---

ಬದಲಾಗುತ್ತಾ ಬೆಳೆದ ಸೇನ್

ಭಾಗ-2

‘ಕಲ್ಕತ್ತಾ 71’, ಅದಕ್ಕೆ ಮೊದಲು ತೆಗೆದಿದ್ದ ‘ಇಂಟರ್‌ವ್ಯೆ’ ಹಾಗೂ ಅದಾದ ಮೇಲೆ ತೆಗೆದ ‘ಪದಾತಿಕ್’ ರಾಜಕೀಯ ತ್ರಿವಳಿಗಳಾಗಿದ್ದವು. ಮೂರನೇ ಸಿನೆಮಾ ತೆಗೆಯುವ ವೇಳೆಗೆ ಸೇನ್ ಸ್ವಲ್ಪಮಟ್ಟಿಗೆ ಬದಲಾಗಿದ್ದರು. ಮೊದಲೆರಡು ಸಿನೆಮಾಗಳಲ್ಲಿ ಅವರಿಗೆ ಎಡಪಂಥೀಯ ಚಳವಳಿಯ ಬಗ್ಗೆ ಮೆಚ್ಚುಗೆ ಹಾಗೂ ಗೌರವ ಇತ್ತು. ನಂತರವೂ ಅದೇ ಗೌರವ ಉಳಿದಿತ್ತ್ತು. ಆದರೆ ‘ಪದಾತಿಕ್’ ಸಿನೆಮಾದಲ್ಲಿ ಅವರು ಹೆಚ್ಚು ಧ್ಯಾನಸ್ಥರಾಗಿದ್ದರು. ಅದು ಪೋಲಿಸರಿಂದ ಹಾಗೂ ತನ್ನ ಸಂಗಾತಿಗಳಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಒಬ್ಬ ಯುವ ಕಾಮ್ರೇಡನ ಮನಸ್ಥಿತಿಯನ್ನು ಚಿತ್ರಿಸುತ್ತದೆ. ಅಲ್ಲಿ ನಕ್ಸಲೀಯ ಚಳವಳಿಯ ಸಾಮರ್ಥ್ಯ ಹಾಗೂ ಮಿತಿಯನ್ನು ವಿಶ್ಲೇಷಿಸುತ್ತಾರೆ. ಒಂದು ರಾಜಕೀಯ ಸೋಲಿನ ಮೂಲವನ್ನು ಸೇನ್ ನೈತಿಕ ಸೋಲಿನಲ್ಲಿ ಕಾಣುತ್ತಾರೆ. ಚಳವಳಿಗಳು ಮಾನವನ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾರೆ. ಆ ಮೂಲಕ ಒಂದು ಸ್ವವಿಮರ್ಶೆಯನ್ನು ಮಾಡಿಕೊಳ್ಳುತ್ತಾರೆ. ಅವರು ಚಳವಳಿಯಿಂದ ಹೊರಗೆ ನಿಂತು ಅದನ್ನು ಅವಹೇಳನ ಮಾಡುವುದಿಲ್ಲ, ನಿಂದಿಸುವುದಿಲ್ಲ. ಉಪದೇಶ ಮಾಡುವುದಿಲ್ಲ. ಯಾವಾಗಲೂ ಸ್ವವಿಮರ್ಶೆ ಎನ್ನುವುದು ನಿಂದನೆಯಾಗಿಬಿಡುವ ಅಪಾಯವಿರುತ್ತದೆ. ಅವೆರಡರ ನಡುವಿನ ಅಂತರ ತುಂಬಾ ಕಡಿಮೆ. ಸೇನ್‌ಗೆ ಇದರ ಬಗ್ಗೆ ಸ್ಪಷ್ಟತೆಯಿತ್ತು. ರಾಜಕೀಯದಿಂದ ಸೇನ್ ದೂರಬಂದಿದ್ದಾರೆ ಅನ್ನುವ ಟೀಕೆಗಳು ಬಂದವು. ಅವರಲ್ಲಿ ಮಿಲಿಟೆನ್ಸಿ ಕಡಿಮೆಯಾಗಿದೆ ಅಂತ ಹಲವರು ವಿಮರ್ಶೆ ಬರೆದರು.
ಸೇನ್ ತಮ್ಮ ಮೊದಲ ಸಿನೆಮಾಗಳಲ್ಲಿ ಶೋಷಣೆ ಹಾಗೂ ಅದರ ಕಾರಣವನ್ನು ಶೋಧಿಸುತ್ತಿದ್ದರು. ಜೊತೆಗೆ ತುಂಬಾ ಕ್ರೋಧ ಇತ್ತು. ‘‘ನಾನು ತುಂಬಾ ಕೂಗುತ್ತಿದ್ದೆ. ಹೊಸ ಸಮಾಜದ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದೆ. ಅದ್ಭುತ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೆ. ಅದು ದ್ಯದಲ್ಲೆ ಬಂದು ಬಿಡುತ್ತೆ ಅಂತ ನಂಬಿದ್ದೆ. ಬಹುಶಃ ಅದು ತುಂಬಾ ಸರಳೀಕೃತವಾದ ತೀರ್ಮಾನವಾಗಿತ್ತು ಅಂತ ಈಗ ಅನ್ನಿಸುತ್ತದೆ. ಆಗ ನನ್ನ ನಂಬಿಕೆಗಳೇ ಹಾಗಿದ್ದವು. ಆಗ ಅದೇ ಪ್ರಧಾನವಾದ ಸಾಮಾಜಿಕ ಹಾಗೂ ರಾಜಕೀಯ ನಂಬಿಕೆಗಳಾಗಿದ್ದವು. ಈಗ ಅಲ್ಲಿಂದ ದೂರ ಬಂದಿದ್ದೇನೆ. ಆತ್ಮಾವಲೋಕನ, ಸ್ವವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನನ್ನ ಒಳಗನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ‘ಏಕ್ ದಿನ ಪ್ರತಿದಿನ್’ ಸಿನೆಮಾದಲ್ಲಿ ನನ್ನ ಕಾಳಜಿಯೆಲ್ಲವೂ ಒಳಗಿನ ಜಗತ್ತು, ಅದರ ನಿಗೂಢತೆ, ಅದರ ನಿರಾಶೆಗಳು, ಗೊಂದಲಗಳು ಹಾಗೂ ಸಾಮರ್ಥ್ಯ ಇವೆಲ್ಲವನ್ನೂ ಅರ್ಥಮಾಡಿಕೊಳ್ಳುವತ್ತ ಇತ್ತು.’’
ಸಾಮಾಜಿಕ ಬದಲಾವಣೆಗಾಗಿ ಸಿನೆಮಾವನ್ನು ಬಳಸಿಕೊಳ್ಳಬಹುದೆಂದು ಅವರು ಬಲವಾಗಿ ನಂಬಿದ್ದರು. ಅದು ಸ್ವಲ್ಪಮಟ್ಟಿಗೆ ನಿಜವಿರಬಹುದು. ಸಿನೆಮಾದಿಂದ ‘‘ಈಗಾಗಲೇ ಮಿಲಿಟೆಂಟ್ ಆಗಿರುವವರು ಇನ್ನಷ್ಟು ಮಿಲಿಟೆಂಟ್ ಆಗಬಹುದು. ಆದರೆ ಹೊರಗುಳಿದವರನ್ನು ಪ್ರೇರೇಪಿಸುವುದಕ್ಕೆ ಅದರಿಂದ ಸಾಧ್ಯವಾಗುವುದಿಲ್ಲ.’’ ‘ಬ್ಯಾಟಲ್ ಷಿಪ್ ಪೊಟೆಮ್ಕಿನ್’ ಅಂತಹ ಹತ್ತು ಸಿನೆಮಾ ತೆಗೆದರೂ ಸರಕಾರವೊಂದನ್ನು ಉರುಳಿಸುವುದು ಸಾಧ್ಯವಿಲ್ಲ ಎಂಬುದನ್ನು ಸೇನ್ ಮನಗಂಡರು. ಬದಲಾವಣೆ ಆಗಬೇಕಾದರೆ ನಿಜವಾಗಿ ಬೇಕಿರುವುದು ಸೂಕ್ತವಾದ ವಾತಾವರಣ. ಅಂತಹ ವಾತಾವರಣದ ಸೃಷ್ಟಿಗೆ ಸಿನೆಮಾದಂತಹ ಮಾಧ್ಯಮಗಳು ಸಹಾಯಕವಾಗಬಲ್ಲದು. ‘‘ಸಾಹಿತ್ಯ ಹಾಗೂ ಇತರ ಮಾಧ್ಯಮಗಳಂತೆ ಸಿನೆಮಾಕ್ಕೂ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಅದು ಒಂದು ವಾತಾವರಣವನ್ನು ಸೃಷ್ಟಿಸುತ್ತದೆ. ಒಂದು ರೀತಿಯ ಚರ್ಚೆಯನ್ನು ಅದು ಪ್ರಚೋದಿಸಬಹುದು. ಅದಕ್ಕೆ ಬೇಕಾದ ಮಾಹಿತಿಯನ್ನು ಒದಗಿಸುವುದು ನನ್ನ ಕೆಲಸ. ಅದು ತಟಸ್ಥ ನಿಲುವಿನಿಂದ ಬಂದ ಮಾಹಿತಿಯಲ್ಲ. ಅದರಲ್ಲಿ ನನ್ನ ನಿಲುವು ಇರುತ್ತದೆ. ಈ ಚರ್ಚೆಯ ಪ್ರಕ್ರಿಯೆಯಲ್ಲಿ ನಿಮ್ಮನ್ನು ಪ್ರೇಕ್ಷಕರಾಗಿ ಸಕ್ರಿಯವಾಗಿ ತೊಡಗುವಂತೆ ಸಿನೆಮಾ ಮಾಡಬಹುದು.’’ ನಿಯೊ ರಿಯಲಿಸಂನ ಪ್ರವರ್ತಕ ಜವಟೀನಿ ಕೂಡ ಅಂತಹುದೇ ಒಂದು ತೀರ್ಮಾನಕ್ಕೆ ಬಂದಿದ್ದ. ‘‘ಸಿನೆಮಾ ಸಮಾಜವನ್ನು ಬದಲಿಸುತ್ತೆ ಅಂದುಕೊಂಡಿದ್ದೆ. ಸಿನೆಮಾ ಹ್ಯಾಸ್ ಫೇಲ್ಡ್ ಮಿ ಮಿಸರಬಲಿ’’ ಎಂದು ಜವಟೀನಿಯೇ ಸೇನ್‌ಗೆ ಹೇಳಿದ್ದರಂತೆ. ಸಿನೆಮಾದಿಂದ ಫ್ಯಾಶಿಸಂ ಅನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಹೆಚ್ಚೆಂದರೆ ಫ್ಯಾಶಿಸಂ ಕಡೆ ಹೋಗುತ್ತಿರುವ ಸಮಾಜದಲ್ಲಿ ಒಂದು ಚರ್ಚೆ ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಸಬಹುದು.
ಸೇನರ ನಿಲುವು ಬದಲಾಗುವುದಕ್ಕೆ ಬದಲಾದ ರಾಜಕೀಯ ಪರಿಸ್ಥಿತಿಯೂ ಕಾರಣ. ಅವರು ನಂಬಿಕೊಂಡಿದ್ದ ಎಡಪಕ್ಷಗಳು ನಿರಾಸೆ ಮೂಡಿಸಿದ್ದವು. ಹಾಗಾಗಿ ಒಂದು ಆತ್ಮಾಲೋಕನದ, ಸ್ವವಿಮರ್ಶೆಯ ಆವಶ್ಯಕತೆ ಇತ್ತು. ತಪ್ಪನ್ನು ಬೇರೆಯವರಲ್ಲಿ, ಹೊರಗಡೆ ಹುಡುಕದೇ ತಮ್ಮಲ್ಲೇ ನೋಡಿಕೊಳ್ಳುವ ಆವಶ್ಯಕತೆ ಜರೂರಾಗಿತ್ತು.
ಇಂತಹ ಆತ್ಮಾವಲೋಕನದ ಪ್ರಕ್ರಿಯೆಯಲ್ಲಿ ಬದುಕನ್ನು ನೋಡುವ ಅವರ ದೃಷ್ಟಿಯೂ ಬದಲಾಗುತ್ತಾ ಬಂತು. ದೊಡ್ಡ ದೊಡ್ಡ ನಾಟಕೀಯ ಘಟನೆಗಳು ನಿಜಜೀವನದಲ್ಲಿ ಅಪರೂಪ. ಅದರ ಸುತ್ತ ಕಥೆ ಹೆಣೆಯುವುದು ವಾಸ್ತವಕ್ಕೆ ವಿಮುಖವಾಗುವ ಪಲಾಯನದಂತೆ ಅವರಿಗೆ ಕಾಣಿಸತೊಡಗಿತು. ವಾಸ್ತವ ಬದುಕಿನಲ್ಲಿ ಅಂತಹ ದೊಡ್ಡ ದೊಡ್ಡ ಘಟನೆಗಳು ನಡೆಯುತ್ತಿರುವುದಿಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೆ ನಗಣ್ಯ ಅಂತ ತಳ್ಳಿಹಾಕಿಬಿಡಬಹುದಾದ ಸಣ್ಣಪುಟ್ಟ ಘಟನೆಗಳೇ ನಡೆಯುತ್ತಿರುತ್ತವೆ. ಅವೇ ನಮ್ಮ ಬದುಕಿನ ಭಾಗಗಳಾಗಿರುತ್ತವೆ ಮತ್ತು ನಮ್ಮ ಬದುಕನ್ನು ರೂಪಿಸುತ್ತಿರುತ್ತವೆ. ಅವುಗಳ ನಡುವೆಯೇ ನಾವು ಬೆಳೆಯುತ್ತಿರುತ್ತೇವೆ. ನಮ್ಮ ವಿವೇಚನೆಯೂ ರೂಪುಗೊಳ್ಳುತ್ತಿರುತ್ತದೆ. ಹಾಗಿದ್ದಾಗ ಅಂತಹ ಸಣ್ಣಪುಟ್ಟ ಘಟನೆಗಳನ್ನೇ ಬಳಸಿಕೊಂಡು ಚಿತ್ರಕತೆಯನ್ನು ಏಕೆ ಕಟ್ಟಬಾರದು ಅನ್ನುವ ಪ್ರಶ್ನೆ ಅವರನ್ನು ಕಾಡತೊಡಗಿತು. ನಾಟಕೀಯವಾಗಿ ತೋರಬಹುದಾದ ಪ್ರಮುಖ ಘಟನೆಗಳನ್ನು ಬಿಟ್ಟು ಇಂತಹ ಅಮುಖ್ಯ ಘಟನೆಗಳು, ದಿನನಿತ್ಯದ ಬದುಕಿನ ತೀರಾ ಸಾಮಾನ್ಯವಾದ ಘಟನೆಗಳು ಅವರ ಚಿತ್ರದ ವಸ್ತುಗಳಾದವು. ‘‘ನಾನು ಪ್ರತಿದಿನದ ಆಗುಹೋಗುಗಳಿಂದ ಸಣ್ಣ ಸಣ್ಣ ವಿಷಯಗಳನ್ನು ಹೆಕ್ಕಿಕೊಂಡು, ಅವುಗಳಿಗೆ ಒಂದು ರೂಪಕೊಟ್ಟು, ಅವುಗಳ ಮೂಲಕ ಒಂದು ಪರಿಕಲ್ಪನೆಯನ್ನು ಬೆಳೆಸಲು ಪ್ರಯತ್ನಿಸಿದೆ.’’


 ಕ್ರಮೇಣ ಅವರ ಗಮನ ನಗರ ಜೀವನದ ಕಡೆಗೆ ತಿರುಗಿತ್ತು. ಎಲ್ಲಾ ಒತ್ತಡ, ಹತಾಶೆಗಳ ನಡುವೆಯೂ ಜನರಲ್ಲಿ ವ್ಯಕ್ತವಾಗುತ್ತಿದ್ದ ಬದುಕುಳಿಯುವ ಹಂಬಲ (ಇನ್‌ಸ್ಟಿಂಗ್ಟ್) ಅವರ ಆಸಕ್ತಿಯನ್ನು ಕೆರಳಿಸಿತು. ಅದರಲ್ಲೂ ಇಂತಹ ಇನ್‌ಸ್ಟಿಂಗ್ಟ್ ಅನ್ನು ಅವರು ಮಧ್ಯಮವರ್ಗದಲ್ಲಿ ಪ್ರಧಾನವಾಗಿ ಕಂಡರು. ‘ಏಕ್‌ದಿನ್ ಪ್ರತಿದಿನ್’ ಸಿನೆಮಾದ ವಸ್ತುವೇ ಇದಾಯಿತು. ಅದರಲ್ಲಿ ಒಂದು ಕುಟುಂಬದ ಇಡೀ ಜವಾಬ್ದಾರಿಯನ್ನು ಮನೆಯ ಹಿರಿಮಗಳು ನೋಡಿಕೊಳ್ಳುತ್ತಿರುತ್ತಾಳೆ. ಇಡೀ ಕುಟುಂಬ ಅವಳ ದುಡಿಮೆಯನ್ನು ಆಧರಿಸಿರುತ್ತದೆ. ಒಂದು ದಿನ ಕೆಲಸಕ್ಕೆ ಹೋದವಳು ಮತ್ತೆ ಬರುವುದಿಲ್ಲ. ಮನೆಯವರು ಕಾಯುತ್ತಾ ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುತ್ತಾ ರಾತ್ರಿ ಕಳೆಯುತ್ತಾರೆ. ಎಲ್ಲರೂ ನೈತಿಕವಾಗಿ ಅದಕ್ಕೆ ಜವಾಬ್ದಾರರು. ಆದರೆ ಸಿನೆಮಾ ಹತಾಶೆಯಲ್ಲಿ ಮುಗಿಯುವುದಿಲ್ಲ. ಅಮ್ಮ ಮರುದಿನ ಒಲೆ ಹಚ್ಚುತ್ತಾಳೆ, ಮತ್ತೆ ಜೀವನ ಪ್ರಾರಂಭವಾಗುತ್ತದೆ. ಹತಾಶೆಯ ಆಂತರ್ಯದಲ್ಲೇ ನಮ್ಮಲ್ಲಿ ಮುಂದೆ ಸಾಗುವುದಕ್ಕೆ, ಬದುಕನ್ನು ಮುಂದುವರಿಸುವುದಕ್ಕೆ ಬೇಕಾದ ಶಕ್ತಿಯೂ ಇರುತ್ತದೆ. ಈ ಶಕ್ತಿಯಿಂದಾಗಿಯೇ ನಮಗೆ ಎಂತಹ ಬಿಕ್ಕಟ್ಟಿನ ನಡುವೆಯೂ ಬದುಕನ್ನು ಸಾಗಿಸುವುದಕ್ಕೆ ಸಾಧ್ಯವಾಗುವುದು.
ಹೀಗೆ ಒಳಗಿನೆಡೆಗಿನ ಪಯಣ ಮುಖ್ಯವಾದಂತೆಲ್ಲಾ ಅವರು ಶತ್ರುಗಳನ್ನು ಹೊರಗೆ ಹುಡುಕುವುದನ್ನು ಬಿಟ್ಟು, ತಮ್ಮಳಗೇ ಹುಡುಕಲು ಪ್ರಯತ್ನಿಸಿದರು. ‘‘ನಮ್ಮನ್ನು ಸಂತರು ಅಂದುಕೊಂಡುಬಿಡುತ್ತೇವೆೆ. ನಮ್ಮ ಸುತ್ತ ಇರುವವರು ಕೂಡ ನಮ್ಮನ್ನು ಸಂತರನ್ನಾಗಿಸುತ್ತಿರುತ್ತಾರೆ. ಆ ಬಗ್ಗೆ ನಾವು ಎಚ್ಚರದಿಂದಿರಬೇಕು. ಸದಾ ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕು.’’ ಏಕ್ ದಿನ್ ಅಚಾನಕ್ ಸಿನೆಮಾ. ಒಂದರ್ಥದಲ್ಲಿ ಅವರ ಆತ್ಮಚರಿತ್ರೆ. ಸಿನೆಮಾದಲ್ಲಿ ಹೀರೋ ಒಂದು ಗಂಟೆಯೊಳಗೆ ಬರುತ್ತೇನೆ ಎಂದು ಹೇಳಿಹೋದವನು ಬರುವುದಿಲ್ಲ. ಅವನು ಕಣ್ಮರೆಯಾಗಿ ಒಂದು ವರ್ಷವಾಗಿರುತ್ತದೆ. ಸಿನೆಮಾ ಅಂತ್ಯವಾಗುತ್ತದೆ. ಆ ಒಂದು ವರ್ಷದ ಅವಧಿಯಲ್ಲಿ ಮಕ್ಕಳು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಆ ಪ್ರಕ್ರಿಯೆಯಲ್ಲಿ ನರಳುತ್ತಾರೆ. ಆ ನರಳುವಿಕೆಯಲ್ಲೇ ಬೆಳೆಯುತ್ತಾರೆ. ಅಪ್ಪನಿಜವಾಗಿ ಏನು ಅನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ. ಆ ಪ್ರಕ್ರಿಯೆಯಲ್ಲಿ ಮೃಣಾಲ್ ಸೇನ್ ತಮ್ಮತನವನ್ನೂ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರೆ.
ಅವರ ‘ಖರೀಜ್’ ಸಿನೆಮಾ ಇನ್ನೊಂದು ಬಗೆಯಲ್ಲಿ ಇದೇ ಕೆಲಸ ಮಾಡುತ್ತದೆ. ಅದರಲ್ಲಿ ಮನೆಕೆಲಸದ ಹುಡುಗ ಸಾಯುತ್ತಾನೆ. ಬಡಹುಡುಗನ ತಂದೆಯನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಯುತ್ತದೆ. ಮಗನ ಸಾವಿನಿಂದ ಘಾಸಿಗೊಂಡ ಅಪ್ಪಶವಸಂಸ್ಕಾರ ಮಾಡಿ ಮಾಲಕನ ಮನೆಗೆ ಬರುತ್ತಾನೆ. ನೀವು ಘರ್ಷಣೆಯ ಹೊಸ್ತಿಲಲ್ಲಿ ಇರುತ್ತೀರಿ. ಆದರೆ ಘರ್ಷಣೆ ಆಗುವುದಿಲ್ಲ. ವಾಸ್ತವ ಜೀವನದಲ್ಲೂ ಆಗುವುದಿಲ್ಲ. ಬಹುಶಃ ಕ್ರಾಂತಿಕಾರಿ ಅಂತ್ಯ ಅಂದರೆ, ಅವನು ಮನೆ ಒಡೆಯನ ಕೆನ್ನೆಗೆ ಹೊಡೆಯಬೇಕಿತ್ತು. ಅಥವಾ ಆ ಥರದ್ದು ಏನೋ ಮಾಡಬೇಕಿತ್ತು. ಆದರೆ ಅಂತಹ ಯಾವುದೇ ಘಟನೆಯೂ ಜರಗುವುದಿಲ್ಲ. ನಮಸ್ಕರಿಸಿ ಬರುತ್ತಾನೆ. ಅವನು ಹೊಡೆಯದೇ ಬಿಟ್ಟ ಏಟು ನಮ್ಮನ್ನು, ನಿಮ್ಮನು, ಮನೆಯ ಒಡೆಯನನ್ನು ಬಡಿಯುತ್ತದೆ.
ಹೀಗೆ ಸೇನ್ ಸಿನೆಮಾದಿಂದ ಸಿನೆಮಾಕ್ಕೆ, ದಿನದಿಂದ ದಿನಕ್ಕೆ ಬದಲಾಗುತ್ತಾ, ಬೆಳೆಯುತ್ತಾ ಸಾಗಿದರು. ಪ್ರತಿ ಸಿನೆಮಾ ಆದ ಮೇಲೂ ಇದೊಂದು ರಿಹರ್ಸಲ್ ಅಗಿದ್ದರೆ ಚೆನ್ನಾಗಿತ್ತು. ಎಷ್ಟೊಂದು ತಪ್ಪುಗಳಿವೆ ಸರಿಪಡಿಸಿಕೊಳ್ಳಬಹುದಿತ್ತು, ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನಿಸುತ್ತಿಂತೆ. ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಾ ನಮ್ಮಂತಹವರನ್ನು ಸದಾ ಪ್ರಶ್ನಿಸಿಕೊಳ್ಳುವುದಕ್ಕೆ ತಮ್ಮ ನಡೆಗಳ ಮೂಲಕ ಒತ್ತಾಯಿಸುತ್ತಾ ಹೋದರು. ಈ ಕಾರಣಕ್ಕೆ ಮೃಣಾಲ್ ಸೇನ್ ಅಂತಹವರು ನಮಗೆ ತುಂಬಾ ಮುಖ್ಯರಾಗುತ್ತಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top