, ಜಿಎಸ್‌ಟಿ ಮುಂತಾದ ವಿಚಾರಗಳ ಕುರಿತು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ (ಅವರು ಯಾವ ಪಕ್ಷದವರೇ ಇರಲಿ, ಒಬ್ಬ ಆರ್ಥಿಕ ತಜ್ಞರೆಂಬುದನ್ನೂ ಸರಕಾರ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅವರ ಎಲ್ಲ ಅಭಿಪ್ರಾಯಗಳನ್ನೂ ಕಾಂಗ್ರೆಸ್ ಎಂಬ ನೆಪಹೂಡಿ ಗುಡಿಸಿಹಾಕುವುದನ್ನು ಕಾಣುತ್ತೇವೆ!) ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಕೇಂದ್ರ ಸರಕಾರದ ನಡೆನುಡಿಗಳ ಕುರಿತು ತಮ್ಮ ಅಸಂತೋಷವನ್ನು ಆಗಾಗ ವ್ಯಕ್ತಪಡಿಸಿದ್ದಕ್ಕಾಗಿ ಒಂದು ಅವಧಿ ಮುಗಿಯುತ್ತಿದ್ದಂತೆಯೇ ಮರಳಿ ಅಮೆರಿಕಕ್ಕೆ ಹೋಗಬೇಕಾಯಿತು.

ಆರ್ಥಿಕ ಸೌಲಭ್ಯದ ದೃಷ್ಟಿಯಿಂದ, ಸಂಶೋಧನೆ ಮತ್ತಿತರ ಅಕಡಮಿಕ್ ಚಟುವಟಿಕೆಗಳ ದೃಷ್ಟಿಯಿಂದ ಅವರಿಗೆ ಅನುಕೂಲವಾಗಿರಬಹುದಾದರೂ ಭಾರತೀಯ ಆರ್ಥಿಕ ತಜ್ಞರೊಬ್ಬರು ಮನಃಪೂರ್ವಕವಾಗಿ ನಮ್ಮ ದೇಶಕ್ಕೆ ಸೇವೆಸಲ್ಲಿಸಲು ತಯಾರಿದ್ದಾಗಲೂ ನಮ್ಮ ಸರಕಾರವು ಮೊಂಡುತನದಿಂದಾಗಿ ಅವರ ಸೇವೆಯನ್ನು ಕಳೆದುಕೊಂಡಿತು. ಕೇಂದ್ರ ಸರಕಾರದ ಆರ್ಥಿಕ ಸಲಹೆಗಾರರಾಗಿ ನಿಯುಕ್ತಿಗೊಂಡು ಇತ್ತೀಚೆಗಷ್ಟೇ ತಮ್ಮ ಅವಧಿ ಪೂರೈಸಿದ ಅರವಿಂದ್ ಸುಬ್ರಮಣ್ಯಂ ಅವರು ದೇಶದ ನೋಟು ರದ್ದತಿಯ ದುಷ್ಪರಿಣಾಮಗಳನ್ನು ಹೊರಗೆಡಹಿದ್ದಾರೆ. ಅವರಷ್ಟೇ ಅಲ್ಲ, ಈಗ ನಿವೃತ್ತರಾದ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರೂ ‘‘ಈ ನೋಟು ರದ್ದತಿಯು ಕಪ್ಪುಹಣದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ’’ ಎಂದಿದ್ದಾರೆ. ಆದರೆ ಘನವೆತ್ತ ಅರ್ಥಸಚಿವರು ಇವರೆಲ್ಲರಿಗಿಂತ ಹಿರಿಯ ಆರ್ಥಿಕ ತಜ್ಞರಂತೆ ನಟಿಸುವ ಮೂಲಕ ಭವಿಷ್ಯಕ್ಕೆ ಕರಿನೆರಳು ಹೊದಿಸಿದ್ದಾರೆ. ಇದನ್ನು ಟೀಕಿಸುವ ಯಾರನ್ನೇ ಆಗಲಿ ಕಾಂಗ್ರೆಸ್ ಅಂತಲೋ, ದೇಶದ್ರೋಹಿಗಳಂತಲೋ ಹೆಸರಿಸಿ ಅವರನ್ನು (ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡು) ಹಳಿಯುವ ಹೊಸ ವರಸೆ ನಡೆಯುತ್ತಿದೆ. ಇಲ್ಲೂ ಎದುರಾಗುವ ಸಮಸ್ಯೆಯೆಂದರೆ ಅಧಿಕಾರದಲ್ಲಿರುವಾಗ, ಸೇವಾವಧಿಯಲ್ಲಿ, ಇಂತಹ ಕ್ರಮಗಳ ಕುರಿತು ತಮ್ಮ ಅಸಮಾಧಾನವನ್ನು ಈ ಅಧಿಕಾರ/ಸೇವಾ ಪ್ರಾಪ್ತರು ವ್ಯಕ್ತಪಡಿಸದಿರುವುದು. ಅವರು ತಮ್ಮ ಶಾಶ್ವತ ಸ್ಥಾನಮಾನವನ್ನು ಮರೆತು ಸರಕಾರದ ವಕೀಲರಂತೆ ಮಾತನಾಡುತ್ತಾರೆ.

ನೀತಿ ಆಯೋಗ (ಇದೂ ಯೋಜನಾ ಆಯೋಗದ ಹೊಸ ಹೆಸರು!)ದ ಧುರೀಣರು ಈ ಎಲ್ಲ ಟೀಕೆಗಳಿಗೆ ಒಂದೇ ಉತ್ತರಪತ್ರಿಕೆಯನ್ನು ಅರ್ಥಸಚಿವರ ಟ್ಯುಟೋರಿಯಲ್‌ನಲ್ಲಿ ಸಿದ್ಧಪಡಿಸಿಕೊಂಡು ಪ್ರಕಟಿಸುತ್ತಾರೆ. ಇದು ಇಷ್ಟಕ್ಕೇ ಸೀಮಿತವಾಗಿಲ್ಲ. ಮೊನ್ನೆ ಮೊನ್ನೆಯಷ್ಟೇ ನಮ್ಮ ಭೂಸೇನೆಯ ಮಹಾದಂಡನಾಯಕರು ಭಾರತ-ಪಾಕಿಸ್ತಾನಗಳ ನಡುವೆ ಶಾಂತಿ ಸಾಧ್ಯವಾಗಬೇಕಾದರೆ ಪಾಕಿಸ್ತಾನವು ಭಾರತದಂತೆ ಜಾತ್ಯತೀತ ರಾಷ್ಟ್ರವಾಗಬೇಕು ಎಂಬ ಹೇಳಿಕೆಯನ್ನು ನೀಡಿದರು. ಸದ್ಯದ ಸ್ಥಿತಿಯಲ್ಲಿ ಜಾತ್ಯತೀತವೆಂಬ ಪದವನ್ನು ಬಳಸಿಯೂ ಉನ್ನತ ಸ್ಥಾನದಲ್ಲಿರುವವರಿಂದ ಟೀಕೆ ಮತ್ತು ಶಿಸ್ತು/ಕಾನೂನುಕ್ರಮಗಳನ್ನು ಎದುರಿಸದ ಏಕೈಕ ವ್ಯಕ್ತಿ ಇವರು. ಭಾರತವು ಜಾತ್ಯತೀತತೆಯಿಂದ ಮತಾಂಧತೆಗೆ ಹೊರಳುತ್ತಿರುವ ಈ ಕಾಲದಲ್ಲಿ ಇಂತಹ ಹೇಳಿಕೆಯೂ ಒಂದು ಅಚ್ಚರಿಯ ವಿಚಾರ. ವಿಶೇಷವೆಂದರೆ ಇದೇ ಪ್ರಶ್ನೆಯನ್ನು ಇವರು ಭಾರತೀಯರಿಗೂ ಕೇಳಬೇಕಾಗಿತ್ತು. ಮತ-ಧರ್ಮದ ಹೆಸರಿನಲ್ಲಿ ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆಯುವ ಅನಾಹುತಗಳನ್ನು ಗಮನಿಸಿದರೆ ತಾಲಿಬಾನಿಗಳೂ ಸುಧಾರಣಾವಾದಿಗಳಂತೆಯೂ ಕಾಣಿಸುತ್ತಾರೆ. ಮೊನ್ನೆ ಮೊನ್ನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋರಕ್ಷಕರು ಧರ್ಮವನ್ನು ರಕ್ಷಿಸುವ ತಮ್ಮ ಪ್ರತಿಭಟನೆಯ ಮತ್ತು ಆಕ್ರೋಶದ ಮೂಲಕ ಸುಬೋಧ್ ಕುಮಾರ್ ಸಿಂಗ್ ಎಂಬ ಒಬ್ಬ ಆರಕ್ಷಕರ ಮತ್ತು ಸುಮಿತ್ ಕುಮಾರ್ ಎಂಬ ಒಬ್ಬ ನಾಗರಿಕನ ಸಾವಿಗೆ ಕಾರಣರಾದರು. ಮಾಧ್ಯಮ ವರದಿಗಳ ಪ್ರಕಾರ ಯಾರೋ ಗೋಹತ್ಯೆಯನ್ನು ಮಾಡಿದರೆಂಬ ಕಾರಣಕ್ಕೆ ಸುಮಾರು 400 ಮಂದಿಯ ಗುಂಪು ಪ್ರತಿಭಟನೆಗಿಳಿದು ಪೊಲೀಸರೊಂದಿಗೆ ಕಾದಾಟ ನಡೆಸಿದರು.

ಧರ್ಮ-ಸಂಸ್ಕೃತಿಯ ಹೆಸರಿನಲ್ಲಿ ನಡೆಸುವ ಚಳವಳಿಯಲ್ಲಿ .32 ಬೋರ್ ಗುಂಡಿಗೇನು ಕೆಲಸವೆಂದು ಯಾರೂ ಪ್ರಶ್ನಿಸುವುದಿಲ್ಲ. ವ್ಯಂಗ್ಯವೆಂದರೆ ಸತ್ತವರೂ ಹಿಂದೂಗಳೇ; ಕೊಂದವರೂ ಹಿಂದೂಗಳೇ. ಅಲ್ಲಿಗೆ ಈ ದೇಶದ ಮಹಾನ್ ಸಂಸ್ಕೃತಿಯೊಂದು ನಗ್ನವಾಗಿ ಅನಾವರಣವಾದಂತಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಷಣ (ಅನಿವಾರ್ಯವಾಗಿ!) ಅಗತ್ಯ ಕಾನೂನು ಕ್ರಮದ ನಿರ್ದೇಶನವನ್ನು ನೀಡಿದರು. ಪರಿಣಾಮವಾಗಿ ಬಜರಂಗದಳ ಮತ್ತಿತರ ಹಿಂದೂಪರ ಕೆಲವು ಧರ್ಮಾಂಧರನ್ನು ಪೋಲೀಸರು ಬಂಧಿಸಿದರು. ತನಿಖೆ ಸರಿಯಾಗಿ ಮುಂದುವರಿಯುತ್ತದೆಯೋ ಅಥವಾ ಈ ದೇಶಭಕ್ತರನ್ನು ರಕ್ಷಿಸಲು ಗುಜರಾತ್ ಮಾದರಿಯ ಕ್ರಮ ಜರುಗುತ್ತದೆಯೋ ಕಾದು ನೋಡಬೇಕು.

ಪ್ರಾಯಃ ಗಡಿಯಲ್ಲಿ ಸಾಯುವ ವೈರಿಗಳ, ಭಯೋತ್ಪಾದಕರ ಸಂಖ್ಯೆಗಿಂತ ದೇಶದ ಒಳಗಿನ ಗಡಿಗಳಲ್ಲಿ ಆಂತರಿಕ ಭಯೋತ್ಪಾದನೆಗೆ ಬಲಿಯಾಗುವ ಅಮಾಯಕರ ಸಂಖ್ಯೆ ತುಂಬಾ ಹೆಚ್ಚಿರಬಹುದು. ಇವರನ್ನು ಹುತಾತ್ಮರೆಂದು ಹೇಳಬೇಕೇ ಅಥವಾ ಅಭಿವೃದ್ಧಿಯ ಯಜ್ಞದ ಬಲಿಪಶುಗಳೆಂದು ಹೇಳಬೇಕೇ? ಈ ಪ್ರಶ್ನೆಯನ್ನು ಒ.ಪಿ.ರಾವತ್ ತಮಗೆ ತಾವೇ ಹಾಕಿಕೊಳ್ಳುವುದು ಹಿತ.

ಇದು ಸ್ವತಂತ್ರ ಭಾರತಕ್ಕೆ ಹೊಸದೇನಲ್ಲ. ಇಂತಹ ಮೊದಲ ಅಹಿಂಸಾ ಯುದ್ಧ ನಡೆದದ್ದು 1948ರ ಜನವರಿ ಮೂವತ್ತರಂದು ಗೋಡ್ಸೆ ಗಾಂಧಿಗೆ ಗುಂಡು ಹೊಡೆದಾಗ. ಅಲ್ಲಿಂದೀಚೆಗೆ ಚರಿತ್ರೆಯ ಬಿಳಿಯ ಹಾಳೆಯ ಮೇಲೆ ರಕ್ತದ ಕಲೆಗಳು ಸತತ ಮೂಡುತ್ತಿವೆ. ಹೀಗೆ ಸತ್ತವರ ಹೆಣಗಳ ಮೇಲೆ ವಿಜಯಪತಾಕೆಯನ್ನು ಹಾರಿಸುವುದಕ್ಕೆ ನಮ್ಮ ರಾಜಕಾರಣಿಗಳು ಹದ್ದುಗಳನ್ನೂ ನಾಚಿಸುವಂತೆ ಕಾಯುತ್ತಿರುತ್ತಾರೆ. ಹಿಂದೆ ದಲಿತರನ್ನು, ಅಲ್ಪಸಂಖ್ಯಾತರನ್ನು ಧರ್ಮ, ಜಾತಿ, ವರ್ಗದ ಹೆಸರಿನಲ್ಲಿ ಥಳಿಸಿದಾಗ, ಕೊಚ್ಚಿಕೊಂದಾಗ ಇದು ದೇಶದ ಏಳಿಗೆಯ ಮೈಲಿಗಲ್ಲುಗಳೆಂದು ಮತ್ತು ಇದರಿಂದ ರಾಜಕೀಯ ಧ್ರುವೀಕರಣ ನಡೆದು ರಾಜಕೀಯ ಲಾಭವಾಗುವುದೆಂದು ಯೋಜಿಸಿದ ಎಲ್ಲ ರಾಜಕಾರಣಿಗಳು ಈ ಘಟನೆಗಳಿಗೆ ನೇರ ಹೊಣೆಯಾಗುತ್ತಾರೆ. ಆದ್ದರಿಂದ ಭಾರತೀಯರು ಮೊದಲು ಜಾತ್ಯತೀತರಾಗಬೇಕಾಗಿದೆ. ಅಥವಾ ಮತಾಂಧಂತೆಗೇ ಜಾತ್ಯತೀತತೆಯೆಂದು ಮರುನಾಮಕರಣ ಮಾಡುವುದು ಒಳ್ಳೆಯದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top