---

ಗಾಂಧಿ ಕಗ್ಗೊಲೆ: ಕಾರಣ-ಪರಿಣಾಮ

ಅಧಿಕಾರಶಾಹಿಯ ನಿರ್ಲಕ್ಷ್ಯವೇ ಮುಂದಿನ ಆ ಘೋರ ಘಟನೆಗೆ ಕಾರಣವಾಯಿತು!

ದಿನಾಂಕ 21-1-48ರಂದು ದಿಲ್ಲಿ ಪೊಲೀಸರು ಮುಂಬೈ ಪೊಲೀಸರಿಗೆ ಅಹಮದ್ ನಗರದಲ್ಲಿ ತಪಾಸಣೆ ಮಾಡಲು ಸೂಚಿಸಿದಾಗ ಡೆಕನ್ ಗೆಸ್ಟ್ ಹೌಸ್‌ಗೆ ಹೋದಾಗ ಕರ್ಕರೆ ತಲೆಮರೆಸಿಕೊಂಡಿದ್ದ. ಮುಂಬೈಯಲ್ಲಿ ಬಡ್ಗೆಯನ್ನು ಹುಡುಕಿ ಕೊಂಡು ಹೋದಾಗ ಅವನ ‘ಶಸ್ತ್ರ ಭಂಡಾರ’ ಬಾಗಿಲು ಮುಚ್ಚಿತ್ತು. ಇನ್ನುಳಿದ ಮರಾಠಿ ಪತ್ರಿಕೆಯ ಸಂಪಾದಕನ ಪತ್ತೆ ಹಚ್ಚುವುದು ಕಷ್ಟವಾಗಿರಲಿಲ್ಲ. ಮುಂಬೈ ರಾಜ್ಯದ ವೃತ್ತಪತ್ರಿಕಾ ನೋಂದಣಿ ಕಚೇರಿಯಲ್ಲಿ ವಿಚಾರಿಸಿದ್ದರೆ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆಯ ಹೆಸರು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಚಾತುರ್ಯವೋ, ಮರವೆಯೋ ಅಂತೂ ಆ ಕಡೆ ಕೂಡಲೇ ಲಕ್ಷ ಕೊಡದಿದ್ದುದು ಮುಂದಿನ ಘೋರ ಘಟನೆಗೆ ದಾರಿ ಮಾಡಿಕೊಟ್ಟಿತು.

ಕೈಗೆ ಸಿಕ್ಕಿದ್ದ ಮದನ್‌ಲಾಲನನ್ನು ದಿಲ್ಲಿ ಪೊಲೀಸರು ದಿನಾಂಕ 22 ಮತ್ತು 23ರಂದು ತೀಕ್ಷ್ಣ ವಿಚಾರಣೆಗೆ ಗುರಿಪಡಿಸಿದ್ದರು. ಅವನು ಗಾಂಧೀ ಹತ್ಯೆಯ ಪಿತೂರಿಯನ್ನು ಆಮೂಲಾಗ್ರವಾಗಿ ಒಂದಿಷ್ಟನ್ನೂ ಬಿಡದೆ ಹೇಳಿದ್ದ. ಅವನ ಆ ಹೇಳಿಕೆ ಬೆರಳಚ್ಚಿನಲ್ಲಿ 54 ಪುಟಗಳಷ್ಟು ದೀರ್ಘವಾಗಿತ್ತು. ಪಿತೂರಿಯಲ್ಲಿ ಭಾಗಿಗಳಾಗಿದ್ದ ಈ ಏಳು ಪಾತ್ರಧಾರಿಗಳ ಪೂರ್ವಾಪರಗಳು, ಅವರಿಗೂ ಆರೆಸ್ಸೆಸ್‌ಗೂ, ಹಿಂದೂ ಮಹಾಸಭೆಗೂ, ಸಾವರ್ಕರ್‌ರಿಗೂ ಅವರಿಗೂ ಇದ್ದ ನಿಕಟ ಸಂಪರ್ಕ, ಅದರಲ್ಲೂ ಪಿತೂರಿಯ ಕೊನೆಯ ಹಂತದಲ್ಲಿ ಸಾವರ್ಕರ್‌ರ ಸಮ್ಮತಿ, ಸಹಾಯ, ಆಶೀರ್ವಾದ ಇದ್ದುದರ ಸಂಪೂರ್ಣ ಮಾಹಿತಿ ಲಭ್ಯವಾಗಿತ್ತು. ದಿನಾಂಕ 24-1-1948ರ ರಾತ್ರಿ 11:30 ಗಂಟೆಗೆ ಆ ಹೇಳಿಕೆಯನ್ನು ಮದನ್‌ಲಾಲ್ ಮತ್ತೆ ಓದಿ ಸರಿಯಾಗಿದೆ ಎಂದು ಒಪ್ಪಿ ಸಹಿ ಮಾಡಿದ್ದ. ಆ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಪುರಾವೆಯನ್ನಾಗಿ ದಾಖಲು ಮಾಡಲು ಬಾರದೆ ಇದ್ದರೂ (ಯಾಕೆಂದರೆ, ಭಾರತೀಯ ಸಾಕ್ಷಸಂಹಿತೆ (Indian Evidence Act) ಪ್ರಕಾರ ಪೊಲೀಸರ ಮುಂದೆ ಕೊಟ್ಟ ಯಾವ ಹೇಳಿಕೆಯನ್ನೂ ನ್ಯಾಯಾಲಯ ಅಂಗೀಕರಿಸತಕ್ಕದ್ದಲ್ಲ) ಪೊಲೀಸರು ಅಪರಾಧ ತನಿಖೆಯಲ್ಲಿ ಧಾರಾಳವಾಗಿ ಉಪಯೋಗಿಸಿಕೊಳ್ಳಬಹುದಾಗಿತ್ತು. ಹಾಗೆ ಉಪಯೋಗಿಸಿಕೊಂಡು ಪಿತೂರಿಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದೇ ಗಾಂಧೀಜಿ ಹತ್ಯೆಯ ದುರಂತ!
ಮದನ್‌ಲಾಲ್ ಮೊದಲ ದಿನವೇ ಕೊಟ್ಟ ಅಲ್ಪಸ್ವಲ್ಪ ಸುದ್ದಿಯ ಪ್ರಕಾರ ಉಳಿದ ಪಿತೂರಿಗಾರರು ಮುಂಬೈ ರಾಜ್ಯದಲ್ಲಿಯೇ ಇದ್ದಾರೆಂದು ಸ್ಪಷ್ಟವಾಗಿತ್ತು. ಮುಂಬೈ ರಾಜ್ಯದಲ್ಲಿ ಖೇರ್ ಮಂತ್ರಿಮಂಡಲದಲ್ಲಿ ಮೊರಾರ್ಜಿ ದೇಸಾಯಿ ಗೃಹಮಂತ್ರಿ ಆಗಿದ್ದರು. ಮದನ್‌ಲಾಲ್ ಉಳಿದ ಸಹಪಿತೂರಿಗಾರರ ಶೋಧಕ್ಕೆ ಜೆಮ್‌ಷೆಡ್ ನಗರವಾಲಾ ಎಂಬ ಪೊಲೀಸ್ ಡೆಪ್ಯುಟಿ ಕಮಿಷನರ್‌ಅನ್ನು ನೇಮಕ ಮಾಡಿದ್ದರು. ಅದಕ್ಕೊಂದು ಕಾರಣವಿತ್ತು. ಹಿಂದೂ ಅನ್ನು ನೇಮಿಸಿದ್ದರೆ ಗಾಂಧಿ ಹತ್ಯೆ ಮಾಡಿದವರ ಬಗ್ಗೆ ಪಕ್ಷಪಾತ- ಅವನು ಮಾಡಿದ ಕೃತ್ಯದ ಬಗ್ಗೆ ಗುಪ್ತ ಸಹಾನುಭೂತಿ ಇದ್ದರೂ ಇರಬಹುದೆಂಬ ಸಂದೇಹ ಬರುವ ಸಂಭವವಿತ್ತು. ಮುಸಲ್ಮಾನರನ್ನೇನಾದರೂ ನೇಮಿಸಿದ್ದರೆ ಮುಸ್ಲಿಮರ ರಕ್ಷಣೆಗಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿದ್ದ ಗಾಂಧಿ ಹತ್ಯೆ ಪ್ರಯತ್ನ ಮಾಡಿದವರ ಬಗ್ಗೆ ಉಗ್ರಕ್ರಮ ಕೈಗೊಳ್ಳುವ ಸಂಶಯ. ಹಿಂದೂ ಮುಸ್ಲಿಂ ಅಲ್ಲದೆ ಈ ಪಾರ್ಸಿ ನಗರವಾಲಾನನ್ನು ಉದ್ದೇಶಪಟ್ಟು ತಪಾಸಣೆಗೆ ನೇಮಿಸಲಾಗಿತ್ತು. ಅವನು ಸಮರ್ಥನೂ ಕೂಡ.
ಜನವರಿ 12ನೇ ತಾರೀಕುಮೊರಾರ್ಜಿ ದೇಸಾಯಿಗೆ ಒಂದು ವರ್ತಮಾನ ಸಿಕ್ಕಿತ್ತು. ಅಹಮದ್ ನಗರದಲ್ಲಿರುವ ಡೆಕನ್ ಗೆಸ್ಟ್ ಹೌಸ್‌ನ ಒಂದು ಕೊಠಡಿಯಲ್ಲಿ ಕೆಲವು ಅಕ್ರಮ ಆಯುಧಗಳನ್ನು ಕರ್ಕರೆ ಸಂಗ್ರಹಿಸಿದ್ದನೆಂದು ಗೊತ್ತಾಗಿ ಆತನನ್ನು ಏಕೆ ಅರೆಸ್ಟ್ ಮಾಡಲಿಲ್ಲವೆಂದು ಮೊರಾರ್ಜಿ ಅಹಮದ್ ನಗರ ಪೊಲೀಸ್ ಅಧಿಕಾರಿಗಳನ್ನು ಕೇಳಿದ್ದರು. ಆ ಆದೇಶ ಮುಂಬೈಯಿಂದ ಅಹಮದ್ ನಗರಕ್ಕೆ ತಲುಪಲು ಏಳು ದಿನ ( 19-1-48ರ ತನಕ) ಹಿಡಿಯಿತು. ಅವನ ಮೇಲೆ ಅರೆಸ್ಟ್ ವಾರೆಂಟ್ ಹೊರಡಿಸಲು ಮತ್ತೆ ಐದು ದಿನ (24-1-48) ಹಿಡಿದಿತ್ತು. ಈ ದೇಶದ ಅಧಿಕಾರಶಾಹಿಯ ಕೆಂಪು ಪಟ್ಟಿಯ ವಿಳಂಬ ನೀತಿಯ ಹೆಣಭಾರ ಎಂಥ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇದು ಭೀಕರ ನಿದರ್ಶನ.
ದಿನಾಂಕ 21-1-48ರಂದು ದಿಲ್ಲಿ ಪೊಲೀಸರು ಮುಂಬೈ ಪೊಲೀಸರಿಗೆ ಅಹಮದ್ ನಗರದಲ್ಲಿ ತಪಾಸಣೆ ಮಾಡಲು ಸೂಚಿಸಿದಾಗ ಡೆಕನ್ ಗೆಸ್ಟ್ ಹೌಸ್‌ಗೆ ಹೋದಾಗ ಕರ್ಕರೆ ತಲೆಮರೆಸಿಕೊಂಡಿದ್ದ. ಮುಂಬೈಯಲ್ಲಿ ಬಡ್ಗೆಯನ್ನು ಹುಡುಕಿ ಕೊಂಡು ಹೋದಾಗ ಅವನ ‘ಶಸ್ತ್ರ ಭಂಡಾರ’ ಬಾಗಿಲು ಮುಚ್ಚಿತ್ತು. ಇನ್ನುಳಿದ ಮರಾಠಿ ಪತ್ರಿಕೆಯ ಸಂಪಾದಕನ ಪತ್ತೆ ಹಚ್ಚುವುದು ಕಷ್ಟವಾಗಿರಲಿಲ್ಲ. ಮುಂಬೈ ರಾಜ್ಯದ ವೃತ್ತಪತ್ರಿಕಾ ನೋಂದಣಿ ಕಚೆೇರಿಯಲ್ಲಿ ವಿಚಾರಿಸಿದ್ದರೆ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಪೆಯ ಹೆಸರು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಚಾತುರ್ಯವೋ, ಮರವೆಯೋ ಅಂತೂ ಆ ಕಡೆ ಕೂಡಲೇ ಲಕ್ಷ ಕೊಡದಿದ್ದುದು ಮುಂದಿನ ಘೋರ ಘಟನೆಗೆ ದಾರಿ ಮಾಡಿಕೊಟ್ಟಿತು.


ಮದನಲಾಲ ದಿಲ್ಲಿಗೆ ಹೊರಡುವ ಮುಂಚೆ ಮುಂಬೈಯಲ್ಲಿ ಸಾವರ್ಕರ್‌ರನ್ನು ಕಂಡಿದ್ದನೆಂಬ ವರ್ತಮಾನ ಹಿಡಿದು ಸಾವರ್ಕರ್‌ರನ್ನು ಅರೆಸ್ಟ್ ಮಾಡಲು ನಗರವಾಲಾ ಮೊರಾರ್ಜಿ ದೇಸಾಯಿ ಅವರ ಅಪ್ಪಣೆ ಕೇಳಿದ. ಮೊರಾರ್ಜಿ: ‘‘ನಿನಗೇನು ಹುಚ್ಚೇ! ಮಹಾರಾಷ್ಟ್ರ ಬೆಂಕಿ ಹತ್ತಿ ಉರಿದೀತು’’ ಎಂದು ಅವನನ್ನು ತಾನು ಕೈಗೊಳ್ಳಬೇಕೆಂದಿದ್ದ ಕೃತ್ಯದಿಂದ ನಿವಾರಿಸಿದ್ದರು. ಆ ದಿಕ್ಕಿನಲ್ಲಿ ಮುಂದುವರಿಯುವುದನ್ನು ನಗರವಾಲಾ ಕೈಬಿಟ್ಟ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಬೈ ಸಿಐಡಿಯ ಆಪ್ತ ಗೂಢಚಾರರಾದ 150 ಜನರನ್ನು ಸಾವರ್ಕರ್‌ರ ಮನೆಯ ಸುತ್ತಮುತ್ತ ಕಣ್ಗಾವಲು ಹಾಕಿದ. ಆ 150 ಜನ ಪೊಲೀಸರಲ್ಲ. ಮುಂಬೈ ಬೀದಿಯ ಭಿಕ್ಷುಕರು, ಕುಂಟರು, ಕುರುಡರಂತೆ ನಟಿಸುವ ಗುಪ್ತ ವರದಿಗಾರರು. ಅಲ್ಲದೆ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರಂಥ ವೇಷಧಾರಿಗಳು, ಮುಂಬೈ ನಗರದ ಮಾರುಕಟ್ಟೆಗಳಲ್ಲಿ, ರೈಲು ನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿದ್ದು ಪೊಲೀಸರಿಗೆ ಗುಟ್ಟಾಗಿ ವರ್ತಮಾನ ಒದಗಿಸುವ ಚಾಣಾಕ್ಷ ಗೂಢಚಾರರು ಅವರು. ಆ ಗೂಢಚಾರರಿಂದ ಬ್ರಿಟಿಷರ ಕಾಲದಿಂದಲೂ ಸರಕಾರಕ್ಕೆ ಬೇಕಿದ್ದ ಯಾವ ವ್ಯಕ್ತಿಯೂ ತಪ್ಪಿಸಿಕೊಂಡಿರಲಿಲ್ಲ. ಅವರು ಪಿತೂರಿಗಾರರನ್ನು ಗೊತ್ತುಹಚ್ಚುವರೆಂಬ ನಂಬಿಕೆ ನಗರವಾಲಾಗೆ.
  ಪ್ರಾರಂಭದಲ್ಲಿ ದಿಲ್ಲಿಯಲ್ಲಿ ತಪಾಸಣೆ ಕೈಗೊಂಡಿದ್ದ ಮೆಹ್ರಾರಿಂದ ದಿಲ್ಲಿ ಪೊಲೀಸ್ ಕಮಿಷನರ್ ಆಗಿದ್ದ ಡಿ.ಜೆ. ಸಂಜೀವಿ ಎಂಬ ಅಧಿಕಾರಿ ಮುಂದಿನ ತಪಾಸಣೆಯನ್ನು ಕೈಗೆತ್ತಿಕೊಂಡಿದ್ದರು. ದಿಲ್ಲಿಯಿಂದ ಮುಂಬೈಗೆ ಸಂಜೀವಿ ಇಬ್ಬರು ಪೊಲೀಸ್ ಅಧಿಕಾರಿಯನ್ನು ಕಳಿಸಿದ್ದರು. ಆದರೆ ಮದನ್‌ಲಾಲ್ ಕೊಟ್ಟ 54 ಪುಟಗಳ ದೀರ್ಘ ಹೇಳಿಕೆಯ ಒಂದು ಪ್ರತಿಯನ್ನು ನಗರವಾಲಾನಿಗೆ ಕಳುಹಿಸಿರಲಿಲ್ಲ. ಆ ಹೇಳಿಕೆಯಲ್ಲಿ ಗಾಂಧಿ ಕೊಲೆಯ ಪಿತೂರಿಯ ಪ್ರತಿಯೊಂದು ವಿವರವೂ ಇತ್ತು. ಆದರೆ ದಿಲ್ಲಿ ಮೆರಿನಾ ಹೋಟೆಲ್ 40ನೇ ಕೊಠಡಿಯಲ್ಲಿದ್ದ ಆ ‘ದೇಶಪಾಂಡೆ’ ಅಗಸನಿಗೆ ಕೊಟ್ಟಿದ್ದ ಅಂಗಿಯ ಕತ್ತುಪಟ್ಟಿಯ ಒಳಗಡೆ ‘ಎನ್.ವಿ.ಜಿ.’ (ನಾಥೂರಾಮ್ ವಿನಾಯಕ ಗೋಡ್ಸೆ) ಎಂಬ ಧೋಬಿ ಗುರುತಿತ್ತು! ಈ ವಿಚಾರಗಳನ್ನು ಮುಂಬೈಯ ಪೊಲೀಸರಿಗೆ ಕಳಿಸಿದ್ದರೆ ನಗರವಾಲಾ ಪಿತೂರಿಗಾರರನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳುತ್ತಿದ್ದನೇನೊ?. ಬಹುಶ: ಸಂಜೀವಿ, ಪಿತೂರಿಗಾರರು ಮತ್ತೆ ಹತ್ಯೆಗೆ ಪ್ರಯತ್ನಿಸಬಹುದೆಂದು ಬಗೆಯಲಿಲ್ಲವೇನೊ.
ಆದರೆ ದಿಲ್ಲಿಯಿಂದ ಪರಾರಿ ಆಗಿದ್ದವರು ಅಷ್ಟು ಸುಲಭವಾಗಿ ತಮ್ಮ ದುಷ್ಕೃತ್ಯವನ್ನು ಬಿಡುವವರಲ್ಲ. ಗೋಡ್ಸೆ ಸಹೋದರರು, ಆಪ್ಟೆ, ಕರ್ಕರೆ ತಲೆತಪ್ಪಿಸಿಕೊಂಡು ಥಾಣೆ ರೈಲು ನಿಲ್ದಾಣದ ಕೊನೆಯಲ್ಲಿ ಮಬ್ಬುಗತ್ತೆಲೆಯಲ್ಲಿ ಕುಳಿತು ಮಸಲತ್ತು ಮಾಡುತ್ತಿದ್ದರು. ಈ ‘ಪವಿತ್ರ ಕೆಲಸ’ ಹಿಂಡು ಜನರು ಕೂಡಿ ಮಾಡುವುದಲ್ಲ. ಒಬ್ಬನೇ ಒಂದೇ ಆಯುಧದಿಂದ, ಒಂದೇ ಹೊಡೆತದಿಂದ ಪೂರೈಸುವುದೇ ಯಶಸ್ವಿ ಮಾರ್ಗ ಎಂದು ಗೋಡ್ಸೆ ಸೂಚಿಸಿದ.
ಅಲ್ಲಿ ನಾಥೂರಾಮ್ ಹೇಳಿದ: ‘‘ದಿಲ್ಲಿಯಲ್ಲಿ ಸೋತುಹೋದದ್ದು ಏಳು ಜನರಿದ್ದುದರಿಂದ. ಒಬ್ಬಿಬ್ಬರಿಂದಲೇ ಈ ಕೆಲಸ ಈಡೇರಬೇಕು. ಏನೇ ಅಪಾಯವಿದ್ದರೂ ಒಬ್ಬನೇ ಮಾಡಿ ಮುಗಿಸಬೇಕು. ನಾನು ಸಿದ್ಧನಿದ್ದೇನೆ. ಪ್ರಾಣ ತ್ಯಾಗವನ್ನು ಮತ್ತೊಬ್ಬರು ಇನ್ನೊಬ್ಬರ ಮೇಲೆ ಒತ್ತಾಯ ಮಾಡಲಾರರು. ನನ್ನ ಸಹಾಯಕ್ಕೆ ಇಬ್ಬರು ಬೇಕು. ಆಪ್ಟೆ, ಕರ್ಕರೆ ಇಬ್ಬರು ಸಾಕು.’’ ಕರ್ಕರೆ ಒಪ್ಪಿದ. ‘‘ನೀನು ಕೂಡಲೇ ದಿಲ್ಲಿಗೆ ಹೊರಡು. ನಮಗಾಗಿ ಹಳೆ ದಿಲ್ಲಿ ರೈಲು ನಿಲ್ದಾಣದ ಕುಡಿಯುವ ನೀರಿನ ಕೊಳಾಯಿ (ನಲ್ಲಿ)ಯ ಬಳಿ ದಿನವೂ ನಾವು ಬರುವವರೆಗೆ ಕಾದಿರು. ಆಪ್ಟೆ ಮತ್ತು ನಾನು ದಿಲ್ಲಿಗೆ ಬರುತ್ತೇವೆ.’’ ‘‘ಅಂತೂ ಪೊಲೀಸರು ನಮ್ಮನ್ನು ಹಿಡಿಯುವುದಕ್ಕೆ ಮುಂಚೆ ನಾವು ಗಾಂಧಿಯನ್ನು ಹೊಡೆಯಬೇಕು’’ ನಾಥೂರಾಮ್ ದೃಢವಾಗಿ ಪ್ರತಿಜ್ಞೆ ಮಾಡುವಂತೆ ಹೇಳಿದ. ಆ ಪ್ರತಿಜ್ಞೆಯನ್ನು ಈಡೇರಿಸಲು ಬೇಕಾದ ಆಯುಧ ಗುಂಡು ಹೊಡೆದು ಒಂದೇ ಏಟಿಗೆ ಪ್ರಾಣ ತೆಗೆಯುವ ಪ್ರಬಲವಾದ ಪಿಸ್ತೂಲು ಎಲ್ಲಿ ಸಿಕ್ಕೀತು. ಇದು ಅವನ ಎದುರಿಸಲಾಗದ ಸಮಸ್ಯೆ. ದಿಲ್ಲಿಯಿಂದ ತಪ್ಪಿಸಿಕೊಂಡು ಹೋದವರು ‘ಹಿಂದೂ ರಾಷ್ಟ್ರ’ ಪತ್ರಿಕಾ ಕಚೇರಿಗೆ ಹೋಗಲಿಲ್ಲ. ಪುಣೆ, ಮುಂಬೈಗಳಲ್ಲಿ ಅಕ್ರಮ ಶಸ್ತ್ರ ಮಾರುವವರನ್ನು ಕಂಡರು. ಎಲ್ಲೆಲ್ಲಿಯೂ ಸಿಗಲಿಲ್ಲ. ಮತ್ತೆ ದಿಲ್ಲಿಯ ಗಲ್ಲಿ ಗಲ್ಲಿಗಳಲ್ಲಿ. ಮಂದಿರಗಳಲ್ಲಿ, ಶಿಖ್ಖರ ಪ್ರಾರ್ಥನಾ ಮಂದಿರ ಗುರುದ್ವಾರಗಳಲ್ಲಿ, ಪಾಕಿಸ್ತಾನದಿಂದ ಓಡಿಬಂದಿದ್ದ ನಿರಾಶ್ರಿತರ ಆಶ್ರಯ ತಾಣಗಳಲ್ಲಿ ಹುಡುಕಿದರು. ಎಲ್ಲಿಯೂ ಅವರಿಗೆ ಬೇಕಾದ ಪಿಸ್ತೂಲು ಸಿಗಲಿಲ್ಲ. ಕೊನೆಗೆ ಗ್ವಾಲಿಯರ್‌ನ ಸೀತಾಫಲಾದಿ ಪಂಡಿತ ಡಾ. ಪರಚುರೆಯೇ ಗತಿಯೆಂದು ಜನವರಿ 27ರ ಮಧ್ಯರಾತ್ರಿ ಅವನ ಮನೆ ಬಾಗಿಲು ತಟ್ಟಿದರು. ಯಾರೋ ಅಸ್ತಮಾ ರೋಗಿ ಇರಬಹುದೆಂದು ವೈದ್ಯ ಬಾಗಿಲು ತೆಗೆದ. ನೋಡುತ್ತಾನೆ- ನಾಥೂರಾಮ್ ಗೋಡ್ಸೆ ಮತ್ತು ಆಪ್ಟೆ! ಆ ಕತ್ತಲಲ್ಲಿ ನಾಥೂರಾಮ್ ಗೋಡ್ಸೆ ತಾನು ಬಂದಿದ್ದ ಉದ್ದೇಶವನ್ನು ಪಿಸುಗುಟ್ಟಿದ. ‘‘ಸದ್ಯ ಮಲಗಿಕೊಳ್ಳಿ. ಬೆಳಗಾದ ಮೇಲೆ ನೋಡೋಣ’’ ಎಂದ ಪರಚುರೆ. ಬೆಳಕು ಹರಿಯಿತು. ಕೊನೆಗೂ ಪರಚುರೆ ಒಂದು ವಿದೇಶೀ ಪಿಸ್ತೂಲನ್ನು ಕೊಟ್ಟ. ಒಂದು ಕರಿಬಟ್ಟೆ ಕೈ ಚೀಲದಲ್ಲಿ ಆ ಪಿಸ್ತೂಲನ್ನು ಬಚ್ಚಿಟ್ಟುಕೊಂಡು ಹಂತಕರಿಬ್ಬರು ದಿಲ್ಲಿಗೆ ಧಾವಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top