ದ್ವೇಷದ ವಿಷಬೀಜ ಬಿತ್ತಿದವರಾರು...? | Vartha Bharati- ವಾರ್ತಾ ಭಾರತಿ
ಗಾಂಧಿ ಕಗ್ಗೊಲೆ ಕಾರಣ-ಪರಿಣಾಮ

ದ್ವೇಷದ ವಿಷಬೀಜ ಬಿತ್ತಿದವರಾರು...?

ಭಾಗ-30

ಭರತಖಂಡವನ್ನು ಇಬ್ಭಾಗ ಮಾಡಿದ್ದಕ್ಕೆ ಗಾಂಧೀಜಿಯೇ ಕಾರಣ ಎಂದು ಗೋಡ್ಸೆ ಗುಂಪು ಹೇಳುವಂತೆ, ಜಿನ್ನಾ ಮತ್ತು ಮುಹಮ್ಮದ್ ಇಕ್ಬಾಲರೇ ಕಾರಣ ಎಂದು ದೂಷಿಸುವ ಹಿಂದೂಗಳೂ ಇದ್ದಾರೆ. ಮುಸ್ಲಿಂ ಲೀಗ್ ರಾಜಕೀಯ ಪಕ್ಷವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದವರಲ್ಲಿ ಜಿನ್ನಾ ಅಗ್ರಗಣ್ಯರಾಗಿದ್ದರು. ಅವರನ್ನು ಹಿಂದೂ-ಮುಸ್ಲಿಂ ಏಕತೆ ರಾಯಭಾರಿ, ಕೋಮುಸೌಹಾರ್ದ, ಜಾತ್ಯತೀತ ತತ್ವದ ಹರಿಕಾರ ಎಂದು ಇಡೀ ದೇಶ ಗೌರವಿಸಿ, ಅವರ ದೇಶಪ್ರೇಮವನ್ನು ಕೊಂಡಾಡಿ, ಅವರ ಗೌರವಾರ್ಥ ಮುಂಬೈಯಲ್ಲಿ ಒಂದು ಭವ್ಯ ಭವನವನ್ನು ಕಟ್ಟಿಸಿದ ಕಾಲ ಒಂದಿತ್ತು. ಅಂಥ ನಿಸ್ಸೀಮ ದೇಶಭಕ್ತರು ಅವರು. ಜಾತ್ಯತೀತ ತತ್ವದ ರಾಜಕಾರಣಿ ಮುಸ್ಲಿಂ ಲೀಗಿನ ಅಧ್ಯಕ್ಷ ಸ್ಥಾನಕ್ಕೆ ಏರಿಸಿದವರು, ಮೂಲಭೂತವಾದಿ ಮುಸ್ಲಿಮರ ತೆಕ್ಕೆಗೆ ಅವರನ್ನು ತಳ್ಳಿದವರು ಹಿಂದೂ ಮೂಲಭೂತವಾದಿಗಳೆಂಬ ಕಟು, ವಿಷಾದನೀಯ ಸತ್ಯವನ್ನು ಕಾಣುತ್ತೇವೆ.

ಗಾಂಧಿ ಹತ್ಯೆಯಾಗಿ ಅರವತ್ತು ವರ್ಷಗಳಾಗುತ್ತ ಬಂತು.ಹಂತಕರ ವಿಚಾರಣೆಯಾಗಿ ಇಬ್ಬರು ಮರಣದಂಡನೆಯ ಶಿಕ್ಷೆಗೆ ಗುರಿಯಾಗಿ ನೇಣುಗಂಬ ಏರಿದರು. ಜೀವಾವಧಿ ಶಿಕ್ಷೆಗೆ ಒಳಗಾದವರು ಸಜೆ ತೀರಿಸಿ ಹೊರಬಂದು ಎಲ್ಲಿಯೋ ಹೇಳಹೆಸರಿಲ್ಲದೆ ಸತ್ತರು. ಮುಗಿದು ಹೋದಂತೆ ಕಾಣುವ ಈ ದುರಂತ ಕತೆಯನ್ನು ಮತ್ತೆ ನೆನಪು ಮಾಡುವ, ಮಾಯ್ದ ಗಾಯವನ್ನು ಕೆದಕುವ ಅಗತ್ಯವೇನು?
ಆದರೆ ವಾಸ್ತವವಾಗಿ ಗಾಂಧಿ ಹತ್ಯೆಯ ಕತೆ ಇನ್ನೂ ಮುಗಿದಿಲ್ಲ. ಅದರ ಕಾರಣ ಈಗಲೂ ಜೀವಂತವಾಗಿದೆ. ಬಹುಶಃ ಆಗ ಅದಕ್ಕಿದ್ದ ಕಾರಣ ಈಗಲೂ ಈ ದೇಶವನ್ನು ದಹಿಸುತ್ತದೆ. ಸ್ವತಂತ್ರ ಭಾರತಕ್ಕೆ ಬಂದೊದಗಿದ ಪ್ರಥಮ ವಿಪತ್ತು ಘನಘೋರ ಆಪತ್ತು ಗಾಂಧಿ ಹತ್ಯೆ. ಆ ದುರಂತದ ವಿಸ್ತೃತ ಆವೃತ್ತಿ ಬಾಬರಿ ಮಸೀದಿ ಧ್ವಂಸದಲ್ಲಿ ಪರ್ಯವಸಾನವಾದ ಈ ದೇಶಕ್ಕೆ ಬಂದ ದ್ವಿತೀಯ ಆಪತ್ತು. ಅಲ್ಲಿಗೇ ನಮ್ಮ ದೇಶಕ್ಕೆ ಬಡಿದಿರುವ ಶಾಪ ವಿಮೋಚನೆ ಆಗಿದೆ ಎಂದೇನೂ ಕಾಣದು. ಎಲ್ಲಿಯವರೆಗೆ ಈ ದೇಶದಲ್ಲಿ ಗಾಂಧೀಜಿ ಪ್ರತಿಪಾದಿಸಿದ ಹಿಂದೂ-ಮುಸ್ಲಿಂ ಏಕತೆ, ಕೋಮು ಸೌಹಾರ್ದ ಸ್ಥಾಪನೆ ಆಗುವುದಿಲ್ಲವೋ ಉಪನಿಷತ್ ಋಷಿವರೇಣ್ಯರು ಘೋಷಿಸಿದ: ‘ಸಹನಾವವತು, ಸಹನೌ ಭುನಕ್ತು’ ಋಷಿ ವಾಣಿ ಇಲ್ಲಿ ದಿಟವಾಗುವುದಿಲ್ಲವೋ ಅಲ್ಲಿಯವರೆಗೆ ಗಾಂಧಿ ಹತ್ಯೆಯ ಪ್ರಕರಣ ಪ್ರಸ್ತುತವೇ. ಈ ದೇಶ ಬದುಕಿ ಬಾಳಬೇಕಾದರೆ ಸರ್ವಮತಾವಲಂಬಿಗಳೆಲ್ಲ ‘ಸಹನಾವವತು’ ಆಗಲೇಬೇಕು. ಸಹಬಾಳ್ವೆಗೆ ಸಹನೆ ಅಗತ್ಯ. ಈ ದೇಶ ಆ ದಿಶೆಯಲ್ಲಿ ಮುಂದುವರಿಯುತ್ತಿದೆಯೇ? ಇಲ್ಲ. ಬದಲು ಗಾಂಧಿ ಹತ್ಯೆಯ ನಂತರ ಈ ದೇಶ ಅದರ ವಿರುದ್ಧ ದಿಕ್ಕಿನತ್ತ ಭರದಿಂದ ನುಗ್ಗುತ್ತಿದೆ. ಪರಮತ ದ್ವೇಷದ ಅಗ್ನಿ ಖಡ್ಗವನಾಂತು ಕೇಸರಿ ಪತಾಕೆಯ ಅಡಿಯಲ್ಲಿ ಮಾರಣಹೋಮದತ್ತ ಮುನ್ನುಗ್ಗುತ್ತಿದೆ! ಅದರಿಂದ ಪಾರಾಗುವುದೆಂತು?
 ಸಾವರ್ಕರ್ ನ್ಯಾಯಾಲಯದಲ್ಲಿ ತಮ್ಮ ಸುದೀರ್ಘ ಲಿಖಿತ ಹೇಳಿಕೆಯನ್ನು ಓದುವಾಗ ಈ ದೇಶ ಇಬ್ಭಾಗವಾದ ದುರ್ಘಟನೆಯ ಪ್ರಸಂಗವನ್ನು ಮಂಡಿಸಿದಾಗ ‘ಗಂಟಲು ಕಟ್ಟಿ ಮಾತು ಹೊರಡಲಿಲ್ಲ. ಕಣ್ಣೀರು ಕೆನ್ನೆಗುಂಟ ಇಳಿಯಿತು.’ ಕೆಲಹೊತ್ತು ಸುಮ್ಮನಿದ್ದು ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡರೆಂಬುದನ್ನು ಗಮನಿಸಿದ್ದೇವೆ. ದೇಶ ವಿಭಜನೆಯ ಬಗ್ಗೆ ಎಂತಹ ದೇಶಾಭಿಮಾನಿಗಳೂ ಅದರಲ್ಲೂ ಹಿಂದೂ ಮಹಾಸಭೆಯವರಿಗೆ,‘ಅತ್ಯುಗ್ರ ದೇಶಭಕ್ತ’ರಿಗೆ ಅತೀವ ದುಖಃವನ್ನುಂಟುಮಾಡಿರಲೇಬೇಕು.ಅದರಲ್ಲಿ ಸಂಶಯವೇ ಇಲ್ಲ. ಆದರೆ ಅದಕ್ಕೆ ಕಾರಣರಾರು? ಈ ಪ್ರಶ್ನೆಗೆ ಉತ್ತರವನ್ನು ಸಾವರ್ಕರ್ ಶಿಷ್ಯ ನಾಥೂರಾಮ್ ಗೋಡ್ಸೆ ನ್ಯಾಯಾಲಯದಲ್ಲಿ ತನ್ನ ಸುದೀರ್ಘ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ:
  ‘‘ವಾಸ್ತವವಾಗಿ ಗಾಂಧೀಜಿ ಬ್ರಿಟಿಷರ ಒಡೆದಾಳುವ ಧೋರಣೆಯನ್ನು ಅನುಸರಿಸುವುದರಲ್ಲಿ ಯಶಸ್ವಿಯಾದರು... ಬ್ರಿಟಿಷರ ದೇಶವನ್ನು ವಿಭಜಿಸಬೇಕೆಂಬ ಧೋರಣೆಯನ್ನು ಬೆಂಬಲಿಸಿದರು. ...ಮೂವತ್ತೆರಡು ವರ್ಷಗಳವರೆಗೆ ನನ್ನಲ್ಲಿ ತುಂಬಿಕೊಂಡಿದ್ದ ಆಕ್ರೋಶ, ಪ್ರಚೋದನೆ ಗಾಂಧೀಜಿಯ ಕೊಟ್ಟ ಕೊನೆಯ ಮುಸ್ಲಿಮರ ಪರವಾದ ಕೃತ್ಯದಿಂದ ಕೂಡಲೇ ಗಾಂಧೀಜಿಯನ್ನು ಮುಗಿಸಬೇಕೆಂಬುದಕ್ಕೆ ಮೀಟುಗೋಲಾಯಿತು.
ಹಿಂದೂಸ್ತಾನವೆಂದು ಕರೆಯಲಾದ ಈ ದೇಶ ಮತ್ತೆ ಐಕ್ಯವಾಗಲಿ, ಒಂದಾಗಲಿ. ಇದು ನನ್ನ ಕೊನೆಯ ಆಶೆ ಮತ್ತು ಸರ್ವ ಶಕ್ತ ಭಗವಂತನಲ್ಲಿ ನನ್ನ ಪ್ರಾರ್ಥನೆ.’’
ಮತ್ತೆ ತಾನು ಬರೆದಿಟ್ಟ ಕೊನೆಯ ಇಚ್ಛಾಪತ್ರ (Will-ಮೃತ್ಯುಪತ್ರವೆಂದೂ ವಾಡಿಕೆಯಲ್ಲಿ ಕರೆಯುತ್ತಾರೆ)ದಲ್ಲಿ ತನ್ನ ಚಿತಾಭಸ್ಮವನ್ನು ವಿಭಜನೆಗಿಂತ ಮೊದಲಿದ್ದ ಅಖಂಡ ಭಾರತದಂತೆ ಮತ್ತೆ ಒಂದಾದ ದೇಶದಲ್ಲಿ ಹರಿಯುವ ನದಿಯ ನೀರಿನಲ್ಲಿ ವಿಸರ್ಜಿಸಬೇಕೆಂದೂ, ಅಲ್ಲಿಯವರೆಗೆ ಆ ಚಿತಾಭಸ್ಮವನ್ನು ತಲೆಮಾರಿನಿಂದ ತಲೆಮಾರಿನವರೆಗೆ ಹಸ್ತಾಂತರಿಸುತ್ತ ಹೋಗಬೇಕೆಂದೂ ನಮೂದಿಸಿದ್ದಾನೆ. ಅವನ ಈ ಇಚ್ಛೆಯನ್ನು ಈಡೇರಿಸಲು ದೀಕ್ಷಾಬದ್ಧರಾದ ‘ಕಡು ದೇಶಭಕ್ತರ’ದಂಡು ಇಂದಿಗೂ ಈ ದೇಶದಲ್ಲಿ ಭಗವಾ ಪತಾಕೆಯ ನೆರಳಲ್ಲಿ ಚೀತ್ಕರಿಸುತ್ತಿದೆ. ಅದರ ಗುರಿ: ಅಖಂಡ ಭಾರತ ನಿರ್ಮಾಣ! ಅವನ ಈ ಇಚ್ಛೆಯನ್ನು ಈಡೇರಿಸುವ ದಿಕ್ಕಿನಲ್ಲಿ ಕಾರ್ಯತತ್ಪರರಾದವರು ಚೀತ್ಕರಿಸುತ್ತಿದ್ದಾರೆ.


ಗಾಂಧಿ ಹತ್ಯೆಗೆ ಮುಖ್ಯ ಕಾರಣ, ಗಾಂಧೀಜಿ ದೇಶದ ವಿಭಜನೆಗೆ ಕಾರಣರಾದರೆಂಬ ಭಾವನೆ ಮತ್ತು ನಂಬಿಕೆ. ಅವರು ಮುಸ್ಲಿಮರ ಪಕ್ಷಪಾತಿ; ಹಿಂದೂಗಳ ಹಿತರಕ್ಷಣೆ ಮಾಡದೆ ವಿಫಲರಾದ ಅವರನ್ನು ರಾಜಕೀಯ ರಂಗದಿಂದ ತೆಗೆದುಹಾಕುವುದರಿಂದಲೇ ಈ ದೇಶದ ಉದ್ಧಾರ ಮತ್ತು ಹಿಂದೂಗಳ ಅಭ್ಯುದಯ! ಹಿಂದೂ ದೇಶದಲ್ಲಿ ಹಿಂದೂಗಳದ್ದೇ ಆಧಿಪತ್ಯ ಸ್ಥಾಪನೆ ಆಗಬೇಕು. ಇಲ್ಲದೆ ಹೋದರೆ ಮುಸ್ಲಿಮರೇ ಮುಂದೆ ಈ ದೇಶವನ್ನು ‘ಇಸ್ಲಾಮೀಕರಣ’ ಮಾಡಿಯಾರು. ಇಲ್ಲಿರುವ ಮುಸ್ಲಿಮರು ಹಿಂದೂಗಳ ಸಾಂಸ್ಕೃತಿಕ ದೇಶ ಭಕ್ತಿಯನ್ನು ಬೆಳೆಸಿಕೊಳ್ಳಬೇಕು!! ಈ ವಾದದ ಉಚ್ಛ್ರಾಯ ಉಲ್ಬಣಾವಸ್ಥೆಯನ್ನು ಸಂಘಪರಿವಾರದ ಇಂದಿನ ಮೂಲಭೂತವಾದದಲ್ಲಿ (Fundamentalism- ಶಬ್ದದ ಸರಿಯಾದ ಅರ್ಥ ಗೊಡ್ಡುಸಂಪ್ರದಾಯವಾದ. ಆದರೂ ‘ಮೂಲಭೂತವಾದ’ ಎಂಬುದು ವಾಡಿಕೆಯಲ್ಲಿ ಬಂದು ರೂಢಿಯಾಗಿ ಬಳಕೆಯಲ್ಲಿ ಬಂದುದರಿಂದ ಅದನ್ನೆ ಇಲ್ಲಿ ಬಳಸಲಾಗಿದೆ) ಕಾಣಬಹುದು. ಈ ಮೂಲಭೂತವಾದದ ಬೀಜ ಬಿತ್ತಿದವರು ಯಾರು? ಮುಸ್ಲಿಮರ ಮತ್ತು ಇತರ ಪರಮತೀಯರ -ಮುಖ್ಯವಾಗಿ ಕ್ರಿಶ್ಚಿಯನ್ನರ -ದ್ವೇಷದ ವಿಷಬೀಜವನ್ನು ಬಿತ್ತಿದವರಾರು? ಕೋಮುದ್ವೇಷದ ವಿಷಬೀಜದ ದುಷ್ಪಲವೇ ದೇಶದ ವಿಭಜನೆಯೆಂಬುದನ್ನು ನಾವು ಗಮನಿಸಬೇಕು. ದೇಶಾಭಿಮಾನವನ್ನು ಉದ್ದೀಪನಗೊಳಿಸುವ ಸದುದ್ದೇಶದಿಂದಲೇ ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಗಜಾನನೋತ್ಸವವನ್ನು ಪ್ರಾರಂಭಿಸಿವುದರ ಮೂಲಕ ಹಿಂದೂ ಧರ್ಮಾಭಿಮಾನದ ಬಗ್ಗೆ ಜನರ ಮನದಲ್ಲಿ ಉಂಟುಮಾಡಿದರು. ಆ ಧರ್ಮಾಭಿಮಾನದ ಅಮೃತವೇ ಅತಿಯಾದಾಗ ಪರಮತ ದ್ವೇಷದ ಬೀಜರೂಪದ ವಿಷವಾಯಿತು! ಮುಂದೆ ಲಾಲಾ ಲಜಪತರಾಯರು ಪಂಜಾಬಿನಲ್ಲಿ ಹಿಂದೂಗಳ ಸ್ವಾಭಿಮಾನ ಬೆಳೆಸುವ ಸಲುವಾಗಿ ಉರ್ದು ಭಾಷೆಯೇ ಮಾತೃಭಾಷೆಯಾಗಿದ್ದ ಹಿಂದೂಗಳು 1921ರ ಜನಗಣತಿಯ ಕಾಲಕ್ಕೆ ತಮ್ಮ ಮಾತೃಭಾಷೆ ‘ಹಿಂದಿ’ ಎಂಬುದಾಗಿ ದಾಖಲಿಸಲು ಕರೆಕೊಟ್ಟರು. ಹಿಂದು-ಹಿಂದಿ ಎಂದು ಘೋಷಿಸುವ ಹಿಂದೂ ಸಂಘಟನೆಗಳಿಗೆ ಬೀಜ ಮಂತ್ರ ಬಿತ್ತಿದವರು ಲಜಪತರಾಯರು! ಉರ್ದು ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಹಿಂದಿಯಲ್ಲಿ ಪ್ರಕಟಿಸಲು ಪ್ರಾರಂಭಿಸಿ ‘ಉರ್ದು’ ಮುಸ್ಲಿಮರ ಭಾಷೆ ಎಂಬ ಭಾವನೆಗೆ ಬೀಜ ಬಿತ್ತಿದರು. ಇದರಿಂದ ಮುಸ್ಲಿಮರಲ್ಲಿ ‘ಹಿಂದಿ’ ಭಾಷೆಯ ಬಗ್ಗೆ ಅನಾದರ ಅಸಹನೆ ಬೆಳೆಯಲು ಪ್ರಾರಂಭವಾಯಿತು! ಆಗ ಅಕಾಲಿದಳವೂ ‘ಸಿಖ್’ ಧರ್ಮದ ರಕ್ಷಣೆ, ಉದ್ಧಾರಕ್ಕಾಗಿ ನಡು ಕಟ್ಟಿದರು. ಹಿಂದಿ ವರ್ಸಸ್ ಉರ್ದು ಸಮಸ್ಯೆ ಉಲ್ಬಣವಾದಾಗ ಈ ವೈಷಮ್ಯದ ಉಪಶಮನಕ್ಕಾಗಿ ಗಾಂಧೀಜಿ ‘ಹಿಂದೂಸ್ಥಾನೀ’ ಭಾಷೆಯ ಮಾರ್ಗ ಸೂಚಿಸಿದರು. ಹಿಂದು-ಮುಸ್ಲಿಮ್ ಏಕತೆಯ ಹರಿಕಾರರಾಗಿ ಬಂದ ಗಾಂಧೀಜಿಗೆ ಖಿಲಾಫತ್ ಚಳವಳಿಯ ಮೂಲಕ ಮುಸ್ಲಿಮರ ಮತಾಭಿಮಾನ ಮತಾಂಧತೆಯ ರೂಪ ತಾಳುವುದರಲ್ಲಿ ಪರ್ಯಾವಸಾನವಾದದ್ದು ದುರಂತ! ಮುಂದೆ ಅವರ ಪ್ರಾರ್ಥನಾ ಸಭೆಯಲ್ಲಿ ‘ವೈಷ್ಣವ ಜನತೋ’ ಪ್ರಾರ್ಥನೆ ‘ಈಶ್ವರ ಅಲ್ಲಾ ತೇರೇ ನಾಮ್ ಸಬಕೊ ಸನ್ಮತಿ ದೇ ಭಗವಾನ್’ ಪಠಣದಿಂದ ಮತೀಯ ಭಾವನೆ ತೀಕ್ಷ್ಣವಾಗಲು ಅವಕಾಶ ಮಾಡಿದರು. ‘ಈಶ್ವರ’ನನ್ನು ಮುಸ್ಲಿಮರು ಒಪ್ಪಲಿಲ್ಲ.; ‘ರಹೀಮ’ ನನ್ನು ಹಿಂದೂಗಳು ಅಂಗೀಕರಿಸಲಿಲ್ಲ!! ಇದರಿಂದ ಎಂದೂ ಮಸೀದಿಗೆ ಹೋಗದಿದ್ದ, ಉರ್ದು ಮಾತೃಭಾಷೆಯಲ್ಲದ ಜಿನ್ನಾ ಅವರಂಥ ಮುಸ್ಲಿಮರು ಮೆಲ್ಲಮೆಲ್ಲನೆ ಹಿಂದೂಗಳಿಂದ ದೂರ ಸರಿಯುವಂತಾಯಿತು. ಹೀಗೆ ಒಂದಕ್ಕೊಂದು ಚಿಕ್ಕ ದೊಡ್ಡ ಕಾರಣಗಳು ಸೇರಿ ಹಿಂದೂ ಮುಸ್ಲಿಮರು ಒಂದಾಗಿ ಬಾಳಲಾರರೆಂಬ ಸಾವರ್ಕರ್‌ರ ‘ಹಿಂದುತ್ವ’ ಸಿದ್ಧಾಂತದ ಬುನಾದಿಯಾಯಿತು. ಆ ವಿಷವೃಕ್ಷ ಬೆಳೆಯಗೊಡದಂತೆ ಕಾಲಕಾಲಕ್ಕೆ ಪ್ರಯತ್ನಗಳೂ ನಡೆದವು. ಆ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದವರು ವೈಯಕ್ತಿಕವಾಗಿ ಗಾಂಧೀಜಿ, ಸಾಮೂಹಿಕವಾಗಿ ಅಂದಿನ ಕಾಂಗ್ರೆಸ್ ಪಕ್ಷ. ಕೋಮುದ್ವೇಷದ ದುಷ್ಪರಿಣಾಮಗಳನ್ನು ಸುಸ್ಪಷ್ಟವಾಗಿ ಗುರುತಿಸಿದ ಇತರ ರಾಜಕೀಯ ಮುಖಂಡರೂ, ರಾಜಕೀಯ ಪಕ್ಷಗಳೂ ದೇಶದಲ್ಲಿ ಗಣನೀಯ ಪಾತ್ರ ವಹಿಸಿದವು. ಒಂದು ಕಡೆ ಕೋಮುದ್ವೇಷದ ದಳ್ಳುರಿಯನ್ನು ಹಬ್ಬಿಸಿದ ಸಂಘಪರಿವಾರ ಹಾಗೂ ಅದರ ರಾಜಕೀಯ ಸಂಘಟನೆಯಾದ ಹಿಂದೂ ಮಹಾಸಭೆಯಂಥ ಶಕ್ತಿಗಳು. ಇನ್ನೊಂದು ಕಡೆ ಕೋಮುಸೌಹಾರ್ದದ ಹರಿಕಾರರಾದ ಗಾಂಧೀಜಿ, ವೌಲಾನಾ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫ್ಫಾರ್ ಖಾನ್, ನೆಹರೂ, ಜಯಪ್ರಕಾಶ್, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಅಸಂಖ್ಯಾತ ದೇಶಭಕ್ತರು, ಕಮ್ಯುನಿಸ್ಟ್ ಮತ್ತು ಸಮಾಜವಾದಿ ಮುಂತಾದ ಜಾತ್ಯತೀತ ದೃಷ್ಟಿ ಮತ್ತು ಪ್ರಗತಿಪರ ಧೋರಣೆಯುಳ್ಳ ರಾಜಕೀಯ ಪಕ್ಷಗಳು. ಎಲ್ಲಿಯವರೆಗೆ ಈ ಪ್ರಗತಿಶೀಲ ದೃಷ್ಟಿ ಮತ್ತು ಧೋರಣೆಯಿದ್ದ ವ್ಯಕ್ತಿಗಳು, ಶಕ್ತಿಗಳು, ರಾಜಕೀಯ ಪಕ್ಷಗಳು ಪ್ರಬಲವಾಗಿದ್ದವೊ ಅಲ್ಲಿಯವರೆಗೆ ಡಾ.ಹೆಡ್ಗೆವಾರ್, ಗುರೂಜಿ ಗೋಲ್ವಾಲ್ಕರ್ ಸಂತತಿ ವೃದ್ಧಿಯಾಗಲಿಲ್ಲ. ಈ ದೇಶದಲ್ಲಿ ಕೋಮುಸೌಹಾರ್ದವನ್ನು ಪೋಷಿಸುವುದರಲ್ಲಿ ಕೆಲವು ಮುಸ್ಲಿಂ ಮುಖಂಡರು, ಸಂಘಸಂಸ್ಥೆಗಳೂ ಸಹ ಪ್ರಮುಖ ಪಾತ್ರ ವಹಿಸಿದವು. ಅಂಥವರಲ್ಲಿ ಮುಹಮ್ಮದ್ ಅಲಿ ಜಿನ್ನಾ, ಮುಹಮ್ಮದ್ ಇಕ್ಬಾಲ್, ವೌಲಾನಾ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫ್ಫಾರ್ ಖಾನ್ ಮುಂತಾದವರಿದ್ದರು. ಭರತಖಂಡವನ್ನು ಇಬ್ಭಾಗ ಮಾಡಿದ್ದಕ್ಕೆ ಗಾಂಧೀಜಿಯೇ ಕಾರಣ ಎಂದು ಗೋಡ್ಸೆ ಗುಂಪು ಹೇಳುವಂತೆ, ಜಿನ್ನಾ ಮತ್ತು ಮುಹಮ್ಮದ್ ಇಕ್ಬಾಲರೇ ಕಾರಣ ಎಂದು ದೂಷಿಸುವ ಹಿಂದೂಗಳೂ ಇದ್ದಾರೆ. ಮುಸ್ಲಿಂ ಲೀಗ್ ರಾಜಕೀಯ ಪಕ್ಷವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದವರಲ್ಲಿ ಜಿನ್ನಾ ಅಗ್ರಗಣ್ಯರಾಗಿದ್ದರು. ಅವರನ್ನು ಹಿಂದೂ-ಮುಸ್ಲಿಂ ಏಕತೆ ರಾಯಭಾರಿ, ಕೋಮುಸೌಹಾರ್ದ, ಜಾತ್ಯತೀತ ತತ್ವದ ಹರಿಕಾರ ಎಂದು ಇಡೀ ದೇಶ ಗೌರವಿಸಿ, ಅವರ ದೇಶಪ್ರೇಮವನ್ನು ಕೊಂಡಾಡಿ, ಅವರ ಗೌರವಾರ್ಥ ಮುಂಬೈಯಲ್ಲಿ ಒಂದು ಭವ್ಯ ಭವನವನ್ನು ಕಟ್ಟಿಸಿದ ಕಾಲ ಒಂದಿತ್ತು. ಅಂಥ ನಿಸ್ಸೀಮ ದೇಶಭಕ್ತರು ಅವರು. ಜಾತ್ಯತೀತ ತತ್ವದ ರಾಜಕಾರಣಿ ಮುಸ್ಲಿಂ ಲೀಗಿನ ಅಧ್ಯಕ್ಷ ಸ್ಥಾನಕ್ಕೆ ಏರಿಸಿದವರು, ಮೂಲಭೂತವಾದಿ ಮುಸ್ಲಿಮರ ತೆಕ್ಕೆಗೆ ಅವರನ್ನು ತಳ್ಳಿದವರು ಹಿಂದೂ ಮೂಲಭೂತವಾದಿಗಳೆಂಬ ಕಟು, ವಿಷಾದನೀಯ ಸತ್ಯವನ್ನು ಕಾಣುತ್ತೇವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top