ಕ್ರಿಕೆಟ್ ವಿಶ್ವದ ಕಪ್ಪು-ಬಿಳಿ

ನಮ್ಮ ಕ್ರೀಡಾಭಿಮಾನ ಹೇಗಿದೆಯೆಂದರೆ, ಭಾರತದ ಆಟಗಾರನೊಬ್ಬ ತಪ್ಪುನಿರ್ಣಯದ ಲಾಭಪಡೆದರೆ ಅದನ್ನು ಮೌನವಾಗಿ ಸ್ವೀಕರಿಸುತ್ತೇವೆ; ಖುಷಿಪಡುತ್ತೇವೆ! ಅದೊಂದು ವಿವಾದಾಂಶವಾಗುವುದೇ ಇಲ್ಲ. ಅದೇ ರೀತಿಯ ತಪ್ಪುನಿರ್ಣಯದ ಲಾಭವನ್ನು ಎದುರಾಳಿ ಇಲ್ಲವೇ ಅನ್ಯ ದೇಶದ ಆಟಗಾರನೊಬ್ಬ ಪಡೆದರೆ ತಕ್ಷಣ ನಮ್ಮ ರಾಷ್ಟ್ರೀಯ ಪ್ರಜ್ಞೆ, ಸ್ವದೇಶಾಭಿಮಾನ ಜಾಗೃತಗೊಳ್ಳುತ್ತದೆ. ಕ್ರಿಕೆಟ್ ಹಿಂದುಳಿಯುತ್ತದೆ.


2019ರ ಕ್ರಿಕೆಟ್ ವಿಶ್ವಕಪ್ ಇಂಗ್ಲೆಂಡಿನ ಪಾಲಾಗಿದೆ. ಅಂತಿಮ ಪಂದ್ಯವು ಹಲವು ಕಾರಣಗಳಿಂದಾಗಿ ಸುದ್ದಿಮಾಡಿತು. ಕೊನೆಯ ಹಂತಕ್ಕೆ ಬರಲಾರದೆಂದು ನಿರೀಕ್ಷಿಸಿದ್ದ ನ್ಯೂಝಿಲ್ಯಾಂಡ್ ಅತಿರಥ-ಮಹಾರಥರನ್ನು ಬಗ್ಗುಬಡಿದು ಸ್ವಲ್ಪ ಅದೃಷ್ಟದ ಬಲವನ್ನೂ ಪಡೆದು ಅಂತಿಮ ಹಂತಕ್ಕೇರಿತು. ಟಾಸ್ ಗೆದ್ದು 241 ರನ್‌ಗಳನ್ನು ಪೇರಿಸಿದರೂ ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ಹೋರಾಟದಿಂದಾಗಿ ಪಂದ್ಯವು ಸಮಪಾಳಿಯಲ್ಲಿ ಕೊನೆಗೊಂಡಿತು. ನಿಯಮಾನುಸಾರ ‘ಸುಪರ್ ಓವರ್’ ಹೋರಾಟದಲ್ಲೂ ಎರಡೂ ತಂಡಗಳು ಸಮಬಲವಾದವು. ಆದರೆ ಹೆಚ್ಚು ಬೌಂಡರಿಗಳನ್ನು ಹೊಡೆದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ನ್ಯೂಝಿಲ್ಯಾಂಡ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕಪ್ಪನ್ನು ಗೆಲ್ಲಬಹುದೆಂಬ ನಿರೀಕ್ಷೆಯನ್ನು ಮೂಡಿಸಿದ್ದ ಆಸ್ಟ್ರೇಲಿಯಾ ಮತ್ತು ಭಾರತ ಉಪಾಂತ್ಯ ಪಂದ್ಯಗಳಲ್ಲಿ ಸೋಲೊಪ್ಪಿಕೊಂಡವು. ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಸೋಲಿಸಿದರೆ ನ್ಯೂಝಿಲ್ಯಾಂಡ್ ಭಾರತವನ್ನು ಸೋಲಿಸಿತು.

ಕ್ರೀಡೆಯನ್ನು ಕ್ರೀಡೆಯಂತೆ ನೋಡಬೇಕೇ ಹೊರತು ಹೋರಾಟದಂತೆ, ಯುದ್ಧದಂತೆ ನೋಡಬಾರದು. ಅದು ವೈರವಲ್ಲ; ಸ್ಪರ್ಧೆ ಮಾತ್ರ. ಸೋಲು ಗೆಲುವು ಸಹಜ; ಅನಿವಾರ್ಯ. ಒಂದು ಪಂದ್ಯವನ್ನು ಅಥವಾ ಒಂದು ಕಪ್ಪನ್ನು ಗೆದ್ದರೆ ಅಥವಾ ಸೋತರೆ ಜಗತ್ತು ಮುಳುಗಿಹೋಗುವುದಿಲ್ಲ. ಅದಕ್ಕಾಗಿಯೇ ಒಲಿಂಪಿಕ್ಸ್ ಕ್ರೀಡೆಯೂ ಸೇರಿದಂತೆ ಎಲ್ಲ ಆಟಗಳೂ ನಿಯತವಾಗಿ ಒಂದೋ, ಎರಡೋ, ನಾಲ್ಕೋ, ಐದೋ ವರ್ಷಗಳಿಗೊಮ್ಮೆ ನಡೆಯುತ್ತವೆ. ಸೋತವರಿಗೆ ಇನ್ನೊಮ್ಮೆ ಗೆಲ್ಲುವ ಅವಕಾಶ ಲಭಿಸುತ್ತದೆ. ಗೆದ್ದವರಿಗೆ ಈ ಗೆಲುವು ಶಾಶ್ವತವಲ್ಲ ಎಂಬ ಅರಿವನ್ನು ಮೂಡಿಸುತ್ತದೆ. (ನಮ್ಮ ರಾಜಕಾರಣಿಗಳಿಗೆ ಇದು ಅರ್ಥವಾಗುವುದೇ ಇಲ್ಲ! ಮಾಧ್ಯಮಗಳಂತೂ ಮಹಾಯುದ್ಧದಂತೆ ‘ಹಣಾಹಣಿ’ ಮುಂತಾದ ಪದಗಳಲ್ಲೇ ಮುಳುಗಿರುತ್ತವೆ!)

ಇಂಗ್ಲೆಂಡ್ ಗೆದ್ದಿದೆ. ಸರಿ. ಮುಂದೆ ನಡೆಯುವ ಸ್ಪರ್ಧೆಯಲ್ಲಿ ಇನ್ನಷ್ಟು ಹೆಚ್ಚು ಸಮರ್ಥವಾಗಿ ಆಡಬೇಕೆಂಬ ಇರಾದೆ ಇತರ ಆಟಗಾರರಿಗಿರಬೇಕು. ಅಭಿಮಾನಿಗಳು ಈ ಸೋಲು-ಗೆಲುವಿನ ಸಿಹಿ-ಕಹಿಗಳ ಯುಗಾದಿಯನ್ನು ಮತ್ತೆ ಆಚರಿಸಲು ಸನ್ನದ್ಧರಾಗಬೇಕು. ಆದರೆ ಈ ಬಾರಿ ವಿಶೇಷವಾಗಿ ಕ್ರಿಕೆಟಿನ ಫಲಿತಾಂಶವು ಅನಗತ್ಯ ಮತ್ತು ಅನವಶ್ಯಕ ಗೊಂದಲಗಳಿಗೆ, ವಾದಗಳಿಗೆ ಕಾರಣವಾಗಿದೆ. ಬೌಂಡರಿಗಳ ಆಧಾರದಲ್ಲಿ ಗೆಲುವನ್ನು ನಿರ್ಧರಿಸಬಾರದೆಂದು ಸಚಿನ್ ತೆಂಡುಲ್ಕರಾದಿಯಾಗಿ ಕ್ರಿಕೆಟ್ ಅಭಿಮಾನಿಗಳ ವಿವಾದ. ಆದರೆ ಒಮ್ಮೆ ಪ್ರಶಸ್ತಿ ಹಂಚಿಕೆಯಾದಮೇಲೆ ಆ ಬಗ್ಗೆ ತಲೆಗೆಡಿಸಿಕೊಳ್ಳಲು ಹೋಗಬಾರದು. ಏಕೆಂದರೆ ಈ ನಿಯಮಗಳು ಸುಪರ್ ಓವರ್‌ನ ಆನಂತರ ಸೃಷ್ಟಿಯಾದದ್ದಲ್ಲ.

ಈ ಮೊದಲು ಅದರ ಬಗ್ಗೆ ಚಕಾರವೆತ್ತದವರು ಒಮ್ಮೆಲೇ ಇಂಗ್ಲೆಂಡಿಗೆ ವರಪ್ರಸಾದವಾದ ಈ ನಿಯಮವನ್ನು ಟೀಕಿಸಿದರೆ ಅದು ಸಮರ್ಥನೀಯವಲ್ಲ. ಎಲ್ಲದಕ್ಕೂ ನಿಯಮಗಳಿವೆ. ಈ ನಿಯಮಗಳು ಸರಿಯೆಂದೇನಿಲ್ಲ. ನಮ್ಮ ರಾಜಕಾರಣಿಗಳು ನಡೆಸುವ ಆಟಗಳು ಬಹುತೇಕ ನೈತಿಕ ಸಮರ್ಥನೆಯಿಲ್ಲದ ಆದರೆ ನಿಯಮಬಾಹಿರವಲ್ಲದ ಆಟಗಳು. ಜೂಜಿನ ನಿಯಮಗಳ ಪ್ರಕಾರ ಪಾಂಡವರು ವನವಾಸ ನಡೆಸಿದರು. ಇವನ್ನು ಕಾಲದ ಪರೀಕ್ಷೆಗೊಳಪಡಿಸುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಜಗನ್ನಿಯಾಮಕನೆಂದು ನಂಬಲಾದ ದೇವರು ಕೂಡಾ ಇದಕ್ಕೆ ಹೊರತಲ್ಲ. ಅಸುರರಿಗೆ ನೀಡಿದ ವರಗಳ ಪರಿಣಾಮ ಘೋರವಾದಾಗ ಅದರ ನಡುವೆಯೇ ಪರಿಹಾರವನ್ನೂ ಹುಡುಕಲಾಯಿತು. ಇಲ್ಲವಾದರೆ ತನ್ನ ಮರಣವು ಹೊರಗೂ ಅಲ್ಲ, ಒಳಗೂ ಅಲ್ಲ, ಹಗಲೂ ಅಲ್ಲ, ಇರುಳೂ ಅಲ್ಲ, ನೆಲದಲ್ಲೂ ಅಲ್ಲ, ಆಕಾಶದಲ್ಲೂ ಅಲ್ಲ, ಮನುಷ್ಯನಿಂದಲೂ ಅಲ್ಲ, ಮೃಗದಿಂದಲೂ ಅಲ್ಲ ಎಂದಿದ್ದ ಹಿರಣ್ಯಕಶಿಪುವಿನ ಸಂಹಾರ ಹೇಗೆ ಸಾಧ್ಯ? ನರಸಿಂಹನ ಮೂಲಕ ಸೂರ್ಯಾಸ್ತದ ಹೊತ್ತಿಗೆ, ಹೊಸ್ತಿಲಲ್ಲಿ, ತೊಡೆಯ ಮೇಲೆ ಮಲಗಿಸಿ ಆತನ ಅಂತ್ಯವಾಯಿತು. ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಕೊನೆಗೆ ಎಲ್ಲದಕ್ಕೂ ಅಂತ್ಯ ಹಾಡುವುದಕ್ಕೆ ಕೆಲವು ನಿಯಮಗಳು ಬೇಕಿವೆ. ಆದರೆ ನಮ್ಮ ಕ್ರೀಡಾಭಿಮಾನಿಗಳು ಇದನ್ನೂ ಚುನಾವಣೆಯಂತೆ ಕಾಣುತ್ತಿ ರುವುದು ದುರಂತ. ಚುನಾವಣೆಯಲ್ಲಾದರೆ ಗೆದ್ದವರ ವಿರುದ್ಧ ಸೋತವರು ಅಕ್ರಮದ ಆರೋಪ ಹೊರಿಸಿ ನ್ಯಾಯಾಲಯದ ಮೆಟ್ಟಲೇರಬಹುದು. ಕ್ರೀಡೆಯಲ್ಲಿ ಈ ಪ್ರವೃತ್ತಿ ಆರಂಭವಾದರೆ ಕ್ರೀಡೆಯೇ ನಿಂತುಹೋಗಬಹುದು.

ಅನೇಕ ಹಾಲಿ, ಮಾಜಿ ಕ್ರಿಕೆಟಿಗರು, ಅಂಪೈರುಗಳು ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿರುವುದು ಸರಿಯಲ್ಲ, ನಿಯಮಗಳ ದೋಷವಿದೆ, ಲೋಪವಿದೆ ಎಂದೆಲ್ಲ ಗದ್ದಲವೆಬ್ಬಿಸಿದರು. ಕಪ್ಪಿನ ಮೇಲೆ ಕೆಸರೆರಚುವುದರ ದೀರ್ಘಾವಧಿ ಪರಿಣಾಮಗಳನ್ನು ಮರೆತು ಫಲಿತಾಂಶವನ್ನು ಕೆದಕಿದರು. ಭಾರತವು ಒಂದೆರಡು ಪಂದ್ಯಗಳ ಹೊರತಾಗಿ ಉಳಿದಂತೆ ಪ್ರಯಾಸದ ಗೆಲುವನ್ನು ಸಂಪಾದಿಸಿದ್ದನ್ನು ನಮ್ಮ ಕ್ರಿಕೆಟ್ ಪ್ರೇಮಿಗಳು ನೆನಪುಮಾಡಿಕೊಳ್ಳದೆ ಭಾರತ ಕಪ್ಪುಗೆಲ್ಲಬೇಕಾದ ತಂಡ ಹಾಗೂ ಅದು ಗೆಲ್ಲದಿರುವುದು ಕ್ರಿಕೆಟಿಗಾದ ಅನ್ಯಾಯ ಎಂಬಂತೆ ಚರ್ಚಿಸುತ್ತಿದ್ದಾರೆ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳೆದುರು ಇನ್ನೇನು ಸೋಲಿನ ದವಡೆಗೆ ಸಿಲುಕಿದೆವೆಂಬಷ್ಟರಲ್ಲಿ ಅದೃಷ್ಟ ನೆರವಾದಂತೆ ಗೆದ್ದೆವು. ಇದನ್ನು ನೆನಪಿಸಿಕೊಂಡರೆ ಲೀಗ್ ಹಂತದಲ್ಲಿ ಮಳೆಕಾರಣವಾಗಿ ಎದುರಾಗದ ಮತ್ತು ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ನ್ಯೂಝಿಲ್ಯಾಂಡ್ ಉಪಾಂತ್ಯದಲ್ಲಿ ಎದುರಾದಾಗ ಗೆಲುವು ಸುಲಭವಲ್ಲವೆಂಬ ಅರಿವು ಭಾರತಕ್ಕಿದ್ದಿದ್ದರೆ ಅಥವಾ ಇನ್ನೇನೋ ಆಗಿದ್ದರೆ ಪರಿಣಾಮ-ಫಲಿತಾಂಶ ಬೇರೆಯಾಗುತ್ತಿತ್ತೇನೋ? (ಈ ‘ರೆ’ಗಳು ಯಾವತ್ತೂ ಇದ್ದದ್ದೇ!)

ಇಂಗ್ಲಿಷ್ ನೆಲದಲ್ಲೂ ಭಾರತೀಯರೇ ಸ್ಟೇಡಿಯಂನಲ್ಲಿ ನೆರೆಯುವ, ಮೆರೆಯುವ, ಅನುಕೂಲ ಭಾರತಕ್ಕಿತ್ತು. ಇಂಗ್ಲೆಂಡ್ ತಂಡದಲ್ಲಿ ಆಫ್ರಿಕನ್ನರಿದ್ದಾರೆ. ಈ ಬಾರಿಯ ಅಂತಿಮ ಪಂದ್ಯದ ಇಂಗ್ಲೆಂಡ್ ತಂಡದ ಆಟಗಾರನಾದ ನ್ಯೂಝಿಲ್ಯಾಂಡ್‌ನಲ್ಲಿ ಹುಟ್ಟಿದ ಬೆನ್ ಸ್ಟೋಕ್ಸ್ ಪಂದ್ಯ ಪುರುಷೋತ್ತಮನೆಂದು ಘೋಷಿಸಿಕೊಂಡರು. ಇವೆಲ್ಲ ಅನಿವಾರ್ಯ ಮತ್ತು ಮಾಮೂಲು. ಹೀಗಿರುವಾಗ ನಮ್ಮವರೆಂದು ಪ್ರೋತ್ಸಾಹಿಸಬೇಕೇ ಹೊರತು ಇತರರನ್ನು ಅಲ್ಲಸಲ್ಲದ ರೀತಿಯಲ್ಲಿ ಟೀಕಿಸಬಾರದು. ಅನೇಕ ಕ್ರಿಕೆಟ್ ಅಭಿಮಾನಿಗಳಿಗೆ ಭಾರತ ಗೆದ್ದರೆ (ಮತ್ತು ಪಾಕಿಸ್ತಾನವನ್ನು ಸೋಲಿಸಿದರೆ) ಮಾತ್ರ ಅದು ಕ್ರಿಕೆಟ್. ಇಲ್ಲವಾದರೆ ಅದು ಪರಮ ಅನ್ಯಾಯ.

ಕ್ರಿಕೆಟ್‌ನಲ್ಲಿ ತಪ್ಪುನಿರ್ಣಯಗಳು ಪ್ರಾಕೃತಿಕ. ಈಗ ತಂತ್ರಜ್ಞಾನ ಬೆಳೆದು ಸಾಮಾನ್ಯ ತಪ್ಪುಗಳು ಸಂಭವಿಸುವುದಿಲ್ಲವಾದರೂ ಇದಕ್ಕೂ ಇತಿಮಿತಿಯಿದೆಯೆಂಬುದನ್ನು ಪಂದ್ಯಗಳು ಸಾಬೀತುಮಾಡಿವೆ. ಪುನರ್ವಿಮರ್ಶೆಯ ಅವಕಾಶಗಳಿಗೂ ಮಿತಿಯಿದೆ. ಹಾಗಿರುವಾಗ ಪ್ರತಿಯೊಂದು ನಿರ್ಣಯಗಳನ್ನೂ ಪರಿಶೀಲಿಸಹೋದರೆ ಯಾವ ಪಂದ್ಯವೂ ಮುಗಿಯಲಾರದು. ಒಂದುವೇಳೆ ಎಲ್ಲವನ್ನೂ ತಂತ್ರಜ್ಞಾನವೇ ನಿರ್ವಹಿಸುವುದಾದರೆ ಮೈದಾನದಲ್ಲಿ ಇಬ್ಬರು ಅಂಪೈರುಗಳ ಅಗತ್ಯವೇ ಇರುವುದಿಲ್ಲ. ರೋಬೋಗಳೇ ಸಾಕು. ತಪ್ಪಾಗುವುದು ಬೇರೆ; ತಪ್ಪು ಮಾಡುವುದು ಬೇರೆ. ನಮ್ಮ ಕ್ರೀಡಾಭಿಮಾನ ಹೇಗಿದೆಯೆಂದರೆ, ಭಾರತದ ಆಟಗಾರನೊಬ್ಬ ತಪ್ಪುನಿರ್ಣಯದ ಲಾಭಪಡೆದರೆ ಅದನ್ನು ಮೌನವಾಗಿ ಸ್ವೀಕರಿಸುತ್ತೇವೆ; ಖುಷಿಪಡುತ್ತೇವೆ! ಅದೊಂದು ವಿವಾದಾಂಶವಾಗುವುದೇ ಇಲ್ಲ.

ಅದೇ ರೀತಿಯ ತಪ್ಪುನಿರ್ಣಯದ ಲಾಭವನ್ನು ಎದುರಾಳಿ ಇಲ್ಲವೇ ಅನ್ಯ ದೇಶದ ಆಟಗಾರನೊಬ್ಬ ಪಡೆದರೆ ತಕ್ಷಣ ನಮ್ಮ ರಾಷ್ಟ್ರೀಯ ಪ್ರಜ್ಞೆ, ಸ್ವದೇಶಾಭಿಮಾನ ಜಾಗೃತಗೊಳ್ಳುತ್ತದೆ. ಕ್ರಿಕೆಟ್ ಹಿಂದುಳಿಯುತ್ತದೆ. ಯಾವ ಅಂಪೈರೂ ರಾಷ್ಟ್ರೀಯತೆಯೋ ರಾಜಕೀಯವೋ ಮತ-ಧರ್ಮವೋ ವರ್ಣವೋ ಕಾರಣವಾಗಿ ಉದ್ದೇಶಪೂರ್ವಕವಾಗಿ ತಪ್ಪುನಿರ್ಣಯವನ್ನು ನೀಡುವುದಿಲ್ಲವೆಂಬ ನಂಬಿಕೆ ಕ್ರೀಡಾಪಟುಗಳಿಗೂ ಕ್ರೀಡಾಭಿಮಾನಿಗಳಿಗೂ ಇರಬೇಕು. (ಅಂಪೈರ್ ಒಬ್ಬನನ್ನು ಪ್ರೇಕ್ಷಕವರ್ಗದವರು ಮತ್ತೆ ಮತ್ತೆ ಟೀಕಿಸುತ್ತಿದ್ದಾಗ ಅಂಪೈರ್‌ಗಳು ಬೌಂಡರಿ ಗೆರೆಯ ಬಳಿ ಬಂದು ನಿಂತರಂತೆ. ಪ್ರೇಕ್ಷಕರೊಬ್ಬರು ಇಲ್ಲಿ ಯಾಕೆ ನಿಂತಿರಿ ಎಂದು ಪ್ರಶ್ನಿಸಿದಾಗ ‘‘ಇಲ್ಲಿಂದಲೇ ನಿರ್ಣಯ ಕೊಡಬಹುದೆಂದು ನೀವೆಲ್ಲ ತೋರಿಸಿಕೊಟ್ಟಿದ್ದೀರಿ’’ ಎಂದರಂತೆ!)

ಹಿಂದೆಲ್ಲ ಅಂಪೈರ್ ತೀರ್ಪಿಗೆ ಪ್ರತಿರೋಧ ತೋರಿಸುವುದು ಅಸಭ್ಯವೆಂಬ ಸಂಸ್ಕೃತಿಯಿತ್ತು. ಆದರೆ ಈಗ ಅವೆಲ್ಲ ಸಹಜವೆಂದಾಗಿದೆ. ಪಂದ್ಯದ ಪ್ರತಿಫಲವಾಗಿ ಭಾರೀ ಹಣಸಂಪಾದನೆಯಾಗುವುದರಿಂದ ಆನಂತರ ತಪ್ಪೊಪ್ಪಿಕೊಂಡರೂ ದಂಡನೆ ಸಾಂಕೇತಿಕವಾಗುವುದರಿಂದ ಅದು ಲೆಕ್ಕಕ್ಕೆ ಸಿಕ್ಕುವುದಿಲ್ಲ. ಯಾರು ಒಳ್ಳೆಯ ಆಟಗಾರನೆಂಬುದೂ ಈಗ ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳಿಂದ ನಿರ್ಣಯವಾಗುತ್ತದೆ. ಮಾಧ್ಯಮಗಳು ಯಾರನ್ನು ಬೇಕಾದರೂ ವೈಭವೀಕರಿಸಿ ಹೀರೋ ಆಗಿಸುತ್ತವೆ. ಭಾರತವಂತೂ ಜಗತ್ತಿನ ಕ್ರಿಕೆಟಿನ ಒಟ್ಟು ಸಂಪಾದನೆಯಲ್ಲಿ ಅಂದಾಜು ಶೇ. 85 ಭಾಗವನ್ನು ನೀಡುವುದರಿಂದ ನಿಯಮಗಳೂ ಅನೇಕ ಬಾರಿ ಭಾರತಕ್ಕೆ ಬೇಕಾದಂತೆ ಸಡಿಲಗೊಳ್ಳುತ್ತವೆಂಬ ಆಪಾದನೆಯೂ ಇದೆ.

ಕ್ರಿಕೆಟ್ ಈಗಲೂ ಕೆಲವೇ ದೇಶಗಳು ಆಡುವ ಕಾಮನ್‌ವೆಲ್ತ್ ಆಟ. ಒಂದು ಕಾಲಕ್ಕೆ ಸಂಭಾವಿತರ, ಸಭ್ಯರ ಆಟ. ಈಗ ಹಾಗೆನ್ನಲು ಹಿಂಜರಿಯಬೇಕಾಗುತ್ತದೆ. ಬ್ರಾಡ್‌ಮನ್ ಯುಗದಲ್ಲಿ ಇಂಗ್ಲೆಂಡ್ ಒಮ್ಮೆ ಆಸ್ಟ್ರೇಲಿಯ ತಂಡವನ್ನು ಸೋಲಿಸಲು ಹೂಡಿದ ‘ಬಾಡಿಲೈನ್’ ಬೌಲಿಂಗ್ ಎಂಬ ಸಂಚು ಕ್ರಿಕೆಟಿನ ಗುಣಮಟ್ಟವನ್ನೇ ಇಳಿಸಿತು. ಆದರೆ ಇಂದು ಅವೂ ಸಭ್ಯವೆನ್ನಿಸುವ ತಂತ್ರಗಳು ನಡೆಯುತ್ತಿವೆ. ಎಲ್ಲಾ ತಂಡಗಳೂ ಎದುರಾಳಿಗೆ ಖೆಡ್ಡಾ ತೋಡುವ ಕೆಲಸವನ್ನು ಮಾಡುತ್ತವೆ. ಕೊಕ್ಕರೆ ಮತ್ತು ನರಿ ಪರಸ್ಪರ ಭೋಜನ ಕೂಟವನ್ನು ಏರ್ಪಡಿಸಿದಂತೆ ಈಗಿನ ಯೋಜನೆಗಳು. ಪಿಚ್ಚನ್ನು ತಮಗೆ ಬೇಕಾದಂತೆ ನಿರ್ಮಿಸುವ ಪ್ರತೀತಿ ಈಗ ಸಾಂಕ್ರಾಮಿಕವಾಗಿದೆ. ಭಾರತಕ್ಕೆ ಬರುವ ತಂಡಗಳು ಸ್ಪಿನ್ ಬೌಲಿಂಗ್ ಎದುರಿಸಲು ಸಾಧ್ಯವಾಗದೆ ಸೋಲುತ್ತಿವೆ. ನಾವು ನ್ಯೂಝಿಲ್ಯಾಂಡ್‌ಗೆ ಹೋದರೆ ಅಲ್ಲಿನ ವೇಗದ ಮತ್ತು ಪುಟಿದೇಳುವ ಪಿಚ್ ನಮಗೆ ಮಾರಕವಾಗುತ್ತಿದೆ. ಹೀಗೆ ರಾಷ್ಟ್ರೀಯ ನೀತಿಗಳು ವಿಶ್ವಸಂಸ್ಥೆಯನ್ನು ಶಿಥಿಲಗೊಳಿಸುತ್ತಿವೆ.

 ಯಾವೊಬ್ಬ ಆಟಗಾರನೂ ಸರ್ವಶ್ರೇಷ್ಠನಲ್ಲ. ಏಕೆಂದರೆ ಗುಡ್ಡಕ್ಕೆ ಗುಡ್ಡ ಅಡ್ಡ ಎಂಬಂತೆ ಎಲ್ಲ ದಾಖಲೆಗಳೂ ಮುರಿಯುವುದಕ್ಕೇ ಇರುವಂಥವು. ಇಂದು ಕ್ರಿಕೆಟ್ ಆಟಗಾರರಿಗಿರುವ ಸವಲತ್ತುಗಳು ಹಿಂದೆ ಇರಲಿಲ್ಲ. ಹೆಲ್ಮೆಟ್ ಕೂಡಾ ಇತ್ತೀಚೆಗಿನ ಸಂಶೋಧನೆ. ಜಾಲತಾಣಗಳಲ್ಲಿ ಜಾಲಾಡುವ, ಬಹಳಷ್ಟು ಮಂದಿಗೆ ಹಿಂದಿನ ತಲೆಮಾರಿನ ಕ್ರಿಕೆಟ್ ಆಟಗಾರರ ಪರಿಚಯವೇ ಇಲ್ಲ. ಸಚಿನ್, ಕೊಹ್ಲಿ ಎಂದು ಹಿಗ್ಗುವ, ಬೀಗುವ ಮಂದಿ 1971ರಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಯಶಸ್ವಿಯಾಗಿ ಎದುರಿಸಿದ ಭಾರತ ಮತ್ತು ಆ ತಂಡದ ಗವಾಸ್ಕರ್ ಕೇವಲ 4 ಪಂದ್ಯಗಳನ್ನು ಆಡಿ 774 ರನ್ ಪೇರಿಸಿದ್ದು ನೆನಪಾಗುವುದಿಲ್ಲ. (ಅದೇ ಪಂದ್ಯ ಶ್ರೇಣಿಯಲ್ಲಿ ದಿಲೀಪ್ ಸರ್ದೇಸಾಯ್ ಎಂಬ ಇನ್ನೊಬ್ಬ ಹಿರಿಯ ಆಟಗಾರ 612 ರನ್ ಪೇರಿಸಿದ್ದರು!) ಆಗ ಹೆಲ್ಮೆಟ್ ಇರಲಿಲ್ಲ. ಗಗನಯಾತ್ರಿಗಳಂತೆ ಧಿರುಸು ಧರಿಸಿ ಆಡಲು ಹೋಗುವ ಇಂದಿನ ಕ್ರಿಕೆಟ್ ಕಲಿಗಳೆಲ್ಲಿ, ಸಾಮಾನ್ಯ ಧಿರುಸಿನ ಮೊಳಕೈವರೆಗೆ ಅಂಗಿಯನ್ನು ಮಡಚಿ ಅಪಾಯಕ್ಕೆ ಮೈತೆರೆದುಕೊಂಡೇ ಆಡುತ್ತಿದ್ದ ಅಂದಿನ ಆಟಗಾರರೆಲ್ಲಿ? ಕ್ರಿಕೆಟ್ ಬ್ಯಾಟನ್ನೂ ಸಂಗೀತದಂತೆ ನುಡಿಸಬಲ್ಲ ಜಿ.ಆರ್.ವಿಶ್ವನಾಥ್ ಅವರಂತಹ ಕ್ರಿಕೆಟ್ ಕಲಾವಿದರೆಲ್ಲಿ? 1983ರ ವಿಶ್ವಕಪ್‌ನ್ನು ನೋಡಿದವರಿಗೆ ಜಿಂಬಾಬ್ವೆಯ ವಿರುದ್ಧ ಕಪಿಲ್ ದೇವ್ 174 ರನ್ ಬಾರಿಸಿದ್ದು, (ಮತ್ತು ಅಂತಿಮ ಪಂದ್ಯದಲ್ಲಿ ಮೈದಾನದಲ್ಲಿ ಸಾಕಷ್ಟು ದೂರ ಓಡಿ ವಿವಿಯನ್ ರಿಚರ್ಡ್ಸ್‌ನ್ನು ಕ್ಯಾಚ್ ಔಟ್ ಮಾಡಿದ ವೈಖರಿ!) ಸಂದೀಪ್ ಪಾಟೀಲ್, ಯಶಪಾಲ್ ಶರ್ಮಾ ತೋರಿದ ದಾಂಡಿಗತನ, ಸದ್ದಿಲ್ಲದೆ ವಿಕ್ರಮಗಳನ್ನು ಸ್ಥಾಪಿಸುತ್ತಿದ್ದ ಮೊಹಿಂದರ್ ಅಮರನಾಥ್ ಅವರಂತಹ ಆಟಗಾರರ ಕಲಾತ್ಮಕತೆ ಇಂದು ಅಪರೂಪವಾಗುತ್ತಿದೆ. ಮೊದಲ ಪಂದ್ಯವನ್ನು ಆಡುವವನೂ ‘ರಿವರ್ಸ್ ಸ್ವೀಪ್’ ಎಂಬ ಅಪ್ಪಟ ಅಪಚಾರದ ಹೊಡೆತವನ್ನು ಪ್ರದರ್ಶಿಸಿ ಔಟಾಗುವುದನ್ನು ಕಾಣುತ್ತೇವೆ. ಬ್ಯಾಟಿಂಗಿನ ಸ್ವರೂಪ ರನ್‌ಗಳಿಕೆಯಷ್ಟೇ ಆಗುವತ್ತ ಬದಲಾಗುತ್ತಿದೆ.

ಇಂದು ಆಟಗಾರರ ಸಂಖ್ಯೆ ಹೆಚ್ಚಿದೆ. ಜನಪ್ರಿಯತೆ ಮತ್ತು ಆರ್ಥಿಕ ಮೌಲ್ಯವೂ ಹೆಚ್ಚಿದೆ. ಭಾರತದಂಥ ದೇಶದಲ್ಲಿ ಡಜನಿಗೂ ಮಿಕ್ಕಿ ಶಕ್ತ ತಂಡಗಳನ್ನು ಕಟ್ಟಬಹುದು. ಕ್ರಿಕೆಟ್ ಆಡಿದರೆ ಎಷ್ಟು ಹಣ ಸಂಪಾದಿಸಬಹು ದೆಂಬ ಯೋಚನೆಯು ನಮ್ಮ ಪುಟ್ಟ ಮಕ್ಕಳಲ್ಲೂ ಆವಿರ್ಭವಿಸುತ್ತಿದೆಯೆಂಬುದೇ ವಿಷಾದದ ಸಂಗತಿ. 2019ರ ಕ್ರಿಕೆಟ್ ವಿಶ್ವಕಪ್ ಭಾರತದ 2019ರ ಚುನಾವಣೆಯಷ್ಟಲ್ಲ ದಿದ್ದರೂ ಸಾಕಷ್ಟು ಸುದ್ದಿಮಾಡಿದೆ. ಭಾರತ ಕ್ರಿಕೆಟ್ ಜಗತ್ತಿನ ಅನಭಿಷಿಕ್ತ ಸಾಮ್ರಾಟನೆಂದು ನಾವು ಹೇಳಿಕೊಳ್ಳುತಿದ್ದುದರಲ್ಲಿ ರಾಷ್ಟ್ರೀಯತೆಯ ಅಸ್ಮಿತೆಯೂ, ಸ್ವಲ್ಪ ಸತ್ಯವೂ ಇತ್ತು. ನಮ್ಮ ಕ್ರಿಕೆಟಿಗರಿಗೆ ಜನತೆ, ಮಾಧ್ಯಮ ಮತ್ತು ಜಾಹೀರಾತು ಇವೆಲ್ಲದರ ಬೆಂಬಲವೂ ಇರುವುದರಿಂದ ಕ್ರಿಕೆಟ್‌ಋತುವಿನಲ್ಲಿ ಅವರು ರಾಜಕಾರಣಿಗಳಿಗಿಂತಲೂ ಹೆಚ್ಚು ಜನಪ್ರಿಯತೆ ಹೊಂದುವ ವರ್ಗವಾಗಿದ್ದಾರೆ. ಆದರೆ ಕಪ್ ಕೈತಪ್ಪಿದ್ದೇ ತಡ, ಇಲ್ಲೂ ಧೋನಿ, ಕೊಹ್ಲಿ ಮುಂತಾದವರನ್ನು ಟೀಕಿಸುವ, ಪರಸ್ಪರ ಎತ್ತಿಕಟ್ಟುವ, ನಾಯಕತ್ವ ಬದಲಾಗಬೇಕೆಂದು ಹೇಳುವ ಚಟ ಬೆಳೆದಿದೆ. ಗೆದ್ದ ದೊಡ್ಡಸ್ತಿಕೆ ಸೋತಾಗಲೂ ಇರಬೇಕು. ತಾವು ಗೆದ್ದರೆ ಸಾವಿರ ವರ್ಷ ಅಧಿಕಾರದಲ್ಲಿರುತ್ತೇವೆಂದು ಭಾವಿಸುವ ರಾಜಕಾರಣಿಗಳೂ ‘‘ಮೊನ್ನೆ ಭಾರತ ಸೋತಾಗ ನಿರಾಶೆಯಾಗಿದೆ ಆದರೂ ಚೆನ್ನಾಗಿ ಆಡಿದ್ದೀರಿ, ಇನ್ನೊಮ್ಮೆ ಗೆಲ್ಲಬಹುದು’’ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ಭಾವನೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸಂಭವಿಸಿದರೆ ಕೊಳಕು ಕಳೆದು ಸ್ವಚ್ಛಭಾರತವೂ ಸ್ವಚ್ಛ ಕ್ರಿಕೆಟೂ ಉಳಿಯಬಹುದೇನೋ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top