ಗಿರೀಶ್ ಕಾರ್ನಾಡ್-ಕಲಾವಿದ ಮತ್ತು ಕಲೆ-ಕೆಲವು ನೆನಪುಗಳು | Vartha Bharati- ವಾರ್ತಾ ಭಾರತಿ

ಗಿರೀಶ್ ಕಾರ್ನಾಡ್-ಕಲಾವಿದ ಮತ್ತು ಕಲೆ-ಕೆಲವು ನೆನಪುಗಳು

ಅತ್ಯಂತ ದುರ್ಭರವಾದ ಕ್ಷಣಗಳಲ್ಲಿ ನಮ್ಮ ಇತರ ಮೇರು ಸಾಹಿತಿಗಳಂತೆ ಮೌನಕ್ಕೆ ಶರಣಾದ ಜೀವವಲ್ಲ ಕಾರ್ನಾಡರು. ಅವರು ವಾರಾಂತ್ಯದ ಹೋರಾಟಗಾರರಾಗಿರಲಿಲ್ಲ. ತಮ್ಮ ಕುರಿತು ನಿರಾಡಂಬರವಾಗಿ ಹೇಳಿಕೊಳ್ಳುವುದು ಅವರಿಗೆ ನಾಚಿಕೆಯ ವಿಚಾರವಾಗಿರಲಿಲ್ಲವೆಂಬುದು ಅವರ ಆತ್ಮ-ಕತೆಗಳ ಗುಚ್ಛ ‘ಆಡಾಡತ ಆಯುಷ್ಯ’ದಲ್ಲಿ ವಿದಿತವಾಗುತ್ತದೆ.


ಕೆಲವು ತಿಂಗಳುಗಳ ಹಿಂದೆ ಇದೇ ಅಂಕಣದಲ್ಲಿ ಗಿರೀಶ್ ಕಾರ್ನಾಡರ ಪ್ರಾಯಃ ಕೊನೆಯ ಕೃತಿ ‘ರಾಕ್ಷಸ ತಂಗಡಿ’ ನಾಟಕದ ಕುರಿತು ಬರೆದಿದ್ದೆ. ಅದನ್ನು ಓದಿದ ಕೆಲವರಾದರೂ ಕಳೆದ ತಿಂಗಳು ಕಾರ್ನಾಡರು ಗತಿಸಿದ ಕೆಲವು ದಿನಗಳ ನಂತರ ನನ್ನನ್ನು ಸಂಪರ್ಕಿಸಿ ‘‘ನೀವು ಅವರ ಕುರಿತು ಬರೆಯುವುದಿಲ್ವೇ?’’ ಎಂದು ಕೇಳಿದ್ದರು. ಆಗಿನ್ನೂ ಅವರ ಸೂತಕ ಕಳೆದಿರಲಿಲ್ಲವಾದರೂ (ಕಾರ್ನಾಡರಿಗೆ ಈ ಸೂತಕದಲ್ಲಿ ನಂಬಿಕೆಯಿಲ್ಲವೆಂದು ಗೊತ್ತಿದ್ದರೂ) ಅವರ ಬಗ್ಗೆ ಅಷ್ಟರಲ್ಲೇ ಸಾಕಷ್ಟು ಲೇಖನಗಳು ಪ್ರಕಟವಾಗಿದ್ದವು. ಕೆಲವಂತೂ ಮೊದಲೇ ಬರೆದಿಟ್ಟು ಉಪಸಂಹಾರವನ್ನಷ್ಟೇ ಉಳಿಸಿಕೊಂಡು ಬರೆದಂತಿದ್ದವು. ಇದನ್ನೇ ನೆಪವಾಗಿರಿಸಿಕೊಂಡು ನಾನು ಬರೆಯೋಣ; ಎಲ್ಲರೂ ಬರೆದಾಗಲಿ ಎಂದಿದ್ದೆ. ಹಂಸಗೀತೆ ಬರೆಯುವಷ್ಟು ದೊಡ್ಡ ಬರಹಗಾರ ನಾನಲ್ಲವಾದರೂ ನನಗೆ ಎಂದೋ ನನ್ನ ಸ್ನೇಹಿತ ಪಟ್ಟಾಭಿರಾಮ ಸೋಮಯಾಜಿ ನೆನಪಿಸುತ್ತಿದ್ದ (spontaneous over flow of) ‘emotions recollected in tranquility’ ಎಂಬ ನುಡಿಗಟ್ಟಿನ ನಿಜಾರ್ಥದಲ್ಲಿ ಸ್ವಲ್ಪತಾಳಿದರೆ ಭಾವನೆಗಳು ಘನೀಭವಿಸಿ ಇಲ್ಲವೇ ಸ್ಫಟಿಕೀಕರಣಗೊಂಡು ಅಭಿವ್ಯಕ್ತಿಗೊಂಡರೆ ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂಬ ನನ್ನ ನಂಬಿಕೆ ಕಾರಣವಾಗಿಯೋ ನೆಪವಾಗಿಯೋ ನನ್ನಿಂದ ಈಗಷ್ಟೇ ಈ ಪುಟ್ಟ ಬರಹವನ್ನು ಬರೆಸಿದೆ.

1997-98ರ ವರ್ಷದಲ್ಲಿ ನಮ್ಮ ಮಡಿಕೇರಿಯ ರೋಟರಿ ಕ್ಲಬ್‌ನ ಸದಸ್ಯ ಹಾಗೂ ಕೊಡಗಿನ ಖ್ಯಾತ ನೇತ್ರ ತಜ್ಞ ಡಾ.ಅಪ್ಪೂರಾವ್ ಪೈಯವರು ರೋಟರಿ ಜಿಲ್ಲಾ ರಾಜ್ಯಪಾಲರಾಗಿದ್ದರು. (ರೋಟರಿಯ ಜಿಲ್ಲೆಯೆಂದರೆ ಕರ್ನಾಟಕದ ದಕ್ಷಿಣ ಭಾಗದ ಸುಮಾರು 10-12 ಜಿಲ್ಲೆಗಳನ್ನೊಳಗೊಂಡಿತ್ತು.) ಜಿಲ್ಲಾ ರಾಜ್ಯಪಾಲರ ಸ್ವಕ್ಷೇತ್ರದಲ್ಲಿ ಜಿಲ್ಲಾ ಸಮ್ಮೇಳನವನ್ನು ನಡೆಸುವುದು ವಾಡಿಕೆ. 1998ರ ಜನವರಿ-ಫೆಬ್ರವರಿಯಲ್ಲಿ ನಡೆಯಲಿದ್ದ ಜಿಲ್ಲಾ ಸಮ್ಮೇಳನದ ಕಾರ್ಯಕ್ರಮ ಸಮಿತಿಗೆ ನಾನು ಅಧ್ಯಕ್ಷನಾಗಿದ್ದೆ. ಹಿಂದೆ ಇನ್ನೊಂದೆಡೆ ನಡೆದ ಒಂದು ಸಮ್ಮೇಳನವನ್ನು ಉದ್ಘಾಟಿಸಲು ಡಾ.ಯು.ಆರ್.ಅನಂತಮೂರ್ತಿಯವರು ಬಂದಿದ್ದರು. ಈ ಸಮ್ಮೇಳನಕ್ಕೆ ಗಿರೀಶ್ ಕಾರ್ನಾಡ್ ಅವರನ್ನು ಆಹ್ವಾನಿಸಬೇಕೆಂದು ನನ್ನ ಆಸೆಯಿತ್ತು. (ಅವರ ವೈಯಕ್ತಿಕ ಪರಿಚಯ ನನಗೆ ಅಷ್ಟಾಗಿರಲಿಲ್ಲ. ನಮ್ಮ ನೆರೆಮನೆಯ ಕುಟುಂಬಕ್ಕೆ ಸೇರಿದ ಒಂದು ಹುಡುಗಿಯನ್ನು ವೈಎನ್‌ಕೆಯವರ ತಮ್ಮನ ಮಗನಿಗೆ ಮದುವೆಯಾದಾಗ ಆ ಮದುವೆಗೆ ಕಾರ್ನಾಡರು ಬಂದಿದ್ದರು. ಅಲ್ಲಿ ಅವರೊಂದಿಗೆ ಕೆಲವು ನಿಮಿಷ ಮಾತನಾಡಿದ್ದೆ. ನಾನು ಆಗಲೇ ಅವರ ಅಲ್ಲಿಯವರೆಗಿನ ನಾಟಕಗಳನ್ನು ಓದಿಕೊಂಡಿದ್ದೆನಾದ್ದರಿಂದ ಮತ್ತು ಅವರ ವ್ಯಕ್ತಿತ್ವದ ಕುರಿತು ಅಪೂರ್ವವಾದ ಗೌರವವನ್ನು ಹೊಂದಿದ್ದೆನಾದ್ದರಿಂದ ಅಪ್ರಸ್ತುತ ಅನ್ನಿಸದಂತೆ ಮಾತನಾಡಿದ್ದೆ; ಅವರೂ ಸೌಜನ್ಯದಿಂದಲೇ ಮಾತನಾಡಿದ್ದರು.) ಸಮಿತಿಯ ಒಪ್ಪಿಗೆ ಪಡೆದು ಕಾರ್ನಾಡರನ್ನು ಸಂಪರ್ಕಿಸಿದೆ. ಅವರು ದೂರವಾಣಿಯಲ್ಲೇ ಉತ್ತರಿಸುತ್ತ ಬರುವುದಾಗಿ ಹೇಳಿದರು.

ಜೊತೆಗೆ ‘‘ನಾನು ಬಂದರೆ ನನಗೆ ಕೊಡವರ ಪಂದಿಕರಿ ಮಾಡಿಕೊಡಬಹುದಾ?’’ ಎಂದು ನಗೆಯಾಡಿದರು. ‘‘ನನಗೆ ಅದೆಲ್ಲ ಗೊತ್ತಿಲ್ಲ, ನೀವು ಬರುವುದಾದರೆ ಯಾವ ಆತಿಥ್ಯವನ್ನು ಬೇಕಾದರೂ ನೀಡಬಹುದು’’ ಎಂದು ಭರವಸೆ ನೀಡಿದೆ. ಇದನ್ನು ಸಮಿತಿಗೆ ಹೇಳಬೇಕೆಂಬಾಗಲೇ ಕಾರ್ನಾಡರು ದೂರವಾಣಿಯಲ್ಲಿ ತಾನು ಸಮ್ಮೇಳನದ ಸಮಯಕ್ಕೆ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಆಮಂತ್ರಿತನಾಗಿ ಹೋಗುವುದರಿಂದ ಮುಂದೊಮ್ಮೆ ಬರುವುದಾಗಿಯೂ ಮಾತು ತಪ್ಪಿದ್ದಕ್ಕೆ ಬೇಸರಿಸಬಾರದೆಂದು ಹೇಳಿದರು. ಬೇಸರವಾಗಿತ್ತಾದರೂ ಅವರ ಸೌಜನ್ಯಕ್ಕೆ ಬೆರಗಾದೆ. ಅದಾದ ಆನಂತರ ಅವರು ಈ ಕುರಿತು ಒಂದು ಪತ್ರವನ್ನೂ ಬರೆದರು. ಅದನ್ನು ಜತನದಿಂದ ಕಾಪಾಡಿದೆ. ಸರಿ ಸುಮಾರು ಅದೇ ಅವಧಿಯಲ್ಲಿ ಅಥವಾ ಸ್ವಲ್ಪಆನಂತರದಲ್ಲಿ ನಾನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ (!) ಕಾರ್ಯದರ್ಶಿಯಾಗಿದ್ದೆನೆಂದು ನೆನಪು.

ಆಗ ಕಸಾಪದ ದತ್ತಿ ನಿಧಿಯ ಉಪನ್ಯಾಸ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸುತ್ತಿದ್ದೆವು. ದಿವಂಗತ ಎಸ್.ಎಸ್.ರಾಮಮೂರ್ತಿ, ವಕೀಲರು, ವಿರಾಜಪೇಟೆ ಇವರ ಕುಟುಂಬದ ದತ್ತಿನಿಧಿಯ ಆಧಾರದಲ್ಲಿ ನಾನು ಕೊಡಗಿನ ಮಡಿಕೇರಿಯಲ್ಲಿ ‘ಗಿರೀಶ್ ಕಾರ್ನಾಡರ ನಾಟಕಗಳು’ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಯೋಜಿಸಿದ್ದೆ. ಮುಖ್ಯ ಭಾಷಣವನ್ನು ಮೈಸೂರಿನ ಗೆಳೆಯ ಹಾಗೂ ನಾಟಕ ರಂಗದ ಮತ್ತು ಸಾಹಿತ್ಯದ ಕುರಿತು ಸಾಕಷ್ಟು ಅನುಭವವಿದ್ದ ವಿಮರ್ಶಕ ಪ್ರೊ ಎ.ಆರ್. ನಾಗಭೂಷಣ ಮಾಡಿದರು. ಚರ್ಚೆಯಲ್ಲಿ ಆಹ್ವಾನಿತರಾದ ನಾಲ್ವರು ಸಾಹಿತ್ಯ/ನಾಟಕ ರಂಗದ ಪ್ರಮುಖರು- ಮಂಗಳೂರಿನ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ಪುತ್ತೂರಿನ ನಾಟಕ ಶ್ರಮಿಕ ಐ.ಕೆ.ಬೊಳುವಾರು, ಸಕಲೇಶಪುರದ ರಂಗಕರ್ಮಿ ಪ್ರಸಾದ್ ರಕ್ಷಿದಿ ಹಾಗೂ ಸಾಹಿತ್ಯವನ್ನು ಸಮರ್ಥವಾಗಿ ಹಾಗೂ ನಿಷ್ಠುರವಾಗಿ ವಿಮರ್ಶಿಸುವ (ನನ್ನ ತಮ್ಮ) ಕೆ.ಪಿ.ಸುರೇಶ ಇವರು ಭಾಗವಹಿಸಿದ್ದರು. ಕಾರ್ಯಕ್ರಮ ಸಾಕಷ್ಟು ಜನರನ್ನು ಆಕರ್ಷಿಸಿ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ನಡೆಯಿತು. ಆಗ ಈ ಎಲ್ಲ ನಡವಳಿಕೆಗಳನ್ನು ದಾಖಲಿಸುವ ಸಂಪನ್ಮೂಲ ನಮ್ಮಲ್ಲಿರದಿದ್ದುದರಿಂದ ಅದೀಗ ನೆನಪಿನಲ್ಲಷ್ಟೇ ಉಳಿದಿದೆ. ಆದರೆ ಕೊಡಗಿನಲ್ಲಿ ಕಾರ್ನಾಡರ ನಾಟಕಗಳ ಕುರಿತಂತೆ ನಡೆದ ಮೊದಲ ಮಹತ್ವದ ಕಾರ್ಯಕ್ರಮ ಅದೆಂಬ ಬಗ್ಗೆ ನನಗೆ ಹೆಮ್ಮೆಯಿದೆ.

ಆನಂತರದ ದಿನಗಳಲ್ಲಿ ಮೈಸೂರೋ, ಬೆಂಗಳೂರೋ ಮುಂತಾದ ನಗರಗಳಲ್ಲಿ ನಾಟಕಗಳಲ್ಲಿ ಇಲ್ಲವೇ ಕೆಲವು ಕಾರ್ಯಕ್ರಮಗಳಲ್ಲಿ ಅವರ ಮಾತನ್ನು ಕೇಳುವ ಅದೃಷ್ಟ ನನಗೆ ಲಭಿಸಿದೆ. ಕೊನೆಯದಾಗಿ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಕಾರ್ನಾಡ್-ಪ್ರಕಾಶ್‌ರೈ ಸಂವಾದ ಎಂದೂ ಮರೆಯದಷ್ಟು ಛಲೋ ಆಗಿತ್ತು.

ಆಗಿನ್ನೂ ಸಾಮಾಜಿಕ ಜಾಲತಾಣಗಳ ಹಾವಳಿ ಮತ್ತು ರಾಜಕೀಯ ಧ್ರುವೀಕರಣ ಈಗಿನಷ್ಟು ಇಲ್ಲವಾಗಿದ್ದುದರಿಂದ ಕಾರ್ನಾಡ್ ಕುರಿತಾಗಲೀ ಪ್ರಕಾಶ್‌ರೈ ಕುರಿತಾಗಲೀ ಕಲಾರಾಧಕರ ಗೌರವ ಬಹಳಷ್ಟಿತ್ತು. ಮೂರ್ಖರು ಕಲೆ, ಸಾಹಿತ್ಯದ ಕುರಿತು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ಕಾರ್ನಾಡರನ್ನು ಹತ್ತಿರದಿಂದ ಬಲ್ಲವನಲ್ಲ. ಅವರೊಂದಿಗೆ ಮಾತನಾಡಿದಾಗಲಷ್ಟೇ ಅವರ ಪತ್ನಿ (ದಕ್ಷಿಣ) ಕೊಡಗಿನವರು ಎಂದು ಗೊತ್ತಾದದ್ದು. ಅವರ ಬಹುಮುಖ ಪ್ರತಿಭೆ, ಪಾಂಡಿತ್ಯ, ಖಚಿತತೆ ಇವೆಲ್ಲ ಒಂದು ವಿಸ್ಮಯ ಪ್ರಪಂಚವನ್ನು ಸೃಷ್ಟಿಸಿತ್ತು. ಅವರ ‘ಮಾನಿಷಾದ’ ನಾಟಕ ಯಾವುದೋ ದೀಪಾವಳಿ ಸಂಚಿಕೆಯಲ್ಲಿ ಬಂದಾಗ ಓದಿದ್ದೆ. ಪುರಾಣವೆಂದರೆ ಹಳೆಗನ್ನಡ ಕಾವ್ಯಗಳಲ್ಲದೆ, ಹರಿಕಥೆ, ಯಕ್ಷಗಾನಗಳಲ್ಲಷ್ಟೇ ಅಥವಾ ರಾಜಾಜಿ, ದೇವುಡು, ಮಾಸ್ತಿ, ಶ್ರೀನಿವಾಸ ಶಾಸ್ತ್ರಿಯಂತಹವರ ಕಥನಗಳ ಮೂಲಕ ಸಾಂಪ್ರದಾಯಿಕವಾಗಿ ಅಭಿವ್ಯಕ್ತಿಗೊಳ್ಳಬಲ್ಲ ಮಾಧ್ಯಮವೆಂದುಕೊಂಡವನಿಗೆ ಕಾರ್ನಾಡರ ಹೊಸನೋಟ ಹೊಸ ಜಗತ್ತನ್ನು ತೆರೆದು ತೋರಿಸಿತ್ತು. ಆದರೆ ಅದಕ್ಕೂ ಮೊದಲೇ ಅವರು ‘ಯಯಾತಿ’ಯನ್ನು ರಚಿಸಿದ್ದರೆಂಬುದು ನನಗೆ ಆನಂತರವಷ್ಟೇ ತಿಳಿದದ್ದು. (ವಿಶೇಷವೆಂದರೆ ಕಾರ್ನಾಡರ ಕೃತಿಸೂಚಿಗಳಲ್ಲೂ ಈ ‘ಮಾನಿಷಾದ’ ಗೈರುಹಾಜರಿಯಾಗುತ್ತಿದೆ!)

 ‘ಯಯಾತಿ’ ನಾಟಕದ ಕೆಲವು ಸಾಲುಗಳನ್ನು ಅಂದರೆ ಸ್ವರ್ಣಲತೆ ಹೇಳುವ ‘‘ನಮ್ಮ ದುಃಖದಲ್ಲಿ ನಾವು ಏಕಾಕಿಗಳಾಗಿರುತ್ತೇವೆ. ಬಾವಿಯಲ್ಲಿ ಬಿದ್ದವರಂತೆ. ಆದರೆ ಇನ್ನೊಂದು ಬಾವಿಯಿಂದ ಆರ್ತಸ್ವರ ಕೇಳಿಸಿದರೆ ಅಷ್ಟೇ ಏಕಾಕಿತನ ಕಡಿಮೆಯಾಗುತ್ತದೆ.’’ (ನಾನು ವಯಸ್ಸಿಗೆ ಬಂದ ನನ್ನ ಹಿರಿಯ ಮಗನನ್ನು ಕಳೆದುಕೊಂಡ ಆನಂತರದ ಸಂದರ್ಭಗಳಲ್ಲಿ ಇತರ ಅನೇಕ ದುರಂತಗಳನ್ನು ಕಂಡು ಕೇಳಿ ದುಃಖಿಸುವಾಗಲೂ ಈ ಮಾತುಗಳು ನೆನಪಾದದ್ದಿದೆ.) ಕೊನೆಯಲ್ಲಿ ಪುರು ಹೇಳುವ ‘‘ಇದೆಲ್ಲದರ ಅರ್ಥವೇನು, ದೇವರೇ, ಇದರ ಅರ್ಥವೇನು?’’ (ಇದು ಕೂಡಾ ನನ್ನ ಪಾಲಿಗೆ ಒಂದು ಚಿದಂಬರ ರಹಸ್ಯ!) ‘ತುಘಲಕ್’ ನಾಟಕದಲ್ಲಿ ಮುಹಮ್ಮದ್ ಹೇಳುವ ‘‘ಆದರೆ ನೆಲದಲ್ಲಿ ಬೇರಿಳಿಯುವ ಮೊದಲು ನಕ್ಷತ್ರಗಳಲ್ಲಿ ಟೊಂಗೆ ಬಿಚ್ಚುವುದಾದರೂ ಹೇಗೆ?’’ ಮುಂತಾದ ಮಾತುಗಳನ್ನು ನಾನು ನನ್ನ ಸಾಹಿತ್ಯ ಡೈರಿಯಲ್ಲಿ ದಾಖಲಿಸಿದ್ದೆ. ಅವು ಆಗ ರೋಮಾಂಚನ ನೀಡುತ್ತಿದ್ದವು; ಈಗ ಒಬ್ಬನೇ ಕುಳಿತಾಗ ಚಿಂತನೆಗೆ ಹಚ್ಚುತ್ತವೆ. ಮಂಗಳೂರಿನ ಕಾಲೇಜೊಂದು ಆಗ ಪದವಿಪೂರ್ವ ತರಗತಿಗೆ ಯಯಾತಿ ನಾಟಕವು ಪಠ್ಯವಾಗಿದ್ದಾಗ ನನ್ನನ್ನು ಕರೆಸಿ ಒಂದು ಗಂಟೆಯ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ಮಾಡಿಸಿ ಅದನ್ನು ಧ್ವನಿಮುದ್ರಿಸಿದ್ದು ನನ್ನ ಧನ್ಯತಾಭಾವವನ್ನು ಹೆಚ್ಚಿಸಿದೆ.

ಕಾರ್ನಾಡ್ ಅವರ ಎಲ್ಲ ನಾಟಕಗಳಲ್ಲೂ ವಿಶ್ವವ್ಯಾಪ್ತಿತನದ ಹಂಬಲ ಸ್ಪಷ್ಟವಿದೆ. (ಇಲ್ಲಿ ಅವರ ಎಲ್ಲ ಕೃತಿಗಳ ಉಲ್ಲೇಖವಿಲ್ಲವೆಂಬುದು ನನಗೆ ಅರಿವಿದೆ. ಅದು ಈ ಲೇಖನಕ್ಕೆ ಸೀಮಾತೀತ.) ಒಂದೇ ವಸ್ತುವಿನ ಕುರಿತು ಕಾರ್ನಾಡ್, ಕಂಬಾರ, ಶಿವಪ್ರಕಾಶ್, ಲಂಕೇಶ್ ಬರೆದ ನಾಟಕಗಳನ್ನು ಹೋಲಿಸಿದರೆ ಈ ಅಂಶ ಸ್ಫುಟವಾಗುತ್ತದೆ. ಅವು ದೇಶಕಾಲವನ್ನು ಮೀರಲು ಸದಾ ಯತ್ನಿಸಿವೆ. ಶಿವರಾಮ ಕಾರಂತರ ಆನಂತರ ಕನ್ನಡದಲ್ಲಿ ಬದುಕಿನ ಮತ್ತು ಕಲೆಯ ಹಲವು ಭೂಮಿಕೆಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತಿಗೊಂಡವರು ಕಾರ್ನಾಡರೇ ಎಂಬುದು ನನ್ನ ತರ್ಕ. ಅವರು ನಾಟಕಗಳನ್ನು ಬರೆದರು ಮಾತ್ರವಲ್ಲ, ನಾಟಕ ಮತ್ತು ಸಿನೆಮಾಗಳಲ್ಲಿ ಅಭಿನಯಿಸಿದರು; ನಿರ್ದೇಶಿಸಿದರು. ಅನಂತಮೂರ್ತಿಯವರಂತೆ ನಿತ್ಯ ಸಾಹಿತಿ-ಸಾಹಿತ್ಯದ ನಡುವಿನಲ್ಲಿ ಇರದಿದ್ದರೂ ಸದಾ ಮುತ್ತಿಕೊಳ್ಳುವ ಶಿಷ್ಯ ವೃಂದವನ್ನು ಹೊಂದಿರದಿದ್ದರೂ ಸಾಹಿತ್ಯವನ್ನು ಶಕ್ತವಾಗಿ ಅಭ್ಯಸಿಸಿದರು; ವಿಮರ್ಶಿಸಿದರು. ‘ಅಳಿದ ಮೇಲೆ’ ಮತ್ತು ‘ಮುಸಲಮಾನ ಬಂದ, ಮುಸಲಮಾನ ಬಂದ!’ ಎಂಬ ಎರಡು ಕಥೆಗಳು ಅವರ ನಿರ್ಭೀತ, ಜಾತ್ಯತೀತ, ಧರ್ಮಾತೀತ ಚಿಂತನೆಯ ದಿಕ್ಕನ್ನು ತೋರಿಸುತ್ತವೆ.

ಅತ್ಯಂತ ದುರ್ಭರವಾದ ಕ್ಷಣಗಳಲ್ಲಿ ನಮ್ಮ ಇತರ ಮೇರು ಸಾಹಿತಿಗಳಂತೆ ಮೌನಕ್ಕೆ ಶರಣಾದ ಜೀವವಲ್ಲ ಕಾರ್ನಾಡರು. ಅವರು ವಾರಾಂತ್ಯದ ಹೋರಾಟಗಾರರಾಗಿರಲಿಲ್ಲ. ತಮ್ಮ ಕುರಿತು ನಿರಾಡಂಬರವಾಗಿ ಹೇಳಿಕೊಳ್ಳುವುದು ಅವರಿಗೆ ನಾಚಿಕೆಯ ವಿಚಾರವಾಗಿರಲಿಲ್ಲವೆಂಬುದು ಅವರ ಆತ್ಮ-ಕತೆಗಳ ಗುಚ್ಛ ‘ಆಡಾಡತ ಆಯುಷ್ಯ’ದಲ್ಲಿ ವಿದಿತವಾಗುತ್ತದೆ. ಇಲ್ಲೇ ಅವರಿಗೂ ಶಿವರಾಮ ಕಾರಂತರಿಗೂ ಸಾಮ್ಯವಿರುವುದು. ತಮ್ಮ ನಿಲುವಿಗೆ ಬದ್ಧರಾಗಿ ಯಾರನ್ನೂ ಎದುರು ಹಾಕಿಕೊಳ್ಳಬಲ್ಲ ಮತ್ತು ರಾಜಕೀಯದ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೆಯೂ ದೇಶದ ರಾಜಕೀಯದ ಕುರಿತು ಖಂಡಿತವಾದಿಯಾಗಿದ್ದರು. ಹಾಗಾದಾಗಲೂ ಕಲಾ-ಕೇಂದ್ರದಲ್ಲಿ, ವೇದಿಕೆಯಲ್ಲಿ ಅನಿವಾರ್ಯವಾಗುವ ಅಪಾರ ಪ್ರತಿಭೆ. ಮಸಾಲೆ ಸಿನೆಮಾಗಳಲ್ಲೂ ಅಭಿನಯಿಸಿದರು. ಸಿನೆಮಾಗಳಲ್ಲಿ ಕ್ರಾಂತಿಕಾರಕ, ಶುದ್ಧ ಶಾಸ್ತ್ರೀಯ, ಅನುಭವಗಳಿದ್ದೂ ಪ್ರಭುದೇವ, ಸಲ್ಮಾನ್‌ಖಾನ್‌ರೊಂದಿಗೆ ಸಮದಂಡಿಯಾಗಿ ಮುಖ್ಯ/ಪೋಷಕ ಪಾತ್ರದಲ್ಲಿ ಮಿಂಚಬಲ್ಲ ತಾಕತ್ತು ಅವರದ್ದು. ಸಮಾಜದ ಯಾವುದೊ ಒಂದು ಗುಂಪಿಗೆ, ವರ್ಗಕ್ಕೆ ಮೀಸಲಾದ ಜೀವ ಅವರಲ್ಲ. ಅವರು ನಾಸ್ತಿಕರೂ ಅಲ್ಲ; ಆಸ್ತಿಕರೂ ಅಲ್ಲ. ಮನುಷ್ಯತ್ವವನ್ನು ಗೌರವಿಸುವುದಕ್ಕಾಗಿ, ಮನುಷ್ಯ ಸಂಬಂಧಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ವಿಚಲಿತ ಗುಣವನ್ನು ಬೆಳೆಸಿಕೊಂಡವರು. ಒಂದರ್ಥದಲ್ಲಿ ಅವರು ಸವ್ಯಸಾಚಿ. ಕಲೆಯ ಪರ್ವತ.

ಪ್ರಾಯಃ ಇಂಗ್ಲಿಷ್ ಸಾಹಿತ್ಯದಲ್ಲಿ ಟಿ.ಎಸ್.ಎಲಿಯಟ್ ಸಂಪಾದಿಸಿದ ಜನಪ್ರಿಯತೆ, ಗುಣಮಟ್ಟ, ಭೌತಿಕ ಅನುಕೂಲಗಳನ್ನು ಕನ್ನಡದಲ್ಲಿ ಕಾರ್ನಾಡರಷ್ಟು ಹೊಂದಿದವರು ಬೇರೆಯಿಲ್ಲವೆಂದು ನನಗನ್ನಿಸುತ್ತಿದೆ. ಬದುಕಿನಲ್ಲಿ ತಮ್ಮ ಸಾಧನೆಗಾಗಿ ಬರಬೇಕಾಗಿದ್ದ ಎಲ್ಲ ಪ್ರಶಸ್ತಿಗಳೂ ಅವರಿಗೆ ಬಂದವೆಂದು ಅನ್ನಿಸುತ್ತದೆ. 1999ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅದೊಂದು ಹೊಟೇಲ್‌ನಲ್ಲಿ ಇಟ್ಟಿದ್ದ ಟಿವಿಯಲ್ಲಿ ಆಗಷ್ಟೇ ‘ಬ್ರೇಕಿಂಗ್ ನ್ಯೂಸ್’ ಆಗಿ ಬರುತ್ತಿತ್ತು. ಆಗ ನನ್ನ ಮಿತ್ರರ ಉತ್ಸಾಹ ಮೀರಿ ಚಾ ಸಪ್ಲೈ ಮಾಡುತ್ತಿದ್ದವನಲ್ಲಿ ‘‘ಕಾರ್ನಾಡರಿಗೆ ಜ್ಞಾನಪೀಠ ಬಂತು’’ ಎಂದು ಅವನಲ್ಲಿ ಹೇಳಿಕೊಂಡರು. ಆ ಹುಡುಗ ಟಿವಿ ನೋಡುತ್ತ ‘‘ಇವರು ‘ಕಾದಲನ್’ ಸಿನೆಮಾದ ವಿಲನ್ ಅಲ್ಲವೇ?’’ ಎಂದು ಉದ್ಗರಿಸಿದ್ದು ಕಾರ್ನಾಡರಿಗೆ ಸಿಕ್ಕಿದ ಅತ್ಯುನ್ನತ ಪ್ರಶಸ್ತಿಯೆಂದು ಈಗಲೂ ನನಗನ್ನಿಸಿದೆ. ಕಾರ್ನಾಡರ ನಾಟಕಗಳು ಪುರಾಣ, ಚರಿತ್ರೆ, ಜಾನಪದ, ಆಧುನಿಕ ಈ ಎಲ್ಲ ವಿಸ್ತಾರಗಳನ್ನೂ ಆವರಿಸಿತ್ತು. ಪ್ರಾಯಃ ಎ.ಕೆ.ರಾಮಾನುಜನ್, ಕುರ್ತಕೋಟಿ, ಜಿ.ಬಿ.ಜೋಷಿ, ವೈಎನ್ಕೆ ಮುಂತಾದ ಹಿರಿಯರ ಮತ್ತು ಅನಂತಮೂರ್ತಿ, ರಾಜೀವ್ ತಾರಾನಾಥ್, ಕಂಬಾರ ಮುಂತಾದ ಸಮಕಾಲೀನರ ಸಂಸರ್ಗ ಅವರನ್ನು ಸದಾ ಉತ್ಸಾಹಿಯಾಗಿಸಿತ್ತೆಂದು ಕಾಣಿಸುತ್ತದೆ.

ಕಾರ್ನಾಡರ ಮತ್ತು ಅವರ ಕೃತಿಗಳ ಬಗ್ಗೆ ಸಾಕಷ್ಟು ವಿಸ್ತೃತವಾದ ಪರಿಚಯ ಲೇಖನಗಳು, ವಿಮರ್ಶೆಗಳು ಬಂದಿವೆ. ಅವರ ಬಹುತೇಕ ಎಲ್ಲ ಕೃತಿಗಳೂ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿವೆ. ಯಯಾತಿಯ ಸೂತ್ರಧಾರ ಹೇಳುವಂತೆ ಕಾರ್ನಾಡರ ಪಾತ್ರಗಳು ಕಾಲಾತೀತವಾಗಿ ಕಾಲಾಂತರದಲ್ಲಿ ತಮ್ಮ ಶಾಶ್ವತ ನೆಲೆಯನ್ನು ಸ್ಥಾಪಿಸಿಕೊಂಡೂ ಕ್ಷಣಹೊತ್ತು ವರ್ತಮಾನದಲ್ಲಿ ಆ ಪಾತ್ರಗಳು ವಿಶ್ರಮಿಸಲೆಂದು ಬಂದಿವೆ.

ಕಾರ್ನಾಡ್ ಅವರೂ ಅಷ್ಟೇ: ಕ್ಷಣಹೊತ್ತು ವರ್ತಮಾನದಲ್ಲಿ ವಿಶ್ರಮಿಸಲೆಂದು ಇಲ್ಲಿದ್ದರು. ಆದರೆ ಅವರ ಸ್ಥಾನ ಶಾಶ್ವತಿಯಲ್ಲಿ. ‘ತಲೆದಂಡ’ದ ಕೊನೆಯ ಭಾಗದಲ್ಲಿ ‘‘ಕೂಡಲಸಂಗಮದೇವ, ಇನ್ನು ಈ ಗರ್ಭಗುಡಿಯನ್ನು ನಿನ್ನ ಜ್ಯೋತಿಯ ಕುಡಿಯಲ್ಲಿ ಹೀರಿಕೊಂಡು ಬಿಡು, ತಂದೆ. ಬೆಳಗು. ಬೆಳಗಿನೊಳಗೆ ಬೆಳಗು. ಮಹಾಬೆಳಗು.’’ ಎಂದಿರುವ ಮಾತುಗಳು ಕಾರ್ನಾಡ್ ತನ್ನನ್ನು ನಾಟಕ-ಸಾಹಿತ್ಯವೆಂಬ ಕೂಡಲಸಂಗಮಕ್ಕೆ ಸಮರ್ಪಿಸಿಕೊಂಡ ರೂಪಕದಂತಿದೆ. ಬೇಂದ್ರೆಯವರ ‘ನನ್ನ ಕಿನ್ನರಿ’ ಕವಿತೆಯಲ್ಲಿ ಬರುವ ನೋಡ್ ನೋಡ್ತ ಆಡಾಡ್ತ ಆಯುಷ್ಯಾ
ನಡದದ ನಡದದ
ಕಾಣದ ಕಡಲ್ಹಾದಿ ಹಿಡದದ
ಎಂಬ ಮೊದಲ ಭಾಗದ ‘ಆಡಾಡ್ತ ಆಯುಷ್ಯಾ’ ಎಂಬ ಸಾಲುಗಳು ಕಾರ್ನಾಡರ ಆತ್ಮ-ಕತೆಗಳ ಶೀರ್ಷಿಕೆಯಾಗಿರುವುದು ಕೂಡ ಅವರ ಬದುಕಿನ ಕೂಡಲಸಂಗಮವೇ ಆಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top