ಚಿರಪರಿಚಿತರಾಗಬೇಕಾಗಿದ್ದ ಅಪರಿಚಿತ ಸಾಹಿತಿ | Vartha Bharati- ವಾರ್ತಾ ಭಾರತಿ

ಚಿರಪರಿಚಿತರಾಗಬೇಕಾಗಿದ್ದ ಅಪರಿಚಿತ ಸಾಹಿತಿ

ಕೈಂತಜೆ ಗೋವಿಂದ ಭಟ್ಟರು ಗೋವಿಂದ ಭಟ್ಟರ ಈ ಎರಡು ಕೃತಿಗಳು ಅವರ ಪ್ರತಿಭೆ ಮತ್ತು ಸಾಹಿತ್ಯ ಸಾಧನೆಗೆ ಸಾಕಷ್ಟು ಬೆಳಕು ಚೆಲ್ಲುತ್ತವೆಂದು ತಿಳಿಯಬಹುದು. ಅನ್ನ ಬೆಂದಿದ್ದನ್ನು ನೋಡಬೇಕಾದರೆ ಒಂದು ಅಗುಳು ಸಾಕು. ಅವರ ಅಪ್ರಕಟಿತ ಲೇಖನಗಳ ಬಗ್ಗೆ ಸಂಗ್ರಹ, ಸಂಪಾದನೆ, ಪ್ರಕಟಣೆಯ ಕೆಲಸ ನಡೆಯಬೇಕಷ್ಟೆ. ಆದರೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಹೊಳೆದದ್ದು ತಾರೆ ಉಳಿದದ್ದು ಆಕಾಶ ಎಂದು ನಿಡಿದುಸಿರಿಡಬಹುದು.


ಭಾಗ-2

‘ಕಲ್ಯಾಣಿ’ ಇದೇ ಬಗೆಯ(‘ನಲ್ಮೆಯಂತಹ) ಆದರೆ ಇನ್ನೊಂದು ಹಂತದಲ್ಲಿ ಪ್ರೀತಿಯನ್ನು (ನಿ)ರೂಪಿಸುವ ಕತೆ. ಇಲ್ಲಿ ಕಲ್ಯಾಣಿ ವೈದ್ಯಕೀಯ ಶಿಕ್ಷಣದ ಅನಂತಕೃಷ್ಣನೊಂದಿಗೆ ಮದುವೆ ನಿಶ್ಚಯವಾದ ಹುಡುಗಿ. ಅವಳ ಹೆಸರಿನಲ್ಲಿ ಬೇರಾರಿಗೋ ಬರೆದ ಪ್ರೇಮ ಪತ್ರವು ಅನಂತಕೃಷ್ಣನ ಕೈಸೇರಿ ಅವನು ಕಲ್ಯಾಣಿಯನ್ನು ತಿರಸ್ಕರಿಸುತ್ತಾನೆ. ಕಲ್ಯಾಣಿಗೆ ಒಬ್ಬ ಬುದ್ಧಿವಂತನಾದರೂ ಮನೋಕಾಯಿಲೆಯ ಯುವಕನೊಂದಿಗೆ ಮದುವೆಯಾಗುತ್ತದೆ. ಆದರೆ ಅವಳು ಅನಂತಕೃಷ್ಣನನ್ನು ಮರೆಯಲಾರಳು. ಅನಂತಕೃಷ್ಣನು ಊರು ತೊರೆದು ಮದರಾಸು ಸೇರಿ ಮನೋವೈದ್ಯನಾಗಿ ಅಲ್ಲೇ ನೆಲೆಸುತ್ತಾನೆ. ಅವನ ತಂದೆ ತನ್ನ ಆಸ್ತಿಯನ್ನು ಅವನಿಗೂ ಕಲ್ಯಾಣಿಗೂ ಸೇರಿ (ಅವರ ಮದುವೆಯಾಗುವುದೆಂಬ ನಿರೀಕ್ಷೆಯಲ್ಲಿ) ವೀಲು ಬರೆದಿರುತ್ತಾರೆ. ಆದರೆ ಕಲ್ಯಾಣಿ ಈ ಆಸ್ತಿಯನ್ನು ತಿರಸ್ಕರಿಸುತ್ತಾಳೆ. ಆನಂತರದಲ್ಲಿ ಕಲ್ಯಾಣಿಯ ಪತಿಯನ್ನು ಅನಂತಕೃಷ್ಣನೇ ಗುಣಪಡಿಸುವ ಸಂದರ್ಭ ಬರುತ್ತದೆ. ಅನಂತಕೃಷ್ಣನಿಗೆ ಕಲ್ಯಾಣಿಯನ್ನು ತನ್ನಿಂದ ಬೇರ್ಪಡಿಸಿದ ಪತ್ರದ ಮೋಸದ ಅರಿವಾಗುತ್ತದೆ. ಕಲ್ಯಾಣಿ ಅವನನ್ನು ಪ್ರೀತಿಸುತ್ತಲೇ ತನ್ನ ಕರ್ತವ್ಯದ ಸಂಸಾರಕ್ಕೆ ಮರಳುತ್ತಾಳೆ.

ಸ್ವಲ್ಪಮಟ್ಟಿನ ಸೂತ್ರಬದ್ಧವಾದ ಈ ಕತೆ ಪ್ರಗತಿಶೀಲ ಮತ್ತು ಸಾಮಾಜಿಕವಾಗಿ ಕ್ರಾಂತಿಕಾರಿ ನಿಲುವುಗಳನ್ನು ಬಿಚ್ಚಿಕೊಡುತ್ತದೆ. ‘ಮನೆಯ ಮರ್ಯಾದೆ’ ಎಂಬುದು ತೀರ ಚಿಕ್ಕ ಕತೆ. ನಿರಂಕುಶ ಅರಸನೊಬ್ಬ ತಮ್ಮ ಮಗಳನ್ನು ಬಯಸಿದಾಗ ಅವನಿಗೆ ಒಪ್ಪಿಸಲು ಮನಸ್ಸಾಗದೆ ಅವಳ ಹೆತ್ತವರೇ ನಿಧಿ ಅಗೆಯುವ ನೆಪದಲ್ಲಿ ಗುಂಡಿ ತೋಡಿ ಅವಳನ್ನು ಸಮಾಧಿ ಮಾಡಿ ಮನೆಯ ಮರ್ಯಾದೆಯನ್ನು ಕಾಪಾಡಿದೆವೆಂದುಕೊಳ್ಳುವ ಅಸಹಾಯಕ ತಂತ್ರದ ಒಂದು ಪ್ರಸಂಗವಿದು. ಕೊಡಗಿನ ಲಿಂಗಾಯತ ರಾಜರ ಕಾಲದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವೆಂದು ಐತಿಹ್ಯವಿದೆ. ಕೊನೆಯ ಕತೆ ‘ಕಾಳಿಗೆ ಕಾಣಿಕೆ’. ಇದೂ ಅಷ್ಟೇ: ನಿರಂಕುಶ ಅರಸೊತ್ತಿಗೆಯ ಇನ್ನೊಂದು ಕರಾಳ ಮುಖ. ಕಾಳಿಕಾ ದೇವಾಲಯದ ನಿರ್ಮಾಣಕ್ಕೆ ಎಲ್ಲ ಯುವಕರನ್ನೂ ಬಲವಂತವಾಗಿ ದುಡಿಸುವ ಕ್ರೌರ್ಯ. ದೇವಸ್ಥಾನದ ಪ್ರತಿಷ್ಠಾಪನೆಗೆ ಪ್ರತಿಯೊಬ್ಬರೂ ಕಾಣಿಕೆ ಸಹಿತ ದೇವಿ ದರ್ಶನಕ್ಕೆ ಬರತಕ್ಕದ್ದೆಂಬ ರಾಜಾಜ್ಞೆ. ಮನೆಯ ಮಂದಿಗೆ ಆಹಾರ-ಆರೋಗ್ಯವಿಲ್ಲದೆ ನರಳುತ್ತಿದ್ದರೂ ಬಲಾತ್ಕಾರದಿಂದ ದುಡಿಮೆಗೆ ಹೋಗುವ ನಂಜ ಪ್ರತಿಷ್ಠಾಪನೆಗೆ ಮುನ್ನ ರಾಜ ಕೊಟ್ಟ ಒಂದು ಬೆಳ್ಳಿಯ ನಾಣ್ಯವನ್ನು ಪಡೆದು ಅಲ್ಲಿಂದ ಮರಳಿ ಮನೆಗೆ ಬಂದಾಗ ತನ್ನ ಸಂಸಾರ ಕಷ್ಟಕೋಟಲೆಗೆ ಸಿಲುಕಿ ಬಡವಾಗಿರುವುದನ್ನು ಮಾತ್ರವಲ್ಲ ಆಗ ತಾನೇ ಮುದ್ದಿನ ಕೂಸು ಹಸಿವಿನ ಬೇಗೆಗೆ, ಬೇನೆಗೆ ತುತ್ತಾಗಿ ಸತ್ತುಹೋಗಿರುವುದನ್ನು ಕಾಣುತ್ತಾನೆ.

ಮರುದಿನ ಅದೇ ಮಗುವಿನ ಶವವನ್ನು ಒಂದು ಬಟ್ಟೆಯ ಗಂಟು ಮಾಡಿಕೊಂಡು ನವನಿರ್ಮಾಣಗೊಂಡ ದೇವಿಯ ಗುಡಿಗೆ ಹೋಗಿ ಎಲ್ಲರೆದುರೇ ಕಾಳಿಗೆ ಕಾಣಿಕೆಯನ್ನು ಅರ್ಪಿಸುತ್ತಾನೆ. ಇಲ್ಲೂ ಅನ್ನಪೂರ್ಣೇಶ್ವರಿ ಕೃಪೆಯಂತಹ ವ್ಯಂಗ್ಯವಿದೆ. ಬಡವರ ಹಸಿವಿನ ಬೆಂಕಿ ಉರಿಯುತ್ತದೆ. ಮನೆಯ ಮರ್ಯಾದೆಯ ಹಾಗೆ ಅಧಿಕಾರದ ಕ್ರೌರ್ಯವಿದೆ. (ಇಂತಹದೇ ಒಂದು ತೆಲುಗು ಕತೆ 1970ರ ದಶಕದಲ್ಲಿ ರಚನೆಯಾಗಿತ್ತು. ಅಲ್ಲಿ ಮಗುವಿನ ಶವವನ್ನು ಗೋಣಿಯಲ್ಲಿ ಸುತ್ತಿ ತಂದು ಧನಿಯೆದುರು ಎಸೆಯುವ ಜೀತದ ಗುಲಾಮನನ್ನು ಕಾಣುತ್ತೇವೆ. ಅಮರೇಶ ನುಗಡೋಣಿಯವರ ‘ತಮಂಧದ ಕೇಡು’ ಕತೆಯೂ ಇಲ್ಲಿ ಇನ್ನೊಂದು ಆಯಾಮದಲ್ಲಿ ನೆನಪಾಗುತ್ತದೆ.) ಎಲ್ಲ ಕತೆಗಳೂ ರಚನೆಯಾದ ಸಂದರ್ಭ ಮತ್ತು ಇವುಗಳ ಭಾಷೆ, ವಿನ್ಯಾಸ ಮತ್ತು ನಿರೂಪಣಾ ತಂತ್ರವನ್ನು ಗಮನಿಸಿದರೆ ಇವು ಬೌದ್ಧಿಕ ಸರ್ಕಸ್ಸಲ್ಲ; ಬದಲಾಗಿ ಭಾವಪೂರ್ಣ, ನಿರಾಳ, ಸಂವೇದನಾಶೀಲ ಮತ್ತು ಅರ್ಥಪೂರ್ಣ ಶಕ್ತಿಯ ಕತೆಗಳೆಂದು ಹೇಳಬಹುದು.

-3-

ಗೋವಿಂದ ಭಟ್ಟರ ಇನ್ನೊಂದು ಕೃತಿ ಚಿರಪರಿಚಿತರು ಎಂಬ ಕಾಲ್ಪನಿಕ ವ್ಯಕ್ತಿಚಿತ್ರಗಳೆಂದು ಈಗಾಗಲೇ ಪ್ರಸ್ತಾವಿಸಲಾದ ಲಲಿತ ಪ್ರಬಂಧ ಸಂಕಲನ. ಇಲ್ಲೂ ಏಳು ಪ್ರಬಂಧಗಳಿವೆ. ಇವು ಕರ್ಮವೀರ, ಜಯಂತಿ, ಸುಬೋಧ, ಜನಪ್ರಗತಿ, ರಾಷ್ಟ್ರಬಂಧು ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಕೃತಿಗೆ ಕಡೆಂಗೋಡ್ಲು ಶಂಕರ ಭಟ್ಟರ ಮುನ್ನುಡಿಯಿದೆ. ಅವರು ಈ ಪ್ರಬಂಧಗಳ ಕುರಿತು ಹೀಗೆ ಬರೆದಿದ್ದಾರೆ:
‘‘ಚಿಕ್ಕ ಪುಸ್ತಕದಲ್ಲಿರುವ ಏಳು ಪ್ರಬಂಧಗಳು ಸಾಮಾನ್ಯವಾಗಿ ಅಣಕ ಬರಹ (skit)ದ ಜಾತಿಗೆ ಸೇರಿದವುಗಳು. ಈ ಜಾತಿಯ ಲೇಖನವು ಕಥಾತ್ಮಕವೂ ಅಲ್ಲ, ವರ್ಣನಾತ್ಮಕವೂ ಅಲ್ಲ, ಬರಿಯ ಹರಟೆಯೂ ಅಲ್ಲ. ಸಮಾಜದ ಮಧ್ಯದಲ್ಲಿ ಗೋಚರಿಸಬಹುದಾದ ವೈಲಕ್ಷಣ್ಯಗಳನ್ನು ಎತ್ತಿ, ಸಾಂಕೇತಿಕ ವ್ಯಕ್ತಿಗಳನ್ನು ಕಲ್ಪಿಸಿ, ಅವುಗಳ ಲಘು ಚಿತ್ರಣದಿಂದ ಆ ವೈಲಕ್ಷಣ್ಯಗಳನ್ನು ಮೂರ್ತಿಮತ್ತಾಗಿ ಕಾಣಿಸುವುದು ಈ ಬಗೆಯ ಲೇಖನದ ಉದ್ದೇಶ. ಇದು ರೇಖಾಚಿತ್ರ; ವರ್ಣಚಿತ್ರವಲ್ಲ. ವಸ್ತುವಿನ ಅಥವಾ ವ್ಯಕ್ತಿಯ ಆಮೂಲಾಗ್ರ ಕಥನವಾಗಲಿ, ಸ್ವಭಾವ ನಿರೂಪಣವಾಗಲಿ ಇದರಲ್ಲಿ ಬೇಕಾಗಿಲ್ಲ. ಆಪಾತ ಸುಂದರವಾದ ಒಂದೆರಡು ಘಟನೆಗಳು; ಅವುಗಳ ಹೊಂದಿಕೆಯಲ್ಲಿ ಪ್ರಸ್ತುತ ವ್ಯಕ್ತಿ ಹೇಗೆ ನಡೆದನೆಂಬುದರ ಲಘು ಹಾಸ್ಯಮಯ ನಿರೂಪಣೆ; ಇಷ್ಟರಿಂದ ನಾವು ಕಂಡು ಕೇಳಿ ಇದ್ದಿರಬಹುದಾದ ಯಾವುದಾದರೊಂದು ಜನದ ಸ್ಮರಣೆಯುಂಟಾಗಿ ನಮ್ಮ ಮುಖದಲ್ಲಿ ನಗು ಮೂಡಬೇಕು; ಎದೆ ಅರಳಬೇಕು! ಹರಿತವಾದ ಮೊನೆ ಮಾತುಗಳು; ಚುರುಕಿನ ಶೈಲಿ; ಅರ್ಥಸ್ಪುಟತೆಯುಳ್ಳ ಭಾಷೆ; ಒಂದಿಷ್ಟು ಉತ್ಪ್ರೇಕ್ಷೆ, ಅತಿಶಯೋಕ್ತಿ, ವಕ್ರೋಕ್ತಿಗಳು.... ಈ ಫಲ ಪ್ರಾಪ್ತಿಗೆ ಸಹಾಯಕವಾಗಿವೆ.’’ ಗೋವಿಂದ ಭಟ್ಟರು ಆರಿಸಿಕೊಂಡ ಪ್ರಕಾರವೂ ಸಾಹಿತ್ಯವೇ ಮತ್ತು ಒಂದು ದೃಷ್ಟಿಯಲ್ಲಿ ಅವರದೇ ಅನ್ವೇಷಣೆಯ ಪ್ರಕಾರ. ಅವರು ನಿವೇದನದಲ್ಲಿ ‘‘ಕನ್ನಡ ಸಾಹಿತ್ಯದಲ್ಲಿ ಈ ಮಾದರಿಯ ಪ್ರಬಂಧಗಳು ಹೊಸತಲ್ಲದಿದ್ದರೂ ಹೇರಳವಾಗಿ ಬಂದಿಲ್ಲ. ಇಂಗ್ಲಿಷಿನಲ್ಲಿ ಚಾರ್ಲ್ಸ್ ಲೇಂಬ್ ಮೊದಲಾದವರ ಈ ತೆರನಾದ ಪ್ರಬಂಧಗಳು ಜಗದ್ವಿಖ್ಯಾತವಾಗಿವೆ. ಕನ್ನಡದ ಜನತೆ ಈ ಹೊಸ ಪ್ರಯೋಗವನ್ನು ಸ್ವಾಗತಿಸುವರಾಗಿ ನಂಬುತ್ತೇನೆ.’’ ಎಂದು ಹೇಳಿದ್ದಾರೆ.

ಇದೇ ಮುನ್ನುಡಿಯಲ್ಲಿ ಕಡೆಂಗೋಡ್ಲು ಅವರು ಇನ್ನೊಂದೆಡೆ ಹೇಳಿದಂತೆ ಸಾಹಿತ್ಯದ ವಿವಿಧಾಂಗಗಳಲ್ಲಿ ಅದು ಮೇಲು; ಇದು ಕೀಳೆಂಬ ವಾದಕ್ಕೆ ಎಡೆಯಿಲ್ಲ. ಉತ್ತಮವಾದುದೆಲ್ಲ ಮೇಲೆ; ಉತ್ತಮವಾದುದರಲ್ಲೆಲ್ಲ ಕಲಾವತಾರ ಇದ್ದೇ ಇದೆ. ಈ ಕೃತಿಯ ಪರಿಶೀಲನೆಯಲ್ಲಿ ಕಡೆಂಗೋಡ್ಲು ಅವರ ಮಾತುಗಳಿಗೆ ಬೇಕಷ್ಟು ಸಮರ್ಥನೆಯಿದೆ.

 ಸಮಾಜದ ವಿವಿಧ ರಂಗಗಳ ವ್ಯಕ್ತಿಗಳು ನಿರೂಪಕರ ಪಾಕದಲ್ಲಿ ಹದವಾಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಏಳು ಪ್ರಬಂಧಗಳ ನಾಯಕರೂ ಬೇರೆಬೇರೆ ಹಿನ್ನೆಲೆಯುಳ್ಳವರು. ಹಾಸ್ಯದ ತಿಳಿಹೊದಿಕೆಯಲ್ಲಿ ಇಲ್ಲಿನ ವ್ಯಕ್ತಿಗಳ ವಿಷಾದದ ಕತೆಯೂ ಇದೆ. ‘ನಮ್ಮ ಭಟ್ಟ’ ಎಂಬ ಲೇಖನದಲ್ಲಿ ಒಬ್ಬ ಒರಟ ಸೋಮಾರಿ ಪ್ರತಿಭಾವಂತನ ಕತೆಯಿದೆ. ಅವನ ನಡೆ-ನುಡಿ ವ್ಯವಹಾರ ಎಲ್ಲವೂ ವಿಚಿತ್ರವೇ ಸರಿ. ಚೆನ್ನಾಗಿ ಓದಿಕೊಂಡವನು. ಬಕಾಸುರನಾದರೂ ಉಂಡಾಡಿಯೆನ್ನುವುದು ತಪ್ಪು. ಏಕೆಂದರೆ ದುಡಿಮೆಗಾರ. ಗೆಳೆಯ ತಂದ 53 ರವೆ ಉಂಡೆಯಲ್ಲಿ ಅರ್ಧ ಮಾತ್ರ ಬಿಟ್ಟು 52 1/2 ಉಂಡೆಗಳನ್ನು ತಿಂದು ಏನೂ ತಿಳಿಯದವನಂತೆ ನಟಿಸುವವನು. ಆದರೂ ನಿರೂಪಕ ಹೇಳುವ ‘‘... ಒರಟು ಬುದ್ಧಿ ತೋರಿದ ಉದಾಹರಣೆಗಳು ಇಲ್ಲದಿಲ್ಲ. ಆದರೆ ಅವನ ಆತ್ಮದಲ್ಲಿ ಹಾಗೇನೂ ಇಲ್ಲ. ಗೆಳೆಯನು ಕಷ್ಟದಲ್ಲಿದ್ದರೆ ಪರಿತಾಪ ಪಡುವ ವ್ಯಕ್ತಿಯೆಂದು ಎಲ್ಲರಿಗೂ ತಿಳಿದ ಸಂಗತಿ. ಆದುದರಿಂದ ಅವನು ಏನೆಂದರೂ ಸುಮ್ಮನೆ ಒಮ್ಮೆ ನೋವಾದರೂ ಅವನ ಗೆಳೆತನವನ್ನು ಯಾರೂ ಬಿಡಲಾರರು!’’ ಮಾತುಗಳು ಅವನ ಅಳತೆಗೋಲು.

‘ದೊಡ್ಡಮನೆ ವೆಂಕಪ್ಪ’ಎಂಬ ಲೇಖನದಲ್ಲಿ ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ನೀರಿನಂತೆ ವೆಚ್ಚ ಮಾಡಿ ಹೊಸಹೊಸ ಕಾರುಗಳನ್ನು ಖರೀದಿಸಿ ಗರೀಬನಾಗುವ ಮತ್ತು ಕೈಯಲ್ಲಿ ಹಣವಿದ್ದರೆ ಎಲ್ಲರಿಗೂ ರಾಜೋಪಚಾರಮಾಡುವ ಒಬ್ಬ ವಿಕ್ಷಿಪ್ತನ ಚರಿತ್ರೆಯಿದೆ. ‘‘ಅವನಿಗೆ ಅಬಲೆಯರಲ್ಲಿ ಇರುವ ಮಮತೆ, ಕುಡಿಯುವುದು, ಜೂಜಿಗೆ ಕಟ್ಟುವುದು, ಊರಿನವರಲ್ಲೆಲ್ಲ ಪರಮ ಮಿತ್ರತ್ವದಿಂದ ನಡಕೊಳ್ಳುವುದು ಈ ನಾಲ್ಕು ದುರ್ಗುಣಗಳನ್ನು ಬಿಟ್ಟರೆ ಬೆರಾವ ದುರ್ಗುಣಗಳೂ ಇರಲಿಲ್ಲ. ಹುಟ್ಟಿದಂದಿನಿಂದ ಇದುತನಕ ಒಂದು ಬೀಡಿ ಸಿಗರೇಟು ಸೇದಿದನವನಲ್ಲ.’’ ‘‘ಅವನ ಫೋರ್ಡ್ ಕಾರು ಹೋಗುವಾಗ ಕಡಿಮೆಯೆಂದರೆ ಮೂರು ಮೈಲು ದೂರಕ್ಕೆ ಅದರ ಶಬ್ದ ಕೇಳುತ್ತಿತ್ತು.’’ ನಿರೂಪಕ ಹೇಳುತ್ತಾನೆ- ‘‘ಶಕ್ತಿಯುತವಾದ ಶಿಶುವಲ್ಲವೆ ಗಟ್ಟಿಯಾಗಿ ಕಿರುಚುವುದು!’’ ವ್ಯಂಗ್ಯ, ತೆಳುಹಾಸ್ಯ ಇವೆಲ್ಲ ಇಲ್ಲಿ ಸೇರಿದೆ. ‘ಪಂಡಿತ ರಾಮಕೃಷ್ಣ ದಗಲ್‌ಬಾಜ್’ ಎಂಬ ಲೇಖನ ತನ್ನ ಶೀರ್ಷಿಕೆಯಲ್ಲೇ ವ್ಯಕ್ತಿಪರಿಚಯವನ್ನು ಹೇಳುತ್ತದೆ. ನಾಟಿ ವೈದ್ಯಕೀಯದ ಹೆಸರಿನಲ್ಲಿ ಜನರ ನಂಬಿಕೆಯನ್ನು ಗಳಿಸಿದ ಆನಂತರ ಪಾಂಡಿತ್ಯವನ್ನು ಪ್ರದರ್ಶಿಸುವ ಕ್ರಮವನ್ನು ಈ ಹಳ್ಳಿ ವೈದ್ಯರ ಮೂಲಕ ವಿವರಿಸಲಾಗಿದೆ.

ಅವರ ರೂಪವನ್ನು ಲೇಖಕರು ವಿವರಿಸುವ ಬಗೆ ಹೀಗೆ: ‘‘ಬೊಜ್ಜು ಶರೀರ, ನೆರೆತ ಗಡ್ಡ, ಉಷ್ಣ ವಲಯದ ಕಾಡಿನಂತೆ ಬೆಳೆದ ನಿಡಿದಾದ ಮೀಸೆ, ತಲೆಯಲ್ಲಿರುವ ನಾಲ್ಕು ಕೂದಲು, ಎರಡು ಫೀಟು ಉದ್ದದ ಮಾಂಸ ತುಂಬಿದ ಕಾಲುಗಳು, ಊರೆಲ್ಲ ಸುತ್ತಿ ಬಂದ ಪತ್ರದ ಮೇಲಿನ ಮೊಹರುಗಳಂತೆ ಮೈತುಂಬ ಹರಡಿದ ಗೋಪಿಯ ಮುದ್ರೆಗಳು, ಅವರ ತುಂಡುಗಚ್ಚೆ, ಅದರ ಮೇಲಿನ ನಾಲ್ಕೆಳೆಯ ಬೆಳ್ಳಿಯ ನೇವಳ, ಕೂದಲು ತುಂಬಿದ ಬೆನ್ನು, ಎದೆಗಳ ಮೇಲೆ ಮುಳಿಹುಲ್ಲಿನ ಗುಡ್ಡದ ದಾರಿಯಲ್ಲಿ ಸಾಗಿದ ದಾರಿಯಂತೆ ಮಲಗಿದ ಬೆರಳಿನಷ್ಟು ದಪ್ಪದ ಜನಿವಾರ...’’ ವಿವರಣೆಯಲ್ಲಿ ಗೋವಿಂದ ಭಟ್ಟರು ತೋರಿಸಿದ ಪರಿಣತಿಗೆ ಈ ಉದಾಹರಣೆ ಸಾಕು. ವ್ಯಂಗ್ಯದ ಧಾಟಿ ಹೀಗಿದೆ: ‘‘ಪಂಡಿತರು ಮೈ ತುಂಬ ಎಣ್ಣೆ ಹಚ್ಚಿಕೊಂಡು-(ಪಂಡಿತರು ‘ಎಣ್ಣೆ’ ಹಚ್ಚಿಕೊಳ್ಳುತ್ತಾರೆಯೇ? ಏನೋ ‘ತೈಲ’ವಿರಬೇಕು)-ಬೆರಣಿ ತಟ್ಟುತ್ತ ಕುಳಿತಿದ್ದರು. ಅವರ ಜನಿವಾರ ಕಿವಿಯ ಮೇಲೆ ಹಾದು ತಲೆಗೆ ಸುತ್ತಿಕೊಂಡಿತ್ತು. ಹತ್ತಿರ ಬರುವಾಗಲೇ ಎಣ್ಣೆಗೆ ಹಾಕಿದ ಬೆಳ್ಳುಳ್ಳಿಯ ವಾಸನೆ ಮೂಗಿಗೆ ಹೊಡೆಯುತ್ತಿತ್ತು. ಇನ್ನೊಂದೆಡೆ ಪಂಡಿತರ ಜಪ, ಪೂಜೆಗಳು ‘ಆಪೋಯಿಷ್ಠಾ-ಮಯೋಭವ’ಗಳ ಮಧ್ಯೆ ಹೆಂಡತಿಗೆ ‘ಅದು ಸರಿಯಾಗಲಿಲ್ಲ-ಇದು ಸರಿಯಾಗಲಿಲ್ಲ’ ಎಂದು ಬೈಯುತ್ತ ಸಾಂಗವಾಗಿ ನೆರವೇರಿದುವು.’’

‘ರಂಗಪ್ಪಯ್ಯ’ ಎಂಬ ಇನ್ನೊಂದು ವ್ಯಕ್ತಿಚಿತ್ರ ಆಧುನಿಕ ಗಾಂಧಿವಾದಿಯ ಹೂರಣವನ್ನು ಬಯಲಿಗೆಳೆಯುತ್ತದೆ. ಅವರ ಉಡುಪು ತೊಡುಪಿನ ಬಗ್ಗೆ ‘‘ಅವನ ಉಡುಪು ಬಹಳ ಸಾದಾ. ಅಪ್ಪಟ ಖಾದಿ. ಉತ್ತಮ ಖಾದಿ ಸಿಲ್ಕಿನ ಅಂಗಿ, ಅರ್ಧ ಇಂಚು ಜರಿಯ ಪಂಚೆ, ತಲೆಯ ಮೇಲೆ ಗಾಂಧಿ ಟೊಪ್ಪಿ, ಕಾಲಿಗೆ ತೆಳ್ಳಗಿನ ಬಾಟಾ ಚಪ್ಪಲಿ. ಈಗಿನ ಕಾಲದಲ್ಲಿ ಅವನ ಉಡುಪಿಗೆ 50-60 ರೂಪಾಯಿ ಬೀಳಬಹುದಾದರೂ ಅದು ಬಹಳ ಸಾದಾ. ಸಿಲ್ಕಿನದ್ದಾದರೂ ಶುದ್ಧ ಖಾದಿ. ಗಾಂಧಿಯವರು ಉಡುಪು ಸಾದಾ ಆಗಬೇಕೆಂದು ಹೇಳಿದ್ದರಲ್ಲವೆ? ಸಿಲ್ಕಿನದು ಆಗಬಾರದೆಂದು ಹೇಳಿದ್ದಾರೆಯೆ? ಖಾದಿ ಷರಾಯಿ (Pant) ಹಾಕಬಹುದಂತೆ! ಖಾದಿ ಹೇಟ್ (Hat) ಇಡಬಹುದಂತೆ! ಬಳಿಕ ಸಿಲ್ಕಿನ ಶರ್ಟು ಹಾಕಿದರೆ ಖಾದಿ ಸನ್ಯಾಸಕ್ಕೆ ಯಾವ ಕೊರತೆ?’’ ಎಂದು ಹೇಳುತ್ತಾರೆ. ಕಾಲೇಜಿನಲ್ಲಿ ಅವನ ನಂಬಿಕೆಗನುಗುಣವಾಗಿ ಮಾಡಿದ ಔಷಧೋಪಚಾರಕ್ಕಾಗಿ ಮೈದಾನಿನಲ್ಲಿ ಗುಂಡಿ ತೆಗೆದು ಅದರಲ್ಲಿ ಪ್ರೊಫೆಸರ್‌ರ ಕಾಲು ಸಿಕ್ಕಿ ಅವರಿಗಾದ ನೋವಿನ ಪರಿಣಾಮವನ್ನು ‘‘ಪ್ರೊಫೆಸರರ ಕಾಲು ಸರಿಯಾಗುವ ತನಕ (ಒಂದು ತಿಂಗಳಕಾಲ) ಆ ಕ್ಲಾಸಿಗೆ ಹಾಜರಿ ಸಹಿತ ರಜೆ ಸಿಕ್ಕಿತು.’’ ಎಂದು ವಿವರಿಸುತ್ತಾರೆ. ಅವನ ವಿಕ್ಷಿಪ್ತತೆಯನ್ನು ಹೇಳಿ ನಕ್ಕು ಕೊನೆಯಲ್ಲಿ ‘‘ಇಂಥ ರಂಗಪ್ಪ, ನಾಲ್ಕು ವರ್ಷಗಳ ಹಿಂದೆ ಫಕ್ಕನೆ ಮೃತನಾದ. ಆ ಗೆಳೆಯನ ನೆನಪು ಮಾತ್ರ ಅಚ್ಚಳಿಯದೆ ನಿಂತಿದೆ.’’ ಎಂದು ಮುಗಿಸುತ್ತಾರೆ.

‘ನನ್ನ ಗೆಳೆಯ-ತಿರುಪತಿ’ ಎಂಬ ಲೇಖನವು ಮರುಕ ಹುಟ್ಟಿಸುವಷ್ಟು ಮರೆವಿನ ಪ್ರಾಣಿ ದಯಾಪರ, ಪಾಪದ ಮನುಷ್ಯನ ಚಿತ್ರ. ಬಹಳಷ್ಟು ಓದಿದವರಂತೆ ಎದೆತಟ್ಟಿಕೊಳ್ಳುವ ಅವನ ಬಂಡವಾಳ ತಿಳಿದ ನಿರೂಪಕ ಅವನನ್ನು ಕುರಿತು ‘‘ಗೆಳೆಯನ ಓದಿನ ಪರಿಣಾಮ-ಪರಿಮಾಣ ಎರಡೂ ತಿಳಿಯಿತು’’ ಎನ್ನುತ್ತಾನೆ. ಕುದುರೆ ಸವಾರಿ, ಈಜು ಮುಂತಾದ ಸಾಹಸಗಳನ್ನು ಮಾಡಲು ಹೋಗಿ ಕೈಸುಟ್ಟುಕೊಂಡವನು. ಬೇಡದೇ ಇದ್ದ ವಸ್ತುಗಳನ್ನೆಲ್ಲ ಸಂಗ್ರಹಿಸಿ ತನ್ನ ಕೋಣೆಯಲ್ಲಿ ಕೂಡಿ ಹಾಕುವ ಈ ಮಹಾಶಯನ ಕುರಿತು ನಿರೂಪಕ ‘‘ತಿರುಪತಿಯ ಕೋಣೆಯಲ್ಲಿ ಕಡಿಮೆಯಲ್ಲಿ ಒಂದು ನೂರಾದರೂ ಮಕ್ಕಳಾಡುವ ಬೆಲೂನುಗಳು, ಒಂದು ನೂರೈವತ್ತು ಗಾಂಧಿ-ನೆಹರು ಫೋಟೋಗಳು, ಒಂದೂವರೆ ಸಾವಿರ ಅವನು ಓದದ, ಬಿಡಿಸಿ ನೋಡದ- ನಮಗೆ ಉಪಯೋಗವಾಗುವ ಪುಸ್ತಕ, ಪತ್ರಿಕೆಗಳು ಸಿಕ್ಕಿಯಾವು! ಸ್ಟಂಪುಗಳು, ತಿಪ್ಪೆಯಿಂದ, ಉಗುಳಿದ ರಸ್ತೆಯಿಂದ ಹೆಕ್ಕಿದ ಬೆಂಕಿಪೆಟ್ಟಿಗೆಯ ಚಿತ್ರಗಳು ಎಷ್ಟೊ! ಒಂದೆರಡು ಡಜನಾದರೂ ಸವೆದ ಎತ್ತಿನ ಲಾಳ ಅವನಲ್ಲಿ ಇರಲಾರದೆಂದು ನಾನು ಹೇಳಲಾರೆ!’’ ಎನ್ನುತ್ತಾನೆ.

‘ಕಪ್ಪಣಾಚಾರ್ಯರು’ ಇನ್ನೊಂದು ವಿಲಕ್ಷಣ ಚಿತ್ರ. ಬ್ರಿಟಿಷ್ ಮೋಹದ ಅತಿ ಶಿಸ್ತಿನ ಭಾರತೀಯ ಗೃಹಸ್ಥರೊಬ್ಬರ ಪರಿಚಯ ಈ ಲೇಖನದಲ್ಲಿದೆ. ‘‘ಹುಟ್ಟಿದಾರಭ್ಯ-ಇದು ತನಕವೂ-ಬ್ರಿಟಿಷರನ್ನು ಹೊಗಳಿದ ನಾಲಗೆಯದು, ಬ್ರಿಟಿಷರ ಚರಿತ್ರೆಯನ್ನು ಬಾಯಿಪಾಠ ಕಲಿತ ವಿದ್ವಾಂಸರವರು.’’ ಅವರ ಶಿಸ್ತು ಹೇಗಿದೆಯೆಂದರೆ- ‘‘ಆದರೆ ಅವರು ನಮ್ಮ ಕಾಲದ ಮುಖಂಡರಂತಲ್ಲ. ಅವರು ‘ದಿಲ್ಲಿಯಿಂದ ಹಳ್ಳಿಗೆ ಹೋಗಿ’ ಎನ್ನುತ್ತ ಹಳ್ಳಿಯನ್ನು ನೋಡಿ ತಿಳಿಯದ ಪ್ರಮುಖರಂತಲ್ಲ; ‘ಉಳುವವನಿಗೆ ಜಮೀನೆ’ಂದು ಬೊಬ್ಬಿಡುತ್ತ ಉಳುವವನಿಂದ ಚಿಕ್ಕಾಸು ಬಾಕಿಯಾದರೆ ಒಕ್ಕಲೆಬ್ಬಿಸಲು ವ್ಯಾಜ್ಯ ಹೂಡುವ ‘ಬಡವರ ಬಂಧು’ಗಳಂತೆ ಅವರಲ್ಲ. ಅವರು ‘ಶಿಸ್ತಿ’ನಡೆಯುತ್ತಾರೆ. ಅವರ ಎದುರಿನಲ್ಲಿ ದೊಡ್ಡದಾಗಿ ಮಾತನಾಡುವುದು ಕಷ್ಟ, ದೊಡ್ಡದಾಗಿ ನಕ್ಕರೆ ಮುಗಿಯಿತು- ನಕ್ಕವನು ಅವರ ಬೈಗುಳ ಕೇಳಿ, ಅವರ ಆರ್ಭಟೆ ಕಂಡು ಬಳಿಕೆರಡು ವರ್ಷ ಅವನ ತುಟಿಗಳಿಂದ ನಗೆ ಸೂಸದು.’’

ಶಾಲೆಗೆ ಹೋದ ಮಗ ಕಾಲಿಗೆ ಪೆಟ್ಟಾಗಿ ಬ್ಯಾಂಡೇಜು ಕಟ್ಟಿಸಿ ಬರುವಾಗ ಅದನ್ನು ಕಂಡ ತಂದೆ ವರ್ತಿಸುವುದು ಹೀಗೆ: ‘‘ಅವರ ಕಣ್ಣು ಸಹಜವಾಗಿ ಬ್ಯಾಂಡೆಜ್ ಕಟ್ಟಿದ ಕಾಲಿಗೆ ಹೋಯಿತು. ಆದರೆ ಅವರು ಕೇಳಿದ ಪ್ರಶ್ನೆ, ಈ ಹೊತ್ತು ಶಾಲೆಗೆ ಹೋಗುವಾಗ ಹೇಟ್ ತೆಕ್ಕೊಳ್ಳಲಿಲ್ಲವೆನೋ?’’ ಈ ಪುಸ್ತಕದ ಕೊನೆಯ ಲೇಖನ ‘ಪಿಎಚ್‌ಡಿ. ಡೊಂಕ’. ಇಲ್ಲೂ ಒಬ್ಬ ಅಕಡಮಿಕ್ ವಿಕ್ಷಿಪ್ತನ ಚಿತ್ರಣವಿದೆ. ‘‘ನಾಲ್ಕಡಿಯ, ಕೆದರಿದ ತಲೆಯ, ಮೊಣಕಾಲಿನ ತನಕ ಕಾಕಿ ಇಜಾರು ಧರಿಸಿ ಅದೇ ಬಣ್ಣದ ಹಳಸಲು ಕೋಟು ಹಾಕಿದ, ಕೈ ತುಂಬಾ ಪುಸ್ತಕಗಳನ್ನು ಹಿಡಿದುಕೊಂಡ ‘ಎಣ್ಣೆ ಕಪ್ಪಿನ ವ್ಯಕ್ತಿ’ ಈ ಪಿಎಚ್‌ಡಿ. ಡೊಂಕ. ತನ್ನ ಕೋಣೆಯಲ್ಲಿ ಪುಸ್ತಕಗಳನ್ನು ರಾಶಿ ಹಾಕಿಕೊಂಡು ಅವುಗಳೊಂದಿಗೆ ಜೀವಿಸುವ ಒಂದು ಜೀವಿ. ಒಂದು ಮಲಿನವಾದ ಹಾಸಿಗೆ ಈ ಪುಸ್ತಕಗಳ ಮೇಲೆ (ಭೀಷ್ಮ ಶರಶಯ್ಯೆಯಲ್ಲಿ ಮಲಗಿದಂತೆ) ನಿದ್ದೆ ಮಾಡಲು ಒದ್ದಾಡುತ್ತಿತ್ತು!’’ ಇದನ್ನು ನಿರೂಪಕ ‘ಆರೋಗ್ಯಧಾಮ’ವೆಂದು ಲೇವಡಿ ಮಾಡುತ್ತಾನೆ! ಕಲಿತರೂ ಡೊಂಕ ಕೊಳಕನೇ: ‘‘ಡೊಂಕ ‘ಹೋ ಹೋ ಹೋ’ ಎಂದು ಸಣ್ಣ ನಗೆ ನಕ್ಕ. ಹುಟ್ಟಿದ ಬಳಿಕ ತೊಳೆಯದ ಎರಡು ಹಲ್ಲುಗಳು ಇಣಿಕಿದವು.’’ ಆದರೆ ಲೇಖನದ ಕೊನೆಗೆ ಈ ಡೊಂಕನಿಗೆ ತನ್ನ ಬಗ್ಗೆ ಅರ್ಥವಾಗಿದೆಯೆಂದು ಮತ್ತು ತನ್ನ ಜೊತೆಗೆ ಇತರರು ಸೇರುವುದಿಲ್ಲವೆಂಬುದು ಗೊತ್ತಾಗಿದೆಯೆಂದು ನಮಗನ್ನಿಸುತ್ತದೆ: ‘‘ಆಗಲಿ, ನಿಮ್ಮಂಥವರಿಗೆ ನನ್ನೊಡನೆ ಬರಲು ನಾಚಿಕೆಯಾಗುತ್ತದೆ; ಗೊತ್ತು ನನಗೆ! ಎಂದು ಅಪ್ಪಣೆ ಕೊಟ್ಟರು. ಅವರ ನುಡಿಯಲ್ಲಿ ಒಂದು ವಿಚಿತ್ರ ತೆರನಾದ ನೋವು ಹಣಿಕಿ ಹಾಕಿತ್ತು.’’

ಮುಂದೆ ಕೊನೆಯ ಭಾಗದಲ್ಲಿ ನಿರೂಪಕನು ಹಾಸ್ಯ ಪ್ರಸಂಗವೊಂದನ್ನು ನೆನಪಿಸುತ್ತ ‘‘ಬೇರೆ ಸಂದರ್ಭವಾಗುತ್ತಿದ್ದರೆ ನನಗೆ ನಗು ಬರುತ್ತಿತ್ತೆಂದು ಕಾಣುತ್ತದೆ. ಆದರೆ ಪಿಎಚ್‌ಡಿ. ಡೊಂಕನನ್ನು ಕಂಡು ಮನಸ್ಸು ಏಕೋ ವ್ಯಸನದಿಂದ ಕೂಡಿತ್ತು.’’ ಎಂದು ಹೇಳಿ ಈ ಅಕಡೆಮಿಕ್ ಕೂಪಮಂಡೂಕನನ್ನು ಅರ್ಥೈಸುತ್ತಾನೆ. ನಾನು ಉದಾಹರಿಸಿದ ಭಾಗಗಳು ಲೇಖನದ ವ್ಯಕ್ತಿಯ ಕುರಿತಂತೆ ಮಾತ್ರವಲ್ಲ, ಲೇಖಕರು ಲೋಕದ ಅಸಂಗತತೆಯನ್ನು ನಿರೂಪಿಸುವ ಕುರಿತೂ ಬಹಳಷ್ಟನ್ನು ಹೇಳುತ್ತವೆ. ವಿದ್ಯೆ, ಹಣ, ಪಾಂಡಿತ್ಯ ಇವೆಲ್ಲವೂ ಸರಿಪಾಕದಲ್ಲಿಲ್ಲದಿದ್ದರೆ ಅವು ನಗೆಪಾಟಲಾಗುತ್ತವೆಯೆಂಬುದಕ್ಕೆ ಇಲ್ಲಿ ಚಿರಪರಿಚಿತ ನಿದರ್ಶನಗಳಿವೆ. ಇಂತಹ ವ್ಯಕ್ತಿಗಳು ನಿತ್ಯ ಕಾಣಸಿಗುತ್ತವೆ. ನೋಡುವ ಕಣ್ಣುಗಳು ಬೇಕು, ಅಷ್ಟೇ.

-4-

ವಕೀಲರಾಗಿ ಸಾಹಿತ್ಯದ ಒಳಗಣ್ಣನ್ನು ಸದಾ ತೆರೆದಿಟ್ಟುಕೊಳ್ಳುವುದು ಎಷ್ಟು ಕಷ್ಟವೆಂಬುದು ಗೋವಿಂದ ಭಟ್ಟರಂತಹ ವಕೀಲ ಸಾಹಿತಿಗಳಿಗಷ್ಟೇ ಗೊತ್ತು. ವಕೀಲರು ಎಷ್ಟೇ ಒಳನೋಟದಿಂದ ಬರೆಯಲಿ, ಅಕಡಮಿಕ್ ವಲಯದವರು ಅವರಿಗೆ ಅಡ್ಡ ಪಂಕ್ತಿ ನೀಡಿ ಅಸ್ಪಶ್ಯರಂತೆ ಕಂಡು ಅವರನ್ನು ‘ವಕೀಲರಾದರೂ ಸಾಹಿತ್ಯಾಸಕ್ತರು, ಬರಹಗಾರರು’ ಎಂದೇ ಪರಿಚಯಮಾಡುವುದನ್ನು ಕಾಣುತ್ತೇವೆ. ಅವರ ಜೀವನ ಪರಿಚಯದಲ್ಲಿ ಅವರು ‘‘ಶ್ರೀಯುತ ಕಡೆಂಗೊಡ್ಲು ಶಂಕರಭಟ್ಟರೊಂದಿಗೆ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿ, ಆನಂತರ ಪ್ರಧಾನ ಸಂಪಾದಕರಾಗಿ ವಿ.ಬಿ.ಹೊಸಮನೆ ಯವರೊಂದಿಗೆ ‘ರಾಷ್ಟ್ರಮತ’ ವಾರಪತ್ರಿಕೆಯನ್ನು ಹಲವು ವರ್ಷ ನಡೆಸಿಕೊಟ್ಟವರು.’’ ಎಂಬ ಉಲ್ಲೇಖವಿದೆ. ಮಾಸ್ತಿ, ಕಾರಂತ, ಕೆಎಸ್‌ನ, ಪುತಿನ, ನಿರಂಜನ, ಚಿತ್ತಾಲ, ವೈದೇಹಿ ಹೀಗೆ ಅಕಡಮಿಕ್ ಅಲ್ಲದ ವಲಯದಿಂದ ಬಂದ ಒಳ್ಳೆಯ ಲೇಖಕರು ಕನ್ನಡದಲ್ಲಿ ಸಾಕಷ್ಟಿದ್ದಾರೆ. ಗೋವಿಂದ ಭಟ್ಟರ ಈ ಎರಡು ಕೃತಿಗಳು ಅವರ ಪ್ರತಿಭೆ ಮತ್ತು ಸಾಹಿತ್ಯ ಸಾಧನೆಗೆ ಸಾಕಷ್ಟು ಬೆಳಕು ಚೆಲ್ಲುತ್ತವೆಂದು ತಿಳಿಯಬಹುದು. ಅನ್ನ ಬೆಂದಿದ್ದನ್ನು ನೋಡಬೇಕಾದರೆ ಒಂದು ಅಗುಳು ಸಾಕು. ಅವರ ಅಪ್ರಕಟಿತ ಲೇಖನಗಳ ಬಗ್ಗೆ ಸಂಗ್ರಹ, ಸಂಪಾದನೆ, ಪ್ರಕಟಣೆಯ ಕೆಲಸ ನಡೆಯಬೇಕಷ್ಟೆ. ಆದರೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಹೊಳೆದದ್ದು ತಾರೆ ಉಳಿದದ್ದು ಆಕಾಶ ಎಂದು ನಿಡಿದುಸಿರಿಡಬಹುದು.

ಅವರ ಉಳಿದ ಲೇಖನಗಳು ಪ್ರಕಟವಾಗಲಿ, ಮತ್ತು ಅವರಿಗೆ ಮರಣೋತ್ತರವಾಗಿಯಾದರೂ ಮತ್ತು ಅವರಂತೆ ಅವಜ್ಞೆಗೊಳಗಾದ ಇತರರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಿಗಬೇಕಾದ ಸ್ಥಾನಮಾನಗಳು ಸಿಗಲಿ ಎಂದು ಆಶಿಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top