ಆದಿವಾಸಿಗಳು ಅಡವಿಯ ಅಂತರ್ಭಾಗವಲ್ಲವೇ?! | Vartha Bharati- ವಾರ್ತಾ ಭಾರತಿ

ಆದಿವಾಸಿಗಳು ಅಡವಿಯ ಅಂತರ್ಭಾಗವಲ್ಲವೇ?!

ಆದಿವಾಸಿಗಳಿಗೆ ಐತಿಹಾಸಿಕವಾಗಿ ಆದ ಅನ್ಯಾಯಗಳನ್ನು ಕೊನೆಗಾಣಿಸಿ ಅವರಿಗೆ ಪೂರ್ತಿ ನ್ಯಾಯ ನೀಡಬೇಕೆಂದು ಭಾರತ ಸರಕಾರ ಬಯಸುತ್ತಿದ್ದಲ್ಲಿ ಯಾವುದೇ ಕಾನೂನುಪರವಾದ ಶರತ್ತುಗಳು ಇಲ್ಲದೆ ಅಡವಿ ಭೂಮಿಗಳನ್ನು, ಇತರ ಅಡವಿ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಬಳಸಿಕೊಳ್ಳುವ ಹಕ್ಕನ್ನು ಅವರಿಗೆ ನೀಡಬೇಕು. ಕಾನೂನುಗಳೊಂದಿಗೆ ಸಂಬಂಧ ಇಲ್ಲದಂತೆ ಅಡವಿಗಳ ಮೇಲೆ ಆದಿವಾಸಿಗಳ ಸಾಮೂಹಿಕ ಹಕ್ಕುಗಳ ಕುರಿತು ನಾವು ಆಲೋಚಿಸಬೇಕಾದ ಅಗತ್ಯ ಇದೆ.

ಅಡವಿಗಳು ಅಳುತ್ತಿವೆ. ಅಡವಿವಾಸಿಗಳು ಆಕ್ರೋಶಗೊಂಡಿದ್ದಾರೆ. ಒಂದಲ್ಲ, ಎರಡಲ್ಲ. ಹತ್ತು ಲಕ್ಷ ಕುಟುಂಬಗಳು ಅಡವಿಗಳಿಂದ ಹೊರಟು ಹೋಗಬೇಕಾದ ಪರಿಸ್ಥಿತಿ ಹೊಂಚು ಹಾಕುತ್ತಿದೆ. ಷೆಡ್ಯೂಲ್ ಬುಡಕಟ್ಟುಗಳ, ಇತರ ಸಾಂಪ್ರದಾಯಿಕ ಅಡವಿ ವಾಸಿಗಳ (ಅಡವಿ ಹಕ್ಕುಗಳ ಅಸ್ತಿತ್ವ) ಕಾನೂನು-2006 (ಸಂಕ್ಷಿಪ್ತವಾಗಿ ಅಡವಿ ಹಕ್ಕುಗಳ ಕಾನೂನು-FRA) ಮೇಲೆ 2019 ಫೆಬ್ರವರಿ 13ರಂದು ದೇಶದ ಸರ್ವೋನ್ನತ ನ್ಯಾಯಾಲಯ ಹೊರಹಾಕಿದ ತೀರ್ಪು ಆದಿವಾಸಿಗಳ ಈ ದುರವಸ್ಥೆಗೆ ಕಾರಣವಾಯಿತು. ಆ ಕಾನೂನು ಪ್ರಕಾರ ಅಡವಿಯಲ್ಲಿ ವಾಸಿಸುವುದಕ್ಕೆ ಅರ್ಹತೆಗಳಿಲ್ಲದವರನ್ನು ಅಡವಿಯಿಂದ ಕಳುಹಿಸಿ ಬಿಡಬೇಕೆನ್ನುವುದು ಸುಪ್ರೀಂ ಕೋರ್ಟ್ ತೀರ್ಪು ಸಾರಾಂಶ.
ಅಡವಿಗಳಲ್ಲಿ ವಾಸಿಸುವುದೇ ಆದಿವಾಸಿಗಳ ಅಪರಾಧವಾಗಿ ಹೋಗಿದೆ. ಸುಪ್ರೀಂ ಕೋರ್ಟ್ ತೀರ್ಪು ಆದಿವಾಸಿಗಳ, ಇತರ ಅಡವಿವಾಸಿಗಳ ಸಹಜ ಹಕ್ಕುಗಳನ್ನು ತುಳಿದು ಹಾಕುವುದೇ ಎಂದು ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾದವು. ಇಷ್ಟರಲ್ಲಿ ಸಾರ್ವತ್ರಿಕ ಚುನಾಚಣೆಗಳು ಬಂದಿದ್ದರಿಂದ ಆ ಪ್ರತಿಭಟನೆಗಳು ನಿಶ್ಯಬ್ದವಾದವು. ಆದಿವಾಸಿಗಳ ಅಸ್ತಿತ್ವಕ್ಕೇ ನುಗ್ಗಿಬಂದಿರುವ ವಿಪತ್ತನ್ನು ರಾಜಕೀಯ ಪಾರ್ಟಿಗಳಷ್ಟೇ ಅಲ್ಲ, ಜನರೂ ಮರೆತು ಹೋದರು. ಮತ್ತೆ ಅಡವಿಗಳಲ್ಲಿ ಭಗ್ಗೆಂದು ಅಶಾಂತಿ ಹೇಗೆ ಆರಿಹೋಗುತ್ತದೆ? ಅದು ಆರಿಹೋಗುವ ಶುಭ ಸೂಚನೆಗಳು ಕಾಣಿಸುತ್ತಿಲ್ಲ.
 ಅಸಲು ಸಮಸ್ಯೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಅಲ್ಲದೆ ಕಾನೂನಿನಿಂದ ಹುಟ್ಟಿ ಕೊಂಡಿದೆ ಎಂದು ನಾನು ಭಾವಿಸುತ್ತಿರುವೆ. ಈ ಕಾನೂನು ಪ್ರಕಾರ 2005 ಡಿಸೆಂಬರ್ 13ರ ಪೂರ್ವದಿಂದ ಅಡವಿಯಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಅವರು ಸಾಗುವಳಿ ಮಾಡಿಕೊಳ್ಳುತ್ತಿರುವ ಭೂಮಿಯ ಮೇಲೆ ಹಕ್ಕು ಇರುತ್ತದೆ. ಇತರ ಸಾಂಪ್ರದಾಯಿಕ ಬುಡಕಟ್ಟಿನವರು ಯಾರಾದರೂ ವಾಸವಿದ್ದರೆ 2005 ಡಿಸೆಂಬರ್ 13ಕ್ಕೆ ಪೂರ್ವದಿಂದ ಮೂರು ಪೀಳಿಗೆಗಳು ಅಲ್ಲಿ ವಾಸಿಸುತ್ತಿರುವುದಾಗಿ ಆಧಾರಗಳನ್ನು ತೋರಿಸಬೇಕು. ಆಗಷ್ಟೇ ಅವರ ಅಧೀನದಲ್ಲಿರುವ ಅಡವಿ ಭೂಮಿಮೇಲೆ ಅವರಿಗೆ ಹಕ್ಕು ಇರುತ್ತದೆ. (ಪೀಳಿಗೆ ಅಂದರೆ 25 ವರ್ಷಗಳು ಎಂದು ಕಾನೂನು ಸ್ಪಷ್ಟಪಡಿಸಿದೆ. ಅಂದರೆ 2005 ಡಿಸೆಂಬರ್ 13ಕ್ಕೆ ಮುನ್ನ 75 ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವವರಾಗಿರಬೇಕು).
ವನ್ಯ ಮೃಗಗಳ ರಕ್ಷಣೆಗೆ ಮೀಸಲಾದ ಎನ್‌ಜಿಒಗಳು ದಾಖಲು ಮಾಡಿದ ಪಿಟಿಶನ್ ಪ್ರಕಾರ ಅಡವಿ ಹಕ್ಕುಗಳ ಕಾನೂನು-2006ರ ಅಡಿ ತಮ್ಮ ಅಡವಿ ಹಕ್ಕುಗಳನ್ನು ಗುರುತಿಸಿರಬೇಕು ಎಂದು 44 ಲಕ್ಷ ದರಖಾಸ್ತುಗಳು ಬಂದಾಗ 23.5ಲಕ್ಷ ದರಖಾಸ್ತುಗಳನ್ನು ತಿರಸ್ಕರಿಸಲಾಯಿತು. ಕೇವಲ 20.5ಲಕ್ಷ ದರಖಾಸ್ತುದಾರರ ಭೂ ಹಕ್ಕುಗಳನ್ನು ಮಾತ್ರವೇ ಗುರುತಿಸಲಾಯಿತು. ಅರ್ಹತೆ ಇಲ್ಲದೇ ಅಡವಿಯಲ್ಲಿ ವಾಸಿಸುತ್ತಿರುವ 10 ಲಕ್ಷಗಳಿಗೂ ಹೆಚ್ಚಿನ ಕುಟುಂಬಗಳನ್ನು ಅಡವಿಯಿಂದ ಖಾಲಿ ಮಾಡಿಸಬೇಕು ಎಂದು ಸುಪ್ರೀಂ ಕೋರ್ಟ್ ಫೆಬ್ರವರಿಯಲ್ಲಿ ರಾಜ್ಯ ಸರಕಾರಗಳಿಗೆ ಸೂಚಿಸಿತು.
ಐತಿಹಾಸಿಕವಾಗಿ, ಮುಖ್ಯವಾಗಿ ಬ್ರಿಟಿಷ್ ವಸಾಹತು ಆಡಳಿತದಲ್ಲಿ ಆದಿವಾಸಿಗಳಿಗೆ ಆದ ಅನ್ಯಾಯಗಳನ್ನು ಕೊನೆಗೊಳಿಸು ವುದಕ್ಕೇ ಅಡವಿ ಹಕ್ಕುಗಳ ಕಾನೂನನ್ನು ತರಲಾಯಿತು. ವಸಾಹತು ದೊರೆಗಳು ತಮ್ಮ ಸ್ವಾರ್ಥಹಿತಾಸಕ್ತಿಗಳಿಗಾಗಿ ವಿವಿಧ ಕಾನೂನುಗಳ ಮೂಲಕ ಅಡವಿಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ಪರಿಣಾಮವಾಗಿ ಆದಿವಾಸಿಗಳಿಗೆ ಅವರ ಜನ್ಮಸಿದ್ಧ ಹಕ್ಕುಗಳನ್ನು ನಿರಾಕರಿಸಿದ್ದಲ್ಲದೆ ಅವರನ್ನು ಅಡವಿಗಳಿಂದ ಹೊರದಬ್ಬುವುದು ಸಹ ನಡೆಯಿತು. ದುರದೃಷ್ಟವಶಾತ್ ಸ್ವತಂತ್ರ ಭಾರತದೇಶದಲ್ಲೂ ಈ ಅನ್ಯಾಯಗಳು ಮುಂದುವರಿದು ಆದಿವಾಸಿ ಹೋರಾಟಗಳನ್ನು ಹತ್ತಿಕ್ಕುವುದಕ್ಕೆ ಮತ್ತಷ್ಟು ಕಠಿಣವಾದ ಕಾನೂನುಗಳನ್ನು ತೆಗೆದುಕೊಂಡು ಬರಲಾಯಿತು.
1980ರ ದಶಕದಲ್ಲಿ ಸಂಯುಕ್ತ ಅರಣ್ಯ ನಿರ್ವಹಣಾ ಪ್ರಾಜೆಕ್ಟ್ ಮೂಲಕ ಅಡವಿ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಪುನರುದ್ಧರಿಸುವುದಕ್ಕೆ ಕೇಂದ್ರ ಸರಕಾರ ಪ್ರಯತ್ನಿಸಿತು. ಆದರೆ ಆ ಪ್ರಾಜೆಕ್ಟ್ ಹಲವು ವಿಧಗಳಲ್ಲಿ ವಿಫಲವಾಯಿತು. ಮುಖ್ಯವಾಗಿ ಅಡವಿಗಳ ಸಂರಕ್ಷಣೆಗೆ ಅನುಸರಿಸಿದ ವಿಧಾನ ಆದಿವಾಸಿಗಳಿಗೆ ವಿರುದ್ಧವಾಗಿತ್ತು. ಅಡವಿ ಸಂಪನ್ಮೂಲಗಳನ್ನು ವಿನಿಯೋಗಿಸಿಕೊಳ್ಳುವುದರಲ್ಲಿ ಅವರ ಸ್ವಾತಂತ್ರಕ್ಕೆ ತೀವ್ರ ಪರಿಮಿತಿಗಳ ವಿಧಿಸಿತು.
1972ರಲ್ಲಿ ತೆಗೆದುಕೊಂಡು ಬಂದ ವನ್ಯಮೃಗಗಳ ಸಂರಕ್ಷಣಾ ಕಾನೂನು ಆದಿವಾಸಿಗಳನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು. ವನ್ಯಮೃಗಗಳ (ಸಂರಕ್ಷಣ) ಸುಧಾರಿತ ಕಾನೂನು-1982 ಅಂತೂ ಆದಿವಾಸಿಗಳನ್ನು ನೇರವಾಗಿ ಅಡವಿಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರು ಎಂದು ಪರಿಗಣಿಸಿತು. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕು ಎಂದರೆ ಆದಿವಾಸಿಗಳನ್ನು ಅಡವಿ ಅಕ್ರಮವಾಗಿ ಆಕ್ರಮಿಸಿಕೊಂಡ ಅಪರಾಧಿಗಳನ್ನಾಗಿ ಮಾಡಿತು. ಈ ಕಾನೂನಿನ ಅಡಿಯಲ್ಲೇ ಅಸಂಖ್ಯ ಆದಿವಾಸಿ ಕುಂಟುಂಬಗಳನ್ನು ಅವರವರ ಅಡವಿ ಭೂಮಿಗಳಿಂದ ಓಡಿಸಿದರು. ಇದು ಅವರನ್ನು ಅನೇಕ ಕಷ್ಟ ನಷ್ಟಗಳಿಗೆ ಗುರಿ ಮಾಡಿತು ಎಂದು ಮತ್ತೆ ಹೇಳಬೇಕಾದ ಅಗತ್ಯ ಇಲ್ಲ.
ಆದಿವಾಸಿ ಪ್ರಾಂತಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಹಸಿವಿನ ಸಾವುಗಳ ಕುರಿತು ಮೀಡಿಯಾಗಳಲ್ಲಿ ಸುದ್ದಿಗಳು ಬರುತ್ತಿ ದ್ದವು. 2005ರಲ್ಲಿ ಒಡಿಶಾದಲ್ಲಿ ಶೇ. 75 ಮಂದಿ ಆದಿವಾಸಿಗಳು ದಾರಿದ್ರರೇಖೆಯ ಕೆಳಗೆ ಬದುಕುತ್ತಿದ್ದಾರೆ ಎಂದು ಅಧಿಕೃತ ವರದಿಗಳೇ ಹೇಳಿದವು. ಈ ಕಟುವಾಸ್ತವಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಕೇಂದ್ರ ಸರಕಾರ 2006ರಲ್ಲಿ ಅಡವಿ ಹಕ್ಕುಗಳ ಕಾನೂನನ್ನು ತೆಗೆದುಕೊಂಡುಬಂದಿತು. ಈ ಕಾನೂನು ಭೂ ಹಕ್ಕುಗಳೊಂದಿಗೆ ಕೆಲವು ವೃಕ್ಷೇತರ ಅಡವಿ ಸಂಪನ್ಮೂಲಗಳ ಮೇಲೆ ಆದಿವಾಸಿಗಳಿಗೆ ಹಕ್ಕು ಕಲ್ಪಿಸಿತು. ಅಡವಿ ಹಕ್ಕುಗಳ ಕಾನೂನಿನ ಕೆಳಗೆ ಸರಕಾರ ಆದಿವಾಸಿಗಳಿಗೆ ತುಂಬಾ ಪರಿಮಿತವಾಗಿ ಹಕ್ಕುಗಳನ್ನಷ್ಟೇ ಕೊಟ್ಟಿತು. ಅಡವಿಗಳಲ್ಲಿನ ಜೀವ ವೈವಿಧ್ಯ ರಕ್ಷಣೆಗೆ, ಪರಿಸರ ಸಮತೋಲನವನ್ನು ಕಾಪಾಡುವುದಕ್ಕೆ ಆದ್ಯತೆ ಕೊಡಬೇಕೆಂದು ಅಧಿಕಾರಿಗಳನ್ನು ಆ ಕಾನೂನು ಎಚ್ಚರಿಸಿತು.
ಆದಿವಾಸಿಗಳಿಗೆ ಕಲ್ಪಿಸಿದ ಹಕ್ಕುಗಳ ಪಟ್ಟಿ ತುಂಬಾ ಸುದೀರ್ಘವಾದುದೇ ಆಗಿದ್ದರೂ ವನ್ಯಮೃಗಗಳ ಆ ವಾಸ ಪ್ರಾಂತಗಳು, ನ್ಯಾಷನಲ್ ಪಾರ್ಕ್‌ಗಳು, ಸ್ಯಾಂಕ್ಚುವರಿಗಳ ಹೆಸರಿನಲ್ಲಿ ತೀವ್ರ ಪರಿಮಿತಿಗಳನ್ನು ನಿರ್ದೇಶಿಸಿದ್ದಾರೆ.
 ಅಡವಿ ಹಕ್ಕುಗಳ ಕಾನೂನು ಜಾರಿ ಪ್ರಕ್ರಿಯೆ ಗ್ರಾಮಸಭೆ ಯೊಂದಿಗೆ ಆರಂಭ ಆಗುತ್ತದೆ. ಅಡವಿಗಳಲ್ಲಿನ ಯಾವುದಾದರೂ ಒಂದು ಭೂ ಭಾಗವನ್ನು ಇಲ್ಲವೇ ಮತ್ತೆ ಯಾವುದಾದರೂ ಅಡವಿ ಸಂಪನ್ಮೂಲದ ಮೇಲೆ ತನಗೆ ಹಕ್ಕು ಕಲ್ಪಿಸಬೇಕೆಂದು ಯಾರಾದರೂ ಒಬ್ಬ ಆದಿವಾಸಿ ಗ್ರಾಮ ಸಭೆಯನ್ನು ಕೋರಿದ್ದಲ್ಲಿ, ಆತ/ಆಕೆಯ ಮನವಿಯನ್ನು ಸಬ್‌ಡಿವಿಜನಲ್ ಕಮಿಟಿಗೆ, ಆ ಬಳಿಕ ಜಿಲ್ಲಾ ಮಟ್ಟದ ಕಮಿಟಿಗೆ, ಆ ಬಳಿಕ ಗ್ರಾಮ ಸಭೆಗೆ ಶಿಫಾರಸು ಮಾಡುತ್ತದೆ. ಸಬ್‌ಡಿವಿಜನಲ್ ಇಲ್ಲವೇ ಜಿಲ್ಲಾ ಮಟ್ಟದ ಕಮಿಟಿ ಮನವಿಯನ್ನು ಅಂಗೀಕರಿಸಿದೇ ಹೋಗಬಹುದು.
ಅಡವಿ ಹಕ್ಕುಗಳ ಕಾನೂನಿನಲ್ಲಿನ ಸಮಸ್ಯಾತ್ಮಕ ಅಂಶ ಏನೆಂದರೆ ತಮ್ಮ ಅರ್ಹತೆಗಳನ್ನು ನಿರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಆದಿವಾಸಿಗಳ ಮೇಲೆ ಇಡುವುದು. ತಮ್ಮ ಕುಟುಂಬ ಅಡವಿಯಲ್ಲೇ ವಾಸಿಸುತ್ತಿದೆ ಎಂದು, ತಲೆತಲೆಮಾರುಗಳಿಂದ ಅಡವಿ ಮೇಲೆ ಆಧಾರಗೊಂಡಿದೆ ಎಂದು ಆತ/ಆಕೆ ಸಾಬೀತು ಮಾಡಬೇಕಾಗಿ ರುತ್ತದೆ. ಕೊನೆ ಪಕ್ಷ ತಮ್ಮ ಕುಟುಂಬ ಸ್ವಾತಂತ್ರಕ್ಕೆ ಪೂರ್ವದಲ್ಲೇ ಅಡವಿಯಲ್ಲಿ ಶಾಶ್ವತ ನಿವಾಸ ಏರ್ಪಡಿಸಿಕೊಂಡಿತ್ತೆಂದು ಸಾಬೀತು ಮಾಡಬೇಕಾಗಿರುತ್ತದೆ. ವಸಾಹತು ದೊರೆಗಳು ನಿರ್ವಹಿಸಿದ ಜನಗಣತಿ ವಿವರಗಳು, ಎಥ್ನೋಗ್ರಾಫಿಕ್ ನೋಟ್ಸ್ ಸಮೇತ ಕಾನೂನು ಹೇಳಿದ ಸಾಕ್ಷಗಳ ಪಟ್ಟಿಯೊಳಗಿಂದ ಯಾವುದೇ ಒಂದನ್ನಾದರೂ ಆದಿವಾಸಿಗಳು ಆಯ್ಕೆ ಮಾಡಿಕೊಳ್ಳಬಹುದು.


ಅಸಲು ವಾಸ್ತವ ಏನೆಂದರೆ ಆದಿವಾಸಿಗಳಿಗೆ ಸಂಬಂಧಿಸಿದ ಖಚಿತವಾದ ಅಂಕಿ-ಅಂಶಗಳು ಇಂದಿಗೂ ಇಲ್ಲ. ಸ್ವಾತಂತ್ರ ಬಂದಾಗ ದೇಶಾದ್ಯಂತ 354 ಆದಿವಾಸಿ ಬುಡಕಟ್ಟುಗಳು ಇರುವುದಾಗಿ ಗುರುತಿಸಿದ್ದರು. ಈಗ ಅದು 705ಕ್ಕೆ ಬೆಳೆದಿದೆ. ಮತ್ತಷ್ಟು ಮುಖ್ಯವಾದ ವಿಷಯ ಏನೆಂದರೆ ಆದಿವಾಸಿಗಳು ಇತ್ತೀಚಿನವರೆಗೆ ನಿರಂತರ ಸಂಚಾರಿಗಳಾಗಿ ಇರುತ್ತಿದ್ದವರು. ಅವರು ತಮ್ಮ ವಾಸಸ್ಥಳ ಇದು ಎಂದು ನಿರ್ದಿಷ್ಟವಾಗಿ ಹೇಗೆ ಹೇಳಬಲ್ಲವರಾಗುತ್ತಾರೆ? ಸಂಬಂಧಿತ ದೃಢೀಕರಣ ಪತ್ರವನ್ನು ಯಾರಿಂದ ಪಡೆಯಬಲ್ಲರು? ಈ ಸಂಕೀರ್ಣತೆಯಿಂದಲೇ ಸುಮಾರು ಅರ್ಧದಷ್ಟು ಅರ್ಜಿಗಳು ತಿರಸ್ಕರಿಸುವುದು ನಡೆಯಿತು.
ಅಡವಿಗಳಲ್ಲಿ ಆದಿವಾಸಿಗಳ ಅಸ್ತಿತ್ವ ಮಾವೋಯಿಸ್ಟ್ ರಾಜಕೀಯಗಳಿಗೆ ಪ್ರೋತ್ಸಾಹಿಸುತ್ತದೆ ಎಂಬ ಅಭಿಪ್ರಾಯ ಅಧಿಕಾರ ವರ್ಗಗಳಲ್ಲಿ ಗಟ್ಟಿಯಾಗಿದೆ. ಬಹಳ ಮಂದಿ ಆದಿವಾಸಿಗಳು ಮಾವೋಯಿಸ್ಟ್‌ರಿಗೆ ಸಹಾನುಭೂತಿಪರರಾಗಿ ವ್ಯವಹರಿಸುತ್ತಿದ್ದು, ಈ ಕಾರಣದಿಂದಲೇ ಆದಿವಾಸಿಗಳನ್ನು ಅಡವಿಗಳಿಂದ ಖಾಲಿ ಮಾಡಿಸಬೇಕು ಎಂದು ರೆವಿನ್ಯೂ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಪೊಲೀಸ್ ಅಧಿಕಾರಿಗಳು ಒತ್ತಾಯಿಸುವುದು ನಡೆಯುತ್ತಿದೆ.
 ಆ ಮಾತಿಗೆ ಬಂದರೆ ಆದಿವಾಸಿಗಳ ಸಮಸ್ಯೆಗಳ ಪರಿಹಾರದ ವಿಷಯದಲ್ಲಿ ರೆವಿನ್ಯೂ, ಅರಣ್ಯ ಇಲಾಖೆ ಅಧಿಕಾರಿಗಳು ತುಂಬಾ ನಿರ್ಲಕ್ಷದಿಂದ ವ್ಯವಹರಿಸುತ್ತಿದ್ದಾರೆ. ಅತ್ಯಂತ ‘ಆದಿಮ’ ಬುಡಕಟ್ಟುಗಳ ನಿವಾಸ ಹಕ್ಕುಗಳು ಗುರುತಿಸುವುದು, ದೇಶಾದ್ಯಂತ 85.6 ಮಿಲಿಯನ್ ಎಕರೆಗಳಲ್ಲಿ ವಿಸ್ತರಿಸುವ ಅಡವಿಗಳಲ್ಲಿ (ಅಡವಿ) ಗ್ರಾಮಗಳನ್ನು ರೆವಿನ್ಯೂ ಗ್ರಾಮಗಳನ್ನಾಗಿ ಬದಲಿಸುವುದು ಮೊದಲಾದವು ಅಡವಿ ಹಕ್ಕುಗಳ ಕಾನೂನಿನ ಗುರಿಗಳಾಗಿವೆ. ಆದರೆ ಈ ಕಾನೂನನ್ನು ಕೇವಲ ಶೇ. 3 ಅಡವಿ ಪ್ರದೇಶಗಳಲ್ಲಿ ಮಾತ್ರವೇ ಜಾರಿಮಾಡುವ ಪ್ರಕ್ರಿಯೆ ನಡೆದಿದೆ. ಕಾನೂನಿನ ಜಾರಿಯಲ್ಲಿದ್ದ ನಿರ್ಲಕ್ಷ ಆದಿವಾಸಿಗಳ ಬದುಕಿನ ಮೇಲಿರುವ ಸರಕಾರದ ಉದಾಸೀನಕ್ಕೆ ಕನ್ನಡಿ ಹಿಡಿಯುತ್ತದೆ.
ಭಾರತೀಯ ಪ್ರಜೆಗಳಲ್ಲಿ ಮತ್ಯಾವ ಸಾಮಾಜಿಕ ವರ್ಗದವರಿಗಿಂತ ಆದಿವಾಸಿಗಳೇ ಅತ್ಯಂತ ದುರ್ಭರ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ಗಿರಿಜನರ ಸ್ಥಿತಿಗತಿಗಳ ಮೇಲೆ ಇತ್ತೀಚೆಗೆ ಪ್ರೊಫೆಸರ್ ವರ್ಜಿನಿಯಸ್ ಕ್ಸಾಕ್ಸಾ ನೇತೃತ್ವದಲ್ಲಿನ ಒಂದು ಉನ್ನತ ಮಟ್ಟದ ಸಮಿತಿ ತುಂಬಾ ಆತಂಕಕಾರಿಯಾದ ವಾಸ್ತವಗಳನ್ನು ಹೊರಹಾಕಿತು.
 ಎಲ್ಲಾ ಅಭಿವೃದ್ಧಿ ಸೂಚಿಗಳಲ್ಲೂ ಆದಿವಾಸಿಗಳು ಕಟ್ಟಕಡೆಯ ಸ್ಥಾನದಲ್ಲಿದ್ದರೂ ಕೇಳುವರಿಲ್ಲ ಎಂದು ಕಮಿಟಿ ವರದಿ ಹೇಳಿದೆ. ಮತ್ಯಾವ ಭಾರತೀಯ ಸಾಮಾಜಿಕ ವರ್ಗದವರಿಗಿಂತ ಆದಿವಾಸಿಗಳಲ್ಲೇ ಅನಕ್ಷರತೆ ಅಧಿಕವಾಗಿರುವುದು. ಶಾಲೆಯ ದಾರಿ ಹಿಡಿಯದವರು ಅಧಿಕವೇ. ಹೋದರೂ ಓದನ್ನು ಮಧ್ಯದಲ್ಲೇ ನಿಲ್ಲಿಸಿ ಬಿಡುವವರ ಸಂಖ್ಯೆಯೂ ಹೆಚ್ಚೇ. ಪೋಷಕಾಹಾರದ ಕೊರತೆ, ವಯಸ್ಸಿಗೆ ತಕ್ಕ ವಿಧದಲ್ಲಿ ಶಾರೀರಿಕ ಬೆಳವಣಿಗೆ ಇಲ್ಲದೇ ಹೋಗುವುದು, ಅನಾರೋಗ್ಯ ಆದಿವಾಸಿ ಮಕ್ಕಳನ್ನು ಪೀಡಿಸುತ್ತಿದೆ. ಸಾವುಗಳ ಸಂಖ್ಯೆಯಲ್ಲಿ ಕೂಡಾ ಅಡವಿ ಮಕ್ಕಳದೇ ಮೊದಲಸ್ಥಾನ. ಕಡು ಬಡತನ, ಭೀಕರ ನಿರುದ್ಯೋಗ, ವಲಸೆಗಳು, ಹಸಿವಿನ ಸಾವುಗಳು ಆದಿವಾಸಿಗಳಲ್ಲೇ ಅಧಿಕ. ಮತ್ತೆ ಈ ನತದೃಷ್ಟರಿಗೆ ರಾಜಕೀಯದಲ್ಲಿ ಪಾಲುದಾರಿಕೆ ಅತ್ಯಲ್ಪವಾಗಿರದೇ ಮತ್ತೇನು?
ಆದಿವಾಸಿಗಳಿಂದ ಭಾರತೀಯ ಆಡಳಿತ ವ್ಯವಸ್ಥೆ ಪಡೆಯುತ್ತಿರುವ ಪ್ರಯೋಜನಗಳು ಆದಿವಾಸಿಗಳಿಗೆ ಆಡಳಿತ ವ್ಯವಸ್ಥೆ ಒದಗಿಸುತ್ತಿರುವ ಲಾಭ-ಸಮ ಪ್ರಮಾಣದಲ್ಲಿಲ್ಲ ಎಂದು ಪ್ರೊ. ವರ್ಜಿನಿಯಸ್ ಕ್ಸಾಕ್ಸಾ ನೇತೃತ್ವದಲ್ಲಿನ ಉನ್ನತಮಟ್ಟಸಮಿತಿಯ ವರದಿ ಹೇಳಿದೆ. ಅಡವಿಗಳನ್ನು ನಾಶ ಮಾಡುತ್ತಾರೆ ಎನ್ನುವುದು ಆದಿವಾಸಿಗಳ ಮೇಲೆ ಹಲವರು ಪದೇ ಪದೇ ಮಾಡುತ್ತಿರುವ ಆರೋಪ. ಇದೊಂದು ಸುಳ್ಳು ಆರೋಪ. ಆದರೆ ಈ ಕಟ್ಟುಕಥೆಯನ್ನು ವಸಾಹತು ಆಡಳಿತ ಕಾಲದಿಂದ ಅರಣ್ಯಾಧಿಕಾರಿಗಳು ಗಟ್ಟಿಯಾಗಿ ನಂಬುತ್ತಿದ್ದಾರೆ.
ಸತ್ಯ ಏನು? ಸರಕಾರದ ಅಡವಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಅವನ್ನು ನಿರ್ವಹಿಸಲು ಆರಂಭಿಸಿದ್ದಾಗಿನಿಂದಲೇ ಅಡವಿಯ ಧ್ವಂಸ ಆರಂಭವಾಯಿತು. ವಸಾಹತು ದೊರೆಗಳು ಅಡವಿಗಳನ್ನು ಆರ್ಥಿಕ ಅಸ್ತಿತ್ವಗಳು ಎಂಬಂತೆ ಮಾತ್ರವೇ ನೋಡಿದರು. ಅವುಗಳಿಂದ ಗರಿಷ್ಠ ಆದಾಯವನ್ನು ಹಿಂಡಿಕೊಳ್ಳುವುದಕ್ಕೆ ಮಾತ್ರವೇ ಪ್ರಯತ್ನಿಸಿದರು. ಅಡವಿ ಸಂಪನ್ಮೂಲಗಳ ವ್ಯಾಪಾರಿ ಲೂಟಿಯನ್ನು ಪ್ರೋತ್ಸಾಹಿಸಿದರು. ಅಡವಿ ಭೂಮಿಗಳ ಒಡೆತನದ ಹಕ್ಕುಗಳ ವಿಷಯದಲ್ಲಿ ಆದಿವಾಸಿಗಳಿಗೆ ತೀರದ ಅನ್ಯಾಯ ಮಾಡಿದರು. ಭ್ರಷ್ಟರಾದ ಅರಣ್ಯಾಧಿಕಾರಿಗಳು, ಅಡವಿ ಕಂಟ್ರಾಕ್ಟರ್‌ಗಳು, ಪಟ್ಟಣಪ್ರಾಂತದ ಮರಗಳ್ಳರು ಅಡವಿಗಳನ್ನು ಎಷ್ಟು ಧ್ವಂಸ ಮಾಡಬೇಕೋ ಅಷ್ಟು ಧ್ವಂಸ ಮಾಡಿದ್ದಾರೆ. ಸರಕಾರಗಳು ಕೈಗೊಂಡ ಅಡವಿಗಳ ಸಂರಕ್ಷಣಾ ಪ್ರಾಜೆಕ್ಟ್‌ಗಳು ಗುರಿಸಾಧನೆ ಮಾಡುವುದಿರಲಿ, ಹಲವು ವಿಧಗಳಲ್ಲಿ ಅಡವಿ ನಾಶಕ್ಕೆ ಕಾರಣವಾಗಿವೆ.
ಆದಿವಾಸಿಗಳು ತಮ್ಮ ಸಾಮಾಜಿಕ ಸಂಪ್ರದಾಯಗಳು, ಧಾರ್ಮಿಕ ಆಚಾರಗಳ ಮೂಲಕ ಪರಿಸರ ಸಮತೋಲನವನ್ನು ಕಾಪಾಡುತ್ತಿದ್ದಾರೆ. ಪವಿತ್ರ ಕ್ಷೇತ್ರಗಳು, ಪವಿತ್ರ ಪರ್ವತಗಳ ಭಾವನೆ ಪರಿಸರ ರಕ್ಷಣೆಗೆ ವಿಶೇಷವಾಗಿ ನೆರವಾಗಿದೆ. ಆದಿವಾಸಿಗಳು ಆರಾಧಿಸುವ ಪ್ರತೀ ದೇವತೆ ಯಾವುದೋ ಒಂದು ನಿರ್ದಿಷ್ಟ ಪ್ರಾಣಿ ಅಥವಾ ವೃಕ್ಷದೊಂದಿಗೆ ಬೆಸೆದುಕೊಂಡಿರುತ್ತದೆ. ಪ್ರತಿ ಆದಿವಾಸಿ ಬುಡಕಟ್ಟಿನ ಹೆಸರು ಯಾವುದೋ ಪ್ರಾಣಿ/ವೃಕ್ಷದ ಹೆಸರನ್ನು ಹೋಲುತ್ತದೆ. ತಾವು ಆರಾಧಿಸುವ ದೇವತೆಯೊಂದಿಗೆ ಬೆಸೆದುಕೊಂಡಿರುವ ಪ್ರಾಣಿಯನ್ನು ಕೊಲ್ಲುವುದು ಆಗಲಿ, ಮರವನ್ನು ಕಡಿಯುವುದಾಗಲಿ ಆದಿವಾಸಿಗಳು ಎಂತಹ ಪರಿಸ್ಥಿತಿಯಲ್ಲೂ ಮಾಡುವುದಿಲ್ಲ. ಬಹುತೇಕ ಆದಿವಾಸಿ ಬುಡಕಟ್ಟು ಪ್ರಜೆಗಳು ಹಣ್ಣುಗಳನ್ನು ಮರಗಳಿಂದ ಕೊಯ್ಯುವುದಿಲ್ಲ, ಮರಗಳಿಂದ ಉದುರಿ ಬಿದ್ದವುಗಳನ್ನು ಮಾತ್ರವೇ ತೆಗೆದುಕೊಳ್ಳುವರು. ಅವರು ಮರಗಳನ್ನು ಆರಾಧಿಸುವವರೇ ಹೊರತು ಕಡಿದು ಹಾಕರು.
ದಕ್ಷಿಣ ಏಶ್ಯಾದಲ್ಲಿ ಅಡವಿಗಳಿಗೆ ಹಲವು ಐತಿಹಾಸಿಕ ಹಿನ್ನೆಲೆಗಳು, ಲಾಭಗಳು ಇವೆ ಎಂದು ವಿವಿಧ ಅಧ್ಯಯನಗಳು ದೃಢೀಕರಿಸಿವೆ. ಅವು ವಸತಿ ಪ್ರದೇಶಗಳಾಗಿ ಜೀವನೋಪಾಯದ ಸಂಪನ್ಮೂಲಗಳಿಗಾಗಿ ಉಪಯೋಗ ಬೀಳುತ್ತಿವೆ. ಲೂಟಿಕೋರರಿಗೆ ಅಲ್ಲದೆ, ಪ್ರತಿಭಟನಾಕಾರರಿಗೆ ನೆಲೆಗಳಾಗಿ ಉಪಯೋಗವಾಗುತ್ತಾ ಆಡಳಿತ ವ್ಯವಸ್ಥೆಯ ವಿಸ್ತರಣೆ, ಅತಿಕ್ರಮಣ ಧೋರಣೆಗಳಿಗೆ ನಿಯಂತ್ರಕಗಳಾಗಿವೆ. ಶತಮಾನಗಳಿಂದ ಅಡವಿಗಳಲ್ಲಿ ಬದುಕುತ್ತಿ ರುವ ತಾವು, ತಮ್ಮ ಶಾಶ್ವತನಿವಾಸ ಕುರಿತು ದೃಢೀಕರಿಸಬೇಕಾದ ಅಗತ್ಯವೇನೋ ಆದಿವಾಸಿಗಳಿಗೆ ಅರ್ಥವಾಗುತ್ತಿಲ್ಲ.
ಆದಿವಾಸಿಗಳಿಗೆ ಐತಿಹಾಸಿಕವಾಗಿ ಆದ ಅನ್ಯಾಯಗಳನ್ನು ಕೊನೆಗಾಣಿಸಿ ಅವರಿಗೆ ಪೂರ್ತಿ ನ್ಯಾಯ ನೀಡಬೇಕೆಂದು ಭಾರತ ಸರಕಾರ ಬಯಸುತ್ತಿದ್ದಲ್ಲಿ ಯಾವುದೇ ಕಾನೂನುಪರವಾದ ಶರತ್ತುಗಳು ಇಲ್ಲದೆ ಅಡವಿ ಭೂಮಿಗಳನ್ನು, ಇತರ ಅಡವಿ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಬಳಸಿಕೊಳ್ಳುವ ಹಕ್ಕನ್ನು ಅವರಿಗೆ ನೀಡಬೇಕು. ಕಾನೂನುಗಳೊಂದಿಗೆ ಸಂಬಂಧ ಇಲ್ಲದಂತೆ ಅಡವಿಗಳ ಮೇಲೆ ಆದಿವಾಸಿಗಳ ಸಾಮೂಹಿಕ ಹಕ್ಕುಗಳ ಕುರಿತು ನಾವು ಆಲೋಚಿಸಬೇಕಾದ ಅಗತ್ಯ ಇದೆ. ಸಮಷ್ಟಿ ಹಕ್ಕಿನೊಂದಿಗೆ ಮಾತ್ರವೇ ಅಡವಿ ಸಂಪನ್ಮೂಲಗಳನ್ನು ಅವರು ಸ್ವತಂತ್ರವಾಗಿ ಬಳಸಿಕೊಳ್ಳಬಲ್ಲರು, ವಸಾಹತು ಆಡಳಿತಾನಂತರದ ಸಮಸ್ಯೆಗಳನ್ನು ಮೀರುವುದಕ್ಕೆ, ಅವರು ಕಳೆದುಕೊಂಡ ಹಕ್ಕುಗಳನ್ನು ಪುನರುದ್ಧರಿಸಬೇಕು.
 ಕೃಪೆ: ಆಂಧ್ರ ಜ್ಯೋತಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top