ಜನಪ್ರತಿನಿಧಿಗಳಿವರೇನಮ್ಮ? | Vartha Bharati- ವಾರ್ತಾ ಭಾರತಿ

---

ಜನಪ್ರತಿನಿಧಿಗಳಿವರೇನಮ್ಮ?

ಜನಾಭಿಪ್ರಾಯದ ಮೇಲೆ ಆಯ್ಕೆಯಾದವರು ಜನರ ಒಪ್ಪಿಗೆಯಿಲ್ಲದೆ ರಾಜೀನಾಮೆ ನೀಡುವುದು ಕನಿಷ್ಠ ಗೌರವದ ಕೆಲಸವೂ ಅಲ್ಲ. ಅದು ಲಜ್ಜೆಗೇಡಿತನದ ಬೆತ್ತಲೆ ನೃತ್ಯ ಮಾತ್ರವಲ್ಲ, ಹೊಣೆಗೇಡಿತನದ ಗೌರಿಶಂಕರ ಶಿಖರ. ರಾಜಕಾರಣಿಗಳ, ರಾಜಕೀಯ ಪಕ್ಷಗಳ, ಸಮಸ್ಯೆಯೇ ರಾಜ್ಯದ ಸಮಸ್ಯೆಯೆಂದು ಈ ಮಂದಿ ತಿಳಿದುಕೊಂಡಂತಿದೆ.


2019ರ ಲೋಕಸಭಾ ಚುನಾವಣೆಯಲ್ಲಿ ಭಾಜಪ ಅಭೂತಪೂರ್ವ ಗೆಲುವು ಸಾಧಿಸಿದಾಗಲೇ ಕರ್ನಾಟಕವೂ ಸೇರಿದಂತೆ ಭಾಜಪಕ್ಕೆ ವಿರೋಧವಾದ ಪಕ್ಷಗಳು ಆಡಳಿತವಿರುವ ಕರ್ನಾಟಕದಲ್ಲಿ ಸರಕಾರಕ್ಕೆ ಕಂಟಕ ಬರುತ್ತದೆಂದು ಜ್ಯೋತಿಷಿಗಳು ಹೇಳಬೇಕಾದ ಅಗತ್ಯವಿರಲಿಲ್ಲ. ಎಲ್ಲರಿಗೂ ಗೊತ್ತಿದ್ದ ವಿಷಯವಿದು. ಯಾಕೆ ಕರ್ನಾಟಕ ಮಾತ್ರ? ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಈ ಪರಿಯ ಸೊಬಗಿಲ್ಲ? ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಡಳಿತದ ಕನಸು ಕಾಣುವಷ್ಟೂ ಶಾಸನ ಸಭೆಯ ಪ್ರಾತಿನಿಧ್ಯ ಭಾಜಪಕ್ಕಿಲ್ಲ. ತಮಿಳುನಾಡಿನ ಫಲಿತಾಂಶ ಭಾಜಪಕ್ಕೆ ಸಿಹಿ ನೀಡಿಲ್ಲ. ಕೇರಳದಲ್ಲಿ ಯುಡಿಎಫ್, ಎಲ್‌ಡಿಎಫ್‌ಗಳಿವೆಯೇ ಹೊರತು ಶಬರಿಮಲೆಯ ಅನುಗ್ರಹವಿದ್ದರೂ ಕೇಸರಿಪಡೆ ಇನ್ನೂ ತಯಾರಾಗಿಲ್ಲ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸ್ಥಳೀಯ ಪಕ್ಷಗಳ ಎದುರು ಭಾಜಪವೂ ಸೋತಿದೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಯಾವ ಜೋಕುಮಾರಸ್ವಾಮಿ ಕರೆದರೂ ಆಡಳಿತ ಪಕ್ಷದ ಮಂದಿ ಇಷ್ಟು ಬೇಗ ಗಂಡನನ್ನು ಬಿಟ್ಟು ಓಡುವವರಲ್ಲದಿರಬಹುದು.

ಪ್ರಾಯಃ ದೇಶದಲ್ಲಿ ಅತೀ ಭ್ರಷ್ಟ ವರ್ಗವಿದ್ದರೆ ಅದು ಜನಪ್ರತಿನಿಧಿಗಳದ್ದೇ. ಇತರ ಎಲ್ಲ ಇಲಾಖೆಗಳನ್ನು ಮೀರಿಸುವ ಧನಸಂಪಾದನೆ ರಾಜಕೀಯ ಅಧಿಕಾರದಲ್ಲಿದೆಯೆಂದೇ ಕೋಟಿಗಟ್ಟಲೆ ವೆಚ್ಚ ಮಾಡಿ ಕಳ್ಳಾತಿಕಳ್ಳರು ಚುನಾವಣೆಗಿಳಿಯುತ್ತಾರೆ. ಶಾಸಕರನ್ನು, ಸಂಸದರನ್ನು ಬೈಯ್ಯುವುದಕ್ಕೆ ಕೆಟ್ಟ ಸಂಸದೀಯ ಪದಪ್ರಯೋಗ ಮಾಡುವಂತಿಲ್ಲ. ಹಕ್ಕುಚ್ಯುತಿಯೆಂಬ ಸರ್ವಾಧಿಕಾರ ಅವರಲ್ಲಿದೆ. ಇದನ್ನು ಎದುರಿಸಿ ನ್ಯಾಯಾಲಯಗಳಲ್ಲಿ ಅವರಿಗೆ ಸವಾಲೆಸೆಯುವ ಆರ್ಥಿಕ ಶಕ್ತಿ ಎಲ್ಲರಿಗಿಲ್ಲ. ಜನರು ಪ್ರಾಮಾಣಿಕರಾಗಿದ್ದರೆ ಜನಪ್ರತಿನಿಧಿಗಳೂ ಪ್ರಾಮಾಣಿಕರಾಗಿರುವ ಸಾಧ್ಯತೆಯಿದೆ. ಆದರೆ ಎಲ್ಲಿ ವಿದ್ಯಾವಂತರು, ವೃತ್ತಿಪರರು, ಬುದ್ಧಿವಂತರು ಸೇರಿದಂತೆ ಶೇ.90ಕ್ಕೂ ಹೆಚ್ಚು ಪ್ರಜೆಗಳು ದೇಶಕ್ಕಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ಸ್ವಂತ ಕುಟುಂಬ/ಸಂಸಾರ ದೊಡ್ಡದು ಮತ್ತು ಇವೆಲ್ಲವುಗಳಿಗಿಂತ ತಾನು ದೊಡ್ಡವನು/ಳು, ಮತ್ತು ತನಗೂ ಮೀರಿದ್ದು ಹಣಸಂಪಾದನೆಯೆಂಬ ಪ್ರಮೇಯವನ್ನು ಬೇಷರತ್ತಾಗಿ ಒಪ್ಪಿಕೊಂಡಿದ್ದಾರೋ ಅಲ್ಲಿ ಅಧಿಕಾರವೆಂಬ ಹಾವು-ಏಣಿಯಾಟ ಅನಿವಾರ್ಯ ಮತ್ತು ಇಂಗ್ಲಿಷಿನ beg, borrow or steal, make money(ಬೇಡು, ಸಾಲ ಮಾಡು, ಅಥವಾ ಕದಿ, ಅಂತೂ ಹಣ ಮಾಡು ಎಂಬುದು ಧ್ಯೇಯವಾಕ್ಯವಾಗುತ್ತದೆ.

ಆದರೆ ಕರ್ನಾಟಕದ ವಿದ್ಯಮಾನ ಬೇರೆ. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಿಟ್ಟಿಗಿಂತ ಹೆಚ್ಚಾಗಿ ಜಿಗುಪ್ಸೆ ತರಿಸುತ್ತಿವೆ. ಇಲ್ಲಿನ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಅವ್ಯವಹಾರಪಂಡಿತರಾದಂತಿದೆ. ಪ್ರಾಯಃ ಪಕ್ಷದ ನಿರ್ಣಯವನ್ನು ಗೌರವಿಸುವ ಪದ್ಧತಿ ಸದ್ಯ ಅನಿವಾರ್ಯವಾಗಿಯಾದರೂ ಭಾಜಪದಲ್ಲಿ ಮಾತ್ರ ಇದೆಯೆಂದು ಕಾಣಿಸುತ್ತಿದೆ. ಉಳಿದೆಲ್ಲ ಪಕ್ಷಗಳಲ್ಲಿ ಅಧಿಕಾರವಿದ್ದರೆ ಮಾತ್ರ ನಿಷ್ಠೆ. ಸ್ವಂತ ಲಾಭಕ್ಕಾಗಿಯೇ ಪಕ್ಷ. ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭಾಜಪವನ್ನು ಅಧಿಕಾರದಿಂದ ದೂರವಿಟ್ಟು ಶಚಿಯ ಶುಚಿಯನ್ನನುಭವಿಸುವುದಕ್ಕಾಗಿಯೇ ಸುಧರ್ಮಮೈತ್ರಿ ಮಾಡಿಕೊಂಡವು ಎಂಬುದನ್ನು ಈ ಪಕ್ಷಗಳೇ ಒಪ್ಪಿಕೊಂಡಿವೆ. ಕಳೆದ ರಾಜ್ಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದಾಗ, ಜೆಡಿಎಸ್‌ನ ‘ಜೋಕರ್’ತನದ ಅರಿವಿದ್ದೇ ಕಾಂಗ್ರೆಸ್ ತನಗಿದ್ದ ಸುಮಾರು 79 ಸ್ಥಾನಗಳನ್ನು ದೇವೇಗೌಡರ ಪಾದಪದ್ಮಗಳಲ್ಲಿರಿಸಿ ಶರಣಾಯಿತು. ಇದು ಆ ಸಂದರ್ಭದಲ್ಲಿ ಅದರ ಆರ್ಥಿಕ ಉಳಿವಿಗೆ ಅನಿವಾರ್ಯವಾಗಿತ್ತು. ಇದಲ್ಲದಿದ್ದರೆ ಜೆಡಿಎಸ್ ತನ್ನೆಲ್ಲ ನಿರಾಕರಣೆಯ ಹೊರತಾಗಿಯೂ ಭಾಜಪದ ಸಹಾಯದೊಂದಿಗೆ ಸರಕಾರ ಮಾಡುವುದು ಹಗಲಸೂರ್ಯನಷ್ಟೇ ಸ್ಪಷ್ಟವಿತ್ತು. ಇದನ್ನು ಅಳೆದೂ ಸುರಿದೂ ಗಮನಿಸಿದ ಕಾಂಗ್ರೆಸ್ ಕಾಯಿಲೆ ಉಲ್ಬಣಗೊಂಡ ಧೂರ್ತರು ಸಾಯುವುದಾದರೂ ಆದಷ್ಟು ಅಧಿಕಾರ ಮತ್ತು ಅಕ್ರಮಗಳನ್ನು ಸಂಗಮಿಸಿ ಸಂಭ್ರಮಿಸುವ ಇರಾದೆಯಿಂದ ಜೆಡಿಎಸ್‌ನಿಂದ ಬೆಂಬಲ ಕೋರುವ ತನ್ನ ಹಕ್ಕನ್ನು ಕೈಚೆಲ್ಲಿ ಯಥಾನುಶಕ್ತಿ ಲೂಟಿಹೊಡೆಯಲು ನಿಶ್ಚಯಿಸಿದ್ದರಲ್ಲಿ ರಾಜಕೀಯ ತಪ್ಪೇನಿಲ್ಲ. ನೈತಿಕತೆಯ ಪ್ರಶ್ನೆ ಬಿಡಿ, ಅದು ರಾಜಕಾರಣದ ನಿಷೇಧಿತ ವಲಯ.

ಜೆಡಿಎಸ್ ಎಂಬುದನ್ನೂ ರಾಜಕೀಯ ಪಕ್ಷವೆಂದು ಕರೆದಿದ್ದರೆ ಮತ್ತು ಅದು ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿದ್ದರೆ ಅದಕ್ಕೆ ದೇವೇಗೌಡರ ಚಾಣಾಕ್ಷ ರಾಜಕಾರಣ ಮತ್ತು ಈ ರಾಜ್ಯದ ಮಂದಿಯ ಅಪಾರ ಮೂರ್ಖತನದ ಹೊರತು ಇನ್ನೇನೂ ಅಲ್ಲ. ಹಳೇ ಮೈಸೂರಿನ ಕೆಲವೆಡೆ ಜಾತಿಯೇ ಕಾರಣವಾಗಿ ಕೆಲವು ಸ್ಥಾನಗಳನ್ನು ಬಗಲಲ್ಲಿಟ್ಟುಕೊಂಡು ಅಧಿಕಾರದ ವ್ಯಾಪಾರ ಮಾಡುವುದೇ ಈ ಪ್ರಾದೇಶಿಕ ಪಕ್ಷದ ಏಕಮೇವ ಸಿದ್ಧಾಂತ. ಅಧಿಕಾರ ಸಿಗುವುದಾದರೆ ಯಾವುದೇ ಪಕ್ಷದೊಂದಿಗೂ ‘ಎಸ್’ ಎನ್ನುವುದೇ ಒಂದು ಸಿದ್ಧಾತವೆಂಬಂತೆ ಯಶಸ್ವಿಯಾಗಿ ಮಂಡಿಸಿದ ವ್ಯಂಗ್ಯ ಇನ್ನೊಂದಿಲ್ಲ. ಅದೊಂದು ತರಹದ ರೈಲ್ವೇ ಜಂಕ್ಷನ್/ಸೇತುವೆಯಿದ್ದಂತೆ. ಇತ್ತ ಕಾಂಗ್ರೆಸಿನೊಂದಿಗೂ ಬಾಳ್ವೆ ಮಾಡಬಹುದು; ಅತ್ತ ಭಾಜಪದೊಂದಿಗೂ ಬಾಳ್ವೆ ನಡೆಸಬಹುದು. ದೇವೇಗೌಡರಂತೂ ವಸುದೇವನಂತೆ ಮಗನನ್ನು ತಲೆಯ ಮೇಲೆ ಎತ್ತಿ ಹಿಡಿದು ಯಮುನೆಯನ್ನು ದಾಟಿಸಲು ಸದಾ ಸಿದ್ಧ. ಪ್ರಾಯಃ ನಮ್ಮ ಬುದ್ಧಿವಂತರು, ಚಿಂತಕರು ಅದನ್ನು ಸಹಿಸಿಕೊಂಡಿದ್ದರೆ ಅದಕ್ಕೆ ಕಾರಣ ಭಾಜಪದ ಕೋಮು ರಾಜಕಾರಣವನ್ನು ದೂರವಿಡುವುದು ಎಂಬ ಭ್ರಮೆಯೇ ಕಾರಣ.

ಅಂತೂ ಇಷ್ಟು ಕಾಲ ಮೈತ್ರಿ ಸರಕಾರವು ಅಧಿಕಾರವನ್ನು ನಡೆಸಿದ್ದೇ ಅದರ ಸಾಧನೆ. ಭಾಜಪ ಅಧಿಕಾರಕ್ಕೆ ಬಂದಿದ್ದರೆ ಹೇಗಿರುತ್ತಿತ್ತು ಎಂಬುದನ್ನು ಊಹಿಸುವ ಮೊದಲು ಈ ಮೈತ್ರಿಸರಕಾರ ಕರ್ನಾಟಕಕ್ಕೆ ಏನು ನೀಡಿದೆ ಎಂಬುದನ್ನು ಯೋಚಿಸಬೇಕು: ಭ್ರಷ್ಟತೆಯೇ ಮೂಲಮಂತ್ರವಾದ ಸದ್ಯದ ಆಡಳಿತವು ಭಾಜಪದ ಕೋಮುವಾದವನ್ನು ವಿರೋಧಿಸುತ್ತಲೇ ಅದಕ್ಕಿಂತ ತಾವು ಕಡಿಮೆಯೇನಲ್ಲ ಎಂಬಂತೆ ಜಾತಿ ರಾಜಕೀಯ ಮಾಡಿದವರು. ಹಣದ ಮೂಲಕ, ಬಂಧುತ್ವದ ಮೂಲಕ ಕೋಟಿಗಟ್ಟಲೆ ಜನರನ್ನು (ದೇಸಿಯಲ್ಲಿ ಹೇಳುವಂತೆ) ‘ಮಂಗ’ ಮಾಡಿದ್ದನ್ನು ಲೋಕ ಕಂಡಿದೆ. ಭಾರತೀಯ ಜನತಾ ಪಕ್ಷವು ಒಂದು ವೇಳೆ ಅಧಿಕಾರ ಹೊಂದಿದ್ದರೆ ಇದೇ ಭ್ರಷ್ಟತೆಯನ್ನು ಕೋಮುವಾದವೆಂಬ ಸಕ್ಕರೆಪಾಕದಲ್ಲಿ ಅದ್ದಿ ಸವಿಯುತ್ತಿತ್ತು. ಆದ್ದರಿಂದ ರಾಜ್ಯದ ಜನತೆಯ ಪಾಲಿಗೆ ‘ಅತ್ತ ದರಿ ಇತ್ತ ಪುಲಿ’ಯೆಂಬ ನಾಣ್ಣುಡಿಯು ಶತಸಿದ್ಧವಾಗುತ್ತಿತ್ತು.

ಕಳೆದ ಕೆಲವು ವಾರ/ತಿಂಗಳುಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನೇರ-ದಿಟ್ಟ-ನಿರಂತರವಾಗಿ ಲಜ್ಜೆಯನ್ನು ಬಿಟ್ಟಿದ್ದಾರೆ. ಮಂತ್ರಿಪದವಿ ಕೊಡಿ, ಇಲ್ಲವಾದರೆ ತಾವು ರಾಜೀನಾಮೆ ನೀಡುತ್ತೇವೆಂಬ ಬ್ಲ್ಲಾಕ್‌ಮೈಲಿಂಗ್ ದಿನಾ ವರದಿಯಾಗುತ್ತಿತ್ತು. ಇದನ್ನು ಶಮನಗೊಳಿಸಲು ಒಬ್ಬಿಬ್ಬರಿಗೆ ಮಂತ್ರಿಪದವಿ ನೀಡಿದರೆ ತಕ್ಷಣ ಅದು ಇನ್ನೊಂದೆಡೆ ನೆಲಬಾಂಬಿನಂತೆ ಸ್ಫೋಟವಾಗುತ್ತಿತ್ತು. ರಾಜೀನಾಮೆ ನೀಡುವವರು ಮೌಲ್ಯಗಳ ಬಗ್ಗೆ ಮಾತನಾಡುವುದು, ನೈತಿಕತೆಯ ಬಗ್ಗೆ ಮಾತನಾಡುವುದನ್ನು ನೋಡಿದರೆ ವೃತ್ತಿಪರ ವೇಶ್ಯೆಯರೂ ನಾಚಬೇಕು, ಹಾಗಿತ್ತು ವರಸೆ. ಇನ್ನು ಕೆಲವರು ಹತ್ತು ಕೊಟ್ಟರೆ ಇತ್ತ, ಇಪ್ಪತ್ತು ಕೊಟ್ಟರೆ ಅತ್ತ ಎಂಬ ಹಾಗೆ ತಮ್ಮ ಬೆಲೆಯನ್ನು ಷೇರುಮಾರುಕಟ್ಟೆಯಲ್ಲಿ ಪ್ರಕಟಿಸುವುದಷ್ಟೇ ಬಾಕಿಯಿತ್ತು. ಇವರನ್ನು ಸಂಬಾಳಿಸುವುದಕ್ಕೆ ದೇವರಿಗೂ ಸಾಧ್ಯವಿಲ್ಲದಾಗ ಮುಖ್ಯಮಂತ್ರಿಗಳಾಗಲೀ ಅವರ ಹಿರಿಯರಾಗಲೀ ಎಷ್ಟು ಕೊಡಗಟ್ಟಲೆ ಕಣ್ಣೀರು ಹಾಕಿದರೂ ಅದು ಈಗಾಗಲೇ ಅವರು ಸೃಷ್ಟಿಸಿದ ಕೊಚ್ಚೆಯನ್ನು ಸ್ವಚ್ಛಗೊಳಿಸಲಾರದು.

ಕರ್ನಾಟಕದ ಸ್ಥಿತಿ ಅದಲುಬದಲು ಕಂಚೀಕದಲಿನಂತಿದೆ. ಇವರನ್ನು ನೋಡಿ ತಕ್ಕಡಿಯಲ್ಲಿ ಕಪ್ಪೆಗಳು ತಾವೇ ವಾಸಿಯೆಂಬಂತೆ ಸ್ಥಿರವಾಗಿ ಕೂರಲಾರಂಭಿಸಿವೆ. ಎಷ್ಟೇ ಪ್ರಚಾರ ಮಾಡಿದರೂ ಜನಹಿತವೆಂಬುದು ನಾಲ್ಕಾಣೆಯ ಗಿಲಿಟುಗೊಂಬೆಗಳಂತೆ ಕೆಟ್ಟುನಿಂತಿವೆ. ಪಕ್ಷದ ಅನುಯಾಯಿಗಳಷ್ಟೇ ತಮ್ಮ ತಮ್ಮ ಡೊಂಕು ಬಾಲದ ನಾಯಕರನ್ನು ಹೊಗಳುತ್ತಾರೆ. ಸಾಹಿತ್ಯ ಮುಂತಾದ ಸಂವೇದನಾಶೀಲ ಕ್ಷೇತ್ರಗಳ ಸಂಪರ್ಕ, ಸಂಬಂಧವಿದ್ದವರು ಮೇಲ್ಮಟ್ಟದ ರಾಜಕೀಯ ಮಾಡುತ್ತಾರೆಂಬ ಬುದ್ಧಿಜೀವಿಗಳ ಬುದ್ಧಿಹೀನ ನಂಬಿಕೆಯನ್ನು ಬಹಳ ಹಿಂದೆಯೇ ಮೊಯ್ಲಿಯವರು ಸುಳ್ಳು ಮಾಡಿದ್ದರೆ. ಇದೀಗ ಎಚ್. ವಿಶ್ವನಾಥ್ ಬೀದಿಗೆಳೆದು ಬಯಲು ಮಾಡಿದ್ದಾರೆ!

ಇವೆಲ್ಲದರ ನಡುವೆ ಮುಖ್ಯಮಂತ್ರಿಗಳು ‘ಗ್ರಾಮವಾಸ್ತವ್ಯ’ವೆಂಬ ಹಳಸಿದ ತಂತ್ರವನ್ನು ಶುರುಮಾಡಿದರು. ಈ ಗ್ರಾಮವಾಸ್ತವ್ಯಕ್ಕೆ ಕೋಟಿಗಟ್ಟಲೆ ವೆಚ್ಚವಾಗುತ್ತಿತ್ತು. ಬಡವರಿಗೆ ಇದಕ್ಕಿಂತ ಹೆಚ್ಚು ಸಂತೋಷ ನೀಡುವ ವಿದ್ಯಮಾನವೆಂದರೆ ಆಗಸದಲ್ಲಿ ಹಾರಾಡುವ ವಿಮಾನಗಳು. ಹಣೆಗೆ ಕೈಯ್ಯಿಟ್ಟು ಬಿಸಿಲಿನಡಿ ಅವನ್ನು ನೋಡುವ ಬೆರಗಿನಂತೆ ಮಂತ್ರಿಗಳೂ ಅವರೊಂದಿಗೆ ದರ್ಪದ ಅಧಿಕಾರಿಗಳೂ ಅಟ್ಟಹಾಸ ಮಾಡುವ ಬೆಂಬಲಿಗರೂ ಬಂದು ಹೋದರೆಂದರೆ ಊರಿನಲ್ಲಿ ಮಾರಿ ಹಬ್ಬವಾದಂತೆ. ಹೀಗೆ ಗ್ರಾಮ ವಾಸ್ತವ್ಯ ಮಾಡಿದ ಮುಖ್ಯಮಂತ್ರಿಗಳು ತಕ್ಷಣ ಈ ಗ್ರಹಚಾರವನ್ನು ಪರಿಹರಿಸಿಕೊಳ್ಳಲೆಂಬಂತೆ ಅಮೆರಿಕ ವಾಸ್ತವ್ಯ ಮಾಡಿದರು. ಆದರೆ ಅವರ ದುರಾದೃಷ್ಟಕ್ಕೆ ಅವರು ಮಾಯಾಜಿಂಕೆಯನ್ನು ಹಿಡಿಯಲು ಹೋದಾಗ ಇಲ್ಲಿ ಅಧಿಕಾರವೆಂಬ ಸೀತಾಪಹಾರಕ್ಕೆ ಕಳ್ಳಸನ್ಯಾಸಿ ವೇಷದ ದಶಕಂಠಗಳು ಸಿದ್ದವಾದರು. ಆಡಳಿತ ಪಕ್ಷದವರು ಉಟ್ಟ ಪಂಚೆ ಸ್ವಲ್ಪಸ್ವಲ್ಪವೇ ಜಾರತೊಡಗಿತು. ಒಬ್ಬೊಬ್ಬರು ಒಂದೊಂದು ಕಾರಣ, ನೆಪ ನೀಡುತ್ತ ಮುಳುಗುವ ಹಡಗಿನಿಂದ ಹೊರಹೋಗುವ ಹೆಗ್ಗಣಗಳಾದರು. ಭಾಜಪದ ಧುರೀಣರು ತಾವು ಈ ಬೆಳವಣಿಗೆಯ ಹಿಂದೆ ಇಲ್ಲವೆಂದು ‘ಸ್ಪಷ್ಟಪಡಿಸಿದರು’. (ಇದು ಮಾಧ್ಯಮದ ಭಾಷೆ!).

ನಿಜವೇ. ಅವರು ಎಂದೂ ಹಿಂದಿರಲಿಲ್ಲ. ಇದ್ದದ್ದು ಈ ಕುರಿಮಂದೆಯ ಮುಂದೆಯೇ! ಮುಂದಿನ ದಿನಗಳೂ ಕುತೂಹಲಕಾರಿಯೇ. ಮೈತ್ರಿ ಸರಕಾರದ ದಾಂಪತ್ಯವನ್ನು ಕಿಟಿಕಿ ಸಂದಿನಿಂದ ಭಾಜಪ ಕದ್ದು ನೋಡುತ್ತಿದೆ-ಅಲ್ಲ- ಎಲ್ಲರಿಗೂ ಕಾಣುವಂತೆ ತನ್ನ ಸರದಿ ಯಾವಾಗ ಬರುತ್ತದೆಯೆಂದು ಕಾಯುತ್ತಿದೆ. ಆದರೂ ಭಾರತೀಯ ಜನತಾ ಪಕ್ಷದಲ್ಲೂ ಎಲ್ಲವೂ ಸರಿಯಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಪಂಚೆಯೋ ಸಫಾರಿಯೋ, ಹಸಿರೋ ಕೇಸರಿಯೋ ಅಂತೂ ಯಾವುದು ಸರಿ ಎಂದು ಗಡಿಬಿಡಿಯಿಂದ ಓಡಾಡುತ್ತಿದ್ದರೆ ನೇಪಥ್ಯದಿಂದ ಸಂತೋಷ್ ಮತ್ತು ಒಬ್ಬಿಬ್ಬರು ಮಾಜಿ ಮುಖ್ಯಮಂತ್ರಿಗಳು ಇಣುಕುತ್ತಿದ್ದಾರೆ. ಹೈಕಮಾಂಡ್ ಸಂಸ್ಕೃತಿಯ ಕೃತಿಸ್ವಾಮ್ಯವನ್ನು ಕಾಂಗ್ರೆಸಿನಿಂದ ಭಾಜಪವು ಹೈಜಾಕ್ ಮಾಡಿದೆಯಾದ್ದರಿಂದ ಈಗ ಸ್ವದೇಶಿ ಹೈಕಮಾಂಡ್ ಹೇಗೆ ನಿರ್ಧರಿಸುತ್ತದೆ ಎಂಬುದರ ಮೇಲೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೋ ಅಥವಾ ಮಾರ್ಗದರ್ಶಕ ಮಂಡಳಿಯ ನಾಯಕರಾಗುತ್ತಾರೋ ಎಂಬುದು ನಿಂತಿದೆ.

 ಎಲ್ಲ ಪಕ್ಷಗಳೂ ಕುರುಕ್ಷೇತ್ರದಲ್ಲಿ ಬಿದ್ದ ಹೆಣಗಳ ರಾಶಿಯಂತಿರುವ ಆರೂ ಚಿಲ್ಲರೆ ಕೋಟಿ ಪ್ರಜೆಗಳ ಮೇಲೆ ತಮ್ಮ ರತ್ನಸಿಂಹಾಸನವನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿವೆ. ರಾಜೀನಾಮೆ ನೀಡಿದ ಶಾಸಕರೊಬ್ಬರು ತಮ್ಮ ಕ್ಷೇತ್ರದ ಮತದಾರರಲ್ಲಿ ವಿಷಾದವನ್ನು ಹೇಳಿದ್ದಾರೆ. ಈಗಂತೂ ಬಹುಪಾಲು ಈ ಶಾಸಕರು ಗ್ರಾಮವಾಸ್ತವ್ಯದ ಬದಲು ರೆಸಾರ್ಟ್ ವಾಸ್ತವ್ಯದಲ್ಲಿ ತೊಡಗಿದ್ದಾರೆ. ಇದು ಕಳೆದ ದಶಕದಿಂದ ಎಲ್ಲ ಪಕ್ಷದವರೂ ತಮ್ಮ ಶಾಸಕರ ಪಾತಿವ್ರತ್ಯಕ್ಕೆ ಕೊಟ್ಟ ಶ್ಲಾಘನೆ. Politics is the last resort of a scoundrel ಎಂಬ ಉಕ್ತಿಯಲ್ಲಿ last ಬದಲು first ಎಂದು ಬಳಸಿದರೆ ಹೆಚ್ಚು ಪ್ರಸ್ತುತ/ಆಪ್ಯಾಯಮಾನವಾದೀತು!

ಜನಾಭಿಪ್ರಾಯದ ಮೇಲೆ ಆಯ್ಕೆಯಾದವರು ಜನರ ಒಪ್ಪಿಗೆಯಿಲ್ಲದೆ ರಾಜೀನಾಮೆ ನೀಡುವುದು ಕನಿಷ್ಠ ಗೌರವದ ಕೆಲಸವೂ ಅಲ್ಲ. ಅದು ಲಜ್ಜೆಗೇಡಿತನದ ಬೆತ್ತಲೆ ನೃತ್ಯ ಮಾತ್ರವಲ್ಲ, ಹೊಣೆಗೇಡಿತನದ ಗೌರಿಶಂಕರ ಶಿಖರ. ರಾಜಕಾರಣಿಗಳ, ರಾಜಕೀಯ ಪಕ್ಷಗಳ, ಸಮಸ್ಯೆಯೇ ರಾಜ್ಯದ ಸಮಸ್ಯೆಯೆಂದು ಈ ಮಂದಿ ತಿಳಿದುಕೊಂಡಂತಿದೆ.

ಜನರು ಇಂತಹ ಪ್ರತಿನಿಧಿಗಳಿಗೆ ಪಾಠ ಹೇಳುವ ಕಾಲ ಬಂದೀತೇ? ಬಂದರೆ ಯಾವಾಗ? ಕಾನೂನಂತೂ ಇವರನ್ನು ನಿಯಂತ್ರಿಸುವಂತಿಲ್ಲ. ಅವಧಿಪೂರ್ವವಾಗಿ ರಾಜೀನಾಮೆ ನೀಡುವ ಯಾವೊಬ್ಬ ಜನಪ್ರತಿನಿಧಿಯೂ ಪುನಃ ಸ್ಪರ್ಧಿಸದಂತೆ ಕಾನೂನು ಪ್ರತಿಬಂಧಿಸಿದ್ದರೆ ಪ್ರಾಯಃ ಈ ಧೂರ್ತರ್ಯಾರೂ ರಾಜೀನಾಮೆಯ ಪ್ರಶ್ನೆಗೆ ಎರವಾಗದೆ ಬದುಕುತ್ತಿದ್ದರು. ಆದರೆ ನಮ್ಮಲ್ಲಿ ಇಂತಹ ನಾಟಕಗಳಿಗೆ ಟಿಕೆಟು ಖರೀದಿಸಿ ಬರುವ ಮಂದಿಯಿರುವಾಗ ರಾಜಕಾರಣಿಗಳು ಚಿಂತಿಸುವುದಾದರೂ ಯಾಕೆ? ಕತ್ತೆಗೂ ಬೆಲೆಯಿಲ್ಲದಿರುವುದು ಕತ್ತೆಯಂತೆ ಅರಚುವ ಮನುಷ್ಯರಿದ್ದಾಗಲೇ!

ಕ್ರಾಂತಿಯಾಗಬೇಕೆಂದು ಜನರು ಬಯಸಿದರೆ ತಪ್ಪಿಲ್ಲ. ನಾಯಕರ ಹಿಂದೆ ಜನರಿದ್ದರೆ ಅವರು ಅನುಸರಿಸುತ್ತಿದ್ದಾರೋ ಓಡಿಸುತ್ತಿದ್ದಾರೋ ಗೊತ್ತಾಗುವುದಿಲ್ಲ. ಪೊಲೀಸರು ಹಿಂದೆ-ಮುಂದೆ ಇರುವುದು ಅಪರಾಧಿಗಳಿಗೆ ಮತ್ತು ಅಧಿಕಾರಸ್ಥರಿಗೆ ಮಾತ್ರ. ಮೊದಲ ವರ್ಗಕ್ಕೆ ಸೇರಬೇಕಾದವರು ಎರಡನೆಯ ವರ್ಗಕ್ಕೆ ಸೇರಿದಾಗ ಈಗ ಕರ್ನಾಟಕದಲ್ಲಿ ನಡೆಯುತ್ತಿರುವುದು ನಡೆಯಬೇಕಾದ್ದು ನ್ಯಾಯವೇ ಸರಿ. ‘‘ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲ’’ ಎಂದು ಹೇಳಿ ಸಿಂಹಾಸನ ಮೋಹವನ್ನು ಧಿಕ್ಕರಿಸಿ ಅಧಿಕಾರ ವಂಚಿತನಾಗಿ ಅಳಿದ ಆದರೆ ಜನಮನದಲ್ಲಿ ಉಳಿದ ಕರ್ಣ ಎಲ್ಲ ಪ್ರಜೆಗಳಿಗೆ ದೇವರಾಗಬೇಕಾಗಿತ್ತು. ಆದರೆ ಹಾಗಿಲ್ಲ.
‘‘ಕುರುಡು ನಾಯಿ ತಾ ಸಂತೆಗೆ ಬಂತಂತೆ’’ ಎಂದು ಪುರಂದರದಾಸರು ಹೇಳಿದ್ದು, ‘‘ಸದ್ಯಕಿದು ಹುಲುಗರ ಸಂತಿ, ಗದ್ದಲದೊಳಗ್ಯಾಕ ನಿಂತಿ’’ ಎಂದು ಷರೀಫ ಸಾಹೇಬರು ಹೇಳಿದ್ದು ನೆನಪಿಸಿಕೊಂಡು ಮುಸುಕು ಹಾಕಿ ಮಲಗುವುದರ ಹೊರತು ಪ್ರಜೆಗಳಿಗೆ ಸದ್ಯ ಬೇರೆ ದಾರಿಯಿಲ್ಲ. ಒಂದು ವೇಳೆ ಕನಸಿನಲ್ಲಿ ಭಾರತ ಜನನಿಯ ತನುಜಾತೆ ಪ್ರತ್ಯಕ್ಷವಾದರೆ ‘ಜನಪ್ರತಿನಿಧಿಗಳಿವರೇನಮ್ಮ?’ ಎಂದು ಕೇಳಬೇಕು. ಆಗ ಆಕೆ ಉತ್ತರಿಸದೆ ಮಾಯವಾಗುತ್ತಾಳಷ್ಟೇ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top