ನಾರ್ಲ ವೆಂಕಟೇಶ್ವರ ರಾವು ಅವರ ‘ಸೀತೆಯ ಭವಿಷ್ಯ’ | Vartha Bharati- ವಾರ್ತಾ ಭಾರತಿ

ನಾರ್ಲ ವೆಂಕಟೇಶ್ವರ ರಾವು ಅವರ ‘ಸೀತೆಯ ಭವಿಷ್ಯ’

ಒಂದು ಸಾಮಾನ್ಯ ಸ್ತ್ರೀಯಂತೆ ಮಾತನಾಡುವ ಸೀತೆ ಸಾರ್ವತ್ರಿಕವಾದ ಯಾತನೆಗಳನ್ನು ಉಚ್ಚರಿಸುತ್ತಾಳೆ. ಅವಳು ಇಲ್ಲಿ ಸ್ತ್ರೀವಾದಿಯಲ್ಲ; ಮಾನವತಾವಾದಿ. ಬಹುಮುಖ್ಯ ಪ್ರಶ್ನೆಗಳನ್ನು ಅವಳ ಮೂಲಕವೇ ಅಭಿವ್ಯಕ್ತಿಗೊಳಿಸುವುದರಿಂದಾಗಿ ನಾರ್ಲ ಇವು ಸಾಹಿತ್ಯದಿಂದ ಹೊರ ಹೋಗಿ ಸಾರ್ವಜನಿಕ ವಿವಾದವಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಈ ನಾಟಕದ ಮೂಲಕ ನಾರ್ಲ ಅವರು ಆಧುನಿಕರಂತೆ ಕಥೆಯ ಹೊರಗಿದ್ದು ಟೀಕಿಸುವುದಿಲ್ಲ. ಬದಲಾಗಿ ಸೀತಾಮುಖೇನ, ಕವಿಸಮಯದ ಮೂಲಕ, ರಾಮಾಯಣದ ಬಹುಮುಖ್ಯ ಸಂಶಯವನ್ನು ಅನಾವರಣಗೊಳಿಸುತ್ತಾರೆ.


ಭಾಗ-2

ನಾರ್ಲ ವೆಂಕಟೇಶ್ವರ ರಾವು ಯಾವುದೇ ವಿವಾದ ಸೃಷ್ಟಿಸಲು ತಮ್ಮ ಪೀಠಿಕೆಯನ್ನು ಬರೆದಿರಲಾರರೆಂಬ ವಿಶ್ವಾಸ ಓದುಗರಿಗೆ ಬರುವಂತೆ ಅವರು ಬರೆದಿದ್ದಾರೆ. ಪೀಠಿಕೆಗೆ ಹೋಲಿಸಿದರೆ ತೀರಾ ಚಿಕ್ಕದಾಗಿರುವ ನಾಟಕವಂತೂ ತನ್ನ ಕಲಾತ್ಮಕ ಪ್ರತಿಭೆಯಿಂದಾಗಿ ಹೊಸ ಹಾದಿಯನ್ನು ಕಾಣಿಸುತ್ತದೆಯೇ ಹೊರತು ಪುರಾಣವನ್ನು ಕುಬ್ಜಗೊಳಿಸುವುದಿಲ್ಲ.

ನಾರ್ಲ ಅವರ ನಾಟಕದ ಕುರಿತು ಬರೆಯುವುದಕ್ಕಿಂತ ಅವರ ಪೀಠಿಕೆ ಮತ್ತು ಅವರು ಎತ್ತಿದ ಪ್ರಶ್ನೆಗಳನ್ನು ಪ್ರಸ್ತಾಪಿಸಲು ಹೆಚ್ಚು ಅವಕಾಶ ಬೇಕಾಗುವುದರ ಹಿನ್ನೆಲೆ ಇದೇ ಆಗಿದೆ. ಇದರೊಂದಿಗೆ ಅವರ ನಾಟಕವನ್ನು ಪರಿಶೀಲಿಸಬಹುದು: -4-

ನಾಟಕ ಚಿಕ್ಕದೆಂದು ಈ ಮೊದಲೇ ಸೂಚಿಸಿದೆ. ಇದೊಂದು ಕಾಲಸಂದರ್ಭವನ್ನು ಆಧಾರವಾಗಿಟ್ಟುಕೊಂಡ ನಾಟಕ. ಆಸ್ಥಾನದಲ್ಲಿ ರಾಮ, ಲಕ್ಷ್ಮಣ, ಸೀತೆಯರು ಬಂದು ನೆಲೆಸಿದಾಗ ಅಲ್ಲಿನ ಋಷಿಮುನಿಗಳು ರಾಕ್ಷಸರ ಉಪಟಳವನ್ನು ಸಹಿಸಲಾರದೆ ರಾಮನ ನೆರವನ್ನು ಬೇಡಿ ರಾಮನು ಅವರಿಗೆ ರಾಕ್ಷಸ ಸಂಹಾರದ ಮಾತು ಕೊಟ್ಟು ನಡೆಯುವ ಮತ್ತು ಅದಕ್ಕೆ ವಿರುದ್ಧವಾಗಿ ರಾಕ್ಷಸರನ್ನು ಮನುಷ್ಯರಾಗಿ ಕಾಣುವ, ಋಷಿಮುನಿಗಳನ್ನು ತಮ್ಮ ತಪೋಬಲವನ್ನು ಬಳಸದೆ ರಾಮನನ್ನು ಬಳಸಿಕೊಳ್ಳುವ ಅವಕಾಶವಾದಿ ಸ್ವಾರ್ಥಿಗಳಂತೆ ಕಾಣುವ ಮತ್ತು ಅದಕ್ಕೆ ರಾಮ ಲಕ್ಷ್ಮಣರು ತಮ್ಮ ಘನತೆಕಾರಣವಾಗಿ ಬಲಿಬೀಳುತ್ತಾರೆಂಬ ದೃಷ್ಟಿಕೋನದ ಸೀತೆಯ ನಡವಳಿಕೆಯ ಒಂದು ಪುಟ್ಟ ಪ್ರಸಂಗ. ಕಾಡು ಯಾರದ್ದು? ಮತ್ತು ಕಾಡಿಗೆ ಬಂದಿರುವುದು ಯಾಕೆ? ಪ್ರಶಾಂತ ಜೀವನಕ್ಕೋ ಇಲ್ಲ ವೈರಿಗಳೇ ಅಲ್ಲದ ರಾಕ್ಷಸ ಸಂಹಾರಕ್ಕೋ ಎಂಬ ಸೂಕ್ಷ್ಮ ಮತ್ತು ಗಹನವಾದ ಪ್ರಶ್ನೆಗಳನ್ನೊಡ್ಡುವ ಚಿತ್ರಣ ಈ ನಾಟಕದ್ದು. ಇಲ್ಲಿನ ಪಾತ್ರಗಳು ರಾಮ, ಸೀತಾ, ಲಕ್ಷ್ಮಣ ಹಾಗೂ ಜನಸ್ಥಾನದ ಇಬ್ಬರು ಋಷಿಗಳು- ಅವರಲ್ಲೊಬ್ಬ 60 ಮೀರಿದವನಾದರೆ ಇನ್ನೊಬ್ಬ ಆತನಿಗಿಂತ 10 ವರ್ಷ ಚಿಕ್ಕವನು. ಇಲ್ಲಿನ ಸೀತಾ ಸುಮಾರು 16-17 ವರ್ಷ ವಯಸ್ಸಿನವಳು. ರೂಪಸಿ. ಲಕ್ಷ್ಮಣನೂ ಸರಿ ಸುಮಾರು ಅದೇ ವಯಸ್ಸಿನವನು. ಸ್ಫುರದ್ರೂಪಿ. ರಾಮ ಎಂದಿನಂತೆಯೇ ಗಂಭೀರಿ. ಜನಸ್ಥಾನದ ಸುತೀಕ್ಷ್ಣ ಮಹರ್ಷಿಯ ಆಶ್ರಮವೇ ಇಲ್ಲಿನ ರಂಗಸ್ಥಳ. ರಾಮನು ವನವಾಸವನ್ನು ಪ್ರಾರಂಭಿಸಿದ ಹೊಸದು ಎಂದು ಇಲ್ಲಿನ ಕಾಲ ಪ್ರಸಂಗ ಸೂಚಿಸಿದರೂ ಕಥಾ ಸಂವಿಧಾನವನ್ನು ಪೌರಾಣಿಕ ದೃಷ್ಟಿಯಿಂದ ನೋಡಿದರೆ ಹಾಗಿರಲಾರದು, ಮತ್ತು ಇದು ವನವಾಸದ ಕೊನೆಯ ಹಂತವಿರಬೇಕು ಎಂದು ಅನ್ನಿಸುತ್ತದೆ. ಹೇಗೂ ಇರಲಿ, ನಾಟಕದ ಮೊದಲಿಗೆ ಒಂದು ಪುಟಕ್ಕೂ ಮೀರಿ ಸಂದರ್ಭ ಮತ್ತು ದೃಶ್ಯ ಸೂಚನೆಯಿದೆ.

ಮೊದಲ ಅಂಕದಲ್ಲಿ ಲಕ್ಷ್ಮಣನ ಪ್ರವೇಶದೊಂದಿಗೆ ಸೀತಾ-ಲಕ್ಷ್ಮಣರ ಸಂವಾದವು ಇಂದಿನ ಯಾವುದೇ ಮಧ್ಯಮ ವರ್ಗದ ಸಂಸಾರಸ್ಥರ ನಡುವಣ ಮಾತುಕತೆಯಂತಿದೆ. ರಾಮನು ಬರದಿರುವುದನ್ನು ಸೀತೆ ಹಾಸ್ಯಮಯವಾಗಿಯೇ ವಿಚಾರಿಸುತ್ತಾಳೆ. ಇನವಂಶದ ಹಿರಿಮೆಯ ಕತೆಗಳನ್ನು ಅವಳು ಅಷ್ಟಾಗಿ ನಂಬಿರುವುದಿಲ್ಲ. ವಂಶದ ಹೆಗ್ಗಳಿಕೆಯ ಕುರಿತ ಟೀಕೆ ಅವಳದ್ದು. ಸ್ವಲ್ಪ ಹಂಗಿಸುವ ಧ್ವನಿಯಾಗಿ ಆನಂತರ ಹೀಯಾಳಿಕೆಯ ಸ್ವರೂಪ ಪಡೆದಾಗ ಸಹಜವಾಗಿಯೇ ಲಕ್ಷ್ಮಣನು ‘‘ಇದೇನು ಕಟ್ಟುಕತೆ ಅಲ್ಲವಲ್ಲ’’ ಎಂದು ತಮ್ಮ ವಂಶವನ್ನು ಸಮರ್ಥಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಸೀತೆ ‘‘ಛೇ! ಕಟ್ಟುಕತೆಯಲ್ಲ, ಉಪಕತೆ’’ ಎಂದು ಹೇಳುತ್ತಾಳೆ. ಗಂಗಾವತರಣವನ್ನೂ ಸೀತೆಯು ನಂಬುವುದಿಲ್ಲ. ಬದಲಾಗಿ ಅವನ್ನೆಲ್ಲ ಭ್ರಮೆಯೆಂದು ಹೇಳುತ್ತಾಳೆ. ಇದೊಂದು ರೀತಿಯಲ್ಲಿ ಪುರಾಣದ ಪವಾಡಕತೆಗಳನ್ನು ನೆಲಕ್ಕೆ ತರುವ ರೀತಿ. ಅವಳ ದೃಷ್ಟಿಯಲ್ಲಿ ರಾಮ ಸಮರ್ಥ ಹೌದಾದರೂ ದೊಡ್ಡಸ್ತಿಕೆಯ ಹೆಮ್ಮೆಯಿಂದ ಬೇಡದ ವಿಪತ್ತುಗಳನ್ನು ಎದುರುಹಾಕಿಕೊಳ್ಳುವವನು. ಸೀತೆ ಹೇಳುವಂತೆ ‘‘ರಘುಕುಲತಿಲಕಾ ರಣರಂಗ ಧೀರಾ, ರಾಕ್ಷಸ ಸಂಹಾರಕಾ ಎನ್ನುತ್ತ ಉಬ್ಬಿಸಿದರೆ ಸಾಕು, ತನ್ನಂತಹವರು ಈ ಲೋಕದಲ್ಲೇ ಇಲ್ಲವೆಂದು ತಬ್ಬಿಬ್ಬಾಗಿಹೋಗುತ್ತಾರೆ.’’ ಅದಕ್ಕಾಗಿ ಅವಳು ‘‘ಈ ಋಷಿಗಳ ಸ್ತೋತ್ರಗಳೂ ಸಾಕು, ಇವರ ಸತ್ಕಾರಗಳೂ ಸಾಕು’’ ಎನ್ನುತ್ತಾಳೆ. ಆಶ್ರಮದಿಂದ ದೂರಹೋಗಿ ಎಲ್ಲಾದರೂ ಒಂದು ಪರ್ಣಕುಟಿಯನ್ನು ಕಟ್ಟಿ ಬಾಳುವ ಆಸೆ ಹೊಂದಿದವಳು ತಾನು ಎಂಬುದನ್ನು ನಿರೂಪಿಸುತ್ತಾಳೆ. ರಾಜರ್ಷಿಗಳ ಮಗಳಾಗಿದ್ದೂ ಋಷಿಮುನಿಗಳ ಕುರಿತ ಅವಳ ಅಸಹನೆಗೆ ಅವಳೇ ನೀಡುವ ಕಾರಣವೆಂದರೆ ‘‘ರಾಜರ್ಷಿಯ ಮಗಳಾದುದರಿಂದಲೇ! ನಮ್ಮ ತಂದೆಯವರು ಜಟಾಜೂಟಗಳನ್ನು ಹೊಂದಿದ ಪ್ರತಿ ಕಪಟಿಯನ್ನೂ ಒಬ್ಬ ಮಹರ್ಷಿ ಎಂದು ತಲೆಯ ಮೇಲೆ ಕೂರಿಸಿಕೊಳ್ಳುವುದಿಲ್ಲ. ಜ್ಞಾನಿಗಳಾದವರನ್ನೇ ಬರಮಾಡಿಕೊಳ್ಳುತ್ತಾರೆ, ಅವರನ್ನೇ ಸನ್ಮಾನಿಸುತ್ತಾರೆ.’’

 ಸೀತೆಯ ದೃಷ್ಟಿಯಲ್ಲಿ ಈ ಋಷಿಮುನಿಗಳು ಕಾಡಾಡಿಗಳು; ಇತರರನ್ನು ನೆಮ್ಮದಿಯಾಗಿ ಬದುಕಲು ಬಿಡದವರು. ತನಗೆ ಬಂದ ಕಷ್ಟಕ್ಕೆ ಈ ಅರಣ್ಯವಾಸ ಪೂರಕವಾಗಿದೆಯೆಂದು ಭಾವಿಸುವವಳು. ಹೇಗೋ ವನವಾಸ ಮುಗಿದರೆ ಸಾಕೆಂದಿದ್ದರೆ ಈ ಕಪಟಮುನಿಗಳು, ನಮ್ಮನ್ನು ಮತ್ತಷ್ಟು ಕಷ್ಟಗಳಿಗೆ ಗುರಿಮಾಡದೆ, ಈ ಕಾರಡವಿಗಳಿಂದ ಹೊರಹೋಗಲು ಬಿಡುವಂತೆ ಕಾಣುವುದಿಲ್ಲ. ಮುಖ್ಯವಾಗಿ ಅವಳಿಗೆ ಈ ಮಂದಿ ರಾಮಲಕ್ಷ್ಮಣರನ್ನು ಹೊಗಳುವುದು ಹೀನ ಮತ್ತು ಧೂರ್ತ ಮುಖಸ್ತುತಿಯೇ ಹೊರತು ಇನ್ನೇನೂ ಅಲ್ಲ. ಇದು ರಾಮಲಕ್ಷ್ಮಣರಿಗೆ ಅರ್ಥವಾಗುವುದಿಲ್ಲವೆಂಬುದು ಅವಳಿಗೆ ಚಿಂತೆಯ ವಿಚಾರ. ಸೀತಾ ಲಕ್ಷ್ಮಣರು ಹೀಗೆ ಮಾತನಾಡಿಕೊಂಡಿರುವಾಗಲೇ ಋಷಿಮುನಿಗಳು ಸ್ತೋತ್ರಸಹಿತವಾಗಿ ಬರುತ್ತಾರೆ. ಸೀತೆಗೆ ಇದು ಅಸಹನೀಯ. ಅವರ ಸುಳ್ಳು ಹೊಗಳಿಕೆ ಕಾರ್ಯಾರ್ಥವೇ ಹೊರತು ಬೇರಲ್ಲ ಎಂದು ಅವಳ ಭಾವನೆ. ಬಂದವರು ಲಕ್ಷ್ಮಣನನ್ನೇ ರಾಮನೆಂದು ತಿಳಿದು ‘‘ತಮ್ಮ ಪಾದಪದ್ಮರಜದಿಂದ ನಮ್ಮ ಪರ್ಣಕುಟೀರವನ್ನು...’’ ಎನ್ನಬೇಕಾದರೆ ಸೀತೆಯು ಅವರ ಮಾತನ್ನು ಮುಂದುವರಿಸುವಂತೆ ‘‘ಪಾವನ ಮಾಡಬಲ್ಲವರು ಇವರಲ್ಲ, ಇವರ ಅಣ್ಣನವರು’’ ಎಂದು ಅಣಕಿಸುತ್ತಾಳೆ. ಲಕ್ಷ್ಮಣನ ಗುರುತು ಗೊತ್ತಾದಾಗ ಆ ಋಷಿಯು ‘‘ಅವನನ್ನು ಲಕ್ಷ್ಮಣ ಸ್ವಾಮಿಗಳೇ?’’ ಎಂದರೆ ಸೀತೆ ಅದನ್ನು ‘‘ಆತ ಸ್ವಾಮಿಗಳಾಗಲು ಇನ್ನೂ ಗಡ್ಡ ಕೂಡ ಮೊಳೆತಿಲ್ಲವಲ್ಲ.’’ ಎನ್ನುತ್ತಾಳೆ. ಅಷ್ಟೇ ಅಲ್ಲ, ಒಬ್ಬ ಋಷಿಯ ಪರಿಚಯವನ್ನು ‘‘ಇವರು ವಾಲಖಿಲ್ಯ ಮಹರ್ಷಿಗಳು. ವಾಲಖಿಲ್ಯರು ಬ್ರಹ್ಮರೋಮಗಳಿಂದ ಜನಿಸಿದವರು...’’ ಎಂದರೆ ಸೀತೆ ಮತ್ತೆ ‘‘ತಾವು ಯಾರು? ಆತನ ಬೆವರ ಹನಿಗಳಿಂದ ಜಗುಳಿ ಬಿದ್ದವರು ಅಲ್ಲ ತಾನೇ?’’ ಎನ್ನುತ್ತ ಅತಿಮಾನುಷತೆಯ ಕುರಿತು ತನಗಿರುವ ಜಿಗುಪ್ಸೆಯನ್ನು ಅಭಿವ್ಯಕ್ತಿಸುತ್ತಾಳೆೆ. ಋಷಿಯು ‘‘ಅಮ್ಮಾ’’ ಎಂದು ಸಂಬೋಧಿಸಿದರೆ ಸೀತೆ ‘‘ಇನ್ನು ಸ್ವಲ್ಪಹೊತ್ತಾದರೆ ನನ್ನನ್ನು ಅಜ್ಜಿಯನ್ನಾಗಿಸುತ್ತೀರೇನೋ?’’ ಎಂದು ಲೇವಡಿ ಮಾಡುತ್ತಾಳೆ.

ಅಲ್ಲೊಬ್ಬ ಯಾಗಾನಂದ ಸ್ವಾಮಿಯೂ ಇದ್ದಾನೆ. ಅವನು ಯಾಗಪರಿಣತ. (ಇದೂ ಲೇವಡಿಯೇ!) ಮುಂದೆ ಒಬ್ಬ ಋಷಿ ಅವಳ ಟೀಕೆಗೆ ಉತ್ತರವಾಗಿ ‘‘ಅಮ್ಮಮ್ಮಾ’’ ಎಂದರೆ ಸೀತೆ ‘‘ನಾನು ಅಂದ ಹಾಗೇ ಆಯಿತು. ನನ್ನನ್ನು ಅಜ್ಜಿಯನಾಗಿಸಿಬಿಟ್ಟಿರಿ.’’ ಎಂದು ಹಂಗಿಸುತ್ತಾಳೆ. ಅವಳ ಮಾತುಗಳು ವಯೋಸಹಜವಾಗಿ ಮತ್ತು ತನ್ನ ಸ್ಥಿತಿ-ಗತಿಗಳ ಪ್ರತಿಬಿಂಬವಾಗಿ ಮೂಡಿದರೆ ಲಕ್ಷ್ಮಣನು ರಾಜಗಾಂಭೀರ್ಯದ ಮುಖವಾಡ ಹಾಕಿಕೊಂಡ ಕೃತಕತೆಯನ್ನು ಪ್ರದರ್ಶಿಸುವಂತಿದ್ದಾನೆ. ಋಷಿಗಳು ಬಂದ ಕಾರಣವನ್ನು ಅವರು ಹೇಳುವ ಮೊದಲೇ ಸೀತೆಯು ಅವರು ರಾಕ್ಷಸರ ವಿರುದ್ಧ ನೆರವು ಕೋರಿ ಬಂದವರೆಂದು ಹೇಳಿದಾಗ ಋಷಿಗಳು ‘‘ಆಶ್ಚರ್ಯ, ಪರಮಾಶ್ಚರ್ಯ. ನಮ್ಮ ನಿವೇದನೆ ನಮ್ಮ ಮನಸ್ಸಿನಲ್ಲಿ ಇದ್ದಾಗಲೇ ಎಷ್ಟು ಸರಿಯಾಗಿ ಗ್ರಹಿಸಿದ್ದೀರಿ.’’ ಎಂದು ಹೇಳಿದರೆ ಸೀತೆ ಅದಕ್ಕುತ್ತರವಾಗಿ ತನ್ನ ಹುಡುಗುತನದಲ್ಲಿ ಮತ್ತು ವ್ಯಂಗ್ಯದಲ್ಲಿ ‘‘ತಮ್ಮಂತಹ ದಿವ್ಯರ್ಷಿಗಳ ಮಧ್ಯೆ ಬಂದನಂತರ ನನಗೆ ಕೂಡ ಸ್ವಲ್ಪಸ್ವಲ್ಪದಿವ್ಯದೃಷ್ಟಿ ಲಭಿಸುತ್ತಿದೆ.’’ ಎನ್ನುತ್ತಾಳೆ. ಋಷಿ ತನ್ನ ಗುರುವನ್ನು ‘‘ಅವರು ತ್ರಿಕಾಲಜ್ಞರು.’’ ಎಂದರೆ ಸೀತೆ ‘‘ಅವರ ಶುಶ್ರೂಶೆ ಮಾಡಿದ್ದರಿಂದ ತಾವು ಕಡೇ ಪಕ್ಷ ದ್ವಿಕಾಲಜ್ಞರಾಗಿಯಾದರೂ ಇರಬೇಕು.’’ ಎನ್ನುತ್ತಾಳೆ. ತಾನು ಅಷ್ಟು ಹಂಗಿಸುತ್ತಿದ್ದರೂ ಸಿಟ್ಟು ಬಾರದೆಂಬುದಾಗಿ ಆ ಋಷಿ ಹೇಳಿದರೆ ಸೀತೆ ಅದಕ್ಕೆ ಪ್ರತಿಯಾಗಿ ‘‘ಕಾಲುಹಿಡಿದುಕೊಂಡು ಎಳೆಯುತ್ತಿದ್ದರೆ ಸೂರನ್ನು ಹಿಡಿದುಕೊಂಡು ನೇತಾಡುತ್ತೀರಿ ಎಂದ ಹಾಗಾಯಿತು.’’ ಎಂದು ಪ್ರಶಂಸಿಸುತ್ತಾಳೆ. (ಕಾಲೆಳೆಯುವುದು ಎಂಬ ರೂಢಿಯ ಮಾತು ಇಲ್ಲಿ ಪೌರಾಣಿಕವಾಗಿದೆ.)

ಸೀತೆಯ ಈ ಪ್ರವೃತ್ತಿಯೊಂದಿಗೆ ವಾನಪ್ರಸ್ತದ, ಬದುಕಿನ ಅಗತ್ಯವನ್ನು ಸೀತೆ ಪ್ರಶ್ನಿಸುತ್ತಾಳೆ. ರಾಕ್ಷಸರು ಬಂದು ಹಿಂಸಿಸುತ್ತಾರೆಂದು ಋಷಿಮುನಿಗಳು ಹೇಳಿದರೆ ಅವಳು ‘‘ಅವರ ಕಣ್ಣಿಗೆ ನೀವೇ ಕ್ರೂರ ರಾಕ್ಷಸರಾಗಿ ಕಾಣಬಹುದು ಅಲ್ಲವೇ? ... ಅನ್ಯಾಯವಾಗಿ ಅವರ ಸೀಮೆಯೊಳಗೆ ನುಗ್ಗಿಬಂದದ್ದು ನೀವೇ, ಅವರ ನಿವಾಸಸ್ಥಾನಗಳಿಗೆ ಕಿಚ್ಚಿಡುತ್ತಿರುವುದು ನೀವೇ, ಅವರ ಬಾಳನ್ನು ಭಸ್ಮ ಮಾಡುತ್ತಿರುವುದು ನೀವೇ, ಅವರನ್ನು ಗೋಳುಹುಯ್ದುಕೊಳ್ಳುತ್ತಿರುವುದು...’’ ಎಂದು ತಿರುಮಂತ್ರ ಹಾಕುತ್ತಾಳೆ. (ಮಹಾಶ್ವೇತಾದೇವಿ ಬಿರ್ಸಾಮುಂಡಾನು ಕಾಡನ್ನುಳಿಸುವ ಕ್ರಾಂತಿಗಾಥೆಯ ‘ಯಾರದೀ ಕಾಡು’ ನೆನಪಾಗಬೇಕು!) ಅವಳ ದೃಷ್ಟಿಯಲ್ಲಿ ಹೋಮಕುಂಡಗಳು ಅಡವಿಗಳನ್ನು ಸುಡಲು; ಸಮತಟ್ಟಾದ ಭೂಮಿಯನ್ನಾಗಿಸಿ ಉಳಲು; ಬೆಳೆ ಬೆಳೆಯಲು; ಕಣಜಗಳು ತುಂಬಲು; ಸಂಸಾರಗಳು ಹಚ್ಚಗೆ ಇರಲು. ‘‘ಈ ಅಡವಿಗಳನ್ನು ಧ್ವಂಸ ಮಾಡಿದರೆ ಅವರ ಬಾಳೇ ಧ್ವಂಸವಾಗುವುದಿಲ್ಲವೇ?’’ ಎಂದು ಪ್ರಶ್ನಿಸಿ ರಾಕ್ಷಸರನ್ನೂ ಮನುಷ್ಯರನ್ನಾಗಿ ಕಾಣುತ್ತಾಳೆ. ಅಷ್ಟೇ ಅಲ್ಲ, ರಾಕ್ಷಸರೆಂದು ಹೇಳುವ ಜನರ ಜೀವನವಿಧಾನವನ್ನು ಗೌರವಿಸಿ ವ್ಯವಸಾಯದಲ್ಲಿ ಅವರಿಗೆ ಆಸಕ್ತಿಯಿಲ್ಲದಿರುವುದು ಅವರ ಜೀವನವಿಧಾನವೇ ಆಗಿರುವುದರಿಂದ ಅವರು ಇತರರಂತೆ ಬದುಕಬೇಕೆಂದು ಬಯಸುವುದಾದರೂ ಏಕೆಂದು, ‘‘ನಿಮ್ಮ ದೇವತೆಗಳು ನಿಮಗಿದ್ದರೆ ಅವರ ದೇವತೆಗಳು ಅವರಿಗೆ’’ ಎಂದು ವಿಶ್ಲೇಷಿಸುತ್ತಾಳೆ. ಲಕ್ಷ್ಮಣನು ಅವರನ್ನು ಹೇಗಾದರೂ (ಸೀತೆಯ ಕೋಪದಿಂದ ದೂರವಿಡುವುದಕ್ಕಾಗಿ) ಸಾಗಹಾಕಲು ಪ್ರಯತ್ನಿಸಿದರೂ ಅವರು ಹೋಗರು. ಕೊನೆಗೆ ಒತ್ತಾಯದಿಂದೆಂಬಂತೆ ಅವರು ನಿರ್ಗಮಿಸುತ್ತಾರೆ. ಹೋಗುವ ಅವಸರದಲ್ಲಿ ಒಬ್ಬನ ತಲೆ ಬಾಗಿಲ ಚೌಕಟ್ಟಿಗೆ ಢಿಕ್ಕಿಯಾಗುತ್ತದೆ. ಅವನು ನೋವಿನಿಂದ ಅರಚುತ್ತಾನೆ. ಮುಂದೆ ಒದಗಬಹುದಾದ ಕೇಡನ್ನು ಸೀತೆ ‘‘ಈ ಕಪಟಸನ್ಯಾಸಿಗಳ ಕಾರಣದಿಂದ ನಮಗೇನೋ ಕೇಡಾಗದೆ ತಪ್ಪದು.’’ ಎನ್ನುತ್ತಾಳೆ. (ಪುರಾಣ ರಾಮಾಯಣದಲ್ಲಿ ಮುಂದೆ ರಾವಣನು ಕಪಟಸನ್ಯಾಸಿಯ ರೂಪದಲ್ಲಿ ಬರುವುದೂ ಇದೇ ಕಾರಣಕ್ಕಾಗಿಯೇ ಏನೋ?)

ದ್ವಿತೀಯಾಂಕದಲ್ಲಿ ಅದೇ ರಂಗ. ರಾಮನಿಗಾಗಿ ಕಾಯುವ ಲಕ್ಷ್ಮಣ, ಸೀತೆ; ಋಷಿಮುನಿಗಳೂ. ಪರಾಕ್ರಮ ಪ್ರದರ್ಶನಕ್ಕಾಗಿ ರಾಮ ಪತ್ನಿಯನ್ನೂ ಮರೆತವನೆಂಬ ಧೋರಣೆೆ ಸೀತೆಗೆ. ಅಷ್ಟರಲ್ಲಿ ರಾಮ ಮರಳುತ್ತಾನೆ. ಅವನು ಈ ವನವಾಸಿಗಳ ಕುರಿತು ಅಪೂರ್ವ ಗೌರವವನ್ನು ಹೊಂದಿದವನು. ಆದರೆ ಸೀತೆ ಋಷಿಮುನಿಗಳನ್ನು ಟೀಕಿಸುತ್ತಾಳೆ. ಅವನು ಸಿಡುಕಿದ ಮೇಲೂ ಸೀತೆಯ ಮಾತುಗಳು ತಮ್ಮ ಹರಿತವನ್ನು ಕಳೆದುಕೊಳ್ಳುವುದಿಲ್ಲ. ಆದರೂ ಸೀತೆ ಸ್ವಲ್ಪ ಸೌಮ್ಯಳಾಗುತ್ತಾಳೆ. ರಾಜ್ಯಾಧಿಕಾರಕ್ಕಿಂತ ನೈತಿಕ ಅಧಿಕಾರ ಹೆಚ್ಚಿನದೆಂಬುದನ್ನು ಹೇಳುತ್ತ ಈ ಋಷಿಮುನಿಗಳು ರಾಮನನ್ನು ಹೊಗಳಿ ರಾಮನಿಂದ ಒಪ್ಪಿಸಿಕೊಳ್ಳುತ್ತಾರೆ. ಆಗ ಸೀತೆ ‘‘ಹೊಗಳಿಕೆಗೆ ಉಬ್ಬುವುದು ರಾಜರಿಗಿರುವ ರೋಗವೇ ಆದರೂ ಈ ಅಯೋಧ್ಯಾರಾಜರಿಗೆ ಇದ್ದಷ್ಟು ಯಾರಿಗೂ ಇಲ್ಲ.’’ ಎನ್ನುತ್ತಾಳೆ. ಋಷಿಯ ಚರ್ಯೆಯನ್ನು, ಬುದ್ಧಿಮತ್ತೆಯನ್ನು ಅವಳು ಹೊಂದಿಸಿಕೊಂಡು ಹಾಸ್ಯವಾಗಿ ‘‘ನಿಮ್ಮ ಪಾರಲೌಕಿಕ ಶಕ್ತಿಗಳ ವಿಷಯ ನನಗೆ ತಿಳಿಯದು, ಆದರೆ ನಿಮ್ಮ ಲೌಕಿಕ ಪ್ರಜ್ಞೆ ಅಸಾಧಾರಣವಾದದ್ದೇ.’’ ಎನ್ನುತ್ತಾಳೆ. ರಾಮನೇ ಒಂದು ಹಂತದಲ್ಲಿ ತೀವ್ರವಾಗಿ ‘‘ಸೀತಾ, ನೀನು ಪುನಃ ಮಿತಿಮೀರಿ ಹೋಗುತ್ತಿದ್ದೀಯೆ.’’ ಎನ್ನಬೇಕಾಗುತ್ತದೆ. ಆದರೆ ಅವಳ ತರ್ಕವನ್ನು ಖಂಡಿಸುವ ಸಮರ್ಥನೆ ರಾಮನಿಗೂ ಇಲ್ಲ. ಸೀತೆಯ ಪ್ರಶ್ನೆ ಸರಳವಾದದ್ದು. ಋಷಿಗಳು ತಮ್ಮ ಯಜ್ಞಶಕ್ತಿ, ಮಂತ್ರಶಕ್ತಿ, ತಪೋಶಕ್ತಿಯಿಂದ ತಮ್ಮ ವೈರಿಗಳನ್ನು ನಿಗ್ರಹಿಸಬಹುದಲ್ಲ, ಅದಕ್ಕೆ ರಾಮನೇಕೆ? ಅದನ್ನು ಹಾಗೆಲ್ಲ ಬಳಸಬಾರದೆಂದು ಋಷಿಯು ಸಬೂಬು ಹೇಳಿದಾಗ ಅವಳು ಕೊಡುವ ಉತ್ತರ ಹೀಗಿದೆ: ‘‘ನಿಮ್ಮ ದಿವ್ಯಶಕ್ತಿಗಳ ಚಾತುರ್ಯ ನನಗೆ ತಿಳಿಯದು. ಆದರೆ ನಿಮ್ಮ ವಾಕ್ಚಾತುರ್ಯ ಅಮೋಘವಾದುದು. ತನ್ನ ಮಾತುಗಳಿಂದ ರಾಮನಿಗೆ ಕೋಪ ಬಂದಾಗಲೂ ಅವಳು ನೀವು ಗದರಿಸಿದರೂ ನಾನು ಸುಮ್ಮನಿರುವವಳಲ್ಲ.’’ ಎನ್ನುತ್ತಾಳೆ. ರಾಮನ ಬಗ್ಗೆ ಅವಳಿಗೆ ಭಯವಿಲ್ಲ. ಅವಳ ದೃಷ್ಟಿಯಲ್ಲಿ ನಿಮ್ಮ ಮುಖಸ್ತುತಿ ಮಾಡಿ ಈ ಕಪಟಮುನಿಗಳು ಅಮಾಯಕರಾದ ಅಟವಿಕರನ್ನು ಅನ್ಯಾಯವಾಗಿ ನಿಮ್ಮಿಂದ ಕೊಲ್ಲಿಸುತ್ತಿದ್ದಾರೆ.

ಸೀತೆಯ ಎಲ್ಲ ವಿರೋಧವೂ ರಾಮನ ದೃಢನಿಶ್ಚಯವನ್ನು ತಡೆಯಲಾರದು. ಆದರೂ ಅವಳು ರಾಮನಲ್ಲಿ ಅಟವಿಕ ಅಮಾಯಕರ ಪರವಾಗಿ ವಾದಿಸುತ್ತಾಳೆ. ಅವಳ ಕಳವಳವಿರುವುದು ನಿಷ್ಪಾಪಿಗಳ ವಿರುದ್ಧ ರಾಮನನ್ನು ಋಷಿಮುನಿಗಳು ಲೋಕಧರ್ಮದ ಹೆಸರಿನಲ್ಲಿ ದುರ್ಬಳಕೆ ಮಾಡುತ್ತಿರುವ ಬಗ್ಗೆ.

ಸೀತೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಹಾಕುತ್ತಾಳೆ: ‘‘ಈ ಋಷಿಮುನಿಗಳು ಭೂಮಿಯ ಇತರ ಭಾಗಗಳನ್ನು ಬಿಟ್ಟು ಇಲ್ಲೇ ಏಕೆ ಬರಬೇಕು? ತಾವು ಕೈಗೊಂಡ ವನವಾಸದಲ್ಲಿ ಪ್ರಶಾಂತವಾಗಿ ಬದುಕುವುದರ ಬದಲಾಗಿ ಕಲಹದಲ್ಲೇಕೆ ಜೀವನ ಕಳೆಯಬೇಕು? ಹಿಂಸೆಯನ್ನೇಕೆ ಬದುಕಬೇಕು? ಚಿತ್ರಕೂಟದಲ್ಲಿದ್ದಂತೆಯೇ ಶಾಂತವಾಗಿ ಇಲ್ಲೂ ಏಕೆ ಇರಬಾರದು?’’ ಇಂತಹ ಯಾವ ಪ್ರಶ್ನೆಗಳಿಗೂ ರಾಮನಿಂದ ತಾರ್ಕಿಕ ಉತ್ತರವಿಲ್ಲ. ಎಲ್ಲದಕ್ಕೂ ಅವನು ಋಷಿಗಳಿಗೆ ನೀಡಿದ ತನ್ನ ವಾಗ್ದಾನದ ಮೊರೆ ಹೋಗುತ್ತಾನೆ. ಸೀತೆ ರಾಮನಲ್ಲಿ ಆಯುಧವನ್ನು ಹಿಡಿಯದಂತೆ ವಿನಂತಿಸುತ್ತಾಳೆ. ಅವನು ಒಪ್ಪುವುದಿಲ್ಲ. ಆಯುಧದ ರಕ್ತದಾಹವನ್ನು ಅವಳು ಖಂಡಿಸುತ್ತಾಳೆ. ವೈರವಿಲ್ಲದೆ ವಧಿಸುವುದು ತಪ್ಪೆಂದು ವಾದಿಸುತ್ತಾಳೆ. ರಾಮನು ಕೊನೆಗೆ ನೀಡುವ ಉತ್ತರವು ಅವಳ ಭವಿಷ್ಯವನ್ನು ನಿರ್ಧರಿಸುತ್ತದೆ: ‘‘ಅಗತ್ಯವಾದಲ್ಲಿ ನಾನು ನಿನ್ನನ್ನು ಬಿಡುತ್ತೇನೆ, ಲಕ್ಷ್ಮಣನನ್ನು ತೊರೆಯುತ್ತೇನೆ, ನನ್ನ ಪ್ರಾಣವನ್ನು ಸಹ ತ್ಯಜಿಸುತ್ತೇನೆ, ಋಷಿಗಳಿಗೆ ಕೊಟ್ಟ ಮಾತಿಗೆ ಮಾತ್ರ ತಪ್ಪುವುದಿಲ್ಲ. ಆಡಿದ ಮಾತಿಗೆ ತಪ್ಪಿದರೆ ನಮ್ಮ ವಂಶಗೌರವ ಬೆಂಕಿಯ ಪಾಲಾಗುತ್ತದೆ.’’

 ಇದಕ್ಕೆ ಹಂಸಗೀತೆಯಾಗಿ ಸೀತೆಯು ಹೇಳುವ ಮಾತುಗಳು ರೋಚಕವಾದದ್ದು. ಧನುರ್ಧಾರಿಯಾಗಿ ಹೋಗುವ ಗಂಡನನ್ನು ಕುರಿತು ಅವಳು ‘‘ಹೌದು, ನಿಮ್ಮ ವಂಶಗೌರವವೇ ನಿಮಗೆ ಬೇಕಾದ್ದು, ನಾನಲ್ಲ. ಹೊರಡಿ. ಹೋಗಿ ನಿರಪರಾಧಿಗಳನ್ನು ಕೊಂದು ನಿಮ್ಮ ವಂಶಗೌರವವನ್ನು ಕಾಪಾಡಿಕೊಳ್ಳಿ. ಆದರೆ ನಿಂತು ಒಂದು ಮಾತು ಕೇಳುತ್ತೀರಾ? (ನಿಂತ ರಾಮನಿಗೆ) ಅಗತ್ಯವಾದರೆ ನನ್ನನ್ನು ಬಿಡುತ್ತೇನೆ ಎಂದಿರಿ. ನೀವು ಅಂತಹವರೇನೇ. ನಿಮ್ಮ ವಂಶಗೌರವಕ್ಕೆ ಬಲಿಯಾಗಿ ಯಾವುದೋ ಒಂದು ಹೊತ್ತಿನಲ್ಲಿ, ಯಾವುದೋ ಕಾಡಿನ ಮಧ್ಯದಲ್ಲಿ ನನ್ನನ್ನು ದಿಕ್ಕಿಲ್ಲದವಳನ್ನಾಗಿ ನೀವು ಬಿಟ್ಟುಬಿಡುತ್ತೀರಿ.’’ ನಿಜಕ್ಕೂ ಮುಂದೆ ಸೀತಾಪಹಾರವೂ ಈ ಹಿಂಸೆಯ ಪ್ರತಿಕ್ರಿಯೆಯೇ ಆಗಿರುತ್ತದೆ. ವಾಲಿವಧೆಯೂ ವೈರವಿಲ್ಲದ ವಧೆ. ರಾಜರು ತಮ್ಮ ಘನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ತಮಗೆ ವೈರವಿಲ್ಲದವರೊಡನೆ ಇನ್ಯಾರದೊ ರಕ್ಷಣೆಯ ನೆಪದಲ್ಲಿ ಕ್ರೌರ್ಯಕ್ಕೆ ತೊಡಗುವುದು ರಾಜಸ ಮಾತ್ರವಲ್ಲ ತಾಮಸ ಪ್ರವೃತ್ತಿಯೂ ಹೌದೆಂಬುದನ್ನು ಇದು ಮಾನವೀಯವಾಗಿ ಸಮರ್ಥಿಸುತ್ತದೆ. ರಾಮಾಯಣದ ಕಥಾಭಾಗದಲ್ಲಿ ವನವಾಸದ ಕಾಲದಲ್ಲಿ ರಾಕ್ಷಸರ ವೈರಕ್ಕೆ ಋಷಿಮುನಿಗಳು ತಮ್ಮ ತಪೋಶಕ್ತಿಯನ್ನು (ಅಂತಹದ್ದೊಂದಿದ್ದರೆ) ಬಳಸಿಕೊಳ್ಳಬಹುದಿತ್ತು ಎಂದು ಸೀತೆ ಸೂಚಿಸುವುದು ತಾರ್ಕಿಕವೂ ಹೌದು; ಸಾಧುವೂ ಹೌದು. ರಾಮನ ವನವಾಸವಿಲ್ಲದಿದ್ದರೆ ಈ ಋಷಿಮುನಿಗಳು ರಾಕ್ಷಸ ಸಂಹಾರಕ್ಕೆ, ತಮ್ಮ ಮತ್ತು ತಮ್ಮ ಯಜ್ಞಯಾಗಾದಿಗಳ ರಕ್ಷಣೆಗೆ ಏನು ಮಾಡುತ್ತಿದ್ದರು ಎಂಬ ಅವಳ ಪ್ರಶ್ನೆಗೆ ಉತ್ತರಿಸುವುದು ಸುಲಭಸಾಧ್ಯವಲ್ಲ. ತಮ್ಮ ವನವಾಸದ ಉದ್ದೇಶವಾದರೂ ಏನು ಎಂಬ ಅವಳ ಸಂದೇಹವನ್ನು ರಾಮಲಕ್ಷ್ಮಣರು ಪರಿಹರಿಸುವುದೇ ಇಲ್ಲ. ಅವಳನ್ನು ಜನಾಪವಾದದ ನೆಪದಲ್ಲಿ ತ್ಯಜಿಸುವ, ಕಾಡಿಗಟ್ಟುವ ಉತ್ತರ ರಾಮಚರಿತೆಯನ್ನು ಅವಳ ಈ ಮಾತುಗಳು ಸ್ಪಷ್ಟವಾಗಿ ಧ್ವನಿಸುತ್ತವೆ.

ಒಂದು ಸಾಮಾನ್ಯ ಸ್ತ್ರೀಯಂತೆ ಮಾತನಾಡುವ ಸೀತೆ ಸಾರ್ವತ್ರಿಕವಾದ ಯಾತನೆಗಳನ್ನು ಉಚ್ಚರಿಸುತ್ತಾಳೆ. ಅವಳು ಇಲ್ಲಿ ಸ್ತ್ರೀವಾದಿಯಲ್ಲ; ಮಾನವತಾವಾದಿ. ಬಹುಮುಖ್ಯ ಪ್ರಶ್ನೆಗಳನ್ನು ಅವಳ ಮೂಲಕವೇ ಅಭಿವ್ಯಕ್ತಿಗೊಳಿಸುವುದರಿಂದಾಗಿ ನಾರ್ಲ ಇವು ಸಾಹಿತ್ಯದಿಂದ ಹೊರ ಹೋಗಿ ಸಾರ್ವಜನಿಕ ವಿವಾದವಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಈ ನಾಟಕದ ಮೂಲಕ ನಾರ್ಲ ಅವರು ಆಧುನಿಕರಂತೆ ಕಥೆಯ ಹೊರಗಿದ್ದು ಟೀಕಿಸುವುದಿಲ್ಲ. ಬದಲಾಗಿ ಸೀತಾಮುಖೇನ, ಕವಿಸಮಯದ ಮೂಲಕ, ರಾಮಾಯಣದ ಬಹುಮುಖ್ಯ ಸಂಶಯವನ್ನು ಅನಾವರಣಗೊಳಿಸುತ್ತಾರೆ. ಒಂದರ್ಥದಲ್ಲಿ ಮತ್ತು ಅವರೇ ಹೇಳಿಕೊಂಡಂತೆ ಈ ನಾಟಕವೇ ಮೂರ್ತಿಭಂಜಕವಾದದ್ದು.
ಇಷ್ಟೊಂದು ಮೌಲ್ಯಗಳನ್ನು ಬದಿಗೊತ್ತಿ ನಾಟಕವನ್ನು ಸೀದಾಸಾದಾ ಓದಿದರೂ ಅದೊಂದು ರಮ್ಯ ಮತ್ತು ಮನರಂಜಕವಾದ ನಾಟಕವಾಗಿ ಬಿಚ್ಚಿಕೊಳ್ಳುತ್ತದೆ. ಆದರೆ ಅದರೊಂದಿಗೆ ಅನೂಹ್ಯವಾದ ನಿಗೂಢವಾದ ಉತ್ತರಿಸಲಾಗದ ಪ್ರಶ್ನೆಗಳನ್ನು ಎತ್ತುತ್ತದೆ. ಪೀಠಿಕೆಯ ಹೊರತಾಗಿಯೂ ಓದುಗರ, ನೋಟಕರ ಚಿಂತನೆಗೆ ಪೀಠಿಕೆಯಾಗಬಲ್ಲ ನಾಟಕ ಇದು. ಒಂದು ಅಮೂಲ್ಯ ಸಾಹಿತ್ಯ ಕೃತಿಯೂ ಹೌದು.
 ಒಂದಲ್ಲ ಒಂದು ಕಾರಣಗಳಿಗಾಗಿ ವಿಶೇಷ ಮತ್ತು ವಿಶಿಷ್ಟವಾಗಿ ‘ಸೀತೆಯ ಭವಿಷ್ಯ’ ಓದುಗನನ್ನು ಕಾಡುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top