ನಾರ್ಲ ವೆಂಕಟೇಶ್ವರ ರಾವು ಅವರ ‘ಸೀತೆಯ ಭವಿಷ್ಯ’ | Vartha Bharati- ವಾರ್ತಾ ಭಾರತಿ

ನಾರ್ಲ ವೆಂಕಟೇಶ್ವರ ರಾವು ಅವರ ‘ಸೀತೆಯ ಭವಿಷ್ಯ’

ಭಾಗ-1
ಯಾವುದೇ ಕೃತಿಯ ಮುನ್ನುಡಿಗೂ, ಮೊದಲ ಮಾತಿಗೂ, ಪೀಠಿಕೆಗೂ ವ್ಯತ್ಯಾಸವಿದೆಯೆಂಬುದು ಸಾಹಿತ್ಯದ ಪ್ರಾಥಮಿಕ ಓದುಗರೂ ಬಲ್ಲರು. ಇಂತಹ ಪೀಠಿಕೆಯಿಂದಾಗಿ ನಾಟಕ ಕೇವಲ ಓದಿನಲ್ಲಿ, ರಂಗ ಮಾಧ್ಯಮದಲ್ಲಿ ನಡೆಯುವ ಕ್ರಿಯೆಯಾಗದೆ ನಮ್ಮ ಚಿಂತನೆಯನ್ನು ಕೆದಕುವ ಮಾಧ್ಯಮವಾಗುತ್ತದೆ. ನಾಟಕ ಮತ್ತು ಪೀಠಿಕೆ ಇವೆರಡನ್ನೂ ಲೇಖಕರ ದೃಷ್ಟಿಕೋನದ ಹೊರತಾಗಿ ಅನುಭವಿಸಲು ಸಾಧ್ಯವಿಲ್ಲವಾಗುತ್ತದೆ. ಕೇವಲ ರಸಗ್ರಹಣದ ದೃಷ್ಟಿಯಿಂದ ನಾಟಕವನ್ನು ಓದಿ ಪೀಠಿಕೆಯನ್ನು ಕೈಬಿಟ್ಟವರಿಗೆ ನಾಟಕಕ್ಕೆ ಉತ್ತರಿಸಲು ಅನೇಕ ಪ್ರಶ್ನೆಗಳು ಎದುರಾಗುತ್ತವೆ. ತಾವು ಬರೆದಿಟ್ಟದ್ದನ್ನು ಓದುಗರು ಹೇಗೆ ಬೇಕಾದರೂ ವ್ಯಾಖ್ಯಾನಿಸಲಿ, ‘‘ಹಾಡುವುದು ಅನಿವಾರ್ಯ ಕರ್ಮ ನನಗೆ’’ ಎಂಬ ಪ್ರಜ್ಞೆಗೆ ಭಿನ್ನವಾಗಿ ಅದು ನಾಟಕವೆಂದರೆ ವಿಪ್ರರು ಬಹುರೀತಿಯಲ್ಲಿ ವ್ಯಾಖ್ಯಾನಿಸುವ ಸತ್ಯವಲ್ಲ, ಬದಲಾಗಿ ಅದೊಂದು ಚಿಂತನೆಯ ಹಿನ್ನೆಲೆ-ಮುನ್ನೆಲೆಯ ಪ್ರದರ್ಶನದೊಂದಿಗೆ ದರ್ಶನವೂ ಹೌದು ಎಂಬ ಪೂರ್ಣಸತ್ಯವೆಂಬ ಇನ್ನೊಂದು (ಅದೇ ಅಂತಿಮವೆಂದೇನಿಲ್ಲ) ಹಂತಕ್ಕೆ ಲೇಖಕರು ಓದುಗನನ್ನು ಒಯ್ಯುತ್ತಾರೆ.


ನಮ್ಮಲ್ಲಿ ಪೌರಾಣಿಕ ಮಹಾಕಾವ್ಯಗಳನ್ನು ಚಿಂತಕರು 3 ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ: 1.ಪೌರಾಣಿಕ ದೇವರುಗಳ ಭಕ್ತರಾಗಿ ಪುರಾಣವು ಸತ್ಯವೆಂದು ಮತ್ತು ಅದನ್ನು ನಂಬದವನು ಕೆಡುತ್ತಾನೆಂದು ಅಭಿಪ್ರಾಯ ಪಟ್ಟು ಅಲ್ಲಿ ನಡೆದದ್ದೆಲ್ಲವನ್ನೂ ನೀತಿಬೋಧಕವೆಂದು, ಅನುಸರಣೀಯವೆಂದು, ಶಾಶ್ವ್ವತವೆಂದು ತಿಳಿದು ಅದರ ಪರ ವಕಾಲತ್ತು ವಹಿಸಿದವರಂತೆ ಆಡುವುದು ಮತ್ತು ಬರೆಯುವುದು; 2.ಅದೊಂದು ಕಲೆಯ ಕಲ್ಪನೆಯೆಂದು ಬಗೆದು ವಿಶ್ಲೇಷಿಸಿ ಅದರ ರಸಾಂಶಗಳನ್ನು ಆಸ್ವಾದಿಸಿ ನಿಸ್ಸಾರವನ್ನು ಟೀಕಿಸಿ ಚರ್ಚಿಸುವುದು; 3.ಅದು ವಸ್ತು ವಿಚಾರಗಳನ್ನು ಸುಳ್ಳಾಗಿ ಅಭಿವ್ಯಕ್ತಿಸುತ್ತದೆಯೆಂದೂ ಅದು ಸಾಮಾಜಿಕ ಪಿಡುಗೆಂದೂ ಅಭಿಪ್ರಾಯಪಡುವುದು. ಮೊದಲನೆಯದು ಪುರಾಣಗಳ ಕುರಿತ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯ ಸಂಕೇತ. (ಕೆ.ಎಸ್.ನಾರಾಯಣಾಚಾರ್ಯರಂತಹವರ ಅತಿ ಪಾಂಡಿತ್ಯದ ನಿರೂಪಣೆಗಳಿವೆ; ಪುರಾಣವನ್ನು ಧಾರ್ಮಿಕ ನಂಬಿಕೆ, ಶ್ರದ್ಧೆ ಇವುಗಳಿಗೆ ಒಳಗಾಗದೆ ವಿವೇಕಯುತವಾಗಿ ವಿಶ್ಲೇಷಿಸಿದ ಶ್ರೀನಿವಾಸ ಶಾಸ್ತ್ರಿ, ಡಿವಿಜಿ, ಮಾಸ್ತಿಯಂತಹವರಿದ್ದಾರೆ.) ಎರಡನೆಯದು ಶುದ್ಧವೋ ಅಶುದ್ಧವೋ ಅಂತೂ ಕಲಾತ್ಮಕ ಅಭಿವ್ಯಕ್ತಿ. (ನಮ್ಮ ಬಹುತೇಕ ಮಧ್ಯಪಂಥೀಯ ವಿಮರ್ಶಕರು ಈ ವರ್ಗಕ್ಕೆ ಸೇರುತ್ತಾರೆ.) ಮೂರನೆಯದು ಪುರಾಣದಲ್ಲಿ ಪೌರಾಣಿಕ ಸತ್ಯವೆಂಬುದಿದೆಯೆಂಬುದನ್ನು ಧಿಕ್ಕರಿಸಿ ವರ್ತಮಾನಕ್ಕೆ ಅನ್ವಯಿಸುವ ವಾಸ್ತವಿಕವೆಂದು ಅಭಿಪ್ರಾಯಪಡುವ ಸತ್ಯವನ್ನು ಅಳೆಯುವುದು. (ಇರಾವತಿ ಕರ್ವೆ, ಕೆ.ಎಸ್.ಭಗವಾನ್, ಜಿ.ಎನ್.ನಾಗರಾಜ್, ಪೋಲಂಕಿ ರಾಮಮೂರ್ತಿ ಮುಂತಾದವರು ಈ ಬಗೆಯ ವಿಮರ್ಶಕರು.) ಮೊದಲ ಮತ್ತು ಕೊನೆಯ ವ್ಯಾಖ್ಯಾನಗಳು ಒಂದು ಹಂತದ ವರೆಗೆ ನಿರುಪದ್ರವಿ. ಯಾವಾಗ ಅದನ್ನು ಒಂದು ಪಂಥವೆಂದೋ ಒಂದು ಸಿದ್ಧಾಂತವೆಂದೋ ಸಮಾಜದ ಮೇಲೆ ಹೇರಲು, ಪ್ರಭಾವಿಸಲು ಯತ್ನಿಸಿದಾಗ ಅದು ಅನಗತ್ಯ ವಿವಾದಗಳಿಗೆ ದಾರಿ ಮಾಡಿಕೊಡುತ್ತದೆ. ಇರಾವತಿ ಕರ್ವೆ ‘ಯುಗಾಂತ’ವನ್ನು ಬರೆದಾಗ ಯಾವ ಅಲ್ಲೋಲ ಕಲ್ಲೋಲ ಮಾಡಲಿಲ್ಲ. ಹೀಗೂ ಇರಬಹುದು ಎಂಬ ಚಿಂತನೆಗೆ ದಾರಿಮಾಡಿಕೊಟ್ಟಿತು. ಎಸ್.ಎಲ್. ಭೈರಪ್ಪನವರು ‘ಪರ್ವ’ ಬರೆದಾಗ ಅದು ಮಹಾಭಾರತದ ಮೇಲೆ, ಹಿಂದೂ ಧರ್ಮದ ಮೇಲೆ ಮಾಡಿದ ಅಪಚಾರವೆಂಬ ಗುಲ್ಲು ಏಳಲಿಲ್ಲ. ಅದೇ ಪೋಲಂಕಿ ರಾಮಮೂರ್ತಿ ‘ಸೀತಾಯಣ’ ಬರೆದಾಗ ಅದು ಭಾರೀ ವಿವಾದವನ್ನು ಸೃಷ್ಟಿಮಾಡಿತು. (ಈಚೆಗೆ ಕೆ.ಎಸ್.ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ?’ ಮತ್ತು ಜಿ.ಎನ್. ನಾಗರಾಜ್ ಅವರ ‘ನಿಜ ರಾಮಾಯಣದ ಅನ್ವೇಷಣೆ’ ಪ್ರಕಟವಾಗಿವೆ. ಇವಿನ್ನೂ ಅಧ್ಯಯನದ ಹಂತದಲ್ಲಿವೆಯೆಂದು ಕಾಣಿಸುತ್ತದೆ. ತೀವ್ರವಾದ ಯಾವುದೇ ವಿವಾದ ಇನ್ನೂ ಉದ್ಭವಿಸಿಲ್ಲ.) ರಾಮಾಯಣದ ಕುರಿತು ಇಂದು ಬರುವಷ್ಟು ಪರ-ವಿರೋಧ ವಿವಾದಗ್ರಸ್ತ ಕೃತಿಗಳು ಇತರ ಪುರಾಣಗಳ ಕುರಿತು ಬರುತ್ತಿಲ್ಲವೆಂಬುದೇ ಸೋಜಿಗ. ಪ್ರಾಯಃ ‘ಕೃಷ್ಣ ಮಂದಿರ’ ನಿರ್ಮಾಣವೆಂಬ ಚಳವಳಿ ಹುಟ್ಟಿಕೊಂಡರೆ ಮಹಾಭಾರತದ ಕುರಿತು, ಶ್ರೀಕೃಷ್ಣನ ಕುರಿತು ಇಂತಹ ಕೃತಿಗಳು ಹೆಚ್ಚು ಹೆಚ್ಚು ಪ್ರಕಟವಾದಾವೇನೋ?

-2- 

1979ರಲ್ಲಿ ಪ್ರಕಟವಾದ ತೆಲುಗಿನಲ್ಲಿ ‘ಸೀತ ಜೋಸ್ಯಂ’ ಎಂಬ ಶೀರ್ಷಿಕೆಯನ್ನು ಹೊತ್ತ ನಾರ್ಲ ವೆಂಕಟೇಶ್ವರ ರಾವು ಅವರ ಮೂಲ ಕೃತಿಯನ್ನು ಕನ್ನಡಕ್ಕೆ ಸೀತೆಯ ಭವಿಷ್ಯ ಎಂಬ ಹೆಸರಿನಲ್ಲಿ ಸೊಗಸಾಗಿ ಅನುವಾದಿಸಿದ ಶ್ರೇಯಸ್ಸು ಶ್ರೀಮತಿ ಡಾ.ಎಚ್.ಎಸ್.ಸುಜಾತಾ ಅವರದ್ದು. ಸುಜಾತಾ ಅವರು ಎಂ.ಎಸ್. ಪುಟ್ಟಣ್ಣನವರ ಕುರಿತು ಅಪಾರ ಅಧ್ಯಯನ ಮಾಡಿದವರು. ಅನೇಕ ಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡಿದವರು. ಇದೇ ಲೇಖಕರ ‘ಜಾಬಾಲಿ’ ಕೃತಿಯನ್ನು ಅವರು ಅನುವಾದಿಸಿದ್ದರೆ ಚೆನ್ನಾಗಿರುತ್ತಿತ್ತು. (ಒಂದು ವೇಳೆ ಅವರು ಅಥವಾ ಇತರರು ಅನುವಾದಿಸಿದ್ದರೆ ಅದು ನನಗೆ ಲಭ್ಯವಾಗಿಲ್ಲವೆಂದು ಸ್ಪಷ್ಟೀಕರಿಸುತ್ತೇನೆ.) ನಾರ್ಲ ವೆಂಕಟೇಶ್ವರರಾವು (1908-1985) ತೆಲುಗಿನ ಪ್ರಸಿದ್ಧ ಲೇಖಕ. ಡಾ.ಹಾ.ಮಾ. ನಾಯಕ ಅವರು ತಮ್ಮ ‘ಔಚಿತ್ಯ ವಿಚಾರ’ ಎಂಬ ಲೇಖನದಲ್ಲಿ ಗುರುತಿಸಿದಂತೆ ನಾರ್ಲ ಒಬ್ಬ ವಿಚಾರವಾದಿ, ಚಿಂತನಶೀಲ ಸಾಹಿತಿ; ಕವಿ, ನಾಟಕಕಾರ, ಪ್ರಬಂಧಕಾರ ಮತ್ತು ವಿಮರ್ಶಕ; ನಿರ್ಭೀತ ಪತ್ರಕರ್ತ. (1942ರಿಂದ 1959ರ ವರೆಗೆ ಆಂಧ್ರಪ್ರಭ, 1960ರಿಂದ 1977ರ ವರೆಗೆ ಆಂಧ್ರಜ್ಯೋತಿ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಆಂಧ್ರ ಮತ್ತು ವೆಂಕಟೇಶ್ವರ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ. 2 ಅವಧಿಗಳಿಗೆ ರಾಜ್ಯಸಭೆಯ ಸದಸ್ಯರಾಗಿದ್ದರು. 1958ರಲ್ಲಿ ವಿಶ್ವಸಂಸ್ಥೆಯ ಯುನೆಸ್ಕೊ ಜನರಲ್ ಪರಿಷತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ನಾರ್ಲ ವೆಂಕಟೇಶ್ವರರಾವು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅವರು ರಚಿಸಿದ ‘ಸೀತ ಜೋಸ್ಯಂ’ ನಾಟಕವು 1981ರ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗಳಿಸಿತು. ಈ ಪ್ರಶಸ್ತಿ ಪಡೆದ ಮೊದಲ ತೆಲುಗು ನಾಟಕವೆಂಬ ಹೆಗ್ಗಳಿಕೆೆಯೂ ಈ ಕೃತಿಗಿದೆ. ಪ್ರಶಸ್ತಿ ಪಡೆದು ಆನಂತರ ಅನಗತ್ಯ ವಿವಾದಕ್ಕೊಳಗಾಗಿ ನಾರ್ಲ ಅವರು ಪ್ರಶಸ್ತಿಯನ್ನು ತಿರಸ್ಕರಿಸುವ ಹಂತಕ್ಕೂ ತಲುಪಿತು. ಕೇಂದ್ರ ಸಾಹಿತ್ಯ ಅಕಾಡಮಿಯು ಈ ಪ್ರಶಸ್ತಿಯನ್ನು ಘೋಷಿಸಿದ ತರುಣದಲ್ಲೇ ಅಕಾಡಮಿಯ ಮುಖವಾಣಿಯಂತಿರುವ ಇಂಡಿಯನ್ ಲಿಟರೇಚರ್ ನಿಯತಕಾಲಿಕದಲ್ಲಿ ಇಂಗ್ಲಿಷ್ ಬರಹಗಾರರಾದ ಡಿ.ಎಸ್.ರಾವ್ (ಅವರು ಆಗ ಅಕಾಡಮಿಯ ಪ್ರಕಟಣಾ ವಿಭಾಗದ ಹೊಣೆಯಲ್ಲಿದ್ದರು) ವಿಮರ್ಶಿಸಿದರು; ಅಥವಾ ವಿಮರ್ಶೆಯ ಹೆಸರಿನಲ್ಲಿ ಹಂಗಿಸಿದರು; ಭಂಗಿಸಿದರು. ಅದರಲ್ಲಿನ ಟೀಕೆಗಳು (‘ಇಪ್ಪತ್ತನೆಯ ಶತಮಾನದ ಭಾರತೀಯ ಸಭ್ಯತೆಯ ಸೋಗಿನವ’, ‘ಕಿರುಕುಳಕ್ಕೆ ಒಳಗಾಗಿರುವೆನೆಂಬ ಭ್ರಾಂತಿ ಉಳ್ಳವ’, ‘ಮೊದಲು ತೀರ್ಮಾನಿಸಿ ಆನಂತರ ಆಧಾರಗಳಿಗಾಗಿ ಹುಡುಕಾಡುವವ’, ಭಂಡತನದ ಪ್ರತೀಕವನ್ನು ಸ್ಥಾಪಿಸುವವ, ‘ಬಹುವಾಗಿ ಪ್ರತಿಭಟಿಸುವ ನಾರಿ’, ಕಾಲೇಜಿನ ಚರ್ಚಾಕೂಟದ ಹದಿಹರೆಯದವ, ಮತಭ್ರಾಂತ ಮುಂತಾದ ವಿಶೇಷಣಗಳೊಂದಿಗೆ) ಕೃತಿಯನ್ನು ದಾಟಿ ಮತ್ತು ಕೃತಿಯ ನೆಪದಲ್ಲಿ ಕರ್ತೃವನ್ನು ಗುರಿಯಿಟ್ಟಂತಿದ್ದವು. (ಪ್ರಾಯಃ ಇಂದು ಇಂತಹ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಯೋಗ್ಯರಿಗಿಂತ ಹೆಚ್ಚಾಗಿ ಅಯೋಗ್ಯರಿಂದ ಪ್ರಸಾರವಾಗುವುದರಿಂದ ಇದೊಂದು ಮುಖ್ಯ ಘಟನೆಯೆಂದೆನಿಸಲಿಕ್ಕಿಲ್ಲ. ಆದರೆ ಆಗ ಅದೊಂದು ಮಹತ್ತರ ವಿವಾದವಾಗಿ ಕೊನೆಗೆ ಸಾಹಿತ್ಯ ಅಕಾಡಮಿಯು ಬೇಷರತ್ತು ಕ್ಷಮಾಯಾಚನೆ ಮಾಡಿ ನಾರ್ಲ ಅವರ ‘‘ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ನಾನೇಕೆ ತಿರಸ್ಕರಿಸಿದೆ?’’ ಎಂಬ ಸ್ಪಷ್ಟೀಕರಣ ಲೇಖನವನ್ನೂ ಪ್ರಕಟಿಸಿತು. ಈ ಕುರಿತು ಡಾ.ಹಾ.ಮಾ. ನಾಯಕ ಅವರ ಲೇಖನದಲ್ಲಿ ವಿವರಗಳಿವೆ. ಈ ಎರಡೂ ಲೇಖನಗಳನ್ನು ಸುಜಾತಾ ಅವರು ತಮ್ಮ ಅನುವಾದದೊಂದಿಗೆ ಪ್ರಕಟಿಸಿದ್ದಾರೆ.)

-3-
ಇವು ಕೃತಿಯ ಹಿಂದು ಮುಂದಿನ ಅಷ್ಟೇನೂ ಸುವಿಚಾರವಲ್ಲದ ಸಾಹಿತ್ಯೇತರ ಘಟನೆಗಳು. ಈ ಕೃತಿಯ ವೈಶಿಷ್ಟ್ಯಗಳು ಪ್ರತ್ಯೇಕವಾಗಿವೆ. 54 ಪುಟಗಳ (ಕನ್ನಡದಲ್ಲಿ 36 ಪುಟಗಳು) ಈ ನಾಟಕಕ್ಕೆ ಲೇಖಕರು 130 ಪುಟಗಳ ಪೀಠಿಕೆಯನ್ನೊದಗಿಸಿದ್ದಾರೆ. ಪೀಠಿಕೆಗಳ ಹೊರತಾಗಿ ನಾರ್ಲ ತಮ್ಮ ನಾಟಕಗಳನ್ನು ಪ್ರಕಟಿಸುತ್ತಿರಲಿಲ್ಲ. ಕೆಲವು ನಾಟಕಗಳಿಗೆ ಪೀಠಿಕೆಗಳನ್ನು ಬರೆಯಲು ಅವರಿಗೆ ಅವಕಾಶ ಸಾಲದಾಯಿತಂತೆ. ಈ ಕಾರಣಕ್ಕೇ ಅವರ ಕೆಲವು ನಾಟಕಗಳು ಬೆಳಕು ಕಾಣದಾದವು. ಅವರು ಹೇಳುವಂತೆ ‘‘ನನ್ನ ನಾಟಕಗಳ ಸದವಗಾಹನೆಗೆ ಸುದೀರ್ಘ ಪೀಠಿಕೆಗಳು ಅತಿ ಮುಖ್ಯ ಎಂದು ನಾನು ಭಾವಿಸಿದೆ. ಈ ಪೀಠಿಕೆಗಳಿಂದ ಲೇಖಕನಾದವನು ಅಪೇಕ್ಷಿಸುವುದಾದರೂ ಏನನ್ನು? ನಾರ್ಲ ಹೇಳುತ್ತಾರೆ: ‘‘ನನಗೆ ಬೇಕಾದ್ದು ನಿಮ್ಮ ಒಪ್ಪಿಗೆಯಲ್ಲ, ನಿಮ್ಮ ಆಲೋಚನೆ. ನಾನು ಕೋರುವುದು ನಿಮ್ಮ ಪ್ರಶಂಸೆಯನ್ನಲ್ಲ, ನಿಮ್ಮಿಳಗಿನ ಜಿಜ್ಞಾಸೆ.’’ ಮುಂದುವರಿದು ಅವರು ‘‘ಆಗಿಂದಾಗ ಹಳೆಯ ವಿಷಯಗಳನ್ನು ಹೊಸ ಪರೀಕ್ಷೆಗಳಿಗೆ ಒಡ್ಡಬೇಕು, ಹಳೆಯ ಕಥೆಗಳಿಗೆ ಹೊಸ ವ್ಯಾಖ್ಯಾನಗಳನ್ನು ಮಾಡಬೇಕು. ಹಾಗಲ್ಲದೆ ನಮ್ಮಲ್ಲಿ ಹೊಸ ಆಲೋಚನೆಗಳು ಮೊಳೆಯುವುದಿಲ್ಲ, ಹಾಗಲ್ಲದೆ ನಮ್ಮಲ್ಲಿ ಹೊಸ ಚೈತನ್ಯ ಹೊರಹೊಮ್ಮುವುದಿಲ್ಲ, ಹಾಗಲ್ಲದೆ ಹೊಸ ತೇಜಸ್ಸಿನಲ್ಲಿ ಓಜಸ್ಸಿನೊಡನೆ ರಾಷ್ಟ್ರೀಯವಾಗಿ ನಾವು ಮುಂದೆ ಸಾಗಲಾರೆವು. ನಮ್ಮಲ್ಲಿ ಚಲನರಾಹಿತ್ಯ ಹೋಗಬೇಕು, ಚಲನಶೀಲತೆ ಬರಬೇಕು. ನಮ್ಮಲ್ಲಿ ಔದಾಸೀನ್ಯ ಗತಿಸಬೇಕು. ಯಾವುದೋ ಒಂದು ಪಕ್ಷವನ್ನು ವಹಿಸಬೇಕು ಎಂಬ ಹಟ ಬೆಳೆಯಬೇಕು. ನಮ್ಮಲ್ಲಿ ವ್ಯಾಸನ ಬಗೆಗೆ, ಅವನು ಪ್ರಚಾರಕ್ಕೆ ತಂದ ವೇದಗಳ ಬಗೆಗೆ ಗೌರವ ತಗ್ಗಬೇಕು. ಪ್ರಶ್ನೋಪನಿಷತ್ತುಗಳು ಹೆಚ್ಚಾಗಿ ಬರಬೇಕು. ನಾಟಕಗಳನ್ನು ಹೆಣೆದು, ಅವುಗಳಿಗೆ ಪೀಠಿಕೆಗಳನ್ನು ಸೇರಿಸಿ, ನಾನು ಸಾಧಿಸಲು ಬಯಸುತ್ತಿರುವುದು ಈ ಮಾನಸಿಕ ಪರಿವರ್ತನೆಯನ್ನೇ, ಈ ನವಚೈತನ್ಯವನ್ನೇ, ಈ ಪುರೋಗತಿಯನ್ನೇ. ನಿಮ್ಮಲ್ಲಿ ಕೆಲವರಿಗೆ ಕಷ್ಟ ಉಂಟುಮಾಡುವ ಮುಖಾಂತರವೇ ನನ್ನ ಗುರಿಯನ್ನು ಸಾಧಿಸಬೇಕಾಗಿ ಬಂದರೆ ಅದಕ್ಕಾಗಿ ನಾನು ಹಿಂದೆಗೆಯುವುದಿಲ್ಲ ಎಂಬುದಕ್ಕೆ ನನ್ನ ನಾಟಕಗಳೇ, ಅವುಗಳಿಗೆ ನಾನು ಬರೆದ ಪೀಠಿಕೆಗಳೇ ನಿದರ್ಶನಗಳು.’’

ಈ ನಾಟಕಕ್ಕೆ ಮುನ್ನ ನಾರ್ಲ ಅವರು ‘ಜಾಬಾಲಿ’ ಎಂಬ ನಾಟಕವನ್ನು ರಚಿಸಿದ್ದರು. ಅದೂ ರಾಮಾಯಣವನ್ನು ಆಧರಿಸಿದ್ದು. ಅದರ ಪೀಠಿಕೆಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಮುಖ್ಯಾಂಶಗಳನ್ನು ಚರ್ಚಿಸಲಾಗಿದೆಯೆಂದು ಲೇಖಕರು ಹೇಳಿ ಇಲ್ಲಿ ಹೊಸವಿಷಯಗಳನ್ನು ಬರೆದಿದ್ದೇನೆಂದು ಹೇಳುತ್ತಾರೆ. ಅಷ್ಟೇ ಅಲ್ಲ ‘‘ಈ ‘ಸೀತೆಯ ಭವಿಷ್ಯ’ ನಾಟಕವನ್ನು, ಇದರ ಪ್ರಧಾನಪಾತ್ರಗಳನ್ನು ನೀವು ಸರಿಯಾಗಿ ಅವಗಾಹನೆ ಮಾಡಿಕೊಳ್ಳಬೇಕೆಂದರೆ ಜಾಬಾಲಿಯ ಪೀಠಿಕೆಯನ್ನು ಒಂದು ಬಾರಿ ಓದುವುದು ಅಗತ್ಯವೆಂದು ಭಾವಿಸುತ್ತೇನೆ.’’ ಎನ್ನುವ ಉಪದೇಶಾತ್ಮಕ ಮಾತುಗಳಿಂದಾಗಿ ಅವರ ಒಟ್ಟು ನಾಟಕ ಬರವಣಿಗೆಯು ಒಂದು ಸೂತ್ರಬದ್ಧ ಪುರಾಣವೆಂಬುದನ್ನು ಸೂಚಿಸುತ್ತಾರೆ. (ಎಷ್ಟೇ ಹುಡುಕಾಡಿದರೂ ನನಗೆ ‘ಜಾಬಾಲಿ’ ಕೃತಿ ಸಿಗಲಿಲ್ಲ. ಅಷ್ಟರ ಮಟ್ಟಿಗೆ ಈ ವಿಮರ್ಶೆಯೂ ಕಿಂಚಿದೂನವೇ.

ಯಾವುದೇ ಕೃತಿಯ ಮುನ್ನುಡಿಗೂ, ಮೊದಲ ಮಾತಿಗೂ, ಪೀಠಿಕೆಗೂ ವ್ಯತ್ಯಾಸವಿದೆಯೆಂಬುದು ಸಾಹಿತ್ಯದ ಪ್ರಾಥಮಿಕ ಓದುಗರೂ ಬಲ್ಲರು. ಇಂತಹ ಪೀಠಿಕೆಯಿಂದಾಗಿ ನಾಟಕ ಕೇವಲ ಓದಿನಲ್ಲಿ, ರಂಗ ಮಾಧ್ಯಮದಲ್ಲಿ ನಡೆಯುವ ಕ್ರಿಯೆಯಾಗದೆ ನಮ್ಮ ಚಿಂತನೆಯನ್ನು ಕೆದಕುವ ಮಾಧ್ಯಮವಾಗುತ್ತದೆ. ನಾಟಕ ಮತ್ತು ಪೀಠಿಕೆ ಇವೆರಡನ್ನೂ ಲೇಖಕರ ದೃಷ್ಟಿಕೋನದ ಹೊರತಾಗಿ ಅನುಭವಿಸಲು ಸಾಧ್ಯವಿಲ್ಲವಾಗುತ್ತದೆ. ಕೇವಲ ರಸಗ್ರಹಣದ ದೃಷ್ಟಿಯಿಂದ ನಾಟಕವನ್ನು ಓದಿ ಪೀಠಿಕೆಯನ್ನು ಕೈಬಿಟ್ಟವರಿಗೆ ನಾಟಕಕ್ಕೆ ಉತ್ತರಿಸಲು ಅನೇಕ ಪ್ರಶ್ನೆಗಳು ಎದುರಾಗುತ್ತವೆ. ತಾವು ಬರೆದಿಟ್ಟದ್ದನ್ನು ಓದುಗರು ಹೇಗೆ ಬೇಕಾದರೂ ವ್ಯಾಖ್ಯಾನಿಸಲಿ, ‘‘ಹಾಡುವುದು ಅನಿವಾರ್ಯ ಕರ್ಮ ನನಗೆ’’ ಎಂಬ ಪ್ರಜ್ಞೆಗೆ ಭಿನ್ನವಾಗಿ ಅದು ನಾಟಕವೆಂದರೆ ವಿಪ್ರರು ಬಹುರೀತಿಯಲ್ಲಿ ವ್ಯಾಖ್ಯಾನಿಸುವ ಸತ್ಯವಲ್ಲ, ಬದಲಾಗಿ ಅದೊಂದು ಚಿಂತನೆಯ ಹಿನ್ನೆಲೆ-ಮುನ್ನೆಲೆಯ ಪ್ರದರ್ಶನದೊಂದಿಗೆ ದರ್ಶನವೂ ಹೌದು ಎಂಬ ಪೂರ್ಣಸತ್ಯವೆಂಬ ಇನ್ನೊಂದು (ಅದೇ ಅಂತಿಮವೆಂದೇನಿಲ್ಲ) ಹಂತಕ್ಕೆ ಲೇಖಕರು ಓದುಗನನ್ನು ಒಯ್ಯುತ್ತಾರೆ. ಸಾಹಿತ್ಯ ಅಂತಲ್ಲ ಕಲೆಯ ಯಾವುದೇ ಮಾಧ್ಯಮವು ಕಾಲಾನುಕಾಲಕ್ಕೆ ದೇಶ-ಭಾಷೆಯನ್ನನುಸರಿಸಿ ವಿಕಾಸಗೊಳ್ಳುವುದು, ಬದಲಾಗುವುದು ಇಂತಹ ಒಳನೋಟದಿಂದಲೇ; ದಾರ್ಶನಿಕ ದೃಷ್ಟಿಕೋನದಿಂದಲೇ.

ಹೀಗಾಗಿ ಕೃತಿ ವಿಮರ್ಶೆ ನಾಟಕದಿಂದ ಆರಂಭವಾಗದೆ ಅದರ ಪೀಠಿಕೆಯಿಂದ ಆರಂಭವಾಗಬಹುದು; ನಾಟಕದೊಂದಿಗೆ ಕೊನೆಗೊಳ್ಳದೆ ಅದರಿಂದಲೂ ಆಚೆಗಿನ ಅಂದರೆ ಪೀಠಿಕೆಯು ಸೃಜಿಸಿದ ಕ್ಷಿತಿಜಕ್ಕೆ ಓದುಗನ ದೃಷ್ಟಿಯನ್ನು ಹಾಯಿಸಬಹುದು; ವಿಸ್ತರಿಸಬಹುದು.

ಇಷ್ಟನ್ನೇ ಹೇಳಿದರೆ ಒಗಟಿನಂತಾಗಬಹುದು. ನಾರ್ಲ ಅವರ ಉದ್ದೇಶ ಸಂಕುಚಿತ ಮಾರ್ಗವನ್ನು ತೊರೆಯುವುದು; ತೊಡೆಯುವುದು. ಅವರು ಹೇಳುತ್ತಾರೆ: ‘‘ನನ್ನದು ಆರ್ಯ-ಆರ್ಯೇತರ ದೃಷ್ಟಿಯಲ್ಲ, ಬ್ರಾಹ್ಮಣ-ಬ್ರಾಹ್ಮಣೇತರ ದೃಷ್ಟಿ ಮೊದಲೇ ಅಲ್ಲ. ಅವು ಸಂಕುಚಿತ ದೃಷ್ಟಿಗಳು. ಅವುಗಳು ನನ್ನಲ್ಲಿದ್ದರೆ ನನ್ನನ್ನು ನೋಡಿ ನಾನೇ ನಾಚಬೇಕು. ರಾಷ್ಟ್ರೀಯತೆ, ಧರ್ಮ, ಜಾತಿ, ವರ್ಗಗಳಲ್ಲಿನ ವಿಭೇದಗಳೆಲ್ಲವೂ ಸವೆದುಹೋಗಬೇಕು. ಸಮತೆ, ಸ್ವಾತಂತ್ರ್ಯಗಳು ಎಲ್ಲೆಡೆಯೂ ನೆಲೆಸಬೇಕು. ದಾರಿದ್ರ್ಯ, ದೈನ್ಯಗಳು ಈ ಭೂತಳದಿಂದ ಮಂಗಮಾಯವಾಗಬೇಕು.

ಅಣ್ವಸ್ತ್ರಯುದ್ಧದ ಮೂಲಕ ಮಾನವ ಸಮುದಾಯ ಹಾಗೂ ನಾಗರಿಕತೆಗಳು ಸರ್ವನಾಶವಾಗುವ ಅಪಾಯ ಪೂರ್ಣವಾಗಿ ತೊಲಗಬೇಕು. ವಿವೇಕ, ವಿಜ್ಞಾನಗಳು ವರ್ಧಿಸಬೇಕು. ಮಾನವನಿಗೆ, ಮಾನವೀಯತೆಗೆ ಪಟ್ಟಾಭಿಷೇಕವಾಗಬೇಕು. ಇದೇ ನನ್ನ ಗುರಿ, ಇದಕ್ಕಾಗಿಯೇ ನನ್ನ ಹೋರಾಟ. ಈ ಹೋರಾಟದಲ್ಲಿ ನೀವು ನನ್ನ ಜೊತೆಯಲ್ಲಿ ನಿಂತರೆ ಸಂತಸಪಡುತ್ತೇನೆ, ನನಗೆ ಎದುರಾಗಿ ನಿಂತರೂ ಸಂತಸಪಡುತ್ತೇನೆ. ಇದೇ ನಿಮಗೆ ನನ್ನ ಆಹ್ವಾನ. ನನ್ನ ಜೊತೆಯಲ್ಲೋ ಎದುರಿನಲ್ಲೋ ಸಾಲಾಗಿರಿ. ಹೋರಾಟದಲ್ಲಿ ಧುಮುಕಿರಿ.’’

ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಯಿಂದಲೋ, ದಲಿತ-ದಮನಿತರ ಸಂಘರ್ಷದ ಮುಂಚೂಣಿಯಲ್ಲೋ ನಿಂತು ಇಂತಹ ಮಾತುಗಳು ಹೇಳಿದರೆ/ಕೇಳಿದರೆ ರೋಮಾಂಚನವಾಗಬಹುದು; ಕೊನೆಘಳಿಗೆಯಲ್ಲಿ ಮಾತ್ರ ಅವೆಲ್ಲ ಜನಪ್ರಿಯ ಧಾಟಿಯ ಬಾಯಬಡಿವಾರ ವೆಂದನ್ನಿಸದಿರದು. ಆದರೆ ನಾರ್ಲ ಅವರ ಈ ಮಾತುಗಳು ಕೃತಿಯೊಂದರ ಹೊಕ್ಕುಳ ಬಳ್ಳಿಯಂತಿದ್ದು ಅದನ್ನು ನಿರಾಕರಿಸಿ ಕತ್ತರಿಸಿದರೂ ಅದರ ಗುರುತು ಕೃತಿಯ ದೇಹದಲ್ಲಿ ಉಳಿಯುತ್ತದೆ.
ಕೃತಿ ಪ್ರವೇಶಕ್ಕೆ ಇವು ಸಾಧನವೆಂದು ಹೇಳಿದರೂ ತಪ್ಪಾಗುತ್ತದೆ. ಏಕೆೆಂದರೆ ಇಲ್ಲಿ ಪೀಠಿಕೆಯೂ ಕೃತಿಯೇ.

ರಾಮಾಯಣವನ್ನು ಖಂಡಿಸುವವರು ಸೈದ್ಧಾಂತಿಕ ಮನೋ ಭೂಮಿಕೆಯ, ಮನೋಧರ್ಮದ ಪರಿಕರಗಳನ್ನಿಟ್ಟುಕೊಳ್ಳುತ್ತಾರೆ. ಇದರಿಂದಾಗಿ ಅನೇಕ ಬಾರಿ ಭಾರೀ ವಿಮರ್ಶೆಗಳೂ ಊಹೆಯನ್ನಾಧರಿಸುತ್ತವೆ. (ಕನ್ನಡದಲ್ಲಿ ಇಂತಹ ಅನೇಕ ಕೃತಿಗಳು ಬಂದಿವೆ!) ಆದರೆ ನಾರ್ಲ ಅವರು ‘‘... ಊಹೆಗಳನ್ನು ಆಧರಿಸುವುದಿಲ್ಲ; ಸಂಸ್ಕೃತ ರಾಮಾಯಣದಿಂದಲೇ ನನ್ನ ಎಲ್ಲ ಉತ್ತರಗಳಿಗೂ ಸಾಕ್ಷ್ಯಾಧಾರಗಳನ್ನು ತೋರಿಸಿದ್ದೇನೆ; ನನ್ನ ವಾದವನ್ನು ಮತ್ತಷ್ಟು ಬಲಪಡಿಸಲು ರಾಮಾಯಣವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿದ ದೇಶೀಯ, ವಿದೇಶೀಯ ವಿದ್ವಾಂಸರುಗಳನ್ನು ಸಾಕ್ಷಿಗಳಾಗಿ ಕರೆದಿದ್ದೇನೆ.’’

ಮೊದಲ ಹಂತ ಸರಿ. ಎರಡನೆಯ ಹಂತ ಎಂದರೆ ಇತರ ವಿದ್ವಾಂಸರ ವಿಮರ್ಶೆಗಳ ಯಥಾರ್ಥತೆಗೆ ವ್ಯಕ್ತಿಗತ ಒಲವು-ನಿಲುವುಗಳು ಮತ್ತು ಅವು ಸರಿಯಿವೆಯೆಂಬ ಪಕ್ಷಪಾತ ದೃಷ್ಟಿಯ ನಂಬಿಕೆಗಳು ಕಾರಣವಾಗುತ್ತವೆ. ಇವು ಊಹೆಗೆ ಮಿಗಿಲಾದ್ದೇನೂ ಅಲ್ಲ. ಆದ್ದರಿಂದ ಎಲ್ಲೋ ನಾರ್ಲರನ್ನೂ ಪೂರ್ವಗ್ರಹಗಳು ಕಾಡಿರಬಹುದೆಂಬ ಸಂದೇಹವುಂಟಾಗುವ ಸಾಧ್ಯತೆಯಿದೆ. ಪೀಠಿಕೆಯಲ್ಲಿ ನಾರ್ಲ ರಾಮಾಯಣ ಗಾಥೆಯ ಚಾರಿತ್ರಿಕ ಆಧಾರವನ್ನು ಪ್ರಶ್ನಿಸುತ್ತಾರೆ. ಅಂದರೆ ರಾಮಾಯಣದಲ್ಲಿ ನಿಜವೆಷ್ಟು? ಎಂಬ ಪ್ರಶ್ನೆಯನ್ನು ಓದುಗನ ಮುಂದಿಡುತ್ತಾರೆ. ನಿಜಕ್ಕೂ ಈ ಪ್ರಶ್ನೆ ಅಗತ್ಯವಿದೆಯೇ ಎಂಬುದೇ ಚರ್ಚಾಸ್ಪದ. ಒಂದು ಕೃತಿಯನ್ನು ಅದರ ವಾಸ್ತವಿಕತೆಯನ್ನು, ಚಾರಿತ್ರಿಕತೆಯನ್ನು ಬದಿಗೊತ್ತಿ ಅದೊಂದು ಬೇರೆಯೇ ಜಗತ್ತು ಎಂಬ ರೀತಿಯಲ್ಲಿ ಪ್ರವೇಶಿಸಬಹುದು. (ಯಕ್ಷಗಾನ ಬಯಲಾಟ ಇಂಥದ್ದೊಂದು ರಂಗಕ್ರಿಯೆ. ಅಲ್ಲಿ ಏಕಕಾಲಕ್ಕೆ ವೇಷಧರಿಸಿದ ಪೌರಾಣಿಕ ವ್ಯಕ್ತಿಗಳನ್ನೂ ಅವರಿಗೆ ಹಿನ್ನೆಲೆಯಾಗಿ ಪ್ರತ್ಯೇಕ ಧಿರುಸಿನ ಹಿಮ್ಮೇಳದವರು, ತೆರೆಪಟ ಹಿಡಿಯುವ ಸಾದಾ ಉಡುಪಿನವರು ಹೀಗೆ ತ್ರಿಕಾಲಾಬಾಧಿತವಾಗಬಲ್ಲ ಸಂದರ್ಭ-ಸನ್ನಿವೇಶಗಳು ಸೃಷ್ಟಿಯಾದರೂ ನೋಟಕರು ಈ ಯುಗವನ್ನು ಬಿಟ್ಟು ಪೌರಾಣಿಕ ಯುಗದಲ್ಲಿ ವಿಹರಿಸುತ್ತಿರುತ್ತಾರೆ. ಅವರ ಕಣ್ಣೆದುರು ಕುಮಾರವ್ಯಾಸ ಹಾಡಬೇಕೆಂದಿಲ್ಲ; ಭಾಗವತರು ಹಾಡಿದರೂ ಕಲಿಯುಗ ದ್ವಾಪರವಾಗುವುದು!) ರಾಮನ ವನವಾಸ ಯಾವ ಪ್ರಾಂತದಲ್ಲಿ? ರಾಕ್ಷಸರು ಯಾರು? ಅವರ ಸ್ಥಿತಿಗತಿಗಳು ಎಂತಹವು? ಋಷಿಗಳು ಯಾರು? ತಮ್ಮ ಯಜ್ಞಯಾಗಾದಿಗಳಿಗೆ ಅವರು ಜನಸ್ಥಾನವನ್ನು ಆರಿಸಿದ್ದು ಏಕೆ? ರಾಮಾಯಣಕಾಲದಲ್ಲಿ ಯಾರ ಆಯುಧಗಳು ಎಂತಹವು? ಮುಂತಾದ ಪ್ರಶ್ನೆಗಳು ನಾರ್ಲ ಅವರ ಕೃತಿಯಲ್ಲಿ ತಾರ್ಕಿಕವಾಗಿ ಕಾಣುತ್ತವಾದರೂ ಅವು ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಷ್ಟೇ ಅಸಂಗತ ಮತ್ತು ಅನವಶ್ಯಕ. ಇವು ನಾರ್ಲ ಅವರು ಧಿಕ್ಕರಿಸುವ ಪಂಥಗಳನ್ನು ಬಲಪಡಿಸುತ್ತವಲ್ಲವೆ ಎಂಬ ಸಂಶಯ ಬಾರದಿರದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top