---

ಇಂದು ವಿವೇಕಾನಂದರ ಜನ್ಮದಿನ

ಪರಿವರ್ತನವಾದಿ ಚಳವಳಿಯ ಅಗ್ರದೂತ ವಿವೇಕಾನಂದ

ಭಾಗ-1

ಕರ್ಮಕ್ಕೆ ತಕ್ಕ ಫಲವೆಂದು ಗೋರಕ್ಷಣೆಯ ಪ್ರಚಾರಕನೊಬ್ಬನು ಹೇಳಿದ ಮಾತಿನಿಂದ ಒಮ್ಮೆ ಸ್ವಾಮಿ ವಿವೇಕಾನಂದರು ಕೆಂಡಾಮಂಡಲವಾದರು. ‘‘ಹಸಿದವರಿಗೆ ಅನ್ನ ನೀಡದೇ ಗೋವುಗಳಿಗೆ ಧಾನ್ಯದ ರಾಶಿಯನ್ನೇ ಸುರಿಯುತ್ತೀರಿ. ನನಗೆ ಅಂಥವರ ಬಗ್ಗೆ ಕಿಂಚಿತ್ತೂ ಸಹಾನುಭೂತಿಯಿಲ್ಲ... ಗೋವುಗಳೂ ಸಹ ಅವುಗಳ ಕರ್ಮದಿಂದಲೇ ಕಸಾಯಿಖಾನೆ ಸೇರಿ ಸಾಯುತ್ತವೆ ಎನ್ನಬಹುದಲ್ಲ!’’- ಈ ಸಂವಾದವು 1897ರಲ್ಲಿ ಕಲ್ಕತ್ತೆಯ ಶ್ರೀ ಪ್ರಿಯನಾಥರ ಮನೆಯಲ್ಲಿ ಜರುಗಿತು.

ಅದು ಸಂಧಿಪ್ರಕಾಶದ ಕಾಲವಾಗಿತ್ತು. 19ನೇ ಶತಮಾನ ಮುಗಿದು, 20ನೇ ಶತಮಾನ ಆರಂಭವಾಗಲಿತ್ತು. 19ನೇ ಶತಮಾನದ ಉತ್ತರಾರ್ಧದಲ್ಲಿ ಜಗತ್ತು ತೀರ ಅಸ್ತವ್ಯಸ್ತಗೊಂಡಿತ್ತು. ಪ್ರಪಂಚದ ಅತೀ ದೊಡ್ಡ ಭೂಪ್ರದೇಶದಲ್ಲಿ ಧೂರ್ತ ಕಾರಸ್ತಾನೀ ರಾಷ್ಟ್ರಗಳ ವಸಾಹತು ಸ್ಥಿರಗೊಂಡಿತ್ತು. ವಿರೋಧಾಭಾಸ ಎಂಬಂತೆ (ಆ ಹಿಂದಿನ ಶತಕದಲ್ಲಿ, ಫ್ರಾನ್ಸ್ ರಾಜ್ಯ ಕ್ರಾಂತಿ ನೀಡಿದ) ‘ಸ್ವಾತಂತ್ರ ಸಮತೆ ಮತ್ತು ಬಂಧುತ್ವ’- ಇಂದು ವ್ಯಾವಹಾರಿಕ ಪಾತಳಿಯಲ್ಲಲ್ಲ, ಮಾನಸಿಕ ಪಾತಳಿಯಲ್ಲಿ ತೀರ ದೊಡ್ಡ ಪ್ರಮಾಣದಲ್ಲಿ ಸ್ವೀಕರಿಸಲಾಗಿತ್ತು. ಕಾರ್ಲ್ ಮಾರ್ಕ್ಸ್ ಹೇಳಿದ ಸಾಮ್ಯವಾದ, ತತ್ವಜ್ಞಾನದ ಮೋಡಿಗೊಳಗಾದ ಕೆಲವು ತರುಣರು ಮತ್ತು ಕಾರ್ಮಿಕ ಸಂಘಟನೆಗಳು ಜಗತ್ತಿನ ತುಂಬೆಲ್ಲ ಕಾರ್ಯಪ್ರವೃತ್ತವಾಗಿದ್ದವು. ಅದಕ್ಕಿಂತ ಮಹತ್ವದ್ದೆಂದರೆ, ವಿಜ್ಞಾನವು ಪ್ರಪಂಚದ ಎಲ್ಲೆಡೆ ಕಾಲೂರಿತ್ತು. ವಿಜ್ಞಾನದ ಜೊತೆಗೆ ತಂತ್ರಜ್ಞಾನವೂ ಬಂದಿತ್ತು. ಉತ್ಪಾದನೆ, ವ್ಯವಸ್ಥಾಪನೆ, ವಿತರಣೆ, ಸಾರಿಗೆ, ಸಂಪರ್ಕದ ಎಲ್ಲ ಹಳೆಯ ಮಾದರಿಗಳು ಮೂಲೆ ಗುಂಪಾಗಿದ್ದವು. ಹೀಗಾಗಿ ಹಲವು ಕಡೆಗಳಲ್ಲಿ ಹಳೆಯ ಅರ್ಥವ್ಯವಸ್ಥೆ ಮತ್ತು ಹಳೆಯ ಸಮಾಜರಚನೆ ಕುಸಿಯಲಾರಂಭಿಸಿತ್ತು.
 ವಿಜ್ಞಾನದಿಂದಾಗಿ ಅದಕ್ಕಿಂತಲೂ ಮಹತ್ವದ ಘಟನೆ ಜರುಗಿತ್ತು. 19ನೇ ಶತಮಾನದ ಪೂರ್ವಾರ್ಧದಲ್ಲಿ ‘ಧರ್ಮ’ವು ಹುಸಿಯೋ ದಿಟವೋ, ಅಂತೂ ಆಧಾರವಾಗಿತ್ತು. ಧರ್ಮಗ್ರಂಥದ ವಿರುದ್ಧ ಸೊಲ್ಲೆತ್ತಿದ ಶ್ರೇಷ್ಠ ವಿಜ್ಞಾನಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು. ಧರ್ಮದಲ್ಲಿಯ ಅಧಾರ್ಮಿಕ ವಿಷಯದ ಬಗೆಗೆ ಮಾತಾಡುವವರ ಗುರುತೂ ಹಿಂದೆ ಉಳಿಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಆದರೆ 19ನೇ ಶತಮಾನದ ಉತ್ತರಾರ್ಧದಲ್ಲಿ ಮಾನವನ ಚರಿತ್ರೆಯಲ್ಲಿ ಮೊದಲ ಬಾರಿಗೆ ಅನಿರೀಕ್ಷಿತವಾದುದು ಘಟಿಸಿತ್ತು. ಸರ್ವರಕ್ಷಕ ಮತ್ತು ಸರ್ವಭಕ್ಷಕ ವಿಜ್ಞಾನದ ‘ಅಶ್ವಮೇಧ’ವು ಜಗತ್ತಿನ ತುಂಬೆಲ್ಲ ಧಿಮಾಕಿನಿಂದ ಓಡಾಡುತ್ತಿತ್ತು. ವಿಜ್ಞಾನವು ಕೇಳಿದ ಪ್ರಯೋಗಸಿದ್ಧ ಪ್ರಶ್ನೆಯಿಂದಾಗಿ ಧರ್ಮವು ಹುಸಿಯೆನಿಸಲಾರಂಭಿಸಿತ್ತು. ಧರ್ಮವು ಮಾನವ ಜೀವನದ ಶಾಶ್ವತ ಆಧಾರ ಎಂದುಕೊಂಡ ಧಾರ್ಮಿಕ ಗುರುಗಳೆಲ್ಲ ಗಲಿಬಿಲಿಗೊಂಡಿದ್ದರು, ಬೆದರಿದ್ದರು.
ಭಾರತದಲ್ಲಂತೂ ಮತ್ತಷ್ಟು ಗೋಜಲು ಪರಿಸ್ಥಿತಿ ನಿರ್ಮಾಣಗೊಂಡಿತ್ತು. ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎಂದುಕೊಳ್ಳುವ ಆಂಗ್ಲರು ಭಾರತವನ್ನು ಆಳುತ್ತಿದ್ದರು. ವಿಶಾಲವಾದ ಏಕಸಂಘ ಭೂಭಾಗವು ಕೇಂದ್ರಸತ್ತೆಯ ಅಧೀನದಲ್ಲಿರುವ ಸಂಗತಿಯು ಈ ದೇಶದ ಜ್ಞಾನ ಇತಿಹಾಸದಲ್ಲಿಯ ಮೊದಲ ಕಾಲಘಟ್ಟವಾಗಿತ್ತು. ಕಾನೂನು, ಆಡಳಿತ ಭಾಷೆ, ಚಲಾವಣೆ, ಎಲ್ಲವೂ ಒಂದೇ ಆಗಿತ್ತು. ಧರ್ಮದ ಹೆಸರಿನಲ್ಲಿ ನಡೆಯುವ ಸತಿಸಹಗಮನದಂತಹ ಕ್ರೂರ ಪದ್ಧತಿಯು ಕಾನೂನಿನಿಂದ ತಡೆಗಟ್ಟಲಾಗಿತ್ತು. ಬಾಲ್ಯ ವಿವಾಹಕ್ಕೆ ತಡೆಯೊಡ್ಡಲಾಗಿತ್ತು. ಜನಜಾಗೃತಿಯ ಚಳವಳಿ ಶುರುವಾಗಿತ್ತು. ಮಹತ್ವದ ಸಂಗತಿ ಎಂದರೆ, ಈ ಆಡಳಿತದಿಂದಾಗಿ ಮೊದಲ ಬಾರಿಗೆ ಈ ದೇಶಕ್ಕೆ ನಿಜವಾದ ಅರ್ಥದಲ್ಲಿ ಉಳಿದ ಪ್ರದೇಶದ ಪರಿಚಯವಾಗಿತ್ತು. ವಿಜ್ಞಾನದ ಬಗೆಗೆ ಅರಿವು ಮೂಡುತ್ತಲಿತ್ತು.
ಆದರೆ ಈ ಲಾಭದ ಸಂಗತಿಯು ನಗಣ್ಯವೆನಿಸುವಂತಹ ಭೀಕರ ಘಟನೆಯು ಈ ಕಾಲಾವಧಿಯಲ್ಲಿ ಜರುಗಿತು. ಈ ಆಡಳಿತ ಹಿರಿಮೆ, ಋಣವನ್ನು ಸ್ವೀಕರಿಸುತ್ತಿರುವಾಗಲೇ ಕಾರ್ಲ್‌ಮಾರ್ಕ್ಸ್ ತನ್ನ ‘ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್’ನಲ್ಲಿ 25 ಜೂನ್ 1853 ರಲ್ಲಿ ಪ್ರಕಟಗೊಂಡ ಲೇಖನದಲ್ಲಿ ಹೇಳಿದ್ದೇನೆಂದರೆ, ‘‘ಈ ವರೆಗೆ ಹಿಂದೂಸ್ಥಾನವು ಹಲವು ಆಕ್ರಮಣಗಳನ್ನು ಅರಗಿಸಿಕೊಂಡಿತ್ತು. ಆದರೆ ಬ್ರಿಟಿಷರ ಆಡಳಿತವು ಈ ದೇಶಕ್ಕೆ ನೀಡಿದ ಯಾತನೆ ಮತ್ತು ದುಃಖವನ್ನು ನಾವು ಊಹಿಸುವುದೂ ಸಾಧ್ಯವಿಲ್ಲ. ಅದರಿಂದ ಹಿಂದೂಸ್ಥಾನದ ಆರ್ಥಿಕ ವ್ಯವಸ್ಥೆಯ ಮತ್ತು ಸಮಾಜ ರಚನೆಯ ಬೆನ್ನೆಲುಬೇ ಮುರಿದು ಹೋಗಿದೆ.’’
 ಆದರೆ ಮಾರ್ಕ್ಸ್ ಹೇಳಿದ್ದು, ಈ ದೇಶದಲ್ಲಿಯ ಪ್ರಶ್ನೆಗಳ ಒಂದು ಮಗ್ಗಲು. ಅಸಂಖ್ಯಾತ ಜನರು ಹಸಿವೆಯಿಂದ ಸಾಯುತ್ತಲಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಅರೆಹೊಟ್ಟೆಯಲ್ಲಿದ್ದರು. ಅರೆ ಬತ್ತಲೆಯಾಗಿದ್ದರು. ಸ್ವಂತಕ್ಕೆ ಸುರಕ್ಷಿತವಾಗಿದ್ದೇವೆ ಎಂದು ಭಾವಿಸುವ ಸಮಾಜದ ಕಿರು ವರ್ಗವು ಸಮಾಜವನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿತ್ತು. ಮಾನಸಿಕವಾಗಿ ಹಿಂಸೆ ನೀಡುತ್ತಿತ್ತು. ಈ ಜನರು ಕ್ರಿಮಿಕೀಟದಂತೆ ಸಾಯಲು ಅವರ ಹಿಂದಿನ ಜನ್ಮದ ಪಾಪಕರ್ಮವೇ ಕಾರಣವೆಂದು ಹೇಳಲಾಗುತ್ತಿತ್ತು. ಬರಗಾಲಕ್ಕೂ ಇದೇ ಕಾರಣವನ್ನು ನೀಡಲಾಗುತ್ತಿತ್ತು. ಕರ್ಮಕ್ಕೆ ತಕ್ಕ ಫಲವೆಂದು ಗೋರಕ್ಷಣೆಯ ಪ್ರಚಾರಕನೊಬ್ಬನು ಹೇಳಿದ ಮಾತಿನಿಂದ ಒಮ್ಮೆ ಸ್ವಾಮಿ ವಿವೇಕಾನಂದರು ಕೆಂಡಾಮಂಡಲವಾದರು. ‘‘ಹಸಿದವರಿಗೆ ಅನ್ನ ನೀಡದೆ ಗೋವುಗಳಿಗೆ ಧಾನ್ಯದ ರಾಶಿಯನ್ನೇ ಸುರಿಯುತ್ತೀರಿ. ನನಗೆ ಅಂಥವರ ಬಗ್ಗೆ ಕಿಂಚಿತ್ತೂ ಸಹಾನುಭೂತಿಯಿಲ್ಲ... ಗೋವುಗಳೂ ಸಹ ಅವುಗಳ ಕರ್ಮದಿಂದಲೇ ಕಸಾಯಿಖಾನೆ ಸೇರಿ ಸಾಯುತ್ತವೆ ಎನ್ನಬಹುದಲ್ಲ!’’- ಈ ಸಂವಾದವು 1897ರಲ್ಲಿ ಕಲ್ಕತ್ತೆಯ ಶ್ರೀ ಪ್ರಿಯನಾಥರ ಮನೆಯಲ್ಲಿ ಜರುಗಿತು. ಇದನ್ನು ರಾಮಕೃಷ್ಣ ಮಠದವರು ‘ಸ್ವಾಮಿ ವಿವೇಕಾನಂದ ಗ್ರಂಥಾವಲಿ’ಯ 10ನೇ ಸಂಪುಟದಲ್ಲಿ ಪ್ರಕಟಿಸಿದ್ದಾರೆ.
ಈ ಸಂಧಿಪ್ರಕಾಶದಲ್ಲಿ ವಿವೇಕಾನಂದರು ಒಂಟಿ ಸಲಗದಂತೆ ಓಡಾಡುತ್ತಿದ್ದರು. ಜಗತ್ತಿನ ಪ್ರಶ್ನೆಗಳೂ ಬೇರೆ-ಬೇರೆ, ಆದರೆ ಉತ್ತರವೂ ಬೇರೆ-ಬೇರೆ ಎನ್ನುವುದನ್ನು ಅವರು ಅರಿತಿದ್ದರು. ಜಗತ್ತು ಅವರನ್ನು ಧಾರ್ಮಿಕ ಗುರುವೆಂದು ಗುರುತಿಸುತ್ತಿತ್ತು. ಧರ್ಮವೂ ಮನುಷ್ಯನ ಬದುಕಿಗೆ ಆಧಾರವಾಗಿ ಅಗತ್ಯವಾಗಿದೆ ಎಂದು ಹೇಳುತ್ತಲೇ, ಇಂದಿನ ಸಮಸ್ಯೆಗಳಿಗೆ ಧರ್ಮವೇ ಕಾರಣವೆಂದು ಹೇಳಿ ಧಾರ್ಮಿಕ ಪ್ರೇಮಿಗಳಿಗೆ ಆಘಾತ ನೀಡುತ್ತಿದ್ದರು. ವೈಶ್ಚಿಕ ಪ್ರಶ್ನೆಗಳನ್ನು ಅವರು ಹೊಸ ರೀತಿಯಲ್ಲಿ ಮಂಡಿಸಿ, ಹೊಸ ಬಗೆಯ ಉತ್ತರವನ್ನು ನೀಡುತ್ತಿದ್ದರು. ಚಾತುರ್ವರ್ಣ್ಯದ ಅವರ ಕಲ್ಪನೆಯು ತೀರ ಭಿನ್ನವಾಗಿತ್ತು. ಈ ಸಾಮ್ಯವಾದಕ್ಕೆ ಅವರು ಶೂದ್ರರ ರಾಜ್ಯವೆಂದು ಕರೆಯುತ್ತಿದ್ದರು. ಈ ವರೆಗೆ ಜಗತ್ತಿನಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಆಡಳಿತ ನಡೆಯಿತು. ಆದರೆ ಈಗ ಈ ಶೂದ್ರರ ಆಡಳಿತ ಅದಕ್ಕಿಂತ ಉತ್ತಮವಾಗಿದೆ ಎಂದೆನ್ನುತ್ತಿದ್ದರು. 1897ರಲ್ಲಿ ಅವರು ಅನುಯಾಯಿಗಳಿಗೆ ಹೀಗೆ ಹೇಳಿದರು.
‘‘...ನನಗೆ ಜಗತ್ತಿನಲ್ಲಿ ಭವಿಷ್ಯದಲ್ಲಿ ಏನು ನಡೆಯಲಿದೆ ಎನ್ನುವುದು ಗೊತ್ತಾಗುತ್ತದೆ. ಶೂದ್ರರ ಬಂಡಾಯ ಮೊದಲಿಗೆ ರಶಿಯಾದಲ್ಲಿ, ಬಳಿಕ ಚೀನಾದಲ್ಲಾಗುತ್ತದೆ.’’ ಈ ಸಂಧಿಕಾಲದಲ್ಲಿ ಮುಂಬರುವ ಸಾಮ್ಯವಾದ ಅವರಿಗೆ ಗೋಚರಿಸುತ್ತಿತ್ತು. ಅವರದನ್ನು ಸಮರ್ಥಿಸುತ್ತಿದ್ದರು. ಅಲ್ಲಿಯ ಕೊರತೆ ಕಂಡು ಕಸಿವಿಸಿ ಪಡುತ್ತಿದ್ದರು. ‘‘ಸಮಾಜವಾದ, ಸಾಮ್ಯವಾದವು ಪರಿಪೂರ್ಣ ಆಡಳಿತ ಪದ್ಧತಿಯಾಗಿದೆ ಎಂದಾಗ ನಾನು ಸಮಾಜವಾದಿ ಎಂದು ಭಾವಿಸಬೇಕಿಲ್ಲ. ಆದರೆ ಕಲ್ಲಿಗಿಂತ ಇಟ್ಟಿಗೆ ಮೃದು ಎಂಬ ನಿಟ್ಟಿನಲ್ಲಿ ನಾನು ಸಮಾಜವಾದಿಯಾಗಿದ್ದೇನೆ. ಆದರೆ ಇದರಲ್ಲಿರುವ ದೋಷದಿಂದಾಗಿ ಇದು ಬಹಳ ಕಾಲ ಮುಂದುವರಿಯಲಾರದು’’ ಎನ್ನುತ್ತಿದ್ದರು. ರಶ್ಯನ್ ಆಡಳಿತ ಆರಂಭವಾಗುವ 25 ವರ್ಷ ಮೊದಲು ಮತ್ತು ಆ ಆಡಳಿತ ಕೊನೆಗೊಳ್ಳುವ ಸುಮಾರು ನೂರು ವರ್ಷ ಮೊದಲೇ ಊಹಿಸಿದ್ದರು. ಸಾಮ್ಯವಾದಿಯ ಅವನತಿಯ ಬಗೆಗೆ ಫೆಬ್ರವರಿ 1879ರಲ್ಲಿ ಮದ್ರಾಸಿನ ‘ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ‘‘... ಎಲ್ಲ ಸಾಮ್ಯವಾದಿ ಸಿದ್ಧಾಂತಗಳಿಗೆ ಆಧ್ಯಾತ್ಮ್ಮಿಕ ಆವಶ್ಯಕತೆಯಿದೆ. ಆ ಆಧ್ಯಾತ್ಮಿಕ ಕೇವಲ ವೇದಾಂತವೇ ಆಗಿದೆ...’’
*****
ಜಗತ್ತಿನ ತುಂಬಾ ಕಸಿವಿಸಿಗೊಂಡು ಅಲೆದಾಡುತ್ತಿರುವಾಗ ನಾಳೆಯ ಜಗತ್ತಿನ ನ್ಯಾಯ, ಚಿರಸ್ಥಾಯಿ, ಸಮಾನತೆಯನ್ನು ಆಧರಿಸಿದ ರಚನೆಯು ಅವರ ಮನದಲ್ಲಿ ಶಾಶ್ವ್ವತವಾಗಿ ನೆಲೆಸಿತ್ತು. ಆದರೆ ಸಮೃದ್ಧ, ಸನಾತನ, ಸುಸಂಸ್ಕೃತ ದೇಶದ ಇಂದಿನ ಸ್ಥತಿಯನ್ನು ಕಂಡು ಅವರು ಮತ್ತಷ್ಟು ಕಸಿವಿಸಿ ಪಡುತ್ತಿದ್ದರು, ಇದಕ್ಕೆ ಆಂಗ್ಲರೇ ಹೊಣೆಯೆಂಬುದನ್ನು ನಿರಾಕರಿಸಿರಲಿಲ್ಲ. 30 ಅಕ್ಟೋಬರ್ 1899ರಂದು ರಿಜಲೇ ಮೆನಾರ್‌ದಿಂದ ತನ್ನ ಗೆಳೆಯನಿಗೆ ಬರೆದ ಪತ್ರ ಹೀಗಿತ್ತು. ‘‘1857-58ರಲ್ಲಿ ಆಂಗ್ಲರು ಇಲ್ಲಿಯ ಜನರನ್ನು ತೀರ ದೊಡ್ಡ ಪ್ರಮಾಣದಲ್ಲಿ ಕಗ್ಗೊಲೆ ಮಾಡಿದರು. ಆಂಗ್ಲರ ಆಡಳಿತದ ಪರಿಣಾಮದಿಂದಾಗಿ ಈ ದೇಶದಲ್ಲಿ ಭೀಕರ ಬರಗಾಲ ಬಿದ್ದು, ಲಕ್ಷಾಂತರ ಜನರು ಅಸುನೀಗಿದರು. ಇಲ್ಲಿಯ ಸಂಸ್ಥಾನಿಕರ ರಾಜ್ಯದಲ್ಲೆಂದೂ ಬರಗಾಲ ಬಿದ್ದಿಲ್ಲ ಎಂಬುದನ್ನು ಗಮನಿಸಿ.’’
ಪರಧರ್ಮದವರ ಆಕ್ರಮಣ, ಪರಕೀಯರ ಆಡಳಿತ, ಬಡತನ, ದಾರಿದ್ರ, ಹಸಿವು ಇದೆಲ್ಲ ಬದಲಾಗಬೇಕಾದರೆ ಸಂಪೂರ್ಣ ಕ್ರಾಂತಿಯ ಅಗತ್ಯವಿದೆ ಎಂದವರು ಹೇಳಿದ್ದರು. ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ, ಜಾತೀಯತೆ- ಈ ಎಲ್ಲ ಸಮೀಕರಣ ಒಂದರೊಳಗೊಂದು ಸಿಕ್ಕಿಗೊಂಡಿವೆ. ಒಂದನ್ನೇ ಬಗೆಹರಿಸಲು ಮುಂದಾದರೆ ಸಿಕ್ಕು ಮತ್ತಷ್ಟು ಜಟಿಲವಾಗುವುದು. ಒಂದೇ ಸಲಕ್ಕೆ ಇದನ್ನೆಲ್ಲ ಅರಿಯಬೇಕಾಗುತ್ತದೆ. ಇದೇ ಅವರ, ಆ ಕಾಲಕ್ಕಿಂತ ತೀರ ಮುಂದೆಯಿರುವ ಅರಿವಾಗಿತ್ತು. ಸಂಪೂರ್ಣ ಪರಿವರ್ತನೆ ಮಾಡಬೇಕಿದ್ದಲ್ಲಿ, ಇದನ್ನೆಲ್ಲವನ್ನು ನಿಷ್ಕಲ್ಮಷವಾಗಿ ಮಂಡಿಸಬೇಕು. ನಾವಿಂದು ಬೆರಗಾಗುವ ರೀತಿಯಲ್ಲಿ ಅವರದನ್ನು ಮಂಡಿಸಿದರು. ಇದು ವ್ಯವಹಾರದಲ್ಲಿ ಬರಲೆಂದೇ ಹೊಸ ಮಠದ ಅಭಿನವ ಪ್ರಯೋಗವನ್ನು ಮಾಡಿದರು.
ವಿಜ್ಞಾನ ಮತ್ತು ವೈಜ್ಞಾನಿಕ ಮಂಡನೆಯನ್ನು ಒಪ್ಪುವ ಸ್ವಾಮಿ ವಿವೇಕಾನಂದರು ನಾಲ್ಕು ಧಾರ್ಮಿಕ ಸಂಗತಿಗಳನ್ನು ಹೇಳಿದರು. ಧರ್ಮದ ಸನಾತನ ಮಹತ್ವವನ್ನು ಹೇಳಿದರು. ಅಶಾಶ್ವತ ಮನುಷ್ಯ ಜೀವನಕ್ಕೆ ಧರ್ಮವು ಶಾಶ್ವತವಾದ ಆಧಾರ ನೀಡುತ್ತದೆ. ಹೀಗಾಗಿ ಧರ್ಮ ಮತ್ತು ವಿಜ್ಞಾನದ ಸಹಕಾರ್ಯವಷ್ಟೆ ಅಲ್ಲ, ಸಮನ್ವಯ ಬೇಕೆಂದರು. ಧರ್ಮವನ್ನು ಅಧಾರ್ಮಿಕವಾದ ರೀತಿಯಲ್ಲಿ ಮಂಡಿಸಿದ್ದರಿಂದಲೇ ಇಂದಿನ ಬಹುತೇಕ ಪಶ್ನೆಗಳು ನಿರ್ಮಾಣಗೊಂಡಿವೆ ಎಂದರು. ಈ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಸರ್ವಧರ್ಮ ಸಮಭಾವ ಅಗತ್ಯವೆಂಬುದನ್ನು ವೈಜ್ಞಾನಿಕ ಭಾಷೆಯಲ್ಲಿ ಹೇಳಿದರು.
ಆದರೆ ದೇಶದ ಅವನತಿಯನ್ನು ಕಂಡು ಅವರು ತೀರ ಕಸಿವಿಸಿಗೊಂಡಿದ್ದರು. ಸರ್ವಧರ್ಮ ಸಮಭಾವವಂತೂ ಬೇಕೇ ಬೇಕು, ಅದಕ್ಕಿಂತಲೂ ಬಹುಜನರ ಧರ್ಮವನ್ನು ಬಹುಜನರಿಗೆ ನೀಡುವ ಅಗತ್ಯವಿದೆ. ಉಚ್ಚವರ್ಣವು ಬಹುಜನರ ಸಮಾಜವನ್ನು ನಾನಾ ರೀತಿಯಲ್ಲಿ ಶೋಷಣೆ ಮಾಡುತ್ತಲೇ ಬಂದಿದೆ. ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. (ಈ ಪ್ರಾಯಶ್ಚಿತ್ತಕ್ಕಾಗಿ ಮೀಸಲಾತಿ ಅಗತ್ಯವಿದೆ ಎಂದು ವಿವೇಕಾನಂದರು 110 ವರ್ಷಗಳ ಮೊದಲೇ ಹೇಳಿದ್ದರು. ವಿರೋಧಿಸುವವರು ಇದನ್ನು ಅರಿತುಕೊಳ್ಳಬೇಕು.)
***
 ಸ್ವಾಮೀಜಿಯವರು 1896ರಲ್ಲಿ ಕೊಲಂಬೋದಿಂದ ಅಲ್ಮೋರಾವರೆಗೆ ಪ್ರಯಾಣ ಕೈ ಕೊಂಡಿದ್ದರು. ಕುಂಭಕೋಣಂನಲ್ಲಿ ಹಿಂದೂ ವಿದ್ಯಾರ್ಥಿಗಳು ನೀಡಿದ ಸನ್ಮಾನ ಪತ್ರಕ್ಕೆ ಅವರು ಹೇಳಿದ ಮಾತು- ‘‘ಬ್ರಹ್ಮವೃಂದದವರೆ, ಆನುವಂಶದ ಸಹಾಯದಿಂದ ಬ್ರಾಹ್ಮಣರು ಚಾಂಡಾಲರಿಗಿಂತ ಹೆಚ್ಚು ಉತ್ತಮವಾಗಿ ಕಲಿಯುವುದು ಸಾಧ್ಯವಿದ್ದರೆ, ಬ್ರಾಹ್ಮಣರ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕಿಲ್ಲ. ಚಾಂಡಾಲರಿಗಾಗೇ ಖರ್ಚು ಮಾಡಿ. ದುರ್ಬಲರಿಗೆ ಮೊದಲು ಸಹಾಯ ಮಾಡಿ. ಅವರಿಗೇ ಸಹಾಯದ ಅಗತ್ಯವಿದೆ. ಬ್ರಾಹ್ಮಣನು ಜನ್ಮತಃ ಬುದ್ಧಿವಂತನಾಗಿದ್ದರೆ ಅವನು ಯಾರ ಸಹಾಯವಿಲ್ಲದೆಯೂ ಶಿಕ್ಷಣ ಪಡೆಯಬಲ್ಲ. ಜನ್ಮತಃ ಬುದ್ಧಿವಂತರಾಗಿರದವರಿಗೆ ಶಿಕ್ಷಣ ನೀಡಲು ಶಿಕ್ಷಕರನ್ನು ನೇಮಿಸಿ. ಇದು ನ್ಯಾಯಯುತವೂ, ಬುದ್ಧಿಗೆ ಒಪ್ಪಿಗೆಯಾಗುವಂತಹದ್ದು ಆಗಿದೆ. ಬಡದಲಿತರಿಗೆ ತಾವು ಯಾರು ಎನ್ನುವುದು ಅರಿವಾಗಲಿ.’’
ಅಲ್ಲಿಂದ ಮದ್ರಾಸಿಗೆ ಬಂದರು. ಅಲ್ಲಿಯ ಅಪಾರ ಜನಸಮುದಾಯದವರನ್ನು ಉದ್ದೇಶಿಸಿ ಹೇಳಿದರು- ‘‘ತಮ್ಮ ಸಾವಿನ ಸಿದ್ಧತೆಯನ್ನು ಮಾಡಿಕೊಳ್ಳವುದು ಉತ್ತಮ. ವಿಳಂಬವಾದರೆ ಅದು ಕೊಳೆತು ನಾರುತ್ತದೆ. ಆದ್ದರಿಂದ ಭಾರತದಲ್ಲಿಯ ಅನ್ಯಜಾತಿಯವರ ಉದ್ಧಾರ ಮಾಡುವುದು ಬ್ರಾಹ್ಮಣರ ಕರ್ತವ್ಯ. ಈ ಕರ್ತವ್ಯ ಮಾಡಿದರೆ ಬ್ರಾಹ್ಮಣತ್ವ ಪ್ರಾಪ್ತವಾಗುವುದು. ಹಣದ ಬೆನ್ನು ಹತ್ತಿದರೆ ಬ್ರಾಹ್ಮಣತ್ವ ಮುಗಿಯುವುದು. ಹಣಕ್ಕಾಗಿ ಕೆಲಸ ಕಾರ್ಯ ಮಾಡದವನಿಗೆ ‘ಬ್ರಾಹ್ಮಣ’ರೆನ್ನಬೇಕು. ಆ ಕೆಲಸ ಉಳಿದವರದ್ದು, ಬ್ರಾಹ್ಮಣರದ್ದಲ್ಲ. ಬ್ರಾಹ್ಮಣರು ತಮ್ಮ ಜ್ಞಾನವನ್ನು ಉಳಿದವರಿಗೆ ನೀಡಿ, ಅವರ ಉನ್ನತಿಗಾಗಿ ಶತಪ್ರಯತ್ನ ಮಾಡಿ. ನಿಜವಾದ ಬ್ರಾಹ್ಮಣತ್ವದ ಸ್ಮತಿಯನ್ನು ಜಾಗೃತವಾಗುಳಿಸುವುದೇ ಭಾರತದಲ್ಲಿಯ ಬ್ರಾಹ್ಮಣರ ಕರ್ತವ್ಯ..’’
‘ಆರ್ಯ ಮತ್ತು ತಮಿಳರು’ ಎಂಬ ಅವರ ಪ್ರಸಿದ್ಧ ನಿಬಂಧದಲ್ಲಿ ಅವರು ಆರ್ಯರ ಬಗೆಗಿನ ತಥಾಕಥಿತ ಸಿದ್ಧಾಂತದ, ಅದರಿಂದ ನಿರ್ಮಾಣಗೊಂಡ ಉಪ ಸಿದ್ಧಾಂತವನ್ನು ಕಿತ್ತೆಸೆದರು. ಬಳಿಕ ಶ್ರೇಷ್ಠ ತಮಿಳರ, ಅಂದರೆ ಆರ್ಯರ ಈ ಮಹಾನ್ ಪೂರ್ವಜರ ಭೂತಕಾಲದ ವೈಭವದ ಜ್ಞಾನದ ಮೂಲಕ ಯೋಗ್ಯವಾದ ಆತ್ಮಾಭಿಮಾನವನ್ನು ಹುಟ್ಟಿಸುವುದು ವಿಶೇಷವಾಗಿ ದಕ್ಷಿಣ ಜನರಿಗಾಗಿ ತೀರ ಅಗತ್ಯವಾದ ಕಾಯಕವಾಗಿದೆ ಎಂದವರು ಹೇಳಿದರು. ಮುಂದುವರಿದು ಅವರು ಹೀಗೆ ಹೇಳಿದರು: ‘‘ಬ್ರಾಹ್ಮಣತ್ವದ ದಾವೆ ಮಾಡುವವರು ನಿಜವಾದ ಆಧ್ಯಾತ್ಮಿಕತೆಯನ್ನು ಎತ್ತಿ ತೋರಿಸಲಿ ಮತ್ತು ಇತರ ಜನರ ಉನ್ನತಿ ಎತ್ತರಿಸಿ ತೋರಿಸಲಿ. ಆದರೆ ಹಲವು ಬ್ರಾಹ್ಮಣರು ತಮ್ಮ ವಂಶದ ಬಗೆಗೆ ವೃಥಾಭಿಮಾನವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ದೇಶಿ-ವಿದೇಶಿ ವ್ಯಕ್ತಿ ಬಂದು ಬ್ರಾಹ್ಮಣರ ದರ್ಪ ಮತ್ತು ಆಲಸ್ಯವನ್ನು ಸಮರ್ಥಿಸುತ್ತಾರೆ. ಅದರಿಂದ ಬಹುಸಂಖ್ಯಾತ ಬ್ರಾಹ್ಮಣರಿಗೆ ಸಮಾಧಾನವಾಗುತ್ತದೆ.
...ಬ್ರಾಹ್ಮಣರೆ ಎಚ್ಚರ! ಇದು ಸರ್ವನಾಶದ ಲಕ್ಷಣ, ಎದ್ದೇಳಿ, ತಮ್ಮ ಪುರುಷಾರ್ಥವನ್ನು ತೋರಿಸಿ. ಮಾಲಕನ ಭಾವನೆಯಿಂದಲ್ಲ. ಅಂದಶ್ರದ್ಧೆ ಅಥವಾ ದೇಶಿ-ವಿದೇಶಿ ವೈದ್ಯರ ಡಾಂಭಿಕತೆೆಯಿಂದ ತುಂಬಿದ ಕೊಳಕು ಅಹಂಕಾರದಿಂದಲ್ಲ, ಸೇವಕನೆಂಬ ಭಾವನೆಯಿಂದ ಕಾರ್ಯ ಮಾಡಲು ಸಿದ್ಧರಾಗಿ.
..ನಿಮ್ಮ ಈ ವರ್ತನೆಯಿಂದಾಗಿ ಬ್ರಾಹ್ಮಣೇತರ ಜನರು ಜಾತಿದ್ವೇಷದ ಬೆಂಕಿಯುಗುಳಲು ತಮ್ಮ ಶಕ್ತಿಯನ್ನು ಅಪವ್ಯಯ ಮಾಡುತ್ತಲಿದ್ದಾರೆ. ಜಾತಿ ಜಗಳ ಹೀಗೇ ಮುಂದುವರಿದರೆ ಪ್ರಗತಿಯತ್ತ ಅಡಿಯಿಡುವುದು ಸಾಧ್ಯವಿಲ್ಲ. ಲೋಕ ಕಲ್ಯಾಣದ ನಡಿಗೆ ಎಷ್ಟೋ ಶತಮಾನ ಹಿಂದಕ್ಕೆ ಹೋಗಬಹುದು. ಬೌದ್ಧರ ರಾಜನೈತಿಕ ಘೋರ ತಪ್ಪಿನ ಅದು ಪುನರಾವೃತ್ತಿಯಾಗಲಿದೆ.
ಕೃಪೆ: ನವಕರ್ನಾಟಕ ಪ್ರಕಾಶನ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top