---

ಅಮೆರಿಕದ ಕಾರ್ಪೊರೇಟ್ ರಾಕ್ಷಸರು ಅಲ್ಲಿನ ಕೌಟುಂಬಿಕ ಕೃಷಿ ಭೂಮಿಗಳನ್ನು ನುಂಗಿದ್ದು ಹೀಗೆ...

‘‘ಹೂಡಿಕೆದಾರರು ಭೂಮಿ ಖರೀದಿಸುತ್ತಾರೆ, ಅವರು ಟ್ರಾಕ್ಟರ್‌ಗಳ ಮೂಲಕ ಬೇಸಾಯವನ್ನೂ ಕಂಪ್ಯೂಟರೀಕರಣಗೊಳಿಸಿ ನಡೆಸುತ್ತಾರೆ. ಯಾರೋ ಪುಟ್ಟ ಆಫೀಸಿನಲ್ಲಿ ಕುಳಿತು, ಕಂಪ್ಯೂಟರಿನಲ್ಲಿ ಯೋಜನೆ ತಯಾರಿಸಿ, ಅದನ್ನು ಅನುಷ್ಠಾನ ಮಾಡುತ್ತಾರೆ. ಈಗ ವಂಶಪಾರಂಪರ್ಯದಿಂದ ಬಂದ ಕೃಷಿ-ಪಶುಸಂಗೋಪನೆಯ ಜ್ಞಾನ ಕೂಡ ಮರೆಯಾಗುತ್ತಿದೆ. ಒಂದಿಡೀ ತಲೆಮಾರು ಕೊನೆಯಾಗುತ್ತಿದೆ. ಹಾಗಾಗಿ ಈಗ ನಾವೇನು ಉಣ್ಣಬೇಕೆಂಬುದನ್ನೂ ಕಾರ್ಪೊರೇಟ್‌ಗಳೇ ನಿರ್ಧರಿಸುತ್ತಾರೆ. ನಮ್ಮ ಮುಂದಿನ ಜನಾಂಗಕ್ಕೆ ಅದೇ ಗತಿ’’ ಎನ್ನುತ್ತಾರೆ ಕಾಲ್ಬಾ.

19ನೇ ಶತಮಾನದ ಆದಿಯಲ್ಲಿ ಅಯೋವಾದ ಗ್ರಾಮೀಣ ಭಾಗಗಳಲ್ಲಿ ಜನ ನೆಲೆಗೊಂಡು ಬದುಕು ಆರಂಭಿಸಿದಾಗ ಪ್ರತಿಯೊಬ್ಬರೂ 160 ಎಕರೆಗಳ ಗಾತ್ರದ ಭೂಮಿ ಪಡೆದಿದ್ದರು. ಒಂದು ಚದರ ಮೈಲಿಯಲ್ಲಿ ನಾಲ್ಕು ಹೊಲಗಳಿದ್ದವು, ಅವುಗಳ ಅಂಚಿನಲ್ಲಿ ನೆಟ್ಟಾನೇರ ರಸ್ತೆಗಳು ಹಾದುಹೋಗಿ ಮೇಲಿನಿಂದ ನೋಡಿದರೆ ಚದುರಂಗದ ಬೋರ್ಡಿನಂತೆ ಕಾಣಿಸುತ್ತಿತ್ತು.
 ಪ್ರತೀ ಚೌಕದಲ್ಲೂ ಕುಟುಂಬಗಳು ಹಲವಾರು ತಲೆಮಾರು ಹಂದಿ, ಜಾನುವಾರು, ಓಟ್ಸ್ ಬೆಳೆಯುತ್ತಾ ಕುಟುಂಬವನ್ನು ಸಲಹುತ್ತಾ ಬದುಕುತ್ತಿದ್ದರು, ಎಳೆಯರು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾರ್ಬ್ ಕಾಲ್ಬಾ ಸುಮಾರು 47ವರ್ಷ ಹಿಂದೆ, ಜಿಮ್ ಜೊತೆ ಮದುವೆಯಾಗಿ ತನ್ನ ಕುಟುಂಬ ತೊರೆದು ಪತಿಯೊಂದಿಗೆ ಹೊಸ ಹೊಲಕ್ಕೆ ಹೊರಟುನಿಂತಾಗ ಕಂಡಿದ್ದ ಕನಸು ಇಂತಹದೇ.
‘‘ಮದುವೆ ಆದ ಆರಂಭದಲ್ಲಿ ನಮ್ಮ ಜೊತೆ ಜಾನುವಾರುಗಳಿದ್ದವು, ಹಂದಿ ಸಾಕಣೆ ಮಾಡುತ್ತಿದ್ದೆವು, ಗೋಧಿ, ಕಾಳು-ಬೇಳೆ, ಹುಲ್ಲು, ಓಟ್ಸ್ ಬೆಳೆಯುತ್ತಿದ್ದೆವು. ನಮ್ಮ ಆಸುಪಾಸಿನವರೂ ಎಲ್ಲ ಇದೇ ರೀತಿ ಇದ್ದರು’’ ಎನ್ನುತ್ತಾರೆ ಆಕೆ.
ಈಗ ಐವತ್ತು ವರ್ಷಗಳ ಬಳಿಕ ದಕ್ಷಿಣ-ಪಶ್ಚಿಮ ಅಯೋವಾದ ಡೆಕ್ಸ್ಟರ್‌ನಲ್ಲಿ ಆ ವಿಶಾಲ ಭೂಮಿಯಲ್ಲಿ ಆಗಿರುವ ವಿನಾಶಕ್ಕೆ ಆಕೆ ಸಾಕ್ಷಿಯಾಗುತ್ತಿದ್ದಾರೆ. ಬಾರ್ಬ್ ಮತ್ತು ಜಿಮ್ ಅಲ್ಲಿ ಕೃಷಿ ನಂಬಿಕೊಂಡು ಬದುಕುತ್ತಿರುವ ಕೊನೆಯ ಕುಟುಂಬವಾಗಿದ್ದು, ಉಳಿದೆಲ್ಲ ಕುಟುಂಬಗಳು ಕೃಷಿ ಬೆಲೆ ಇಳಿಕೆ ಮತ್ತು ಹೆಚ್ಚುತ್ತಿರುವ ಕಾರ್ಪೊರೇಟ್ ಕೃಷಿಯ ಹೊಡೆತಕ್ಕೆ ಸಿಲುಕಿ, ತರಗೆಲೆಯಂತೆ ಹಾರಿಹೋಗಿದ್ದಾರೆ.ಅದರೊಂದಿಗೆ ಕಾರ್ಪೊರೇಷನ್‌ಗಳು ಕೃಷಿಯಲ್ಲಿ ಅಪಾರ ಲಾಭ ಗಳಿಸುತ್ತಿದ್ದು ಸಾಮಾನ್ಯ ಕುಟುಂಬಗಳ ಭೂಹಿಡುವಳಿಯ ಪ್ರಮಾಣ ಒಂದೇ ಸಮನೆ ಇಳಿಯುತ್ತಿದೆ. ಗ್ರಾಮೀಣ ಸಮುದಾಯಗಳು ಅಲ್ಲಿಂದ ಗುಳೆ ಏಳುತ್ತಿವೆ.
 ಕಾಲ್ಬಾ ಕುಟುಂಬ ಇನ್ನೂ ಕೃಷಿಗೆ ಆತುಕೊಂಡಿದೆ, ಆದರೆ ಜಾನುವಾರು ಸಾಕುವುದು ಮತ್ತು ಮಿಶ್ರ ಬೆಳೆಗಳನ್ನು ಬಿತ್ತುವ -ಬೆಳೆಯುವ ಸಂಪ್ರದಾಯ ಕೈಬಿಟ್ಟು, ಗೋಧಿ ಮತ್ತು ಸೋಯಾಬೀನ್ ಗಳನ್ನು ಪಶು ಆಹಾರವಾಗಿ ಬೆಳೆದು ಕಾರ್ಪೊರೇಟ್ ಖರೀದಿಗಾರರಿಗೆ ಮಾರುತ್ತಿದ್ದಾರೆ. ಏಕೆಂದರೆ ಈಗ ದುಡ್ಡು ಬರುವುದು ಅದರಲ್ಲಿ ಮಾತ್ರ. ಅಯೋವಾದ ಬಹುತೇಕ ಭಾಗ ಈಗ ಕಾರ್ಪೊರೇಟ್ ಕೃಷಿಗೆ ಒಳಪಟ್ಟಿದ್ದು, ಜಾನುವಾರುಗಳನ್ನು ವಿಶಾಲ ಯಾಂತ್ರೀಕೃತ ಶೆಡ್‌ಗಳಲ್ಲಿಟ್ಟು ಸಾಕಲಾಗುತ್ತಿದೆ.
ಕಾಲ್ಬಾ ಹಿರಿಯರು ಹಿಂದಿನ ಐದು ತಲೆಮಾರುಗಳಿಂದಲೂ ಕೃಷಿಕರು. ಆದರೆ, ತಾವೇ ಕೊನೆ ಅನ್ನುತ್ತಿದ್ದಾರೆ. ತನ್ನ ಕೃಷಿಭೂಮಿಯಲ್ಲಿ ನಮ್ಮನ್ನು ತಿರುಗಾಡಿಸಿದ ಆಕೆ ಒಂದೊಂದೇ ಭೂಮಿಯನ್ನು ಪರಿಚಯಿಸುತ್ತಿದ್ದರು. ‘‘ಇದು ಶೂಸ್ಮಿತ್ ಅವರಿಗೆ ಸೇರಿದ್ದು, ಎರಡು ವರ್ಷ ಹಿಂದೆ ಇಲ್ಲಿ ಜಾನುವಾರು, ಹಂದಿ, ಮೇವಿನ ಹುಲ್ಲು ಎಲ್ಲ ಇತ್ತು’’
 ಈಗ ಈ ಭೂಮಿಯನ್ನು ಬಾಡಿಗೆಗೆ ನೀಡಲಾಗಿದೆ. ಎಲ್ಲೆಡೆ ಗೋಧಿ ಬೆಳೆಯಲಾಗುತ್ತಿದೆ. ಅಲ್ಲಿಂದ ಸ್ವಲ್ಪಮುಂದೆ ವಾಟ್ಸ್ ಅವರ ಕುಟುಂಬದ ಕೃಷಿ ಭೂಮಿ ಖಾಲಿ ಬಿದ್ದಿದೆ. ತೋಟದ ಮನೆಯ ಮಾಡು ಕುಸಿಯುತ್ತಿದೆ. ವಿಲಿಯಮ್ಸೆಸ್‌ಗೆ ಸೇರಿದ ಭೂಮಿಯಲ್ಲಿ ಹಳೆಯ ಕೃಷಿಭೂಮಿಯ ಕೆಲವು ಅವಶೇಷಗಳು, ಕೋಳಿ ಗೂಡು ಕೆಲವು ಯಂತ್ರಗಳ ಅವಶೇಷಗಳು ಇವೆ. ಉಳಿದ ಭೂಮಿಯಲ್ಲೆಲ್ಲ ಗೋಧಿ ಮತ್ತು ಸೋಯಾಬೀನ್ ಹಾಕಲಾಗಿದೆ. ವಾಲ್ನಟ್ ಅವೆನ್ಯೂ ದಲ್ಲಿರುವ ಡೆನ್ನಿಂಗ್ ಹೌಸನ್ನು ಹೊಸಬರು ಖರೀದಿಸಿ, ಸಂಪೂರ್ಣ ನೆಲಸಮ ಮಾಡಿ ಬೇರೇನೋ ಯೋಜನೆ ಹಾಕಿಕೊಂಡಿದ್ದಾರೆ.


ಅಮೆರಿಕದ ಪಶ್ಚಿಮ ಮಧ್ಯಭಾಗದಲ್ಲಿಡೀ ಎಲ್ಲಿ ಕಂಡರೂ ಇದೇ ಕಥೆ. ಬ್ರೆಕ್ಸಿಟ್ ಒಪ್ಪಂದದ ಬಳಿಕ ಬ್ರಿಟಿಷ್ ಮಾರುಕಟ್ಟೆಗೆ ವ್ಯಾಪಕವಾಗಿ ಪ್ರವೇಶ ಪಡೆಯುವ ಉದ್ದೇಶ ಈ ಇಡೀ ಬೆಳವಣಿಗೆಯ ಹಿಂದಿರುವ ಹುನ್ನಾರ. ಕಳೆದ ವಾರ ಬ್ರಿಟನ್‌ನಲ್ಲಿ ಅಮೆರಿಕದ ರಾಯಭಾರಿ ಆಗಿರುವ ವುಡಿ ಜಾನ್ಸನ್ ಅವರು ಇಂಗ್ಲೆಂಡ್ ಅಮೆರಿಕದ ಕೃಷಿ ವಿಧಾನ ಅಳವಡಿಸಿಕೊಳ್ಳಲು ಕರೆ ನೀಡಿ, ಕೋಳಿಮಾಂಸ ಕ್ಲೋರಿನ್ ನಲ್ಲಿ ತೊಳೆಯುವುದನ್ನು ಟೀಕಿಸುವುದರ ಹಿಂದೆ ಬೇರೆ ಉದ್ದೇಶ ಇದೆ ಎಂದಿದ್ದರು.
 ಅವರ ಈ ಸಂದೇಶಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ‘ಗ್ಲೋಬಲ್ ಜಸ್ಟೀಸ್’ನ ನಿಕ್ ಡಿಯರ್ಡನ್, ‘‘ಇಲ್ಲಿ ಅದು ಪ್ರಾಣಿಗಳ ಕಯಾಣದ ಸಂಗತಿ. ಬ್ರಿಟಿಷ್ ರೈತರು ಅಮೆರಿಕದ ಆಮದಿನ ವಿರುದ್ಧ ಸ್ಪರ್ಧಿಸಬಯಸಿದರೆ, ಅವರು ತಮ್ಮ ಗುಣಮಟ್ಟ ತಗ್ಗಿಸಿಕೊಳ್ಳಬೇಕು ಇಲ್ಲವೇ ಹೊರಗುಳಿಯಬೇಕಾಗುತ್ತದೆ’’ ಎಂದಿದ್ದಾರೆ. ಪಶ್ಚಿಮ ಅಯೋವಾದ ಸಾಕ್ ಕೌಂಟಿಯಲ್ಲಿ ಕೃಷಿ ಭೂಮಿ ಹೊಂದಿರುವ ರೋಸ್ ಮೇರಿ ಪಾರ್ಟ್ರಿಜ್‌ಗೆ ಇದೇನೂ ಅಚ್ಚರಿ ತರುತ್ತಿಲ್ಲ. ಆಕೆ ಅಯೋವಾದ ಕೃಷಿ ಕುಟುಂಬದಲ್ಲಿ ಹುಟ್ಟಿದಾಕೆ 70ರ ದಶಕದಲ್ಲಿ ಹಂದಿ ಸಾಕಣೆ, ಕೃಷಿ ಆರಂಭಿಸಿದ್ದರು.
 ‘‘ಕಳೆದ 20 ವರ್ಷಗಳಲ್ಲಿ, ನಾನಿರುವಲ್ಲಿ ಕಾರ್ಪೊರೇಟ್‌ಗಳು ಬಂದು ವೈಯಕ್ತಿಕ ಹಂದಿಸಾಕಣೆ ಸಂಪೂರ್ಣ ನಿಂತುಹೋಗಿದೆ. ನಾವು ಗುಡ್ಡದ ತಲೆಯಲ್ಲಿರುವುದು. ಅಲ್ಲಿಂದ ಏಳು ಕುಟುಂಬಗಳು ಕಾಣಿಸುತ್ತಿದ್ದವು. ಅವರೊಟ್ಟಿಗೆ ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅವರು ಯಾರೂ ಈಗಿಲ್ಲ. ನಮ್ಮ ಕೌಂಟಿಯಲ್ಲಿ 11 ಸಣ್ಣ ಊರುಗಳಿದ್ದವು, ಅವು ಎಲ್ಲವೂ ಈಗ ಬದಲಾಗಿ ಕಣ್ಮರೆ ಆಗಿವೆ. ನಾವು ಹಿಂದಿಗಿಂತ ಬಡವರಾಗಿದ್ದೇವೆ, ನಮ್ಮ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹೊಡೆತ ತಿಂದಿವೆ’’ ಎನ್ನುತ್ತಾರೆ ಪಾರ್ಟ್ರಿಜ್.
 ಕಾಫೋಸ್ ಎಂದು ಕರೆಯಲಾಗುವ ಸಾಂದ್ರೀಕ್ರತ ಸಮಗ್ರ ಪಶು ಸಾಕಣಾ ಕೇಂದ್ರಗಳು ಕೈಗಾರಿಕಾ ಸ್ವರೂಪ ಪಡೆದು ಬಂದಮೇಲೆ ಈ ಕುಸಿತ ಸಂಭವಿಸಿದ್ದು. ಅಲ್ಲಿ ಹಂದಿ, ದನ, ಕೋಳಿಗಳನ್ನು ಸಾಲುಗಳಲ್ಲಿ ಇಡುಕಿರಿದು ಸಾಕುತ್ತಾರೆ. ಅವು ಅರೆ-ಸ್ವಯಂಚಾಲಿತ ಘಟಕಗಳಾಗಿದ್ದು, ಕಂಪ್ಯೂಟರ್ ಮೂಲಕ ಆಹಾರ ನೀಡಿಕೆ, ವೀಡಿಯೊ ಮೂಲಕ ನಿಗಾ ನಡೆಯುತ್ತಿದೆ. ಸಿಬ್ಬಂದಿ ಅಪರೂಪಕ್ಕೆ ಭೇಟಿ ನೀಡುತ್ತಾರೆ.
‘‘ಹೀಗೆ ನನ್ನ ಸುತ್ತ 40,000 ಹಂದಿಗಳು ಇವೆ’’ ಎನ್ನುತ್ತಾರೆ ಪಾರ್ಟ್ರಿಜ್.
ಅಮೆರಿಕದಲ್ಲಿರುವ 20 ಲಕ್ಷ ಫಾರಂಗಳಲ್ಲಿ ಕಾಫೋಸ್‌ದು ಬಹಳ ಸಣ್ಣ ಪ್ರಮಾಣ, ಆದರೆ ಪ್ರಾಣಿ ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿರುವ ಅವರು ಮಧ್ಯ ಪಶ್ಚಿಮ ಅಯೋವಾದಲ್ಲಿ ಕೃಷಿ ಉತ್ಪಾದನೆಯ ಸ್ವರೂಪದ ಮೇಲೆ ಪ್ರಭಾವ ಬೀರುತ್ತಾರೆ.
ಒಂದು ಲೆಕ್ಕಾಚಾರದ ಪ್ರಕಾರ, ಅಮೆರಿಕದಲ್ಲಿ ಸುಮಾರು ಎರಡೂ ವರೆ ಲಕ್ಷ ಫ್ಯಾಕ್ಟರಿ ಸ್ವರೂಪದ ಫಾರ್ಮ್‌ಗಳಿವೆ. 1930ರಲ್ಲಿ ಹಂದಿಗಳ ಕಸಾಯಿಖಾನೆ ಯಾಂತ್ರೀಕರಣ ಗೊಂಡಾಗ ಆರಂಭಗೊಂಡ ಪ್ರಕ್ರಿಯೆ ಇದು. 1950ರ ಹೊತ್ತಿಗಾಗಲೇ ಕೋಳಿಫಾರಂಗಳಲ್ಲಿ ಕೋಳಿಗಳನ್ನು ಇಡುಕಿರಿಸಿ ಸಾಕಲಾರಂಭಿಸಲಾಗಿತ್ತು.
1970ರಲ್ಲಿ ಅಮೆರಿಕದ ಕೃಷಿ ಕಾರ್ಯದರ್ಶಿ ಅರ್ಲ್ ಬಜ್ ಅವರು, ‘‘ಗಾತ್ರದಲ್ಲಿ ಬೆಳೆಯಿರಿ ಇಲ್ಲವೇ ತೊಲಗಿ’’ ಎಂಬ ಮಂತ್ರದೊಂದಿಗೆ ದೊಡ್ಡ ಗಾತ್ರದ ಕೃಷಿಗೆ ನಾಂದಿ ಹಾಡಿದ್ದರು. ಗೋಧಿ ಮತ್ತು ಸೋಯಾಬೀನ್ ಉತ್ಪಾದನೆಗೆ ರೈತರು ಈ ಪರಿಣಾಮಕಾರಿ ವಿಧಾನ ಅಳವಡಿಸಿಕೊಳ್ಳಬೇಕೆಂಬ ಆಕಾಂಕ್ಷೆ ಅವರದಾಗಿತ್ತು. ಆಗ ಹಲವು ಮಂದಿ ರೈತರು ಸಾಲ ಪಡೆದು ಕೃಷಿ ಭೂಮಿ ಮತ್ತು ಹೊಸ ಯಂತ್ರೋಪಕರಣಗಳಲ್ಲಿ ಹೂಡಿಕೆ ಮಾಡಿದ್ದರು.
ಒಂದು ದಶಕದ ಬಳಿಕ ಅತಿಯಾದ ಉತ್ಪಾದನೆಯ ಕಾರಣದಿಂದಾಗಿ ಕೃಷಿ ಸಂಕಟಕ್ಕೀಡಾಯಿತು, ಸೋವಿಯತ್ ಯೂನಿಯನ್‌ಗೆ ಬೇಳೆಕಾಳು ಕಳಿಸಲು ನಿಷೇಧ ಮತ್ತು ಅತಿಯಾದ ಬೆಲೆಗಳ ಕಾರಣದಿಂದಾಗಿ ರೈತರ ಕೃಷಿ ಭೂಮಿಗಳ ನಿರ್ವಹಣಾ ವೆಚ್ಚ ಸಾಲದ ಹೊರೆಗಳು ಏರತೊಡಗಿದವು. ಭೂಮಿಯ ಬೆಲೆ ಕುಸಿಯಿತು, ಸಾಲ ಕಟ್ಟಲಾಗಲಿಲ್ಲ. ‘‘ಸ್ವತಂತ್ರ ಹಿಡುವಳಿದಾರರಿಗೆ ಬಿದ್ದ ಪ್ರತೀ ಹೊಡೆತವೂ ದೊಡ್ಡ ಕಾರ್ಪೊರೇಷನ್ ಗಳಿಗೆ ಒಳನುಗ್ಗಲು ವಿಪುಲ ಅವಕಾಶ ಕಲ್ಪಿಸಿತು.’’ ಎನ್ನುತ್ತಾರೆ ಪಾರ್ಟ್ರಿಜ್.
1990ರಲ್ಲಿ ಅಮೆರಿಕದ ಕೃಷಿ ಉತ್ಪಾದನೆಯ ಅರ್ಧ ಬಾಗ ಸಣ್ಣ ಮತ್ತು ಮಧ್ಯಮ ರೈತರದ್ದಾಗಿದ್ದರೆ, ಈಗ ಅವರ ಪ್ರಮಾಣ ಕಾಲುಭಾಗಕ್ಕಿಂತಲೂ ಕಡಿಮೆ.
 ಮಧ್ಯಮ ಗಾತ್ರದ ಕೃಷಿ ಕುಟುಂಬಗಳು ಹಿಂಜರಿಕೆ ಕಂಡಂತೆಲ್ಲ, ಅವರ ಬೆಂಬಲದಿಂದ ನಡೆಯುತ್ತಿದ್ದ ವಾಣಿಜ್ಯ ವ್ಯವಹಾರಗಳೂ ಸ್ಥಗಿತಗೊಂಡವು. ಕಾರ್ಪೊರೇಷನ್‌ಗಳು ನೇರವಾಗಿ ಉತ್ಪಾದಕರು ಅಥವಾ ಸಗಟು ವ್ಯಾಪಾರಸ್ಥರನ್ನೇ ಸಂಪರ್ಕಿಸಿದ್ದರಿಂದಾಗಿ ಸ್ಥಳೀಯ ಬೀಜ ದಾಸ್ತಾನು-ಮಾರಾಟಗಾರರು, ಕೃಷಿ ಉಪಕರಣ ಸರಬರಾಜುದಾರರು ಅಂಗಡಿ ಮುಚ್ಚಬೇಕಾಯಿತು. ಸ್ಥಳೀಯ ಪಶುವೈದ್ಯರಿಗೂ ಬೇಡಿಕೆ ತಗ್ಗಿತು. ಅವರು ಜಾಗ ಖಾಲಿ ಮಾಡತೊಡಗಿದಾಗ, ಊರಿನ ಜನ-ವಹಿವಾಟೂ ಕಡಿಮೆ ಯಾಯಿತು. ಅಂಗಡಿಗಳು, ಹೊಟೇಲುಗಳು, ದವಾಖಾನೆಗಳು ಮುಚ್ಚಿಕೊಂಡವು. ವೈದ್ಯಕೀಯ ಚಿಕಿತ್ಸೆಗೂ ಒಂದುಗಂಟೆಗಳ ಕಾಲ ವಾಹನ ಚಲಾಯಿಸಿಕೊಂಡು ಹೋಗಬೇಕಾದ ಸ್ಥಿತಿ ಬಂತು.
ಕಾರ್ಪೊರೇಟ್ ಕೃಷಿ ‘‘ಗದ್ದೆಯಿಂದ ಮಾಂಸದ ತನಕ’’ ಯಾವ ಪರಿ ಆಪೋಶನ ತೆಗೆದುಕೊಂಡಿತೆಂದರೆ, ಬ್ರೀಡಿಂಗ್‌ನ ಜೆನೆಟಿಕ್ಸ್ ನಿಂದ ಆರಂಭಿಸಿ ಅಮೆರಿಕ ಅಥವಾ ಮಧ್ಯಪೂರ್ವದ ಸಗಟು ಮಾರುಕಟ್ಟೆಯ ತನಕ ಎಲ್ಲವೂ ಅವರದ್ದಾಯಿತು. ಫ್ಯಾಕ್ಟರಿ ಫಾರ್ಮ್ ಗಳು ಹೆಚ್ಚಿದಂತೆ, ರೈತರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾಂಸ ಒದಗಿಸುತ್ತಿದ್ದ ಸಣ್ಣ ಕಸಾಯಿಖಾನೆಗಳು ನಂದಿಹೋದವು. ಆ ಜಾಗದಲ್ಲಿ ಕಾರ್ಪೊರೇಷನ್‌ಗಳು ಬಂದು ಕುಳಿತು ಪಶು ಆಹಾರ ಮಾರುತ್ತಿದ್ದ ಕಾಲ್ಬಾ ಅಂತಹವರಿಗೂ ಚೌಕಾಸಿ ಬೆಲೆ ನೀಡತೊಡಗಿದವು.


‘‘ಹೆಚ್ಚುವರಿ ದೂರಕ್ಕೆ ಲಾಗ್ವಾಡು ಹಾಕಿಕೊಂಡು ಮಾರುವುದಕ್ಕೆ ಹೋಲಿಸಿದರೆ ಕಾರ್ಪೊರೇಟ್‌ಗಳು ಸ್ವಲ್ಪಹೆಚ್ಚು ಕೊಡುತ್ತಿದ್ದುದರಿಂದ ಇಲ್ಲೇ ಕೊಡುತ್ತಿದ್ದೆವು. ಆದರೆ ನಾವು ಕೊಡುವ ಪ್ರಮಾಣ ಕಡಿಮೆ ಇದ್ದುದರಿಂದ ನಮಗೇನೂ ಉಳಿಯುತ್ತಿರಲಿಲ್ಲ,’’ ಎನ್ನುತ್ತಾರೆ ಕಾಲ್ಬಾ.
ಕಾಫೋಸ್‌ನ ಖರೀದಿ ಸಾಮರ್ಥ್ಯ ಯಾವ ರೀತಿಯದ್ದೆಂದರೆ ರೈತರು ಏನು ಬೆಳೆಯಬೇಕೆಂಬುದನ್ನೂ ಅದೇ ನಿರ್ಧರಿಸುತ್ತದೆ. ಜಾನುವಾರು ಸಾಕಣೆ ಕೈಬಿಟ್ಟದ್ದರಿಂದಾಗಿ ಕಾಲ್ಬಾ ಕುಟುಂಬ ಅನಿವಾರ್ಯವಾಗಿ ಪಶು ಆಹಾರ ಎಂದು ಗೋಧಿ ಮತ್ತು ಸೋಯಾಬೀನ್ ಬೆಳೆಯಬೇಕಾಗುತ್ತಿದೆ. ಅದು ಪಶು ಆಹಾರಕ್ಕೆ ಅಲ್ಲ ಎಂದಾದಲ್ಲಿ ಇಥೆನಾಲ್ ಉತ್ಪಾದನೆಗೆ ಮಾರಾಟ ಆಗುತ್ತಿದೆ.
ಅಯೋವಾ ಮಾತ್ರವಲ್ಲ, ದಕ್ಷಿಣದ ಮಿಸ್ಸೋರಿಯಲ್ಲಿ 1985ರಲ್ಲಿ 23,000 ಹಂದಿ ಸಾಕಣೆಗಾರರಿದ್ದಿದ್ದರೆ, ಈಗ ಅವರ ಸಂಖ್ಯೆ 2,000ಕ್ಕೆ ಇಳಿದಿದೆ. ಸ್ವತಂತ್ರ ಜಾನುವಾರು ಸಾಕಣೆ ಶೇ. 40 ಕಡಿಮೆ ಆಗಿದೆ.
1980ರ ಕೃಷಿ ಸಂಕಟದ ವೇಳೆ ಸ್ಥಾಪನೆಗೊಂಡಿದ್ದ ಮಿಸ್ಸೋರಿ ಗ್ರಾಮೀಣ ಕೃಷಿ ಸಂಕಟ ಸಹಾಯ ಕೇಂದ್ರದ ಟಿಮ್ ಗಿಬ್ಬನ್ಸ್ ಹೇಳುವ ಪ್ರಕಾರ, ಆರ್ಥಿಕ ಆಘಾತಗಳು ಮತ್ತು ಅದಕ್ಕೆ ಪೂರಕವಾದ ಸರಕಾರಿ ನೀತಿಗಳು ಒಟ್ಟಾಗಿ, ‘‘ಜಾನುವಾರು ಸಾಕಣೆ ಇಂಡಸ್ಟ್ರಿ ಏಕಸ್ವಾಮ್ಯಕ್ಕೆ ಹೋಗಿದೆ, ಕೆಲವೇ ಬಹುರಾಷ್ಟ್ರೀಯ ಕಾರ್ಪೊರೇಶನ್‌ಗಳು ಇದನ್ನು ನಿಯಂತ್ರಿಸುತ್ತಿವೆ.’’
 ‘‘ಪ್ರಾಣಿಗಳ ಜೆನೆಟಿಕ್ಸ್‌ನಿಂದ ಆರಂಭಿಸಿ ಕಿರಾಣಿ ಅಂಗಡಿ ತನಕ ಎಲ್ಲ ಅವರದೇ ಆಗಿದೆ. ಅವರು ವಿಧಿಸುವ ದರವೂ ಈಗ ಉತ್ಪಾದನೆಯ ವೆಚ್ಚ ಆಧರಿಸಿದ್ದಲ್ಲ, ಬೇಡಿಕೆ-ಪೂರೈಕೆ ಆಧರಿಸಿದ್ದೂ ಅಲ್ಲ. ಯಾಕೆಂದರೆ, ಲಾಭ ಹೇಗೆ ಗಳಿಸಬೇಕೆಂದು ಅವರಿಗೆ ಗೊತ್ತಿದೆ. ಸರಕಾರದ ಬೆಂಬಲ ಪಡೆದು, ಕೆಲವನ್ನು ಉದ್ದೇಶಪೂರ್ವಕವಾಗಿ ಅತಿಯಾಗಿ ಬೆಳೆಸಿ, ಬೆಲೆ ತಗ್ಗುವಂತೆ ಮಾಡಲಾಗುತ್ತದೆ. ಅದರಿಂದಾಗಿ ಅವರಿಗೆ ಸ್ಪರ್ಧಿಗಳು ಹುಟ್ಟಿಕೊಳ್ಳುವುದಿಲ್ಲ. ಅವರು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಗಳಿಸಿಕೊಳ್ಳುತ್ತಾರೆ.’’ ಎಂದು ಗಿಬ್ಬನ್ಸ್ ವಿವರಿಸುತ್ತಾರೆ.
‘‘ದೀರ್ಘಕಾಲಿಕವಾಗಿ, ಇದರಿಂದ ಜನ ಸಮುದಾಯದ ಆರ್ಥಿಕ ಶಕ್ತಿ ಕುಂದುತ್ತದೆ. ಗ್ರಾಮೀಣ ಮುಖ್ಯರಸ್ತೆಗಳಲ್ಲಿ ಈಗ ಇದರ ಪರಿಣಾಮ ಕಾಣಬಹುದು. ಅಂಗಡಿಗಳು ಬಾಗಿಲು ಮುಚ್ಚಿ, ಆರ್ಥಿಕ ಅವಕಾಶಗಳು ಇಲ್ಲದಾಗುತ್ತಿವೆ.’’
ಸರಕಾರದ ಬೆಂಬಲದಲ್ಲಿ ಕಡಿಮೆ ಬಡ್ಡಿಯ ಸಾಲಪಡೆದು ಕಾಫೋಸ್‌ಗಳ ಮೂಲಕ ಅತಿಉತ್ಪಾದನೆ ಮಾಡಿಸಲಾಗುತ್ತಿದೆ ಮತ್ತು ಆ ಮೂಲಕ ಮಾರುಕಟ್ಟೆಯಲ್ಲಿ ಆಟ ಆಡಲಾಗುತ್ತಿದೆ. ಈ ಸಾಲ ಸರಕಾರದ ಗ್ಯಾರಂಟಿ ಹೊಂದಿರುವುದರಿಂದ, ಬೆಲೆ ಸ್ಥಿರಗೊಳಿಸಲು ಸರಕಾರ ಅದನ್ನು ಖರೀದಿಸುತ್ತದೆ ಎಂಬುದೂ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಇಡಿಯ ವ್ಯವಸ್ಥೆಯನ್ನು ಫ್ಯಾಕ್ಟರಿ ಫಾರ್ಮ್ ಕಾರ್ಪೊರೇಷನ್ ಗಳಿಗೆ, ಅದರ ಶೇರುದಾರರಿಗೆ ಅನುಕೂಲವಾಗುವಂತೆ ರೂಪಿಸಲಾಗಿದ್ದು, ಇದರ ಹಾನಿಗೆ ಫಲಾನುಭವಿಗಳು- ರೈತ ಕುಟುಂಬ, ಜನಸಾಮಾನ್ಯರು, ಪರಿಸರ, ನಮ್ಮ ಆಹಾರ ವ್ಯವಸ್ಥೆ’’ ಎಂದವರು ಹೇಳುತ್ತಾರೆ.
‘‘ಆಟದ ನಿಯಮಗಳೂ ಅವರದೇ. ಯಾಕೆಂದರೆ ಡೆಮಾಕ್ರಸಿ ಅವರ ನಿಯಂತ್ರಣದಲ್ಲಿದೆ. ಇದು ಸುಯೋಜಿತ. ನಮ್ಮ ಗುಂಡಿ ನಾವೇ ತೋಡಿಕೊಳ್ಳುತ್ತಿದ್ದೇವೆ. ಅನಿವಾರ್ಯತೆ ಅಥವಾ ಸ್ಪರ್ಧೆ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಆದರೆ ಇಲ್ಲಿ ಸ್ಪರ್ಧೆ ಇಲ್ಲ. ಇಲ್ಲಿ ಸ್ಪರ್ಧೆಯನ್ನು ಹತ್ತಿಕ್ಕುವುದೇ ಆಟ.’’
ಅಮೆರಿಕದಲ್ಲಿ ಅಂದಾಜು ಏಳು ಕೋಟಿ ಹಂದಿಗಳಿವೆ. ಅವು ಆಹಾರಕ್ಕಾಗಿ ಬಳಕೆ ಆಗುತ್ತವೆ. ಆದರೆ ಅವುಗಳಲ್ಲಿ ಹತ್ತರಲ್ಲಿ ಒಂದು ಮಾತ್ರ ಸಹಜ. ಉಳಿದೆಲ್ಲ ಕಾಫೋಸ್‌ಗಳದ್ದೇ. ದೇಶದ ಅತಿದೊಡ್ಡ ಹಂದಿ ಸಾಕಣೆ ಕಂಪೆನಿ ವರ್ಜೀನಿಯಾದ ಸ್ಮಿತ್ ಫೀಲ್ಡ್ ಫುಡ್ಸ್, ಹತ್ತು ಲಕ್ಷ ಹಂದಿಗಳನ್ನು ಸಾಕುತ್ತದೆ (ಅವರ ಮೆಕ್ಸಿಕೊ, ಪೂರ್ವ ಯುರೋಪ್ ಸಂಸ್ಥೆಗಳನ್ನು ಸೇರಿಸಿದರೆ ಇನ್ನೂ ಹೆಚ್ಚು). ಅಯೋವಾ ಸೆಲೆಕ್ಟ್ ಫಾರ್ಮ್ಸ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾಫೋಸ್‌ಗಳಲ್ಲಿ ಒಂದಾಗಿದ್ದು, ಅಯೋವಾದ ಉದ್ದಗಲಕ್ಕೂ 800 ಹಂದಿ ಫಾರ್ಮ್‌ಗಳನ್ನು ಹೊಂದಿದೆ.
‘‘ಜನಸಮುದಾಯಗಳಿಗೆ ಈ ಬೃಹತ್ ಗಾತ್ರದ ವ್ಯವಹಾರದಲ್ಲಿ ಹೆಚ್ಚೇನೂ ಲಾಭ ಇಲ್ಲ. ಅಲ್ಲಿನ ಕಾರ್ಮಿಕರಾಗಿ ದುಡಿಯುತ್ತಿರುವ ಸ್ಥಳೀಯ ಸಮುದಾಯದವರಿಗೆ ಒಳ್ಳೆಯ ಸಂಬಳ ಇಲ್ಲ. ಅದರಲ್ಲೂ ಹೊರಗಿನವರೇ ಹೆಚ್ಚು’’ ಎನ್ನುತ್ತಾರೆ, ಅಯೋವಾ ಸೆಲೆಕ್ಟ್‌ನಲ್ಲಿ ಕಾರ್ಮಿಕರಾಗಿದ್ದ ನಿಕ್‌ಷುಟ್. ಅವರು ಅಲ್ಲಿ ಚಾಲಕರಾಗಿ, ಹಂದಿಗಳ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಓವರ್ ಟೈಮ್ ಇಲ್ಲದೆ ದಿನಕ್ಕೆ 12 ತಾಸು ದುಡಿತಕ್ಕೆ ಅವರಿಗೆ ಸಿಗುತ್ತಿದ್ದುದು ವರ್ಷಕ್ಕೆ 23,000 ಡಾಲರ್.
 ‘‘ಕಂಪೆನಿಗಳು ಉದ್ಯೋಗ ನೀಡಿರುವುದಾಗಿ ಹೇಳುತ್ತಿವೆ, ಆದರೆ ಬರುವವರು ಯಾರು? ಸ್ಥಳೀಯ ಸಮುದಾಯದವರಲ್ಲ.’’


 ಷುಟ್ ವಾಸ ಇರುವುದು ವಿಲಿಯಂಸ್‌ನಲ್ಲಿ. ಮಧ್ಯ ಅಯೋವಾದ ಪುಟ್ಟ ಪಟ್ಟಣ ಅದು. ಅಲ್ಲಿ ಹಲವಾರು ಕಾಫೋಸ್‌ಗಳಿದ್ದು, ಜನ ಹೊಸ ಉದ್ದೇಶಿತ ಕಾಫೋಸ್ ಒಂದು ಬರದಂತೆ ಹೋರಾಟ ನಡೆಸುತ್ತಿದ್ದಾರೆ. ಏಕೆಂದರೆ, ಅವು ಪರಿಸರ ಹಾಳು ಮಾಡಿ, ಭೂಮಿಯ ಮೌಲ್ಯವನ್ನೂ ತಗ್ಗಿಸುತ್ತಿವೆ. ಗಾಳಿಗೆ, ಹಂದಿಗೊಬ್ಬರದ ವಾಸನೆ ನಗರವೆಲ್ಲಾ ಹಬ್ಬುತ್ತಿದೆ.
 ನಿಕ್ ಷುಟ್ ಹೋಗುತ್ತಿದ್ದ ಹೈಸ್ಕೂಲ್ ಮುಚ್ಚಿದೆ. ಆತನ ಮಗಳು ಅಲ್ಲಿ ಕಲಿತದ್ದೇ ಆ ಶಾಲೆಯ ಕೊನೆಯ ವರ್ಷ. ಅಲ್ಲಿನ ಏಕೈಕ ವೈದ್ಯರೂ ಕೂಡ ಕ್ಲಿನಿಕ್ ಮುಚ್ಚಿ ಊರು ಬಿಟ್ಟಿದ್ದಾರೆ. ಷುಟ್ ತಾಯಿ ನಡೆಸುತ್ತಿದ್ದ ಹೊಟೇಲು ಮತ್ತು ಮೂರು ಕಿರಾಣಿ ಅಂಗಡಿಗಳೂ ಮುಚ್ಚಿವೆ.
 ಅಲ್ಲಿಂದ ಏಳು ಕಿಲೋಮೀಟರ್ ದೂರದ ಬ್ಲೇರ್ಸ್ ಬರ್ಗ್ ನಲ್ಲಿ ಅಂಚೆ ಕಚೇರಿ ಒಂದನ್ನುಳಿದು ಬೇರೆಲ್ಲ ಅಂಗಡಿಗಳೂ ಬಾಗಿಲೆಳೆದುಕೊಂಡಿವೆ. ಸಮೀಪದ ಹಳ್ಳಿ ವಿಲ್ಕ್‌ನಲ್ಲಿ, ಮನೆಗಳೆಲ್ಲ ಅಳಿದು ಮೂರು ಜಾನುವಾರು ಫಾರಂಗಳು ತಲೆಯೆತ್ತಿವೆ. 2010ರಿಂದೀಚೆಗೆ ಅಯೋವಾದ, ಅದರಲ್ಲೂ ಅಲ್ಲಿನ ಹಳ್ಳಿಗಳ ಜನಸಂಖ್ಯೆ ಒಂದೇ ಸಮನೆ ಇಳಿಯುತ್ತಿದೆ ಎಂದು ಸೂಚಿಸುತ್ತದೆ, ಅಮೆರಿಕದ ಜನಗಣತಿ ವರದಿ.
ವಿಲಿಯಂಸ್‌ನ ಉತ್ತರದಲ್ಲಿ ಕ್ವಾಲಿಟಿ ಇಂಜಿನಿಯರಿಂಗ್ ಎಂಬ ಕಳಪೆ ಕಾಫೋಸ್ ಇದೆ. 1988ರಲ್ಲಿ ಅಲ್ಲಿನ ಮೊಟ್ಟೆಗಳನ್ನು, ಅದು ಸಾಲ್ಮೊನೆಲ್ಲ ವೈರಾಣು ಹೊಂದಿದೆ ಎಂಬ ಕಾರಣಕ್ಕಾಗಿ ನಿಷೇಧಿಸಲಾಗಿತ್ತು. ಆ ಪ್ರಕರಣದಲ್ಲಿ 11ಮಂದಿ ತೀರಿಕೊಂಡಿದ್ದರು. 2017ರಲ್ಲಿ ಅದರ ಮಾಲಕ ಜಾಕ್ ಡೆಕೋಸ್ಟರ್ ಮತ್ತವನ ಮಗ ಪೀಟರ್ ಜೈಲಿಗೆ ಹೋದರು. ಏಕೆಂದರೆ, 2010ರಲ್ಲಿ ಮತ್ತೊಮ್ಮೆ ಸಾಲ್ಮೊನೆಲ್ಲ ವೈರಾಣು ದಾಳಿ ಆಗಿ, ಹತ್ತಾರು ಸಾವಿರ ಮಂದಿ ಅಸ್ವಸ್ಥಗೊಂಡಿದ್ದರು ಮತ್ತು ಅರ್ಧ ಬಿಲಿಯನ್ ಮೊಟ್ಟೆಗಳನ್ನು ಮಾರುಕಟ್ಟೆಯಿಂದ ಹಿಂದೆ ಕರೆಸಿ ನಾಶ ಮಾಡಬೇಕಾಗಿ ಬಂದಿತ್ತು. ಕ್ವಾಲಿಟಿ ಇಂಜಿನಿಯರಿಂಗ್ ಸಂಸ್ಥೆ ಕೃಷಿ ಇಲಾಖೆಯ ಇನ್‌ಸ್ಪೆಕ್ಟರ್‌ಗೆ ಲಂಚ ನೀಡಿ, ವಾಯಿದೆ ತೀರಿದ ಮೊಟ್ಟೆಗಳನ್ನೂ ಮಾರುಕಟ್ಟೆಗೆ ಹಾಕಿದ ಸಂಗತಿ ಬಯಲಾಗಿತ್ತು.
  ಡೆಕೋಸ್ಟರ್‌ಗೆ ಪ್ರಾಣಿಗಳ ಮೇಲೆ ಕ್ರೌರ್ಯ, ಸುಳ್ಳು ದಾಖಲೆಗಳು, ಗುತ್ತಿಗೆದಾರರಿಗೆ ವಂಚನೆ, ಪರಿಸರ ಹಾನಿಗೆಂದು ಹಲವಾರು ಲಕ್ಷ ಡಾಲರ್‌ಗಳ ದಂಡ ವಿಧಿಸಲಾಗಿತ್ತು. ಆದರೆ ಅವರ ವ್ಯವಹಾರಕ್ಕೇನೂ ಕೊರತೆ ಆಗಿರಲಿಲ್ಲ. ವಲಸೆ ಕಾರ್ಮಿಕರನ್ನು ತಂದು ಅಸುರಕ್ಷಿತ ಜಾಗದಲ್ಲಿರಿಸಿ, ಅವರಿಂದ ಕೆಲಸ ಮಾಡಿಸಲಾಗುತ್ತಿತ್ತು. ಅಲ್ಲಿನ ಮಹಿಳಾ ಕಾರ್ಮಿಕರ ಮೇಲೆ ಅತ್ಯಾಚಾರ ಮಾಡಿದ ಆಪಾದನೆಗಾಗಿ ಕಂಪೆನಿ 15 ಲಕ್ಷ ಡಾಲರ್ ದಂಡ ತೆರಬೇಕಾಗಿತ್ತು.
ಡೆಕೋಸ್ಟರ್‌ದು ವಿಕ್ಷಿಪ್ತ ಪ್ರಕರಣ. ಆದರೆ, ಅಯೋವಾ ಆಸುಪಾಸಿನಲ್ಲಿ ಈ ಕೈಗಾರಿಕೀಕರಣದ ದ್ಯೋತಕವಾಗಿ, ಹೇಗೆ ಹಣ ಮತ್ತು ಪ್ರಭಾವಗಳು ಸರಕಾರದ ಯೋಜನೆ, ನಿಯಮಗಳನ್ನೂ ತಿರುಚಿ ಬದುಕಬಲ್ಲವೆಂಬುದಕ್ಕೆ ಇದು ಸಂಕೇತವಾಗಿ ನಿಂತಿದೆ.
 ಕೃಷಿ ಕಾರ್ಪೊರೇಷನ್‌ಗಳು ರಾಜ್ಯ ಸರಕಾರಗಳ ಜೊತೆ ಲಾಬಿ ಮಾಡಲು ಕೋಟ್ಯಂತರ ಹಣ ಸುರಿಯುತ್ತಿವೆ. ಇದರಲ್ಲಿ ವಾಶಿಂಗ್ಟನ್ ದೂ ಜವಾಬ್ದಾರಿ ಇದೆ ಎನ್ನುತ್ತಾರೆ ಗಿಬ್ಬನ್ಸ್. ಅಧ್ಯಕ್ಷ ಒಬಾಮಾ ಭರವಸೆ ನೀಡಿದ್ದನ್ನು ಈಡೇರಿಸಿಲ್ಲ, ಇಲ್ಲದಿದ್ದರೆ ಸಣ್ಣ ರೈತರಿಗೆ ಅನುಕೂಲ ಆಗುತ್ತಿತ್ತು, ಈ ಕಾರಣಕ್ಕೇ ಕೊನೆಗೆ ರೈತರು ಒಬಾಮಾ ವಿರುದ್ಧ, ಟ್ರಂಪ್ ಪರ ನಿಂತರು ಎನ್ನುತ್ತಾರೆ ಗಿಬ್ಬನ್ಸ್.
ಬಾರ್ಬ್ ಕಾಲ್ಬಾ ಅವರಿಗೆ ಭವಿಷ್ಯ ಆಶಾದಾಯಕವಾಗಿ ಕಾಣುತ್ತಿಲ್ಲ. ಆಕೆಯ ಮಗ ಕೃಷಿ ಮಾಡುವ ಉದ್ದೇಶ ಹೊಂದಿಲ್ಲ. ಇನ್ನೊಂದು ತಲೆಮಾರಿಗಾದರೂ ಕೃಷಿ ಭೂಮಿ ಉಳಿದೀತೆಂಬ ಆಸೆ ಆಕೆಯದು. ಆದರೆ, ಅದನ್ನು ಅವರು ಫಾರ್ಮಿಗೆ ಬಾಡಿಗೆ ನೀಡುವ ಉದ್ದೇಶದಲ್ಲಿದ್ದಾರೆ.
 ಕಾಲ್ಬಾಗೆ ತನ್ನ ಕೃಷಿಭೂಮಿಗಿಂತ ದೊಡ್ಡ ಚಿಂತೆ ಇನ್ನೊಂದಿದೆ. ಅವರ ತಲೆಮಾರಿನ ರೈತರು ಪ್ರಾಯಸಂದು ಮರೆಗೆ ಸರಿಯುತ್ತಿದ್ದಾರೆ, ಮಕ್ಕಳು ಕೃಷಿಯಲ್ಲಿ ಆಸಕ್ತರಲ್ಲ. ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಿ ಕೃಷಿ ಮಾಡುವ ತಾಕತ್ತೂ ಅವರಿಗಿಲ್ಲ. ಜೊತೆಗೆ ಕಾರ್ಪೊರೇಷನ್ ಗಳ ಜೊತೆ ಸ್ಪರ್ಧೆಯೂ ಕಷ್ಟ.
 ‘‘ಹೂಡಿಕೆದಾರರು ಭೂಮಿ ಖರೀದಿಸುತ್ತಾರೆ, ಅವರು ಟ್ರಾಕ್ಟರ್ ಗಳ ಮೂಲಕ ಬೇಸಾಯವನ್ನೂ ಕಂಪ್ಯೂಟರೀಕರಣಗೊಳಿಸಿ ನಡೆಸುತ್ತಾರೆ. ಯಾರೋ ಪುಟ್ಟ ಆಫೀಸಿನಲ್ಲಿ ಕುಳಿತು, ಕಂಪ್ಯೂಟರಿನಲ್ಲಿ ಯೋಜನೆ ತಯಾರಿಸಿ, ಅದನ್ನು ಅನುಷ್ಠಾನ ಮಾಡುತ್ತಾರೆ. ಈಗ ವಂಶಪಾರಂಪರ್ಯದಿಂದ ಬಂದ ಕೃಷಿ-ಪಶುಸಂಗೋಪನೆಯ ಜ್ಞಾನ ಕೂಡ ಮರೆಯಾಗುತ್ತಿದೆ. ಒಂದಿಡೀ ತಲೆಮಾರು ಕೊನೆಯಾಗುತ್ತಿದೆ. ಹಾಗಾಗಿ ಈಗ ನಾವೇನು ಉಣ್ಣಬೇಕೆಂಬುದನ್ನೂ ಕಾರ್ಪೊರೇಟ್ ಗಳೇ ನಿರ್ಧರಿಸುತ್ತಾರೆ. ನಮ್ಮ ಮುಂದಿನ ಜನಾಂಗಕ್ಕೆ ಅದೇ ಗತಿ’’ ಎನ್ನುತ್ತಾರೆ ಕಾಲ್ಬಾ.
ವಿಲಿಯಂಸ್‌ನಲ್ಲಿ ಭೂಮಾಲಕರು ಕಾರ್ಮಿಕರಾಗುತ್ತಿದ್ದಾರೆ. ಇದು ಸೆರ್ಫ್‌ಗಳ ರಶ್ಯಾದ ಹಾಗಾಗಿದೆ. ನೀವು ಗದ್ದೆಯಲ್ಲಿ ನಿಮಗಾಗಿ ಅಲ್ಲ, ಅವರಿಗಾಗಿ ದುಡಿಯಬೇಕು. ನಿಮಗದು ಕೇವಲ ಸಂಬಳ ತರುವ ಉದ್ಯೋಗ, ನಿಮ್ಮ ಜವಾಬ್ದಾರಿಗಳನ್ನು ನಿರ್ಧರಿಸುವುದು ಅವರು. ಎಲ್ಲ ಅವರ ನಿಯಂತ್ರಣದಲ್ಲೇ. ಹಾಗಾಗಿ ಸಣ್ಣ ಕೃಷಿ ಭೂಮಿಗಳು ಉಳಿಯುವುದು ಸಾಧ್ಯ ಇಲ್ಲ’’ ಎನ್ನುತ್ತಾರೆ ಷುಟ್.
‘‘ನಮ್ಮ ಕಥೆ ಮುಗಿಯಿತು’’ ಎಂದು ಧ್ವನಿ ಸೇರಿಸುತ್ತಾರೆ ಕಾಲ್ಬಾ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top