ಮತಗಟ್ಟೆ ಸಮೀಕ್ಷೆಯ ಜೊತೆಜೊತೆಗೆ ಶೇರು ಗೂಳಿಗಳ ದಾಳಿ! | Vartha Bharati- ವಾರ್ತಾ ಭಾರತಿ

---

ಮಾರುಕಟ್ಟೆಗಳು ಸ್ಥಿರತೆಯನ್ನು ಮಾತ್ರವಲ್ಲ ಸರ್ವಾಧಿಕಾರವನ್ನೂ ಪ್ರೀತಿಸುತ್ತವೆ.

ಮತಗಟ್ಟೆ ಸಮೀಕ್ಷೆಯ ಜೊತೆಜೊತೆಗೆ ಶೇರು ಗೂಳಿಗಳ ದಾಳಿ!

ಭಾರತದ ಸ್ಟಾಕ್ ಮಾರುಕಟ್ಟೆಗಳ ಸೆನ್ಸೆಕ್ಸ್ ಸೂಚ್ಯಂಕ ಮೊಟ್ಟಮೊದಲ ಬಾರಿಗೆ 40,000 ಅಂಕಗಳನ್ನು ದಾಟಿ ಮುನ್ನುಗ್ಗಿದೆ. ಈ ಕನಸಿನ ಓಟವು ಮೇ 20ರಂದು ಚುನಾವಣಾ ಫಲಿತಾಂಶಗಳ ಬಗೆಗಿನ ಮತಗಟ್ಟೆ ಸಮೀಕ್ಷೆಗಳ (ಎಕ್ಸಿಟ್ ಪೋಲ್) ಫಲಿತಾಂಶಗಳು ಹೊರಬೀಳುತ್ತಿದ್ದಂತೆ ಶುರುವಾಗಿತ್ತು. ಈ ಬಗೆಯ ಹೆಚ್ಚಳವು ಅತ್ಯಾಕರ್ಷಕವಾಗಿ ಕಾಣಲು ಕಾರಣವೇನೆಂದರೆ ವ್ಯತಿರಿಕ್ತ ಜಾಗತಿಕ ಆರ್ಥಿಕ ಮತ್ತು ವಾಣಿಜ್ಯ ಅಂದಾಜುಗಳಿಂದಾಗಿ ಸೂಚ್ಯಂಕ ಈ ಮುಂಚೆ ತೀರಾ ಕೆಳಹಂತದಲ್ಲಿದ್ದದ್ದು. ಅದೇನೇ ಇದ್ದರೂ ರಿಸರ್ವ್ ಬ್ಯಾಂಕು ಜೂನ್ 6ರಂದು ಬ್ಯಾಂಕುಗಳ ಬಡ್ಡಿದರದಲ್ಲಿ ಕಡಿತವನ್ನು ಘೋಷಿಸಿದೊಡನೆಯೇ ಶೇರು ಮಾರುಕಟ್ಟೆಯು 400 ಅಂಕಗಳಷ್ಟು ಕುಸಿಯಿತು.
  ಈ ಸಣ್ಣಮಟ್ಟದ ಕುಸಿತವೇನೇ ಇರಲಿ ಎನ್‌ಡಿಎ ಸರಕಾರದ ಅಥವಾ ಯುಪಿಎ-2 ಸರಕಾರದ ಘೋಷಣೆಗಳೂ ಕೂಡಾ ಶೇರುಮಾರುಕಟ್ಟೆಯಲ್ಲಿ ಹುಟ್ಟಿಸದಷ್ಟು ಉತ್ಸಾಹವನ್ನು ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಹುಟ್ಟುಹಾಕಿದವು. ಏಕೆ ಹೀಗೆ? ಶೇರುಮಾರುಕಟ್ಟೆಗಳ ಚಲನೆಯು ಎರಡು ಅಂಶಗಳನ್ನು ಹೊಂದಿರುತ್ತವೆ: ಶೇರು ಮಾರಾಟವಾಗುವ ಕಾರ್ಪೊರೇಟ್ ಸಂಸ್ಥೆಗಳ ಮೂಲಭೂತ ಅಂಶಗಳ ದೀರ್ಘಕಾಲಿನ ಸ್ಥಿತಿಗತಿ ಮತ್ತು ವ್ಯವಸ್ಥೆಯು ಎದುರಿಸಬೇಕಾಗಿ ಬರುವ ಅನಿರೀಕ್ಷಿತ ಮತ್ತು ದಿಢೀರ್ ಆಘಾತಗಳು. ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಹಾಲೀ ಚಲನೆಗಳನ್ನು, ಕೀನ್ಸ್ ಮುಂದಿಟ್ಟ ರೀತಿ ಎರಡು ವಿಭಾಗಗಳಾಗಿ ಅರ್ಥಮಾಡಿಕೊಳ್ಳಬಹುದು. ಒಂದು, ಈ ಹೆಚ್ಚಳದಲ್ಲಿ ಎಷ್ಟು ಭಾಗ ಸಟ್ಟಾ-ಜೂಜು ಲೆಕ್ಕಾಚಾರದಿಂದ ಬಂದಿರುವುದು (ಇದರಿಂದ ತತ್ಕಾಲಿನ ಲಾಭವಷ್ಟೇ ಸಾಧ್ಯ). ಎರಡನೆಯದು, ಹೆಚ್ಚಳದ ಎಷ್ಟು ಭಾಗ ಆ ಉದ್ಯಮಗಳ ಆರ್ಥಿಕ ಆರೋಗ್ಯದ ಕಾರಣದಿಂದ ಹರಿದು ಬಂದಿರುವುದು (ಅಂದರೆ ಆಯಾ ಉದ್ಯಮಗಳ ಮೂಲಭೂತ ಆರ್ಥಿಕ ಆರೋಗ್ಯಗಳು). ಒಟ್ಟಾರೆ ಲೆಕ್ಕಾಚಾರದಲ್ಲಿ ಹೆಚ್ಚಳದ ಬಹುಭಾಗವು ಮೊದಲನೆಯ ಕಾರಣದಿಂದ ಉಂಟಾಗಿದೆಯೆಂದರೆ ಮಾರುಕಟ್ಟೆಯ ಮೌಲ್ಯವನ್ನು ಇರುವುದಕ್ಕಿಂತ ಉತ್ಪ್ರೇಕ್ಷಿತವಾಗಿ ಅಂದಾಜಿಸಲಾಗಿದೆಯೆಂದರ್ಥ ಮತ್ತು ಕೂಡಲೇ ಅದನ್ನು ಸರಿಪಡಿಸಲು ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕೆಂದರ್ಥ. ಅದರ ಬದಲಿಗೆ ಹೆಚ್ಚಳದ ಬಹುಭಾಗವು ಆಯಾ ಉದ್ಯಮಗಳ ಮೂಲಭೂತ ಆರ್ಥಿಕ ಆರೋಗ್ಯಗಳನ್ನು ಆಧರಿಸಿ ಸಂಭವಿಸಿದೆಯೆಂದಾದಲ್ಲಿ ಹಾಲೀ ಚಾಲ್ತಿ ಬೆಲೆಯ ಗಳಿಕೆಗಳ ಅನುಪಾತವು ಹೆಚ್ಚೇ ಇದ್ದರೂ ಅವು ಭವಿಷ್ಯದಲ್ಲಿನ ಆರ್ಥಿಕತೆಯ ಆರೋಗ್ಯದ ಬಗ್ಗೆ ಉತ್ತಮ ನಿರೀಕ್ಷೆಗಳನ್ನು ಇಟ್ಟುಕೊಂಡು ಮಾಡಲಾಗಿದೆಯೆಂದು ಅರ್ಥೈಸಿಕೊಳ್ಳಲಾಗುತ್ತದೆ. ಆದರೂ ಈ ಸಟ್ಟಾ ಬಝಾರಿನಲ್ಲಿ ಹಿಟ್ಟನ್ನು ಹೊಟ್ಟಿನಿಂದ ಬೇರ್ಪಡಿಸುವುದು ಕಷ್ಟ. ಏಕೆಂದರೆ ಇಂದು ಹೊಟ್ಟು ಎಂದು ಭಾವಿಸಲಾಗಿರುವುದು ನಾಳೆ ಹಲವಾರು ಕಾರಣಗಳಿಗೆ ಹಿಟ್ಟಾಗಿ ಬಿಡಬಹುದು. ಏಕೆಂದರೆ ಒಮ್ಮಾಮ್ಮೆ ಹಾಲೀ ಹೆಚ್ಚಳವು ಆಯಾ ಉದ್ಯಮಗಳು ಚೆನ್ನಾಗಿ ಕಾರ್ಯನಿರ್ವಹಿಸಲಿದೆ ಎಂಬ ಅಂದಾಜಿನ ಮೇಲೆ ಮಾಡಿದವಾಗಿದ್ದು ಅವರ ನಿರೀಕ್ಷೆಗೆ ತಕ್ಕಂತೆ ಹಾಗೆ ಆಗಿಯೂ ಬಿಡಬಹುದು. ಆದರೆ ಕಳೆದ ಕೆಲವು ವಾರಗಳಲ್ಲಿ ಮಾರುಕಟ್ಟೆಯಲ್ಲಿ ಕಂಡುಬಂದ ಈ ರಭಸಕ್ಕೆ ಪ್ರೇರಣೆಯೇನು?
  ಮೊದಲನೆಯದಾಗಿ ಒಂದೇ ದಿನದಲ್ಲಿ ಶೇರು ಬಝಾರಿನಲ್ಲಿ ಆ ಪ್ರಮಾಣದ ವ್ಯವಹಾರವಾಗಲು ತತ್‌ಕ್ಷಣದ ಕಾರಣವೆಂದರೆ, ಅಂದು ಎಲ್ಲಾ ಎಕ್ಸಿಟ್ ಪೋಲ್‌ಗಳೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ವಾಪಸ್ ಅಧಿಕಾರಕ್ಕೆ ಮರಳುತ್ತದೆಂದು ಭವಿಷ್ಯ ನುಡಿದದ್ದು. ಎರಡನೆಯ ಕಾರಣ ಮೊದಲನೆಯದರ ಜೊತೆ ಸಂಬಂಧ ಹೊಂದಿದೆ. ಒಂದು ಬಹುಮತವುಳ್ಳ ಸ್ಥಿರ ಸರಕಾರ ರಾಜಕೀಯ ಸ್ಥಿರತೆಯನ್ನು ಕೊಡುವುದರ ಮೂಲಕ ನಿರೀಕ್ಷಿತ ವಾಣಿಜ್ಯ ವಾತಾವರಣವನ್ನು ಒದಗಿಸಬಹುದೆಂಬ ದೀರ್ಘಕಾಲೀನ ಲೆಕ್ಕಾಚಾರಗಳೂ ಸಹ ಇದಕ್ಕೆ ಕಾರಣವಾಗಿವೆ. ಆದರೆ ಈ ಸರಕಾರವು ತನ್ನ ಮೊದಲ ಅವಧಿಯಲ್ಲಿ ಕೂಡಾ ಆರ್ಥಿಕತೆಯ ಪುನಶ್ಚೇತನಕ್ಕೆ ಮಾಡಬೇಕಾದುದನ್ನು ಮಾಡದ ಚರಿತ್ರೆಯನ್ನು ಹೊಂದಿರುವಾಗ ಕೇವಲ ಮರು ನಿರೀಕ್ಷೆಗಳೇ ಹೂಡಿಕೆ ಮಾಡಲು ಸಾಲುವುದಿಲ್ಲ. ಹಳೆಯ ರೀತಿ ಒಂದು ಅಸಮರ್ಥ ಸರಕಾರವೇ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾವ ಹೂಡಿಕೆದಾರರೂ ಉತ್ತಮ ಸಂಕೇತವೆಂದು ಭಾವಿಸುವುದಿಲ್ಲ. ಹಾಗಿದ್ದರೂ ಏಕೆ ಅಂದು ಸಟ್ಟಾ ಬಝಾರಿನಲ್ಲಿ ಆ ಪ್ರಮಾಣದ ಹೂಡಿಕೆಯಾಯಿತು? ಜನರ ಸಂಪೂರ್ಣ ವಿಶ್ವಾಸವನ್ನು ಗೆದ್ದುಕೊಂಡಂತೆ ಕಾಣುವ ನರೇಂದ್ರ ಮೋದಿಯಂಥ ‘ಪ್ರಬಲ’ ನಾಯಕ, ರಾಜಕೀಯವಾಗಿ ಜಾರಿ ಮಾಡಲು ಅತಿಕಷ್ಟಕರವಾಗಿರುವ ಆದರೆ ಅತ್ಯಂತ ಮಾರುಕಟ್ಟೆ ಸ್ನೇಹಿಯಾಗಿರುವ ಆರ್ಥಿಕ ಸುಧಾರಣೆ ನೀತಿಗಳನ್ನು ಜಾರಿ ಮಾಡುವಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬಹುದೆಂಬ ಭರವಸೆಯನ್ನು ಕಾರ್ಪೊರೇಟುಗಳಲ್ಲಿ ಹುಟ್ಟಿಸಿದೆ. ಮೋದಿಯವರು ತಮ್ಮ ಈ ಎರಡನೇ ಅವಧಿಯಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸುವ ಮತ್ತು ಕಠಿಣವಾದ ಕಾರ್ಮಿಕ ನೀತಿಗಳನ್ನು ಜಾರಿಗೆ ತರುವ ಕ್ರಮಗಳನ್ನು ಕೈಗೊಳ್ಳುತ್ತಾರೆಂದು ಕಾರ್ಪೊರೇಟ್ ವಲಯ ನಿರೀಕ್ಷಿಸುತ್ತಿದೆ. ಕಾರ್ಪೊರೇಟ್ ವಲಯಕ್ಕೆ ಮೋದಿಯ ಬಗ್ಗೆ ಇರುವ ನಿರೀಕ್ಷೆಗಳು ಅತಿಯಾದದ್ದೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ತಮ್ಮ ಮೊದಲ ಅವಧಿಯಲ್ಲಿ ಮೋದಿಯವರು ಜನರಿಂದ ಅತ್ಯಂತ ವಿರೋಧ ಎದುರಿಸಿದ ನೋಟು ನಿಷೇಧ ಕ್ರಮವನ್ನು ಕೈಗೊಳ್ಳಲಿಲ್ಲವೇ?
ಮೂರನೆಯದಾಗಿ, ಐಎಂಎಫ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನು ಅತಿವೇಗವಾಗಿ ವರ್ಧಿಸುತ್ತಿರುವ ವಿಶ್ವದ ಮೂರನೇ ಆರ್ಥಿಕತೆಯೆಂದು ಘೋಷಿಸಿದ್ದೂ ಸಹ ಸರಕಾರದ ತತ್‌ಕ್ಷಣದ ಕಾರ್ಯನಿರ್ವಹಣೆಯ ಬಗ್ಗೆ ಭರವಸೆಗಳನ್ನು ಹುಟ್ಟಿಸುವಲ್ಲಿ ಪ್ರಮುಖ ಪಾತ್ರವನ್ನೇ ನಿರ್ವಹಿಸಿತು. ಇದು ಆಶ್ಚರ್ಯಕರ. ಏಕೆಂದರೆ ಕಳೆದ ಹಲವು ತ್ರೈಮಾಸಿಕಗಳಲ್ಲೂ ಭಾರತದ ಆರ್ಥಿಕತೆ ಯಾವ ಚೇತರಿಕೆಯನ್ನೂ ಕಂಡಿರಲಿಲ್ಲ. ಹೀಗಾಗಿ ಹೂಡಿಕೆದಾರದು ಅಷ್ಟೇನೂ ಹಿತವಾಗಿರದಿದ್ದ ಗತ ಹಾಗೂ ಅನಿಶ್ಚಿತ ಭವಿಷ್ಯ ಎರಡರ ಮಧ್ಯೆ ಜೂಜನ್ನೇ ಆಡುತ್ತಿದ್ದಾರೆ. ಈ ಉತ್ಸಾಹಕ್ಕೆ ಮತ್ತೊಂದು ಕಾರಣವೇನೆಂದರೆ ತೈಲ ಮಾರುಕಟ್ಟೆಯಲ್ಲಿ ದರಗಳು ಇನ್ನೂ ಅಗ್ಗವಾಗಿಯೇ ಮುಂದುವರಿದಿರುವುದರಿಂದ ಸರಕಾರವು ತತ್‌ಕ್ಷಣದಲ್ಲಿ ‘ಮಾರುಕಟ್ಟೆಯನ್ನು ಒಳಗೊಳ್ಳುವ’ ಹಣಕಾಸು ನೀತಿಯನ್ನೇ ಅನುಸರಿಸಬಹುದೆಂಬ ನಿರೀಕ್ಷೆಯನ್ನು ಮಾರುಕಟ್ಟೆಯು ಹೊಂದಿದೆ. ಸಾಧಾರಣ ಸಂದರ್ಭಗಳಲ್ಲಿ ಕಡಿಮೆ ಲಾಭದ ಬಾಂಡುಗಳು ಶೇರುಗಳ ಖರೀದಿಯನ್ನು ಅತಿ ಹೆಚ್ಚು ಆಕರ್ಷಕಗೊಳಿಸುತ್ತದೆ. ಇದಲ್ಲದೆ ಬಡ್ಡಿದರ ಇಳಿಸುವ ನಿರೀಕ್ಷೆಯೂ ಕಾರ್ಪೊರೇಟ್ ಹೂಡಿಕೆ ಮತ್ತು ಮನೆಮಟ್ಟುಗಳ ಹೂಡಿಕೆಗಳು ಹೆಚ್ಚಿಸಿ ಒಟ್ಟಾಗಿ ಆರ್ಥಿಕತೆ ಚೇತರಿಸಿಕೊಳ್ಳಬಹುದೆಂಬ ಆಶಾಭಾವನೆಯೂ ಸಹ ಹೂಡಿಕೆಯ ಪ್ರೇರಣೆಯನ್ನು ಒದಗಿಸಿತು. ಆದರೆ ರಿಸರ್ವ್ ಬ್ಯಾಂಕು ಮಾತ್ರ ಗೊಂದಲಕಾರಿ ಸಂಕೇತಗಳನ್ನು ನೀಡಿದೆ. ಒಂದೆಡೆ ಅದು ಬಡ್ಡಿದರಗಳನ್ನು ಕಡಿತಗೊಳಿಸಿದೆಯಾದರೂ ಒಟ್ಟಾರೆ ಅಭಿವೃದ್ಧಿಯ ಗತಿ ಇಳಿಮುಖವೇ ಆಗುಬಹುದೆಂಬ ಸೂಚನೆಯನ್ನು ನೀಡಿದೆ ಮತ್ತು ನಗದು ಹರಿವಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ ಯಾವ ನೇರ ಪರಿಹಾರವನ್ನೂ ರಿಸರ್ವ್ ಬ್ಯಾಂಕ್ ಸೂಚಿಸಿಲ್ಲ.
ನಾಲ್ಕನೆಯದಾಗಿ 2019ರ ಸಾಲಿನಲ್ಲಿ ಈವರೆಗೆ ಶೇರುಮಾರುಕಟ್ಟೆಗೆ ಅಗಾಧವಾದ ವಿದೇಶಿ ಶೇರು ಬಂಡವಾಳ ಹೂಡಿಕೆಗಳು ಹರಿದು ಬಂದಿವೆ. ಈ ಹರಿವಿಗೆ ಒಂದಷ್ಟು ಕಾರಣ ಹೂಡಿಕೆದಾರರ ದೇಶಗಳಲ್ಲಿನ ಪರಿಸ್ಥಿತಿಗಳು ಲಾಭದಾಯಕವಾಗಿರದೆ ಹೊರಹೂಡಿಕೆ ಮಾಡುವಂತೆ ಮಾಡಿರುವ ‘ಹೊರದಬ್ಬುವ’ (ಪುಶ್) ಅಂಶಗಳು. ಇವುಗಳಲ್ಲಿ ಅಮೆರಿಕ ಮತ್ತು ಚೀನಾಗಳ ನಡುವೆ ಸ್ಫೋಟಗೊಂಡಿರುವ ಮಾರುಕಟ್ಟೆ ಯುದ್ಧಗಳು, ಅಮೆರಿಕದ ಆರ್ಥಿಕತೆ ಎಣಿಸಿದ ರೀತಿಯಲ್ಲಿ ಚೇತರಿಸಿಕೊಳ್ಳದಿರುವುದು, ಅಮೆರಿಕದ ಹಣಕಾಸು ನೀತಿಗಳು ಸಡಿಲಗೊಂಡು ಅಮೆರಿಕದ ಬಾಂಡುಗಳ ಖರೀದಿಯಿಂದ ಸಿಗುವ ಲಾಭಾಂಶವು ಕಡಿಮೆಯಾಗುವ ನಿರೀಕ್ಷೆಗಳು ಪ್ರಮುಖವಾದವುಗಳು. ವಿನಿಮಯದ ದರಗಳ ತೊಂದರೆ ಎದುರಾಗದಿದ್ದಲ್ಲಿ ಈ ಕೊನೆಯ ಅಂಶವು ಏಕಕಾಲದಲ್ಲಿ ಹಲವು ದೇಶಗಳ ಮಾರುಕಟ್ಟೆಗಳ ವಹಿವಾಟನ್ನು ಹೆಚ್ಚಿಸಬಹುದು. ಇನ್ನು ಭಾರತದ ಶೇರು ಮಾರುಕಟ್ಟೆಯ ಕಡೆಗೆ ‘ಸೆಳೆಯುವ’ (ಪುಲ್) ಅಂಶದ ಬಗ್ಗೆ ಹೇಳುವುದಾದರೆ ಅವೆಲ್ಲಾ ಸ್ಥಳೀಯ ಹೂಡಿಕೆದಾರರನ್ನು ಮಾತ್ರ ಪ್ರಭಾವಿಸಿರುವ ವಿಷಯಗಳಾಗಿವೆ.
   ಶೇರು ಮಾರುಕಟ್ಟೆಯ ಗೂಳಿಗಳು ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡಿವೆಯೋ ಇಲ್ಲವೋ, ಒಂದಂತೂ ಖಂಡಿತ ನಿಜ: ಎಕ್ಸಿಟ್ ಪೋಲ್ ಫಲಿತಾಂಶಗಳ ನಂತರದಲ್ಲಿ ತಾತ್ಕಾಲಿಕ ಅವಧಿಗೆ ಶೇರು ಮಾರುಕಟ್ಟೆಯಲ್ಲಿ ಕಂಡ ಏರಿಕೆಗಳು ನಿಜಾರ್ಥದಲ್ಲಿ ಹೊಟ್ಟಾಗಿರುತ್ತವೆಯೇ ಹೊರತು ಹಿಟ್ಟಾಗಿರುವುದಿಲ್ಲ. ಅಲ್ಲದೆ ಇದೊಂದು ಉತ್ಪ್ರೇಕ್ಷಿತ ಮೌಲ್ಯಗಳನ್ನು ಪಡೆದ ಮಾರುಕಟ್ಟೆಯೇ ಆಗಿದ್ದಲ್ಲಿ ಇಂದಿನ ಅತ್ಯಂತ ಅನಿಶ್ಚಿತ ಜಾಗತಿಕ ವಾತಾವರಣದಲ್ಲಿ ಯಾವುದೇ ಆರ್ಥಿಕತೆಗೂ ಹಾನಿಕಾರಕವಾದ ಪರಿಣಾಮಗಳನ್ನೇ ಬೀರಲಿವೆ. ಈ ಬಗೆಯ ಉತ್ಪ್ರೇಕ್ಷಿತ ಮೌಲೀಕರಣದಿಂದ ಉಂಟಾಗುವ ಅಪಾಯಗಳಿಂದ ಪಾರಾಗಲು ಕೀನ್ಸ್ ವಾದಿಗಳು ಇಂಥಾ ವ್ಯವಹಾರಗಳ ಮೇಲೆ ಅಲ್ಪಕಾಲೀನ ಲಾಭ ತೆರಿಗೆಯನ್ನು ವಿಧಿಸಬೇಕೆಂದು ಪ್ರತಿಪಾದಿಸುತ್ತಾರೆ. ಅದೇ ಸಮಯದಲ್ಲಿ ಅವು ಶೇರುಮಾರುಕಟ್ಟೆಯಲ್ಲಿನ ಹೂಡಿಕೆಯನ್ನೇ ನಿರುತ್ತೇಜಗೊಳಿಸಬಾರದು. ಏಕೆಂದರೆ ಅದು ಅಗಾಧ ಪ್ರಮಾಣದಲ್ಲಿರುವ ಅವಿಭಜಿತ ಬಂಡವಾಳವನ್ನು ವಿಭಜಿತಗೊಳಿಸಿ ಹೂಡಿಕೆಯಲ್ಲಿರುವ ಅಪಾಯಗಳನ್ನು ಕಡಿಮೆ ಮಾಡುತ್ತವೆ. ಇದಕ್ಕೆ ಅತ್ಯುತ್ತಮ ಮಾರ್ಗವೆಂದರೆ ವಿತ್ತೀಯ ನಿಯಂತ್ರಣ ಸಾಧನಳ ಮೂಲಕ ಸರಕಾರವೇ ಆರ್ಥಿಕತೆಯ ಸಾಧನಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದೇ ಹೊರತು ಕಾರ್ಪೊರೇಟ್ ಹೂಡಿಕೆ ಅಥವಾ ಮನೆವಾರು ಹೂಡಿಕೆಗಳಂತಹ ಪರೋಕ್ಷ ಮತ್ತು ತನ್ನ ಕೈಲಿರದ ಸಾಧನಗಳನ್ನು ಅವಲಂಬಿಸುವುದಲ್ಲ. ದುರದೃಷ್ಟವಶಾತ್ ಹಾಲಿ ಆಡಳಿತರೂಢ ಸರಕಾರವು ಎಂತಹ ಕಠಿಣ ಸಂದರ್ಭಗಳಲ್ಲೂ ಕೂಡಾ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಶಾಸನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪಣತೊಟ್ಟಿದೆ. ಇದರಿಂದಾಗಿ ಸರಕಾರಕ್ಕೆ ಯಾವುದೇ ನೀತಿಗಳ ಮೂಲಕ ಆರ್ಥಿಕತೆಯನ್ನು ಪ್ರಭಾವಿಸುವ ಅವಕಾಶಗಳೇ ಇಲ್ಲದಂತಾಗುತ್ತದೆ ಮತ್ತು ಆ ಮೂಲಕ ದೇಶದ ಆರ್ಥಿಕತೆಯ ಉದ್ದೇಶಗಳ ಬಗ್ಗೆ ಯಾವ ಕಾಳಜಿಯನ್ನೂ ಹೊಂದಿರದ ಶೇರುಬಝಾರಿನ ಏರಿಳಿವುಗಳಿಗೆ ಮತ್ತು ಕಾರ್ಪೊರೇಟ್ ಕಂಪೆನಿಗಳ ನಿರ್ಧಾರಗಳಿಗೆ ದೇಶದ ಆರ್ಥಿಕತೆಯು ಅಧೀನವಾಗಬೇಕಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top