ಆಪರೇಷನ್ ‘ಕಾರ್ಪೊರೇಟ್ ಕಮಲ’ | Vartha Bharati- ವಾರ್ತಾ ಭಾರತಿ

---

ಆಪರೇಷನ್ ‘ಕಾರ್ಪೊರೇಟ್ ಕಮಲ’

ಈ ಪ್ರಕರಣ ಇಡೀ ಭಾರತದೆದುರು ಕರ್ನಾಟಕ ತಲೆತಗ್ಗಿಸುವಂತೆ ಮಾಡಿದೆ. 1970ರ ದಶಕದಲ್ಲಿ ಆಯಾರಾಂ-ಗಯಾರಾಂ ಯುಗದ ಹೇಸಿಗೆ ರಾಜಕಾರಣಕ್ಕೆ ಹರ್ಯಾಣ ಕುಖ್ಯಾತವಾಗಿತ್ತು ಮತ್ತು ಕಾಂಗ್ರೆಸ್ ಪಕ್ಷ ಅತ್ಯಂತ ಲಜ್ಜೆಗೇಡಿಯಾಗಿ ಅಂಥ ಪಕ್ಷಾಂತರಗಳನ್ನು ಪ್ರಚೋದಿಸುತ್ತಿತ್ತು. ಆದರೆ ಇಂದು ಆ ಬಗೆಯ ಕುತಂತ್ರಿ ರಾಜಕಾರಣದ ಕುಖ್ಯಾತಿ ಬಿಜೆಪಿಗೆ ಮತ್ತು ಕರ್ನಾಟಕಕ್ಕೆ ಪ್ರಾಪ್ತವಾಗಿದೆ. ಈ ಅಪಖ್ಯಾತಿಯನ್ನು ಕರ್ನಾಟಕಕ್ಕೆ ಅಂಟಿಸಿದ ಕೀರ್ತಿ ಪ್ರಧಾನವಾಗಿ ಬಿಜೆಪಿಗೂ ಮತ್ತು ಎರಡನೆಯದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭ್ರಷ್ಟ ಶಾಸಕರಿಗೂ ಸೇರುತ್ತದೆ.


ಕರ್ನಾಟಕದ ರಾಜಕಾರಣ ಮತ್ತೊಂದು ‘ಆಪರೇಷನ್ ಕಮಲ’ಕ್ಕೆ ಬಲಿಯಾಗಿದೆ. ಆದರೆ ಈ ಬಾರಿ ಅದರ ಆಯಾಮ ಮತ್ತು ಅದರ ಹಿಂದಿನ ಪ್ರೇರಣೆ ಮತ್ತು ಒತ್ತಾಸೆಗಳು 2008ರಲ್ಲಿ ನಡೆದ ಆಪರೇಷನ್‌ಗಿಂತ ಆಪಾಯಕಾರಿಯಾಗಿದೆ. ಸದ್ಯಕ್ಕೆ ಸ್ಪೀಕರ್ ಅವರು ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಉಳಿದ 11 ಜನರ ರಾಜೀನಾಮೆಯನ್ನು ಇತ್ಯರ್ಥಗೊಳಿಸಿಲ್ಲ. ಹೀಗಾಗಿ ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಪಡಿಸಲು ಸಾಧ್ಯವೇ ಎಂಬುದು ಇನ್ನೂ ಸಂದೇಹವೇ. ಹೀಗಾಗಿ ಬರಲಿರುವ ದಿನಗಳಲ್ಲಿ ಅಲ್ಪಕಾಲದ ರಾಷ್ಟ್ರಪತಿ ಆಳ್ವಿಕೆಗೆ ಕರ್ನಾಟಕ ಬಲಿಯಾದರೂ ಆಶ್ಚರ್ಯವಿಲ್ಲ.

ಈ ಪ್ರಕರಣ ಇಡೀ ಭಾರತದೆದುರು ಕರ್ನಾಟಕ ತಲೆತಗ್ಗಿಸುವಂತೆ ಮಾಡಿದೆ. 1970ರ ದಶಕದಲ್ಲಿ ಆಯಾರಾಂ-ಗಯಾರಾಂ ಯುಗದ ಹೇಸಿಗೆ ರಾಜಕಾರಣಕ್ಕೆ ಹರ್ಯಾಣ ಕುಖ್ಯಾತವಾಗಿತ್ತು ಮತ್ತು ಕಾಂಗ್ರೆಸ್ ಪಕ್ಷ ಅತ್ಯಂತ ಲಜ್ಜೆಗೇಡಿಯಾಗಿ ಅಂಥ ಪಕ್ಷಾಂತರಗಳನ್ನು ಪ್ರಚೋದಿಸುತ್ತಿತ್ತು. ಆದರೆ ಇಂದು ಆ ಬಗೆಯ ಕುತಂತ್ರಿ ರಾಜಕಾರಣದ ಕುಖ್ಯಾತಿ ಬಿಜೆಪಿಗೆ ಮತ್ತು ಕರ್ನಾಟಕಕ್ಕೆ ಪ್ರಾಪ್ತವಾಗಿದೆ. ಈ ಅಪಖ್ಯಾತಿಯನ್ನು ಕರ್ನಾಟಕಕ್ಕೆ ಅಂಟಿಸಿದ ಕೀರ್ತಿ ಪ್ರಧಾನವಾಗಿ ಬಿಜೆಪಿಗೂ ಮತ್ತು ಎರಡನೆಯದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭ್ರಷ್ಟ ಶಾಸಕರಿಗೂ ಸೇರುತ್ತದೆ. ಏಕೆಂದರೆ ಹರ್ಯಾಣ ರೀತಿಯ ಪಕ್ಷಾಂತರವನ್ನು ತಡೆಗಟ್ಟಲು ರಚಿತವಾದ ಪಕ್ಷಾಂತರ ನಿಷೇಧ ಕಾಯ್ದೆಯ ನಿಬಂಧನೆಗಳನ್ನೇ ಗೇಲಿ ಮಾಡುವ ರೀತಿ ಹೇಗೆ ಪಕ್ಷಾಂತರ ಮಾಡಬಹುದೆನ್ನುವುದನ್ನು ಇಡೀ ಭಾರತಕ್ಕೆ ಇಂದು ಬಿಜೆಪಿ ಕಲಿಸಿಕೊಡುತ್ತಿದೆ.

2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರು ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತವನ್ನು ನೀಡಲಿಲ್ಲ. ಸೀಟಿನ ಲೆಕ್ಕದಲ್ಲಿ ಬಿಜೆಪಿಗೆ 104, ಕಾಂಗ್ರೆಸ್‌ಗೆ 80 ಮತ್ತು ಜೆಡಿಎಸ್‌ಗೆ 37 ಸೀಟುಗಳು ಸಿಕ್ಕರೂ, ವೋಟುಗಳ ಲೆಕ್ಕದಲ್ಲಿ ಕಾಂಗ್ರೆಸ್‌ಗೆ ಅತಿಹೆಚ್ಚು ಅಂದರೆ ಶೇ. 38.14ರಷ್ಟು ವೋಟುಗಳು ಲಭಿಸಿದ್ದವು. ಇನ್ನು ಬಿಜೆಪಿಗೆ ಶೇ. 36.34 ಹಾಗೂ ಜೆಡಿಎಸ್‌ಗೆ ಶೇ.18.3ರಷ್ಟು ಮತಗಳು ದಕ್ಕಿದ್ದವು. ಹೀಗಾಗಿ ಜನಬೆಂಬಲದ ಲೆಕ್ಕದಲ್ಲಿ ನೋಡಿದರೆ ಯಾವೊಂದು ಪಕ್ಷಕ್ಕೂ ಶೇ.50ಕ್ಕಿಂತ ಜಾಸ್ತಿ ವೋಟುಗಳಾಗಲೀ ಅಥವಾ ಸೀಟುಗಳಾಗಲೀ ಸಿಕ್ಕಿರಲಿಲ್ಲ. ಅಲ್ಲದೆ ಮೂರೂ ಪಕ್ಷಗಳು ಪರಸ್ಪರ ವಿರುದ್ಧವಾಗಿಯೇ ಸೆಣೆಸಿದ್ದವಾದ್ದರಿಂದ ಚುನಾವಣಾ ಪೂರ್ವ ಮೈತ್ರಿಯೂ ಇರಲಿಲ್ಲ. ಹೀಗಾಗಿ ಇದ್ದ ಒಂದೇ ಒಂದು ಅವಕಾಶವೆಂದರೆ ಯಾವುದಾದರೂ ಎರಡು ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದೇ ಆಗಿತ್ತು. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟು ಸೇರಿ ಕೋಮುವಾದಿ ಬಿಜೆಪಿ ವಿರೋಧದ ನೆಲೆಯಲ್ಲಿ ಮೈತ್ರಿಕೂಟ ಮಾಡಿಕೊಂಡು ಸರಕಾರ ರಚಿಸಲು ರಾಜ್ಯಪಾಲರ ಅನುಮತಿ ಕೋರಿದರು. ಆದರೆ ರಾಜ್ಯಪಾಲರು ಮಾತ್ರ ಅತಿ ಹೆಚ್ಚು ಸೀಟು ಪಡೆದ ಪಕ್ಷವಾದ ಬಿಜೆಪಿಗೆ ಸರಕಾರ ರಚಿಸಲು ಆಹ್ವಾನಿಸಿ ಸದನದಲ್ಲಿ ತಮ್ಮ ಬಹುಮತ ಸಾಬೀತುಪಡಿಸಲು 15 ದಿನಗಳ ಅವಕಾಶ ಮಾಡಿಕೊಟ್ಟರು.

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರು ತಮ್ಮ ಶಾಸಕರ ಸಹಿಗಳೊಂದಿಗೆ ರಾಜ್ಯಪಾಲರಿಗೆ ಸಲ್ಲಿಸಿದ ಕೋರಿಕೆಯ ತಾತ್ಪರ್ಯವೇ ತಮ್ಮ ಪಕ್ಷಗಳು ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂಬುದೇ ಆಗಿತ್ತು. ಅಲ್ಲದೆ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಯಾವುದಾದರೂ ಪಕ್ಷದ ಚಿಹ್ನೆಯಡಿಯಲ್ಲಿ ಶಾಸಕರೊಬ್ಬರು ಆಯ್ಕೆಯಾದರೆ ಆ ಶಾಸಕರು ಆ ಪಕ್ಷದ ವಿಪ್ (ಪಕ್ಷಾದೇಶ) ಅನ್ನು ಮೀರುವಂತಿಲ್ಲ. ಹೀಗಿರುವಾಗ ರಾಜ್ಯಪಾಲರು ಸರಕಾರ ರಚಿಸಲು ಬಿಜೆಪಿಗೆ ಕೊಟ್ಟ ಅವಕಾಶ ಸಾರಾಂಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಶಾಸಕರನ್ನು ಖರೀದಿ ಮಾಡಲು ಕೊಟ್ಟ ಪರವಾನಿಗೆಯೇ ಆಗಿತ್ತು. (ಇದೀಗ ಮತ್ತೆ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಒಂದು ವಾರದ ಸುದೀರ್ಘ ಅವಕಾಶವನ್ನು ಯಡಿಯೂರಪ್ಪನವರಿಗೆ ನೀಡಿದ್ದಾರೆ). 2018ರಲ್ಲಿ ರಾಜ್ಯಪಾಲರ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ ಮಿತ್ರಪಕ್ಷಗಳು ರಾತ್ರೋರಾತ್ರಿಯ ವಿಚಾರಣೆಯಲ್ಲಿ ಬಿಜೆಪಿ ಸರಕಾರ 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂಬ ಆದೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪರಿಣಾಮವಾಗಿ ಎರಡು ದಿನದ ಬಿಜೆಪಿ ಸರಕಾರಕ್ಕೆ ಬಹುಮತ ಇಲ್ಲವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅಧಿಕಾರಕ್ಕೆ ಬಂದಿತು.

ಆದರೆ ಈ ಮೈತ್ರಿ ಸರಕಾರದ ಅಡಿಪಾಯವೇ ಪರಸ್ಪರ ಅನುಮಾನ, ಅವಿಶ್ವಾಸ ಹಾಗೂ ಸಂಕುಚಿತ ಸ್ವಾರ್ಥಗಳಿಂದ ಕೂಡಿತ್ತು. ಕೋಮುವಾದ ವಿರೋಧಿ ನೆಲೆಯು ಈ ಮೈತ್ರಿಯ ಅಡಿಪಾಯ ಎಂದು ಘೋಷಿಸಲಾ ಗಿದ್ದರೂ ಲೋಕಸಭಾ ಚುನಾವಣೆಯ ಫಲಿತಾಂಶವು ಹೇಳುವಂತೆ ಮೈತ್ರಿ ಪಕ್ಷಗಳ ನಡುವಿನ ವೈಷಮ್ಯ ಬಿಜೆಪಿಯ ವಿರೋಧಕ್ಕಿಂತ ಗಟ್ಟಿಯಾಗಿತ್ತು. ಸರಕಾರ ನಡೆಸುವ ಪ್ರಭೃತಿಗಳೇ ದಿನನಿತ್ಯದ ಕಾಲೆಳೆಯುವ ಸರ್ಕಸ್ಸಿನಲ್ಲಿ ತೊಡಗಿದ್ದರಿಂದ ಆಡಳಿತವಾಗಲೀ ಅಭಿವೃದ್ಧಿಯಾಗಲೀ ಕಾಣದೆ ಮೈತ್ರಿಕೂಟವು ಒಳಗಿಂದಲೇ ಬಿರುಕುಬಿಡುತ್ತಿತ್ತು.

ಒಂದು ಸಂಸದೀಯ ಪ್ರಜಾತಂತ್ರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಅಡಳಿತ ರೂಢ ಪಕ್ಷವು ತನ್ನ ಒಳಗಿನ ಬಿಕ್ಕಟ್ಟಿನಿಂದ ಬರ, ಕೃಷಿ ಬಿಕ್ಕಟ್ಟುಗಳಿಂದ ಕಂಗೆಟ್ಟಿರುವ ಜನರಿಗೆ ಪರಿಹಾರವನ್ನು ಒದಗಿಸದ ಮೈತ್ರಿ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಜನರ ಧ್ವನಿಯಾಗಬೇಕಿತ್ತು. ಆದರೆ ಬೆಂಕಿಬಿದ್ದ ಮನೆಯಲ್ಲಿ ಗಳ ಹಿರಿಯುವಂತೆ ಬಿಜೆಪಿಯು ಈ ಬಿರುಕನ್ನು ಬಳಸಿಕೊಂಡು ಸರಕಾರವನ್ನು ಬೀಳಿಸಲು ತನ್ನ ಗಮನವನ್ನು ಕೇಂದ್ರೀಕರಿಸಿತೇ ವಿನಾ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡಲೇ ಇಲ್ಲ. ಚುನಾವಣೆ ನಡೆದ ಮರುದಿನದಿಂದಲೇ ಬಿಜೆಪಿಯು ಮಿತ್ರಪಕ್ಷಗಳ ಶಾಸಕರ ಖರೀದಿಯ ಯತ್ನವನ್ನು ಪ್ರಾರಂಭಿಸಿತ್ತು. ಅಂಥ ಐದಾರು ಪ್ರಯತ್ನಗಳ ನಂತರ ಈ ಬಾರಿ ಕಾಂಗ್ರೆಸ್- ಜೆಡಿಎಸ್‌ನ 15 ಶಾಸಕರನ್ನು ಖರೀದಿ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪರಿಣಾಮವಾಗಿ ಸಮ್ಮಿಶ್ರ ಸರಕಾರ ಪತನಗೊಂಡಿದೆ. ಸಮ್ಮಿಶ್ರ ಸರಕಾರ ಬಿದ್ದಿರಬಹುದು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಇನ್ನೂ ಹಲವು ಸಾಂವಿಧಾನಿಕ ಅಡ್ಡಿಗಳಿವೆ. ಬಿಜೆಪಿಯು ಅವೆಲ್ಲವನ್ನೂ ಸಂವಿಧಾನ ವಿರೋಧಿ ಮಾರ್ಗಗಳಿಂದ ನಿವಾರಿಸಿಕೊಳ್ಳಲು ತೊಡಗಿದೆ. ಇಂತಹ ಸಂದರ್ಭದಲ್ಲಿ ಸ್ಪೀಕರ್, ರಾಜ್ಯಪಾಲ ಅರ್ಥಾತ್ ಕೇಂದ್ರ ಸರಕಾರ ಮತ್ತು ನ್ಯಾಯಾಲಯಗಳ ಪಾತ್ರ ಬಹುಮುಖ್ಯವಾಗುತ್ತದೆ.

1989ರ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಕೊಟ್ಟ ಆದೇಶ, 1985ರ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಸಂವಿಧಾನದ 33-35ನೇ ತಿದ್ದುಪಡಿಗಳು ಮತ್ತು ಆ ಮೂಲಕ ಸೇರ್ಪಡೆಯಾದ 10ನೇ ಶೆಡ್ಯೂಲಿನ ನಂತರದಲ್ಲಿ ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ರಾಜ್ಯಪಾಲರ ಹಾಗೂ ಆ ಮೂಲಕ ಕೇಂದ್ರ ಸರಕಾರದ ಪಾತ್ರ ಕಡಿತಗೊಂಡಿದೆ. ಆದರೆ ಅದರೊಳಗೆ ಕಳ್ಳದಾರಿಯನ್ನು ಹುಡುಕಿಕೊಂಡಿರುವ ಬಿಜೆಪಿ ಬಿಜೆಪಿಯೇತರ ಸರಕಾರ ರಚಿಸಬೇಕೆಂಬ ಜನಾದೇಶವಿದ್ದ ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿ ಪ್ರತಿಪಕ್ಷದ ಶಾಸಕರನ್ನು ಕೊಂಡುಕೊಂಡು, ರಾಜೀನಾಮೆ ಕೊಡಿಸಿ, ಅವರನ್ನು ತಮ್ಮ ಟಿಕೆಟಿನ ಮೂಲಕ ಮತ್ತೆ ಗೆಲ್ಲಿಸಿಕೊಂಡು ಜನಾದೇಶವನ್ನೇ ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬಿಜೆಪಿ ಸರಕಾರಳನ್ನು ರಚಿಸುತ್ತಿದೆ. ಈ ಹೊಸ ಷಡ್ಯಂತ್ರಗಳಿಗೆ ಕುಮ್ಮಕ್ಕಾಗಿ ಆಯಾ ರಾಜ್ಯಪಾಲರು ವರ್ತಿಸುತ್ತಿರುವುದು ಮಾತ್ರವಲ್ಲದೆ ಕೋರ್ಟುಗಳನ್ನೂ ಸಹ ಬಿಜೆಪಿ ತನ್ನ ಷಡ್ಯಂತ್ರಕ್ಕೆ ಬಳಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಹುಟ್ಟಿಕೊಂಡ ಈ ಪರಮ ಭ್ರಷ್ಟ ‘ಆಪರೇಷನ್ ಕಮಲ’ ಮಾದರಿಯನ್ನೇ ಬಿಜೆಪಿಯು ಭಾರತದಾದ್ಯಂತ ಬಳಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿ ಮಾಡುತ್ತಿರುವ ಹೊತ್ತಿನಲ್ಲೇ ಗೋವಾದಲ್ಲಿ ಕಾಂಗ್ರೆಸ್‌ನ 15 ಶಾಸಕರಲ್ಲಿ 10 ಶಾಸಕರು ಅನಾಮತ್ತಾಗಿ ಬಿಜೆಪಿ ಸೇರಿಕೊಂಡರು ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದೊಡನೆ ತೆಲುಗು ದೇಶಂ ಪಕ್ಷಕ್ಕೆ ಸೇರಿದ್ದ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿಯನ್ನು ಸೇರಿಕೊಂಡರು. ಅದಕ್ಕೆ ಮುನ್ನ ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನೇರವಾಗಿ ನೇಮಕವಾಗಿದ್ದ 14 ಸ್ವತಂತ್ರ ಸದಸ್ಯರು ಹಿಂದೆಂದೂ ಇಲ್ಲದಂತೆ ಒಗ್ಗಟ್ಟಿನಿಂದ ಬಿಜೆಪಿಗೆ ಬೆಂಬಲವನ್ನು ಘೋಷಿಸಿಬಿಟ್ಟರು. ಕರ್ನಾಟಕವನ್ನು ಗೆದ್ದುಕೊಂಡ ನಂತರ ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿರುವ ಕಾಂಗ್ರೆಸ್ ಸರಕಾರವನ್ನೂ ಉರುಳಿಸುವ ಕಡೆಗೆ ಬಿಜೆಪಿಯ ಸೈನ್ಯ ಧಾವಿಸುತ್ತಿದೆ. ಭಾರತವನ್ನು ಆದಷ್ಟು ಬೇಗ ಕಾಂಗ್ರೆಸ್ ಮುಕ್ತ ಮಾತ್ರವಲ್ಲ ವಿರೋಧ ಮುಕ್ತ ಮಾಡಬೇಕೆನ್ನುವುದೇ ಬಿಜೆಪಿಯ ಲಕ್ಷ್ಯ.

‘ಒಂದೇ ದೇಶ-ಒಂದೇ ಪಕ್ಷ’ ಎನ್ನುವುದು ಅದರ ಧ್ಯೇಯ. ಅದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯವೇ ಇಲ್ಲದ ಮಾರ್ಗವಿದು. ಎಲ್ಲಾ ಕುತಂತ್ರಗಳು ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ತೇಜಿ ಪಡೆದುಕೊಂಡಿವೆ. ಇತರ ಪಕ್ಷಗಳನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿಯು ಪ್ರಧಾನವಾಗಿ ತನ್ನ ಬತ್ತಳಿಕೆಯಲ್ಲಿರುವ ಧನ ಮತ್ತು ದಂಡಗಳ ಬಲವನ್ನು ಪ್ರಯೋಗಿಸುತ್ತಿದೆ. ಪ್ರತಿಪಕ್ಷಗಳ ಅತೃಪ್ತ ಶಾಸಕರನ್ನು ಸೆಳೆಯುವ ಈ ದೇಶವ್ಯಾಪಿ ಅಶ್ವಮೇಧಕ್ಕೆ ಅದು ಬಳಸಿಕೊಂಡಿರುವುದು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇರುವ ಸಿಬಿಐ, ಐಡಿ ಇತ್ಯಾದಿ ಅಸ್ತ್ರಗಳನ್ನು. ಮೊನ್ನೆ ತೆಲುಗುದೇಶಂ ಪಕ್ಷದಿಂದ ಬಿಜೆಪಿ ಸೇರಿಕೊಂಡ ಮೂರು ಜನ ರಾಜ್ಯಸಭಾ ಸದಸ್ಯರ ಮೇಲೆ ಕಳೆದ ತಿಂಗಳು ತಾನೆ ಸಿಬಿಐ ರೇಡ್ ಆಗಿತ್ತು. ಇನ್ನು ಕರ್ನಾಟಕದ ‘ಅತೃಪ್ತ ಶಾಸಕ’ರಲ್ಲಿ ಬೆಂಗಳೂರಿನ ಶಾಸಕರೆಲ್ಲಾ ಸಾವಿರ ಕೋಟಿಗೆ ಬಾಳುತ್ತಾರೆ. ಅವರಿಗೆ ಬೇಕಿರುವುದು ಬಿಜೆಪಿ ಕೊಡಬಹುದಾದ ಹತ್ತಿಪ್ಪತ್ತು ಕೋಟಿಗಳಲ್ಲ. ಬದಲಿಗೆ ತಾವೀಗಾಗಲೇ ಕಾನೂನುಬಾಹಿರವಾಗಿ ಗಳಿಸಿರುವ ಸಂಪತ್ತಿನ ರಕ್ಷಣೆ. ಅದಕ್ಕೆ ಅಪಾಯ ಬಂದಾಗ ಯಾವ ನಿಯತ್ತೂ ಕೆಲಸ ಮಾಡಲ್ಲ. ಅಂಥವರ ಮೇಲೆ ಬಿಜೆಪಿ ಸಿಬಿಐ ಅಸ್ತ್ರವನ್ನು ಬಳಸಿ ಅವರ ನಿಯತ್ತನ್ನು ಬದಲಿಸುತ್ತಿದೆ.

ಭ್ರಷ್ಟಾಚಾರಿಗಳಿಗೆ ರಕ್ಷಣೆಯೇ ‘ಭ್ರಷ್ಟಾಚಾರ ವಿರೋಧಿ ಬಿಜೆಪಿ’ಯ ಬೆಂಬಲದ ಪ್ರಧಾನ ಮೂಲ! ಉಳಿದಂತೆ ಕರ್ನಾಟಕವನ್ನೂ ಸೇರಿದಂತೆ ದೇಶಾದ್ಯಂತ ಬಿಜೆಪಿ ನಡೆಸುತ್ತಿರುವ ಈ ಪಕ್ಷಾಂತರ ಹೋಮಕ್ಕೆ ಏನಿಲ್ಲವೆಂದರೂ ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿದೆ. ಇದರ ಜೊತೆಗೆ ಮೊನ್ನೆ ತಾನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏನಿಲ್ಲವೆಂದರೂ 27,000 ಕೋಟಿ ರೂ. ಖರ್ಚು ಮಾಡಿದೆ.

ಆದ್ದರಿಂದ ಕೇಳಬೇಕಿರುವ ಮೂಲಭೂತ ಪ್ರಶ್ನೆಯೇನೆಂದರೆ ಇಷ್ಟು ಹಣ ಬಿಜೆಪಿಗೆ ಎಲ್ಲಿಂದ ಬಂತು? ಕೊಟ್ಟವರು ಯಾರು? ಕೊಟ್ಟವರ ಉದ್ದೇಶವೇನು? ಹಾಗೆ ನೋಡಿದರೆ ಇದರಲ್ಲಿ ಅಂತಹ ನಿಗೂಢತೆ ಏನಿಲ್ಲ. ಇತ್ತೀಚೆಗೆ ಎಡಿಆರ್ ಸಂಸ್ಥೆ ಕೊಟ್ಟಿರುವ ವರದಿ ಪ್ರಕಾರ ಎಲೆಕ್ಟೊರಲ್ ಬಾಂಡ್ ಮತ್ತಿತರ ಮಾರ್ಗಗಳ ಮೂಲಕ ದೇಶದ ಮತ್ತು ವಿದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಭಾರತದ ರಾಜಕೀಯ ಪಕ್ಷಗಳಿಗೆ ಚುನಾವಣಾ ದೇಣಿಗೆ ನೀಡಿವೆ. ಅದರಲ್ಲಿ ಶೇ.92 ಭಾಗದಷ್ಟು ದೇಣಿಗೆಯು ಬಿಜೆಪಿಗೆ ಸಂದಿವೆ. ಅಂದರೆ ಲಕ್ಷಾಂತರ ಕೋಟಿ ಸಂಪತ್ತಿನ ಒಡೆತನ ಹೊಂದಿರುವ ಕಾರ್ಪೊರೇಟ್ ಕಂಪೆನಿಗಳಿಗೆ ಬೇರೆಲ್ಲಾ ಪಕ್ಷಗಳಿಗಿಂತ ಬಿಜೆಪಿಯ ಮೇಲೆ ವಿಶ್ವಾಸ ಜಾಸ್ತಿ.

ಏಕೆಂದರೆ ಇಂದು ದೇಶ ವಿದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ಭಾರತದಲ್ಲಿ ತಮ್ಮ ಲಾಭ ಹೆಚ್ಚಿಸಿಕೊಳ್ಳಬೇಕೆಂದರೆ ಇಲ್ಲಿನ ಸಂವಿಧಾನ, ಕಾನೂನುಗಳು ಅಡ್ಡಿಯಾಗಿವೆ. ಅದರಲ್ಲೂ ಈ ದೇಶದ ಭೂ ಹಿಡುವಳಿ, ಅರಣ್ಯ-ಖನಿಜ ಒಡೆತನ ಮತ್ತು ಕಾರ್ಮಿಕ ನೀತಿಗಳು ಕಾರ್ಪೊರೇಟ್ ಕಂಪೆನಿಗಳು ತಮಗೆ ಬೇಕಾದಂತೆ ದೇಶವನ್ನು ಮತ್ತು ಶ್ರಮಜೀವಿಗಳನ್ನು ಶೋಷಣೆ ಮಾಡದಂತೆ ಅಲ್ಪಸ್ವಲ್ಪಬ್ರೇಕ್ ಹಾಕುತ್ತಿವೆ. 1991ರಲ್ಲೇ ಖಾಸಗೀಕರಣ-ಉದಾರೀಕರಣ ಮತ್ತು ಜಾಗತೀಕರಣ ನೀತಿಗಳು ಜಾರಿಗೆ ಬಂದರೂ, ಹಲವಾರು ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಮ್ಯಾಕ್ರೋ ನೀತಿಗಳು ಜಾರಿಗೆ ಬಂದರೂ ಕಾರ್ಮಿಕ, ಭೂಮಿ ಇತ್ಯಾದಿ ವಿಷಯಗಳಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ಬೇಕಾದಂತ ‘ಸುಧಾರಣೆ’ ತರಲು ಸಾಧ್ಯವಾಗಿರಲಿಲ್ಲ. ಒಂದು ಚುನಾವಣಾ ಪ್ರಜಾತಂತ್ರದಲ್ಲಿ ಐದು ವರ್ಷಕ್ಕೊಮ್ಮೆ ಜನರ ಓಟನ್ನು ಕೇಳುವ ಅಗತ್ಯವಿರುವುದರಿಂದ ಇಂತಹ ‘ಬಿಗ್ ಟಿಕೆಟ್’ ಸುಧಾರಣೆ ತರಲು ಯಾವ ಪಕ್ಷವೂ ಮುಂದಾಗಿರಲಿಲ್ಲ. ಮೇಲಾಗಿ 1991ರಿಂದ 2014ರವರೆಗೆ ಯಾವ ಒಂದು ಪಕ್ಷಕ್ಕೂ ನಿಚ್ಚಳ ಬಹುಮತ ಬಂದಿರಲಿಲ್ಲ.

ಕಾರ್ಪೊರೇಟ್ ಬಂಡವಾಳಿಗರ ಹಳೆಯ ನಿಷ್ಠಾವಂತ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ರಾಜಕೀಯದ ಹೂರಣವಿದ್ದದ್ದು ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ, ಒಂದಷ್ಟು ಕೊಟ್ಟಂತೆ ಮಾಡಿ ಉಳಿದಂತೆ ಕಾರ್ಪೊರೇಟ್ ಪರವಾದ ನೀತಿಗಳನ್ನು ಜಾರಿಗೆ ತರುವುದಾಗಿತ್ತು. ಆದರೆ ಈ ಮೋಸ ದಿನಗಳೆದಂತೆ ಜನರೆದುರು ಬಯಲಾಗುತ್ತಾ ಹೋಗುತ್ತಿದೆ ಮತ್ತು ಅದರ ಜನಬೆಂಬಲ ಕುಸಿಯುತ್ತಾ ಹೋಗುತ್ತಿದೆ. ಉಳಿದ ಪಕ್ಷಗಳ ಪರಿಸ್ಥಿತಿಯೂ ಸಹ ಒಟ್ಟಾರೆ ಹೀಗೆಯೇ ಇದೆ. ಹೀಗಾಗಿ ಜನತಂತ್ರದಲ್ಲಿ ಜನರಿಗೆ ವಿಶೇಷವಾಗಿ ಏನನ್ನೂ ಕೊಡದೆಯೂ ಕಾರ್ಪೊರೇಟ್ ಶಕ್ತಿಗಳಿಗೆ ಅತ್ಯಗತ್ಯವಿರುವ ಬದಲಾವಣೆಗಳನ್ನು ತರಬಲ್ಲ ಮತ್ತು ಈ ಹುನ್ನಾರದ ಮೇಲೆ ಜನರ ಗಮನ ಹೋಗದೆ ಯಾವುದಾದರೂ ಉನ್ಮಾದಗಳಲ್ಲಿ ಜನರನ್ನು ಮೈಮರೆಸುವಂತೆ ಮಾಡುವ ಪಕ್ಷವೊಂದು ಕಾರ್ಪೊರೇಟ್ ಬಂಡವಾಳಿಗರಿಗೆ ಅಗತ್ಯವಿತ್ತು.

ಬಿಜೆಪಿಯು ತನ್ನ ಮತೋನ್ಮಾದಿ ರಾಜಕಾರಣದ ಮೂಲಕ ಜನರ ಗಮನವನ್ನು ದಿಕ್ಕುತಪ್ಪಿಸಿ ಕಾರ್ಪೊರೇಟ್ ಸೇವೆ ಮಾಡುವುದನ್ನು 1992ರ ಬಾಬರಿ ಮಸೀದಿ ನಾಶ ಚಳವಳಿ ಮತ್ತು 2002ರ ಗುಜರಾತ್ ನರಹತ್ಯೆ ರಾಜಕಾರಣದಲ್ಲಿ ಸಾಬೀತು ಕೂಡಾ ಮಾಡಿತ್ತು.
ಗುಜರಾತ್ ಅಭಿವೃದ್ಧಿ ಮಾದರಿ ಎಂದರೆ ಇದೇ ಅಲ್ಲವೇ? ಹೀಗಾಗಿ 2009ರ ನಂತರದಲ್ಲಿ ಇತರ ಯಾವುದೇ ಪಕ್ಷಗಳಿಗಿಂತ ನರೇಂದ್ರ ಮೋದಿ ಮತ್ತು ಬಿಜೆಪಿ ಭಾರತದ ಕಾರ್ಪೊರೇಟ್ ಲೋಕದ ಅತ್ಯಂತ ನೆಚ್ಚಿನ ಪಕ್ಷವಾಗಿಬಿಟ್ಟಿತು. ಹೀಗಾಗಿಯೇ 1991ರಲ್ಲಿ ಉದಾರೀಕರಣ ನೀತಿ ಜಾರಿಗೆ ಬಂದ ನಂತರ ಪ್ರಥಮ ಬಾರಿಗೆ 2014ರಲ್ಲಿ ಬಿಜೆಪಿಗೆ ಸ್ವತಂತ್ರವಾಗಿ ಲೋಕಸಭೆಯಲ್ಲಿ ಬಹುಮತ ಬಂದಿತು. ಆದರೂ ಮೋದಿ ಸರಕಾರಕ್ಕೆ 2014-19ರ ನಡುವಿನ ಐದು ವರ್ಷಗಳಲ್ಲಿ ಭೂಮಿ-ಕಾರ್ಮಿಕ ಸಂಬಂಧಿ ವಿಷಯಗಳಲ್ಲಿ ಕಾರ್ಪೊರೇಟ್ ಶಕ್ತಿಗಳು ಬಯಸುವಂತಹ ಸುಧಾರಣೆ ತರಲು ಸಾಧ್ಯವಾಗಲಿಲ್ಲ. ಏಕೆಂದರೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತವಿರಲಿಲ್ಲ. ಅಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಎರಡೂ ಬಣಕ್ಕೆ ಸೇರದ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಸೀಟುಗಳಿದ್ದವು. ಅಲ್ಲದೆ ಬಡವರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡುವಂಥ ಜಿಎಸ್‌ಟಿಯಂತಹ ಬದಲಾವಣೆ ತರಬೇಕೆಂದರೆ ರಾಜ್ಯಗಳ ಪಟ್ಟಿಯಲ್ಲಿರುವ ಭೂಮಿ ಮತ್ತು ಕಾರ್ಮಿಕ ವಿಷಯಗಳ ಕೆಲವನ್ನಾದರೂ ಕೇಂದ್ರದ ಪಟ್ಟಿಗೆ ತಂದುಕೊಳ್ಳುವ ಅಗತ್ಯವೂ ಇದೆ. ಇದಾಗಬೇಕೆಂದರೆ ಭಾರತದ ಹೆಚ್ಚೆಚ್ಚು ರಾಜ್ಯಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷ ಮುಕ್ತವಾಗುವ ಅಗತ್ಯ ಕಾರ್ಪೊರೇಟ್ ಬಂಡವಾಳಶಾಹಿಗಳಿಗಿದೆ.

ಇದರ ಭಾಗವಾಗಿಯೇ ಬಿಜೆಪಿಯೇತರ ಸರಕಾರಗಳನ್ನು ಅಸ್ಥಿರಗೊಳಿಸಿ ತಮ್ಮ ನೆಚ್ಚಿನ ಭಂಟನಾದ ಬಿಜೆಪಿಯನ್ನು ಸಂವಿಧಾನ ಬಾಹಿರವಾಗಿ ಅಧಿಕಾರಕ್ಕೆ ತರಲು ಕಾರ್ಪೊರೇಟ್ ಕಂಪೆನಿಗಳು ಕೋಟಿಕೋಟಿ ದುಡ್ಡನ್ನು ಬಿಜೆಪಿಗೆ ಸುರಿಯುತ್ತಿವೆ. ಆ ಹಣದಲ್ಲಿ ಬಿಜೆಪಿಯು ಪ್ರತಿಪಕ್ಷದ ಶಾಸಕರನ್ನು ಕೋಟಿಕೋಟಿ ಕೊಟ್ಟು ಕೊಂಡುಕೊಳ್ಳುತ್ತಿದೆ.

 ಇದರ ಜೊತೆಗೆ ತಾನು ಸದ್ಯದಲ್ಲೇ ಜಾರಿಗೆ ತರಲಿರುವ ಕರಾಳ ಭೂ ಆಕ್ರಮಣ ನೀತಿ, ಆದಿವಾಸಿ ಎತ್ತಂಗಡಿ ಕಾಯ್ದೆ ಮತ್ತು ಕಾರ್ಪೊರೇಟ್ ಪರ ಕಾರ್ಮಿಕ ಸುಧಾರಣೆಗಳ ವಿರುದ್ಧ ಭುಗಿಳೇಳಲಿರುವ ಜನಾಕ್ರೋಶವನ್ನು ಹತ್ತಿಕ್ಕಲೆಂದೇ ಭಯೋತ್ಪಾದನೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಅದರ ಪ್ರಕಾರ ಸರಕಾರವು ಯಾವ ವ್ಯಕ್ತಿಯನ್ನು ಬೇಕಾದರೂ ಭಯೋತ್ಪಾದಕರೆಂದು ಕರೆದು ಜೈಲಿಗೆ ತಳ್ಳಬಹುದಾಗಿದೆ. ಗೃಹಮಂತ್ರಿ ಅಮಿತ್ ಶಾ ಅಂದು ಸರಕಾರದ ವಿರುದ್ಧ ಅಸಮಾಧಾನ ಬಿತ್ತುವ ಚಟುವಟಿಕೆಗಳನ್ನು ‘ಅರ್ಬನ್ ನಕ್ಸಲಿಸಂ’ ಎಂದು ಕರೆದು ಅದನ್ನು ಬಗ್ಗುಬಡಿಯುವುದಾಗಿ ಘೋಷಿಸಿದ್ದಾರೆ. ಮೊನ್ನೆ ತಾನೇ ಸುಪ್ರೀಂ ಕೋರ್ಟು 11 ಲಕ್ಷ ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಆದೇಶ ನೀಡಿದೆ. ಜನರ ಮೇಲಿನ ಪ್ರಹಾರಗಳು ಇನ್ನು ಒಂದೊಂದಾಗಿ ಪ್ರಾರಂಭವಾಗಲಿವೆ. ಹೀಗಾಗಿ ಇಂಥಾ ತಿದ್ದುಪಡಿಗಳು ನಾಳೆ ಅವರು ತರಲಿರುವ ಜನವಿರೋಧಿ ಕಾಯ್ದೆಗಳ ವಿರುದ್ಧ ಹುಟ್ಟಲಿರುವ ಆಕ್ರೋಶಕ್ಕೆ ದನಿಯಾಗಬಲ್ಲವರ ಮೇಲೆ ಪೂರ್ವಭಾವಿಯಾಗಿ ನಡೆಯುತ್ತಿರುವ ಪ್ರತಿಬಂಧಕ ದಾಳಿಯಾಗಿದೆ.

ಆದ್ದರಿಂದಲೇ ಕರ್ನಾಟಕದ ವಿಧಾನಸಭೆಯಲ್ಲಿ ಈಗ ನಡೆದದ್ದು ಕೇವಲ ಆಪರೇಷನ್ ಕಮಲವಲ್ಲ. ಬದಲಿಗೆ ‘ಆಪರೇಷನ್ ಕಾರ್ಪೊರೇಟ್ ಕಮಲ’ವಾಗಿದೆ. ಇದನ್ನು ತಡೆಗಟ್ಟುವ ಸೈದ್ಧಾಂತಿಕ ಇರಾದೆಯಾಗಲೀ, ಸಂಸದೀಯ ಶಕ್ತಿಯಾಗಲೀ ಕಾಂಗ್ರೆಸನ್ನೂ ಒಳಗೊಂಡಂತೆ ಯಾವ ವಿರೋಧ ಪಕ್ಷಗಳಿಗೂ ಇಲ್ಲ. ಏಕೆಂದರೆ ಅವೂ ಸಹ ಕಾರ್ಪೊರೇಟ್ ಬಂಡವಾಳಿಗ ರಾಜಕಾರಣದ ಹಿರಿಮಕ್ಕಳೇ. ಇದೇ ವಾಸ್ತವ. ಹೀಗಾಗಿ ಇಂದು ಜನರೇ ವಿರೋಧಪಕ್ಷವಾಗುವ ಕಾಲ ಬಂದಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top