---

ನಮ್ಮ ಶಿಕ್ಷಣ ಜ್ಞಾನ

ವಿದ್ಯೆಯೆಂದರೆ ಗೊಬ್ಬರದ ಹಾಗೆ ಎಂದೊಬ್ಬರು ಹೇಳಿದರು. ಅದು ಒಳ್ಳೆಯವರನ್ನು ಇನ್ನೂ ಒಳ್ಳೆಯವರನ್ನಾಗಿಸುತ್ತದೆ; ಹಾಗೆಯೇ ಕೆಟ್ಟವರನ್ನು ಇನ್ನೂ ಕೇಡಿಗರನ್ನಾಗಿಸುತ್ತದೆ. ಧೂರ್ತರಿಗೆ ಜ್ಞಾನ ಲಭಿಸಿದರೆ ಅವರು ಅಂತಹ ಜ್ಞಾನವನ್ನು ತಮ್ಮ ಧೂರ್ತತೆಯ ಸಾಕಾರ/ಮೂರ್ತಲಕ್ಷಣಗಳಾಗಿ ಪರಿವರ್ತಿಸುತ್ತಾರೆ.

ಆಂಧ್ರಪ್ರದೇಶ ವಿಶ್ವವಿದ್ಯಾನಿಲಯದ ಉಪಕುಲಪತಿ ‘ಕೌರವರು ಪ್ರಣಾಳ ಶಿಶುಗಳು’ ಎಂಬ ಒಂದು ವಿಶೇಷ ಸಂಶೋಧನೆ ನಡೆಸಿ ದೇಶದ ಪ್ರಾಜ್ಞರ ಗಮನ ಸೆಳೆದಿದ್ದಾರೆ. ಅವರ ಮಾತುಗಳು ಇಂತಹ ಸಂಶೋಧನೆಗಳ ಮುಂದುವರಿದ ಭಾಗವೆಂದು ಅನ್ನಿಸುತ್ತದೆ. ಈಗಾಗಲೇ ಗಣೇಶನ ಉದಾಹರಣೆಯೊಂದಿಗೆ ಈ ದೇಶದಲ್ಲಿ ಪಾಸ್ಟಿಕ್ ಸರ್ಜರಿಯಿತ್ತೆಂದು, ಸತ್ಯವಾನ-ಸಾವಿತ್ರಿಯರ ಉದಾಹರಣೆಯೊಂದಿಗೆ ಸತ್ತವರನ್ನು ಮತ್ತೆ ಬದುಕಿಸಬಹುದೆಂದು ಹೀಗೆ ಅನೇಕಾನೇಕ ಸಂಶೋಧನೆಗಳನ್ನು ಭಾರತೀಯ ರಾಜಕಾರಣಿಗಳು ಘೋಷಿಸಿದ್ದಾರೆ. ಆದರೆ ವಿಶೇಷವಿರುವುದು ಈ ತನಕ ರಾಜಕಾರಣಿಗಳು ಇಂತಹ ಸಂಶೋಧನೆಗಳನ್ನು ನಡೆಸಿ ಅವನ್ನು ಭಾಷಣದಲ್ಲಿ ಹೇಳಿ ತಮ್ಮ ಕುರಿಮಂದೆಯಿಂದ ಕೈಚಪ್ಪಾಳೆ ಗಿಟ್ಟಿಸಿದರೆ ಈ ಬಾರಿ ಈ ಮಾತುಗಳು ಬಂದದ್ದು ಭಾರತೀಯ ವಿಜ್ಞಾನ ಕಾಂಗ್ರೆಸ್ ವೇದಿಕೆಯಲ್ಲಿ (ಇದು ಭಾರತದ ವಿಜ್ಞಾನಿಗಳ ರಾಷ್ಟ್ರೀಯ ವೇದಿಕೆ; ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ!) ವಿಜ್ಞಾನದ ಸಂಶೋಧನೆಗಳಿಗೆ ವಿಜ್ಞಾನದ ಮಾತ್ರವಲ್ಲ, ಚರಿತ್ರೆೆಯ, ಭೂಗರ್ಭಶಾಸ್ತ್ರದ, ಉತ್ಖನನಶಾಸ್ತ್ರದ, ಖಗೋಳಶಾಸ್ತ್ರದ, ಪರಿಸರದ, ಮತ್ತಿತರ ಮೂರ್ತ ಶಾಸ್ತ್ರೀಯ ವಿಧಾನಗಳ ನೆರವನ್ನು ಪಡೆಯುವುದನ್ನು ಕಂಡಿದ್ದೇವೆ; ಕೇಳಿದ್ದೇವೆ. ಏಕೆಂದರೆ ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ವಿಜ್ಞಾನದ ಶಾಖೆಗಳೇ. ಇವುಗಳಿಗೆ ಕಲ್ಪನೆಯನ್ನು ಸೇರಿಸಿದರೆ ಅದು ಸೃಜನಶೀಲ ಕೃತಿಯಾಗುತ್ತದೆ. ವಿಜ್ಞಾನವನ್ನು ಆಧರಿಸಿ ಪ್ರಕಟವಾದ ಅನೇಕ ಖ್ಯಾತ ಕೃತಿಗಳಿವೆ. ಅವನ್ನು ಓದಿ ಆನಂದಿಸಬಹುದು. ಆದರೆ ಅವನ್ನು ನಂಬಿ ಪವಾಡ, ಪ್ರಯೋಗಗಳನ್ನು ನಡೆಸಲು ಯತ್ನಿಸಿದರೆ ನಗೆಪಾಟಲಾಗುತ್ತದೆ.

ಘನ ಉಪಕುಲಪತಿಯವರು ಮಾಡಿದ್ದು ಇದನ್ನೇ. ಜನರನ್ನು ನಗಿಸಬೇಕಾದರೆ ಅವರು ನಮ್ಮ ನಡುವಿನ ಉತ್ತಮ ಹಾಸ್ಯ ಸಾಹಿತಿಗಳಾದ ಡುಂಢಿರಾಜ್, ಹಾಸ್ಯ ಮಾತುಗಾರರಾದ ಕೃಷ್ಣೇಗೌಡ, ಪ್ರಾಣೇಶ್ ಇಂಥವರನ್ನು ಆಯೋಜಿಸಬೇಕಲ್ಲದೆ (ಇತರ ಭಾಷೆಗಳಲ್ಲೂ ಇಂತಹ ಪ್ರತಿಭಾವಂತರಿದ್ದಾರೆ!) ಪೌರಾಣಿಕ ಪ್ರತಿಮೆಗಳನ್ನು ನೇರ ಪ್ರಯೋಗಶಾಲೆಯ ಪ್ರಣಾಳಗಳಲ್ಲಿಡುವುದಲ್ಲ. ಹೀಗೆ ಮಾಡುವುದರ ಮೂಲಕ ಅವರ ರಾಜಕೀಯ ಭವಿಷ್ಯವು ಉಜ್ವಲವಾಗುತ್ತದೆಯೋ ಗೊತ್ತಿಲ್ಲ. ಆದರೆ ಅವರು ಈ ಎಲ್ಲ ಹಾಸ್ಯ ಸಾಹಿತಿಗಳನ್ನು ಮೀರಿಸಿದ ಹಾಸ್ಯಾಸ್ಪದ ಸಾಹಿತಿಗಳಾಗಿ ಚಿರಕಾಲ ಉಳಿಯುವುದರಲ್ಲಿ ಸಂಶಯವಿಲ್ಲ. ಭಾರತೀಯ ವಿಜ್ಞಾನವು ಒಂದೆಡೆಯಲ್ಲಿ ಸರ್ ಸಿ.ವಿ.ರಾಮನ್, ಎಸ್.ಚಂದ್ರಶೇಖರ್, ಮುಂತಾದ ನೊಬೆಲ್ ಪುರಸ್ಕೃತರ, ಜಗದೀಶ್ಚಂದ್ರ ಬೋಸ್, ಡಾ.ಎಂ.ಎಸ್. ಸ್ವಾಮಿನಾಥನ್ ಮುಂತಾದ ಖ್ಯಾತ ವಿಜ್ಞಾನಿಗಳ ಮೂಲಕ ವಿಜ್ಞಾನವನ್ನು ಮುನ್ನಡೆಸಿದರೆ, ಅಷ್ಟು ವೇಗದಲ್ಲಿ ಅಲ್ಲದಿದ್ದರೂ ಜನಪ್ರಿಯ ಹಿನ್ನಡೆಯ ಹಾದಿಯನ್ನು ನಿರ್ಮಿಸಲು ದೇಶಿತಳಿಯ ರಾಜಕಾರಣಿಗಳೂ ಇಂತಹ ಉಪ-ಕುಲ-ಪತಿಗಳೂ ಹವಣಿಸುವುದು ಬುದ್ಧಿಯಿರುವ ಯಾರಿಗೇ ಆಗಲಿ ಎಚ್ಚರಿಕೆಯ ಗಂಟೆಯೇ ಸರಿ. ನಮ್ಮೂರಿನಲ್ಲಿ ತೆಂಗಿನ ಮರವನ್ನು ಸಾಯಿಸಬೇಕಾದರೆ ಅದರ ಕಾಂಡಕ್ಕೊಂದು ರಂದ್ರವನ್ನು ಕೊರೆದು ಒಂದು ‘ಕುರುಬಾಯಿ’ಯೆಂದು ಗ್ರಾಮ್ಯವಾಗಿ ಹೇಳುವ ವಿನಾಶಕ ಕೀಟವನ್ನು ಇಟ್ಟರೆ ಮರ ಸಾಯುತ್ತದೆಯೆಂಬ ಹೇಳಿಕೆಯಿದೆ. ಅನೇಕ ವಿಶ್ವವಿದ್ಯಾನಿಲಯಗಳು ವಿಶ್ವವಿದ್ಯೆಯ ಮಾತ್ರವಲ್ಲ ಯಾವೊಂದು ವಿದ್ಯೆಯ ನಿಲಯಗಳೂ ಆಗಿಲ್ಲದ ಈ ಕಾಲದಲ್ಲಿ ವಿಶ್ವವಿದ್ಯಾ-ಲಯಗಳು ‘ಲಯ’ವಾಗುವುದಕ್ಕೆ ಹೀಗಿರುವ ಒಬ್ಬೊಬ್ಬರು ಸಾಕು. ಹಿಂದಣ ಹೆಜ್ಜೆಯೆಂದರೆ ಪುರಾಣದ ಕಥೆಗಳೆಂದು ತಿಳಿದ ವಿದ್ಯಾವಂತರು ಎಲ್ಲಿಯವರೆಗೆ ಗೌರವದ ಹುದ್ದೆಯನ್ನು ಆಕ್ರಮಿಸಿಕೊಂಡು ಸರಕಾರದ ಮಾನ್ಯತೆ, ಜನಪ್ರಿಯತೆಯನ್ನು ಸಾಧಿಸುತ್ತಾರೋ ಅಲ್ಲಿಯವರೆಗೆ ಶಾಲಾಕಾಲೇಜುಗಳೊಳಗೆ ವಿದ್ಯೆ ಸಿದ್ಧಿಸದೆಂದೇ ತಿಳಿಯಬೇಕಾಗುತ್ತದೆ.

 ಇದು ಹೊರನೋಟದ ಸಮೀಕ್ಷೆಯಾದರೆ ನಮ್ಮ ಶಿಕ್ಷಣದಲ್ಲಿ ಇಂತಹ ಆಭಾಸಗಳನ್ನು ಮಾಡದೆಯೂ ಶಿಕ್ಷಣವನ್ನು ಅಪಹಾಸ್ಯಕ್ಕೆ ದೂಡುವ ಪ್ರಭೃತಿಗಳಿಗೇನೂ ಕೊರತೆಯಿಲ್ಲ. ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂಬುದು ಬಹುತೇಕ ಹೆತ್ತವರ ಕನಸು. ಅದನ್ನು ಸಾಧಿಸುವುದು ಹೇಗೆಂಬುದೇ ಅವರ ಕೊರಗು. ಹಣವಂತರು ಹೇಗಾದರೂ ಪ್ರತಿಷ್ಠಿತ ದೇಶಿ ಮತ್ತು ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಶಕ್ತರಾದರೆ ಬಡವರು ಯಾವುದಾದರೂ ಒಂದು ಪದವಿ ಸಿಕ್ಕಿದರೆ ಸಾಕು ಎಂಬಂತಿದ್ದಾರೆ. ಇಂತಹವರ ನಡುವಲ್ಲೂ ಉನ್ನತ ಶಿಕ್ಷಣವನ್ನು ಪಡೆದು ತಮಗೂ ತಮ್ಮ ಹೆತ್ತವರಿಗೂ ನಾಡಿಗೂ ಗೌರವ ಮತ್ತು ಕೀರ್ತಿಯನ್ನು ತಂದವರಿದ್ದಾರೆ. ನಮ್ಮ ಮಾಧ್ಯಮಗಳು ಇಂತಹ ಸಾಧಕರನ್ನು ಅವರಿಗೆ ಕೀಳರಿಮೆಯುಂಟಾಗುವ ರೀತಿಯಲ್ಲಿ ‘‘ಅಡುಗೆಯವನ ಮಗಳು ಲೆಕ್ಕ ಪರಿಶೋಧಕಿ’’, ‘‘ಆಟೋ ಚಾಲಕನ ಮಗ ಭಾರತೀಯ ಆಡಳಿತ ಸೇವೆಗೆ ಆಯ್ಕೆ’’ ಮುಂತಾದ ಶೀರ್ಷಿಕೆಗಳೊಂದಿಗೆ ವರದಿಮಾಡುತ್ತಾರಾದರೂ ಅಂತಹ ಸಾಧನೆಯು ಸಮಾಜಕ್ಕೆ ಗೊತ್ತಾಗುತ್ತದೆಯೆಂಬ ಇತ್ಯಾತ್ಮಕ ಮೌಲ್ಯಗಳೊಂದಿಗೆ ಅವುಗಳನ್ನು ತಾಳಿಕೊಳ್ಳಬಹುದು. ಆದರೆ ಒಂದು ಹಂತದ ಆನಂತರ ಪದವಿಗಳೆಲ್ಲವೂ ಹಣಮಾಡುವುದಕ್ಕಾಗಿಯೇ ಇರುವುದೆಂಬ ತಪ್ಪು ತಿಳಿವಳಿಕೆ ಬರುವ ರೀತಿಯಲ್ಲಿ ಅನೇಕ ವಿದ್ಯಾವಂತರು ನಡೆದುಕೊಳ್ಳುತ್ತಾರೆ. ಸರಕಾರದ ಉನ್ನತ ಹುದ್ದೆಯಲ್ಲಿರುವವರು, ವೈದ್ಯರು, ಇಂಜಿನಿಯರುಗಳು, ಲೆಕ್ಕ ಪರಿಶೋಧಕರು, ವಕೀಲರು, ಭ್ರಷ್ಟರಾಗಿ ಪ್ರಚಾರಗೊಳ್ಳುವುದನ್ನು ಗಮನಿಸಿದರೆ ಇವರು ಕಲಿತದ್ದು ವಿದ್ಯೆಯೇ ಅಥವಾ ನೋಟು ಮುದ್ರಿಸುವ ತಂತ್ರಗಾರಿಕೆಯನ್ನೇ ಎಂಬ ಸಂಶಯ ಬರುತ್ತದೆ. ಶಿಕ್ಷಣದಲ್ಲಿ ಮೌಲಿಕ ಮತ್ತು ನೈತಿಕ ಅಂಶಗಳು ಕಡಿಮೆಯಾಗಿವೆಯೆಂಬುದಕ್ಕೆ ಬೇರೆ ಸಾಕ್ಷ್ಯ ಬೇಡ: ನಮ್ಮ ನ್ಯಾಯಾಲಯಗಳಲ್ಲಿ ಆರೋಪಿಗಳಾಗಿ ನಿಂತಿರುವವರಲ್ಲಿ ವಿದ್ಯಾವಂತರ ಅಂಕಿ-ಅಂಶಗಳನ್ನು ನೋಡಿದರೆ ಸಾಕು. ವಿದ್ಯೆಯೆಂದರೆ ಗೊಬ್ಬರದ ಹಾಗೆ ಎಂದೊಬ್ಬರು ಹೇಳಿದರು. ಅದು ಒಳ್ಳೆಯವರನ್ನು ಇನ್ನೂ ಒಳ್ಳೆಯವರನ್ನಾಗಿಸುತ್ತದೆ; ಹಾಗೆಯೇ ಕೆಟ್ಟವರನ್ನು ಇನ್ನೂ ಕೇಡಿಗರನ್ನಾಗಿಸುತ್ತದೆ. ಧೂರ್ತರಿಗೆ ಜ್ಞಾನ ಲಭಿಸಿದರೆ ಅವರು ಅಂತಹ ಜ್ಞಾನವನ್ನು ತಮ್ಮ ಧೂರ್ತತೆಯ ಸಾಕಾರ/ಮೂರ್ತಲಕ್ಷಣಗಳಾಗಿ ಪರಿವರ್ತಿಸುತ್ತಾರೆ. ಕಳೆ ಹುಲುಸಾಗಿ ಬೆಳೆದರೆ ಅದು ಕಳೆಯ ತಪ್ಪಲ್ಲ; ಅದಕ್ಕೆ ನೀಡಿದ ಗೊಬ್ಬರದ ತಪ್ಪು. ಆತ ಜ್ಞಾನಿಯಾದರೂ ಧೂರ್ತ ಎನ್ನಬೇಕೇ ಹೊರತು ಆತ ಧೂರ್ತನಾದರೂ ಜ್ಞಾನಿ ಎನ್ನಬಾರದು. ಇಂದಿನ ಶಿಕ್ಷಣ ಮತ್ತು ಅದು ಮಾಡುವ ಒಟ್ಟಾರೆ ಪರಿಣಾಮಗಳ ಬಗ್ಗೆ ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ: ಒಟ್ಟು ಶಿಕ್ಷಣದ ಉದ್ದೇಶವು ಸಮಾಜದಲ್ಲಿ ಆರ್ಥಿಕ ಸಾಫಲ್ಯವನ್ನು ಸಾಧಿಸುವುದು. ಒಂದೆರಡು ಉದಾಹರಣೆಗಳನ್ನು ಕೊಡುವುದಾದರೆ- ಹಿಂದೆಲ್ಲ ಶಾಲಾ ಶಿಕ್ಷಕರೆಂದರೆ ‘ಒಂದೂರಿನಲ್ಲಿ ಒಬ್ಬ ಬಡ ಬ್ರಾಹಣನಿದ್ದನು’ ಎಂಬ ಹಾಗೆ ಸರಳ ಬದುಕಿನ ನಿರುಪದ್ರವಿ ಜೀವಿಗಳಾಗಿದ್ದರು. ಪತ್ರಕರ್ತರೆಂದರೆ ನಡೆದೇ ಅಥವಾ ಹೆಚ್ಚೆಂದರೆ ಸೈಕಲಿನಲ್ಲಿ ಹೋಗುವ, ಹರಿದ ಖಾದಿ ಇಲ್ಲವೇ ಸಾಮಾನ್ಯ ದರ್ಜೆಯ ಧಿರುಸುಗಳನ್ನು ಉಟ್ಟು ಅನಾಮಿಕರಾಗಿ ಬದುಕುವವರಾಗಿದ್ದರು. (ಇವರಷ್ಟೇ ಅಲ್ಲ, ಸಮಾಜದ ಎಲ್ಲ ವಲಯಗಳಲ್ಲೂ ಇಂತಹ ಬೇಕಷ್ಟು ಉದಾಹರಣೆಗಳು ಸಿಗುತ್ತವೆ!) ಇಂದು ಈ ಎಲ್ಲ ಮಂದಿ ಸಮಾಜದಲ್ಲಿ ಆಢ್ಯತೆಯ ಅನುಯಾಯಿಗಳಾಗಿದ್ದಾರೆ. ತಮ್ಮ ಸಮಯವನ್ನು ತಾವು ಕಲಿತ ಶಿಕ್ಷಣವನ್ನು ವೃದ್ಧಿಸುವ ಸಲುವಾಗಿ ಅಥವಾ ಅದರ ಮೂಲಕ ಸಮಾಜಕ್ಕೆ ಬೆಳಕು ನೀಡುವ ಸಲುವಾಗಿ ವ್ಯಯಿಸುವ ಬದಲು ತಮ್ಮ ಆರ್ಥಿಕ ಸಂರಕ್ಷಣೆ ಮತ್ತು ಇದಕ್ಕಾಗಿ ಇತರರನ್ನು ಕೆಳತಳ್ಳುವ ಹಂತಕ್ಕೂ ಇಳಿಯುತ್ತಾರೆ. ‘ಕಾಂಚಾಣಂ ಕಾರ್ಯ ಸಿದ್ಧಿ’ ಎಂದು ಯಾರು ಹೇಳಿದರೋ, ಎಲ್ಲವನ್ನೂ ಹಣದ ಮೂಲಕ ಹೇಗೆ ಗಿಟ್ಟಿಸಿಕೊಳ್ಳುವುದೆಂಬುದರ ಕಡೆಗೇ ಗಮನವಿರುತ್ತದೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಡಾಕ್ಟರೇಟ್ ಪದವಿ ಗಳಿಸಿದವರು ಸದಾ ಪ್ರತಿಷ್ಠಿತರ ನಡುವೆ ಫೋಟೋ ತೆಗೆಸಿಕೊಳ್ಳುವುದಕ್ಕೆ, ತಮ್ಮ ಅಧೀನ ಅಧಿಕಾರಿಗಳನ್ನು ತುಳಿಯುವುದಕ್ಕೆ ತಮ್ಮ ಬಹುಪಾಲು ‘ಅಮೂಲ್ಯ’ ವೇಳೆಯನ್ನು ವ್ಯಯಮಾಡುತ್ತಾರೆ. ಇದೆಲ್ಲದರ ನಡುವೆ ನಮ್ಮ ಪಿಎಚ್‌ಡಿಗಳು ದಿನೇದಿನೇ ಹಗುರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಪಿಎಚ್‌ಡಿಗಳಿದ್ದರೆ ಇಂದು ಅಂತಹ ಪದವಿಗಳಿಲ್ಲದಿರುವವರೇ ಕಡಿಮೆಯೇನೋ ಎಂಬ ಉತ್ಪ್ರೇಕ್ಷೆ ನಿಜವಿರಬಹುದೆನ್ನಿಸುತ್ತದೆ. ಆದರೂ ಈ ಪದ ಮತ್ತು ಪದವಿಯೇ ಕಾರಣವಾಗಿ ಸೊನ್ನೆಗಳೂ ವಿದ್ವಾಂಸರಾಗುತ್ತಿದ್ದಾರೆ. ‘ಕೌರವರು ಪ್ರಣಾಳಶಿಶುಗಳು’ ಎಂದವರು ಈ ಪಟ್ಟಿಯಲ್ಲೊಬ್ಬರು. ಇದಕ್ಕೆ ಸರಿಯಾಗಿ ನಮ್ಮ ಸರಕಾರ(ಗಳು-ಕೇಂದ್ರ ಮತ್ತು ರಾಜ್ಯ) ಎಲ್ಲ ಹುದ್ದೆಗೂ ಕೆಲವೊಂದು ಅಗತ್ಯ ಮತ್ತು ಅನಗತ್ಯ ಅರ್ಹತೆಗಳನ್ನು ನಿಗದಿಪಡಿಸುತ್ತವೆ. ಇವು ಅನಿವಾರ್ಯವೂ ಹೌದು. ಒಬ್ಬರ ದೃಷ್ಟಿಯಲ್ಲಿ ಜ್ಞಾನಿಯೆನ್ನಿಸುವವರು ಇನ್ನೊಬ್ಬರ ದೃಷ್ಟಿಯಲ್ಲಿ ಹಾಗಿರಬೇಕಾಗಿಲ್ಲ. ಆದ್ದರಿಂದಾಗಿ ಆಯ್ಕೆಯ ಶಿಸ್ತಿನ ದೃಷ್ಟಿಯಿಂದ ಇಂಥದ್ದೊಂದು ನಿಯಮ ಬೇಕಾಗುತ್ತದೆ. ಆದರೆ ಈ ಆಯ್ಕೆಗಳು ಬಹುಪಾಲು ಭ್ರಷ್ಟತೆಯ ಶಿಶುಗಳು. ಲೋಕಸೇವಾ ಆಯೋಗಗಳು ನಡೆಸುವ ಆಯ್ಕೆಯಲ್ಲಿ ನೂರಾರು ಕೋಟಿ ಸಂಪಾದನೆಯಿರುವುದು ಇಂದು ಬಹಿರಂಗ ರಹಸ್ಯ. ಎಷ್ಟೇ ಓದಿರಲಿ, ಎಷ್ಟೇ ತಜ್ಞರಿರಲಿ, ಆಯ್ಕೆದಾರರ ಪರಿಚಯ ಅಥವಾ ಅವರ ಮೇಲೆ ಪ್ರಭಾವ ಬೀರಬಲ್ಲ ಸಾಮರ್ಥ್ಯವಿಲ್ಲದಿದ್ದರೆ ಯಾವುದಾದರೊಂದು ನೆಪದಲ್ಲಿ ತಿರಸ್ಕೃತರಾಗುತ್ತಾರೆ. ಇಂತಹ ಕಟು ಮತ್ತು ಕಡು ಅನುಭವಗಳನ್ನು ಹೊಂದಿ ಬದುಕನ್ನು ನಿರರ್ಥಕಗೊಳಿಸಿಕೊಂಡ ಅನೇಕರಿದ್ದಾರೆ. ಇದು ಸರಕಾರದವರು ನಡೆಸುವ ಆಯ್ಕೆಗೆ ಸೀಮಿತವಾಗಿಲ್ಲ. ಹಿಂದೆಲ್ಲ ಬ್ಯಾಂಕ್ ಉದ್ಯೋಗಗಳು ಖಾಸಗಿಯವರ ನಿಯಂತ್ರಣದಲ್ಲಿದ್ದಾಗಲೂ ಪ್ರಭಾವ, ಠೇವಣಿಯ ಪ್ರಮಾಣ ಇವನ್ನು ಹೊಂದಿಕೊಂಡು ಆಯ್ಕೆ ಮಾಡಲಾಗುತ್ತಿತ್ತು. ಹೀಗೆ ಕೆಲಸ ಸಿಗದಿದ್ದರೂ ನಿರಾಶರಾಗದೆ ಸ್ವಂತ ವೃತ್ತಿ ಮಾಡಿದವರಿದ್ದಾರೆ. ಒಬ್ಬ ಹಿರಿಯ ಅಧಿಕಾರಿ ಯಾವುದೋ ಊರಿನಿಂದ ವರ್ಗಾವಣೆಯಾದಾಗ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಆ ವಲಯದ ಪ್ರಭಾವಿ ರಾಜಕಾರಣಿಯೂ ಒಂದು ಪ್ರತಿಷ್ಠಿತ ಬ್ಯಾಂಕಿನ ಅಧ್ಯಕ್ಷರೂ ಹಿರಿಯ ವಕೀಲರೂ ಆಗಿದ್ದು ನಿವೃತ್ತರಾದವರೊಬ್ಬರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಅಧಿಕಾರಿ ತನ್ನ ಸನ್ಮಾನಕ್ಕೆ ಉತ್ತರಿಸುತ್ತಾ ತಾನು ಈಗಿರುವ ಹುದ್ದೆಗೆ ಆ ಮುಖ್ಯ ಅತಿಥಿ ಮಹೋದಯರೇ ಮುಖ್ಯ ಕಾರಣವೆಂದೂ ತಾನು ಅವರಲ್ಲಿ ಬ್ಯಾಂಕ್ ನೌಕರಿಯನ್ನು ಯಾಚಿಸಲು ಹೋದಾಗ ಅವರು ತಿರಸ್ಕರಿಸಿದರೆಂದೂ ಅದರಿಂದಾಗಿ ತಾನು ಈ ಹುದ್ದೆಗೆ ಬರಲು ಕಾರಣವಾಯಿತೆಂದೂ ಹೇಳಿದರು. ಇಂತಹ ಸಂದರ್ಭವು ಭಾರತದ ಶ್ರೇಷ್ಠ ವಕೀಲರಲ್ಲೊಬ್ಬರಾಗಿದ್ದ ದಿವಂಗತ ನಾನೀ ಪಾಲ್ಕಿವಾಲರಿಗೂ ಬಂದಿತ್ತಂತೆ. ಮುಂಬೈ ವಿಶ್ವವಿದ್ಯಾನಿಲಯದ ಯಾವುದೋ ಉಪನ್ಯಾಸಕ ಹುದ್ದೆಗೆ ಅವರು ಅರ್ಜಿಹಾಕಿ ಅವರು ಅಭ್ಯರ್ಥಿಗಳ ಪೈಕಿ ಹೆಚ್ಚು ಮೌಲ್ಯಾಂಕನ ಪಡೆದವರಾಗಿದ್ದರೂ ಅವರನ್ನು ತಿರಸ್ಕರಿಸಿ ಇನ್ನೊಬ್ಬ ಪ್ರಭಾವಶಾಲಿ ಅಭ್ಯರ್ಥಿಗೆ ಆ ಹುದ್ದೆಯನ್ನು ನೀಡಲಾಯಿತು. ಪಾಲ್ಕಿವಾಲಾ ವಕೀಲವೃತ್ತಿಗೆ ಶರಣಾದರು. ಬಹಳ ವರ್ಷಗಳ ಆನಂತರ ಅವರನ್ನು ಅದೇ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣ ಮಾಡಲು ಆಹ್ವಾನಿಸಿದಾಗ ಆ ಇನ್ನೊಬ್ಬ ಅಭ್ಯರ್ಥಿ ಅಲ್ಲೇ ಪ್ರಾಧ್ಯಾಪಕರಾಗಿ ಉಪಸ್ಥಿತರಿದ್ದುದನ್ನು ಗಮನಿಸಿ ಅವರಿಂದಾಗಿ ತಾನಿಂದು ಈ ಅವಕಾಶಕ್ಕೆ ಪ್ರಾಪ್ತರಾದದ್ದನ್ನು ನೆನಪಿಸಿದರು. ಇಂತಹ ನಿದರ್ಶನಗಳು ಹಲವಾರಿವೆ. ಮುಖ್ಯವಾಗಿ ಈ ಎಲ್ಲ ಆಯಾಮಗಳಲ್ಲಿ ಗುರುತಿಸಬೇಕಾದ್ದೆಂದರೆ ಶಿಕ್ಷಣವು ಬದುಕನ್ನು ರೂಪಿಸಬೇಕಾದ ಅಗತ್ಯವಿದೆ. ಬದುಕೆಂದರೆ ಹೊಟ್ಟೆಪಾಡಲ್ಲ. ಅದು ಮನುಷ್ಯನ ಜೀವನವಿಧಾನ. ನಿತ್ಯ ಆತನನ್ನು ಸಮಾಜದ ಒಬ್ಬ ಪರೋಪಕಾರಿ ಜೀವಿಯಾಗಿಸುವುದೇ ಹೊರತು ಪರೋಪಜೀವಿಯಾಗಿಸುವುದಲ್ಲ. ಲೇಖನ ಪೂರ್ಣವಾಗುವ ಹೊತ್ತಿಗೆ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿರುವ ಉಕ್ತಿಹಂಚಿಕೆಯು ಕಾರಣವಾಗಿ ನನ್ನ ಪರಿಚಿತರೊಬ್ಬರು ಈ ಉಲ್ಲೇಖವನ್ನು ಕಳುಹಿಸಿದರು: ನೀವು ಯಾವುದೇ ವ್ಯಗ್ರತೆ ಅಥವಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಋಣಾತ್ಮಕ ಟೀಕೆಗಳನ್ನು ಕೇಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಾಗ ನೀವು ಪಕ್ವವಾಗಿದ್ದೀರಿ ಮತ್ತು ನಿಜಕ್ಕೂ ವಿದ್ಯಾವಂತರಾಗಿದ್ದೀರಿ ಎಂದರ್ಥ. ಈ ಚರ್ಚೆಗೆ ಇದು ಹೊಂದುತ್ತದೆಯೆಂಬ ಕಾರಣಕ್ಕಾಗಿ ಅದನ್ನು ಇಲ್ಲಿ ಹೇಳಿದ್ದೇನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top