ಕಾರ್ನಾಡ್: ಸ್ನೇಹಿತ, ಚಿಂತಕ, ಮಾರ್ಗದರ್ಶಿ | Vartha Bharati- ವಾರ್ತಾ ಭಾರತಿ

---

ಕಾರ್ನಾಡ್: ಸ್ನೇಹಿತ, ಚಿಂತಕ, ಮಾರ್ಗದರ್ಶಿ

‘‘ಹೆಚ್ಚೆಂದರೆ, ನನಗೆ ಕೆಲವು ತಿಂಗಳುಗಳಷ್ಟೇ ಬಾಕಿ ಉಳಿದಿವೆ’’ ಎಂದವರು ಹೇಳಿದ್ದರು. ತನ್ನ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿತ್ತು ಹಾಗೂ ಅವರದಕ್ಕೆ ಹೊಂದಿಕೊಂಡಿದ್ದರು. ಆಗ ನಾನಾಗಿಯೇ ಸನ್ನಿವೇಶವನ್ನು ಹಗುರಗೊಳಿಸಲು ಯತ್ನಿಸಿದ್ದೆ. ‘‘ಒಂದು ವೇಳೆ ನಿಮ್ಮ ಅಂದಾಜು ತಪ್ಪಾಗಿದ್ದರೆ ಏನು ಮಾಡುವಿರಿ?’’ ಎಂದು ಅವರನ್ನು ಪ್ರಶ್ನಿಸಿದೆ. ‘‘ಆಗ ನಾನು ನನ್ನ ಎರಡನೇ ಆತ್ಮಕಥೆಯನ್ನು ಬರೆಯಲಿದ್ದೇನೆ’’ ಎಂದು ಕಾರ್ನಾಡ್ ಉತ್ತರಿಸಿದ್ದರು.

ಪ್ರಮುಖ ರಂಗಕಲಾವಿದರೊಬ್ಬರು ಅವರ ಹುಟ್ಟುಹಬ್ಬಕ್ಕೆ ಗಿರೀಶ್ ಕಾರ್ನಾಡ್‌ರನ್ನು ಆಹ್ವಾನಿಸಿ ದ್ದರು. ಆಗ ಕಾರ್ನಾಡ್, ಅವರಿಗೆ ‘‘ಹುಟ್ಟು ಹಾಗೂ ಸಾವು ಎರಡೂ ವೈಯಕ್ತಿಕ ಸಂಗತಿಗಳು. ನಮಗೆ ತುಂಬಾ ನಿಕಟವಾಗಿರುವವರ ಜೊತೆ ಅದನ್ನು ಆಚರಿಸಿಕೊಳ್ಳಬೇಕು. ಜನನ ಮತ್ತು ಮರಣದ ನಡುವೆ ನಾವು ಏನು ಮಾಡುತ್ತೇವೆಯೋ ಅದು ಮುಖ್ಯವಾದುದಾಗಿದೆ’’ ಎಂದು ಹೇಳಿದ್ದರು.
     ಕಾರ್ನಾಡ್‌ಗೆ 16 ವರ್ಷ ವಯಸ್ಸಾಗಿದ್ದಾಗ ಅವರು ಗಣ್ಯ ವ್ಯಕ್ತಿಗಳ ರೇಖಾಚಿತ್ರಗಳನ್ನು ಬರೆದು, ಅವರಿಗೇ ಕಳುಹಿಸಿಕೊಡುತ್ತಿದ್ದರು. ಅದಕ್ಕೆ ಸಹಿ ಹಾಕಿ, ಅದನ್ನು ತನಗೆ ಹಿಂದಿರುಗಿಸುವಂತೆ ಅವರನ್ನು ಕೋರುತ್ತಿದ್ದರು. ಯುವಕ ಕಾರ್ನಾಡ್ ಅವರ ಬಳಿ ಆಲ್ಬರ್ಟ್ ಐನ್‌ಸ್ಟೈನ್, ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತಿತರ ಖ್ಯಾತ ವ್ಯಕ್ತಿಗಳ ರೇಖಾಚಿತ್ರಗಳ ಅದ್ಭುತವಾದ ಸಂಗ್ರಹವೇ ಇದ್ದು, ಅವರ ಹಸ್ತಾಕ್ಷರಗಳನ್ನೂ ಒಳಗೊಂಡಿದ್ದವು. ಅವರು ಐರಿಶ್ ನಾಟಕಕಾರ ಸೀನ್ ಓ ಕ್ಯಾಸೆ ಅವರಿಗೂ ಅಂತಹ ಒಂದು ರೇಖಾ ಚಿತ್ರವನ್ನು ಕಳುಹಿಸಿಕೊಟ್ಟಿದ್ದರು. ಆದಾಗ್ಯೂ ಆ ನಾಟಕಕಾರ, ಕಾರ್ನಾಡ್‌ಗೆ ‘‘ಇತರ ವ್ಯಕ್ತಿಗಳ ಹಸ್ತಾಕ್ಷರಗಳನ್ನು ಪಡೆದುಕೊಳ್ಳುವ ಗೊಡವೆ ನಿನಗೇಕೆ?. ಅದರ ಬದಲಿಗೆ ಸ್ವಯಂ ಬುದ್ಧಿಶಕ್ತಿಯನ್ನು ಬಳಸಿಕೊಂಡು ಕೆಲಸ ಮಾಡು. ಒಂದಲ್ಲ ಒಂದು ದಿನ ಜನರು ನಿನ್ನ ಹಸ್ತಾಕ್ಷರವನ್ನು ಕೇಳಲಿದ್ದಾರೆ’’ ಎಂದು ಕಿವಿಮಾತು ಹೇಳಿದ್ದರು.
ಯಯಾತಿ ನಾಟಕವನ್ನು ಬರೆದಾಗ ಕಾರ್ನಾಡ್ ಅವರಿಗೆ ಕೇವಲ 22 ವರ್ಷ ವಯಸ್ಸು. ಅಂದಿನಿಂದ ಅವರು ಹಲವಾರು ನಾಟಕಗಳನ್ನು ಬರೆದಿದ್ದಾರೆ. ಈ ನಾಟಕಗಳು ಅವರನ್ನು ಭಾರತದ ಹಾಗೂ ಜಗತ್ತಿನ ಅತ್ಯುನ್ನತ ನಾಟಕ ರಚನಾಕಾರನ ಸ್ಥಾನವನ್ನು ದೊರಕಿಸಿಕೊಟ್ಟವು. ಕಾರ್ನಾಡ್ ಅವರ ಬಗೆಗೆ ನನಗಿರುವ ಅತ್ಯಂತ ಹಳೆಯ ನೆನಪೆಂದರೆ ಅವರು ಜೆ.ಪಿ.ನಗರದಲ್ಲಿ ಮನೆ ಮಾಡಿದ್ದುದಾಗಿದೆ. ಕಾರ್ನಾಡ್ ಒಂದು ದಿನ ಬೆಳ್ಳುಳ್ಳಿ ತಂಬುಳಿಯ ಬುತ್ತಿಯನ್ನು ಕಟ್ಟಿಕೊಂಡು ನಮ್ಮ ಮನೆಗೆ ಬಂದಿದ್ದರು. ದಿನಸಿ ಹಾಗೂ ತಿಂಡಿ, ತಿನಸನ್ನು ಹಂಚಿಕೊಳ್ಳದೆ ಇದ್ದರೆ ನಾವೆಂತಹ ನೆರೆಹೊರೆಯವರು ಎಂದು ಅವರು ನನ್ನ ತಾಯಿಯನ್ನು ಪ್ರಶ್ನಿಸಿದ್ದರು.
ಕಾರ್ನಾಡ್ ಅವರು ದೂರದರ್ಶನದ ಆಗಿನ ಯಶಸ್ವಿ ಕಾರ್ಯಕ್ರಮ ‘ಟರ್ನಿಂಗ್ ಪಾಯಿಂಟ್’ನಲ್ಲಿ ವಿಜ್ಞಾನದ ಬಗ್ಗೆ ಮಾತನಾಡಿದ್ದನ್ನು ವೀಕ್ಷಿಸಿದ್ದೆ. ಹೀಗೆ ಬೆಳ್ಳುಳ್ಳಿ ತಂಬುಳಿಯ ಬುತ್ತಿ ಹಿಡಿದು ನಮ್ಮ ಮನೆಬಾಗಿಲಲ್ಲಿ ಅವರು ನಿಂತಿರುವುದನ್ನು ಕಂಡಾಗ ವಿಚಿತ್ರವೆನಿಸಿತು. ಕಾರ್ನಾಡ್ ತನ್ನ ಮನೆ ಹಾಗೂ ಬಡಾವಣೆಯನ್ನು ಇಷ್ಟಪಡುತ್ತಿದ್ದರು. ಐದು ವರ್ಷಗಳ ಹಿಂದೆ, ಅವರ ಮನೆಯ ಎದುರಿನ ರಸ್ತೆಯನ್ನು ಕಾಮಗಾರಿಗಾಗಿ ಅಗೆದಾಗ, ಬದಿಯಲ್ಲಿದ್ದ ಸಾಲುಮರಗಳನ್ನು ಕಡಿದುಹಾಕಲಾಗಿತ್ತು ಮತ್ತು ದೊಡ್ಡದಾದ ಅಂಡರ್‌ಪಾಸ್ ಒಂದನ್ನು ನಿರ್ಮಿಸಿದ್ದರು. ಈ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಕಾಮಗಾರಿ ಪ್ರಕ್ರಿಯೆ ಹಾಗೂ ಸಂಚಾರ ಅಡಚಣೆಗಳು ಉಂಟಾದವು. ಇಡೀ ರಸ್ತೆಯು ವಾಹನದಟ್ಟಣೆ ಹಾಗೂ ಶಬ್ದ ಮಾಲಿನ್ಯದಿಂದ ತುಂಬಿಹೋಯಿತು. ಆದರೆ ಈ ಸನ್ನಿವೇಶವು ಅವರ ಮೂರು ನಾಟಕಗಳಿಗೆ ಸ್ಫೂರ್ತಿಯನ್ನು ನೀಡಿದ್ದವು. ಬೆಂದಕಾಳು ಆನ್ ಟೋಸ್ಟ್, ಮದುವೆ ಆಲ್ಬಂ ಹಾಗೂ ಒಡಕಲು ಬಿಂಬ ನಾಟಕಗಳಲ್ಲಿ ನಗರದ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಪಾತ್ರಗಳು ವಿಮರ್ಶಿಸುವುದನ್ನು ಕಾಣಬಹುದಾಗಿದೆ.
ಕಳೆದ ವರ್ಷ ಕಾರ್ನಾಡ್, ಜೆ.ಪಿ. ನಗರದ ತನ್ನ ಮನೆಯನ್ನು ಮಾರಾಟ ಮಾಡಿದರು ಹಾಗೂ ಕೇಂದ್ರ ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದರು. ಆಗ ನಾನು ಅವರನ್ನು ಅಲ್ಲಿ ಭೇಟಿಯಾಗಿದ್ದೆ. ‘‘ನೋಡಿ, ನಗರದ ಮಧ್ಯಭಾಗದಲ್ಲೇ ಇದ್ದರೂ, ಇಲ್ಲಿ ತುಂಬಾ ಶಾಂತಿ ನೆಲೆಸಿದೆ. ಎಲ್ಲಾ ರೀತಿಯ ಹುಚ್ಚುತನವು ಇತರ ಸ್ಥಳಗಳಿಗೆ ತೆರಳಿದೆ’’ ಎಂದವರು ಮಾರ್ಮಿಕವಾಗಿ ಹೇಳಿದ್ದರು.
ನನಗೆ ಸಹಾಯ ಮಾಡುವಿರಾ?
 ಸಂವಹನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದಾಗ, ನಾನು ಮುಂಬೈಗೆ ತೆರಳಲು ಇಚ್ಛಿಸಿದ್ದೆ. ತೆರಳುವ ಮುನ್ನ ಕಾರ್ನಾಡ್ ಅವರನ್ನು ಭೇಟಿಯಾಗುವಂತೆ ನನ್ನ ತಂದೆ ನನಗೆ ಸೂಚಿಸಿದ್ದರು. ಸಮಯದ ಬಗ್ಗೆ ತೀರಾ ಕಟ್ಟುನಿಟ್ಟಾಗಿರುವ ಕಾರ್ನಾಡ್ ಒಮ್ಮೆ ಲಂಡನ್‌ನಲ್ಲಿರುವ ತನ್ನ ಮನೆಯಿಂದ ಪ್ರಸಿದ್ಧ ಬಾಲಿವುಡ್ ನಟಿಯನ್ನು ಹೊರಹೋಗುವಂತೆ ಹೇಳಿದ್ದರು. ಕಾರಣವಿಷ್ಟೇ. ಆಕೆ ಒಂದು ತಾಸು ಮುಂಚಿತವಾಗಿ ಆಗಮಿಸಿದ್ದಳೆಂಬುದು!. ‘‘ಕೇವಲ ಐದು ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಇನ್ನೋರ್ವ ಪ್ರಸಿದ್ಧ ನಟರೊಬ್ಬರನ್ನು ಬೈದಿದ್ದರು. ಹೀಗಾಗಿ ಈ ಭೇಟಿಗಾಗಿ ನಾನು ಐದು ನಿಮಿಷ ಮುಂಚಿತವಾಗಿ ಆಗಮಿಸಿದ್ದೆ. ಅವರ ಮನೆಯ ಹೊರಗೆ ಕಾದುನಿಂತಿದ್ದೆ. ನಿಗದಿತ ಸಮಯಕ್ಕೆ ಸರಿಯಾಗಿ ಮನೆಯೊಳಗೆ ಹೋದೆ.
ಅಂಜುತ್ತಲೇ ನಾನು ಮುಂಬೈಗೆ ತೆರಳುವ ನನ್ನ ಇಂಗಿತವನ್ನು ಅವರ ಬಳಿ ಹೇಳಿಕೊಂಡೆ ಮತ್ತು ಅಲ್ಲಿರುವ ನನ್ನ ಸ್ನೇಹಿತರು ನನಗೆ ಉದ್ಯೋಗವನ್ನು ಹುಡುಕಿಕೊಡಲು ನೆರವಾಗಲಿದ್ದಾರೆ ಎಂದೆ. ನನ್ನ ತಂದೆ ಹೇಳಿದ್ದಕ್ಕಾಗಿ ನಾನು ತಮ್ಮನ್ನು ಭೇಟಿಯಾಗಿದ್ದಾಗಿಯೂ ಅವರು ನನಗೆ ತಮ್ಮಿಂದ ಯಾವುದೇ ವಶೀಲಿಯನ್ನು ಕೇಳದಂತೆ ತಿಳಿಸಿದ್ದಾರೆಂದು ವಿನಯಪೂರ್ವಕವಾಗಿ ಹೇಳಿದೆ. ಆಗ ಅವರು ‘‘ನೀನ್ಯಾಕೆ ಮುಂಬೈಗೆ ಹೋಗಬಯಸುತ್ತಿ?. ನಾನು ಟಿವಿ ಸರಣಿಯೊಂದನ್ನು ಮಾಡುತ್ತಿದ್ದೇನೆ. ಅದಕ್ಕೆ ನೆರವಾಗುವಿಯಾ?’’ ಎಂದು ಕೇಳಿ ನನ್ನನ್ನು ಅಚ್ಚರಿಯಲ್ಲಿ ಕೆಡವಿದರು.
‘ನಿಮ್ಮ ಕೊನೆಯ ಸಿಗರೇಟನ್ನು ನನ್ನೊಂದಿಗೆ ಸೇದಿರಿ’
ಸಿನೆಮಾ ಹಾಗೂ ಟೆಲಿವಿಶನ್ ಜಗತ್ತಿಗೆ ನನ್ನ ಪಯಣ ಹೀಗೆ ಆರಂಭಗೊಂಡಿತು. ನಾನು ಅವರೊಂದಿಗೆ ಎರಡು ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದೆ. ಕುವೆಂಪು ಅವರ ಮಹಾನ್ ಕಾದಂಬರಿ ‘ಕಾನೂರು ಹೆಗ್ಗಡತಿ’ಯನ್ನು ಕನ್ನಡದಲ್ಲಿ ಸಿನೆಮಾ ಆಗಿ ಹಾಗೂ ಹಿಂದಿಯಲ್ಲಿ ಟಿವಿ ಸರಣಿಯಾಗಿ ಏಕಕಾಲದಲ್ಲಿ ನಿರ್ಮಿಸಲು ಅವರು ನಿರ್ಧರಿಸಿದಾಗ ನಾನು ಅವರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಚಿತ್ರೀಕರಣ ನಡೆಯುತ್ತಿರುವಾಗ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿತ್ತು ಹಾಗೂ ಅದಕ್ಕಾಗಿ ಅವರು ದಿಲ್ಲಿಗೆ ತೆರಳಬೇಕಾಯಿತು. ಆಗ ನಾವು ಕರ್ನಾಟಕದ ಮಲೆನಾಡು ಪ್ರದೇಶದಲ್ಲಿದ್ದೆವು. ಇಡೀ ಚಿತ್ರತಂಡ ಅಲ್ಲಿ ಮೊಕ್ಕಾಂ ಹೂಡಿತ್ತು. ಹೀಗಾಗಿ ಪೂರ್ಣ ಜವಾಬ್ದಾರಿಯನ್ನು ನನಗೆ ಹೊರಿಸಿ, ಕಾರ್ನಾಡ್ ದಿಲ್ಲಿಗೆ ತೆರಳಿದ್ದರು. ಮಾಲ್ಗುಡಿ ಡೇಸ್ ಸರಣಿಯನ್ನು ಚಿತ್ರೀಕರಿಸಿದ ಖ್ಯಾತರಾದ ಎಸ್.ರಾಮಚಂದ್ರ ಛಾಯಾಗ್ರಾಹಕರಾಗಿದ್ದರು. ಆಗ ನನಗೆ ಕೇವಲ 23 ವರ್ಷ ವಯಸ್ಸು ಹಾಗೂ ಉತ್ಸಾಹಭರಿತನಾಗಿದ್ದೆ. ಪ್ರತಿ ದಿನ ಸಂಜೆ ಕಾರ್ನಾಡ್ ಅವರು ಚಿತ್ರತಂಡವು ಸುಮಾರು ಎರಡು ತಿಂಗಳುಗಳ ಕಾಲ ವಾಸವಾಗಿದ್ದ ವಿಶಾಲವಾದ ಬಾಡಿಗೆ ಮನೆಯಲ್ಲಿದ್ದ ದೂರವಾಣಿಗೆ ಕರೆ ಮಾಡುತ್ತಿದ್ದರು. ಅವರು ವಾಪಸಾದ ಬಳಿಕ ನಾನು ಚಿತ್ರೀಕರಿಸಿದ ದೃಶ್ಯಗಳ ಚಿತ್ರಿಕೆಗಳನ್ನು ಅವರು ವೀಕ್ಷಿಸಿದರು. ಅವರು ನನಗೆ ಟೆಲಿವಿಶನ್ ಸರಣಿಯ ಬಗ್ಗೆ ಸಂಪೂರ್ಣವಾಗಿ ಗಮನಹರಿಸುವಂತೆಯೂ, ತಾನು ಸಂಪೂರ್ಣವಾಗಿ ಸಿನೆಮಾದ ಮೇಲೆ ಗಮನಕೇಂದ್ರೀಕರಿಸುವುದಾಗಿಯೂ ತಿಳಿಸಿದರು.
ಸಿನೆಮಾ ಹಾಗೂ ನಾಟಕ ಜಗತ್ತಿನ ಐತಿಹಾಸಿಕ ಕ್ಷಣಗಳ ಬಗ್ಗೆ ಗಿರೀಶ್ ಕಾರ್ನಾಡ್ ಬಳಿ ಅಪಾರ ಜ್ಞಾನಭಂಡಾರವೇ ಇತ್ತು. ಅವರು ಭಾರತೀಯ ಚಲನಚಿತ್ರ ಹಾಗೂ ಟಿವಿ ಸಂಸ್ಥೆಯ (ಎಫ್‌ಟಿಐಐ) ನಿರ್ದೇಶಕರಾಗಿದ್ದಾಗ ಆಯ್ಕೆ ಸಮಿತಿಯು ಓಂ ಪುರಿ ಅವರಿಗೆ ಅಭಿಯಾನ ಕೋರ್ಸ್‌ಗೆ ಪ್ರವೇಶಾತಿಯನ್ನು ನಿರಾಕರಿಸಿತ್ತು. ಅವರ ಮುಖದ ಮೇಲೆ ಕುಳಿಗಳಿದ್ದವು ಹಾಗೂ ಕೃಶಕಾಯರಾಗಿದ್ದರು ಎಂಬ ಕಾರಣಕ್ಕೆ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆಗ ಕಾರ್ನಾಡ್ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು ಓಂಪುರಿಗೆ ಪ್ರವೇಶ ದೊರಕಿಸಿಕೊಟ್ಟರು. ಆನಂತರ ಓಂ ಪುರಿ ಭಾರತದ ಅತ್ಯುತ್ತಮ ನಟರಲ್ಲೊಬ್ಬರಾಗಿ ಬೆಳೆದಿದ್ದುದು ಇತಿಹಾಸವಾಯಿತು.
ಮುಂಬೈಯಲ್ಲಿ ಮರಾಠಿ ನಾಟಕವೊಂದರಲ್ಲಿ ಯುವಕ ಶಂಕರ್‌ನಾಗ್‌ನ ಅಭಿನಯವನ್ನು ಕಾರ್ನಾಡ್ ಕಂಡಿದ್ದರು. ಆನಂತರ ಅವರು ರಂಗಮಂಟಪದ ಹಿಂದುಗಡೆ ತೆರಳಿ, ಶಂಕರ್‌ನಾಗ್‌ರನ್ನು ಭೇಟಿಯಾಗಿದ್ದಾಗಿಯೂ, ತನ್ನ ಮುಂದಿನ ಚಿತ್ರದಲ್ಲಿ ನಟಿಸುವಂತೆ ಅವರನ್ನು ಕೋರಿದ್ದಾಗಿಯೂ ನನಗೆ ತಿಳಿಸಿದ್ದರು.
ಆಗ ಶಂಕರ್‌ನಾಗ್ ಅವರು ಕಾರ್ನಾಡ್‌ರನ್ನು ಸಾಹಿತಿ ಹಾಗೂ ನಿರ್ದೇಶಕನಾಗಿ ತಾನು ಗೌರವಿಸುವುದಾಗಿಯೂ, ಅವರ ಕೈಕೆಳಗೆ ನಟಿಸಲಾರೆ. ಬದಲಿಗೆ ಸಹನಿರ್ದೇಶಕನಾಗಿ ಕೆಲಸಮಾಡಲು ಇಚ್ಛಿಸುವುದಾಗಿ ತಿಳಿಸಿದರಂತೆ. ಆನಂತರ ಕಾರ್ನಾಡ್ ಬೆಂಗಳೂರಿಗೆ ವಾಪಸಾಗಿ, ಶಂಕರ್‌ನಾಗ್ ಅವರ ಹಿರಿಯ ಸಹೋದರ ಅನಂತ್‌ನಾಗ್‌ರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದರು. ಆನಂತರ ಅನಂತ್‌ನಾಗ್ ಅವರು ಶಂಕರ್‌ರನ್ನು ಕಾರ್ನಾಡ್‌ರ ಮನೆಗೆ ಕರೆತಂದರು. ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಸಿನೆಮಾ ಜಗತ್ತಿಗೆ ಶಂಕರ್‌ನಾಗ್ ಪಾದಾರ್ಪಣೆ ಮಾಡಿದರು.
ಕಾರ್ನಾಡ್ ಅವರು ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಸಂಸ್ಕೃತ ಸಾಹಿತ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲರು. ಇವೆಲ್ಲವೂ ತನ್ನ ಕೃತಿಗಳಿಗೆ ಪ್ರೇರಣೆಯಾಗಿವೆಯೆಂದೂ ಅವರು ಹೇಳುತ್ತಿದ್ದರು.
ಕಾರ್ನಾಡ್ ಅವರು ಸಿಗರೇಟು ಸೇವನೆಯನ್ನು 40 ವರ್ಷಗಳ ಹಿಂದೆಯೇ ತ್ಯಜಿಸಲು ನಿರ್ಧರಿಸಿದ್ದರು ಹಾಗೂ ಜಿಂದಾಲ್ ಪ್ರಕೃತಿ ಚಿಕಿತ್ಸೆ ಸಂಸ್ಥೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರನ್ನು ಶಂಕರ್‌ನಾಗ್ ಭೇಟಿಯಾಗುತ್ತಿದ್ದರು. ಒಮ್ಮೆ ಶಂಕರ್ ತನ್ನೊಂದಿಗೆ ವಾಕಿಂಗ್‌ಗೆ ಬರುವಂತೆ ಕಾರ್ನಾಡ್‌ರನ್ನು ಕರೆದಿದ್ದರು ಹಾಗೂ ದಾರಿ ಮಧ್ಯೆ ತನ್ನ ಕಿಸೆಯಿಂದ ಸಿಗರೇಟನ್ನು ಹೊರಗೆಳೆದರು. ಆಗ ಕಾರ್ನಾಡ್ ಅವರು ಸಂಸ್ಥೆಯ ಆವರಣದಲ್ಲಿ ಸಿಗರೇಟನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು. ಒಂದು ವೇಳೆ ನೀವು ಸಿಗರೇಟು ತ್ಯಜಿಸುವುದೇ ಆಗಿದ್ದಲ್ಲಿ, ನಿಮ್ಮ ಕೊನೆಯ ಸಿಗರೇಟನ್ನು ನನ್ನೊಂದಿಗೆ ಸೇದಿರಿ’’ ಎಂದು ಹೇಳಿದ್ದಾಗಿಯೂ ಕಾರ್ನಾಡ್ ನನ್ನಲ್ಲಿ ತಿಳಿಸಿದ್ದರು.
 ಶೋಲೆ ಖ್ಯಾತಿಯ ಬಾಲಿವುಡ್ ನಟ ಅಮ್ಜದ್‌ಖಾನ್ ಅವರು ಮಾಂಸವನ್ನು ಕತ್ತರಿಸುವ ಕಲೆಯ ಬಗ್ಗೆ ನನಗೆ ಪೂರ್ಣ ಪಾಠವನ್ನೇ ನೀಡಿದ್ದರು ಎಂಬುದಾಗಿಯೂ ಕಾರ್ನಾಡ್ ನನ್ನಲ್ಲಿ ಹೇಳಿದ್ದರು. ಖ್ಯಾತ ನಿರ್ದೇಶಕ ಸತ್ಯಜಿತ್ ರಾಯ್ ಅವರು ಮರ್ಸಿಡಿಸ್‌ಗಿಂತ ಅಂಬಾಸಿಡರ್ ಅತ್ಯುತ್ತಮ ಕಾರ್ ಎಂಬುದಾಗಿಯೂ ಪರಿಗಣಿಸಿದ್ದರೆಂದು ಕಾರ್ನಾಡ್ ನನ್ನ ಬಳಿ ಆ ಬಗ್ಗೆ ಬಹಳಷ್ಟು ಹೇಳಿಕೊಂಡಿದ್ದರು.
ಕಲೆಯಿಂದ ಜಗತ್ತಿನ ಸೃಷ್ಟಿ
  ಒಂದೊಮ್ಮೆ ಬಿಬಿಸಿಯು ‘ಜಗತ್ತನ್ನು ನಡುಗಿಸಿದ ಕಲೆ’ ಎಂಬ ಟಿವಿ ಸರಣಿಯನ್ನು ನಿರ್ಮಿಸಿತ್ತು ಹಾಗೂ ಮಹಾಭಾರತದ ಬಗ್ಗೆ ಎಪಿಸೋಡ್ ಒಂದನ್ನು ತಯಾರಿಸುವಂತೆ ಕಾರ್ನಾಡ್ ಅವರನ್ನು ಕೇಳಿಕೊಂಡಿತ್ತು. ಅದಕ್ಕೆ ಅವರು, ಮಹಾಭಾರತವನ್ನು ಜಗತ್ತಿನ ಇತರ ಯಾವುದೇ ಕ್ಲಾಸಿಕ್ ಕೃತಿಯ ಜೊತೆ ಹೋಲಿಸಲು ಸಾಧ್ಯವಿಲ್ಲವೆಂದು ಅವರು ನಿರ್ಮಾಪಕರಿಗೆ ತಿಳಿಸಿದರು. ಒಂದು ವೇಳೆ ಮಹಾಭಾರತ ಕಥೆಯನ್ನು ಚಿತ್ರಿಸಬೇಕಿದ್ದಲ್ಲಿ ಅದಕ್ಕಾಗಿ ‘ಜಗತ್ತನ್ನು ಸೃಷ್ಟಿಸಿದ ಕಲೆ’ ಎಂಬ ಪ್ರತ್ಯೇಕ ಸರಣಿಯನ್ನು ನಿರ್ಮಿಸುವಂತೆ ಸೂಚಿಸಿದ್ದರು.
ಶೇಕ್ಸ್‌ಪಿಯರ್ ಹಾಗೂ ಎಲಿಯಟ್‌ರ ಸೂಕ್ತಿಗಳನ್ನು ಉಲ್ಲೇಖಿಸುವಂತೆ ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಸಂಸ್ಕೃತ ಸಾಹಿತ್ಯದ ಸೂಕ್ತಿಗಳನ್ನೂ ಅವರು ನಿರರ್ಗಳವಾಗಿ ಉಲ್ಲೇಖಿಸುತ್ತಿದ್ದರು.
 ‘ಒಡಕಲು ಬಿಂಬ’ ಕಾರ್ನಾಡ್ ತಾನೇ ಬರೆದಿದ್ದನ್ನು ನಿರ್ದೇಶಿಸಿದ ಮೊದಲ ನಾಟಕವಾಗಿದೆ. ಈ ನಾಟಕದಲ್ಲಿ ಕೇವಲ ಒಂದೇ ಪಾತ್ರವಿದ್ದು, ಅದು ತನ್ನೊಂದಿಗೆ ತಾನೇ ಪರದೆಯಲ್ಲಿ ಮಾತನಾಡಿಕೊಳ್ಳುತ್ತದೆ. ವೇದಿಕೆಯಲ್ಲಿರುವ ನಟಿ ಹಾಗೂ ಮೊದಲೇ ಧ್ವನಿಮುದ್ರಿತವಾದ ಆಕೆಯ ವೀಡಿಯೊ, ಪ್ರೇಕ್ಷಕರಿಗೆ ಚೆನ್ನಾಗಿ ಸ್ಪಂದಿಸುವಂತೆ ಏನು ಮಾಡಬೇಕೆಂಬ ಬಗ್ಗೆ ಅವರಲ್ಲಿ ಬಹಳಷ್ಟು ತೊಳಲಾಟವಿತ್ತು. ಅದು ಸಾಧ್ಯವಾಗುವಂತೆ ಮಾಡಲು ನಾನು ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದೆ ಮತ್ತು ತಾಂತ್ರಿಕ ಭಾಗವು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾನು ನಾಟಕ ಪ್ರದರ್ಶನಗಳಲ್ಲಿ ಸ್ವಇಚ್ಛೆಯಿಂದ ಪಾಲ್ಗೊಳ್ಳುತ್ತಿದ್ದೆ. ನಾಟಕದ ಪೋಸ್ಟರ್‌ಗಳು ಬಿಡುಗಡೆಯಾದಾಗ ಕಾರ್ನಾಡ್ ಅವರು ತನ್ನೊಂದಿಗೆ ನನಗೂ ನಿರ್ದೇಶಕ ಸ್ಥಾನ ನೀಡಿದ್ದರು.
ತನ್ನ ನಿರ್ಮಾಣದ ಚಿತ್ರವೊಂದನ್ನು ನಿರ್ದೇಶಿಸಲು ಅಗ್ನಿಶ್ರೀಧರ್ ಅವರು ನಿರ್ದೇಶಕರ ಹುಡುಕಾಟದಲ್ಲಿದ್ದಾಗ ಗಿರೀಶ್‌ಕಾರ್ನಾಡ್‌ರನ್ನು ಕೇಳುವಂತೆ ಅವರಿಗೆ ಸೂಚಿಸಿದ್ದೆ. ಶ್ರೀಧರ್ ಕಥೆಯನ್ನು ಕಾರ್ನಾಡ್ ಅವರಿಗೆ ವಿವರಿಸಿದಾಗ ಇದಕ್ಕೆ ಓರ್ವ ಲವಲವಿಕೆಯ ಯುವನಿರ್ದೇಶಕನ ಅಗತ್ಯವಿದೆಯೆಂದರು. ತದನಂತರ ಶ್ರೀಧರ್ ಅವರು ಚಿತ್ರವನ್ನು ನಿರ್ದೇಶಿಸಲು ನನ್ನನ್ನು ಆಯ್ಕೆ ಮಾಡಿದರು. ಶ್ರೀಧರ್ ಜೊತೆ ಚಿತ್ರಕಥೆಯನ್ನು ಬರೆಯುವಂತೆಯೂ ನಾನು ಕಾರ್ನಾಡ್‌ರನ್ನು ಕೋರಿದ್ದೆ. ಇದಕ್ಕೆ ಒಪ್ಪಿಕೊಂಡ ಅವರು, ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿಯೂ ನಟಿಸಿದರು. ನಾವು ಚಿತ್ರಕಥೆಯ ಮೊದಲ ಕರಡನ್ನು ಬರೆದಾಗ, ಅದನ್ನು ಓದಿದ ಕಾರ್ನಾಡ್ ‘‘ಮಹಿಳೆಯರಿಗೆ ಇದರಲ್ಲಿ ಯಾವುದೇ ಅವಕಾಶವಿಲ್ಲ’’ ಎಂದು ಉದ್ಘರಿಸಿದ್ದರು.
 ಗಿರೀಶ್‌ಕಾರ್ನಾಡ್ ತನ್ನ ಅನಿಸಿಕೆಗಳನ್ನು ಯಾವಾಗಲೂ ಮುಕ್ತವಾಗಿಯೇ ವ್ಯಕ್ತಪಡಿಸುತ್ತಿದ್ದರು. 1986ರಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದೆ. ಚಿತ್ರಕಥೆಯನ್ನು ನಾಟಕೀಯವಾಗಿರಿಸಲು ನಾವು ಯತ್ನಿಸಿದ್ದೆವು. ಆದರೆ ಕಾರ್ನಾಡ್ ಇಲ್ಲದೆ ಇದ್ದಲ್ಲಿ ಯಾರೂ ಕೂಡಾ ಮಹಿಳಾ ಪ್ರೇಕ್ಷಕರ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ.
‘ದಾರಿ ಯಾವುದಯ್ಯ ವೈಕುಂಠ’ಕ್ಕೆ ಎಂಬ ಸಂಭಾಷಣೆಯ ಬಳಕೆಗೂ ಗಿರೀಶ್ ಕಾರ್ನಾಡ್ ಸೂಚಿಸಿದ್ದರು. ‘ಆ ದಿನಗಳು’ ಚಿತ್ರಕ್ಕೆ ಅದೊಂದು ಸ್ಮರಣೀಯ ದೃಶ್ಯವೆನಿಸಿತು.
ಕಾರ್ನಾಡ್ ಅವರ ಬಗ್ಗೆ ಸಾಕ್ಷಚಿತ್ರವೊಂದನ್ನು ನಿರ್ಮಿಸುವ ಹೊಣೆಯನ್ನು ಕರ್ನಾಟಕದ ಮಾಹಿತಿ ಇಲಾಖೆ ಹಾಗೂ ಆನಂತರ ಸಾಹಿತ್ಯ ಅಕಾಡಮಿಯು ನನಗೆ ವಹಿಸಿದಾಗ, ಅವರು ಬೆಳೆದಿದ್ದ ಸ್ಥಳಗಳಲ್ಲಿ ನಾನು ಅವರೊಂದಿಗೆ ವ್ಯಾಪಕವಾಗಿ ಚಿತ್ರೀಕರಣ ನಡೆಸುವ ಅವಕಾಶ ನನಗೆ ದೊರೆತಿತ್ತು. ಸಂಕಲನಕ್ಕಾಗಿ ನಾನು ಕುಳಿತುಕೊಂಡಾಗ ಚಿತ್ರಕ್ಕೆ ಹೆಚ್ಚಿನ ವೀಕ್ಷಕ ವಿವರಣೆಯ ಅಗತ್ಯವಿಲ್ಲವೆಂಬುದು ಮನದಟ್ಟಾಯಿತು
ಕಾರ್ನಾಡ್ ಅವರು ತನ್ನ ಅಭಿಪ್ರಾಯಗಳನ್ನು ಯಾವತ್ತೂ ಮುಕ್ತಮನಸ್ಸಿನಿಂದಲೇ ಹೇಳುತ್ತಿದ್ದರು. ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಎಫ್‌ಟಿಐಐಗೆ ಅವರು ರಾಜೀನಾಮೆ ನೀಡಿದ್ದರು. ರಾಜೀವ್‌ಗಾಂಧಿ ಆಡಳಿತದಲ್ಲಿ ಜಾರಿಗೆ ಬಂದ ಮಾನನಷ್ಟ ವಿಧೇಯಕವಿರಲಿ, ಬಾಬರಿ ಮಸೀದಿ ಧ್ವಂಸದ ಘಟನೆಯ ತರುವಾಯ ನಡೆದ ಕೋಮುಗಲಭೆಗಳ ವಿರುದ್ಧವಾಗಲಿ ಅವರು ಯಾವತ್ತೂ ಧ್ವನಿಯೆತ್ತಿ ಮಾತನಾಡಿದ್ದರು.
 ಕಾರ್ನಾಡ್ ಬೆಳಗ್ಗಿನ ವಾಕಿಂಗ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಎಲ್ಲಿಯೇ ಇದ್ದರೂ ಅವರದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಜೆಪಿ ನಗರದಲ್ಲಿರುವ ಸಣ್ಣ ಅರಣ್ಯದ ಸುತ್ತಲೂ ಅವರು ಸುದೀರ್ಘವಾದ ವಾಯುವಿಹಾರ ನಡೆಸುತ್ತಿದ್ದರು. ಆನಂತರ ಅವರು ತನ್ನ ಮನೆಯ ಸಮೀಪದಲ್ಲೇ ಇರುವ ಎಸ್‌ಎಲ್‌ಎಲ್ ರಿಫ್ರೆಶ್‌ಮೆಂಟ್ಸ್ ಎಂಬ ಕೆಫೆಗೆ ಆಗಮಿಸುತ್ತಿದ್ದರು. ಅಲ್ಲಿ ತನ್ನ ಮೆಚ್ಚಿನ ಉದ್ದಿನವಡೆಯನ್ನು ಸೇವಿಸುತ್ತಿದ್ದರು. ಕಳೆದ ಮೂರು ವರ್ಷಗಳಲ್ಲಿ ಕಾಡಿದ ಅಸ್ವಸ್ಥತೆಯಿಂದಾಗಿ ಅವರಿಗೆ ಬೆಳಗ್ಗಿನ ವಾಕಿಂಗ್ ತಪ್ಪಿಹೋಗಿತ್ತು.
 ಕೆಲವು ತಿಂಗಳ ಹಿಂದೆ ಕಾರ್ನಾಡ್ ಅವರಿಗೆ ಅಮರ್ ಉಜಾಲ ಹಿಂದಿ ಪ್ರಕಾಶನ ಸಂಸ್ಥೆಯಿಂದ ಸಾಹಿತ್ಯ ಉತ್ಕೃಷ್ಟತಾ ಪ್ರಶಸ್ತಿ ದೊರೆತಿತ್ತು. ಆ ಪುರಸ್ಕಾರವನ್ನು ಅವರಿಗೆ ಭಾರತದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರದಾನ ಮಾಡಲಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಕಾರ್ನಾಡ್ ಅವರಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ತನ್ನ ಕೃತಜ್ಞತಾ ಭಾಷಣದ ವೀಡಿಯೊ ಒಂದನ್ನು ಚಿತ್ರೀಕರಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ನನಗೆ ಕರೆ ಮಾಡಿ ವೀಡಿಯೊ ಚಿತ್ರೀಕರಿಸುವಂತೆ ತಿಳಿಸಿದ್ದರು.
ಚಿತ್ರೀಕರಣ ಪೂರ್ಣಗೊಂಡ ಬಳಿಕ ಕಾರ್ನಾಡ್ ಅವರು ತಾನು ಇನ್ನು ಹೆಚ್ಚು ಕಾಲ ಬದುಕಲಾರೆ ಎಂದು ಹೇಳಿದ್ದರು. ‘‘ಹೆಚ್ಚೆಂದರೆ, ನನಗೆ ಕೆಲವು ತಿಂಗಳುಗಳಷ್ಟೇ ಬಾಕಿ ಉಳಿದಿವೆ’’ ಎಂದವರು ಹೇಳಿದ್ದರು. ತನ್ನ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿತ್ತು ಹಾಗೂ ಅವರದಕ್ಕೆ ಹೊಂದಿಕೊಂಡಿದ್ದರು. ಆಗ ನಾನಾಗಿಯೇ ಸನ್ನಿವೇಶವನ್ನು ಹಗುರಗೊಳಿಸಲು ಯತ್ನಿಸಿದ್ದೆ. ‘‘ಒಂದು ವೇಳೆ ನಿಮ್ಮ ಅಂದಾಜು ತಪ್ಪಾಗಿದ್ದರೆ ಏನು ಮಾಡುವಿರಿ?’’ ಎಂದು ಅವರನ್ನು ಪ್ರಶ್ನಿಸಿದೆ. ‘‘ಆಗ ನಾನು ನನ್ನ ಎರಡನೇ ಆತ್ಮಕಥೆಯನ್ನು ಬರೆಯಲಿದ್ದೇನೆ’’ ಎಂದು ಕಾರ್ನಾಡ್ ಉತ್ತರಿಸಿದ್ದರು.
ತನ್ನ ಮರಣವು ಕೇವಲ ಒಂದು ಖಾಸಗಿ ವಿಷಯವಾಗಿರಬೇಕೆಂದು ಕಾರ್ನಾಡ್ ತನ್ನ ಕುಟುಂಬಿಕರು ಹಾಗೂ ಸ್ನೇಹಿತರಿಗೆ ತಿಳಿಸಿದ್ದರು. ತಾನು ಬದುಕಿದಾಗ ಇದ್ದ ಘನತೆ ಹಾಗೂ ಪ್ರಾಮಾಣಿಕತೆಯನ್ನು ಉಳಿಸಿಕೊಂಡೇ ಅವರು ನಮ್ಮನ್ನು ಈಗ ಅಗಲಿದ್ದಾರೆ.
(ಚೈತನ್ಯ ಕೆ.ಎಂ. ಅವರು ಚಿತ್ರ ನಿರ್ದೇಶಕ ಹಾಗೂ ರಂಗತಜ್ಞರಾಗಿದ್ದಾರೆ. ಇವರು ಗಿರೀಶ್ ಕಾರ್ನಾಡ್ ಜೊತೆ ಹಲವಾರು ಸಿನೆಮಾ, ರಂಗಭೂಮಿ ಹಾಗೂ ಟಿವಿ ರಂಗದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ).
ಕೃಪೆ: thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top