ಪುಲ್ವಾಮದ ಪಾಠಗಳು

ವರ್ತಮಾನದ ವಿಷಾದನೀಯ ಬೆಳವಣಿಗೆಯೆಂದರೆ ಎಲ್ಲರೂ ಜನಪ್ರಿಯರಾಗಲು ಒದ್ದಾಡುವುದು. ಯಾವುದೇ ಕ್ರಮ-ಕ್ರಿಯೆಯು ಎಷ್ಟು ಜನಹಿತವನ್ನು ಸಾಧಿಸುತ್ತದೆಯೆಂಬ ಲೆಕ್ಕಾಚಾರ, ವಿಚಾರ ಯಾರಿಗೂ ಬೇಡ. ಯಾವುದನ್ನು ಮಾಡಿದರೆ ಅತೀ ಹೆಚ್ಚು ಜನರ ಹಿತವನ್ನು ಸಾಧಿಸಬಹುದೆಂಬುದು (ಬಹುಜನ ಹಿತಾಯ ಬಹುಜನ ಸುಖಾಯ) ಸಾಮೂಹಿಕ ಬದುಕಿನ ಸಾಧನೆಯಾಗಬೇಕಲ್ಲದೆ ಒಬ್ಬ ವ್ಯಕ್ತಿಯ, ಒಂದು ಪಂಗಡದ ಹೆಸರು ಜನಪ್ರಿಯವಾಗಬೇಕೆಂಬ ನೆಲೆಯಲ್ಲಿ ಬದುಕು ನಡೆದರೆ ಅದರಿಂದ ಏಕಮುಖಿ ಸಂಸ್ಕೃತಿ ಬೆಳೆಯಬಹುದಲ್ಲದೆ ಬಹುಮುಖಿ ವಿಕಾಸ ನಡೆಯದು. ಅಂತಹ ಸಂದರ್ಭದಲ್ಲಿ ಬೆಳೆಯ ಬದಲು ಕಳೆ ಹಬ್ಬುವುದು, ತುಂಬುವುದು ಅನಿವಾರ್ಯ.


2019ರ ಮಹಾ ಚುನಾವಣೆಗಳ ಮೊದಲು ದೇಶದಲ್ಲಿ ರಾಜಕೀಯ ವೈಪರೀತ್ಯಗಳು ಘಟಿಸಬಹುದೆಂಬುದು ಸಾಮಾನ್ಯವಾದ ನಿರೀಕ್ಷೆಯಾಗಿತ್ತು. ಆದರೆ ದೇಶದ ಗಡಿ ತನ್ನ ಲೋಪಗಳನ್ನು ಬೆತ್ತಲೆ ಮಾಡಿಕೊಳ್ಳುವುದೆಂಬ ನಿರೀಕ್ಷೆ, ಅಪೇಕ್ಷೆ ಪ್ರಾಯಃ ಯಾರಿಗೂ ಇರಲಿಲ್ಲ. ಆದರೂ ಕಾಶ್ಮೀರದ ಭಯೋತ್ಪಾದನೆ ಕಳೆದ ವಾರ ಕೇಂದ್ರ ಮೀಸಲು ಪೊಲೀಸ್ ಪಡೆಯ 40ಕ್ಕೂ ಅಧಿಕ ಜೀವಗಳನ್ನು ಆಹುತಿ ಪಡೆಯಿತು.

ಕಳೆದ ಕೆಲವು ವರ್ಷಗಳಲ್ಲಿ ನಡೆದ ಭಯಾನಕ ದುರಂತಗಳಲ್ಲಿ ಇದೂ ಒಂದು. ಬಸ್, ರೈಲು, ವಿಮಾನ, ಜಲಮೂಲದ ಅಪಘಾತಗಳಲ್ಲಿ ಇದಕ್ಕೂ ಮಿಕ್ಕಿ ಜನರು ಜೀವ ಕಳೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಏನೂ ಅಲ್ಲ. ಆದರೆ ಈ ಘಟನೆ ದೇಶದ ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ದುರಂತಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಜನರು ಒಂದಾಗಿ ಈ ಘಟನೆಯನ್ನು ಖಂಡಿಸಿದ್ದಾರೆ. ಇದರ ಹಿಂದಿನ ಹುನ್ನಾರದ ಕುರಿತು ಸಾಕಷ್ಟು ಉಚಿತ-ಅನುಚಿತ ಅಭಿಪ್ರಾಯಗಳು ಸಂಗ್ರಹವಾಗಿವೆ. ತಮ್ಮ ತಮ್ಮ ಮೂಗಿನ ನೇರಕ್ಕೆ ವಾದಿಸಿದವರೂ ಇದ್ದಾರೆ. ಹುತಾತ್ಮರಾದವರು ಯಾವುದೇ ರಾಜಕೀಯದಲ್ಲಿಲ್ಲದಿದ್ದರೂ ಅವರ ಸಾವಿನ ಮೂಲಕ ರಾಜಕೀಯ, ಧಾರ್ಮಿಕ, ಮತೀಯ ಲಾಭ ಪಡೆಯಲು ಯತ್ನಿಸಿದ್ದೂ ಈ ದೇಶದ ಹಣೆಬರೆಹ. ಎಲ್ಲ ಬಗೆಯ ಕೊಡುಗೆಗಳೂ ಬಂದಿವೆ.

ಕೇಂದ್ರ ಸರಕಾರವು ಈ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದೆ. ಸಿಪಾಯಿಗಳ ಸಾವಿಗೆ ತಾನು ಹೊಣೆಯೆಂದು ಜೆಇಎಮ್ ಎಂಬ ಒಂದು ಭಯೋತ್ಪಾದನಾ ಸಂಘಟನೆಯು ಹೇಳಿಕೊಂಡಿದೆ. ಅದು ಸತ್ಯವಾದಲ್ಲಿ ಅದು ಬೆಳೆಯುತ್ತಿರುವುದು ಪಾಕಿಸ್ತಾನದ ನೆಲದಲ್ಲಿ ಎಂಬುದನ್ನು ಮರೆಯಬಾರದು. ಇದನ್ನೇ ಆಧರಿಸಿ ಸರಕಾರವು ತಕ್ಷಣದ ಪ್ರತಿಕ್ರಿಯೆಗಳನ್ನು ನೀಡಿದೆ; ಪ್ರತೀಕಾರದ ಕ್ರಮಗಳನ್ನು ಕೈಗೊಂಡಿದೆ. ಮಾಮೂಲಿನಂತೆ ಪಾಕ್ ರಾಯಭಾರಿಯನ್ನು ಕರೆದು ಛೀಮಾರಿ ಹಾಕಿದೆ. ವ್ಯಾಪಾರ-ಉದ್ಯಮ ರಂಗದಲ್ಲಿ ಪಾಕಿಸ್ತಾನಕ್ಕೆ ಭಾರತವು ನೀಡಿದೆಯೆನ್ನಲಾದ ಅತ್ಯಂತ ಇಷ್ಟದ ರಾಷ್ಟ್ರ ಸ್ಥಾನಮಾನವನ್ನು ಭಾರತವು ಕೈಬಿಟ್ಟಿದೆ. ಜೊತೆಗೆ ಇನ್ನೊಬ್ಬರ ಮೇಲಿನ ಸಿಟ್ಟಿಗೆ ತಮ್ಮ ಮೈಯನ್ನೇ ಪರಚಿಕೊಂಡಂತೆ ಕಾಶ್ಮೀರ ಪ್ರತ್ಯೇಕತಾವಾದಿಗಳಿಗಿದ್ದ ರಕ್ಷಣೆಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಪ್ರತ್ಯೇಕತಾವಾದ ಬೇರೆ; ಭಯೋತ್ಪಾದನೆ ಬೇರೆ ಎಂಬುದನ್ನು ಗಮನಿಸದೆ ಅವಸರದ ಕ್ರಮಗಳನ್ನು ಜಾರಿಮಾಡಿದೆ.

ಇಂತಹ ಕ್ರಮಗಳು ಜನಪ್ರಿಯವಾಗಿರುವುದರಿಂದ ಸಮಾಜದ ಎಲ್ಲ ಕ್ಷೇತ್ರಗಳೂ ಯಥಾನುಶಕ್ತಿ ಕ್ರಮಗಳನ್ನು ಕೈಗೊಂಡಿವೆ. ಕ್ರಿಕೆಟ್ ಮಂಡಳಿಯು ಪಾಕ್ ಪ್ರಧಾನಿ ಮತ್ತು ವಿಶ್ವದ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾದ ಇಮ್ರಾನ್ ಖಾನ್ ಅವರ ಭಾವಚಿತ್ರವನ್ನು ತನ್ನ ಫಲಕಪಟ್ಟಿಯಿಂದ ತೆಗೆದುಹಾಕಿದೆ. ಕೈಫಿ ಆಜ್ಮಿ ಜನ್ಮ ಶತಮಾನೋತ್ಸವದ ಪ್ರಯುಕ್ತ ಕರಾಚಿಯಲ್ಲಿ ನಡೆಯಬೇಕಿದ್ದ ಸಾಂಸ್ಕೃತಿಕ ಉತ್ಸವಕ್ಕೆ ಹೋಗಬೇಕಾಗಿದ್ದ ಶಬಾನಾ ಆಜ್ಮಿ-ಜಾವೆದ್ ಅಖ್ತರ್ ದಂಪತಿ ತಮ್ಮ ಪ್ರವಾಸವನ್ನು ರದ್ದು ಮಾಡಿದರು. ಹಾಗೆಯೇ ದುಬೈಯಲ್ಲಿ ನಡೆಯಬೇಕಾಗಿದ್ದ ಉತ್ಸವವೂ ರದ್ದಾಗಿದೆ. ಇದು ನೋವನ್ನು ಶಮನ ಮಾಡೀತಲ್ಲದೆ ಕಾಯಿಲೆಯನ್ನು ಗುಣಪಡಿಸಲು ಶಕ್ತವೇ ಎಂದು ಯಾರೂ ಯೋಚಿಸಿದಂತಿಲ್ಲ. ವರ್ತಮಾನದ ವಿಷಾದನೀಯ ಬೆಳವಣಿಗೆಯೆಂದರೆ ಎಲ್ಲರೂ ಜನಪ್ರಿಯರಾಗಲು ಒದ್ದಾಡುವುದು. ಯಾವುದೇ ಕ್ರಮ-ಕ್ರಿಯೆಯು ಎಷ್ಟು ಜನಹಿತವನ್ನು ಸಾಧಿಸುತ್ತದೆಯೆಂಬ ಲೆಕ್ಕಾಚಾರ, ವಿಚಾರ ಯಾರಿಗೂ ಬೇಡ.

ಯಾವುದನ್ನು ಮಾಡಿದರೆ ಅತೀ ಹೆಚ್ಚು ಜನರ ಹಿತವನ್ನು ಸಾಧಿಸಬಹುದೆಂಬುದು (ಬಹುಜನ ಹಿತಾಯ ಬಹುಜನ ಸುಖಾಯ) ಸಾಮೂಹಿಕ ಬದುಕಿನ ಸಾಧನೆಯಾಗಬೇಕಲ್ಲದೆ ಒಬ್ಬ ವ್ಯಕ್ತಿಯ, ಒಂದು ಪಂಗಡದ ಹೆಸರು ಜನಪ್ರಿಯವಾಗಬೇಕೆಂಬ ನೆಲೆಯಲ್ಲಿ ಬದುಕು ನಡೆದರೆ ಅದರಿಂದ ಏಕಮುಖಿ ಸಂಸ್ಕೃತಿ ಬೆಳೆಯಬಹುದಲ್ಲದೆ ಬಹುಮುಖಿ ವಿಕಾಸ ನಡೆಯದು. ಅಂತಹ ಸಂದರ್ಭದಲ್ಲಿ ಬೆಳೆಯ ಬದಲು ಕಳೆ ಹಬ್ಬುವುದು, ತುಂಬುವುದು ಅನಿವಾರ್ಯ. ಸುಮಾರು 44 ಮಂದಿ ಯೋಧರು ದುರಂತಕ್ಕೀಡಾದದ್ದು ನಮ್ಮದೇ ನೆಲದಲ್ಲಿ. ಒಂದು ಕಾಲದಲ್ಲಿ ಭೂಮಿಯ ಮೇಲಣ ಸ್ವರ್ಗವೆಂದು ಜನಪ್ರಿಯವಾಗಿದ್ದ ಕಾಶ್ಮೀರದಲ್ಲಿ. ದೇಶದ ಇತರ ಭೂಭಾಗದಲ್ಲಿರುವ ಜನರಿಗೆ ಮಾತ್ರವಲ್ಲ, ವಿದೇಶಿಯರಿಗೂ ಕಾಶ್ಮೀರವನ್ನು ನೋಡಬೇಕೆಂಬುದು ತಾಜಮಹಲನ್ನು ಅಥವಾ ವಿಶ್ವದ ಶ್ರೇಷ್ಠ ಪ್ರವಾಸಿ ತಾಣಗಳನ್ನು ನೋಡಬೇಕೆಂಬಷ್ಟೇ ತವಕ.

1960-70ರ ದಶಕದ (ಆಗಷ್ಟೇ ಭಾರತದಲ್ಲಿ ಬಣ್ಣದ ಸಿನೆಮಾಗಳು ಆರಂಭವಾಗಿದ್ದವು) ವರ್ಣರಂಜಿತ ಹಿಂದಿ ಸಿನೆಮಾಗಳಲ್ಲಿ ಕಾಶ್ಮೀರದ ದೃಶ್ಯಗಳನ್ನು ನೋಡಿದರೆ ರೋಮಾಂಚವಾಗುತ್ತಿತ್ತು. ಇಂಥದ್ದೊಂದು ಜಗತ್ತು ಈ ಭೂಮಿಯ ಮೇಲಿದೆಯೇ ಎಂದು ಅಚ್ಚರಿಪಡಲು ಸಕಾರಣಗಳಿದ್ದವು. ಈ ಎಲ್ಲ ಸಮಯದಲ್ಲೂ ನಾವು ಕಾಶ್ಮೀರವೆಂದು ಕರೆಯುವ ಭೂಮಿಯ ಒಂದು (ಸರಿ ಸುಮಾರು ಅರ್ಧ) ಭಾಗ ಪಾಕಿಸ್ತಾನದ ನಿಯಂತ್ರಣದಲ್ಲೇ ಮುಂದುವರಿದಿತ್ತು. ಇದು ಭಾರತದ ಸಾರ್ವಭೌಮತ್ವಕ್ಕೆ ಒಳಪಡಬೇಕೆಂಬ ಭಾರತದ ಬೇಡಿಕೆಯು ವಿಶ್ವಸಂಸ್ಥೆಯ ಅಂಗಳಕ್ಕಿಳಿದ ಆನಂತರ ಅದು ಅಪರಿಹಾರ್ಯವಾಗಿ ಉಳಿಯಿತು. ಇದರಲ್ಲಿ ಯಾರು ಸರಿ ಯಾರು ತಪ್ಪೆಂದು ನಿರ್ಣಯಿಸಲು ವಿಶ್ವದ ಎಲ್ಲ ಬಲಿಷ್ಠ (ಇವಕ್ಕೆ ‘ಅಭಿವೃದ್ಧಿ ಹೊಂದಿದ’ ಎಂಬ ನಾಮಧೇಯ!) ರಾಷ್ಟ್ರಗಳೂ ಉದ್ದೇಶಪೂರ್ವಕವಾಗಿ ವಿಫಲವಾದವು. ಏಶ್ಯಾಖಂಡದಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಎಲ್ಲಿಯ ವರೆಗೆ ಜಗಳವಾಡುತ್ತವೆಯೋ ಅಲ್ಲಿಯ ವರೆಗೆ ಶಸ್ತ್ರಾಸ್ತ್ರ ಮಾರಾಟಕ್ಕೆ ಒಳ್ಳೆಯ ಕಾಲವೆಂಬುದನ್ನು ಯುರೋಪಿನ ಮತ್ತು ಅಮೆರಿಕದ ಸರಕಾರಗಳು ಅರಿತಿದ್ದವು.

ಆದರೆ ದಶಕಗಳುದ್ದಕ್ಕೂ ಭಾರತ-ಪಾಕಿಸ್ತಾನಗಳ ನಡುವಣ ಹಣಾಹಣಿಯಲ್ಲಿ ಕಾಶ್ಮೀರ ನಿಧಾನಕ್ಕೆ ವಾಸ್ತವದ ನೆಲೆ-ನೆಲವಾಗಿ ಬದಲಾಯಿತು. ಅಮೃತಕ್ಕೆ ಬದಲು ರಕ್ತ ಹರಿಯತೊಡಗಿತು. ಪ್ರೀತಿ-ವಿಶ್ವಾಸದಿಂದ ಬಾಳುತ್ತಿದ್ದ ಕಾಶ್ಮೀರದ ಜನರು ವಿವಿಧ ರಾಜಕೀಯ, ಜಾತೀಯ, ಮತೀಯ ಸ್ಪರ್ಧೆಗಳ ದಾಳಗಳಾಗ ತೊಡಗಿದರು. ಹೂವಿನ ಬದಲು ಕೋವಿ ಆಲಂಕಾರಿಕ ವಸ್ತುವಾಯಿತು. ಅಧಿಕಾರದ ದಾಹದಲ್ಲಿ ರಾಜಕಾರಣಿಗಳಿಗೆ ಜನರ ಬದುಕು-ನೋವು-ಸಾವುಗಳ ಪರಿವೆಯೇ ಇರುವುದಿಲ್ಲವೆಂಬುದು ಶಾಶ್ವತವಾದ ನೀತಿಯಾದರೂ ಕಾಶ್ಮೀರದ ಸಂದರ್ಭದಲ್ಲಿ ಅದೊಂದು ಅನುಕೂಲಕರ ಸಿದ್ಧಾಂತವಾಗಿ ಪರಿಣಮಿಸಿತು, ಮಾತ್ರವಲ್ಲ ಇದೇ ತತ್ವವನ್ನು ದೇಶದ ಎಲ್ಲೆಡೆ ಪಸರಿಸಲಾಯಿತು. ಪರ-ವಿರೋಧವೆಂಬ ಪ್ರಚಾರಗಳು ಚಿಕ್ಕಮಕ್ಕಳವರೆಗೂ ವಿಸ್ತರಿಸಿತು. ಯಾವ ಸಮಸ್ಯೆಯನ್ನೂ ದ್ವೇಷದ ಮೂಲಕ ಪರಿಹರಿಸಲು ಸಾಧ್ಯವಿಲ್ಲ.

ಅಂತಹದ್ದೊಂದು (ಅ)ನೀತಿಯನ್ನು ಅನುಸರಿಸಿದವರು ಯಾರೂ ಚರಿತ್ರೆಯಲ್ಲಿ ಶಾಶ್ವತ ವ್ಯಕ್ತಿತ್ವವನ್ನು ಹೊಂದಲೇ ಇಲ್ಲ. ಇರುತ್ತಾರೆ: ನಾಯಕನ ಹೆಸರು ಚಿರಸ್ಥಾಯಿಯಾಗಬೇಕಾದರೆ ಪ್ರತಿನಾಯಕರೂ ಖಳನಾಯಕರೂ ಪೋಷಕ ಪಾತ್ರಗಳೂ ಇರಲೇ ಬೇಕು. ಆದರೆ ಅವರು ನಿಮಿತ್ತ ಮಾತ್ರ. ಉರಿಗೆ ಉರಿಯನ್ನು ಬೀರಿದರೆ ಅದು ಇನ್ನಷ್ಟು ಉರಿಯನ್ನು ಸೃಷ್ಟಿಸುವುದೇ ವಿನಾ ಉರಿ ಶಮನವಾಗಲಾರದು. (ಉರಿ ಎಂಬ ಸಿನೆಮಾವೂ ಸೃಜನಶೀಲ ಉರಿಯನ್ನೇ ಸಾಧಿಸಿದೆ!) ನಮ್ಮ ಪುರಾಣಗಳು, ಇತಿಹಾಸಗಳು ಹೇಳಿದ್ದು ತೋರಿಸಿದ್ದೂ ಇದನ್ನೇ. ರಾಮಾಯಣ-ಮಹಾಭಾರತಗಳ ಅಂತ್ಯ ಶೋಕವೇ ಹೊರತು ಸುಖವಲ್ಲ. ಭೂಮಿ, ನೀರು, ಬೆಂಕಿ, ಗಾಳಿ, ಆಕಾಶವೆಂಬ ಪಂಚ ಭೂತಗಳು ಎಲ್ಲವನ್ನೂ ಎಲ್ಲರನ್ನೂ ಆಪೋಶನ ತೆಗೆದುಕೊಂಡಿವೆಯೆಂಬುದನ್ನು ನೋಡುತ್ತೇವಾದರೂ ಅದರಿಂದ ಯಾರೂ ಏನನ್ನೂ ಕಲಿತಿಲ್ಲ; ಮತ್ತು ಕಲಿಯುತ್ತಾರೆಂದು ತೋರಿಸುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ.

ನಮ್ಮ ಪ್ರತೀಕಾರ, ಸೇಡು, ರೊಚ್ಚು, ರೋಷ ಇವೆಲ್ಲ ಯಾರ ಮೇಲೆ? ಕಾಶ್ಮೀರದಲ್ಲಿ ನಡೆದ ಈ 40ಕ್ಕೂ ಮೀರಿದ ಸಾವು ನಮ್ಮದೇ ಮಣ್ಣಿನಲ್ಲಿ ನಡೆಯಿತು. ನಮ್ಮದೇ ಪ್ರಜೆಗಳಿಂದ ನಡೆಯಿತು. ನಮ್ಮದೇ ನೆಲದಲ್ಲಿ, ನಮ್ಮದೇ ಅನ್ನದ ಋಣ ಹೊಂದಿದ ವ್ಯಕ್ತಿಗಳು ನಮ್ಮದೇ ಜೀವಗಳನ್ನು ಬಲಿತೆಗೆದುಕೊಳ್ಳಲು ಸಾಧ್ಯವಾದ ಬಗೆಯಾದರೂ ಏನು? ವಿದೇಶಿಯರು ತಮ್ಮ ಅನುಕೂಲಕ್ಕೆ ಹೂಡುವ ಸಂಚಿನಲ್ಲಿ ಭಾಗಿಯಾಗುವ ಭಾರತೀಯ ರಕ್ತವಾದರೂ ಎಂತಹದ್ದು? ಅದರ ಕಾರಣವಾದರೂ ಏನು? ಈ ಎಲ್ಲ ಸಂಗತಿಗಳನ್ನು ನೋಡಲು ಬೆಳ್ಳಿ ಪರದೆಯನ್ನು ವೀಕ್ಷಿಸುವ ಅಗತ್ಯವಿಲ್ಲ. ಅದು ಕಣ್ಣೆದುರೇ ಇದೆ.

ನಮ್ಮ ಚರಿತ್ರೆಯ ಒಂದೆರಡಾದರೂ ಸಂಗತಿಗಳನ್ನು ನೆನಪಿಸೋಣ: ಕ್ಷತ್ರಿಯ ರಜಪೂತ ಪೃಥ್ವೀರಾಜನ ಹಿಂದೆ ಕತ್ತಿಮಸೆಯುತ್ತಿದ್ದ ಅವನ ಸಂಬಂಧಿಯೇ ಆಗಿದ್ದ ಜಯಚಂದನಿದ್ದ; ಮುಸಲ್ಮಾನ ಟಿಪ್ಪುಸುಲ್ತಾನನ ಹಿಂದೆ ಮಸಲತ್ತು ನಡೆಸಲು ಅವನ ಅನ್ನ ತಿನ್ನುತ್ತಿದ್ದ ಮುಸಲ್ಮಾನನೇ ಆಗಿದ್ದ ಮೀರ್‌ಸಾದಕನಿದ್ದ. ಅಪ್ಪಟ ಹಿಂದೂವಾಗಿದ್ದ ಗಾಂಧಿಯ ಹಿಂದೆ ಇನ್ನೊಬ್ಬ ಅಪ್ಪಟ ಹಿಂದೂ ಗೋಡ್ಸೆಯಿದ್ದ. ತಮ್ಮದೇ ಜಾತಿ, ಮತ, ಧರ್ಮಗಳ ಈ ಮಂದಿಗೆ ಇವು ಯಾವುವೂ ಮೋಸಗಾರಿಕೆಗೆ ಅಡ್ಡಿಬರಲಿಲ್ಲ. ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲುಗಂಬಕ್ಕೇರಿಸಿದ ನ್ಯಾಯಾಧೀಶರು, ನೇಣಿಗರು ಭಾರತೀಯರೇ ಆಗಿದ್ದರು ಎಂಬುದನ್ನು ದಾಖಲೆಗಳು ತಿಳಿಸುತ್ತವೆ. (ಇಂತಹ ನೂರೆಂಟು ಘಟನೆಗಳಿವೆ.) ಇವನ್ನು ಗಮನಿಸಿದರೆ ನಮಗೆ ನಾವೇ ಶತ್ರುಗಳು ಎಂಬುದು ಸ್ಪಷ್ಟವಾಗುತ್ತದೆ. ಕಬ್ಬಿಣದ ಕೊಡಲಿಗೆ ಮರದ ಕಾವಿಲ್ಲದೇ ಅದು ಮರವನ್ನು ಕಡಿಯಲಾರದು.

ಆದರೆ ಇಂತಹ ದ್ವೇಷ ಎಷ್ಟು ಕಾಲ ಇರಬೇಕು? ನಮಗೆ ಅನುಕೂಲ ವಾದಾಗ ಬೆಳೆಸಿಕೊಂಡು ಹೋಗುವುದು, ಇಲ್ಲವಾದರೆ ಮರೆಯುವುದು ಇದು ಬದುಕಿನ ಘೋರ (ಕು)ತಂತ್ರವಾಗಿದೆ. ದೇಶದ ಮೇಲೆ ದಾಳಿ ಮಾಡಿದ ಎಲ್ಲ ವಿದೇಶಿಯರನ್ನೂ ನಾವು ದ್ವೇಷಿಸುತ್ತೇವೆ- ಬಿಳಿಯರನ್ನು ಹೊರತುಪಡಿಸಿ. ನಮ್ಮನ್ನು ಗುಲಾಮಗಿರಿಗೆ ತಳ್ಳಿದ ಫ್ರೆಂಚರನ್ನು, ಡಚ್ಚರನ್ನು, ಪೋರ್ಚುಗೀಸರನ್ನು, ಬ್ರಿಟಿಷರನ್ನು ನಾವು ಈಗ ಆಪ್ತಮಿತ್ರರಂತೆ ಕಾಣುತ್ತೇವೆ. ಅವರನ್ನು ಅಪ್ಪಿಕೊಳ್ಳುತ್ತೇವೆ. ಇದು ಸರಿಯಾದ ಧೋರಣೆ. ಏಕೆಂದರೆ ಎಷ್ಟುಕಾಲ ಇತಿಹಾಸವನ್ನು ಕೆದಕಿಕೊಂಡು ಹೋಗಬಹುದು? ಹೊಸ ಉಳುಮೆಯಾಗಲೇಬೇಕು; ಅದಕ್ಕಾಗಿ ಕೇಡಿನ ಹಳತನ್ನು ಮರೆಯಬೇಕು. ಇಲ್ಲವಾದರೆ ಭಗತ್ ಸಿಂಗ್, ರಾಜಗುರು, ಸುಖದೇವ್ ಅಥವಾ ಚಂದ್ರಶೇಖರ ಆಝಾದ್, ಮದನ್ ಲಾಲ್ ಧಿಂಗ್ರ ಇಂತಹವರ ಭೂತ ಬಿಳಿಯ ಮುಖಗಳ ನೆರಳಿನಲ್ಲಿ ಪ್ರತ್ಯಕ್ಷವಾಗುವುದು ಅನಿವಾರ್ಯ. ಈಚೆಗೆ ಶಶಿತರೂರ್ ಬ್ರಿಟಿಷರು ತಾವು ಮಾಡಿದ ದುಷ್ಕೃತ್ಯಗಳಿಗೆ ಭಾರತದ ಕ್ಷಮೆಕೋರಬೇಕೆಂದರು. ಅದು ಅವಾಸ್ತವವೆಂದು ಪ್ರಾಯಃ ಅವರಿಗೂ ಗೊತ್ತಿದ್ದರೂ ಅದನ್ನೊಂದು ರಾಜಕೀಯ ತಂತ್ರವಾಗಿಯೇ ಅವರು ಹೇಳಿದರೆಂದು ಭಾವಿಸಬಹುದು.

ನಮ್ಮ ಸರಕಾರಕ್ಕಾಗಲೀ ರಾಜಕಾರಣಿಗಳಿಗಾಗಲೀ ಜನತೆಗಾಗಲೀ ಈ ದ್ವೇಷವನ್ನು ಬೆಳೆಸಬೇಕೆಂದು ಅನ್ನಿಸುವುದಿಲ್ಲ. ಇದರ ಹಿಂದೆ ಶಾಶ್ವತ ಶಾಂತಿ-ನೆಮ್ಮದಿಯ ಅಪೇಕ್ಷೆಗಿಂತಲೂ ವರ್ತಮಾನದ ಅನುಕೂಲಗಳೇ ಹೆಚ್ಚಾಗಿವೆಯಾದರೂ ನಮ್ಮ ಮಕ್ಕಳು ಹಿಂದಿನ ರಾಜ-ಮಹಾರಾಜರುಗಳಂತೆ ವಿದೇಶಿ ನೆಲದಲ್ಲಿ ಓದಬೇಕಾದರೆ ಈ ಅಪ್ಪುಗೆ ಅನಿವಾರ್ಯ. ಮೊನೆ ಮೊನ್ನೆ ನಡೆದ ಈ 44 ಮಂದಿಯ ಸಾವಿನ ಆನಂತರದ ಘಟನೆಗಳನ್ನೇ ನೆನಪಿಸಿದರೆ ಭಯಾನಕ ಕುತೂಹಲವುಂಟಾಗುತ್ತದೆ. ಪಾಕಿಸ್ತಾನದ ಪರವಾಗಿ ನಿಂತಿರುವ ಚೀನಾದ ಬಗ್ಗೆ ನಮ್ಮ ವೀರಶೂರ ರಾಷ್ಟ್ರೀಯ ನಾಯಕರು ತಪ್ಪಿಯೂ ಆಕ್ಷೇಪಿಸುತ್ತಿಲ್ಲ. ಅಝರ್ ಮಸೂದ್ ಎಂಬ ಭಯೋತ್ಪಾದಕನನ್ನು ಮತ್ತು ಅವನ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆಗೆ ಇನ್ನೂ ಸಾಧ್ಯವಾಗದಿದ್ದರೆ ಅದಕ್ಕೆ ಚೀನಾ ಕಾರಣವೇ ಹೊರತು ಪಾಕಿಸ್ತಾನವಲ್ಲ ಎಂಬ ಕಹಿಸತ್ಯವನ್ನು ನಮ್ಮ ಘನ ರಾಜಕಾರಣಿಗಳು ತಮ್ಮದೇ ಗುಪ್ತ ಕಾರಣಗಳಿಗಾಗಿ ಮುಚ್ಚಿಟ್ಟಿದ್ದಾರೆ.

(ಅರುಣಾಚಲ ಪ್ರದೇಶಕ್ಕೆ ಪ್ರಧಾನಿಯ ಇತ್ತೀಚೆಗಿನ ಭೇಟಿಯನ್ನು ಚೀನಾವು ಬಹಿರಂಗವಾಗಿ ಆಕ್ಷೇಪಿಸಿತ್ತು.) ಯಾವತ್ತಿದ್ದರೂ ಪಾಕಿಸ್ತಾನಕ್ಕಿಂತಲೂ ಚೀನಾವೇ ಭಾರತಕ್ಕೆ ಶತ್ರು ಎಂದು ಜಾರ್ಜ್ ಫೆನಾರ್ಂಡಿಸ್ ಹೇಳುತ್ತಿದ್ದುದನ್ನು ಯಾರೂ ನೆನಪಿಸುತ್ತಿಲ್ಲ. ಅಷ್ಟೇ ಅಲ್ಲ; ಅಮೆರಿಕವು ಈ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದೆ. ಯಾವ ನೆರವನ್ನು ಬೇಕಾದರೂ ನೀಡಲು ಬದ್ಧವಾಗಿದೆ. ಸ್ವರಕ್ಷಣೆಗಾಗಿ ಇನ್ನೊಂದು ರಾಷ್ಟ್ರದ ಮೇಲೆ ದಾಳಿಮಾಡುವ ಭಾರತದ ಹಕ್ಕನ್ನು ಎತ್ತಿಹಿಡಿದಿದೆ. ಸೌದಿ ಅರೇಬಿಯ ಭಾರತದ ಮತ್ತು ಅಮೆರಿಕದ ಮಿತ್ರ. ಅದೂ ಇದೇ ಹಾದಿಯಲ್ಲಿದೆಯೆಂದು ಅಥವಾ ಇರಬೇಕೆಂದು ನಿರೀಕ್ಷಿಸಿದರೆ ತಪ್ಪಿಲ್ಲ. ಸೌದಿ ದೊರೆ ಭಾರತಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಪ್ರಧಾನಿ ಅವರನ್ನು ಅಪ್ಪಿಕೊಂಡಿದ್ದಾರೆ. ಆದರೆ ಇಲ್ಲಿ ಬರುವ ಮೊದಲು ಈ ದೊರೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನ್ನು ಮತ್ತು ಅಲ್ಲಿ ಸುಮಾರು 20 ಬಿಲಿಯನ್ ಡಾಲರ್ ನೆರವನ್ನು ಘೋಷಿಸಿದ್ದನ್ನು ಮತ್ತು ಪಾಕಿಸ್ತಾನವು ಅಭಿವೃದ್ಧಿಯಾಗಬಲ್ಲ ರಾಷ್ಟ್ರವೆಂದು ಕೊಂಡಾಡಿದ್ದನ್ನು ಮಾತ್ರ ಸ್ವಕಾರಣಕ್ಕಾಗಿ ಮರೆತಿದ್ದಾರೆ. ಹೀಗಿರುವಾಗ ಪುಲ್ವಾಮ ಯಾವ ಪಾಠವನ್ನು ಹೇಳೀತು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top