‘ವಂದೇ ಮಾತರಂ’ -ದೇಶಚರಿತ್ರೆಯ ದ್ವೇಷದ ಅಧ್ಯಾಯ

‘ಆನಂದಮಠ’ದ ಮೊದಲ ಆವೃತ್ತಿಗೆ ಬರೆದ ಮುನ್ನುಡಿಯಲ್ಲೇ ಬಂಕಿಮಚಂದ್ರರು ತನ್ನ ಕಾದಂಬರಿಯ ಬಂಡಾಯ ಸಾಮಾಜಿಕ ಬಂಡಾಯವೇ ಹೊರತು ರಾಜಕೀಯ ಬಂಡಾಯವಲ್ಲವೆಂದು-ಅರ್ಥಾತ್ ಬ್ರಿಟಿಷ್ ವಿರೋಧಿ ಕೃತಿಯಲ್ಲವೆಂದು -ಸ್ಪಷ್ಟಪಡಿಸಿಬಿಟ್ಟಿದ್ದರು. 1883ರ ಮಾರ್ಚ್ 31ರಂದು ಬ್ರಿಟಿಷ್ ಆಡಳಿತದ ಅಧಿಕೃತ ಗೆಜೆಟ್‌ನಲ್ಲಿ ಈ ಕಾದಂಬರಿಯು ಧಾರ್ಮಿಕ ಭಾವನೆಗಳಿಂದ ಪ್ರೇರಿತಗೊಂಡ, ಮುಸ್ಲಿಂ ಆಳ್ವಿಕೆಯ ಕೊನೆಯನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿಯೆಂದು ಹೊಗಳಲಾಗಿತ್ತು. 1937ರಲ್ಲಿ ವೈಸ್‌ರಾಯ್ ಕೌನ್ಸಿಲ್‌ನ ಸದಸ್ಯನಾಗಿದ್ದ ಸರ್ ಹೆನ್ರಿ ಕ್ರೈಕ್ ಈ ಕಾದಂಬರಿಯು ಮುಸ್ಲಿಮರ ವಿರುದ್ಧ ಘೊಷಗೀತೆಯೆಂದೇ ಬಣ್ಣಿಸಿದ್ದನು. ಹೀಗಾಗಿಯೇ ಈ ಹಾಡನ್ನಾಗಲೀ, ಕಾದಂಬರಿಯನ್ನಾಗಲೀ ಬ್ರಿಟಿಷ್ ಆಡಳಿತ ಯಾವತ್ತೂ ನಿಷೇಧಿಸಲಿಲ್ಲ!


ಒಂದೆರಡು ದಶಕದ ಹಿಂದಿನವರೆಗೂ ಈ ದೇಶದಲ್ಲಿ ಯಾವುದೇ ಧರ್ಮಕ್ಕೆ ಸೇರಿದ ಇಬ್ಬರು ಪರಸ್ಪರ ಭೇಟಿಯಾದರೆ ‘‘ಜೈ ರಾಮ್‌ಜಿಕೀ’’ ಎಂದು ಕೈಕುಲುಕುವುದು ಮತ್ತು ಹೊರಡುವ ಮುನ್ನ ‘‘ರಾಮ್‌ರಾಮ್’’ ಎಂದು ವಿದಾಯ ಹೇಳುವುದು ಸರ್ವೇ ಸಾಮಾನ್ಯವಾಗಿತ್ತು. ಅದರಲ್ಲಿ ಹಿಂದೂ ಮತ್ತು ಮುಸಲ್ಮಾನರೆಂಬ ಭೆೇದಗಳೇನೂ ಇರುತ್ತಿರಲಿಲ್ಲ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಅದರಲ್ಲೂ ಆಗಸ್ಟ್-15ರ ಮೆರವಣಿಗೆಯ ಸಮಯಗಳಲ್ಲಿ ‘‘ಶಾಂತಿ-ಶಿಸ್ತು’’ ಎಂಬ ಘೋಷಣೆಗಳು ಹಾಗೂ ‘‘ವಂದೇ’’ ಎಂಬ ಘೋಷಣೆಗೆ ‘‘ಮಾತರಂ’’ ಎಂದು ಕೋರಸ್ ಕೊಡುವುದು ಸರ್ವೇ ಸಾಮಾನ್ಯವಾಗಿತ್ತು. ಆ ಘೋಷಣೆಗಳು ಪರಸ್ಪರ ಮನುಷ್ಯ ಸಂಬಂಧಗಳ ಮತ್ತು ಗೌರವಗಳ ಸಂಕೇತಗಳಾಗಿದ್ದವೆಯೇ ವಿನಃ ಮತ್ತೊಂದು ಧರ್ಮದವರ ದೇಶಭಕ್ತಿಯನ್ನು ಮತ್ತು ಮಾನವ ಘನತೆಯನ್ನು ಹೀಯಾಳಿಸುವ ಘೋಷಣೆಗಳಾಗಿರಲಿಲ್ಲ.

 ಆದರೆ ಸಮಾಜದಲ್ಲಿ ಕೋಮುರಾಜಕಾರಣ ವ್ಯಾಪಿಸತೊಡಗಿದಂತೆ ಮತ್ತು ಅದು ರಾಜಕೀಯ ಅಧಿಕಾರ ಪಡೆದುಕೊಳ್ಳುವ ವ್ಯೆಹತಂತ್ರವಾಗುತ್ತಿದ್ದಂತೆ ಹೃದಯದಿಂದ ಬರುತ್ತಿದ್ದ ‘‘ಜೈರಾಮ್‌ಜಿಕೀ’’ ಎಂಬ ಅಭಿದಾನವೂ ಆಕ್ರಮಣಕಾರಿ ಮೆರವಣಿಗೆಗಳಲ್ಲಿ ‘ಜೈ ಶ್ರೀರಾಂ’ ಎಂಬ ಭೀತಿ ಹುಟ್ಟಿಸುವ ಕರ್ಕಷತೆಯನ್ನು ಪಡೆದುಕೊಳ್ಳತೊಡಗಿತು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ನಿಧಾನಕ್ಕೆ ‘‘ಇಸ್ ದೇಶ್ ಮೆ ರಹನಾ ಹೈತೋ ಜೈ ಶ್ರೀರಾಂ ಕೆಹನಾ ಹೋಗಾ’’ (ಈ ದೇಶದಲ್ಲಿರಬೇಕೆಂದರೆ ಜೈಶ್ರೀರಾಂ ಹೇಳಲೇ ಬೇಕು) ಎಂಬ ಪಕ್ಕಾ ಫ್ಯಾಶಿಸ್ಟ್ ಘೋಷಣೆಯಾಗಿಯೂ ಪರಿವರ್ತನೆಯಾಯಿತು. ಜೈ ಶ್ರೀರಾಂ, ಅಲ್ಲಾ ಹೋ ಅಕ್ಬರ್, ಕ್ರಿಸ್ತನಿಗೆ ಮಹಿಮೆ ಎಂಬ ಘೋಷ ವಾಕ್ಯಗಳೆಲ್ಲಾ ಆಯಾ ಧಾರ್ಮಿಕರ ನಂಬಿಕೆಯ ಹೇಳಿಕೆಗಳು. ಅದು ತಪ್ಪೂಅಲ್ಲ. ಅಪರಾಧವೂ ಅಲ್ಲ. ‘‘ಜೈ ಶ್ರೀರಾಂ’’ ಎನ್ನುವುದು ಖಂಡಿತಾ ಕೋಮುವಾದವಲ್ಲ. ದೇವಭಕ್ತಿ. ಆದರೆ ‘‘ಇಸ್ ದೇಶ್ ಮೆ ರೆಹನಾ ಹೈ ತೋ ಜೈ ಶ್ರೀರಾಂ ಕೆಹನಾ ಹೋಗಾ’’ ಎನ್ನುವುದು ಮಾತ್ರ ಅಧರ್ಮ ಮತ್ತು ಕೋಮುವಾದ. ಹಾಗೆಯೇ ಜನಮಾನಸದಲ್ಲಿ ದೇಶಗೌರವದ ಘೋಷಣೆಯಾಗಿ ಬೆಸೆದುಹೋಗಿದ್ದ ‘ವಂದೇ ಮಾತರಂ’ ಘೋಷಣೆಗೆ ಸಂಘಪರಿವಾರವು ಮತ್ತೊಮ್ಮೆ ಬಂಕಿಮಚಂದ್ರ ಚಟರ್ಜಿಯವರ ‘ಆನಂದಮಠ’ ಮೂಲ ಕಾದಂಬರಿಯಲ್ಲಿ ಹಸಿಹಸಿಯಾಗಿ ಪ್ರತಿಪಾದಿಸಿರುವ ಮುಸ್ಲಿಂ ವಿರೋಧಿ ಹಿಂದೂ ರಾಷ್ಟ್ರೀಯತೆಯ ನಂಜನ್ನು ಬೆರೆಸುತ್ತಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಮುಸ್ಲಿಂ ಸಂಸದರು ಪ್ರತಿಜ್ಞೆ ಸ್ವೀಕರಿಸುವಾಗ ಅವರ ದೇಶಭಕ್ತಿಯನ್ನು ಪ್ರಶ್ನಿಸುವ ರೀತಿಯಲ್ಲಿ ಬಿಜೆಪಿಯ ಸಂಸದರು ‘‘ವಂದೇ ಮಾತರಂ’’ ಎಂದು ‘‘ಜೈ ಶ್ರೀರಾಂ’’ ಎಂದು ಬೊಬ್ಬೆಯಿಟ್ಟದ್ದು ಇದಕ್ಕೆ ಇತ್ತೀಚಿನ ಉದಾಹರಣೆ.

ಆದ್ದರಿಂದ ಈ ಸಂದರ್ಭದಲ್ಲಿ ರಾಷ್ಟ್ರಗೀತೆಯಷ್ಟೆ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಿಟ್ಟಿರುವ ‘ವಂದೇ ಮಾತರಂ’ ಗೀತೆಯಲ್ಲಿ ಮತ್ತು ಅದರ ಹುಟ್ಟಿನಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರೋಧಿ ದೇಶಪ್ರೇಮವಿತ್ತೇ ಅಥವಾ ಮುಸ್ಲಿಂ ವಿರೋಧವಿತ್ತೇ ಎಂಬುದನ್ನು ನೆನಪಿಗೆ ತಂದುಕೊಳ್ಳುವ ಅಗತ್ಯವಿದೆ. ‘ವಂದೇ ಮಾತರಂ’ ಹಾಡನ್ನು ಬಂಗಾಳದ ಪ್ರಸಿದ್ಧ ಸಾಹಿತಿ ಬಂಕಿಮಚಂದ್ರ ಬಂಕಿಮಚಂದ್ರ ಚಟರ್ಜಿಯವರು 1870ರಲ್ಲೇ ರಚಿಸಿದರೂ ಅದು ಈಗಿರುವ ರೂಪದಲ್ಲಿ ತಿದ್ದುಪಡಿಗೊಂಡು ಅವರ ‘ಆನಂದ ಮಠ’ ಕಾದಂಬರಿಯಲ್ಲಿ ಸೇರ್ಪಡೆಯಾದದ್ದು 1881ರಲ್ಲಿ. ‘ಆನಂದವಠ’ ಕಾದಂಬರಿಯ ತಿರುಳನ್ನು ಅರ್ಥಮಾಡಿಕೊಳ್ಳದೆ ‘ವಂದೇ ಮಾತರಂ’ ಗೀತೆಯನ್ನಾಗಲೀ, ಅದನ್ನು ಕಡ್ಡಾಯ ಮಾಡಲು ಈಗ ‘ಚಳವಳಿ’ ಮಾಡುತ್ತಿರುವ ಹಿಂದುತ್ವವಾದಿಗಳ ನಿಜವಾದ ಉದ್ದೇಶವನ್ನಾಗಲೀ ಅರ್ಥಮಾಡಿಕೊಳ್ಳಲಾಗುವುದಿಲ್ಲ. ‘ಆನಂದಮಠ’ ಕಾದಂಬರಿ ಬ್ರಿಟಿಷರ ಆಡಳಿತದಿಂದಾಗಿ ಬಂಗಾಳವು ಹಿಂದೆಂದೂ ಕಾಣದಷ್ಟು ತೀವ್ರವಾಗಿ ಬರಗಾಲಕ್ಕೆ ತುತ್ತಾಗಿದ್ದ ಕಾಲಘಟ್ಟದಿಂದ ಪ್ರಾರಂಭವಾಗುತ್ತದೆ. ಬರಗಾಲದಿಂದ ತನ್ನ ಹಿಂದಿನ ಎಲ್ಲಾ ವೈಭವವನ್ನು ಕಳೆದುಕೊಂಡು ಹೆಂಡತಿ ಮತ್ತು ಮಗಳೊಂದಿಗೆ ಬದುಕನ್ನು ಅರಸುತ್ತಾ ಗುಳೆ ಹೊರಡುವ ಬ್ರಾಹ್ಮಣ ಭೂಮಾಲಕ ಮಹೇಂದ್ರ ಇದರ ಕಥಾನಾಯಕ. ಆದರೆ ಮಹೇಂದ್ರ ಇಲ್ಲಿ ಕಳೆದು ಹೋದ ಹಿಂದೂ ಬ್ರಾಹ್ಮಣ ವೈಭವಕ್ಕೆ ಪ್ರತಿನಿಧಿಯಷ್ಟೆ. ಹೀಗಾಗಿ ಮತ್ತೆ ಆ ವೈಭವವನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದೇ ‘ಆನಂದ ಮಠ’ದ ನಿಜವಾದ ಕಥೆ. ಇಲ್ಲಿ ವೈಭವ ಕಿತ್ತುಕೊಳ್ಳುವವರು ಮುಸ್ಲಿಂ ದೊರೆಗಳು. ಹೀಗಾಗಿ ಈ ದೇಶದ ಪ್ರಧಾನ ಶತ್ರುಗಳು ಮುಸ್ಲಿಮರೆಂಬುದೇ ಕಾದಂಬರಿಯ ಸಂದೇಶ.

ಆದ್ದರಿಂದಲೇ ಕಾದಂಬರಿಯು ಬರಗಾಲದ ಬವಣೆ, ರೈತಾಪಿಗಳು ಇರುವೆಗಳಂತೆ ಸಾಯುತ್ತಿರುವ ದೃಶ್ಯಗಳಿಂದ ಪ್ರಾರಂಭವಾದರೂ ಅವೆಲ್ಲವೂ ನಂತರ ಸಂಪೂರ್ಣ ಮರೆಯಾಗಿ ಬಿಡುತ್ತದೆ. ಅದೇ ರೀತಿ ಈ ಬರಗಾಲಕ್ಕೆ ಕಾರಣವಾದ ಬ್ರಿಟಿಷ್ ಆಡಳಿತದ ಪ್ರಸ್ತಾಪವೂ ಕಾದಂಬರಿಯಲ್ಲಿ ಬರುವುದಿಲ್ಲ. ಮುಸ್ಲಿಂ ದರೋಡೆಕೋರರು ಮತ್ತು ಮುಸ್ಲಿಂ ನವಾಬರ ದಾಳಿ ಇವೆರಡರ ವಿರುದ್ಧ ಸಮರ ಸಾರಲು ಹಿಂದೂಗಳು ಸಂಸಾರವನ್ನು ತೊರೆದು ಸನ್ಯಾಸಿಗಳಾಗಿ ಸಶಸ್ತ್ರ ಬಂಡಾಯ ಹೂಡಿರುತ್ತಾರೆ. ಮಹೇಂದ್ರನನ್ನು ಈ ಬಂಡಾಯದಲ್ಲಿ ಸೇರುವಂತೆ ಮಾಡಲು ಆತನನ್ನು ಗುಪ್ತ ಗುಹೆಯಲ್ಲಿ ಕರೆದುಕೊಂಡು ದೇವಿ-ಭಾರತ ಮಾತೆ-ಯ ದರ್ಶನ ಮಾಡಿಸಲಾಗುತ್ತದೆ. ಆ ದೇವಿಯ ಮುಂದೆ ಮುಸ್ಲಿಮರನ್ನು ಕೊಂದುಹಾಕಿ ಈ ದೇಶವನ್ನು ವಿಮೋಚನೆಮಾಡುವ ವೀರ ಪ್ರತಿಜ್ಞೆಯ ಭಾಗವಾಗಿಯೇ ‘‘ವಂದೇ ಮಾತರಂ’’ ಹಾಡನ್ನು ಹಾಡಲಾಗುತ್ತದೆ. ‘‘ವಂದೇ ಮಾತರಂ’’ ಹಾಡುತ್ತಲೇ ಮಹೇಂದ್ರನಂತಹವರು ಮುಸ್ಲಿಮರ ಮಾರಣ ಹೋಮಕ್ಕೆ ಸಜ್ಜಾಗುತ್ತಾರೆ. ಬರಗಾಲದ ಬವಣೆಯಿಂದ ಹಿಂದೂಗಳಷ್ಟೆ ಮುಸ್ಲಿಂ ರೈತರು ಸಹ ತುತ್ತಾಗಿ ಇರುವೆಗಳಂತೆ ಸಾಯುತ್ತಿದ್ದರೂ ಇಡೀ ಮುಸ್ಲಿಂ ಸಮುದಾಯವನ್ನೇ ಹಿಂದೂಗಳ ಬವಣೆಗೆ ಕಾರಣವೆಂಬಂತೆ ಚಿತ್ರಿಸಲಾಗಿದೆ. ಹೀಗೆ ಕಾದಂಬರಿ ಮೊದಲಿನಿಂದಲೂ ಇಡೀ ಮುಸ್ಲಿಂ ಸಮುದಾಯವನ್ನೇ ದೇಶದಿಂದ ಬಿಟ್ಟೋಡಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿರಿಸಿಕೊಳ್ಳುತ್ತದೆ.

ಕಾದಂಬರಿಯ ನಾಯಕನಾದ ಸತ್ಯಾನಂದ ಘೋಷಿಸುವಂತೆ ‘‘ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಉದ್ದೇಶ ಎಲ್ಲಾ ಮುಸ್ಲಿಮರನ್ನು ಕೊಂದುಹಾಕುವುದು. ಏಕೆಂದರೆ ಅವರು ದೇವರ ಶತ್ರುಗಳು!’’. ಇದೇ ಆ ಕಾದಂಬರಿಯ ಪ್ರಧಾನ ಧಾತು. ‘‘ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿ’’ಯೆಂದು ಘೋಷಿಸುವ ‘ಆನಂದಮಠ’ದ ಬಂಡಾಯಗಾರರು ತಮ್ಮನ್ನು ತಾವು ಸನಾತನಿಗಳೆಂದೇ ಗುರುತಿಸಿಕೊಳ್ಳುತ್ತಾರೆ. ‘ಆನಂದ ಮಠ’ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಷ್‌ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಂ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ. ಬಂಕಿಮಚಂದ್ರರ ‘ಆನಂದ ಮಠ’ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ. ಇದನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ 2007ರಲ್ಲಿ ಮರುಮುದ್ರಣ ಮಾಡಿ ಪ್ರಕಟಿಸಿತ್ತು. ಅದರ ಕೆಲವು ಆಯ್ದ ಭಾಗಗಳು ಕೆಳಗಿವೆ: ‘ಆನಂದ ಮಠ’ ಕಾದಂಬರಿಯ ಕೆಲವು ಆಯ್ದ ಭಾಗಗಳು

ಸತ್ಯಾನಂದ -ನಮಗೆ ನಮ್ಮ ಹದಿನಾಲ್ಕು ತಲೆಯಾಂತರದಿಂದ ಬಂದ ಮಾತು, ಅಂಥಾದ್ದನ್ನು ನಿನಗೆ ಹೇಳುತ್ತೇನೆ. ಈಶ್ವರನು ತ್ರಿಗುಣಾತ್ಮಕನು. ಅದನ್ನು ಬಲ್ಲೆಯಷ್ಟೆ? ಮಹೇಂದ್ರ -ಹೌದು, ಸತ್ವ ರಜಃ ತಮಃ ಈ ಮೂರು ಗುಣಗಳು. ಗೊತ್ತಾಯಿತು. ಸಂತಾನರು ಹಾಗಾದರೆ ಉಪಾಸಕ ಸಂಪ್ರದಾಯದವರಾಗಿ ಮಾತ್ರ ಇದ್ದಾರೆ? ಸತ್ಯಾನಂದ -ಹೌದು. ನಮಗೆ ರಾಜ್ಯ ಬೇಡ -ಮುಸಲ್ಮಾನರು ಭಗವಂತನ ವಿದ್ವೇಷಿಗಳಾಗಿರುವ ಕಾರಣ ಅವರನ್ನು ಸವಂಶವಾಗಿ ನಿಪಾತಮಾಡುವ ಇಷ್ಟ ಒಂದೇ. (ಪು.73)

ಈ ಸಮಯದಲ್ಲಿ ಆ ಪ್ರದೇಶಕ್ಕೆ ನಾಲ್ಕೈದು ಪಟಾಲಂಗಳ ಸಹಿತವಾಗಿ ಕ್ಯಾಪ್ಟನ್ ಥಾಮಸ್ ಸಾಹೇಬರ ಸವಾರಿಯು ಚಿತ್ತೈಸಿತ್ತು. ಆ ಸಮಯದಲ್ಲಿ ಕೆಲ ಹೊಲೆಯರು ಮುಂತಾದ ಕೀಳು ಜಾತಿಯರಾದ ಹೊಸದಾಗಿ ಆದ ಸಂತಾನರು ಆ ಕಾಲದ ಉತ್ಸಾಹವನ್ನು ನೋಡಿ ಪರದ್ರವ್ಯಾಪಹರಣದಲ್ಲಿ ಉತ್ಸಾಹಿಗಳಾಗಿದ್ದರು. ಕ್ಯಾಪ್ಟನ್ ಥಾಮಸ್ ಸಾಹೇಬರು ಸೈನ್ಯದ ಸರಬರಾಯಿಗೋಸ್ಕರ ಉತ್ತಮವಾದ ಅಕ್ಕಿ ತುಪ್ಪಗೋಧಿ ಮುಂತಾದ್ದನ್ನು ಬಂಡಿ ಬಂಡಿಗಳ ಮೇಲೆ ತರಿಸುತ್ತಲಿದ್ದರು. ಅದನ್ನು ನೋಡಿ ಬಾಯಿ ನೀರು ಕರಗಿ ಆ ನೂತನವಾಗಿ ಸಂತಾನರಾದ ಹೊಲೆಯರ ಗುಂಪಿಗೆ ಸೇರಿದವರು ಬಂಡಿಗಳ ಮೇಲೆ ಬಿದ್ದರು. ಆದರೆ ಥಾಮಸಿನ ಶಿಪಾಯಿಗಳ ಕೈಲಿದ್ದ ಬಂದೂಕುಗಳಿಂದ ಪೆಟ್ಟು ತಿಂದು ಹಿಂದಿರುಗಿ ಓಡಿಹೋಗಿಬಿಟ್ಟರು.(ಪು.94)

ಥಾಮಸನು ನೋಡುತ್ತಿದ್ದ ಹಾಗೆ ಒಂದಪೂರ್ವವಾದ ಸುಂದರ ಸ್ತ್ರೀಮೂರ್ತಿಯು ನಿಂತಿತು. ಸುಂದರಿಯು ನಗುನಗುತ, ‘‘ಸಾಹೇಬ! ನಾನು ಹೆಂಗಸು; ಯಾರನ್ನೂ ಆಘಾತಮಾಡುವುದಿಲ್ಲ; ಹಿಂದುಗಳಿಗೂ ಮುಸಲ್ಮಾನರಿಗೂ ಕನರ್ವ ಕದನವಾಗುತ್ತದೆ ; ಮಧ್ಯೆ ನೀವೇತಕ್ಕೆ ಬರಬೇಕು? ನೀವು ಮನೆಗೆ ಹಿಂದಿರುಗಬೇಕು’’ ಎಂದಳು.(ಪು.96)

ಆಗ ಆ ಸ್ವಲ್ಪಜನ ಸಂತಾನರು ‘‘ಜಯಜಗದೀಶಹರೆ’’ ಹೇಳುತ್ತ ಹುಲಿಗಳ ಹಾಗೆ ಕ್ಯಾಪ್ಟನ್ ಥಾಮಸನ ಮೇಲೆ ಬಿದ್ದರು. ಆ ಬಿದ್ದ ಜೋರನ್ನು ಆ ಅಲ್ಪಸಂಖ್ಯಾತರಾದ ಸಿಪಾಯಿಗಳು ತೆಲಂಗೀ ದಳದವರು ಸಹಿಸಲಾರದೆ ಎಲ್ಲರೂ ನಷ್ಟರಾಗಿಹೋದರು. ಆಗ ಭವಾನಂದನು ತಾನೇ ಹೋಗಿ ಕ್ಯಾಪ್ಟನ್ ಥಾಮಸನ ತಲೆಯ ಕೂದಲನ್ನು ಹಿಡಿದುಕೊಂಡನು. ಕ್ಯಾಪ್ಟನ್ ಥಾಮಸನು ಕಡೆಯವರೆಗೆ ಯುದ್ಧಮಾಡಿದನು. ಭವಾನಂದನು, ‘‘ಕ್ಯಾಪ್ಟನ್ ಸಾಹೇಬ! ನಿನ್ನನ್ನು ಹೊಡೆದುಹಾಕುವುದಿಲ್ಲ, ಇಂಗ್ಲಿಷರು ನಮಗೆ ಶತ್ರುಗಳಲ್ಲ. ನೀವು ಮುಸಲ್ಮಾನರ ಸಹಾಯಕ್ಕೆ ಏತಕ್ಕೆ ಬಂದಿರಿ? ಬಾ -ನಿನಗೆ ಪ್ರಾಣದಾನ ಮಾಡಿದ್ದೇನೆ. ನೀನೇನೋ ಈಗ ಬಂದಿಯಾಗಿದ್ದೀ. ಇಂಗ್ಲಿಷರಿಗೆ ಜಯವಾಗಲಿ, ನಾವು ನಿಮ್ಮ ಹಿತಚಿಂತಕರು’’ ಎಂದು ಹೇಳಿದನು. ಆಗ ಥಾಮಸನು ಭವಾನಂದನನ್ನು ವಧೆ ಮಾಡುವುದಕ್ಕೆ ಸನೀನ ಸಹಿತವಾದ ಬಂದೂಕನ್ನು ಎತ್ತುವುದಕ್ಕೆ ಪ್ರಯತ್ನಪಟ್ಟನು. ಆದರೆ ಭವಾನಂದನು ಅವನನ್ನು ಹುಲಿಯ ಹಾಗೆ ಹಿಡಿದಿದ್ದನಾದ್ದರಿಂದ ಥಾಮಸನು ಅಲ್ಲಾಡುವುದಕ್ಕಾಗದೆ ಹೋಯಿತು. ಭವಾನಂದನು ಇವನನ್ನು ಕಟ್ಟಿಹಾಕಿರೆಂದು ಅನುಚರರಿಗೆ ಹೇಳಿದನು. ಎರಡು ಮೂರು ಜನ ಸಂತಾನರು ಬಂದು ಥಾಮಸನನ್ನು ಕಟ್ಟಿದರು. ಭವಾನಂದನ ಅಪ್ಪಣೆಯ ಪ್ರಕಾರ ಕಟ್ಟಿದವನನ್ನು ಕುದುರೆಯ ಮೇಲೆ ಕಟ್ಟಿಹಾಕಿ ‘ವಂದೇ ಮಾತರಂ’ ಹಾಡುತ್ತಾ ವಾಟ್ಸನ್ ಇದ್ದ ಕಡೆಗೆ ಹೊರಟರು. (ಪು.123)

ಚಿಕಿತ್ಸಕ -ಸತ್ಯಾನಂದ ಕಾತರನಾಗಬೇಡ. ಆಗುವುದೆಲ್ಲ ಒಳ್ಳೆಯದಾಗುತ್ತೆ. ಇಂಗ್ಲಿಷರು ರಾಜರಾಗದೆ ಹೋದರೆ ಆರ್ಯಧರ್ಮವು ಪುನರುದ್ಧಾರವಾಗುವ ಸಂಭವವಿಲ್ಲ. ಮಹಾತ್ಮರು ಹೇಳಿರುವ ಮಾತನ್ನೇ ನಾನು ಏಳುತ್ತೇನೆ. ಮನವಿಟ್ಟು ಕೇಳು. ಮೂವತ್ತಮೂರು ಕೋಟಿ ದೇವತೆಗಳನ್ನು ಪೂಜೆಮಾಡುವುದು ಆರ್ಯರ ಧರ್ಮವಲ್ಲ -ಅದೊಂದು ಲೌಕಿಕವಾದ ಅಪಕೃಷ್ಟವಾದ ಧರ್ಮ : ಅದರ ಪ್ರಭಾವವೇ ಈಗಿನ ಆರ್ಯಧರ್ಮವಾಗಿದೆ. ಮ್ಲೇಂಛರು ಯಾವುದನ್ನು ಹಿಂದೂ ಧರ್ಮವೆನ್ನುತ್ತಾರೋ ಅದು ಲೋಪವಾಗಿಹೋಗಿದೆ. ಶುದ್ಧವಾದ ಹಿಂದೂ ಧರ್ಮವು ಜ್ಞಾನಾತ್ಮಕವಾದುದು. ಕೇವಲ ಕರ್ಮಾತ್ಮಕವಾದುದಲ್ಲ; ಆ ಜ್ಞಾನವು ಎರಡು ಪ್ರಕಾರ, ಬಹಿರ್ವಿಷಯಕವಾದುದೊಂದು, ಅಂತರ್ವಿಷಯಕವಾದುದೊಂದು. ಅಂತರ್ವಿಷಯಕವಾದ ಜ್ಞಾನವೇ ಆರ್ಯ ಧರ್ಮದ ಪ್ರಧಾನ ಭಾಗ. ಆದರೆ ಬಹಿರ್ವಿಷಯಕವಾದ ಜ್ಞಾನವು ಮೊದಲು ಹುಟ್ಟದಿದ್ದರೆ ಅಂತರ್ವಿಷಯಕವಾದ ಜ್ಞಾನ ಹುಟ್ಟುವುದರ ಸಂಭವವು ಕಡಿಮೆ. ಸ್ಥೂಲವಾದುದನ್ನು ತಿಳಿಯದಿದ್ದರೆ ಸೂಕ್ಷ್ಮವಾದುದನ್ನು ತಿಳಿಯುವುದು ಕಷ್ಟ. ಈಗ ಈ ದೇಶದಲ್ಲಿ ಬಹಳ ಕಾಲದಿಂದ ಬಹಿರ್ವಿಷಯಕ ಜ್ಞಾನವು ವಿಲುಪ್ತವಾಗಿ ಹೋಗಿದೆ. ಅದರೊಂದಿಗೆ ಸ್ವಭಾವಸಿದ್ಧವಾದ ಆರ್ಯಧರ್ಮವೂ ಲೋಪವಾಗಿದೆ.

ಆರ್ಯಧರ್ಮವನ್ನು ಪುನರುದ್ಧಾರಮಾಡಬೇಕಾದರೆ ಮೊದಲು ಬಹಿರ್ವಿಷಯಕವಾದ ಜ್ಞಾನವನ್ನು ಪ್ರಚಾರಮಾಡಬೇಕು. ಈಗ ಈ ದೇಶದಲ್ಲಿ ಬಹಿರ್ವಿಷಯಕವಾದ ಜ್ಞಾನವೇ ಇಲ್ಲ. ತಿಳಿಸಿ ಹೇಳಿಕೊಡುವ ಜನರಿಲ್ಲ; ನಾವು ಜನರಿಗೆ ಶಿಕ್ಷಿಸುವುದರಲ್ಲಿ ಅಷ್ಟು ಸಮರ್ಥರಾಗಿಲ್ಲ; ಅದುಕಾರಣ ಬೇರೆ ದೇಶದಿಂದ ಬಹಿರ್ವಿಷಯಕವಾದ ಜ್ಞಾನವು ಬರಬೇಕು. ಇಂಗ್ಲಿಷರು ಬಹಿರ್ವಿಷಯಕವಾದ ಜ್ಞಾನದಲ್ಲಿ ಪಂಡಿತರು, ಜನರಿಗೆ ತಿಳಿಸುವುದರಲ್ಲಿ ಪಟುಗಳಾಗಿದ್ದಾರೆ. ಆದುದರಿಂದ ಇಂಗ್ಲಿಷರು ರಾಜರಾಗಬೇಕು. ಇಂಗ್ಲಿಷ್ ಕಲಿತರೆ ಬಹಿರ್ವಿಷಯಕವಾದ ಜ್ಞಾನದಲ್ಲಿ ಸುಶಿಕ್ಷತರಾಗಿ ಜನರು ಅಂತಸತ್ವವನ್ನು ತಿಳಿಯಲು ಸಮರ್ಥರಾಗುವರು. ಆಗ ಆರ್ಯಧರ್ಮದ ಪ್ರಚಾರಕ್ಕೆ ವಿಘ್ನವುಂಟಾಗುವುದಿಲ್ಲ. ಆಗ ನಿಜವಾದ ಧರ್ಮವು ತನಗೆ ತಾನಾಗಿಯೇ ಪುನರುದ್ದೀಪ್ತವಾಗುವುದು. ಎಷ್ಟುದಿನ ಹಾಗಾಗುವುದಿಲ್ಲವೋ ಎಷ್ಟು ದಿನ ಹಿಂದೂಗಳು ಜ್ಞಾನಿಗಳಾಗುವುದಿಲ್ಲವೋ, ಗುಣಾಢ್ಯರಾಗುವುದಿಲ್ಲವೋ, ಬಲಿಷ್ಠರಾಗುವುದಿಲ್ಲವೋ ಅಷ್ಟುದಿನ ಇಂಗ್ಲಿಷರ ರಾಜ್ಯವು ಅಕ್ಷಯವಾಗಿ ರುವುದು. ಇಂಗ್ಲಿಷರ ರಾಜ್ಯದಲ್ಲಿ ಪ್ರಜೆಗಳು ಸುಖಿಗಳಾಗುವರು. ನಿಷ್ಕಂಟಕವಾಗಿ ಧರ್ಮಾಚರಣೆಯನ್ನು ಮಾಡಬಲ್ಲರು. ಆದುದರಿಂದ ಎಲೈ ಬುದ್ಧಿವಂತನೆ! ಇಂಗ್ಲಿಷರ ಸಂಗಡ ಯುದ್ಧಮಾಡದೆ ನನ್ನನ್ನು ಅನುಸರಿಸಿ ಬಂದುಬಿಡು(ಪು. 159)

ಸತ್ಯಾನಂದನ ಕಣ್ಣುಗಳಿಂದ ಕಿಡಿಕೆಂಡಗಳು ಸುರಿದವು. ಅವನು ಶತ್ರುಗಳ ರಕ್ತದಿಂದ ಸಿಂಚನೆಮಾಡಿ ಮಾತೆಯನ್ನು ಸಸ್ಯಶಾಲಿನಿಯಾಗಿ ಮಾಡುವೆನೆಂದನು. ಮಹಾಪುರುಷ -ಶತ್ರು ಯಾರು? ಶತ್ರುಗಳು ಇನ್ನು ಇಲ್ಲ. ಇಂಗ್ಲಿಷರು ಮಿತ್ರರಾಜರು. ಇಂಗ್ಲಿಷರ ಸಂಗಡ ಯುದ್ಧವಾಡಿ ಜಯಿಸುವುದಕ್ಕೆ ಯಾರಿಗೂ ಶಕ್ತಿ ಇಲ್ಲ.

 ಸತ್ಯಾನಂದ-ಶಕ್ತಿ ಇಲ್ಲದಿದ್ದರೆ ಇಲ್ಲಿಯೇ ಈ ಮಾತೆಯ ಪ್ರತಿಮೆಯ ಎದುರಿಗೆ ದೇಹತ್ಯಾಗವನ್ನು ಮಾಡಿಬಿಡುವೆನು. ಮಹಾಪುರುಷ -ಅಜ್ಞಾನದಿಂದಲೆ? ನಡೆ. ಜ್ಞಾನಲಾಭವನ್ನು ಮಾಡು, ಹಿಮಾಲಯಶಿಖರದಲ್ಲಿ ಮಾತೃಮಂದಿರವಿರುವುದು. ಅಲ್ಲಿಯೇ ಮಾತೆಯ ಮೂರ್ತಿಯನ್ನು ತೋರಿಸುವೆನು - ಮುಕ್ತಾಯ- (ಪು.160)

ಈ ಮೊದಲೇ ಹೇಳಿದಂತೆ ಬಂಗಾಳದ ಕಂಡುಕೇಳರಿಯದ ಬರಗಾಲಕ್ಕೆ ಬ್ರಿಟಿಷರು ಜಾರಿಗೆ ತಂದ ಕೃಷಿ ಮತ್ತು ಆಡಳಿತ ನೀತಿಗಳೇ ಕಾರಣ. ಅದನ್ನು ಜಾರಿಗೆ ತಂದವರು ಮುಸ್ಲಿಂ ನವಾಬರು. ಆದರೆ ಕಾದಂಬರಿಯಲ್ಲಿ ಬ್ರಿಟಿಷರ ವಿರುದ್ಧ ಸೊಲ್ಲೇ ಕೇಳಿ ಬರುವುದಿಲ್ಲ. ಉದಾಹರಣೆಗೆ ಮುಸ್ಲಿಂ ನವಾಬನ ಜೊತೆ ಬ್ರಿಟಿಷ್ ಸೈನ್ಯ ಸೇರಿಕೊಂಡಾಗ ಕಾದಂಬರಿಯ ನಾಯಕನಿಗೆ ಬಂಡಾಯಗಾರರು ‘‘ನಮಗೆ ಬ್ರಿಟಿಷರು ಶತ್ರುಗಳಲ್ಲ. ಅವರು ಗೆಲ್ಲಲಿ.’’ ಎಂದು ಆದೇಶಿಸುತ್ತಾರೆ. ಮೇಲೆ ನೋಡಿದಂತೆ ಕಾದಂಬರಿಯ ಅಂತ್ಯದಲ್ಲಿ ಒಂದು ಅಶರೀರ ವಾಣಿಯು ಮುಸ್ಲಿಮರನ್ನು ಕಿತ್ತೊಗೆದದ್ದರಿಂದ ಅವನ ಗುರಿ ಈಡೇರಿದೆಯೆಂದು ಘೋಷಿಸುತ್ತದೆ. ಇನ್ನು ಬಂಗಾಳದ ಆಡಳಿತವನ್ನು ದೈವಕೃಪೆಯಿಂದ ಬ್ರಿಟಿಷರೇ ವಹಿಸಿಕೊಳ್ಳುವುದರಿಂದ ಹಿಂದೂಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದೂ, ಈ ಬಂಡಾಯದ ಉದ್ದೇಶವಿದ್ದದ್ದೇ ಬ್ರಿಟಿಷರು ನೇರವಾಗಿ ಆಡಳಿತ ವಹಿಸುವಂತೆ ಮಾಡುವುದಾಗಿತ್ತೆಂದು ಆ ದೈವವಾಣಿ ತಿಳಿಹೇಳುತ್ತದೆ. ಆದರೆ ಇದರಿಂದ ಸಮಾಧಾನವಾಗದ ಕಥಾನಾಯಕ ಮುಸ್ಲಿಂ ಆಡಳಿತ ಕಿತ್ತೊಗೆದರೂ ಹಿಂದೂಗಳ ಆಡಳಿತವನ್ನು ಸ್ಥಾಪಿಸಲಾಗದೇ ಇರುವುದರಿಂದ ನಮ್ಮ ಗುರಿ ಇನ್ನೂ ಮುಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾನೆ. ಆದರೆ ಆ ದೈವವಾಣಿಯು ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲವೆಂದೂ ಬ್ರಿಟಿಷರು ಸನಾತನ ಧರ್ಮವನ್ನು ಗೌರವಿಸುತ್ತಾರೆಂದೂ, ಅವರ ಆಡಳಿತದಿಂದ ಹಿಂದೂಗಳಿಗೆ ಭೌತಿಕ ಲಾಭವಿದೆಯೆಂದೂ ಸಮಾಧಾನಪಡಿಸುತ್ತದೆ. ಹೀಗೆ ಯಾವುದನ್ನು ದೇಶಭಕ್ತಿಯ ಪ್ರತೀಕ ಎಂದು ಪ್ರಚಾರ ಮಾಡಲಾಗುತ್ತಿದೆಯೋ ಆ ಗೀತೆ ಮತ್ತು ಕಾದಂಬರಿಯ ಉದ್ದೇಶವೇ ನೇರ ಬ್ರಿಟಿಷ್ ವಸಾಹತು ಆಡಳಿತವನ್ನು ಜಾರಿಗೆ ತರುವುದಾಗಿತ್ತು!!

ಕಾದಂಬರಿಯ ಈ ನಿಜವಾದ ಸಂದೇಶವನ್ನು ಅರ್ಥಮಾಡಿಕೊಂಡೇ ಬ್ರಿಟಿಷ್ ಸರಕಾರವು 1881ರಲ್ಲಿ ಹಣಕಾಸು ಇಲಾಖೆಯಲ್ಲಿ ಹುಟ್ಟುಹಾಕಿದ ಹೊಸ ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಗೆ ಬಂಕಿಮಚಂದ್ರರನ್ನು ಆಯ್ಕೆ ಮಾಡಿ ಪುರಸ್ಕರಿಸಿತು. ಆಮೇಲೆ ಕೆಲವರ ವಿರೋಧದಿಂದಾಗಿ ಅವರನ್ನು ಅಧೀನ ಕಾರ್ಯದರ್ಶಿ ಹುದ್ದೆಗೆ ಇಳಿಸಲಾಯಿತಾದರೂ ಕೆಲಸದಿಂದೇನೂ ತೆಗೆಯಲಿಲ್ಲ. ವಾಸ್ತವವಾಗಿ ಆ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ತನ್ನ ವಿರುದ್ಧ ವ್ಯಕ್ತವಾಗುತ್ತಿದ್ದ ಎಲ್ಲಾ ಬಗೆಯ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನೂ ಹತ್ತಿಕ್ಕುತ್ತಿದ್ದ ಕಾಲ. ಉದಾಹರಣೆಗೆ ದೀನಬಂಧು ಮಿತ್ರರವರ ‘ನೀಲ್ ದರ್ಪಣ್’ ಎಂಬ ಕೃತಿ 1861ರಲ್ಲಿ ಪ್ರಕಟವಾಯಿತು. ಅದು ಪ್ಲಾಂಟೇಷನ್‌ಗಳಲ್ಲಿ ಬ್ರಿಟಿಷರು ಹೇಗೆ ಸ್ವದೇಶೀಯರನ್ನು ಶೋಷಿಸುತ್ತಿದ್ದಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿತ್ತು. ಅದರ ಇಂಗ್ಲಿಷ್ ಅನುವಾದ ಆಳರಸರ ಕೆಂಗಣ್ಣಿಗೆ ಗುರಿ ಯಾಗಿದ್ದು ಮಾತ್ರವಲ್ಲದೇ ಅದರ ಅನುವಾದಕ ರೆವೆರೆಂಡ್ ಜೇಮ್ಸ್ ಲಾಂಗ್‌ನನ್ನು ಸೆರೆಮನೆಗೂ ದೂಡಲಾಯಿತು. ಅದೇ ರೀತಿ ಬ್ರಿಟಿಷರನ್ನು ವಿಮರ್ಶಿಸಿ ಬರೆದ ಕೃತಿಗಳಾದ ಉಪೇಂದ್ರನಾಥ ದಾಸರ ‘ಶರ್ ಸರೋಜಿನಿ ನಾಟಕ್’ ಮತ್ತು ‘ಸುರೇಂದ್ರ ಬಿನೋದಿನಿ ನಾಟಕ್’ ಗಳನ್ನು ಬ್ರಿಟಿಷ್ ಸರಕಾರ ಬಹಿಷ್ಕರಿಸಿ ಲೇಖಕರನ್ನು ಬಂಧಿಸಿತು. 1876ರಲ್ಲಿ ಪ್ರಕಟವಾದ ದಕ್ಷಿಣರಂಜನ್ ಚಟ್ಟೋಪಾಧ್ಯಾಯರವರ ‘ಚಾ ಕಾರ್ ದರ್ಪಣ್’ ಕೃತಿಯಂತೂ ಬ್ರಿಟಿಷ್ ಸರಕಾರವು ಇಂತಹ ಕೃತಿಗಳನ್ನು ಬಹಿಷ್ಕರಿಸಲು ಡ್ರಾಮಾಟಿಕ್ ಪರ್ಫಾಮೆನ್ಸ್ ಆ್ಯಕ್ಟ್ ಅನ್ನು ಜಾರಿಗೆ ತರಲು ಕಾರಣವಾಯಿತು.

ಇದು ನಿಜಕ್ಕೂ ಬ್ರಿಟಿಷ್ ವಿರೋಧಿ ದೇಶಭಕ್ತಿ ಸಂಪನ್ನ ಕೃತಿಗಳ ಬಗ್ಗೆ ಬ್ರಿಟಿಷ್ ಸರಕಾರ ನಡೆದುಕೊಳ್ಳುತ್ತಿದ್ದ ರೀತಿ. ಆದರೆ ದೇಶಭಕ್ತ ಕೃತಿಯೆಂದು ಪರಿಗಣಿಸಲ್ಪಡುತ್ತಿರುವ ‘ಆನಂದಮಠ’ವನ್ನು ಬ್ರಿಟಿಷ್ ಸರಕಾರ ಹೇಗೆ ಭಾವಿಸಿತು?. ‘ಆನಂದಮಠ’ದ ಮೊದಲ ಆವೃತ್ತಿಗೆ ಬರೆದ ಮುನ್ನುಡಿಯಲ್ಲೇ ಬಂಕಿಮಚಂದ್ರರು ತನ್ನ ಕಾದಂಬರಿಯ ಬಂಡಾಯ ಸಾಮಾಜಿಕ ಬಂಡಾಯವೇ ಹೊರತು ರಾಜಕೀಯ ಬಂಡಾಯವಲ್ಲವೆಂದು-ಅರ್ಥಾತ್ ಬ್ರಿಟಿಷ್ ವಿರೋಧಿ ಕೃತಿಯಲ್ಲವೆಂದು-ಸ್ಪಷ್ಟಪಡಿಸಿಬಿಟ್ಟಿದ್ದರು. 1883ರ ಮಾರ್ಚ್ 31ರಂದು ಬ್ರಿಟಿಷ್ ಆಡಳಿತದ ಅಧಿಕೃತ ಗೆಜೆಟ್‌ನಲ್ಲಿ ಈ ಕಾದಂಬರಿಯು ಧಾರ್ಮಿಕ ಭಾವನೆಗಳಿಂದ ಪ್ರೇರಿತಗೊಂಡ, ಮುಸ್ಲಿಂ ಆಳ್ವಿಕೆಯ ಕೊನೆಯನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿಯೆಂದು ಹೊಗಳಲಾಗಿತ್ತು. 1937ರಲ್ಲಿ ವೈಸ್‌ರಾಯ್ ಕೌನ್ಸಿಲ್‌ನ ಸದಸ್ಯನಾಗಿದ್ದ ಸರ್ ಹೆನ್ರಿ ಕ್ರೈಕ್ ಈ ಕಾದಂಬರಿಯು ಮುಸ್ಲಿಮರ ವಿರುದ್ಧ ಘೊಷಗೀತೆಯೆಂದೇ ಬಣ್ಣಿಸಿದ್ದನು. ಹೀಗಾಗಿಯೇ ಈ ಹಾಡನ್ನಾಗಲೀ, ಕಾದಂಬರಿಯನ್ನಾಗಲೀ ಬ್ರಿಟಿಷ್ ಆಡಳಿತ ಯಾವತ್ತೂ ನಿಷೇಧಿಸಲಿಲ್ಲ!

ಇದು ‘ವಂದೇ ಮಾತರಂ’ ಮತ್ತು ‘ಆನಂದಮಠ’ಗಳ ನಿಜಸ್ವರೂಪ. ಇದು ಈ ದೇಶವನ್ನು ಮತ್ತೊಮ್ಮೆ ನವವಸಾಹತು ಶೋಷಣೆಗೆ ತೆರೆದಿಟ್ಟು ದೇಶವಾಸಿಗಳ ನಡುವೆ ದ್ವೇಷ ಬಿತ್ತಬಯಸುವ ಹಿಂದುತ್ವವಾದಿಗಳ ಗೀತೆಯೇ ಹೊರತು ನಮ್ಮೆಲ್ಲರ ನಿಜವಾದ ಸ್ವಾತಂತ್ರ್ಯದ ಆಶಯವನ್ನು ಉದ್ದೀಪಿಸುವ ಗೀತೆಯಲ್ಲ.


-ಈ ವಿಷಯದ ಬಗ್ಗೆ ಹೆಚ್ಚಿನ ಓದಿಗಾಗಿ EPW ಪತ್ರಿಕೆಯಲ್ಲಿ ಪ್ರಕಟವಾದ ಪ್ರಖ್ಯಾತ ಚಿಂತಕಿ ತನಿಕ ಸರ್ಕಾರ್‌ರವರ “Birth Of Godess” ಲೇಖನವನ್ನು ಓದಿರಿ. ಇದು ಅಂತರ್ಜಾಲದಲ್ಲಿ ಈ ವಿಳಾಸದಲ್ಲಿ ಸಿಗುತ್ತದೆ: http://epw.in/epw/uploads/articles/7338.pdf) -ಹಾಗೆಯೇ ಅಂತರ್ಜಾಲದಲ್ಲಿ ‘ಆನಂದಮಠ’ ಕನ್ನಡ ಅನುವಾದವು ಈ ವಿಳಾಸದಲ್ಲಿ ಸಿಗುತ್ತದೆ: http://kanaja.in/ebook/index.php/e-book/2017-11-16-10-25-22

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top