---

ನಮ್ಮ ಕಾಲದ ನಿಜಶರಣ ನೆಟ್ಟಾರು ರಾಮಚಂದ್ರಭಟ್ಟರು

ಭಾಗ-2

ಅಹಂಕಾರಿಗಳ ಭಯ:
ಮಾನವ ಮತಿಯಲ್ಲಿ ಕಂಡು ಬರುವ ಅಹಂಕಾರದ ಹಿಂದೆ ವಿಚಿತ್ರವಾದ ಭಯ ಆವರಿಸಿಕೊಂಡಿರುತ್ತದೆ. ತಾನು ಏನನ್ನೋ ಕಳೆದುಕೊಳ್ಳುವೆನೆಂಬ ಭಯ. ತನ್ನ ಟೊಳ್ಳು ಘನತೆಯನ್ನು, ಸಂಪತ್ತನ್ನು, ವರ್ಚಸ್ಸನ್ನು ಮತ್ತು ತನ್ನದೇ ಆದ ನಾಯಕತ್ವವನ್ನು ಕಳೆದುಕೊಳ್ಳುವ ಭಯ. ಮಾನವನ ಮತಿಯಲ್ಲಿನ ಈ ಭಯ ನಂತರ ಮತೀಯತೆಯ ಕಡೆಗೆ ಹೊರಳುತ್ತ ಮತಾಂಧರ ಸಮೂಹಸನ್ನಿಯ ರೂಪ ಪಡೆಯುತ್ತದೆ.
‘‘ಜನ ಭೀತರಾದಷ್ಟೂ ನಾನಾ ಮುಖಗಳಲ್ಲಿ ಭಯೋತ್ಪಾದನೆಯೇ ಹುಟ್ಟಿಕೊಳ್ಳುತ್ತದೆ. ಲೋಕ, ಅಂಜಿಕೆಯನ್ನು ನಿವಾರಿಸಲಾರದು. ಅದು ಅಂಜಿಕೆಯನ್ನು ಪೋಷಿಸುತ್ತದೆ. ನಿರ್ಭೀತನಾದವನಿದ್ದರೆ, ಅವನು ಲೋಕ ವಿಚಾರಗಳನ್ನು ತಲೆದೂಗಿ ಒಪ್ಪಿಕೊಳ್ಳಲಾರ. ನಿರಾಕರಿಸಬಲ್ಲ. ಲೋಕ ಅವನನ್ನು ಒಪ್ಪದು. ಅದರ ಅಂಜಿಕೆ ಅದಕ್ಕೆ’’ ಎಂಬ ಭಟ್ಟರ ವಿಚಾರ ಸರಣಿಯಲ್ಲಿ ಇಡೀ ಜಗತ್ತಿನ ಜನಸಮುದಾಯಗಳ ತೊಳಲಾಟದ ದರ್ಶನವಾಗುವುದು. ಅಂತೆಯೇ ಬಸವಣ್ಣನವರು ‘‘ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ, ಲೋಕವಿರಹಿತ ಶರಣ, ಶರಣ ವಿರಹಿತ ಲೋಕವೆಂಬುದು ಕಾಣಬಂದಿತ್ತು ನೋಡಾ.’’ಎಂದು ಹೇಳಿದ್ದಾರೆ.
ಆತ್ಮಸಂಬಂಧ:
ಭಟ್ಟರ ಮತ್ತು ಕುಂಞಪ್ಪನವರ ಆತ್ಮಸಂಬಂಧದ ಅರಿವು ಲೋಕದ ಜನರಿಗೆ ಆಗಲಿಲ್ಲ. ‘ಭಟ್ಟರ ಆಸ್ತಿಯ ಮೇಲೆ ಕಣ್ಣಿಟ್ಟು ಈ ಮುಸಲ್ಮಾನ ಅವರ ಜೊತೆ ಸುಳಿಯುತ್ತಿದ್ದಾನೆ’ ಎಂದು ಎಲ್ಲೆಡೆ ಪ್ರಚಾರವಾಯಿತು. ಕುಂಞಪ್ಪ ಕಣ್ಣೀರಿಟ್ಟರು. ಭಟ್ಟರು ಉದ್ರಿಕ್ತರಾದರು. ನೆಟ್ಟಾರು ಮನೆಯಲ್ಲಿ ಒಮ್ಮೆ ‘‘ಈ ಮನೆ, ಈ ಆಸ್ತಿ ಯಾವುದೂ ನನ್ನದಲ್ಲ’’ ಎಂದು ಹೇಳುತ್ತ ರಾಮಚಂದ್ರ ಭಟ್ಟರು ಶತಪಥ ತುಳಿಯುತ್ತಿದ್ದಾರೆ. ಬಳಿಯಲ್ಲಿ ಎಂದಿನಂತೆ ಕುಂಞಪ್ಪ ಕೂಡ ಇದ್ದಾರೆ. ಇದ್ದಕ್ಕಿದ್ದಂತೆ ಉದ್ರಿಕ್ತರಾದ ಭಟ್ಟರು ಪೆಟ್ಟಿಗೆಯೊಳಗಿನ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹೊರಗೆಳೆದು, ಕುಂಞಪ್ಪರನ್ನು ಕರೆದು-
‘‘ಇಕೊ ಇದು ತೀರ್ವೆ ರಸೀದಿ
ಇಕೊ ಇದು ಪಹಣಿೊ ಇದು ಅಡಂಗಲ್ಲು’’ (ಭೂಮಿಯ ನಕ್ಷೆ) ಎನ್ನುತ್ತ ಎಲ್ಲ ದಾಖಲೆಗಳನ್ನೂ ಇವರ ಮುಂದಿರಿಸಿ, ‘‘ನನಗಿದು ಬೇಡ.ಇದು ನನ್ನದೇ ಅಲ್ಲ. ಎಲ್ಲವನ್ನೂ ನಿನ್ನ ಹೆಸರಿಗೆ, ಹೇಗೆ ಬೇಕೋ ಹಾಗೆ ಮಾಡಿಸಿಕೊ. ನಾನಂತೂ ಇಲ್ಲಿಂದ ಹೊರಟೆ’’ ಎನ್ನುತ್ತ ಮೆಟ್ಟಲಿಳಿಯುತ್ತ ಬಿರಬಿರನೆ ನಡೆದೇ ಬಿಟ್ಟರು.
ಕುಂಞಪ್ಪಕ್ಷಣ ಕಾಲ ದಿಗ್ಭ್ರಾಂತರಾದರು. ಮನೆ ಮಂದಿ ಅಳುತ್ತಿದ್ದರು.
ಕುಂಞಪ್ಪ ಎಲ್ಲ ದಾಖಲೆಗಳನ್ನೂ ಜೋಪಾನವಾಗಿ ಎತ್ತಿರಿಸಿ, ಅದಕ್ಕೊಂದು ದಾರ ಸುತ್ತಿ, ಅದನ್ನು ರಾಮಚಂದ್ರ ಭಟ್ಟರ ಪತ್ನಿ ಪಾರ್ವತಿಯಮ್ಮನ ಬಳಿ ಇರಿಸಿ, ಕೈ ಮುಗಿದು ‘‘ಈ ದಾಖಲೆಗಳನ್ನು ಜೋಪಾನವಾಗಿ ಒಳಗಿರಿಸಿಕೊಳ್ಳಿ. ನಾನು ಅವರನ್ನು ಹುಡುಕಿಕೊಂಡು ಬರುತ್ತೇನೆ’’ ಎನ್ನುತ್ತಾ ಕೆಳಗಿಳಿದರು.ಎಲ್ಲೋ ಹೋಗದೆ ನೇರ ತಮ್ಮ ಮನೆಗೆ ತೆರಳಿ ಅದೊಂದು ಹೇಳಲಾಗದ ದುಗುಡದಿಂದ ಕುಸಿದು ಕುಳಿತರು.
‘‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ’’ಎಂಬುದು ಬಸವಣ್ಣನವರ ಮನೋಧರ್ಮವಾಗಿತ್ತು. ಭಟ್ಟರ ಮನೋಧರ್ಮವೂ ಇದೇ ಆಗಿತ್ತು.
ಸಂಜೆಯ ಹೊತ್ತು ಕುಂಞಪ್ಪರ ಮನೆಯ ಬಳಿ ಭಟ್ಟರು ಸುಳಿದರು.
‘‘ಏನು ಮಾಡಿದೆ ದಾಖಲೆಗಳನ್ನು ಮಾಡಿಸಿಕೊಂಡೆಯಾ?’’
ಕುಂಞಪ್ಪಮೊದಲ ಬಾರಿಗೆ ಬಿರುಸಾದರು. ಹೇಳಿದರು:
‘‘ಏನೆಂದುಕೊಂಡಿರಿ ಈ ಮುಸಲ್ಮಾನನನ್ನು? ಇನ್ನೂ ಪರೀಕ್ಷೆಯೋ?’’
ಆ ಕ್ಷಣ ಇಬ್ಬರಲ್ಲೂ ಸ್ಫೋಟಿಸಿದ ನಗುವನ್ನು ಕೇಳಿದವರಿಗೆ ಇವರಿಬ್ಬರೂ ಹುಚ್ಚರೆನ್ನುವುದು ಖಾತ್ರಿಯಾಗಬಹುದಿತ್ತು.
‘‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ. ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಿ’’ ಎಂದು ಬಸವಣ್ಣನವರು ಕೂಡಲಸಂಗಮದೇವರಿಗೆ ಕೇಳಿಕೊಳ್ಳುವ ರೀತಿಯಲ್ಲಿ ಕುಂಞಪ್ಪ ಅವರು ಭಟ್ಟರ ಎಲ್ಲ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದರು.
ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲಿ ಕೂಡ ಭಕ್ತನು ದೇವರ ಬಗ್ಗೆ ನಂಬಿಕೆ ಉಳಿಸಿಕೊಂಡಾಗಲೇ ದೇವರು ಸೋತುಹೋಗುತ್ತಾನೆ. ಈ ಕುರಿತು ಬಸವಣ್ಣನವರು ವಚನವೊಂದರಲ್ಲಿ ಮಾರ್ಮಿಕವಾಗಿ ಸೂಚಿಸಿದ್ದಾರೆ.
ಒಂದು ಘಟನೆ: 
ನಿಮ್ಮ ಮನೆಯಲ್ಲಿದ್ದ ಮುದುಕನನ್ನು ನೋಡಿಕೊಳ್ಳುವುದಕ್ಕೆ ನೀವೊಬ್ಬಳು ಹುಡುಗಿಯನ್ನು ಕರೆದುಕೊಂಡು ಬಂದಿದ್ದೀರಿ.
ಹೌದು. ಹೋಂ ನರ್ಸ್
ನೀವು ಅವಳ ಹೆಸರನ್ನೂ ಹೇಳುತ್ತಿಲ್ಲ. ಹೋಗಲಿ ಬಿಡಿ. ಮುದುಕನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳಲ್ಲ. ತುಂಬ ಚೆನ್ನಾಗಿ. ಒಮ್ಮೆ ಕುಟುಂಬದ ಮುದುಕನನ್ನು ನೋಡಬೇಕೆಂದು ಬಂಧುಗಳು ಬಂದು ನೋಡಿದ ಶಾಸ್ತ್ರ ಮಾಡಿ, ಚಾವಡಿಯಲ್ಲಿ ಸೇರಿ ಏನೋ ಹರಟೆ ಮಾತಾಡುತ್ತಿರಬೇಕಾದರೆ ಇದ್ದಕ್ಕಿದ್ದ ಹಾಗೆ ಧಡ್ ಅಂತ ಸದ್ದು! ಮಂಚದಿಂದ ಕೆಳಗೆ ಬಿದ್ದುಬಿಟ್ಟರು ಎಂದರು ಯಾರೋ. ಹುಡುಗಿಯ ಮುಖ ದುಗುಡದಿಂದ ತುಂಬಿತ್ತು. ಹೋಗಿ ನೋಡಿದರೆ ಜೀವ ಹೋಗಿದೆ. ಹೋಗಿಬಿಟ್ಟರು ಎಂದಾಯಿತು.
ಹುಡುಗಿಯ ಕಣ್ಣಿನಲ್ಲಿ ನೀರು ತುಂಬಿತು. ಪ್ರೀತಿಯ ಅನುಭವ ಅವಳಿಗೆ ಮಾತ್ರ. ಉತ್ತರಾಧಿಕಾರಿಗಳಿಗಲ್ಲ. ‘‘ನಾವು ಒಂದು ಮಾತು ಹೇಳಲೆ?’’
‘‘ಹೇಳಲೇ ಬೇಕು ಗುರುಗಳೇ’’
‘‘ಬದುಕಿನ ಸತ್ಯ ಇರುವುದು ಆ ಹುಡುಗಿಯ ಜತೆ. ಉತ್ತರಾಧಿಕಾರಿಗಳ ಜೊತೆ ಇರುವುದು ಕಾನೂನು.’’
‘‘ನಂಟು ಭಕ್ತಿ ಕಾಯಕ ನರಕ’’ ಎಂದು ಸಾರಿದ ಬಸವಣ್ಣನವರು ಭಕ್ತಗಣಗಳಲ್ಲಿನ ಮಾನವ ಸಂಬಂಧಗಳನ್ನು ತೋರಿಸಿಕೊಡುತ್ತಾರೆ.ರಕ್ತಸಂಬಂಧಿಕರೇ ಇರಲಿ, ಇನ್ನಾರೇ ಇರಲಿ, ಅವರೆಲ್ಲರೂ ಭಕ್ತಿಸಂಬಂಧದಲ್ಲಿ ಒಂದಾಗಬೇಕು. ಆ ಸಂಬಂಧ ಬೊಪ್ಪ, ಅಪ್ಪ, ಅಣ್ಣ, ಅಕ್ಕ ಮುಂತಾದ ರಕ್ತಸಂಬಂಧದ ಶಬ್ದಗಳಿಗೆ ಹೊಸ ರೂಪ ಕೊಟ್ಟಿತು. ‘‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿಣ್ಣರ ಬೊಮ್ಮಯ್ಯ’’ ಎಂದು ಬಸವಣ್ಣನವರು ಹೇಳುತ್ತಾರೆ. ಹೀಗೆ ರಕ್ತಸಂಬಂಧದ ಶಬ್ದಗಳು ಭಕ್ತಿಸಂಬಂಧದ ಶಬ್ದಗಳಾಗಿ ಹೊಸ ಅರ್ಥ ಪಡೆದವು. ಇಂಥ ಭಾವದಲ್ಲಿ ಭಟ್ಟರು ವೃದ್ಧರೋಗಿ ಮತ್ತು ಹೋಂ ನರ್ಸ್ ಸಂಬಂಧವನ್ನು ಕಲ್ಪಿಸುತ್ತಾರೆ.
 ಪ್ರಸಾದ ಪ್ರಜ್ಞೆ:
‘‘ಇವನು ನಮ್ಮವನಲ್ಲ ‘ಇತರ’ ಎಂದು ಲೋಕ ತನ್ನನ್ನು ತಾನೆ ಕಂಡುಕೊಂಡಿದೆ. ಇತರನ ಕುರಿತು ವಿರೋಧವಲ್ಲದೆ ‘ಪ್ರೀತಿ’ ಎಲ್ಲಾದರೂ ಕಂಡಿದ್ದೀಯ?’’
‘‘ಏನು ‘ಲೋಕ’ ಹೀಗಿದೆಯಲ್ಲ. ತಲೆ ಚಿಟ್ಟು ಹಿಡಿದಂತಾಗುತ್ತದೆ ಗುರುಗಳೇ.‘‘
ಅದು ಲೋಕದ ಸ್ವಭಾವ. ಲೋಕ ನಿಂತಿರುವುದೇ ದುಡಿಮೆಯ ಮೇಲೆ. ಆದರೆ ದುಡಿದು ತಿನ್ನುವವರನ್ನೇ ನೀವು ಯಾವ ಸ್ಥಿತಿಯಲ್ಲಿ ಇಟ್ಟಿದ್ದೀರೆಂದು ತಿಳಿದಿದೆಯಲ್ಲ. ದುಡಿದು ತನ್ನ ಅನ್ನ ತಾನು ತಿನ್ನುವವ ಸಾಮಾನ್ಯ ಮನುಷ್ಯ ನಿಮ್ಮ ದೃಷ್ಟಿಯಲ್ಲಿ! ಇನ್ನು ನಮ್ಮ ಮಾತು ಕೇಳುವುದೇ ಬೇಡ. ನಾವು ದುಡಿದು ತಿನ್ನುವವರೂ ಅಲ್ಲ. ಅದಕ್ಕಿಂತ ಕಡೆ.’’
‘‘ಅಂದರೆ?’’
‘‘ನಾವು ಬೇಡಿ ತಿನ್ನುವವರು. ದುಡಿದು ತಿನ್ನುವವರ ಪಂಕ್ತಿಯಲ್ಲೂ ನಮಗೆ ಜಾಗವಿಲ್ಲ. ನಮಗೆ ಪಂಕ್ತಿಯೇ ಇಲ್ಲ. ನಮಗೆ ಜಾಗವೇ ಇಲ್ಲ.’’
‘‘ಗುರುಗಳೇ, ದುಡಿದು ತಿನ್ನುವುದೂ ನಿಮ್ಮ ದೃಷ್ಟಿಯಲ್ಲಿ ಸರಿಯಲ್ಲವೆ ಹಾಗಾದರೆ?’’
 ‘‘ಯಾರು ಹಾಗೆಂದರು? ಆದರೆ ಆ ಪ್ರಶ್ನೆ ಕೇಳುವ ಯೋಗ್ಯತೆಯನ್ನು ಮೊದಲು ಗಳಿಸಿಕೊಳ್ಳಿ. ಅದಿರಲಿ ನಾವು ಹೇಳುವುದಿಷ್ಟೇ. ನಾನು ದುಡಿಯುತ್ತಿದ್ದೇನೆ; ನಾನು ತಿನ್ನುತ್ತೇನೆ ಎಂದು ನೀನು ಹೇಳುವುದೇನೋ ಸರಿ. ಆ ಮಾತು ನಮ್ಮ ಬಾಯಿಂದ ಬರಲಾರದು. ‘‘ಇದು ನನ್ನದಲ್ಲ. ಇದು ‘ನಿನ್ನದು’. ನೀನು ಕೊಟ್ಟುದನ್ನು ನಾನು ಉಣ್ಣುವೆ’’- ಇದು ನಮ್ಮ ಮಾತು. ಮತ್ತೆ ನಮ್ಮ ಮೇಲೆ ವಿರೋಧ ಹುಟ್ಟದೆ ಇದ್ದೀತೆ? ದುಡಿದು ತಿನ್ನುವವರಿಗೂ ನಮ್ಮ ಮೇಲೆ ವಿರೋಧವೇ. ಆದರೆ ಒಂದು ಮಾತು.’’
‘‘ಹೇಳಿ ಗುರುಗಳೇ.’’
‘‘ನಾವು ತಿನ್ನುವ ಅನ್ನ ಈ ಲೋಕದ್ದೇ. ಅದರ ರುಚಿ ಮಾತ್ರ ಈ ಲೋಕದ್ದಲ್ಲ!’’
ತೋಳ್ಪಾಡಿಯವರು ಭಟ್ಟರ ಜೊತೆಗೆ ನಡೆಸಿದ ಅತಿಮಹತ್ವದ ಸಂಭಾಷಣೆ ಇದು.
ಕೂಳು, ಊಟ ಮತ್ತು ಪ್ರಸಾದದ ಪರಿಕಲ್ಪನೆಯನ್ನು ಭಟ್ಟರು ತಮ್ಮದೇ ಆದ ಧಾಟಿಯಲ್ಲಿ ಸೂಚಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಕಾಯಕ, ಪ್ರಸಾದ ಮತ್ತು ದಾಸೋಹದ ವ್ಯಾಖ್ಯಾನ ಮಾಡುತ್ತಾರೆ. ‘ಇವ ಯಾರವ?’ ಎಂದು ಕೇಳುತ್ತ ‘ಹೊರ ಹಾಕುವ’ ಸಂಸ್ಕೃತಿ ಮತ್ತು ‘ಇವ ನಮ್ಮವ’ ಎಂದು ಹೇಳುತ್ತ ಒಳ ಕರೆಯುವ ಸಂಸ್ಕೃತಿಯನ್ನು ತಮ್ಮದೇ ವಿಶಿಷ್ಟ ಧಾಟಿಯಲ್ಲಿ ವಿವರಿಸುತ್ತಾರೆ.
‘‘ಇವ ನಮ್ಮವನಲ್ಲ; ಇತರ’’ ಎಂದು ಹೇಳುವಲ್ಲಿ ಪ್ರೀತಿ ಉದ್ಭವವಾಗಲು ಸಾಧ್ಯವೇ ಇಲ್ಲ. ಎಷ್ಟೇ ಗರ್ವದಿಂದ ‘ನಾವು ಒಂದು’ ಎಂದು ಹೇಳಿದರೂ ಪ್ರಯೋಜನವಾಗುವುದಿಲ್ಲ. ಇದಕ್ಕೆ ವಿರುದ್ಧವಾದ ‘ಇವ ಇತರನಲ್ಲ; ನಮ್ಮವ’ಎಂಬುದು ಪ್ರೀತಿಯ ಕಡೆಗೆ ಒಯ್ಯುವಂಥದ್ದು. ಅಂತೆಯೇ ಬಸವಣ್ಣನವರು ‘‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯೆ’’ ಎಂದು ಹೇಳುತ್ತ, ಇವನಾರವ ಎಂದು ಕೇಳುವ ಧರ್ಮವನ್ನು ತೊರೆದು ‘‘ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯೆ’’ ಎನ್ನುತ್ತ ಎಲ್ಲರನ್ನೂ ಒಳಗೊಳ್ಳುವ ಸಮಾಜೋ ಧಾರ್ಮಿಕ ಮತ್ತು ಆರ್ಥಿಕ ಚಳವಳಿಯನ್ನು ಆರಂಭಿಸಿದರು. ಪ್ರೀತಿಯ ಮಾರ್ಗದರ್ಶಿಯಾದರು. ಈ ಹಿನ್ನೆಲೆಯಲ್ಲಿ ರಾಮಚಂದ್ರಭಟ್ಟರ ‘‘ಇತರನ ಕುರಿತು ವಿರೋಧವಲ್ಲದೆ ‘ಪ್ರೀತಿ’ ಎಲ್ಲಾದರೂ ಕಂಡಿದ್ದೀಯಾ?’’ಎಂಬ ಪ್ರಶ್ನೆ ಮಾರ್ಮಿಕವಾಗಿದ್ದು ಅದರ ಉತ್ತರ ಬಸವಣ್ಣನವರ ‘ಇವ ನಮ್ಮವ’ ಭಾವದಲ್ಲಿದೆ.
ಹೀಗೆ ‘ಬಸವಪ್ರಜ್ಞೆ’ ಭಟ್ಟರಲ್ಲಿ ಆಳವಾಗಿ ಬೇರೂರಿದೆ. ಭಟ್ಟರು ಬಹುಶಃ ಬಸವಣ್ಣನವರ ವಚನಗಳನ್ನು ಆಳವಾಗಿ ಓದಿರಲಿಕ್ಕಿಲ್ಲ. ಆದರೆ ಅವರ ಚಿಂತನೆಯಲ್ಲಿ ಬಸವಣ್ಣ ಆಳವಾಗಿ ಇಳಿದಿದ್ದಾರೆ. ಆದ್ದರಿಂದ ಬಸವಣ್ಣನವರು ಅವರಿಗೆ ಗೊತ್ತಿಲ್ಲವೆಂದರೂ ಅವರೇ ಬಸವಣ್ಣನವರ ನಿಜವಾದ ವಾರಸುದಾರರು ಎಂಬುದರಲ್ಲಿ ಸಂಶಯವಿಲ್ಲ.
 ಭಟ್ಟರಿಗೆ ಕಾಯಕಜೀವಿಗಳ ಬಗ್ಗೆ ಅಪಾರವಾದ ಗೌರವವಿದೆ. ‘‘ದುಡಿಯುವವರು ಸಾಮಾನ್ಯ ಮನುಷ್ಯರಾಗೇ ಉಳಿದಿದ್ದಾರೆ. ದುಡಿಯುವವರು ತಮ್ಮ ಅನ್ನವನ್ನು ಸಂಪಾದಿಸಿ ಊಟ ಮಾಡುತ್ತಾರೆ.ಅವರನ್ನು ದುಡಿಸಿಕೊಂಡು ಶ್ರೀಮಂತರಾಗುವವರಿಗೆ ಅವರ ಮೇಲೆ ಕರುಣೆಯೇ ಬರುವುದಿಲ್ಲ. ದುಡಿಯುವವರು ಎಂದೆಂದೂ ಮೇಲೆ ಬರದಂತೆ ನೋಡಿಕೊಳ್ಳುತ್ತ ಅವರನ್ನು ‘ಸಾಮಾನ್ಯರು’ ಎಂದೇ ಅಸಡ್ಡೆ ಮಾಡುತ್ತಾರೆ’’ ಎಂದು ದುಡಿಯುವ ವರ್ಗದ ಮೇಲೆ ಅಪಾರವಾದ ಕಾಳಜಿ ತೋರುತ್ತಾರೆ.ಆದರೆ ‘‘ನಾವು ದುಡಿದು ತಿನ್ನುವವರೂ ಅಲ್ಲ’’ ಎಂದು ಹೇಳುತ್ತ ನಮ್ಮನ್ನು ಚಕಿತಗೊಳಿಸುತ್ತಾರೆ. ಇದು ಅವರ ಪ್ರಸಾದ ಪ್ರಜ್ಞೆ. ಪ್ರಸಾದ ಪ್ರಜ್ಞೆಯ ಜನ ದುಡಿಯುತ್ತಾರೆ. ನಂತರ ದುಡಿಮೆಗೆ ಪ್ರತಿಫಲವಾಗಿ ಬಂದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತಾರೆ. ಆದ್ದರಿಂದ ಭಟ್ಟರು ದುಡಿದ ಮೇಲೆ ದೇವರು ಕೊಟ್ಟದ್ದನ್ನು ಪ್ರಸಾದವೆಂದು ತಿಳಿದು ತಿನ್ನುವವರು! ಈ ಪ್ರಸಾದ ಪ್ರಜ್ಞೆ ನಮಗೊಂದು ಹೊಸ ದರ್ಶನ ಮಾಡಿಸುತ್ತದೆ. ಅವರ ಪ್ರಕಾರ ಅನ್ನ ಈ ಲೋಕದ್ದು. ಆದರೆ ರುಚಿ ಈ ಲೋಕದ್ದಲ್ಲ ಎಂದು ಅದನ್ನು ಚೈತನ್ಯದ ಮಟ್ಟಕ್ಕೆ ಏರಿಸುತ್ತಾರೆ. ಅನ್ನದಿಂದ ಬರುವ ಚೈತನ್ಯವು ಅನುಭಾವದ ನೆಲೆಯಲ್ಲಿ ಅರ್ಥವಾಗುವಂಥದ್ದು. ಇಡೀ ವಿಶ್ವ ಭೌತಿಕವಾಗಿ ಕಂಡರೂ ಅದು ಕಾಣದ ಚೈತನ್ಯದಿಂದಲೇ ಜೀವ ಹಿಡಿದುಕೊಂಡಿದೆ! ಬಸವಣ್ಣ ಮತ್ತು ಭಟ್ಟರ ದೃಷ್ಟಿಯಲ್ಲಿ ಇದು ಬರಿ ಭೌತಿಕ ಜಗತ್ತು ಅಲ್ಲ. ಚೈತನ್ಯಾತ್ಮಕ ಭೌತಿಕ ಜಗತ್ತು. ಪ್ರತಿಯೊಂದು ಅಣುವಿನಲ್ಲೂ ಚಲನಶೀಲತೆ ಇದೆ.ಅದುವೇ ಚೈತನ್ಯ. ಚೈತನ್ಯವಿಲ್ಲದೆ ವಸ್ತುವಿಲ್ಲ. ಅಂತೆಯೆ ಅಲ್ಲಮಪ್ರಭುಗಳು ಬಸವಣ್ಣನವರ ಗುಣಗಾನ ಮಾಡುತ್ತ, ‘ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು. ‘ಸ’ ಎಂಬಲ್ಲಿ ಸರ್ವಜ್ಞನಾದೆನು. ‘ವ’ ಎಂದು ವಚಿಸುವಡೆ ವಸ್ತುಚೈತನ್ಯಾತ್ಮಕನಾದೆನು’’ಎಂದು ಹೇಳಿದ್ದಾರೆ. ವಸ್ತುವಾದ (ಭೌತಿಕವಾದ) ಮತ್ತು ಚೈತನ್ಯವಾದಕ್ಕಿಂತಲೂ ಬಸವಾದಿ ಶರಣರ ವಸ್ತುಚೈತನ್ಯವಾದ ಮಹತ್ವದ್ದಾಗಿದೆ. ಈ ವಸ್ತುಚೈತನ್ಯವಾದವನ್ನೇ ರಾಮಚಂದ್ರಭಟ್ಟರು ‘‘ನಾವು ತಿನ್ನುವ ಅನ್ನ ಈ ಲೋಕದ್ದೇ.ಅದರ ರುಚಿ ಮಾತ್ರ ಈ ಲೋಕದ್ದಲ್ಲ!’’ಎಂದು ಹೇಳುವ ಮೂಲಕ ಉಸುರಿದ್ದಾರೆ.
ಹೀಗೆ ಅವರು ದುಡಿಯುವ ವರ್ಗದ ಅನುಭವದ ಬದುಕು ಮತ್ತು ತಮ್ಮ ಅನುಭಾವದ ಬದುಕಿನ ಕುರಿತು ಹೇಳುತ್ತಾರೆ. ಅದೇ ಸಂದರ್ಭದಲ್ಲಿ ಬಂಡವಾಳಶಾಹಿಗಳ ಬಗ್ಗೆ ಮತ್ತು ಧರ್ಮವನ್ನೇ ಬಂಡವಾಳ ಮಾಡಿಕೊಂಡವರ ಬಗ್ಗೆ ವಿಮುಖರಾಗುತ್ತಾರೆ. ದುಡಿಸಿಕೊಳ್ಳುವವರು ಭಟ್ಟರ ಹಾಗೆ ಮಾನವೀಯವಾಗಿರಲು ಸಾಧ್ಯವೇ ಇಲ್ಲ. ಶೋಷಣೆಯೇ ಅವರ ಮುಖ್ಯ ಗುರಿಯಾಗಿರುತ್ತದೆ. ಸಂಪತ್ತು ಮತ್ತು ಮನುಷ್ಯತ್ವ ಎಂದೆಂದೂ ಕೂಡಿ ಹೋಗುವುದಿಲ್ಲ. ಆದರೆ ಸಂಪತ್ತುಳ್ಳವರು ದಾನ ಧರ್ಮದ ಹೆಸರಿನಲ್ಲಿ ಮಾನವೀಯತೆಯ ನಾಟಕ ಮಾಡುತ್ತಲೇ ಇರುತ್ತಾರೆ. ಒಬ್ಬನ ಸಂಪತ್ತು ಹೆಚ್ಚುತ್ತಿದೆ ಎಂದರೆ ಅದು ಮಾನವೀಯತೆಯನ್ನು ತಿನ್ನುತ್ತ ಬೆಳೆಯುತ್ತಿದೆ ಎಂದೇ ಅರ್ಥ. ನೆಟ್ಟಾರು ರಾಮಚಂದ್ರಭಟ್ಟರು ಖಾಸಗಿ ಆಸ್ತಿಗೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದರು. ಎಲ್ಲವೂ ದೇವರ ಸೊತ್ತು ಆದ್ದರಿಂದ ಅದು ಎಲ್ಲರಿಗೂ ಸಂಬಂಧಿಸಿದ್ದು ಎಂಬುದು ಅವರ ಅಂಬೋಣವಾಗಿತ್ತು.ಅವರ ದೃಷ್ಟಿಯಲ್ಲಿ ಸರಳ ಬದುಕಿಗೆ ಬೇಕಾದುದಕ್ಕಿಂತ ಹೆಚ್ಚಿನ ಆಸ್ತಿಯುಳ್ಳವರು ದೊಡ್ಡ ಕಳ್ಳರು.
(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top