ಸ್ಮರಣೆಯೊಂದೇ ಸಾಲದೇ? | Vartha Bharati- ವಾರ್ತಾ ಭಾರತಿ

---

ಸ್ಮರಣೆಯೊಂದೇ ಸಾಲದೇ?

ಸಮುದ್ರ ತೀರದಲ್ಲಿ ಜಲರಾಶಿಯನ್ನು ನೋಡುತ್ತ ನಿಂತವನಿಗೆ ಒಂದೊಂದು ತೆರೆಯೂ ಒಂದು ಅದ್ಭುತ; ರೋಮಾಂಚಕ. ಆದರೆ ಒಂದು ತೆರೆಯು ಬಂದು ಹೋಗಿ ಇನ್ನೊಂದು, ಅದಾದ ಮೇಲೆ ಮತ್ತೊಂದು ತೆರೆಯು ಅಪ್ಪಳಿಸಿದಾಗ ಯಾವುದು ನನ್ನ ನೆನಪಿನಲ್ಲಿದೆಯೆಂದು ಹೇಳುವುದು ಕಷ್ಟ. ಪ್ರತಿಯೊಂದು ತೆರೆಯೂ ಇನ್ನೊಂದು ತೆರೆಯನ್ನು ತೆರೆಯುತ್ತದೆ; ತೆರೆಯಾಗುತ್ತದೆ. ತೆರೆಮರೆಗೆ ಸರಿಯುತ್ತದೆ. ಪ್ರಕೃತಿ ಇಷ್ಟೊಂದು ವಿಸ್ಮಯಗಳನ್ನು ಪೋಷಿಸುತ್ತ ಅನಾದಿಯಿಂದ ಬಂದಿರುವಾಗ ಯಾವ ನೆನಪು ನನ್ನನ್ನು ಮುದಗೊಳಿಸಿದೆ, ಘಾಸಿಗೊಳಿಸಿದೆಯೆಂದು ಹೇಗೆ ಹೇಳಬಹುದು? ಒಳ್ಳೆಯ ಸಂಬಂಧಗಳಿಗೆ ಎರಡು ಮುಖ. ಇರುವಿಕೆ ಸಂಬಂಧಗಳನ್ನು ಗಟ್ಟಿಗೊಳಿಸಿದರೆ ಇಲ್ಲದಿರುವಿಕೆ ಸಂಬಂಧಗಳನ್ನು ಹರಿತಗೊಳಿಸುತ್ತದೆಯಂತೆ. ಈ ಎರಡೂ ಮುಖಗಳು ಹೃದಯಕ್ಕೆ ಸಂಬಂಧಿಸಿದವಾದರೂ ಮೊದಲನೆಯದು ದೃಢಗೊಳಿಸುವ ಕಾರ್ಯವೆಸಗಿದರೆ ಎರಡನೆಯದು ಅಗಲಿಕೆಯ ಅಲಗಿನಿಂದ ಕೆಲವೊಮ್ಮೆ ನೋವುಗೊಳಿಸುತ್ತದೆ; ಘಾಸಿಗೊಳಿಸುತ್ತದೆ. ಹೀಗಾಗಿ ಸ್ಮರಿಸುವುದು ಸುಲಭವಲ್ಲ. ಮರೆಯುವುದು ಎಷ್ಟು ಕಷ್ಟವೋ ಸ್ಮರಿಸುವುದೂ ಅಷ್ಟೇ ಕಷ್ಟ.

ನೆನಪುಗಳು ಹೃದಯಬಡಿತದ ಹಾಗೆ. ಅದರ ಸದ್ದು ಬದುಕಿನ ಸಂಕೇತ; ಒಳಗಿನಿಂದಲೇ ಸದಾ ಸಂಭಾಷಿಸುವ ಮಾಯಕದ ಯಂತ್ರ. ವೈದ್ಯರು ಸ್ಟೆತಾಸ್ಕೋಪಿನ ಮೂಲಕ ಹೃದಯ ಬಡಿತವನ್ನು ಆಲಿಸುತ್ತಾರೆ; ನಾಡಿ ಹಿಡಿದು ಹೃದಯ ಬಡಿತದ ಮಿಡಿತದ ಕಂಪನವನ್ನು ಅನುಭವಿಸುತ್ತಾರೆ. ಅಂತೂ ಜೀವಂತವಾಗಿರುವುದರ ಅಳತೆ ಈ ಬಡಿತ-ಮಿಡಿತಗಳಲ್ಲಿರುತ್ತದೆಯೆಂಬುದಂತೂ ಖಂಡಿತ. ಹೃದಯದ ಬಡಿತವನ್ನು ಮನುಷ್ಯನ ಬದುಕಿನ ಚಲನೆಯನ್ನು ಗ್ರಾಫುಗಳ ಮೂಲಕ ಚಿತ್ರಿಸುವುದು ಆಧುನಿಕ ವೈದ್ಯಕೀಯದ ಇನ್ನೊಂದು ಕರಾರುವಾಕ್ಕಾದ ಪದ್ಧತಿ. ಈ ಗ್ರಾಫ್ ಮೇಲೆ ಕೆಳಗೆ (ತಮಾಷೆಯಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ಹೇಳುವುದಾದರೆ ನಮ್ಮ ರೂಪಾಯಿ ಮೌಲ್ಯದ ಹಾಗೆ, ತೈಲ ಬೆಲೆಯ ಹಾಗೆ!) ಚಲಿಸುತ್ತದೆ. ಇದೇನಾದರೂ ತನ್ನ ಸ್ಥಿತ್ಯಂತರವನ್ನು ಕಳೆದುಕೊಂಡಿತೋ ಬದುಕು ಮುಗಿದಂತೆ. ಸ್ತಬ್ಧವಾದಂತೆ.

ಸ್ಮರಣೆಯು ಮೌನವಾಗಿದ್ದರೆ ಚಂದ. ಅದು ವಿಜೃಂಭಿಸುವುದಕ್ಕಲ್ಲ; ವೈಭವೀಕರಿಸುವುದಕ್ಕಲ್ಲ. ಕೆಲವು ಬಾರಿ ಕೆಲವೆಡೆ ಇಂತಹ ಸ್ಮರಣೆಗಳು ಸಾರ್ವಜನಿಕವಾಗಿ ಬಹಿರಂಗವಾಗಬೇಕಾಗುತ್ತದೆ. ಸುಂದರವಾದ ಹೂ ಅರಳಿದಾಗ ಇದು ಮುಂದೆ ಬಿದ್ದು ಹೋಗುತ್ತದೆ, ಒಣಗಿಹೋಗುತ್ತದೆಯೆಂಬ ಅರಿವಿರುವ ಕಲಾಕಾರ ಅದರ ಚಿತ್ರವನ್ನು ಮಾಡಬಹುದು; ಇಲ್ಲವೇ ಆಧುನಿಕತೆಯ ಮೂಲಕ ಫೋಟೋ ಹಿಡಿಯಬಹುದು. ಆದರೆ ಈ ರೀತಿಯ ಹೂವೊಂದು ಇತ್ತು ಅದು ಮುದ ನೀಡಿತು, ಮನಸ್ಸಿಗೆ ಆಹ್ಲಾದ ನೀಡಿತು, ಎಲ್ಲ ಸಂಕಟಗಳನ್ನು ಒಂದರೆಘಳಿಗೆಯಾದರೂ ಮರೆಮಾಚಿತು ಎಂದು ಇತರರಿಗೆ ತಿಳಿಸುವ ಬಯಕೆ ಸಮಾಜಜೀವಿಗಿರುತ್ತದೆ. ತಾನು ದೊಡ್ಡವನೆಂಬಂತೆ ಕೆಲವೊಮ್ಮೆ ತೋರುವ ಈ ಹಂಚುವಿಕೆಯು ತಾನು ಕಂಡ, ಅನುಭವಿಸಿದ ಸುಖದ ಪ್ರತೀಕವಾದ ವಸ್ತುವಿನ ಹಂಚುವಿಕೆಯೇ ಆಗಿರುತ್ತದೆ. ಒಬ್ಬನ ನೆನಪು, ಒಬ್ಬನ ಅನುಭವ ಲೋಕಾಂತಗೊಳ್ಳುತ್ತದೆ. ಎಲ್ಲ ರೀತಿಯ ಕಲೆಯೂ ಹೇಳಿಕೊಳ್ಳದಿದ್ದರೂ ಆಂತರ್ಯದಲ್ಲಿ ಇದೇ ಉದ್ದೇಶವನ್ನಿಟ್ಟುಕೊಳ್ಳುತ್ತದೆ. ಮನುಷ್ಯ-ಪ್ರಾಣಿಗಳ ನೆನಪೂ ಇದಕ್ಕಿಂತ ಭಿನ್ನವಲ್ಲ. ಆತ್ಮಚರಿತ್ರೆಯೆಂಬ ಒಂದು ಪ್ರಕಾರವಲ್ಲದೆ ಉಳಿದೆಲ್ಲ ರೀತಿಯ ಅಭಿವ್ಯಕ್ತಿಯೂ ತಾನು ಪರಿಧಿಯಲ್ಲಿದ್ದು ಕೇಂದ್ರವನ್ನು ನೋಡುವ ವಿದ್ಯಮಾನವಾಗಿರುತ್ತದೆ.

ಆತ್ಮಚರಿತ್ರೆಯಲ್ಲಿ ಮಾತ್ರ ತಾನು ಕೇಂದ್ರದಲ್ಲಿದ್ದು ಇತರರನ್ನು, ಇತ್ಯಾದಿಗಳನ್ನು ಪರಿಧಿಯಲ್ಲಿಟ್ಟು ನೋಡುವ ಸಂಪ್ರದಾಯವಿದೆ. ಇದು ಮನುಷ್ಯನ ಸಹಜ ಗುಣ-ದೋಷಗಳ ಲಕ್ಷಣವೆಂದು ತಿಳಿಯಬಹುದು. ಆಳವಾಗಿ, ಆಪ್ತವಾಗಿ ಗಮನಿಸಿದರೆ, ನಾವು ಪ್ರೀತಿಸಿದ ವಸ್ತು, ವ್ಯಕ್ತಿಗಳ ನೆನಪು ಒಂದು ಹಂತದ ವರೆಗೆ ಮಾತ್ರ ಶಾಶ್ವತ. ನನ್ನ ನೆನಪು ನಾನಿರುವ ವರೆಗೆ ಮಾತ್ರ. ಆನಂತರ ನಾನೂ ನೆನಪು ಮಾತ್ರ. ಹೀಗೆ ನೆನಪು ಅವ್ಯಕ್ತವಾಗಿ ಅಥವಾ ಪದವಾಗಿ ಶಾಶ್ವತವಾದರೆ ಕ್ರಿಯಾಪದವಾಗಿ ಉಳಿಯಬೇಕಾದರೆ ಅದಕ್ಕೊಂದು ಉಪಾಧಿ ಬೇಕು. ಉಪಾಧಿಯೆಂದರೆ ಮಾಧ್ಯಮವೆಂದರ್ಥ. ಬೆಂಕಿ ಉರಿಯಬೇಕಾದರೆ ಅದಕ್ಕೊಂದು (ಕಟ್ಟಿಗೆಯಂತಹ) ಮಾಧ್ಯಮ ಬೇಕು. ಏನೂ ಇಲ್ಲದೆ ಬೆಂಕಿ ಕಾಣಿಸಿಕೊಳ್ಳದು. ಹೀಗೆ ಮಾಧ್ಯಮದ ಮೂಲಕ ಅರಳುವ ಬೆಂಕಿಯಾಗಲಿ, ಬೆಳಕಾಗಲಿ, ಮಾಧ್ಯಮದ ಹೊರತಾಗಿ ಇದೆಯೆಂದರೆ ಇದೆ, ಇಲ್ಲವೆಂದರೆ ಇಲ್ಲವೆಂಬ ಒಂದು ಅನುಭವ. ಅನೇಕ ಬಾರಿ ನಮ್ಮ ಆಪ್ತರ ಚಿತ್ರ, ಬರಹ, ಸಂಗೀತ ಅಥವಾ ಇನ್ನಿತರ ಸೃಷ್ಟಿಯನ್ನು ಕಂಡು, ಕೇಳಿ ಭಾವನೆ ಮತ್ತು ವಿಚಾರಗಳನ್ನು ಅಲ್ಲಿಗೆ ಹಾಯಿಸುತ್ತೇವೆ. ಅದು ನಮ್ಮನ್ನು ಕಾಡತೊಡಗುತ್ತದೆ. ಆಗ ನಗುವೋ, ದುಃಖವೋ, ಸಮಾಧಾನವೋ ಪ್ರಕಟವಾಗುವ ಸಾಧ್ಯತೆಯಿದೆ. ಇದೊಂದು ಸಂಚಾರಿ ಭಾವ.

ಆದರೆ ಇದು ಸ್ಥಾಯೀಭಾವವಾದರೆ ಅಪಾಯ ಜಾಸ್ತಿ. ಇದರಿಂದಾಗಿ ಖಿನ್ನರಾಗುವ ಸಾಧ್ಯತೆಯೂ ಇರಬಹುದು; ಅಥವಾ ಕನಿಷ್ಠ ಮನುಷ್ಯನ ಸಹಜತೆಗೆ ಅಪವಾದವಾಗುವಂತಹ ಗುಣಲಕ್ಷಣಗಳು ಅಂತಹವರಲ್ಲಿ ಕಾಣಿಸಿಕೊಳ್ಳಬಹುದು. ಇದನ್ನು ಅಥವಾ ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಮನುಷ್ಯ ತನ್ನ ಆಸಕ್ತಿಗಳನ್ನು ವಿಕೇಂದ್ರೀಕರಿಸಿಕೊಳ್ಳಬೇಕಾಗುತ್ತದೆ. ನಾವು ಸಂಪಾದಿಸಿದ ಆಸ್ತಿ ಮತ್ತಿತರ ಸಂಪತ್ತನ್ನು ಬೆಳೆಸಬೇಕಾದರೆ, ಉಳಿಸಬೇಕಾದರೆ ಹೇಗೆ ಅದರ ಫಲವನ್ನು ಹಲವು ಕಡೆ ವಿನಿಯೋಗಿಸಬೇಕಾಗುತ್ತದೆಯೋ ಹಾಗೆಯೇ ಇಲ್ಲೂ ನಮ್ಮ ಗಮನವನ್ನು ಪ್ರಜ್ಞಾಪೂರ್ವಕವಾಗಿ ಹಲವೆಡೆ ಹರಿಯಗೊಡುವುದು ಅಗತ್ಯವಾಗುತ್ತದೆ. ಮನುಷ್ಯನಿಗೆ ಮರೆವಿನ ರೋಗ ಬರುವುದನ್ನು ಆಧುನಿಕ ಜಗತ್ತು ಅನುಭವಿಸುತ್ತಿದೆ. ಎಂದಿಗಿಂತ ಹೆಚ್ಚು ಮನೋರೋಗಿಗಳನ್ನು ನಾವು ಕಾಣುತ್ತೇವೆ ಮತ್ತು ಮನೋರೋಗವೆಂದು ಇನ್ನೂ ಸ್ಪಷ್ಟವಾಗಿ ಹೇಳಲಾಗದಿದ್ದರೂ ಮರೆವೂ ಒಂದು ಮಾರಕ ರೋಗವಾಗುತ್ತಿದೆ. (ಬುದ್ಧಿವಂತರ ಜಾಣ ಕಿವುಡು, ಜಾಣ ಕುರುಡು, ಜಾಣ ಮರೆವು ಇವನ್ನು ಸದ್ಯಕ್ಕೆ ಒಂದೆಡೆ ಕಟ್ಟಿಡೋಣ!) ಒಂದು ಸಮೀಕ್ಷೆಯ ಪ್ರಕಾರ ಮುಂದಿನ ಒಂದೆರಡು ದಶಕಗಳಲ್ಲಿ ಇಂತಹ ಮರೆಗುಳಿಗಳು ಒಟ್ಟಾರೆ ಜನಸಂಖ್ಯೆಯ ಸುಮಾರು ಇಪ್ಪತ್ತು ಶೇಕಡಾದಷ್ಟು ಆವರಿಸಬಹುದೆಂಬ ಭೀತಿಯಿದೆ. ಈ ಬಗ್ಗೆ ವೈದ್ಯಕೀಯ ಪ್ರಪಂಚ ಹೆಚ್ಚು ಗಮನ ಹರಿಸಬೇಕಾಗಿದೆ. (ಮರೆಗುಳಿ ವೈದ್ಯರೇ ಹೆಚ್ಚಾಗುತ್ತಿದ್ದಾರೆಂಬ ಆತಂಕವೂ ಇದೆ!)

ವೈದ್ಯಕೀಯದ, ವಿಜ್ಞಾನದ ಹೊರಗೆ ಬಂದು ಯೋಚಿಸಿದರೆ ಮರೆವು ಸ್ಮರಣೆಯ ಕಾರಣದಿಂದಲೇ ಇರಬಹುದೇನೋ ಅನ್ನಿಸುವಂತಿದೆ. ಒಂದೇ ವಿಚಾರವನ್ನು ನೆನಪಿನಂಗಳದಲ್ಲಿ ತುಳಸೀ ಗಿಡದಂತೆ ನೆಟ್ಟು ಪೋಷಿಸಿ, ಪೂಜಿಸಿ, ಆದರಿಸಿದರೆ ಉಳಿದೆಲ್ಲ ಮುಖ್ಯ-ಅಮುಖ್ಯ ಸಂಗತಿಗಳು ಮರೆಗೆ ಸರಿಯುವ ಸಾಧ್ಯತೆಯಿದೆ. ಒಬ್ಬರನ್ನೇ ಅತಿಯಾಗಿ ಪ್ರೀತಿಸಿದರೆ ಕೊನೆಗೆ ಅದೊಂದು ಭ್ರಮೆಯಾಗುವಂತೆ ಯಾವುದೇ ವಿಚಾರದಲ್ಲಿ ಪೂರ್ಣ ಮುಳುಗುವುದು ಮನಸ್ಸನ್ನು ಮಾತ್ರವಲ್ಲ ಮೆದುಳನ್ನು ಉಸಿರುಗಟ್ಟಿಸಬಹುದು. ಅನೇಕ ವೃತ್ತಿಪರರು (ಮಾತ್ರವಲ್ಲ ಉದ್ಯೋಗಿಗಳು ಕೂಡಾ!) ನಿವೃತ್ತಿಯಾದೊಡನೇ ಇತರ ಹವ್ಯಾಸಗಳಿಲ್ಲದೆ ಮೆತ್ತಗಾಗುವುದನ್ನು ಗಮನಿಸಬಹುದು. ಆರಂಭದಲ್ಲಿ ತಾವು ವಿಶ್ರಾಂತಿಯನ್ನು ಬಯಸುತ್ತೇವೆ ಮತ್ತು ತಮಗೆ ವಿರಾಮ ಸಿಕ್ಕಿದೆಯೆಂದು ಬಗೆಯುತ್ತ ನಿರಾಳವಾಗಿರುವ ಮನುಷ್ಯರು ಆನಂತರ ಏನು ಮಾಡಬೇಕೆಂದು ಗೊತ್ತಿಲ್ಲದೆ ಅಡ್ಡಾಡುವುದನ್ನು ತಮ್ಮಲ್ಲೇ ಮಾತನಾಡುವುದನ್ನು, ಗುರುತು ಪರಿಚಯವಿಲ್ಲದವರನ್ನು ಮಾತನಾಡಿಸುವುದನ್ನು, ಪರಿಚಿತರನ್ನು ಅಲಕ್ಷಿಸುವುದನ್ನು ಮುಂತಾದ ಅಸಹಜ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಬೇಕಾದ್ದನ್ನು ಮರೆಯುತ್ತ ಬೇಡವಾಗಿರುವುದನ್ನು ನೆನಪಿಸುತ್ತ ಅವನ್ನೇ ಪುನರುಚ್ಚರಿಸುವುದನ್ನು, ಮರುಕಳಿಸುವುದನ್ನು, ಮೆಲುಕಾಡುವುದನ್ನು ಕಾಣಬಹುದು.

ಬದುಕಿನಲ್ಲಿ ತಮ್ಮ ವೃತ್ತಿ ಮತ್ತು ಉದ್ಯೋಗಗಳಿಗೆ ಹೊರತಾದ ಹವ್ಯಾಸಗಳನ್ನು, ಆಸಕ್ತಿಗಳನ್ನು ಬೆಳೆಸಿಕೊಂಡವರಿಗೆ ಇಂತಹ ಪ್ರಮೇಯಗಳಿರುವುದಿಲ್ಲ. ಅವರು ತಮಗಿಂತ ಹಿರಿಯರನ್ನು ಗೌರವಿಸುವುದನ್ನು, ತಮ್ಮ ಸರೀಕರನ್ನು ಪ್ರೀತಿಸುವುದನ್ನು, ತಮಗಿಂತ ಕಿರಿಯರೊಂದಿಗೆ ಬೆರೆಯುವುದನ್ನು ಕಲಿಯುತ್ತಾರೆ ಮಾತ್ರವಲ್ಲ ಅವರೊಂದಿಗೆ ತಮ್ಮ ಅನುಭವ, ಸಂತೋಷ, ಸಂಕಟಗಳನ್ನು ಹಂಚಿಕೊಳ್ಳುತ್ತಾರೆ. ದಿನದ ಅಷ್ಟೂ ಘಳಿಗೆಗಳನ್ನು ಅರ್ಥಪೂರ್ಣವಾಗಿ ತುಂಬಿಕೊಳ್ಳುತ್ತಾರೆ.
ಕಿಕ್ಕಿರಿದ ಘಟನೆಗಳಿಂದ ತುಂಬಿದ ಬದುಕೇ ನಿಜವಾದ ಬದುಕೆಂದು ಎರಿಕ್ ಹಾಫರ್ ಹೇಳುತ್ತಾನೆ. ಇರಬಹುದು. ಏನನ್ನು ಮರೆತರೂ ಬಾಲ್ಯ ಮರೆತುಹೋಗುವುದಿಲ್ಲ. ಅದು ನಗೆಯನ್ನು ಮೊಳಗುತ್ತಿರುವ ಮಲ್ಲಿಗೆಯೇ ಇರಬಹುದು; ಒಲವನ್ನಪ್ಪಿತೋರುವ ಕೊಳದ ತಳಕೆಸರೂ ಇರಬಹುದು. ನೆನಪು ನೆನಪೇ.

ನೆನಪಿಗೆ ದೇಶ-ಕಾಲದ ಗಡಿಗಳಿಲ್ಲ; ಮಿತಿಗಳಿಲ್ಲ. ಆದರೆ ನಿಧಾನವಾಗಿ ನೆನಪುಗಳು ನೇತ್ಯಾತ್ಮಕತೆಯಿಂದ ಇತ್ಯಾತ್ಮಕತೆಗೆ ಹೊರಳುತ್ತವೆ. ನಮ್ಮ ಸದ್ಯ ಗತಿಸಿದ ಬಂಧುವಿನ ಕುರಿತು ನೋವಿನ ನೆನಪುಗಳಿರುತ್ತವೆ. ಅವರಿಗಿಂತ ನೂರು ಪಟ್ಟು ಪ್ರತಿಭಾಶಾಲಿ, ವಿದ್ವನ್ಮಣಿಯಾಗಿದ್ದ ಮತ್ತು ನಾವು ಸದಾ ಉಲ್ಲೇಖಿಸುವ ಮಹಾಪುರುಷರ, ಉದಾರ/ಉದಾತ್ತ ಚರಿತರ ನೆನಪಿನಲ್ಲಿ ಈ ನೋವಿರುವುದಿಲ್ಲ. ಶೇಕ್ಸ್‌ಪಿಯರ್-ಶೆಲ್ಲಿಯನ್ನೋ, ಕಾಳಿದಾಸ-ಕುಮಾರವ್ಯಾಸರನ್ನೋ ನೆನಪಿಸುವವರಿಗೆ ಆ ವ್ಯಕ್ತಿಗಳು ನೋವಿನ ಸಂಕೇತಗಳಾಗುವುದಿಲ್ಲ; ಅಭಿಮಾನದ ದ್ಯೋತಕವಾಗಿರುತ್ತಾರೆ. ನಾವು ಹೃದಯಸ್ಪರ್ಶಿಯೆನ್ನುವುದು ಅವರ ಬರಹಗಳನ್ನು; ಅವರನ್ನಲ್ಲ. ಅವರನ್ನು ನಾವು ಗೌರವಿಸುವುದು, ಮೆಚ್ಚುವುದು, ನೆನಪಿಸುವುದು ಅವರ ಕೃತಿಗಳಿಗೆ. ಆದ್ದರಿಂದ ಅವರು ಈ ನೆನಪಿನ ಅನುಭವಕ್ಕೆ ತುತ್ತಾಗುವುದಿಲ್ಲ. ಅವರು ಕಾಲದಲ್ಲಿ ಬಹುದೂರ ಸರಿದು ಹೋಗಿರುವುದರಿಂದ ಅವರನ್ನು ಏಕವಚನದಲ್ಲಿ ಉಲ್ಲೇಖಿಸುತ್ತೇವೆ. ಯಾರೂ ಕುಮಾರವ್ಯಾಸನನ್ನು ‘ಅವರು’ ಎಂದು ಹೇಳಿದ್ದು ನನಗೆ ಗೊತ್ತಿಲ್ಲ. ಆದರೆ ಮೊನ್ನೆ ಮೊನ್ನೆ ಗತಿಸಿದ ಗಾಂಧಿ, ನೆಹರೂರನ್ನು ಬಹುವಚನದಲ್ಲೇ ಉಲ್ಲೇಖಿಸುತ್ತೇವೆ. ಈ ವ್ಯತ್ಯಾಸಕ್ಕೆ ಇನ್ನೇನಾದರೂ ಕಾರಣ, ಸಮರ್ಥನೆಯಿದ್ದರೆ ಅದನ್ನು ಭಾಷಾ (ವಿ)ಜ್ಞಾನಿಗಳು ಇಲ್ಲವೇ ಮನಶ್ಶಾಸ್ತ್ರಜ್ಞರು ತಿಳಿಸಬೇಕು.

ನೆನಪುಗಳು ಬಿಚ್ಚಿಕೊಳ್ಳುವ, ಅನಾವರಣಗೊಳ್ಳುವ ರೀತಿ ರೋಚಕ. ಒಂದು ಘಟನೆ, ವ್ಯಕ್ತಿ, ಸಂದರ್ಭ ಯಾಕೆ ನೆನಪಾಗುತ್ತದೆಯೆಂದರೆ ಸುಲಭಕಾರಣವಿಲ್ಲ. ಯಾವ ನೆನಪು ಹೆಚ್ಚು ಹಿಂಡುತ್ತದೆಯೆಂದೂ ಹೇಳಲಾಗದು. ಸಮುದ್ರ ತೀರದಲ್ಲಿ ಜಲರಾಶಿಯನ್ನು ನೋಡುತ್ತ ನಿಂತವನಿಗೆ ಒಂದೊಂದು ತೆರೆಯೂ ಒಂದು ಅದ್ಭುತ; ರೋಮಾಂಚಕ. ಆದರೆ ಒಂದು ತೆರೆಯು ಬಂದು ಹೋಗಿ ಇನ್ನೊಂದು, ಅದಾದ ಮೇಲೆ ಮತ್ತೊಂದು ತೆರೆಯು ಅಪ್ಪಳಿಸಿದಾಗ ಯಾವುದು ನನ್ನ ನೆನಪಿನಲ್ಲಿದೆಯೆಂದು ಹೇಳುವುದು ಕಷ್ಟ. ಪ್ರತಿಯೊಂದು ತೆರೆಯೂ ಇನ್ನೊಂದು ತೆರೆಯನ್ನು ತೆರೆಯುತ್ತದೆ; ತೆರೆಯಾಗುತ್ತದೆ. ತೆರೆಮರೆಗೆ ಸರಿಯುತ್ತದೆ. ಪ್ರಕೃತಿ ಇಷ್ಟೊಂದು ವಿಸ್ಮಯಗಳನ್ನು ಪೋಷಿಸುತ್ತ ಅನಾದಿಯಿಂದ ಬಂದಿರುವಾಗ ಯಾವ ನೆನಪು ನನ್ನನ್ನು ಮುದಗೊಳಿಸಿದೆ, ಘಾಸಿಗೊಳಿಸಿದೆಯೆಂದು ಹೇಗೆ ಹೇಳಬಹುದು? ಇವೆಲ್ಲ ನೆನಪಾದದ್ದು ಅಗಲಿದ ಚೇತನಗಳಿಗೆ ಉಳಿದವರು ಪತ್ರಿಕೆಗಳಲ್ಲಿ, ರಸ್ತೆ ಬದಿಗಳ ದೀಪಸ್ತಂಭಗಳಿಗೆ ತಗುಲಿಸಿದ ಫಲಕಗಳಲ್ಲಿ ನೀಡಿದ, ನೀಡುವ ಸ್ಮರಣೆಯ ಪ್ರಕಟಣೆಯನ್ನು ಜಾಹೀರಾತಿರಬಹುದೆಂಬ ಸಂಶಯದಲ್ಲಿ ನೋಡಿದಾಗ; ಇಲ್ಲದವರಿಗೆ ನಾವು ಸಾರ್ವಜನಿಕವಾಗಿ ನೆನಪಿಸುವ ಔದಾರ್ಯವನ್ನು ಗಮನಿಸಿದಾಗ. ನಿಜಕ್ಕೂ ಅವರನ್ನು ನಾವು ಗೌರವಿಸುತ್ತಿದ್ದೇವೆಯೇ ಅಥವಾ ಇದೊಂದು ತೋರಿಕೆಯೇ ಎಂಬ ಗುಮಾನಿ ಬರುತ್ತದೆ.

ಸುದ್ದಿಯಾಗುತ್ತದೆಂಬುದನ್ನು ಬಿಟ್ಟರೆ ಇವು ಫಲಶೂನ್ಯ ಪ್ರತಿಕ್ರಿಯೆಗಳು. ಅವರ ಅಗಲಿಕೆಯ ತಕ್ಷಣ ಬಂಧುಗಳಿಗೆ ಸಂಕಟವಾಗಬಹುದು. ಉಳಿದವರಿಗೆ ತಾವು ನೆನಪಿಸಿದ್ದೇವೆಂಬ ತೃಪ್ತಿ ಸಿಗಬಹುದು. ಆದರೆ ಇಂತಹ ಪ್ರಕಟಣೆಗಳಲ್ಲಿ ‘‘ನೀವು ಅಗಲಿ ಒಂದು ವರ್ಷವಾದರೂ ನಿಮ್ಮನ್ನು ನೆನಪಿನಲ್ಲಿಟ್ಟುಕೊಂಡಿದ್ದೇವೆ’’ ಎಂಬಂತಹ ಶ್ರದ್ಧಾಂಜಲಿಯನ್ನು ನೋಡಿದಾಗ ಅಗಲಿದ ಆ ಆತ್ಮ ‘‘ನನ್ನನ್ನು ಇನ್ನೂ ಮರೆಯದ ನಿಮಗೆ ಧನ್ಯವಾದಗಳು’’ ಎಂದು ಹೇಳಬೇಕೆಂದು ನಾವು ಅಪೇಕ್ಷಿಸುತ್ತಿದ್ದೇವೇನೋ ಎಂದು ಅನ್ನಿಸುತ್ತದೆ. ಎಷ್ಟೇ ವರ್ಷವಾದರೂ ನೆನಪಿಗೆ ಅವಧಿ ಬಾಧೆಯಿಲ್ಲದಿರುವುದರಿಂದ ನಾವು ಈ ‘ಆದರೂ’ ಎಂಬ ವಿನಾಯಿತಿ, ರಿಯಾಯಿತಿ, ಔದಾರ್ಯದ ಉರುಳಿನಲ್ಲಿ ಅಗಲಿದವರನ್ನು ಸಿಲುಕಿಸುವುದು ಅವರಿಗೆಸಗುವ ದೊಡ್ಡ ದ್ರೋಹವಾಗುವುದಿಲ್ಲವೇ?

ನೆನಪುಗಳು ಇರಲಿ. ಸ್ಮತಿ ಸಂಚಯವು ಮನೆಯ, ಮನದ ಮೂಲೆಯಲ್ಲಿರಲಿ. ಎಂದೋ ಹುಟ್ಟಿದ್ದ ಮತ್ತು ಪ್ರಾಯಃ ಎಂದೋ ನಮ್ಮನ್ನು ಅಗಲಿದ ಭಗವಂತನಿಗೂ ಸ್ಮರಣೆಯೊಂದೇ ಸಾಲದೇ? ಎಂದಿರುವಾಗ ನೆನಪುಗಳನ್ನು ಅವುಗಳ ಪಾಡಿಗೆ ಅವುಗಳನ್ನು ಇರಗೊಟ್ಟು ಇರುವುದೇ ಸುಖವೆನ್ನಿಸುತ್ತದೆ. ವಿದಾಯಕ್ಕಿಂತ ದೊಡ್ಡ ಸುಖ ಬೇರಿಲ್ಲ. ಅದರರ್ಥವೇ ಅದು; ಇನ್ನು ಸಾಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top