ತುತ್ತು ಅನ್ನಕ್ಕಾಗಿ ಗರ್ಭಕೋಶವನ್ನೇ ಕಳೆದುಕೊಳ್ಳುತ್ತಿರುವ ಮಹಿಳೆಯರು | Vartha Bharati- ವಾರ್ತಾ ಭಾರತಿ

---

ತುತ್ತು ಅನ್ನಕ್ಕಾಗಿ ಗರ್ಭಕೋಶವನ್ನೇ ಕಳೆದುಕೊಳ್ಳುತ್ತಿರುವ ಮಹಿಳೆಯರು

ತಾಯಿಯ ಗರ್ಭಕೋಶವನ್ನು ಕೀಳುವುದು ಇಂದು ಒಂದು ವ್ಯಾಪಾರವಾಗಿದೆ. ರಾಜಕೀಯವೂ ಆಗಿದೆ ಮತ್ತು ಬಂಡವಾಳಶಾಹಿ ವಿಧಾನದ ಅತ್ಯಂತ ಕ್ರೂರ ಪೈಶಾಚಿಕವೂ ಆಗಿದೆ. ಹೊಟ್ಟೆಗೆ ಅನ್ನ ಬೇಕೆಂದರೆ ಹೊಟ್ಟೆ ಕುಯ್ಯುವುದು ಕಡ್ಡಾಯ. ನಿಜ ಇದನ್ನು ಕೇಳಿ ಆಶ್ಚರ್ಯವೆನಿಸಿದರೂ ಇದು ಕಟು ವಾಸ್ತವ.

ಬರಗಾಲಕ್ಕೂ, ಬಡತನಕ್ಕೂ ಅವಿನಾಭಾವ ಸಂಬಂಧವಿರುತ್ತದೆ. ಇವೆರಡೂ ಒಂದಕ್ಕೊಂದು ಅಂಟಿಕೊಂಡೇ ಇರುತ್ತದೆ. ಇವು ಗ್ರಾಮೀಣ ಪ್ರದೇಶದ ಜನಜೀವನವನ್ನು ಬಾಧಿಸುತ್ತಿರುತ್ತದೆ. ಭೂಮಿಯನ್ನೇ ನಂಬಿಕೊಂಡಿರುವ ರೈತಾಪಿಗಳನ್ನು ದುರ್ಬಲರನ್ನಾಗಿಸುತ್ತದೆ. ಮಹಿಳೆಯರನ್ನು ಮಕ್ಕಳನ್ನು ಅಸಹಾಯಕರನ್ನಾಗಿ ಮಾರ್ಪಡಿಸುತ್ತದೆ. ಅವರ ದೇಹಗಳ ಮೇಲೆ ಎಂತಹ ದುರಂತಗಳನ್ನು ಬೇಕಾದರೂ ಸೃಷ್ಟಿಸುತ್ತದೆ. ಇಂತಹ ದುರಂತಗಳೇ ಇಂದು ಮಹಿಳೆಯರು ತಮ್ಮ ಗರ್ಭಕೋಶವನ್ನು ಕಿತ್ತು ಹಾಕುವಂತೆ ಒತ್ತಡ ಹೇರುತ್ತಿದೆ.
ಮಹಾರಾಷ್ಟ್ರದ ಕಬ್ಬು ಸಾಗುವಳಿ ಮಾಡುವ ತೋಟಗಳಲ್ಲಿ ಕೂಲಿಗೆ ಹೋಗುವ ಮಹಿಳೆಯರಿಗೆ ಒಂದು ಕಠಿಣ ಪರಿಸ್ಥಿತಿ ಎದುರಾಗಿದೆ. ಬದುಕುವ ದಾರಿ ಕಾಣದೆ ಕಂಟ್ರಾಕ್ಟರ್‌ಗಳ ನಿಬಂಧನೆಗಳಿಗೆ ಒಳಪಡಬೇಕಿದೆ. ಕೂಲಿ ಹಣಕ್ಕಾಗಿ ಮಹಿಳೆಯರು ತಮ್ಮ ಗರ್ಭಕೋಶವನ್ನು ಕಿತ್ತು ಹಾಕಬೇಕಾದ ದಾರುಣ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ಹಿಂದೂ ಬಿಸಿನೆಸ್ ಲೈನ್ ಬಿಡುಗಡೆ ಮಾಡಿದ ವರದಿ ಈ ವಿವರಗಳನ್ನು ಹೊರ ಹಾಕಿದೆ.
ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆಯುವ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುವವರಿಗೆ 6 ತಿಂಗಳ ಕಾಲ ಮಾತ್ರ ಕೆಲಸ ದೊರೆಯುತ್ತದೆ. ಈ ಕೆಲಸಕ್ಕಾಗಿ ಕಂಟ್ರಾಕ್ಟರ್‌ಗಳು ಮಹಿಳೆಯರು, ಪುರುಷರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಆ ಆರು ತಿಂಗಳು ಕಷ್ಟಪಟ್ಟು ದುಡಿದ ಹಣದಿಂದ ಇನ್ನುಳಿದ ಆರು ತಿಂಗಳು ಕಾಲ ಕುಟುಂಬಗಳನ್ನು ಪೋಷಿಸಬೇಕಿದೆ.ಆದುದರಿಂದಲೇ ಈ ತೋಟಗಳಿಗೆ ಕೂಲಿಗೆಂದು ಬಹಳ ಮಂದಿ ಕಾರ್ಮಿಕರು ಹೋಗುತ್ತಾರೆ. ಆದರೆ ಇಲ್ಲಿ ಕೂಲಿ ಕೆಲಸಕ್ಕೆಂದು ಬರುವ ಮಹಿಳೆಯರಿಗೆ ಕಂಟ್ರಾಕ್ಟರ್‌ಗಳು ಒಂದು ಶರತ್ತನ್ನು ವಿಧಿಸುತ್ತಾರೆ. ‘ಯಾರು ತನ್ನ ಗರ್ಭಕೋಶವನ್ನು ಕಿತ್ತು ಹಾಕುತ್ತಾರೋ ಅವರಿಗೆ ಇಲ್ಲಿ ಕೆಲಸ ಸಿಗುತ್ತದೆ’ ಎಂದು ಕಡ್ಡಾಯವಾಗಿ ಹೇಳುತ್ತಿದ್ದಾರೆ. ಕಾರಣ ಏನೆಂದರೆ ಮುಟ್ಟಿನ ಸಮಸ್ಯೆಯಿಂದ ಮಹಿಳೆಯರು ಕೆಲಸದ ಸಮಯವನ್ನು ವ್ಯಯಿಸುತ್ತಿದ್ದಾರಂತೆ, ಅದರಿಂದ ಉತ್ಪಾದನೆ ಕುಂಟಿತವಾಗುತ್ತಿದೆಯಂತೆ. ಕಬ್ಬು ತೋಟದಲ್ಲಿ 6 ತಿಂಗಳ ಕಾಲ ಮುಟ್ಟಿನ ಯಾವುದೇ ಅವಾಂತರಗಳಿಲ್ಲದೆ ದುಡಿಯಲು ಕಡ್ಡಾಯವಾಗಿ ಗರ್ಭಕೋಶವನ್ನು ಕೀಳಿಸಿಕೊಳ್ಳಬೇಕೆಂಬ ನಿಬಂಧನೆಗಳನ್ನು ಕಂಟ್ರಾಕ್ಟರ್‌ಗಳು ಜಾರಿಗೊಳಿಸುತ್ತಿದ್ದಾರೆ.
ಪರಿಸ್ಥಿತಿ ಎಷ್ಟು ದಾರುಣವಾಗಿದೆಯೆಂದರೆ ಗರ್ಭಕೋಶವನ್ನು ತೆಗೆಸಿಕೊಳ್ಳದಿದ್ದರೆ ಕಂಟ್ರಾಕ್ಟರ್‌ಗಳು ಮಹಿಳೆಯರನ್ನು ಕೆಲಸಕ್ಕೆ ಸೇರಿಕೊಳ್ಳುವುದಿಲ್ಲ. ಮುಟ್ಟಾಗುವ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲವಾದ್ದರಿಂದ ಹೊಟ್ಟೆಪಾಡಿಗಾಗಿ ಮಹಿಳೆಯರು ಒತ್ತಾಯಪೂರ್ವಕವಾಗಿ ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ ಈ ಒತ್ತಾಯ ಎಷ್ಟು ತೀವ್ರವಾಗಿದೆ ಎಂದರೆ ಅಗತ್ಯವೆನಿಸಿದರೆ ಕಂಟ್ರಾಕ್ಟರ್‌ಗಳೇ ಅವರ ಸರ್ಜರಿಗೆ ಹಣ ಒದಗಿಸುತ್ತಾರೆ, ಆ ಹಣವನ್ನು ಅವರ ಕೂಲಿ ಹಣದಲ್ಲಿ ಕಟ್ ಮಾಡಿಕೊಳ್ಳುತ್ತಾರೆ.ಇದು ಪರಿಸ್ಥಿತಿ.
ಪತ್ರಿಕೆ ಹೊರಹಾಕಿದ ವಿವರಗಳ ಪ್ರಕಾರ 25 ವಯಸ್ಸಿನ ಮಹಿಳೆಯರೂ ಕೂಡಾ ತಮ್ಮ ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಾರಂತೆ. ಈ ಪ್ರದೇಶದಲ್ಲಿ ಈಗ ಗರ್ಭಕೋಶವನ್ನು ಕೀಳುವುದೇ ಒಂದು ದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿದೆ.
ಇಲ್ಲಿ ಕಂಟ್ರಾಕ್ಟರ್‌ಗಳು ಗಂಡ-ಹೆಂಡತಿ ಇಬ್ಬರನ್ನೂ ಒಂದು ಯೂನಿಟ್ ಎಂದು ಪರಿಗಣಿಸುತ್ತಾರೆ. ಇಬ್ಬರಿಗೂ ಸೇರಿ ದಿನಕ್ಕೆ 500 ರೂ. ಕೂಲಿಯನ್ನು ನಿಗದಿಗೊಳಿಸಿದ್ದಾರೆ.ಡೆಡ್ ಲೈನ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಸೇರಿಕೊಳ್ಳದಿದ್ದರೆ ಕೂಲಿ ಕಡಿತಗೊಳಿಸುತ್ತಾರೆ. ಈ ಸ್ಥಿತಿಯಲ್ಲಿ ಮಹಿಳೆಯರು ಋತುಸ್ರಾವ ಸಮಸ್ಯೆಯ ಕಾರಣದಿಂದಾಗಿ ಡೆಡ್‌ಲೈನ್‌ನಲ್ಲಿ ಸೇರಲು ವಿಫಲವಾಗುವ ಅವಕಾಶಗಳಿರುತ್ತದೆಯೆಂದು ಕಂಟ್ರಾಕ್ಟರ್‌ಗಳು ಇಂತಹ ಕ್ರೂರವಾದ ಶರತ್ತುಗಳನ್ನು ವಿಧಿಸುತ್ತಿದ್ದಾರೆ.
ನಮ್ಮ ದೇಶದಲ್ಲಿ ಪ್ರಧಾನ ವಾಣಿಜ್ಯ ಬೆಲೆಗಳಲ್ಲಿ ಕಬ್ಬು ಕೂಡಾ ಒಂದು. ದೇಶವ್ಯಾಪಿ ವರ್ಷಕ್ಕೆ 500 ಬಿಲಿಯನ್‌ಗಳಷ್ಟು ವ್ಯಾಪಾರ ನಡೆಯುತ್ತದೆ. ಈ ವ್ಯಾಪಾರ ಮಹಿಳೆಯರ ಶ್ರಮವನ್ನು ಮತ್ತು ಅವರ ಶರೀರವನ್ನು ಕಬ್ಬು ಯಂತ್ರದಂತೆ ಹಿಂಡಿ ಹಿಪ್ಪೆ ಮಾಡುತ್ತಿವೆ. ಈಗಾಗಲೇ ಈ ಕಾರ್ಮಿಕರೆಲ್ಲಾ ಅಸಂಘಟಿತ ವಲಯದಲ್ಲಿರುವುದರಿಂದ ಅವರಿಗೆ ಯಾವುದೇ ಕಾಯ್ದೆಗಳು ಅನ್ವಯಿಸದಿರುವುದರಿಂದ ಅವರು ಶ್ರಮ ಶೋಷಣೆಗೆ ಗುರಿಯಾಗುತ್ತಿದ್ದಾರೆ.
ಇಂತಹ ಕೇಸುಗಳು ಹಂತ ಹಂತವಾಗಿ ಹೆಚ್ಚುತ್ತಿವೆ ಎಂದು ವರದಿಗಳು ಹೇಳುತ್ತಿವೆ.
ಪ್ರಕೃತಿ ಸ್ತ್ರೀಯರ ಮೇಲೆ ಹೊರಿಸಿದ ಹೆಚ್ಚುವರಿ ಜವಾಬ್ದಾರಿಯೆಂದರೆ ಮಕ್ಕಳನ್ನು ಹೆರುವುದು. ಈ ಜವಾಬ್ದಾರಿಯನ್ನು ನಿರ್ವಹಿಸಲು ಸ್ತ್ರೀಯರಿಗೆ ಸಾಮಾನ್ಯ ಆರೋಗ್ಯಕ್ಕೆ ಗರ್ಭಕೋಶ ಬಹಳ ಮುಖ್ಯವಾದುದು. ಒಬ್ಬ ಸ್ತ್ರೀಯ ಜೀವನದಲ್ಲಿ ಋತುಚಕ್ರ ಪ್ರಾರಂಭವಾದಾಗಿನಿಂದ ಮುಟ್ಟು ನಿಲ್ಲುವವರೆಗೂ ನಿರಂತರವಾಗಿ ಹಾರ್ಮೋನುಗಳನ್ನು ಬಿಡುಗಡೆ ಮಾಡುವಲ್ಲಿ ಗರ್ಭಾಶಯ, ಅಂಡಾಶಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಗರ್ಭಕೋಶ ತೆಗೆದ ನಂತರ ವರ್ಷಾನುಗಟ್ಟಲೆ ಮಹಿಳೆಯರು ಹಲವು ರೀತಿಯ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ. ಆದರೆ ಸರ್ಜರಿಗೆ ಮುನ್ನ ಈ ವಿಷಯಗಳನ್ನು ವೈದ್ಯರು ಮಹಿಳೆಯರಿಗೆ ವಿವರಿಸುತ್ತಿಲ್ಲ. ಶೇ. 97ರಷ್ಟು ಮಹಿಳೆಯರಿಗೆ ದೊಡ್ಡ ಆಪರೇಷನ್ ನಂತರ ಎದುರಾಗುವ ಸಮಸ್ಯೆಗಳ ಬಗ್ಗೆ ವೈದ್ಯರು ಮೊದಲೇ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲವೆಂದು ಒಂದು ಸರ್ವೇಯಲ್ಲಿ ತಿಳಿದು ಬಂದಿದೆ. ಇದು ಅತ್ಯಂತ ಹೇಯವಾದ ಕೃತ್ಯವಾಗಿದೆ. ಯಾವುದೇ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ಅದರಿಂದ ಎದುರಾಗುವ ದುಷ್ಪರಿಣಾಮಗಳ ಬಗ್ಗೆ ರೋಗಿಗಳಿಗೆ ತಿಳಿಸಬೇಕು.ಮಹಿಳೆಯರ ಜೀವದ ರಕ್ಷಣೆ ಮತ್ತು ಆರೋಗ್ಯಕ್ಕೆ ಮುಖ್ಯವಾದ ಗರ್ಭಾಶಯವನ್ನು ತೆಗೆಯುವ ವೇಳೆ ವೈದ್ಯರು ಈ ವಿಷಯವನ್ನು ಉದ್ದೇಶಪೂರ್ವಕವಾಗಿಯೇ ಹೇಳದೆ ಮುಚ್ಚಿಡುತ್ತಿದ್ದಾರೆಂಬ ಆರೋಪಗಳೂ ಇವೆ.
 
ಸಣ್ಣ ವಯಸ್ಸಿನಲ್ಲೇ ಗರ್ಭಾಶಯವನ್ನು ತೆಗೆದುಬಿಟ್ಟರೆ: •ಮಹಿಳೆಯರಲ್ಲಿ ಹಾರ್ಮೋನ್‌ಗಳ ಸಮತೋಲನೆಗೆ ಪೆಟ್ಟು ಬೀಳುತ್ತದೆ.
•ದೇಹವೆಲ್ಲಾ ಬಿಸಿಯಾಗಿ ಬೆವರಿಳಿಯುವ ಅನುಭವವಾಗುತ್ತದೆ. ನಿದ್ರೆ ಸರಿಯಾಗಿ ಬರುವುದಿಲ್ಲ.
•ಪ್ರತಿ ಸಣ್ಣ ವಿಷಯಕ್ಕೂ ಸಿಟ್ಟು, ಕಿರಿಕಿರಿ, ವಿಪರೀತವಾದ ತಲೆನೋವು, ಸುಸ್ತು ಮುಂತಾದ ಲಕ್ಷಣಗಳು ಕಾಣಿಸುತ್ತವೆ.
• ಈಸ್ಟ್ರೋಜನ್ ಎಂಬ ಹಾರ್ಮೋನ್‌ನ ಕೊರತೆಯಿಂದಾಗಿ ಮೂಳೆಗಳಿಗೆ ತಕ್ಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಿಗದೇ ಮೂಳೆಗಳು ಸತ್ವವನ್ನು ಕಳೆದುಕೊಳ್ಳುತ್ತದೆ.
 •ಸತ್ವವನ್ನು ಕಳೆದುಕೊಂಡ ಮೂಳೆಗಳು ಕ್ರಮೇಣ ಆಸ್ಟಿಯೋಪೊರೋಸಿಸ್‌ಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
• ಮೂತ್ರ ಸಂಬಂಧಿತ ಸೋಂಕುಗಳು ಹೆಚ್ಚಾಗುತ್ತವೆ.
   ಉತ್ಪತ್ತಿಗೆ ಅಗತ್ಯವಿರುವ ಉತ್ಪಾದಕರಲ್ಲಿ ಯಾವಾಗಲೂ ಶ್ರಮಶೋಷಣೆಗೆ ಗುರಿಯಾಗುವುದು ಕಾರ್ಮಿಕರೇ. ಈ ಶೋಷಣೆ ಇಂದು ಮತ್ತಷ್ಟು ವಿತೃತವಾಗಿ ಮಾರ್ಪಟ್ಟು ಹೊಸ ರೂಪವನ್ನು ಧರಿಸುತ್ತಾ ಮಹಿಳೆಯರ ದೇಹದ ಮೇಲೆ ಸರ್ವ ರೀತಿಯಲ್ಲೂ ಪ್ರಹಾರವನ್ನು ನಡೆಸುತ್ತ್ತಿದೆ. ಅವರ ದೇಹದ ಮೇಲೆ ಅವರಿಗೇ ಹಕ್ಕುಗಳಿಲ್ಲಂತೆ ಮಾಡುತ್ತಿದೆ.
ಈಗಾಗಲೇ ದೇಶದಲ್ಲಿ ಶೇ. 60ರಷ್ಟು ಜನರಿಗೆ ಕೃಷಿ ಮತ್ತು ಅವುಗಳಿಗೆ ಅನುಕೂಲವಾಗಿರುವ ಕೆಲಸಗಳೇ ಪ್ರಧಾನ ಜೀವನಾಧಾರವಾಗಿದೆ. ಈ ಪರಿಸ್ಥಿತಿಯಲ್ಲಿ ಆಹಾರ ಬೆಳೆಗಳನ್ನು ಬೆಳೆಯುವುದು ತುಂಬಾ ಅಗತ್ಯವಿದೆ.ಆಹಾರ ಬೆಳೆಗಳನ್ನು ಬೆಳೆದರೆ ಮಾತ್ರವೇ ರೈತರಿಗೆ ಆಹಾರ ಭದ್ರತೆ ಇರುತ್ತದೆ. ಆದರೆ ವ್ಯಾಪಾರಿಗಳ ಲಾಭಾಪೇಕ್ಷೆಗಾಗಿ ಆಹಾರ ಬೆಳೆಗಳನ್ನು ನಾಶ ಮಾಡುವುದಲ್ಲದೆ, ವಾಣಿಜ್ಯ ಬೆಳೆಗಳ ಸಾಗುವಳಿ ಹಂತ ಹಂತವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯಿಂದ ಬಡ ಮತ್ತು ಮಧ್ಯಮ ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿ, ಪರ್ಯಾಯ ಮಾರ್ಗವೂ ಕಾಣದೆ ವಲಸೆ ಹೋಗುತ್ತಿದ್ದಾರೆ. ಹೀಗೆ ವಲಸೆ ದಾರಿ ಹಿಡಿದ ರೈತ ಕುಟುಂಬಗಳಲ್ಲಿರುವ ಮಹಿಳೆಯರ ಪರಿಸ್ಥಿತಿ ಇಂದು ಮತ್ತಷ್ಟು ಶೋಚನೀಯವಾಗಿ ಮಾರ್ಪಟ್ಟಿದೆ.
ಮಹಿಳೆಯರ ಶ್ರಮ ಮತ್ತು ಶರೀರದ ಮೇಲೆ ಇಂದು ಹೊಸ ಮಾದರಿಯ ಶೋಷಣೆ ಆರಂಭವಾಗಿ ಅತಿ ಹೆಚ್ಚಾಗಿ ಮುಂದುವರಿಯುತ್ತಿದೆ. ಮಾರ್ಕೆಟ್‌ಗಳು ಮಹಿಳೆಯರ ಬದುಕನ್ನು ಹೇಗೆ ನಾಶ ಮಾಡುತ್ತಿದೆಯೋ, ಇಂತಹ ಉದಾಹರಣೆಗಳನ್ನು ನೋಡಿದರೆ ಅರ್ಥವಾಗುತ್ತದೆ.ಮಾರ್ಕೆಟ್ ಏರಿಳಿತಗಳಿಗೆ ಮಹಿಳೆಯರು ಮತ್ತು ಮಕ್ಕಳೇ ಮೊದಲ ಬಲಿಪಶುಗಳು. ಇದು ಮತ್ತೊಮ್ಮೆ ಇಲ್ಲಿ ಸಾಬೀತಾಗಿದೆ.
 ಸಮಾಜದಲ್ಲಿ ಅಸ್ತಿತ್ವದಲ್ಲಿರುವಂತಹ ಊಳಿಗಮಾನ್ಯ ಪುರುಷಾಧಿಪತ್ಯದ ಕ್ರೌರ್ಯ ಶತಶತಮಾನಗಳಿಂದ ಮಹಿಳೆಯರನ್ನು ನಾನಾ ರೀತಿಯ ಹಿಂಸೆ, ಶೋಷಣೆಗೆ ಗುರಿ ಮಾಡುತ್ತಾ ಬಂದಿದೆ. ಈಗ ಈ ಪಟ್ಟಿಗೆ ಹೊಸ ಸೇರ್ಪಡೆ ತುತ್ತು ಅನ್ನಕ್ಕಾಗಿ ಗರ್ಭಕೋಶವನ್ನೇ ಕತ್ತರಿಸುವುದು. ಪುರುಷಾಧಿಪತ್ಯದ ಈ ಬಂಡವಾಳಶಾಹಿ ಧೋರಣೆ ಮನುಷ್ಯ ಸಂತತಿಯನ್ನೇ ವಿನಾಶದೆಡೆಗೆ ತಳ್ಳುವ ಅಪಾಯವನ್ನು ತಂದೊಡ್ಡಿದೆ.
ಈ ಕಾರ್ಮಿಕರೆಲ್ಲಾ ಅಸಂಘಟಿತ ವಲಯದಲ್ಲಿ ಇರುವುದು, ಅವರಿಗಾಗಿ ಕಾಯ್ದೆಗಳಿದ್ದರೂ ಅವು ಜಾರಿಯಾಗದಿರುವುದು, ಅವುಗಳನ್ನು ಜಾರಿ ಮಾಡುವಲ್ಲಿ ಆಳುವವರಿಗೆ ಮನಸ್ಸಿಲ್ಲದಿರುವುದು, ಈ ಕಾಯ್ದೆಗಳು ನಮ್ಮನ್ನೇೂ ಮಾಡಲಾರವು ಎಂಬ ಧೈರ್ಯವನ್ನು ಕಂಟ್ರಾಕ್ಟರ್‌ಗಳಿಗೆ ಈ ವ್ಯವಸ್ಥೆ ಕಲ್ಪಿಸಿರುವುದು ನಿಜಕ್ಕೂ ವಿಷಾದನೀಯ.
ಈ ಪರಿಸ್ಥಿತಿಯಲ್ಲಿ ಅಸಂಘಟಿತ ವರ್ಗಗಳ ಪರವಾಗಿ ಕೆಲಸ ಮಾಡುವ ವ್ಯಕ್ತಿಗಳು, ಸಂಘಟನೆಗಳು, ಪಕ್ಷಗಳು ಒಟ್ಟಾಗಿ ಇವರ ಪರವಾಗಿ ನಿಲ್ಲಬೇಕಾದ ಅಗತ್ಯವಿದೆ. ಅವರ ಕಾನೂನುಬದ್ಧ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ಭಾರತವನ್ನು ಪುನಃ ಕಟ್ಟಬೇಕಿದೆ. ಬಡ ರೈತರು ಗುಳೆ ಹೊರಟು, ಕಾರ್ಮಿಕರಾಗಿ ಮಾರ್ಪಡದೆ, ಪರ್ಯಾಯ ಮಾರ್ಗಕ್ಕಾಗಿ ಒತ್ತಾಯಿಸಬೇಕು. ಆಗ ಮಾತ್ರವೇ ಕೃಷಿಯಲ್ಲಿ ಚೇತರಿಕೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಪ್ರಧಾನ ನೆಲೆಯನ್ನು ಪೋಷಿಸುವ ಮಹಿಳೆಯರ ಭದ್ರತೆ ಸಾಧ್ಯವಾಗುತ್ತದೆ. ಅವರ ಆರೋಗ್ಯದಲ್ಲಿ ಚೇತರಿಕೆ ಮತ್ತು ಅವರು ಆತ್ಮ ಗೌರವದಿಂದ ಬದುಕಲು ಅವಕಾಶ ಸಿಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top