---

ಇಂದು ದಂತ ವೈದ್ಯರ ದಿನ

ದಂತ ವೈದ್ಯರ ಬಗ್ಗೆ ಭೀತಿ ಬೇಡ

ಮಾರ್ಚ್ 6ರಂದು ದೇಶಾದ್ಯಂತ ದಂತ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ಇಂದು ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಅದೇಕೋ ದಂತ ವೈದ್ಯರ ಬಗೆಗಿನ ಭಯ ಜನ ಸಾಮಾನ್ಯರಲ್ಲಿ ಇನ್ನೂ ಉಳಿದಿದೆ. ದಂತ ವೈದ್ಯರು ಎಂದರೆ ನೋವು ಉಂಟು ಮಾಡುವವರು ಎಂಬ ಹಣೆ ಪಟ್ಟಿ ಇನ್ನೂ ಪೂರ್ತಿಯಾಗಿ ಕಳಚಿ ಕೊಂಡಿಲ್ಲ. ತಲೆ ತಲಾಂತರಗಳಿಂದ ದಂತ ವೈದ್ಯರನ್ನು ಖಳ ನಾಯಕನ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಜನಮಾನಸದಲ್ಲಿ ದಂತ ವೈದ್ಯರ ಬಗ್ಗೆ ಭೀತಿಯ ಕಲ್ಪನೆ ಇನ್ನೂ ತೊಲಗಿಲ್ಲದಿರುವುದೇ ಸೋಜಿಗ ಮತ್ತು ದೌರ್ಭಾಗ್ಯದ ಸಂಗತಿ. ಯಾವೊಬ್ಬ ವ್ಯಕ್ತಿಯೂ ನೋವಿಲ್ಲದೆ ಇನ್ನೂ ದಂತ ವೈದ್ಯರ ಬಳಿ ಬರಲು ಹಿಂದೇಟು ಹಾಕುವುದಂತೂ ಸತ್ಯ. ದಂತ ವೈದ್ಯರ ದಂತ ಕುರ್ಚಿ ಮಾತ್ರ ಇನ್ನೂ ಹೆಚ್ಚಿನವರಿಗೆ ಮುಳ್ಳಿನ ಹಾಸಿಗೆಯಾಗಿ ಉಳಿದಿರುವುದೇ ಬಹು ದೊಡ್ಡ ಜೀರ್ಣಿಸಿಕೊಳ್ಳಲಾಗದ ಸತ್ಯ.
ಹಿಂದಿನ ಕಾಲದಲ್ಲಿ ವೈಜ್ಞಾನಿಕತೆ ತಂತ್ರಜ್ಞಾನ ಮತ್ತು ಕೌಶಲ್ಯಗಳ ಕೊರತೆಯಿಂದಾಗಿ ದಂತ ವೈದ್ಯಕೀಯ ಕ್ಷೇತ್ರ ಅಂದರೆ ಜನರಲ್ಲಿ ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರ ಬಂದಿದೆ. ತಂತ್ರಜ್ಞಾನ ಮತ್ತು ವೈದ್ಯ ವಿಜ್ಞಾನದಲ್ಲಿ ಅಪಾರ ಬದಲಾವಣೆ ಉಂಟಾಗಿದೆ. ಹಾಗಾಗಿ ದಂತ ವೈದ್ಯಕೀಯ ಕ್ಷೇತ್ರ ಈಗ ಮೊದಲಿನಂತೆ ಉಳಿದಿಲ್ಲ. ದಂತ ವೈದ್ಯಕೀಯ ಆಸ್ಪತ್ರೆ ಎಂದರೆ ಯಾವುದೋ ಹೊಸ ಲೋಕಕ್ಕೆ ಎಂದಂತೆ ಭಾಸವಾಗುವ ರೀತಿಯಲ್ಲಿ ಮಾರ್ಪಾಡಾಗಿದೆ. ವಿಶಾಲವಾದ ಜಾಗ, ಮೆತ್ತನೆಯ ದೇಹದಾಕೃತಿಯ ದಂತ ಕುರ್ಚಿ, ಹವಾನಿಯಂತ್ರಿಕ ವಾತಾವರಣ, ಕಿವಿಗೊಪ್ಪುವ ಲಘು ಸಂಗೀತ...ಹಾಗೇ ಬಹಳಷ್ಟು ಬದಲಾವಣೆ ಉಂಟಾಗಿದೆ. ದಂತ ವೈದ್ಯಕೀಯ ಚಿಕಿತ್ಸೆ ಈಗ ಬರೀ ನೋವು ನಿವಾರಕ ವ್ಯವಸ್ಥೆಗಿಂತಲೂ ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಬದಲಾಗಿರುವುದು ಖಂಡಿತವಾಗಿಯೂ ಸತ್ಯ.
ದಂತ ವೈದ್ಯರ ದಿನ ಆಚರಣೆಯ ಮಹತ್ವ
1. ಬಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಜಾಗೃತಿ ಮೂಡಿಸುವ ಉದ್ದೇಶ.
2. ದಂತ ಸಂಬಂಧಿ ರೋಗಗಳಾದ ದಂತ ಕ್ಷಯ, ದಂತ ಕುಳಿ, ದಂತ ಸವೆತ, ದಂತ ಅತಿ ಸಂವೇದನೆ ಮುಂತಾದ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶ.

3. ದಂತ ಆರೋಗ್ಯ ಮತ್ತು ಬಾಯಿ ಆರೋಗ್ಯಕ್ಕೆ ಪೂರಕವಾದ ಹವ್ಯಾಸಗಳ ಬಗ್ಗೆ ಜನರಲ್ಲಿ ಒಲವು ಮೂಡಿಸುವ ಉದ್ದೇಶ.
4. ಮಕ್ಕಳಲ್ಲಿ ದಂತ ಸಂಬಂಧಿ ರೋಗಗಳನ್ನು ತಡೆಯುವ ಬಗ್ಗೆ ಮತ್ತು ಮಕ್ಕಳಲ್ಲಿ ದಂತ ರಕ್ಷಣೆಯ ಬಗ್ಗೆ ಒಲವು ಮೂಡಿಸುವ ಉದ್ದೇಶ.
5. ಮುಖ ಮನಸ್ಸಿನ ಕನ್ನಡಿ ಇದ್ದಂತೆ. ಸುಂದರವಾದ ದಂತ ಪಂಕ್ತಿಗಳಿಂದ ಕೂಡಿದ ನಗು ಮುಖದ ಅಂದವನ್ನು ಹೆಚ್ಚಿಸುತ್ತದೆ. ಜನರ ಹಲ್ಲನ್ನು ಸರಿಪಡಿಸಿ ನಗುವಿನ ಮಾದಕತೆ ಹೆಚ್ಚಿಸುವಂತೆ ಪ್ರೇರೇಪಿಸಿ ರೋಗಿಗಳ ಆತ್ಮವಿಶ್ವಾಸವನ್ನು ವೃದ್ಧಿಸುವ ಸದುದ್ದೇಶ.
6. ದಂತ ಆರೋಗ್ಯವನ್ನು ವೃದ್ಧಿಸುವ ಹವ್ಯಾಸಗಳಾದ ದಂತದಾರ ಬಳಕೆ, ದಂತ ಕುಂಚಗಳ ಸೂಕ್ತ ಬಳಕೆ, ದಂತ ಚೂರ್ಣಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲ ಉದ್ದೇಶದೊಂದಿಗೆ ದಂತ ವೈದ್ಯರ ದಿನ ಆಚರಿಸಲಾಗುತ್ತಿದೆ.
ಕೊನೆಮಾತು
ಮೊದಲೆಲ್ಲಾ ವೈದ್ಯ ವೃತ್ತಿಯನ್ನು ಪವಿತ್ರವಾದ ವೃತ್ತಿ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಬಹಳಷ್ಟು ಬದಲಾವಣೆಗಳಾದವು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಕಾಲಘಟ್ಟದಲ್ಲಿ ವೈದ್ಯಕೀಯ ವೃತ್ತಿಯಲ್ಲಿಯೂ ಬಹಳಷ್ಟು ಪರಿವರ್ತನೆಯಾಯಿತು. ಮೊದಲಿದ್ದ ವೈದ್ಯ- ರೋಗಿಯ ಸಂಬಂಧ ಈಗೀಗ ಮೊದಲಿನಂತೆ ಉಳಿದಿಲ್ಲ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರಲ್ಲಿ ರೋಗಿ ಮತ್ತು ವೈದ್ಯರ ಇಬ್ಬರ ತಪ್ಪೂಇದೆ. ಪ್ರತಿ ವೈದ್ಯ ಮತ್ತು ರೋಗಿ ತನ್ನ ಹೊಣೆಗಾರಿಕೆ, ವೃತ್ತಿ ಧರ್ಮ ಮತ್ತು ಇತಿಮಿತಿಯೊಳಗೆ ವ್ಯವಹರಿಸಿದಲ್ಲಿ ಈ ರೀತಿಯ ಸಂಘರ್ಷ ತಪ್ಪಿಸಬಹುದು. ಅದಲ್ಲ್ಲಿಯೇ ಇಬ್ಬರ ಒಳಿತು ಮತ್ತು ಸಮಾಜದ ಒಳಿತೂ ಅಡಗಿದೆ. ಸಾವು ಸಮೀಪಿಸಿದಾಗ ವೈದ್ಯ ದೇವರಾಗಿಯೂ, ಚಿಕಿತ್ಸೆ ಆರಂಭಿಸಿದಾಗ ದೇವಮಾನವನಾಗಿಯೂ, ಚಿಕಿತ್ಸೆ ಫಲಿಸಿದಾಗ ಸಾಮಾನ್ಯ ಮನುಷ್ಯನಾಗಿಯೂ, ಶುಲ್ಕ ಕೇಳಿದಾಗ ಧನದಾಹಿ ಎಂದೂ, ಚಿಕಿತ್ಸೆ ಫಲಿಸದಾಗ ಕೊಲೆಗಡುಕ ಎಂದೂ ಜನರು ವೈದ್ಯರನ್ನೂ ಹಾಡಿ ಹೊಗಳುತ್ತಾರೆ ಮತ್ತು ತೆಗಳುತ್ತಾರೆ. ಆದರೆ ಈ ಎಲ್ಲಾ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ವರ್ತಿಸಿ ವೃತ್ತಿ ಧರ್ಮವನ್ನು ಪಾಲಿಸಿ ರೋಗಿಯು ಗುಣಮುಖವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ವೈದ್ಯ. ಅಂತಹ ವೈದ್ಯ ದೇವರಾಗದಿದ್ದರೂ ಮನುಷ್ಯನಾಗುವುದಂತೂ ಖಂಡಿತ ಸತ್ಯ.

ದಂತ ವೈದ್ಯರ ದಿನದ ಸಂದೇಶ:
 ♦ ದಿನಕ್ಕೆರಡು ಬಾರಿ ಕನಿಷ್ಠ ಮೂರು ನಿಮಿಷಗಳ ಕಾಲ ಹಲ್ಲುಜ್ಜಬೇಕು.
 ♦ ದಿನಕ್ಕೊಮ್ಮೆಯಾದರೂ ದಂತದಾರ ಅಥವಾ ದಂತ ಬಳ್ಳಿ ಬಳಸಿ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸಿ
 ♦ ಕನಿಷ್ಠ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಬೇಕು. ಹಲ್ಲು ನೋವು ಬಂದಾಗ ಮಾತ್ರ ದಂತ ವೈದ್ಯರ ಭೇಟಿ ಮಾಡುವುದು ಸರಿಯಾದ ಕ್ರಮವಲ್ಲ.
 ♦ ನೀವು ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಸಮತೋಲಿತ ಮತ್ತು ಹಲ್ಲಿನ ಆರೋಗ್ಯಕ್ಕೆ ಪೂರಕವಾದ ನಾರುಯುಕ್ತ ಹಣ್ಣು ಹಂಪಲು, ಹಸಿ ತರಕಾರಿ ಯುಕ್ತ ಆಹಾರ ಸೇವಿಸಿ. ಇಂಗಾಲಯುಕ್ತ ಕೃತಕ ಪೇಯಗಳನ್ನು ತ್ಯಜಿಸಬೇಕು. ತಾಜಾ ಹಣ್ಣಿನ ರಸ, ಕಬ್ಬಿನ ಹಾಲು ಎಳನೀರು ಮುಂತಾದ ನೈಸರ್ಗಿಕ ಪೇಯಗಳನ್ನು ಸೇವಿಸಬೇಕು.
 ♦ ಎರಡು ಊಟಗಳ ನಡುವೆ ಸಿಹಿ ಪದಾರ್ಥ ಮತ್ತು ಅಂಟು ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅನಿವಾರ್ಯವಾದಲ್ಲಿ ಸೇವಿಸಿದ ಬಳಿಕ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು.
 ♦ ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಮೌತ್‌ವಾಶ್ ಬಳಸುವ ಹವ್ಯಾಸ ಮಾಡಿಕೊಳ್ಳಿ. ಕನಿಷ್ಠ ಪಕ್ಷ ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪುಹಾಕಿ. ಆ ದ್ರಾವಣದಿಂದ ಬಾಯಿ ಶುಚಿಗೊಳಿಸಬೇಕು.
 ♦ ಪ್ರತಿ ವರ್ಷದಲ್ಲಿ ಒಮ್ಮೆಯಾದರೂ ದಂತ ವೈದ್ಯರ ಬಳಿ ಹಲ್ಲು ಶುಚಿಗೊಳಿಸಬೇಕು. ಇದರಿಂದ ಬಾಯಿವಾಸನೆ, ವಸಡಿನ ಉರಿಯೂತ ಮತ್ತು ವಸಡಿನಲ್ಲಿ ರಕ್ತ ಒಸರುವುದು ನಿಯಂತ್ರಣಕ್ಕೆ ಬರುತ್ತದೆ.
 ♦ ಹಲ್ಲುನೋವು ಬಂದಾಗ ಸ್ವಯಂ ಔಷಧಿಗಾರಿಕೆ ಮಾಡಿಕೊಂಡು ನೋವು ನಿವಾರಕ ಔಷಧಿ ತೆಗೆದುಕೊಳ್ಳುವುದು ಬಹಳ ಅಪಾಯಕಾರಿ. ದಂತ ವೈದ್ಯರ ಸಲಹೆ ಅತೀ ಅಗತ್ಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top