ಫೇಸ್‌ಬುಕ್ ಸರಕಾರಿ ವಿರೋಧಿ ವಿಷಯಗಳನ್ನೇ ನಿರ್ಬಂಧಿಸುತ್ತಿದೆಯೇ?

ಭಾಗ-3

ನೋಟಿಫಿಕೇಷನ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಅಡ್ಮಿನ್‌ಗೆ ಅವಕಾಶ ನೀಡಲಾಗಿದ್ದು, ಅದನ್ನು ಅವರು ತಕ್ಷಣವೇ ಬಳಸಿಕೊಂಡಿದ್ದರು. ಆದರೆ ಫೇಸ್‌ಬುಕ್‌ನಿಂದ ಯಾವುದೇ ಉತ್ತರವಿರಲಿಲ್ಲ ಮತ್ತು ಮರುದಿನ ಯಾವುದೇ ನೋಟಿಫಿಕೇಷನ್ ಇಲ್ಲದೆ ಅಡ್ಮಿನ್‌ರ ಪ್ರೊಫೈಲನ್ನೂ ನಿಷೇಧಿಸಲಾಗಿತ್ತು. ‘‘ನನ್ನ ಪೇಜ್ ರಾಜಕೀಯ ಸೈದ್ಧಾಂತಿಕ ಪುಟವಾಗಿದ್ದು, ಅದು ಯಾವುದೇ ಅಶ್ಲೀಲ ವಿಷಯವನ್ನು ಒಳಗೊಂಡಿರುವುದಿಲ್ಲ ಮತ್ತು ಪೇಜ್‌ನ್ನು ನಿಷೇಧಿಸುವವರೆಗೆ ಯಾವುದೇ ಅಶ್ಲೀಲ ವಿಷಯವನ್ನು ನಾನು ಪೋಸ್ಟ್ ಮಾಡಿರಲಿಲ್ಲ. ಹೀಗಾಗಿ ಪೇಜ್‌ನ ಮರುಸ್ಥಾಪನೆಗಾಗಿ ನಿಮ್ಮ ನೆರವು ಕೋರುತ್ತಿದ್ದೇವೆ’’ ಎಂದು ಅಡ್ಮಿನ್ ನನಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ನಾನೂ ಮೋೆಯವರಿಗೆ ಹಲವಾರು ವೈಯಕ್ತಿಕ ಮನವಿಗಳನ್ನು ಕಳುಹಿಸಿದ್ದರೂ ಪೇಜ್ ಮರುಸ್ಥಾಪನೆಯಾಗಿರಲಿಲ್ಲ. ಪೇಜ್‌ನ ಮರುಸ್ಥಾಪನೆಗೆ ಫೇಸ್‌ಬುಕ್ ಮೇ 9ರಂದು ನಿರ್ಧರಿಸಿದ್ದು, ಅಲ್ಲಿಯವರೆಗೂ ನನ್ನ ಮನವಿಗಳನ್ನು ಕಡೆಗಣಿಸಲಾಗಿತ್ತು. ಯಥಾಪ್ರಕಾರ ಫೇಸ್‌ಬುಕ್ ಅಮಾನತಿನ ಕುರಿತು ಮತ್ತು ನಿಯಮವನ್ನು ಉಲ್ಲಂಘಿಸಿದ್ದ ಫೋಸ್ಟ್ ಬಗ್ಗೆ ಯಾವುದೇ ವಿವರ ಅಥವಾ ಸ್ಪಷ್ಟನೆಯನ್ನು ನೀಡಿರಲಿಲ್ಲ. ಒಂದು ವಾರದ ಬಳಿಕ ಕರ್ನಾಟಕ ವಿಧಾನಸಭಾ ಚುನಾವಣೆಗಳು ನಡೆದಿದ್ದವು. ಆ ವೇಳೆಗಾಗಲೇ ಫೇಕು ಎಕ್ಸ್‌ಪ್ರೆಸ್ ಅಸ್ತಿತ್ವದಲ್ಲಿದ್ದು ಎರಡು ವರ್ಷಗಳು ಕಳೆದಿದ್ದವು ಮತ್ತು ಅದರ ಪೇಜ್ ಅಶ್ಲೀಲ ವಿಷಯವನ್ನೊಳಗೊಂಡಿತ್ತು ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯಾವುದೇ ಸಾಕ್ಷಾಧಾರಗಳನ್ನು ಫೇಸ್‌ಬುಕ್ ಒದಗಿಸಿರಲಿಲ್ಲ, ಹಾಗೆ ಒದಗಿಸಲು ಅದು ತಲೆ ಕೆಡಿಸಿಕೊಂಡಿಯೂ ಇರಲಿಲ್ಲ. ಫೇಕು ಎಕ್ಸ್‌ಪ್ರೆಸ್ ಮೋದಿಯ ಹೇಳಿಕೆಗಳ ಪೊಳ್ಳುತನವನ್ನು ಬಯಲಿಗೆಳೆಯಲು ಅಥವಾ ಎನ್‌ಡಿಎ ಮತ್ತು ಅದರ ಸಚಿವರನ್ನು ಗೇಲಿ ಮಾಡಲು ತನ್ನನ್ನು ಅರ್ಪಿಸಿಕೊಂಡಿದೆ. ಮೊದಲ ಪೇಜ್ ಅನ್ನು ತೆಗೆದುಹಾಕಿದಾಗ ಫೇಕು ಎಕ್ಸ್‌ಪ್ರೆಸ್‌ನ ಅಡ್ಮಿನ್ ತಕ್ಷಣವೇ ಎರಡನೇ ಪೇಜ್‌ನ್ನು ಸೃಷ್ಟಿಸಿದ್ದರು. ಆದರೆ ಈ ಸಮಾನಾಂತರ ಪೇಜ್‌ನ್ನೂ ನಿಷೇಧಿಸಲಾಗಿತ್ತು.
 ಅಂದ ಹಾಗೆ ಹಾಲಿ ಸರಕಾರವನ್ನು ಬೆಂಬಲಿಸುತ್ತಿರುವ ಬಳಕೆದಾರರಿಂದ ನನಗೆ ಒಂದೇ ಒಂದು ಕರೆಯೂ ಈವರೆಗೆ ಬಂದಿಲ್ಲ. 2018 ಜುಲೈ 12ರಂದು ಸುಳ್ಳುಸುದ್ದಿಗಳನ್ನು ಹರಡುವಲ್ಲಿ ಕುಖ್ಯಾತವಾಗಿರುವ ‘ಪೋಸ್ಟ್‌ಕಾರ್ಡ್ ನ್ಯೂಸ್’ ಹೆಸರಿನ ಡಿಜಿಟಲ್ ಸುದ್ದಿತಾಣವನ್ನು ನಿಷೇಧಿಸಿದ್ದು ಬಿಟ್ಟರೆ ಫೇಸ್‌ಬುಕ್‌ನಲ್ಲಿ ಹಲವಾರು ಹಿಂದುತ್ವ ಪೇಜ್‌ಗಳು ಅಥವಾ ಪ್ರೊಫೈಲ್‌ಗಳಿಗೆ ಈವರೆಗೆ ಭಂಗವುಂಟಾಗಿಲ್ಲ, ಅವು ನಿರಂತರವಾಗಿ ಮುಂದುವರಿದಿವೆ. 2018 ಜುಲೈ 2ರಂದು ಮುಸ್ಲಿಮರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವಂತೆ ಐವರು ಹಿಂದೂ ಬಲಪಂಥೀಯ ವ್ಯಕ್ತಿಗಳು ಹಿಂದುಗಳಿಗೆ ಕರೆ ನೀಡುತ್ತಿದ್ದ ಫೇಸ್‌ಬುಕ್ ಲೈವ್ ಪ್ರಸಾರವು ನನ್ನನ್ನು ಜಾಗೃತಗೊಳಿಸಿತ್ತು. ಈ ಲೈವ್ ವೀಡಿಯೊ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಪೇಜ್‌ನಲ್ಲಿ ಪ್ರಸಾರಗೊಂಡಿದ್ದರಿಂದ ಅದು ವ್ಯಾಪಕವಾಗಿ ಶೇರ್ ಆಗಿತ್ತು. ಹಲವಾರು ಬಳಕೆದಾರರು ದೂರಿಕೊಂಡ ಬಳಿಕ ಕೆಲವು ಗಂಟೆಗಳಲ್ಲಿ ಫೇಸ್‌ಬುಕ್ ಈ ಲಿಂಕ್‌ನ್ನು ತೆಗೆದಿತ್ತಾದರೂ ಪೇಜ್‌ಗೆ ಏನೂ ಆಗಿರಲಿಲ್ಲ, ಅದು ಹೇಗಿತ್ತೋ ಹಾಗೆಯೇ ಇತ್ತು. ಮುಸ್ಲಿಮರನ್ನು ಕೊಲ್ಲುವಂತೆ ಜನರಿಗೆ ಸೂಚಿಸಿದ್ದ ಲೈವ್ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದ ಸುರೇಂದ್ರ ಸಿಂಗ್ ಎಂಬ ಬಳಕೆದಾರ ಇನ್ನೂ ಫೇಸ್‌ಬುಕ್‌ನಲ್ಲಿದ್ದಾನೆ. ಹಿಂದುತ್ವ ಪೇಜ್‌ಗಳ ಪ್ರಕರಣದಲ್ಲಿ ಹಿಂಸೆ, ದ್ವೇಷ ಭಾಷಣ ಅಥವಾ ಭದ್ರತೆಗೆ ಸಂಬಂಧಿಸಿದ ಫೇಸ್‌ಬುಕ್‌ನ ಯಾವುದೇ ನಿರ್ಬಂಧಗಳು ಏಕೆ ಅನ್ವಯವಾಗುವುದಿಲ್ಲ?
 ಮುಸ್ಲಿಮರು ಮತ್ತು ಮಹಿಳೆಯರ ವಿರುದ್ಧ ನಿರಂತರ ದ್ವೇಷ ಭಾಷಣಗಳನ್ನು ಪೋಸ್ಟ್ ಮಾಡುವ ರಾಜಸ್ಥಾನದ ಫೇಸ್‌ಬುಕ್ ಬಳಕೆದಾರ ದೀಪಕ್ ಶರ್ಮಾನ ಪ್ರಕರಣವನ್ನು ನೋಡಿ. ಆಗಾಗ್ಗೆ ಫೇಸ್‌ಬುಕ್ ಲೈವ್‌ನ್ನು ಬಳಸುವ ಆತ ಮುಸ್ಲಿಮರನ್ನು ಅಳಿಸಿ ಹಾಕುವುದಾಗಿ ನಿರಂತರ ಬೆದರಿಕೆಗಳನ್ನು ಒಡ್ಡುತ್ತಿರುತ್ತಾನೆ. 2018 ಡಿಸೆಂಬರ್ 16ರಂದು ಆತ ಇಂತಹುದೇ ಬೆದರಿಕೆಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಈ ವೀಡಿಯೊ ಈಗ 77,000 ವೀಕ್ಷಣೆಗಳು, 1056 ಶೇರ್‌ಗಳು, 980 ಕಮೆಂಟ್‌ಗಳು ಮತ್ತು 1,400 ರಿಯಾಕ್ಷನ್‌ಗಳನ್ನು ಹೊಂದಿವೆೆ. ನಾನು ಮತ್ತು ಇತರ ಕೆಲವು ಡಿಜಿಟಲ್ ಹಕ್ಕು ಕಾರ್ಯಕರ್ತರು ಫೇಸ್‌ಬುಕ್‌ನ ಸಮುದಾಯ ಮಾರ್ಗಸೂಚಿಗಳನ್ನು ಬಳಸಿ ಈ ಪೋಸ್ಟ್‌ನ್ನು ವರದಿ ಮಾಡಿದ್ದೆವು. ವೀಡಿಯೊದ ಕಂಟೆಂಟ್ ತನ್ನ ಸಮುದಾಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿಲ್ಲ ಎಂಬ, ಹಿಂದುತ್ವ ದ್ವೇಷ ಪುಟಗಳಿಗೆ ತನ್ನ ಖಾಯಂ ಉತ್ತರವನ್ನೇ ಫೇಸ್‌ಬುಕ್ ನೀಡಿತ್ತು. ನರೇಂದ್ರ ಮೋದಿ ಅಥವಾ ಬಲಪಂಥೀಯರ ವಿರುದ್ಧ ಏನೇ ಬರೆದರೂ ಅದನ್ನು ತಕ್ಷಣ ತೆಗೆದುಹಾಕುವ ಫೇಸ್‌ಬುಕ್‌ಗೆ ಇಂತಹ ದ್ವೇಷವಿಷಯಗಳ ಮೇಲೆ ನಿಗಾಯಿಡಲು ಏಕೆ ಸಾಧ್ಯವಾಗುತ್ತಿಲ್ಲ?
ಫೇಸ್‌ಬುಕ್ ಸೆಪ್ಟಂಬರ್ ಕೊನೆಯ ವಾರದಿಂದ ಅಜಯ ಪ್ರಕಾಶ(ದೈನಿಕ ಭಾಸ್ಕರ), ಪ್ರೇರಣಾ ನೇಗಿ(ಜಂಜ್ವಾರ್ ಡಾಟ್ ಕಾಮ್), ರಿಫಾತ್ ಜಾವೇದ್(ಜನತಾ ಕಾ ರಿಪೋರ್ಟ್‌ರ್ ಡಾಟ್‌ಕಾಮ್) ಮತ್ತ್ತು ಇಜಾಝ್ ಝಕಾ ಸೈಯದ್(ಖಲೀಜ್ ಟೈಮ್ಸ್‌ನ ಮಾಜಿ ಉದ್ಯೋಗಿ) ಸೇರಿದಂತೆ ಹಲವಾರು ಪ್ರಮುಖ ಪತ್ರಕರ್ತರ ವೈಯಕ್ತಿಕ ಖಾತೆ ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಕ್ಯಾರವಾನ್ ಡೈಲಿ 2018, ಅ.6ರಂದು ವರದಿ ಮಾಡಿತ್ತು. ಕ್ಯಾರವಾನ್ ಡೈಲಿಯ ಕೆಲವು ಪತ್ರಕರ್ತರೂ ಇದರಲ್ಲಿ ಸೇರಿದ್ದರು. ಫೇಸ್‌ಬುಕ್‌ನ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಇವರೆಲ್ಲರ ಖಾತೆಗಳು ಮತ್ತು ಪ್ರೊಫೈಲ್‌ಗಳನ್ನು ಅಮಾನತುಗೊಳಿಸಲಾಗಿತ್ತು.
 ಈ ಪ್ರಕರಣಗಳನ್ನು ನಾನು ಪರಿಶೀಲಿಸುತ್ತಿದ್ದಂತೆ ಫೇಸ್‌ಬುಕ್‌ನ ಕ್ರಮಾವಳಿಗಳನ್ನು ಹೇಗೆ ಬರೆಯಲಾಗುತ್ತದೆ ಮತ್ತು ತಿರುಚಲಾಗುತ್ತದೆ ಎನ್ನುವ ಕುರಿತು ಸ್ಪಷ್ಟ ಸ್ವರೂಪವೊಂದು ತೆರೆದುಕೊಂಡಿತ್ತು. ಕ್ರಮಾವಳಿಯು ಪ್ರೊಫೈಲ್‌ಗಳ ನಿರ್ದಿಷ್ಟ ವರ್ಗವನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತದೆ ಮತ್ತು ಇದಕ್ಕೆ ಕಾರಣಗಳು ಫೇಸ್‌ಬುಕ್‌ಗೆ ಮಾತ್ರ ಗೊತ್ತು. ಅಮಾನತುಗಳ ಆವರ್ತನ ಹೆಚ್ಚಾಗಿರುವುದರಿಂದ ಪ್ರೊಫೈಲ್‌ಗಳನ್ನು ನಿಷೇಧಿಸಿದಾಗ ಹೋರಾಟಗಾರರು ಮತ್ತು ಸ್ವತಂತ್ರ ವೀಕ್ಷಕರು ಅಮಾನತು ಅವಧಿ ಕೊನೆಗೊಳ್ಳುವುದನ್ನೇ ಕಾಯುತ್ತಾರೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ಸರಕಾರದ ಟೀಕಾಕಾರರು ಫೇಸ್‌ಬುಕ್‌ನ ಬ್ಲಾಕ್-ಬಾಕ್ಸ್ ನೀತಿಗಳ ಎದುರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಧ್ವನಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಫ್ರೊಫೈಲ್ 30 ದಿನಗಳ ಕಾಲ ಅಮಾನತುಗೊಂಡ ಬಳಿಕ ಅದು ತನ್ನಲ್ಲಿ ಮೊದಲು ಇದ್ದ ಆವೇಗವನ್ನು ಕಳೆದುಕೊಳ್ಳುತ್ತದೆ ಎನ್ನ್ನುವುದನ್ನು ನಾನು ಗಮನಿಸಿದ್ದೇನೆ.
 2015ರಲ್ಲಿ ಬಿಕರ್ಟ್ ಮತ್ತು ಅವರ ತಂಡವನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಬಲಪಂಥೀಯ ಮೂಲಭೂತವಾದಿ ಗುಂಪುಗಳ ವಿರುದ್ಧ ಫೆೇಸ್‌ಬುಕ್‌ನ ಪೊಲೀಸ್‌ಗಿರಿಯಲ್ಲಿನ ಲೋಪಗಳು, ಮಹಿಳಾ ಕಾರ್ಯಕರ್ತೆಯರು ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳನ್ನು ಎದುರಿಸುತ್ತಿರುವ ಬಗ್ಗೆ ನಾನು ಚರ್ಚಿಸಿದ್ದೆ. ಫೇಸ್‌ಬುಕ್‌ನ ನಿಲುವು ಭಾರತದ ಸಾಂಸ್ಕೃತಿಕ ಸಂವೇದನಾಶೀಲತೆಯನ್ನು, ಆಡುಮಾತುಗಳನ್ನು ಮತ್ತು ಸ್ಥಳೀಯ ಭಾಷೆಗಳಲ್ಲಿಯ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಏನೇನೂ ಸಾಲದು ಮತ್ತು ಸಮುದಾಯ ಮಾರ್ಗಸೂಚಿಗಳ ಕುರಿತು ಎಫ್‌ಎಕ್ಯೂ(ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು) ಇಲ್ಲಿ ಹೇಗೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಅವರಿಗೆ ಬಿಂಬಿಸಲು ನಾನು ಪ್ರಯತ್ನಿಸಿದ್ದೆ. ನನಗೆ ಉತ್ತರಿಸಿದ್ದ ಫೇಸಬುಕ್‌ನ ಸಾರ್ವಜನಿಕ ನೀತಿ ನಿರ್ದೇಶಕಿ(ದಕ್ಷಿಣ ಏಶ್ಯಾ) ಆಂಖಿ ದಾಸ್ ಅವರು, ‘‘ನೀವು ಅಮೆರಿಕದಲ್ಲಿರುವವರು, ನಿಮಗೆ ಭಾರತವು ಅರ್ಥವಾಗುವುದಿಲ್ಲ’’ ಎಂದು ಹೇಳಿದ್ದರು. ದಾಸ್ ಅವರ ಉತ್ತರವು ನನಗೆ ತುಂಬ ಚಿರಪರಿಚಿತ ಎನ್ನುವಂತೆ ಭಾಸವಾಗಿತ್ತು. ಹೌದು, ಅವರು ಹಿಂದುತ್ವ ಟ್ರೋಲ್‌ಗಳ ಭಾಷೆಯನ್ನು ಬಳಸಿದ್ದರು!

ಕೃಪೆ: caravanmagazine.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top