---

ನಮ್ಮ ಕಾಲದ ನಿಜಶರಣ ನೆಟ್ಟಾರು ರಾಮಚಂದ್ರಭಟ್ಟರು

ಭಾಗ-5

ಧರ್ಮವಿಲ್ಲದವರು:
‘‘ನಿಮ್ಮ ಹಿಂದೂ ಧರ್ಮದಲ್ಲಿ ಮಹತ್ವದ ಗ್ರಂಥ ಯಾವುದು?
‘‘ಉಪನಿಷತ್ತುಗಳು ಗುರುಗಳೇ. ಅದಿರಲಿ ‘ನಿಮ್ಮ ಹಿಂದೂ ಧರ್ಮ’ ಎನ್ನುತ್ತೀರಲ್ಲ ನನ್ನೊಡನೆ. ನಿಮ್ಮದು ಹಿಂದೂ ಧರ್ಮ ಅಲ್ಲವೆ?’’
‘‘ಅಲ್ಲ. ನಮ್ಮದು ಹಿಂದೂ, ಮುಸಲ್ಮಾನ್, ಕ್ರಿಶ್ಚಿಯನ್-ಇನ್ನೇನೆಲ್ಲ ಧರ್ಮಗಳಿವೆ ಎಂದು ಪಟ್ಟಿ ಮಾಡುತ್ತೀರೋ ನಾವು ಅದು ಯಾವ ಧರ್ಮದವರೂ ಅಲ್ಲ; ಅಲ್ಲದೆ ನಮ್ಮ ಧರ್ಮ ಯಾವುದು ಎಂದು ನೀವು ಕೇಳದಿರುವುದೇ ಒಳ್ಳೆಯದು.’’
‘‘ಅದೇಕೆ ಕೇಳಬಾರದು? ನಿಮ್ಮದು ಮಾನವ ಧರ್ಮ ಎಂದುಕೊಳ್ಳಬಹುದೇ?’’
‘‘ಮಾನವಧರ್ಮ ಎಂದುಕೊಳ್ಳಬಹುದು. ಆದರೆ ನಾವು ಮಾನವರಲ್ಲ’’ ಎಂದರು ಗುರುಗಳು.
‘‘ಮೈ ಗಾಡ್! ನೀವು ಮಾನವರಲ್ಲವೆ? ನೀವೇನು ಹೇಳುತ್ತಿರುವುದು? ಏನಿದರ ಅರ್ಥ?’’
‘‘ಯಾಕೆ ಗಾಬರಿ ಬೀಳುತ್ತೀರಿ ಮಹರಾಯ? ಯಾಕೆ ಮೈ ಗಾಡ್? ನಾವು ಮಾನವರಲ್ಲ ಎಂದಾಗ ಆ ಮಾತು ಅರ್ಥವೇ ಇಲ್ಲದ ಮಾತಾಗಿ ಕೇಳುತ್ತದೆ ಅಲ್ಲವೆ? ಅರ್ಥಶೂನ್ಯವಾದ ಮಾತನ್ನು ಕೇಳುವುದೇ ನಿಮಗೆ ಅಪಮಾನವಾದಂತೆ ಅಲ್ಲವೆ? ಅದಿರಲಿ. ಮನುಷ್ಯರೇ ಮನುಷ್ಯರನ್ನು ಕೊಲ್ಲುತ್ತಿರುವ ಸನ್ನಿವೇಶದಲ್ಲಿ, ಶೋಷಿಸುತ್ತಿರುವ ಸನ್ನಿವೇಶದಲ್ಲಿ ನಾವು ಮಾನವರಲ್ಲ ಎಂದು ಹೇಳುವುದೇ ನಿಮಗೆ ಏಕಿಷ್ಟು ಗಾಬರಿಗೆ ಕಾರಣವಾಗಬೇಕು?’’
‘‘ಹಾಗಲ್ಲ ಗುರುಗಳೇ ಲೋಕದಲ್ಲಿ ಭೀಕರ ಹಿಂಸೆ ಇದೆ ನಿಜ. ಇದು ಮನುಷ್ಯಕೃತ ಎನ್ನುವುದೂ ನಿಜ. ಆ ದೋಷಗಳನ್ನು ಬೆಟ್ಟು ಮಾಡಿ ತೋರಿಸಿ, ಅವುಗಳನ್ನು ಕಳೆದುಕೊಂಡು ನಿಜವಾದ ಮನುಷ್ಯರಾಗಬೇಕು ಎಂದರೆ ಸರಿ. ಹಾಗಲ್ಲದೆ ನಾವು ಮಾನವರಲ್ಲ ಎಂದುಬಿಟ್ಟರೆ ಹೇಗೆ? ಹೇಗೆ ಅರ್ಥಮಾಡಿಕೊಳ್ಳುವುದು?’’
‘‘ಹೌದೇನು? ನಿಜವಾದ ಮನುಷ್ಯನಾದವನು ತಾನು ಮನುಷ್ಯ ಎಂದು ಹೇಳುತ್ತಾನೆ ಎಂದು ಅಥವಾ ಹಾಗೆ ಹೇಳಬೇಕೆಂದು ಭಾವಿಸಿದ್ದೀರಲ್ಲ ನೀವು?’’
‘‘ಹೌದು. ಸಂದೇಹವೇ ಇಲ್ಲ.’’
ನಿಮಗೇನೂ ಸಂದೇಹವಿಲ್ಲ. ಅದಿರಲಿ, ಮೊನ್ನೆ ಮೊನ್ನೆ ನಮ್ಮೆಡನೆ ಮಾತುಕತೆಗೆ ಬಂದವರೊಬ್ಬರು ಇದೇ ವಿಷಯದಲ್ಲಿ ವಿಜ್ಞಾನದ ಮಾತೇನೋ ಹೇಳಿದರಲ್ಲ. ನೀವೂ ಇದ್ದೀರಲ್ಲ. ಅವರು ಮಾತನಾಡುತ್ತ, ಮನುಷ್ಯ ಯಾವುದೋ ಏಕಕೋಶ ಜೀವಿ - ಅದು ಯಾವುದೋ ಬ್ಯಾಕ್ಟೀರಿಯಾದಿಂದ ಕ್ರಮೇಣ ವಿಕಾಸಗೊಂಡವನು ಅಂತ ವಿಜ್ಞಾನ ಹೇಳುತ್ತೆ ಅಂತ. ಅದರರ್ಥ ಏನಾಗುತ್ತೆ ಹೇಳಿ?’’
‘‘ನೀವು ವಿಜ್ಞಾನವನ್ನು ಒಪ್ಪುತ್ತೀರಾ ಗುರುಗಳೆ? ನಿಮಗೆ ವಿಜ್ಞಾನದ ಮಾತೇಕೆ?’’
‘‘ಅರೆ, ಯಾಕೆ ಒಪ್ಪಬಾರದು? ನಮ್ಮ ಅನುಭವಕ್ಕೆ ಸರಿ ಬರೋದು ಈ ಲೋಕದಲ್ಲಿ ಯಾವುದು ಅಂತ ನಾವು ಹುಡುಕುತ್ತಲೇ ಇದ್ದೇವೆ. ಅದಿರಲಿ, ವಿಜ್ಞಾನದ ಆ ಮಾತನ್ನು ಒಪ್ಪಿದರೆ ಅದರರ್ಥ ಏನಾಗುತ್ತೆ? ಹೇಳಿ.’’
‘‘ಅದರರ್ಥ ನಾವು ಮನುಷ್ಯರಲ್ಲ ಎಂದಾಗುತ್ತದೆಯೆ?’’
‘‘ಹಾಗಲ್ಲ. ನಾವು ಈಗಿನಂತೆ ಹಿಂದೆ ಇರಲಿಲ್ಲ. ಕ್ರಮೇಣ ಮನುಷ್ಯರಾದದ್ದು ಎಂದಾಗುತ್ತದೆ.’’
‘‘ಹೌದು. ಆದರೆ ಅದರರ್ಥ ನಾವು ಮನುಷ್ಯರಲ್ಲವೆಂದಲ್ಲವಲ್ಲ.’’
‘‘ಅಯ್ಯ...ಮಹರಾಯ, ಆ ನಮ್ಮ ಒಂದು ಮಾತು ನಿನ್ನನ್ನು ಇಷ್ಟು ಅಪ್‌ಸೆಟ್ ಮಾಡಬಹುದು ಎಂದು ನಾವು ತಿಳಿದಿರಲಿಲ್ಲ. ಸ್ವಲ್ಪಓಪನ್ ಆಗಿ ನೋಡು. ವಿಜ್ಞಾನದ ಆ ಮಾತಿನ ಧ್ವನಿ ನಮಗೆ ಈಗಿರುವಂತೆ ಈ ಮನುಷ್ಯ ದೇಹ ಎನ್ನುವ ವ್ಯವಸ್ಥೆಯನ್ನು ಪ್ರಕೃತಿ ಒದಗಿಸಿದ್ದು ಎಂದಾಗುತ್ತದೆ. ಬೇರೆಯಲ್ಲ ಎಂದಾಗ ಪ್ರಕೃತಿಯಲ್ಲಿರುವ ಎಲ್ಲ ಜೀವಜಾತಗಳ ಜೊತೆ ನಮಗೊಂದು ಸಂಬಂಧವಿದೆ ಎಂದಾಗುತ್ತದೆ. ಈ ಸಂಬಂಧವನ್ನು ಮರೆತು ನಾವು ಮನುಷ್ಯರು, ನಾವು ಬೇರೆ- ಎಲ್ಲರಿಂದ, ಎಂದು ತಿಳಿದುಕೊಂಡರೆ ಆ ತಿಳಿವಳಿಕೆಯೇ ಸರಿಯಲ್ಲ ಎಂದಾಗುತ್ತದೆಯಲ್ಲವೆ?’’
ಬಸವಣ್ಣನವರು ಕೂಡ ಚೌಕಟ್ಟುಗಳುಳ್ಳ ಧರ್ಮವನ್ನು ಮೀರುತ್ತ ಹೋಗುತ್ತಾರೆ. ಷಟ್‌ಸ್ಥಲಗಳು ಮಾನಸಿಕ ಔನತ್ಯದ ಘಟ್ಟಗಳನ್ನು ಸೂಚಿಸುತ್ತವೆ. ಆರು ಸ್ಥಳಗಳು ಬಸವಧರ್ಮದ ಭಾಗಗಳಾಗಿವೆ. ಆದರೆ ಬಸವಣ್ಣನವರು ಅವುಗಳನ್ನು ಮೀರಿದ ಸಪ್ತಸ್ಥಲದ ಕುರಿತು ಮಾತನಾಡುತ್ತಾರೆ. ಎಲ್ಲ ಧರ್ಮಗಳು ತಮ್ಮ ಚೌಕಟ್ಟನ್ನು ಮೀರುವುದರ ಅನಿವಾರ್ಯತೆಯನ್ನು ನಾವಿಲ್ಲಿ ಕಾಣಬಹುದು:
‘‘ಮೆಲ್ಲಮೆಲ್ಲನೆ ಭಕ್ತನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಮಾಹೇಶ್ವರನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಪ್ರಸಾದಿ ಎನಿಸಿಕೊಂಬೆ,
ಮೆಲ್ಲಮೆಲ್ಲನೆ ಪ್ರಾಣಲಿಂಗಿ ಎನಿಸಿಕೊಂಬೆ,
ಮೆಲ್ಲಮೆಲ್ಲನೆ ಶರಣನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಐಕ್ಯನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಷಟ್‌ಸ್ಥಲವ ಮೀರಿ
ನಿರವಯಸ್ಥಲವನೈದುವೆನಯ್ಯ
ಕೂಡಲಸಂಗಮದೇವಾ.

ಹೀಗೆ ಬಸವಣ್ಣನವರು ವ್ಯಕ್ತಿತ್ವ ವಿಕಸನದ ಮಾರ್ಗ ಸೂಚಿಸುತ್ತ ಕೊನೆಗೆ ಆ ವ್ಯಕ್ತಿತ್ವ, ನಿರಾಕಾರವಾದ ಬಯಲಿನಲ್ಲಿ ಒಂದಾಗುವಾಗ ಎಲ್ಲವನ್ನೂ ಮೀರಿದ್ದಾಗಿರುತ್ತದೆ. ಈ ತೆರನಾಗಿ ನೆಟ್ಟಾರು ರಾಮಚಂದ್ರಭಟ್ಟರು ಧರ್ಮವಿಲ್ಲದವರಾಗಿದ್ದಾರೆ.
‘‘ನಾವು ಮಾನವರಲ್ಲ’’ ಎಂದು ಅವರು ಹೇಳುತ್ತಾರೆ.ಅದರರ್ಥ ‘‘ನಾವು ಭವಿಗಳಲ್ಲ’’ ಎಂಬುದಾಗಿದೆ. ಭವಿತ್ವವನ್ನು ಮೀರಿದವನೇ ಭಕ್ತ, ಅವನು ವ್ಯಕ್ತಿತ್ವ ವಿಕಸನಗೊಳ್ಳುತ್ತ ಶರಣನಾಗುತ್ತಾನೆ. ಆ ಶರಣನೇ ನವಮಾನವ. ಹೀಗೆ ಭಟ್ಟರು ಶರಣರು ಅಂದರೆ ನವಮಾನವರು. ‘‘ಅರಿದಡೆ ಶರಣ, ಮರೆದಡೆ ಮಾನವ’’ ಒಬ್ಬನೇ ದೇವರು, ಒಂದೇ ಜಗತ್ತು, ಒಂದೇ ಮಾನವಕುಲ. ಮಾನವ ಕುಲದಲ್ಲಿ ಎಲ್ಲ ಮಾನವರು ಎಲ್ಲ ದೃಷ್ಟಿಯಿಂದಲೂ ಸಮಾನರು. ಸಕಲಜೀವಿಗಳ ಒಳಿತಿಗಾಗಿ ಶ್ರಮಿಸುತ್ತ ಅವುಗಳ ಉಳಿವಿಗಾಗಿ ಭೂಮಿ, ನೀರು ಮತ್ತು ಒಟ್ಟಾರೆ ಪರಿಸರವನ್ನು ಸಂರಕ್ಷಿಸುವ ಅರಿವನ್ನು ಪಡೆದು ಆಚರಣೆಯಲ್ಲಿ ತರುವಾತನೇ ಶರಣ. ಈ ಜವಾಬ್ದಾರಿಯನ್ನು ಅರಿತು ನವಮಾನವನಾದಾಗ ಮಾತ್ರ ಆತ ಶರಣನೆನಿಸಿಕೊಳ್ಳುತ್ತಾನೆ. ಈ ಮಣಿಹವನ್ನು ಮರೆತರೆ ಮಾನವನಾಗುತ್ತಾನೆ. ಈ ಮಣಿಹವನ್ನು ಅರಿತು ಅದನ್ನು ಪೂರೈಸುವ ನಿಟ್ಟಿನಲ್ಲಿ ಬದುಕಿದ ರಾಮಚಂದ್ರಭಟ್ಟರು, ತಾವು ಮಾನವರಲ್ಲ ಎಂದು ಹೇಳುವುದು ಸಹಜವಾಗಿದೆ.
ಐಹಿಕ ಆಸೆಗಳಲ್ಲೇ ತಲ್ಲೀನರಾಗಿ ಕೊಲೆ, ಸುಲಿಗೆ, ಧ್ವಂಸ ಮಾಡುವವರಿಗೆ ಮಾನವರೆಂದರೆ ಭಟ್ಟರಂಥವರು ಅದು ಹೇಗೆ ಮಾನವರಾಗುತ್ತಾರೆ? ಭಟ್ಟರು ನಿಜಶರಣರು. ಅವರು ಕಂಡುಕೊಂಡ ಮೌಲ್ಯಗಳ ಜಾಗತೀಕರಣವಾದಾಗ ಮಾತ್ರ ಈ ಪೃಥ್ವಿ ಬದುಕಲು ಹೆಚ್ಚು ಯೋಗ್ಯವಾಗುತ್ತದೆ.
ನೆಟ್ಟಾರು ರಾಮಚಂದ್ರಭಟ್ಟರು ಜಾಗತೀಕರಣದ ಇನ್ನೊಂದು ರೂಪವಾಗಿದ್ದಾರೆ.ಅವರದು ಮಾನವೀಯ ಮೌಲ್ಯಗಳ ಜಾಗತೀಕರಣ. ಆದರೆ ಸಾಮ್ರಾಜ್ಯಶಾಹಿಗಳ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಜಾಗತೀಕರಣ ಮಾನವರನ್ನು ಬಂಡವಾಳದ ಗುಲಾಮನನ್ನಾಗಿಸುವಲ್ಲಿ ತಲ್ಲೀನವಾಗಿದೆ.ಮಾರುಕಟ್ಟೆ ಮೌಲ್ಯಗಳೇ ಮಾನವರ ಮೌಲ್ಯಗಳು ಎಂಬುದು ಅದರ ಅಂಬೋಣವಾಗಿದೆ.ಜಾಗತೀಕರಣವಾದಿಗಳು ಬಂಡವಾಳಕ್ಕೆ ಮಾತನಾಡಲು ಹಚ್ಚಿ ಅದರ ತುಳಿತಕ್ಕೊಳಗಾದ ಮಾನವರನ್ನು ಮೂಕರನ್ನಾಗಿಸುತ್ತಿದ್ದಾರೆ. ಬಂಡವಾಳ ಮನುಷ್ಯತ್ವವನ್ನು ಕಬಳಿಸುತ್ತಲೇ ಬೆಳೆಯುವಂಥದ್ದು. ಅದು ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಮನುಷ್ಯನ ಮಧುರ ಭಾವನೆಗಳನ್ನೂ ಸುಲಿಗೆ ಮಾಡುತ್ತದೆ. ಬಂಡವಾಳಶಾಹಿ, ಸಾಮ್ರಾಜ್ಯಶಾಹಿ, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಒಟ್ಟಾರೆ ಸುಲಿಗೆಕೋರರ ಪರವಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಬೆಳೆದಂತೆಲ್ಲ ನದಿಗಳು ಚರಂಡಿಗಳಾಗುತ್ತಿವೆ, ಅರಣ್ಯಗಳು ಬೋಳಾಗುತ್ತಿವೆ, ಭೂಮಿ ವಿಷವಾಗುತ್ತಿದೆ, ವಾಯು ಮಾಲಿನ್ಯವಾಗುತ್ತಿದೆ. ವಿವಿಧ ಧರ್ಮಗಳಲ್ಲಿನ ಧರ್ಮಾಂಧರು ಕ್ರೂರಿಗಳಾಗಿ ಉಗ್ರರನ್ನು ಸೃಷ್ಟಿಸುತ್ತ ಜನಾಂಗಹತ್ಯೆಗಳಲ್ಲಿ ತಲ್ಲೀನರಾಗಿದ್ದಾರೆ.
‘‘ಬೆಳೆಯ ಭೂಮಿಯಲ್ಲೊಂದು ಪ್ರಳಯದ ಕಸ ಹುಟ್ಟಿಳಿಯಲೀಯದು, ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ,
ಸುಳಿದೆಗೆದು ಬೆಳೆವೆನು ಕೂಡಲಸಂಗಮ ದೇವಾ.’’
ಎಂಬ ಬಸವಣ್ಣನವರ ವಚನ ಇಂದು ಮಾನವ ಕುಲದ ಆರ್ತನಾದವಾಗಿ ಕೇಳಿಸುತ್ತಿದೆ.ಸರ್ವೋದಯದ ಭೂಮಿಯಲ್ಲಿ ‘ಸುಲಿಗೆವಾದ’ ಎಂಬ ಕಸ ಹುಟ್ಟಿದೆ. ಅದು ವಿವಿಧ ರೂಪಗಳನ್ನು ತಾಳುತ್ತ ಜಾಗತೀಕರಣದ ರೂಪದಲ್ಲಿಂದು ಕಾಣಿಸಿ ಕೊಂಡಿದೆ. ಇಂಥ ಕಳೆ ಕೀಳಲು ಶರಣಸಂಕುಲದ ಆವಶ್ಯಕತೆ ಇದೆ. ಅಂಥ ಶರಣರ ರೂಪವಾಗಿ ನೆಟ್ಟಾರು ರಾಮಚಂದ್ರಭಟ್ಟರಂಥವರು, ಬೆಳ್ಳಾರೆ ಇಸ್ಮಾಯೀಲ್ ಕುಂಞಪ್ಪರಂಥವರು ಬದುಕಿ ದಾರಿತೋರಿಸಿ ಹೋಗಿದ್ದಾರೆ. ಇದು ನನ್ನದು, ಇದು ನನ್ನದು ಎನ್ನುತ್ತ ನಾವು ಇನ್ನೂ ಇಲ್ಲೇ ಕುಳಿತಿದ್ದೇವೆ! ಪ್ರಳಯದ ಕಸವನ್ನು ಹೆಕ್ಕುವ ಗೊಡವೆ ನಮಗೇಕೆ ಎನ್ನುವಂಥ ಮನಸ್ಥಿತಿ ನಮ್ಮದಾಗಿದೆ.

***

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top